ನಾನು ಹಾಗೂ ಅಂಬಿಕಾ ಪ್ರೀತಿಸಲು ಆರಂಭಿಸಿ ಹೆಚ್ಚೂ ಕಡಿಮೆ ನಾಲ್ಕೈದು ವಸಂತಗಳು ಸರಿದುಹೋಗಿದ್ದವು. ಹರಟೆ, ಜಗಳ, ಪಿಸುಮಾತು, ಮೌನ, ಕಾಡುವಿಕೆ, ಚೇಷ್ಟೆ ಮುಂತಾದ ಹಲವಾರು ಸಂಗತಿಗಳು ನಮ್ಮ ಪ್ರೇಮದ ನಡುವೆ ಇಣುಕಿದ್ದವು. ಅವಳಿಗೆ ನಾನು, ನನಗೆ ಅವಳು ಎಂಬಂತೆ ಬದುಕಿದ್ದೆವು. ನಮ್ಮ ಪ್ರೇಮದಲ್ಲಿ ಅನುಮಾನದ ಲವಲೇಶವೂ ಈ ಅವಧಿಯಲ್ಲಿ ಕಂಡುಬಂದಿರಲಿಲ್ಲ. ಆದರೆ ಮೊನ್ನೆ ಜಯಂತ ಬಂದು ನನ್ನ ಬಳಿ `ಅಲ್ಲಾ ಮಾರಾಯಾ.. ನೀನು ಪ್ರೀತಿಸ್ತಾ ಇರೋ ಹುಡುಗಿಯ ಹಿನ್ನೆಲೆಯೇನಾದರೂ ನಿನಗೆ ಗೊತ್ತಿದೆಯಾ? ನಮ್ಮ ಕಡೆಗಳಲ್ಲೆಲ್ಲ ಅವಳನ್ನು ಬ್ರಹ್ಮಚಾರಿಯ ಮಗಳು ಎಂದೇ ಕರೆಯುತ್ತಾರೆ. ನೀನು ಅವಳ ಕುಲ ಗೋತ್ರ ನೋಡದೆ ಪ್ರೀತಿ ಮಾಡಿದ್ದೀಯಲ್ಲ ಮಾರಾಯಾ.. ಆಕೆಯ ಹಿನ್ನೆಲೆ ಗೊತ್ತಿದೆಯಾ?' ಎಂದು ಹೇಳಿ ಮನಸ್ಸಿನೊಳಗೆ ಅನುಮಾನದ ಬೀಜವನ್ನು ಬಿತ್ತಿದ್ದ.
ಜಯಂತನ ಬಿತ್ತಿದ ಅನುಮಾನದ ಬೀಜಕ್ಕೆ ನಾನು ಮೊದಲು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಒಂದೆರಡು ದಿನ ಕಳೆದಂತೆ ಅದು ಹೆಮ್ಮರವಾಗಿ ಬಿಡಲು ಆರಂಭಿಸಿತ್ತು. ಆದರೆ ಅವಳ ಬಳಿ ಈ ಕುರಿತು ಕೇಳುವುದು ಹೇಗೆ ಎಂಬುದು ಗೊತ್ತಾಗಿರಲಿಲ್ಲ. ನನ್ನಲ್ಲಿ ಮೂಡಿದ್ದ ಅನುಮಾನವೂ ಹೆಮ್ಮರವಾಗುತ್ತಲಿತ್ತು. ಮನಸ್ಸೇ ಹೀಗೆ. ಒಮ್ಮೆ ಅನುಮಾನ ಮೊಳೆಯಿತೆಂದಾದರೆ ಅದು ಪರಿಹಾರವಾದಂತೂ ಸುಮ್ಮನಾಗುವುದಿಲ್ಲ. ಆದರೆ ನಾನು ಅಂಬಿಕಾಳ ಬಳಿ ವಿಷಯವನ್ನು ಪ್ರಸ್ತಾಪ ಮಾಡುವುದು ಹೇಗೆ ಎಂಬ ಗೊಂದಲಕ್ಕೆ ಬಿದ್ದಿದ್ದೆ. ನನ್ನ ಭಾವನೆ ತಿಳಿದ ಆಕೆ ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬಹುದು ಎನ್ನುವ ಆಲೋಚನೆಯೂ ಮನದಲ್ಲಿ ಮೂಡಿತು.
