Monday, September 26, 2016

ಪರಿಸರ ಮಿತ್ರರು

ಇವರೆಲ್ಲ ನಮ್ಮ ಗೆಳೆಯರು
ಕಾನನದ ಜೊತೆಗಾರರು |
ಮಿತ್ರರು, ಭ್ರಾತ್ರರು,
ಸದಸ್ಯರು ಸೋದರರು |

ತೇಗ ಚೆಲುವು ಬಿದಿರು ಕೊಳಲು
ಪ್ರಾಣಿ ನೂರು, ತುಂಟ ಅಳಿಲು |
ಬಹಳ ಗಟ್ಟಿ ಜಟ್ಟಿ ಬೀಟೆ
ಇರುವರೇನು ನಿನಗೆ ಸಾಟಿ |

ಆನೆ ಹುಲಿ ಸಿಂಹ ಕರಡಿ
ಕಾನನದ ಸಿರಿಯ ಕಣ್ಗಳು |
ಹಕ್ಕಿ ಪಕ್ಷಿ ನದ ನದಿಗಳು
ನೂರು ಇಂಪು ಸವಿಯ ನುಡಿಗಳು |

ದೇವದಾರು ಬಲು ಜೋರು
ನಯನ ಸೆಳೆವುದು |
ಜಿಂಕೆ ಕಡವೆ ಮೃಗ ಸಮೂಹ
ನಮ್ಮ ಕರೆವವು ||

ಲವಂಗವಾದಿ ವನ ಸಿರಿಗಳು
ಜೀವ ಜ್ಯೋತಿಯು
ರೋಗ ರುಜಿನ ಬಂದರೀಗ
ಜೀವ ಕೊಡುವವು |

ನವಿಲು ಹಕ್ಕಿ, ನೂರು ಪಕ್ಷಿ
ಕಾನನದ ಸಿರಿಗಳು |
ಮಿಂಚುಳ್ಳಿ ಚುಕ್ಕಿ, ಹಕ್ಕಿ
ಮನವ ಬೆಸೆವ ಖಗಗಳು |

ನದಿಯಲಾಡೋ ಮೀನು ಮರಿ
ಖುಷಿಯ ಕೊಡುವವು |
ಹಂಸ ಗಿಳಿ ಪಾರಿವಾಳ
ಮನದಿ ಮೆರೆವವು |

ಬಾನು ಕಾನು ನೆಲ ಜಲವು
ನಮ್ಮ ಜೀವವು |
ಉಸಿರ್ಗಾಳಿ ಜೀವ ಜಲವ
ಇವು ಕೊಡುವವು |

ನಮ್ಮ ಈ ಸೋದರರನು
ನೀವು ಉಳಿಸಿರಿ |
ಮುಂದಿನ ಕೆಲ ಜೀವನವ
ಹಸಿ ಹಸಿರಾಗಿಸಿರಿ ||


+++++++++++++++++++++++

( ಈ ಕವಿತೆಯನ್ನು ಬರೆದಿರುವುದು 20-12-2005ರಂದು ದಂಟಕಲ್ಲಿನಲ್ಲಿ)

(ಯಾವುದೇ ಕವಿಯ ಕಾವ್ಯಲೋಕದ ಪಯಣ ಇಂತಹ ಕವಿತೆಗಳಿಂದಲೇ ಆರಂಭವಾಗುತ್ತದೆ. ಇದೊಂದು ಮಕ್ಕಳ ಕವಿತೆ ಎನ್ನಬಹುದೇನೋ. ನನ್ನ ಬರವಣಿಗೆಯ ಪ್ರಾರಂಭದ ದಿನಗಳ ಕವಿತೆ ಇದು. 49ನೇ ಕವಿತೆ ಇದು ಎನ್ನುವುದನ್ನು ನನ್ನ ಪಟ್ಟಿ ಉಲ್ಲೇಖಿಸಿದೆ. ಕಲಿಕೆ ನಿರಂತರ. ಬದಲಾವಣೆ ಕೂಡ ನಿರಂತರ. ಅಂದಿಗೂ ಇಂದಿಗೂ ಅದೆಷ್ಟೋ ಬದಲಾವಣೆಗಳಾಗಿವೆ. ಆಗ ಹೀಗೆಲ್ಲಾ ಬರೆದಿದ್ದೆನಾ ಎಂದು ನನಗೇ ಆಶ್ಚರ್ಯವಾಗುವಂತಿದೆ. ಅಲ್ಲದೇ ಸ್ವಲ್ಪ ನಾಚಿಕೆಯೂ ಆಗುತ್ತಿದೆ. ಏನೇ ಆಗಲಿ. ನೀವೂ ಓದಿಬಿಡಿ. 11 ವರ್ಷಗಳ ಹಿಂದಿನ ಕವಿತೆ ನಿಮ್ಮ ಮುಂದೆ )

Saturday, September 17, 2016

ಅಘನಾಶಿನಿ ಕಣಿವೆಯಲ್ಲಿ-33

 
           `ನಾ ಎಂತಾ ಹೇಳೂದು..' ಎಂದು ಶುರುಮಾಡಿದ ಬಾಬು. ಪ್ರದೀಪ ಕೆಕ್ಕರಿಸಿ ನೋಡಿದ. `ನಾ ಒಬ್ನೆ ಅಲ್ಲ. ನೀವ್ ನೋಡಿದ್ರೆ ನನ್ನ ಮಾತ್ರ ಹಿಡಕಂಡ್ರಿ. ಬಹಳಷ್ಟ್ ಜನ ಇದ್ದಾರೆ. ಅವ್ರು ಮಾಡದೇ ಇರುವಂತದ್ದೇನೂ ನಾ ಮಾಡನಿಲ್ಲ.' ಎಂದು ಅಲವತ್ತುಕೊಂಡ. ಪ್ರದೀಪನ ಸಹನೆಯ ಕಟ್ಟೆ ಮೀರಿತ್ತು. ರಪ್ಪನೆ ಬಾಬುವಿನ ಮುಸಡಿಗೆ ಒಂದು ಬಡಿದ. ಹೊಡೆದ ಹೊಡೆತಕ್ಕೆ ಬಾಬುವಿನ ಮುಖದಿಂದ ಬಳ್ಳನೆ ರಕ್ತ ಬಂದಿತು. ಕೈ ಮುಗಿದ ಬಾಬು.
              `ನಾನು ಮೊದ ಮೊದಲು ಇಂತದ್ದೆಲ್ಲ ಮಾಡಿರ್ನಿಲ್ಲ. ಆದರೆ ಹೊಟೆಲ್ ಮಾಡಬೇಕು ಅಂದಕಂಡು ಮುಂಬೈಗೆ ಹೋದೆ. ಅಲ್ಲಿ ಗಂಧವನ್ನು ಕಳ್ಳತನ ಮಾಡುವ ಗ್ಯಾಂಗ್ ಪರಿಚಯವಾಯಿತು. ಒಂದೆರಡು ವರ್ಷ ಮುಂಬೈನಲ್ಲಿ ಹೊಟೆಲ್ ಕೆಲಸ ಮಾಡಿದಂತೆ ಮಾಡಿದೆ. ಆದರೆ ನಂತರ ನನಗೆ ಗಂಧದ ತುಂಡುಗಳನ್ನು ಮಾರಾಟ ಮಾಡುವ ಜಾಲದ ಉದ್ದಗಲಗಳು ನನಗೆ ಗೊತ್ತಾದವು. ಮುಂಬೈನಲ್ಲಿ ಯಾವುದನ್ನು ಹೇಗೆ ಮಾರಾಟ ಮಾಡಬೇಕು? ಯಾವುದಕ್ಕೆ ಎಷ್ಟು ರೇಟಿದೆ ಎನ್ನುವುದನ್ನೆಲ್ಲ ತಿಳಿದುಕೊಂಡೆ. ಗಂಧದ ತುಂಡುಗಳ ಮಾರಾಟದ ನೆಪದಲ್ಲಿ ನಾನು ಆ ಜಾಲದ ಭಾಗವಾಗಿದ್ದೆ. ಆದರೆ ನಂತರದ ದಿನಗಳಲ್ಲಿ ಕೇವಲ ಗಂಧದ ತುಂಡುಗಳಿಗೆ ಮಾತ್ರ ನಮ್ಮ ದಂಧೆ ಸೀಮಿತವಾಗಿಲ್ಲ ಎನ್ನುವುದು ಅರಿವಾಯಿತು. ಕ್ರಮೇಣ ಗಾಂಜಾ ಮಾರಾಟವೂ ಗೊತ್ತಾಯಿತು. ಯಾರೋ ತಂದುಕೊಡುತ್ತಿದ್ದರು. ಅದನ್ನು ಇನ್ಯಾರಿಗೋ ದಾಟಿಸುವ ಕೆಲಸ ಮಾಡುತ್ತಿದೆ. ಹೀಗೆ ಮಾಡುತ್ತಿದ್ದಾಗಲೇ ಒಂದೆರಡು ಮಧ್ಯವರ್ತಿಗಳ ಪರಿಚಯವೂ ಆಯಿತು. ಇದಲ್ಲದೇ ಮುಂಬೈನಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಬಂದರುಗಳಲ್ಲಿ ಲಂಗರು ಹಾಕಿರುತ್ತಿದ್ದ ಹಡಗುಗಳಿಗೆ ಮಾದಕ ವಸ್ತುಗಳನ್ನು ದಾಟಿಸುವುದನ್ನೂ ತಿಳಿದುಕೊಂಡಿದ್ದೆ. ಹೀಗಿದ್ದಾಗಲೇ ನನಗೆ ನಮ್ಮೂರ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಗಂಧದ ತುಂಡುಗಳ ವಿಷಯ ನೆನಪಾದವು. ಅದನ್ನು ಇಲ್ಲಿ ತಂದು ಮಾರಾಟ ಮಾಡಿದರೆ ಹೇಗೆ ಎನ್ನುವುದೂ ಅರಿವಾಯಿತು. ತಲೆಯಲ್ಲಿ ಬಂದ ತಕ್ಷಣವೇ ನಾನು ಮುಂಬೈಯನ್ನು ಬಿಟ್ಟು ನಮ್ಮೂರಿಗೆ ವಾಪಾಸಾಗಿದ್ದೆ..' ಬಾಬು ಒಂದೇ ಉಸುರಿಗೆ ಹೇಳಿದ್ದ.
           `ಮುಂಬೈನಿಂದ ಬರುವಾಗ ನನ್ನಲ್ಲಿ ಅಷ್ಟೋ ಇಷ್ಟೋ ದುಡ್ಡಾಗಿತ್ತು. ಊರಿಗೆ ವಾಪಾಸು ಬಮದವನೇ ದೊಡ್ಡದೊಂದು ಕಾರನ್ನು ಕೊಂಡುಕೊಂಡೆ. ನೋಡುಗರಿಗೆ ನಾನು ಮುಂಬೈನಲ್ಲಿ ಹೊಟೆಲ್ ಬ್ಯುಸಿನೆಸ್ ನಲ್ಲಿ ಭಾರೀ ಲಾಭ ಮಾಡಿಕೊಂಡೆ ಎನ್ನುವ ಭಾವನೆ ಮೂಡುವಂತೆ ಮಾಡಿದೆ. ಆದರೆ ವಾಸ್ತವದಲ್ಲಿ ನಾನು ಕಾರು ಕೊಂಡಿದ್ದೇ ಬೇರೆ ಕಾರಣಕ್ಕಾಗಿತ್ತು. ನಮ್ಮೂರ ಭಾಗದಲ್ಲಿ ಸಿಗುವ ಗಂಧದ ಮಾಲನ್ನು ಕದ್ದು ಕಾರಿನಲ್ಲಿ ಹಾಕಿಕೊಂಡು ಮಧ್ಯವರ್ತಿಗಳಿಗೆ ಸಾಗಿಸುವ ಕೆಲಸವನ್ನು ನಾನು ಮಾಡುತ್ತಿದ್ದೆ. ಹೇರಳವಾಗಿ ದುಡ್ಡು ಬರುತ್ತಲೇ ಇತ್ತು. ಆದರೆ ಮೊದ ಮೊದಲಿಗೆ ಗಂಧದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದ ನಾನು ನಂತರದ ದಿನಗಳಲ್ಲಿ ಬೇರೆ ಬೇರೆ ದಂಧೆಯನ್ನೂ ಶುರು ಹಚ್ಚಿಕೊಂಡೆ. ಕಳ್ಳ ನಾಟಾ ಮಾಡುವುದು, ಅದರ ಮಾರಾಟ, ಗಾಂಜಾ ಬೆಳೆಯುವುದು, ಅದನ್ನು ಮಾರಾಟ ಮಾಡುವುದು ಹೀಗೆ ಹಲವಾರು ದಂಧೆ ಶುರು ಮಾಡಿದೆ. ಮೊದ ಮೊದಲು ಎಲ್ಲವೂ ಸರಾಗವಾಗಿಯೇ ಇತ್ತು. ಯಾವಾಗಲೂ ಅಷ್ಟೆ ಪ್ರತಿಸ್ಪರ್ಧಿಗಳಿಲ್ಲ ಅಂದರೆ ದಂಧೆ ನಿರಾತಂಕವಾಗಿ ಸಾಗುತ್ತದೆ. ನನಗೂ ಹಾಗೆಯೇ ಆಗಿತ್ತು. ಆದರೆ ಪ್ರತಿಸ್ಪರ್ಧಿ ಹುಟ್ಟಿಕೊಂಡ ನಂತರ ಮಾತ್ರ ನಮ್ಮ ದಂಧೆಯಲ್ಲಿ ಏರಿಳಿತ ಕಾಣಬಹುದು. ನನಗೂ ಹಾಗೆಯೇ ಆಯಿತು...'
             `ನಾನೇನೋ ಹಾಯಾಗಿದ್ದೆ. ತಿಂಗಳು ತಿಂಗಳೂ ಲಕ್ಷ ಲಕ್ಷ ದುಡ್ಡು ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ದಂಧೆಯಲ್ಲಿ ಲುಕ್ಸಾನು ಆರಂಭವಾಯಿತು. ನಾನು ಗಂಧದ ತುಂಡುಗಳನ್ನು ಮಾರಾಟ ಮಾಡಲು ಹೋದರೆ ಅರ್ಧ ಬೆಲೆಗೆ ಕೇಳುತ್ತಿದ್ದರು. ನಾನು ಬೆಳೆಸುತ್ತಿದ್ದ ಗಾಂಜಾ ಬೆಳೆಗೆ ಬೆಲೆಯೇ ಇರಲಿಲ್ಲ. ಯಾಕೆ ಹೀಗಾಯಿತು ಅಂದುಕೊಳ್ಳುತ್ತಿದ್ದಂತೆಯೇ ನನ್ನ ದಂಧೆಗೆ ಪ್ರತಿಯಾಗಿ ಇನ್ನೊಂದು ತಂಡ ಇದೇ ದಂಧೆಯನ್ನು ಶುರು ಮಾಡಿಕೊಂಡಿರುವುದು ತಿಳಿದು ಬಂದಿತು. ಯಾರಿರಬಹುದು ಎಂದುಕೊಂಡು ತಂಡವನ್ನು ಹುಡುಕಾಡಿದೆ. ಊಹೂ ಗೊತ್ತಾಗಲಿಲ್ಲ. ಆದರೆ ನಮ್ಮ ಭಾಗದಲ್ಲಿ ಈ ತಂಡ ಸಕ್ರಿಯಾಗಿದೆ ಎಂದೂ ಗೊತ್ತಾಯಿತು. ಕೊನೆಗೊಮ್ಮೆ ನಾನು ಆ ತಂಡವನ್ನು ಹದ್ದು ಬಸ್ತಿನಲ್ಲಿ ಇಡಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದೆ. ಏನೇನೋ ಮಾರ್ಗಗಳನ್ನು ಅನುಸಿರಿಸಿದೆ. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಬದಲಾಗಿ ಆ ತಂಡದಿಂದ ಒಂದಷ್ಟು ಬೆದರಿಕೆ ಕರೆಗಳು ಬಂದವು. ನಾನು ಅವನ್ನು ನಿರ್ಲಕ್ಷಿಸಿದೆ. ಆದರೆ ಕೊನೆಗೆ ನನ್ನ ಮೂಲೆ ಎರಡು ಸಾರಿ ಹಲ್ಲೆಯೂ ಆಯಿತು. ನನಗೆ ಆಗಲೇ ಜೀವ ಭಯ ಕಾಡಿದ್ದು. ನಾನು ಪೂರ್ತಿ ಹೆದರಿ ಹೋಗಿದ್ದೆ. ಕೊನೆಗೆ ಇವರ ಸಹವಾಸ ಸಾಕು. ಬದುಕಿ ಉಳಿದರೆ ಏನಾದರೂ ಮಾಡಿಯೇನು ಎಂದುಕೊಂಡು ನಾನು ಆ ವೃತ್ತಿಯನ್ನು ಬಿಟ್ಟು ಬಿಟ್ಟೆ. ಇದೀಗ ಮನೆಯಲ್ಲಿ ಎರಡು ಜೀಪುಗಳನ್ನು ಇಟ್ಟುಕೊಂಡು ಬಾಡಿಗೆ ಹೊಡೆಯುತ್ತಿದ್ದೇನೆ..' ಎಂದ ಬಾಬು.
            `ನೀ ಹೇಳಿದ್ದನ್ನು ನಂಬ ಬಹುದಾ?..' ಪ್ರದೀಪ ಗಡುಸಾಗಿಯೇ ಕೇಳಿದ್ದ.
             `ನಂಬಬಹುದು. ಯಾಕಂದ್ರೆ ಇದೇ ನಿಜ. ನನಗೆ ಸುಳ್ಳು ಹೇಳಿ ಆಗಬೇಕಾಗಿದ್ದು ಏನೂ ಇಲ್ಲ. ಬದಲಾಗಿ ನನ್ನ ಜೀವ ುಳಿದರೆ ಸಾಕಾಗಿದೆ..' ಎಂದ ಬಾಬು.
            `ನಿನ್ನ ದಂಧೆಗೆ ಪ್ರತಿಯಾಗಿ ದಂಧೆ ಶುರು ಮಾಡಿದ್ದು ಯಾರು? ನಿನ್ನ ಮೇಲೆ ಧಾಳಿ ಮಾಡಿದವರು ಯಾರು? ಹೇಳು..'
            `ಗೊತ್ತಿಲ್ಲ. ದಂಧೆ ಶುರುವಾಗಿಗೆ ಅಂತ ಅಷ್ಟೇ ಮಾಹಿತಿ ಕಿವಿಗೆ ಬೀಳುತ್ತಿತ್ತು. ಯಾರು ಮಾಡುತ್ತಿದ್ದಾರೆ? ಈ ಜಾಲದ ಮುಖ್ಯಸ್ಥರ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಹಲವು ಸಾರಿ ತಿಳಿದುಕೊಳ್ಳಲು ನೋಡಿದೆ ಆಗಲೇ ಇಲ್ಲ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದವರೆಲ್ಲ ನನ್ನನ್ನು ಬಿಟ್ಟು ಹೋದರು. ನಾನು ಕೊಡುತ್ತಿದ್ದ ಹಣಕ್ಕಿಂತ ಎರಡು ಪಟ್ಟು ಜಾಸ್ತಿ ಅವರು ಕೊಡುತ್ತಿದ್ದರಂತೆ. ಅವರನ್ನು ನನ್ನ ಬಳಿಯೇ ಉಳಿಸಿಕೊಳ್ಳಬೇಕು ಅಂತ ಸಾಕಷ್ಟು ಪ್ರಯತ್ನ ಮಾಡಿದೆ. ಆಗಲಿಲ್ಲ. ಈಗಲೂ ಒಂದಿಬ್ಬರು ಅವರ ಬಳಿ ನಿಯತ್ತಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಿಕ್ಕಾಪಟ್ಟೆ ಲಾಸ್ ಆಗಿ ಇದೀಗ ಆ ದಂಧೆ ಬಿಟ್ಟು ಬಿಟ್ಟಿದ್ದೇನೆ. ನನಗೆ ಈಗಲೂ ಕುತೂಹಲ ಇದೆ. ಇದ್ದಕ್ಕಿದ್ದಂತೆ ನನ್ನ ದಂಧೆಯನ್ನೇ ಬುಡಮೇಲು ಮಾಡಿ, ನನಗಿಂತ ಹೆಚ್ಚು ಲಾಭ ಮಾಡುತ್ತಿರುವವರು ಯಾರು ಅಂತ. ಖಂಡಿತವಾಗಿಯೂ ಒಬ್ಬಿಬ್ಬರಿಂದ ಇದು ಸಾಧ್ಯವಿಲ್ಲ. ದೊಡ್ಡದೊಂದು ತಂಡವೇ ಇರಬೇಕು. ವ್ಯವಸ್ಥಿತ ಜಾಲವೇ ಇರಬೇಕು ಅನ್ನಿಸುತ್ತಿದೆ. ನಾನು ಈ ಜಾಲದ ಮುಖ್ಯಸ್ಥನನ್ನು ನೋಡುವ ಆಸೆಯನ್ನೂ ಇಟ್ಟುಕೊಂಡಿದ್ದೇನೆ..' ಎಂದು ಬಾಬು ಮನದಾಳದ ಬಯಕೆಯನ್ನು ತೋಡಿಕೊಂಡಿದ್ದ.
           `ಆಗಲಿ.. ನೀನು ಹೇಳಿದ್ದನ್ನು ನಾವು ನಂಬುತ್ತೇವೆ. ಆದರೆ ಒಂದು ಕೆಲಸ ಮಾಡಬೇಕು ನೀನು. ನಮಗೆ ನಿನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ತೋರಿಸಬೇಕು. ಅವರು ಈಗ ಆ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಅಂದೆಯಲ್ಲ. ಅವರನ್ನು ತೋರಿಸು. ನಮಗೆ ಈ ಕಾರ್ಯದಲ್ಲಿ ಸಹಾಯ ಮಾಡಿದರೆ ನಿನ್ನನ್ನು ಬಿಟ್ಟು ಬಿಡುತ್ತೇವೆ. ಇಲ್ಲವಾದಲ್ಲಿ ನಿನಗೆ ಬದುಕಿದ್ದಂತೆಯೇ ನರಕ ದರ್ಶನ ಮಾಡುತ್ತೇವೆ..' ಪ್ರದೀಪ ಗುಡುಗಿದ್ದ.
             `ನಾಳೆಯೇ ತೋರಿಸುತ್ತೇನೆ...' ಎಂದಿದ್ದ. ಬಾಬುವನ್ನು ಅವನ ಮನೆಯ ಬಳಿಯೇ ಬಿಟ್ಟು ಪ್ರದೀಪ ಹಾಗೂ ಇತರರು ಮರಳಿದ್ದರು. ಬಾಬು ಖಂಡಿತವಾಗಿಯೂ ತಪ್ಪಿಸಿಕೊಂಡು ಹೋಗಲಾರ. ಆತನಿಗೆ ಭಯವಿದೆ. ಆ ಕಾರಣದಿಂದ ಎಲ್ಲೂ ಹೋಗದೇ, ತಮಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯ ಮೇಲೆ ಆತನನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಹೀಗೆ ಬಿಟ್ಟು ಬಂದಿದ್ದೇ ಸಾಕಷ್ಟು ತೊಂದರೆಗೂ ಕಾರಣವಾಯಿತು.
             ಇತ್ತ ಬಾಬುವಿನ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ಒಂದೆಡೆ ಈಗಾಗಲೇ ಎರಡು, ಮೂರು ಸಾರಿ ದಾಳಿ ಂಆಡಿ ಜೀವಭಯ ಹುಟ್ಟಿಸಿರುವ ತಂಡ, ಇನ್ನೊಂದು ಕಡೆಗೆ ಪ್ರದೀಪನ ಭಯ. ಏನು ಮಾಡಲಿ ಎಂಬುದನ್ನು ತಿಳಿಯದೇ ಚಿಂತಾಕ್ರಾಂತನಾಗಿದ್ದ. ಮರುದಿನ ಇನ್ನೇನಾಗುತ್ತದೆಯೋ ಎಂದುಕೊಂಡು ಮನೆಯೊಳಕ್ಕೆ ಹೋಗಿದ್ದ. ಆದರೆ ಮರುದಿನ ಬಾಬುವಿನ ಮನೆಯ ಬಾಗಿಲು ತೆರೆಯಲೇ ಇಲ್ಲ. ಬಾಬು ಹಾಗೂ ಆತನ ಮಡದಿ ಇಬ್ಬರೂ ಮನೆಯೊಳಕ್ಕೆ ಹೆಣವಾಗಿದ್ದರು. !!


