Thursday, July 3, 2014

ಬೆಂಗಾಲಿ ಸುಂದರಿ-16

(ಕಬ್ಬಡ್ಡಿ ಸಾಂದರ್ಭಿಕ ಚಿತ್ರ)
            ಬಾಂಗ್ಲಾದೇಶದ ಆಟ ನೋಡಿದ ಕೆಲ ಘಳಿಗೆಯಲ್ಲಿಯೇ  ಗುಂಪು ಹಂತದ ಕೊನೆಯ ಪಂದ್ಯ ಪಾಕಿಸ್ತಾನದ ವಿರುದ್ಧ ಶುರುವಾಯಿತು. ಈ ಸಾರಿ ವಿನಯಚಂದ್ರನನ್ನು ಆಟದ ಅಂಗಣಕ್ಕೆ ಇಳಿಸಿದ್ದರು ಜಾಧವ್ ಅವರು. ವಿನಯಚಂದ್ರ ಹುರುಪಿನಿಂದಲೇ ಇದ್ದ. ಪಾಕಿಸ್ತಾನಿ ಟೀಮು ಅಂಗಣಕ್ಕೆ ಆಗಮಿಸಿತ್ತು. ಕೆಲ ನಿಮಿಷದಲ್ಲಿಯೇ ಆಟವೂ ಆರಂಭವಾಯಿತು. ಈ ಸಾರಿ ಉಕ್ರೇನಿನ ವಿರುದ್ಧ ಆದಂತೆ ತಪ್ಪಾಗಲು ಬಿಡಲಿಲ್ಲ. ಆರಂಭದಲ್ಲಿಯೇ ಪಾಕಿಸ್ತಾನದ ವಿರುದ್ಧ ಭಾರಿ ಲೀಡ್ ಪಡೆದುಕೊಂಡಿತು ಭಾರತ ತಂಡ. ಆಟ ಆರಂಭಗೊಳ್ಳುತ್ತಿದ್ದಂತೆಯೇ ವಿನಯಚಂದ್ರ ಪಾರಮ್ಯ ಮೆರೆದ. ಎರಡು ನಿಮಿಷದಲ್ಲಿಯೇ ನಾಲ್ಕು ಕ್ಯಾಚುಗಳನ್ನು ಪಡೆಯುವ ಮೂಲಕ ಎದುರಾಳಿ ತಬ್ಬಿಬ್ಬಾಗಲು ಕಾರಣವಾದ. ವಿನಯಚಂದ್ರ ಅಂತಹದ್ದೊಂದು ಆಟವನ್ನಾಡಬಲ್ಲ ಎಂದು ಎದುರಾಳಿ ತಂಡ ಊಹಿಸಿಯೇ ಇರಲಿಲ್ಲ. ಎದುರಾಳಿ ತಂಡ ಹಾಗಿರಲಿ, ತನ್ನ ತಂಡವೇ ಒಮ್ಮೆ ಬೆಕ್ಕಸ ಬೆರಗಾಗಿತ್ತು. ಈ ಕಾರಣದಿಂದಲೇ ಭಾರತ ತಂಡ ಮೊದಲಾರ್ಧದಲ್ಲಿಯೇ 18-6 ರಿಂದ ಭಾರಿ ಮುನ್ನಡೆ ಗಳಿಸಿಕೊಂಡಿತು.
             ದ್ವಿತೀಯಾರ್ಧದಲ್ಲಿಯೂ ಮತ್ತಷ್ಟು ಅಬ್ಬರದ ಆಟವನ್ನಾಡಿದ ಭಾರತ ತಂಡ ಯಾವ ಕಾಲದ ಸೇಡೋ ಎನ್ನುವಂತೆ ಅಂಕಗಳ ಮೇಲೆ ಅಂಕವನ್ನು ಪಡೆದು ಬೀಗಿತು. ಪಂದ್ಯದಲ್ಲಿ ವಿನಯಚಂದ್ರ 9 ಕ್ಯಾಚ್ ಪಡೆದು ರೈಡಿಂಗಿನಲ್ಲಿ 5 ಬಲಿ ಪಡೆದುಕೊಂಡು ಬಂದಿದ್ದ. ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಆತನಿಗೆ ಪಂದ್ಯಶ್ರೇಷ್ಟ ಪ್ರಶಸ್ತಿ ಲಭ್ಯವಾಗಿತ್ತು. ಈ ಪಂದ್ಯದ ಮೂಲಕ ವಿಶ್ವಕಪ್ಪಿನಲ್ಲಿ ಅತ್ಯಂತ ಹೆಚ್ಚು ಕ್ಯಾಚನ್ನು ಪಡೆದ ಎರಡನೇ ಆಟಗಾರನ ಸ್ಥಾನದಲ್ಲಿ ನಿಂತಿದ್ದ. ಮೊದಲ ಸ್ಥಾನದಲ್ಲಿ ಬಾಂಗ್ಲಾದೇಶದ ಒಬ್ಬ ಆಟಗಾರನಿದ್ದ. ಆಡಿದ ಎಲ್ಲ ಪಂದ್ಯಗಳಲ್ಲಿಯೂ ಜಯಭೇರಿ ಭಾರಿಸಿದ ಭಾರತ ತಂಡ ತನ್ನ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಮುಂದಿನ ಸುತ್ತು ಸೆಮಿ ಫೈನಲ್ ಆಗಿತ್ತು. ತನ್ನ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಇನ್ನೊಂದು ಗುಂಪಿನಿಂದ ಬಾಂಗ್ಲಾದೇಶ ಹಾಗೂ ಇರಾನ್ ಗಳು ಕ್ರಮವಾಗಿ ಸೆಮಿಫೈನಲ್ ಪ್ರವೇಶ ಮಾಡಿದ್ದವು. ಭಾರತವು ಇರಾನ್ ವಿರುದ್ಧ ಹಾಗೂ ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಸೆಣೆಸಾಟ ನಡೆಸಬೇಕಾಗಿತ್ತು. ಈ ಕಾದಾಟದಲ್ಲಿ ಜಯಶಾಲಿಯಾದವರು ಫೈನಲ್ ಪ್ರವೇಶಿಸುತ್ತಿದ್ದರು. ಮರುದಿನ ಈ ಪಂದ್ಯಗಳು ನಡೆಯಲಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದವು. ಕಬ್ಬಡ್ಡಿ ಲೋಕದ ಟಾಪ್ 4 ರಾಂಕ್ ತಂಡಗಳು ಕಾದಾಟಕ್ಕೆ ಸಿದ್ಧವಾಗಿ ನಿಂತಿದ್ದವು. ಯಾವುದೇ ತಂಡ ಕೊಂಚ ಯಾಮಾರಿದರೂ ಸೋಲು ಕಟ್ಟಿಟ್ಟಬುತ್ತಿಯಾಗಿತ್ತು.
           ಮತ್ತೆ ಮತ್ತೆ ಗಳಿಸಿದ ಯಶಸ್ಸು ವಿನಯಚಂದ್ರನ ಸಂತಸಕ್ಕೆ ಕಾರಣವಾಗಿತ್ತು. ಇದೇ ಸಂತೋಷದಲ್ಲಿ ಹೊಟೆಲಿಗೆ ಬರುವ ವೇಳೆಗೆ ಮಧುಮಿತಾ ಆತನ ಹಣೆಗೊಂದು ಹೂ ಮುತ್ತನ್ನು ನೀಡಿ ಕಂಗ್ರಾಟ್ಸ್ ಎಂದಾಗ ವಿನಯಚಂದ್ರನ ಮೈತುಂಬ ರೋಮಾಂಚನ. ಖುಷಿಯಿಂದ ಆಕೆಯನ್ನೆತ್ತಿಕೊಂಡು ಒಂದು ಸುತ್ತು ಗಾಳಿಯಲ್ಲಿ ತಿರುಗಿಸಿಬಿಟ್ಟಿದ್ದ. ಮಧುಮಿತಾ ನಸು ನಾಚಿ ಬಾಗಿದ್ದಳು. ವಿನಯಚಂದ್ರನಿಗೆ ಅರಿವಾಗಿಯೂ, ಅರಿವಾಗದಿದ್ದಂತೆ ಚಿಕ್ಕದೊಂದು ಮುತ್ತನ್ನು ನೀಡಿ ಕೆನ್ನೆಯನ್ನು ಗಿಲ್ಲಿದ್ದಳು ಮಧುಮಿತಾ. ವಿನಯಚಂದ್ರನಿಗೆ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವ.
`ವಿನು.. ನೀನು ಮನೆಗೆ ಊಟಕ್ಕೆ ಬರಬೇಕಂತೆ... ಅಪ್ಪನ ಹೇಳಿದ್ದಾರೆ..'
`ಹೌದಾ.. ಯಾವಾಗ ? ನಾನೊಬ್ಬನೆ ಬರಬೇಕಾ? ಜಾಧವ್ ಸರ್ ಬಂದಿದ್ದರೆ ಚನ್ನಾಗಿತ್ತು...' ವಿನಯಚಂದ್ರ ಪೆಕರನಂತೆ ಹೇಳಿದ್ದ. ಮನಸ್ಸಿನಲ್ಲಿ ಸಂತಸ ಮೂಟೆಕಟ್ಟಿಕೊಂಡಿತ್ತು.
`ಹುಂ.. ಅವರ ಬಳಿಯೂ ಹೇಳಿದ್ದಾರೆ. ಹಾಗೇ ಆ ಸೂರ್ಯನ್ ನೂ ಕರೆದುಕೊಂಡು ಬಾ.. ಆದರೆ ಬರುವಾಗ ಹುಷಾರು ಮಾರಾಯಾ..' ಚಿಕ್ಕದೊಂದು ಎಚ್ಚರಿಕೆ ಮಧುಮಿತಾಳಿಂದ ಬಂದಿತ್ತು.
`ಖಂಡಿತ ಅವರನ್ನು ಕರೆದುಕೊಂಡು ಬರುತ್ತೇನೆ. ಆದರೆ ಯಾಕೆ ಹುಷಾರು? ಅಂತದ್ದೇನಾಯ್ತು ಮತ್ತೆ..?' ಗಲಿಬಿಲಿಯಿಂದ ಕೇಳಿದ ವಿನಯಚಂದ್ರ.
`ಏನಿಲ್ಲ.. ಢಾಕಾದ ಹೊರವಲಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.. ಹಿಂದುಗಳ ಮೇಲೆ ಮತ್ತೆ ದಾಳಿ ಮಾಡಲಾಗುತ್ತಿದೆ. ಈಗಾಗಲೇ ಒಂದೆರಡು ಹಳ್ಳಿಗಳು ದೌರ್ಜನ್ಯಕ್ಕೆ ಬಲಿಯಾಗಿ ಸುಟ್ಟು ಹೋಗಿವೆ. ಮೂರೋ ನಾಲ್ಕೋ ಜನರು ಅಗ್ನಿಯ ಕೆನ್ನಾಲಿಗೆಗೆ ಸತ್ತು ಹೋಗಿದ್ದಾರೆ..'
`ಹಾಂ..? ಹೌದಾ.. ನಮಗಿದು ಗೊತ್ತೇ ಆಗಲಿಲ್ಲವಲ್ಲ.. ನಿಮಗೇನೂ ತೊಂದರೆ ಇಲ್ಲ ತಾನೆ? ನೀವೆಲ್ಲ ಸೌಖ್ಯ ತಾನೆ '
`ಇಲ್ಲ.. ನಮಗೆ ತೊಂದರೆ ಇಲ್ಲ. ವಿಶ್ವಕಪ್ ಮುಗಿದರೆ ಸಾಕು ಎಂದುಕೊಂಡಿದೆ ಬಾಂಗ್ಲಾ ಸರ್ಕಾರ. ಮುಗಿದ ನಂತರ ಹಿಂಸಾಚಾರ ಇನ್ನೂ ಹೆಚ್ಚಾಗಬಹುದು. ಜಗತ್ತಿಗೆ ತನ್ನ ಮರ್ಯಾದೆ ಉಳಿಸಿಕೊಳ್ಳಬೇಕೆಂಬ ಕಾರಣದಿಂದ ಈ ಹಿಂಸಾಚಾರದ ಬಗ್ಗೆ ಬಾಂಗ್ಲಾ ಸರ್ಕಾರ ಮುಚ್ಚಿಟ್ಟಿದೆ. ಈಗ ನಡೆಯುತ್ತಿರುವ ಹಿಂಸಾಚಾರವನ್ನು ಹೊರ ಜಗತ್ತಿಗೆ ಗೊತ್ತಾಗದ ಹಾಗೇ ಇಡಲು ಪ್ರಯತ್ನಿಸುತ್ತಿದೆ. ಆದರೆ ನಾವು ಸ್ಥಳೀಯರು. ಅದರಲ್ಲೂ ಹಿಂಸೆಗೆ ಒಳಗಾಗುತ್ತಿರುವವರು. ನಮಗೆ ಆತಂಕ ಹೆಚ್ಚಾಗಿದೆ..' ಎಂದು ಮಧುಮಿತಾ ದುಗುಡದ ಜೊತೆಗೆ ಹೇಳಿದಳು.
`ಹುಂ .. ಹೇ ಮಧು.. ನೀನು ಇನ್ನೂ ಹುಷಾರಾಗಿರು ಮಾರಾಯ್ತಿ.. ಒಬ್ಬೊಬ್ಬನೇ ಓಡಾಡುವ ಪ್ರಸಂಗ ನಿನಗೆ ದಿನದಲ್ಲಿ ಹಲವು ಸಾರಿ ಬರುತ್ತದೆ. ಹಿಂಸಾಚಾರ ನಡೆಯುತ್ತಿರುವ ಜಾಗದ ಕಡೆಗೆ ಅಪ್ಪಿತಪ್ಪಿಯೂ ಹೋಗಬೇಡ. ನನಗಿರುವವಳು ನೀನೊಬ್ಬಳೇ.. ' ಎಂದು ವಿನಯಚಂದ್ರ ಹೇಳುತ್ತಿದ್ದಂತೆ
`ಅಯ್ಯೋ ಹುಚ್ಚಪ್ಪಾ.. ನಾನು ಬಾಂಗ್ಲಾದೇಶದ ಸರ್ಕಾರದ ಕೆಲಸದಲ್ಲಿದ್ದೇನೆ. ನನಗೆ ಏನೂ ಆಗುವುದಿಲ್ಲ ಮಾರಾಯಾ.. ನನಗೇನೂ ಆಗೋದಿಲ್ಲ. ಸರ್ಕಾರ ನನ್ನ ಸಹಾಯಕ್ಕಿದೆ. ನೀನು ಹೆದರಿಕೊಳ್ಳಬೇಡ. ನಾನು ತೊಂದರೆಗೆ ಒಳಗಾಗುವುದಿಲ್ಲ..' ಎಂದು ಹೇಳಿ ಆತನ ತಲೆಯನ್ನು ನೇವರಿಸಿದಳು. ವಿನಯಚಂದ್ರನಿಗೆ ಹಿತವಾಗಿತ್ತು. ವಿನಯಚಂದ್ರನ ತಲೆ ಕೂದಲನ್ನು ಹಿಡಿದು ಅದರಲ್ಲಿ ತನ್ನ ಬೆರಳುಗಳ ಮೂಲಕ ಆಡತೊಡಗಿದ್ದಳು. ವಿನಯಚಂದ್ರ ನಸುನಗುತ್ತಲಿದ್ದ.
`ನಾಳೆ ಸೆಮಿ ಫೈನಲ್ ಇದೆ. ನಾಡಿದ್ದು ನಮಗೆ ಗ್ಯಾಪ್ ಇದೆ. ಆ ದಿನ ನಾವು ಬರಲು ಪ್ರಯತ್ನ ಮಾಡುತ್ತೇವೆ..'ಎಂದ ವಿನಯಚಂದ್ರ. ಅಷ್ಟರಲ್ಲಿ ಅಲ್ಲಿಗೆ ಸೂರ್ಯನ್ ಬಂದಿದ್ದ. ಆತನ ಬಳಿ ಮಧುಮಿತಾಳ ಮನೆಗೆ ಹೋಗುವ ಬಗ್ಗೆ ಕೇಳಿದಾಗ ಅವನೂ ಒಪ್ಪಿಕೊಂಡ.

