ನಂತರ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ನಾನು ಆತಂಕಕ್ಕೆ ಈಡಾದೆ.
ಆಕೆ ನಾಪತ್ತೆಯಾದ ಹಲವು ದಿನಗಳ ನಂತರ ಆಕೆಯಿಂದ ಒಂದು ಪತ್ರ ಬಂತು. ಅದರಲ್ಲಿ ಆಕೆ ತಾನು ಊರಿಗೆ ಮರಳಿದ್ದೇನೆಂದೂ,
ತನ್ನ ತಂದೆಗೆ ವಿಷಯ ಗೊತ್ತಾಗಿ ಬಲವಂತದಿಂದ ಕರೆದುಕೊಂಡು ಬಂದಿದ್ದಾರೆಂದೂ ತಿಳಿಸಿದ್ದಳು. ನಾನು ಒಮ್ಮೆ
ನಿರಾಳನಾದರೂ ತದನಂತರದಲ್ಲಿ ಸ್ವಲ್ಪ ಬೇಜಾರೇ ಆಗಿತ್ತು.
ಅದೇ ಪತ್ರದಲ್ಲಿ, ತಂದೆ ತನ್ನನ್ನು ಬೇರೊಂದು ಮದುವೆಗೆ ಒತ್ತಾಯ ಮಾಡುತ್ತಿದ್ದಾರೆಂದೂ,
ತಾನದಕ್ಕೆ ಒಪ್ಪಿಲ್ಲವೆಂದೂ, ನನಗಾಗಿ ಕಾಯುತ್ತಿರುತ್ತೇನೆ ಎಂದೂ ತಿಳಿಸಿದ್ದಳು. ಅಲ್ಲದೇ ಆಕೆಯ ಗರ್ಭಿಣಿಯಾದ
ವಿಷಯವನ್ನೂ ತಿಳಿಸಿದ್ದಳು. ನನಗೆ ಅದು ಆತಂಕಕ್ಕೆ ಈಡುಮಾಡಿತ್ತು.
ನಾನಿನ್ನೂ ಬದುಕಿನಲ್ಲಿ ನೆಲೆ ಕಂಡುಕೊಂಡಿರಲಿಲ್ಲ. ಓದು ಆಗತಾನೆ ಮುಗಿದಿತ್ತು.
ಆದರೆ ಜೀವನ ನಡೆಸಲು ಯಾವುದೇ ಉದ್ಯೋಗವೂ ಸಿಕ್ಕಿರಲಿಲ್ಲ. ನಾನು ಉದ್ಯೋಗಕ್ಕಾಗಿ ಹಲವು ಕಂಪನಿಗಳಿಗೆ
ನನ್ನ ಸ್ವವಿವರಗಳನ್ನು ಕಳಿಸಿದ್ದೆ. ಹಲವು ಸಂದರ್ಶನಗಳನ್ನೂ ಎದುರಿಸಿದ್ದೆ. ಆಕೆ ನಂತರದ ದಿನಗಳಲ್ಲಿ
ಮತ್ತೂ ಕೆಲವು ಪತ್ರಗಳನ್ನು ಬರೆದಿದ್ದಳು. ನಾನು ಒಂದೆರಡು ಸಾರಿ ಉತ್ತರ ಕೊಟ್ಟರೂ ನಂತರದಲ್ಲಿ ಅವುಗಳನ್ನು
ನಿರ್ಲಕ್ಷ್ಯ ಮಾಡಿದ್ದೆ.
