Tuesday, November 5, 2013

ಆನೂ ಪ್ಯಾಟಿಗೆ ಬರ್ತಿದ್ದಿ

ಆನೂ ಪ್ಯಾಟಿಗೆ ಬರ್ತಿದ್ದಿ
ಅಪ್ಪಯ್ಯಾ, ಆನೂ ಜಾತ್ರಿಗೆ ಬರ್ತಿದ್ದಿ ||

ಜಾತ್ರೆಯ ನೋಡವ್ವು,
ತೊಟ್ಟಿಲು ಹತ್ತವ್ವು,
ಭಾರೀ ಚೊಲೋ ಇರುವ
          ಸರ್ಕಸ್ಸು ನೋಡವ್ವು ||

ಬಳೆ ಪ್ಯಾಟೆಲಿ ತಿರುಗವ್ವು,
ಬೆಂಡು-ಬತ್ತಾಸ್ ಕೊಳ್ಳವ್ವು,
ಲಕ್ಷ್ಮೀ ಟಾಕೀಸ್ನಲ್ಲಿ ಹೊಸ
         ಪಿಚ್ಚರ್ ನೋಡವ್ವು ||

ಹೊಸ ಅಂಗಿ ಕೊಳ್ಳವ್ವು,
ಪ್ಯಾಟೇಲಿ ತಿರುಗವ್ವು,
ಬೇಗ ಬೇಗನೆ ನಾವು
          ಜಾತ್ರಿಗೆ ಹೋಪನ  ||

ಮಾರಿ ಗದ್ದುಗೆ ನೋಡವ್ವು
ಹಣ್ಣು ಕಾಯಿ ಮಾಡ್ಸವ್ವು,
ರಗಳೆ ಮಾಡೋ ಮಾಣಿಗೆ
          ತುತ್ತೂರಿ ತಗಳವ್ವು ||

ಕೊಟೆಕೆರೆಲಿ ತಿರುಗವ್ವು,
ನಟರಾಜ ರೋಡಲ್ ಹೋಗವ್ವು
ಪ್ಯಾಷನ್ ಪ್ಯಾಲೇಸಲ್ಲಿ 
           ಹೊಸ ಅಂಗಿ ಕೊಳ್ಳವ್ವು  ||

(ಆತ್ಮೀಯರೇ... 
ಪ್ರದ್ತುತ ಇದೂ ಒಂದು ಹವ್ಯಕ ಗೀತೆ.. ಹವ್ಯಕ ಹಾಡುಗಳನ್ನು ಕೇಳುವ ಹುಚ್ಚಿರುವ ನನಗೆ ಅದೇ ಧಾಟಿಯಲ್ಲಿ ಹಾಡೊಂದನ್ನು ರಚನೆ ಮಾಡುವ ಹುಚ್ಚು ಹತ್ತಿ ಬರೆದಿದ್ದು. ತನ್ನ ತಂದೆಯ ಬಳಿ ಶಿರಸಿಯ ಜಾತ್ರೆಗೆ ಹೋಗೋಣ ಎಂದು ಹಟ ಮಾಡುವ ಚಿಕ್ಕ ಹುಡುಗಿಯ ಭಾವನೆ ಈ ಹಾಡಿನ ಮೂಲಕ ವ್ಯಕ್ತವಾಗಿದೆ. ಹಾಸ್ಯದ ಈ ಹಾಡನ್ನು ನಮ್ಮೂರಿನ ಹಳ್ಳಿ ಹಾಡುಗಳ ಸರದಾರಿಣಿ ಕಮಲಾಕ್ಷ್ಮೀ ಹೆಗಡೆ ಅವರಿಗೆ ನೀಡಿದ್ದೆ. ಸಿಟ್ಟು ಬಂದ ಆಕೆ ಎಂತೆಂತಾ ಗಬ್ ಗಬ್ ಹಾಡು ಬರಿತ್ಯೋ ಎಂದು ಹೇಳಿದ್ದರೂ ನಂತರ ಅದನ್ನು ಹಾಡುವ ಪ್ರಯತ್ನವನ್ನೂ ಮಾಡಿದ್ದಳು..ಚಿಕ್ಕ ಮಕ್ಕಳ ಮನಸ್ಸಿನ ಭಾವನೆಯನ್ನು ತಿಳಿಸುವ ಹಳ್ಳಿ ಹಾಡು ಇದು.) (ಇದನ್ನು ಶಿರಸಿಯಲ್ಲಿ 23-01-2008ರಂದು ಬರೆದಿದ್ದೇನೆ.)

Friday, November 1, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 2

ವಿಶಿಷ್ಟ ಸಾಮ್ರಾಟ್ ಬಸ್ಸು...


