ಅಂದು ಸಂಜೆ ನಾನು ನನ್ನ ಆಫೀಸು ಕೆಲಸ ಮುಗಿಸಿ ಮನೆಗೆ ಬಂದು ಸೇರುತ್ತಿದ್ದ ಹಾಗೆಯೇ ನನ್ನ ಮೊಬೈಲ್ ರಿಂಗಣಿಸತೊಡಗಿತು. ನಾನು ಅದನ್ನು ಲಗುಬಗೆಯಿಂದ ಎತ್ತಿಕೊಂಡು `ಹಲೋ' ಎಂದೆ..
ಆ ಕಡೆಯಿಂದ `ನಾನು ಸಂತೋಷ..' ಎಂದ.
`ಏನ್ ಸಮಾಚಾರ ಸಂತೋಷ..? ಚನ್ನಾಗಿದ್ದೀಯಾ..? ಹೇಗಿದ್ದೀಯಾ..' ಎಂಬಿತ್ಯಾದಿ ಉಭಯಕುಶಲೋಪರಿ ಸಾಂಪ್ರತಗಳೆಲ್ಲ ನಡೆದವು.
ಕೊನೆಗವನು `ನೀನು ಅರ್ಜೆಂಟಾಗಿ ಇಲ್ಲಿಗೆ ಬಾ.. ನಮ್ಮೆಲ್ಲರ ಪ್ರೀತಿ ಪಾತ್ರರಾದ ತ್ಯಾಗರಾಜ ಸರ್ ಅವರು ತೀರಿಕೊಂಡರು. ನೀನು ಬೇಗ ಹೊರಡು ಬಾ..' ಎಂದು ಪೋನಿಟ್ಟ.
ನನಗೆ ಒಮ್ಮೆಲೆ ದಿಗ್ಭ್ರಾಂತಿಯಾಯಿತು. ತ್ಯಾಗರಾಜ ಮಾಸ್ತರರು ನನ್ನ ಹೈಸ್ಕೂಲು ಹಾಗೂ ಜೀವನದಲ್ಲಿ ಸಿಕ್ಕ ಅತ್ಯಂತ ಪ್ರೀತಿ ಪಾತ್ರ ಮಾಸ್ತರರಾಗಿದ್ದರು. ಅವರು ನನಗಷ್ಟೇ ಅಲ್ಲದೇ ಹೈಸ್ಕೂಲಿನ ಪುಂಡ ಹುಡುಗರಿಗೆಲ್ಲ ಗುರುವಿನಂತಿದ್ದ ಸಂತೋಷನಂತಹ ಹಲವರಿಗೂ ಅಚ್ಚುಮೆಚ್ಚಿನ ಗುರುಗಳಾಗಿದ್ದರು.
ನಾನು ಲಗುಬಗೆಯಿಂದ ಕೈಗೆ ಸಿಕ್ಕ ಬಟ್ಟೆಗಳನ್ನು ಬ್ಯಾಗಿನಾಳಕ್ಕೆ ತುರುಕಿ ತಯಾರಾಗಿ ಬೆಂಗಳೂರಿನಿಂದ ಶಿರಸಿಯ ಕಡೆಗೆ ಹೊರಡುವ ಬಸ್ಸನ್ನು ಹತ್ತಿ ಕುಳಿತೆ. ಕುಳಿತ ಘಳಿಗೆಯಿಂದ ನನ್ನ ಮನದ ಭಿತ್ತಿಯ ಮೇಲೆ ತ್ಯಾಗರಾಜ ಮಾಸ್ತರರ ನೆನಪು ಒಂದರಹಿಂದೊಂದರಂತೆ ಮೂಡಿಬರಲಾರಂಭಿಸಿತು.
*****
ತ್ಯಾಗರಾಜ್ ಸರ್ ನನ್ನ ಅತ್ಯಂತ ಪ್ರೀತಿಪಾತ್ರ ಗುರುಗಳು. ಹಾಗೆಯೇ ನಾನೂ ಕೂಡ ಅವರ ಅತ್ಯಂತ ಪ್ರೀತಿ ಪಾತ್ರ ವಿದ್ಯಾರ್ಥಿಯಾಗಿದ್ದೆ. ಅವರು ತಮ್ಮ ವೃತ್ತಿ ಬದುಕಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳನ್ನು ಕಂಡಿದ್ದರೂ ಅವರ ಒಲವು ಮಾತ್ರ ನನ್ನ ಮೇಲಿತ್ತು.