ಹೀಗಿದ್ದಾಗಲೇ ನನಗೆ ಜಾಬ್ ಕೂಡ ಸಿಕ್ಕಿತು. ಆ ನಂತರದಲ್ಲಿ ಆಕೆ ನನ್ನ ಮನಸ್ಸಿನಿಂದ
ಕಾರಣವಿಲ್ಲದೇ ದೂರಾಗತೊಡಗಿದಳು. ಬಹುಶಃ ನನಗೆ ಉದ್ಯೋಗ ಸಿಕ್ಕಿತ್ತಲ್ಲ. ಹಾಗಾಗಿ ಅದರಲ್ಲಿ ಬ್ಯುಸಿಯೂ
ಆಗಿದ್ದೂ ಕಾರಣವಾಗಿರಬೇಕು. ಒಟ್ಟಿನಲ್ಲಿ ನನಗೆ ಅವಳ ನೆನಪು ಮರೆಯತೊಡಗಿತ್ತು. ಆಕೆ ಮಾತ್ರ ಪತ್ರಗಳ
ಮೇಲೆ ಪತ್ರಗಳನ್ನು ಬರೆಯುತ್ತಲೇ ಇದ್ದಳು. ಪ್ರತಿ ಪತ್ರದ ಕೊನೆಯಲ್ಲಿಯೂ ನಾನು ಸದಾ ನಿನಗಾಗಿ ಕಾಯುತ್ತಲೇ
ಇರುತ್ತೇನೆ ಎನ್ನುವ ಸಾಲುಗಳಿರುತ್ತಿದ್ದವು. ಆಮೇಲೆ ಕೆಲವು ದಿನಗಳ ನಂತರ ಆಕೆಯಿಂದ ಪತ್ರ ಬರುವುದು
ನಿಂತು ಹೋಯಿತು. ನನಗೆ ಆಗ ಆತಂಕವಾದರೂ ದಿನಕಳೆದಂತೆಲ್ಲ ನಾನು ಅವಳ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ.
ಆ ಸಂದರ್ಭದಲ್ಲೇ ನನಗೆ ಮನೆಯಲ್ಲಿ ಹೆಣ್ಣು ನೋಡಲು ಆರಂಭಿಸಿದ್ದರು. ಮನೆಯವರಿಗೆ
ಕೊನೆಗೆ ಒಬ್ಬ ಹುಡುಗಿ ಇಷ್ಟವಾಗಿ ನನ್ನ ಬಳಿ ಕೇಳೀದ್ದರು. ನಾನು ಮೊದ ಮೊದಲು ಬೇಡ ಎಂದರೂ ಮನೆಯವರ
ಒತ್ತಾಯಕ್ಕೆ ಕಟ್ಟು ಬಿದ್ದು ಮದುವೆಗೆ ಒಪ್ಪಿಕೊಂಡೆ. ಶುಭ ಮುಹೂರ್ತ ಒಂದರಲ್ಲಿ ನನಗೆ ಮದುವೆಯೂ ಆಯಿತು.
ಮದುವೆಯ ನಂತರದ ಒಂದೆರಡು ವರ್ಷಗಳಲ್ಲಿ ನಮ್ಮ ಬದುಕಿನ ಘಳಿಗೆ ಬಹಳ ರಸಮಯವಾಗಿತ್ತು. ಆ ಸಂದರ್ಭದಲ್ಲೆಲ್ಲೂ
ಅವಳು ನನಗೆ ನೆನಪಾಗಲೇ ಇಲ್ಲ. ದಿನ ಕಳೆಯಿತು, ತಿಂಗಳುಗಳು ಉರುಳಿದವು. ಒಂದು ಆರಾಯಿತು. ಆರು ಹನ್ನೆರಡಾಯಿತು.
ನೋಡ ನೋಡುತ್ತ ವರ್ಷಗಳೂ ಸಂದವು. ನಮ್ಮ ಬದುಕು ಕಳೆಯುತ್ತಲೇ ಇತ್ತು. ಆದರೆ ನಮಗೆ ಎಲ್ಲ ಸಂತಸದ ನಡುವೆ
ಕೂಡ ಒಂದು ಕೊರಗು ಕಾಡುತ್ತಲೇ ಇತ್ತು. ನಮಗೆ ಮಕ್ಕಳಾಗಿರಲಿಲ್ಲ.
