Monday, September 13, 2010

ಏಕ ರೇಖಾ ಗಣಪ ಬಲು ಅಪರೂಪ

ವಿಘ್ನನಿವಾರಕ ಗಣೇಶನ ಚಿತ್ರವನ್ನು ಬಿಡಿಸುವವರು, ಮೂರ್ತಿ ಕೆತ್ತುವವರು ಬಹಳ ಮಂದಿ ಇದ್ದಾರೆ. ಆದರೆ ಕೇವಲ ಒಂದೇ ಸಾಲಿನ ಮೂಲಕ ಗಣೇಶನನ್ನು ಮೂಡಿಸುವ ಚಿತ್ರಕಾರರು ಸ್ವಲ್ಪ ವಿರಳವೆಂದೇ ಹೇಳಬಹುದು. ಈ ರೀತಿಯ ಅಪರೂಪದ ಚಿತ್ರ ಬಿಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಬಹು ಕಠಿಣ ಕಲೆಯನ್ನು ಒಲಿಸಿಕೊಂಡು ಚಿತ್ರವನ್ನು ರಚಿಸುವ ಕಲಾವಿದರೊಬ್ಬರಿದ್ದಾರೆ. ಅವರೇ ಸೈಯದ್ ಹುಸೈನಿ.
ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಏಕ ರೇಖೆಯಲ್ಲಿ ಗಣೇಶನನ್ನು ಚಿತ್ರಿಸುತ್ತಾರೆ. ಇವರ ಚಿತ್ರದಲ್ಲಿ ಗಣೇಶನ ಕಿರೀಟದಿಂದ ಇಲಿಯ ಬಾಲದವರೆಗೂ ಕೇವಲ ಒಂದೇ ರೇಖೆ ಇರುವುದು ವಿಶೇಷ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಏಕರೇಖಾ ಗಣೇಶನ ಚಿತ್ರ ಬಿಡಿಸಿದ್ದಾರೆ.
ಹುಸೈನಿ ಮೊದಲ ಸಾರಿ ಚಿತ್ರ ಬಿಡಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಆ ನಂತರ ಅವರು ಇದುವರೆಗೂ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಲಲಿತಕಲೆಯಲ್ಲಿ ಪದವಿ ಮುಗಿಸಿರುವ ಇವರಿಗೆ ಚಿತ್ರ ಬಿಡಿಸುವುದು ನೀರು ಕುಡಿದಷ್ಟು ಸುಲಭ.
ಇವರು ಸುಮಾರು 3000ಕ್ಕೂ ಹೆಚ್ಚು ಏಕರೇಖಾ ಚಿತ್ರವನ್ನು ಬಿಡಿಸಿದ್ದಾರೆ. ಕೇವಲ ಗಣೇಶನ ಚಿತ್ರವನ್ನಷ್ಟೇ ಅಲ್ಲ, ಕುದುರೆ ಮುಂತಾದ ಹಲವು ಚಿತ್ರಗಳನ್ನು, ಹಲವು ವ್ಯಕ್ತಿಗಳ ಭಾವ ಚಿತ್ರಗಳನ್ನೂ ರಚಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಗಣೇಶನ ಚಿತ್ರ ಬಿಡಿಸಲು ಪ್ರಾರಂಭಿಸಿದ ಇವರಿಗೆ ಇಂದು ಏಕರೇಖಾ ಗಣೇಶನ ಚಿತ್ರ ಬಿಡಿಸಲು ಕನಿಷ್ಟ ಅರ್ಧ ಗಂಟೆ ಸಾಕು. ಕೆಲವೊಮ್ಮೆ ಕೆಲವು ಚಿತ್ರ ಬಿಡಿಸಲು ದಿನಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದೂ ಇದೆ. ಹುಸೈನಿ ಪ್ರಾರಂಭದಲ್ಲಿ ಗಣೇಶನ ಆಯಿಲ್ ಪೇಂಟ್ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಆ ನಂತರ ಒಂದು ದಿನ ಗಣೇಶನ ಚಿತ್ರವನ್ನು ಏಕರೇಖೆಯಲ್ಲಿ ಬಿಡಿಸುವ ಆಲೋಚನೆ ಮೂಡಿತು. ಆ ನಂತರ ಕೆಲವು ದಿನಗಳು ಪ್ರಯತ್ನಿಸಿ ಚಿತ್ರ ಬಿಡಿಸಲು ಪ್ರಾರಂಭಿಸಿದರು.
ಚಿಕ್ಕಂದಿನಲ್ಲಿ ಹುಸೈನಿ ಅವರ ತಾಯಿ ಉಲ್ಲನ್ನಿನ ಸ್ವೆಟರ್ ಹಾಕುವ ವೇಳೆ ಇವರು ಆ ಉಲ್ಲನ್ನಿನ ಉಂಡೆಯ ಜೊತೆ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೆ ಅದರಿಂದ ವಿವಿಧ ಚಿತ್ರಗಳನ್ನು ನೆಲದ ಮೇಲೆ ಮೂಡಿಸುತ್ತಿದ್ದರು. ಇದೇ ಅವರ ಏಕ ರೇಖಾ ಚಿತ್ರಕ್ಕೆ ಸ್ಫೂರ್ತಿ ನೀಡಿತು. ನಂತರ ಅವರ ತಾಯಿ ಹುಸೈನಿ ಅವರ ಕಲೆಗೆ ನೀರೆರೆದು ಪೋಷಿಸಿದರು.
ಚಿಕ್ಕಂದಿನಿಂದಲೆ ಒಲಿದುಬಂದ ಕಲೆಯನ್ನು ಬೆಳೆಸಿಕೊಂಡ ಇವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದರೂ ಹೆಸರು ಗಳಿಸಿದ್ದು ಏಕರೇಖೆಯ ಗಣಪನ ಚಿತ್ರಗಳ ಮೂಲಕ. ಕಷ್ಟದ ಕಲೆಯಲ್ಲೂ ವಿಭಿನ್ನತೆ ಮೆರೆದ ಇವರು, ನಿಂತಿರುವ ಗಣೇಶ, ಕುಳಿತ ಏಕದಂತ, ಇಲಿಯ ಮೇಲೆ ಗಣೇಶನ ಸವಾರಿ, ನೃತ್ಯ ಮಾಡುತ್ತಿರುವ ಗಣಪ-ಹೀಗೆ ಹಲವು ಬಗೆಯ ಗಣಪನ ಚಿತ್ರಗಳನ್ನು ಬಿಡಿಸಿದ್ದಾರೆ.
ಚಿತ್ರ ಬಿಡಿಸುವುದೇ ಇವರ ವೃತ್ತಿ. ಅವರು ಬಿಡಿಸಿರುವ ಅದೆಷ್ಟೋ ಚಿತ್ರಗಳು ಉತ್ತಮ ಬೆಲೆಗೆ ಮಾರಾಟವಾಗಿವೆ.
ಕೇವಲ ಚಿತ್ರ ಬಿಡಿಸುವುದು ಮಾತ್ರ ಇವರ ಕೆಲಸವಲ್ಲ. ಪೇಪರ್ ಕಟಿಂಗ್ನಲ್ಲೂ ಇವರದ್ದು ಎತ್ತಿದ ಕೈ. ಬಗೆಬಗೆಯ ನಮೂನೆ ಗಳು, ಹಲವು ಆಕಾರಗಳು ಇವರ ಕೈಯಲ್ಲಿ ಅರಳಿವೆ. ಇವರ ಕೈಗೆ ಕುಂಚ ಸಿಕ್ಕರೆ ಹೇಗೆ ಗೆರೆಗಳು ಮಾತನಾಡುತ್ತವೆಯೋ ಹಾಗೆಯೆ ಖಾಲಿ ಪೇಪರ್ ಹಾಗೂ ಕತ್ತರಿ ಸಿಕ್ಕರೆ ಸಾಕು ಅವು ಜೀವ ತಳೆಯುತ್ತವೆ.
ಬೆಂಗಳೂರಿನ ಜಯನಗರದಲ್ಲಿ ವಾಸ ಮಾಡುತ್ತಿರುವ ಹುಸೈನಿ ಏಕರೇಖೆಯ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ಬಗ್ಗೆ ಹಲವು ಕಡೆ ತರಬೇತಿ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 34 ವರ್ಷದ ಹುಸೈನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು.
ಅಂಚೆಕುಂಚ ಪ್ರಶಸ್ತಿಯನ್ನು ನಾಲ್ಕು ಸಾರಿ ಮುಡಿಗೇರಿಸಿ ಕೊಂಡಿರುವ ಹುಸೈನಿ 2009ರಲ್ಲಿ ಜಪಾನ್ ಹಬ್ಬದಲ್ಲೂ ಭಾಗವಹಿಸಿ ಬಂದಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಧಾರವಾಡ ಮುಂತಾದ ಕಡೆಗೆಲ್ಲ ಇವರು ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿದ್ದಾರೆ. ಹುಸೈನಿ ಅವರನ್ನು 9845153277. ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Tuesday, August 24, 2010