ನಾವು ಪ್ರೀತಿಸಲು ಆರಂಭಿಸಿ ಇಷ್ಟು ವರ್ಷಗಳು ಕಳೆದಿದ್ದರೂ ನಾನು ಆಕೆಯ ಹಿನ್ನೆಲೆಯನ್ನೂ ಆಕೆ ನನ್ನ ಹಿನ್ನೆಲೆಯನ್ನೂ ಎಂದಿಗೂ ಕೇಳುವ ಗೋಜಿಗೆ ಹೋಗಿರಲಿಲ್ಲ. ಅವಳಾಗಿಯೇ ಹೇಳಿದರೆ ನಾನು ಕೇಳುವುದು ಅಥವಾ ನಾನಾಗಿಯೇ ಹೇಳಿದರೆ ಅವಳು ಕೇಳುವುದು ಎನ್ನುವ ಭಾವನೆಯಿಂದ ಇಬ್ಬರೂ ಸುಮ್ಮನಿದ್ದೆವು. ನಾನಾಗಿಯೇ ನನ್ನ ಕುಟುಂಬದ ವಿವರಗಳನ್ನು ಅವಳ ಬಳಿ ಹೇಳಿದ್ದೆನಾದರೂ ಅವಳು ತನ್ನ ಕುಟುಂಬದ ಕುರಿತು ಎಂದಿಗೂ ಹೇಳಿರಲಿಲ್ಲ. ನನಗೂ ಅಷ್ಟೆ ಅವಳು ಮುಖ್ಯವಾಗಿದ್ದಳೇ ಹೊರತು ಅವಳ ಕುಟುಂಬವಾಗಿರಲಿಲ್ಲ. ಆದರೆ ಜಯಂತನ ಮಾತುಗಳು ನನ್ನಲ್ಲಿ ಬೇರೆಯ ಭಾವನೆಗಳನ್ನು ಹುಟ್ಟಿಸಿದ್ದವು. ಬ್ರಹ್ಮಚಾರಿಗೆ ಮಗಳಾ..? ಮಗಳಿರಲು ಸಾಧ್ಯವೇ? ಇನ್ನೇನಾದರೂ ಹೆಚ್ಚೂ ಕಡಿಮೆ ಆಗಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು. ನನಗೆ ಸುಮ್ಮನಿರಲು ಸಾಧ್ಯವೇ ಆಗಲಿಲ್ಲ. ನಾನು ಅವಳಿದ್ದಲ್ಲಿ ಹೊರಟೆ.
**
ನಮ್ಮೂರಿನ ಬಸ್ಸಿನ ರಶ್ಶಿನಲ್ಲಿ ಜೋತಾಡುತ್ತ ನಿಂತಿದ್ದ ನಾನು ನನ್ನೆದುರಿನ ಸೀಟಿನಲ್ಲಿ ಕುಳಿತಿದ್ದ ಅಂಬಿಕಾಳನ್ನು ಅದಕ್ಕೂ ಮೊದಲೇ ಹಲವು ಸಾರಿ ನೋಡಿದ್ದೆನಾದರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಕಾಲೇಜಿನ ದಿನಗಳಾದ್ದರಿಂದ ನನ್ನ ಗೆಳೆಯರು ಅವಳನ್ನು ಕಂಡು ಹಲವಾರು ಬಾರಿ ಕಾಟ ಕೊಟ್ಟಿದ್ದರು. ಆ ದಿನಗಳಲ್ಲಿ ನಾನು ಹುಡುಗಿಯರ ಬಳಿ ಮಾತನಾಡುತ್ತೇನೆ ಎನ್ನುವ ಆರೋಪಗಳನ್ನು ಹೊತ್ತಿದ್ದರಿಂದ ಇವಳನ್ನು ಮಾತನಾಡಿಸಿ ಇವಳ ಹೆಸರನ್ನು ಕೇಳಬೇಕು ಎನ್ನುವ ಸವಾಲನ್ನು ನನ್ನ ಗೆಳೆಯರು ಮುಂದಿಟ್ಟಿದ್ದರು. ಹುಂಭ ದೈರ್ಯದಿಂದ ಆಗಬಹುದು ಎಂದಿದ್ದೆ.