ಮದುವೆಯಾದ ಹೊಸತರಲ್ಲಿ ಈಗ ಬೇಡ, ಈಗ ಮಕ್ಕಳು ಬೇಡ ಎಂದುಕೊಂಡೆವು. ಆಮೇಲಾಮೇಲೆ
ಮಕ್ಕಳ ಆಸೆ ಹೆಚ್ಚಾಯಿತು. ಮದುವೆಯಾಗಿ ದಶಕಗಳು ಕಳೆಯುತ್ತ ಬಂದವು. ಆಗ ಮಕ್ಕಳನ್ನು ಮಾಡಿಕೊಳ್ಳೋಣ
ಎಂದುಕೊಂಡರೆ ಊಹೂ.. ಆಗಲೇ ಇಲ್ಲ. ಕೊನೆಗೊಮ್ಮೆ ವೈದ್ಯರನ್ನು ಭೇಟಿ ಮಾಡಿದೆವು. ಆಗ ವೈದ್ಯರು ನನ್ನಾಕೆಗೆ
ಮಕ್ಕಳಾಗುವುದಿಲ್ಲ ಎಂದು ಹೇಳಿದಾಗ ನನಗೆ ಆಕಾಶವೇ ಒಮ್ಮೆ ಧರೆಗೆ ಇಳಿದು ಬಂದಿತ್ತು. ತದನಂತರದಲ್ಲಿ
ನಮ್ಮ ಬದುಕು ಯಾಂತ್ರಿಕವಾಗಿ ಸಾಗುತ್ತಿತ್ತು.
ಊಟ, ತಿಂಡಿ, ನಿದ್ದೆ, ಸಹಜೀವನ, ಮಿಲನ, ಉದ್ಯೋಗ ಇವುಗಳೆಲ್ಲ ಅದರ ಪಾಡಿಗೆ
ಅದು ನಡೆದು ಹೋಗುತ್ತಿದ್ದವು. ನನ್ನಾಕೆ ಕೂಡ ಒಂದೆರಡು ಸಾರಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯೋಣವಾ
ಎಂದೂ ಕೇಳಿದ್ದಳು. ಅದಕ್ಕೆ ನಾನು ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಇಬ್ಬರ ಮನಸ್ಸಿನಲ್ಲಿಯೂ ಕೊರಗಂತೂ
ಇದ್ದೇ ಇತ್ತು.
ಹೀಗೆ ಬದುಕು ಸಾಗುತ್ತಿದ್ದ ಸಂದರ್ಭದಲ್ಲಿ ವಿದ್ಯುಲ್ಲತಾ ನೆನಪಾಗಿದ್ದಳು.
ಇದೀಗ 13-14 ವರ್ಷಗಳಾದ ಮೇಲೆ ಈಗ ವಿದ್ಯುಲ್ಲತಾಳ ನೆನಪು ನನ್ನ ಬಿಡದೇ ಕಾಡುತ್ತಿದೆ. ಆಕೆ ಹೇಗಿದ್ದಾಳೋ,
ಏನು ಮಾಡುತ್ತಿದ್ದಾಳೋ ಎನ್ನುವುದು ನನ್ನ ಒಂದೇ ಸಮನೆ ಕಾಡುತ್ತಿದೆ. ಒಮ್ಮೆ ಆಕೆಯನ್ನು ನೋಡಬೇಕೆಂಬ
ತುಡಿತ ಹೆಚ್ಚುತ್ತಿದೆ. ಅವಳನ್ನು ನೋಡಬೇಕು, ಹೇಗಿದ್ದೀಯಾ ಅಂತ ಕೇಳಬೇಕು, ಯಾಕೋ ಆ ದಿನಗಳಲ್ಲಿ ನಾನು
ನಿನ್ನನ್ನು ದೂರ ಮಾಡಿಕೊಳ್ಳಬಾರದಿತ್ತು ಅಂತೆಲ್ಲ ಹೇಳಬೇಕು ಅನ್ನಿಸುತ್ತಿದೆ ಗೆಳೆಯಾ… ನನ್ನ ತಪ್ಪಿಗೆಲ್ಲ
ಕ್ಷಮೆ ಕೇಳಬೇಕು ಅನ್ನಿಸುತ್ತಿದೆ… ಎಂದು ಸಂಜಯನ ಬಳಿ ಒಂದೇ ಉಸಿರಿಗೆ ಹೇಳಿದೆ.
