Sunday, December 23, 2012

ಮತ್ತೊಂದಿಷ್ಟು ಹನಿಚುಟುಕುಗಳು

ಮತ್ತೊಂದಿಷ್ಟು ಹನಿಚುಟುಕುಗಳು

38)ಪ್ರೀತಿಗೆ ಕಾರಣ

ಪ್ರಿಯಾ ನೀನು
ನಿನ್ನ ಕೈಯಲ್ಲಿ
ಫಳಫಳನೆ
ಹೊಳೆಯುತ್ತಿರುವ
ಚಿನ್ನದ ನೆಕ್ಲೆಸ್ಸಿನಷ್ಟೇ
ಸುಂದರ..|

39)ಧನ್ವಂತರಿ

ಧನ್ವಂತರಿ ಧನ್ವಂತರಿ
ರೋಗಗಳೆಲ್ಲಾ ಓಡಿ ಹೋಯ್ತ್ರೀ
ಆದ್ರೂ ಮೈ ಮರೀಬ್ಯಾಡ್ರಿ
ಆಗಾಗ ಇಲ್ಲಿಗ್ ಬರ್ತಾ ಇರ್ರಿ||

40)ಜೀಸಸ್

ಜೀಸಸ್
ನೀನು ಬಹಳ
ಜೀನಿಯಸ್
ನಮ್ಮನ್ನು ಕಾಪಾಡುವೆ ಎಂದು ಮಾಡು
ಪ್ರಾಮಿಸ್
ಅಷ್ಟಾದರೆ ನಿನ್ನೆದುರು ಉಳಿದ ದೇವರುಗಳೆಲ್ಲಾ
ನೋ ಯೂಸ್..||

41)ಪ್ರೀತಿ

ಪ್ರೀತಿ, ಪ್ರೀತಿ, ಪ್ರೀತಿ
ನೀ ಯಾಕ್ ಹಿಂಗ್ ಆದ್ತಿ.?
ನಂಗ ಕೋಪ ಬರತೈತಿ
ಆದರ ನೀ ನಂಗ ಎಲ್ಲಿ ಸಿಗ್ತಿ..?

42)ಪರೀಕ್ಷೆ

ಪರೀಕ್ಷೆ ಪರೀಕ್ಷೆ
ಬಹಳ ನಿರೀಕ್ಷೆ|
ಮಾಡಿದರೆ ಸಮೀಕ್ಷೆ
ಹಲವರಿಗಿಲ್ಲ ರಕ್ಷೆ||
ಸರಿಯಾಗಿ ಓದದಿದ್ರೆ ಮಾತ್ರ
ಫೇಲಾಗೋದೆ ಅವರಿಗೆ ಶಿಕ್ಷೆ||

(ಹೈಸ್ಕೂಲಿನ ಕೊನೆಯ ದಿನಗಳಲ್ಲಿ, ಇನ್ನೂ ಬರವಣಿಗೆಯೆಡೆಗೆ ತುಡಿಯುತ್ತಿದ್ದ ಮನಸ್ಸು. ಆ ಸಂದರ್ಭದಲ್ಲಿ ಮೂಡಿ ಬಂದ ಕೆಲವು ಹನಿ ಚುಟುಕುಗಳು. ಮೊದ ಮೊದಲ ಬರಹಗಳು ಇವು.. )

Wednesday, December 19, 2012

ಎಲ್ಲ ಮರೆತಿರುವಾಗ (ಕಥೆ ಭಾಗ-8)

