ಹೃದಯವೆ ಬಯಸಿದೆ ನಿನ್ನನೆ..
ತೆರೆಯುತ ಕನಸಿನ ಕಣ್ಣನೇ...
ಮೊಬೈಲ್ ರಿಂಗಣಿಸತೊಡಗಿತು. ಎಂತಕ್ಕಾದ್ರೂ ಬಂತೋ ಪೋನು ಎಂದುಕೊಂಡೇ ತುಸು ಆಲಸ್ಯದಿಂದ ಪೋನೆತ್ತಿಕೊಂಡ ವಿನಯಚಂದ್ರ.
`ಗುಡ್ ನ್ಯೂಸ್ ವಿನು... ಕೊನೆಗೂ ನೀನು ಕಬ್ಬಡ್ಡಿ ವಿಶ್ವ ಕಪ್ ನ್ಯಾಷನಲ್ ಟೀಮಿಗೆ ಸೆಲೆಕ್ಟಾದೆ.. ಕಂಗ್ರಾಟ್ಸ್ ದೋಸ್ತಾ..ನಂಗಂತೂ ಬಹಳ ಖುಷಿ ಆಗ್ತಾ ಇದೆ' ಎಂದು ಮಿತ್ರ ಸಂಜಯ ಪೋನ್ ಮಾಡಿದ ತಕ್ಷಣ ವಿನಯಚಂದ್ರಂಗೆ ಒಂದ್ ಸಾರಿ ಕಾಲು ನೆಲದ್ಮೇಲೆ ನಿಲ್ಲಲಿಲ್ಲ. ರಾಶಿ ದಿನದ ಕನಸು ನನಸಾದ ಹಾಗೆ ಮನಸ್ಸಿನಲ್ಲಿ ಹೊಯ್ದಾಟ.
`ಹೇಯ್ ವಿನು.. ಎಲ್ಲೋದ್ಯಾ..? ಅಲ್ಲೇ ಇದ್ಯನಾ.. ಮಾತಾಡಾ..ಈ ಸಾರಿ ವಿಶ್ವ ಕಪ್ ಬಾಂಗ್ಲಾ ದೇಶದಲ್ಲಿದ್ದು.. ಅದಾರು ಗೊತ್ತಿದ್ದಾ ಇಲ್ಯಾ ನಿಂಗೆ? ಮುಂದಿನವಾರ ಅಲ್ಲಿಗೆ ಹೊರಡವು. ತಯಾರಾಗು ಬೇಗ.. ಕನಸು ಕಂಡಿದ್ದು ಸಾಕು..' ಎಂದು ಸಂಜಯ ಮತ್ತೊಂದ್ ಸಾರಿ ಅಂದಾಗ್ಲೇ ವಿನಯಚಂದ್ರ ಕನಸಿನಲೋಕದಿಂದ ವಾಸ್ತವಕ್ಕೆ ಬಂದಿದ್ದು.. ಮತ್ತೊಮ್ಮೆ ತನ್ನನ್ನು ತಾನೇ ಚಿವುಟಿಕೊಂಡು ಇದು ಕನಸಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಮನಸ್ಸಿನಲ್ಲಿ ಸಂತೋಷದ ಅಲೆ ಉಕ್ಕುಕ್ಕಿ ಬರುತ್ತಿತ್ತು.
`ಥ್ಯಾಂಕ್ಸಲೆ ದೋಸ್ತಾ..' ಎಂದ ವಿನಯಚಂದ್ರ. ಮನಸ್ಸಿಗೆ ರೆಕ್ಕೆ ಬಂದಿತ್ತು.
ಹಾಳಾದ ಟಿ.ವಿ ಮಾಧ್ಯಮದವರು ಯಾವಾಗ ನೋಡಿದ್ರೂ ಕ್ರಿಕೆಟ್ ಕ್ರಿಕೆಟ್.. ಅದನ್ನು ಬಿಟ್ರೆ ಟೆನ್ನಿಸ್ಸು ಫುಟ್ ಬಾಲ್.. ಅಪರೂಪಕ್ಕೆ ಹಾಕಿ.. ಅವರಿಗೆಂತಕ್ಕೆ ನಮ್ಮ ದೇಸಿಯ ಕ್ರೀಡೆ ಕಬ್ಬಡ್ಡಿ ಕಾಣತಿಲ್ಯೋ..ನಮ್ಮದೇ ನಾಡಿನ, ಕ್ರಿಕೆಟ್ಟಿಗಿಂತಲೂ ರೋಚಕತೆಯನ್ನು ತಂದುಕೊಡುವ ಕಬ್ಬಡ್ಡಿ ಕುರಿತು ಒಂದೇ ಒಂದು ಸುದ್ದಿನೂ ಹಾಕ್ಕತ್ವಿಲ್ಲೆ.. ಎಂದು ಮಾಧ್ಯಮದವರಿಗೆ ಬೈದುಕೊಂಡ ವಿನಯಚಂದ್ರ. ತಾನು ಕಬ್ಬಡ್ಡಿಯ ವಿಶ್ವಕಪ್ ಟೀಮಿಗೆ ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆಗಿದ್ದನ್ನೂ ಯಾರೋ ದೋಸ್ತರಿಂದ ತಿಳಕಳ ಹಂಗಾತು ಅನ್ನೋದು ಮುಜುಗರ ತಂದಿತು. ಅದೇ ಆತನ ಸಿಟ್ಟಿಗೆ ಸ್ವಲ್ಪ ಜಾಸ್ತಿ ಉಪ್ಪು-ಖಾರವನ್ನು ಹಾಕಚು ಹೇಳಲಕ್ಕು. `ತಥ್...' ಎಂದುಕೊಂಡ ಮನಸ್ಸಿನಲ್ಲಿಯೇ.
