Monday, April 7, 2014

`ಕಾರು'ಬಾರು

ಕಾರು, ಕಾರು
ಸಾಕಪ್ಪಾ ಇದರ ಕಾರುಬಾರು |

ದಿನಾಲೂ ಹೊಟ್ಟೆತುಂಬಾ ಪೆಟ್ರೂಲು
ಎಂದಿಗೂ ಇಲ್ಲ ಕಂಟ್ರೂಲು |

ಅಯ್ಯೋ ಸಾಕು!! ಘಾಟು ಹೊಗೆ
ಇರುವವು ಕಂಪನಿ ನೂರು ಬಗೆ |

ಕಿವಿಗಡಚಿಕ್ಕುವ ಹಾರನ್ನು
ಕೇಳಿದವನಲ್ಲಿರಬೇಕು ಅನಾಸಿನ್ನು |

ಕಾರಿಂದಲೇ ಟ್ರಾಫಿಕ್ಕು ಬಲುಜೋರು
ತಲೆ ಕೆಡಿಸುತ್ತಿವೆ ಮಾರು ಮಾರು |

ಮಾರುತಿ, ಸ್ಯಾಂಟ್ರೋ, ಝೆನ್ನು
ಒಂದೊಂದಕ್ಕೂ ಹೊಸ ಇಂಜಿನ್ನು |

ಒಂದಕ್ಕಿಂತ ಒಂದು ಬಲು ಚಂದ
ಬದುಕಿನ ಜೊತೆಗೆ ಚಕ್ಕಂದ |

ತರಹೇವಾರಿ ಮೈಲೇಜು
ಕಾರು ಕೊಂಡಾಗಲೇ ಅದರ ನಾಲೇಜು |

ನೋಡಲು ಚಂದವೆ ಈ ಕಾರು
ಕೊಳ್ಳಲು ಕಿಸಿಗೆ ಚಕ್ಕರ್ರು |

**

(ಇದನ್ನು ಬರೆದಿದ್ದು 22.08.2006ರಂದು ದಂಟಕಲ್ಲಿನಲ್ಲಿ)

Friday, April 4, 2014

ಮುತ್ತೈದೆ

(ರೂಪದರ್ಶಿ : ಸಮನ್ವಯಾ ಸುದರ್ಶನ್)
ನೀನಂತೆ ಮುತ್ತೈದೆ
ಬಹಳ ಲಕ್ಷಣವಂತೆ ||2||

ಕೈಯಲ್ಲಿ ತುಂಬು ಬಳೆ
ಸಪ್ಪಳ ಮೆರೆಸಿದೆ ಇಳೆ ||4||

ಕಾಲೊಳು ಬೆಳ್ಳಿ ಕಾಲುಂಗುರ
ಪಾದಗಳಿಗೊಂದು ಸಿಂಗಾರ ||6||

ಹಣೆಯ ಮೇಲಣ ಬಿಂಧು
ಶೋಭಾಯಮಾನ ಸಿಂಧು ||8||

ಮೂಗಿಗಿಟ್ಟ ಮೂಗುತಿ
ಬಾಳ ಬೆಳಗಿದೆ ಕೀರುತಿ ||10||

ಕಿವಿಯೊಳಗಳ ಹರಳೋಲೆ
ಭರವಸೆಯ ಬದುಕ ಮಾಲೆ ||12||

ಕತ್ತೊಳಗಣ ತಾಳಿ
ಜೀವನ ರಥದ ಗಾಲಿ ||14||

ಮುತ್ತೈದೆ ಬಾಳು
ಜೊತೆ ಪತಿಯ ಸಾಲು ||16||

ಆಕೆ ಲಕ್ಷಣವಂತೆ, ಜೊತೆಗೆ
ಸಂಸ್ಕೃತಿಯೆ ಅಲ್ಲಿ ಮೆರೆದಂತೆ ||18||

**
(ಈ ಕವಿತೆಯನ್ನು ಬರೆದಿರುವುದು 24-10-2006ರಂದು ದಂಟಕಲ್ಲಿನಲ್ಲಿ)

Wednesday, April 2, 2014

ಕಾದಂಬರಿಯ ನಡುವೆ (ಕಥೆ)


