Thursday, December 19, 2013

ದ್ವಂದ್ವ




----1----
ಕೆಲವು ಸಾರಿ ನಾವು ಬೇಗ ಹೇಳಿದರೆ 
ಅಯ್ಯೋ ಇನ್ನೊಂದು ಸ್ವಲ್ಪ ದಿನ
ಕಾಯಬೇಕಿತ್ತು ಇದು ಸರಿಯಾದ 
ಸಮಯವಲ್ಲ ಎನ್ನುತ್ತಾರೆ..
ಅದೇ ಸ್ವಲ್ಪ ಲೇಟಾಗಿ ಹೇಳಿದರೆ..
ಮೊದ್ಲೇ ಹೇಳಬೇಕತ್ತೋ ಬೇಡವೋ ಅನ್ನುತ್ತಾರೆ...

ಬದುಕಲ್ಲಿ ಎಷ್ಟೆಲ್ಲ ದ್ವಂದ್ವಗಳು ಮಾರಾಯ್ರೆ...



---2----
ಬಹುದಿನಗಳ ನಂತರ 
ಮನಸ್ಸು ಖಾಲಿಯಾಗಿದೆ


---3---
ಇಲ್ಲ.. ಇಲ್ಲ...
ನಾನು ಆ ಮಹಾನಗರಿಗೆ ಹೋಗಲಾರೆ...
ಅವನ ಕೈಯನ್ನು ಹಿಡಿದು 
ನಡೆಯುವ ಅವಳನ್ನು ನಾನು
ನೋಡಲಾರೆ..


---4---
ಹೋಗುವ ಮುನ್ನ 
ಒಮ್ಮೆ ತಿರುಗಿ ನೋಡಿ
ಹೋಗಿದ್ದರೆ ಸಾಕಿತ್ತು ಗೆಳತಿ..
ಕಾರಣ ಹೇಳಲೇ ಬೇಕು
ಎಂದಿರಲಿಲ್ಲ.


--5--

ಬಹು ವರ್ಷಗಳ ನಂತರ
ಮನಸ್ಸು ಮತ್ತೆ ಖಾಲಿಯಾಗಿದೆ.*



(*ಆಸಕ್ತರು ತೂರಿಕೊಳ್ಳಬಹುದು)


--6--
ನಾನು ನಿನ್ನನ್ನೇ ಮದುವೆ ಆಗ್ಬೇಕಿತ್ತು
ಕಣೋ ತಪ್ಪು ಮಾಡಿದೆ ಛೇ..
ಅಂತನ್ನಿಸಿದರೆ 
ಹಳೇ ಪ್ರೇಮಿಯ
ಬದುಕು ಸಾರ್ಥಕ.

--7--
ಹಾಳಾದ ಕಣ್ಣು
ಅದುರಿ ಅದುರಿ
ಸೂಚನೆ ನೀಡಿದರೂ
ಮನಸ್ಸಿಗೆ ಗೊತ್ತೇ
ಆಗುವುದಿಲ್ಲ ನೋಡಿ

--8--
ವಿಚಿತ್ರ ನೋಡಿ
ಮನಸ್ಸಿಗೆ ಸುಸ್ತಾದರೆ
ಮೈಯಲ್ಲೆಲ್ಲಾ ನೋವು!

--9--
ರಸ್ತೆ ಉಬ್ಬು ತಗ್ಗಿನಂತೆ
ಬದುಕೂ...
ಎಷ್ಟು ಟಾರು ಹಾಕಿದರೂ
ಮತ್ತೆ ಮತ್ತೆ ಗಾಯ!

--10--
ಹಿಂಗೆ ಆಗ್ತದೆ
ಅಂತ ಗೊತ್ತಿದ್ದರೂ
ಸುದ್ದಿ ತಿಳಿದಾಗ ಮಾತ್ರ
ಬಹುಕಾಲ
ದಿಘಿಲು


-12-
ವ್ಯಕ್ತಿಯ ಜೊತೆಗೆ ನಂಟು 
ಕಳೆದುಕೊಳ್ಳುವುದು 
ಸುಲಭ..
ಆದರೆ ಊರಿನ ಜೊತೆಗೆ 

ಕಷ್ಟ...

-13-
ವಾದ ಹಾಗೂ ಜಗಳ..
ಎರಡು ಶಬ್ದ 

ನೂರು ಮುಖಗಳು...

-14-
ಕಥೆ 
ಮಾತಾಡಿದರೆ ಸಾಕಿತ್ತು..
ಆದರೆ ಪಾತ್ರಗಳೂ 

ಜೀವಂತವಾಗಿ ಬಂದು 
ಮಾತಾಡುತ್ತವೆ..


(ಇದನ್ನು ಕವಿತೆಯೆನ್ನಿ, ಹಾಗೆ ಬರೆದ ಸಾಲು ಎನ್ನಿ..
ಬದುಕು ಬೇಸರದಲ್ಲಿದ್ದಾಗ ಹಾಗೆ ಸುಮ್ಮನೆ ಗೀಚಿದ್ದು...
ಇಷ್ಟವಾದರೆ ಈ ಕುರಿತು ನಾಲ್ಕು ಸಾಲು ಬರೆಯಿರಿ..)

(ಶಿರಸಿಯಲ್ಲಿ ಬರೆದಿದ್ದು 19-12-2013)

Wednesday, December 18, 2013

ಶಿಲ್ಪಾ (ಕಥೆ)

                       ಅಂದು ಯಾಕೋ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಹೇಳಲಸಾಧ್ಯವಾದ ಬೇಸರ. ಮನೆಯಲ್ಲಿ ಕುಳಿತೆ, ತಿರುಗಾಡಿದೆ.. ಟಿ.ವಿ ನೋಡಿದೆ, ಪುಸ್ತಕ ಓದಿದೆ, ಮುಖೇಶನನ್ನೂ ಹಾಡಿಸಿದೆ.. ಊಹೂಂ.. ! ಏನು ಮಾಡಿದರೂ ಬೇಸರ ಹೋಗಲೊಲ್ಲದು. ಕೊನೆಗೊಮ್ಮೆ ಪುಸ್ತಕಗಳ ರಾಶಿಯ ನಡುವಿನಲ್ಲಿದ್ದ ಕಾಲೇಜು ದಿನಗಳ ಆಟೋಗ್ರಾಫ್ ನೆನಪಾಯ್ತು. ತೆರೆದು ಓದಲಾರಂಭಿಸಿದೆ.
       ಕೆಲವರ ಪ್ರಕಾರ ಆಟೋಗ್ರಾಫ್ ಬರೆಯುವುದು ಅಥವಾ ಬರೆಸುವುದು ನಿಷ್ಪ್ರಯೋಜಕ. ಆದರೆ ನನ್ನ ಪ್ರಕಾರ ಅದು ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು. ಇನ್ನೊಂದೇನಂದ್ರೆ ಬೇಸರ, ಏಕಾಂತ, ದುಃಖದ ಸಮಯದಲ್ಲಿ ಅದರಂತಹ ಖುಷಿಕೊಡುವ ವಸ್ತು ಇನ್ನೊಂದಿಲ್ಲ.
       ನಾನು ಹಾಗೆಯೇ ಅದನ್ನು ಓದುತ್ತಾ ಹೋದಂತೆ ನೆನಪಿನಾಳದಿಂದ ಮಾಸಿ ಹೋಗಿದ್ದ ಗೆಳೆಯರೆಲ್ಲ ಮತ್ತೆ ನೆನಪಿಗೆ ಬಂದರು. ಎಸ್ಸೆಎಸ್ಸೆಎಲ್ಸಿಯ ಗೆಳೆಯರು, ಪಿಯುಸಿಯ ದೋಸ್ತು, ಡಿಗ್ರಿಯ ಗೆಳೆಯ ಗೆಳತಿಯರೆಲ್ಲ ನೆನಪಿನಂಗಳಕ್ಕೆ ಧುತ್ತೆಂದು ಬಂದರು. ಆಗ ಕಳೆದ ಸಮಯ, ಮೋಜು-ಮಸ್ತಿ-ಮಜಾ-ಹರಟೆ-ಜಗಳ ಮುಂತಾದ ಸನ್ನಿವೇಶ ನೆನಪಿಗೆ ಬಂದಿತು.
       ಪ್ರೀತಿಯ ಮಿತ್ರ ವಿಜಯ, ಆದಿತ್ಯ ನೆನಪಾದರು. ಕಮಲಾಕರ ನೆನಪಿಗೆ ಬಂದ. ಅದಲ್ಲದೇ ಡಿಗ್ರಿಯ ಗೆಳೆಯರಾಗಿದ್ದ ರಾಘು, ಕಿಟ್ಟು ಅವರೂ ನೆನಪಿಗೆ ಬಂದರು. ಹೀಗೆ ತಿರುವುತ್ತ ಸಾಗಿದಂತೆ ಕೊಟ್ಟ ಕೊನೆಯಲ್ಲಿ ಇದ್ದ ೊಂದು ಆಟೋಗ್ರಾಫ್ ನನ್ನ ನದುಕಿಗೆ ಸಂತಸವನ್ನೀಯುತ್ತಿತ್ತು. ಆ ಆಟೋಗ್ರಾಫ್
ಸ್ನೇಹದ ಗುಂಗಲ್ಲಿ ಮೈಮರೆತು
ಪ್ರೇಮ ಪಯಣದಲ್ಲಿ ಕನಸುಗಳನ್ಹೊತ್ತು
ಸಾಗುವ ಜೀವನ ನೌಕೆಗೆ ಸಾಟಿಯಾಗಬಲ್ಲದೇ
ಕಡಲಿನ ಆ ಭಾರಿ ಮುತ್ತು
ಎನ್ನುವ ವಾಕ್ಯ-ಚುಟುಕದೊಂದಿಗೆ ಪ್ರಾರಂಭವಾಗಿತ್ತು. ಅದನ್ನು ಬರೆದಾಕೆಯೇ ಶಿಲ್ಪಾ.ನನಗೆ ಬಿ.ಎ ಓದುವಾಗ ಸಿಕ್ಕ ಓರ್ವ ಕವಯಿತ್ರಿ ಗೆಳತಿ ಈಕೆ.
        ನಿಜವಾಗ್ಲೂ ಹೇಳಬೇಕಂದ್ರೆ ಆಕೆ ನನಗೆ ಗೆಳತಿಯಾಗಿ ಸಿಕ್ಕ ಅವಧಿ ಕೇವಲ ಮೂರು ತಿಂಗಳ ಕಾಲ ಮಾತ್ರ. ಹಾಗೆ ಅವಳು ಬರೆದ ಆಟೋಗ್ರಾಫ್ ಓದಿದ ನಂತರ ಮನದಲ್ಲಿ ಅವಳ ನೆನಪೇ ತುಂಬಿತ್ತು. ಹಾಗೇ ಅವಳ ಬದುಕು, ಹಲವು ವಿಚಿತ್ರ ತಿರುವುಗಳಿಗೆ ಸಿಲುಕಿದ ಕ್ಷಣಗಳೆಲ್ಲ ನಿಧಾನವಾಗಿ ನೆನಪಿಗೆ ಬರಲಾರಂಭವಾದವು.