ನನ್ನ ಈ ಪ್ರವಾಸ ಕಥನದಲ್ಲಿ ವಿಶೇಷ ಪಾತ್ರವಾಗಿದ್ದು ಈ ಸಾಮ್ರಾಟ್ ಬಸ್ಸಿ ಅಂದರೂ ತಪ್ಪಿಲ್ಲ. ಈ ಬಸ್ಸಿನಲ್ಲಿ ನಾವು ಅಜಮಾಸು 8 ಗಂಟೆಗಳ ಕಾಲ ಪ್ರಯಾಣ ಮಾಡಿದ ಕಾರಣ ಅದರ ನೆನಪಿನ್ನೂ ಹಸಿಹಸಿಯಾಗಿದೆ. ಶಿರಸಿಯಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ದೂರದ ಗುಮ್ಮಟ ನಗರಿ ಬಿಜಾಪುರದ ವರೆಗೆ ಈ ಬಸ್ಸು ನಮ್ಮ ಸಾಥಿಯಾಗಿತ್ತಲ್ಲ ಅದರ ಪಯಣವೇ ಮಜವಾಗಿದೆ.
ಶಿರಸಿಯಲ್ಲಿ ಬಸ್ಸು ಏರಿದಾಗ ಅದರ ಸೀಟೆಲ್ಲ ಖಾಲಿ ಖಾಲಿಯಾಗಿದ್ದವು. ಬಸ್ಸಿನಲ್ಲಿದ್ದ ಟಿವಿಯಲ್ಲಿ ಕ್ರೇಜಿ ಸ್ಟಾರ್ ನ ಬಣ್ಣದ ಗೆಜ್ಜೆ ಚಿತ್ರ ಮೂಡಿಬರುತ್ತಿತ್ತು. ಯಾಕೋ ಗೊತ್ತಿಲ್ಲ ಆ ಹೀರೋ ಅಂದರೆ ನಮ್ಮ ಬಳಗದಲ್ಲಿದ್ದ ತೃಪ್ತಿಗೆ ಆಗದು. ಅದನ್ನು ತಿಳಿದುಕೊಂಡ ಕೃಷ್ಣಮೂರ್ತಿ ಆಕೆಯ ಜೊತೆಗೆ ಕೀಟಲೆಗಿಳಿದ. ಮಾತಿನ ಮೂಲಕ ಛೇಡಿಸಹತ್ತಿದ. ತೃಪ್ತಿ ಆ ಹೀರೋನನ್ನು ಬೈಯ್ಯಲು ಆರಂಭಿಸಿದರೆ ಕಿಟ್ಟು ಅವನನ್ನು ಹೊಗಳುವುದು, ಆಕೆ ಆತನ ಸಿನಿಮಾ ಡಬ್ಬಾ ಇದೆ ಎಂದರೆ ಆತ ಇಲ್ಲ ಅದು ಚನ್ನಾಗಿದೆ ಎನ್ನುವುದು..ಆತನ ಹಾಡುಗಳೆಲ್ಲ ನನಗೆ ಪಂಚಪ್ರಾಣ. ಹಾಡನ್ನು ನೋಡುತ್ತಿದುವುದೇ ಹೊಸದೊಂದು ಕ್ರೇಜ್ ಹುಟ್ಟುಹಾಕುತ್ತದೆ ಎನ್ನುವುದು.. ಈ ಮುಂತಾಗಿ ಆಕೆಯನ್ನು ಛೇಡಿಸುತ್ತಿದ್ದ.
ಚಿತ್ರ ಮುಂದುವರಿದಂತೆಲ್ಲ ಬಸ್ಸು ರಶ್ಶೋ ರಶ್ಶಾಗತೊಡಗಿತು. ಕೊನೆಗೆ ಇದೇ ಜನಜಂಗುಳಿಯ ಪ್ರತಾಪದಿಂದಲೇ ಬಣ್ಣದ ಗೆಜ್ಜೆಯ ಕೊನೆ ಕೊನೆಯ ಝಲಕುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಆಗಲೇ ಇಲ್ಲ.
ಮಧ್ಯದಲ್ಲೆಲ್ಲೋ, ಮುಂಡಗೋಡಿರಬೇಕು. ಪ್ರಯಾಣಿಕನೊಬ್ಬ ಬಸ್ ಕಂಡಕ್ಟರ್ ಬಳಿ ಜಗಳ ಪ್ರಾರಂಭಿಸಿದ. ಚಿಲ್ಲರೆ ಜಗಳ ತಾರಕಕ್ಕೇರುವ ಹೊತ್ತಿಗೆ ಪ್ರಯಾಣಿಕರು ತಮ್ಮ ಜೊತೆಗಾರನ ಮೇಲೆ ತಿರುಗಿಬಿದ್ದರು. ಪರಿಣಾಮವಾಗಿ ಆತ ಗಪ್ ಚುಪ್ ಆದ. ಹಾಳಾದ ರಸ್ತೆ, ಚಾಲಕನ ನಿಯಂತ್ರಣ ಮೀರಿದ ವೇಗ.. ಇವುಗಳ ಪರಿಣಾಮ ಶಿರಸಿಯಲ್ಲಿ ತಿಂದಿದ್ದ ಪುರಿ ಭಾಜಿ ಹೊಟ್ಟೆಯಲ್ಲಿ ಕಲಸು ಮೇಲೋಗರವಾಗಿದ್ದರೂ ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಸಂಪೂರ್ಣ ಜೀರ್ಣೋದ್ಧಾರಗೊಂಡಿತ್ತು.

ಹುಬ್ಬಳ್ಳಿಯಿಂದ ಬಿಜಾಪುರದವರೆಗೆ...
ಇದು ಅನಾಮತ್ತು ಐದೂವರೆ ಗಂಟೆಗಳ ಮ್ಯಾರಥಾನ್ ಪಯಣ. ಬಯಲುಸೀಮೆಯಲ್ಲಿ ವಾಹನದಲ್ಲಿ ಕುಳಿತು ಸಾಗುವುದಕ್ಕೂ ಸಹನೆ ಬೇಕು. ಸುಮಾರು 350 ಕಿ.ಮಿ ದೂರದ ಈ ಪಯಣಕ್ಕೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಶಕ್ತಿಯೂ ಅಗತ್ಯ. ಹುಬ್ಬಳ್ಳಿಯಲ್ಲಿ ಟಿಪಿಕಲ್ ಬೈಲು ಸೀಮೆಯ ಖಾರದ ಊಟ ಮಾಡಿ 11.30ಕ್ಕೆ ರಾಣಿ ಚನ್ನಮ್ಮಾ ಬಸ್ಸನ್ನೇರಿದೆವು. ಅದರ ಜೊತೆಯಲ್ಲಿಯೇ ನಮ್ಮ ಅಷ್ಟದಳ  ಹಾಗೂ ಒಂದು ದಳದಳ ದ  ಗೌಜು ಬಸ್ಸಿನ ಟಾಪನ್ನೂ ಮೀರಿ ಆಚೆಗೆ ಹಾಯ್ದಿತ್ತು. ಬಸ್ಸಿನಲ್ಲಿ ಅಷ್ಟು ಜನರಿರಲಿಲ್ಲ. ಹಾಗಾಗಿ ಕೊನೆಯ 8 ಸೀಟುಗಳು ನಮಗಾಗಿಯೇ ಎಂಬಂತೆ ಖಾಲಿಖಾಲಿಯಾಗಿದ್ದವು. ನಮ್ಮ ಗೌಡರನ್ನು ಮುಂದೆಲ್ಲೋ ಒಂದು ಸೀಟಲ್ಲಿ ಒಬ್ಬಂಟಿಯಾಗಿ ಕುಳ್ಳಿರಿಸಿ ನಾವು ಎಮಟೂ ಜನರು ಕೊನೆಯ ಸೀಟಿನಲ್ಲಿ ಆಸೀನರಾಗುವ ವೇಳೆಗೆ ಬಸ್ಸಿನಲ್ಲಿ ಪೋಂ.. ಪೋಂ..