                ಹರೆಯದ ಹುಮ್ಮಸ್ಸಿನಲ್ಲಿ ಆತ ಇದ್ದಕ್ಕಿದ್ದಂತೆ ಹುಕಿಗೆ ಬಿದ್ದು ಬರೆಯಲು ಆರಂಭಿಸಿದ. ಬರೆಯುವ ತುಡಿತ ಆತನನ್ನು ಅತಿಯಾಗಿ ಕಾಡಿದ ಪರಿಣಾಮ ಆತ ಬರವಣಿಗೆಯನ್ನು ಶುರುಮಾಡಿದ್ದ.
                  ಬರೆಯಲು ಪೆನ್ನು ಹಾಳೆಗಳನ್ನು ಎತ್ತಿಟ್ಟುಕೊಂಡವನಿಗೆ ಏನು ಬರೆಯಬೇಕೆಂಬುದು ಆರಂಭದಲ್ಲಿಯೇ ಸಮಸ್ಯೆಯಾಗಿ ಕಾಡಿತು. ಕವಿತೆ ಯಾಕೋ ಹಿಡಿಸಲಿಲ್ಲ. ಪ್ರಬಂಧಗಳನ್ನು ಬರೆಯಲು ಮನಸ್ಸಾಗಲಿಲ್ಲ. ಕತೆ ಬರೆಯೋಣ ಎಂದರೆ ತನ್ನಲ್ಲಿ ಸಿಕ್ಕಾಪಟ್ಟೆ ಸರಕಿದೆ ಕಥೆಯಲ್ಲಿ ಪೂರ್ತಿ ಹೇಳಹೊರಟರೆ ಅಸ್ಪಷ್ಟವಾಗುತ್ತದೆ ಎಂದುಕೊಂಡ. ಕಾದಂಬರಿಯೇ ತನ್ನ ಪಾಲಿಗೆ ಸರಿ, ಕಾದಂಬರಿಯನ್ನೇ ಬರೆದುಬಿಡೋಣ ಎಂದುಕೊಂಡು `ಕಾದಂಬರಿಯ ನಡುವೆ' ಎಂದು ಹೆಸರನ್ನಿಟ್ಟುಬಿಟ್ಟ.
                  ಕಾದಂಬರಿಗೊಬ್ಬ ನಾಯಕನನ್ನು ಚಿತ್ರಿಸಿದ. ಆತನ ವ್ಯಕ್ತಿಯ ಜನನ, ತುಂಟತನದ ಬಾಲ್ಯ, ಓದು, ಆಟ, ತರಲೆ ಇತ್ಯಾದಿಗಳನ್ನು ಆರಂಭದಲ್ಲಿ ಒಳಗೊಂಡ ಕಾದಂಬರಿ ಸರಾಗವಾಗಿ ಮುಂದಕ್ಕೋಡಿತು ಕಾದಂಬರಿಕಾರನ ಮನಸ್ಸಿನಂತೆ. ಕಾದಂಬರಿಕಾರ ಹರೆಯದಲ್ಲಿದ್ದ ಕಾರಣ ಹರೆಯದ ವರೆಗೂ ಕಾದಂಬರಿಗೆ ತೊಡಕುಂಟಾಗಲಿಲ್ಲ. ಹದಿವಯಸ್ಸಿನ ತುಮುಲಗಳು, ಕಾಡುವ ಹುಡುಗಿಯರ ಆಕರ್ಷಣೆ, ಕುಡಿನೋಟದಲ್ಲಿ ಹುಡುಗಿಯರನ್ನು ಸೆಳೆದಿದ್ದು, ಅವರಿಂದ ಮಾರುತ್ತರ ಬಂದಿದ್ದು, ನಡು ನಡುವೆ ಓಡು ಮುಂದಕ್ಕೆ ಸಾಗಿದ್ದು ಇತ್ಯಾದಿಗಳೆಲ್ಲವನ್ನೂ ತನ್ನ ಕಾದಂಬರಿಯಲ್ಲಿ ಬರೆದ.
                 ಕಾಲೇಜು ಜೀವನ, ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಬಂಧಿಯಾಗಿದ್ದು, ಮನಸ್ಸಿನೊಡನೆ ಆಟವಾಡಿದ್ದೆಲ್ಲವೂ ಕಾದಂಬರಿಯಲ್ಲಿನ ಸಾಲುಗಳಾದವು, ಜೀವಂತಿಕೆಯ ಸಂಕೇತದಂತಾದವು. ಕಾದಂಬರಿಯ ಆರಂಭದಲ್ಲಿ  ಹುಮ್ಮಸ್ಸಿತ್ತು. ಸರಾಗವಾಗಿ ಓಡಿತು. ಹಲವಾರು ಪುಟಗಳು ಜೀವತಳೆದವು. ಸರಸರನೆ ಪಾತ್ರಗಳು ಸರಿದುಹೋದವು. ಇದ್ದಕ್ಕಿದ್ದಂತೆ ಕಾದಂಬರಿಕಾರನಿಗೆ ಏನನ್ನಿಸಿತೋ ಏನೋ ಕಾದಂಬರಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟ. ಏನು ಮಾಡಿದರೂ ಕಾದಂಬರಿ ಬರೆಯಲು ಮನಸ್ಸಾಗುತ್ತಿಲ್ಲ ಎನ್ನುವ ಭಾವ ಕಾಡಿತ್ತು. ಪರಿಣಾಮ ಕಾದಂಬರಿಗೆ ಅರ್ಧವಿರಾಮ ಬಿದ್ದಿತ್ತು.
                ಈ ನಡುವೆ ಕಾದಂಬರಿಕಾರನ ಹರೆಯ ನಿಧಾನಕ್ಕೆ ಸರಿದುಹೋಯಿತು. ಬದುಕಿನ ಒತ್ತಡಗಳು ಆತನ ತಲೆಯನ್ನೇರಿದವು. ಜೀವನದ ಕಡಲಿನಲ್ಲಿ ಈಜುವ ಸಾಹಸದಲ್ಲಿ ಆತ ಸಿಲುಕಬೇಕಾಯಿತು. ಹಾಗೂ ಹೀಗೂ ಬದುಕಿನಲ್ಲೊಂದು ದಡವನ್ನೂ ಮುಟ್ಟಿದ. ಬದುಕಿನ ತೊಳಲಾಟಗಳ ನಡುವೆ ಕಾದಂಬರಿಯ ಬರವಣಿಗೆ ಅರ್ಧಕ್ಕೆ ನಿಂತುಹೋಯಿತು. ಮತ್ತೊಮ್ಮೆ ನೆನಪಾದಾಗ ಕಾದಂಬರಿಯ ಸಾಲುಗಳಲ್ಲಿ ಬದುಕು, ನಿರ್ವಹಣೆ, ಉದ್ಯೋಗ ಪಡೆಯುವ ತೊಳಲಾಟ, ಮನೆ ಮಂದಿಯನ್ನು ಸಾಕುವ ಕೆಲಸ, ಬದುಕಿನ ಹೋರಾಟಗಳನ್ನೆಲ್ಲ ಬರೆದ. ಅಷ್ಟರಲ್ಲಿ ಆತನ ಮದುವೆಯಾಯಿತು.