ಸಂಜಯ ಒಮ್ಮೆ ತಲೆ ಕೊಡವಿಕೊಂಡ.
ಆ ದಿನಗಳಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನೀನು ತಪ್ಪಂತೂ ಮಾಡಿದ್ದೆ
ದೋಸ್ತ… ಆಗಲೇ ನೀನು ಇದನ್ನು ಸರಿಪಡಿಸಿಕೊಳ್ಳಬೇಕಿತ್ತು… ಎಂದ…
ಹೇಗೆ ಮಾಡಬೇಕಿತ್ತು ದೋಸ್ತ? ಅಪ್ಪ ಅಮ್ಮನ ಮಾತಿಗೆ ಕಟ್ಟು ಬಿದ್ದಿದ್ದೆನಲ್ಲ.
ವಿದ್ಯುಲ್ಲತಾಳಿಗಿಂತ ಅವರೇ ಮುಖ್ಯವಾಗಿದ್ದರಲ್ಲ… ಎಂದು ನಿಡುಸುಯ್ದೆ.
ಹ್ಮ್… ಅದೂ ಹೌದು.. ಆಗ ಮಾಡಿದ್ದು ಆವಾಗಿನದ್ದು.. ಅದರ ಸರಿ-ತಪ್ಪುಗಳ
ಲೆಕ್ಕಾಚಾರ ಈಗ ಮಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಬಿಡು… ಅದ್ ಸರಿ, ನಿನ್ನ ಮನೆಯವಳಿಗೆ ವಿದ್ಯುಲ್ಲತಾಳ
ಬಗ್ಗೆ ಗೊತ್ತಾ… ಎಂದು ಕೇಳಿದ ಸಂಜಯ..
ಹು… ತೀರಾ ಇತ್ತೀಚೆಗೆ ಅವಳಿಗೆ ವಿದ್ಯುಲ್ಲತಾಳ ಬಗ್ಗೆ ಹೇಳಿದೆ. ಮೊದಲ
ಸಾರಿ ಸಿಟ್ಟಾದಳು, ಮಾತು ಬಿಟ್ಟಳು. ಆ ನಂತರದಲ್ಲಿ ಅವಳಿಗೆ ಆ ದಿನಗಳ ಬದುಕು, ವಾಸ್ತವವನ್ನು ವಿಸ್ತಾರವಾಗಿ
ತಿಳಿಸಿದೆ. ಅರ್ಥ ಮಾಡಿಕೊಂಡಳು. ನಾನು ಈಗ ಅಸ್ಸಾಮಿಗೆ ಹೊರಟಿದ್ದೀನಲ್ಲ, ಅದಕ್ಕೆ ಪ್ರಮುಖ ಕಾರಣಕರ್ತೆ
ಅವಳೇ.. ಒಮ್ಮೆ ಹೋಗಿ ನೋಡಿ ಬನ್ನಿ ಎಂದಳು. ಸಾಧ್ಯವಾದರೆ ಆಕೆಯನ್ನು ಕರೆದುಕೊಂಡು ಬನ್ನಿ ಎಂದಳು…
ಹೀಗಾಗಿ ಹೊರಟಿದ್ದೇನೆ ನೋಡು ಎಂದೆ..
ನಿನ್ನಾಕೆ ಬಹಳ ದೊಡ್ಡ ಮನಸ್ಸಿನವಳು… ಎಂದ ಸಂಜಯ..