ವಿದ್ಯುತ್ ಬಿಲ್ ಗೆ ವಿನಾಯಿತಿ ಇಲ್ಲವೆ?

ಕರ್ನಾಟಕ ವಿದ್ಯುತ್ ಮಂಡಳಿ ಪ್ರತಿ ಸಾರಿ ವಿದ್ಯುತ್ ಬಿಲ್ ನೀಡುವಾಗಲೂ ಅದರಲ್ಲಿ ಅಧಿಕ ಪ್ರಮಾಣದ ಮೇಲೆ ದಂಡ ಎಂಬ ವಾಖ್ಯವೊಂದು ಕಾಣಿಸುತ್ತದೆ. ಈ ಬಗ್ಗೆ ಇಲಾಖೆಯಯನ್ನು ಕೇಳಿದರೆ ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯುತ್ ಬಳಸಿದರೆ ಈ ದಂಡವನ್ನು ಹಾಕಲಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ವಿದ್ಯುತ್ ಬಳಸಿದಾಗ ಹೆಚ್ಚಿನ ದಂಡವನ್ನೂ ಹಾಕಿದ ಉದಾಹರಣೆಗಳಿವೆ.
ಆದರೆ ನನ್ನಲ್ಲಿ ಮೂಡುತ್ತಿರುವ ಪ್ರಶ್ನೆ ಇಷ್ಟೇ. ವಿದ್ಯುತ್ತನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸಿದಾಗ ದಂಡ ಹಾಕುವ ವಿದ್ಯುತ್ ಇಲಾಖೆ ಅತ್ಯಲ್ಪ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕುಟುಂಬಗಳಿಗೆ ವಿನಾಯಿತಿ ಯಾಕೆ ನೀಡುವುದಿಲ್ಲ?
ಕೆಲವು ಕುಟುಂಬಗಳು ತಿಗಳಿಗೆ 10 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ. ಅವುಗಳ ವಿದ್ಯುತ್ ಬಿಲ್ ಮೊತ್ತ 50 ರೂಪಾಯಿಗಳನ್ನೂ ಮುಟ್ಟುವುದಿಲ್ಲ. ಇಂತಹ ಕುಟುಂಬಗಳ ವಿದ್ಯುತ್ ಬಿಲ್ಗೆ ವಿನಾಯಿತಿಯನ್ನು ಇಲಾಖೆ ನೀಡದೇ ಇರುವುದು ವಿಚಿತ್ರ ಎನಿಸುತ್ತದೆ.
ಇಲಾಖೆ ಈ ಬಗ್ಗೆ ತಕ್ಷಣ ಚಿಂತಿಸಿ ವಿದ್ಯುತ್ ಬಿಲ್ ವಿನಾಯಿತಿಯನ್ನು ನೀಡುತ್ತದೆ ಎಂಬುದು ನಮ್ಮ ಆಶಯ.