***

          ಹಿತವಾದ ನೆನಪು, ಖುಷಿ, ಕನಸು, ಸಂಭ್ರಮದ ಜೊತೆ ಜೊತೆಯಲ್ಲಿ ಆ ದಿನ ಕಳೆದು ಹೋಯಿತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೂ ಸೋಲೆಂಬುದನ್ನೇ ಕಂಡಿರಲಿಲ್ಲ. ಆಡಿದ ಎಲ್ಲ ಪಂದ್ಯಗಳೂ ಗೆಲುವಿನ ಸವಿಯನ್ನೇ ನೀಡಿದ್ದವು. ಇನ್ನೆರಡೇ ಪಂದ್ಯಗಳನ್ನು ಗೆದ್ದರೆ ವಿಶ್ವಕಪ್ ಮತ್ತೊಮ್ಮೆ ಭಾರತದ ಮುಡಿಗೆ ಏರಲು ಸಾಧ್ಯವಿತ್ತು. ಇರಾನ್ ವಿರುದ್ಧ ಪಂದ್ಯ ಗೆದ್ದರೆ ಫೈನಲ್. ಪೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಎದುರಾಳಿಯಾಗಬಹುದಿತ್ತು. ತಮ್ಮ ಸಂಪೂರ್ಣ ಸಾಮರ್ಥ್ಯ ಒರೆ ಹಚ್ಚಲು ಇವೆರಡೇ ಪಂದ್ಯ ಸಾಕಾಗಿತ್ತು. ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೂ ಬಂದ ದಾರಿಯನ್ನೊಮ್ಮೆ ನೆನಪು ಮಾಡಿಕೊಂಡರು. ತಾವಾಡಿದ ಪಂದ್ಯಗಳಲ್ಲಿಯೇ ಯಾವುದು ಚನ್ನಾಗಿತ್ತು, ಯಾವ ಕ್ಯಾಚ್, ಯಾವ ರೈಡಿಂಗ್ ಖುಷಿ ಕೊಟ್ಟಿತು ಎನ್ನುವುದನ್ನೆಲ್ಲ ಮಾತನಾಡಿಕೊಂಡರು.
            ಇತ್ತ ಬಾಂಗ್ಲಾದೇಶದಲ್ಲಿ ನಿಧಾನವಾಗಿ ಹಿಂಸಾಚಾರ ಕಾವು ಪಡೆದುಕೊಳ್ಳುತ್ತಿತ್ತು. ಅಲ್ಲೀಗ ಚುನಾವಣೆ ಘೋಷಣೆಯಾಗಿತ್ತು. ಆದ್ದರಿಂದ ಮತ್ತೊಮ್ಮೆ ಹಿಂಸಾಚಾರ ಜೋರಾಗಿತ್ತು. ಹಿಂದೂಗಳು ಬಾಂಗ್ಲಾದಲ್ಲಿ ಪಕ್ಷಗಳ ಗೆಲುವನ್ನು ನಿರ್ಧರಿಸುತ್ತಾರೆ. ಅವರು ಯಾರಿಗೆ ಬೆಂಬಲ ನೀಡುತ್ತಾರೋ ಅವರೇ ಚುನಾವಣೆಯಲ್ಲಿ ಜಯಭೇರಿ ಭಾರಿಸುತ್ತಾರೆ. ಆದ್ದರಿಂದ ಹಿಂದೂಗಳ ಬೆಂಬಲ ಯಾರಿಗೆ ಇಲ್ಲವೋ ಅವರು ಹಿಂಸಾಚಾರಕ್ಕಿಳಿಯುತ್ತಾರೆ. ಸೊಖಾ ಸುಮ್ಮನೆ ಹಿಂದುಗಳ ಮೇಲೆ ದಾಳಿ ಮಾಡಿ ಅವರ ವಿರುದ್ಧ ಹಿಂಸಾಚಾರದಿಂದ ತೊಂದರೆ ನೀಡುತ್ತಾರೆ. ಬಾಂಗ್ಲಾದಲ್ಲಿ ಈಗ ನಡೆಯುತ್ತಿರುವುದು ಅದೇ ಆಗಿತ್ತು.
            ಮರುದಿನ ಮೊದಲ ಪಂದ್ಯ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಇತ್ತು. ಇತ್ತಂಡಗಳೂ ಜಿದ್ದಾಜಿದ್ದಿನಿಂದ ಕಾದಾಡಿದವು. ಎರಡನೆ ರಾಂಕಿನ ಬಾಂಗ್ಲಾದೇಶ ಹಾಗೂ ಮೂರನೇ ರಾಂಕಿನ ಪಾಕಿಸ್ತಾನಗಳು ಗೆಲುವಿಗಾಗಿ ಸಕಲ ರೀತಿಯಿಂದಲೂ ಪ್ರಯತ್ನಗಳನ್ನು ನಡೆಸಿದವು. ಯಾರೊಬ್ಬರೂ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಒಂದೊಂದು ಅಂಕಕ್ಕೂ ಸಾಕಷ್ಟು ಕಾದಾಟ ನಡೆಯುತ್ತಿತ್ತು.  ವಿನಯಚಂದ್ರನಿಗಂತೂ ಫೈನಲ್ ಪಂದ್ಯ ಸುಲಭದ್ದಲ್ಲ. ಬಹಳ ಕಷ್ಟಪಡಬೇಕಾಗುತ್ತದೆ ಎಂದುಕೊಂಡ. ಅಂತಿಮವಾಗಿ ಬಾಂಗ್ಲಾದೇಶ 16-14 ಅಂಕಗಳಿಂದ ಗೆಲುವಿನ ನಗೆ ಬೀರಿತಲ್ಲದೇ ಫೈನಲ್ ಗೂ ಏರಿತು. ಪಾಕಿಸ್ತಾನ ಪೆಚ್ಚಿನಿಂದ ಮುರನೇ ರಾಂಕಿನ ಪಂದ್ಯವನ್ನಾಡಲು ಅಣಿಯಾಯಿತು. ಬಾಂಗ್ಲಾದೇಶದ ಗೆಲುವು ನಿರೀಕ್ಷಿತ ಎನ್ನಿಸಿತ್ತಾದ್ದರಿಂದ ಭಾರತ ತಂಡದ ಆಟಗಾರರಿಗೆ ವಿಶೇಷ ಎನ್ನಿಸಲಿಲ್ಲ.
            ಮುಂದಿನ ಪಂದ್ಯ ಭಾರತ ಹಾಗೂ ಇರಾನ್ ನಡುವಿನ ಸೆಮಿಫೈನಲ್ಸ್. ಇರಾನಿ ಆಟಗಾರರೂ ದೈತ್ಯರೇ. ಫಠಾಣರು. ದಷ್ಟಪುಷ್ಟರು. ಮೊದಲ ಸೀಟಿ ಬಿದ್ದು ಆಟ ಶುರುವಾಗೇಬಿಟ್ಟಿತು. ಭಾರತ ಮೊದಲ ಹಂತದಲ್ಲಿಯೇ ಎದುರಾಳಿಯ ಮೇಲೆ ಸತತ ದಾಳಿ ನಡೆಸಿ ಲೀಡ್ ಪಡೆಯಲು ಯತ್ನಿಸಿತು. ಪದೇ ಪದೆ ದಾಳಿ ಮಾಡಿ ಎದುರಾಳಿಯಲ್ಲಿ ಗಲಿಬಿಲಿಗೊಳಿಸಿತು. ಸೂರ್ಯನ್ ರೈಡಿಂಗು ಹಾಗೂ ವಿನಯಚಂದ್ರನ ಕ್ಯಾಚುಗಳು ಇರಾನಿಯರನ್ನು ಬೆದರಿಸಿದವು. ವಿನಯಚಂದ್ರನಂತೂ ಮೊದಲ ಅರ್ಧದಲ್ಲಿಯೇ ಆರು ಕ್ಯಾಚುಗಳನ್ನು ಹಿಡಿದು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದ. ನೋಡುಗರಿಗೆ ಇದು ಸೆಮಿಪೈನಲ್ ಪಂದ್ಯವೇ ಹೌದಾ ಎನ್ನುವಷ್ಟು ಸರಳವಾಗಿ ಭಾರತ ತಂಡ ಆಡುತ್ತಿತ್ತು. ಮೊದಲಾರ್ಧದ ವೇಳೆಗೆ 10 ಅಂಕಗಳ ಮುನ್ನಡೆ ಪಡೆಯುವ ಮೂಲಕ  ಫೈನಲ್ ನಿಚ್ಚಳಗೊಳಿಸಿಕೊಂಡಿತ್ತು. 22-12 ಅಂಕಗಳು ಮೊದಲಾರ್ಧದ ವೇಳೆ ಇತ್ತಂಡಗಳೂ ಗಳಿಸಿಕೊಂಡಿದ್ದವು.
             ದ್ವಿತೀಯಾರ್ಧದಲ್ಲಿಯೂ ಭಾರತವೇ ಮತ್ತೊಮ್ಮೆ ಪಾರಮ್ಯ ಮೆರೆಯಿತು. ಯಾವುದೇ ಸಮಸ್ಯೆಗಳು ಎದುರಾಗದಂತೆ ಭಾರತ ಉತ್ತಮವಾಗಿ ಆಡಿತು. ಪಂದ್ಯದ ಅಂತ್ಯದ ವೇಳೆಗೆ ಭಾರತ 36 ಹಾಗೂ ಇರಾನ್ 22 ಅಂಕಗಳನ್ನು ಪಡೆಯುವ ಮೂಲಕ ಜಯಭೇರಿ ಭಾರಿಸಿತು. ಅತ್ಯಮೂಲ್ಯವಾದ 10 ಕ್ಯಾಚುಗಳನ್ನು ವಿನಯಚಂದ್ರ ಹಿಡಿದು ಪಂದ್ಯಾವಳಿಯಲ್ಲಿ ಬಾಂಗ್ಲಾದೇಶಿ ಆಟಗಾರನ ಜೊತೆಗೆ ಅತಿಹೆಚ್ಚು ಕ್ಯಾಚ್ ಮಾಡಿದವರ ಸಾಲಿನಲ್ಲಿ ಜಂಟಿಯಾಗಿ ಮೊದಲ ಸ್ಥಾನ ಗಳಿಸಿಕೊಂಡಿದ್ದ. ಒಂದು ದಿನದ ಬಿಡುವಿನ ನಂತರ ಫೈನಲ್ಸ್ ನಡೆಯಲಿತ್ತು. ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಫೈನಲ್ ಪಂದ್ಯಾವಳಿ ನಿಗದಿಯಾಯಿತು.