`ಸಂಜೂ.. ನಿಂಗೆ ಯಾರ್ ಹೇಳಿದ್ವಾ ಮಾರಾಯಾ.. ಆನಂತೂ ಬೆಳಗಿಂದ ಟಿ.ವಿ ಮುಂದೆ ಕುತ್ಗಂಡಿದ್ದಿ.. ಒಂದೇ ಒಂದ್ ಸುದ್ದಿನೂ ಗೊತ್ತಾಜಿಲ್ಲೆ.. ಯಾವಾಗ್ಲೂ ಪೋನ್ ಮಾಡತಾ ಇದ್ದಿದ್ ಚಿದಂಬರ ಸರ್ರೂ ಪೋನ್ ಮಾಡಿದ್ವಿಲ್ಯಲಾ ಇನ್ನೂವಾ.. ಸುಳ್ ಹೇಳಡದಾ.. ಸೀರಿಯಸ್ಸಾಗಿ ಹೇಳಾ ಮಾರಾಯಾ..ಖರೆ ಹೌದನಾ.. ತಮಾಷೆ ಅಲ್ಲ ಹದಾ' ಎಂದ ವಿನಯಚಂದ್ರ. ಗೆಳೆಯ ಹೇಳಿದ ಮಾತನ್ನು ನಂಬಲು ಇನ್ನೂ ಅಳುಕಿತ್ತು ಮನದ ಮೂಲೆಯಲ್ಲಿ.
`ಥೋ.. ಇಲ್ಲೆಲ್ಲಾ ಎಂತಾ ಜೋಕಾ.. ನಿಜ ಮಾರಾಯಾ.. ಪಕ್ಕಾ ಸುದ್ದಿನೇಯಾ..ನೀನು ಕಬ್ಬಡ್ಡಿ ಟೀಮಿಗೆ ಆಯ್ಕೆಯಾಜೆ. ಹೀಗೆ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಹವ್ಯಕರವನು ನೀನು.. ಈ ಕಾರಣಕ್ಕೆ ನಮಗೆ ಬಹಳ ಹೆಮ್ಮೆ ಆಗ್ತಾ ಇದ್ದೋ' ಎಂದ ಸಂಜಯ.
ದೊಡ್ಡ ಚ್ಯಾನಲ್ ರಿಪೋರ್ಟರ್ ಸಂಜಯ. ಅಂವಂಗೆ ಬೇಗ್ನೆ ಸುದ್ದಿ ಗೊತ್ತಾಜಕ್ಕು.. ಅದು ಸತ್ಯನೂ ಆಗಿಕ್ಕು ಅಂದುಕೊಂಡ. `ಮಾರಾಯಾ.. ಎಂತಾದ್ರೂ ಡೀಟೇಲ್ಸ್ ಗೊತ್ತಾದ್ರೆ ಹೇಳಾ..' ಎಂದ..
`ಯಂಗೆ ಗೊತ್ತಾಗಿದ್ದು ಇಷ್ಟೇಯಾ ನೋಡು.. ಇನ್ 15 ದಿನಕ್ಕೆ ಬಾಂಗ್ಲಾದೇಶದಲ್ಲಿ ಕಬ್ಬಡ್ಡಿ ವಿಶ್ವಕಪ್ಪು. 18 ಟೀಂ ಬತ್ತಾ ಇದ್ದು. ವರ್ಡ್ ಚಾಂಪಿಯನ್ ನಮ್ಮ ಟೀಮಿನ ಸೆಲೆಕ್ಷನ್ನು ಆಜು. ಅದರಲ್ಲಿ ನೀನು ಒಬ್ಬಂವ ಸೆಲೆಕ್ಟ್ ಆದಂವ.. ಹೋಯ್ ಕರ್ನಾಟಕದಿಂದ ಸೆಲೆಕ್ಟ್ ಆದಂವ ನೀನೊಬ್ನೆಯಾ ಮಾರಾಯಾ.. ನಮ್ ಹವ್ಯಕರಲ್ಲಿ ನೀನೆ ಮೊದಲ್ನೇಯವ್ವಾ ನೋಡು.. ಅಂತೂ ವರ್ಡ್ ಕಪ್ಪಿಗೆ ನ್ಯಾಶನಲ್ ಟೀಮಿಗೆ ಸೆಲೆಕ್ಟ್ ಆಗೋ ಮೂಲಕ ಭಾರತದ ಪರ ಆಡವ್ವು ಹೇಳೋ ನಿನ್ ಕನಸು ನನಸು ಮಾಡ್ಕ್ಯತ್ತಾ ಇದ್ದೆ.. ಯಂಗಂತೂ ರಾಶಿ ಖುಷಿ ಆಗ್ತಾ ಇದ್ದು ಮಾರಾಯಾ.. ಆನಂತೂ ನಿನ್ ಬಗ್ಗೆ.. ನಿನ್ ಸಾಧನೆ ಬಗ್ಗೆ ದೊಡ್ ಸುದ್ದಿ ಬರೆಯವ್ವು ಹೇಳಿ ಮಾಡ್ಕತ್ತಾ ಇದ್ದಿ ಡಿಟೇಲ್ಸ್ ಕೊಡಾ..' ಎಂದ ಸಂಜಯ.