Monday, August 23, 2010

`ಆಸರೆ' ಸಖ್ಯವಾಗುವಂತಾದರೆ...

ಅಲ್ಲಲ್ಲಿ ಮೂತ್ರದ ವಾಸನೆ, ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಭಿಕ್ಷುಕರು, ಸುಕ್ಕು ಗಟ್ಟಿದ ಮುಖ. ಹರಡಿಕೊಂಡ ತಲೆಕೂದಲು, ಆ ಕೂದಲುಗಳಿಗೆ ಎಣ್ಣೆಯಿಲ್ಲ, ದೇಹಕ್ಕೆ ಸ್ನಾನವಿಲ್ಲ. ಎತ್ತ ನೋಡಿದರತ್ತ ಕೊಳಕು, ಅಸಹ್ಯ ವಾತಾವರಣ, ಕೆಲವರು ಕಾಯಿಲೆಯಿಂದ ನರಳುತ್ತಿರುವವರು. ಇಂತಹವರನ್ನು ಸರಿಯಾಗಿ ನೋಡುವವರಿಲ್ಲ. ಸ್ನಾನ ಮಾಡಿಸುವವರಿಲ್ಲ. ದನದ ಕೊಟ್ಟಿಗೆಯಂತೆ ಕಾಣುವ ಕೊಠಡಿಗಳು. ಇದು  ಬೆಂಗಳೂರು ಮಹಾನಗರಿಯ ನಿರಾಶ್ರಿತರ ಕೇಂದ್ರದಲ್ಲಿ ಕಂಡುಬಂದ ಸ್ಥಿತಿ-ಗತಿ. ಇದೇ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರದ ಪರಿಸ್ಥಿತಿ.
ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಪುನರ್ವಸತಿ ನೀಡಬೇಕೆಂದು ಸ್ಥಾಪಿಸಲಾಗಿರುವ ಈ ಕೇಂದ್ರದಲ್ಲಿನ ಸರಣಿ ಸಾವು ಮತ್ತು ಅದರ ದುಸ್ಥಿತಿಯಿಂದಾಗಿ ಈಗ ಸುದ್ದಿ ಮಾಡಿದೆ.
ಈ ಭಿಕ್ಷುಕರ ಪುನರ್ವಸತಿ ಕೇಂದ್ರದ ಒಳಗೆ ಕಾಲಿಟ್ಟರೆ ಸಾಕು ಅಸಹ್ಯಕರ ವಾತಾವರಣ. ಆರೋಗ್ಯವಂತರು, ಅನಾರೋಗ್ಯಕ್ಕೊಳಗಾದವರು, ಬಡಕಲು ಶರೀರದವರು ಹೀಗೆ ವಿವಿಧ ರೀತಿಯ ನಿರಾಶ್ರಿತರು, ಭಿಕ್ಷುಕರ ಕಣ್ಣುಗಳಲ್ಲಿನ ಯಾಚನೆ, ಅಸಹಾಯಕ ನೋಟ ಎಂತಹವರಲ್ಲಾದರೂ ಮರುಕ ಹುಟ್ಟಿಸುತ್ತದೆ.
ಎಲ್ಲೋ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರನ್ನು ಹಿಡಿದು ತಂದು ಈ ನಿರಾಶ್ರಿತರ ಶಿಬಿರದಲ್ಲಿಡಲಾಗಿದೆ. ಈ ಭಿಕ್ಷುಕರ ದುಸ್ಥಿತಿ ಹೇಳತೀರದು. ಸರಿಯಾದ ಆಹಾರವಿಲ್ಲದೆ, ದಿನನಿತ್ಯ ಸ್ನಾನವಿಲ್ಲ, ರೋಗಬಂದರೆ ಸೂಕ್ತ ಚಿಕಿತ್ಸೆಯಿಲ್ಲ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಈ ಭಿಕ್ಷುಕರದ್ದು ನಾಯಿಪಾಡು ಎಂದರೂ ತಪ್ಪಾಗಲಾರದು.
ಈ ಜನರ ಪಾಲಿಗೆ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳು ಬಂತೆಂದರೆ ಹಬ್ಬ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮುಂತಾದ ಸಕರ್ಾರಿ ಕಾರ್ಯಕ್ರಮಗಳಂದು ಇವರಿಗೆ ಸಿಹಿ ತಿಂಡಿ ಹಾಗೂ ವಿಶೇಷ ಊಟಗಳು ಲಭ್ಯ. ಇಲ್ಲದಿದ್ದರೆ ಹಳಸಲನ್ನವೇ ಗತಿ.
ಈ ಪುನರ್ವಸತಿ ಕೇಂದ್ರದಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿರುವ ಭಿಕ್ಷುಕರು ಒಂದೆಡೆಯಾದರೆ, ಲೋಕದ ಪರಿವೆಯೆ ಇಲ್ಲದಂತೆಮಲಗಿಕೊಂಡಿರುವವರು ಮತ್ತೊಂದೆಡೆ. ಇನ್ನು ಈ ಕೇಂದ್ರದಲ್ಲಿರುವ ಹಲವು ಭಿಕ್ಷುಕರು ಬುದ್ದಿಮಾಂದ್ಯರು. ಇವರನ್ನು ಇಲ್ಲಿ ಯಾರೂ ಕೇಳುವವರೇ ಇಲ್ಲ.
 ಇವರನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಈ ಭಿಕ್ಷುಕರ ಕೈಯಲ್ಲಿ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗಾಯಾಳುಗಳಿಗೆ ಸೂಕ್ತ ಔಷಧ ನೀಡದ ಪರಿಣಾಮ ಗಾಯದಿಂದ ಕೀವು ಸೋರುತ್ತಿದ್ದ ದೃಶ್ಯವೂ ಕಾಣಬಹುದಾಗಿತ್ತು.
ಈ ವಸತಿಗೃಹವೂ ಅಷ್ಟೇ. ಅದರ ಒಳಗೆ ಕಾಲಿಟ್ಟರೆ ಸಾಕು ಗಬ್ಬು ವಾಸನೆ. ರೋಗಗಳಿಂದ ಹಾಸಿಗೆ ಹಿಡಿದ ಭಿಕ್ಷುಕರು ಅಲ್ಲೆ ಮಲ, ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಿಂದ ಒಳಗಡೆ ಗಬ್ಬು ವಾಸನೆ. ಇಂತಹ ವಾತಾವರಣದಲ್ಲೇ ಅವರು ಮಲಗಿ ನಿದ್ರಿಸಬೇಕಾಗುತ್ತದೆ. ಇವರು ಊಟ ಮಾಡುವ ಕೋಣೆಯ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಶುಚಿತ್ವ ಇಲ್ಲದ ಈ ಕೋಣೆಯಲ್ಲಿಯೇ ಊಟ ನೀಡಲಾಗುತ್ತಿದೆ.
ಭಿಕ್ಷುಕರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ಆದರೆ ಇವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಕೆಲಸ ನಡೆದಿಲ್ಲ. ಇವರನ್ನೂ ಆರೋಗ್ಯವಂತ ವ್ಯಕ್ತಿಗಳ ಜೊತೆ ಇರಿಸಲಾಗುತ್ತಿದೆ. ಇದರಿಂದ ಆರೋಗ್ಯವಂತರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಬುದ್ಧಿಮಾಂದ್ಯರ ಜೊತೆಗೆ ಆರೋಗ್ಯವಂತ ಭಿಕ್ಷುಕರನ್ನು ಇಡಲಾಗುತ್ತಿದೆ. ಇದು ಆರೋಗ್ಯವಂತ ಭಿಕ್ಷುಕರ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತಿದೆ.
 ಈ ನರಕದ ಸಹವಾಸ ಸಾಕು ಎಂದೇ ಹಲವು ಭಿಕ್ಷುಕರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಈ ಕೇಂದ್ರದಲ್ಲಿ ಈಗಾಗಲೆ 286 ಜನರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಒಟ್ಟಿನಲ್ಲಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ ಈ ಭಿಕ್ಷುಕರ ಸ್ಥಿತಿ. ಕಳೆದ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯರೂಪ್ಪ ಅವರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತಿದ್ದು, ಈ ನಿರಾಶ್ರಿತರ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಆದಷ್ಟು ಬೇಗ ಬಂದು, ನಿರಾಶ್ರಿತರಿಗೆ `ಆಸರೆ' ನೀಡುತ್ತಿರುವ ಕೇಂದ್ರವು ಅಲ್ಲಿರುವವರಿಗೆ ಸಖ್ಯವಾಗುವಂತಾದರೆ ಸ್ಥಾಪನೆಯ ಉದ್ದೇಶವೂ ಸಾರ್ಥಕವಾಗುತ್ತದೆ.