                 ಮದುವೆಯ ನಂತರದ ಸವಿ ಜೀವನದಲ್ಲಿ ಕಾದಂಬರಿಕಾರನಿಗೆ ಕಾದಂಬರಿ ಬರೆಯುವುದು ನೆನಪಾಗಲೇ ಇಲ್ಲ. ನಾಲ್ಕೈದು ವಸಂತಗಳು ಹಾಗೆ ಸುಮ್ಮನೆ ಜರುಗಿದವು. ಮದುವೆಯಾದ ತರುವಾಯ ಮಕ್ಕಳೂ ಆದವು. ಕಾದಂಬರಿಕಾರ ಸಂಸಾರದಲ್ಲಿ ಬಿದ್ದಿದ್ದ. ಮಕ್ಕಳು ನಿಧಾನವಾಗಿ ದೊಡ್ಡವರಾಗತೊಡಗಿದಾಗ ಮತ್ತೊಮ್ಮೆ ಆತನಿಗೆ ಕಾದಂಬರಿ ಬರೆಯುವುದು ನೆನಪಾಯಿತು. ಮತ್ತೆ ಬರೆಯಲಾರಂಭಿಸಿದ. ಬರವಣಿಗೆ ಕಾದಂಬರಿಕಾರನ ಬದುಕಿನಂತೆಯೇ ಮದುವೆ, ಮಕ್ಕಳು ಹಾಗೂ ಸಂಸಾರದತ್ತ ಹೊರಳಿತು. ಬದುಕಿನಲ್ಲಿ ಸಂಸಾರದ ಚಿತ್ರಣವನ್ನು ಸಾಲುಗಳಾಗಿ ಮೂಡಿಸಿದ ಕಾದಂಬರಿಕಾರ. ಕಾದಂಬರಿ ದೀರ್ಘವಾಗುತ್ತಿತ್ತು. ಬದುಕಿನ ಮಜಲುಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತ ಬೆಳೆಯುತ್ತಿತ್ತು. ಕಾದಂಬರಿಕಾರನ ಮಕ್ಕಳು ದೊಡ್ಡವರಾದರು. ಆತನ ತಲೆಯಲ್ಲಿ ನಿಧಾನವಾಗಿ ಹಣ್ಣು ಹಣ್ಣು ಕೂದಲು ಕಾಣಿಸಿಕೊಳ್ಳತೊಡಗಿತು. ಅಕ್ಷರದ ರೂಪ ಪಡೆಯಬೇಕಿದ್ದ ನೀಲಿಯನ್ನು ತನ್ನ ಬೆಳ್ಳಗಾದ ಕೂದಲಿಗೆ ಹಚ್ಚಿಕೊಳ್ಳುತ್ತಿದ್ದಂತೆಯೇ ಮತ್ತೊಮ್ಮೆ ಕಾದಂಬರಿ ನೆನಪಾಯಿತು.
                 ಹೀಗಿರುತ್ತಲೇ ಮಕ್ಕಳು ಓದು ಮುಗಿಸಿದರು. ದೂರದೂರಿನಲ್ಲೆಲ್ಲೋ ಉದ್ಯೋಗವೂ ಸಿಕ್ಕಿತು. ಹಕ್ಕಿಗಳಂತೆ ಮಕ್ಕಳು ಹಾರಿ ಹೋದರು. ಮನೆಯಲ್ಲಿ ಕಾದಂಬರಿಕಾರ ಹಾಗೂ ಆತನ ಮಡದಿ ಇಬ್ಬರೇ ಉಳಿದರು. ಜೊತೆ ಜೊತೆಯಲ್ಲಿಯೇ ಕಾದಂಬರಿಕಾರನ ಮಕ್ಕಳಿಗೆ ಮದುವೆಯೂ ಆಯಿತು. ನೋಡ ನೋಡುತ್ತಿದ್ದಂತೆಯೇ ಕಾದಂಬರಿಕಾರನನ್ನು ಮುಪ್ಪು ಆವರಿಸಿತು. ಈ ಸಂದರ್ಭದಲ್ಲಿ ಕಾದಂಬರಿ ಅರ್ಧಕ್ಕೆ ನಿಂತಿರುವುದು ಅರಿವಾಗಿ ಮತ್ತೊಮ್ಮೆ ಅಕ್ಷರಗಳನ್ನು ಪೋಣಿಸಲಾರಂಭಿಸಿದ. ಶ್ರಮದ ಬದುಕು ಕಾದಂಬರಿಕಾರನಿಗೆ ಅಸಾಧ್ಯವಾಗಿತ್ತು. ಬರವಣಿಗೆಯೇ ಆತನ ಪಾಲಿಗೆ ಗೆಳೆಯ-ಗೆಳತಿ ಹಾಗೂ ಬದುಕಾಗಿತ್ತು. ಹೀಗಿರುವಾಗಲೇ ಕಾದಂಬರಿಕಾರನ ಹೆಂಡತಿಯೂ ಇದ್ದಕ್ಕಿದ್ದಂತೆ ತೀರಿಕೊಂಡಳು. ಕಾದಂಬರಿಕಾರ ಈ ಎಲ್ಲ ಅಂಶಗಳನ್ನೂ ತನ್ನ ಕಾದಂಬರಿಯಲ್ಲಿ ಸೇರಿಸಿದ.
                  ಹೀಗಿರುವಾಗ ಒಂದು ದಿನ ಕಾದಂಬರಿಕಾರನಿಗೆ ತನ್ನ ಕಾದಂಬರಿಯನ್ನು ಮುಗಿಸಬೇಕು ಎನ್ನುವ ಆಲೋಚನೆಯೂ ಬಂದಿತು. ಕಥಾನಾಯಕನ ಪಾತ್ರಕ್ಕೆ ಅಂತ್ಯವನ್ನೂ ಹಾಡಬೇಕು, ಕಾದಂಬರಿ ದೀರ್ಘವಾಯಿತು ಎಂದುಕೊಂಡ. ಹಾಗೆಯೇ ಒಂದು ದಿನ ಕಾದಂಬರಿಯನ್ನೂ ಮುಕ್ತಾಯಗೊಳಿಸಿದ. ಮುಕ್ತಾಯಗೊಳಿಸಿದ ಕೆಲವು ಘಳಿಗೆಯಲ್ಲಿ ಕಾದಂಬರಿಕಾರನೂ ತನ್ನ ಬದುಕನ್ನು ನಿಲ್ಲಿಸಿದ.
                 ಕಾದಂಬರಿಕಾರ ಸತ್ತ ನಂತರ ಆತನ ಮಕ್ಕಳು ಆತ ಬರೆದಿದ್ದ ಕಾದಂಬರಿಯನ್ನು ಪ್ರಕಟಿಸಿದರು. ಜೀವನದಲ್ಲಿ ಜೀವನದ ಬಗ್ಗೆ ಬರೆದಿದ್ದ ಏಕೈಕ ಕಾದಂಬರಿ ಜಗದ್ವಿಖ್ಯಾತವಾಗಿತ್ತು. ಹಿಂದೆಂದೂ ಮಾಡದಂತಹ ದಾಖಲೆಗಳನ್ನು ಆ ಕಾದಂಬರಿ ಮಾಡಿತು. ಕಥಾನಾಯಕನನ್ನು ನೆಪವಾಗಿಸಿಕೊಂಡು ತನ್ನ ಬದುಕನ್ನೇ ಚಿತ್ರಿಸಿಕೊಂಡಿದ್ದ ಕಾದಂಬರಿಕಾರ. ತನ್ಮೂಲಕ ಮರೆಯಲಾಗದ ಕಾದಂಬರಿಯನ್ನು ಕೊಟ್ಟಿದ್ದ ಆತ. ಕಾದಂಬರಿಗೆ ಸಾಹಿತ್ಯ ಲೋಕದ ಹಲವಾರು ಪ್ರಶಸ್ತಿಗಳು ಬಂದವು. ವಿಮರ್ಷಕರಂತೂ ಈ ಶತಮಾನದ ಅಪರೂಪದ ಕೃತಿ, ಜೀವನದಲ್ಲಿ ಒಮ್ಮೆ ಓದಲೇಬೇಕಾದಂತಹದ್ದು ಎಂದೆಲ್ಲ ಹೇಳಿಬಿಟ್ಟರು. ಕಾದಂಬರಿಯ ನಡುವೆ ಪಾತ್ರವಾಗಿ, ಮರೆಯಲಾಗದ ಪಾತ್ರವನ್ನು ಚಿತ್ರಿಸಿದ ಕಾದಂಬರಿಕಾರ ಅಮರನಾಗಿದ್ದ.  ಕಾದಂಬರಿ ಜಗದ್ವಿಖ್ಯಾತವಾಗಿತ್ತು.