(ಮುಂದುವರಿಯುತ್ತದೆ)

Tuesday, September 13, 2016

ಅಪ್ಪ (ಕಥೆ) - ಭಾಗ-2

              ಅಪ್ಪನೇನೋ ಸೈಕಲ್ ರಿಪೇರಿಗಾಗಿ ಹೋಗಿಬಿಟ್ಟಿದ್ದ. ನಾನು, ಅಮ್ಮ ಇಬ್ಬರೇ ಉಳಿದಿದ್ದೆವು. `ತಮಾ.. ಹೋಪನ ನೆಡಿ..' ಎಂದ ಅಮ್ಮ ನಿಧಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದಳು. ಅಮ್ಮನ ಒಂದು ಕಾಲಿಗೆ ಕಬ್ಬಿಣದ ಮೊಳೆ ಚುಚ್ಚಿತ್ತು. ಇನ್ನೊಂದು ಕಾಲು ಸೈಕಲ್ ಚಕ್ರಕ್ಕೆ ಸಿಲುಕಿ ಜಜ್ಜಿದಂತಾಗಿತ್ತು. ನೋವಿನಲ್ಲಿಯೂ ನಡೆಯಲು ಆರಂಭಿಸಿದ್ದಳು. ನಾನು ಆಕೆಯ ಸರಿಸಮಾನವಾಗಿ ಹೆಜ್ಜೆ ಹಾಕಲು ಆರಂಭಿಸಿದ್ದೆ.
                ನಿಮಿಷಗಳು ಉರುಳಿದವು. ನಾವು ಸಾಗುತ್ಲೇ ಇದ್ದೆವು. `ಅಮಾ.. ಅಪ್ಪ ಬಂದನನೆ..?' ನಾನು ಆಗಾಗ ಕೇಳುತ್ತಿದ್ದೆ. ಅದಕ್ಕೆ ಅಮ್ಮ ನಿಟ್ಟುಸಿರುವ ಬಿಟ್ಟು `ಇಲ್ಯಾ ತಮಾ.. ಸೈಕಲ್ ರಿಪೇರಿ ಆಜಿಲ್ಲೆ ಕಾಣಿಸ್ತಾ.. ನಾವು ನೆಡಕಂಡು ಹೋಗ್ತಾ ಇಪ್ಪನ. ಕಲ್ಮಟ್ಟಿ ಹಳ್ಳದ ಹತ್ರ ಹೋಪಕಿದ್ರೆ ಅಪ್ಪ ಬಂದು ಮುಟ್ಟತಾ..' ಅಮ್ಮ ನನ್ನನ್ನು ಸಾಗ ಹಾಕಿದ್ದಳು. ಅಮ್ಮನಿಗೆ ಅಪ್ಪ ಇಷ್ಟು ಬೇಗನೆ ಬರುವುದಿಲ್ಲ ಎಂಬುದು ಗೊತ್ತಿತ್ತೇನೋ. ನನ್ನನ್ನು ಏನೋ ಹೇಳಿ ಸಾಗ ಹಾಕುತ್ತಿದ್ದಳು. ಆ ದಿನ ಮಾತ್ರ ನಾವು ಎಷ್ಟು ನಡೆದರೂ ಕೂಡ ದಾರಿ ಸಾಗುತ್ತಲೇ ಇರಲಿಲ್ಲ. ಅರ್ಧ ಗಂಟೆಯ ಅಂತರದಲ್ಲಿ ನಮ್ಮನ್ನು ಕೈಬೀಸಿ ಕರೆಯಬೇಕಿದ್ದ ಕಲ್ಮಟ್ಟಿ ಹಳ್ಳ ಆ ದಿನ ತಾಸಾದರೂ ಕೂಡ ಬರಲಿಲ್ಲ. ನಾವು ಅಷ್ಟು ನಿಧಾನವಾಗಿ ನಡೆಯುತ್ತಿದ್ದೆವೆನ್ನಿ.
             ಕಲ್ಮಟ್ಟಿಹಳ್ಳ ಬರುವ ವೇಳೆಗೆ ನಾವು ಎರಡು ಸಾರಿ ಕುಳಿತಿದ್ದೆವು. ಸೈಕಲ್ ಚಕ್ರಕ್ಕೆ ಸಿಲುಕಿದ್ದ ಅಮ್ಮನ ಕಾಲು ಆಗಲೇ ಆನೇಕಾಲು ರೋಗ ಬಂದವರಂತೆ ಊದಿಕೊಂಡಿತ್ತು. ಕಾಲಿಗೆ ಹಾಕಿದ್ದ ಹವಾಯಿ ಚಪ್ಪಲ್ ಬಿಗಿಯಾಗಿತ್ತು. ಹವಾಯಿ ಚಪ್ಪಲಿನ ಬಾರು ಹಾಲಿಗೆ ಅಂಟಿಕೊಂಡಿತ್ತು. ಕಲ್ಮಟ್ಟಿ ಹಳ್ಳ ಬಂದಿತ್ತು. ಕಲ್ಮಟ್ಟಿ ಹಳ್ಳದಲ್ಲಿ ಮಂಜು ನಾಯ್ಕ ಸಿಕ್ಕಿದ್ದ. `ನಮ್ಮನೆ ಹೆಗುಡ್ರು ಹೋದ್ರನೋ..' ಅಮ್ಮ ಮಂಜುನಾಥ ನಾಯ್ಕನ ಬಳಿ ಕೇಳಿದ್ದಳು. `ಇಲ್ರಲಾ ಅಮ್ಮಾ.. ನಾನು ನೋಡನಿಲ್ಲ. ಅವರು ಈ ದಾರಿಯಲ್ಲಿ ಹೋಗಿದ್ದನ್ನ ನಾನು ಕಾಣನಿಲ್ಲ..' ಎಂದು ಉತ್ತರ ನೀಡಿದಾಗ ಅಮ್ಮ ನಿಟ್ಟುಸಿರು ಬಿಟ್ಟು ನನ್ನನ್ನು ಹೊರಡಿಸಿದ್ದಳು. ನನಗೊಂದು ನಿಂಬೂ ಚಾಕಲೇಟು ತಿನ್ನುವ ಆಸೆಯಾಗಿ ಅಮ್ಮನ ಬಳಿ ನಾಲ್ಕಾಣೆ ಪಡಕೊಂಡಿದ್ದೆ. ಅಮ್ಮ ಎಂಟಾಣೆ ಕೊಟ್ಟಾಗ ಎರಡು ನಿಂಬೂ ಚಾಕಲೇಟು ತೆಗದುಕೊಂಡು ಒಂದನ್ನು ಸಿಪ್ಪೆ ಸುಲಿದು ಬಾಯಿಗಿಟ್ಟು ಇನ್ನೊಂದು ಚಡ್ಡಿ ಕಿಶಗೆ ಗೆ ಹಾಕಿದ್ದೆ.
            ಇನ್ನೊಂದು ಕಿಲೋಮೀಟರ್ ದೂರದ ಅಡಕಳ್ಳಿ ಶಾಲೆಗೆ ಹತ್ತಿರ ನಾವು ಬರುವ ಹೊತ್ತಿಗೆ ನೇಸರನಾಗಲೇ ಬಾನಂಚಿನ ಕಡೆಗೆ ತನ್ನ ರಥವನ್ನು ಹೂಡಿಯಾಗಿತ್ತು. `ತಮಾ.. ಕತ್ಲೆ ಆಗ್ತಾ ಇದ್ದೋ...' ಎಂದ ಅಮ್ಮ ನನ್ನನ್ನು ಮುನ್ನಡೆಸಿದ್ದಳು. `ಇನ್ನೂ ಅಪ್ಪ ಬಂಜ್ನೇ ಇಲ್ಯಲೆ...' ಆಗಲೇ ಅದೆಷ್ಟನೆಯ ಸಾರಿಯೋ ಹೇಳಿದ್ದೆ. `ಬತ್ರು ಅವು..' ಮತ್ತೊಮ್ಮೆ ಅಮ್ಮ ಹೇಳಿದ್ದಳು.
           ನಾವು ನಡೆಯುತ್ತಲೇ ಇದ್ದೆವು. ನಮ್ಮೂರ ದಾರಿಯಲ್ಲಿ ಸಿಗುವಂತಹ ಹೆಣಸುಡುವ ಮುರ್ಕಿಯೂ ದಾಟಿತ್ತು. ಅದನ್ನು ಹಾದು ಮುಂದೆ ಬರುವ ವೇಳೆಗಾಗಲೇ ನನ್ನೊಳಗೆ ಅದೇನೋ ಅಳುಕು. ಏಕೆಂದರೆ ಮುಮದಿನ ದಾರಿ ಕತ್ತಲು ಕವಿದಂತಹ ಕಾಡು. ನಾನು ನಿಧಾನವಾಗಿ ಅಮ್ಮನ ಬಳಿ ಸರಿದು ನಡೆಯಲಾರಂಭಿಸಿದೆ. `ಎಂತಾ ಆತಾ ತಮಾ..' ಅಮ್ಮ ಕೇಳಿದ್ದಳು.
             `ಅಮ್ಮಾ.. ಕಾನಬೈಕಲು ಬಂತು. ಇಲ್ಲಿ ಕಾಡು ಪ್ರಾಣಿ ಎಲ್ಲಾ ಇರ್ತಡಾ..' ಎಂದೆ. `ಶೀ ಮಳ್ ಮಾಣಿ.. ಎಂತದ್ದೂ ಬರ್ತಿಲ್ಲೆ.. ಸುಮ್ನೆ ಹೋಪನ ಬಾ.. ಕತ್ಲೆ ಆಗೋದ್ರೊಳಗೆ ಮನೆ ಸೇರೋಣ..' ಎನ್ನವ ವೇಳೆಗೆ `ಆಯ್...' ಎಂದಳು. `ಎಂತಾ ಆತೆ ಅಮಾ..' ಎಂದೆ. ಅಮ್ಮನ ಕಾಲಿಗೊಂದು ಕಲ್ಲು ಚುಚ್ಚಿತ್ತು. ನೋವಿನಿಂದ ನರಳಿದ್ದಳು. `ಹಾಳಾದ್ದು.. ಕಲ್ಲು..' ಎಂದು ಬೈದು ಮುನ್ನಡೆದೆವು.
            `ಅಮ್ಮಾ... ಅಲ್ನೋಡೆ.. ಎಂತದ್ದೋ ಇದ್ದು.. ಸರಬರ ಹೇಳಿ ಶಬ್ದ ಆಗ್ತು..' ಭಯದಿಂದಲೇ ನಾನು ಕೇಳಿದ್ದೆ. ರಸ್ತೆ ಪಕ್ಕದ ಕಾಡಿನಲ್ಲಿ ಏನೋ ಶಬ್ದವಾಗಿತ್ತು. ನನಗೆ ಕಾಡೆಮ್ಮೆಯಿರಬೇಕು ಎನ್ನುವ ಅನುಮಾನ. ಅನುಮಾನದಿಂದಲೇ ಕೇಳಿದ್ದೆ. ಅಮ್ಮನಿಗೂ ಭಯವಾಗಿತ್ತಿರಬೇಕು.. `ಸುಮ್ನಿರಾ..' ಎಂದಳು. ನಾನು ಸುಮ್ಮನಾದೆ. ಮತ್ತೊಂದು ಮಾರು ದೂರ ಹೋಗಿದ್ದೆವು. ಅಮ್ಮ ಇದ್ದಕ್ಕಿದ್ದಂತೆ `ಇಡಾ ಪಿಂಗಳಾ ತ್ವ ಸುಸುಷ್ಮ್ನಾಚನಾಡಿ.. ತ್ವಮೇಕಾ ಗತಿರ್ದೇವಿ ಸದಾನಂದ ರೂಪೆ...' ಎಂದಳು.. ನಾನು ಅಮ್ಮನ ಮುಖ ನೋಡಿದೆ. ಅಮ್ಮನಿಗೂ ಭಯವಾಗಿತ್ತಿರಬೇಕು. ಭಯದಿಂದ ಅಮ್ಮ ಲಲಿತಾ ಸಹಸ್ರನಾಮವನ್ನು ಪಠಿಸಲು ಆರಂಭಿಸಿದ್ದಳು.
            ನಮ್ಮೂರ ಗುಡ್ಡದ ನೆತ್ತಿಯನ್ನು ತಲುಪುವ ವೇಳೆಗಾಗಲೇ ಸೂರ್ಯ ಬಾನಂಚಲ್ಲಿ ನಾಪತ್ತೆಯಾಗಿದ್ದ. ರಸ್ತೆ ಅಸಕು-ಮಸುಕಾಗಿ ಕಾಣುವಷ್ಟು ಕತ್ತಲಾಗಿತ್ತು. ರಸ್ತೆಯಲ್ಲಿ ನಡೆದು ಹೋದರೆ ಕನಿಷ್ಟ ಇನ್ನೊಂದು ತಾಸಾದರೂ ಬೇಕು ಎಂದುಕೊಂಡು ನಾವು ಅಡ್ಡದಾರಿಯನ್ನು ಹಿಡಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಗುಡ್ಡದ ಅಂಕುಡೊಂಕಿನ ಕಾಲು ದಾರಿಯಲ್ಲಿ ನಾನು-ಅಮ್ಮ ಇಳಿಯುತ್ತಿದ್ದಾಗಲೇ ಗಡ ಗಡ ಸದ್ದಾಯಿತು. `ಅಮ್ಮಾ.. ಅಪ್ಪ ಬಂದ ಕಾಣಿಸ್ತು..' ಎಂದೆ. `ಇಲ್ಯಾ.. ತಮಾ.. ಅವ್ರು ಬಂಜಿರಿಲ್ಲೆ..' ಎಂದಳು. ನಿಧಾನವಾಗಿ ಗುಡ್ಡ ಇಳಿದೆವು. ಅಷ್ಟರಲ್ಲಿ ಸಂಪೂರ್ಣವಾಗಿ ಕತ್ತಲಾಗಿಬಿಟ್ಟಿತ್ತು. ನಮಗೆ ದಾರಿಯೇ ಕಾಣುತ್ತಿರಲಿಲ್ಲ. ಇನ್ನೇನು ಮಾಡುವುದು ದೇವರೇ.. ಎಂದುಕೊಂಡು ಹೆಜ್ಜೆ ಹಾಕಿದೆವು. ಮಾರ್ಗ ಮಧ್ಯದಲ್ಲಿ ಒಂದು ಬೆಳಕು ಕಾಣಿಸಿತು. ಅದೊಂದು ಮನೆ. ಸೀದಾ ಮನೆಯೊಳಕ್ಕೆ ಹೋದ ನಾವು ಬ್ಯಾಟರಿ ಸಿಗಬಹುದಾ ಎಂದೆವು. ಮನೆಯ ಯಜಮಾನರು ಬ್ಯಾಟರಿ ಕೊಟ್ಟರು. ಬ್ಯಾಟರಿಯ ಮಿಣುಕು ಬೆಳಕಿನಲ್ಲಿ ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ಇಷ್ಟಾದರೂ ಕೂಡ ಅಪ್ಪ ಬಂದಿರಲಿಲ್ಲ.
           ಮನೆ ಹತ್ತಿರವಾದಂತೆಲ್ಲ ನನಗೆ ಅಪ್ಪನ ಮೇಲೆ ಕಡುಕೋಪ ಬರಲು ಆರಂಭಿಸಿತು. ಅಪ್ಪ ಬರದೇ ಇರುವ ಕಾರಣ ಭಯವೂ ಆಯಿತೆನ್ನಿ. `ಅಮ್ಮಾ.. ಅಪ್ಪನನ್ನು ಗಮಿಯ (ಕಾಡೆಮ್ಮೆ) ಅಡ್ಡ ಹಾಕಿಕ್ಕನೇ.. ಅದಕ್ಕೆ ಬಂಜನಿಲ್ಯಾ ಹೆಂಗೆ..' ಎಂದೆ. `ಥೋ ಸುಮ್ನಿರಾ.. ಹಂಗೆಲ್ಲಾ ಎಂತದ್ದೂ ಆಜಿಲ್ಲೆ..' ಎಂದಳು ಅಮ್ಮ. ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ ದೂರದಲ್ಲಿ ಮನೆಯ ಬೆಳಕು ಕಾಣಿಸತೊಡಗಿತು.
            ಇನ್ನೇನು ಮನೆಗೆ 100 ಮೀಟರ್ ದೂರವಿದೆ ಎನ್ನುವಾಗ ಯಾರೋ ಕೆಮ್ಮಿದ ಸದ್ದಾಯಿತು. ನಾನೊಮ್ಮೆ ಬೆಚ್ಚಿದ್ದೆ. ಕೆಮ್ಮಿನ ಶಬ್ದ ಕೇಳಿದ ಜಾಗದಲ್ಲಿ ಯಾವುದೋ ಬೆಳಕು ಇತ್ತು. ಅದು ನಮ್ಮತ್ತಲೇ ಬರುತ್ತಿತ್ತು. `ತಮಾ..' ಎಂದಿತು ಶಬ್ದ. ನಾನು ಆಲಿಸಿದೆ. ಅಪ್ಪ ಕರೆದಿದ್ದ. ನನಗೆ ಒಮ್ಮೆಲೆ ಧೈರ್ಯ ಬಂದಿತ್ತು. ನಡುವೆಯೇ ಆಶ್ಚರ್ಯ. ಸೈಕಲ್ ಸರಿ ಮಾಡಿಸಿಕೊಂಡು ಬರುತ್ತೇನೆ ಎಂದು ಕಾನಸೂರು ಕಡೆಗೆ ಹೋಗಿದ್ದ ಅಪ್ಪ ಈಗ ಮನೆಯ ಕಡೆಯಿಂದ ನಮ್ಮೆಡೆಗೆ ನಡೆದುಕೊಂಡು ಬರುತ್ತಿದ್ದಾನಲ್ಲ ಇದು ಹೇಗೆ ಸಾಧ್ಯ ಎನ್ನಿಸಿತು. `ನೀ ಹೆಂಗೆ ಬಂದ್ಯೋ..' ಅಪ್ಪನ ಬಳಿ ಕೇಳಿದ್ದೆ. `ಆನು ಬಂದು ಹತ್ತು ನಿಮಿಷ ಆತಾ ತಮಾ.. ಬಂದು ಊಟ ಮುಗಿಸ್ಕಂಡು ಬಂದಿ. ನಿಂಗವ್ ಇನ್ನೂ ಬಂದು ಮುಟ್ಟಿದ್ರಿಲ್ಲೆ ಅಂತ ಮನೆಯಲ್ಲಿ ಹೇಳಿದ್ದ. ಅದಕ್ಕೆ ಕರಕಂಡು ಹೋಪನ ಅಂತ ಬಂದಿ..' ಎಂದ.
              ವಾಸ್ತವದಲ್ಲಿ ನಾವು ಅಡ್ಡದಾರಿಯಲ್ಲಿ ಗುಡ್ಡವನ್ನು ಇಳಿಯುತ್ತಿದ್ದಾಗಲೇ ಅಪ್ಪ ಸೈಕಲ್ ಮೂಲಕ ಮನೆಗೆ ಬಂದಿದ್ದ. ನನಗೆ ಗಡ ಗಡ ಸದ್ದು ಕೇಳಿಸಿದ್ದು ಸೈಕಲ್ಲಿನದ್ದೇ ಆಗಿತ್ತು.  ಕೈ ಹಿಡಿದುಕೊಂಡು ನನ್ನನ್ನು ಕರೆದುಕೊಂಡು ಬರುತ್ತಿದ್ದಳು ಅಮ್ಮ. ಅಪ್ಪ ಬಂದು ಬೆಳಕು ತೋರಿಸಿ, ಮನೆಗೆ ಬಂದು ತಲುಪಿದ್ದೇನೆ. ನನ್ನದು ಊಟವಾಯಿತು ಎಂಬ ಮಾತು ಕೇಳುತ್ತಿದ್ದಂತೆ ನನ್ನ ಕೈ ಮೇಲೇ ನೀರ ಹನಿ ಬಿದ್ದಂತಾಯಿತು. ನಾನು ಮಳೆ ಬಂತೇ ಎಂದು ನೋಡಿದೆ. ಮಳೆ ಬಂದಿರಲಿಲ್ಲ. ಅಮ್ಮ ಬಿಕ್ಕುತ್ತಿದ್ದಳು. ಅಪ್ಪ `ಬನ್ನಿ ಹೋಪನ ಮನಿಗೆ..' ಎಂದ. ಮನೆಯ ಅಂಗಳದತ್ತ ಹೆಜ್ಜೆ ಹಾಕಿದ್ದೆವು.

