(ನಂದನ ಪಾರ್ಕ್) |
ಸಲೀಂ ಚಾಚಾ ಕೂಡ ಬಾಂಗ್ಲಾ ನಾಡಿನ ಹಲವು ವೈಶಿಷ್ಟ್ಯಗಳ ಬಗ್ಗೆ ವಿವರಿಸುತ್ತ ಹೋಗುತ್ತಿದ್ದ. ಮಾತಿನ ನಡುವೆಯೆಲ್ಲೋ ಸಲೀಂ ಚಾಚಾ ಅಡಿಕೆಯ ಕುರಿತು ಹೇಳಿದ. ತಕ್ಷಣ ವಿನಯಚಂದ್ರನ ಕಿವಿ ನೆಟ್ಟಗಾಯಿತು. ಮಾತಿಗೆ ನಿಂತ ವಿನಯಚಂದ್ರ `ಅಡಿಕೆ ನಮ್ಮ ಜೀವನಾಧಾರ. ನಮ್ಮ ಮಲೆನಾಡಿನಲ್ಲಿ ಮನೆ ಮನೆಗಳಲ್ಲಿ ಅಡಿಕೆ ಬೆಳೆದು ಜೀವನ ನಡೆಸುತ್ತಾರೆ. ಆದರೆ ಬಾಂಗ್ಲಾದೇಶದ ಅಡಿಕೆಗಳು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತವೆ. ಭಾರತಕ್ಕೆ ಕಳ್ಳ ದಾರಿಯಲ್ಲಿ ಬಾಂಗ್ಲಾ ಅಡಿಕೆ ಬರುವ ಕಾರಣ ನಮ್ಮ ಅಡಿಕೆಗೆ ಬೆಲೆ ಪಾತಾಳಕ್ಕೆ ಕುಸಿಯುತ್ತಿವೆ. ಈಗೀಗ ಈ ಕಳ್ಳ ಸಾಗಾಣಿಕೆ ತಡೆಯಲು ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಬಾಂಗ್ಲಾ ನಾಡಿನಲ್ಲಿ ಈ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಾರೆ ಎಂದರೆ ಅಚ್ಚರಿಯಾಗುತ್ತಿದೆ..' ಎಂದ.
`ಹುಂ.. ನಾನೂ ಈ ಬಗ್ಗೆ ಕೇಳಿದ್ದೆ. ಅನೇಕ ಬಾಂಗ್ಲಾ ಅಡಿಕೆ ಬೆಳೆಗಾರರು ನನಗೆ ಪರಿಚಯವಿದ್ದಾರೆ. ಅವರು ಆಗಾಗ ಮಾತನಾಡುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಅವರು ಭಾರತಕ್ಕೆ ನನ್ನ ಮಾಲು ಹೇಗಾದರೂ ಹೋಗಿಬಿಟ್ಟರೆ ಸಾಕು. ನಾನು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿರುತ್ತಾರೆ. ಭಾರತದ ಮಾರುಕಟ್ಟೆಯೇ ಇವರಿಗೂ ಜೀವನಾಧಾರ. ಎರಡೂ ರಾಷ್ಟ್ರಗಳು ಅಡಿಕೆ ಕುರಿತು ಒಪ್ಪಂದ ಮಾಡಿಕೊಂಡಿದ್ದರೆ ಇಲ್ಲಿನ ಅನೇಕ ಬೆಳೆಗಾರರು ಜೀವನ ಕಟ್ಟಿಕೊಳ್ಳುತ್ತಿದ್ದರು..' ಎಂದ ಸಲೀಂ ಚಾಚಾ.