ಹಲವು ದಿನಗಳು ಕಳೆದಿದ್ದರೂ ಆಕೆಯನ್ನು ಮಾತನಾಡಿಸುವ ಧೈರ್ಯ ನನಗೆ ಬಂದಿರಲಿಲ್ಲ. ಆದರೆ ನಾನು ಬಸ್ಸಿನ ರಶ್ಶಿನಲ್ಲೂ ಅವಳನ್ನು ಗಮನಿಸಿದ್ದೆ. ಆಕೆಯೂ ನನ್ನನ್ನು ಗಮನಿಸಿ ಕಿರುನಗೆ ಎಸೆದಿದ್ದಳು. ನನಗೆ ಒಮ್ಮೆ ಅಚ್ಚರಿ ಹಾಗೂ ಆಘಾತ ಎರಡೂ ಒಟ್ಟಿಗೆ ಆಗಿತ್ತು. `ಹಾಯ್..' ಎಂದಿದ್ದೆ. `ನಮಸ್ತೆ..' ಎಂದವಳು `ನೀವು ಅವರಲ್ವಾ.. ನಿಮ್ಮ ಕಥೆಗಳನ್ನು ಓದ್ತಾ ಇರ್ತೀನಿ.. ಬಹಳ ಚನ್ನಾಗಿರ್ತವೆ..' ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ತನ್ನ ಪಕ್ಕದ ಸೀಟನ್ನು ನನಗಾಗಿ ಹಿಡಿದುಕೊಂಡು ನನಗೆ ನೀಡಿದ್ದಳು. ಆಕೆಯ ಪಕ್ಕ ಕುಳಿತಾಗಲೇ ನನಗೆ ಅವಳ ಕುರಿತು ಮೋಹ ಬೆಳೆದಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ತೀರಾ ಹತ್ತಿರದಿಂದ ಕುಳಿತು ಅವಳ ಮುಖವನ್ನು ನಾನು ಗಮನಿಸಿದ್ದೆ. ಯಾಕೋ ಆ ಮುಖದ ಮೇಲೆ ಆಕೆಯಿಟ್ಟುಕೊಂಡಿದ್ದ ಹಳೆಯ ಮೇಲಿನ ಚಿಕ್ಕದೊಂದು ಗೋಪಿಚಂದನದ ಬಿಂದು ನನ್ನನ್ನು ಬಿಟ್ಟು ಬಿಡದೇ ಕಾಡಿಬಿಟ್ಟತು. ನಾನೂ ಒಂದೆರೆಘಳಿಗೆ ನನ್ನನ್ನೇ ಮರೆತು ಆ ಬಿಂದುವನ್ನು ದಿಟ್ಟಿಸಿದ್ದೆ. ಆಕೆ ನನ್ನಬಳಿ ಪ್ರಶ್ನಾರ್ಥಕವಾಗಿ ನೋಡಿದ್ದಳು. ನಾನು ಕಸಿವಿಸಿಗೊಂಡು ಮುಖ ತಿರುಗಿಸಿದ್ದೆ. ನಾ ಕೇಳದಿದ್ದರೂ ಅವಳು ತನ್ನ ಪರಿಚಯವನ್ನು ಹೇಳಿಕೊಂಡಿದ್ದಳು. ನಾನು ನನ್ನ ಪ್ರವರ ಹೇಳುವ ವೇಳೆಗೆ ಆಕೆಯಿಳಿಯುವ ಸ್ಥಳ ಬಂದಿತ್ತು.