(ಮುಗಿಯಿತು)

Sunday, September 11, 2016

ಮುಂಗಾರು ಮಳೆ ಭಾಗ 2ರಿಂದ ನನಗೆ ವಯಕ್ತಿಕ ಶಾಪ ವಿಮೋಚನೆ : ಜಯಂತ ಕಾಯ್ಕಿಣಿ (ಸಂದರ್ಶನ)

ಕನ್ನಡ ಸಾಹಿತ್ಯ ಲೋಕದಲ್ಲಿ ಜಯಂತ ಕಾಯ್ಕಿಣಿಯವರು ತಮ್ಮದೇ ಆದ ಛಾಪನ್ನು ಮೂಡಿಸಿದವರು. ಕಥೆಗಾರರಾಗಿ ಓದುಗರನ್ನು ಸೆಳೆದ ಜಯಂತ ಕಾಯ್ಕಿಣಿಯವರು ಕಳೆದೊಂದು ದಶಕದಿಂದೀಚೆಗೆ ಚಿತ್ರ ಸಾಹಿತಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಮುಂಗಾರು ಮಳೆ ಚಲನಚಿತ್ರದ ಹಿಟ್ ಗೀತೆಗಳನ್ನು ನೀಡಿದ ಜಯಂತ ಕಾಯ್ಕಿಣಿಯವರು ಮುಂಗಾರು ಮಳೆ ಕವಿ, ಮಳೆ ಕವಿ, ಪ್ರೇಮಕವಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದಾರೆ. ಯುವ ಜನರ ಕನಸುಗಳಿಗೆ ಅಕ್ಷರ ರೂಪವನ್ನು ನೀಡಿದವರು ಜಯಂತ ಕಾಯ್ಕಿಣಿ. ಕನ್ನಡ ಚಿತ್ರರಂಗದಲ್ಲಿ ಮಧುರ ಹಾಡುಗಳ ಟ್ರೆಂಡ್ ಸೃಷ್ಟಿಸಿದವರು ಇವರು. ಮತ್ತೆ ಮತ್ತೆ ಕೇಳುವಂತಹ, ಏಕಾಂತದಲ್ಲಿ ಗುನುಗುವಂತಹ ಹಾಡುಗಳನ್ನು ನೀಡಿದವರು ಕಾಯ್ಕಿಣಿ. ಅನಿಸುತಿದೆ ಯಾಕೋ ಇಂದು.., ನಿನ್ನಿಂದಲೇ, ಮಿಂಚಾಗಿ ನೀನು ಬರಲು ಹೀಗೆ ಸಾಲು ಸಾಲು ಹಿಟ್ ಗೀತೆಗಳನ್ನು ಕೊಟ್ಟವರು ಜಯಂತರು. ಅವರು ಮುಂಗಾರು ಮಳೆಗೆ ಗೀತೆಯನ್ನು ಬರೆದು 10 ವರ್ಷಗಳೇ ಕಳೆದಿವೆ. ಈ ಹತ್ತು ವರ್ಷದ ನಂತರ ಮುಂಗಾರು ಮಳೆ ಚಿತ್ರದ ಮುಂದುವರಿದ ಭಾಗ ಬಿಡುಗಡೆಯಾಗಿದೆ. ಮುಂಗಾರು ಮಳೆ ಭಾಗ-2ರಲ್ಲಿ 2 ಗೀತೆಗಳನ್ನು ಜಯಂತ ಕಾಯ್ಕಿಣಿ ಅವರು ಬರೆದಿದ್ದು ಈ ಎರಡೂ ಗೀತೆಗಳು ಈಗಾಗಲೇ ಜನಮನ ಸೂರೆಗೊಂಡಿದ್ದು ವೈರಲ್ ಆಗಿದೆ. ಮುಂಗಾರುಮಳೆ ಭಾಗ-2 ಬಿಡುಗಡೆಯಾದ ಸಂದರ್ಭದಲ್ಲಿಯೇ ಮಾತಿಗೆ ಸಿಕ್ಕಿದ್ದ ಪ್ರೇಮಕವಿ ಜಯಂತ ಕಾಯ್ಕಿಣಿಯವರು ಚಿತ್ರರಂಗ, ಚಿತ್ರಗೀತೆಗಳು, ಚಿತ್ರ ಸಾಹಿತ್ಯದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ..

ಪ್ರಶ್ನೆ : ಮುಂಗಾರು ಮಳೆ ಭಾಗ-2 ಬರುತ್ತಿದೆ. ಏನನ್ನಿಸುತ್ತಿದೆ?
ಮುಂಗಾರು ಮಳೆ ಭಾಗ ಎರಡು ಸಿನೆಮಾವನ್ನು ನಾನಿನ್ನೂ ನೋಡಿಲ್ಲ. ಆದರೆ ಕೆಲವು ಭಾಗಗಳನ್ನು ಮಾತ್ರ ನಾನು ನೋಡಿದ್ದೇನೆ. ಸಂತೋಷದ ಸಂಗತಿ ಎಂದರೆ ಮುಂಗಾರು ಮಲೆ ಭಾಗ ಎರಡಕ್ಕೆ ನಾನು ಬರೆದ ಎರಡೂ ಹಾಡುಗಳನ್ನು ಜನರು ಬಹಳ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಸರಿಯಾಗಿ ನೆನಪಿದೆ ನನಗೆ ಹಾಗೂ ಗಮನಿಸು ನೀ ಒಮ್ಮೆ ಎಂಬ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ನಾನು ಹೋದ ಕಡೆಯಲ್ಲೆಲ್ಲ ಈ ಹಾಡುಗಳ ಬಗ್ಗೆ ನನಗೆ ಖುಷಿಯಿಂದ ಮಾತನಾಡುತ್ತಿದ್ದಾರೆ. ಇದು ನನಗೆ ವಯಕ್ತಿಕವಾಗಿ ಒಂದು ಶಾಪ ವಿಮೋಚನೆ.
ಸರಿಯಾಗಿ ಹತ್ತು ವರ್ಷಗಳ ಹಿಂದೆ ಮುಂಗಾರುಮಳೆ ಭಾಗ ಒಂದು ಬಿಡುಗಡೆಯಾಗಿತ್ತು. ಆ ಸಿನೆಮಾಕ್ಕೆ ಹಾಡನ್ನು ಬರೆದ ನಂತರದಲ್ಲಿ ನಾನು 300 ಹಾಡುಗಳನ್ನು ಬರೆದಿದ್ದೇನೆ. ಆದರೆ ಸಿಕ್ಕಿದವರೆಲ್ಲ ಮುಂಗಾರು ಮಳೆಯನ್ನೇ ಮಾತನಾಡುತ್ತಿದ್ದರು. ನೀವು ಏನೆ ಬರೆಯಿರಿ ಮುಂಗಾರು ಮಳೆ ಸಿನೆಮಾ ಹಾಡೇ ಬೆಸ್ಟ್ ಎಂದು ಹೇಳುತ್ತಿದ್ದರು. ಯಾವುದೇ ಒಂದು ದೊಡ್ಡ ಹಿಟ್ ಸಿನೆಮಾ ಬಂದರೆ ಅದರ ಮುಂದಿನ ಭಾಗದ ಸಿನೆಮಾ ಬಂದಾಗಲೂ ಕೂಡ ಮೊದಲನೇ ಭಾಗ ನೆನಪಿನಲ್ಲಿ ಉಳಿಯುತ್ತದೆ. ಇದೊಂಥರಾ ಮೊದಲನೇ ಪ್ರೇಮ ಇದ್ದಂತೆ. ಅದು ತಾಜಾ ಇರುತ್ತದೆ. ತಾಜಾ ಇದ್ದಾಗ ಎಲ್ಲರೂ ಇಷ್ಟ ಪಡುತ್ತಾರೆ. ಉದಾಹರಣೆಗೆ ನಿಮಗೆ ಯಾವುದಾದರೂ ಒಂದು ಹೊಟೆಲ್ಗೆ ಹೋಗಿ ಬನ್ಸ್ ಬಾಜಿ ತಿಂದಿರಿ, ಇಷ್ಟವಾಯಿತು ಎಂದುಕೊಳ್ಳಿ. ಅದನ್ನು ನಿಮ್ಮ ಗೆಳೆಯನಿಗೆ ಹೇಳಿ ಆತನನ್ನೂ ಕರೆದುಕೊಂಡು ಹೋಗುತ್ತೀರಿ. ಆಗ ಮೊದಲಿನ ರುಚಿಯಂತೆ ನಿಮಗೆ ಅನ್ನಿಸುವುದಿಲ್ಲ. ಆತನಿಗೆ ಅದು ರುಚಿಸುತ್ತದೆ. ಜನರು ಮೊದಲ ಭಾಗಕ್ಕೂ ಎರಡನೆ ಭಾಗಕ್ಕೂ ಹೋಲಿಕೆ ಮಾಡಿ ನೋಡುತ್ತಾರೆ. ಹೀಗಾಗಿ ಮುಂಗಾರು ಮಳೆ ಎನ್ನುವುದು ನನಗೆ ಒಂದು ರೀತಿಯಲ್ಲಿ ಶಾಪದ ಹಾಗೆ ಆಗಿತ್ತು. ಇದು ಒಳ್ಳೆಯ ಅರ್ಥದ ಶಾಪ. ಮುಂಗಾರು ಮಳೆಯ ಎರಡನೇ ಭಾಗದ ಚಿತ್ರದಲ್ಲಿನ ಹಾಡುಗಳು ಅದನ್ನು ಮರೆಸಿ ಹಿಟ್ ಆಗಿದೆ. ನನಗೆ ವಯಕ್ತಿಕವಾಗಿ ಇದೊಂದು ಖುಷಿಯ ಸಂಗತಿ. ಹತ್ತು ವರ್ಷಗಳಿಂದ ಬರೆಯುತ್ತಿದ್ದರೂ ಕೂಡ ಇದುವರೆಗೂ ಜನರಿಗೆ ಇಷ್ಟವಾಗುತ್ತಿದೆ. ಜನರಿಗೆ ಇಷ್ಟವಾಗುತ್ತಿದ್ದರೆ ಇನ್ನೂ ಕೆಲವು ದಿವಸಗಳ ಕಾಲ ಬರೆಯಬಹುದು ಎನ್ನುವ ಆತ್ಮವಿಶ್ವಾಸ.

ಪ್ರಶ್ನೆ : ಮುಂಗಾರು ಮಳೆ ಸಿನೆಮಾ ಬಂದ ನಂತರ ನೀವು ಪ್ರೇಮಕವಿ, ಮಳೆ ಕವಿ ಎಂದೇ ಖ್ಯಾತಿಯನ್ನು ಪಡೆದಿರಿ. ಈ ಸಿನೆಮಾಕ್ಕೂ ಮೊದಲಿನ ನಿಮ್ಮ ಬರಹಗಳು, ಪ್ರೇಮಕವಿತೆಗಳ ಬಗ್ಗೆ ಹೇಳಿ
ಮುಂಗಾರು ಮಳೆ ಸಿನೆಮಾಕ್ಕೂ ಮೊದಲು ನಾನು ಪ್ರೇಮ ಕವಿತೆಗಳನ್ನು ಬರೆದೇ ಇರಲಿಲ್ಲ. ನನ್ನದು ಬದುಕಿನ ಕುರಿತಾದ ಪ್ರೇಮ. ಬದುಕಿಗೆ ಬರೆದ ಪ್ರೇಮಪತ್ರಗಳು ಕವಿತೆಯಾಗುತ್ತವೆ. ಬದುಕಿ ಬರೆದ ಪ್ರೇಮಪತ್ರಗಳು ಕಥೆಯಾಗುತ್ತವೆ. ನನ್ನ ಮುಖ್ಯ ಸಾಹಿತ್ಯದಲ್ಲಿ ಪ್ರೇಮ ಸಣ್ಣ ವಿಷಯ. ಆದರೆ ಸಿನೆಮಾದಲ್ಲಿ ಪ್ರೇಮವೇ ಪ್ರಮುಖ ವಿಷಯ. ಹೀಗಾಗಿ ಸಿನೆಮಾ ಎನ್ನುವುದು ನನ್ನ ಜೀವನ ದರ್ಶನದ ಅಭಿವ್ಯಕ್ತಿ ಅಲ್ಲ. ಸಿನೆಮಾ ಹಾಡುಗಳು ಎಂದರೆ ಯಾವುದೋ ಸಂದರ್ಭಕ್ಕೆ, ಯಾವುದೋ ಪಾತ್ರಕ್ಕೆ ಹೊಸೆಯುವ ಹಾಡುಗಳಷ್ಟೆ. ಅದು ನನ್ನ ಜೀವನದ ದರ್ಶನ ಅಲ್ಲ. ಆ ಪಾತ್ರಕ್ಕೆ ಏನು ಬೇಕೋ ಅದನ್ನು ನೀಡುವುದು ಅಷ್ಟೆ.

