ಚಿನ್ನು ಮೊಲ ಹಾಗೂ ಕಣ್ಣೀರು..
ಬಾಂಧವ್ಯ ನೋಡಿ ಹೇಗಿರುತ್ತದೆ ಅಂತ,...
ಅದೆಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿ ಹಾಲು ಕುಡಿಯಬೇಕಿತ್ತೋ...
ಅದೆಷ್ಟು ಚೆಂದವಾಗಿ ಚೆಂಗನೆ ನೆಗೆಯುತ್ತ ಹುಲ್ಲು ಹಾಸಿನ ಮೇಲೆ ನರ್ತನ ಮಾಡಬೇಕಿತ್ತೋ...
ಆದರೆ ಹಾಗಾಗಲಿಲ್ಲ...
ಈಗ ಎರಡು ದಿನಗಳ ಹಿಂದೆ ನನ್ನ ಭಾವ ಬೈಕೇರಿ ಮನೆಯ ಕಡೆಗೆ ಮರಳುತ್ತಿದ್ದಾಗ ರಸ್ತೆ ಮಧ್ಯ ಮಳೆಯಲ್ಲಿ ಏನೋ ಬಿದ್ದುಕೊಂಡಿದ್ದು ಕಾಣಿಸಿತು... ರಾತ್ರಿಯಾಗಿತ್ತು. ಲೈಟಿನ ಬೆಳಕಿನಲ್ಲಿ ಅದೇನೆಂಬುದು ಸ್ಪಷ್ಟವಾಗಿರಲಿಲ್ಲ..
ಗಾಡಿ ನಿಲ್ಲಿಸದಾಗ ನಿಧಾನವಾಗಿ ಪಕ್ಕಕ್ಕೆ ಸರಿದು ಹೋಯಿತೆಂಬುದು ಆತನೇ ಹೇಳಿದ ಸಂಗತಿ..
ಬೈಕಿನಡಿಯಲ್ಲಿ ಬಿತ್ತೇ?
ಹುಡುಕಿದಾಗ ಕಂಡಿದ್ದ ಪುಟ್ಟ ಮೊಲದ ಮರಿ..
ಅದೆಷ್ಟು ಪುಟ್ಟದು ಅಂದರೆ ಗುಬ್ಬಿಗಿಂತ ಸ್ವಲ್ಪ ದೊಡ್ಡ ಗಾತ್ರವಿರಬೇಕು ಅಷ್ಟೇ..
ಮಳೆಯಲ್ಲಿ ನಡುಗುತ್ತಾ.. ಓಡಿಹೋಗಲೂ ಶಕ್ತಿಯಿಲ್ಲದೇ..
ಅಮ್ಮನ ಸುಳಿವಿಲ್ಲದೆ ಕಂಗಾಲಾಗಿತ್ತು...
ಸಾಮಾನ್ಯವಾಗಿ ರಾತ್ರಿಯ ವೇಳೆಯಲ್ಲಿ ನಾನು ಬೈಕ್ ಮೇಲೆ ಹೋಗುವಾಗಲೆಲ್ಲ ದೊಡ್ಡ ದೊಡ್ಡ ಮೊಲಗಳು ಬೈಕಿನ ಲೈಟಿಗೆ ಕಣ್ಣು ಕೊಡುತ್ತ ಬೆಳಕು ಕಂಡಲ್ಲಿ ದಾರಿಗಡ್ಡವಾಗಿ ಓಡುತ್ತವೆ.. ನಮಗಿನಂತ ಮುಂದೆ.. ನಾವು ಅಥವಾ ಮೊಲ ಸ್ವಲ್ಪ ಯಾಮಾರಿದರೂ ಮೈಕಡಿಗೆ ಜೀವ ಕೊನೆಯಾಗುತ್ತದೆ.. ಅದಕ್ಕೆ ರಾತ್ರಿ ನಾನು ಮೊಲ ಕಂಡಾಗಲೆಲ್ಲ ಬಹಳ ಸ್ಲೋ ರೈಡಿಂಗ ಮಾಡುತ್ತೇನೆ..
ಬಹುಶಃ ಆ ಮರಿಯ ತಾಯಿ ಯಾವುದೋ ಬೈಕಿನಡಿ ಬಿದ್ದಿರಬೇಕು..