**

       ಶಿಲ್ಪಾ ಓರ್ವ ಸುಸಂಸ್ಕೃತ ಮನೆತನದಾಕೆ. ಆಕೆಯ ಊರು ಶಿರಸಿಯ ಸಮೀಪದ ಒಂದು ಚಿಕ್ಕ ಹಳ್ಳಿ. ಓದಿನಲ್ಲಿ ಬಹಳ ಚುರುಕು. ಉತ್ತಮ ಹಾಡುಗಾರ್ತಿಯೂ ಹೌದು. ಓರ್ವ ಯುವ ಕವಯಿತ್ರಿಯಾಗಿದ್ದ ಈಕೆಯನ್ನು ನನಗೆ ಪರಿಚಯಿಸಿದ್ದು ಇನ್ನೋರ್ವ ಗೆಳತಿ ಚೈತ್ರಾ. ಒಂದು ದಿನ ನಾನು ಆಗ ಬಿ.ಎ. ಗೆ ಸೇರಿ 15-20 ದಿನವಾಗಿತ್ತಷ್ಟೇ. ಆಗಸ್ಟೇ ಪ್ರಾರಂಭವಾಗಿದ್ದ ಸೆಮಿಸ್ಟರ್ ಪದ್ಧತಿ. ಅಂದು ಬಹುಶಃ ಇಂಗ್ಲೀಷ್ ಕ್ಲಾಸಿರಬೇಕು. ಮುಗಿದಿತ್ತಷ್ಟೇ. ಆಗ ಬಂದ ಈಕೆ ನನ್ಹತ್ರ `ಏನೋ.. ನೀನು ಕಥೆ.. ಕವನ ಬರೀತಿಯಂತೆ.. ನಂಗೊಮ್ಮೆ ತೋರಿಸು..' ಎಂದಳು.
       ನನಗೆ ಚಿಕ್ಕ ಷಾಕ್. ಯಾರಪ್ಪಾ ಹೀಗೆ ಸಡನ್ನಾಗಿ ಬಂದು ಕೇಳ್ತಿದ್ದಾಳೆ ಅಂದ್ಕೊಂಡು ವಿಸ್ಮಯದಿಂದ `ಯಾರು ನಿಂಗೆ ಹೇಳಿದ್ದು..?' ಎಂದೆ.
       ಆಕೆ ತೋರಿಸಿದ್ದು ಬಾಲ್ಯದ ಹಾಗೂ ಗೆಳತಿ ಚೈತ್ರಾಳನ್ನು. ಹೀಗೆ ಪರಿಚಯವಾದ ಶಿಲ್ಪಾ ಆಕೆ ಬರೆದ ಕವಿತೆಗಳನ್ನು ನನಗೆ ತೋರಿಸಿದ್ದಳು. ನನ್ನ ಬಳಿ ಸಲಹೆಯನ್ನೂ ಪಡೆದುಕೊಂಡಿದ್ದಳು. ನಾನೂ ಕವಿತೆಗಳನ್ನು, ಬರಹಗಳನ್ನು ನೀಡಿ ಸಲಹೆಯನ್ನು ಪಡೆದುಕೊಂಡಿದ್ದೆ. ಸಮಾಜಸೇವೆ ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದ ಆಕೆ ಅದೇ ಕಾರಣಕ್ಕಾಗಿ ಕಾಲೇಜಿನ ಎನ್.ಎಸ್.ಎಸ್. ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಳು.
       ಅವಳ ಪರಿಚಯವಾಗಿ ಒಂದೆರಡು ತಿಂಗಳುಗಳು ಕಳೆದಿರಬಹುದಷ್ಟೇ. ಆಗಲೇ ನನಗೆ ಗೊತ್ತಾಗಿದ್ದು ಅವಳ ಮದುವೆ ಅಂತ. ನಿಜಕ್ಕೂ ಶಾಕ್ ಆಗಿದ್ದೆಂದರೆ ಅಷ್ಟು ಚಿಕ್ಕ ವಯಸ್ಸಿಗೆ ಮದುವೆ ಮಾಡ್ತಾರೆ ಅನ್ನೋ ಸುದ್ದಿಯನ್ನು ಕೇಳಿ.
       ಒಂದು ದಿನ ಆಕೆ ಕಾಲೇಜಿಗೆ ಬಂದವಳೆ ತನ್ನ ಎಂಗೇಜ್ ಮೆಂಟ್ ಇದೆಯೆಂದೂ ಅದಕ್ಕೆ ತಪ್ಪದೇ ಬರಬೇಕೆಂದೂ ತಿಳಿಸಿದಳು. ಆಗ ಎನ್.ಎಸ್.ಎಸ್. ಶಿಬಿರ ನಡೆಯುತ್ತಿತ್ತು. ಆಕೆಯ ಸಮಾಜಸೇವೆಯ ಗುರಿಯನ್ನು ಬಿಟ್ಟು, ಎನ್.ಎಸ್.ಎಸ್. ಶಿಬಿರವನ್ನೂ ಅರ್ಧದಲ್ಲಿಯೇ ಬಿಟ್ಟು ಬಂದಿದ್ದಳು. ಆಕೆಯ ಒತ್ತಾಯಕ್ಕೆ ಮಣಿದು ನಾನು ಹಾಗೂ ಚೈತ್ರಾ ನಿಶ್ಚಿತಾರ್ಥಕ್ಕೆ ಹೋಗಿ ಬಂದೆವು. ಆಗ ಆಕೆ ಅವಳ ಭಾವಿ ಪತಿಯನ್ನು ಪರಿಚಯಿಸಿದಳು.
       ಅವಳ ಭಾವಿ ಪತಿಯ ಹೆಸರು ಜಗದೀಶ. ಆತ ಸಾಗರ ಕಡೆಯ ಹಳ್ಳಿಯವನು. ಹುಬ್ಬಳ್ಳಿಯಲ್ಲಿ ಉತ್ತಮ ಉದ್ಯೋಗದಲ್ಲಿದ್ದ ಆತ. ಬಹಳ ತೆಳ್ಳಗಿದ್ದ ಶಿಲ್ಪನ ಎದುರು ಆಕೆಗಿಂತ ಎರಡುಪಟ್ಟು ದಪ್ಪವಾಗಿದ್ದ ಎನ್ನುವುದನ್ನು ಬಿಟ್ಟರೆ ಒಳ್ಳೆಯ ಮನಸ್ಸಿನ ವ್ಯಕ್ತಿ ಆತ. ಅಂದು ಮದುವೆಯ ದಿನಾಂಕವನ್ನೂ ನಿಶ್ಚಯಿಸಲಾಯಿತು. ಅದಕ್ಕೆ ಹೋಗಿ ಬಂದದ್ದೂ ಆಯಿತು. ಆಕೆಯ ಬಳಿ `ನಿನ್ನ ಬಾಳ್ದೋಣಿ ಸುಖವಾಗಿರಲಿ..' ಎಂದು ಆಶಿಸಿದ್ದೂ ಆಯಿತು. ಅದೆಷ್ಟು ಬೇಗ ನನಗೆ ಪರಿಚಯವಾಗಿದ್ದಳೋ ಅಷ್ಟೇ ಬೇಗ ಅವಳ ಮದುವೆಯೂ ಆಗಿತ್ತು.
        ಅವಳ ಮದುವೆಯ ದಿನ ಮಿತ್ರನೋರ್ವ ಅವಳಿಗೆ ಟ್ಯೂಬ್ ಲೈಟ್, ಪಟಾಕಿ ಎಂದೆಲ್ಲಾ ಹೆಸರಿಟ್ಟಿದ್ದನ್ನು ಆತ `ಟ್ಯೂಬಲೈಟ್ ಮದುವೆ ವೆರಿ ವೆರಿ ಫಾಸ್ಟ್..' ಎಂದು ಹೇಳಿ ನಗಿಸಿದ್ದ. ಈ ಮುಂತಾದ್ದೆಲ್ಲಾ ಆ ಆಟೋಗ್ರಾಫ್ ಓದಿ ಮುಗಿಸುವ ವೇಳೆಗೆ ನನ್ನ ತಲೆಯಲ್ಲಿ ತುಂಬಿತ್ತು. ಒಮ್ಮೆಲೆ ಸಣ್ಣಗೆ ನಕ್ಕೆ.