ಪ್ರಶ್ನೆ : ನೀವು ಮುಂಗಾರು ಮಳೆ ಸಿನೆಮಾಕ್ಕೆ ಕವಿತೆಗಳನ್ನು ಬರೆದ ನಂತರ ನಿಮ್ಮನ್ನು ಅನುಕರಣೆ ಮಾಡುವವರು ಬಹಳ ಜನರಾದರು. ಬೇರೆಯವರು ಬರೆದರೂ ಇದು ಜಯಂತ ಕಾಯ್ಕಿಣಿಯವರು ಬರೆದ ಗೀತೆ ಎನ್ನುವ ಹಂತವನ್ನು ತಲುಪಿತು. ಈ ಬಗ್ಗೆ ಏನು ಹೇಳುತ್ತೀರಿ ?
ಭಾರತ ದೇಶದಲ್ಲಿ ಕೋಟಿಗಟ್ಟಲೆ ಹಾಡುಗಳು ಪ್ರೀತಿಯ ಮೇಲೆ ಬಂದು ಹೋಗಿದೆ. ಪ್ರೀತಿಯ ಕುರಿತು ಎಷ್ಟಾದರೂ ಹಾಡುಗಳನ್ನು ಬರೆಯಬಹುದು. ಅದೇ ಪ್ರೀತಿ, ಮೊದಲ ಪ್ರೀತಿ, ಏಕಮುಖ ಪ್ರೀತಿ, ಎರಡನೇ ಪ್ರೀತಿ, ಅದೇ ವಿರಹ, ಸರಸ, ಹೀಗೆ ಎಲ್ಲೆಲ್ಲೂ ಪ್ರೀತಿಯೇ. ಅದರ ಬಗ್ಗೆಯೇ ಮತ್ತೆ ಹೇಗೆ ಹೊಸದನ್ನು ಹೇಳಲು ಸಾಧ್ಯ? ಅದದೇ ಪ್ರೀತಿ ಮತ್ತೆ ಮತ್ತೆ ಮರುಕಳಿಸುತ್ತದೆ. ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಕಷ್ಟವೇ. ನಾನು ಚಿತ್ರಗೀತೆ ರಚನೆಕಾರನಾಗುವ ಮೊದಲು ಚಿತ್ರಗೀತೆ ರಚನೆಕಾರರನ್ನು ಬಹಳ ಉಢಾಫೆಯಾಗಿ ಕಾಣುತ್ತಿದ್ದೆ. ಇದನ್ನು ಯಾರು ಬೇಕಾದರೂ ಬರೆಯಬಹುದು ಎಂಬಂತೆ ಲೇವಡಿ ಮಾಡುತ್ತಿದ್ದೆ. ಬಾನಲ್ಲೂ ನೀನೆ, ಬಯಲಲ್ಲೂ ನೀನೆ, ಮನೆಯಲ್ಲೂ ನೀನೆ, ಹೊರಗೂ ನೀನೆ ಹೀಗೆ ಬರೆದುಕೊಂಡು ಹೋಗಬಹುದಲ್ಲ ಎಂದುಕೊಂಡಿದ್ದೆ. ಯಾವಾಗ ನಾನು ಚಿತ್ರಗೀತೆಗಳನ್ನು ಬರೆಯಲು ಆರಂಭಿಸಿದೆನೋ ಈಗ ಅದರ ಕಷ್ಟ ಸುಖಗಳೆಲ್ಲ ಗೊತ್ತಾಗಲು ಆರಂಭವಾಗಿದೆ. ಇದರ ಜೊತೆಗೆ ಸೆಟ್ ಆಗಿರುವ ಟ್ಯೂನಿಗೆ ಬರೆಯುವುದು ಸುಲಭವಲ್ಲ. ಅದಕ್ಕೆ ಅದರದೇ ಆದ ಕೌಶಲವಿದೆ. ಅದನ್ನು ಬಳಸಿಕೊಳ್ಳಬೇಕು. ಅದೇ ಪ್ರೀತಿಯ ಬಗ್ಗೆ ಹೊಸ ಮಾತನ್ನು ಹೇಗೆ ಹೇಳುವುದು? ಈ ಬಗ್ಗೆ ಬಹಳಷ್ಟು ಸಾರಿ ನನಗೆ ಕಾಡಿದ್ದಿದೆ. ಇದನ್ನೇ ನಾನು `ಏನೆಂದು ಹೆಸರಿಡಲಿ, ಅದೇ ಪ್ರೀತಿ, ಅದೇ ರೀತಿ, ಹೇಗಂತ ಹೇಳುವುದು..' ಅಂತ ಬರೆದಿದ್ದೆ. ಏಕೆಂದರೆ ನನಗೆ ಯಾವುದೇ ಸಾಲುಗಳು ಆಗ ಹೊಳೆಯುತ್ತಿರಲಿಲ್ಲ. ಇದು ಪ್ರತಿಯೊಬ್ಬ ಗೀತರ ರಚನೆಕಾರನ ಕಷ್ಟ.
ನನಗೆ ತುಂಬಾ ಹಿಂದಿ ಹಾಡುಗಳ ಪ್ರೇಮವಿದೆ. ಕೆಲವರಿಗೆ ಹಾಗಾಗಿ ನನ್ನ ಹಾಡುಗಳಲ್ಲಿ ಹಿಂದಿ ಹಾಡುಗಳ ಛಾಯೆ ಕಾಣಬಹುದು. `ಕೇದಿಗೆ ಗರಿಯಂತ ನಿನ್ನ ನೋಟ..' ಎಂಬ ಸಾಲು ನಿನ್ನಿಂದಲೇ... ಹಾಡಿನಲ್ಲಿದೆ. ಕೇದಿಗೆ ಗರಿ ಎಂದಕೂಡಲೇ ಬೇಂದ್ರೆ ನೆನಪಾಗುತ್ತಾರೆ. ಏಕೆಂದರೆ ಕೇದಿಗೆ ಗರಿ ಸಿಕ್ಕಿದ್ದೇ ಬೇಂದ್ರೆ ಅವರಿಂದ. ಕವಿತೆ ಬರೆಯುವುದು ಸಂಯುಕ್ತ ಕಲಾಪ. ಇದು ನನ್ನದು, ಅದು ನಿನ್ನದು ಎಂದು ಹೇಳಲು ಸಾಧ್ಯವಿಲ್ಲ. ಅದು ಬೆಳದಿಂಗಳಿನಂತೆ ಎಲ್ಲರಿಗೂ ಸೇರಿದ್ದು.

ಪ್ರಶ್ನೆ : ಸಾಮಾನ್ಯ ಸಾಹಿತ್ಯವನ್ನು ಇಷ್ಟಪಡುವವರು ಚಿತ್ರ ಸಾಹಿತ್ಯದ ಬಗ್ಗೆ ಮೂಗು ಮುರಿಯುತ್ತಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?
ಯಾವ ಸಾಹಿತ್ಯ ಯಾರಿಗೆ ಇಷ್ಟ ಎನ್ನುವುದು ಅವರವರ ಅಭಿವ್ಯಕ್ತಿಗೆ ಸೇರಿದ್ದು. ಅವರವರಲ್ಲಿ ಯಾವ ರೀತಿ ಅಭಿವ್ಯಕ್ತಿ ಇರುತ್ತದೆಯೋ ಅದಕ್ಕೆ ತಕ್ಕಂತೆ ಅವರು ಸಾಹಿತ್ಯವನ್ನು ಇಷ್ಟ ಪಡುತ್ತಾರೆ. ನಾನು ಎರಡೂ ಕವಿತೆಗಳನ್ನು ಬರೆಯುತ್ತಿರುತ್ತೇನೆ. ನನ್ನ ಕವನ ಸಂಕಲನಗಳೂ ಬರುತ್ತಿರುತ್ತವೆ. ಕಥಾ ಸಂಕಲನಗಳೂ ಬರುತ್ತಿರುತ್ತವೆ. ಸಿನೆಮಾ ಹಾಡುಗಳೂ ಬರುತ್ತಿರುತ್ತವೆ. ನನ್ನ ಹಾಡುಗಳನ್ನು ಇಷ್ಟಪಡುವವರು ಅಂಗಡಿಗಳಿಗೆ ಹೋದಾಗ `ಇವರು ಕಥೆಗಳನ್ನೂ ಬರೆಯುತ್ತಾರಾ..? ನೋಡ್ವಾ' ಎಂದು ಪುಸ್ತಕಗಳನ್ನು ಕೊಂಡ ಉದಾಹರಣೆಗಳಿವೆ. ಅದೇ ರೀತಿ ನನ್ನ ಸಾಹಿತ್ಯದ ಅಭಿಮಾನಿಗಳು `ಜಯಂತ ಏನೋ ಹಾಡು ಬರೆದಿದ್ದಾನಂತಲ್ಲ.. ಕೇಳ್ವಾ..' ಎಂದು ಹಾಡನ್ನು ಕೇಳಲು ಆರಂಭಿಸುತ್ತಾರೆ. ಹೀಗೆ ಒಂದನ್ನು ಇಷ್ಟ ಪಡುವವರು ಇನ್ನೊಂದರತ್ತ ಹೊರಳುತ್ತಲೇ ಇರುತ್ತಾರೆ. ಆದರೆ ಇದು ಶ್ರೇಷ್ಟ ಸಾಹಿತ್ಯ, ಇದು ಕನಿಷ್ಟ ಸಾಹಿತ್ಯ ಎಂಬಂತಹ ಮಡಿವಂತಿಕೆ ಸಲ್ಲ. ಇದು ಮುಖ್ಯ ಧಾರೆಯ ಸಾಹಿತ್ಯ, ಇದು ಬೇರೆಯದು ಎನ್ನುವ ಭಾವನೆಯೂ ಸಲ್ಲದು. ಎಲ್ಲವುಗಳಿಗೂ ಅದರದೇ ಆದ ಇತಿಮಿತಿಯಿದೆ. ಆದರೆ ಸಿನೆಮಾ ಸಾಹಿತ್ಯ ಎಂಬುದು ಪೂರಕ ಸಾಹಿತ್ಯ. ಇದೊಂಥರಾ ನಾಟಕಕ್ಕೆ ಹಾಡು ಬರೆದಂತೆ. ಯಾವುದೋ ಕಾರ್ಯಕ್ರಮಕ್ಕೆ ಸ್ವಾಗತಗೀತೆಯನ್ನು ಬರೆದಂತೆ. ಅದರ ಉದ್ದೇಶ ಅಷ್ಟಕ್ಕೇ ಸೀಮಿತವಾದದ್ದು. ನಾವು ಬರೆಯುವ ಸಾಹಿತ್ಯ ಸ್ವಂತದ ಸಾಹಿತ್ಯ. ಅಂದರೆ ಬದುಕಿನಕುರಿತಾದ ಸಾಹಿತ್ಯ.


ಪ್ರಶ್ನೆ : ಹೊಸ ಚಿತ್ರ ಸಾಹಿತಿಗಳ ಬಗ್ಗೆ ನಿಮ್ಮ ಅಭಿಪ್ರಾಯ. ಇತ್ತೀಚಿನ ಚಿತ್ರಗಳಲ್ಲಿ ಹೆಚ್ಚಿತ್ತಿರುವ ಅಶ್ಲೀಲ ಚಿತ್ರಗೀತೆಗಳ ಕುರಿತು ನೀವು ಏನು ಹೇಳಲು ಬಯಸುತ್ತೀರಿ?
ಎಲ್ಲ ಕಾಲದಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿಯೂ ಶೆ.20ರಷ್ಟು ಜೊಳ್ಳು ಇದ್ದೇ ಇರುತ್ತದೆ. ಅದೇ ರೀತಿ ಸಿನಿಮಾ ಲೋಕದಲ್ಲಿಯೂ ಕೂಡ ಶೆ.20ರಷ್ಟು ಜೊಳ್ಳು ಇದ್ದೇ ಇರುತ್ತವೆ. ಸಿನೆಮಾ ಸಾಹಿತ್ಯವನ್ನು ಹೊರತುಪಡಿಸಿ ಇತರ ಸಾಹಿತ್ಯಕ್ಕೆ ಬಂದರೆ ಅದರಲ್ಲಿಯೂ ನೂರಕ್ಕೆ ನೂರರಷ್ಟು ಉತ್ತಮ ಸಾಹಿತ್ಯ ಎಲ್ಲಿದೆ. ಕ್ರಿಕೆಟ್ ಆಟದಲ್ಲಿಯೂ ಶೇ.100ರಷ್ಟು ಶ್ರೇಷ್ಟವಾದುದು ಎಲ್ಲಿದೆ? ಪತ್ರಿಕೋದ್ಯಮದಲ್ಲಿ ಎಲ್ಲ ಶ್ರೇಷ್ಟ ಎಲ್ಲಿದೆ? ಅಂಗಡಿಯಲ್ಲಿ ಸಿಗುವ ಮಸಾಲೆದೋಸೆಯಲ್ಲಿಯೂ ಎಲ್ಲಾ ಶ್ರೇಷ್ಟವಾಗಿರುವುದಿಲ್ಲ. ಇವೆಲ್ಲದರಲ್ಲಿಯೂ ಶೆ.20ರಷ್ಟು ಕಳಪೆಯಾದದ್ದು ಹಾಗೂ ತೆಗೆದುಹಾಕಬಹುದಾದಂತಹವುಗಳು ಇದ್ದೇ ಇರುತ್ತವೆ. ಸಿನೆಮಾ ರಂಗ ಎನ್ನುವುದು ದೊಡ್ಡ ಉದ್ದಿಮೆ. ಹೀಗಾಗಿ ಇಲ್ಲಿಯೂ ಕೂಡ ಇಂತಹ ಜೊಳ್ಳುಗಳು ಇದ್ದೇ ಇರುತ್ತವೆ. ಕನ್ನಡ ಸಾಹಿತ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಯಾರೂ ಮಾಡುತ್ತಿಲ್ಲ. ದುಡ್ಡು ಮಾಡಬೇಕೆಂಬ ಕಾರಣಕ್ಕಾಗಿಯೇ ಎಲ್ಲರೂ ಮಾಡುತ್ತಿರುವುದು ಇದು. ಇದೊಂದು ಬ್ಯುಸಿನೆಸ್. ಅದರ ಉಪ ಉತ್ಪನ್ನಗಳಾಗಿ ಇಂಗತವುಗಳೆಲ್ಲ ಬರುತ್ತಿರುತ್ತವೆ. ಆದರೆ ಇಂತವುಗಳು ಬೇಗನೆ ಹೋಗುತ್ತವೆ. ಮನೆಯಲ್ಲಿ ಮಾಡಿದ ಗಂಜಿ ಅಥವಾ ಉಪ್ಪಿನಕಾಯಿಗಳು ಬಹಳ ಕಾಲ ಉಳಿಯುತ್ತವೆ. ಆದರೆ ರಸ್ತೆಯಲ್ಲಿ ಮಾಡಿದ ಭೇಲ್ಪುರಿಗಳನ್ನು ಪಾರ್ಸಲ್ ಮಾಡಿ ಮನೆಗೆ ತಂದು ಸ್ವಲ್ಪ ಲೇಟಾಗಿ ತಿಂದರೂ ಅದು ಸ್ವಾದ ಕಳೆದುಕೊಳ್ಳುತ್ತವೆ. ಇವೆಲ್ಲ ಭೇಲ್ಪುರಿ ತರಹದ ರಚನೆಗಳು. ಬೇಗನೆ ಉಳಿಯುವುದಿಲ್ಲ.


ಪ್ರಶ್ನೆ : ಹಿರಿಯ ಸಾಹಿತಿಗಳ ನಂತರ, ಇಂದಿನ ತಲೆಮಾರಿನ ಕವಿಗಳು ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವ ಮಾತುಗಳಿದೆ. ಯಾವುದೇ ಜಿಲ್ಲೆಗಳಿಗೆ ಹೋಲಿಸಿದರೆ ಅಲ್ಲಿನ ಕವಿಗಳು ಅಲ್ಲಿಗಷ್ಟೇ ಸೀಮಿತರಾಗುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ.
ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಇಂತಹದ್ದೆಲ್ಲ ಇಲ್ಲ. ಈ ಮಟ್ಟಗಳನ್ನೆಲ್ಲ ಮನುಷ್ಯರು ಮಾಡಿಕೊಂಡಿರುವುದು. ಒಮ್ಮೆ ವಿಷ್ಣು ನಾಯ್ಕ ಅವರು ನಮ್ಮ ಮನೆಗೆ ಬಂದಿದ್ದರು. ಅವರು ನಮ್ಮ ಗೋಕರ್ಣದ ಮನೆಗೆ ಬಂದಿದ್ದ ಸಂದರ್ಭದಲ್ಲಿ ತಂದೆಯವರ ಬಳಿ ನಾನೊಂದು ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮ ಮಾಡುತ್ತೇನೆ ಎಂದರು. ಆಗನ ನನ್ನ ತಂದೆ ಗೌರೀಶ ಕಾಯ್ಕಿಣಿಯವರು ಅಲ್ಲಿ ಇದ್ದ ನಿತ್ಯಪುಷ್ಪದ ಗಿಡವನ್ನು ತೋರಿಸಿ `ವಿಷ್ಣು ಇದು ಯಾವ ಮಟ್ಟದ್ದು..' ಎಂದು ಕೇಳಿದರು. ಏಕೆಂದರೆ ಆ ಗಿಡ ಇದ್ದಲ್ಲೇ ಇದ್ದು ವಿಶ್ವದ ಜೊತೆಗೆ ಸಂವಾದ ಮಾಡುತ್ತದೆ. ಹೋಬಳಿ ಮಟ್ಟ, ಆ ಮಟ್ಟ ಈ ಮಟ್ಟ ಎಲ್ಲ ರಾಜಕೀಯ ರಂಗಕ್ಕೆ ಸೇರಿದ್ದಷ್ಟೇ. ಸಾಹಿತ್ಯ ಇರುವುದು ಲೆಟರ್ಹೆಡ್ಡಿಗೆ, ವಿಸಿಟಿಂಗ್ ಕಾಡರ್ಿಗೆ, ಬಯೋಡೆಟಾಕ್ಕೆ ಇರುವ ವಿಷಯವಲ್ಲ. ಅದು ಜೀವನವನ್ನು ಅರ್ಥ ಮಾಡಿಕೊಳ್ಳಲು ಖಾಸಗಿಯಾಗಿ ನಡೆಯುವಂತದ್ದು. ಎಲ್ಲರ ಜೊತೆ ಸಂಬಂಧದಲ್ಲಿ ನಡೆಯುವಂತದ್ದು. ಅದರಲ್ಲಿ ಈ ರೀತಿಯ ಪಂಗಡಗಳೆಲ್ಲ ಇಲ್ಲ. ಒಳ್ಳೆಯ ಕವಿ ಒಳ್ಳೆಯ ಕವಿಯಷ್ಟೇ. ಅವನನ್ನು ರಾಜ್ಯದವರು ಗುರುತಿಸಬಹುದು ಅಥವಾ ದೇಶ ಮಟ್ಟದಲ್ಲಿ ಗುರುತಿಸಬಹುದು. ಅಥವಾ ಅವನ ಊರಿನವರು ಮಾತ್ರ ಗುರುತಿಸಬಹುದು. ನನಗೆ ಆ ಥರದ ಮಟ್ಟಗಳಲ್ಲಿ ನಂಬಿಕೆಯಿಲ್ಲ.

