Thursday, April 30, 2015

ಅಬ್ಬರದ ಗಾಳಿ, ಮಳೆಗೆ ನಲುಗಿದ ಉಂಚಳ್ಳಿ

(ಚಲ್ಲಾಪಿಲ್ಲಿಯಾಗಿರುವ ಹಂಚು)
ಎತ್ತ ನೋಡಿದರತ್ತ ಮುರಿದು ಬಿದ್ದು ಭೂಮಿಪಾಲಾಗಿರುವ ಬಾಳೆಯ ಗಿಡಗಳು, ಅಲ್ಲಲ್ಲಿ ನೆಲಕಚ್ಚಿರುವ ತೆಂಗಿನ ಮರಗಳು, ಮುರಿತು ಬಿದ್ದ ಅಡಿಕೆಯ ಮರಗಳು, ಕಿತ್ತುಬಿದ್ದಿರುವ ಮಾವು, ಹಲಸಿನ ಮರಗಳು. ಅಬ್ಬರದ ಗಾಳಿಯ ಪರಿಣಾಮವಾಗಿ ಫಸಲು ಬಿಡುತ್ತಿದ್ದ ಮರಗಳೆಲ್ಲ ಕಿತ್ತು ಬಿದ್ದಿರುವ ದೃಶ್ಯ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಪಳೇಕೊಪ್ಪದಲ್ಲಿ ಕಾಣಸಿಗುತ್ತಿದೆ.
ತಾಲೂಕಿನಾದ್ಯಂತ ಬೀಸಿದ ಗಾಳಿ ಕೆಲವು ಕಡೆಗಳಲ್ಲಿ ತೀವ್ರ ಪ್ರತಾಪವನ್ನೇ ತೋರಿದೆ. ಮಳೆಯಿಂದ ಹಾನಿ ಅಷ್ಟಾಗಿ ಸಂಭವಿಸದೇ ಇದ್ದರೂ ಮಳೆಗೂ ಪೂರ್ವ ಬೀಸಿದ ಅಬ್ಬರದ ಗಾಳಿಗೆ ಉಂಚಳ್ಳಿ, ಕೆರೆಕೊಪ್ಪ ಹಾಗೂ ಉಪಳೇಕೊಪ್ಪಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ. ಕೆರೆಕೊಪ್ಪದಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಮುರಿದು ಬಿದ್ದು ಹಾನಿ ಸಂಭವಿಸಿದ್ದರೆ ಉಂಚಳ್ಳಿಯಲ್ಲಿ 10ಕ್ಕೂ ಅಧಿಕ ತೆಂಗಿನ ಮರಗಳು ನೆಲಕಚ್ಚಿವೆ. ಉಪಳೇಕೊಪ್ಪದಲ್ಲಂತೂ ಗಾಳಿಯ ಹಾನಿ ತೀವ್ರವಾಗಿತ್ತು. ಸಂಜೆ 6 ಗಂಟೆಯ ಸುಮಾರಿಗೆ 20 ರಿಂದ 25 ನಿಮಿಷಗಳ ಕಾಲ ಬೀಸಿದ ಅಬ್ಬರದ ಗಾಳಿಗೆ ಗ್ರಾಮದ 8-10 ಮನೆಗಳ ಹಂಚುಗಳು ಹಾರಿ ಹೋಗಿದೆ. ವಿದ್ಯುತ್ ತಂತಿಗಳ ಮೇಲೂ ಮರಗಳು ಮುರಿದು ಬಿದ್ದಿದ್ದು ತಂತಿಗಳು ತುಂಡಾಗಿದೆ. 5-10 ವಿದ್ಯುತ್ ಕಂಬಗಳು ಮುರಿದು ಹೋಗಿದೆ.