Saturday, August 21, 2010

ಮನ ಸೆಳೆಯುವ ಉತ್ತರ ಕನ್ನಡ ಜಲಪಾತಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಸುಂದರ ಜಲಪಾತಗಳಿವೆ. ಸುರಿಯುತ್ತಿರುವ ಮುಂಗಾರಿನಿಂದ ಇಲ್ಲಿನ ಜಲಪಾತಗಳಿಗೆ ಮತ್ತೆ ಜೀವಕಳೆ ಬಂದಿದೆ. ಮುಂಗಾರಿನಲ್ಲಿ ಹೊಸ ಜೀವ ಪಡೆಯುವ ಈ ಜಲಪಾತಗಳು ಎಲ್ಲರ ಆಕರ್ಷಣೆಯ ತಾಣಗಳು. ಮಳೆ ಹನಿಯಿಂದಾಗಿ ಮನಸೆಳೆಯುತ್ತಿರುವ ಈ ಜಲಪಾತಗಳ ಬಗ್ಗೆ ಕಿರು ಪರಿಚಯ ಹೀಗಿದೆ.

ಬಳುಕುವ ಉಂಚಳ್ಳಿ ಜಲಪಾತ
ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸವರ್ೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.

ಸೊಬಗಿನ ಸಾತೊಡ್ಡಿ ಜಲಪಾತ
ಯಲ್ಲಾಪುರ ತಾಲೂಕಿನಲ್ಲಿರುವ ಈ ಜಲಪಾತ ತಾಲೂಕಿನ ಮುಖ್ಯ ಪಟ್ಟಣದಿಂದ 30 ಕಿ.ಮಿ ದೂರದಲ್ಲಿದೆ. ಕಾಳಿ ನದಿಯ ಉಪ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಮಿನಿ ಜೋಗ ಎಂದೂ ಕರೆಯುತ್ತಾರೆ. ನಿಸರ್ಗದ ನಟ್ಟ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಅತ್ಯಂತ ಆಕರ್ಷಣೀಯ. ಬಳುಕುತ್ತಾ ಕಮರಿಗೆ ಇಳಿಯುವ ಈ ಜಲಪಾತದ ಸೊಬಗು ವರ್ಣನಾತೀತ. ಜಲಪಾತದ ದಾರಿಯಲ್ಲಿ ಕಾಣಸಿಗುವ ಕಾಳಿ ಹಿನ್ನೀರಿನ ದೃಶ್ಯ ಪ್ರವಾಸಿಗರಿಗೆ ಬೋನಸ್ ಖುಷಿ ನೀಡುತ್ತದೆ.