**

Tuesday, April 1, 2014

ಯುಗಾದಿ

ಯುಗಾದಿ ಬಂತು, ಯುಗಾದಿ ಬಂತು
ಸಂತಸವ ತಂತು |

ವಸಂತ ಬಂದ ನಾಡಿಗೆ ಹರುಷದ
ಭಾಗ್ಯವನೇ ತಂದ |

ಕೋಗಿಲೆಯಿಂದ ಸುಂದರ ಹಾಡು
ಅದೃಶ್ಯವಾಗಿ ಬಂತು |

ಗಿಡಮರವೆಲ್ಲ ನಾಡಿನ ಸೊಬಗಿಗೆ
ಚಿಗುರನ್ನೇ ತಂತು |

ರೈತರ ಬೆವರು ಇಬ್ಬನಿಯಾಗಿ
ಧರೆಗಿಳಿದು ಬಂತು |

ನಾಡಿನ ಜನತೆಗೆ ಅನ್ನವ ನೀಡಲು
ಮುನ್ನುಡಿ ಇದು ಎಂತು |

ಜನತೆಗೆಲ್ಲ ಬೇವು ಬೆಲ್ಲವು
ಸವಿಯನ್ನು ತಂತು |

ಸುಖದ ಜೊತೆಗೆ ಕಷ್ಟವು ಇರುವ
ಅರಿವನ್ನು ತಂತು |

**

(ಈ ಕವಿತೆಯನ್ನು ಬರೆದಿದ್ದು 17-03-2004ರಂದು ದಂಟಕಲ್ಲಿನಲ್ಲಿ)
(ಕವಿತೆಯೊಂದಿಗೆ ಯುಗಾದಿಯ ಹಾರ್ದಿಕ ಶುಭಾಷಯಗಳು)