**
           ಜಾಧವ್ ಅವರನ್ನು ಒತ್ತಾಯಪಡಿಸಿಕೊಂಡು ಸೂರ್ಯನ್ ಜೊತೆಗೆ ವಿನಯಚಂದ್ರ ಮಧುಮಿತಾಳ ಮನೆಗೆ ಹೊರಡುವಷ್ಟರಲ್ಲಿ ಸಾಕು ಸರಿಯಾಯಿತು. ಮಧುಮಿತಾ ತನ್ನ ಅಪಾರ್ಟ್ ಮೆಂಟನ್ನು ತೋರಿಸಿದ್ದಳಾದ್ದರಿಂದ ಅಲ್ಲಿಗೆ ಹೋಗಲು ಹೆಚ್ಚು ಸಮಸ್ಯೆಯಾಗಲಿಲ್ಲ. ಮನೆಮಂದಿಗೆ ವಿನಯಚಂದ್ರ ಹಾಗೂ ಜಾಧವ್ ಅವರು ಪರಿಚಿತರು. ಸೂರ್ಯನ್ ಹೊಸಬ. ಅವನನ್ನು ಪರಿಚಯ ಮಾಡಿಕೊಟ್ಟ ನಂತರ ಉಭಯಕುಶಲೋಪರಿ ಮಾತಿಗೆ ನಿಂತರು. ಆಗಲೇ ಜಾಧವ್ ಅವರು ಮಧುಮಿತಾಳ ತಂದೆಯ ಬಳಿ ಮಧುಮಿತಾ ಹಾಗೂ ವಿನಯಚಂದ್ರರ ಪ್ರೇಮದ ವಿಷಯವನ್ನು ತಿಳಿಸಿದರು. ಮಧುಮಿತಾಳ ತಂದೆ ಈ ಕುರಿತು ವಿರೋಧವನ್ನು ವ್ಯಕ್ತಪಡಿಸಲಿಲ್ಲವಾದರೂ ವಿನಯಚಂದ್ರನ ಮನೆ, ಕುಟುಂಬದ ಕುರಿತು ತಮಗೇನೂ ಮಾಹಿತಿ ಇಲ್ಲ ಎಂದು ಹೇಳಿದರು. ಕೊನೆಗೆ ವಿನಯಚಂದ್ರನೇ ತನ್ನ ಮನೆ, ಮನೆತನ, ಕುಟುಂಬ ಇತ್ಯಾದಿಗಳ ಬಗ್ಗೆ ಹೇಳಿದ. ಮಧುಮಿತಾಳ ತಂದೆ ನಿರಾಳರಾದರು. ವಿನಯಚಂದ್ರನ ಬಗ್ಗೆ ಏನೋ ಮೆಚ್ಚುಗೆ ಮೂಡಿದಂತಾಯಿತು. ಕೊನೆಗೆ ವಿನಯಚಂದ್ರನೇ ಮುಂದುವರೆದು `ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ಅಲ್ಲಿಯೇ ಉಳಿದುಕೊಳ್ಳಲು ನಿಮಗೆ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಅಲ್ಲಿಯೇ ಉಳಿದಕೊಳ್ಳಬೇಕೆಂದು ಕ್ರಮ ಕೈಗೊಳ್ಳುತ್ತಿದ್ದೇವೆ. ಸೂರ್ಯನ್ ಈ ಕುರಿತು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾನೆ..' ಎಂದ.
          ಮಧುಮಿತಾಳ ಕುಟುಂಬ ಸಂತಸಗೊಂಡಿತು. ಆಗಲೇ ಮಧುಮಿತಾಳ ತಂದೆ `ಅಲ್ಲ ಇಲ್ಲಿನ ಜಮೀನು, ಈ ದೇಶ ಎಲ್ಲವನ್ನೂ ಬಿಟ್ಟು ಬರುವುದು ಸುಲಭದಲ್ಲಿ ಸಾಧ್ಯವಿಲ್ಲ. ನಮ್ಮ ತಾಯ್ನಾಡನ್ನು ಹೇಗೆ ಬಿಟ್ಟುಬರೋದು ಅಂತ ಅರ್ಥವೇ ಆಗುತ್ತಿಲ್ಲ. ಅದಲ್ಲದೇ ನಮ್ಮ ಜಮೀನು ಬೇರೆ ಇದೆ. ಅದಕ್ಕೊಂದು ವ್ಯವಸ್ಥೆ ಮಾಡಬೇಕಲ್ಲ. ಭಾರತಕ್ಕೆ ಹೋದ ನಂತರ ಮತ್ತೆ ಇಲ್ಲಿಗೆ ಮರಳಲಿಕ್ಕಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ..' ಅಳಲನ್ನು ತೋಡಿಕೊಂಡಿದ್ದರು.
          ಆಗ ಜಾಧವ್ ಅವರು `ನೋಡಿ.. ಬದುಕಿ ಉಳಿದರೆ ಇಂತಹ ಜಮೀನುಗಳನ್ನು ಸಾವಿರ ಸಾವಿರ ದುಡಿಯಬಹುದು. ಸಧ್ಯ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಅಷ್ಟು ಚನ್ನಾಗಿಲ್ಲ. ಮುಂದೆ ಯಾವಾಗಲಾದರೂ ಒಳ್ಳೆ ದಿನಗಳು ಬಂದರೆ ಬಾಂಗ್ಲಾಕ್ಕೆ ಮರಳಬಹುದಲ್ಲ. ಅಲ್ಲಿಯ ತನಕ ಭಾರತದಲ್ಲಿಯೇ ಉಳಿದುಕೊಳ್ಳಬಹುದು. ಇಲ್ಲಿದ್ದರೆ ಯಾವ ಕ್ಷಣದಲ್ಲಿ ಯಾರು ದಾಳಿ ಮಾಡುತ್ತಾರೋ, ಯಾವ ಹೊತ್ತಿನಲ್ಲಿ ಸಾವು ಬಂದು ಬಾಗಿಲು ತಟ್ಟುತ್ತದೋ, ಮುಂದೆ ಹೇಗೋ ಏನೋ ಎಂದುಕೊಂಡು ಬದುಕುವುದಕ್ಕಿಂತ ಅಲ್ಲಿ ಅರಾಮಾಗಿರುವುದು ಒಳ್ಳೆಯದಲ್ಲವೇ?..' ಎಂದಾಗ ಮಧುಮಿತಾಳ ತಂದೆಗೂ ಹೌದೆನ್ನಿಸಿರಬೇಕು. `ಹೂಂ..' ಎಂದು ಸುಮ್ಮನಾದರು. ನಂತರ ಹಾಗೆ ಹೀಗೆ ಮಾತುಕತೆ ಸಾಗಿತು.
         ಊಟ ಮುಗಿಸಿ ಅಲ್ಲಿಂದ ಬರುವ ವೇಳೆಗೆ ಎಲ್ಲರ ಮನಸ್ಸಿನಲ್ಲಿ ಸಂತಸದ ತಂಗಾಳಿ ಅಲೆ ಅಲೆಯಾಗಿ ಬೀಸುತ್ತಿತ್ತು. ಹೊಸ ಕನಸೊಂದು ಚಿಗುರೊಡೆಯಲು ಹಾತೊರೆಯುತ್ತಿತ್ತು. ಮಧುಮಿತಾ ಹಾಗೂ ವಿನಯಚಂದ್ರ ಮೊದಲಿಗಿಂತ ಹೆಚ್ಚು ಸಂತಸದಲ್ಲಿದ್ದರು. ಅವರ ಮನೆಯಲ್ಲಿದ್ದಷ್ಟೂ ಹೊತ್ತೂ ಕಣ್ಣು ಹಾಗೂ ಸಂಜ್ಞೆಯ ಮೂಲಕ ಪರಸ್ಪರ ಮಾತನಾಡುತ್ತಿದ್ದುದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ. ಒಂದಿಬ್ಬರ ಗಮನಕ್ಕೆ ಬಂದಿದ್ದರೂ ಅದನ್ನು ಇತರರಿಗೆ ಹೇಳುವ ಪ್ರಯತ್ನ ಮಾಡಲಿಲ್ಲ. ಪ್ರೇಮಿಗಳ ಪರಿಭಾಷೆ ಇದು ಎಂದುಕೊಂಡು ಸುಮ್ಮನಾಗಿದ್ದರು ಎಲ್ಲರೂ.
         ಸಂಜೆ ಹೊಟೆಲಿಗೆ ಬಂದವನೇ ಪ್ರಾಕ್ಟೀಸು ಮುಗಿಸಿ ವಿನಯಚಂದ್ರ ತನ್ನ ಮನೆಗೆ ಪೋನ್ ಮಾಡಿದ. ಈತನ ಪೋನಿಗೆ ಕಾಯುತ್ತಿದ್ದೆವೋ ಎಂಬಂತೆ ಆತನ ತಂದೆ ಮಾತಿಗೆ ನಿಂತರು. ನಂತರ ತಾಯಿ ಮಾತಿಗೆ ಬಂದಾಗ ಅವರ ಬಳಿ ಮಧುಮಿತಾಳ ವಿಷಯವನ್ನು ಹೇಳಿದ. ಮೊದ ಮೊದಲು ಯಾರೋ ಏನೋ ಎಂದುಕೊಂಡ ವಿನಯಚಂದ್ರನ ತಾಯಿ ಕೊನೆಗೆ ಆತನ ವಿವರಣೆ ಕೇಳಿದ ನಂತರ ಸಮಾಧಾನ ಪಟ್ಟುಕೊಂಡರು. ತಂಗಿಗೂ ವಿಷಯವನ್ನು ತಿಳಿಸಿದ. ಜೊತೆಗೆ ಈ ಕುರಿತು ತಂದೆಯ ಬಳಿ ಮಾತನಾಡುವಂತೆಯೂ ತಿಳಿಸಿ ಪೋನಿಟ್ಟ. ಪೋನಿಟ್ಟಮೇಲೆ ಮತ್ತಷ್ಟು ಹಾಯಾದ ವಿನಯಚಂದ್ರ ಖುಷಿಯಲ್ಲಿಯೇ ಆ ರಾತ್ರಿ ಕಳೆದ. ಕನಸಲ್ಲಿ ಮಧುಮಿತಾ ಕಾಡಿದಳು. ಕನಸಿನ ಮೊದಲಾರ್ಧ ಹತವಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಕನಸಿನ ಕುದುರೆಯ ಮೇಲೆ ಸಾಗುತ್ತಿದ್ದರು. ಆದರೆ ಕನಸಿನ ಉತ್ತರಾರ್ಧ ಮಾತ್ರ  ಭಯಾನಕವಾಗಿತ್ತು. ಅದ್ಯಾರೋ ತಮ್ಮನ್ನು ಗಾಜಿನ ಚೂರುಗಳ ಮೇಲೆ ನಡೆಸಿದಂತೆಯೂ, ಚಬುಕಿನಿಂದ ಬೆನ್ನಿನ ಮೇಲೆ ಬೀಸಿದಂತೆಯೂ ಅನ್ನಿಸಿತು. ಮತ್ತೊಬ್ಬರಾರೋ ವಿನಯಚಂದ್ರನಿಗೆ ಸುನ್ನತ್ ಮಾಡಿದಂತೆ ಅನ್ನಿಸಿ ರಾತ್ರಿಯ ನಿದ್ದೆಯಲ್ಲಿ ಬೆಚ್ಚಿದ. ಎಚ್ಚರಾದಾಗ ಮನಸ್ಸು ಕಸಿವಿಸಿಗೊಂಡಿತ್ತು. ಬಟ್ಟೆ ಬೆವರಿನಿಂದ ತೊಯ್ದು ತೊಪ್ಪೆಯಾಗಿತ್ತು.
         ಇದೇನಿದು ಈ ರೀತಿ ವಿಚಿತ್ರ, ಭಯಾನಕ ಕನಸು ಬಿದ್ದಿತಲ್ಲ ಎಂದು ಹಳಿದುಕೊಂಡ ವಿನಯಚಂದ್ರ. ದೀಪ ಹಾಕಿ ಟೈಮ್ ನೋಡಿದ. ಆಗಲೇ ಗಡಿಯಾರದಲ್ಲಿ ಮುರು ಗಂಟೆಯನ್ನು ದಾಟಿ 15 ನಿಮಿಷ ಜಾಸ್ತಿಯಾಗಿತ್ತು. ಬೆಳಗಿನ ಜಾವದಲ್ಲಿ ಬೀಳುವ ಕನಸುಗಳು ನಿಜವಾಗುತ್ತದಂತೆ. ಹಾಗಾದರೆ ನನಗೆ ಕನಸಿನಲ್ಲಿ ಕಂಡಿದ್ದು ಸತ್ಯವಾಗುತ್ತದೆಯಾ? ಯಾಕೋ ವಿನಯಚಂದ್ರನಿದೆ ಅದು ಸಹ್ಯವಾಗಲಿಲ್ಲ. ಹಾಗಾಗದಿದ್ದರೆ ಸಾಕು ಎಂದು ಮನಸ್ಸಿನಲ್ಲಿಯೇ ಹಲುಬಿಕೊಂಡ. ದೀಪ ಹಾಕಿದ ವಿನಯಚಂದ್ರನನ್ನು ನೋಡಿದ ಸೂರ್ಯನ್ `ಏನಾಯ್ತು ದೋಸ್ತ್..' ಎಂದ. ಅದಕ್ಕೆ ಪ್ರತಿಯಾಗಿ `ಏನಿಲ್ಲ..' ಎಂದವನು ಹಾಗೇ ಮಲಗಿದ. ಮತ್ತೊಮ್ಮೆ ನಿದ್ದೆ. ಕೆಲವೊಮ್ಮೆ ಕನಸುಗಳು ಮುಂದಿನ ಜೀವನವನ್ನು ತಿಳಿಸಿ ಹೇಳುತ್ತವೆ. ಹಾಗಾದರೆ ವಿನಯಚಂದ್ರ ಹಾಗೂ ಮಧುಮಿತಾಳ ಬದುಕಿನಲ್ಲಿಯೂ ಮುಂದೆ ಕಷ್ಟದ ದಿನಗಳು ಬರಲಿದ್ದವಾ? ಇಬ್ಬರೂ ಸುರಳೀತವಾಗಿ ಭಾರತವನ್ನು ತಲುಪುತ್ತಾರಾ? ಮತ್ತಿನ್ನೇನಾದರೂ ಎರಡವಟ್ಟು ಆಗುತ್ತದೆಯಾ? ಯಾಕೋ ವಿನಯಚಂದ್ರ ಆಲೋಚನೆ ಮಾಡಿದಷ್ಟೂ ಆತಂಕ ಹೆಚ್ಚಿದಂತಾಗಿ ಸುಮ್ಮನೆ ಮಲಗಿದ. ಯಾವುದೋ ಕ್ಷಣದಲ್ಲಿ ನಿದ್ದೆ ಆವರಿಸಿತ್ತು.
         ಇಬ್ಬನಿಯ ನಸುಕು, ಹಿತವಾದ ಚಳಿಗಾಳಿ ವಿನಯಚಂದ್ರ ಹಾಗೂ ರೂಂ ಮೇಟ್ ಸೂರ್ಯನ್ ರನ್ನು ಬಡಿದೆಬ್ಬಿಸಿತ್ತು. ಇವತ್ತು ಫೈನಲ್ ಇದೆಯಲ್ಲ ಎಂದುಕೊಂಡ ಇಬ್ಬರೂ ಬೇಗನೆ ತಯಾರಾದರು. ಪ್ರಾತರ್ವಿಧಿ ಮುಗಿಸಿ ತಂಡ ತರಬೇತಿ ಪಡೆಯುತ್ತಿದ್ದ ಜಾಗದತ್ತ ತೆರಳಿದರು. ಆಗಲೇ ಬಹುತೇಕ ಆಟಗಾರರು ಅಲ್ಲಿಗೆ ಆಗಮಿಸಿದ್ದರು. ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೂ ಈಗ ಸ್ಟಾರ್ ಗಳಾಗಿದ್ದರು. ಹಲ ಕೆಲವು ಅಭಿಮಾನಿಗಳು ಗುರುತಿಸುವಂತಾಗಿದ್ದರು. ವಿಶೇಷವಾಗಿ ಇತರ ತಂಡದ ಆಟಗಾರರು ಇವರ ಕಡೆ ಮೆಚ್ಚುಗೆಯ ನೋಟವನ್ನು ಬೀರುತ್ತಿದ್ದರು. ಪರಿಚಯ ಮಾಡಿಕೊಳ್ಳಲು ಇಷ್ಟ ಪಡುತ್ತಿದ್ದರು. ವಿನಯಚಂದ್ರ ಹಾಗೂ ಸೂರ್ಯನ್ ಎಲ್ಲರ ಗೌರವಕ್ಕೆ, ಮೆಚ್ಚುಗೆಗೆ ಪ್ರತ್ಯುತ್ತರ ನೀಡಿ, ಅವರ ಜೊತೆ ಬೆರೆತು ತರಬೇತಿಯನ್ನು ಪೂರೈಸುವ ವೇಳೆಗೆ ಮದ್ಯಾಹ್ನವೂ ಆಗಿತ್ತು. ಸಂಜೆ ನಡೆಯಲಿರುವ ಫೈನಲ್ ಪಂದ್ಯ ದುಗುಡವನ್ನು ತಂದಿತ್ತು.