ಎಲ್ಲ ಮರೆತಿರುವಾಗ

ಭಾಗ-8

(ಇಲ್ಲಿಯವರೆಗೆ- ರಚನಾಳಿಗೆ ತನ್ನ ಬದುಕಿನ ದುರಂತ ದಿನಗಳನ್ನು ಹೇಳುತ್ತಿರುವ ಜೀವನ್..)
ರಚನಾ ನೀನು ಏನೇ ಹೇಳು ಕಾಲೇಜು ಲೈಫಿದೆಯಲ್ಲ ಅದರಂತಹ ಸುಂದರ ಜೀವನ ಇನ್ನೊಂದಿಲ್ಲ. ಅಲ್ಲಿ ನಾವು ಏನೆಲ್ಲ ಮಾಡಬಹುದು. ಸಾಧಿಸಬಹುದು. ಬಹುಶಃ ಬದುಕನ್ನು ಸಂಪೂರ್ಣವಾಗಿ ರೂಪಿಸುವುದೇ ಕಾಲೇಜು ಎನ್ನಬಹುದು. ಅಲ್ವಾ?
ರಚನಾ ಸುಮ್ಮನೆ ತಲೆಯಾಡಿಸಿದಳು.
ಜೀವನ್ ಮುಂದುವರಿಸಿದ.
ನನ್ನ ಕಾಲೆಜು ಲೈಫು ಪ್ರಾರಂಭದ ಇರಡು ತಿಂಗಳು ಸೀದಾ ಸಾದಾ ಆಗಿಯೇ ಇತ್ತು. ಹೊಸ ಪರಿಚಯ, ಹೊಸ ವಾತಾವರಣ, ಹೊಸ ಗೆಳೆಯರು, ಹೀಗೆಯೇ ಸಾಗುತ್ತಿತ್ತು. ಯಥಾ ಪ್ರಕಾರ ಲೇಟ್ ಕಮ್ಮರ್ ನಾನಾದ್ದರಿಂದ ಶಿರಸಿಯಲ್ಲಿ ಸೂರ್ಯ ಹೇಗೆ ಹುಟ್ಟುತ್ತಾನೆ ಎಂಬುದು ನನಗೆ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಲ್ಲಿ ಬಿಡು.
ಕಾಲೇಜಿನ ದಿನಗಳು ಸರಿದಂತೆಲ್ಲ ಒಮ್ಮೆ ಆ ದಿನದ ಕ್ಲಾಸುಗಳನ್ನು ಮುಗಿಸಿ ಬೇಗ ಮನೆಗೆ ಹೋಗುವ ತರಾತುರಿಯಲ್ಲಿದ್ದೆ. ಆಫ್ಶನಲ್ ಇಂಗ್ಲೀಶ್ ಆದ್ದರಿಂದ ಹುಡುಗರು ಕಡಿಮೆಯಿದ್ದರು. ಮುಂದಿನ ಕ್ಲಾಸಿಗೆ ಬಂಕ್ ಮಾಡುವುದೆಂದು ತೀರ್ಮಾನಿಸಿ ಹೊರಡಲನುವಾಗಿದ್ದೆ. 
ನಾನು 3 ಗಂಟೆಯ ನಂತರ ಕಾಲೇಜಿನಲ್ಲಿರೋದಿಲ್ಲ ಎಂಬ ಸಂಗತಿ ಹೆಚ್ಚಿನ ಹುಡುಗರಿಗೆ ಗೊತ್ತಿತ್ತಾದ್ದರಿಂದ ನನ್ನೆಡೆಗಿನ ಜೋಕುಗಳಲ್ಲಿ ಅದೂ ಒಂದಾಗಿ ಸೇರಿ ಹೋಗಿತ್ತು. ಹೀಗಿರಲು ಅವಳು ಬಂದು ಇದ್ದಕ್ಕಿದ್ದಂತೆ ನನ್ನನ್ನು ಪರಿಚಯ ಮಾಡಿಕೊಂಡಳು. ಹೆಸರು ಸಂಗೀತಾ. 
ಪರಿಚಯಕ್ಕೆ ಮುನ್ನ ಅನೇಕ ಸಾರಿ ಕ್ಲಾಸಿನಲ್ಲಿ ಕಂಡಿದ್ದೆ. ಮಾತನಾಡಲು ಮುಜುಗರ. ಇನ್ನೂ ಮುಖ್ಯ ಸಂಗತಿ ಎಂದರೆ ನಾನಾಗಿ ಯಾರನ್ನೂ ಮಾತನಾಡಿಸದ ವ್ಯಕ್ತಿ. ಅದಕ್ಕಿಂತ ಹೆಚ್ಚಾಗಿ ನಾನು ಗುಮ್ಮನಗುಸ್ಕನಾಗಿದ್ದೆ. ಅದ್ಯಾರು ನನ್ನ ಬಗ್ಗೆ ಹೇಳಿದ್ದರೋ, ಅಥವಾ ನನ್ನ ಮೇಲಿನ ಲೇಟ್ ಕಮ್ಮರ್ ಜೋಕುಗಳು ಅವಳ ಕಿವಿಗೂ ಬಿದ್ದಿದ್ದವೋ ಏನೋ.. ಪರಿಚಯ ಮಾಡಿಕೊಂಡಳು. ನಾನು ದೊಡ್ಡ ಶಾಕಿನೊಂದಿಗೆ ನನ್ನನ್ನು ಪರಿಚಯಿಸಿಕೊಂಡಿದ್ದೆ. 
ಬಹುಶಃ ಆಕೆ ಪರಿಚಯ ಆದ ಗಳಿಗೆಯಲ್ಲಿ ಆಕಾಶದಲ್ಲಿ ಅದ್ಯಾವುದೋ ದೇವತೆಗಳು ನಮ್ಮನ್ನು ಹರಸಿದ್ದವು ಅಂತ ಕಾಣುತ್ತದೆ. ಒಂದೆರಡು ದಿನಗಳಲ್ಲಿ ಸಂಗೀತಾ ನನ್ನ ಪರಮಾಪ್ತ ಗೆಳತಿಯಾಗಿಬಿಟ್ಟಳು. ರಚನಾ ಇನ್ನೊಂದು ತಮಾಶೆಯ ಸಂಗತಿ ಏನ್ ಗೊತ್ತಾ., ಆಕೆ ಮೊದಲ ದಿನ ನನ್ನ ಪರಿಚಯ ಮಾಡಿಕೊಂಡಿದ್ದಳಲ್ಲ, ಮರು ದಿನ ಮತ್ತೆ ಸಿಕ್ಕಳು. ನನಗೆ ಅವಳು ಪರಿಚಯ ಮಾಡ್ಕೊಂಡಿದ್ದು ಮರೆತಿತ್ತು. ಹಾಯ್ ಅಂದಳು. ನಾನೊಮ್ಮೆ ತಲೆ ಕೆರೆದುಕೊಂಡಿದ್ದೆ. ಹೆಸರೂ ನೆನಪಾಗಿರಲಿಲ್ಲ. ಕೊನೆಗೆ ಪೆಕರನಂತೆ ಹಾಯ್ ಅಂದು ಮತ್ತೊಮ್ಮೆ ಹೆಸರು ಕೇಳಿದ್ದೆ. 