ಹೈಸ್ಕೂಲಿನಲ್ಲಿ ಅವರು ಇಂಗ್ಲೀಷ್ ವಿಷಯದ ಶಿಕ್ಷಕರಾಗಿದ್ದರು. ಇಂಗ್ಲೀಷಿನಲ್ಲಿ ಅವರು ಹೆಚ್ಚು ಪಾಂಡಿತ್ಯ ಗಳಿಸಿಕೊಂಡಿದ್ದರು. ಅವರು ಇಂಗ್ಲಿಷೀನ ಬಹುತೇಕ ಎಲ್ಲಾ ಪುಸ್ತಕಗಳನ್ನು ಓದಿಕೊಂಡಿದ್ದರೇನೋ ಎನ್ನುವ ನಂಬಿಕೆ ನನ್ನದಾಗಿತ್ತು. ಪ್ರತಿಯೊಂದೂ ಸಮಯದಲ್ಲಿ ಅವರು ತಮ್ಮ ಕೈಯಲ್ಲಿ ಇಂಗ್ಲೀಷಿನ ಯಾವುದಾದರೊಂದು ಪುಸ್ತಕವನ್ನು ಹಿಡಿದು ಓದುತ್ತಿದ್ದರು. ಇಲ್ಲವಾದರೆ ಕೈಯಲ್ಲೊಂದು ಚಿಕ್ಕ ರೇಡಿಯೋ ಹಿಡಿದು ಬಿಬಿಸಿಯನ್ನೋ ವಾಯ್ಸ್ ಆಫ್ ಅಮೇರಿಕಾವನ್ನೋ ರಷ್ಯನ್ ಚಾನಲ್ಲನ್ನೋ ಹಾಕಿಕೊಂಡು ಕೇಳುತ್ತಿದ್ದರು. ಅವರ ಇಂಗ್ಲೀಷ್ ಪಾಂಡಿತ್ಯ ಎಷ್ಟಿತ್ತೆಂದರೆ ಒಮ್ಮೆ ಬಿಬಿಸಿಯ ನ್ಯೂಸ್ ನಲ್ಲಿ ಒಂದು ತಪ್ಪನ್ನು ಕಂಡುಹಿಡಿದು, ಬಿಬಿಸಿಯವರಿಗೆ ಪತ್ರ ಬರೆದು ಅವರಿಂದ ಪ್ರಶಂಸೆಯನ್ನೂ ಪಡೆದುಕೊಂಡಿದ್ದರು.
ನಾನು ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಮಾತೃಭಾಷಾ ಪ್ರವೀಣ ಎಂಬ ಹೆಸರನ್ನು ಪಡೆದುಕೊಂಡಿದ್ದೆ. ನನಗೆ ಇಂಗ್ಲೀಷ್ ಎಂದರೆ ಕಬ್ಬಣಕ್ಕಿಂತ ಗಟ್ಟಿಯಾಗಿದ್ದ ಕಡಲೆಯಾಗಿತ್ತು. ಈ ಮಾಸ್ತರರು ನನಗೆ ಇಂಗ್ಲೀಷಿನ ಕಡೆಗಿದ್ದ ಭಯ, ಅನ್ಯಮನಸ್ಕತೆಯನ್ನು ಹೋಗಲಾಡಿಸಿ ಇಂಗ್ಲೀಷು ಸುಲಭವಾಗಿಸಿದ್ದರು.
ಸರಿಯಾಗಿ ಇಂಗ್ಲೀಷಿನ ಪುಸ್ತಕವನ್ನೂ ಕೊಂಡು ಓದಲು ನನಗೆ ಕಷ್ಟವಾಗುತ್ತಿದ್ದ ಸಮಯದಲ್ಲಿ ಅವರು ತಮ್ಮಲ್ಲಿದ್ದ ಶೇಕ್ಸ್ಪೀಯರ್, ಮ್ಯಾಥ್ಯೂ ಅರ್ನಾಲ್ಡ್, ಚಾರ್ಲ್ಸ್ ಲ್ಯಾಂಬ್, ಜಾನ್ ಕೀಟ್ಸ್, ವೈ, ಬಿ. ಯೇಟ್ಸ್ ಮುಂತಾದ ಇಂಗ್ಲೀಷಿನ ಮಹಾಮಹಿಮರ ಪುಸ್ತಕಗಳನ್ನು ನನಗೆ ತಂದುಕೊಟ್ಟು, ಕಷ್ಟಪಟ್ಟು ಓದುವಂತೆ ಮಾಡಿ ಅವುಗಳನ್ನು ಕೊಡುಗೆಯಾಗಿ ನೀಡಿದರು.