**
(ಮುಂದುವರಿಯುತ್ತದೆ..)

Wednesday, July 2, 2014

ಕಲ್ಲು ಕರಗುವ ಸಮಯ

ಕಲ್ಲು ಕರಗುವ ಸಮಯ
ಬೆಲ್ಲ ಸಕ್ಕರೆ ಬೇಕೆ?
ಮನದ ಸವಿ ದಿಬ್ಬಣಕೆ
ಬಾಣ ಬಿರುಸುಗಳೇಕೆ ?  |1|

ಕಲ್ಲು ಕರಗುವ ಸಮಯ
ನೆತ್ತರೋಕುಳಿ ಬೇಕೆ?
ಬೆಂದೊಡಲ ಮನಸಿಗೆ
ಮತ್ತೆ ಬರೆಗಳು ಏಕೆ ?  |2|

ಕಲ್ಲು ಕರಗುವ ಸಮಯ
ಮನದ ಸೂರೆಯು ಬೇಕೆ?
ದಿಟ್ಟ ಕೋಟೆಯು ಎದೆಗೆ
ದೊಡ್ಡ ಸಿಡಿಲದು ಬೇಕೆ ? |3|

ಕಲ್ಲು ಕರಗುವ ಸಮಯ
ಬಸಿದ ಉಸಿರದು ಬೇಕೆ?
ಮನದ ಬೆತ್ತಲೆ ಮುನ್ನ
ಹಲವು ಗೊಡವೆಗಳೇಕೆ ? |4|


**
(ಈ ಕವಿತೆಯನ್ನು ಬರೆದಿರುವುದು 28.03.2006ರಂದು ದಂಟಕಲ್ಲಿನಲ್ಲಿ)

ಪ್ಯಾರಾ ಮಂಜಿಲ್ (ಕಥೆ) ಭಾಗ-2

              ಬಹುಶಃ ನನಗೆ ನೆನಪಿದ್ದಂತೆ ಈ ಘಟನೆ ನಡೆದು ಹತ್ತಿರ ಹತ್ತಿರ ಅರವತ್ತೈದು ವರ್ಷಗಳಂತೂ ಆಗಿದ್ದಾವೆ ಬೇಟಾ. ಮತ್ತೂ ಜಾಸ್ತಿ ವರ್ಷಗಳೇ ಆಗಿರಬೇಕು. ಆಗ ಈ ಅಶ್ವಿನಿ ವೃತ್ತದ ಮನೆಯಿರುವ ಜಾಗವೆಲ್ಲ ಹಸಿರು, ಕಾಡಿನಿಂದ ಕೂಡಿತ್ತು. ಶಿರಸಿ ನಗರಿಯೂ ಇಷ್ಟು ದೊಡ್ಡ ಬೆಳೆದಿರಲಿಲ್ಲ.  ಅಲ್ಲೊಂದು ಇಲ್ಲೊಂದು ಮನೆಗಳಿದ್ದವು. ನನ್ನ ವಾರಗೆಯವಳೇ ಹುಡುಗಿ ರಜಿಯಾ. ಅವಳಿಗೆ ಸೇರಿದ ಮನೆಯೇ ನೀನು ಹೇಳಿದ್ದು. ಆಕೆಯ ಅವಳಿಗಾಗಿ, ಅವಳ ಮೇಲಿನ ಪ್ರೀತಿಗಾಗಿ ಕಟ್ಟಿಸಿಕೊಟ್ಟಿದ್ದು. ನಿನಗೆ ಈಗ ಈ ಮನೆ ಬಹಳ ಹಳೆಯದು, ಚಿಕ್ಕದು ಅನ್ನಿಸಬಹುದು. ಆದರೆ ನಮ್ಮ ಕಾಲದಲ್ಲಿ ಇದೊಂದು ಬಂಗಲೆ. ಇಷ್ಟು ದೊಡ್ಡ ಮನೆ ಕಟ್ಟಿಸಿದವರು ಯಾರೂ ಇರಲಿಲ್ಲ.
              ರಜಿಯಾ ಆಕೆಯ ಅಪ್ಪನಿಗೆ ಒಬ್ಬಳೇ ಮಗಳು. ಅದ್ಯಾವ ಆದರ್ಶವೋ ಏನೋ ಗೊತ್ತಿಲ್ಲ.  ಎಲ್ಲ ಮುಸಲ್ಮಾನರೂ ಐದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡಿದ್ದರೂ, ತನಗೆ ಅವಕಾಶವಿದ್ದರೂ ಮಕ್ಕಳನ್ನು ಮಾಡಿಕೊಳ್ಳಲಿಲ್ಲ. ರಜಿಯಾ ಒಬ್ಬಳೆ ತನಗೆ ಸಾಕು ಎಂದು ಕೊಂಡು ಆಕೆಯನ್ನು ಮುದ್ದಿನಿಂದ ಬೆಳೆಸಿದ್ದರವರು. ಸಲೀಮುಲ್ಲಾ ಅಂತ ಅವರ ಹೆಸರು. ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ-ವ್ಯವಹಾರ ಜೋರಾಗಿದ್ದ ಕಾರಣ ಆದಾಯವೂ ಜಾಸ್ತಿಯಿತ್ತು. ಮಗಳಿಗೆ ಏನೂ ಕೊರತೆಯಾಗಬಾರದು ಎನ್ನುವಂತೆ ಬೆಳೆಸಿದರು. ಆ ಕಾಲಕ್ಕೆ ಮಗಳನ್ನು ಶಾಲೆಗೆ ಕಳಿಸಿದ್ದು ಬಹುದೊಡ್ಡ ಘಟನೆಯೇ ಹೌದು. ಅಶ್ವಿನಿ ಸರ್ಕಲ್ಲಿನಲ್ಲಿ ಕಟ್ಟಿಸಿದ್ದ ಹೊಸ ಮನೆಯಲ್ಲಿ ರಜಿಯಾ ಉಳಿದುಕೊಳ್ಳುವ ಸಲುವಾಗಿ ಎಲ್ಲ ವ್ಯವಸ್ಥೆಯನ್ನೂ ಕೈಗೊಂಡಿದ್ದ.
             ರಜಿಯಾ ನೋಡಲಿಕ್ಕೆ ಚೆಂದವೂ ಇದ್ದಳು. ಆಕೆ ಬೆಳೆಯುತ್ತಿದ್ದಂತೆಯೇ ಅನೇಕರು ತಮಗೆ ನಿಖಾ ಮಾಡಿಕೊಡಿ ಎಂದೂ ಕೇಳಿಕೊಂಡಿದ್ದರು. ಆದರೆ ಸಲೀಮುಲ್ಲಾ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಗಾಂಧಿ-ನೆಹರು, ಸ್ವಾತಂತ್ರ್ಯ ಹೋರಾಟ, ಆದರ್ಶ ಅದೂ ಇದೂ ಎನ್ನುತ್ತಿದ್ದ ಅವರು ಮಗಳನ್ನು ಕೇಳಿ ಬರುತ್ತಿದ್ದವರಿಗೆಲ್ಲ ಇನ್ನೂ ಚಿಕ್ಕ ವಯಸ್ಸು ಸ್ವಲ್ಪ ದಿನ ಹೋಗಲಿ ಎಂದೋ, ಇನ್ನೂ ಒಂದೆರಡು ವರ್ಷ ನಿಖಾ ಮಾಡುವುದಿಲ್ಲ ಎಂದೋ ಹೇಳಿ ಕಳುಹಿಸುತ್ತಿದ್ದರು. ಮಗಳಿಗೆ ಹೀಗಿದ್ದಾಗಲೇ ಹದಿನಾರೋ ಹದಿನೆಂಟೋ ತುಂಬಿತು.
             ಸಲೀಮುಲ್ಲಾ ಅವರ ದುಕಾನ್ ಗೆ ವ್ಯಾಪಾರಕ್ಕೆಂದು ಬರುತ್ತಿದ್ದವನು ವಿಶ್ವನಾಥ. ಶಿರಸಿ ಬಳಿಯ ಹಳ್ಳಿಯವನೇ. ಪ್ಲೇಗೋ ಇನ್ಯಾವುದೋ ಮಾರಿಯೋ ಆತನ ತಂದೆ ತೀರಿಕೊಂಡಿದ್ದರು. ತಂದೆ ತೀರಿಕೊಳ್ಳುವಾಗ ವಿಶ್ವನಾಥನಿಗೆ ಇನ್ನೂ ಹತ್ತೋ ಹನ್ನೆರಡೋ ವಯಸ್ಸು. ಎಳವೆಯಲ್ಲಿಯೇ ಮನೆಯ ಜವಾಬ್ದಾರಿ ಹೊರುವಂತಹ ಅನಿವಾರ್ಯತೆ ಒದಗಿತ್ತು. ಮನೆಯಲ್ಲಿ ತಾಯಿ, ಇಬ್ಬರು ತಮ್ಮಂದಿರು ಇದ್ದರು. ಸಲೀಮುಲ್ಲಾನ ದುಕಾನಿಗೆ ವ್ಯಾಪಾರಕ್ಕಾಗಿಯೋ ಅಥವಾ ಇನ್ನಿತರೆ ಕೆಲಸಕ್ಕಾಗಿ ಬರುವ ವೇಳೆಗೆ ವಿಶ್ವನಾಥನಿಗೆ ಇಪ್ಪತ್ತು ವರ್ಷ ವಯಸ್ಸು. ಮನೆಯ ಸದಸ್ಯರನ್ನು ಸಾಕುವ ಕಾರ್ಯ ಆತನ ಪಾಲಿಗಿದ್ದರಿಂದ ವಯಸ್ಸು ಇಪ್ಪತ್ತಾಗಿದ್ದರೂ ಮನಸ್ಸು ಮಾಗಿತ್ತು. ಅಡಿಕೆ ಮಾರಿ ಬಂದ ಹಣವೋ ಅಥವಾ ಇನ್ಯಾವುದೋ ಅಂತೂ ವಾರಕ್ಕೊಮ್ಮೆಯಾದರೂ ಸಲೀಮುಲ್ಲಾನ ದುಕಾನಿಗೆ ವಿಶ್ವನಾಥ ಬಂದು ಹೋಗುತ್ತಿದ್ದ. ಆಗತಾನೆ ಬೆಳೆದು ನಿಂತಿದ್ದ ರಜಿಯಾಳ ಕಣ್ಣಿಗೆ ಒಂದು ದಿನ ವಿಶ್ವನಾಥ ಬಿದ್ದಿದ್ದ.