--------------

(ವಿಶ್ವವಾಣಿಗಾಗಿ ಮಾಡಿದ ಸಂದರ್ಶನ ಇದು. ಈ ಸಂದರ್ಶನವು ಸೆ.11ರ ಭಾನುವಾರದ ವಿಶ್ವವಾಣಿಯ ಸಂ-ಗಮ ಪುಟದಲ್ಲಿ ಪ್ರಕಟವಾಗಿದೆ)

Saturday, September 10, 2016

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ-5

 
           ಸ್ವರ್ಗದಲ್ಲಿ ಇಂತಹ ಆಹಾರ ಇರಬಹುದೇನೋ ಎಂದುಕೊಂಡು ಸವಿದ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದೆವು. ಶ್ರೀಧರ ಕುಟಿಯಿಂದ ನಾವು ಹೊರಟಿದ್ದು ಸಮರ್ಥ ರಾಮದಾಸರು ದೇವರಲ್ಲಿ ಐಕ್ಯರಾದ ಸ್ಥಳಕ್ಕೆ. ಅಲ್ಲೊಂದು ಸುಂದರ ದೇಗುಲ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲಿಯೇ ಆಂಜನೇಯ ಸಮರ್ಥ ರಾಮದಾಸರ ಭಕ್ತಿಗೆ ಮೆಚ್ಚಿ ಬಾಣವನ್ನು ಹೂಡಿ ಗಂಗೆಯನ್ನು ಹರಿಸಿದ ಎಂಬ ಪ್ರತೀತಿಯನ್ನು ಹೊಂದಿರುವ ಚಿಲುಮೆ. ಅದನ್ನೆಲ್ಲ ನೋಡಿದೆವು.
            ಅದೇ ಸಮಯದಲ್ಲಿ ಪೂಜೆ ಆರಂಭವಾಗಿತ್ತು. ಪೂಜೆಯನ್ನು ವೀಕ್ಷಣೆ ಮಾಡಲು ಕುಳಿತೆವು. ಉಸಿರು ಕಟ್ಟುವಂತಹ ಕಿರಿದಾದ ಕೊಠಡಿ. ನೂರಾರು ಜನ ಸೇರಿದ್ದರು. ನಾವೂ ಹೋಗಿ ಕುಳಿತೆವು. ಬಗ್ಗಿ ಒಳಹೋದರೆ ಕಲ್ಲಿನ ಕುಟಿ. ಶಿವಾಜಿ ಮಹಾರಾಜರೇ ಕಟ್ಟಿಸಿದ್ದ ಗುಹೆ ಅದು. ಸಮರ್ಥ ರಾಮದಾಸರ ಸಮಾಧಿಗೆ ಅಲ್ಲಿ ಪೂಜೆ ನಡೆಯುತ್ತಿತ್ತು. ಚಿಕ್ಕ ಚಿಕ್ಕ ವಟುಗಳು ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಹೇಳುತ್ತಿದ್ದರೆ ಅಲ್ಲಿ ಹಾಕಿದ್ದ ಸಿಸಿಟಿವಿ ಅದನ್ನೆಲ್ಲ ಹೊರಗೆ ಬಿತ್ತರಿಸುತ್ತಿತ್ತು. ಜೊತೆಯಲ್ಲಿಯೇ ಜೈ ಜೈ ಸಮರ್ಥ ರಘುವೀರ ಎನ್ನುವ ಜಯಘೋಷ ಮೊಳಗುತ್ತಿತ್ತು. ನಾನು, ಪ್ರಶಾಂತ ಭಾವ ಹಾಗೂ ಸಂಜಯ ಅದೆಷ್ಟೋ ಅಮಯ ಕಣ್ಮುಚ್ಚಿ ಪ್ರಾರ್ಥನೆ ಮಾಡಿದೆವು. ಒಂದೋ, ಒಂದೂವರೆ ತಾಸೋ ಕಳೆದ ನಂತರ ಮಹಾ ಮಂಗಳಾರತಿ ಆರಂಭವಾಯಿತು. ಎಲ್ಲರೂ ಧನ್ಯರಾಗಿ ಅದನ್ನು ವೀಕ್ಷಣೆ ಮಾಡಿದೆವು. ಅದೇ ಸಂದರ್ಭದಲ್ಲಿ ಸದ್ಗುರು ಶ್ರೀಧರ ಸ್ವಾಮಿಗಳು ರಚಿಸಿದ ಕನ್ನಡ ಹಾಗೂ ಮರಾಠಿಯ ಭಜನೆ ವಾಚನವೂ ಆಯಿತು. ಪ್ರಸಾದ ಸ್ವೀಕರಿಸಿ ಹೊರ ಬಂದೆವು.
          ಸಮಾಧಿ ಮಂದಿರದ ಹೊರ ಬಂದರೆ ಸಣ್ಣಗೆ ಜಿಟಿ ಜಿಟಿ ಮಳೆ. ಮಳೆಯಲ್ಲಿಯೇ ಸಜ್ಜನಘಡದ ಗುಡ್ಡವನ್ನು ಸುತ್ತಲು ಹೊರಟೆವು. ಸಜ್ಜನಗಡದಲ್ಲೇ ಸಮರ್ಥ ರಾಮದಾಸರ ಸಮಾಧಿ ದೇಗುಲದ ಪಕ್ಕದಲ್ಲಿ ಮ್ಯೂಸಿಯಂ ಒಂದಿದೆ. ಅದರ ಒಳಹೊಕ್ಕೆವು. ಮ್ಯೂಸಿಯಮ್ಮಿನಲ್ಲಿ ಸಮರ್ಥ ರಾಮದಾಸರಿಗೆ ಮಾರುತಿ ಪ್ರತ್ಯಕ್ಷನಾಗಿ ನೀಡಿದ ಶ್ರೀರಾಮ ಧರಿಸುತ್ತಿದ್ದ ವಲ್ಕಲ ನೀಡಿದ್ದ ಎನ್ನುವ ಕುರುಹಾಗಿ ಸಂರಕ್ಷಿಸಿ ಇಡಲಾಗಿದ್ದ ನಾರು ಬಟ್ಟೆಯನ್ನು ನೋಡಿದೆವು.
            ಸಮರ್ಥ ರಾಮದಾಸರು ಆಧ್ಯಾತ್ಮಿಕ ಸಾಧನೆಗೆ ಬಳಸುತ್ತಿದ್ದ ವಸ್ತುಗಳು, ಶಿವಾಜಿ ಮಹಾರಾಜರು ಸಮರ್ಥ ರಾಮದಾಸರಿಗೆಂದೇ ನೀಡಿದ್ದ ಹಲವು ವಸ್ತುಗಳನ್ನೆಲ್ಲ ಅಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದನ್ನೆಲ್ಲ ನೋಡಿದವು. ಹಳೆಯ ಭಾವಚಿತ್ರಗಳನ್ನು ಕಣ್ತುಂಬಿಕೊಂಡೆವು. ಸಮರ್ಥ ರಾಮದಾಸರ ಜೊತೆ ಮಾತನಾಡುತ್ತಿದ್ದ ಶಿವಾಜಿ ಮಹಾರಾಜರ ಚಿತ್ರವನ್ನು ಯಾವುದೋ ಕಲಾವಿದ ಬಿಡಿಸಿದ್ದ. ಅದನ್ನೂ ನೋಡಿದೆವು. ನಂತರ ಹೊರ ಬಂದವರೇ ಸೀದಾ ನಮ್ಮ ವಸತಿಗೃಹವನ್ನು ಹೊಕ್ಕು ಕೆಲಕಾಲ ವಿಶ್ರಾಂತಿ ಮಾಡಿದೆವು.
            ಪ್ರಶಾಂತ ಭಾವ ಒತ್ತಾಯಿಸಿದ. ನಾನು ಸಂಜಯ ಎದ್ದೆವು. ವಸತಿ ಗೃಹದ ಹಿಂಭಾಗದಲ್ಲಿ ಕಣ್ಣುಹಾಯಿಸಿದವರಿಗೆ ಉರ್ಮುಡಿ ನದಿಗೆ ಕಟ್ಟಿದ್ದ ಅಣೆಕಟ್ಟಿನ ವಿಹಂಗಮ ದೃಶ್ಯ ಕಣ್ಣಿಗೆ ಕಾಣುತ್ತಿತ್ತು. ಪಡುವಣ ಮೋಡದ ಸಾಲು ಗುಂಪು ಗುಂಪಾಗಿ ಬಂದು ಮಾಲೆ ಮಾಲೆಯಾಗಿ ಹನಿಮಳೆಯನ್ನು ಸುರಿಸುತ್ತಿತ್ತು. ಇದರಿಂದಾಗಿ ಮಂಜಿನ ಪರದೆ ಸರಿದಂತೆ ಕಾಣಿಸುತ್ತಿತ್ತು. ಅಲ್ಲೊಂದಷ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡೆವು.
             ನಂತರ ಅಲ್ಲಿಂದ ಹೊರಟು ಸೀದಾ ಸಜ್ಜನಘಡದ ಇನ್ನೊಂದು ತುದಿಯತ್ತ ತೆರಳಿದೆವು. ಯಾರೋ ಖಡ್ಗದಿಂದ ಕಡಿದು ತುಂಡರಿಸಿದ್ದಾರೇನೋ ಎಂಬಂತೆ ಸಜ್ಜನ ಗಡ ಅಲ್ಲಿ ಕೊನೆಯಾಗಿತ್ತು. ಕೆಳಗೆ ಆಳದ ಪ್ರಪಾತದಂತಹ ಪ್ರದೇಶ. ಆ ಆಳದಿಂದ ಬೀಸಿ ಬರುವ ರಭಸದ ಗಾಳಿ. ನಾವು ಆ ತುದಿಗೆ ಹೋಗಿ ನಿಂತಾಗ ಬೀಸಿ ಬಂದ ಗಾಳಿ ನಮ್ಮನ್ನು ನಾಲ್ಕು ಹೆಜ್ಜೆ ಹಿಂದಕ್ಕೆ ತಳ್ಳಿತು. ಅಲ್ಲೊಂದಿಷ್ಟು ಪೋಟೋಗಳನ್ನು ಕ್ಲಿಕ್ಕಿಸಿದೆವು. ಸಂಜಯ ಒಂದಿಷ್ಟು ವೀಡಿಯೋಗಳನ್ನು ಮಾಡಿಕೊಂಡ. ಸಜ್ಜನಘಡ ಧಾರ್ಮಿಕ ಕ್ಷೇತ್ರವಾಗಿದ್ದರೂ ಅಲ್ಲಿನ ನಿಸರ್ಗ ಸೌಂದರ್ಯದಿಂದಾಗಿ ಅದೆಷ್ಟೋ ಪ್ರೇಮಿಗಳು ಸಜ್ಜನಘಡಕ್ಕೆ ಆಗಮಿಸಿದ್ದವು. ಅದೆಷ್ಟೋ ಜೋಡಿ ಹಕ್ಕಿಗಳೂ ಕೂಡ ಪೋಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದವು. ನಾನು, ಸಂಜಯ ಹಾಗೂ ಪ್ರಶಾಂತ ಭಾವ ಲುಂಗಿಧಾರಿಗಳಾಗಿದ್ದೆವು. ನಮ್ಮನ್ನು ಬೇರೆ ಯಾವುದೋ ಗ್ರಹದಿಂದ ಬಂದಿದ್ದಾರೆ ಎಂಬಂತೆ ನೋಡುತ್ತಿದ್ದರು. ಒಂದಿಷ್ಟು ಜನರು ನಮ್ಮನ್ನು ನೋಡಿ `ಮಲೆಯಾಳಿಗಳು' ಎಂದೂ ಹೇಳುತ್ತಿದ್ದು ಕಿವಿಗೆ ಕೇಳುತ್ತಿತ್ತು.
             ಸೀದಾ ಮುಂದಕ್ಕೆ ಸಾಗಿದೆವು. ಅಲ್ಲೊಂದಷ್ಟು ಕಡೆ ಘಡದ ತುದಿಗೆ ಕಲ್ಲಿನ ಗೋಡೆ ಕಟ್ಟಲಾಗಿತ್ತು. ಶಿವಾಜಿ ಮಹಾರಾಜರು ಕಟ್ಟಿಸಿದ್ದೇ ಇರಬೇಕು. ಗೋಡೆ ಶಿಥಿಲವಾಗಿತ್ತು. ಅದೆಷ್ಟು ಜನ ಆ ಕಲ್ಲಿನ ಮೇಲೆ ಹತ್ತಿಳಿದಿದ್ದರೋ. ಥೇಟು ನಮ್ಮೂರಿನಲ್ಲಿ ಇದ್ದಂತೆ ಆ ಕಲ್ಲುಗಳ ಮೇಲೂ ಅಕ್ಷರಸ್ಥರ ಕೈಚಳಕ ಸಾಗಿತ್ತು. ........ ವೆಡ್ಸ್......... ಎಂದೋ.. ......ಲವ್ಸ್.. ಎಂದೋ ಬರೆದಿದ್ದವು. ಎಲ್ಲೋದ್ರೂ ಇವರ ಬುದ್ದಿ ಹಿಂಗೇ... ಎಂದುಕೊಂಡೆ.
         ಕೊನೆಯಲ್ಲೊಂದು ಆಂಜನೇಯನ ದೇವಸ್ಥಾನ. ಆ ದೇವಸ್ಥಾನಕ್ಕೆ ತೆರಳಿ ಹನುಮನಿಗೆ ಶಿರಬಾಗಿದೆವು. ಹೊರಬಂದ ಕೂಡಲೇ ನಮ್ಮ ಕಣ್ಣ ಸೆಳೆದ ದೃಶ್ಯ ಆಹ್ ವರ್ಣಿಸಲಸದಳ. ಒಂದೆಡೆ ಉರ್ಮುಡಿ ನದಿಯ ಅಣೆಕಟ್ಟೆ. ಇನ್ನೊಂದು ಕಡೆಯಲ್ಲಿ ದೂರದಲ್ಲಿ ಕಾಅಣುತ್ತಿದ್ದ ಗಾಳಿಯ ಪಂಖಗಳು. ಹೆಬ್ಬಾವು ಹರಿದು ಹೋದಂತೆ ಕಾಣುತ್ತಿದ್ದ ರಸ್ತೆ. ಅದರಲ್ಲಿ ಸಾಗುತ್ತಿದ್ದ ವಾಹನಗಳು. ಇರುವೆಯಂತೆ ಕಾಣುತ್ತಿದ್ದವು. ಸಂಜಯ ಸಜ್ಜನ ಗಡದ ತುತ್ತ ತುದಿಗೆ ಹೋದ. ಅಲ್ಲಿ ಕೆಲ ಜಾಗ ಮುಂಚಾಚಿಕೊಂಡಿತ್ತು. ಅಲ್ಲಿ ನಿಂತವನು ತನ್ನೆರಡೂ ಕೈಗಳನ್ನು ಪಕ್ಷಿಯಂತೆ ಚಾಚಿದ. ದೂರದಿಂದ ನೋಡಿದರೆ ರಿಯೋಡಿ ಜನೈರೋದ ಗುಡ್ಡದ ಮೇಲೆ ನಿಲ್ಲಿಸಿದ್ದ ಏಸು ಕ್ರಿಸ್ತನ ಪ್ರತಿಮೆಯಂತೆ ಭಾಸವಾಗುತ್ತಿತ್ತು. ನಿಂತವನೇ ದೊಡ್ಡದಾಗಿ ಸಜ್ಜನಘಡವನ್ನೂ, ಶಿವಾಜಿ ಮಹಾರಾಜರನ್ನೂ ನೆನಪುಮಾಡಿಕೊಳ್ಳತೊಡಗಿದ. ನಾನು ವೀಡಿಯೋ ಮಾಡಿಕೊಂಡೆ. ನನ್ನ ಹಿಂದೆ ನಿಂತಿದ್ದ ಅದೆಷ್ಟೋ ಪ್ರವಾಸಿಗರು ಬೆಪ್ಪಾಗಿ ನಮ್ಮಿಬ್ಬರನ್ನು ನೋಡಲು ಆರಂಭಿಸಿದ್ದರು.

(ಮುಂದುವರಿಯುತ್ತದೆ)
              

Thursday, September 8, 2016

ಮಾರ್ಗಸೂಚಿ-2

         ಈ ಹಿಂದೊಮ್ಮೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಬಹುದು ಎನ್ನುವ ಬಗ್ಗೆ ಬರೆದಿದ್ದೆ. ಅದೇ ವರದಿಯನ್ನು ಮುಂದುವರೆಸಿ ಇನ್ನಷ್ಟು ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವ ಕುರಿತು ಈ ಲೇಖನ. ಇನ್ನಷ್ಟು ಹೊಸ ಮಾರ್ಗಗಳಲ್ಲಿ ಬಸ್ ಬಿಡುವ ಕುರಿತು ಇಲಾಖೆಗೊಂದು ಸಲಹೆ.


* ಶಿರಸಿ-ಜೋಯಿಡಾ-ಉಳವಿ
             ಶಿರಸಿಯಿಂದ ಉಳುವಿಗೆ ಬಸ್ ಸಂಚಾರವಿದೆ. ಆದರೆ ಅದು ಜೋಯಿಡಾಕ್ಕೆ ಹೋಗುವುದಿಲ್ಲ. ಬದಲಾಗಿ ದಾಂಡೇಲಿ-ಬಾಪೇಲಿ ಕ್ರಾಸ್ ಮೂಲಕ ಉಳುವಿಯನ್ನು ತಲುಪುತ್ತದೆ. ಗುಂದದ ಮೂಲಕ ತೆರಳುವ ಈ ಬಸ್ ಈ ಭಾಗದ ಜನಸಾಮಾನ್ಯರಿಗೆ ಅನುಕೂಲಕರ. ದಿನಕ್ಕೆ ಎರಡು ಬಾರಿ ಸಂಚಾರ ಮಾಡುವ ಈ ಬಸ್ಸಿನಿಂದ ಸಾಕಷ್ಟು ಅನುಕೂಲತೆಯಿದೆ. ಈ ಬಸ್ಸಿನ ಜೊತೆಗೆ ಶಿರಸಿ-ಭಾಗವತಿ-ಅಂಬಿಕಾನಗರ-ಬಾಪೇಲಿಕ್ರಾಸ್-ಜೋಯಿಡಾ ಕ್ಕೆ ನೇರ ಬಸ್ ಸೌಕರ್ಯ ಕಲ್ಪಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗಬಹುದಾಗಿದೆ. ಅದೆಷ್ಟೋ ಜನರು ಶಿರಸಿಗೂ ಜೋಯಿಡಾಕ್ಕೂ ನೆರವಾಗಿ ಹೋಗಲು ಬಯಸುತ್ತಾರೆ. ಅಂತವರಿಗೆ ದಾಂಡೇಲಿಯನ್ನು ಸುತ್ತುಬಳಸಿ ಹೋಗುವುದು ತಪ್ಪುತ್ತದೆ. ಜೊತೆಯಲ್ಲಿ ಕುಳಗಿ ಮಾರ್ಗದಲ್ಲಿ ಸಿಗುವ ಅದೆಷ್ಟೋ ಹಳ್ಳಿಗರಿಗೆ ಬಸ್ ಸೌಕರ್ಯ ಸಿಕ್ಕಂತಾಗುತ್ತದೆ.