ಸಂಗೀತಾ ಕುರಿತು ಒಂದೆರಡು ಸಂಗತಿ ಹೇಳಲೇ ಬೇಕು. ನನ್ನದೇ ಕ್ಲಾಸಿನ ಹುಡುಗಿ. ನನ್ನೂರಿನ ಬಸ್ಸಿಗೆ ಬರುತ್ತಿದ್ದಳು ಎಂಬುದು ನನ್ನ ಪರಿಚಯ ಆದ ಮೇಲೆ ಗೊತ್ತಾದ ಸಂಗತಿ. ಮನೆಯಲ್ಲಿ ಬೇಜಾನ್ ಆಸ್ತಿ ಇದೆ. ಅಲ್ಲದೆ ಅವರ ಅಪ್ಪ ಸ್ಥಳೀಯ ರಾಜಕಾರಣಿಯಾಗಿ ಹೆಸರು ಮಾಡಿದವರು. ದುಡ್ಡಿಗೆ ಕೊರತೆಯಿರಲಿಲ್ಲ. ಮಗಳು ಆಸೆಪಟ್ಟಿದ್ದರೆ ಎಂಜಿನಿಯರಿಂಗೋ ಅಥವಾ ಇನ್ಯಾವುದೋ ದೊಡ್ಡ ಹೆಸರಿನ ಕೋರ್ಸಿಗೆ ಸೇರಿಸಬಲ್ಲ ತಾಕತ್ತನ್ನು ಹೊಂದಿದ್ದವನು. 
ಆದರೆ ಸಂಗೀತಾಳೇ ವಿಚಿತ್ರ ಸ್ವಭಾವದವಳು. ಆಕೆಗೆ ಇಷ್ಟವಿರಲಿಲ್ಲವೋ, ಅಥವಾ ಅಂತಹ ದೊಡ್ಡ ದೊಡ್ಡ ಕೋರ್ಸುಗಳನ್ನು ಮಾಡಿಕೊಂಡರೆ ಕಾಲೇಜು ಲೈಫಿನಲ್ಲಿ ಬರೀ ಓದು ಓದು ಎಂದು ಆ ಕಾಲದ ರಸನಿಮಿಷಗಳ ಸಂತಸ ಕಳೆದುಹೋಗುತ್ತದೆ ಎಂದುಕೊಂಡಿದ್ದಳೋ ಏನೋ.. ಅಂತೂ ನನ್ನ ಕ್ಲಾಸಿಗೆ ಬರ್ತಿದ್ದಳು. ನನ್ನದೇ ಆಫ್ಶಿನಲ್ ಇಂಗ್ಲೀಶ್ ಕ್ಲಾಸೂ ಆಗಿದ್ದರಿಂದ ನನ್ನ ಪರಿಚಯವಾದಳು ಎನ್ನಬಹುದು.
ಮುಂದಿನ ದಿನಗಳು ಬಹಳ ಸಂತಸದಿಂದ ಕೂಡಿದ್ದವು. ಕಾಲೇಜಿನಲ್ಲಿ ನಾವಿಬ್ಬರೂ ಪರಮಾಪ್ತರಾಗಿದ್ದೆವು. ಒಂದೆ ಬಸ್ ಆದ್ದರಿಂದ ಬಸ್ಸಿನಲ್ಲೂ ಒಟ್ಟಿಗೆ ಬರುತ್ತಿದ್ದೆವು. ಇಬ್ಬರು ಹೊಸದಾಗಿ ಮಿತ್ರರಾದರೆ ಪರಸ್ಪರ ಪ್ರಭಾವ ಬೀರುತ್ತಾರೆ ಎಂಬ ಮಾತಿದೆಯಲ್ಲ.. ಅವಳು ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿದಳೋ ಗೊತ್ತಾಗಲಿಲ್ಲ.ಆದರೆ ಆಕೆ ಮಾತ್ರ ನನ್ನಂತೆಯೇ ಕ್ಲಾಸಿಗೆ ಬಂಕ್ ಹೊಡೆಯಲು ಪ್ರಾರಂಭಿಸಿದ್ದಂತೂ ಸತ್ಯ. ಬೆಳಿಗ್ಗೆ 11ಕ್ಕೆ ಕ್ಲಾಸಿಗೆ ಹೋಗುವುದು, ಮದ್ಯಾಹ್ನ 3ಕ್ಕೆ ವಾಪಸ್ಸು.
ಆ ದಿನಗಳಲ್ಲಿ ಮಾತು, ಮಾತು ಮಾತು ಇವುಗಳೇ ನಮ್ಮ ಜೊತೆಗೆ ಇದ್ದಿದ್ದು. ಇಬ್ಬರು ಹುಡುಗಿಯರೂ ಆ ರೀತಿ ನಾನ್ ಸ್ಟಾಪ್ ಮಾತಾಡುವುದಿಲ್ಲವೇನೋ.. ಆದರೆ ನಾವಿಬ್ಬರು ಹಂಗೆ ಮಾತಾಡ್ತಿದ್ದೆವು.
ನಮ್ಮಿಬ್ಬರ ಈ ದೋಸ್ತಿ ನಿಧಾನವಾಗಿ ಕಾಲೇಜಿನಲ್ಲಿ ಮನೆಮಾತಾಯಿತು. ಅದಕ್ಕೆ ತಕ್ಕಂತೆ ಗಾಸಿಪ್ಪಾಯಣ, ರೂಮರಾಯಣಗಳೂ ಹುಟ್ಟಿಕೊಂಡವು. ಇದಕ್ಕೆ ನಾನು ತಲೆಕೆಡಿಸಿಕೊಂಡಿದ್ದೆನಾದರೂ ಆಕೆ ತಲೆಬಿಸಿ ಮಾಡಿಕೊಳ್ಳಲಿಲ್ಲ. ಹಾಗಾಗಿ ನಮ್ಮ ದೋಸ್ತಿಗೆ ಭಂಗ ಬರಲಿಲ್ಲ. ಜೊತೆಗೆ ದೋಸ್ತಿಯಲ್ಲಿ ಅಪಸವ್ಯಗಳೂ ಕಾಣಲಿಲ್ಲ.
ಈ ಕುರಿತು ಇನ್ನೂ ಹೇಳಬೇಕು. ಈ ಸಂಗೀತಾಳಿಂದಲೇ ನನ್ನ ಬದುಕು ಟರ್ನಾಗಿದ್ದು ಎಂದರೆ ನೀನು ನಂಬಲೇ ಬೇಕು. ಎಂದೋ ಆಕೆಯ ಎದುರು ಒಮ್ಮೆ ಹಾಡು ಗುನುಗಿದ್ದನ್ನು ಕೇಳಿ ಅದನ್ನು ಬೆಳೆಸಿದ್ದೇ ಆಕೆ. 