              ಈಗೀಗ ಪ್ಯಾರ್ ಅಂದ್ರೆ ಬೆಲೆನೇ ಇಲ್ಲ ಬಿಡು ಬೇಟಾ. ಆದರೆ ಆಗ ಪ್ಯಾರ್ ಅಂದರೆ ಅದೆಷ್ಟು ಪವಿತ್ರವಾಗಿತ್ತು ಅಂತೀಯಾ. ರಜೀಯಾಳಿಗೆ ಮೊದಲ ನೋಟದಲ್ಲಿಯೇ ವಿಶ್ವನಾಥನ ಮೇಲೆ ಪ್ಯಾರ್ ಗೆ ಆಗ್ಬುಟ್ಟಿತ್ತು. ವ್ಯಾಪಾರಕ್ಕೆಂದು ಬರುತ್ತಿದ್ದ ವಿಶ್ವನಾಥ ರಜಿಯಾಳ ಮನಸ್ಸಿನಲ್ಲಿ ಸೆರೆಯಾಗಿಬಿಟ್ಟಿದ್ದ. ವಾರಕ್ಕೊಮ್ಮೆಯೋ ಅತವಾ ಎರಡು ಬಾರಿಯೋ ಬಂದು ಹೋಗುತ್ತಿದ್ದ ವಿಶ್ವನಾಥ ಮತ್ತಿನ್ಯಾವಾಗ ಬರುತ್ತಾನೋ ಎಂದು ಸದಾ ಕಾಯುತ್ತಿದ್ದಳು ರಜಿಯಾ. ದುಕಾನಿಗೆ ಬಂದಾಗಲೆಲ್ಲ ಆತನನ್ನು  ಸೆಳೆಯುವ ಪ್ರಯತ್ನವನ್ನೂ ಮಾಡಿದ್ದಳು. ಆದರೆ ತನ್ನದೇ ಆದ ಜವಾಬ್ದಾರಿಯ ಬದುಕಿನಲ್ಲಿ ಓಡುತ್ತಿದ್ದ ವಿಶ್ವನಾಥ ಆರಂಭದಲ್ಲಿ ಆಕೆಯನ್ನು ಗಮನಿಸಿರಲಿಲ್ಲ. ಆತ ಆಕೆಯನ್ನು ಗಮನಿಸುವ ವೇಳೆಗೆ ರಜಿಯಾಳ ಮನಸ್ಸಿನಲ್ಲಿ ವಿಶ್ವನಾಥನೆಂಬ ತೆರೆ ಸುನಾಮಿಯಂತಾಗಿ ಅಪ್ಪಳಿಸಿ, ಭೋರ್ಘರೆಯುತ್ತಿತ್ತು.
            ಹಲವು ದಿನಗಳ ನಂತರ ರಜಿಯಾ ವಿಶ್ವನಾಥನಲ್ಲಿ ಪ್ರೇಮ ನಿವೇದನೆ ಮಾಡಿದ್ದಳು. ವಿಶ್ವನಾಥ ಅವಾಕ್ಕಾಗಿದ್ದ. ಮನಸ್ಸಿನಲ್ಲಿ ಇಂತಹ ಕಲ್ಪನೆಗೂ ಆಸ್ಪದವಿಲ್ಲದಂತಹ ಸಮಯದಲ್ಲಿ ಆಕೆ ಕೇಳಿದ್ದಳು. ವಿಶ್ವನಾಥ ಗರಬಡಿದಂತಾಗಿ ಬಂದುಬಿಟ್ಟಿದ್ದ. ಅಷ್ಟೇ ಅಲ್ಲದೇ ಕೆಲವು ದಿನಗಳ ಕಾಲ ದುಕಾನ್ ಕಡೆಗೆ ಹೋಗುವುದನ್ನೂ ನಿಲ್ಲಿಸಿಬಿಟ್ಟಿದ್ದ. ಪ್ರೀತಿಯ ಸೆಳೆತವೇ ಬೇರೆ ರೀತಿಯದ್ದು. ಅದನ್ನು ಎಷ್ಟೇ ದೂರವಿಟ್ಟರೂ ಬಂದು ಕಾಡುತ್ತದೆ. ವಿಶ್ವನಾಥನೂ ಅದೊಂದು ದಿನ ರಜಿಯಾಳ ಪ್ರೀತಿಗೆ ಕರಗಿದ್ದ. ಆಕೆಯ ನಿವೇದನೆಯನ್ನು ಒಪ್ಪಿಕೊಂಡಿದ್ದ.
            ಪ್ರತಿವಾರ ದುಕಾನಿಗೆ ಬಂದಾಗಲೆಲ್ಲ ರಜಿಯಾ-ವಿಶ್ವನಾಥರ ಪ್ರೀತಿ ಹಸಿರಾಗುತ್ತಿತ್ತು. ಹೆಮ್ಮರವಾಗುತ್ತಿತ್ತು. ಅದ್ಹೇಗೋ ಗೊತ್ತಿಲ್ಲ. ರಜಿಯಾ-ವಿಶ್ವನಾಥರ ಪ್ರೀತಿ ಅವರಿಬ್ಬರನ್ನು ಬಿಟ್ಟರೆ ಇನ್ನೊಬ್ಬರಿಗೆ ಮಾತ್ರ ಗೊತ್ತಿತ್ತು. ಅದು ನಾನು. ಅವರ ಪ್ರೀತಿಗೆ ನಾನು ಅನೇಕ ಸಾರಿ ಮೆಟ್ಟಿಲಾಗಿದ್ದೆ. ಸೇತುವೆಯಾಗಿದ್ದೆ. ರಕ್ಷಕನೂ ಆಗಿದ್ದೆ. ಯಾರಿಗೂ ಗೊತ್ತಾಗದಂತೆ ಕಾಪಾಡುತ್ತಿದ್ದೆ. ಇವರಿಬ್ಬರ ಪ್ರೇಮ ಹೆಮ್ಮರವಾಗಿತ್ತು. ರಜಿಯಾ ವಿಶ್ವನಾಥನನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಳು. ಅದೊಂದು ದಿನ ರಜಿಯಾ ವಿಶ್ವನಾಥನನ್ನು ಮದುವೆಯಾಗಿ ಅಶ್ವಿನಿ ಸರ್ಕಲ್ಲಿನ ಆ ಮನೆಗೆ ಕರೆದುಕೊಂಡೂ ಬಂದು ಬಿಟ್ಟಳು. ವಿಚಿತ್ರ ಅಂದರೆ ಈ ಮದುವೆಯ ಕುರಿತು ಸಲೀಮುಲ್ಲಾ ಯಾವುದೇ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಸಿಟ್ಟೂ ಆಗಲಿಲ್ಲ. ಮಗಳು ವಿಶ್ವನಾಥನನ್ನು ಅದರಲ್ಲೂ ಹಿಂದುವೊಬ್ಬನನ್ನು ಮದುವೆಯಾಗಿ ಬಂದಳು ಎನ್ನುವುದನ್ನು ಕೇಳಿ ಮೌನಿಯಾಗಿ ಉಳಿದುಬಿಟ್ಟರು. `ಮಗಳೇ ಹೇಗೇಕೆ ಮಾಡಿದೆ..' ಎಂದೂ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.
            ಕೆಲ ದಿನಗಳು ಕಳೆದವು. ಆ ಕೆಲದಿನಗಳಲ್ಲಿ ರಜಿಯಾ ಹಾಗೂ ವಿಶ್ವನಾಥರು ಅಶ್ವಿನಿ ಸರ್ಕಲ್ಲಿನ ಮನೆಯಲ್ಲಿ ಆರಾಮಾಗಿಯೇ ಇದ್ದರು ಎನ್ನಬಹುದು. ಆದರೆ ಈ ಸುದ್ದಿ ದಿನದಿಂದ ದಿನಕ್ಕೆ ಎಲ್ಲೆಡೆ ಹರಡಿತು. ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗನನ್ನು ಮದುವೆಯಾದಳು ಎನ್ನುವ ವಿಷಯ ಎಲ್ಲ ಕಡೆ ಹಬ್ಬಿತು. ಹಲವು ಮುಸ್ಲಿಂ ನಾಯಕರುಗಳು, ಮೌಲ್ವಿಗಳು ಬಂದು ಸಲೀಮುಲ್ಲಾನ ಬಳಿ ಈ ಕುರಿತು ಮಾತನಾಡಿದ್ದೂ ಆಯಿತು. ರಜಿಯಾ ಮಾಡಿದ್ದು ಸರಿಯಲ್ಲ. ಹಾಗೆ ಹೀಗೆ ಎಂದೂ ಹೇಳತೊಡಗಿದರು. ಆದರೆ ಸಲೀಮುಲ್ಲಾ ಮಾತ್ರ ರಜಿಯಾಳ ಪರ ನಿಂತುಬಿಟ್ಟಿದ್ದರು. ಈ ಕುರಿತು ಮನೆಗೆ ಬಂದು ತನಗೆ ಬುದ್ಧಿ ಹೇಳಲು ಯತ್ನಿಸಿದವರನ್ನೇ ಬೈದು ಕಳಿಸುವ ಪ್ರಯತ್ನವನ್ನೂ ಮಾಡಿದರು. ಆದರೆ ಮೌಲ್ವಿಗಳು ಸುಮ್ಮನಿರಬೇಕಲ್ಲ. ಇದು ತಮ್ಮ ಧರ್ಮಕ್ಕೆ ಅವಮಾನಕರ ವಿಷಯ ಎಂದೇ ಭಾವಿಸಿದರು.
            ಕೊನೆಗೊಂದು ದಿನ ಅಶ್ವಿನಿ ಸರ್ಕಲ್ಲಿನ ಮನೆಗೆ ಬಂದ ಮುಸ್ಲಿಂ ನಾಯಕರು ರಜಿಯಾಳ ಬಳಿ ಮಾತಿಗೆ ನಿಂತರು. ಸಲೀಮುಲ್ಲಾ ವಿಷಯವನ್ನು ಕೇಳಿ ಓಡಿಬಂದಿದ್ದ. ರಜಿಯಾಳ ಬಳಿ ಈ ಮದುವೆಯನ್ನು ಮುರಿದುಕೊಳ್ಳು ಎಂದರು. ಆದರೆ ಆಕೆ ಒಪ್ಪಲಿಲ್ಲ. ಕೊನೆಗೆ ವಿಶ್ವನಾಥನನ್ನು ಮುಸ್ಲಿಂ ಧರ್ಮಕ್ಕೆ ಧರ್ಮಾಂತರ ಮಾಡಿಸು ಎಂದೂ ಹೇಳಿದರು. ಆದರೆ ರಜಿಯಾ ಮಾತ್ರ ಖಂಡತುಂಡವಾಗಿ ಇದನ್ನು ವಿರೋಧಿಸಿದ್ದಳು. ನಾಯಕರುಗಳ ಪದೇ ಪದೆ ಒತ್ತಡವನ್ನು ಹೇರಲಾರಂಭಿಸಿದರು. ಹಲವಾರು ಬಗೆಯಿಂದ, ಹತ್ತೆಂಟು ಮಾರ್ಗಗಳಿಂದ ರಜಿಯಾ ಹಾಗೂ ವಿಶ್ವನಾಥನ ವಿರುದ್ಧ ಹಲವು ರೀತಿಯಿಂದ ಕಾರ್ಯಗಳನ್ನು ಕೈಗೊಂಡರು. ಭಹಿಷ್ಕಾರವನ್ನೂ ಹೇರಲಾಯಿತು.
