ಅರ್ಜಿ ಗಿರಿ
ನಿಮಗೆ ನಮ್ಮೂರಿನಲ್ಲಿರುವ ಅನೇಕ ವಿಶೇಷತೆಗಳ ಬಗ್ಗೆ ಹೇಳಲೇಬೇಕು. ಹಲವು ವೈಶಿಷ್ಟ್ಯ ಹಾಗೂ ವೈಚಿತ್ರ್ಯಗಳು ಇಲ್ಲಿ ತುಂಬಿ ಕಣ್ಣಿಗೆ ರಾಚುತ್ತವೆಯಾದರೂ ಎದ್ದು ಕಾಣುವುದು ಇಲ್ಲಿನ `ಅರ್ಜಿ ಗಿರಿ'.
ಹಲೋ ಒಂದು ನಿಮಿಷ. ನೀವೇನು ಅರ್ಜಿ ಗಿರಿ ಹೆಸರು ಕೇಳಿದ ಕೂಡ್ಲೇ ಇದೇನೋ ಗೂಂಡಾಗಿರಿ, ಗಾಂಧಿಗಿರಿ ಇಂಥವುಗಳ ಸಾಲಿಗೆ ಸೇರುವಂಥದ್ದು ಅಂದ್ಕೊಂಡ್ರಾ? ಅಲ್ಲ.. ಈ ಅರ್ಜಿ ಗಿರಿ ಇವೆಲ್ಲಕ್ಕಿಂತ ಡಿಫರೆಂಟು..
ನಮ್ಮೂರಿನ ಈ ಅರ್ಜಿ ಗಿರಿಯ ಬಗ್ಗೆ ಹೇಳಬೇಕಂದ್ರೆ ರಾಮಾಯಣದ ಹಾಗೇ ಅರ್ಜಿಯಾಯಣ ಎಂಬ ಇನ್ನೊಂದು ಭಾರಿ ಗೃಂಥವನ್ನೆ ಬರೆಯಬೇಕಾಗಲೂ ಬಹುದು. ಅಷ್ಟು ದೊಡ್ಡದು ಅದು..
ಹಿಂದೆ ಎಲ್ಲೋ ಎರಡು ಶತಮಾನಗಳ ಹಿಂದೆ ಊರಿಗೆ ರಸ್ತೆ ಮಾಡಿಸುವ ಮಹದುದ್ದೇಶದಿಂದ ಯಾವುದೋ ಹಿರಿ ತಲೆ ಬ್ರಿಟೀಷ್ ಸಕರ್ಾರಕ್ಕೆ ಕೊಟ್ಟ ಅರ್ಜಿಯಿಂದಲೇ ಈ ಅರ್ಜಿ ಗಿರಿಕಾಂಡ ಪ್ರಾರಂಭವಾಗುತ್ತದೆ. ಈಗಂತೂ ಈ ಅರ್ಜಿ ಗಿರಿಗೆ ಕೈಹಾಕದ ವ್ಯಕ್ತಿಯೇ ಇಲ್ಲ ನಮ್ಮೂರಲ್ಲಿ ಅಂದರೆ ಅದರ ತೀವ್ರಗತಿ ನಿಮಗರ್ಥವಾದೀತು.!!
ಅರ್ಜಿ ಗಿರಿಎಂದರೆ ಬೇರೇನೂ ಅಲ್ಲ. ಊರಿಗೆ ಯಾವುದೇ ಕೆಲಸವಾಗಬೇಕಾದರಾಗಲಿ, ಕಾರ್ಯಗಳು ಆಗಬೇಕಾದರಾಗಲೀ, ಯಾವುದೋ ಜನಪ್ರತಿನಿಧಿಗೋ, ಅಧಿಕಾರಿಗೋ, ಜಿಲ್ಲಾ ಕಲೆಕ್ಟರಿಗೊ ಗ್ರಾಮ ಪಂಚಾಯತಿ ಮೇಂಬರ್ರಿಗೋ ಅರ್ಜಿ ಗುಜರಾಯಿಸೋದೆ ಆಗಿದೆ.