**

      ಆಕೆಯನ್ನೊಮ್ಮೆ ಈಗ ಭೇಟಿಯಾಗಬೇಕಲ್ಲ ಎಂದು ನಿರ್ಧರಿಸಿ ಮರುದಿನ ಆಕೆಯ ತವರೂರಿಗೆ ಹೋದೆ. ಅಲ್ಲಿ ಆಕೆಯ ತಂದೆ ತಾಯಿಯರ ಬಳಿ ಶಿಲ್ಪಾಳ ಗಂಡನ ಮನೆಯ ವಿವರ ತಿಳಿಯುವುದು ನನ್ನ ಉದ್ದೇಶವಾಗಿತ್ತು. ಅವರ ಬಳಿ ಕೇಳಿದೆ. ಅವರು ಹೇಳಿದರು. ಆಮೇಲೆ ನಾನು ನೇರವಾಗಿ ಆಕೆಯ ಗಂಡನ ಮನೆಯತ್ತ ತೆರಳಿದೆ. ಸಾಗರದ ವರದಳ್ಳಿಯ ಸನಿಹದ ಊರಲ್ಲಿ ಆಕೆಯ ಗಂಡನ ಮನೆ. ಅಲ್ಪ ಸ್ವಲ್ಪ ಹುಡುಕಾಟದ ನಂತರ ಆಕೆಯ ಮನೆ ಸಿಕ್ಕಿತು. ಇದ್ದಾಳೋ, ಇಲ್ಲವೋ,.. ಇದ್ದರೇ ಹೇಗೆ ಮಾತನಾಡುವುದು, ಇಲ್ಲದಿದ್ದರೆ ಏನು ಮಾಡುವುದು ಈ ಮುಂತಾದ ಗೊಂದಲದ ಗೂಡಿನಂತಹ ಮನಸ್ಸಿನೊಂದಿಗೆ ಆಕೆಯ ಮನೆಯ ಕಾಲಿಂಗ್ ಬೆಲ್ ಒತ್ತಿದೆ.
        ಯಾರೋ ಹಿರಿಯರು ಮನೆಯ ಬಾಗಿಲು ತೆರೆದರು. ವಿಚಾರಿಸಿದಾಗ ತಾನು ಶಿಲ್ಪಾಳ ಮಾವ ಎಂದರು. ಮನೆಯೊಳಗೆ ಕರೆದು ಕುಳ್ಳಿರಿಸಿ ತಮ್ಮ ಮನೆಯಾಕೆಗೆ ನನ್ನನ್ನು ಪರಿಚಯಿಸಿದರು. ಕೊನೆಗೆ ಶಿಲ್ಪಾ ಹಾಗೂ ಜಗದೀಶರ ಬಗ್ಗೆ ವಿಚಾರಿಸಿದೆ. ಅವರು ಹುಬ್ಬಳ್ಳಿಯಲ್ಲಿದ್ದಾರೆಂದೂ ಅಲ್ಲಿಗೆ ಹೋದರೆ ಸಿಗಬಹುದೆಂದೂ ತಿಳಿಯಿತು. ನಾನು ಹುಬ್ಬಳ್ಳಿಗೂ ಹೋದೆ. ಶಿಲ್ಪಾಳ ಅತ್ತೆ-ಮಾವ ಕೊಟ್ಟ ವಿಳಾಸದಿಂದ ಮನೆ ಹುಡುಕುವುದು ಕಷ್ಟವೇನೂ ಆಗಲಿಲ್ಲವೆನ್ನಿ.
         ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ. ಒಳಗಿನಿಂದ ಓರ್ವ ವ್ಯಕ್ತಿ ಬಂದು ಬಾಗಿಲು ತೆರೆದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಒಳಗೆ ಕರೆದು ಕುಳ್ಳಿರಿಸಿದ ವ್ಯಕ್ತಿಯೇ ಜಗದೀಶ್ ಎಂದು ಆ ನಂತರ ನನಗೆ ತಿಳಿಯಿತು. ಮವುವೆಯಾಗಿ 7 ವರ್ಷವಾದ ನಂತರ ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದ ಕಾರಣ ತಕ್ಷಣಕ್ಕೆ ಅವರ ಗುರುತು ನನಗೆ ಹಿಡಿದಿರಲಿಲ್ಲ. ಅವರ ಬಳಿ ಶಿಲ್ಪಾಳ ಬಗ್ಗೆ ವಿಚಾರಿಸಿದೆ. ಆಗ ಅವರು `ಅವಳು.. ಈಗಷ್ಟೇ ತವರಿಗೆ ಹೋದಳಲ್ಲ.. ' ಎಂದರು.
         ಆಕೆಯನ್ನು ನೋಡಿ ಮಾತಾಡಿಸಿ ಹೋಗೋಣ ಎಂದುಕೊಂಡಿದ್ದ ನನಗೆ ಒಮ್ಮೆ ಭ್ರಮನಿರಸನವಾದರೂ ಜಗದೀಶರ ಬಳಿ `ಆಕೆ ಚನ್ನಾಗಿದ್ದಾಳಾ..' ಎಂದು ಕೇಳಿದೆ.
         ಆಗ ಅವರು `ನೋಡಿ ಇವ್ರೆ... ನಿಮ್ಮ ಬಗ್ಗೆ ಅನೇಕ ಸಾರಿ ನನ್ನ ಹತ್ತಿರ ಹೇಳಿದ್ದಾಳೆ.. ನಾನೂ ಕುತೂಹಲದಿಂದ ನಿಮ್ಮ ಬಗ್ಗೆ ವಿಚಾರಿಸಿದ್ದೆ. ಮೊನ್ನೆ ನಿಮ್ಮದೊಂದು ಪುಸ್ತಕ ಬಿಡುಗಡೆಯಾಯಿತಲ್ಲ.. ಆಗ ಹುಬ್ಬಳ್ಳಿಯಲ್ಲಿ ನಿಮ್ಮ ಪುಸ್ತಕಗಳಿಗಾಗಿ ಎಲ್ಲ ಅಂಗಡಿಗಳನ್ನು ಜಾಲಾಡಿದ್ದಳು.. ಅಷ್ಟೇ ಅಲ್ಲ ನನಗೂ ಆದಿನ ಅದೇ ಕೆಲಸ ಮಾಡಿಸಿದಳು.. ಸಿಗಲಿಲ್ಲ ಬಿಡಿ..' ಎಂದರು.
        `ಏನ್ ಮಾಡ್ತಿದ್ದಾಳೆ ಆಕೆ..? ' ಎಂದೆ..
        `ಆಗ ಅವರು `ನೋಡಿ ಈ ಶಿಲ್ಪಾಳದ್ದು ಸುಮ್ಮನಿರ ಗುಣವಲ್ಲ. ಸದಾ ಏನಾದರೂ ಮಾಡ್ತಾ ಇರಬೇಕು ಅನ್ನೋ ಮನೋಭಾವ.. ಕುಂತಲ್ಲಿ ಕೂರೋದಿಲ್ಲ.. ಆಕೆಯ ವೇಗಕ್ಕೆ ಅನೇಕ ಸಾರಿ ನಾನೇ ಸೋತು ಸುಣ್ಣವಾಗಿದ್ದೇನೆ.. ಹುಬ್ಬಳ್ಳಿಗೆ ಬಂದ ಹೊಸತರಲ್ಲಿ ಬೆಕ್ಕಿನ ಮರಿಯಂತಿದ್ದಳು.. ಕ್ರಮೇಣ ಹುಬ್ಬಳ್ಳಿಯೆಲ್ಲ ಚಿರಪರಿಚಿತವಾಯ್ತು ನೋಡಿ.. ಅದೇನೇನು ಮಾಡಿದಳೋ.. ಹೇಗೆ ಮಾಡಿದಳೋ ಗೊತ್ತಿಲ್ಲ.. ಪ್ರಾರಂಭದಲ್ಲಿ ಕಾನ್ವೆಂಟೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡಿದಳು.. ಆಕೆಯ ಶ್ರದ್ಧೆಯೋ.. ಒಳ್ಳೆಯ ಗುಣವೋ.. ನಸೀಬೋ ಗೊತ್ತಿಲ್ಲ...ಈಗ ಎರಡು ಶಾಲೆಗಳನ್ನು ನಡೆಸುತ್ತಿದ್ದಾಳೆ.. ಒಂದು ಶಾಲೆಯಂತೂ ಬುದ್ಧಿಮಾಂದ್ಯರಿಗಾಗಿ ಆರಂಭಿಸಿದ್ದಾಳೆ.. ' ಎಂದು ಹೇಳಿದಾಗ ನನ್ನ ಮನಸ್ಸು she is great ಎಂದು ಉದ್ಘರಿಸಿತು.