--
ಇದಾಗಿ ಎರಡೂವರೆ ದಿನಗಳ ನಂತರ ನಮ್ಮನ್ನು ಹೊತ್ತಿದ್ದ ರೈಲು ಆಂಧ್ರ, ಒಡಿಶಾ,
ಕೋಲ್ಕತ್ತಾ, ಸಿಲಿಗುರಿ ಮುಂತಾದ ಊರುಗಳನ್ನು ದಾಟಿ ಅಸ್ಸಾಮನ್ನು ತಲುಪಿತು. ಅಸ್ಸಾಂ ಹಾಗೂ ಈಶಾನ್ಯ
ರಾಜ್ಯಗಳಲ್ಲಿಯೇ ಅತ್ಯಂತ ದೊಡ್ಡ ಮಹಾನಗರವಾದ ಗುವಾಹಟಿಯನ್ನು ನಾವು ತಲುಪಿದ್ದೆವು.
`ಇಲ್ಲಿಂದ ಎಲ್ಲಿಗೆ ಹೋಗೋದು..?’ ಎಂದು ಕೇಳಿದ್ದ ಸಂಜಯ.
ಸತ್ಯವಾಗಿ ಹೇಳಬೇಕು ಎಂದರೆ ನನಗೆ ಎಲ್ಲಿಗೆ ಹೋಗಬೇಕು ಎನ್ನೋದು ಗೊತ್ತಿಲ್ಲ…
ಎಂದೆ.
ವಾಟ್.. ಎಂದು ಬೆಚ್ಚಿ ಬಿದ್ದ ಸಂಜಯ, ನಿಂಗೆ ಮಂಡೆ ಸಮಾ ಇಲ್ಲೆ ಎಂದು ಬೈದ.
ಇಲ್ಲಿವರೆಗೆ ಬಂದ ಮೇಲೆ ಎಲ್ಲಿಗೆ ಹೋಗೋದು ಅಂತ ಕೇಳ್ತೀಯಲ್ಲ ಎಂದು ಸಿಟ್ಟಿನಿಂದ ನನಗೆ ಬಯ್ಯಲು ಆರಂಭಿಸಿದ.
ಇರು ಮಾರಾಯಾ.. ಆಕೆ ಬರೆದ ಪತ್ರದಲ್ಲಿ ಯಾವುದೋ ಊರಿನ ಹೆಸರನ್ನು ಹೇಳಿದ್ದಳು.
ಆದರೆ ಅದು ಮರೆತು ಹೋಗಿದೆ. ಅದೇನೋ ದಾಮ್ವೇ ಅಂತಲೋ, ದಾಮ್ಚೇ ಅಂತಲೋ ಏನೋ ಒಂದು ಹೆಸರು ಹೇಳಿದ್ದಳು.
ಬ್ರಹ್ಮಪುತ್ರಾ ನದಿಯ ಪಕ್ಕದಲ್ಲಿದೆ ನಮ್ಮೂರು ಅಂತ ಹೇಳೀದ್ದಳು ಎಂದೆ.
ತಥ್.. ಇಂವನ ನಂಬಿಕೊಂಡು ಇಲ್ಲಿಗೆ ಬಂದೆ. ಇಂವನಿಗೆ ಸರಿಯಾದ ಅಡ್ರೆಸ್ಸೇ
ಗೊತ್ತಿಲ್ಲ.. ಹಲ್ಕಟ್ ನನ್ಮಗ.. ಅಂತ ಸಂಜಯ ಬೈದವನೇ, ಸರಿ ಮುಂದೆ ಏನು ಮಾಡೋದು ಅಂದ.
ಇಲ್ಲಿ ಸ್ಥಳೀಯ ಗೈಡ್ ಗಳು ಸಿಕ್ತಾರಂತೆ. ಅವರನ್ನು ಕರೆದುಕೊಂಡು ದಾಮ್ವೇಯೋ
ದಾಮ್ಚೇಯೋ ಏನೋ ಒಂದು ಊರಿದೆಯಲ್ಲ ಅಲ್ಲಿಗೆ ಹೋಗೋಣ. ಆಕೆಯನ್ನು ಹುಡುಕೋಣ.. ಎಂದೆ.
ಇದು ಆಗಿ, ಹೋಗುವ ಮಾತಲ್ಲ… ಎಂದ ಸಂಜಯ..