ಉಪಳೇಕೊಪ್ಪದ ವಿಘ್ನೇಶ್ವರ ಗೋವಿಂದ ನಾಯ್ಕ ಅವರು 3 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದರು. ಅವರು ಬೆಳೆದ ಬಾಳೆ ಇನ್ನೊಂದೆರಡು ತಿಂಗಳಿನಲ್ಲಿ ಫಸಲನ್ನು ಬಿಡಲು ತಯಾರಾಗಿತ್ತು. 2 ಲಕ್ಷಕ್ಕೂ ಅಧಿಕ ರು. ಖರ್ಚು ಮಾಡಿ ಬಾಳೆಯನ್ನು ಬೆಳೆದಿದ್ದ ಅವರು ಲಕ್ಷಗಟ್ಟಲೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಬಿರುಗಾಳಿ ಅವರ ಆಸೆಯನ್ನು ಮಣ್ಣುಪಾಲು ಮಾಡಿದೆ. ತೋಟದಲ್ಲಿ ಬಹುತೇಕ ಬಾಳೆಯ ಮರಗಳು ಕಿತ್ತು ಬಿದ್ದಿದೆ. ಇಷ್ಟೂ ಸಾಲದು ಎನ್ನುವಂತೆ ತೋಟದ ಸುತ್ತಮುತ್ತಲೂ ಬೆಳೆದಿದ್ದ ದೈತ್ಯ ಮರಗಳು ಬಾಳೆಯ ತೋಟದ ಮೇಲೆ ಕಿತ್ತು ಬಿದ್ದಿವೆ. ಮನೆಯ ಪಕ್ಕದಲ್ಲೇ ಇದ್ದ ಹಲಸಿನ ಮರವೊಂದು ಕಿತ್ತು ಬಿದ್ದಿದೆ. ಇದರಿಂದಾಗಿ ಇನ್ನೂ ಬೆಳೆಯದ 150ಕ್ಕೂ ಅಧಿಕ ಹಲಸಿನ ಕಾಯಿ ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಫಲ ಬರುತ್ತಿದ್ದ ತೆಂಗಿನ ಮರ ಮುರಿದು ಬಿದ್ದಿದೆ. ಎರಡು ಗೇರು ಮರಗಳು ಕಿತ್ತು ಬಿದ್ದಿವೆ. 200 ಕ್ಕೂ ಅಧಿಕ ಹಂಚುಗಳು ಗಾಳಿಗೆ ಹಾರಿ ಹೋಗಿದೆ.
ಕವಿ, ಬರಹಗಾರ ಎನ್. ವಿ. ಮಂಜುನಾಥ ಅವರ ಮನೆಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಅವರ ಮನೆಯ 500 ಹಂಚುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿ ಪುಡಿ ಪುಡಿಯಾಗಿದೆ. ಮಾವಿನ ಮರವೊಂದು ಕೊಟ್ಟಿಗೆಯ ಮೇಲೆ ಉರುಳಿ ಬಿದ್ದಿದೆ. 25 ವರ್ಷ ಪ್ರಾಯದ ಕಳೆದ 15 ವರ್ಷಗಳಿಂದ ಫಲ ನೀಡುತ್ತಿದ್ದ ತೆಂಗಿನ ಮರ ಅರ್ಧದಲ್ಲಿಯೇ ಮುರಿದು ಬಿದ್ದಿದೆ. ಮೇವಿಗಾಗಿ ಹುಲ್ಲನ್ನು ತಂದು ಪೇರಿಸಿ ಇಡಲಾಗಿತ್ತು. ಅದರ ಮೇಲೆ ದೈತ್ಯ ಮಾವಿನ ಮರ ಉರುಳಿದೆ. ತೋಟದಲ್ಲಿದ್ದ ಬಾಳೆಯ ಗಿಡಗಳಂತೂ ಅರ್ಧದಲ್ಲಿಯೇ ಮುರಿದು ನಿಂತಿದೆ. 25ಕ್ಕೂ ಅಧಿಕ ಅಡಿಕೆಯ ಮರಗಳು ಗಾಳಿಯ ಅಬ್ಬರಕ್ಕೆ ಮುರಿದು ಹೋಗಿದೆ.