ಅದೇ ರೀತಿ ಒಂದು ಖಯಾಲಿಯ ದಿನ ಕಾಲೇಜಿನಲ್ಲಿ ಕ್ಲಾಸು ಆಫಾಗಿತ್ತು.
ಮನಸ್ಸು ಯಾವುದೋ ಲಹರಿಯಲ್ಲಿತ್ತು.
ಸುಮ್ಮನೆ ಚಾಕ್ ಪೀಸ್ ಪಡೆದುಕೊಂಡು ಬೋರ್ಡಿನ ಮೇಲೆ
`ನಿನ್ನ ಪ್ರೀತಿಗೆ ನಾನು ಒಳ್ಳೆಯವನಲ್ಲ..
ನಿಜ ಗೆಳತಿ..ಖಂಡಿತವಾಗಿಯೂ
ಒಳ್ಳೆಯವನಲ್ಲ..."
ಎನ್ನುವ ಸಾಲುಗಳನ್ನು ಬರೆದೆ.
ಈ ಸಾಲುಗಳು ಆಕೆಯ ಕಣ್ಣಿಗೆ ಬಿದ್ದವು. ಆಗಿಂದ ಶುರುವಾಯಿತು ನೋಡಿ..ಜೀವನ್ ನೀನು ಬಹಳ ಚನ್ನಾಗಿ ಬರೀತಿಯಾ ಕಣೋ.. ಕೀಪ್ ಇಟ್ ಅಪ್.. ಎಂದು ಮೊದಲು ಅಪ್ರಿಸಿಯೇಶನ್ ಮಾಡಿದ ಆಕೆ ಆ ನಂತರ ನನ್ನಲ್ಲಿ ಬರವಣಿಗೆಯ ಸಾಲುಗಳು ಮೂಡಲು ಕಾರಣವಾದಳು. ಅವಳ ದೆಸೆಯಿಂದಲೇ ನಾನು ಅದೆಂತೆಂತದ್ದೋ ಕವಿತೆಗಳನ್ನು ಬರೆದೆ. ಸಂಗ್ರಹ ಮಾಡಿಯೂ ಇಟ್ಟಿದ್ದೆ. ಈಗ ಅದೆಲ್ಲಿ ಹೋಗಿದೆಯೋ ಗೊತ್ತಿಲ್ಲ.
ಒಂದೊಳ್ಳೆ ಸಂಗತಿಯೆಂದರೆ ಆಕೆ ನನಗೆ ಅದೆಷ್ಟು ಒಳ್ಳೊಳ್ಳೆ ಕಾದಂಬರಿಗಳನ್ನು ಸಜೆಸ್ಟ್ ಮಾಡಿದ್ಲು ಗೊತ್ತಾ. ಆ ದಿನಗಳಲ್ಲಿಯೇ ನಾನು `ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ, ಕರ್ವಾಲೋ, ಭಾರತೀಪುರ, ಚಿದಂಬರ ರಹಸ್ಯ, ಒಂದು ಬದಿ ಕಡಲು, ಆವರಣ, ತಂತು, ಭಿತ್ತಿ ಈ ಮುಂತಾದ ಕನ್ನಡದ ಮೇರು ಕೃತಿಗಳನ್ನು ಓದಿದ್ದೆ. ಈಗಲೂ ನೀನು ನೋಡಬಹುದು ನಮ್ಮ ಕಾಲೇಜಿನ ಲೈಬ್ರರಿಯಲ್ಲಿ ನನ್ನ ಐಕಾರ್ಡ್ ನಂಬರ್ 184 ಇದ್ದಷ್ಟು ಬೇರೆ ಯಾರ ನಂಬರುಗಳೂ ಲೈಬ್ರರಿಯ ಪುಸ್ತಕದಲ್ಲಿಲ್ಲ. 
ಇಷ್ಟೇ ಅಲ್ಲ. ಇಂಗ್ಲೀಷು ನನಗೆ ಬಹಳ ತಲೆ ತಿನ್ನುವ ವಿಷಯ ಆಗಿತ್ತು. ಆದರೂ ಕಾಲೇಜಿನಲ್ಲಿ ಅದನ್ನೇ ಒಂದು ವಿಷಯವಾಗಿ ತಗೊಂಡಿದ್ದೆ. 
ಆ ದಿನಗಳಲ್ಲಿ ಕಾರ್ನಾಡರ ತುಘಲಕ್, ಈ ಮುಂತಾದ ನಾಟಕಗಳು ನಮಗೆ ಸಿಲಬಸ್ ಆಗಿ ಇದ್ದವು. ಇಂಗ್ಲೀಷಿನ ಈ ಪುಸ್ತಕಗಳನ್ನು ಕೋಳ್ಳಲು ನನ್ನ ಬಳಿ ದುಡ್ಡಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಇವಳೇ ನನಗೆ ಈ ಪುಸ್ತಕಗಳನ್ನು ಎರವಲು ನೀಡಿದ್ದು. ಈ ಪುಸ್ತಕಗಳೆಲ್ಲ ಕನ್ನಡದಿಂದ ಇಂಗ್ಲೀಷಿನಲ್ಲಿ ಅನುವಾದ ಆಗಿರುವ ಕಾರಣ ನಾನು ಕನ್ನಡದಲ್ಲಿ ಓದುತ್ತಿದ್ದೆ. ನಂತರ ಪರೀಕ್ಷೆಗಳಲ್ಲಿ ನನ್ನದೇ ವಾಕ್ಯಗಳನ್ನು ಬಳಸಿ ಇಂಗ್ಲೀಷಿನಲ್ಲಿ ಬರೆಯುತ್ತಿದ್ದೆ. ಇದರಿಂದಾಗೀ ತೀರಾ 70-80 ಮಾರ್ಕುಗಳು ಬೀಳದಿದ್ದರೂ 45-50ಕ್ಕಂತೂ ಕೊರತೆಯಾಗುತ್ತಿರಲಿಲ್ಲ. ಇದನ್ನು ಅರಿಯದ ಸಂಗೀತಾ ಹಾಗೂ ಇತರ ಮಿತ್ರರು ಯದ್ವಾ ತದ್ವಾ ಓದಿಯೂ ನನ್ನಷ್ಟೇ ಮಾರ್ಕು ಪಡೆಯುತ್ತಿದ್ದರು. ಕೊನೆಗೆ ನನ್ನ ಈ ಐಡಿಯಾವನ್ನು ಹೇಳಿದ್ದೇ ತಡ ಎಲ್ಲರೂ ಅದನ್ನು ಪಾಲಿಸಿ ಮಾರ್ಕುಗಳನ್ನು ಪಡೆದ ಮೇಲೆಯೇ ನನ್ನ ಕುರಿತು ಜೋಕುಗಳನ್ನು ಆಡುತ್ತಿದ್ದುದು ಕಡಿಮೆಯಾಗಿದ್ದು.