ಅಲ್ಲಿಂದಾಚೆಗೆ ನನಗೂ ಅವಳಿಗೂ ಯಾವುದೋ ನಂಟು ಬೆಳೆಯಿತು. ಕಾಲೇಜಿನಲ್ಲಿ, ಕಾಲೇಜಿನ ದಾರಿಯಲ್ಲೆಲ್ಲ ನಾವು ಸಿಕ್ಕಾಗ ದೀರ್ಘ ಮಾತಿಗೆ ನಿಲ್ಲುತ್ತಿದ್ದೆವು. ಮಾತುಗಳ ನಂಟು ಮೊದಲು ನನ್ನಲ್ಲೇ ಪ್ರೇಮದ ಛಾಯೆಯನ್ನು ಮೂಡಿಸಿದ್ದು. ಕಾಲೇಜಿನಲ್ಲಿ ನಾವು ಇತರರಿಗೆ ಅಸೂಯೆ ಮೂಡುವಷ್ಟು ಮಾತನಾಡುತ್ತಿದ್ದೆವು. ನಮ್ಮ ನಡುವಿನ ಬಾಂಧವ್ಯ ದಿನದಿಂದ ದಿನಕ್ಕೂ ಬಲವಾಗುತ್ತಲೇ ಸಾಗುತ್ತಿತ್ತಾದರೂ ನಾನು ಅವಳ ಬಳಿಯಲ್ಲಿ ನನ್ನ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಲೇ ಇಲ್ಲ. ನನ್ನ ಭಾವನೆಗಳನ್ನು ಹೇಳಿ, ಅವಳು ಅದನ್ನು ವಿರೋಧಿಸಿ ಎಲ್ಲಿ ನಮ್ಮ ಗೆಳೆತನಕ್ಕೂ ಕುತ್ತು ಬಂದು ಹೋಗುತ್ತದೆಯೋ ಎನ್ನುವ ದುಗುಡ ನನ್ನನ್ನು ಕಾಡಿದ ಕಾರಣ ನನ್ನ ಪ್ರೀತಿಯನ್ನು ಮನಸ್ಸಿನಲ್ಲೇ ಬೆಳೆಸಿಕೊಂಡಿದ್ದೆ.
ನನ್ನ ಮನದಾಳದ ಭಾವನೆಗಳು ಮಿತ್ರ ಸಂಜಯನಿಗೆ ತಿಳಿದಿತ್ತು. ಆತನಿಗಂತೂ ನಮ್ಮಿಬ್ಬರ ಮಾತುಕತೆ ಮಜವನ್ನು ಕೊಟ್ಟಿದ್ದರೂ ನಾನು ನನ್ನ ಭಾವನೆಗಳನ್ನು ಹೇಳಲಾಗದೇ ಪಡಿಪಾಟಲು ಪಡುತ್ತಿರುವುದನ್ನು ಗಮನಿಸಿ ಖುಷಿ ಪಟ್ಟಿದ್ದೂ ಇದೆ. ಹೀಗಿದ್ದಾಗಲೇ ಒಂದು ದಿನ ಆತ ನನ್ನ ಭಾವನೆಗಳನ್ನು ಅವಳ ಬಳಿ ಹೇಳಿಬಿಟ್ಟಿದ್ದ. ನನಗೆ ಒಮ್ಮೆ ಬಾಂಬ್ ಬಿದ್ದಂತಾಗಿತ್ತು ಬಾಳಿನಲ್ಲಿ.
ಮರುದಿನ ನಾನು ಅವಳಿಂದ ದೂರವುಳಿಯಬೇಕು ಎನ್ನುವ ಕಾರಣಕ್ಕಾಗಿ ಕಾಲೇಜಿಗೆ ಹೋಗಿರಲಿಲ್ಲ. ಅದರ ಮರುದಿನ ಹೋದೆ. ಹೋದವನು ಉದ್ದೇಶಪೂರ್ವಕವಾಗಿ ಅವಳಿಂದ ಕಣ್ತಪ್ಪಿಸಿಕೊಳ್ಳತೊಡಗಿದ್ದೆ. ಅವಳೂ ನನ್ನನ್ನು ಹುಡುಕಿರಬೇಕು. ಸಂಜಯನ ಬಳಿಯೂ ನನ್ನನ್ನು ಹುಡುಕುವಂತೆ ಹೇಳಿರಬೇಕು. ಸಂಜಯ ಲೈಬ್ರರಿ ಮೂಲೆಯಲ್ಲಿ ಯಾರಿಗೂ ಕಾಣದಂತೆ ಕುಳಿತಿದ್ದ ನನ್ನನ್ನು ಹುಡುಕಿ ಬಂದಿದ್ದ. ಬಂದವನೇ `ಮಾರಾಯಾ.. ನಿನ್ನ ಹುಡುಕುವ ಉಸಾಬರಿ ಬೇಡ ನಂಗೆ..' ಎಂದು ಹೇಳುತ್ತ ತುಂಟ ನಗೆ ನಕ್ಕಿದ್ದ.