      ಉಪಳೇಕೊಪ್ಪದ ಜಾನಕಿ ನಾರಾಯಣ ನಾಯ್ಕ, ಜಗದೀಶ ರಾಮ ನಾಯ್ಕ, ವೀರಭದ್ರ ಶೇಷಗಿರಿ ನಾಯ್ಕ, ನೀಲಕಂಠ ರಾಮ ನಾಯ್ಕ, ಸುರೇಶ ಗಣಪತಿ ನಾಯ್ಕ, ವಿಘ್ನೇಶ್ವರ ಗಣಪತಿ ನಾಯ್ಕ, ಲೋಕೇಶ ಗೋಪಾಲ ನಾಯ್ಕ, ಕೇಶವ ಶ್ರೀಧರ ನಾಯ್ಕ, ಕನ್ನ ಬಡಿಯಾ ನಾಯ್ಕ, ವೆಂಕಟೇಶ ರಾಮ ನಾಯ್ಕ ಅವರ ಮನೆಯ ಹಂಚುಗಳು ಹಾರಿ ಹೋಗಿದೆ. ಫಲ ಬಿಡುತ್ತಿದ್ದ ಹಣ್ಣಿನ ಮರಗಳು ಕಿತ್ತು ಬಿದ್ದಿವೆ. ಅಷ್ಟೇ ಅಲ್ಲದೇ ಬಾಳೆಯ ಮರಗಳು, ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಮುನಿದ ಪ್ರಕೃತಿ ಅದೆಷ್ಟೋ ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಅದೆಷ್ಟೋ ಲಕ್ಷ ರು. ಆದಾಯವನ್ನು ತರಬೇಕಿದ್ದ ಹಣ್ಣಿನ ಮರಗಳು, ತೋಟಗಾರಿಕೆ ಗಿಡಗಳೆಲ್ಲ ಧರಾಶಾಹಿಯಾಗಿವೆ. ಇದರಿಂದಾಗಿ ಉಪಳೇಕೊಪ್ಪದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗಾಳಿಯ ಅಬ್ಬರ ಉಪಳೇಕೊಪ್ಪಕ್ಕೆ ಸೀಮಿತವಾಗದೇ ಹಳೆ ಉಂಚಳ್ಳಿ, ಉಂಚಳ್ಳಿ ಹಾಗೂ ಕೆರೆಕೊಪ್ಪಗಳಲ್ಲಿಯೂ ಪ್ರತಾಪವನ್ನು ತೋರಿದೆ. ಕನಿಷ್ಟ 25 ಲಕ್ಷಕ್ಕೂ ಅಧಿಕ ರು. ಹಾನಿಯಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಬಡ, ಕೂಲಿ ಕಾರ್ಮಿಕರಾದ ಉಪಳೇಕೊಪ್ಪದ ನಿವಾಸಿಗಳು ಪ್ರಕೃತಿಯ ಮುನಿಸಿನ ಪರಿಣಾಮ ಕಂಗಾಲಾಗಿದ್ದಾರೆ. ಜೀವನಾಧಾರವಾಗಿದ್ದ ಬೆಳೆಯೆಲ್ಲ ಮಣ್ಣುಪಾಲಾಗಿರುವ ಕಾರಣ ಮುಂದೆ ಜೀವನವನ್ನು ಯಾವ ರೀತಿ ನಡೆಸಬೇಕು ಎನ್ನುವುದು ತಿಳಿಯದೇ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಕೂಡಲೇ ಬೆಳೆಹಾನಿಯನ್ನು ಅಂದಾಜು ಮಾಡಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಿರಸಿಯ ತಹಶಿಲ್ದಾರ್ ಬಸಪ್ಪ ಪೂಜಾರ, ಶಾನುಭೋಗರಾದ ಆರ್. ಎಂ. ನಾಯ್ಕ ಹಾಗೂ ಉಂಚಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರೆಯ ಭಟ್ ಅವರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
***
25 ನಿಮಿಷ ಬೀಸಿದ ಗಾಳಿ 25 ವರ್ಷಗಳ ಶ್ರಮವನ್ನು ಮಣ್ಣುಪಾಲು ಮಾಡಿದೆ. ಮನೆಯ ಮಕ್ಕಳಂತೆ ಪ್ರೀತಿಯಿಂದ ಸಲಹಿ ಬೆಳೆಸಿದ್ದ ಗಿಡ ಮರಗಳೆಲ್ಲ ನೆಲಕಚ್ಚಿವೆ. ದೇವರು ನಮ್ಮ ಮೇಲೆ ಯಾಕೆ ಸಿಟ್ಟಾಗಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ರಾತ್ರಿಯ ಅಬ್ಬರದ ಗಾಳಿ ಎಲ್ಲರಲ್ಲೂ ಭಯವನ್ನು ಹುಟ್ಟು ಹಾಕಿದೆ. ಮರಗಳನ್ನೆಲ್ಲ ತಿರುಗಿಸಿ ತಿರುಗಿಸಿ ಒಗೆಯುತ್ತಿತ್ತು. ಮನೆಯ ಹಂಚುಗಳನ್ನೆಲ್ಲ ಹಾರಿಸುತ್ತಿತ್ತು. ನಮಗೆ ಮನೆಯೊಳಗೆ ಕುಳಿತುಕೊಳ್ಳಲೂ ಭಯ, ಮನೆಯಿಂದ ಹೊರಗೆ ಬರಲೂ ಭಯ ಎನ್ನುವಂತಾಗಿತ್ತು.
ರಾಧಾ ವೆಂಕಟ್ರಮಣ ನಾಯ್ಕ
ಉಪಳೇಕೊಪ್ಪ
ಅಧಿಕಾರಿಗಳು ನಮ್ಮೂರಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ಅಂದಾಜು ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟು ಹೋಗಿದ್ದಾರೆ. ಸರ್ಕಾರ ನಮಗೆ ಕೊಡುವ ಪರಿಹಾರ ಸಾವಿರ ಸಾವಿರ ರು.ಗಳ ಮಟ್ಟದಲ್ಲಿರುತ್ತದೆ. ಆದರೆ ನಮಗೆ ಆಗಿರುವ ಹಾನಿ ಮಾತ್ರ ಲಕ್ಷಾಂತರ ರು. ಸರ್ಕಾರ ನೀಡುವ ಪರಿಹಾರವೂ ಇನ್ನೂ ನಾಲ್ಕೈದು ತಿಂಗಳುಗಳ ನಂತರ ನಮ್ಮ ಕೈಗೆ ತಲುಪುತ್ತದೆ. ಆದ್ದರಿಂದ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬವನ್ನು ಮಾಡಬಾರದು. ಆಗಿರುವ ಹಾನಿಯನ್ನು ಸರಿಯಾಗಿ ಅಂದಾಜು ಮಾಡಿ ಅದಕ್ಕೆ ತಕ್ಕ ಪರಿಹಾರ ಒದಗಿಸಬೇಕಾಗಿದೆ.
ವೆಂಕಟೇಶ ರಾಮಾ ನಾಯ್ಕ