ಅಥವಾ ಮೊಲವನ್ನು ತಿನ್ನುವವರ ಕೈಗೆ ಸಿಕ್ಕಿತೋ ಕಾಣೆ..
ಮಳೆಯಿತ್ತಲ್ಲ ಪುಟ್ಟಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಾಗ ಅಮ್ಮ ಎಲ್ಲೋ ಕಾಣೆಯಾಯಿತು..
ಮರಿಗೆ ದಿಕ್ಕೇ ತೋಚಲಿಲ್ಲ..
ಭಾವನ ಕೈಗೆ ಸಿಕ್ಕಿತು..
ಕಾಲು ಮೈ, ಕಣ್ಣಲೆಲ್ಲ ಮಣ್ಣುರಾಡಿ.. ಮನ್ಣಿನ ಮುದ್ದೆಯಂತಾಗಿದ್ದ ಮರಿಯನ್ನು ನಾಜೂಕಿನಿಂದ ಎತ್ತಿಕೊಂಡು ಬಂದಿದ್ದ..
ಮನೆಗೆ ಬಂದು ಬೆಚ್ಚನೆಯ ಬಟ್ಟೆಯಲ್ಲಿ ಒರೆಸಿ ಬೆಚ್ಚಗೆ ಗೋಣಿಯ ಚಾದರ ಮಾಡಿ ಹೊದೆಸಿ ಬೆಕ್ಕಿನ ಕಾಟ ತಪ್ಪಿಸುವ ಸಲುವಾಗಿ ಡಬ್ಬಿಯಲ್ಲಿ ಗೂಡು ಮಾಡಿ ಮಲಗಿಸಿದ್ದ..
ಆಮೇಲೆ ಸಮಸ್ಯೆ ಶುರು..
ತಂದಿದ್ದೇವೆ..? ಅದೆಂತ ತಿನ್ನುತ್ತದೆ ಎಂಬುದು ಗೊತ್ತಿಲ್ಲ
ಮೊಲಕೆ ಉಪ್ಪು ಅಂದರೆ ಆಗದು ಹುಷಾರು ಅಂತ ಯಾರೋ ಹೇಳಿದ್ದರು..
ಉಪ್ಪನ್ನು ದೂರವಿಟ್ಟೆವು..
ಮೊಲ ತಾಯಿ ಹಾಲನ್ನು ಬಿಟ್ಟು ಉಳಿದಂತೆ ನೀರನ್ನು ಮಾತ್ರ ಕುಡಿಯುತ್ತದೆ ಎಂದು ಯಾರೋ ಹೇಳಿದರು..
ಗೊಂದಲವಾಯಿತು.. ಒಂದಷ್ಟು ಎಳೆಯ ಹುಲ್ಲು, ಬೆಂಡೆಕಾಯಿ ಮುಂತಾದ ತರಕಾರಿ ತಂದೆವು..
ಚಿಕ್ಕ ಚಿಕ್ಕ ತುಂಡನ್ನಾಗಿ ಮಾಡಿ ಅದರ ಎದುರು ಇಟ್ಟದ್ದೂ ಆಯ್ತು..
ಕ್ಯಾರೇಟ್ ಇಸ್ಟ ಎಂದು ಯಾರದ್ದೋ ಮನೆಯಿಂದ ತಂದು ಇಟ್ಟದ್ದಾಯ್ತು..
ನಮ್ಮೆದುರು ಏನೆಂದರೆ ಏನನ್ನೂ ತಿನ್ನಲಿಲ್ಲ..
ಆದರೆ ನಾವು ಅತ್ತ ಇತ್ತ ಹೋದಾಗ ತಿನ್ನುತ್ತಿತ್ತೆಂದು ಕಾಣುತ್ತದೆ..
ಅರ್ಧ ತಿಂದು ಬಿಟ್ಟಿದ್ದ ಹಣ್ಣಿನ ಸಿಪ್ಪೆಗಳು ಸಾಕ್ಷಿ ಹೇಳುತ್ತಿದ್ದವು..
ಆದರೆ ನಮ್ಮೆದುರು ಮಾತ್ರ ಮಂಗನ ಉಪವಾಸ...
ಈ ಮರಿ ಬಂದದ್ದೇ ತಡ ಮನೆಯಲ್ಲಿ ಜೀವಕಳೆ..