            ರಜಿಯಾ ಹಾಗೂ ವಿಶ್ವನಾಥರ ಪಾಲಿಗೆ ಆ ಮನೆ ಪ್ಯಾರಾ ಮಂಜಿಲ್ ಆಗಿತ್ತು. ಮನೆಯೇ ಸರ್ವಸ್ವ. ಸಕಲ ಸಂತೋಷವನ್ನೂ ನೀಡುವ ಅವರ ಪಾಲಿನ ಭಾಗ್ಯದ ಬಾಗಿಲಾಗಿತ್ತು. ತಮ್ಮ ಸಂತೋಷಕ್ಕೆ ಯಾರೇ ಅಡ್ಡಗಾಲು ಹಾಕಿದ್ದರೂ ಆ ಮನೆಯಲ್ಲಿ ಅದೇನೋ ನೆಮ್ಮದಿ ಸಿಗುತ್ತಿದ್ದ ಕಾರಣ ಖುಷಿಯಿಂದಲೇ ಜೀವನ ನಡೆಸುತ್ತಿದ್ದರು. ಆರು ಕೋಣೆಗಳನ್ನು ಹೊಂದಿದ್ದ ಆ ಮನೆ, ಪಕ್ಕದೊಂದು ಬಾವಿ, ಮೇಲಿನ ಮಹಡಿ ಸೇರಿದಂತೆ ಸಾಕಷ್ಟು ವಿಶಾಲವಾಗಿಯೇ ಇತ್ತು. ಆದರೆ ಇಬ್ಬರೇ ಬದುಕಬೇಕಿತ್ತು. ಯಾರೂ ಆ ಮನೆಗೆ ಬರುವಂತಿಲ್ಲ. ಹೋಗುವಂತಿಲ್ಲ. ಭಹಿಷ್ಕಾರ ಹೇರಿದ್ದ ಕಾರಣ ಸುತ್ತಲ ಜಗತ್ತಿನ ಕೊಂಡಿಯನ್ನು ಕಳೆದುಕೊಂಡಿತ್ತು. ಆದರೆ ನಾನು ಹಾಗೂ ಸಲೀಮುಲ್ಲಾ ಮಾತ್ರ ಯಾರಿಗೂ ತಿಳಿಯದಂತೆ ಆ ಮನೆಗೆ ಹೋಗಿ ಬಂದು ಮಾಡುತ್ತಿದ್ದೆವು. ರಜಿಯಾ-ವಿಶ್ವನಾಥರಿಗೆ ಅಗತ್ಯವಾದ ವಸ್ತುಗಳನ್ನು ತಲುಪಿಸಿ ಬರುತ್ತಿದ್ದೆವು.
           ಮೊದ ಮೊದಲು ಸಲೀಮುಲ್ಲಾ ಮಗಳ ಪರವಾಗಿದ್ದ. ಆದರೆ ಮುಸ್ಲೀಂ ನಾಯಕರುಗಳ ಒತ್ತಡವನ್ನು ಆತ ಅದೆಷ್ಟು ದಿನ ತಾಳಿಕೊಳ್ಳಬಲ್ಲ? ಕೊನೆಗೊಮ್ಮೆ ಆತನೂ ಮಗಳ ಬಳಿ ಒತ್ತಾಯ ಮಾಡಲು ಆರಂಭಿಸಿದ. ಕೊನೆಗೊಮ್ಮೆ ರಜಿಯಾ ಆತನ ವಿರುದ್ಧವೂ ಸಿಟ್ಟಾದಳು. ಕೊನೆಗೊಂದು ದಿನ ಸಲೀಮುಲ್ಲಾನ ಬಳಿ ಹೋಗಿ ಜಗಳ ಮಾಡಿದ ರಜಿಯಾ ಅಶ್ವಿನಿ ಸರ್ಕಲ್ಲಿನ ಮನೆಯೊಳಗೆ ತೆರಳು ದಢಾರನೆ ಬಾಗಿಲು ಹಾಕಿದಳು. ಎಲ್ಲರೂ ಅವಾಕ್ಕಾಗಿದ್ದರು.
           ಆಗ ಹಾಕಿದ ಬಾಗಿಲು ಮೂರು ದಿನಗಳಾದರೂ ತೆರೆಯದೇ ಇದ್ದಾಗ ಸಲೀಮುಲ್ಲಾ ಅನುಮಾನ ಬಂದು ಮನೆಯ ಬಾಗಿಲನ್ನು ಒಡೆಸಿ ನೋಡಿದ. ಮನೆಯೊಳಗಿನ ಕತ್ತಲೆಯ ಕೋಣೆಯೊಂದರಲ್ಲಿ ರಜಿಯಾ ಹಾಗೂ ವಿಶ್ವನಾಥ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಷ್ಕಲ್ಮಷ ಪ್ರೇಮವೊಂದು ಸಾವಿನಲ್ಲಿ ಪರ್ಯವಸಾನಗೊಂಡಿತ್ತು. ಸಲೀಮುಲ್ಲಾ ಮೌನವಾಗಿ ರೋಧಿಸುತ್ತಿದ್ದ. ಉಳಿದವರು ಮಾತನಾಡದೇ ಮೌನವಾಗಿ ಕಾಲ್ಕಿತ್ತಿದ್ದರು. ಆ ನಂತರವೇ ಮನೆಯಲ್ಲಿ ಚಿತ್ರ ವಿಚಿತ್ರ ಘಟನೆಗಳು ಜರುಗಲಾರಂಭಿಸಿದ್ದು. ನೀವು ಮನೆಯಲ್ಲಿ ಉಳಿದುಕೊಳ್ಳಲು ಬರುವ ವೇಳೆಗೆ ಇನ್ನೂ ನಾಲ್ಕೈದು ಜನರು ಉಳಿದುಕೊಂಡಿದ್ದರು. ಅಲ್ಲಿ ಒಂದೆರಡು ಅಸಹಜ ಸಾವುಗಳೂ ಸಂಭವಿಸಿದ್ದವು. ನೀವು ಎಲ್ಲಿ ಈ ಮನೆಯಲ್ಲಿ ಬಾಡಿಗೆಗೆ ಇರುವುದಿಲ್ಲವೋ ಎಂದು ಹೆದರಿ ಭಯದಿಂದ ನಿಮ್ಮ ಬಳಿ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಆದರೆ ಬೇಟಾ ನೀನು ಮಾತ್ರ ಈ ಮನೆಯ ವಿಷಯವನ್ನು ಹಿಂದೂ ಬಿಡದೆ ಮುಂದೂ ಬಿಡದೇ ಕೇಳಿ ತಿಳಿದುಕೊಂಡುಬಿಟ್ಟೆ ನೋಡು.. ಎಂದರು ಫಾತಿಮಾ. ನಾನು ಮೌನದಿಂದ ನಿಟ್ಟುಸಿರನ್ನು ಬಿಟ್ಟುಬಿಟ್ಟಿದ್ದೆ.
            ಅಲ್ಲಿಂದ ನಾನು ಬರುವಾಗ ನನ್ನ ಮನದಲ್ಲಿಯೇ ನೂರಾರು ಆಲೋಚನೆಗಳು. ಅದೇನೋ ಲೆಕ್ಕಾಚಾರ. ರಾಘವನಿಗೆ ಅದ್ಯಾವ ಪ್ರೇರಣೆಯೋ ನಾಗವಲ್ಲಿ ಕೋಣೆ ಎಂದಿದ್ದ. ಅದೇ ಕೋಣೆಯಲ್ಲಿ ವಿಶ್ವನಾಥ-ರಜಿಯಾರು ಆತ್ಮಹತ್ಯೆ ಮಾಡಿಕೊಂಡಿದ್ದರು. ಯಾವ ಪ್ರೇರಣೆಯಿಂದ ಹೀಗೆ ಹೇಳಿದ್ದನೋ ಎಂದುಕೊಂಡೆ. ಮದ್ಯರಾತ್ರಿಯಲ್ಲೆದ್ದು ಕಥೆ-ಕವಿತೆಗಳನ್ನು ಬರೆಯಲು ಕುಳಿತು ಬಿಡುತ್ತಿದ್ದ ನಾಗರಾಜನ ಕನವರಿಕೆಗಳಿಗೂ ಇದೇ ಕಾರಣವೇ ಎಂದುಕೊಂಡೆ. ಮನಸ್ಸಿನ ತುಂಬೆಲ್ಲ ರಜಿಯಾ-ವಿಶ್ವನಾಥರ ನಿಷ್ಕಲ್ಮಷ ಪ್ರೇಮ ತುಂಬಿಕೊಂಡಿತ್ತು. ಧರ್ಮಗಳನ್ನು ಮೀರಿದ ರಜಿಯಾ ಯಾಕೋ ಮನಸ್ಸಿನಲ್ಲಿ ನಿಂತಿದ್ದಳು. ನಾನು ಈ ಕತೆಯನ್ನು ಪೂರ್ತಿ ನಂಬಿರಲಿಲ್ಲ. ಕೊನೆಗೆ ನಮ್ಮೂರ ಭಾಗದಲ್ಲಿ ಇದ್ದ ಹಳೆಯ ವ್ಯಕ್ತಿಗಳನ್ನು ಕೇಳಿದಾಗ ಅವರೂ ಇಂತದ್ದೊಂದು ಘಟನೆ ನಡೆದಿದ್ದನ್ನು ನೆನಪು ಮಾಡಿಕೊಂಡರು. ಒಂದಿಬ್ಬರು ಮಾತ್ರ ವಿಶ್ವನಾಥನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಹೆಂಗಸರನ್ನು ಯಾರಾದರೂ ಇಟ್ಟುಕೊಂಡರೆ `ಇಟ್ಟುಕೊಂಡವಳು' ಎನ್ನಲಾಗುತ್ತದೆ. ಅದೇ ರೀತಿ ವಿಸ್ವನಾಥ ನನ್ನು `ಇಟ್ಟುಕೊಂಡವನು..' ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದರು. ನಾನು ಮನಸ್ಸನ್ನು ಇನ್ನಷ್ಟು ಗೋಜಲಾಗಿಸಿಕೊಂಡು ಬಂದಿದ್ದೆ.