`ಡೀಟೇಲ್ಸನಾ.. ನಿಂಗೊತ್ತಿಲ್ದೆ ಇದ್ದಿದ್ದು ಯಂತಿದ್ದಾ.. ಮಣ್ಣಾಂಗಟ್ಟಿ.. ನೀನೆ ಬರಕಳಾ' ಎಂದ ವಿನಯಚಂದ್ರ
`ಥೋ ಹಂಗಲ್ದಾ ಮಾರಾಯಾ.. ಆನು ನೀನು ದೋಸ್ತ ಇದ್ದಿಕ್ಕು. ನಿನ್ ಬಗ್ಗೆ ಹೆಚ್ಚು ಕಡಿಮೆ ಎಲ್ಲಾ ವಿಷಯವೂ ಗೊತ್ತಿದ್ದು.. ಗೊತ್ತಿದ್ದು ಹೇಳಿ ಆ ಬರದ್ದಿ ಅಂದ್ಕ.. ನಿನ್ ಬಾಯಿಂದ ಕೇಳದಾಂಗೆ ಆಕ್ತನಾ.. ಹೇಳಾ..ನೀನು ಯಂಗೆ ಪರಿಚಯ ಇದ್ದ ಕಾಲದ್ದೆಲ್ಲಾ ಗೊತ್ತಿದ್ದು. ಆದರೂ ವಿಶೇಷತೆಗಳು ಅಂತ ಇನ್ನೇನಾದ್ರೂ ಇದ್ದಿಕ್ಕಲಾ' ಎಂದ..
ಅಷ್ಟರಲ್ಲಿ ಡ್ಯೂಯೆಲ್ ಸಿಮ್ಮಿನ ವಿನಯಚಂದ್ರನ ಪೋನು ಕಿರಿ ಕಿರಿ ಮಾಡಲೆ ಹಣಕಚು. ಯಾರೋ ಪೋನ್ ಮಾಡಿದ್ದ ಅಂದಕಂಡ ವಿನಯಚಂದ್ರ..
`ದೋಸ್ತಾ.. ಇನ್ನೊಂದು ಪೋನು ಬತ್ತಾ ಇದ್ದಲೆ.. ಆನು ಯೆಲ್ಲಾ ರೆಡಿ ಮಾಡಿಟ್ಕಂಡು ನಿಂಗೆ ಪೋನ್ ಮಾಡ್ತ್ನಾ..' ಎಂದು ಪೋನ್ ಇಡ್ತಾ ಇದ್ದಾಂಗೆ ವಿನಯಚಂದ್ರನ ಮೊಬೈಲು ಮತ್ತೊಮ್ಮೆ ರಿಂಗಣ. ನೋಡಿದ್ರೆ ಚಿದಂಬರ ಸರ್ ಮಾಡಿದ್ದರು. ಅವರ ಪೋನ್ ಎತ್ಕಂಡು ಮಾತಾಡಲು ಹಿಡದ್ರೆ ಅವರೂ ಇದೇ ವಿಷಯ ಹೇಳಲೆ ಹಣಕಿದ್ರು. ಸಂಜಯ ಹೇಳಿದ್ ವಿಷಯಾನೇ ಅವರೂ ಹೇಳಿದ್ರು. ಅದನ್ನು ಕೇಳಿದ ವಿನಯ ಚಂದ್ರ `ಯಂಗೆ ವಿಷಯ ಗೊತ್ತಾಜು.. ಸಂಜಯ ಹೇಳಿದ್ದ ಹಿಂಗಿಂಗೆ ಅಂದ.. ಖುಷಿಯಾದ ಚಿದಂಬರ ಮಾಸ್ತರ್ರು `ವಿನಯಾ.. ಅಂತೂ ನಿನ್ ಶ್ರಮಕ್ಕೆ ಬೆಲೆ ಬಂತಲೆ.. ಒಳ್ಳೇ ರೀತಿ ಹೆಸರು ಮಾಡವ್ವು....ನಿನ್ನ ಮೇಲೆ ಬಹಳ ನಿರೀಕ್ಷೆ ಇದೆ. ಅದನ್ನು ಹುಸಿ ಮಾಡಬೇಡ ಮಾರಾಯಾ' ಅಂದರು.