         ನಾನು ಜಗದೀಶರ ಬಳಿ ಅವಳಿಗೆ ಇಷ್ಟವೆಂದು ಮಾಡಿಸಿಕೊಂಡು ಬಂದಿದ್ದ ಚಕ್ಕುಲಿಯನ್ನು ನೀಡಿದೆ. ಅವರಿಗೆ ಏನೋ ನೆನಪಾದಂತಾಗಿ ಎದ್ದು ಹೋಗಿ ಟಿ. ಮಾಡಲು ಹೊರಟರು. ಭವ್ಯ ಮನೆ.. ಕೆಲಸಗಾರರಿಲ್ಲವಲ್ಲ ಎಂದು ವಿಸ್ಮಿತನಾಗುವಷ್ಟರಲ್ಲಿ ಶಿಲ್ಪಾ ಇದ್ದಲ್ಲಿ ಅಂತದ್ದಕ್ಕೆ ಛಾನ್ಸೇ ಇಲ್ಲ ಬಿಡಿ ಎಂದು ಕೊಂಡೆ..
         ಅವರು ಟಿ. ಮಾಡಲು ಹೋಗುವ ಮುನ್ನ ಮನೆಯಿಲ್ಲಿದ್ದ ಸಿ.ಡಿ. ಪ್ಲೇಯರ್ರಿಗೆ ಯಾವುದೋ ಒಂದು ಸಿ.ಡಿಯನ್ನು ಹಾಕಿ ಕೇಳ್ತಾ ಇರಿ.. ಈಗ ಬಂದೆ ಎಂದು ಹೋದರು. ಆ ಸಿ.ಡಿ ನನಗೆ ಅತ್ಯಂತ ಇಷ್ಟವಾದ  ಕೆ. ಎಸ್. ನಿಸಾರ್ ಅಹಮದರ
ಮತ್ತದೇ ಬೇಸರ
ಅದೆ ಸಂಜೆ.... ಅದೆ ಏಕಾಂತ...
ಎಂಬ ಹಾಡನ್ನು ಹಾಡುತ್ತಿತ್ತು. ಎಲ್ಲೋ ಕೇಳಿದ ಕಂಠ ಎಂದುಕೊಂಡೆ.. ರತ್ನಮಾಲಾ ಪ್ರಕಾಶ ನೆನಪಿಗೆ ಬಂದರು. ಆದರೆ ಧ್ವನಿ ಅವರದ್ದಲ್ಲ.. ಗಮನಿಸಿ ಕೇಳಿದಾಗ ಅದು ಶಿಲ್ಪಾಳದ್ದೆಂದು ಮನದಟ್ಟಾಯಿತು. ಅರೇ... ಈಕೆ ಹಾಡಿದ ಸಿ.ಡಿ.ಯೂ ಬಿಡುಗಡೆಯಾಗಿದೆಯಾ.. ಯಾಕೆ ನನಗೆ ಗೊತ್ತಾಗಲಿಲ್ಲ.. ಎಂದುಕೊಂಡೆ.
         ಆಕೆಯ ಎಂಗೇಜ್ ಮೆಂಟ್ ಆದ ನಂತರ ಆಕೆಯನ್ನು ನನ್ನ ಮನೆಗೊಮ್ಮೆ ಕರೆದೊಯ್ದಿದ್ದೆ. ಈಕೆ ಹಾಡುತ್ತಾಳೆ ಎಂದು ಗೊತ್ತಿದ್ದಿದ್ದರಿಂದ ನಮ್ಮ ಮನೆಯಲ್ಲಿ ಆಕೆಯ ಬಳಿ ಹಾಡೆಂದು ಪೀಡಿಸಿದಾಗ `ಹೆಂಗಾರಾ ಬಾರಾ ಹುಡುಗಿ ಕಂಗಾಲಾದೇನಾ..' ಹಾಗೂ `ಹುಚ್ಚು ಖೋಡಿ ಮನಸ್ಉ...' ಎಂಬೆರಡು ಹಾಡುಗಳನ್ನು ಹಾಡಿದ್ದಳು.. ನಮ್ಮ ಮನೆಯವರಷ್ಟೇ ಅಲ್ಲದೇ ಅಕ್ಕಪಕ್ಕದ ಮನೆಯ ಶ್ರೋತೃಗಳ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಳು. ಆ ಸಿ.,ಡಿಯಲ್ಲಿ ಆ ಎರಡು ಹಾಡುಗಳೂ ಇದ್ದವು. ಕೇಳಿದಂತೆಲ್ಲ ಭಾವನೆಗಳು ಬಯಸಿ ಬಯಸಿ ಬರುತ್ತಿದೆಯೇನೋ ಅನ್ನಿಸುತ್ತಿತ್ತು. ಅವುಗಳನ್ನು ಕೇಳುವಷ್ಟರಲ್ಲಿ ಜಗದೀಶ್ ಅವರು ಟಿ. ತಂದರು. `ನೀವು ಬಹಳ ಬದಲಾಗಿದ್ದೀರಿ..' ಎಂದೆ.. `ಹೌದು.. ಸುಮ್ಮನೆ ಕೂರೋಕೆ ಬಿಡೋದಿಲ್ಲ ನೋಡಿ.. ತೆಳ್ಳಗಾಗಿದ್ದೇನೆ..' ಎಂದು ನಕ್ಕರು.. ಅವರ ಸರಳತೆ ನನಗಿಷ್ಟವಾಯಿತು.
         ನಾನು ಹೊರಡಲನುವಾದೆ.. ಊಟ ಮಾಡಿ ಹೋಗಿ ಎನ್ನುವ ಬಲವಂತ.. ನಾನೆಷ್ಟೇ ಕೇಳಿದರೂ ಬಿಡಲಿಲ್ಲ.. ಪರಿಣಾಮ ಅವರ ಮನೆಯ ಊಟದ ಋಣವನ್ನು ಮುಗಿಸಿದಂತಾಯಿತು. ಶಿಲ್ಪಾಳ ಬಳಿ ಮಾತನಾಡಿ ಎಂದು ಮೊಬೈಲ್  ರಿಂಗಿಸಿದರು. ನೆಟ್ ವರ್ಕ್ ಸಿಗದ ಕಾರಣ ಅದು ವ್ಯರ್ಥವಾಯಿತು. ಕೊನೆಗೆ ನಾನು ಹೊರಡಲು ಅನುವಾದೆ.. ಸಂತಸದಿಂದ ಹಾರಯಿಸಿ ಆಕೆಯ ಹಾಡಿನ ಸಿ.ಡಿ.ಯೊಂದನ್ನು ಕೊಟ್ಟರು. ನಾನು ಏನು ಮಾಡಬೇಕೆಂದು ತೋಚದೆ ನನ್ನ ಪುಸ್ತಕವನ್ನು ಅವರಿಗೆ ಕೊಟ್ಟೆ.. ಜಗದೀಶರ ಮುಖ ಅರಳಿ ಊರಗಲವಾಯಿತು. `ನೋಡ್ರಿ... ನಾನು ಕಾಯ್ತಾ ಇದ್ದೆ.. ಬಹಳ ದಿನ ಆಗಿತ್ತು.. ಅವಳು ವಾಪಸ್ಸು ಬರಲಿ.. ಸರ್ ಪ್ರೈಸ್ ಕೊಡ್ತೀನಿ..' ಎಂದರು.. ಅವರ ಅನ್ಯೋನ್ಯತೆ ಕಂಡು ಮನಸ್ಸು ಹಿಗ್ಗಿತು.
           ಮನೆಯ ಕಡೆಗೆ ಹೊರಟಾಗ ಆಕೆಯ ಸಾಧನೆಯ ಬಗ್ಗೆ ನನಗೆ ಗೌರವ ಉಂಟಾಯಿತು. ಸಮಾಜಸೇವೆಯನ್ನು ಗುರಿಯಾಗಿಟ್ಟುಕೊಂಡು, ಮಧ್ಯದಲ್ಲಿ ಅಡೆ ತಡೆ ಬಂದರೂ ಬಂದ ಸಮಸ್ಯೆಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಸಾಧನೆ ಮಾಡಿದ ಆಕೆಯ ಕಡೆಗೊಂದು ಸಂತಸದ ಭಾವ ಮೂಡಿತು. ತನ್ನ ಗುರಿಯನ್ನು ಪತಿಯ ಸಹಯೋಗದೊಂದಿಗೆ ಮಾಡಿ ಮುಟ್ಟಿದ್ದು ಮತ್ತಷ್ಟು ಹಿರಿಮೆಗೆ ಕಾರಣವಾಯಿತಲ್ಲದೇ ಮನಸ್ಸು ಹ್ಯಾಟ್ಸಾಫ್ ಎನ್ನುತ್ತಿತ್ತು.. ಮನಸ್ಸಿನಲ್ಲಿ ಮಾತ್ರ
`ಮತ್ತದೇ ಬೇಸರ..
ಅದೆ ಸಂಜೆ.. ಅದೆ ಏಕಾಂತ..' ಎಂಬ ನಿಸಾರರ ಹಾಡು ಬಿಟ್ಟು ಬಿಡದೇ ಗುನುಗಿ ಕಾಡುತ್ತಿತ್ತು.. ಇಂತಹಾ ಗೆಳತಿಯನ್ನು ಪರಿಚಯಿಸಿದ ಚೈತ್ರಾಳಿಗೆ ಮನಸ್ಸು ಥ್ಯಾಂಕ್ಸ್ ಎನ್ನುತ್ತಿತ್ತು..7