ಇಷ್ಟರ ಜೊತೆಗೆ  ನಮ್ಮ ಎಂಟೂ ಜನರ ಗುಣಾವಗುಣಗಳನ್ನು ಪರಿಚಯ ಮಾಡಿಕೊಡದಿದ್ದರೆ ತಪ್ಪಾಗುತ್ತದೆ. ಮೊದಲು ನನ್ನಿಂದಲೇ ಶುರುವಾಗಲಿ..ನಾನೊಂಥರಾ ಇದ್ದವರಲ್ಲಿಯೇ ಭಾವಾರ್ಥಿ. ಜೊತೆಗೆ nature lover. ಜೊತೆಗೆ ಈಗ ಬಾಯ್ಸ್ ಟೀಮಿನ ಕ್ಯಾಪ್ಟನ್. ಹರಟೆಗೆ ಹರಟೆ. ಕೊರೆತಕ್ಕೆ ಸಮಯ ಸಿಕ್ಕಾಗಲೆಲ್ಲ ಕೊರೆತ. ಹಾಡಿಗೆ ಹಾಡು ಹಾಗೆಯೇ ಸಿಟ್ಟಿಗೆ ಸಿಟ್ಟು ನನ್ನ ಆಸ್ತಿ. . ಜೊತೆಗೆ ಇನ್ನೂ ಹತ್ತು ಹಲವು ಗುಣಗಳಿವೆ.. ಆದರೆ ಇಲ್ಲಿ ಅದು ಅನ್ ಇಂಟರೆಸ್ಟಿಂಗ್ ಬಿಡಿ..
ಇನ್ನು ನಮ್ಮ ಟೀಂ ಎಂಇಎಸ್ ಬಗ್ಗೆ ಹೇಳಬೇಕೆಂದರೆ ಎರಡನೇಯವನಾಗಿ ಆನಂದ ನಾಯ್ಕ. ನಮ್ಮಲ್ಲಿದ್ದವರ ಪೈಕಿ ಥಂಡು ಥಂಡು ಕೂಲ್ ಕೂಲ್.. ಬಸ್ಸಿನಲ್ಲಿ ಮಾತನಾಡದೇ ತನ್ನದೇ ಲೋಕದಲ್ಲಿ ತಾನು ಕುಳಿತು ಕಣ್ಣಿನಲ್ಲಿಯೇ ಕನಸು ಕಾಣುತ್ತಿರುವಂತಹ ವ್ಯಕ್ತಿ. ಜೊತೆಗೆ ಎಲ್ಲರಿದ್ದರೂ ಏಕಾಂಗಿ.. ಥಟ್ಟನೆ ನೋಡಿದರೆ ಇವನಿಗೆ ಲವ್ ಫೇಲ್ಯೂರಾ ಎಂದು ಭಾವಿಸುವಷ್ಟು ಒಬ್ಬಂಟಿ. ಒಂಥರಾ ಗುಜರಿಗೆ ಹಾಕಿದ ಬಸ್ಸಿನ ಹಾಗೇ.. ನಮ್ಮ ಜೊತೆಗೆ ಪಯಣ ಮಾಡಿದ ಬಡಪಾಯಿ. ಅಫ್ಕೋರ್ಸ್..LOVE ಅಂದರೆ ಪರಮ ಕುತೂಹಲ. ನಾವು ಲವ್ವಿನ ಕುರಿತು ಹೇಳುತ್ತಿದ್ದ ಸತ್ಯ ಹಾಗೂ ಸುಳ್ಳಿನ ಸುದ್ದಿಗಳನ್ನೆಲ್ಲ ನಂಬಿಬಿಟುವಷ್ಟು ಒಳ್ಳೆಯವನು. ಇನ್ನೊಂದು ಈತನ ದೊಡ್ಡಗುಣವೆಂದರೆ ಅನುಕರಣೆ. ಎಂತವರನ್ನಾದರೂ ಬೆಹತರೀನ್ ಆಗಿ ಅನುಕರಣೆ ಮಾಡುವ ಈತನನ್ನು ನಮ್ಮ ಪಯಣದಲ್ಲಿ ಅನೇಕ ಸಾರಿ ಅನುಕರಣೆಯ ಹಾದಿಗಿಳಿಸಿ ನಮ್ಮೊಳಗೊಂದಾಗುವಂತೆ ಮಾಡಿದ್ದು ನಮ್ಮ ದೊಡ್ಡ ಸಾಧನೆಗಳಲ್ಲಿ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ನಾಗಭೂಷಣ ಗೌಡರ ತೀರ್ಥ ಪ್ರಸಾದ ಸೇವನೆ ಯ ನಟನೆಯನ್ನು ಅತ್ಯತ್ತಮವಾಗಿ ಅನುಕರಣೆ ಮಾಡಿ ತೋರಿಸಿ ನಮ್ಮಿಂದ ಅಭಿನವ ಕಲಾವಿದ ಎನ್ನುವ ಬಿರುದನ್ನು ಪಡೆದುಕೊಂಡಿದ್ದ..
ಉಳಿದ ಇನ್ನಿಬ್ಬರು ಹುಡುಗರ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಒಬ್ಬ ಧಡಿಯ ನವೀನ ಪಾವಸ್ಕರ ಇನ್ನೊಬ್ಬ ಲಂಬೂ ಕಿಟ್ಟಿ. ನಮ್ಮ ಈ ಪ್ರವಾಸ ಕಥನ -ಯಾನಕ್ಕೆ ವಿಶೇಷ ಅರ್ಥ, ಮೆರಗು ಬಂದಿದ್ದೇ ಈ ಇಬ್ಬರಿಂದ. ಮೊದಲು ನವೀನನ ಪ್ರವರ ಹೇಳಿಕೊಂಡು ಮುಂದಕ್ಕೆ ಸಾಗುತ್ತೇನೆ. ಇಂವ ನವೀನ ಪಾವಸ್ಕರ. ವಯಸ್ಸಿಗೆ ಮೀರಿದ ದೇಹ ಈತನ  ಭೌಗೋಳಿಕ ಲಕ್ಷಣ. ಹೋಲಿಸಿ ಹೇಳಬೇಕೆಂದರೆ ದೊಡ್ಡ ವೋಲ್ವೋ ಲಾರಿಯಂತವನು. ಅಂತಹ ದೈತ್ಯ ದೇಹಕ್ಕೆ ತಕ್ಕ ಹೊಟ್ಟೆ ಇರದಿದ್ದರೆ ಹೇಗೆ ಹೇಳಿ..? ಜೊತೆಗೆ ಗಟ್ಟುಮುಟ್ಟಾದ ಆಳುವೂ ಹೌದು. ಪ್ರೀತಿಗೆ ಜೈ. ಜಗಳ-ಗಲಾಟೆ ಹೊಡೆದಾಟಕ್ಕೂ ಸೈ. ಈತ ಸಾಮಾನ್ಯವಾಗಿ ನಡೆದುಕೊಂಡರೂ ಎದುರಿನವರಿಗೆ ಹುಚ್ಚಾಪಟ್ಟೆ ನಗು ಹುಟ್ಟುತ್ತದೆ. ಈತನ ಹಾವ-ಭಾವ-ನಡೆ-ನುಡಿಗಳೇ ನಮಗೆ ಆಕರ್ಷಣೀಯ ಎನ್ನಿಸುತ್ತದೆ. ಇವುಗಳೇ ನಮ್ಮ ಪಯಣಕ್ಕೆ ವಿಶೇಷವಾದ ಮೆರಗಿನ ಜೊತೆಗೆ ಖುಷಿಯನ್ನು ನೀಡಿದ್ದು ಎಂದರೆ ತಪ್ಪಿಲ್ಲ. ಚನ್ನಾಗಿ ಚೆಸ್ ಆಡುತ್ತಾನೆ. ಆನಂದ ನಾಯ್ಕ ಹಾಗೂ ನವೀನ ಪಾವಸ್ಕರ ಸೇರಿದರೆ 3-4 ಗಂಟೆಗಳ ಕಾಲ ಚೆಸ್ ಆಡಿಬಿಡಬಲ್ಲರು. ನೋಡುಗರು ಹಣ್ಣಾಗುವುದಂತೂ ಗ್ಯಾರಂಟಿ.
ಇನ್ನುಳಿದವನೆಂದರೆ ಕಿಟ್ಟು. ಅಲಿಯಾಸ್ ಕರಷ್ಣಮೂರ್ತಿ ದೀಕ್ಷಿತ್ ಉರುಫ್ ದೀಕ್ಷಿತ ಅಥವಾ ಕೆಡಿ. ಈತನ ಬಗ್ಗೆ ಹೇಳಬೇಕೆಂದರೆ ಕಷ್ಟದ ಕೆಲಸವೂ ಹೌದು. Onle line ನಲ್ಲಿ ಹೇಳಬೇಕೆಂದರೆ ಈತನೊಬ್ಬ ಡಿಫರೆಂಟ್ ಫೆಲ್ಲೋ.. ಬಹುಶಃ ಈತ ನಮ್ಮ ಪಯಣದಲ್ಲಿಲ್ಲ ಎಂದಾಗಿದ್ದರೆ ನಾನು ಈ ಪ್ರವಾಸ ಕಥನವನ್ನು ಬರೆಯುತ್ತಿಲೇ ಇರಲಿಲ್ಲವೇನೋ..
ಕಿಟ್ಟು/ಕಿಟ್ಟಿಯ ಬಗೆಗ ಹೇಳಬೇಕಾದರೆ ಸ್ವಲ್ಪ ಫ್ಲಾಷ್ ಬ್ಯಾಕ್ ಗೆ ಹೋಗಿ ಬರುತ್ತೇನೆ. ಮನಸ್ಸಿನಲ್ಲಿ ನಿಮ್ಮಿಷ್ಟದ ಫ್ಲಾಷ್ ಬ್ಯಾಕಿನ ಸಿನೆಮಾ ನೆನಪು ಮಾಡಿಕೊಳ್ಳಬಹುದು. ನಿಜವಾಗಿಯೂ ಹೇಳಬೇಕೆಂದರೆ ಕಿಟ್ಟುವನ್ನು ಕಾಲೇಜಿನ CHESS ತಂಡದ ಆಟಗಾರನಾಗಿ ಕರೆದೊಯ್ಯಲು ಆಟದ ಗಂಧಗಾಳಿಯೇ ಗೊತ್ತಿರದಿದ್ದ ಎನ್. ಎಚ್. ಗೌಡರಿಗೆ ಸುತಾರಾಮ್ ಇಷ್ಟವಿರಲಿಲ್ಲ. ನಾವು ಹೊರಡಲು ಎರಡು ಮೂರು ದಿನಗಳಿರುವ ವರೆಗೂ ಆತ ಬರುವುದೋ ಇಲ್ಲವೋ ಎನ್ನುವ ಹೊಯ್ದಾಟ ನಡೆದೇ ಇತ್ತು. ಕೋಚ್ ಎಂ. ಕೆ. ಹೆಗಡೆಯವರೂ ಈ ಕುರಿತು ಸ್ಪಷ್ಟ ನಿರ್ಧಾರ ಮಾಡಲು ಅನುಮಾನಿಸುತ್ತಿದ್ದರು. ಆದರೆ ನನಗೆ ಮಾತ್ರ ಕಿಟ್ಟುವನ್ನು ಕರೆದೊಯ್ಯಲೇ ಬೇಕು ಎಂಬ ಭಾವನೆ ಬಂದಿತ್ತು. ಇದಕ್ಕೆ ಕಾರಣಗಳು ಹಲವಿದ್ದವು. ಕಿಟ್ಟುವಿನ ಆಟ ಚನ್ನಾಗಿತ್ತು. ಕೆಲವು ಸಾರಿ ಸುಲಭದಲ್ಲಿ ಮ್ಯಾಚ್ ಸೋತಿದ್ದರೂ ಆತನ ಮೇಲೆ ಒತ್ತಡ ಬಿದ್ದಂತೆಲ್ಲ ಗೆಲ್ಲುತ್ತಾ ಹೋಗುವ ಗುಣವಿತ್ತು. ಟೆನ್ಶನ್ ಮಾಡಿಕೊಳ್ಳದೇ ಆಡುವುದು ಆತನ ವಿಶೇಷ ಗುಣ. ಎಂತದ್ದೇ ಸೋಲಿನ ಸಂದರ್ಭವಿರಲಿ ನಗುತ್ತಾ, ಎದುರಾಳಿಯನ್ನು ನಗಿಸುತ್ತಾ ಆಟವಾಡುವುದು ಆತನಿಗೆ ಒಲಿದು ಬಂದ ಗುಣ ಎಂದರೂ ತಪ್ಪಿಲ್ಲ ಬಿಡಿ. ಜೊತೆಯಲ್ಲಿ ಆಟಕ್ಕೆ ಸಡನ್ ತಿರುವು ನೀಡಬಲ್ಲವನಾಗಿದ್ದ.  ಇದ್ದಕ್ಕಿದ್ದಂತೆ ಪಿನ್ ಇಟ್ಟು ಢಂ ಅನ್ನಿಸುವ ಆತನ ಆಟಕ್ಕೆ ಹಲವಾರು ಸಾರಿ ನಾನೇ ಬಲಿಯಾಗಿದ್ದೆ.!