`ಸರ್ ನೀವು ನಂಗೆ ಕೋಚಿಂಗ್ ಕೊಟ್ಟಿದ್ದು.. ಅದನ್ನು ಮರಿತ್ನಿಲ್ಲೆ ಸರ್.. ನಿಮ್ಮಿಂದ್ಲೆ ಈ ಹಂತಕ್ಕೆ ಬಂದಿದ್ದು.. ಯನ್ನ ಈ ಸಾಧನೆ ಹಿಂದೆ ಕಾಂಬದು ನಿಮ್ಮ ಬೆವರು..ನೀವಿಲ್ಲದಿದ್ರೆ ನಾನು ಈ ಮಟ್ಟಕ್ಕೆ ಏರುತ್ತಿರಲಿಲ್ಲವೇನೋ.. ನಿಮಗೆ ನಾನೆಷ್ಟು ಧನ್ಯವಾದ ಹೇಳಿದ್ರೂ ಕಮ್ಮಿನೇಯಾ' ಎಂದ. ಕೋಚ್ ಚಿದಂಬರ ಅವ್ರು ಒಂದು ಸಾರಿ ಸುಮ್ಮಗಾದ್ರು. ನಿಡಿದಾದ ಉಸಿರು ಬಿಟ್ಟ ಶಬ್ದ ಮೊಬೈಲಿನಲ್ಲಿ ಕೇಳಚು. ಮನದಾಳದ ಭಾವವೊಂದು ನಿಟ್ಟುಸಿರಿನ ಮೂಲಕ ಹೊರಬಂದ ಹಾಗಿತ್ತು.
`ಸರ್.. ಇಲ್ಲೀತನಕ ಆನು ರಾಜ್ಯದ ಟೀಮಲ್ಲಿ ಆಡಿದಿದ್ದಿ.. ಈಗ ಬಹಳ ಟೆನ್ಶನ್ ಆಗ್ತಾ ಇದ್ದು..ಹೆಂಗೋ ಏನೋ.. ಎಕ್ ದಮ್ ನ್ಯಾಷನಲ್ ಟೀಮಿಗೆ ಸೆಲೆಕ್ಷನ್ನಾಗಿದ್ದು, ಅದೂ ವಿಶ್ವಕಪ್ಪಿಗೆ...ಮನದಲ್ಲಿ ಒಂಥಡಾ ಢಕ ಢುಕಿ..' ಎಂದ ವಿನಯಚಂದ್ರ..
`ಥೋ.. ನಿಂಗೆ ಹಂಗೆಂತಕ್ಕೆ ಆಗವಾ..? ಇಲ್ಲೀವರೆಗೆ ಹೆಂಗೆ ಆಡಿದ್ಯಾ ಮುಂದೂ ಹಂಗೆ ಆಡು.. ಯಶಸ್ಸು ನಿನ್ ಜೊತೆಗೆ ಬತ್ತು. ತಲೆಬಿಸಿ ಮಾಡ್ಕ್ಯಳಡಾ ಮಾರಾಯಾ.. ಏನೇ ಆದರೂ ನಿನ್ನ ಮೇಲಿನ ನಂಬಿಕೆ ನೀನು ಕಳಕಳಡ. ನಮ್ಮ ನಮ್ಮ ಮೇಲೆ ನಮಗಿರುವ ನಂಬಿಕೆಯೇ ನಮ್ಮನ್ನು ಸದಾ ಕಾಪಾಡ್ತು. ನೀನೂ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳದೇ ಮುನ್ನುಗ್ಗು. ಅಷ್ಟಾದರೆ ಗೆಲುವು ಸದಾ ನಿನ್ನ ಬೆನ್ನಿಗೆ ಬರ್ತು' ಎಂದ ಚಿದಂಬರ್ ಅವರು `ನೋಡಾ.. ಟೀಂ ಇಂಡಿಯಾಕ್ಕೆ ಪ್ರಕಾಶ ಜಾಧವ್ ಅಂತ ಕೋಚ್ ಇದ್ರು. ಯನ್ನ ದೋಸ್ತನೂ ಹೌದು.. ಅಗ್ ದಿ ಒಳ್ಳೆ ಮನುಷ್ಯಾ.. ಆನು ಅಂವ ಒಟ್ಟಿಗೆ ರೈಲ್ವೇಸ್ ಪರ ಕಬ್ಬಡ್ಡಿ ಆಡಿದಿದ್ಯ.. ಅಂವನ ಹತ್ರ ನಿನ್ ಬಗ್ಗೆ ಹೇಳಿರ್ತಿ.. ಅಂವ ಎಲ್ಲಾ ನೋಡ್ಕತ್ತಾ.. ನಿಂಗೆ ಎಂತಾ ಸಮಸ್ಯೆ ಆಕ್ತಿಲ್ಯಾ.. ನಿಂಗೆ ತರಬೇತಿಗೆ ಸಮಸ್ಯೆ ಆಗ್ತಿಲ್ಲೆ. ಚೊಲೋ ಆಡು..' ಎಂದು ಪೋನಿಟ್ಟರು.
ವಿನಯಚಂದ್ರನ ಮನಸ್ಸಿನಲ್ಲಿ ಖುಷಿಯ ಉಬ್ಬರ ಕಾಣ್ತಾ ಇತ್ತು. ಚಿದಂಬರ ಸರ್ ಪೋನ್ ಇಡ್ತಾ ಇದ್ದಾಂಗೆ ಸುಮಾರಸ್ಟ್ ಪೋನ್ ಬಪ್ಪಲೆ ಹಿಡತ್ತು ವಿನಯ ಚಂದ್ರಂಗೆ.. ಎಲ್ಲಾವ್ಕೂ ಉತ್ತರ ಕೊಡುವಷ್ಟರಲ್ಲಿ ವಿನಯಚಂದ್ರಂಗೆ ಬೆವರು ಇಳಿಯಲೆ ಹತ್ತಿತ್ತು. ಆದರೂ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗಿದ್ ಖುಷಿ ಬೆವರನ್ನು ಮರೆಸಿ ಹಾಕಿತ್ತು. ಲೆಕ್ಖವಿಲ್ಲದಷ್ಟು ಕರೆಗಳು, ನೂರಾರು ಮೆಸೇಜುಗಳು.. ಒಟ್ನಲ್ಲಿ ವಿನಯಚಂದ್ರ ಪುಲ್ ಹ್ಯಾಪಿ.
ವಿನಯ ಚಂದ್ರ ನ್ಯಾಷನಲ್ ಟೀಮಿಗೆ ಸೆಲೆಕ್ಟ್ ಆಗುವ ಮುನ್ನ ನಡೆದ ಹಾದಿ ಇದ್ದಲಿ ಅದು ಬಹಳ ಶ್ರಮದಿಂದ ಕೂಡಿದ್ದು. ಉತ್ತರ ಕನ್ನಡದ ಮಲೆನಾಡಿನ ಹಳ್ಳಿ ಮೂಲೆಯೊಂದರ ಹುಡುಗ ವಿನಯಚಂದ್ರ. ಮನೆಲ್ಲಿ ಸಿಕ್ಕಾಪಟ್ಟೆ ಅನುಕೂಲಸ್ತರಾಗಿರುವ ಕಾರಣ ದುಡ್ಡು ಕಾಸಿಗೆ ತೊಂದರೆ ಇರಲಿಲ್ಲ. ಹಾಗಂತ ವಿನಯಚಂದ್ರ ಕೇಳಿದ್ದು, ಬಯಸಿದ್ದೆಲ್ಲವೂ ಸುಲಭಕ್ಕೆ ಸಿಗುತ್ತಲೂ ಇರಲಿಲ್ಲ. ವಿನಯಚಂದ್ರನೂ ಸಣ್ಣಕ್ಕಿದ್ದಾಗಿನಿಂದಲೂ ಚೂಟಿಯ ಹುಡುಗ. ಅವನ ಓರಗೆ ಹುಡುಗರು ಕ್ರಿಕೆಟ್ ಆಡಕತ್ತ ಬೆಳದಾಂಗೆ ಇಂವ ಕಬ್ಬಡ್ಡಿ ಆಡಕತ್ತ ಬೆಳೆದಿದ್ದ. ಹವ್ಯಕರ ಹುಡುಗ ಆಗಿದ್ರಿಂದ ಅವನ ವಯಸ್ಸಿನ ಹವ್ಯಕ ಹುಡುಗರೆಲ್ಲ `ಅಲ್ದಾ ವಿನಯಾ.. ನೀ ಹವ್ಯಕ ಆಕ್ಯಂಡು ಅದೆಂತದಾ ಇತರೇರು ಆಡೋ ಆಟ ಆಡ್ತೆ.. ಕ್ರಿಕೆಟ್ಟಾಡಲೆ ಬಾರಾ..' ಎಂದು ಛೇಡಿಸುತ್ತಿದ್ದರು.