Saturday, March 29, 2014

ಮರುಕಳಿಸಿತು ಇತಿಹಾಸ (ಕಥಾ ಸರಣಿ ಭಾಗ-4)

       ವಸಂತಗಳುರುಳಿದ್ದವು. ಜಾತ್ರೆಯಲ್ಲಿ ಸಿಕ್ಕು ಕಣ್ಣ ಹನಿಯೊಂದಿಗೆ ವಾಣಿಯನ್ನು ಬೀಳ್ಕೊಟ್ಟಿದ್ದ ವಿನಾಯಕನಿಗೆ ಮತ್ತೆ ನೆನಪಾಗಿರಲಿಲ್ಲ. ತಾನಿಲ್ಲದೆಯೂ ಆಕೆ ಚನ್ನಾಗಿದ್ದಾಳಲ್ಲ ಎಂಬ ಭಾವನೆ ವಿನಾಯಕನಲ್ಲಿ ವಾಣಿಯನ್ನು ಮರೆಸುವಂತೆ ಮಾಡಿತ್ತು. ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯೊಂದು ವಿನಾಯಕನನ್ನು ಕೆಲಸಕ್ಕಾಗಿ ಕೈಬೀಸಿ ಕರೆದಿತ್ತು. ವಿನಾಯಕನೂ ಕೆಲವನ್ನು ರಪಕ್ಕನೆ ಬಾಚಿಕೊಂಡಿದ್ದ. ಸಂಬಳ ಐವತ್ತರು ಸಹಸ್ರಗಳ ಮೇಲೆ ಎಣಿಸಲೂ ಆರಂಭಿಸಿದ್ದ. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲಿ ಆತನ ಮದುವೆಯ ಕುರಿತು ಮಾತನಾಡತೊಡಗಿದ್ದರು. ಮನೆಯವರು ಹುಡುಗಿಯನ್ನು ಹುಡುಕಲಿ ಎಂದು ವಿನಾಯಕನೂ ಸುಮ್ಮನುಳಿದಿದ್ದ. ಒಳ್ಳೆಯವಳಾಗಿ ತನ್ನ ಗುಣಗಳನ್ನು ಇಷ್ಟಪಟ್ಟು ಚನ್ನಾಗಿದ್ದರೆ ಸಾಕು. ಅಂತಹ ಹುಡುಗಿಯನ್ನು ಒಪ್ಪಿಕೊಳ್ಳೋಣ ಎಂಬ ನಿರ್ಧಾರಕ್ಕೆ ವಿನಾಯಕ ಬಂದಿದ್ದ.
                   ವಿನಾಯಕ ಸಾಫ್ಟ್ ವೇರ್ ಕಂಪನಿಯ ಕೆಲಸಗಾರನಾಗಿದ್ದ ಕಾರಣ ಸಾಕಷ್ಟು ಜಾತಕಗಳೂ ಬಂದಿದ್ದವು. ಅವುಗಳಲ್ಲಿ ಹಲವು ವಿನಾಯಕನ ಜಾತಕದೊಂದಿಗೆ ಹೊಂದಿಕೆಯಾಗುತ್ತಿದ್ದವು. ಹೊಂದಿಕೆಯಾಗುವ ನಾಲ್ಕೈದು ಜಾತಕಗಳೊಂದಿಗೆ ಬಂದಿದ್ದ ಹುಡುಗಿಯರ ಪೋಟೋಗಳನ್ನು ವಿನಾಯಕನಿಗೆ ಕಳಿಸಲಾಯಿತು. ವಿನಾಯಕ ಅವೆಲ್ಲವನ್ನೂ ನೋಡಿದ. ಅವುಗಳಲ್ಲಿ ಮೂರು ಹುಡುಗಿಯರು ವಿನಾಯಕನಿಗೆ ಇಷ್ಟವಾಗಲಿಲ್ಲ. ನಾಲ್ಕನೆಯ ಹುಡುಗಿ ಚನ್ನಾಗಿದ್ದಳು. ಐದನೆಯವಳು ನಾಲ್ಕನೆಯವಳಷ್ಟು ಚನ್ನಾಗಿರದಿದ್ದರೂ ಲಕ್ಷಣವಾಗಿದ್ದಳು. ಕೊನೆಗೆ ಸಾಕಷ್ಟು ಅಳೆದು-ತೂಗಿ ಐದನೆಯವಳಿಗೆ ಗ್ರೀನ್ ಸಿಗ್ನಲ್ ಕೊಟ್ಟ. ಶುಭದಿನವೊಂದರಂದು ವಿನಾಯಕನ ಮದುವೆ ಆ ಹುಡುಗಿಯ ಜೊತೆಗೆ ತನ್ನ ಹಳ್ಳಿಮನೆಯಲ್ಲಿ ನಡೆಯಿತು. ನಂತರದ ದಿನಗಳು ವಿನಾಯಕನಿಗೆ ಬಹಳ ಸಂತಸವನ್ನು ನೀಡುವಂತವಾಗಿದ್ದವು.