ಅಲ್ಲದೇ ಈತ ನನ್ನ ಪರಮಾಪ್ತ ಮಿತ್ರ. ನಾನು-ರಾಘು-ಕಿಟ್ಟು ಕಾಲೇಜಿನಲ್ಲಿ ಪರಮಾಪ್ತ ದೋಸ್ತರು ಎಂಬುದು ಕಾಲೇಜಿನ ಕಾರಿಡಾರಿನಲ್ಲಿ ಕೊಬ್ಬಿನಿಂದ ಬೆಳೆದಿದ್ದ ಆಕೇಸಿಯಾ ಮರಗಳಿಗೂ ಗೊತ್ತಿದ್ದವು. ಆತ ಇಂತಹ ಪಯಣದಲ್ಲಿ ಜೊತೆಗೂಡಿದರೆ ಪ್ರಯಾಣ ಖುಷಿಯಾಗಿರುತ್ತದೆ. ಪ್ರಯಾಣ ಹಸಿ ಹಸಿರಾಗಿ ನೆನಪಿನಾಳದಲ್ಲಿ ನಿಲ್ಲಬೇಕೆಂದರೆ ಕಿಟ್ಟುವಿನಂತಹವರು ಒಬ್ಬರಾದರೂ ಇರಬೇಕು ಎಂದು ನನಗೆ ಅನ್ನಿಸಿತ್ತು. ಪರಮಾಪ್ತ ದೋಸ್ತ ಬರ್ತಾನೆ ಅಂದ್ರೆ ಯಾರು ಬಿಡ್ತಾರೆ ಹೇಳಿ..?
ಇಂತಹ ಕಾರಣಗಳೇ ನನಗೆ ಕಿಟ್ಟುವಿನ ಅಗತ್ಯತೆಯನ್ನು ಎದ್ದು ತೋರಿಸುವಂತೆ ಮಾಡಿದವು. ಅಲ್ಲದೇ team ನ captain ಆದ ನನಗೆ ಆತನೊಬ್ಬ ಸಮರ್ಥ ಹಾಗೂ ಅತ್ಯಗತ್ಯ ಆಟಗಾರನಂತೆ ಕಾಣಿಸಿದ. ಹಾಗಾಗಿಯೇ ನಮಗೆ ಚೆಸ್ ಕಲಿಸಿದ ಎಂ. ಕೆ. ಹೆಗಡೆಯವರ ಬಳಿ ಚಿಕ್ಕ ಚಾಲೆಂಜೊಂದನ್ನು ಮಾಡಿ ಅವನನ್ನು ಕಳಿಸಲು ಕೇಳಿದೆ. ಬಗಲ್ ಮೆ ದುಷ್ಮನ್ ಎನ್ನುವಂತೆ ಕಿಟ್ಟು ಬರುವುದು ನವೀನ ಪಾವಸ್ಕರನಿಗೆ ಇಷ್ಟವೇ ಇರಲಿಲ್ಲ. ನೀರಾರು ಸಾರಿ ಅಂವ ಬ್ಯಾಡ.. ಅಂವ ಬಂದರೆ ಹೊಗೆ ಗ್ಯಾರಂಟಿ ಎಂದು ನನ್ನಲ್ಲಿಯೂ, ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದ ನಾಗಭೂಷಣ ಗೌಡರ ಬಳಿಯೂ ಹೇಳಿದ್ದ. ಆದರೆ ನಾನು ಪಟ್ಟು ಸಡಿಲಿಸಿರಲಿಲ್ಲ. ಅವನಿಂದಾಗಿ ತಂಡ ಸೋತರೆ ಅದಕ್ಕೆ ನಾನೇ ಹೊಣೆಯಾಗುತ್ತೇನೆ ಎಂದೂ ಮಾತಿನ ಭರದಲ್ಲಿ ಹೇಳಿಬಿಟ್ಟಿದ್ದೆ. ಕೊನೆಗೆ ಒಲ್ಲದ ಮನಸ್ಸಿನಿಂದ ಕಿಟ್ಟುವನ್ನು ಟೀಂ ಮೆಂಬರ್ ಆಗಿ ಕಳಿಸಿದ್ದರು.
ಆದರೆ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ ಎಂಬುದು ಮುಂದಕ್ಕೆ ನಿಮಗೆ ಗೊತ್ತಾಗುತ್ತದೆ.. ಓದಿ.. ಆತ ನಮ್ಮ ಪಯಣದಲ್ಲಿ ಆಟವೊಂದೇ ಅಲ್ಲದೇ ಎಲ್ಲ ಕಡೆಗಳಲ್ಲಿಯೂ ಟ್ವಿಂಕಲ್ ಟಸ್ಟಾರ್ ಆಗಿ ಮೆರೆದುಬಿಟ್ಟ. ಕೊನೆಗೊಮ್ಮೆ ನನ್ನ ಚಾಲೆಂಜನ್ನು ಉಳಿಸಿದ ಕೀರ್ತಿಯೂ ಈತನಿಗೆ ಸಲ್ಲಲೇ ಬೇಕು. ಈತನ ಒಡನಾಟದಿಂದ ಪಯಣದ ನಡುವೆ ಅನೇಕ ಗಂಭೀರ ಸಮಸ್ಯೆಗಳು ನಮ್ಮನ್ನು ಹಿಡಿಬಿಡದೇ ಕಾಡಿದರೂ ತನ್ನಿಂದ ತಾನೇ ಸಾಲ್ವ್ ಆಗಿ ಹೋದವು. ಟೆನ್ಶನ್ ಸಮಯದಲ್ಲಿ ಆತ ಉಕ್ಕಿಸುತ್ತಿದ್ದ ಟೈಮಿಂಗ್ಸ್ ಭರಿತ ಡೈಲಾಗ್ ಹಾಗೂ ಹಾಸ್ಯದ ಮಾತುಗಳು ನಮ್ಮನ್ನು ಪಯಣದುದ್ದಕ್ಕೂ ಜೀವಂತಿಕೆಯಿಂದ ಕಾಪಾಡಿದವು ಎಂದರೆ ಅತಿಶಯೋಕ್ತಿಯಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಮಹಿಳಾ ಮಣಿಗಳ ಪರಿಚಯ, ಕಾಡಿದ ಗೌಡರು ಹಾಗೂ ಬಿಜಾಪುರದ ಕಡೆಗಿನ ಪಯಣ)