`ಯಾರು ಹೇಳಿದ್ದು ಕಬ್ಬಡ್ಡಿ ನಾವ್ ಆಡದಲ್ಲ ಹೇಳಿ..? ಇಂತವ್ವೇ ಆಡದು ಹೇಳಿ ಎಲ್ಲಾದ್ರೂ ಬರಕಂಡು ಇದ್ದಾ.. ಯಂಗೆ ಕಬ್ಬಡ್ಡಿ ಇಷ್ಟ.. ನಿಂಗಕ್ಕಿಗೆ ಕ್ರಿಕೆಟ್ ಆಗಿಕ್ಕು.. ಯಂಗೆ ಕ್ರಿಕೆಟ್ ಆಡಲೆ ಬನ್ನಿ ಹೇಳಿ ನಿಂಗವ್ವು ಒತ್ತಾಯ ಮಾಡಡಿ..' ಹೇಳಿ ಕೂಗಿ ಅವರನ್ನೆಲ್ಲ ಸುಮ್ಮನಿರಿಸಿದ್ದ ವಿನಯಚಂದ್ರ. ದೇಹದಲ್ಲಿ ದಾಢಸಿಯಿದ್ದ ಕಾರಣ ಆತನ ಮಾತಿಗೆ ಯಾರೂ ಎದುರು ಆಡುತ್ತಿರಲಿಲ್ಲ. ವಿನಯಚಂದ್ರ ಎದುರಿಗೆ ಇರದಿದ್ದಾಗ ಮಾತ್ರ ಎಲ್ಲರೂ ನಕ್ಕವರೇ.
ವಿನಯಚಂದ್ರ ಕಬ್ಬಡ್ಡಿಯಲ್ಲೇ ಮುಂದುವರಿದ. ಅವನ ಜೊತೆಗೆ ಬೆಳೆದ ಹುಡುಗರು ಕ್ರಿಕೆಟ್ ಆಡುತ್ತ ಬೆಳೆದರು. ಕಬ್ಬಡ್ಡಿ ಮನಸ್ಥಿತಿಯ ವಿನಯಚಂದ್ರ ಓದೋದ್ರಲ್ಲಿ ಹಿಂದೆಬಿದ್ದ ಅಂದ್ಕಂಬಲೆ ಬತ್ತಿಲ್ಲೆ.. ಓದೋದ್ರಲ್ಲೂ ಆತ ಚೂಟಿ. ಎಲ್ಲರ ಹಾಂಗೆ ತೀರಾ ಮುವತ್ಮೂರ್ ಮೂರಲೆ ಮಾರ್ಕಸ್ ತಗಳದೇ ಇದ್ರೂ 80-85ಕ್ಕಂತೂ ಕಡಿಮೆ ಆಕ್ತಿತ್ತಿಲ್ಲೆ..
ಇವನ ವಾರಗೆ ಹುಡುಗರು ಕ್ರಿಕೆಟ್ ಟೀಮಿಗೆ ಸೆಲೆಕ್ಟ್ ಆಪಲೆ ಪಡಿಪಾಟಲು ಪಡ್ತಿದ್ರೆ ಇವರ ಶಾಲೆ ಕಬ್ಬಡ್ಡಿ ಟೀಮಿಗೆ ಇವನೇ ಕ್ಯಾಪ್ಟನ್ನು. ತಾನೇ ಕೋಚ್ ಕೂಡ. ತನ್ನದೇ ಟೀಮ್ ಕಟ್ಟಿಕೊಂಡು ಶಾಲಾ ಕ್ರೀಡಾಕುಟಗಳಲ್ಲಿ ಜಯಭೇರಿ ಭಾರಿಸಿಕೊಂಡು ಬರುತ್ತಿದ್ದ. ಕ್ರಿಕೆಟ್ ಬೆನ್ನೇರಿ ಅತ್ತ ದೊಡ್ಡ ಆಟಗಾರರೂ ಆಗದೇ ಇತ್ತ ಕ್ರಿಕೆಟ್ ಬಿಡಲೂ ಆಗದೇ ಒದ್ದಾಡುತ್ತಿದ್ದರು ವಿನಯಚಂದ್ರನ ಗೆಳೆಯರು. ಆದರೆ ವಿನಯಚಂದ್ರ ಮಾತ್ರ ಕಬ್ಬಡ್ಡಿಯನ್ನು ಜೀವಕ್ಕಿಂತ ಹೆಚ್ಚಾಗಿ ಇಷ್ಟಪಟ್ಟ. ಕಬ್ಬಡ್ಡಿಯ ಕೈಹಿಡಿದಿದ್ದ ವಿನಯಚಂದ್ರನನ್ನು ಕಬ್ಬಡ್ಡಿ ಕೈಬಿಡಲಿಲ್ಲ.