**
            ರಜಿಯಾ-ವಿಶ್ವನಾಥರ ಕಥೆಯನ್ನು ಕೇಳಿದ ನಂತರವೂ ಮತ್ತಾರು ತಿಂಗಳು ನಾವು ಅದೇ ಮನೆಯಲ್ಲಿ ಉಳಿದುಕೊಂಡಿದ್ದವು. ನಾಗರಾಜ ಅದ್ಯಾವುದೋ ಕಾರಣದಿಂದ ಆ ಮನೆಯನ್ನು ಬಿಟ್ಟು ಹೋಗಿದ್ದ. ರಾಘವನೂ ಕೆಲ ದಿನಗಳ ನಂತರ ಮನೆಯನ್ನು ತೊರೆದಿದ್ದ. ಏನಾಗೋದಿಲ್ಲ ಎನ್ನುವ ಹುಮ್ಮಸ್ಸಿನಲ್ಲಿ ಬದುಕುತ್ತಿದ್ದ ನಾನು ಜಾಂಡೀಸಿಗೆ ಸಿಲುಕಿ ಆ ಮನೆಯನ್ನು ಬಿಡಬೇಕಾಗಿ ಬಂದಿತ್ತು. ಪ್ರಶಾಂತ ಮಾತ್ರ ತನ್ನ ಬಿಸಿನೆಸ್ಸಿನಲ್ಲಿ ಅಪಾರ ನಷ್ಟಕ್ಕೆ ಸಿಲುಕಿ ಮನೆಯನ್ನು ಬಿಡುವ ಪ್ರಸಂಗ ಬಂದಿತ್ತು.
          ಅಂದ ಹಾಗೆ ಇತ್ತೀಚೆಗೊಮ್ಮೆ ಆ ಮನೆಯ ಬಳಿ ಹೋಗಿದ್ದೆ. ಮನೆಯಲ್ಲಿ ಕಲರವ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಅದ್ಯಾರೋ ರಾಜಸ್ತಾನಿ ದಂಪತಿಗಳು ಮನೆಯಲ್ಲಿ ಬಂದು ಉಳಿದಿದ್ದಾರೆ. ಆರು ತಿಂಗಳಾಗಿವೆ. ಮನೆಯ ಮುಂದಿನ ಭಾಗದಲ್ಲಿ ದೊಡ್ಡದೊಂದು ಅಂಗಡಿಯನ್ನು ತೆರೆದಿದ್ದಾರೆ. ಹಿಂಭಾಗದಲ್ಲಿ ವಾಸ ಮಾಡುತ್ತಾರೆ. ಆ ದಂಪತಿಗೆ ಇಬ್ಬರು ಮಕ್ಕಳು. ಅವಳಿ-ಜವಳಿ. ಆರಾಮಾಗಿದ್ದಾರೆ ಎಂದರು. ನನ್ನ ಮನಸ್ಸಿನಲ್ಲಿ ಅದೇನೋ ಬೆರಗು ಮೂಡಿತ್ತು.

(ಮುಗಿಯಿತು.)