Thursday, October 31, 2013

ಗೆಳತಿ ನೀನಿಲ್ಲದೇ



ಗೆಳತಿ,
ನವಿಲಿನ ಚುಕ್ಕೆಗಳೇಕೋ
ನೀನಿಲ್ಲದೇ ಅರ್ಥ ಕಳೆದುಕೊಂಡಿವೆ.
ಹಾಡಬಯಸಿದ ಹಾಡೇಕೋ ಪದೆ ಪದೇ
ಶೃತಿ ತಪ್ಪಿ ಅಪದ್ಧವಾಗುತ್ತಿದೆ ||

ನೀನಿಲ್ಲದ ಇರುಳೊಳಿ ಕನಸಿಲ್ಲ
ಗೆಳತಿ, ಅದು ಹಲ್ಕಿಸಿಯುತ್ತಿದೆ.
ಉಣ್ಣುವ ಊಟವೆಲ್ಲ ರುಚಿ
ಮರೆತು ಸಪ್ಪೆಯಾಗಿವೆ ||

ಗೆಳತೀ, ನೀನಿಲ್ಲದೇ ಈ ಭುವಿಯ
ಹಸಿ ಹಸಿರ ರಾಶಿಗೇಕೋ ಅರ್ಥವಿಲ್ಲ.
ಬದುಕಿನ ಶಿಸ್ತು ಮರೆತಿದೆ.
ನಿದಿರೆಗೇಕೋ ಮೊದಲಿನ ಮತ್ತಿಲ್ಲ ||

ಗೆಳತೀ ನೀನಿಲ್ಲದ ಈ ಉದ್ದಾನುದ್ದದ
ಕಡಲತೀರ ಏಕೋ ಊಳಿಡುತ್ತಿದೆ.
ಮನ ಪದೆ ಪದೆ ಹಳಿತಪ್ಪುತ್ತಿದೆ.
ಕಣ್ಣಹನಿ ಅರ್ಥ ಕಳೆದುಕೊಳ್ಳುತ್ತಿದೆ. ||

ಗೆಳತೀ, ನೀನಿಲ್ಲದ
ಈ ಪ್ರೀತಿಗೆ ಅರ್ಥವೇ ಇಲ್ಲ
ನನ್ನ ಪ್ರೀತಿಗೆ ನೀನೇ ಎಲ್ಲ ||

{ಇದನ್ನು ಬರೆದಿದ್ದು = ದಂಟಕಲ್ಲಿನಲ್ಲಿ 03-01-2007ರಂದು}.

Wednesday, October 30, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 1

ಆತ್ಮೀಯರೇ..,
ತಿರುಗಾಟವೇ ನನ್ನ ಬದುಕು..
ಅಲ್ಲಿ ಇಲ್ಲಿ.. ಹಾಗೆ ಸುಮ್ಮನೆ ತಿರುಗಾಡುತ್ತಿರುವುದು..
ಪ್ರಸ್ತುತ ಕಾಲೇಜು ಫೈನಲ್ ಇಯರ್ ಆಗಿದ್ದಾಗ ನಾನು ನಮ್ಮ  ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಚದುರಂಗ ತಂಡದ ಕ್ಯಾಪ್ಟನ್ ಆಗಿ ಬಸವನ ಬಾಗೇವಾಡಿಗೆ ಹೋಗಿದ್ದರ ಪ್ರವಾಸ ಕಥನ..
ಅಲ್ಲೇನೇನಾಯ್ತು ಎನ್ನುವುದನ್ನು ಇಲ್ಲಿಟ್ಟಿದ್ದೇನೆ..
ಇಲ್ಲಿ ಬರುವ ಪಾತ್ರಗಳು 8+1 ಹಾಗೂ ಇತರೆ ಇತರೆ.. ಇವರು ನನ್ನ ಜೊತೆ ಹೋದವರು.
ಉಳಿದವರು ಹೀಗೆ ಬಂದು ಹಾಗೆ ಹೋಗುತ್ತಾರಾದರೂ ನೆನಪಿನ್ನಲಿ ಉಳಿಯುತ್ತಾರೆ.
9 ಜನರೂ 9 ಮುಖಗಳಂತೆ ತಮ್ಮ ವಿಶಿಷ್ಟ ಮ್ಯಾನರಿಸಮ್ಮಿನಿಂದ ಸದಾಕಾಲ ಕಾಡಬಲ್ಲರು.
ನಾನು ಹೊರಟಿದ್ದು ಚೆಸ್ ಆಟದ ಕಾರಣಕ್ಕಾಗಿ. ಒಂದು ವಾರದ  ಈ ಪ್ರವಾಸದ ರಸ-ರುಚಿ-ಸ್ವಾದ, ಹಾಸ್ಯ-ಸಿಟ್ಟು-ಸೆಡವು ಇವುಗಳೆಲ್ಲದರ ಬಹುರೂಪ ನಿಮ್ಮೆದುರು.
ಓದಿ, ಖುಷಿಪಡಿ, ಎಂಜಾಯ್ ಮಾಡಿ.. ಆ ನಂತರ ನಿಮ್ಮದೊಂದು ಚಿಕ್ಕ ಅನಿಸಿಕೆ ಕೊಡಿ..