ತಮ್ಮೂರ ಫಾಸಲೆಯಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದಾಗಲೆಲ್ಲ ಬೆಳಗಿನವರೆಗೂ ಮೊದಲನೆ ಸಾಲಲ್ಲಿ ಕುಂತ್ಗಂಡು ಎದ್ದು ಬತ್ತಿದ್ದ ವಿನಯಚಂದ್ರ. ಅವಂಗೆ ಅದ್ಯಾವ ಮಾಯೆಯಲ್ಲಿ ಕಬ್ಬಡ್ಡಿ ಚಟ ಅಂಟಿಕೊಂಡಿತ್ತೋ ಏನೋ. ಕಬ್ಬಡ್ಡಿ, ಭಾವಗೀತೆ, ಕುಂಗ್ ಫೂ, ಪುಸ್ತಕ ಓದೋದು, ಹಳೆಯ ಹಾಡುಗಳನ್ನು ಅದರಲ್ಲೂ ಹೆಚ್ಚಾಗಿ ಹಿಂದಿಯ ಮುಖೇಶ್, ರಫಿ, ಮನ್ನಾಡೆ, ಕನ್ನಡದಲ್ಲಿ ಘಂಟಸಾಲ, ಪಿಬಿಶ್ರೀ ಅಂದರೆ ಜೀವ ಬಿಡುವಷ್ಟು ಇಷ್ಟ. ಇವೆಲ್ಲ ಒಂಥರಾ ವಿಚಿತ್ರ ಕಾಂಬಿನೇಷನ್ನಾದರೂ ಚಿಕ್ಕಂದಿನಿಂದ ಹಾಗೆಯೇ ಬೆಳೆದವನು ವಿನಯಚಂದ್ರ. ಅವನ ವಾರಗೆಯ ಹುಡುಗರಲ್ಲಿ ವಿನಯಚಂದ್ರನೆಂದರೆ ವಿಚಿತ್ರ ಜೀವಿ ಎನ್ನುವಂತೆ ಬೆಳೆದಿದ್ದ.
ಶಾಲಾಮಟ್ಟದಲ್ಲಿ ಶಾಸ್ತ್ರೀಯವಾಗಿ ಕಬ್ಬಡ್ಡಿ ಆಡಲು ಬರದಿದ್ದರೂ ಇತರರು ಇವನಷ್ಟು ಒಳ್ಳೆಯದಾಗಿ ಆಡದಿದ್ದ ಕಾರಣ ಆ ಮಟ್ಟದಲ್ಲಿ ಇವನದ್ದೇ ಸಾಮ್ರಾಜ್ಯ ಎನ್ನಬಹುದಿತ್ತು. ಆದರೆ ಹೈಸ್ಕೂಲು ಓದಲಿಕ್ಕೆಂದು ವಿನಯಚಂದ್ರನನ್ನು ಆತನ ತಂದೆ ಶಿವರಾಮ ಹೆಗಡೆ ಶಿರಸಿಗೆ ಕಳಿಸಿದಾಗ ತನ್ನ ಜೀವನದ ದಿಕ್ಕು ಬದಲಾಗುತ್ತದೆ ಎಂದು ವಿನಯಚಂದ್ರನಿಗೂ ಗೊತ್ತಿರಲಿಲ್ಲವೇನೋ. ಎಂಟನೇ ಕ್ಲಾಸಿನಲ್ಲಿ ಪೀ ಪಿರಿಯಡ್ಡಿನಲ್ಲಿ ಯಾರ್ಯಾರು ಏನೇನ್ ಆಟ ಆಟ ಆಡ್ತೀರಿ ಎಂದಾಗ ಎದ್ದುನಿಂತು `ಕಬ್ಬಡ್ಡಿ..' ಎಂದಿದ್ದ. ತಕ್ಷಣ ಅಲ್ಲಿದ್ದ ದೈಹಿಕ ಶಿಕ್ಷಕರು ಈತನ ಹೆಸರು ಕೇಳಿದ್ದರು. ಅದಕ್ಕವನು `ವಿನಯಚಂದ್ರ ಶಿವರಾಮ ಹೆಗಡೆ' ಎಂದು ಉತ್ತರಿಸಿದ್ದ. ಹೆಸರು ಕೇಳಿ ಶಿಕ್ಷಕರು ಒಮ್ಮೆ ವಿಸ್ಮಯರಾಗಿದ್ದರೂ `ಲೇ ಪುಳಿಚಾರು.. ನೀ ಏನ್ ಕಬ್ಬಡ್ಡಿ ಆಡ್ತೀಯೋ..' ಎಂದು ವ್ಯಂಗ್ಯವಾಡಿದ್ದರು. ವಿನಯಚಂದ್ರ ನಾಚಿಕೆಯಿಂದ ಸುಮ್ಮನುಳಿದಿದ್ದ.