ತಂಗಿಗಂತೂ ಸ್ವರ್ಗವೇ ಧರೆಗಿಳಿದಂತೆ ಆಗಿತ್ತು..
ಇನ್ನು ತಂಗಿ ಮಗನಿಗೆ ಬಹಳ ಸಂತೋಷವಾಗಿತ್ತು..
ಒಂದೂ ವರೆ ವರ್ಷದ ಆತನಿಗೆ ಎಲ್ಲ ಪ್ರಾಣಿಗಳೂ, ಪಕ್ಷಗಳೂ ಸೇರಿದಂತೆ ಸಕಲ ಜಗತ್ತುಗಳೂ ಕುತೂಹಲದ, ಬೆರಗುಹುಟ್ಟಿಸುವ ಅಂಶಗಳು.. ಮನೆಗೆ ಬಂದು ಕಾಟ ಕೊಡುತ್ತಿದ್ದ ಮಾಳಬೆಕ್ಕನ್ನು ಮನೆಯ ಸದಸ್ಯನನ್ನಾಗಿ ಮಾಡಿದ್ದ ಕೀರ್ತಿ ಆತನಿಗೆ ಸಲ್ಲಬೇಕು.. (ಅದಕ್ಕೇ ನಾವು ಕಾಮರಾಜ ಅಂತ ಹೆಸರನ್ನಿಟ್ಟಿದ್ದೆವು.) ಆ ಬೆಕ್ಕೂ ಕೂಡ ಆತನಿಗೆ ಬಹಳ ಒಗ್ಗಿಬಿಟ್ಟಿದೆ...
ನಾವು ಮುಟ್ಟಲು ಹೋದರೆ ಓಡಿಹೋಗುವ ಆಥವಾ ಸಿಟ್ಟನ್ನು ಮಾಡಿಕೊಳ್ಳುವ ಆ ಬೆಕ್ಕಿಗೆ ಆತ ಏನು ಮಾಡಿದರೂ ತೊಂದರೆಯಿಲ್ಲ.. ತಂಗಿಮಗ ಶ್ರೀವತ್ಸ ಅದಕ್ಕಾಗಿಯೇ ಬೆಕ್ಕಿನ ಬಾಲವನ್ನು ಎಳೆಯುವುದರ ಆದಿಯಾಗಿ ಅದನ್ನು ಗೊಂಬೆಯಂತೆ ತಿರುಗಿಸುವುದು, ಅದರ ಜೊತೆಗೆ ಆಡುವುದು ಮಾಡುತ್ತಿದ್ದ.. ಅದಕ್ಕೆ ತಕ್ಕಂತೆ ಅದೂ ಕೂಡ ಆಡುತ್ತಿತ್ತು...
ಈಗ ಮೊಲದ ಮರಿ ಮನೆಗೆ ಬಂದರೆ ಆತನನ್ನು ತಡೆಯುವವರ್ಯಾರು..?
ಮೊಲವನ್ನು ಇಟ್ಟಿದ್ದ ಡಬ್ಬಿಯತ್ತ ನಿಮಿಷಕ್ಕೊಂದು ಬಾರಿ ಹೋಗಿ ಕುಕ್ಕರುಗಾಲಲ್ಲಿ ಕುಳಿತು ಕುತೂಹಲದಿಂದ ಅದನ್ನು ನೋಡುವುದು ಕಣ್ಣರಳಿಸುವುದು, ಅಚ್ಚರಿಯಿಂದ ಆಮ್ಮನನ್ನು ಕರೆಯುವುದು ಆತನ ಆಟವಾಗಿಬಿಟ್ಟಿತು..
ಮೊಲದ ಮರಿಗೂ ಏನನ್ನಿಸಿತೋ ಗೊತ್ತಿಲ್ಲ..
ಆತ ಬಂದಾಗಲೆಲ್ಲ ಚಂಗನೆ ನೆಗೆದು ಕುಣಿಯುತ್ತಿತ್ತು..
ಡಬ್ಬಿಯಿಂದ ಹೊರಬರಲು ಯತ್ನಿಸುತ್ತಿತ್ತು..