(ಮುಂದುವರಿಯುವುದು..)

Tuesday, December 18, 2012

ನೀರೆ ನೀ ಯಾರೆ..?

ನೀರೆ ನೀ ಯಾರೆ..?

ಹೊತ್ತಲ್ಲದ ಹೊತ್ತಿನಲಿ
ಮನದೊಳಗೆ ಕಾಡುತಿಹ
ನೀರೆ ನೀ ಯಾರೆ?
ನನ್ನೆದುರು ಬಾರೆ..||

ನದಿಗುಂಟ ಬಂದಾಗ
ಮೌನವಾಗಿಯೇ ನಗುವ
ಮನವೆಲ್ಲ ಸೆಳೆ-ಸೆಳೆವ
ನೀರೆ, ನೀಯಾರೆ?
ನನ್ನೆದುರು ಬಾರೆ..||

ಕೆಂಪಂಚು ಜರಿ ಸೀರೆ
ಮುಸುಕೊಳಗೆ ನಗು ನಗುವ
ಕಣ್ಣಿನಲೇ ಬರಸೆಳೆವ
ನೀರೆ, ನೀ ಯಾರೆ?
ನನ್ನೆದುರು ಬಾರೆ...||

ಅಚ್ಚಮಲ್ಲೆಯ ಮುಡಿದು
ಕಾಲುಗೆಜ್ಜೆಯ ಬಡಿದು
ನಿಂತಲ್ಲೆ ಸೆಳೆಯುತಿಹ
ನೀರೆ, ನೀಯಾರೆ
ನನ್ನೆದುರು ಬಾರೆ..||

ದೂರದಿಂದಲೇ ಸೆಳೆವ
ಸನಿಹದಲಿ ಬರದಿರುವ
ಸಿಗಸಿಗದೇ ಓಡುವ
ನೀರೆ, ನೀ ಯಾರೆ?
ನನ್ನೆದುರು ಬಾರೆ..||

ಬರೆದಿದ್ದು ದಂಟಕಲ್ಲಿನಲ್ಲಿ ದಿನಾಂಕ 22-11-2007ರಂದು

Monday, December 17, 2012

ನಿಗೂಢ ದೇವರಕಾನಿನ ಜಾಡಿನಲ್ಲಿ...