***
                  ಅರ್ಚನಾಳ ಮನೆಯಲ್ಲೂ ಗಂಡು ನೋಡುತ್ತಿದ್ದರು. ಹುಡುಗ ಸಾಫ್ಟ್ ವೇರ್ ಕೆಲಸದಲ್ಲಿಯೇ ಇರಬೇಕು ಎನ್ನುವುದು ಮನೆಯ ಹಿರಿಯರ ಆಸೆಯಾಗಿದ್ದ ಕಾರಣ ಹೆಚ್ಚಿನ ಆಯ್ಕೆಗಳಿರಲಿಲ್ಲ. ಒಂದೆರಡು ಸಂಬಂಧಗಳು ಬಂದಿದ್ದರೂ ಅರ್ಚನಾ ಅವುಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಗೊಂದು ದಿನ ವಿನಾಯಕನ ಜಾತಕ ಬಂದಾಗ ಪೋಟೋ ನೋಡಿದವಳೇ ಇಷ್ಟಪಟ್ಟು ಬಿಟ್ಟಿದ್ದಳು. ಹೀಗಾಗಿ ವಿನಾಯಕ-ಅರ್ಚನಾಳ ಮದುವೆ ಅದ್ಧೂರಿಯಾಗಿ ಜರುಗಿತ್ತು.
                  ಹಳ್ಳಿ ಹುಡುಗಿ ಅರ್ಚನಾ ಪದವಿಯ ವರೆಗೆ ಓದಿದ್ದಾಳೆ. ನಗರಜೀವನ ಹೊಸದಾಗಿದ್ದರೂ ಆಕೆಗದು ಆಕರ್ಷಣೀಯವಾಗಿರುವ ಕಾರಣ ಬೇಗನೆ ಹೊಂದಿಕೊಂಡಳು. ಮದುವೆಯಾದ ನಾಲ್ಕೇ ದಿನದಲ್ಲಿ ವಿನಾಯಕ ಹಾಗೂ ಅರ್ಚನಾ ದಂಪತಿಗಳು ಬೆಂಗಳೂರು ವಾಸಿಯಾಗಿಬಿಟ್ಟರು. ಬೆಂಗಳೂರು ಸೇರಿದ ಕೆಲವೇ ವಾರಗಳಲ್ಲಿ ಅರ್ಚನಾಳಿಗೂ ಒಳ್ಳೆಯ ಕಂಪನಿಯೊಂದರಲ್ಲಿ ಜಾಬ್ ಸಿಕ್ಕಿತು. ನಂತರ ಇವರ ಬದುಕು ಯಾಂತ್ರೀಕೃತವಾಗತೊಡಗಿತು. ವಾರದಲ್ಲಿ ಐದು ದಿನ ಬಿಡುವಿಲ್ಲದ ಕೆಲಸ. ಉಳಿದೆರಡು ದಿನ ಪಂಜರದಿಂದ ಹಾರಿಬಿಟ್ಟಂತೆ ಬದುಕು. ಪುರಸೊತ್ತು ಸಿಗುವ ಎರಡು ದಿನಗಳಲ್ಲಿ ಏನು ಮಾಡೋಣ, ಏನು ಮಾಡಬಾರದು ಎನ್ನುವ ಗೊಂದಲ. ಮೊದ ಮೊದಲು ಈ ಕೆಲಸ-ಬಿಡುವಿಲ್ಲದ ಓಟ ಅರ್ಚನಾ ಹಾಗೂ ವಿನಾಯಕರಿಗೆ ಖುಷಿಕೊಟ್ಟವಾದರೂ ನಂತರದ ದಿನಗಳಲ್ಲಿ ಇಬ್ಬರಲ್ಲೂ ಏನೋ ಅಸಹನೆ ಕಾಡಲು ಆರಂಭವಾಯಿತು. ಯಾಂತ್ರೀಕೃತ ಬದುಕಿನಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ದಟ್ಟವಾಗತೊಡಗಿತು. ಇದನ್ನು ಮರೆಸಲೋ ಎಂಬಂತೆ ವೀಕೆಂಡಿನಲ್ಲಿ ಸಿನೆಮಾ, ಟೂರು, ಪೋಟೋಗ್ರಫಿ, ಟ್ರೆಕ್ಕಿಂಗ್ ಹೀಗೆ ಹಲವು ವಿಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರಂಭಿಸಿದರು.
                  ಆದರೆ ದಿನಗಳೆದಂತೆ ಟೂರು ಬೋರಾಗತೊಡಗಿತು, ಸಿನೆಮಾ ಗಳು ಬಾಲಿಶವೆನ್ನಿಸತೊಡಗಿದವು. ಕ್ಲಿಕ್ಕಿಸುತ್ತಿದ್ದ ಪೋಟೋಗಳೆಲ್ಲ ಬಣ್ಣಕಳೆದುಕೊಂಡಂತೆ ಬಾಸವಾಗಲಾರಂಭಿಸಿದವು. ಟ್ರೆಕ್ಕಿಂಗೂ ಮನಸ್ಸನ್ನು ಆವರಿಸಲಿಲ್ಲ. ಕೆಲಸದ ಕಾರಣವೋ ಎಂಬಂತೆ ಸಂಸಾರವೂ ಯಾಂತ್ರೀಕೃತವಾಗಲಾರಂಭಿಸಿದ್ದವು.  ಸಂಸಾರದಲ್ಲಿ ಎಲ್ಲ ಇದ್ದರೂ ಏನೂ ಇಲ್ಲ ಎನ್ನುವಂತಾಗಲಾರಂಭಿಸಿತ್ತು. ಗಂಡ-ಹೆಂಡತಿಯರಾಗಿ ಬದುಕು ನಡೆಡುತ್ತಿದ್ದರಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕೆಲಸಕ್ಕೆ ಹೊರಡಬೇಕು. ಜಗತ್ತು ನಗುತ್ತ ಓಡಾಡುವ ಹೊತ್ತಿನಲ್ಲಿ ಬಂದು ಮನೆ ಸೇರಿ ನಿದ್ದೆ ಮಾಡಬೇಕು, ಎಲ್ಲ ಬೆಚ್ಚಗೆ ಗೂಡಿನಲ್ಲಿ ಇರುವ ಸಮಯದಲ್ಲಿ ಇವರು ಮಾತ್ರ ಯಾವುದೋ ಕಾಂಕ್ರೀಟು ಕೋಣೆಯಲ್ಲಿ ಕಂಪ್ಯೂಟರಿನ ಮುಂದೆ ಕೆಲಸವನ್ನು ಮಾಡುತ್ತ, ಹಣೆಬರಹವನ್ನು ಹಳಿಯುತ್ತ ಕೂರಬೇಕು. ತಿಂಗಳ ಆರಂಭದಲ್ಲಿ ಶ್ರೀಮಂತರಂತೆ ಅಡ್ಡಾಡುತ್ತ, ತಿಂಗಳಾಂತ್ಯದಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತ, ಪ್ರೆಸ್ಟಿಜ್ ಪ್ರಶ್ನೆಯಾಗಿ ದುಬಾರಿ ಜೀವನದಲ್ಲೇ ಬದುಕುತ್ತ ಹೈರಾಣಾದರು.
                 ಇಂತಹ ಸಮಯದಲ್ಲೇ ವಿನಾಯಕ ಅನೇಕ ಸಾರಿ ಈ ಹಾಳಾದ ಕೆಲಸವನ್ನು ಬಿಟ್ಟು ತಮ್ಮೂರಿಗೆ ವಾಪಾಸಾಗಿಬಿಡಲಾ ಎಂದುಕೊಂಡಿದ್ದಿದೆ. ಆದರೆ ಒಂದು ಚಕ್ರಕ್ಕೆ ಸಿಕ್ಕಿಬಿದ್ದಾಗ ಏನೆಂದರೂ ಬದಲಾವಣೆ ಕಷ್ಟ. ವರ್ಷಗಳೆರಡು ಉರುಳಿದವು. ಕೊನೆಗೊಮ್ಮೆ ಇಬ್ಬರೂ ಬೆಂಗಳೂರಿನ ಬದುಕಿಗೆ ಶರಣು ಹೊಡೆದು ತಮ್ಮೂರಿಗೆ ವಾಪಾಸಾಗಲು ಒಂದು ಬಲವಾದ ನೆಪ ಸಿಕ್ಕೇಬಿಟ್ಟಿತು. ಅರ್ಚನಾ ತಾಯಿಯಾಗಿದ್ದಳು.  ಮುದ್ದಾದ ಕೂಸಿಗೆ ವಿನಾಯಕ ಅಪ್ಪನಾಗಿದ್ದ. ಕೂಸಿನ ನಗು, ಕೂಸಿನ ಸೆಳೆತ, ಕೂಸಿನ ಪ್ರೀತಿ ವಿನಾಯಕ-ಅರ್ಚನಾರನ್ನು ಹಳ್ಳಿಯ ಕಡೆಗೆ ಎಳೆದುಕೊಂಡು ಬಂದಿತ್ತು. ಅಷ್ಟರಲ್ಲಿ ಸಂಪಾದನೆಯೂ ಸಾಕಷ್ಟಾದ್ದರಿಂದ ಇನ್ನು ಬೆಂಗಳೂರು ಸಾಕು ಎನ್ನುವ ನಿರ್ಧಾರವನ್ನು ಮಾಡಿಯೇ ವಿನಾಯಕ-ಅರ್ಚನಾ ದಂಪತಿಗಳು ರಾತ್ರಿಯೇ ಇಲ್ಲದ ಊರನ್ನು ಬಿಟ್ಟು ಬಂದಿದ್ದರು. ಅಲ್ಲೊಂದು ಕಡೆಗೆ ಜಮೀನನ್ನು ಕೊಂಡು ಹಳ್ಳಿಗನಾಗಿ ಬದುಕಲು ತೀರ್ಮಾನಿಸಿದ್ದರು.