ಸಂಜಯನಿಗೆ ಚೆಲ್ಲಾಟ.. ನನಗೆ ಪ್ರಾಣಸಂಕಟ ಎನ್ನುವಂತಾಗಿತ್ತು. ಮಾಡುವ ಕಿತಾಪತಿ ಮಾಡಿ ಈಗ ನಗುತ್ತಿದ್ದಾನೆ, ಹಿಡಿದು ಬಡಿದುಬಿಡೇಕು ಎನ್ನಿಸಿಬಿಟ್ಟಿತ್ತು ಒಮ್ಮೆ. ಕಷ್ಟಪಟ್ಟು ಸಮಾಧಾನ ಮಾಡಿಕೊಂಡಿದ್ದೆ. ಆತ ಹೇಳಿದರೂ ನಾನು ಅವಳಿಗೆ ಸಿಕ್ಕಿರಲಿಲ್ಲ. ನಾಲ್ಕೈದು ದಿನವಾದರೂ ಅವಳ ದೃಷ್ಟಿಯಿಂದ ನಾನು ತಪ್ಪಿಸಿಕೊಳ್ಳುತ್ತಲೇ ಇದ್ದೆ. ಅವಳೂ ಹುಡುಕಾಡಿರಬೇಕು. ಕೊನೆಗೊಂದು ದಿನ ನಾನು ಬರುವುದನ್ನೇ ಕಾಯುತ್ತ ಕಾಲೇಜು ಬಾಗಿಲಲ್ಲಿ ನಿಂತಿದ್ದಳು. ನಾನು ದೂರದಿಂದ ಕಂಡವನೇ ಪಕ್ಕಕ್ಕೆ ಸರಿದು ತಪ್ಪಿಸಿಕೊಳ್ಳಲು ಯತ್ನಿಸಿದೆ. `ನಿಲ್ಲೋ ಮಾರಾಯಾ.. ನಿನ್ ಹತ್ರ ಮಾತಾಡಬೇಕು.' ಎಂದಳು.. ನಾನಾಗಲೇ ಬೆವರಿ, ಬೆದರಿ ನೀರಾಗಿದ್ದೆ.
`ಏನ್ ಮಾರಾಯಾ.. ಇಸ್ಟ್ ದಿನ ಆಯ್ತು.. ಎಲ್ಲೋಗಿದ್ದೆ..? ಎಲ್ಲಂತ ಹುಡುಕೋದು ನಿನ್ನ? .. ಯಾರ್ಯಾರನ್ನು ಬಿಟ್ಟು ಹುಡುಕಿಸೋದು ನಿನ್ನ ? ಪೇಪರಿನಲ್ಲಿ ಕಾಣೆಯಾಗಿದ್ದಾರೆ ಅಂತ ಕೊಡಬೇಕೆನೋ ಅಂದುಕೊಂಡಿದ್ದೆ..' ಎಂದಾಗ ನಾನು ಪೆಚ್ಚು ನಗೆ ಬೀರಿದ್ದೆ.
`ಏನೋ ಸುದ್ದಿ ಕೇಳಿದ್ನಲ್ಲಾ..' ನೇರವಾಗಿ ಅವಳು ಕೇಳಿದ್ದಳು.. ನಾನು ಬೆಚ್ಚಿದ್ದೆ. ನಾನು ಏನಿಲ್ಲ ಎಂದು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುವುದರೊಳಗಾಗಿ ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ಮಾತಿಗೆ ಶುರುಹಚ್ಚಿಕೊಂಡಿದ್ದಳು.
`ಏನೋ.. ನಿನ್ ಮನಸ್ಸಿನ ಭಾವನೆಗಳಿಗೆ ಬೇರೊಬ್ಬರು ಧ್ವನಿಯಾಗ್ಬೇಕಾ..? ನಿಂಗೆ ಅನ್ನಿಸಿದ್ದನ್ನು ಇನ್ಯಾರೋ ಬಂದು ಹೇಳಬೇಕಾ..? ಯಾಕೆ ನೀನೇ ಹೇಳೋದಿಲ್ಲ..? ನೀನೆ ನೇರವಾಗಿ ಬಂದು ಹೇಳಿದ್ರೆ ಏನಾಗ್ತಿತ್ತು..? ನಾ ಏನಾದ್ರೂ ಹೇಳ್ ಬಿಡ್ತೀನಿ ಅನ್ನೋ ಭಯವಿತ್ತಾ..? ಕೋತಿ..' ಎಂದಳು. ನಾನು ಮತ್ತೊಮ್ಮೆ ಪೆಚ್ಚಾಗಿದ್ದೆ.
`ನಿನ್ನಲ್ಲಿ ಮೂಡಿದ ಭಾವನೆ ನನ್ನಲ್ಲೂ ಇತ್ತು ಕಣೋ.. ಆದರೆ ನನಗೂ ಹೇಳಿಕೊಳ್ಳಲು ಏನೋ ಒಂಥರಾ ಆಗ್ತಿತ್ತು. ಒಳ್ಳೆ ಸಮಯಕ್ಕೆ ಕಾಯ್ತಾ ಇದ್ದೆ. ಆ ದಿನ ಸಂಜಯ ಬಂದು ಹೇಳಿದಾಗ ನಾನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಣಿದಾಡಿದ್ದೆ. ನನ್ನ ಮನಸ್ಸಿನ ಭಾವನೆ ಅವನಿಗೂ ಗೊತ್ತಾಗಿತ್ತು. ಆತನೇ ನಿನ್ನ ಬಳಿ ಹೇಳಿರಾತ್ರೇನೋ ಅಂದುಕೊಂಡಿದ್ದೆ. ಆದರೆ ನಿನ್ನನ್ನು ನೋಡಿದ ಮೇಲೆ ಹಾಗೆ ಹೇಳಿಲ್ಲ ಅನ್ನೋದು ಗೊತ್ತಾಯ್ತು ಬಿಡು. ಮತ್ತೆ.. ನಿನ್ನ ಭಾವನೆಗಳನ್ನು ಇನ್ನೊಬ್ಬರ ಬಳಿ ಹೇಳಿ ಅವರ ಮೂಲಕ ನಾನು ತಿಳಿದುಕೊಳ್ಳುವಂತೆ ಮಾಡಬೇಡ ಮಾರಾಯಾ..' ಎಂದು ಹೇಳಿ ನಕ್ಕಿದ್ದಳು ಅಂಬಿಕಾ..
ನನ್ನ ಪ್ರೀತಿಗೆ ಅವಳು ಒಪ್ಪಿದಳಾ.. ಬಿಟ್ಟಳಾ..? ಗೊಂದಲ ಇನ್ನಷ್ಟು ಜಾಸ್ತಿಯಾಗಿತ್ತು.. ಅರ್ಥವಾಗದವನಂತೆ `ನನ್ನಲ್ಲಿ ಮೂಡಿದ ಭಾವನೆಗೆ ನಿನ್ನ ಉತ್ತರ..?' ಎಂದು ಕೇಳಿದ್ದೆ.. `ಇನ್ನೆಷ್ಟು ಸಾರಿ ಹೇಳಬೇಕೋ ಕೋತಿ ನಿಂಗೆ.. ಅರ್ಥವಾಗೋದಿಲ್ವಾ.. ಹೂಂ ಹೂಂ ಹೂಂ..' ಎಂದು ಹೇಳಿದಾಗ ಅವಳನ್ನೊಮ್ಮೆ ತಬ್ಬಿ ಮುದ್ದಾಡಬೇಕೆನ್ನಿಸುವಷ್ಟು ಸಂತೋಷವಾಗಿತ್ತು ನನಗೆ.. ಸುತ್ತಮುತ್ತ ನೋಡಿ ಸುಮ್ಮನಾಗಿದ್ದೆ.