ಇವರು ಉಳಿದೆಲ್ಲ ವಿಷಯಗಳಲ್ಲಿ ಹೇಗೆಯೆ ಇರಲಿ, ಅರ್ಜಿ ಗಿರಿಯ ವಿಷಯ ಬಂದಾಗ ಪಕ್ಕಾ ಅಹಿಂಸಾ ವೃತಸ್ಥರು. ಮಂದಗಾಮಿಗಳು.. ಇಲ್ಲಿಯವರಿಗೆ ಏನು ಗೊತ್ತಿಲ್ಲದಿದ್ದರೂ ಯಾರ್ಯಾರಿಗೆ ಅರ್ಜಿ ಕೊಟ್ಟರೆ ಹೇಗೆ ಎಂಬ ಸುದ್ದಿ ಗೊತ್ತಿದೆ. ವಿದ್ಯುತ್ ತೊಂದರೆಗೆ ಸೆಕ್ಷನ್ ಆಫೀಸರು, ಬಸ್ಸಿಗೆ ಡಿಪೊ ಮ್ಯಾನೇಜರು, ರಸ್ತೆಗೆ ರಾಜಕಾರಣಿ, ಬರ-ನೆರೆ ಬಂದರೆ ಕಂದಾಯ ಇಲಾಖೆ ಈ ಮುಂತಾದ ಕೆಲವು ವಿಭಾಗದವರಿಗೆ ನಮ್ಮೂರಿಗರ ಹ್ಯಾಂಡ್ ರೈಟಿಂಗಿನ ಪರಿಚಯ ಅದ್ಯಾವಾಗಲೂ ಆಗಿ ಹೋಗಿದೆಯಂತೆ.
ನಿಮಗೆ ಗೊತ್ತಿಲ್ಲ. ಯಾವುದೆ ಊರಿನಲ್ಲಾದರೂ ಎಲ್ಲರಿಗೂ ಸಂಬಂದಿಸಿದಂತೆ ಏನಾದರೊಂದು ಕಾಮನ್ ಸುದ್ದಿ ಇರಲಿಕ್ಕಿಲ್ಲ. ಆದರೆ ಇಲ್ಲಿ ತೊಂಭತ್ತರ ಹಿರಿಯರಾದಿಯಾಗಿ ಒಂಭತ್ತರ ಕಿರಿಯರವರೆಗೂ ಅರ್ಜಿಯೆಂಬ ಕಾಮನ್ ಸಂಗತಿ ಗೊತ್ತೇ ಇದ್ದು ಬಿಟ್ಟಿದೆ. ಪರೀಕ್ಷಿಸಿ ನೋಡಿ ಬೇಕಾದರೆ, ಇಲ್ಲಿಯವರೆಗೂ ನಮ್ಮೂರಿಗರು ಕೊಟ್ಟ ಅರ್ಜಿಗಳನ್ನು ಲೆಖ್ಖ ಹಾಕಿದರೆ, ಗಿನ್ನಿಸ್ಸು ಬುಕ್ಕಿನಲ್ಲಿ ಮೊದಲ ಸ್ಥಾನ ಯಾರ ಪೈಪೋಟಿಯೂ ಇಲ್ಲದೆಯೇ ಇಲ್ಲಿಗರಿಗೆ ದಕ್ಕಿಬಿಡುತ್ತದೆ.
ಇಲ್ಲಿ ಯಾರಾದರೂ ಹಿರಿಯರು ಕಿರಿಯರ ಬಳಿ `ತಮಾ, ಪೆನ್ನು ಪಟ್ಟಿ ತಗೊಂಡು ಬಾ' ಅಂದಕೂಡಲೇ ಊರಿಗರು ಯಾವುದಕ್ಕೋ ಅರ್ಜಿ ಬಿತ್ತು ಎಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಕಿರಿಯರು `ಶುರುವಾಯ್ತು ಅರ್ಜಿ ಕಾಟ' ಎಂದು ಗೊಣಗಲು ಮೊದಲಾಗುತ್ತಾರೆ. ಹಾಗೆಯೇ ಇಲ್ಲಿಯ ಕಿರಿಯರು, ಮಕ್ಕಳು ಸಂಜೆಯ ವೇಳೆ ಬಾಯಿಪಾಠ ಹೇಳಿ ಹೋಂ ವರ್ಕರ್ ಮಾಡದಿದ್ದರೂ ಅರ್ಜಿ ಬರೆಯುವ ಕೆಲಸ ಮಾಡೆಮಾಡುತ್ತವೆ.