`ಇಲ್ಲ ಚಾಚಾ.. ನಮ್ಮಲ್ಲಿ ಅಡಿಕೆ ಹೇರಳವಾಗಿ ಬೆಳೆಯುತ್ತಾರೆ. ನಮ್ಮ ಅಡಿಕೆ ಫಸಲು ಬಹಳವಿರುವ ಕಾರಣ ಬೇರೆ ದೇಶಗಳ ಅಡಿಕೆ ಬೇಕಾಗುವುದೇ ಇಲ್ಲ. ನಮ್ಮ ಅಡಿಕೆ ಮಾರುಕಟ್ಟೆ ಹಾಳು ಮಾಡುವ ಸಲುವಾಗಿ ಕಡಿಮೆ ಬೆಲೆಯಲ್ಲಿ ಇಲ್ಲಿನ ಅಡಿಕೆ ಕೊಳ್ಳಲಾಗುತ್ತಿದೆ. ಹೀಗೆ ಮಾಡುವುದರಿಂದ ಬಾಂಗ್ಲಾ ಬೆಳೆಗಾರರಿಗೂ ಒಳ್ಳೆ ಬೆಲೆ ಸಿಗುವುದಿಲ್ಲ. ನಮ್ಮ ಅಡಿಕೆ ಬೆಳೆಗಾರರೂ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗುತ್ತದೆ. ಅದೇ ಕಾರಣಕ್ಕೆ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅಡಿಕೆ ಬೆಳೆಗಾರ ಅಲ್ಪ ಸ್ವಲ್ಪ ಹಣವನ್ನು ಕಾಣುವಂತಾಗಿದೆ..' ಎಂದ ವಿನಯಚಂದ್ರ. ಸಲೀಂ ಚಾಚಾ.. ಹುಂ ಎಂದು ದೀರ್ಘ ನಿಟ್ಟುಸಿರು ಬಿಟ್ಟ.
ಅಲ್ಲೆಲ್ಲೋ ಸೈಕಲ್ ಚಾಲಿಸುತ್ತಿದ್ದವನು ಕೊಂಚ ಬಿಡುವು ಕೊಟ್ಟ ಚಾಚಾ. ನಿಲ್ಲಿಸಿದವನೇ ವಿನಯಚಂದ್ರನ ಬಳಿ ಬಲಗಡೆಯಲ್ಲಿ ಕೈಮಾಡಿ ತೋರಿಸುತ್ತ ಪನಿಸೈಲ್ ಆಚೆಗೆ ಭವಾನಿಪುರ ಅಂತೊಂದು ಪ್ರದೇಶವಿದೆ. ಅಲ್ಲಿ ಭವಾನಿ ದೇವಾಲಯವಿದೆ. ಬಹಳ ಚನ್ನಾಗಿದೆ. ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಬರುತ್ತಾರೆ ಎಂದ. ಭಾರತದಲ್ಲಿ ಹಿಂದೂ ಊರುಗಳ ಹೆಸರುಗಳನ್ನೆಲ್ಲ ಅಹ್ಮದಾಬಾದ್, ಹೈದರಾಬಾದ್, ಫರೂಕಾಬಾದ್, ಹೀಗೆ ಮುಸ್ಲಿಂ ಹೆಸರುಗಳಾಗಿ ಬದಲಾಗಿದೆ. ಆದರೆ ಬಾಂಗ್ಲಾದಂತಹ ಮುಸಲ್ಮಾನರು ಬಹುಸಂಖ್ಯಾತರಾಗಿರುವ ದೇಶದಲ್ಲೂ ಹಿಂದೂ ಹೆಸರಾದ ಭವಾನಿಪುರವನ್ನು ಬದಲಾಯಿಸದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿ ತಂದಿತು. ನಿಜಕ್ಕೂ ಬಾಂಗ್ಲಾ ನಾಡು ಅಚ್ಚರಿಯ ಮೂಟೆಯಂತೆ ಅನ್ನಿಸಿತು.