**
17-09-2007, ಸೋಮವಾರ
             ಮುಂಚಿನ ದಿನ ರಾತ್ರಿಯೇ ನಾನು-ಕಿಟ್ಟು ದೋಸ್ತ ರಾಘವನ ರೂಮಿನಲ್ಲಿ ಉಳಿದುಕೊಂಡ ಕಾರಣದಿಂದ ನಾವು ಬಸ್ ಸ್ಟಾಂಡಿಗೆ ಲೇಟಾಗಿ ಬರುವ ಸಂಭವವೇ ಇರಲಿಲ್ಲ. ಬೆಳಿಗ್ಗೆ ಐದಕ್ಕೇ ಎದ್ದು, ದಡಬಡಿಸಿ ತಯಾರಾಗಿ , ನನ್ನ ಅಶ್ವಿನಿ ಸರ್ಕಲ್ಲಿನ ರೂಮಿಗೆ ಬಂದು ಕುಳಿತು ಅಲ್ಲೊಂದರ್ಧ ಘಂಟೆ ಹಾಗೆ ಸುಮ್ಮನೇ ಚೆಸ್ ಆಡಿದೆವು. ಆದಿನ ರಾಘವ ಹಾಗೂ ಕಿಟ್ಟು ಅದ್ಭುತ ಫಾರ್ಮಿನಲ್ಲಿದ್ದರು. ಪರಿಣಾಮ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಹೋದರು. ನಾನು ಸೋತು-ಸೋತು ಸುಣ್ಣವಾಗಿ ಹೋದೆ.
ಬೆಳಿಗ್ಗೆ ಏಳೂವರೆಗೆ ಬಸ್ ನಿಲ್ದಾಣದಲ್ಲಿರಬೇಕಾಗಿದ್ದ ನಾವು ಹತ್ತು ನಿಮಿಷ Late  ಆಗಿ ಹೋದೆವು. ಆಗಲೇ ಅಲ್ಲಿಗೆ ಬಂದಿದ್ದ ನವೀನ ಪಾವಸ್ಕರ `ಏನ್ರೋ..ಏಳೂವರೆಗೆ ಅಂದ್ರೆ ಈಗ ಬರೋದೇನು? ನಾನು ಏಳೂವರೆಯಿಂದ್ಲೇ ಕಾಯ್ತಾ ಇದ್ದೀನಿ..' ಎಂದು ವಟಗುಡಲು ಪ್ರಾರಂಭಿಸಿದ್ದ.
              ಆದರೆ ಬರಬೇಕಿದ್ದ ಮಹಿಳಾ ಮಣಿಗಳಿನ್ನೂ ಬಂದೇ ಇರಲಿಲ್ಲ. ಪವಿತ್ರಳೊಬ್ಬಳು ಮಾತ್ರ ಬಂದಿದ್ದಳು. ಉಳಿದವರು ಒಬ್ಬೊಬ್ಬರಾಗಿ ಬರುತ್ತಿದ್ದರು. ಮುಖ್ಯವಾಗಿ ನಮ್ಮ ತಂಡದ ಮ್ಯಾನೇಜರ್ ಆಗಿದ್ದ ಕಾಲೇಜಿನ ದೈಹಿಕ ಶಿಕ್ಷಕ ಎನ್. ಎಚ್. ಗೌಡರೇ ಬಂದಿರಲಿಲ್ಲ.
             ಅಂತೂ ಎಲ್ಲರೂ ಬಂದು ತಲುಪುವ ವೇಳೆಗೆ ಗಂಟೆ ಎಂಟನ್ನು ದಾಟಿ ಹದಿನೈದು ನಿಮಿಷವನ್ನು ಹೆಚ್ಚಿಗೆ ನುಂಗಿತ್ತು. ನಾನು, ಕಿಟ್ಟು, ರಾಘವ ಅವರಿಗಂತೂ ಇವರು ಇಸ್ಟು ಲೇಟಾಗಿ ಬರ್ತಾರೆ ಅಂತ ಗೊತ್ತಿದ್ದರೆ ನಾವುನ್ನೂ ನಾಲ್ಕೈದು ಮ್ಯಾಚ್ ಆಡಿ ಬರುತ್ತಿದ್ದೆವು ಎಂದು ಕೊಂಡೆವು.. ಕಿಟ್ಟು ಅಂತೂ ಚಿಕ್ಕದಾಗಿ `ಛೇ.. ವಿನಯನ್ನ  ಇನ್ನೊಂದೆರಡು ಮ್ಯಾಚಲ್ಲಿ ಹೊಡೆಯಲಾಗ್ತಿತ್ತು..' ಎಂದಾಗ ನನಗೆ ಹಾಗೂ ರಾಘುವಿಗೆ ನಗುವ ಬುಗ್ಗೆಯೇ ಹೊಮ್ಮಿತ್ತು.
          ಆಗಲೇ ನಮ್ಮ ಗೌಡರು ಹುಬ್ಬಳ್ಳಿಗೆ ಲಟ್ಟು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಮ್ಮನ್ನು ಕರೆದೊಯ್ಯಲು ಅನುವಾದರು. ಅವರ ಜೊತೆಗೆ ಹೌದೆನ್ನಲು ಪಾವಸ್ಕರನಿದ್ದ. ನನಗೆ ಹಾಗೂ ಕಿಟ್ಟುವಿಗೆ ಶಿರಸಿಯಲ್ಲಿ ಆಗಿನ ಕಾಲಕ್ಕೆ ಚನ್ನಾಗಿದ್ದ `ಸಾಮ್ರಾಟ್' ಬಸ್ಸಿನಲ್ಲಿ ಹೋಗುವ ಆಸೆ.
          `ಸರ.. ಸಾಮ್ರಾಟ ಬಸ್ಸಿಗೆ ಹೋಗೋಣ್ರೀ..' ಅಂದರೆ ಗೌಡರು ಒಲ್ಲೆ ಎಂದರು. ನಮ್ಮ ಮನದಾಳವನ್ನು ತಕ್ಷಣ ಅರಿತ ರಾಘವ `ಸರ್ ನೀವು ಸಾಮ್ರಾಟ್ ಬಸ್ಸಿಗೆ ಹೋಗೋದೇ ಒಳ್ಳೇದು. ಯಾಕಂದ್ರೆ ಅದು ವೀಡಿಯೋ ಕೋಚ್ ಬಸ್ಸು. ಜೊತೆಗೆ ಕೆಎಸ್ಸಾರ್ಟಿಸಿಗಿಂತ 2 ರು. ಕಡಿಮೆ ರೇಟು.' ಎಂದ.
          ಒಂದು ತಲೆಗೆ ಎರಡು ರುಪಾಯಿಯಂತೆ 9 ತಲೆಗೆ 18 ರುಪಾಯಿ ಉಳಿಯುತ್ತದೆ ಎಂದು ಆಲೋಚನೆ ಮಾಡಿ ತಲೆ ಓಡಿಸಿದ ನಾಗಭೂಷಣ ಗೌಡರು ರಾಘವನ ಸಲಹೆಗೆ ಜೈ ಎಂದು ನಮ್ಮನ್ನು ಸಾಮ್ರಾಟ್ ಬಸ್ಸು ಹತ್ತಿಸಿದರು.
         ನಾನು, ನವೀನ ಪಾವಸ್ಕರ, ಆನಂದ ನಾಯ್ಕ, ಕೃಷ್ಣ ಮೂರ್ತಿ ದೀಕ್ಷಿತ, ಪೂರ್ಣಿಮಾ ಹೆಗಡೆ ವಾನಳ್ಳಿ, ಪೂರ್ಣಿಮಾ ಬೆಂಗ್ರೆ ಭಟ್ಕಳ, ತೃಪ್ತಿ ಹೆಗಡೆ, ಪವಿತ್ರಾ ಹೆಗಡೆ ಹಾಗೂ ನಾಗಭೂಷಣ ಗೌಡರನ್ನು ಹೊಂದಿದ ಬಸ್ಸು ಶಿರಸಿಯನ್ನು ಬಿಡುವ ಹೊತ್ತಿಗೆ ರಾಘವ ನಮಗೆ ಟಾಟಾ ಮಾಡಿ ಶುಭವಿದಾಯ ಹೇಳಿಯಾಗಿತ್ತು. ಸಮಯ ಆಗಲೇ 8.30ನ್ನೂ ಮೀರಿ ಮುಂದಕ್ಕೆ ಟಿಕ್ಕೆನ್ನುತ್ತಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ-ವಿಶಿಷ್ಟ ಸಾಮ್ರಾಟ್ ಬಸ್ಸು ಹಾಗೂ ದೋಸ್ತರ ದಂಡು)