ನಿಗೂಢ ದೇವರಕಾನಿನ ಜಾಡಿನಲ್ಲಿ... 

ದೇವರ ಕಾನು.. ಹಾಗೊಂದು ಹೆಸರಿನ ಚಿಕ್ಕ ಪ್ರದೇಶ ನಮ್ಮೂರಿನ ಫಾಸಲೆಯಲ್ಲಿದೆ. ನಮ್ಮೂರು ಹಾಗೂ ಹಿತ್ತಲಕೈ ನಡುವೆ ಇರುವ ಚಿಕ್ಕ ಕಾಡಿನಂತಹ ಸ್ಥಳ ಇದು. ಅಘನಾಶಿನಿ ನದಿಯ ದಡದ ಮೇಲೆ ಇದು ಇದೆ. ನಮ್ಮೂರಿನಿಂದ ದೇವರಕಾನಿಗೆ ಹೋಗಬೇಕೆಂದಾದಲ್ಲಿ ಅಘನಾಶಿನಿಯನ್ನು ದಾಟಿ, ವಾಟೆ ಮಟ್ಟಿಯ ಸಾಲನ್ನು ಹಾದು ಹೋಗಬೇಕು.
     ಮೇಲ್ನೋಟಕ್ಕೆ ಅಲ್ಲಿ ಏನೂ ಕಾಣುವುದಿಲ್ಲ. ಏಕೆಂದರೆ ಬೇಸಿಗೆಯ ದರಕು, ಕಾಡು ಬಳ್ಳಿಗಳು, ಗಣಪೆಕಾಯಿಯ ದೊಡ್ಡ ಬಳ್ಳಿಯ ಸಾಲುಗಳು ಅಲ್ಲಿ ಏನನ್ನೂ ಕಾಣದಂತೆ ಮಾಡಿಬಿಟ್ಟಿವೆ. ಆದರೆ ಸ್ವಪಲ್ಪ ಸೂಕ್ಷ್ಮವಾಗಿ, ಕೂಲಂಕಷವಾಗಿ ವೀಕ್ಷಿಸಿದರೋ ಗತಕಾಲದ ಪಳೆಯುಳಿಕೆಗಳ ಅನಾವರಣ ನೋಡುಗರಿಗೆ ಆಗುತ್ತದೆ.
    ಹೌದು ಅಲ್ಲಿ ಯಾವುದೋ ಕಾಲದ ಪ್ರಾಚೀನ ಗೊಂಬೆಗಳು, ಮಣ್ಣಿನ ಮಡಿಕೆಗಳು, ಮೃತ್ತಿಕೆಯಿಂದ ಮಾಡಿದ ಒಡೆದು ಹೋಗಿರುವ ಗೊಂಎಬಗಳು ಕಾಣಬಲ್ಲವು. ಹೂಕುಂಡ, ಸ್ತೀ, ವೇಷಧಾರಿ, ಆಭರಣಗಳು, ಈ ಮುಂತಾದವುಗಳು ಅಲ್ಲಿವೆ. ಪ್ರತಿಯೊಂದು ಮಡಿಕೆಗಳ ತುಂಡಿನ ಮೇಲೂ ಸೂಕ್ಷ್ಮ ಚಿತ್ತಾರಗಳು. ಕಷ್ಟಪಟ್ಟು ಕಣ್ಣಲ್ಲಿ ಕಣ್ಣಿಟ್ಟು ತಯಾರಿಸಿದ ಪರಿಶ್ರಮ ಎದ್ದು ಕಾಣುತ್ತದೆ.
    ಈ ಗೊಂಬೆಗಳನ್ನು ಅದ್ಯಾವ ಗತಶತಮಾನದಲ್ಲಿ ತಯಾರು ಮಾಡಲಾಗಿದೆಯೋ. ಅದ್ಯಾಕೆ ಅಲ್ಲಿ ತಂದಿಟ್ಟರೋ ಒಂದೂ ಗೊತ್ತಿಲ್ಲ. ಇದನ್ನು ಮುಟ್ಟಬಾರದು ಎಂಬ ವಿಚಿತ್ರ ನಿಗೂಢ ನಂಬಿಕೆ ನಮ್ಮೂರು ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿವೆ. ಆ ಕಾರಣದಿಂದಲೇ ದೇವರಕಾನಿನ ಪ್ರದೇಶ ಈಗಲೂ ನಮ್ಮೂರಿಗರಲ್ಲಿ ವಿಚಿತ್ರ ಹಾಗೂ ಭಯಭರಿತ ಪ್ರದೇಶವಾಗಿ ಉಳಿದುಬಿಟ್ಟಿದೆ.
    ಬಹುಶಃ ಈ ಕಾರಣದಿಂದಲೇ ಆ ಗೊಂಬೆಗಳು ಉಳಿದುಕೊಂಡಿದೆಯೇನೋ. ಇಲ್ಲವಾದಲ್ಲಿ ಆ ಗೊಂಬೆಗಳು ಅದೆಷ್ಟು ಮನೆಯ ಶೋಕೆಸುಗಳಲ್ಲಿ ಉಳಿದುಬಿಡುತ್ತಿದ್ದವೋ. ಅದೆಷ್ಟು ಮನೆಯ ಹೂವುಗಳನ್ನು ಇಡುವ ಕುಂಡಗಳಾಗಿಬಿಡುತ್ತಿದ್ದವೋ. ಸೋದೆಯ ಅರಸರ ಕಾಲದ್ದೋ ಅಥವಾ ಕೋಡಸಿಂಗೆಯ, ಕರೂರಿನ ಗೌಡರದ್ದೂ ಅಥವಾ ಬಾಳೂರು ಗೌಡರ ಕಾಲಕ್ಕೆ ಸೇರಿರ ಬಹುದಾದ ಈ ದೇವರ ಕಾನಿನ ಪಳೆಯುಳಿಕೆಗಳ ಕುರಿತು ನಮ್ಮೂರಿನ ಹಿರಿಯರಿಗೂ ಹೆಚ್ಚು ಗೊತ್ತಿಲ್ಲ. ಆ ಬಗ್ಗೆ ಹೇಳಿ ಅಂದರೆ ಅದು ದೇವರ ಕಾಡು. ಅಲ್ಲಿಗೆ ಹೋಗಬೇಡಿ ಎಂದು ಹೇಳಿ ಸುಮ್ಮನಾಗುತ್ತಾರೆ.