Tuesday, April 28, 2015

ಅಂ-ಕಣ-5

ಸ್ವಲ್ಪ ವಿಚಿತ್ರ ಬಾಸ್ :

ಮನೆಗಳಿಗೆ ಚಿತ್ರ ವಿಚಿತ್ರ ಹೆಸರಿಡುವುದು ಫ್ಯಾಷನ್..
ಅಂತದ್ದೊಂದು ವಿಚಿತ್ರ ಹೆಸರು
.....
ಪ್ರವೇಶ-ವಿಲ್ಲಾ !!

ಒಟ್ಟಿಗೆ ಓದಿ ಹಾಗೂ ಬಿಡಿಸಿ ಓದಿ

ಇನ್ನೊಂದು ಮನೆಯ ಎದುರು ಕಂಡ ಹೆಸರು
ರಾಧಾ ಕೇ ಶವ್ |


ಸುಮ್ನೆ ಒಂದು ದುರಾಲೋಚನೆ :

ರಾಮಂಗೂ ಮಾರ್ಚ್ ಎಂಡು
ಭೀಮಂಗೂ ಮಾರ್ಚ್ ಎಂಡು..
ನಿಂಗೂ ಮಾರ್ಚ್ ಎಂಡು..
ನನಗೂ ಮಾರ್ಚ್ ಎಂಡು..
ಈ ಮಾರ್ಚ್ ತಿಂಗಳಿಂದಲೇ ಇಷ್ಟೆಲ್ಲ ಸಮಸ್ಯೆ..
ಮಾರ್ಚ್ ತಿಂಗಳು ಇಲ್ಲದೇ ಇರುವ ಕ್ಯಾಲೆಂಡರ್ ತಂದರೆ ಹೇಗೆ?

ಸುಮ್ನೆ ಒಂದ್ ಟಾಂಗು :

ಇವತ್ತು ಮನೆ
ಮನೆಗಳಲ್ಲಿ
ಕ್ಯಾಂಡಲ್ ಲೈಟ್ ಡಿನ್ನರ್
ಕಾರಣ
ವಿದ್ಯುತ್ ವ್ಯತ್ಯಯ ||

ಮತ್ತೊಂಚೂರು ಹಿಡಿಶಾಪ :

ಓಹ್..
ಮತ್ತೊಮ್ಮೆ  ಕ್ಯಾಂಡಲ್
ಲೈಟ್ ಡಿನ್ನರ್ |
ವಿದ್ಯುತ್ ವ್ಯತ್ಯಯದೊಂದಿಗೆ
ಸಹಕರಿಸಿದ್ದಕ್ಕಾಗಿ
ಥ್ಯಾಂಕ್ಸ್ ಟು ಹೆಸ್ಕಾಂ ||