Sunday, October 27, 2013

ಮದ್ವೆ ಮಾಡ್ಕ್ಯಳೇ..,


ಯಮ್ಮನೆ ಮಾಣಿ ಚೋಲೋ ಇದ್ದ
ಮದ್ವೆ ಮಾಡ್ಕೈಳೇ ಕೂಸೆ,
ಯಮ್ಮನೆ ಮಾಣಿ ಚೊಲೋ ಇದ್ದ
ಮದ್ವೆ ಮಾಡ್ಕ್ಯಳೇ ||

ಅಮೇರಿಕಾದಲ್ಲಿ ಜ್ವಾಬ್ ನಲ್ಲಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ,
ಐವತ್ತು ಸಾವ್ರ ಸಂಬ್ಳ ಬತ್ತು
ಮದ್ವೆ ಮಾಡ್ಕ್ಯಲೇ ||

ಕಾರು, ಗೀರು ಬಂಗ್ಲೆ ಇದ್ದು
ಮದ್ವೆ ಮಾಡ್ಕ್ಯಳೇ ಕೂಸೆ,
ಆಳು, ಕಾಳು ಜೋರೇ ಇದ್ದ
ಮದ್ವೆ ಮಾಡ್ಕ್ಯಳೇ ||

ಜಮೀನಂತೂ ರಾಶಿ ಇದ್ದು
ಮದ್ವೆ ಮಾಡ್ಕ್ಯಳೇ ಕೂಸೆ,
ಹವ್ಯಕರಲ್ಲಿ ಹೆಣ್ಣು ಕಡಿಮೆ
ಮದ್ವೆ ಮಾಡ್ಕ್ಯಳೇ ||

ಯಮ್ಮನೆ ಮಾಣಿ ಭಾರಿ ಶುಭಗ
ಚಟ ಮಾಡ್ತ್ನಿಲ್ಯೇ ಕೂಸೆ
ಜೂಜಾಡ್ತ್ನಿಲ್ಲೆ, ಕುಡೀತ್ನಿಲ್ಲೆ
ಓಸಿ ಆಡ್ತ್ನಿಲ್ಲೆ ||

ಯಮ್ಮನೆ ಮಾಣಿ ಶಿಸ್ತಾಗಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ,
ಸದಾ ನಿನ್ನ ಸೇವೆ ಮಾಡ್ತ
ಮದ್ವೆ ಮಾಡ್ಕ್ಯಳೇ ||

ವಾರಕ್ಕೊಮ್ಮೆ ಸೀರೆ ತತ್ತ
ಮದ್ವೆ ಮಾಡ್ಕ್ಯಳೇ ಕೂಸೆ,
ತಿಂಗ್ಳಿಗೊಂದು ನೆಕ್ಲೆಸ್ ತತ್ತಾ
ಮದ್ವೆ ಮಾಡ್ಕ್ಯಳೇ ||

ಕಪ್ಪಗಿದ್ರೂ ಒಪ್ಪಾಗಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ
ಬದುಕಿನ ಪೂರ್ತಿ ಪ್ರೀತಿ ಮಾಡ್ತ
ಮದ್ವೆ ಮಾಡ್ಕ್ಯಳೇ ||

(ಇದೊಂದು ಹವ್ಯಕ ಟಪ್ಪಾಂಗುಚ್ಚಿ ಗೀತೆ. ಹವ್ಯಕರಲ್ಲಿ ಹೆಣ್ಣು ಕಡಿಮೆ. ಹುಡುಗ ಎಷ್ಟೇ ಸಕಲಗುಣ ಸಂಪನ್ನರಾದರೂ ಹವ್ಯಕ ಹುಡುಗಿಯರು ಕ್ಯಾತೆ ತೆಗೆದು ಬೇಡವೆನ್ನುತ್ತಾರೆ. ಗಂಡಿನ ತಂದೆ-ತಾಯಿ ಹುಡುಗಿಯ ಬಳಿ ಬಂದು ಮದ್ವೆ ಮಾಡ್ಕ್ಯಳೇ ಎಂದು ಗೋಗರೆದು, ಮಗನ ಗುಣಗಾನ ಮಾಡಿ ಮದುವೆ ಮಾಡಿಕೋ ಎನ್ನುವ ಹಾಸ್ಯಮಿಶ್ರಿತ ಗೀತೆ.