ಆದರೂ ವಿನಯಚಂದ್ರನ ಮನಸ್ಸಿನಲ್ಲಿ ಬಾಂಗ್ಲಾದಲ್ಲಿನ ಹಿಂಸಾಚಾರದ ಬಗ್ಗೆಯೇ ಆಲೋಚನೆಗಳು. ಇಷ್ಟೆಲ್ಲ ವಿಶಿಷ್ಟವಾಗಿರುವ ನಾಡಿನಲ್ಲೇಕೆ ಈ ಪರಿಯ ಹಿಂಸಾಚಾರ? ಯಾಕೋ ಅರ್ಥವಾಗಲಿಲ್ಲ. ತಲೆ ಕೊಡವಿದ. ಸಲೀಂ ಚಾಚಾ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ. ಸೈಕಲ್ ಏರಿದ ಕೆಲ ಸಮಯದಲ್ಲಿಯೇ ನಂದನ ಪಾರ್ಕ್ ಸಿಕ್ಕಿತು. ಸಲಿಂ ಚಾಚಾ ನಂದನ ಪಾರ್ಕಿನ ವಿಶೇಷತೆಗಳನ್ನು ತಿಳಿಸಿದ. ಇದೊಂದು ಫ್ಯಾಂಟಸಿ ಪಾರ್ಕ್ ಎಂದೂ ಹೇಳಿದ. ಇಲ್ಲಿಂದ ಮುಂದೆ ಅಪ್ಪಟ ಗ್ರಾಮೀಣ ಬಾಂಗ್ಲಾ ನಾಡು ತೆರೆದುಕೊಳ್ಳಲಿತ್ತು. ಬ್ರಹ್ಮಪುತ್ರಾ ನದಿಯ ವಿಶಾಲವಾದ ಹರವಿನ ಪ್ರದೇಶದಲ್ಲಿ ಸಾಗಬೇಕಿತ್ತು. ನಂದನ ಪಾರ್ಕಿನಿಂದ ನೇರ ರಸ್ತೆಯಲ್ಲಿ ಸಾಗಿದರೆ ಸಿಗುವ ಊರೇ ಚಂದ್ರ. ಊರಿಗೆ ಚಂದ್ರ ಎನ್ನುವ ಹೆಸರು ಇಡಲಾಗಿದೆ. ಎಷ್ಟು ಚೆಂದವಲ್ಲವಾ ಎಂದುಕೊಂಡ ವಿನಯಚಂದ್ರ. ತನ್ನ ಹೆಸರಲ್ಲೂ ಚಂದ್ರವಿದೆಯಲ್ಲ. ಊರ ಹೆಸರೂ ಚಂದ್ರ ಎಂದೂ ಅನ್ನಿಸಿತು ಆತನಿಗೆ. ಚಂದ್ರ ಎನ್ನುವ ಹೆಸರಿನ ಊರು ಹೇಗಿರಬಹುದು ಎನ್ನುವ ಕುತೂಹಲವೂ ಮೂಡಿತು. ಚಂದ್ರ ಊರಿಗೆ ಜಯದೇವಪುರ ಹಾಗೂ ತಂಗೈಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯೂ ಹಾದುಹೋಗಿದೆ. ಮುಂದೇ ಇದೇ ಮಾರ್ಗದಲ್ಲಿ ಸಾಗಬೇಕಾಗುತ್ತದೆ ಎಂದು ಮಾಹಿತಿ ನೀಡಿದ ಸಲೀಂ ಚಾಚಾ.
ಮತ್ತೊಂದು ಹತ್ತು ಕಿ.ಮಿ ಪಯಣದ ನಂತರ ಸಿಕ್ಕಿತು ಚಂದ್ರ. ಅರ್ಧ ಗ್ರಾಮೀಣ ಅರ್ಧ ನಗರ ಪ್ರದೇಶ. ದೊಡ್ಡದೊಂದು ಸುಂದರ ಮಸೀದಿ ಇಲ್ಲಿದೆ. ಹಾಲುಬಿಳುಪಿನ ಮಸೀದಿಯ ಗುಮ್ಮಟದಲ್ಲಿ ಚಿನ್ನದ ಬಣ್ಣದ ಹಾಳೆಯ ಲೇಪನ ಮಾಡಿದ್ದು ಎಂತಹ ಪ್ರವಾಸಿಗರನ್ನೂ ಕೂಡ ಇದು ಸೆಳೆಯುತ್ತದೆ. ಚಂದ್ರ ನಗರಿಯ ಮುಖ್ಯ ವೃತ್ತದ ಬಳಿ ಸಾಗುತ್ತಿದ್ದಂತೆಯೇ ಈ ಊರಿನಲ್ಲಿ ಏನೋ ಸರಿಯಿಲ್ಲ ಎನ್ನಿಸಿತು. ಇದನ್ನು ಮೊದಲು ಗಮನಿಸಿದ್ದು ಸಲೀಂ ಚಾಚಾ. ಅಲ್ಲಲ್ಲಿ ಬ್ಯಾರಿಕೇಡ್ ಗಳಿದ್ದವು. ಕೆಲವು ಕಡೆಗಳಲ್ಲಿ ಪೊಲೀಸರೂ ನಿಂತಿದ್ದರು. ಈ ಊರಿನಲ್ಲಿ ಹಿಂಸಾಚಾರ ಶುರುವಾಗಿದೆಯಾ ಎಂದುಕೊಂಡರು ಸೈಕಲ್ ಮೇಲಣ ಪಯಣಿಗರು. ಹಾಗಾಗದಿದ್ದರೆ ಸಾಕು ಎನ್ನುವ ಬಾವವೂ ಮೂಡಿತು. ಅವ್ಯಕ್ತ ಭೀತಿಯ ನಡುವೆಯೇ ಸೈಕಲ್ ತುಳಿಯತೊಡಗಿದ ಸಲೀಂ ಚಾಚಾ.