ಹೊಳೆಯುವ ಬೆಣ್ಣೆಹೊಳೆ ಜಲಪಾತ
ಅಘನಾಶಿನಿಯ ಉಪನದಿಯ ಸೃಷ್ಟಿ ಈ ಬೆಣ್ಣೆಹೊಳೆ ಜಲಪಾತ. ದಟ್ಟ ಕಾನನದ ನಡುವೆ ಇರುವ ಈ ಜಲಪಾತದ ಎತ್ತರ 200 ಅಡಿಗಿಂತ ಹೆಚ್ಚು. ಜಲಪಾತಕ್ಕೆ ಸಾಗುವ ಮಾರ್ಗ ಕೊಂಚ ಕಷ್ಟಕರವಾದುದು. ಆದರೆ ಕಣ್ಮನ ಸೆಳೆಯುವ ದೃಶ್ಯವೈಭವ ಜಲಪಾತದಿಂದ ಸಾಧ್ಯ. ಶಿರಸಿಯಿಂದ ಕುಮಟಾ ಕಡೆಗೆ ಸಾಗುವ ದಾರಿಯ ನಡುವೆ ಈ ಜಲಪಾತದ ಮಾರ್ಗ ಸಿಗುತ್ತದೆ. ಅತ್ಯುತ್ತಮ ಟ್ರೆಕ್ಕಿಂಗ್ ಸ್ಪಾಟ್. ಮಳೆಗಾಲದಲ್ಲಿ ಜಲಪಾತದ ಬಳಿ ಸಾಗುವುದು ಅಪಾಯಕಾರಿ. ಆದರೆ ಉಳಿದ ಕಾಲಗಳಲ್ಲಿ ಜಲಪಾತದ ದರ್ಶನಕ್ಕೆ ಹೇಳಿಮಾಡಿಸಿದ ಹಾಗಿದೆ. ಕಾಡು, ಕಾಡುಪ್ರಾಣಿಗಳ ಪ್ರದೇಶ ಇದು.

ಅಭಯಾರಣ್ಯದ ಒಡಲಿನ ಕೂಸು ಅಣಶಿ ಜಲಪಾತ
ಕಾರವಾರ ದಾಂಡೆಲಿ ಮಾರ್ಗ ಮಧ್ಯ ಇರುವ ಅಣಶಿ ಜಲಪಾತ ನೋಡುಗರನ್ನು ತಟ್ಟನೆ ಸೆಳೆಯುವಂತಹುದು. ಅಣಶಿ ರಾಷ್ಟ್ರೀಯ ಉದ್ಯಾನದ ನಡುವೆ ಇರುವ ಈ ಜಲಪಾತ ಕಾರವಾರದಿಂದ 32 ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟದ ಹಾಗೂ ಕಾನನದ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಮೈದುಂಬುತ್ತದೆ. ಈ ಜಲಪಾತ ಹಲವು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಇದರ ಎಲ್ಲರ 150 ಅಡಿಗಳು. ಈ ಜಲಪಾತ ಛಾಯಾಚಿತ್ರಕಾರರಿಗೆ ಹಬ್ಬ ಉಂಟುಮಾಡುತ್ತದೆ. ಕದ್ರಾ ಅಣೆಕಟ್ಟೆಯಿಂದ 8 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಇದರ ಬುಡಕ್ಕೆ ತಲುಪಲು ಕಷ್ಟಪಡಬೇಕಿಲ್ಲ.


ಲವಲವಿಕೆಯ ಲಾಲಗುಳಿ ಜಲಪಾತ
ಮಳೆಗಾಲದಲ್ಲಿ ಮೈದುಂಬುವ ಜಲಪಾತಗಳ ಜಾತಿಗೆ ಇದು ಸೇರುತ್ತದೆ. ಕಾಳಿ ನದಿಗೆ ಬೊಮ್ಮನಹಳ್ಳಿಯಲ್ಲಿ ಅಣೆಕಟ್ಟು ನಿಮರ್ಾಣವಾಗುವ ಮೊದಲು ವರ್ಷದ ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಿದ್ದ ಈ ಜಲಪಾತ ಈಗ ಮಳೆಗಾಲದಲ್ಲಿ ಮಾತ್ರ ಮೈದುಂಬುತ್ತದೆ. ಯಲ್ಲಾಪುರದಿಂದ 13 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ಧುಮ್ಮಿಕ್ಕುವುದನ್ನು ನೋಡುವುದು ಬಲು ಅಂದ.



ಮನ ಸೆಳೆಯುವ ಮಾಗೋಡು ಜಲಪಾತ
ಯಲ್ಲಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಮಾಗೋಡು ಜಲಪಾತ ಬೇಡ್ತಿ (ಗಂಗಾವಳಿ) ನದಿಯ ಸೃಷ್ಟಿ. 200 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ವರ್ಷದ ಎಲ್ಲ ಕಾಲದಲ್ಲಿಯೂ ವೀಕ್ಷಿಸಬಹುದು. ಮಳೆಗಾಲದಲ್ಲಿ ರುದ್ರರಮಣೀಯವಾಗಿ ಕಾಣುವ ಈ ಜಲಪಾತ ಎರಡು ಹಂತಗಳಲ್ಲಿ ದುಮ್ಮಿಕ್ಕುತ್ತದೆ. ಈ ಜಲಪಾತದ ಬಳಿ ವೀಕ್ಷಣಾ ಗೋಪುರ ನಿಮರ್ಿಸಿರುವ ಪ್ರವಾಸೋದ್ಯಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜಲಪಾತದವರೆಗೂ ಉತ್ತಮ ರಸ್ತೆ ಇರುವುದರಿಂದ ಯಾವುದೆ ಕಾಲದಲ್ಲಿಯೂ ಪ್ರವಾಸ ಮಾಡಬಹುದಾಗಿದೆ.