Saturday, April 18, 2015

ಅಘನಾಶಿನಿ ಕಣಿವೆಯಲ್ಲಿ-16


             ಹದಿನೈದು ನಿಮಿಷದ ಧ್ಯಾನ ಮುಗಿಸಿ ಬಂದ ವಿನಾಯಕನ ಎದುರು ವಿಜೇತಾ ಒಂದು ದೊಡ್ಡ ಪತ್ರಗಳ ಕಟ್ಟನ್ನೇ ಹಿಡಿದು ತಂದು `ಇದೇನು?' ಎಂದು ಕೇಳಿದಳು.
              ಅವಳ ಕೈಯೊಳಗಿನ ಪತ್ರಗಳ ಕಟ್ಟನ್ನು ನಿಧಾನವಾಗಿ ಇಸಿದುಕೊಂಡ ವಿನಾಯಕ ದೊಡ್ಡದೊಂದು ನಿಟ್ಟುಸಿರಿನೊಂದಿಗೆ ಮಾತು ಪ್ರಾರಂಭಿಸಿದ. `ಇದು ನನ್ನ ಬಾವಯಾನದ ಚಿಕ್ಕ ತುಣುಕುಗಳು. ಇದರೊಳಗೆ ಇದ್ದಿದ್ದೆಲ್ಲ ಪತ್ರಗಳು. ಪತ್ರಮೈತ್ರಿ ಅನ್ನುತ್ತೀವಲ್ಲ. ಅದೇ ಇದು. ಎಂದೊ ಒಮ್ಮೆ ತುಂಬ ಉತ್ಸಾಹದ ದಿನಗಳಲ್ಲಿ ಮಾಡುತ್ತಿದ್ದ ಹಲವು ಕೆಲಸಗಳಲ್ಲಿ ಇದೂ ಒಂದು. ಆಗ ನಾಡಿನ ಮೂಲೆ ಮೂಲೆಯಿಂದ ಈ ವಿನಾಯಕನಿಗೆ ಪತ್ರಗಳು ಬರುತ್ತಿದ್ದವು. ಯಾರ್ಯಾರೋ ಪತ್ರ ಬರೆಯುತ್ತಿದ್ದರು..' ಎಂದ.
              `ಅಂದರೆ ಈಗ ಇಲ್ವಾ?' ಕೇಳಿದಳು ವಿಜೇತಾ
              `ಈಗ ನನ್ನ ಪತ್ರ ಮೈತ್ರಿ ಬಹುತೇಕ ಸತ್ತು ಹೋಗಿದೆ. ಇದೆಲ್ಲ ಮೊಬೈಲ್ ಇನ್ನೂ ಮನೆಮಾತು ಆಗಿರದ ಕಾಲದ್ದು. ಆಗಿನ್ನೂ ನೋಕಿಯಾದ ಬೇಸಿಕ್ ಮೊಬೈಲುಗಳು ಎಲ್ಲೆಡೆ ಇದ್ದ ಕಾಲ. ನನಗೆ ಬರೆಯುವ ಹುಕಿ ಬಹಳ ಇತ್ತು. ಆಗ ಮಾಡಿದ ಹಲವಾರು ಕಾರ್ಯಗಳಲ್ಲಿ ಇದೂ ಒಂದು. ಕಾಲ ಬದಲಾಯ್ತು. ಈಗ ಪತ್ರಗಳನ್ನು ಯಾರು ಬರೀತಾರೆ ಹೇಳು. ಬರೀ ಮೊಬೈಲು, ಫೇಸ್ ಬುಕ್ಕು ವಾಟ್ಸಾಪು..' ಎಂದು ನಿಟ್ಟುಸಿರು ಬಿಟ್ಟ ವಿನಾಯಕ.