ಆ ನಂತರದ ದಿನಗಳು ನಮ್ಮ ಪಾಲಿಗೆ ಅತ್ಯಂತ ಹರ್ಷದಾಯಕವಾಗಿದ್ದವು. ಪ್ರೇಮದಲ್ಲಿ ನಾವು ಮಿಂದೆದ್ದಿದ್ದೆವು. ಆದರೆ ಯಾವುದೇ ಕಾರಣಕ್ಕೂ ನಾನಾಗಿಯೇ ಅವಳ ಬಳಿ ಅವಳ ಹಿನ್ನೆಲೆಯನ್ನು ಕೇಳಿರಲಿಲ್ಲ. ಅವಳಾದರೂ ಹೇಳುತ್ತಾಳೆಂದುಕೊಂಡಿದ್ದೆ ಹೇಳಿರಲಿಲ್ಲ. ಹುಡುಗಿಯ ಎದುರು ಹುಡುಗರು ಹಲವು ಸಾರಿ ಭಾವನಾತ್ಮಕವಾಗಿ ಬೆತ್ತಲಾಗುತ್ತಾರೆ ಎಂಬ ಮಾತಿದೆ. ನಾನು ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನೂ ಅವಳೆದುರು ತೆರೆದಿಟ್ಟಿದ್ದೆ. ನನ್ನದೇ ಎಂಬಂತಹ ಗುಟ್ಟು ಏನೊಂದೂ ಇರಲಿಲ್ಲ. ನನ್ನ ಮನೆಗೆ ನಾನು ಅನೇಕ ಸಾರಿ ಅವಳನ್ನು ಕರೆದೊಯ್ದಿದ್ದೆ. ಅವಳೂ ನನ್ನನ್ನು ಅವಳ ಮನೆಗೆ ಕರೆದೊಯ್ದಿದ್ದಳು. ಮನೆಯಲ್ಲಿ ಅವಳಿಗೆ ಅಪ್ಪನಿದ್ದ. ತಾಯಿಯಿರಲಿಲ್ಲ. ತಾಯಿಯ ಕುರಿತು ಕೇಳಿದಾಗ ಮೌನವಾಗಿದ್ದಳು. ನಾನು ಅವಳ ಮನದ ಭಾವನೆಯನ್ನು ಅರಿತು ಮತ್ತೆ ಪ್ರಶ್ನಿಸಲು ಹೋಗಿರಲಿಲ್ಲ.
ಈಗ ಜಯಂತನ ಮಾತುಗಳು ಮತ್ತೆ ನನ್ನನ್ನು ಕಾಡಲು ಆರಂಭಿಸಿದ್ದವು. ತಾಯಿಯಿಲ್ಲ ತನಗೆ ಎಂದು ಅವಳು ಸುಳ್ಳು ಹೇಳಿದಳಾ..? ಅಥವಾ ಬೇಕಂತಲೇ ನನ್ನಿಂದ ವಿಷಯವನ್ನು ಮುಚ್ಚಿಟ್ಟಳಾ..? ಬ್ರಹ್ಮಚಾರಿಯ ಮಗಳು ಎಂದರೆ ಏನರ್ಥ..? ಬ್ರಹ್ಮಚಾರಿಗೆ ಮಕ್ಕಳಿರಲು ಸಾಧ್ಯವೇ..? ಎಂದೆಲ್ಲ ಆಲೋಚಿಸಿದೆ. ಏನಾದರಾಗಲಿ ಅವಳ ಬಳಿ ಈ ಕುರಿತು ಕೇಳಲೇಬೇಕು ಎಂದುಕೊಂಡು ಅಂದು ಹೊರಟಿದ್ದೆ. ಏನು ಕಾರಣವೋ.. ಆದಿನ ಅವಳು ನನಗೆ ಸಿಗಲೇ ಇಲ್ಲ. ಅನುಮಾನದ ಮನಸ್ಸಿಗೆ ಪ್ರತಿಯೊಂದೂ ಅನುಮಾನವಾಗಿಯೇ ಕಾಣುತ್ತದಂತೆ.. ನನಗೂ ಈಕೆ ಆ ದಿನ ಸಿಗದೇ ಇದ್ದುದು ಉದ್ದೇಶಪೂರ್ವಕದಂತೆ ಅನ್ನಿಸಿತು. ಮರುದಿನ ಸಿಕ್ಕಳು. ಸಿಕ್ಕ ತಕ್ಷಣ ಮೊದಲು ಕೇಳಿದ್ದೇ ಈ ಕುರಿತು.