ಇಲ್ಲಿಯ ಹೆಂಗಸರೂ ಕೂಡ ಅರ್ಜಿ ಗಿರಿಯ ವಿಷಯದಲ್ಲಿ ಹಿಂದೆ ಬಿದ್ದವರಲ್ಲ. ಅಂತ-ಇಂತ ಯಾವುದೇ ಸ್ತ್ರೀವಾದಿ ಸಂಘಟನೆಗಳು ಇಲ್ಲಿ ಇಲ್ಲದಿದ್ದರೂ ಅವರು ಅರ್ಜಿ ಕೊಡುವ ಕೈಂಕರ್ಯ ಮರೆತಿಲ್ಲ. ಇಲ್ಲಿ ಪುರುಷರು ಅರ್ಜಿ ಕೊಡುವ ಇಲಾಖೆಗಳೇ ಬೇರೆ.. ಅದೇ ರೀತಿ ಸ್ತ್ರೀಯರ ರೂಟೇ ಬೇರೆ. ಪುರುಷರದ್ದು ಬಹುತೇಕ ವ್ಯಾವಹಾರಿಕವಾದರೆ ಸ್ತ್ರೀಮಣಿಗಳು ಸ್ಥಳಿಯ ಶಾಲೆಗೆ, ಆಸ್ಪತ್ರೆಗೆ, ಪತ್ರಿಕೆಗಳಿಗೆಲ್ಲ ಅರ್ಜಿ ಕೊಡುವ ಕಾರ್ಯವನ್ನು ಮದುವೆ ಮನೆಯಲ್ಲಿ ಕೇರಿ ಕರೆಯುವ ಹಾಗೇ ಹಲವರ ಜೊತೆಗೆ ಸೇರಿ ಕೈಗೊಳ್ಳುತ್ತಾರೆ.
ನಮ್ಮೂರಲ್ಲಿ ಅರ್ಜಿ ಕೊಡುವವರದ್ದು ಒಂದು ಗುಂಪಾದರೆ ಅರ್ಜಿ ಜಡಿಯುವವರದ್ದು ಮತ್ತೊಂದು ಗುಂಪು. ಇಲ್ಲಿ ಅರ್ಜಿ ಕೊಡುವವರು ಸಮಾಜಸೇವಕರು. ಸ್ವಾರಥರು ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೆಲಸ ಮಾಡುವಂಥವರು. ಆದರೆ ಈ ಅರ್ಜಿ ಜಡಿಯುವವರು ಇದ್ದಾರಲ್ಲ ಇವರು ಮಾತ್ರ ಪಕ್ಕಾ ಅಡ್ಡ ಪಿಕರ್ಿಗಳು. ಇವರಿಗೆ ಮಾಡಲು ಬೇರೆ ಕೆಲಸವೇ ಇಲ್ಲವೇನೋ ಎಂಬಂತೆ ಇದ್ದು, ಆಗಾಗ ಏನಾದರೂ ಅಡ್ಡ ಅರ್ಜಿ ಗಳನ್ನು ಜಡಿಯುತ್ತಿರುತ್ತಾರೆ. ಇವರ ಕೆಲಸ ಮತ್ತೇನಲ್ಲ, ಏನಾದರೂ ಆಗುವಂಥ ಕೆಲಸಗಳಿದ್ದರೆ ಅವು ಆಗದಂತೆ ಮಾಡಿ ಮಜಾ ತೆಗೆದುಕೊಳ್ಳುವುದು. ಯಾವುದೇ ರಸ್ತೆ ಕಾರ್ಯಗಳಿದ್ದರೆ ಅವನ್ನು ತಡೆಯುವುದು. ಪಕ್ಕದ ಮನೆಯ ಹಸುಗೂಸು ಅಳುತ್ತದೆಂದು ಶಬ್ದಮಾಲಿನ್ಯದ ಕಾರಣ ನೀಡಿ ಗ್ರಾಮ ಪಂಚಾಯ್ತಿಗೆ ತಳ್ಳಿ ಅರ್ಜಿ ಕೊಡುವುದು. ಇಂಥದ್ದೇ ಈ ಮಂದಿಗಳು ನಡೆಸುವ ಪುಂಡರಪೂಟಿಗೆ ಉದಾಹರಣೆಗಳು.
ನಮ್ಮೂರಿನ ಈ ಅರ್ಜಿ ಗಿರಿಯ ಸುದ್ದಿ ಕೇಳಿದ ಯಾವುದೋ ಬುದ್ಧಿಜೀವಿ ಈ ಬಗ್ಗೆ ಅಧ್ಯಯನ ನಡೆಸಲು ಬರುವವರಿದ್ದಾರೆಂಬ ಗಾಳಿ ಸುದ್ದಿ ಬಂದಿದೆ. ಅವರು ಹಾಗೆ ಬಂದರೆಂದರೆ ಖಂಡಿತ ಒಂದು ಪಿ.ಎಚ್.ಡಿ ಸಿಕ್ಕೇ ಸಿಗುತ್ತದೆಂಬುದು ಎಲ್ಲರ ವಾದ.