Tuesday, December 17, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 10

ಕಪ್ಪಿನೊಂದಿಗೆ ನಮ್ಮ ತಂಡ
ನಾನು ತೃಪ್ತಿ ಹಾಗೂ ಕಿಟ್ಟು ಅವರ ಮಾತನ್ನು ಕೇಳುತ್ತ ಹಾಗೇ ಸಂಗಮವನ್ನು ನೋಡಿದೆ. ಕೆಂಪು ನೀರು.. ರಕ್ತದಂತೆ ರಭಸದಿಂದ ಉಕ್ಕಿ ಹರಿದಿತ್ತು. `ಹರಿ.. ಹರಿ.. ಎಸ್ಟ್ ದಿನಾ ಅಂತ ಹರೀತಿಯಾ... ? ಹುಡುಗಿಯರ ಆರ್ಭಟ.. ಅಬ್ಬರ ಏನಿದ್ರೂ ಮದುವೆ ಆಗೋವರಿಗಂತೆ.. ಆ ಮೇಲೆ ಏನಿಲ್ಲ.. ನೀನು ಇನ್ನೆಷ್ಟು ದಿನಾ ಅಂತ ಹೀಗೆ ಹುಚ್ಚೆದ್ದು ಹರೀತಿಯಾ..?' ಅನ್ನುತ್ತಾ ನಗುತ್ತಾ ಕೃಷ್ಣೆ ಮಲಪ್ರಭೆಗೆ ಹೇಳುತ್ತಾ ಸೌಮ್ಯವಾಗಿ ಹರಿಯುತ್ತಿದ್ದಾಳೇನೋ ಅನ್ನಿಸುತ್ತಿತ್ತು.
`ಕಿಟ್ಟು... ಕೃಷ್ಣೆಯ ನಿಲುವು ಅದೆಷ್ಟು ಭವ್ಯ ಅಲ್ಲ.. ಎಲ್ಲೋ ಹುಟ್ಟಿ, ಹರಿದು, ದೂರ ದೂ...ರ ಸಾಗಿ, ಸನಿಹ ಬಂದ ನದಿಗಳನ್ನೆಲ್ಲ ಬರಸೆಳೆದು ತೆಕ್ಕೆಗೆ ಹಾಕಿ ದೈತ್ಯವಾಗಿ ಎಲ್ಲೋ ಸಮುದ್ರ ರಾಜನ ಸನ್ನಿಧಿ ಸೇರ್ತದಲ್ಲಾ.. ಎಂಥಾ ನದಿಯಲ್ವಾ..' ಎಂದೆ..
`ನಿಜ.. ಈ ಕೃಷ್ಣ ಹೇಳದು ಇದ್ದಲಾ ಅದೇ ಹಂಗೆ..ಕೃಷ್ಣ ಯಾವತ್ತಿದ್ದರೂ ಯಾರಿದ್ರೂ ಎಲ್ಲಿದ್ರೂ ಭವ್ಯವೇ..' ಅಂದ..
ನಾನು ನಕ್ಕು ಸುಮ್ಮನಾದೆ..ಅಲ್ಲೂ ನಮ್ಮ ಪೋಟೋ ಸೆಷನ್ ಮುಗಿಯಿತು.. ಆ ನಂತರ ಕೂಡಲ ಸಂಗಮಕ್ಕೆ ನಾವು ಭೆಟಿ ನೀಡಿದ ನೆನಪಿಗಾಗಿ ಹಲವು ವಸ್ತುಗಳನ್ನು ಕೊಂಡದ್ದಾಯ್ತು.. ಎಲ್ಲರೂ ಏನೇನು ಕೊಂಡರೋ.. ನಾನೊಂದು ಸ್ಫಟಿಕ ಶುಭ್ರ ಶಿವಲಿಂಗ ಕೊಂಡೆ.. ಅದೆಷ್ಟು ಚನ್ನಾಗಿತ್ತು. ಆಹ್.. ಖೂಬ್ ಸೂರತ್.. ಹಾಗೇ ಅದನ್ನು ಜೋಪಾನವಾಗಿಟ್ಟುಕೊಂಡು ಕೂಡಲಕ್ಕೆ ಬಾಯ್ ಎಂದೆವು..
ವಾಪಾಸು ಕೂಡಲ ಕತ್ರಿಗೆ ಬರುವ ವೇಳೆಗೆ ಮಲಪ್ರಭೆಗೆ ಬಂದಿದ್ದ ನೆರೆ ಕೊಂಚ ಇಳಿದಿತ್ತು.. ಹಾಗಾಗಿ ಸೇತುವೆ ಬಂದಾಗಲೆಲ್ಲ ಇಳಿದು ದಾಟುವ ಕಾರ್ಯ ಬರಲಿಲ್ಲ.. ಆದರೆ ರಾಡಿ ಸಾಕಷ್ಟಿತ್ತು.. ಕಪ್ಪು ಕಪ್ಪು ರಗಡ್..