               `ಆದರೂ ಪತ್ರ ಬರೆಯಬಹುದಿತ್ತಲ್ವಾ? ಯಾಕೆ ಮುಂದುವರೆಸಲಿಲ್ಲ..' ಪಟ್ಟು ಬಿಡದೇ ಕೇಳಿದಳು ವಿಜೇತಾ..
               `ಬಿಡಿ.. ಕೆಲವು ವಿಷಯಗಳಿಗೆ ಕಾರಣಗಳನ್ನು ಹೇಳಲು ಆಗುವುದಿಲ್ಲ. ಹೇಳಿದರೆ ಮನಸ್ಸು ಕಲ್ಲವಿಲವಾಗುತ್ತದೆ. ಕೆಲವಕ್ಕೆ ಕಾರಣಗಳು ಇರುವುದಿಲ್ಲ. ನನ್ನ ಪತ್ರ ಮೈತ್ರಿ ಸಾಯಲು ಕಾರಣ ಇದೆ ಎಂದರೆ ಇದೆ. ಇಲ್ಲ ಎಂದರೆ ಇಲ್ಲ. ನನಗಾಗಿ ಬರೆದವರು ಅನೇಕ. ಆದರೆ ನಾನೇ ಮುಂದುವರೆಸಲಿಲ್ಲ. ಎಲ್ಲವನ್ನೂ ಕೊನೆಗೊಳಿಸಕೊಂಡೆ ನೋಡು..' ಎಂದ ವಿನಾಯಕ.
               `ಯಾಕೆ? ಯಾಕೆ ಹಾಗೆ ಮಾಡ್ಕೊಂಡ್ರಿ..?' ಎಂದು ಕೇಳಿದಳು ವಿಜೇತಾ. ವಿನಾಯಕ ಕಾರಣ ಹೇಳಲೇ ಇಲ್ಲ. ವಿಜೇತಾ ಅದೆಷ್ಟೋ ಬಗೆಯಲ್ಲಿ ಕೇಳಿದರೂ ವಿನಾಯಕ ಮಾತ್ರ ನಿರುತ್ತರನಾಗಿದ್ದ. ಕೆಲವು ಸಾರಿ ನಿಸ್ಸಾರ ಉತ್ತರಗಳನ್ನೇ ಕೊಟ್ಟ. ಬೇಸರಗೊಂಡ ವಿಜೇತಾ ಕೇಳುವುದನ್ನು ನಿಲ್ಲಿಸಿದಳು. ಆದರೆ ವಿನಾಯಕನ ಮೇಲೆ ವಿಜೇತಾಳಿಗೆ ಕುತೂಹಲ ಹೆಚ್ಚಿತ್ತು. ಮೊದಲೇ ಇದ್ದ ಕುತೂಹಲ ದುಪ್ಪಟ್ಟಾಗಿತ್ತು. ಕವಿ, ಬರಹಗಾರ, ಸಿದ್ಧಾಂತಿ, ಪತ್ರ ಮೈತ್ರಿ ಮಾಡುವವನು, ಹಾಡುಗಾರ, ಇಂತಹ ಅದೆಷ್ಟೋ ಪ್ರತಿಭೆಗಳ ಸಂಗಮವಾಗಿದ್ದ ವಿನಾಯಕ ಯಾಕೋ ಜಗತ್ತಿನ ಕಡೆಗೆ ಬೇಸರಿಸಿಕೊಂಡಿದ್ದಾನೆ. ಪ್ರತಿಯೊಂದರಲ್ಲಿಯೂ ಆತನಿಗೆ ನಿಸ್ಸಾರ. ತಾತ್ಸಾರ. ಮೊದಲಿನ ಉತ್ಸಾಹ ಕಳೆದು ಹೋಗಿದೆಯೇನೋ ಅನ್ನುವ ಭಾವನೆಯಲ್ಲಿದ್ದಾನೆ. ಇದನ್ನು ಕಂಡುಹಿಡಿಯಬೇಕಲ್ಲ ಎಂದುಕೊಂಡಳು ವಿಜೇತಾ.