`ಅಲ್ಲಾ ಕಣೇ.. ನಿನ್ನನ್ನು ಎಲ್ಲರೂ ಬ್ರಹ್ಮಚಾರಿಯ ಮಗಳು ಅಂತ ಕರೀತಾರಂತೆ.. ಯಾಕೆ ಹೀಗೆ..?' ಎಂದು ಕೇಳಿದೆ.
`ನನ್ನೆದುರು ನಗುತ್ತ ಬಂದ ಆಕೆಯ ಮುಖ ಒಮ್ಮೆಲೇ ಮುದುಡಿತು. ನಾನು ಮುಂದುವರಿದು ಕೇಳಿದೆ. `ಬ್ರಹ್ಮಚಾರಿಯ ಮಗಳಾ..? ಎಂತಾ ಹೆಸರು ಮಾರಾಯ್ತಿ.. ಮಜಾ ಇದೆ ನೋಡು.. ಬ್ರಹ್ಮಚಾರಿಗೆ ಮಗಳಿರಲು ಸಾಧ್ಯವೇ..? ಬ್ರಹ್ಮಚಾರಿಗೆ ಮಗಳಿದ್ದಾಳೆ ಎಂದರೆ ಅವನೆಂತ ಬ್ರಹ್ಮಚಾರಿಯಾಗಲು ಸಾಧ್ಯ..? ಬ್ರಹ್ಮಚಾರಿ ಹಾಗೂ ಮಗಳು.. ಎಂತಾ ವಿತ್ರ ಅಲ್ವಾ..? ಹಿಂಗಂದ್ರೆ ಬ್ರಹ್ಮಚಾರಿ ವ್ಯಕ್ತಿತ್ವದ ಬಗ್ಗೆ ಅನುಮಾನ ಹುಟ್ಟುತ್ತದಲ್ಲ.. ನಿಂಗೆ ಬ್ರಹ್ಮಚಾರಿ ಮಗಳು ಅಂತ ಕರೀತಾರಂತೆ.. ಯಾಕೆ..? ಏನೋ ಅನುಮಾನ ಮೂಡ್ತಾ ಇದೆಯಲ್ಲ..' ಎಂದು ಕೇಳಿದೆ.. ಎಂದಿನ ಸಲಿಗೆ.. ಖುಶಾಲಿಯಿಂದ ಮಾತಾಡಿದ್ದೆ.. ಸ್ವಲ್ಪ ಉಢಾಫೆಯೂ ಇತ್ತೆನ್ನಿ..
ಆಕೆ ಏನೊಂದೂ ಮಾತಾಡಲಿಲ್ಲ. ಮುಖ ಕಪ್ಪಾಗಿತ್ತು. ನನ್ನನ್ನು ಕೈಹಿಡಿದುಕೊಂಡವಳೇ ಸೀದಾ ಎಳೆದುಕೊಂಡು ಹೋದಳು.. ನಾನು ಆಕೆಯ ಹಿಂದೆ ನಡೆದುಕೊಂಡು ಹೋದೆ.. ಎಲ್ಲಿಗೆ ಕರೆದೊಯ್ಯುತ್ತಿದ್ದಾಳೆ ನಾನು ಕೇಳಲಿಲ್ಲ.. ಕೇಳುವ ಮನಸ್ಸಾಗಲಿಲ್ಲ.. ಅಪರೂಪಕ್ಕೆ ಯಾಕೋ ನನಗೆ ಭಯವಾಯಿತು.. ಮೌನವಾಗಿ ನಡೆಯುತ್ತಿದ್ದ ಅವಳನ್ನು ಹಿಂಬಾಲಿಸಿದೆ. ಮನಸ್ಸಿನೊಳಗೇ ಅವಳು ಅಳುತ್ತಿದ್ದಳಾ..? ಗೊತ್ತಾಗಲಿಲ್ಲ..
(ಮುಂದುವರಿಯುತ್ತದೆ..)