Tuesday, July 1, 2014

ಕೈಗಾ ತಂದ ಕಣ್ಣೀರು

(ಕೈಗಾ ಅಣುಸ್ಥಾವರ)
                ಕೈಗಾ ಅಣುಸ್ಥಾವರದ ವಿಕಿರಣ ಬಗೆದಷ್ಟು ಹೂರಣ ಹೊರಬರುತ್ತಿದೆ. ಯಲ್ಲಾಪುರ, ಜೋಯಿಡಾ, ಕಾರವಾರ ಹಾಗೂ ಅಂಕೋಲಾ ತಾಲೂಕಿನ ಗಡಿ ಪ್ರದೇಶಗಳಲ್ಲಿ ದಿನಂಪ್ರತಿ ಹೊಸ ರೋಗಗಳು ಪತ್ತೆಯಾದರೆ ಮರಣ ಹೊಂದಿದವರ ಮಾಹಿತಿ ಬೆಳಕಿಗೆ ಬರುತ್ತಲಿದೆ.
                ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ನಿರ್ಲಕ್ಷಿತ ಧೋರಣೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಜನರ ಜೊತೆ ಚಲ್ಲಾಟವಾಡುತ್ತಿರುವ ಆರೋಗ್ಯ ಇಲಾಖೆ ಅಣು ವಿಕಿರಣಕ್ಕೆ ಯಾವುದೇ ಬಾಲಕ ಬಲಿಯಾಗಿಲ್ಲ ಎನ್ನುವ ಸ್ಪಷ್ಟೀಕರಣ ನೀಡುತ್ತದೆ.
                ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಷ್ಟಕ್ಕೂ ನಮ್ಮ ಮನೆಗಳಿಗೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ವೈದ್ಯರಾಗಲಿ ಅಥವಾ ಶುಶ್ರೂಷಕಿಯರಾಗಲಿ ಬಂದಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚುಕೊಳ್ಳುವ ಸಲುವಾಗಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
                ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಚಂದ್ರಶೇಖರ ರಾಮಚಂದ್ರ ಕಾರಂತ ಅವರ ಮಗಳು ಭೂಮಿಕಾ 2011 ಜುಲೈ 13 ರಂದು ಮೃತ ಪಟ್ಟಿದ್ದಾಳೆ. ಆರೋಗ್ಯವಾಗಿದ್ದ ಭೂಮಿಕಾ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಿಂದ ನರಳಲಾರಂಭಿಸಿದಳು. ಇವಳನ್ನು ಯಲ್ಲಾಪುರದ ವೈದ್ಯರಾದ ಡಾ. ಜಿ.ಎನ್. ಹೆಗಡೆಯವರಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಕೆಮ್ಮು ಮತ್ತು ನೆಗಡಿಗೆ ಔಷಧ ನೀಡಿದರು. ಮಾರನೇದಿನ ಬೆಳಗಾಗುವಷ್ಟೊತ್ತಿಗೆ ನಮ್ಮ ಮಗಳು ಇಹ ಲೋಕ ತ್ಯಜಿಸಿಯಾಗಿತ್ತು. ಇದ್ದಕ್ಕಿದ್ದಂತೆ ಮಗಳ ನಿಧನದ ಕುರಿತು ವೈದ್ಯರಲ್ಲಿ ಕೇಳಿದಾಗ ನಿಮ್ಮ ಮಗಳು ಹೃದಯಾಘಾತದಿಂದ ನಿಧನ ಹೊಂದಿರಬೇಕು ಎಂದು ತಿಳಿಸಿದರು. ಹೀಗೆ ತಮ್ಮ ಮಗಳ ಮರಣದ ಕುರಿತು ವಿವರಣೆ ನೀಡಿದವರು ಚಂದ್ರಶೇಖರ ಕಾರಂತರು.
                  ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾದ ಸುಬ್ರಹ್ಮಣ್ಯ ಅನಂತ ಗಾಂವ್ಕರ್ ತಮ್ಮ ಮಗನ ಸಾವಿನ ವಿವರ ನೀಡಿದ್ದು ಹೀಗೆ, ತಮ್ಮ ಮಗನ ಜನನ ಸಹಜವಾಗಿತ್ತು. ಯಾವುದೇ  ಸಮಸ್ಯೆ ಇರಲಿಲ್ಲ. ಒಂದು ವರ್ಷದ ಹಿಂದೆ ಮಗ ದಿನೇಶನಿಗೆ ಒಮ್ಮೆಲೆ ವಾಂತಿ ಪ್ರಾರಂಭವಾಯಿತು. ಶಿರಸಿಯ ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಗೆ ಸೇರಿಸಲಾಯಿತು. ಯಾವುದೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮಗ ಸಾವನ್ನಪ್ಪಿದ. ವೈದ್ಯರಲ್ಲಿ ಕೇಳಿದಾಗ ಹೃದಯ ಸಂಬಂಧಿ ಖಾಯಿಲೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಿದರು.
                    ವಜ್ರಳ್ಳಿಯ ಗಿಡಿಗಾರಿ ಮನೆಯ ಕಾಮೇಶ ತಮ್ಮಣ್ಣ ಭಟ್ಟರಿಗೆ ಒಂದು ತಿಂಗಳ ಹಿಂದೆ ಮಗುವೊಂದು ಜನಿಸಿತು. ಹದಿನೈದು ದಿನಗಳ ನಂತರ ಮಗು ಆಹಾರ ಸೇವಿಸುವುದನ್ನು ನಿಲ್ಲಿಸಿತು. ಆಗ ಶಿರಸಿ ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ಅನ್ನನಾಳದ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮಗು ಈಗಲೂ ವೈದ್ಯರ ಆರೈಕೆಯಲ್ಲಿದೆ ಎಂದು ಪಾಲಕರು ಹೇಳಿದರು.
(ಅಣುವಿಕಿರಣದ ಪರಿಣಾಮ)
                    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆೆ ಎನ್ನುವುದಕ್ಕೆ ತಾಜಾ ಉದಾಹರಣೆ ಎಂದರೆ ಬಾಗಿನ ಕಟ್ಟಾದ ಗಣಪತಿ ಶಂಕರ ಭಾಗವತ ಅನ್ನನಾಳದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿರುವುದು ಅವರ ಕಾರ್ಯ ವೈಖರಿಗೆ ನಿದರ್ಶನವಾಗುತ್ತದೆ. ಗಣಪತಿ ಶಂಕರ ಭಾಗವತರು ಮಣಿಪಾಲದಲ್ಲಿ ತಮ್ಮ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದು ಹಾಲಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಚೈತ್ರ ಲಕ್ಷ್ಮಣ ಕುಣುಬಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದಳೇ ಹೊರತು ಅಲ್ಲಿ ಚಿಕಿತ್ಸೆ ಪಡೆದಿರಲಿಲ್ಲ.
                   ಕೈಗಾ ಅಣುಸ್ಥಾವರದ ವಿಕಿರಣದಿಂದಲೇ ಭಯಾನಕ ರೋಗಗಳು ಕಾನೀಸಿಕೊಳ್ಳುತ್ತಿವೆ ಎನ್ನಲಾದ ಪ್ರದೇಶದ ಜನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮತ್ತು ವೈದ್ಯರ ಕಾರ್ಯ ಶೈಲಿಗೆ ಅಸಮದಾನಗೊಂಡಿದ್ದಾರೆ. ವಾಸ್ತವಿಕತೆಯನ್ನು ತಿರುಚಲು ಪ್ರಯತ್ನಿಸುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಅಣುಸ್ಥಾವರ ಅಧಿಕಾರಿಗಳ ಆಮಿಷಕ್ಕೆ ಕಟ್ಟುಬಿದ್ದು ವಸ್ತು ಸ್ಥಿತಿ ಮರೆಮಾಚುತ್ತಿದ್ದ್ದಾರೆ ಎಂದು ಕಿಡಿಕಾರಿದ್ದಾರೆ.
ಯಲ್ಲಾಪುರದ ತಾಲೂಕಾ ವೈದ್ಯಾಧಿಕಾರಿ ಡಾ. ಅನ್ನಪೂರ್ಣಾ ವಸ್ತ್ರದ್ ಅವರು ಸೋಮವಾರ ನಮ್ಮ ಊರಿಗೆ ಬಂದು ಒಂದೆಡೆ ಕುಳಿತು ಅಲ್ಲಿಗೆ ಊರವರನ್ನು ಕರೆಸಿ ನಮ್ಮ ಮನೆಯ ಯಾರಿಗೂ ಯಾವುದೇ ರೋಗ ಬಂದಿಲ್ಲ, ರೋಗ ಬಂದು ನಿಧನ ಹೊಂದಿಲ್ಲ ಎಂದು ಭಲಾತ್ಕಾರವಾಗಿ ಬರೆಸಿಕೊಂಡು ಹೋಗಿದ್ದಾರೆ ಎನ್ನುವ ಸಂಗತಿಯನ್ನು ವಜ್ರಳ್ಳಿ ಪ್ರದೇಶದ ಜನ ತಿಳಿಸಿದ್ದಾರೆ.

-ವಿಶ್ವಾಮಿತ್ರ ಹೆಗಡೆ

(ಉತ್ತರ ಕನ್ನಡಕ್ಕೆ ಶಾಶ್ವತವಾಗಿ ಸಿಕ್ಕ ಶಾಪ ಕೈಗಾ ಅಣುಸ್ಥಾವರ. ಅಣುಸ್ಥಾವರದಿಂದ ಬಿಡುಗಡೆಯಾಗುವ ಅಣುವಿಕಿರಣದ ದುಷ್ಪರಿಣಾಮಗಳ ಕುರಿತು ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಅವರು ಕನ್ನಡಪ್ರಭ ಪತ್ರಿಕೆಯಲ್ಲಿ ಸರಣಿ ಲೇಖನ ಬರೆದಿದ್ದರು. ಆ ಲೇಖನ ಸರಮಾಲೆಯಲ್ಲಿನ ಒಂದು ಲೇಖನ ಈ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ)

ನೀನು-ಪ್ರೀತಿ

(ರೂಪದರ್ಶಿ: ಅನೂಷಾ ಹೆಗಡೆ)
1) ಸುತ್ತ ಕೊಂಚವೂ ಜಾಗವಿಲ್ಲದಂತೆ
    ನನ್ನೊಡಲ ಆವರಿಸಿರುವ ಬಸರಿಮರ ನೀನು ||

    ದೊಡ್ಡ ಅಮೆಜಾನಿನಗಲ ನದಿಯೊಳಗೆ
    ಅಷ್ಟೇ ದೊಡ್ಡ ಬೆಳೆದಿಹ ನೈದಿಲೆ ನೀನು ||
   
    ನನ್ನಂತೆ, ಯಾರಂಕೆಗೂ ಸಿಗದ
    ಹಸಿರೊಸರುವ ಪ್ರಕೃತಿ ನೀನು ||

    ಒಮ್ಮಿಂದೊಮ್ಮೆಲೆ ಮನದೊಳಗೆ ಧುತ್ತೆಂದು
    ಮೂಡುವ ಬರಿಕಲ್ಪನೆ ನೀನು ||

    ನಿಜ, ನಾನಂದುಕೊಂಡಂತೆ ಇರುವ ವಿ-
    ಭಿನ್ನ, ವಿ-ಶಿಷ್ಟ, ವರ್ಣನಾತ್ಮಕ ಪ್ರೀತಿ ನೀನು ||


2)  ನೀನೇ ಹಾಗೆ ಬಸುರಿ ಮರದಂತೆ
     ಉಸಿರುಗಟ್ಟಿಸ್ತೀಯಾ, ಎದೆಯೊಳಗೆ
     ಅಮೆಜಾನಿನಗಲವಾಗಿ ಬಿಡುತ್ತೀಯಾ ||

     ನಿನ್ನೊಡಲು ನಿಗೂಢ-ಹಸಿರು, ಜೊತೆಗೆ
     ಪ್ರೀತಿಯ ಒಸರು-ಕುಸುರು,
     ನಿನಗೆ ಅಂಕೆಯಿಲ್ಲ, ಸ್ವತಂತ್ರ ||

     ನೀನೊಂದು ರಮ್ಯ ಕಲ್ಪನೆ,
     ಹಾಗೆಯೇ ನೀನು ಹಸಿ ಹಸಿ
     ನಿಷ್ಕಾಮ ಪ್ರೀತಿ-ಬರೀ ಪ್ರೀತಿ ||

**
(ಈ ಕವಿತೆಯನ್ನು ಬರೆದಿರುವುದು 10-04-2007ರಂದು ದಂಟಕಲ್ಲಿನಲ್ಲಿ )
(ಕವಿತೆಗೆ ಭಾವಚಿತ್ರ ನೀಡಿದ ಅನುಷಾ ಎಂ. ಹೆಗಡೆಗೆ ಧನ್ಯವಾದಗಳು)