ನಂತರದ ದಿನಗಳಲ್ಲಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನನ್ನನ್ನು ಓದಿಸಿದರು ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ತಮಗೆ ಸ್ವಂತ ಮಕ್ಕಳನ್ನು ಹೊಂದಿಲ್ಲದೇ ಇದ್ದ ಕಾರಣ ನನ್ನನ್ನು ಸ್ವಂತ ಮಗನಂತೆ ಸಾಕಿದರು. ಜೊತೆ ಜೊತೆಯಲ್ಲಿ ನನ್ನ ತಂದೆ ತಾಯಿಗಳಿಗೂ ಸಾಕಷ್ಟು ಸಹಾಯ ಮಾಡಿದ್ದರು.
ನಂತರ ನಾನು ಓದಿ ಬಿ.ಎಸ್ಸಿ, ಎಂ.ಎಸ್ಸಿ ಮುಂತಾದ ಹಲವಾರು ಡಿಗ್ರಿಗಳ ಸರದಾರನಾದೆ. ಜೊತೆಗೆ ಬೆಂಗಳೂರಿನ ಒಂದು ದೊಡ್ಡದೊಂದು ಕಂಪನಿ ಉದ್ಯೋಗ ನೀಡುತ್ತೇನೆಂದು ಕೈಬೀಸಿ ಕರೆಯಿತು. ಹುಂ ಅಂದ ತಕ್ಷಣ ಕೈಚಾಚಿ ನನ್ನನ್ನು ಕರೆದು ಸೆಳೆದು ತೆಕ್ಕೆಯೊಳಗೆ ಮುಳುಗಿಸಿಬಿಟ್ಟಿತು. ನಾನು ಉದ್ಯೋಗಲೋಕದಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡಂತೆಲ್ಲ ಮೆಚ್ಚಿನ ಮಾಸ್ತರು ದೂರದೂರವಾಗತೊಡಗಿದರು. ಅವರ ಒಡನಾಟ ತಪ್ಪಿತು. ನನಗೆ ಇಷ್ಟೆಲ್ಲ ಸಹಾಯಗಳನ್ನು ಮಾಡಿದ್ದ ತ್ಯಾಗರಾಜ ಮಾಸ್ತರು ಜಗತ್ತಿನ ಎಲ್ಲಾ ಭಾಷೆಗಳನ್ನೂ ಕಲಿಯಬೇಕೆಂಬ ಮಹೋನ್ನತ ಉದ್ದೇಶವನ್ನು ಹೊಂದಿದ್ದರು.
ನಾನು ಸಾಗುತ್ತಿದ್ದ ಬಸ್ಸಿನ ಡ್ರೈವರ್ ಒಮ್ಮೆ ಇದ್ದಕ್ಕಿದ್ದಂತೆ ಬ್ರೇಕ್ ಒತ್ತಿದ. ನಾನು ಮೋಡದಿಂದ ಮಳೆಹನಿ ಭೂಮಿ ಜಾರಿ ಇಳಿವಂತೆ ಒಮ್ಮೆ ನೆನಪಿನ ಲೋಕದಿಂದ ವಾಸ್ತವಕ್ಕೆ ದಡಾರನೆ ಬಂದು ಬಿದ್ದೆ. ನೋಡಿದರೆ ಬಸ್ಸು ಅರಸೀಕೆರೆಯನ್ನು ದಾಟಿತ್ತು. ಯಾವುದೋ ಹೆರುಗೊತ್ತಿಲ್ಲದ ಊರಿನಲ್ಲಿ ತಿಂಡಿಗಾಗಿ ನಿಂತಿತ್ತು.
ಬಸ್ಸು ಮತ್ತೆ ಮುಂದಕ್ಕೆ ಚಲಿಸಿದಂತೆಲ್ಲ ನಾನು ಮತ್ತೆ ನೆನಪಿನ ಅಂಗಣದೊಳಕ್ಕೆ ಪಯಣ ಮಾಡಿದೆ. ಹಲವಾರು ಉತ್ತಮ ಗುಣಗಳ ಖಜಾನೆಯಾಗಿದ್ದ ತ್ಯಾಗರಾಜ ಮಾಸ್ತರರಲ್ಲಿ ಕೆಲವೊಂದು ಅವಗುಣಗಳೂ ಇದ್ದವು.