(ಚಂದ್ರಾ ನಗರಿಯ ಸುಂದರ ಮಸೀದಿ) |
ಕೊನೆಗೊಮ್ಮೆ ಪೊಲೀಸ ವಿನಯಚಂದ್ರನ ಜೊತೆಗೂ ಗಲಾಟೆ ಆರಂಭಿಸಿದ. ವಿನಯಚಂದ್ರ ಹಲವು ಸಾರಿ ಪೊಲೀಸನನ್ನು ಸಮಾಧಾನ ಮಾಡಲು ನೋಡಿದ. ಕೊನೆಗೆ ಇದ್ದಕ್ಕಿದ್ದಂತೆ ಅದೇನನ್ನಿಸಿತೋ ಏನೋ ರಪ್ಪನೆ ಕಪಾಳಕ್ಕೆ ಬಾರಿಸಿಯೇ ಬಿಟ್ಟ. ವಿನಯಚಂದ್ರನ ಹೊಡೆತ ಯಾವ ರೀತಿಯಿತ್ತೆಂದರೆ ಒಂದು ಸಾರಿ ಪೊಲೀಸ ಹಿಂದಕ್ಕೆ ಸರಿದನಲ್ಲದೇ ಕೆನ್ನೆಯನ್ನು ಹಿಡಿದುಕೊಂಡು ಸುಧಾರಿಸಿಕೊಳ್ಳುತ್ತ ಕುಳಿತ. ಸಿಟ್ಟಿಗೆದ್ದ ವಿನಯಚಂದ್ರ ಹಿಂದಿಯಲ್ಲಿ ಬಯ್ಯಲು ಆರಂಭಿಸಿದ್ದ. ಪೊಲೀಸನಿಗೂ ಸಿಟ್ಟು ಬಂದಿತ್ತೇನೋ. ವಿನಯಚಂದ್ರನನ್ನು ಗುರಾಯಿಸತೊಡಗಿದ್ದ. ಸಲೀಂ ಚಾಚಾ ಮಾತ್ರ ಬಹು ದೊಡ್ಡ ತಪ್ಪು ಸಂಭವಿಸಿಬಿಟ್ಟಿತು ಎನ್ನುವಂತೆ ಭಯಭೀತನಾಗಿದ್ದ. ವಿನಯಚಂದ್ರ ಹೊಡೆಯಲಿಕ್ಕೆ ಹೊಡೆದಿದ್ದ. ಹೊಡೆದ ನಂತರವೇ ತಾನೆಂತ ಕೆಲಸ ಮಾಡಿದೆ ಎನ್ನುವ ಅರಿವಾಗತೊಡಗಿತ್ತು. ಪೊಲೀಸ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಷ್ಟರಲ್ಲೇ ಸಲೀಂ ಚಾಚಾ ಬೇಗ ಬೇಗನೆ ಸೈಕಲ್ ಹತ್ತಿ ಹೊರಟೇಬಿಟ್ಟಿದ್ದ. ಪೊಲೀಸ ಇದ್ದ ಜಾಗದಿಂದ ಕೆಲವು ಕಿ.ಮಿ ದಾಟಿ ಬಂದನಂತರವೇ ಎಲ್ಲರೂ ಸಮಾಧಾನಗೊಂಡಿದ್ದು.
ಸಲೀಂ ಚಾಚಾ ಮೊದಲಿಗೆ ವಿನಯಚಂದ್ರನನ್ನು ತರಾಟೆಗೆ ತೆಗೆದುಕೊಂಡ. ಇಷ್ಟು ಸಿಟ್ಟಾಗುವುದು ಬೇಡವೇ ಬೇಡ. ಇಂತಹ ತಪ್ಪು ಮಾಡಿದರೆ ನೀವು ಬಾಂಗ್ಲಾ ನಾಡನ್ನು ದಾಟಿ ಭಾರತಕ್ಕೆ ಹೋಗುವುದೇ ಇಲ್ಲ. ಬಾಂಗ್ಲಾದ ಯಾವುದಾದರೂ ಒಂದು ಗದ್ದೆ ಬಯಲಿನಲ್ಲಿ ಖತಂ ಆಗುತ್ತೀರಿ. ಬಾಂಗ್ಲಾದ ಭತ್ತದ ಗದ್ದೆಗೆ ನಿಮ್ಮ ರಕ್ತ ನೀರಿನಂತೆ ಆಗುತ್ತದೆ. ಹೀಗೆ ಮಾಡಬೇಡ ಬೇಟಾ ಎಂದೂ ಹೇಳಿದ. ವಿನಯಚಂದ್ರ ಕೂಡ ತನ್ನರಿವಿಲ್ಲದಂತೇ ಈ ರೀತಿ ಆಗಿದ್ದೆಂದೂ ಹೇಳಿದ. ಮೂವರೂ ಒಬ್ಬರಿಗೊಬ್ಬರು ತಿಳಿ ಹೇಳಿಕೊಂಡು ಮುನ್ನಡೆದರು.