ಮಾಡೋಣ ಮಾರಾಯಾ, ನನಗ್ಯಾಕೋ ಆಕೆಯನ್ನು ಹುಡುಕುತ್ತೇವೆ, ನಾನು ಅವಳನ್ನು
ಭೇಟಿಯಾಗುತ್ತೇನೆ ಎಂಬ ದೃಢ ನಂಬಿಕೆ ಹೊಂದಿದ್ದೇನೆ. ಮೊದಲು ಇಲ್ಲಿ ಗೈಡ್ಗಳನ್ನು ಒದಗಿಸುವ ಸ್ಥಳಕ್ಕೆ
ಹೋಗೋಣ ನಡಿ.. ಎಂದೆ.
ಗೊಣಗುತ್ತಲೇ ನನ್ನ ಜತೆ ಬಂದ ಸಂಜಯ. ನಾನು ಗುವಾಹಟಿಯ ಪ್ರಮುಖ ಬೀದಿಯಲ್ಲಿರುವ,
ಟೂರಿಸ್ಟ್ ಆಫೀಸಿಗೆ ಹೋದೆ. ಅಲ್ಲಿದ್ದ ವ್ಯಕ್ತಿ ಮೊದಲು ಅಸ್ಸಾಮಿಯಲ್ಲಿ ಮಾತನಾಡಿದ, ನಂತರ ಬೆಂಗಾಲಿಯಲ್ಲಿ
ಮಾತನಾಡಿದ. ನಾವು ಹಿಂದಿ ಹಾಗೂ ಇಂಗ್ಲೀಷಿನಲ್ಲಿ ಮಾತನಾಡಲು ಆರಂಭಿಸಿದ ಕೂಡಲೇ ಆತನೂ ಹಿಂದಿ ಹಾಗೂ
ಇಂಗ್ಲೀಷ್ ಶುರುಹಚ್ಚಿಕೊಂಡ. ನಾನು ಅವನ ಬಳಿ ದಾಮ್ವೇ ಎನ್ನುವ ಊರಿಗೆ ಹೋಗಬೇಕೆಂದೂ, ಯಾರಾದರೂ ಸ್ಥಳೀಯ
ಭಾಷೆ ಹಾಗೂ ಹಿಂದಿ-ಇಂಗ್ಲೀಷ್ ಭಾಷೆ ಗೊತ್ತಿರುವ ಗೈಡ್ ಇದ್ದರೆ ಬೇಕೆಂದೂ ಹೇಳಿದೆ.
ಆತ ಯಾರು ಯಾರಿಗೂ ಪೋನ್ ಮಾಡಿದ. ಹಲವು ಕಡೆ ಪೋನ್ ಮಾಡಿದ ನಂತರ ನಮ್ಮ ಕಡೆ
ತಿರುಗಿ `ನೋಡಿ ಒಬ್ಬರು ಸಿಕ್ಕಿದ್ದಾರೆ. ಅವರು ವೃತ್ತಿಪರ ಗೈಡ್ ಅಲ್ಲ. ಪ್ರೌಢಶಾಲೆ ಓದುತ್ತಿದ್ದಾರೆ.
ತಮ್ಮ ಬಿಡುವಿನ ವೇಳೆಯಲ್ಲಿ ಗೈಡ್ ಆಗಿ ಕೆಲಸ ಮಾಡ್ತಾರೆ. ಅವರಿಗೆ ಐದಾರು ಭಾಷೆಗಳು ಬರುತ್ತವೆ. ಅವರನ್ನು
ನಿಮ್ಮ ಜತೆ ಕಳಿಸಬಹುದು. ಆದರೆ ನಿಮ್ಮ ಜತೆ ಗೈಡ್ ಆಗಿ ಬರುತ್ತಿರುವವರು ಒಬ್ಬಳು ಹುಡುಗಿ. ನೀವು ಆಕೆಯ
ಜತೆಯಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು.. ಹಾಗೆ ಹೀಗೆ ಎಂದೆಲ್ಲ ಉದ್ದನೆಯ ಭಾಷಣ ಬಿಗಿದ.