    ಅದೇನು ಸ್ಮಶಾನವೋ, ಅಥವಾ ಹೆಸರೇ ಹೇಳಿದಂತೆ ದೇವರಿಗೆ ಸೇರಿದ ತಾಣವೋ, ಚೌಡಿ, ಮಾಸ್ತಿಯ ಸ್ಥಳವೋ, ಅಥವಾ ಒಂದಾನೊಂದು ಕಾಲದಲ್ಲಿ ನಾಗರಬನ ಆಗಿತ್ತೋ ಯಾರಿಗೂ ಗೊತ್ತಿಲ್ಲ. ಮುಂಚೆ ಯಾವಾಗಲೂ ನಾವು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದೆವು. ಕೊನೆ ಕೊನೆಗೆ ಆ ದೇವರ ಕಾನಿನ ಸುತ್ತ ಕಿತ್ತಲಕೈ ಊರಿನವರ್ಯಾರದ್ದೂ ಬೇಲಿಯೂ ಎದ್ದು ನಿಂತಿದೆ. ಸೂರ್ಯನ ಕಿರಣಗಳು ನೆಲವನ್ನು ಏನು ಮಾಡಿದರೂ ಮುಟ್ಟದಂತಿರುವ ಈ ಸ್ಥಳದಲ್ಲಿ ಅದೇನೋ ಒಂದು ರೀತಿಯ ನೀರವ, ಭೀತಿಯುಕ್ತ ವಾತಾವರಣ ನೆಲೆಸಿರುವುದು ವಿಚಿತ್ರವೂ ವಿಶಿಷ್ಟವೂ ಹೌದು.
    ಈ ಕುರಿತು ಹೆಚ್ಚು ತಿಳಿದವರಿಲ್ಲ. ಈ ಸ್ಥಳವನ್ನು ಉತ್ಖನನ ಮಾಡಿದರೆ ಇನ್ನಷ್ಟು ಮಾಹಿತಿ ಸಿಗಬಹುದು. ಅಗೆದರೆ ಅಲ್ಲಿ ನಿಧಿ ಇದೆ, ಅದನ್ನು ಕಾಳಸರ್ಪವೊಂದು ಕಾಯುತ್ತಿದೆ, ಅಲ್ಲೇ ಜೊತೆಯಲ್ಲಿ ಹುತ್ತವೂ ಇದೆ ಎಂದು ವಾಡಿಕೆಯ ಮಾತುಗಳಿವೆ. ನನ್ನ ಕಣ್ಣಿಗೆ ಹುತ್ತ ಕಾಣಿಸಿದೆ. ಅಲ್ಲದೆ ಮಂಟಪದಂತಹ ಸ್ಥಳವೂ ಕಂಡಿದೆ. ನಿಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಒಮ್ಮೆ ಶಿರಸಿಯ ನಮ್ಮ ಇತಿಹಾಸ ಪ್ರಾದ್ಯಾಪಕರೂ, ಪ್ರಾಚೀನ ವಸ್ತುವನ್ನು ಸಂಗ್ರಹಿಸಿ ಶಿರಸಿಯಲ್ಲಿ ಮ್ಯೂಸಿಯಂ ಮಾಡುತ್ತಿರುವ ಟಿ. ಎಸ್. ಹಳೆಮನೆ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗೆಲ್ಲ ನಮ್ಮೂರಿಗರು ಹಾಗೂ ಸುತ್ತಮುತ್ತಲ ಭಾಗದವರು ನನ್ನನ್ನು ವಿಚಿತ್ರವಾಗಿ, ಅನುಮಾನದಿಂದ ನೋಡಿದ್ದಿದೆ. ಜೊತೆಗೆ ಅಲ್ಲಿ ಮಣ್ಣಿನಲ್ಲಿ ಬಿದ್ದು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿ ಹೋಗುತ್ತಿದ್ದ ಗೊಂಬೆಗಳನ್ನು ತಂದು ಮ್ಯೂಸಿಯಂನಲ್ಲಿ ಇಡುತ್ತೇನೆ ಎಂಬ ಹಳೆಮನೆ ಸರ್ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
    ಹಾಗಿದ್ದರೆ ಅದೇನಿರಬಹುದು? ನಮ್ಮೂರಿನಲ್ಲೆ, ನಾನು ಓಡಾಡುವ ಜಾಗದಲ್ಲಿಯೇ ಇಂತಹ ಸ್ಥಳ ಇದ್ದರೂ ಅದರ ಹಿನ್ನೆಲೆ ಗೊತ್ತಿಲ್ಲವಲ್ಲಾ.. ಅದನ್ನು ಉಳಿಸೋಣ ಎಂದುಕೊಂಡು ಮಾಡಿದ ಕೆಲಸಗಳೆಲ್ಲ ವ್ಯರ್ಥವಾಗಿದೆಯಲ್ಲ ಎಂಬ ಬೇಸರವಿದೆ. ಮಳೆ, ಗಾಳಿ, ಕಾಡಿನ ಪ್ರಾಣಿಗಳ ಹಾವಳಿಗಳಿಂದ ಮಣ್ಣಾಗುತ್ತಿರುವ ಈ ಗೊಂಬೆಗಳನ್ನು ಕಾಪಾಡಲು ಆಗುತ್ತಿಲ್ಲವೆನ್ನುವ ವ್ಯಥೆಯೂ ಇದೆ. ಮೂಢನಂಬಿಕೆಯಿಂದಲೋ ಅಥವಾ ಇನ್ಯಾವ ಕಾರಣವೋ.. ನಮ್ಮ ಪ್ರಯತ್ನವನ್ನು ವಿರೋಧಿಸಿದ ಈ ಕುರಿತು ಕುತೂಹಲವೂ ಇದೆ. ಇತಿಹಾಸ ಅರಿಯುವ ಅವಕಾಶವಿದ್ದರೂ ಆಗುತ್ತಿಲ್ಲವೆನ್ನುವ ಅಸಹಾಯಕತೆ.
    ಇವೆಲ್ಲದರ ಜೊತೆಗೆ ಹಾಗೆಯೇ ಬಿದ್ದುಕೊಂಡಿರುವ ಆ ನಿಗೂಢ ಗೊಂಬೆಗಳು ಅಲ್ಲೇ ಕಣ್ಮರೆಯಾಗ್ತವಾ? ನಮ್ಮೂರಿನ ದೇವರಕಾನು, ದೇವರ ಹೆಸರಿನ ಮೂಲಕ ಕಾನು ಉಳಿದುಕೊಂಡಿದ್ದೆಲ್ಲ ಮರೆಯಾಗುತ್ತದಾ ಎಂಬ ಆಲೋಚನೆಯಲ್ಲಿದ್ದೇನೆ.