***
               ವಿನಾಯಕ ಕೂಸು ಹುಟ್ಟಿದ ಘಳಿಗೆಯಲ್ಲಿ ಹೆಸರಿಗೆ ಆಲೋಚನೆ ಮಾಡಿದ್ದ. ಅರ್ಚನಾಳೂ ಯಾವ ಹೆಸರಿಡಬೇಕೆಂದು ಆಲೋಚಿಸಿದ್ದಳು. ಅದ್ಯಾವುದೋ ಘಳಿಗೆಯಲ್ಲಿ ವಿನಾಯಕನಿಗೆ ಹೊಣೆದ ಹೆಸರು `ವಾಣಿ..'. ಈ ಹೆಸರು ಹೊಳೆದಿದ್ಯಾಕೆ ಎನ್ನುವ ಕಾರಣ ವಿನಾಯಕನಿಗೆ ಅರಿವಾಗಲಿಲ್ಲ. ವಾಣಿಯ ಹೆಸರೇ ಮತ್ತೆ ನೆನಪಾಗಿದ್ದಕ್ಕೆ ವಿನಾಯಕ ತನ್ನೊಳಗೆ ತಾನು ವಿಸ್ಮಿತನೂ ಆಗಿದ್ದ. ಬೆಂಗಳೂರಿನಲ್ಲಿದ್ದಷ್ಟು ದಿನಗಳೂ ವಾಣಿ ನೆನಪಾಗಿರಲಿಲ್ಲ. ಮರಳಿ ಊರಿಗೆ ಬಂದಾಗ ನೆನಪಾದಳೇ ಎಂದುಕೊಂಡ. ಇಷ್ಟೆಲ್ಲ ದಿನಗಳು ಕಳೆದಿದ್ದರೂ ವಾಣಿಯ ಬಗೆಗಿನ ಭಾವನೆ ಹಾಗೂ ಆಕೆಯ ನೆನಪು ತನ್ನಲ್ಲಿನ್ನೂ ಶಾಶ್ವತವಾಗಿದೆಯಲ್ಲ ಎಂದುಕೊಂಡ. ಮೊದಲ ಪ್ರೇಮವೇ ಹೀಗಿರಬೇಕು. ಎಷ್ಟು ಕಷ್ಟಪಟ್ಟು ಮರೆತರೂ ಮರೆಯಲೊಲ್ಲದು. ಮತ್ತೆ ಮತ್ತೆ ನೆನಪಾಗಿ ಬದುಕಿನ ತಿರುವಿನಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಅಚ್ಚರಿಯ ಕಚಗುಳಿಯನ್ನಿತ್ತು, ಬೆಚ್ಚಿ ಬೀಳಿಸುತ್ತದೆ. ಹುಚ್ಚು ಹಿಡಿಸುತ್ತದೆ ಎಂದುಕೊಂಡ. ವಾಣಿಯ ಹೆಸರೇ ಮಗಳಿಗಿರಲಿ. ಮಗಳಲ್ಲಿ ವಾಣಿಯನ್ನು ಕಾಣುತ್ತೇನೆ ಎಂದುಕೊಂಡ. ತನ್ನೂರಿನ ತೋಟದ ನಡುವಿನಿಂದ ಹಾದು ಬಂದ ತಂಗಾಳಿಯೊಂದು ಆತನ ಮುಖದ ಮೇಲೆ ನರ್ತನ ಮಾಡಿದಂತೆ ಸುಳಿದಾಡಿ ಸುಮ್ಮನೆ ಸರಿದುಹೋದಂತಾಯಿತು. ವಿನಾಯಕನ ಮನಸ್ಸು ತಂಪಾಗಿತ್ತು.
                ವಿನಾಯಕ ಹಾಗೂ ವಾಣಿ ಮತ್ತೊಮ್ಮೆ ಹುಟ್ಟಿ ಬಂದಿದ್ದರು. ಇತಿಹಾಸ ಮತ್ತೊಮ್ಮೆ ಮರುಕಳಿಸಿ ನಕ್ಕಿತ್ತು. ಮತ್ತೆ ಹುಟ್ಟಿದ ವಾಣಿ-ವಿನಾಯಕರ ನಡುವೆಯಾದರೂ ಪ್ರೇಮ ಹುಟ್ಟಲಿ.. ಅದು ಸುಖಾಂತ್ಯವಾಗಲಿ ಎಂದು ಹಾರೈಸಿತ್ತು.