ಇದನ್ನು ನೋಡಿ ಮತ್ತಷ್ಟು ಹರ್ಷ ಗೊಳ್ಳುತ್ತಿದ್ದುದು ಶ್ರೀವತ್ಸ...
ತಂಗಿ ಈ ಮೊಲದ ಮರಿಗೆ ಚಿನ್ನು ಎನ್ನುವ ಹೆಸರನ್ನಿಟ್ಟೇ ಬಿಟ್ಟಳು...
ಮೊದಲಿಂದಲೂ ಮೊಲವನ್ನು ಸಾಕಬೇಕೆಂಬ ನಮ್ಮ ಉತ್ಕಟ ಇಚ್ಛೆ ಈ ಮೂಲಕ ಪೂರ್ತಿಯಾಗಿತ್ತು..
ಜೊತೆಯಲ್ಲಿ ಹೊಸ ಸಮಸ್ಯೆಗಳು ಹುಟ್ಟಿದ್ದವು.. ಬೆಕ್ಕಿನ ಕಾಟ ತಡೆಯುವುದು, ಆಹಾರ ಹುಡುಕುವುದು, ರಕ್ಷಣೆ ಮಾಡುವುದು ಇತ್ಯಾದಿ.. ಇದಕ್ಕೆ ತಕ್ಕಂತೆ ನನ್ನ ಅಪ್ಪನ ಬಳಿ ಅದ್ಯಾರೋ ಮೊಲವನ್ನು ಮನೆಯಲ್ಲಿ ಸಾಕಿದರೆ ಮಕ್ಕಳು ಸಾಯುತ್ತಾರೆ ಎಂದು ಹೇಳಿದರಂತೆ... ಪ್ರಾರಂಭವಾಯಿತು ವಿರೋಧ ಪಕ್ಷದ ಧರಣಿ... ಬಹುಮತ ನಮ್ಮ ಪರವಿತ್ತು... ವಿರೋಧಿಗಳ ಅಲೆ ಸಣ್ಣದಾಯಿತು.. ಬಡಪಾಯಿ ಮೊಲ ಉಳಿಯಿತು..
ಎರಡು ದಿನ ಮೊಲದೊಡನೆ ಸಹಜವಾಗಿ, ತಮಾಷೆಯಾಗಿ ಕಳೆಯಿತು..
ಆದರೆ ನಿನ್ನೆ ರಾತ್ರಿ (ಜೂನ್ 1ರಂದು) ಮೊಲ ಇದ್ದಕ್ಕಿದ್ದಂತೆ ಮಲಗಿತು.. ಎಂದಿನ ಲವಲವಿಕೆಯಿಲ್ಲ.. ಮಲಗಿಯೇ ಇತ್ತು.. ಹುಷಾರಿಲ್ಲವೋ ಗೊತ್ತಾಗಲಿಲ್ಲ.. ಸತ್ತೇ ಹೋಯಿತೆ..? ಊಹುಂ.. ಉಸಿರಾಟ ಮಾಡುತ್ತಿದೆ. ಆದರೆ ಮೊಲವನ್ನು ನಿಲ್ಲಿಸ ಹೋದರೆ ಬುಡುಕ್ಕನೆ ಬೀಳುವುದು, ಮುಂದಿನ ಎರಡು ಕಾಲನ್ನು ಒದ್ದುಕೊಳ್ಳುವುದು ಮಾಡಲು ಆರಮಬಿಸಿತು. ಹಸಿವಾಯಿತೆ ಎಂದುಕೊಂಡು ತಿಂಡಿ ಕೊಟ್ಟೆವು, ಕ್ಯಾರೆಟ್ ಇಟ್ಟೆವು..ಊಹೂಂ ಏನನ್ನೂ ಮುಟ್ಟುತ್ತಿಲ್ಲ...
ಯಾಕೋ ಮನಸ್ಸಿನಲ್ಲಿ ಅಳುಕು..
ಅಷ್ಟರಲ್ಲಿ ಅದನ್ನು ನೋಡಿದ ಅಮ್ಮ `ತಮಾ.. ಇದು ಬದುಕುವುದು ಕಷ್ಟ .. ತಾಯಿ ಹಾಲು ಕುಡಿದು ಬೆಳೆದ ಮೊಲಕ್ಕೆ ನಾವು ತಿಂಡಿಕೊಟ್ಟರೂ ಒಗ್ಗಿಕೊಳ್ಳಲಿಲ್ಲ.. ಏನೋ ಹೆಚ್ಚು ಕಡಿಮೆ ಆದಂತಿದೆ..'ಎಂದಾಗ ಮನಸ್ಸು ಭಾರ ಭಾರ...