ಇಳಕಲ್ಲಿಗೆ ಆಟೋದಲ್ಲಿ..
ಕೂಡಲ ಕ್ರಾಸಿಗೆ ಇಳಕಲ್ಲಿನಿಂದ 41 ಚಿಲ್ಲರೆ ಕಿಲೋಮೀಟರ್ ದೂರ. ಇಳಕಲ್ಲಿಗೆ ಹೋದರೆ ಮಾತ್ರ ನಮಗೆ ಹುಬ್ಬಳ್ಳಿಗೆ ಹೋಗಲು ಬಸ್ಸು. ಇಲ್ಲವಾದರೆ ಕೊಂಚ ತಾಪತ್ರಯವೇ. ಆ ಕೂಡಲ ಕ್ರಾಸಿನಲ್ಲಿ ಎಷ್ಟು ಹೊತ್ತು ಕಾದರೂ ಬಸ್ಸುಗಳನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ಯಾಸೆಂಜರ್ ಆಟೋ ರಿಕ್ಷಾವೊಂದು ಇಳಕಲ್ಲಿಗೆ ಹೋಗೋದಿತ್ತು. ಆಟೋದವನು ನಮ್ಮ ಬಳಿ `ಬರ್ತೀರೇನ್ರಿ..' ಅಂದ.. ನಾವು ಹಿಂದು ಮುಂದು ನೋಡುತ್ತಿದ್ದಾಗಲೇ ಗೌಡರು `ಹೌದು..ಎಷ್ಟು ತಗೋತೀರಿ..' ಎಂದುಬಿಟ್ಟರು.
ಕಿಟ್ಟು, ಪಾವಸ್ಕರ ಗಾಬರಿಯಿಂದ `ಸರ್.. ಇದರಲ್ಲಿ ಹೋಗೋದಾ..?' ಎಂದರು.
`ಹೌದಪ್ಪಾ.. ಸೋವಿಯಾಗ್ತದಂತೆ.. ನಡ್ರಿ..' ಎಂದರು ಗೌಡರು.
ಏನ್ ಮಾಡೋದು..? ಒಲ್ಲದ ಮನಸ್ಸಿನಿಂದ ಗಾಡಿಯೇರಿದೆವು. ನಾವಲ್ಲದೇ ಮತ್ಯಾರೋ ಎರಡು ಜನ ಇಳಕಲ್ಲಿಗೆ ಹೋಗುವವರು ಅದರಲ್ಲಿ ಕುಳಿತರು. ನಿಧಾನವಾಗಿ ಹೊರಟಿತು ಆಟೋ.
ದಾರಿಯಿನ್ನೂ ಕಾಲು ಭಾಗ ಸವೆದಿಲ್ಲ ನಮಗೆ ಬೇಜಾರು ಬಂದು ಬಿಟ್ಟಿತು. ಕಿಟ್ಟು-ತೃಪ್ತಿಯರ ಪಂಚಿಂಗ್ ಡೈಲಾಗುಗಳ ಸರಮಾಲೆ ಓತಪ್ರೋತವಾಗಿ ಸಾಗಿತ್ತಾದರೂ ಅದನ್ನೇ ಎಷ್ಟೊತ್ತು ಅಂತ ಕೇಳೋದು..? ಕೊನೆಗೆ ನಾವು ಅಂತ್ಯಾಕ್ಷರಿಯನ್ನು ಶುರು ಹಚ್ಚಿಕೊಂಡೆವು. ಮಧ್ಯದಲ್ಲೆಲ್ಲೋ ಮುಡು ಬಂದ ಕಾರಣ ಗೌಡರೂ ತಮ್ಮ `ಸುಂದರ' ಕಂಠದಿಂದ ಗಾಯನ ಶುರು ಹಚ್ಚಿಕೊಂಡೇ ಬಿಟ್ಟರು. ಕ್ರಮೇಣ ಅದೂ ಬೋರಾಯಿತು.
ನಾನು ಭಟ್ಕಳ ಪೂರ್ಣಿಮಾನ ಜೊತೆ ಮಾತಿಗಿಳಿದೆ. ಇದ್ದವರಲ್ಲಿ ಆಕೆ ಸ್ವಲ್ಪ ಭಾವುಕಿ. . ಸೂರ್ಯಕಾಂತಿ ಸಾಲು ಸಾಲು, ದೂರದ ದಿಗಂತದಲ್ಲಿ ಇಣುಕುತ್ತಿದ್ದ ಸೂರ್ಯ, ಚಿನ್ನದ ಕಲರಿನ ಬಾನು, ಮುಂಗಾರು ಮಳೆ, ಕಳೆದ ಆರೇಳು ದಿನಗಳು, ಚದುರಂಗದ ಆಟ, ಹೀಗೆ ಏನೆಲ್ಲಾ ಇಣುಕಿದವು ನಮ್ಮ ಮಾತು-ಕಥೆಯಲ್ಲಿ. ಅಂತೂ ಇಂತೂ ಎರಡು ತಾಸಿನ ಅಮೋಘ ಪ್ರಯಾಣದ ನಂತರ ನಮಗೆ ಇಳಕಲ್ಲಿನ ದರ್ಶನವಾಯಿತು.
ನನಗೆ ಮನಸ್ಸಿನಲ್ಲಿಯೇ..,
ಇಳಕಲ್ ಸೀರೆ ಉಟ್ಕೊಂಡು
ಮೊಳಕಾಲ್ ತನಕ ಎತ್ಕೊಂಡು
ಏರಿ ಮ್ಯಾಲೆ ಏರಿ ಬಂದ್ಲು
ನಾರಿ... ಅನ್ನೋ ಹಾಡು ಗುನುಗುತ್ತಿತ್ತು.. ಅಷ್ಟೆಲ್ಲಾ ಹೆಸರಾದ `ಇಳಕಲ್'ನ್ನೇ ನಾನು ನೋಡ್ತಿದ್ದೇನಾ ಅನ್ನಿಸಿತು. ಸಮಯ ಏಳನ್ನು ದಾಟುತ್ತಿತ್ತು.