ಅವರಲ್ಲಿದ್ದ ಮುಖ್ಯ ತೊಂದರೆಯೆಂದರೆ ಮರೆಗುಳಿತನವಾಗಿತ್ತು. ಅತಿಯಾದ ಮರೆವು ಅವರನ್ನು ಕಾಡುತ್ತಿತ್ತು. ಅತಿಯಾಗಿ ಓದಿದ ಕಾರಣದಿಂದಲೇ ಈ ಮರೆವು ತ್ಯಾಗರಾಜ ಮಾಸ್ತರರನ್ನು ಆವರಿಸಿಕೊಂಡಿದೆ ಎಂದು ಕೆಲವರು ಹೇಳುತ್ತಿದ್ದರು. ಇವರ ಮರೆಗುಳಿತನ ಆಗಲೇ ಹೈಸ್ಕೂಲಿನಲ್ಲಿ ವರ್ಡ್ ಫೇಮಸ್ಸಾಗಿತ್ತು. ಇವರ ಮರೆಗುಳಿತನ ಹೇಗಿತ್ತೆಂದರೆ ಒಮ್ಮೆ ಅವರು ತಮ್ಮ ಮೋಟಾರ್ ಬೈಕಿನಲ್ಲಿ ಸಾಗುತ್ತಿದ್ದು. ಬೈಕಿಗೆ ಬ್ರೇಕ್ ಹಾಕಲು ಮರೆತುಹೋದ ಪರಿಣಾಮ ಎದುರಿನ ಬಂಡೆಗಲ್ಲಿಗೆ ಢಿಕ್ಕಿಕೊಟ್ಟು ಬಿದ್ದು ಆಸ್ಪತ್ರೆಯ ಪಾಲಾಗಿದ್ದರು.
ಇನ್ನೊಂದು ಅವರಲ್ಲಿನ ಮುಖ್ಯ ಸಮಸ್ಯೆ ಎಂದರೆ ರೋಗಗಳ ಕಡೆಗಿದ್ದ ಅಪಾರ ಭಯ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ಮಹಾಮಾರಿಯ ಕುರಿತು ಅವರಿಗೆ ವಿಪರೀತ ಭಯವಿತ್ತು. ಯಾವುದೇ ಹೊಸ ರೋಗ ಪತ್ತೆಯಾದರೂ ಮೊದಲು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಕ್ಯಾನ್ಸರನ್ನಂತೂ ಅವರು ಭೂತ ಎಂದೇ ಕರೆಯುತ್ತಿದ್ದರು.
ಕ್ಯಾನ್ಸರಿನ ಕುರಿತು ಭಯದ ಕಾರಣದಿಂದಲೇ ಅವರು ತಮ್ಮ ಜೀವಮಾನದಲ್ಲೇ ಉಗುರಿಗೆ ಬಣ್ಣ ಹಚ್ಚಲಿಲ್ಲ. ಮುಖಕ್ಕೆ ಪೌಡರನ್ನೂ, ದೇಹಕ್ಕೆ ಸೆಂಟನ್ನೂ ಪೂಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಏಕೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಸಾಪ್ಟ್ ಡ್ರಿಂಕ್ ಗಳನ್ನೂ ಬಳಸುತ್ತಿರಲಿಲ್ಲ. ಮೊಬೈಲ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದುಕೊಂಡು ಮೊಬೈಲನ್ನು ದೂರವಿಟ್ಟಿದ್ದರು. ಯಾವುದೇ ರಾಸಾಯನಿಕ ವಸ್ತುಗಳನ್ನೂ ಬಳಕೆ ಮಾಡುತ್ತಿರಲಿಲ್ಲ. ಅತಿಯಾಗಿ ಎಕ್ಸರೇ ಮಾಡಿಸಿಕೊಂಡರೆ ಮುಂದೊಂದು ದಿನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಎಲ್ಲೋ ಓದಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಅತಿಯಾಗಿ ಪೋಟೋ ತೆಗೆಸಿಕೊಂಡರೆ ಕ್ಯಾನ್ಸರ್ ಬರುತ್ತದೆ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ ಪೋಟೋ ತೆಗೆಸಿಕೊಳ್ಳಲೂ ಹಿಂದೇಟು ಹಾಕಿದ ಅನೇಕ ಸಂದರ್ಭಗಳು ನನಗಿನ್ನೂ ನೆನಪಿದೆ. ನನ್ನ ಎಸ್ಸೆಸ್ಸೆಲ್ಸಿ ಬೀಳ್ಕೊಡುಗೆ ಸಮಾರಂಭದ ಪೋಟೋವೂ ಅದರಲ್ಲೊಂದು. ಅಷ್ಟರ ಜೊತೆಗೆ ಎಲ್ಲೇ ಕ್ಯಾನ್ಸರ್ ಕುರಿತು ಅಥವಾ ಇತರ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ, ಅರಿವು ಮೂಡಿಸುವ ಕಾರ್ಯಕ್ರಮವಿದ್ದರೆ ಅಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದರು.