* ಶಿರಸಿ-ಜೋಯಿಡಾ-ಕಾರವಾರ
           ಶಿರಸಿಯಿಂದ ಜೋಯಿಡಾ ಮೂಲಕ ದಿನಕ್ಕೆ ಕನಿಷ್ಟ ಎರಡು ಬಸ್ ಸೌಕರ್ಯ ಒದಗಿಸುವುದು ಜೋಯಿಡಾ ಭಾಗದವರಿಗೆ ಸಾಕಷ್ಟು ಅನುಕೂಲ ಕಲ್ಪಿಸುತ್ತದೆ. ಬೆಳಿಗ್ಗೆ ಒಂದು ಹಾಗೂ ಮದ್ಯಾಹ್ನ ಒಂದು ಬಸ್ ಓಡಿಸುವುದರಿಂದ ಜೋಯಿಡಾ ಭಾಗದ ಜನರು ಕಾರವಾರಕ್ಕೆ ಹಾಗೂ ದಾಂಡೇಲಿಗೆ ತಲುಪಲು ಅನುಕೂಲಕರ. ನೇರವಾಗಿ ಶಿರಸಿ ಹಾಗೂ ಕಾರವಾರ ನಡುವೆ 120 ಕಿಮಿ ಅಂತರವಾದರೆ ಜೋಯಿಡಾ ಮೂಲಕ ತೆರಳಿದರೆ 220 ಕಿ.ಮಿ ದೂರವಾಗುತ್ತದೆ. ಶಿರಸಿಯಿಂದ ದಿನಕ್ಕೆ 2 ಬಸ್ ಹಾಗೂ ಕಾರವಾರದಿಂದ 2 ಬಸ್ ಓಡಿಸುವುದು ಸಾಕಷ್ಟು ಅನುಕೂಲಕರ. ಜೋಯಿಡಾದಿಂದ ಕಾರವಾರಕ್ಕೆ ಬಸ್ ಸೌಕರ್ಯ ಕಡಿಮೆಯಿದೆ. ಈ ಕಾರಣದಿಂದಾಗಿ ಈ ಮಾರ್ಗದಲ್ಲಿ ಬಸ್ ಓಡಿಸುವುದು ಇಲಾಖೆಗೂ ಆದಾಯ ತರುವುದರ ಜೊತೆಗೆ ಜನಸಾಮಾನ್ಯರಿಗೆ ಸಹಕಾರಿಯಾಗಬಲ್ಲದು.

* ಯಲ್ಲಾಪುರ-ಕೈಗಾ-ಕಾರವಾರ
          ಯಲ್ಲಾಪುರದಿಂದ ಕೈಗಾ ಮಾರ್ಗದ ಮೂಲಕ ಕಾರವಾರಕ್ಕೆ ಬಸ್ ಓಡಿಸುವುದು ಸಾಕಷ್ಟು ಉತ್ತಮ. ಈ ಮಾರ್ಗದಲ್ಲಿ ಅನೇಕ ಊರುಗಳು ಸಿಗುತ್ತವೆ. ಈ ಊರುಗಳಿಗೆ ಈ ಬಸ್ ಸೌಕರ್ಯ ಸಹಕಾರಿಯಾಗಬಲ್ಲದು. ವಿಶೇಷವಾಗಿ ವಜ್ರಳ್ಳಿ, ಬಾರೆ, ಬಾಸಲ, ಕಳಚೆ, ಮಲವಳ್ಳಿ ಈ ಮುಂತಾದ ಗ್ರಾಮಗಳ ಜನರು ಕಾರವಾರವನ್ನು ತಲುಪುವುದಕ್ಕಾಗಿ ಈ ಮಾರ್ಗದಲ್ಲಿ ಬಸ್ ಸೌಕರ್ಯ ಒದಗಿಸುವುದು ಅನುಕೂಲಕರವಾಗಿದೆ. ಕೈಗಾ-ಬಾರೆ ನಡುವೆ ಇರುವ ರಸ್ತೆಯನ್ನು ಇನ್ನಷ್ಟು ಸುಧಾರಣೆ ಮಾಡಿದರೆ ಸರ್ವಋತು ಬಸ್ ಸಂಪರ್ಕ ಕಲ್ಪಿಸಬಹುದು. 100 ಕಿಲೋಮೀಟರ್ ಅಂತರದಲ್ಲಿ ಯಲ್ಲಾಪುರ ಹಾಗೂ ಕಾರವಾರ ನಡುವೆ ಸಂ[ರ್ಕ ಸಾಧ್ಯವಾಗಬಹುದಾಗಿದೆ. ಈ ಕುರಿತಂತೆ ಇಲಾಖೆ ಆಲೋಚಿಸುವುದು ಉತ್ತಮ.

*ಮುಂಡಗೋಡ-ಕಲಘಟಗಿ-ಹಳಿಯಾಳ
           ಇಲಾಖೆಗೆ ಹೆಚ್ಚಿನ ಆದಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಮಾರ್ಗ ಅನುಕೂಲಕರ. ಮುಂಡಗೋಡ-ಕಲಘಟಗಿ ಹಾಗೂ ಕಲಘಟಗಿ-ಹಳಿಯಾಳ ಮಾರ್ಗ ಮಧ್ಯದಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಸಾಕಷ್ಟು ಅನುಕೂಲ ದೊರಕಬಹುದಾಗಿದೆ. ಮುಂಡಗೋಡ ಹಾಗೂ ಕಲಘಟಿಗಿ ನಡುವೆ ಮತ್ತು ಹಳಿಯಾಳ-ಕಲಘಟಗಿ ನಡುವೆ ಬಸ್ ಸಂಚರಿಸುತ್ತಿದೆ. ಆದರೆ ಮುಂಡಗೋಡದಿಂದ ಕಲಘಟಗಿ ಮೂಲಕ ಹಳಿಯಾಳ ತಲುಪಲು ನೇರವಾದ ಬಸ್ ಇಲ್ಲ. ಈ ಊರುಗಳ ನಡುವೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ ಓಡಿಸುವುದು ಉತ್ತಮ. ಬೆಳಿಗ್ಗೆ ಹಾಗೂ ಸಂಜೆ ಹಳಿಯಾಳದಿಂದ ಅದೇ ರೀತಿ ಬೆಳಿಗ್ಗೆ ಹಾಗೂ ಸಂಜೆ ಮುಂಡಗೋಡದಿಂದ ತಲಾ ಒಂದೊಂದು ಬಸ್ ಓಡಿಸುವುದು ಜನಸಾಮಾನ್ಯರಿಗೆ ಹಾಗೂ ಇಲಾಖೆಗೆ ಉಪಕಾರಿ.