`ಮೊಲಕ್ಕೆ ಅಷ್ಟುದ್ದದ ಹಲ್ಲಿದೆ.. ಏನನ್ನಾದರೂ ತಿನ್ನುತ್ತದೆ..' ಎಂದು ವಿಚಿತ್ರ ವಾದವನ್ನು ಮಾಡಿದ್ದು ತಂಗಿ..
ಶ್ರೀವತ್ಸ ಮಲಗಿದ್ದನಾದ್ದರಿಂದ ಈ ಸಂದರ್ಭದಲ್ಲಿ ಅವನ ಉಪಸ್ಥಿತಿ ಇರಲಿಲ್ಲ..
ಭಾವನಿಗೆ ಯಾಕಾದರೂ ತಂದೆನೋ ಎನ್ನುವಷ್ಟು ಮನಸ್ಸು ವಿಚಲಿತವಾಗಿತ್ತು..
ಮಳೆಯಲ್ಲಿ ಸಾಯುತ್ತಿತ್ತು.. ಕಾಗೆ ಗೆ ಆಹಾರವಾಗುತ್ತಿತ್ತು.. ಛೇ.. ಇಲ್ಲಿ ತಂದರೂ ಬದುಕುತ್ತಿಲ್ಲವಲ್ಲ ಎಂದು ಪೇಚಾಡಿದ..
ರಾತ್ರಿ ಅದಕ್ಕೆ ಸಾಕಷ್ಟು ಬಂದೋಬಸ್ತು ಮಾಡಿ ಬೆಚ್ಚಗೆ ಮಲಗಿಸಿದೆವು..
ಬೆಳಗಾಗುವ ವೇಳೆಗೆ ಮೊಲ ಬದುಕಿರಲಿಲ್ಲ..
ಚಿನ್ನು ಜೀವ ಬಿಟ್ಟಿತ್ತು...
ಯಾಕೋ ಮನಸ್ಸೆಲ್ಲ ಒದ್ದೆಯಾದಂತೆನಿಸಿತು..
ಬೆಳಿಗ್ಗೆ ಎದ್ದವನೆ ಓಡಿಬಂದು ಡಬ್ಬಿಯನ್ನು ನೋಡಿದ ಶ್ರೀವತ್ಸ ನೋಡುತ್ತಲೇ ಇದ್ದ..
ನೋಡುತ್ತಲೇ ಇದ್ದ..
ಮೊಲ ಕುಣಿಯುತ್ತಲೇ ಇಲ್ಲ...
ಕೊನೆಗೆ ಆತನಿಗೆ ಏನನ್ನಿಸಿತೋ ಏನೋ.. ಅಳಲು ಪ್ರಾರಂಭಿಸಿದ... ಹೇಳಲು ಆತನಿಗಿನ್ನೂ ಮಾತು ಬರುವುದಿಲ್ಲವಲ್ಲ...
ಅಮ್ಮಾ.. ಮೀ.. ಮೀ... ಅಮ್ಮಾ.. ಮೀ.. ಮೀ.. ಎಂದು ಮೊಲವನ್ನು ತೋರಿಸುತ್ತ ಳಲು ಪ್ರಾರಮಭಿಸಿದ.. ಚಾಕ್ಲೆಟ್ ತೋರಿಸಿ ಆಮಿಷವೊಡ್ಡಿದರೂ ಮರುಳಾಗುತ್ತಿಲ್ಲ..
ಮೊಲದ ಮರಿ ಆತನನ್ನು ಅಷ್ಟು ಕಾಡಿತ್ತು.. ಆತ ಅಷ್ಟು ಹಚ್ಚಿಕೊಂಡಿದ್ದ..
ಈ ಚಿತ್ರಣವನ್ನು ನೋಡಿ ನಮ್ಮ ಕಣ್ಣಂಚಲ್ಲೂ ನೀರು...
ನೆನಪಾದಾಗ ಮನಸ್ಸು ಕಲ್ಲವಿಲ...