ನಮ್ಮೂರಿನಲ್ಲಿರುವ ಸೂರಕ್ಕಿ ಸೀತಾರಾಮ ಅಲಿಯಾಸ್ ಶೀತೂಭಾವ, ಉಳಿದ ಎಲ್ಲ ಕೆಲಸಗಳಲ್ಲಿ ಹಿಂದುಳಿದಿದ್ದರೂ ಅರ್ಜಿ ಕೊಡುವುದರಲ್ಲಿ ಫೇಮಸ್ಸು. ಆದರೆ ಈತ ಇಲ್ಲಿಯವರೆಗೆ ಕೊಟ್ಟ ಅರ್ಜಿ ಯಿಂದ ಒಂದೇ ಒಂದು ಉಪಯೋಗವೂ ಆಗದೆ ಇರುವುದು ವಿಧಿ ವಿಲಾಸವೋ, ದುರಂತವೂ ಗೊತ್ತಾಗದು. ಅಲ್ಲದೇ ಈ ಶೀತೂಭಾವ ಅರ್ಜಿ ಯ ಕುರಿತಾಗಿ `ಅರ್ಜಿ ನಿನ್ನೆ ಇಂದು ನಾಳೆ' ಎಂಬ ಮಹಾನ್ ಪುಸ್ತಕವೊಂದನ್ನೂ ಬರೆಯುತ್ತಿದ್ದಾರೆ. ಇದು ಅರ್ಜಿ ಟ್ರೇನಿಂಗ್ ಕೋರ್ಸ್ಗೆ ಒಳ್ಳೆಯ ಹ್ಯಾಂಡ್ಬುಕ್ ಆದೀತು ಎಂಬುದು ಎಲ್ಲರ ಅನಿಸಿಕೆ. ಇನ್ನೂ ವಿಚಿತ್ರವೆಂದರೆ ಬೆಂಗಳೂರಿನ ಯಾವುದೋ ದೇಸಾಯಿ, ಬಾಬೂ ಮುಂತಾದ ನಿದರ್ೇಶಕರು `ನಮ್ಮ ಪ್ರೀತಿಯ ಅರ್ಜಿ ' ಎಂಬ ಚಲನಚಿತ್ರ ಮಾಡಲು ಮುಂದಾಗಿದ್ದಾರಂತೆ.
ಇಷ್ಟಕ್ಕೇ ನಿಲ್ಲುವುದಿಲ್ಲ ಈ ಅರ್ಜಿ ಗಿರಿಯ ಪ್ರತಾಪ.. ಪ್ರತಿ ಸಲ ಚುನಾವಣೆ ಬಂದಾಗ ಊರೂರಿಗೆ ತೆರಳುವ ಜನಪ್ರತಿನಿಧಿಗಳು ಈ ಊರಿಗೆ ಬರುವುದೇ ಇಲ್ಲ. ಯಾಕಂದರೆ ನಮ್ಮೂರಿನಲ್ಲಿ ತುಂಬಾ ಅರ್ಜಿ ಗಿರಿಯ ಘಾಟಿದೆಯಂತೆ. ಇದು ನಮ್ಮೂರಿನ ಅರ್ಜಿ ಗಿರಿಯ ಪುಂಡರಪೂಟು. ಈಗಿನ ನಮ್ಮೂರಿನಲ್ಲಿ ಅದರ ಘಮಲು ನೋಡಿದರೆ ಕನಿಷ್ಟ ಒಂದೆರಡು ಶತಮಾನಗಳಷ್ಟಾದರೂ ಗಟ್ಟಿಯಾಗಿ ಇಲ್ಲಿ ಅರ್ಜಿ ಗಿರಿ ನಿಲ್ಲಬಹುದೆಂಬ ಗುಮಾನಿಯಿದೆ.