ಹೀಗೆ ನನ್ನ ನೆನಪಿನ ನೌಕೆ ತಂಗಾಳಿಯಲೆಗೆ ಎದುರಾಗಿ ಸಾಗುತ್ತಿದ್ದ ವೇಳೆಯಲ್ಲೇ ನಾಣು ಇಳಿಯಬೇಕಾದ ಕೊನೆಯ ನಿಲ್ದಾಣ ಬಂದೇಬಿಟ್ಟಿತು. ನಾನು ಲಗುಭಗೆಯಿಂದ ಇಳಿದು ತ್ಯಾಗರಾಜ ಮಾಸ್ತರರ ಮನೆಯ ಕಡೆಗೆ ನಡೆದೆ.
ಅವರ ಮನೆಯ ಅಂಗಳದಲ್ಲಿ ನೀರವ ಮೌನ ತುಂಬಿತ್ತು. ಮಾಸ್ತರರ ಹಲವರು ಬಂಧು ಮಿತ್ರರಿರಬೇಕು. ಸೇರಿದ್ದರು. ನನ್ನೆಡೆಗೆ ಎಲ್ಲರ ಕಣ್ಣು ಕುತೂಹಲ, ಸೇರಿದಂತೆ ಹಲವು ಭಾವನೆಗಳಿಂದ ಅವರೆಲ್ಲ ನೋಡುವ ವೇಳೆಗೆ ನಾನು ಅಂಗಳ ದಾಟಿ ಮುಂದಡಿಯಿಟ್ಟಿದ್ದೆ. ಅಲ್ಲೊಂದು ಕಡೆ ತ್ಯಾಗರಾಜ ಮಾಸ್ತರರ ಹೆಂಡತಿ ರೋಧಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ತಲೆಗೂದಲು ಕೆದರಿತ್ತು. ಮತ್ತೊಂದು ಕಡೆಯಲ್ಲಿ `ಸಂತೋಷ' ನಿಂತುಕೊಂಡಿದ್ದ. ನಡುವಲ್ಲಿ ತ್ಯಾಗರಾಜ ಮಾಸ್ತರರು ಅಚೇತನರಾಗಿದ್ದರು. ಮಾಸ್ತರರ ನಿಶ್ಚಲ ದೇಹ ಭೂಮಿಯ ಮೇಲೆ ಅಂಗಾತ ಒರಗಿತ್ತು.
ನಾನು ಸಂತೋಷನ ಬಳಿ ಹೋಗಿ ಏನೇನಾಯ್ತು ಎಂದು ಕೇಳಿದೆ.
ಅದಕ್ಕೆ ಸಂತೋಷ `ಅವರಿಗೆ ಕ್ಯಾನ್ಸರ್ ಇತ್ತಂತೆ ಮಾರಾಯಾ..' ಎಂದ.
ನನಗೊಮ್ಮೆ ದಿಗ್ಭ್ರಾಂತಿಯಾಯಿತು. ನಾನು `ಏನು..? ಕ್ಯಾನ್ಸರ್..?' ಎಂದು ತೊದಲುತ್ತಾ ಉದ್ಘರಿಸಿ `ನನಗೇಕೆ ಹೇಳಲಿಲ್ಲ..' ಎಂದೆ.
`ಅವರಿಗೆ ಕ್ಯಾನ್ಸರ್ ಬಂದು ಬಹಳ ವರ್ಷವಾಗಿತ್ತಂತೆ. ಮೊನ್ನೆ ಬಹಳ ಹೆಚ್ಚಾಗಿತ್ತು. ನಾನು ನಿನಗೆ ಸುದ್ದಿ ತಿಳಿಸಬೇಕೆಂದು ಹೊರಟಾಗ ಮಾಸ್ತರರೇ ಬೇಡ ಎಂದರು'.. ಎಂದು ತಿಳಿಸಿದ.