ಸರಿ.. ಕಳಿಸಿ ಎಂದೆ. ನಂತರ ಹಲವಾರು ಫಾರ್ಮುಗಳಿಗೆ ಸಹಿ ಹಾಕಿಸಿಕೊಂಡ.
ಮುಂಗಡ ಹಣ ಕೊಡಿ ಎಂದ. ಎಲ್ಲವನ್ನೂ ಕೊಟ್ಟೆವು. ತದನಂತರ ಅಸ್ಸಾಮಿನ ಒಂದು ಮ್ಯಾಪ್ ಕೊಟ್ಟು ನಿಮ್ಮ
ಅನುಕೂಲಕ್ಕಿರಲಿ ಇದು ಎಂದ.
ಇದಾಗಿ ಒಂದು ತಾಸಿನ ನಂತರ ಒಬ್ಬ ಬಾಲಕಿ ನಾವಿದ್ದ ಆಫೀಸಿನ ಬಳಿ ಬಂದಳು.
ಬಂದವಳೇ ಆ ಆಫೀಸಿನಲ್ಲಿದ್ದ ವ್ಯಕ್ತಿಯ ಬಳಿ ಕೆಲವು ಸಮಯ ಮಾತನಾಡಿದಳು. ತದನಂತರ ನಮ್ಮ ಬಳಿ ತಿರುಗಿ
ಮುಗುಳ್ನಕ್ಕಳು. ನಾವೂ ಪ್ರತಿಯಾಗಿ ನಕ್ಕೆವು.
ಹಾಯ್.. ಮೈ ನೇಮ್ ಈಸ್ ಆಶ್ನಾ.. ಎಂದಳು.
ನಾವು ಪರಿಚಯ ಮಾಡಿಕೊಂಡೆವು. ಬನ್ನಿ ಎಂದು ಇಂಗ್ಲೀಷಿನಲ್ಲಿಯೇ ಹೇಳಿ ಗುವಾಹಟಿಯ
ಬೀದಿಯಲ್ಲಿ ನಡೆಯತೊಡಗಿದಳು. ನಾವು ಹಿಂಬಾಲಿಸಿದೆವು.
ಹೈಸ್ಕೂಲು ಓದುತ್ತಿರುವ ಬಾಲಕಿಯಂತೆ ಕಾಣುತ್ತಿದ್ದ ಆಕೆ ಅಸ್ಸಾಮಿಗರಂತೆ
ತೆಳ್ಳಗಿದ್ದಳು. ಚುರುಕಾಗಿದ್ದಳು. `ನಾವು ಬಸ್ಸಿನಲ್ಲಿ ಹೋಗೋದಾ..? ಅಥವಾ ಇನ್ಯಾವುದಾದರೂ ಗಾಡಿ ಮಾಡಿಸಬೇಕಾ
ಎಂದು ಕೇಳೀದಳು. ಆಕೆಯ ಇಂಗ್ಲೀಷು ಸ್ಫುಟವಾಗಿತ್ತು. ನಾನು ಆಕೆಯ ಇಂಗ್ಲೀಷಿಗೆ ತಲೆದೂಗಿದೆ.
ಬಸ್ಸು, ಇತರ ವಾಹನಗಳ ಕುರಿತು ಮಾತು ಕತೆ ನಡೆಸಿದ ನಾವು ತದನಂತರ ಒಂದು
ಜೀಪನ್ನು ಬಾಡಿಗೆಗೆ ಪಡೆದು ಹೋಗೋಣ ಎಂದು ನಿರ್ಧರಿಸಿದೆವು. ಇನ್ನೊಂದು ಟ್ರಾವೆಲ್ ಆಫೀಸಿಗೆ ಹೋಗಿ
ಜೀಪನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೊರಟೆವು..
ಇಲ್ಲಿಂದ ನಮ್ಮ ಬದುಕು ಇನ್ನೊಂದು ಮಗ್ಗುಲಿನತ್ತ ಹೊರಟಿತ್ತು..
(ಮುಂದುವರಿಯುವುದು…)