ಕೆಲ ಕಿಲೋಮೀಟರುಗಳ ಪಯಣದ ನಂತರ ಕಾಲಿಯಾಕೈರ್ ಎಂಬ ಪಟ್ಟಣ ಸಿಕ್ಕಿತು. ಕಾಲಿಯಾಕೈರ್ ಪಟ್ಟಣವನ್ನು ತಲುಪುವ ವೇಳೆಗೆ ಪೊಲೀಸರು ಇನ್ನು ತಮ್ಮನ್ನು ಹುಡುಕಿ ಬರಲಾರರು ಎನ್ನುವ ಧೈರ್ಯ ಬಂದಿತು. ಮುಂದಕ್ಕೆ ಪಯಣಿಸಿದರು. ಆ ಊರಿನ ಫಾಸಲೆಯಲ್ಲಿ ಹರಿಯುತ್ತಿದ್ದ ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ತಂಗಾಳಿ ಮುಂಜಾವಿಗೆ ಹೊಸ ಬೆಡಗನ್ನು ನೀಡಿತು. ಹಗಲಿನಲ್ಲಿ ಪ್ರಯಾಣ ಮಾಡುವುದು ಬೇಡ ಎನ್ನುವ ನಿರ್ಧಾರ ಮಾಡಿದ್ದರೂ ಮಿರ್ಜಾಪುರವನ್ನು ತಲುಪಲೇಬೇಕು ಎನ್ನುವ ಕಾರಣಕ್ಕಾಗಿ ಬೆಳಗಾದರೂ ಸೈಕಲ್ ಹೊಡೆಯೋಣ ಎಂದುಕೊಂಡರು. ಮಿರ್ಜಾಪುರದಲ್ಲಿ ಭಾರತದ ಗಡಿಯೊಳಕ್ಕೆ ಕಳಿಸುವ ಏಜೆಂಟ್ ಭೇಟಿಯಾಗಿ ಅಗತ್ಯದ ನಿರ್ದೇಶನಗಳನ್ನು ನೀಡಲಿದ್ದ. ಆ ಕಾರಣಕ್ಕಾಗಿ ಏನೇ ತೊಂದರೆಯಾದರೂ ಸೈಕಲ್ ರಿಕ್ಷಾ ತುಳಿದು ಮಿರ್ಜಾಪುರವನ್ನು ಎಷ್ಟು ತ್ವರಿತವಾಗಿ ಸಾಧ್ಯವೋ ಅಷ್ಟು ಬೇಗ ತಲುಪುವ ನಿರ್ಧಾರ ಮಾಡಿದರು. ಬಾಂಗ್ಲಾ ನಾಡಿನ ಬಾನಿನಲ್ಲಿ ಸೂರ್ಯ ಉದಯಿಸಲು ಆರಂಭಿಸಿದ್ದ. ಮೂಡಣ ದಿಕ್ಕು ಕೆಂಪಾಗಿತ್ತು. ನಾಚಿದ ನಾರಿಯ ಕೆನ್ನೆಯಂತೆ ಸುಂದರವಾಗಿತ್ತು. ಬಾನಿನಲ್ಲಿ ಕೈ ಕೈ ಹಿಡಿದುಕೊಂಡು ಹೊರಟಂತೆ ಹಕ್ಕಿಗಳ ಹಿಂಡು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೊರಟಿದ್ದವು. ಅಲ್ಲೆಲ್ಲೊ ಚಿಕ್ಕ ಕೆರೆಯ ಬಳಿ ಸೈಕಲ್ ನಿಲ್ಲಿಸಿ ಪ್ರಾತರ್ವಿಧಿಗಳನ್ನು ಮುಗಿಸಿ ವಿನಯಚಂದ್ರ ಸೈಕಲ್ ತುಳಿಯಲು ಏರಿದ.
(ಮುಂದುವರಿಯುತ್ತದೆ..)