ಇಳಕಲ್ : ಸೀರೆಯ ನಾಡಿನಲ್ಲೊಂದು ಹಾಸ್ಯ ಸಂಜೆ
ಇಳಕಲ್ ಸೀರೆಗೆ ಫೇಮಸ್ಸು. ಸೀರೆಯನ್ನು ತಯಾರು ಮಾಡೋದನ್ನು ನೋಡೋಣ ಎಂದು ಹೊರಟೆವು. ನಂಗಂತೂ ತಂಗಿಗೊಂಡು ಚೆಂದದ ಚೂಡಿದಾರ, ಮಟೀರಿಯಲ್ಲು ಕೊಳ್ಳಬೇಕು ಎನ್ನಿಸಿತು. ಒಂದೆರಡು ಅಂಗಡಿಯ ಒಳಹೊಕ್ಕು ಸೀರೆಯನ್ನು ಆರಿಸಿದ ಶಾಸ್ತ್ರ ಮಾಡಿದೆವು. ರೇಟು ಕೇಳಿದರೆ ಗಗನವನ್ನು ಮುಟ್ಟಿದ ಅನುಭವ.. ತಂಗಿಗೆ ಚುಡಿದಾರ, ಮಟೀರಿಯಲ್ಲು ಕೊಳ್ಳುವ ಆಸೆ ಕೈಬಿಟ್ಟೆ..
ವಾಪಾಸಾಗತೊಡಗಿದೆವು.. ಹೀಗೆ ಬರತೊಡಗಿದಾಗ ಅಲ್ಲೊಂದು ಅಂಗಡಿ ಕಣ್ಣಿಗೆ ಬಿತ್ತು.. ಸಾಮಾನ್ಯವಾಗಿ ಎಲ್ಲ ಕಡೆ ನಂಗೆ ಅಂಗಡಿಗಳ ಬೋರ್ಡು ಓದುವ ಚಟ. ಈ ಅಂಗಡಿ ಬೋರ್ಡು ನೋಡಿ ನಗು ಉಕ್ಕಲಾರಂಭಿಸಿತು. ನನ್ನ ಜೊತೆಯಲ್ಲೇ ನಡೆದು ಬರುತ್ತಿದ್ದ ಕಿಟ್ಟು-ತೃಪ್ತಿ-ಪವಿತ್ರಾರಿಗೆ ತೋರಿಸಿದೆ. ಅವರೂ ನಕ್ಕರು.
`ಗೊಮ್ಮಟೇಶ್ವರ ಕ್ಲಾತ್ ಸೆಂಟರ್..'
ಇಲ್ಲೊಂದು ವಿಚಿತ್ರವೂ ನಡೆಯಿತು. ನಮ್ಮೆಲ್ಲರಿಗಿಂತ ಲೇಟಾಗಿ ನಡೆದು ಬರುತ್ತಿದ್ದ ಗೌಡರಿಗೆ ಈ ಬೋರ್ಡನ್ನು ನಾನು ತೋರಿಸಿದೆ. ಅವರು `ಅದರಾಗೇನೈತೋ..' ಅಂದರು..
`ಸರ ಓದಿ ನೋಡ್ರಿ..' ಅಂದೆ
`ಗೊಮ್ಮಟೇಶ್ವರ ಕ್ಲಾತ್ ಸೆಂಟರ್.. ಅಂತದ್ದೇನೈತಪಾ ಅದರಾಗೆ..' ಅಂದರು.
`ಅದರ ಅರ್ಥ ಹೇಳ್ರಿ..' ಅಂದೆ.. ಆಲೋಚಿಸಿದ ಮೇಲೆ ಟ್ಯೂಬ್ ಲೈಟ್ ಹತ್ತಿಕೊಂಡಿತು.. ಬಿದ್ದು ಬಿದ್ದು ನಗಲಾರಂಭಿಸಿದರು. ಗೌಡರ ಟ್ಯೂಬ್ ಲೈಟ್ ನೋಡಿ ನಾವು ಮತ್ತಷ್ಟು ನಕ್ಕೆವು. (ವಿ.ಸೂ : ಇಲ್ಲಿ ಕೊಂಚ ಬದಲಾವಣೆ ಇದೆ ಆಗಬೇಕು.. ಅದು ಗೊಮ್ಮಟೇಶ್ವರ ಅಲ್ಲ.. ಬಾಹುಬಲಿ ಕ್ಲಾತ್ ಸೆಂಟರ್ ಆಗಬೇಕು.ಕೊಂಚ ನೆನಪಿನ ದೋಷ ಇದೆ.. ಸರಿಪಡಿಸಿಕೊಳ್ಳಿ)
ನಂತರ ಇಳಕಲ್ಲಿನ ಪಾರ್ಕೊಂದಕ್ಕೆ ಸಾಗಿದೆವು. ಬಹುಹೊತ್ತು ಕುಳಿತು ಹರಟಿದೆವು. ಗೌಡರು ಮತ್ತೆ `ನೀನು ಲೇಡೀಸ್ ಟೀಮ್ ಆಡಿಸಿದ್ದಕ್ಕೆ ಬ್ಲೂ ಆಗಲಿಲ್ಲ' ಎಂದರು. ಅಸಹ್ಯ ಎನ್ನಿಸಿತು ನನಗೆ ಅವರ ಮಾತು.
ರಾತ್ರಿ ಊಟ ಮುಗಿಸಿ ಹುಬ್ಬಳ್ಳಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ಹುಬ್ಬಳ್ಳಿಯ ವರೆಗೂ ಎಚ್ಚರಾಗಿದ್ದವರೆಂದರೆ ಕಿಟ್ಟು-ತೃಪ್ತಿ ಇಬ್ಬರೇ. ನಾನು-ಕಿಟ್ಟಿ-ತೃಪ್ತಿ-ಪವಿತ್ರಾ ಆ ಸಂಜೆ-ರಾತ್ರಿ ಅದೆಷ್ಟು ಸುದ್ದಿಗಳನ್ನು ಹಲುಬಿದೆವೊ.ಬದುಕು, ಲೈಫು, ನಮಗೆ ಬೇಕಾದ ಲವ್ವರ್ರುಗಳು, ಲಕ್ಷಣ, ಮದುವೆ, ಸಂಸಾರ ಹೀಗೆ ಏನೆಲ್ಲಾ ಮಾತನಾಡಿಕೊಂಡೆವು.. ಗದಗ, ಗುಳೇದಗುಡ್ಡ ಇಲ್ಲೆಲ್ಲ ಬಂದ ಬಸ್ಸು ಹುಬ್ಬಳ್ಳಿ ಬಸ್ ನಿಲ್ದಾಣ ತಲುಪುವ ವೇಳೆಗೆ ನನಗೆ ಹಾಗೂ ಪವಿತ್ರ ಇಬ್ಬರಿಗೂ ನಿದ್ದೆ.. ಸುದ್ದಿ ಹೇಳುತ್ತಿದ್ದ ನಮಗೆ ಅದ್ಯಾವಾಗ ನಿದ್ದೆ ಬಂದಿತ್ತೋ. ದೇವರೇ ಬಲ್ಲ..! ಕೊನೆಗೆ ಕಿಟ್ಟು ಇಬ್ಬರನ್ನೂ ಬಡಿದು ಎಚ್ಚರಿಸಬೇಕಾಯಿತು.!
ಹುಬ್ಬಳ್ಳಿಗೆ ಬಂದಾಗ ಮಧ್ಯರಾತ್ರಿ 1.30. ನಾವು ಹುಬ್ಬಳ್ಳಿಯನ್ನು ಬಿಟ್ಟದ್ದು 2.30ಕ್ಕೆ. ಶಿರಸಿಗೆ ಬಸ್ಸನ್ನೇರಿ ಬಂದೆವು. ಶಿರಸಿಯವರೆಗೆ ನಮಗೆ ಪುನಃ ನಿದ್ದೆಯೇ. ಶಿರಸಿ ತಲುಪಿದಾಗ 5 ಗಂಟೆಯ ಚುಮು ಚುಮು. ಶಿರಸಿಗರಿಗೆ ಮತ್ತದೇ ಚಳಿಯ ಚುಮು ಚುಮು ಮುಂಜಾವು. ನಾನು, ಕಿಟ್ಟಿ, ವಾನಳ್ಳಿ ಪೂರ್ಣಿಮಾ ಏಳು ಗಂಟೆಯವರೆಗೂ ಬಸ್ ಸ್ಟಾಂಡಿನಲ್ಲಿಯೇ ಹರಟಿದೆವು.
ಮುಂಜಾನೆಯೇ ವೈಪರಿತ್ಯವೆಂದರೆ ನಮ್ಮದೇ ಕಾಲೇಜಿನ ಪ್ರಿನ್ಸಿಪಾಲರು ಅದೇಕೋ ಬಸ್ ಸ್ಟಾಂಡಿಗೆ ಬಂದಿದ್ದವರು ಸಿಕ್ಕರು. ಅವರಿಗೆ ಸುದ್ದಿಯನ್ನು ತಿಳಿಸಿದೆವು. ಅವರು ಎಂದುನ ತಮ್ಮ ಶೈಲಿಯಲ್ಲಿಯೇ `ಕಂಗ್ರಾಜ್ಯುಲೆಷನ್ಸ್.. ಭಾರಿ ಚೊಲೋ ಮಾಡಿದ್ರಿ..' ಎಂದರು.
ನಮಗೊಮ್ಮೆ ಖುಷಿಯಾಯಿತು. ಏಳಕ್ಕೆ ವಾನಳ್ಳಿ ಪೂರ್ಣಿಮಾಳ ಬಸ್ಸು ಬಂದು ಅವಳು ಹೊರಟಳು. 7.30ಕ್ಕೆ ಕಿಟ್ಟುವಿನ ಬಸ್ಸು ಬಂತು. ಆತನೂ ಹೊರಟ. ನನಗಿನ್ನೂ ಬಸ್ಸು ಬಂದಿರಲಿಲ್ಲ. ಕಾಯುತ್ತಿದ್ದೆ. ರಾಘುವಿಗೆ ಪೋನ್ ಮಾಡಿದರೆ ಆತನಿನ್ನೂ ಬೆಳಗಿನ ಸುಖ ನಿದ್ದೆಯಲ್ಲಿದ್ದ `ಸೂರ್ಯವಂಶಿ..' ಆತನಿಗೆ ನಾವು ವಾಪಾಸು ಬಂದಿರುವ ಸುದ್ದಿಯನ್ನು ತಿಳಿಸಿದೆ.
ಕೊನೆಗೆ ನನಗೆ 8.30ರ ವೇಳೆಗೆ ನನ್ನ ಬಸ್ಸು ಬಂದಿತು. ಬಸ್ ಹತ್ತಿ ಮನೆಯ ಕಡೆಗೆ ಹೊರಟೆ.
ಹೀಗೆ ನಮ್ಮ ಚೆಸ್ ಯಾನ ಸಾಗಿತು. ಒಂದು ರಿಸರ್ವ್ ಬ್ಲೂ, ಒಂದು ಮ್ಯಾನ್ ಆಫ್ ದಿ ಸೀರೀಸ್, ಲೇಡೀಸ್ ಟೀಂ ಪ್ರಥಮ ಹಾಗೂ ಬಾಯ್ಸ್ ಟೀಂ ದ್ವಿತೀಯ ಎಂಬ ಹೆಗ್ಗಳಿಕೆ, ಸಾಧನೆಯೊಂದಿಗೆ ನಾವು ಬಹು ಯಶಸ್ಸಿನ ಜೊತೆ  ಜೊತೆಗೆ ನಮ್ಮ ಚಸ್ಸಿನ ಈ ಬಾಗೇವಾಡಿಯ ಯಾತ್ರೆ ವಿಜಯ ಮೆಟ್ಟಿಲಂತೆ ಅನ್ನಿಸಿತು.
ಬಸ್ಸಿನಲ್ಲಿ ಮತ್ತೆ ನನಗೆ ಯಥಾ ಪ್ರಕಾರ ಭಾರಿ ನಿದ್ದೆ. ಮತ್ತೆ ಮತ್ತೆ ಬಾಗೇವಾಡಿಯದೇ ನೆನಪು.
ಸೂರ್ಯ ನಗುತ್ತಾ ನಗುತ್ತಾ ಬಾನಿನ ದಾರಿಯಲ್ಲಿ ಮೇಲ ಮೇಲಕ್ಕೆ ಬರುತ್ತಿದ್ದ.. ಚಸ್ ನ ಚೌಕಳಿ ಚೌಕಳಿ ಮನೆಗಳು ಕಣ್ಣಿನಿಂದ, ಬದುಕಿನಿಂದ ಮರೆಯಾಗುತ್ತಿದ್ದವು..!!