**
(ನಮಸ್ಕಾರ
ನಾನು ಈ ಕಥೆಯ ಮೊದಲ ಭಾಗವನ್ನು ಬರೆಯುವಾಗ ಖಂಡಿತ ಇಷ್ಟು ಮುಂದುವರಿಯುತ್ತದೆ ಎಂದುಕೊಂಡಿರಲಿಲ್ಲ. ಮೊದಲ ಭಾಗಕ್ಕೆ ಒಳ್ಳೆಯ ರೆಸ್ಪಾನ್ಸ್ ನೀಡಿದ ಕಾರಣ ಎರಡನೇ ಭಾಗಕ್ಕೆ ಮುಂದುವರಿಯಿತು. ನಂತರ ಇದೇ ಮೂರಾಗಿ ಇದೀಗ ನಾಲ್ಕಕ್ಕೆ ಬಂದು ನಿಂತಿದೆ. ಖಂಡಿತ ಇದೇ ಕೊನೆಯ ಭಾಗ. ಇನ್ನು ಮುಂದುವರಿಸಲಾರೆ. ಈ ಕಥೆಯ ಮೊದಲ ಭಾಗ ಖಂಡಿತ ನಡೆದಿದ್ದು. ಆದರೆ ಉಳಿದ ಭಾಗಗಳು ಮಾತ್ರ ಕಲ್ಪನೆ. ಸ್ವಲ್ಪ ಎಳೆದಿದ್ದು ಹೆಚ್ಚಾಗಿರಬಹುದು.. ಹೇಳಿದ ವಿಷಯವೇ ಮತ್ತೆ ಮತ್ತೆ ಬಂದು ಕಿರಿಕಿರಿಯಾಗಿರಬಹುದು. ಖಂಡಿತ ಇದು ನೆನಪುಗಳೊಂದಿಗೆ ಆಟವಾಡಿದ ಕಥೆ ಎಂದುಕೊಳ್ಳಬಹುದು. ಕಾಡುವ ಮೊದಲ ಪ್ರೇಮದ ಕುರಿತಾದ ಕಥೆ. ಸಲಹೆ ನೀಡಿ ಸೂಚನೆಗಳನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳಲೇ ಬೇಕು.
ಥ್ಯಾಂಕ್ಯೂ )