ಅಪ್ಪ (ಕಥೆ) ಭಾಗ-1

               `ತಮಾ... ಇವತ್ತು ಮೂರನೇದು... ಇವತ್ತೇ ಕೊನೇದು.. ಇನ್ನು ಇಂಜೆಕ್ಷನ್ ಇಲ್ಲೆ..' ಬೆಳ್ಳೆಕೇರಿ ಡಾಕ್ಟರ್ ಹೇಳುವವರೆಗಾಗಲೇ ನಾನು ಚೀರಾಡಿ, ರಂಪಾಟ ಮಾಡಿ ಹುಯ್ಯಲೆಬ್ಬಿಸಿದ್ದೆ.
                 ಸಾಮಾನ್ಯ ಜ್ವರ. ಜ್ವರಕ್ಕೆ ಸತತ ಮೂರು ದಿನ ಇಂಜೆಕ್ಷನ್ ತೆಗೆದುಕೊಂಡರೆ ಸರಿಯಾಗುತ್ತದೆ ಎಂದಿದ್ದರು ಬೆಳ್ಳೆಕೇರಿ ಡಾಕ್ಟರ್. ಅಪ್ಪ ಸೈಕಲ್ ಮೇಲೆ ಕೂರಿಸಿಕೊಂಡು ಮೂರು ದಿನವೂ ಕಾನಸೂರಿಗೆ ಕರೆದೊಯ್ದಿದ್ದ. ಮೊದಲ ಎರಡು ದಿನಗಳೇ ಇಂಜೆಕ್ಷನ್ನಿನಿಂದ ಹೈರಾಣಾಗಿದ್ದೆ. ಮೂರನೇ ದಿನ ಮಾತ್ರ ಮತ್ತಷ್ಟು ಬಸವಳಿದಿದ್ದೆ.
                  ನಾಲ್ಕಾಣೆಯ ಲಿಂಬೆ ಚಾಕಲೇಟಿನ ಆಮಿಷವನ್ನು ತೋರಿಸಿ ಮೊದಲ ಎರಡು ದಿನ ಅಪ್ಪ ಹೇಗೋ ನನಗೆ ಬೆಳ್ಳೆಕೇರಿ ಡಾಕ್ಟರರಿಂದ ಇಂಜೆಕ್ಷನ್ ಕೊಡಿಸಲು ಸಫಲನಾಗಿದ್ದ. ಆದರೆ ಮೂರನೇ ದಿನ ಮಾತ್ರ ನಾನು ಕಾನಸೂರಿಗೆ ಬರಲು ಬಿಲ್ ಕುಲ್ ಒಪ್ಪಿರಲಿಲ್ಲ. ಮನೆಯಲ್ಲಿ ದೊಡ್ಡದಾಗಿ ಕೂಗಿ ಕಬ್ಬರಿದಿದ್ದೆ. `ಬೆಳ್ಳೇಕೇರಿ ಡಾಕ್ಟರು ದಬ್ಬಣ ತಗಂಡು ಮುಕಳಿಗೆ ಸುಚ್ಚತ್ರು.. ಬ್ಯಾಡ.. ಆ ಬತ್ನಿಲ್ಲೆ..' ಎಂದು ಗಲಾಟೆ ಮಾಡಿದ್ದೆ. ಗಲಾಟೆ ಯಾವ ಹಂತಕ್ಕೆ ತಲುಪಿತ್ತು ಎಂದರೆ ನನ್ನ ಹಟಕ್ಕೆ ಅಪ್ಪ ಸಿಟ್ಟಿನಿಂದ ಬೆನ್ನ ಮೇಲೆ ನಾಲ್ಕು ಏಟು ಭಾರಿಸಿಯೂ ಬಿಟ್ಟಿದ್ದ. ಆದರೂ ನಾನು ಮಾತ್ರ ಸುತಾರಾಂ ಕಾನಸೂರಿಗೆ ಬರೋದಿಲ್ಲ ಎಂದು ರಚ್ಚೆ ಹಿಡಿದಿದ್ದೆ.
                ಆ ದಿನ ಅಮ್ಮನಿಗೆ ಮೊಟ್ಟ ಮೊದಲ ಬಾರಿಗೆ ಹಲ್ಲು ನೋವು ಬಂದಿತ್ತು. ಯಾವ ರೀತಿಯ ಹಲ್ಲು ನೋವು ಎಂದರೆ ನೋವಿನ ಅಬ್ಬರಕ್ಕೆ ವಸಡುಗಳು ಬಾತುಕೊಂಡಿದ್ದವು. ಸಾಮಾನ್ಯವಾಗಿ ಚಿಕ್ಕಪುಟ್ಟ ಕಾಯಿಲೆ ಕಸಾಲೆಗಳಿಗೆಲ್ಲ ಮನೆಮದ್ದಿನ ಮೊರೆಹೋಗುತ್ತಾಳೆ ಅಮ್ಮ. ಆ ದಿನವೂ ಕೂಡ ಅದೇನೋ ಮನೆಮದ್ದು ಮಾಡಿದ್ದಳು. ಹಲ್ಲಿಗೆ ಕರ್ಪೂರ ಹಾಕಿದ್ದಳು, ತಂಬಾಕಿನ ಎಸಳನ್ನು ಹಲ್ಲಿನ ಎಜ್ಜೆಯಲ್ಲಿ ಗಿಡಿದುಕೊಂಡಿದ್ದಳು. ಊಹೂಂ.. ಏನೇ ಆದರೂ ಹಲ್ಲು ನೋವು ಕಡಿಮೆಯಾಗಿರಲಿಲ್ಲ. ಬದಲಾಗಿ ಜಾಸ್ತಿಯಾಗುತ್ತಲೇ ಇತ್ತು. ಅಮ್ಮ ಬಸವಳಿದಿದ್ದಳು. ಸರಿ ಹೇಗೆಂದರೂ ನನಗೆ ಆಸ್ಪತ್ರೆಗೆ ಹೋಗಬೇಕಿತ್ತಲ್ಲ. ಅಮ್ಮನನ್ನೂ ಕರೆದುಕೊಂಡು ಹೋಗಿ ಬಿಡೋಣ ಎಂದು ಅಪ್ಪ ಅಂದುಕೊಂಡ. ಅಮ್ಮನೂ ಹೂಂ ಎಂದು ತಲೆಯಲ್ಲಾಡಿಸಿದವಳೇ ಹೊರಡಲು ಅನುವಾಗಿದ್ದಳು.
         ಬರಗಾಲಕ್ಕೆ ಅಧಿಕ ಮಾಸ ಎಂಬಂತೆ  ಆ ದಿನ ನಮ್ಮ ಮನೆಯಲ್ಲಿ ನಾಲ್ಕಾರು ಆಳುಗಳು ಇದ್ದರು. ಅವರೆಲ್ಲ ಸೇರಿ ಮನೆಯ ಜಂತಿಯ ರಿಪೇರಿಗೆ ಮುಂದಾಗಿದ್ದರು. ಅಮ್ಮನಿಗೋ ಆಸ್ಪತ್ರೆಗೆ ಹೋಗುವ ತರಾತುರಿ. ಅಪ್ಪ ಅಮ್ಮನ ಬಳಿ ಆಸ್ಪತ್ರೆಗೆ ಹೋಗೋಣ ಎನ್ನುವುದೇ ಅಪರೂಪ. ಆತ ಹಾಗೆ ಹೇಳಲು ಬೆರೆ ಕಾರಣವೇ ಇತ್ತೆನ್ನಿ. ಹೇಳಿ ಕೇಳಿ ನಮ್ಮ ಮನೆ ಆ ದಿನಗಳಲ್ಲಿ ಅವಿಭಕ್ತ ಕುಟುಂಬ. ಅಜ್ಜ, ಅಜ್ಜಿ. ಅಜ್ಜ ಸೌಮ್ಯ ಸ್ವಭಾವದವನು. ಅಜ್ಜಿ ಭದ್ರಕಾಳಿ. ಅಪ್ಪನಿಗೆ 5 ಜನ ತಮ್ಮಂದಿರು. ಅಮ್ಮ ಹಿರಿಸೊಸೆ. ಹಿರಿಸೊಸೆಯಾದ ಕಾರಣಕ್ಕೆ ಮನೆಯ ಬಹುತೇಕ ಚಾಕರಿ ಅಮ್ಮನಿಗೆ ಕಟ್ಟಿಟ್ಟಿತ್ತು. ಮನೆಯ ಕೆಲಸಕ್ಕೆ ಬಂದ ಆಳುಗಳ ಮೇಲೆ ಅಜ್ಜಿಗೆ ದರ್ಪ. ಹೊಗೆಯುಗುಳುವ ಒಲೆಯ ಮುಂದೆ ಕುಳಿತು ಕಣ್ಣೀರಿಕ್ಕುತ್ತ ಅಡುಗೆ ಮಾಡುತ್ತಿದ್ದ ಅಮ್ಮನೆಂದರೆ ಆಳುಗಳಿಗೆ ಸಹಾನುಭೂತಿ.
           ಅಮ್ಮ ಹಲ್ಲುನೋವಿನಿಂದ ಬಳಲುತ್ತಿದ್ದುದು ಮನೆಯ ಸದಸ್ಯರಿಗೆ ಯಾರಿಗೂ ಗೊತ್ತಾಗಿರಲಿಲ್ಲ. ಗೊತ್ತಾಗಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು ಹೇಳಿ. ಕೆಲಸಕ್ಕೆ ಬಂದ ಹೆಣ್ಣಾಳುಗಳಿಗೆ ಮಾತ್ರ ಅಮ್ಮನ ಬವಣೆ ಅರ್ಥವಾಗಿತ್ತು. ಮನೆಯ ಜಂತಿಯ ರೀಪಿನ ಕೆಲಸ ಮಾಡುತ್ತಿದ್ದ ಗಂಡಾಳುಗಳ ಬಳಿ ಹೋದ ಹೆಣ್ಣಾಳುಗಳು ಹಲ್ಲುನೋವಿನ ವಿಷಯ ಹೇಳಿದ್ದರು. ಒಬ್ಬ ಆಳು ಸೀದಾ ಅಪ್ಪನ ಬಳಿ ಬಂದು `ಅಮ್ಮನಿಗೆ ಹಲ್ಲುನೋವು ಬಂದದೆ. ಆಸ್ಪತ್ರೆಗಾದ್ರೂ ಕರಕೊಂಡು ಹೋಗಬಾರದೇ ಎಂದಿದ್ದರು. ಕೊನೆಗೆ ಅಪ್ಪ ಮದ್ಯಾಹ್ನ 3 ಗಂಟೆಯ ವೇಳೆಗೆಲ್ಲ ಅಮ್ಮನ ಬಳಿ ಹೊರಡೋಣ ಎಂದಿದ್ದ.
          ಅಮ್ಮ ಕೈಗೆ ಸಿಕ್ಕ ಸೀರೆ ಉಟ್ಟುಕೊಂಡು ಹೊರಟಿದ್ದಳು. ಮನೆಯ ಹೊರಗೆ ಬರುತ್ತಿದ್ದವಳು ಒಮ್ಮೆ `ಆಯ್..' ಎಂದಳು. ಹಿಂದೆ ಅಮ್ಮನ ಜೊತೆಗೆ ಬರುತ್ತಿದ್ದ ನಾನು ನಿಂತು ನೋಡಿದೆ. ಅಮ್ಮ ನಿಂತವಳೇ ಬಗ್ಗಿದಳು. ರೀಪಿನ ಕೆಲಸಕ್ಕೆ ತಂದಿಟ್ಟಿದ್ದ ಮೊಳೆಯೊಂದು ಅಮ್ಮನ ಕಾಲಿಗೆ ಕಪ್ಪಿತ್ತು. ನಾನು ನಿಂತವನೇ ಅಮ್ಮ ಮೊಳೆ ಕಪ್ಪಿಚನೆ ಎಂದೆ. ಹೌದೋ ತಮಾ ಎಂದವಳೇ ಮೊಳೆಯನ್ನು ಕಿತ್ತು ಒಗೆದಳು. ಕಾಲಿನಿಂದ ರಕ್ತ ಒಸರಲು ಆರಂಭವಾಗಿತ್ತು. ಅದಕ್ಕೆ ಹತ್ತಿಸೊಳೆಯನ್ನು ಹಾಕಿ ಕಟ್ಟಿ ಅಪ್ಪನ ಜೊತೆ ಹೊರಟಳು.
           ಒಂದು ಕಾಲು ಕುಂಟುತ್ತ ನಿಧಾನ ನಡೆಯುತ್ತಿದ್ದರೆ ಅಪ್ಪ ಸೈಕಲ್ ತೆಗೆದುಕೊಂಡಿದ್ದ. ನಮ್ಮೂರಿನಿಂದ ಘಟ್ಟದ ರಸ್ತೆಯನ್ನು ಹತ್ತಿ ಕಾನಸೂರಿಗೆ ಹೋಗಿ ಆಸ್ಪತ್ರೆ ದರ್ಶನ ಮಾಡಬೇಕು. ನಮ್ಮೂರಿಗೂ ಕಾನಸೂರಿನ ಆಸ್ಪತ್ರೆಗೂ ನಡುವೆ ಆರೂ ಮುಕ್ಕಾಲು ಕಿಲೋಮೀಟರ್ ಅಂತರ. ಅಪ್ಪ ನನ್ನನ್ನೂ ಅಮ್ಮನನ್ನೂ ಕೂರಿಸಿಕೊಂಡು ಹೋಗಬೇಕಿತ್ತು. ಅರ್ಧಗಂಟೆ ನಡಿಗೆಯ ನಂತರ ಗುಡ್ಡವನ್ನು ಏರಿದ್ದೆವು. ಅಲ್ಲಿಂದ ಅಪ್ಪ ನಮ್ಮನ್ನು ಸೈಕಲ್ ಮೇಲೆ ಕರೆದೊಯ್ಯಲು ಮುಂದಾದ. ಅಮ್ಮ ಹಿಂದಿನ ಕ್ಯಾರಿಯರ್ ಮೇಲೆ ಕುಳಿತಳು. ನಾನು ಚಿಕ್ಕವನು. ನನ್ನನ್ನು ಸೈಕಲ್ಲಿನ ಮುಂದಿನ ಬಾರಿನ ಮೇಲೆ ಕೂರಿಸಿದ. ಕೂರಿಸಿ ಎರಡು ನಿಮಿಷವಾಗಿರಲಿಲ್ಲ. ನನ್ನ ಅಂಡು ನೋಯಲು ಆರಂಭವಾಗಿತ್ತು. ನಾನು ಅಪ್ಪನ ಬಳಿ ಕೂರಲು ಸಾಧ್ಯವಿಲ್ಲ ಎಂದು ರಗಳೆ ಮಾಡಿದೆ. ಅದಕ್ಕವನು ತಕ್ಷಣ ಟವೆಲ್ ಒಂದನ್ನು ತೆಗೆದು ಸೈಕಲ್ ಬಾರಿಗೆ ಕಟ್ಟಿದ. ಅದರ ಮೇಲೆ ಕೂರುವಂತೆ ಹೇಳಿದ. ನಾನು ಕುಳಿತಿದ್ದೆ. ಮೊದಲಿನಷ್ಟು ಅಂಡು ನೋಯುತ್ತಿರಲಿಲ್ಲ. ಆದರೂ ಏಬೋ ಒಂದು ರೀತಿಯ ಕಸ್ಲೆ ಆಗುತ್ತಿತ್ತು. ಹಾಗೂ ಹೀಗೂ ಕುಳಿತೆ. ಅರ್ಧಗಂಟೆಯ ಸವಾರಿಯ ನಂತರ ಕಾನಸೂರು ಬಂದಿತ್ತು.
          ಕಾನಸೂರಿಗೆ ಬಂದವನೇ ಅಪ್ಪ ಮಾಡಿದ ಮೊದಲ ಕೆಲಸವೆಂದರೆ ಸೀದಾ ಸರಕಾರಿ ಆಸ್ಪತ್ರೆಯ ಕಡೆಗೆ ಸೈಕಲ್ ಹೊಡೆದ. ಸರಕಾರಿ ಆಸ್ಪತ್ರೆಗೆ ಹೋಗಿ ಕಬ್ಬಿಣದ ಮೊಳೆ ಕಪ್ಪಿದ್ದ ಅಮ್ಮನಿಗೆ ಟಿಟಿ ಇಂಜೆಕ್ಷನ್ ಕೊಡಿಸುವುದು ಅಪ್ಪನ ಆಲೋಚನೆಯಾಗಿತ್ತು. ಹೀಗೆ ಮಾಡಿದರೆ ಟಿಟಿ ಇಂಜೆಕ್ಷನ್ನಿನ ದುಡ್ಡು ಕೊಡುವುದು ಉಳಿಯುತ್ತದೆ ಎನ್ನುವುದು ಅಪ್ಪನ ಆಲೋಚನೆ. ಸೀದಾ ಸರಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಡಾಕ್ಟರೇ ಇಲ್ಲ. ಅಪ್ಪ ಡಾಕ್ಟರಿಗಷ್ಟು ಹಿಡಿಶಾಪ ಹಾಕಿದ. ಅಮ್ಮನಿಗೆ ಕಾಲು ನೋವು ಇನ್ನಷ್ಟು ಜಾಸ್ತಿಯಾಗಿತ್ತು. ಕಬ್ಬಿಣದ ಮೊಳೆ ಕಪ್ಪಿದ್ದ ಬಲಗಾಲು ಆಗಲೇ ಊದಿಕೊಂಡಿತ್ತು.
             ಹಳೆಯ ಗಂಡನ ಪಾದವೇ ಗತಿ ಎಂಬಂತೆ ಅಪ್ಪ ಬೆಳ್ಳೆಕೇರಿ ಡಾಕ್ಟರ ಮನೆಯ ಕಡೆಗೆ ಮುಖ ಮಾಡಿದ್ದ. ಮೊದಲಿನಿಂದಲೂ ಅಪ್ಪನಿಗೆ ಸ್ಪಲ್ಪ ಜಾಸ್ತಿ ಖರ್ಚಾಗುತ್ತದೆ ಎಂದಾದರೆ ಅತ್ತ ಮುಖ ಮಾಡುವುದಿಲ್ಲ. ಕಾನಸೂರಿನಲ್ಲಿ ಬೆಳ್ಳೇಕೇರಿ ಡಾಕ್ಟರು ದುಬಾರಿ ಎಂಬ ಮಾತುಗಳು ಆಗಾಗ ಚಾಲ್ತಿಗೆ ಬರುತ್ತಿದ್ದ ಕಾಲ. ಗುಳಿಯಲ್ಲಿ ವಾಸಿಯಾಗುವ ಖಾಯಿಲೆಗಳಿಗೂ ಇಂಜೆಕ್ಷನ್ ಕೊಡುತ್ತಾರೆ ಎನ್ನುವ ದೊಡ್ಡ ಆರೋಪ ಹೊಂದಿದ್ದ ಡಾಕ್ಟರ್ ಅವರು. ಆದರೆ ನನ್ನ ಅಜ್ಜನಿಗೆ ಮಾತ್ರ ಬೆಳ್ಳೆಕೇರಿ ಡಾಕ್ಟರರೇ ಆಗಬೇಕು. ಅವರ ಕೈಗುಣವನ್ನು ನಂಬುವ ಅಜ್ಜ ಬೆಳ್ಳೇಕೇರಿ ಡಾಕ್ಟರರನ್ನು ಫ್ಯಾಮಿಲಿ ಡಾಕ್ಟರರನ್ನಾಗಿ ದತ್ತು ತೆಗೆದುಕೊಂಡಿದ್ದ.
             ಅಜ್ಜನ ಕಣ್ಣು ತಪ್ಪಿಸಿ ಅಪ್ಪ ಬೇರೆ ಕಡೆಗೆ ಡಾಕ್ಟರರ ಮನೆಗೆ ನಮ್ಮನ್ನೆಲ್ಲ ಕರೆದೊಯ್ಯಲು ನೋಡುತ್ತಿದ್ದರೆ ಅಪ್ಪನ ಯೋಜನೆ, ಯೋಚನೆ ಅದ್ಹೇಗೋ ತಣ್ಣಗಾಗಿಬಿಡುತ್ತಿತ್ತು. ಕೊನೆಗೆ ವಿಧಿಯಿಲ್ಲದೇ ಕಂಡ ಕಂಡವರನ್ನೋ ಅಥವಾ ಜೊತೆಗೆ ಇರುತ್ತಿದ್ದ ನನ್ನನ್ನೋ ಬಯ್ಯುತ್ತ ಅಪ್ಪ ಬೆಳ್ಳೇಕೇರಿ ಡಾಕ್ಟರರ ಮನೆಗೆ ಕರೆದೊಯ್ಯುತ್ತಿದ್ದ. ಆವತ್ತು ಕೂಡ ಹಾಗೆಯೇ ಆಯಿತು. ನನಗೆ ಮೂರನೇ ಇಂಜೆಕ್ಷನ್. ಅಮ್ಮನಿಗೆ ಔಷಧಿ ನೀಡುವ ಸಲುವಾಗಿ ಬೆಳ್ಳೇಕೇರಿ ಡಾಕ್ಟರರ ಮನೆಯ ಕಡೆಗೆ ಹೋದೆವು. ಅಷ್ಟಾದ ಮೇಲೆಯೇ ಬೆಳ್ಳೇಕೇರಿ ಡಾಕ್ಟರು ನನಗೆ ಮೂರನೇ ಇಂಜೆಕ್ಷನ್ನನ್ನು ಕೊಟ್ಟು `ಇವತ್ತು ಕೊನೇದು..' ಎಂದಿದ್ದು.
            ಆಮೇಲೆ ಅಮ್ಮನಿಗೂ ಹಲ್ಲುನೋವಿಗಾಗಿ ಮಾತ್ರೆ ಕೊಟ್ಟರು. ಕಬ್ಬಿಣದ ಮೊಳೆ ಕಪ್ಪಿದ್ದಕ್ಕಾಗಿ ಟಿಟಿ ಇಂಜೆಕ್ಸನ್ನನ್ನೂ ಕೊಟ್ಟರು. ಎಲ್ಲಾ ಆದ ಮೇಲೆ `ಸುಬ್ರಾಯಾ.. 400 ರುಪಾಯಿ ಆತು...' ಎಂದಾಗ ಅಪ್ಪ ಒಮ್ಮೆ ಕುಮುಟಿ ಬಿದ್ದಿದ್ದ. ಸರಕಾರಿ ಆಸ್ಪತ್ರೆಗೆ ಹೋಗಿದ್ದರೆ ನೂರು ರೂಪಾಯಿಯಲ್ಲಿ ಮುಗಿಯುತ್ತಿತ್ತು ಎಂದು ಅಲವತ್ತುಕೊಂಡ. ಹೋದ ತಪ್ಪಿಗೆ ಡಾಕ್ಟರ್ ಬಿಲ್ಲನ್ನು ಕೊಟ್ಟು ಹೊರ ಬಂದ.
         ಆಗಲೇ ಸಂಜೆ ಐದನ್ನು ದಾಟಿ ಸೂರ್ಯ ಪಶ್ಚಿಮದಲ್ಲಿ ಕಂತಲು ಆರಂಭಿಸಿದ್ದ. ಅಮ್ಮ ಕುಂಟುತ್ತಲೇ ಇದ್ದಳು. ಅಪ್ಪ ಸೈಕಲ್ಲಿನ ಮೇಲೆ ವಾಪಾಸ್ ಮನೆಗೆ ಕರೆದೊಯ್ಯಲು ಹವಣಿಸಿದ. ನಮ್ಮೂರಿಗೂ ಕಾನಸೂರಿಗೂ ನಡುವೆ ಕಾಲುದಾರಿಯಿದೆ. ರಸ್ತೆ ಮಾರ್ಗಕ್ಕಿಂತ 2 ಕಿಲೋಮೀಟರ್ ದೂರವನ್ನು ಈ ಕಾಲುದಾರಿ ಕಡಿಮೆ ಮಾಡುತ್ತದೆ. ಕಾಲುದಾರಿಯ ನಡುವೆ ಅನೇಕ ಕೊಡ್ಲುಗಳೂ, ಕಾಲು ಸಂಕಗಳೂ ಇರುವ ಕಾರಣ ಕಾಲ್ನಡಿಗೆಯಲ್ಲಿ ಹೋಗುವವರು ಮಾತ್ರ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಪರೂಪಕ್ಕೆ ಕೆಲವರು ಸೈಕಲ್ ಮೂಲಕ ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ. ಅಪ್ಪ ಆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ. ಕೊಡ್ಲು ಹಾಗೂ ಸಂಕಗಳ ಜಾಗದಲ್ಲಿ ನಮ್ಮನ್ನು ಸೈಕಲ್ಲಿನಿಂದ ಇಳಿಸಿ, ದಾಟಿಸಿ ನಂತರ ಸೈಕಲ್ ಮೇಲೆ ಕರೆದೊಯ್ಯುವುದು ಆತನ ಉದ್ದೇಶವಾಗಿತ್ತು.
           ಕಾನಸೂರಿನಿಂದ ಹೊರಟು ಅರ್ಧ ಕಿಲೋಮೀಟರ್ ಬಂದಿದ್ದೆವು. ಇಳುಕಲು ಇದ್ದ ಕಾರಣ ಅಪ್ಪ ಸಾಕಷ್ಟು ಜೋರಾಗಿಯೇ ಸೈಕಲ್ ತುಳಿಯುತ್ತ ಬರುತ್ತಿದ್ದ. ಅಮ್ಮ ಎಂದಿನಂತೆ ಒಂದು ಬದಿಯಾಗಿ ಕುಳಿತಿದ್ದರೆ ನಾನು ಸೈಕಲ್ಲಿನ ಮುಂದಿನ ಬಾರ್ ಮೇಲೆ ಅಂಡು ನೋಯಿಸಿಕೊಳ್ಳುತ್ತ ಕುಳಿತಿದ್ದೆ. ಅಲ್ಲೊಂದು ಕಡೆ ಕಾಲುದಾರಿಯ ಪಕ್ಕದಲ್ಲಿಯೇ ಮರಗಳಿವೆ. ಅಪ್ಪ ಹೋಗುತ್ತಿದ್ದ ವೇಗಕ್ಕೆ ದಡಾರ್ ಎನ್ನುವ ಶಬ್ದವಾಯಿತು. ಅಮ್ಮ ಇದ್ದಕ್ಕಿಂದ್ದಂತೆ `ಅಯ್ಯಯ್ಯೋ.. ' ಎಂದಳು. ಅಪ್ಪ ಗಾಬರಿ ಬಿದ್ದು ಸೈಕಲ್ ನಿಲ್ಲಿಸುವ ವೇಳೆಗಾಗಲೇ ಮೂರು ಸಾರಿ ಲಡ್ ಲಡ್ ಎನ್ನುವ ಸದ್ದು ಕೇಳಿಸಿತ್ತು.
           ಏನೋ ಭಾನಗಡಿ ಆಯಿತು ಎಂದುಕೊಂಡ ಅಪ್ಪ ಸೈಕಲ್ ನಿಲ್ಲಿಸಿದ. ಅಮ್ಮ ಸೈಕಲ್ಲಿನಿಂದ ಮುಕ್ಕರಿಸಿ ಬಿದ್ದಿದ್ದಳು. ಆಕೆಯ ಒಂದು ಕಾಲು ಸೈಕಲ್ ಚಕ್ರದೊಳಕ್ಕೆ ಸಿಕ್ಕಿಬಿದ್ದಿತ್ತು. ಕಾಲು ಸಿಕ್ಕಿಬಿದ್ದ ಹೊಡತಕ್ಕೆ ಸೈಕಲ್ಲಿನ ಚಕ್ರದ ಮೂರು ಕಡ್ಡಿಗಳು ಮುರಿದು ಹೋಗಿದ್ದವು. ಅಪ್ಪ ಅಸಹನೆಯಿಂದ `ತಥ್..' ಎಂದ. `ಎಂತಾ ಆತೆ..?' ಎಂದು ಅಮ್ಮನ ಬಳಿ ಕೇಳಿದ್ದ. ಅದಕ್ಕವಳು `ಅದೋ ಆ ಮರಕ್ಕೆ ಕಾಲು ತಾಗಿತು. ಮರಕ್ಕೆ ಬಡಿಯುವದನ್ನು ತಪ್ಪಿಸುವ ಸಲುವಾಗಿ ಕಾಲು ಮಡಚಿದೆ. ಆದರೆ ಅಷ್ಟರಲ್ಲಿ ಸೈಕಲ್ ಚಕ್ರದೊಳಕ್ಕೆ ಕಾಳು ಸಿಕ್ಕಿಬಿದ್ದಿತು..' ಎಂದಳು. ಅವಳ ಕಣ್ಣಲ್ಲಿ ಅಪ್ರಯತ್ನವಾಗಿ ನೀರು ಬರಲು ಆರಂಭಿಸಿತ್ತು. ಕಾಲನ್ನು ನಿಧಾನವಾಗಿ ಚಕ್ರದೊಳಗಿನಿಂದ ಬಿಡಿಸಿಕೊಂಡಳು. ಚಕ್ರದ ಕಡ್ಡಿ ತಾಗಿದ ರಭಸಕ್ಕೆ ಕಾಲು ಕೆಂಪಗಾಗಿ ಹೋಗಿತ್ತು. ಆದರೆ ರಕ್ತವೇನೂ ಬಂದಿರಲಿಲ್ಲ. ರಭಸವಾಗಿ ತೀಡಿದ್ದ ಕಾರಣ ಸೇಬು ಹಣ್ಣಿನ ಸಿಪ್ಪೆ ಸುಲಿದಂತೆ ಆಗಿತ್ತು.
              `ಥೋ... ಸೈಕಲ್ಲಿನ ಚಕ್ರದ ಕಡ್ಡಿ ಮುರಿದೋತು...' ಅಪ್ಪ ಎರಡನೇ ಸಾರಿ ನಿಡುಸುಯ್ದಿದ್ದ. ಅಮ್ಮ ನೋವಿನಲ್ಲಿಯೂ ಒಮ್ಮೆ ಅಪ್ಪನನ್ನು ದುರುಗುಟ್ಟಿ ನೋಡಿದಳು. `ನಿಂಗವ್ ಒಂದ್ ಕೆಲ್ಸ ಮಾಡಿ... ಸಾವಕಾಶವಾಗಿ ಮನೆಯ ಕಡೆ ಹೋಗ್ತಾ ಇರಿ. ಆನು ಸೈಕಲ್ ಚಕ್ರದ ಕಡ್ಡಿ ರಿಪೇರಿ ಮಾಡಿಶ್ಕ್ಯಂಡ್ ಬತ್ರಿ. ಮೂರು ಕಡ್ಡಿ ಮುರಿದು ಹೋಜು. ಹತ್, ಹದಿನೈದು ನಿಮಿಷದಲ್ಲಿ ರಿಪೇರಿ ಮಾಡ್ತಾ ಕಾನಸೂರು ಸಾಬಾ.. ಅವನ ಹತ್ರ ಮಾಡಿಶ್ಕ್ಯಂಡ್ ಬತ್ತಿ..' ಅಪ್ಪ ಹೇಳಿದ್ದ. ಅಮ್ಮನಿಗೆ ಅದೆಷ್ಟು ಬೇಜಾರಾಗಿತ್ತೋ.. `ಹೂಂ' ಎಂದಿದ್ದಳು. ಅಪ್ಪ ವಾಪಾಸು ಕಾನಸೂರು ಕಡೆ ಮುಖ ಮಾಡಿದ್ದ.