ನನಗಂತೂ ಒಂದು ಕ್ಷಣ ಗಗನವೇ ಹರಿದುಬಿದ್ದಂತೆ ಅನ್ನಿಸತೊಡಗಿತು. ಆಕ್ಷಣದಲ್ಲಿ ನನಗೆ ಆಗುತ್ತಿದ್ದುದು ದುಗುಡವೋ, ಭಯವೋ, ಆಶ್ಚರ್ಯವೋ, ಕೌತುಕವೋ, ಉದ್ವೇಗವೋ, ದುಮ್ಮಾನವೋ.. ಬಗೆಹರಿಯಲಿಲ್ಲ. ಏನಾಗುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಕಣ್ಣು ಕತ್ತಲಿಟ್ಟಂತಾಯಿತು.
ಕೊನೆಗೆ ಸಂತೋಷ ನನ್ನ ಬಳಿ `ನೀನು ಮಾಸ್ತರರ ಚಿತೆಗೆ ಬೆಂಕಿ ಇಡಬೇಕಂತೆ..ಇದು ಅವರ ಕೊನೆಯ ಆಸೆಯಾಗಿತ್ತು..' ಎಂದ.
ಆಗ ನನಗೆ ಎಲ್ಲವೂ ಅರ್ಥವಾಯಿತು. ಅವರೇಕೆ ಕ್ಯಾನ್ಸರ್ ಬಗ್ಗೆ ಅಷ್ಟು ಭಯ ಹೊಂದಿದ್ದು, ಕ್ಯಾನ್ಸರ್ ಕುರಿತ ಕಾರ್ಯಕ್ರಮಗಳಿಗೆಲ್ಲ ತೆರಳುತ್ತಿದ್ದರು ಎಂಬುದು. ರೋಗಗಳ ಕುರಿತು ಅವರು ಹೊಂದಿದ್ದ ಭಯದ ಮೂಲ ಕಾರಣವೂ ನನಗೆ ಅರಿವಾಗಿತ್ತು. ನಾನು ಮನಸ್ಸಿನಲ್ಲಿಯೇ ಕ್ಯಾನ್ಸರ್ ಭೂತವನ್ನು ಹಳಿಯಲಾರಂಭಿಸಿದೆ. ಎಂತೆಂತಹ ಮಹಾನ್ ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿತಲ್ಲಾ ಈ ಕ್ಯಾನ್ಸರ್ ಭೂತ.. ಕೊನೆಗೆ ನನ್ನ ಪ್ರೀತಿಯ ತ್ಯಾಗರಾಜ ಮಾಸ್ತರರನ್ನೂ ಬಿಡಲಿಲ್ಲವಲ್ಲ ಎಂದು ಬಹಳ ಖೇದವುಂಟಾಯಿತು.
ಕೊನೆಗೆ ದುಃಖದ ನಡುವೆಯೇ ಅವರ ಚಿತೆಗೆ ನಾನೇ ಅಗ್ನಿಸ್ಪರ್ಷ ಮಾಡಿದೆ. ದುಃಖದ ನಡುವೆಯೂ ಗುರುವಿನ ಋಣ ತೀರಿಸಿದ, ತನ್ಮೂಲಕ ಗುರುದಕ್ಷಿಣೆ ಸಲ್ಲಿಸಿದ ತೃಪ್ತಿ ಸಿಕ್ಕಿತು. ಕ್ಷಣ ಕ್ಷಣಕ್ಕೂ ಚಿತೆಯ ಬೆಂಕಿ ಗಗನಮುಖಿಯಾಗುತ್ತಿತ್ತು. ಅಗ್ನಿ ಜ್ವಾಲೆಯಲ್ಲಿ ಕ್ಯಾನ್ಸರ್ ಭೂತದ ರುದ್ರನರ್ತನ ವಿಕಟಾಟ್ಟಹಾಸದಿಂದ ಮೆರೆಯುತ್ತಿರುವಂತೆ ಕಂಡು ಬೆನ್ನಿನ ಆಳದಲ್ಲಿ ಚುಳ್ಳೆಂದಿತು.
ನಾನು ಆ ನಂತರ
ಗುರು ಬ್ರಹ್ಮ, ಗುರುರ್ವಿಷ್ಣು..
ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ,
ತಸ್ಮೈ ಶ್ರೀ ಗುರವೇ ನಮ:
ಎಂದು ಹೇಳುತ್ತಾ ಅಲ್ಲಿಂದ ಹಿಂದಿರುಗಲಾರಂಭಿಸಿದೆ.
********
(ಬರೆದಿದ್ದು 11-05-2005ರಂದು ದಂಟಕಲ್ಲಿನಲ್ಲಿ)..