ಭಯ ಹುಟ್ಟಿಸುವ ಬುರುಡೆ ಜಲಪಾತ
ಮಲೆನಾಡ ಮಡಿಲಿನಲ್ಲಿರುವ ಈ ಸುಂದರ ಜಲಪಾತ ಅಘನಾಶಿನಿ ನದಿಯ ಉಪನದಿಯ ಸೃಷ್ಟಿ. ನಾಲ್ಕು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಹೋಗಲು ಸಾಧ್ಯವೇ ಇಲ್ಲ. ಸಿದ್ದಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ದರ್ಶನ ಮಾಡಬೇಕೆಂದರೆ ಕನಿಷ್ಟ 6 ಕಿಲೋಮೀಟರ್ ನಡಿಗೆಯನ್ನು ಕೈಗೊಳ್ಳಲೇಬೇಕು. ಇಳಿಮನೆ ಜಲಪಾತ ಎಂದೂ ಕರೆಯಲಾಗುವ ಈ ಜಲಪಾತದ ಎರಡು ಹಂತಗಳನ್ನು ಸುಲಭವಾಗಿ ನೋಡಬಹುದು.

ಸ್ನಿಗ್ಧ ಸುಂದರ ವಿಭೂತಿ ಜಲಪಾತ
ಶಿರಸಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ವಿಭೂತಿ ಜಲಪಾತ ವಿಭೂತಿ ಹೊಳೆಯ ಸೃಷ್ಟಿ. ವಿಶ್ವ ಪ್ರಸಿದ್ಧ ಯಾಣದ ಹತ್ತಿರದಲ್ಲಿರುವ ಈ ಜಲಪಾತದ ಎತ್ತರ 100 ಅಡಿಗಿಂತ ಹೆಚ್ಚು. ಎರಡು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತದೆ. ವರ್ಷದ ಎಲ್ಲ ಸಮಯದಲ್ಲಿಯೂ ಜಲಪಾತವನ್ನು ನೋಡಬಹುದು. ನಿಸರ್ಗದ ನಡುವೆ ಇರುವ ಈ ಜಲಪಾತ ಒಳ್ಳೆಯ ಪಿಕ್ನಿಕ್ ಸ್ಪಾಟ್.


ಶಿವಗಂಗಾ ಜಲಪಾತ
74 ಅಡಿ ಎತ್ತರದ ಶಿವಗಂಗಾ ಜಲಪಾತ ಶಿರಸಿಯಿಂದ 22 ಕಿಲೋಮೀಟರ್ ದೂರದಲ್ಲಿದೆ. ಸೋಂದಾ ಹೊಳೆಯಿಂದ ಸೃಷ್ಟಿಯಾಗಿರುವ ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣುವ ಈ ಜಲಪಾತ ಅತ್ಯಂತ ಅಪಾಯಕಾರಿಯಾದುದು. ಜಲಪಾತಕ್ಕೆ ಸಾಗುವ ಮಾರ್ಗದಲ್ಲಿ ಸೋಂದಾ, ವಾದಿರಾಜ ಮಠ ಮುಂತಾದ ಕ್ಷೇತ್ರಗಳಿವೆ. ಅವುಗಳನ್ನು ನೋಡಿ ಬರಲು ಸಾಧ್ಯ.


ಕಾನನದ ಮಡಿಲ ವಾಟೆಹಳ್ಳ ಜಲಪಾತ
ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯದಲ್ಲಿರುವ ಜಲಪಾತ ವಾಟೆಹಳ್ಳ. ಹಲವು ಹಂತಗಳಲ್ಲಿ ಧುಮ್ಮಿಕ್ಕುಪ ಈ ಜಲಪಾತದ ಸೊಬಗು ಬಹು ಸುಂದರ. ಸಿದ್ದಾಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ವೀಕ್ಷಣೆ ಮಾಡಲು ಸಾಧ್ಯವೇ ಇಲ್ಲ. ನಿಲ್ಕುಂದ ಬಳಿ ಇರುವ ಈ ಜಲಪಾತವನ್ನು ವೀಕ್ಷಿಸಲು ಕನಿಷ್ಟ 2 ಕಿಲೋಮೀಟರ್ ಕಾಲ್ನಡಿಗೆ ಸವೆಸಬೇಕು. ಕಡಿದಾದ ಬೆಟ್ಟವನ್ನು ಜಾಗ್ರತೆಯಿಂದ ಇಳಿದರೆ ಇದರ ದರ್ಶನ ಸಾಧ್ಯ. ಅದೃಷ್ಟವಿದ್ದರೆ ವನ್ಯ ಮೃಗಗಳೂ ಕಾಣಬಹುದು. ಹಲವು ಹಂತಗಳು ಜಲಪಾತಕ್ಕೆ ಇದ್ದರೂ ಒಂದೆ ದಿನದಲ್ಲಿ ಅವುಗಳಷ್ಟನ್ನೂ ನೋಡುವುದು ಕಷ್ಟ. ಚಿಕ್ಕ ಹಳ್ಳ ಸೃಷ್ಟಿಸಿದ ಈ ಜಲಪಾತ ನೋಡುಗರನ್ನು ಸೇಳೆಯುತ್ತದೆ. ಒಳ್ಳೆಯ ಟ್ರೆಕ್ಕಿಂಗ್ ತಾಣ