ನಂತರದ ದಿನಗಳಲ್ಲಿ ಯಾವ ಯಾವ ವಿದ್ಯಾರ್ಥಿ ಹೇಗೆ ಆಡುತ್ತಾನೆಂದು ಗಮನಿಸಿದ್ ಹೈಸ್ಕೂಲಿನ ದೈಹಿಕ ಶಿಕ್ಷಕರು ವಿನಯಚಂದ್ರ ನಿಜಕ್ಕೂ ಚನ್ನಾಗಿ ಆಡುತ್ತಾನೆ ಆದರೆ ಇನ್ನಷ್ಟು ಪಳಗಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿದ್ದರು. ಅದಕ್ಕೆ ತಕ್ಕಂತೆ ತರಬೇತಿ ನೀಡಲು ಮುಂದಾಗಿದ್ದರು. ಒಬ್ಬ ಹೈಗರ ಹುಡುಗ ಕಬ್ಬಡ್ಡಿ ಆಡುತ್ತಾನೆ ಎಂಬುದು ಅವರಿಗೆ ವಿಶೇಷ ಎನ್ನಿಸಿದ್ದರೂ ಆತ ಚನ್ನಾಗಿ ಆಡುತ್ತಿದ್ದ ಕಾರಣ ಪ್ರೋತ್ಸಾಹ ನೀಡಲು ಮುಂದಾಗಿದ್ದರು. ಹೈಸ್ಕೂಲಿನ ಈ ಶಿಕ್ಷಕರೇ ವಿನಯಚಂದ್ರನನ್ನು ಚಿದಂಬರ್ ಅವರಿಗೆ ಪರಿಚಯ ಮಾಡಿಸಿದ್ದು. ಚಿದಂಬರ ಅವರ ಪರಿಚಯವಾದ ನಂತರ ವಿನಯಚಂದ್ರ ಇಂದಿನವರೆಗೂ ಮುನ್ನಡೆಯುತ್ತಲೇ ಇದ್ದಾನೆ ಎಂದರೂ ತಪ್ಪಾಗಲಿಕ್ಕಿಲ್ಲ.
**
ಕೋಚ್ ಚಿದಂಬರ ಅವರೂ ಕೂಡ ವಿನಯಚಂದ್ರನಂತೆಯೇ ಮಲೆನಾಡಿನವರು. ಮಲೆನಾಡಿನಲ್ಲಿ ಜನಿಸಿ ಹುಬ್ಬಳ್ಳಿಗೆ ಹೋಗಿ ನೆಲೆಸಿದ್ದರು ಚಿದಂಬರ್ ಅವರು. ತಮ್ಮ ಕಾಲದಲ್ಲಿ ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯ ಹಾಗೂ ದಕ್ಷಿಣ ಭಾರತ ಮಟ್ಟಗಳಲ್ಲಿ ಆಡಿ ಅನೇಕ ಸಾರಿ ರಾಷ್ಟ್ರೀಯ ತಂಡದ ಬಾಗಿಲು ಬಡಿದಿದ್ದರೂ ಕ್ರೀಡಾಲೋಕದ ರಾಜಕೀಯದ ಕಾರಣ ಇವರಿಗೆ ಅವಕಾಶ ಲಭ್ಯವಾಗಿರಲಿಲ್ಲ. ಈ ಕೊರಗು ಮರೆಯಬೇಕೆಂಬ ಕಾರಣಕ್ಕಾಗಿಯೇ ಕಬ್ಬಡ್ಡಿ ಕೋಚಿಂಗ್ ಕೊಡುವ ಕಾರ್ಯವನ್ನು ಮಾಡುತ್ತಿದ್ದರು. ಆದರೆ ವಿನಯಚಂದ್ರ ಸಿಗುವವರೆಗೂ ಅವರ ಕೋಚಿಂಗ್ ಗೆ ತಕ್ಕ ವಿದ್ಯಾರ್ಥಿ ಸಿಕ್ಕೇ ಇರಲಿಲ್ಲ. ವಿನಯಚಂದ್ರ ಸಿಕ್ಕ ನಂತರ ಆತನಿಗೆ ಕಬ್ಬಡ್ಡಿಯ ಎಲ್ಲ ಪಟ್ಟುಗಳನ್ನೂ ಕಲಿಸಿಕೊಟ್ಟಿದ್ದರು. ಅವರ ತರಬೇತಿಯ ಪರಿಣಾಮ ಆತ ಎಲ್ಲ ಕಡೆಗಳಲ್ಲಿಯೂ ಮುನ್ನಡೆದ. ಇದೀಗ ಬಾಂಗ್ಲಾದೇಶಕ್ಕೂ ಹೊರಟಿದ್ದಾನೆ.
ಬಾಂಗ್ಲಾದೇಶದಲ್ಲಿ ವಿನಯಚಂದ್ರನಿಗೆ ಹೊಸದೊಂದು ಲೋಕ ಅನಾವರಣಗೊಂಡು ಬದುಕಿನ ಇನ್ನೊಂದು ಮಜಲು ತೆರೆಯಲಿತ್ತು. ಬಾಂಗ್ಲಾದಲ್ಲಿ ನಡೆಯುವ ಕಬ್ಬಡ್ಡಿ ವಿಶ್ವಕಪ್ಪಿಗೆ ತೆರಳಲು ವಿನಯಚಂದ್ರ ತಯಾರಾಗತೊಡಗಿದ್ದ. ಹೊಸ ಕನಸುಗಳು ಆತನಲ್ಲಿ ತುಂಬಿದ್ದವು. ಬಾಂಗ್ಲಾದೇಶ, ಬೆಂಗಾಲಿ ನಾಡು ಆತನನ್ನು ಕೈಬೀಸಿ ಕರೆಯುತ್ತಿತ್ತು.
(ಮುಂದುವರಿಯುತ್ತದೆ..)