((ಮುಗಿಯಿತು))
(ಬರೆಯಲು ಆರಂಭಿಸಿದ್ದು 10-12-2007ರಂದು ಬರೆದು ಮುಗಿಸಿದ್ದು 25-03-2008ರಂದು)

Monday, December 16, 2013

ತೌರೆಂದರೆ

-1-
ತೌರೆಂದರೆ
ಸುಳಿದು ಬರುವ ನೆನಪು
ಕಳೆದು ಹೋದ ಕಾಲ
ನಲಿದಾಡಿದ್ದ ಬಾಲ್ಯ
ಜೀವನಾರಂಭ.

-2-
ತೌರೆಂದರೆ
ಸಿಟ್ಟು ಉಕ್ಕುವ ಅಪ್ಪ
ಬೆತ್ತದ ಕೋಲಿನ ಪೆಟ್ಟು
ಭಯ, ದುಃಖದೊಳಗೂ ಖುಷಿ.

-3-
ತೌರೆಂದರೆ
ಪ್ರೀತಿಯ ಅಮ್ಮ
ಅಚ್ಚುಕಟ್ಟುತನದ ಹರ್ಷ
ಸಾಕಿ-ಸಲಹಿದ ನೆನಪು.

-4-
ತೌರೆಂದರೆ
ಬಾಲ್ಯ ಅಣ್ಣ, ತಮ್ಮ
ಕಾಡುವ ಕತ್ತಲೆ ಗುಮ್ಮ
ಕಲಿತ ಓದು
ಬಾಲ್ಯದ ನಲಿವು

-5-
ತೌರೆಂದರೆ
ಬೆಸೆದ ಬಂಧ
ಬಿಡದ ನಂಟು
ಸ್ನೇಹಕುಂಜ
ಮೊದಲ ಕಣ್ಣೀರು.

-6-
ತೌರೆಂದರೆ
ಕಿತ್ತುಹೋದ ಮನೆ
ತೇಪೆ ಹಚ್ಚಿದ ಕೌದಿ
ಸಾಲದ ಚಿಂತೆ
ಅಂತೂ ಜೀವನ ನಿರ್ವಹಣೆ

-7-
ತೌರೆಂದರೆ
ಮೊದಲ ತೊದಲು
ಚಿಗುರಿದ ಪ್ರೇಮ
ಮನಸು ಮುರಿತ

-8-
ತೌರೆಂದರೆ
ವಧು ಪರೀಕ್ಷೆ
ಮದುವೆ ಬಾಳ್ಗೆ
ಕಣ್ಣೀರ ಕೋಡಿ
ಸಂಸಾರದೆಡೆಗೆ.

-9-
ತೌರೆಂದರೆ
ಮರೆತ ಅಣ್ಣ
ಸಿಡುಕು ಅತ್ತಿಗೆ
ಕರೆವಿಲ್ಲ, ನಲಿವಿಲ್ಲ

-10-
ತೌರೆಂದರೆ
ಹಳೆಯ ನೆನಪು
ಹೊಸೆದ ಕನಸು
ಅದೇ ಸಾಲ-ಮನೆ

-11-
ತೌರೆಂದರೆ
ಹೊಸ ಪೀಳಿಗೆ
ಹೊಸ ಜನ
ಹೆಣ್ಣ ನೆನಪು ಯಾರಿಗಿಲ್ಲ.

-12-
ತೌರೆಂದರೆ
ಬರೀ ನೆನಪು
ಬರೀ ವ್ಯಥೆ
ಕಳೆದ ಕ್ಷಣ, ಉರುಳಿದ ತಲೆ
ಮರಳಲಿಲ್ಲ, ಬದುಕಲಿಲ್ಲ.

(ಇದನ್ನು ಬರೆದಿದ್ದು 20-08-2006ರಲ್ಲಿ ದಂಟಕಲ್ಲಿನಲ್ಲಿ)
(ಅಮ್ಮಾ ನಿನ್ನ ತವರಿನ ಬಗ್ಗೆ ಹಾಗೂ ಆ ನಿನ್ನ ಬಾಲ್ಯದ ಬಗ್ಗೆ ಹೇಳು ಎಂದೊಮ್ಮೆ ಗಂಟು ಬಿದ್ದಿದ್ದೆ.. ಬಹಳ ದಿನ ಹೇಳಲು ನೆಪವೊಡ್ಡಿ ತಪ್ಪಿಸಕೊಂಡಿದ್ದಳು.. ಕೊನೆಗೊಮ್ಮೆ ಕೇಳಿದಾಗ ಸಾಲು ಸಾಲಾಗಿ ಹೇಳಿದಳು..ಆಕೆ ಹೇಳಿ ಮುಗಿಸಿದಾಗ ಇದ್ದದ್ದು ನಿಟ್ಟುಸಿರು ಹಾಗೂ ಕಣ್ಣೀರು.. ಹಾಗೆ ಸುಮ್ಮನೆ ಅವಳ ಮಾತುಗಳಿಗೊಂದು ಅಕ್ಷರ ರೂಪ ಕೊಟ್ಟಾಗ ಹೀಗಾಗಿತ್ತು..)

Saturday, December 14, 2013

ಅಡಿಕೆ


ಅಡಿಕೆಯಿದು ಮಲೆನಾಡ
ಕೃಷಿಕನ ಹೊನ್ನಿನ ಕುಡಿಕೆ |
ತೋಟಿಗರ ತಂಪಿನ ಮಡಿಕೆ,
ಸರ್ವರ ಹಿತಕ್ಕೊಂದು ಹಿಡಿಕೆ ||

ಅಡಿಕೆಯಿದು ದೇಶಿಗರ
ಬಯಸಿದ್ದನ್ನು ಕೊಡುವ ಸೂರ್ಯಪಾತ್ರೆ|
ಕವಳವೇ ಮನಕೆ ತಂಪೆರೆವ ಮಾತ್ರೆ,
ಕೃಷಿಕ ಈಶನ ತಲೆಗೆ ಇದೇ ಬಿಲ್ವಪತ್ರೆ ||

ಅಡಿಕೆಯಿದು ಸಕಲ ಜನರ
ಪ್ರಚ್ಛನ್ನ ಶಕ್ತಿ, ಮನದ ತುಡಿತ|
ಪ್ರತಿ ಎದೆಯಾಂತರಾಳದ ಮಿಡಿತ
ಸರ್ವಕಾಲವೂ ದುಡಿತವೇ ದುಡಿತ ||

ಅಡಿಕೆಯಿದು ತೋಟಿಗರ
ಮನದ ಬೇಟ, ದೇವರಾಟ|
ಜೊತೆಗೆ ಅಷ್ಟು-ಇಷ್ಟು ಕೊಳೆಯ ಕಾಟ
ವರ್ಷದ ಫಸಲಿಗೆ ಕತ್ತರಿಯ ಆಟ ||

ಅಡಿಕೆಯಿದು ಮಲೆನಾಡಿಗರ
ಜೀವ ನೀಡ್ವ ಅಮೃತ|
ಸಕಲ ಕಾಲವೂ ಕವಳವೇ ಹಿತ
ಕವಳವೇ ಬಾಳಿಗೆ ನವನೀತ ||

**

(ಇದನ್ನು 07-04-2006ರಲ್ಲಿ ದಂಟಕಲ್ಲಿನಲ್ಲಿ)
(ಅಡಿಕೆಗೂ ಒಂದು ಕವಿತೆಯೇ ಎಂದು ಹುಬ್ಬೇರಿಸಬಹುದು.. ಅಡಿಕೆ ನಿಷೇಧ, ಪರಿಹಾರ, ಅಡಿಕೆ ಬೆಳೆಗಾರರ ಮನೆಯ ಜಪ್ತಿ, ಸಾಲಮನ್ನಾ, ರಾಜಕಾರಣಿಗಳ ಜೂಟಾಟ, ಇತ್ಯಾದಿ ಇತ್ಯಾದಿಗಳ ಜೊತೆ ಜೊತೆಯಲ್ಲಿ  ಅಡಿಕೆ ಹೇಗೆ ಮಲೆನಾಡಿಗರಿಗೆ ಪ್ರೀತಿಪಾತ್ರ, ಆರ್ಥಿಕ ಶಕ್ತಿ, ಆದಾಯದ ಮೂಲವಾಗುತ್ತದೆ ಎನ್ನುವುದರ ಕುರಿತು ಬರೆದ ಒಂದು ಕವಿತೆ. ಏಳು ವರ್ಷಗಳ ಹಿಂದಿನ ಕವಿತೆ ಇಂದಿನ ದಿನಕ್ಕೆ ಪ್ರಸ್ತುತ ಎನ್ನಿಸಬಹುದೇನೋ..)