ಇಷ್ಟೇ ಅಲ್ಲದೆ ಉತ್ತರ ಕನ್ನಡದಲ್ಲಿ ಇನ್ನೂ ಹಲವಾರು ಜಲಪಾತಗಳಿವೆ. ಪಶ್ಚಿಮ ಘಟ್ಟಗಳ ಶ್ರೇಣಿ ಈ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಈ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ನೂರಾರು ಜಲಪಾತಗಳಿವೆ. ಮಳೆಗಾಲ ಬಂತೆಂದರೆ ಈ ಜಲಪಾತಗಳಿಗೆ ಮತ್ತೆ ಜೀವಕಳೆ ಬರುತ್ತವೆ. ತುಂಬ್ರಿಕೊಡ್ಲು, ಸೂಸಬ್ಬಿಕೊಡ್ಲು, ವಜ್ರದುಂಡಿ, ಮುರೇಗಾರ, ಕರೂರು ಈ ಮುಂತಾದ ಹಲವಾರು ಜಲಪಾತಗಳು ಉತ್ತರ ಕನ್ನಡದ ಕಾನನದ ನಡುವೆ ಇವೆ. ಮಳೆಗಾಲದಲ್ಲಿ ಇವುಗಳು ನಯನಮನೋಹರ.

Thursday, August 19, 2010

ಇವರಿಗೆ ವಯಸ್ಸೇ ಆಗೋಲ್ವಾ?



ಭಾರತದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಸನತ್ ಜಯಸೂರ್ಯ, ವೆಸ್ಟ್ ಇಂದಿಸ ನ ಶಿವನಾರಾಯಣ್ ಚಂದ್ರಪಾಲ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಈ ಮುಂತಾದ ಕ್ರಿಕೆಟ್ ಆಟಗಾರರ ಉತ್ಸಾಹವನ್ನು, ಆಟದ ವೈಖರಿಯನ್ನು ಗಮನಿಸಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.
ಈ ಎಲ್ಲ ಆಟಗಾರರಿಗೆ 35ರ ಆಜುಬಾಜು ವಯಸ್ಸು. ಆದರೆ ಇವರ ಕಲಾತ್ಮಕ ಆಟಗಳು ಮಾತ್ರ ಯುವ ಹೊಡೆಬಡಿ ಆಟಗಾರರನ್ನು ಮೀರಿಸುವಂತಿದೆ. ಯುವ ಆಟಗಾರರು ಕ್ರೀಸಿನಲ್ಲಿ ನೆಲೆನಿಂತು ಬಾಲನ್ನು ಎದುರಿಸಲು ಪರದಾಡುವ ಸಮಯದಲ್ಲಿಯೇ ಇವರು ಆಟದ ಮರ್ಮ ಅರಿತು ಸಮಯಕ್ಕೆ ತಕ್ಕಂತೆ ಆಟವಾಡುತ್ತಾರೆ.
ಈ ಆಟಗಾರರದ್ದು ಎಲ್ಲ ರೀತಿಯ ಕ್ರೀಡೆಗೆ ಹೇಳಿಮಾಡಿಸಿದಂತಹ ಆಟ. ಅದು ಟೆಸ್ಟ್ ಇರಲಿ. ಒಂದು ದಿನದ ಪಂದ್ಯಗಳೇ ಇರಲಿ ಅಥವಾ ಇಂದಿನ ಜಮಾನಾದ ಟಿ20 ಪಂದ್ಯಗಳೇ ಇರಲಿ ಅಗತ್ಯಕ್ಕೆ ತಕ್ಕ ಆಟ ಇವರಿಂದ ಸಾಧ್ಯ. ಯುವ ಆಟಗಾರರು ಪ್ರತಿ ಪಂದ್ಯಗಳಲ್ಲಿ ಒಂದೇ ರೀತಿಯ ಆಟವನ್ನು ಪ್ರದರ್ಶಿಸಲು ವಿಫಲರಾಗುತ್ತಾರೆ. ಆದರೆ ಇವರು ಹಾಗಲ್ಲ. ಯಾವಾಗಲೂ ಉತ್ತಮ ಕ್ರಿಕೆಟ್ ಇವರಿಂದ ಸಾಧ್ಯ. ಈ ಆಟಗಾರರು ಆಡುವ ಕ್ರಿಕೆಟ್ ಸಹ ಅಷ್ಟೇ ಕಾವ್ಯಾತ್ಮಕ. ಪುಟ್ ವರ್ಕ್ ಗಳು, ಕವರ್ ಡ್ರೈವಳು, ಬ್ಯಾಕಪುಟ್ ಆಟಗಳು, ಹುಕ್ ಶಾಟ್ಗಳು  ಪ್ರತಿಯೊಂದೂ ಬಹಳ ಸುಂದರ.
ಈ ಆಟಗಾರರ ಆಟದ ವೈಖರಿಯೆ ಬದಲಾದುದು. ಇವರು ಮೇಲ್ನೋಟಕ್ಕೆ ನಿಧಾನವಾದ ಆಟವನ್ನು ಆಡಿದರೂ ಉತ್ತಮ ಸರಾಸರಿಯನ್ನೇ ಹೊಂಡಿರುತ್ತಾರೆ. ಇವರ ಇನ್ನೊಂದು ಮುಖ್ಯ ಲಕ್ಷಣಗಳೆಂದರೆ ಇವರು ಸಿಕ್ಸರ್ ಬಾರಿಸಲು ಹೆಚ್ಚು ಮುಂದಾಗುವುದಿಲ್ಲ. ಆದರೆ ಬೌಂಡರಿಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುತ್ತಾರೆ. ಬೌಲರ್ಗಳ ಸಹನೆಯನ್ನು ಪರೀಕ್ಷಿಸಿ ಬೆವರಿಳಿಸುತ್ತಾರೆ.
ಇವರು ಪಂದ್ಯಗಳಲ್ಲಿ ಪಕ್ಕಾ ಆಪತ್ಭಾಂದವರು. ಸೋಲಿನ ಸುಳಿಯಲ್ಲಿ ತಂಡವಿದ್ದರೆ ಅದನ್ನು ಬದಲಾಯಿಸುವ ಛಾತಿಯನ್ನು ಹೊಂದಿರುವವರು. ಇವರ ಕಲಾತ್ಮಕ ಆಟಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಗಾಯಗಳಾದರೂ ಇವರು ಅದಕ್ಕೆ ಜಗ್ಗವುದಿಲ್ಲ. ಗಾಯಕ್ಕಿಂತ ತಂಡ, ದೇಶ, ಗೆಲುವು ಮುಖ್ಯ ಎಂಬುದು ಇವರ ಗುಣ.
ಹಿರಿಯರ ಆಟಕ್ಕೆ ಅವರೆ ಸಾಕ್ಷಿ. ಯುವಕರ ಪಡೆ ಸಾಲು ಸಾಲು ಸೋಲನ್ನು ಅನುಭವಿಸುತ್ತಿರುವುದರಿಂದಲೆ ಪಾಕ್ ತಂಡ ನಿವೃತ್ತಿ ಹೊಂದಿದ್ದ ಮೊಹಮ್ಮದ್ ಯುಸುಫ್ರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ದು. ಅನುಭವ, ಉತ್ತಮ ಆಟವೇ ಇವರ ಆಸ್ತಿ. ಯುವ ಆಟಗಾರರು ನೂರು ರನ್ನುಗಳನ್ನು ಹೊಡೆಯಲು ಇವರು ಕಷ್ಟಪಟ್ಟರೆ, ಹಿರಿಯ ಆಟಗಾರರಿಗೆ ಅದು ಸಲೀಸು. ಶತಕ, ದ್ವಿಶತಕ ಇವರಿಗೆ ಸುಲಭ. ಯುವಕರು ಫಿಟ್ನೆಸ್ ಇಲ್ಲದೆ ಬಳಲಿ, ಸೋತು, ರನ್ನರ್ ಸಹಾಯದಿಂದ ಹಾಗೂ ಹೀಗೂ ರನ್ ಹೊಡೆದರೆ, ಇವರು ಯುವಕರನ್ನೇ ನಾಚಿಸುವಂತೆ ಆಡುತ್ತಾರೆ. ಎರಡು ಮೂರು ರನ್ನುಗಳನ್ನು ಸುಲಭವಾಗಿ ತೆಗೆಯುತ್ತಾರೆ.
ವೆಸ್ಟ್ ಇಂಡೀಸ್ನ ತಂಡವನ್ನೇ ತೆಗೆದುಕೊಳ್ಳಿ, ಆ ತಂಡದಲ್ಲಿ ಎಷ್ಟೇ ಹೊಸ, ಹೊಡೆ ಬಡಿ ಆಟಗಾರರು ಬಂದರೂ ತಂಡದ ಪಾಲಿಗೆ ಆಪದ್ಭಾಂದವನಂತೆ ಇರುವುದು ಚಂದ್ರಪಾಲ್ ಮಾತ್ರ. ಅದೇ ರೀತಿ ದಕ್ಷಿಣ ಆಫ್ರಿಕಾ ತಂಡದ ಜೀವಾಳ ಜಾಕ್ ಕಾಲಿಸ್ ಎಂದರೂ ತಪ್ಪಿಲ್ಲ. ಅದೆ ಆಸ್ಟ್ರೇಲಿಯಾ ತಂಡವನ್ನು ಗಮನಿಸಿ ಅಲ್ಲಿ ಸ್ಟೀವ್ ವಾ, ಹೇಡನ್ ಅಂತಹ ಆಟಗಾರರು ಇದ್ದಾಗ ಸಾಲು ಸಾಲು ಗೆಲುವನ್ನು ಅದು ಕಂಡಿದ್ದು ಇತಿಹಾಸ. ಆದರೆ ಅಂತಹ ಆಟಗಾರರು ಇಗ ಇಲ್ಲವೇ ಇಲ್ಲ. ಪರಿಣಾಮ ಅದಕ್ಕೆ ಸೋಲಿನ ರುಚಿ ಗೊತ್ತಾಗತೊಡಗಿದೆ.
ಶ್ರೀಲಂಕಾದ ಅರವಿಂದ್ ಡಿಸಿಲ್ವಾ ಅಂತೂ ತನ್ನ 40ನೇ ವರ್ಷದ ವರೆಗೆ ಕ್ರಿಕೆಟ್ ಆಡಿದ್ದ. ಈಗ ಸನತ್ ಜಯಸೂರ್ಯ ಸಹ ಹಾಗೆಯೇ ಆಡುತ್ತಿದ್ದಾನೆ. ಅಷ್ಟು ವಯಸ್ಸಾಗಿದ್ದರೂ ಅವರ ಆಟಕ್ಕೆ ಯಾವುದೆ ಕುಂದು ಉಂಟಾಗಿಲ್ಲ. ಮೊದಲಿಗಿಂತ ಉತ್ತಮವಾಗಿಯೆ ಆಡುತ್ತಿದ್ದಾರೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎನ್ನುವುದು ಇದಕ್ಕೇ ಇರಬೇಕು.
ತಂಡದ ಪಾಲಿನ ಆಪದ್ಭಾಂಧವ ಆಟಗಾರರಾದ ಇವರಿಗೆ ಹ್ಯಾಟ್ಸಾಪ್...