ಅಂದ ಹಾಗೆ ಲೇಟೆಸ್ಟಾದ ಬ್ರೆಕಿಂಗ್ ನ್ಯೂಸ್ ಏನಂದ್ರೆ ನಮ್ಮೂರಿಗರು ಅರ್ಜಿ ಗಿರಿಯ ಟ್ರೇನಿಂಗ್ ಕೋರ್ಸನ್ನು ಪ್ರಾರಂಭಿಸಲು ಮುಂದಾಗಿದ್ದಾರಂತೆ. ಆ ಟ್ರೇನಿಂಗು ಪ್ರಾಕ್ಟಿಕಲ್ಲು ಹಾಗೂ ಥಿಯರಿ ಎರಡೂ ಪ್ರಕಾರಗಳಲ್ಲಿ ಇದೆಯಂತೆ ಎಂಬುದು ಅಚ್ಚರಿ. ಜೊತೆಗೆ ಪೋಸ್ಟಲ್ ಕೋರ್ಸ್ ಕೂಡ ಇದೆ ಎಂಬುದು ಹುಬ್ಬೇರುವ ಸಂಗತಿ.
ಆದರೆ ನಮ್ಮೂರಿನ ಅರ್ಜಿ ಗಿರಿಯಲ್ಲಿ ದೊಡ್ಡದೊಂದು ದೋಷವಿರುವುದು ನಾಡಿನ ಹೆಮ್ಮೆಯ ಟಿವಿಯೊಂದರ ಲೈವ್ ಆಪರೇಷನ್ನಿನಿಂದ ಬೆಳಕಿಗೆ ಬಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ನಮ್ಮೂರಿಗರು ಬರೆಯುತ್ತಿರುವ ಅರ್ಜಿ ಗಳಲ್ಲಿ ಸರಿಯಾದ ರೀತಿ, ನೀತಿ, ರಿವಾಜು ಇಲ್ಲದಿರುವುದು ಆ ಆಪರೇಷನ್ ಟೀವಿಯಿಂದ ತಿಳಿದುಬಂದಿದೆ. ಅಂದರೆ, ನಮ್ಮೂರಿಗರು ಕೊಡುವ ಅರ್ಜಿಯ ಫಾರಮೆಟು ಉಲ್ಟಾ-ಪಲ್ಟಾ ಆಗಿರುತ್ತದಂತೆ. ಅಲ್ಲದೇ ಅರ್ಜಿ ಗೆ ಉದ್ದನೆಯ ಹಾಳೆಯೂ ಬಳಕೆಯಾಗುತ್ತಿಲ್ಲವಂತೆ.... ಎಂಬುದನ್ನು ನಾನು ಯಾವುದೋ ಇಲಾಖೆಯ ಮುಖ್ಯಸ್ಥರ ಮೂಲಕ ತಿಳಿದೆ.
ನನಗೂ ಒಮ್ಮೆ ಈ ಅರ್ಜಿ ಗಿರಿಯ ರೋಗ ಹಿಡಿದಿತ್ತು.. ಯಾರ್ಯಾರೋ ಕೆಳಿಕೊಂಡರೆಂದು ಅರ್ಜಿ ಬರೆದೂ ಬರೆದೂ ಬೆವರು ಸುರಿಸಿದ್ದೆ.,. ಕೊನೆಗೊಮ್ಮೆ ಅರ್ಜಿ ಬರೆಯುವುದರ ವಿರುದ್ಧ ಒಂದು ದಿನ ಟ್ಯೂಬ್ಲೈಟ್ ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಜ್ಞಾನೋದಯವಾದ ಮೇಲೆ ಬಿಟ್ಟುಬಿಟ್ಟೆ.!!!
ಇಂತಿಪ್ಪ ಅರ್ಜಿ ಗಿರಿ ನಿಮ್ಮಲ್ಲಿಗೂ ಬಂದು ಕಾಲಿಟ್ಟೀತು.. ಅಂದಹಾಗೆ ಅಜಿ ಬರೆಯುವುದಕ್ಕೆ ನೀವೂ ಉತ್ಸುಕರಾಗಿದ್ದೀರಾ? ನಿಮಗೆ ಅರ್ಜಿ ಬರೆಯಲು ಟ್ರೇನಿಂಗು ಬೇಕಾ? ಹಾಗಾದ್ರೆ ಯಾಕೆ ತಡ? ಈಗಲೇ ಅರ್ಜಿ ಗಿರಿಯ ಪೋಸ್ಟಲ್ ಟ್ರೇನಿಂಗ್ ಕೋರ್ಸ್ಗೆ ಸೇರ್ರಲಾ...
-ವಿನಯ್ ಹೆಗಡೆ