ಒಂದಷ್ಟು ಹನಿಗಳು

ಒಂದಷ್ಟು ಹನಿಗಳು

(ಐದು ಹನಿಚುಟುಕಗಳು, ಚುನಾವಣೆ, ನ್ಯೂ ಈಯರ್, ಹೃದಯದ ಸ್ಥಿತಿ, ಚುನಾವಣಾ ಸಮಯ ಹಾಗೂ ಇಂಡಿಯಾ ಶೈನಿಂಗ್)

33)ಚುನಾವಣೆ

ಚುನಾವಣೆ ಚುನಾವಣೆ
ಜನರ ಜಮಾವಣೆ
ನೋಟು, ಓಟುಗಳ ಚಲಾವಣೆ
ಅಭ್ಯರ್ಥಿಗಳ ಪ್ರಚಾರಣೆ, ಹಣಾಹಣಿ,
ಹೆಂಡ ಸಾರಾಯಿಗಳ ಸಮರ್ಪಣೆ,
ರೌಡಿ ಪಡೆಗಳ ದಬಾವಣೆ
ಗೆದ್ದ ಅಭ್ಯರ್ಥಿ ಹಿಡಿದ ಚುಕ್ಕಾಣಿ
ಇನ್ನೈದು ವರ್ಷ ಅವನ ಮುಖ ನಾಕಾಣೆ|
ನಾ ಕಾಣೆ..||

34) ನ್ಯೂ ಈಯರ್

ಹಳೆ ಸಮಸ್ಯೆ
ಮರೆಸಿ
ಹೊಸ ಸಮಸ್ಯೆಯ
ಜನನಕ್ಕೆ
ನಾಂದಿ ಆಗುವ ದಿನವೇ
ಹೊಸ ವರ್ಷ||

35)ಹೃದಯದ ಸ್ಥಿತಿ

ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದ್ಉ...||

36)ಚುನಾವಣಾ ಸಮಯ

ಹಿಂದೆ ನಡೆದಿತ್ತಂತೆ ಐದು
ವರ್ಷಕ್ಕೊಂದು ಚುನಾವಣೆ
ಆದರೆ ಈಗ ನಡೆಯುತ್ತಿದೆ
ವರ್ಷಕ್ಕೆ ಐದು ಚುನಾವಣೆ||

37)ಇಂಡಿಯಾ ಶೈನಿಂಗ್

ಅಲ್ಲಿ ನೋಡು ಇಲ್ಲಿ ನೋಡು
ಪ್ರಕಾಶಿಸಿದೆ ಭಾರತ
ಕಣ್ಣು ಬಿಟ್ಟು ಸರಿಯಾಗಿ ನೋಡು
ಬೆಳಕಿಲ್ಲದ ಟ್ಯೂಬ್ ಲೈಟಾ..|