(ಮುಂದುವರಿಯುತ್ತದೆ..)
           
           

Tuesday, September 6, 2016

ಸಂಪ್ರದಾಯದ ಹಾಡುಗಳಲ್ಲಿ ಗಣೇಶ ಚತುರ್ಥಿಯ ವರ್ಣನೆ

ಮನೆ ಮನೆಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ-ಸಡಗರ ಮೇರೆ ಮೇರಿದೆ. ಎಲ್ಲ ಕಡೆಗಳಲ್ಲಿಯೂ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಯ ಹಬ್ಬಕ್ಕೆ ಸಂಪ್ರದಾಯದ ಹಾಡುಗಳಲ್ಲಿ ವಿಶೇಷ ಅರ್ಥವನ್ನೇ ನೀಡಲಾಗಿದೆ. ಮಂಗಳಮೂರ್ತಿ ವಿನಾಯಕನ ಚತುರ್ಥಿಗೆ ತನ್ನದೇ ಆದ ಹೊಸ ಅರ್ಥವನ್ನು ಹಳ್ಳಿಗಳ ಸಂಪ್ರದಾಯದ ಹಾಡುಗಳು ನೀಡುವ ಮೂಲಕ ವಿಶೇಷ ಮೆರಗಿಗೂ ಕಾರಣವಾಗಿವೆ.
ಸಂಪ್ರದಾಯದ ಹಾಡುಗಳನ್ನು ಹಬ್ಬಗಳು ನಡೆಯುವ ಸಂದರ್ಭದಲ್ಲಿ ವಿಶೇಷವಾಗಿ ಹಾಡಲಾಗುತ್ತದೆ. ಎಲ್ಲಾ ಜಾತಿಗಳವರೂ ವಿಶೇಷವಾಗಿ ಹಾಡುವ ಸಂಪ್ರದಾಯದ ಹಾಡುಗಳು ಲಯಬದ್ಧವಾಗಿಯೂ, ಕಿವಿಗೆ ಇಂಪಾಗುವ ರೀತಿಯಲ್ಲಿಯೂ ಇರುತ್ತವೆ. ಜೊತೆಜೊತೆಯಲ್ಲಿ ಗಾಂವಟಿ ಶಬ್ದಗಳನ್ನು ಒಳಗೊಂಡಿದ್ದು ಸರಳ ಭಾಷೆಯಲ್ಲಿ ಮಹತ್ತರ ಅರ್ಥಗಳನ್ನು ಜಗತ್ತಗೆ ಸಾರಿ ಹೇಳುತ್ತವೆ. ಗಣೇಶ ಹಬ್ಬದ ಕುರಿತಂತೆಯೂ ಸಾಕಷ್ಟು ಸಂಪ್ರದಾಯದ ಹಾಡುಗಳು ಚಾಲ್ತಿಯಲ್ಲಿವೆ. ವಿಭಿನ್ನ ಕಥೆಗಳೂ ಇವೆ. ನಿಮ್ಮ ಮುಂದೆ ನೀಡಲಾಗುತ್ತಿರುವ ಈ ಸಂಪ್ರದಾಯದ ಹಾಡಿನಲ್ಲಿ ಶಿವ ಹಾಗೂ ಪಾರ್ವತಿಯರ ನಡುವಿನ ಸಂವಾದ ಬೆರಗುಗೊಳಿಸುತ್ತದೆ. ಪೂರ್ವಾರ್ಧ ಹಾಗೂ ಉತ್ತರಾರ್ಧ ಎಂಬ ಎರಡು ಪ್ರಮುಖ ಭಾಗಗಳಿದ್ದು ಪಾರ್ವತಿ ತನ್ನ ತವರು ಮನೆಗೆ ಹೋಗುವುದು, ಆಕೆಯನ್ನು ಮರಳಿ ಮನೆಗೆ ಕರೆದುಕೊಂಡು ಬರಲು ಶಿವ ತನ್ನ ಪುತ್ರನಾದ ಗಣಪನನ್ನು ಕಳಿಸುವುದು ಹಾಗೂ ಮರಳಿ ಬಂದ ನಂತರ ಪಾರ್ವತಿಯ ತವರು ಮನೆಯಲ್ಲಿ ಏನೇನಾಯಿತು ಎನ್ನುವುದನ್ನು ಶಿವ ಕೇಳಿ ತಿಳಿದುಕೊಳ್ಳುವ ಸನ್ನಿವೇಶಗಳನ್ನು ಒಳಗೊಂಡಿದೆ.
ಕನಸ ಕಂಡೆನು ರಾತ್ರಿ ಬೆನಕ ತಾನಾಡುವುದ ವನಜಾಕ್ಷಿ ಗೌರಿ ಪಿಡಿದೆತ್ತಿ
ಪಿಡಿದು ಮುದ್ದಾಡುವುದ ನಿನ್ನಿರುಳು ಕಂಡೆ ಕನಸನ್ನ...
ಎಂದು ಆರಂಭವಾಗುವ ಈ ಹಾಡಿನಲ್ಲಿ ಪಾರ್ವತಿಯ ತಂದೆ ಪರ್ವತರಾಜನ ಬಳಿ ಪರ್ವತರಾಜನ ಮಡದಿ ಮಗಳು ಹಾಗೂ ಮೊಮ್ಮಗನ ನೋಡುವ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ರಾತ್ರಿ ಕನಸಿನಲ್ಲಿ ಪಾರ್ವತಿ ತನ್ನ ಪುತ್ರ ಗಣಪನನ್ನು ಎತ್ತಿ ಮುದ್ದಾಡಿದಂತೆ ಕನಸು ಬಿತ್ತು ಎನ್ನುತ್ತಾಳೆ. ನಂತರ ಮಡದಿಯ ಕೋರಿಕೆಗೆ ಅನುಗುಣವಾಗಿ ಪರ್ವತರಾಜ ಕೈಲಾಸಕ್ಕೆ ತೆರಳಿ ಶಿವ, ಪಾರ್ವತಿ ಹಾಗೂ ಗಣಪನನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಪಾರ್ವತಿ ತಾನು ತವರಿಗೆ ತೆರಳುತ್ತೇನೆ ಎಂದು ವಿನಂತಿಸಿಕೊಳ್ಳುತ್ತಾಳೆ. ಆದರೆ ಅದಕ್ಕೆ ಪ್ರತಿಯಾಗಿ ಶಿವ ಪಾರ್ವತಿಯ ಬಳಿ `ನಿನ್ನ ತವರಿನ ಜನ ಬಡವರು. ಅಲ್ಲೇಕೆ ಹೋಗುತ್ತೀಯಾ..' ಎನ್ನುತ್ತಾನೆ.
ಚಿಕ್ಕ ಬೆನವಣ್ಣನು ಚಕ್ಕುಲಿಯ ಬೇಡಿದರೆ ನೆತ್ತಿಮೇಲೋಂದ ಸೊಣೆವರೋ..
ಶ್ರೀಗೌರಿ ನೀನಲ್ಲಿಗೆ ಹೋಗಿ ಫಲವೇನೂ..?
ಎಂದು ಹೇಳುತ್ತಾನೆ. ಅಂದರೆ ಪುಟ್ಟ ಬಾಲಕನಾದ ಗಣಪ ಚಕ್ಕುಲಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಬಯಸಿ ಕೇಳಿದರೆ ಬಡವರಾದ ನಿನ್ನ ತವರಿನ ಜನ ಅದನ್ನು ಕೊಡುವ ಬದಲು ತಲೆಯ ಮೇಲೆ ಮೊಟಕಿ ಸುಮ್ಮನಿರಿಸುತ್ತಾರೆ ಎಂದು ಶಿವ ತನ್ನ ಮಡದಿಯನ್ನು ಹಂಗಿಸುತ್ತಾನೆ.
ಇಂದು ಹೋದರೆ ನೀನು ಕಂದರನು ಬಿಟ್ಟೋಗು
ಇಂದಿಗೆ ಮೂರು ದಿನದಲ್ಲಿ, ಬರದಿದ್ದರೆ ಚಂದ್ರಶೇಖರನ ಕೊರಳಾಣೆ..
ಎಂದು ಶಿವ ಹೆಂಡಿತ ಬಳಿ ಹೇಳಿ ಮೂರೇ ದಿನದಲ್ಲಿ ಮರಳಿ ಕೈಲಾಸಕ್ಕೆ ಬಾ. ತವರಿಗೆ ಕರೆಯಲು ಬಂದಿರುವ ತಂದೆಯ ಜೊತೆ ಹೋಗಲು ಬಯಸಿದರೆ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟುಹೋಗು ಎಂದು ಆಜ್ಞಾಪಿಸುತ್ತಾನೆ. ನಂತರ ಪಾರ್ವತಿ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟು ತವರಿಗೆ ಹೋಗುತ್ತಾಳೆ. ಪಾರ್ವತಿ ತವರಿಗೆ ಹೋದ ನಂತರ ಶಿವನಿಗೆ ಕೈಲಾಸದಲ್ಲಿ ಏಕಾಅಂಗಿ ಭಾವ ಕಾಡುತ್ತದೆ. ಪಾರ್ವತಿ ತವರಿಗೆ ಹೋದ ಒಂದೇ ದಿನದಲ್ಲಿಯೇ ಒಂದು ವರ್ಷವಾದಂತೆ ಅನ್ನಿಸುತ್ತದೆ. ಬೇಸರಿಸಿದ ಶಿವ ಮರುದಿನವೇ ಗಣಪನ ಬಳಿ ಆತನ ಅಜ್ಜನಮನೆಗೆ ಹೋಗಿ ತಾಯಿಯನ್ನು ಕರೆದುಕೊಂಡು ಬಾ ಎಂದು ಆಜ್ಞಾಪಿಸುತ್ತಾನೆ.
ತಾಯಿಯನ್ನು ಕರೆದುಕೊಂಡು ಬರಲು ಭೂಲೋಕಕ್ಕೆ ಬರುತ್ತಿರುವ ಗಣಪನ ಕುರಿತು ತಿಳಿದ ಭೂಲೋಕ ವಾಸಿಗಳು ಗಣಪನ್ನು ದಾರಿ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡುತ್ತಾರೆ. ಅವುಗಳನ್ನು ತಿಂದು ದೊಡ್ಡ ಹೊಟ್ಟೆಯನ್ನು ಮಾಡಿಕೊಂಡು ದಾರಿಯಲ್ಲಿ ಬರುತ್ತಿರುವಾಗ ಎಡವಿ ಬೀಳುವ ಗಣಪನ ಹೊಟ್ಟೆ ಒಡೆದು ಹೋಗುತ್ತದೆ. ಕೊನೆಗೆ ಆ ಹೊಟ್ಟೆಗೆ ಹಾವನ್ನು ಸುತ್ತುತ್ತಾನೆ ಎನ್ನುವುದು ಹಾಡಿನಲ್ಲಿ ಬರುವ ವಿವರಗಳು. ಆ ನಂತರದಲ್ಲಿ ಗಣಪನನ್ನು ನೋಡಿ ಚಂದ್ರ ನಗುವುದು ಹಾಗೂ ಚಂದ್ರನಿಗೆ ಶಾಪ ಕೊಡುವ ಕತೆಗಳೆಲ್ಲ ಪ್ರತಿಯೊಬ್ಬರಿಗೂ ತಿಳಿದಿದೆ. ನಂತರದಲ್ಲಿ ಪರ್ವತರಾಜನ ಅರಮನೆಗೆ ತೆರಳುವ ಗಣಪನಿಗೆ ವಿಶೇಷ ಪೂಜೆ ಮಾಡಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡಲಾಗುತ್ತದೆ. ಕೊನೆಯಲ್ಲಿ ಗಣಪ ತಾಯಿ ಪಾರ್ವತಿಯನ್ನು ಕರೆದುಕೊಂಡು ಕೈಲಾಸಕ್ಕೆ ಮರಳುತ್ತಾನೆ. ಪಾರ್ವತಿ ಕೈಲಾಸಕ್ಕೆ ಮರಳಿದ ನಂತರ ಆಕೆಯ ಬಳಿ ತವರಿನ ವಿಷಯ ಕೇಳಿ ಪರ್ವತರಾಜನ್ನು ಶಿವ ವ್ಯಂಗ್ಯವಾಗಿ ಆಡಿಕೊಳ್ಳುವ ಪರಿ ಸಂಪ್ರದಾಯದ ಹಾಡುಗಳನ್ನು ಸವಿವರವಾಗಿ ವರ್ಣನೆಯಾಗಿದೆ.
ಹೋದಾಗೇನನು ಕೊಟ್ಟುರ, ಬರುವಾಗೇನನು ಕೊಟ್ಟರು
ಮರೆಯದೇ ಹೇಳೆಂದ ಹರನು ತಾನು.. ಎಂದು ಶಿವ ಕುತೂಹಲದಿಂದ ಕೇಳುತ್ತಾನೆ. ಅಷ್ಟೇ ಅಲ್ಲದೇ ತನ್ನ ಪುತ್ರ ಗಣಪನ ಕುರಿತಂತೆ ಕೆಸವಿನೋಗವ ಬಡಕಲಾಗಿಹನೋ ಬೆನವಣ್ಣ ಎಂದೂ ಹೇಳುತ್ತಾನೆ. ಅಂದರೆ ಬಡವನಾದ ಪರ್ವತರಾಜ ಮನೆಯಲ್ಲಿ ಸರಿಯಾಗಿ ಆತಿಥ್ಯವನ್ನೇ ಮಾಡಿಲ್ಲ. ಪರಿಣಾಮವಾಗಿ ಗಣಪ ಬಡಕಲಾಗಿದ್ದಾನೆ ಎಂದು ಹಂಗಿಸುತ್ತಾನೆ. ಇದರಿಂದ ಪಾರ್ವತಿ ನೊಂದುಕೊಳ್ಳುತ್ತಾಳೆ. ತವರುಮನೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ಪಾರ್ವತಿಯ ಬಳಿ ತವರಿನಲ್ಲಿ ಯಾವ ರೀತಿ ಸತ್ಕರಿಸಿದರು ಎನ್ನುವುದನ್ನು ವಿವರಿಸುವಂತೆ ಕೇಳುತ್ತಾನೆ.
ಎಂದ ಮಾತನು ಕೇಳಿ ನೊಂದು ಹೇಳ್ದಳು ಗೌರಿ ಬಂಧು ಬಾಂಧವರೆಲ್ಲ ಸುಖದೊಳಿರಲಿ,
ತಂದೆ ಗಿರಿ ರಾಯನು ಹಿಂದಿನ ಹಿರಿಯನು ನಮ್ಮವರು ಬಡವರು ಇನ್ನೇನ ಕೊಟ್ಟಾರೆ ಎಂದು ತವರಿನ ಕುರಿತು ಹೇಳುತ್ತಾಳೆ.
ಬೆನವಣ್ಣಗೆ ಉಂಗುರ, ಬೆನವಣ್ಣಗೆ ಉಡಿದಾರ, ಬೆನವಣ್ಣಗೆ ಪಟ್ಟೆ ಪೀತಾಂಬ್ರವು,
ಕನಕದ ಕುಂಭದಲಿ ಬೆನಕನಿಗೆ ಭಕ್ಷ್ಯಗಳು ನಮ್ಮವರು ಬಡವರಿನ್ನೇನ ಕೊಟ್ಟಾರೆ..
ಆಸೇರು ಸಣ್ಣಕ್ಕಿ, ಮೂಸೇರು ದೊಡ್ಡಕ್ಕಿ, ನೂರ್ಸೇರು ಬೆಲ್ಲ-ತುಪ್ಪದ ಕೊಡಗಳು..
ಎಮ್ಮೆಯು ಕರ ಹಿಂಡು ಗೋವುಗಳು... ನಮ್ಮವರು ಬಡವರು ಇನ್ನೇನ ಕೊಟ್ಟಾರೆ.. ಎಂದು ತನ್ನ ತವರನ್ನು ಸಮರ್ಥನೆ ಮಾಡಕೊಳ್ಳುತ್ತಾಳೆ. ಕೊನೆಯಲ್ಲಿ ಶಿವ ಪಾಅರ್ವತಿಯ ಮಾತಿನಿಂದ ಸಮಾಧಾನಗೊಳ್ಳುತ್ತಾನೆ. ಅಲ್ಲದೇ ತಾನು ಹಂಗಿಸಿದ ಕಾರಣಕ್ಕಾಗಿ ಬೇಸರ ಮಾಡಿಕೊಂಡ ಪಾರ್ವತಿಯನ್ನು ಸಮಾಧಾನ ಮಾಡುತ್ತಾನೆ.
ಹೀಗೆ ಶಿವ-ಪಾರ್ವತಿಯರ ನಡುವಿನ ಸಂವಾದವನ್ನು ರಸವತ್ತಾಗಿ ಚಿತ್ರಿಸಿರುವ ಸಂಪ್ರದಾಯದ, ಆಡುಮಾತಿನ ಹಾಡುಗಳು ಹೊಸ ಹೊಸ ಶಬ್ದಗಳನ್ನು ಕಟ್ಟಿಕೊಡುತ್ತವೆ. ಹಳೆಯ ಸಂಪ್ರದಾಯಗಳು, ಭಕ್ಷ್ಯ-ಭೋಜನಗಳು, ಪುರಾಣದ ಕತೆಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. ಜೊತೆ ಜೊತೆಯಲ್ಲಿ ದೈವಭಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಇಂತಹ ಅದೆಷ್ಟೋ ಸಂಪ್ರದಾಯದ ಹಾಡುಗಳು ವಿನಾಯಕನ ಚತುರ್ಥಿಯ ವೈಶಿಷ್ಟ್ಯವನ್ನು ಸಾರುತ್ತ ಇಂದಿಗೂ ಪ್ರಚಲಿತದಲ್ಲಿವೆ. ಹಬ್ಬದ ಸಡಗರಕ್ಕೆ ಇಂತಹ ಹಾಡುಗಳು ಮೆರಗು ಕೊಡುತ್ತವೆ.

-------------

(ಈ ಲೇಖನವು ವಿಶ್ವವಾಣಿ ಪತ್ರಿಕೆಯ ಉತ್ತರ ಕನ್ನಡ ಆವೃತ್ತಿಯಲ್ಲಿ ಸೆ.5ರಂದು ಪ್ರಕಟವಾಗಿದೆ)