***15***

              ಮರುದಿನ ಎಂದಿನಂತೆ ಬೆಳಗಾಯಿತು. ಮೂಡಣದಲ್ಲಿ ಸೂರ್ಯ ಚಿನ್ನದ ಹಾಸಿಗೆ ಹಾಸಿ, ಹೂ ಚೆಲ್ಲಿ, ನಗು ನಗುತ್ತಾ ಮೂಡಿ ಬಂದ. ಎಲ್ಲರೂ ಮೊದಲೇ ನಿರ್ಧಾರ ಮಾಡಿಕೊಂಡಂತೆ ಹೊರಟಿದ್ದು ಹಿಮದೆ ಐವತ್ತು ವರ್ಗಷಳಾಚೆ ಕರೆಂಟು (ವಿದ್ಯುತ್) ಉತ್ಪಾದಿಸುತ್ತಿದ್ದ ಸ್ಥಳ ನೋಡಲು.
              ಹಳೆಯ ಭವ್ಯ ಭವಂತಿ ಮನೆಗೆ ಎಲ್ಲರನ್ನೂ ಕರೆದೊಯ್ದ ವಿನಾಯಕ. ` ಈ ಮನೆಯಲ್ಲಿಯೇ ಹಿಂದೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರು..' ಎಂದು ಹೇಳುತ್ತಿದ್ದಂತೆಯೇ ಆ ಮನೆಯ ಯಜಮಾನರಾದ ಗಣಪತಿ ಹೆಗಡೆಯವರು ಹಳೆಯ ಮನೆಯ ಕತ್ತಲೆಯಾಳದಿಂದ ಕೋಲೂರಿಕೊಂಡು ನಡೆದು ಬಂದರು. ಕತ್ತಲೆಯಿಮದ ಹೊರ ಬಂದ ಅವರಿಗೆ ಹೊರಗಿನ ಬೆಳಕಿಗೆ ಕಣ್ಣನ್ನು ಹೊಂದಿಸಿಕೊಳ್ಳಲು ಕೆಲ ಕ್ಷಣಗಳು ಬೇಕಾದವು. ನಂತರ ಕನ್ಣಿಗೆ ಬಿದ್ದ ಯುವ ಪಡೆಯನ್ನು ಮೂಕ ವಿಸ್ಮಿತರಾಗಿ ನೋಡುತ್ತಿದ್ದಂತೆಯೇ ವಿನಾಯಕ ಬಂದವರೆಲ್ಲರನ್ನೂ ಪರಸ್ಪರ ಪರಿಚಯ ಮಾಡಿಕೊಟ್ಟ.
           `ಓಹೋ.. ನಮ್ಮೂರಿಗೆ ಯಾರೋ ಬಂಜ್ವಡಾ ಹೇಳಿ ಕೇಳಿದ್ದೆ.. ನೀವೇಯೋ ಬಂದವ್ರು..' ಎಂದು ಕೇಳಿದರು. ಮನೆಗೆ ಯುವಕರು ಬಂದಿದ್ದರಿಂದ ತೊಂಭತ್ತರ ಗಣಪಜ್ಜ ಹುರುಪು ಬಂದವರಂತೆ  `ಓಹೋ ನಿಂಗವೆಲ್ಲಾ ಕರೆಂಟು ಉತ್ಪಾದನೆ ಮಾಡ್ತಿದ್ದಿದ್ದ ಹೇಳದ್ನ ಕೇಳ್ಕಂಡು.. ಅದನ್ನ ನೋಡಲೆ ಬಂಜ್ರಾ.. ಬನ್ನಿ ತೋರಿಸ್ತೆ...' ಎಂದು ಕರೆದೊಯ್ದರು. ಅಲ್ಲಿದ್ದ ಯುವಕರೆಲ್ಲ ಅಜ್ಜನಿಗೆ ವಯಸ್ಸಾಗಿದೆ. ಬೇರೆ ಯಾರಾದರೂ ತೋರಿಸಿದರೆ ನೋಡಬಹುದು. ಅಜ್ಜನಿಗೆ ಆರಾಮಾಗಿ ಕುಳಿತುಕೊಳ್ಳಲು ಹೇಳೋಣ ಎಂದುಕೊಂಡರಾದರೂ ಅಜ್ಜನ ಹುರುಪನ್ನು ಕಂಡು ಬಾಯಿ ಬಿಡಲಿಲ್ಲ.
           ಮನೆಯ ಹಿಂಭಾಗದಲ್ಲಿಯೇ ಇದ್ದ ದೊಡ್ಡದೊಂದು ಗುಡ್ಡವನ್ನು ಹತ್ತಿಸಿದ ಅಜ್ಜ. ಎದೆಯ ಮಟ್ಟಕ್ಕಿಂತ ಎತ್ತರಕ್ಕಿದ್ದ ಗುಡ್ಡವನ್ನು ಯುವ ಪಡೆ ಏದುಸಿರು ಬಿಡುತ್ತ ಹತ್ತಿತು. ಆದರೆ 90ರ ಅಜ್ಜ ಆಯಾಸವಿಲ್ಲದೇ ಹತ್ತಿದ. ಗುಡ್ಡದ ಮೇಲೊಂದು ಬಹುದೊಡ್ಡ ನೀರು ಸಂಗ್ರಹಾಗಾರವಿತ್ತು. ಅನಾಮತ್ತು 10 ಸಾವಿರಕ್ಕೂ ಅಧಿಕ ಲೀಟರ್ ನೀರನ್ನು ಸಂಗ್ರಹ ಮಾಡಲಾಗುವಂತಹ ಬಹುದೊಡ್ಡ ಟ್ಯಾಂಕ್ ಅದು. ಇನ್ನೂ ಹೆಚ್ಚಿನ ನೀರನ್ನು ಸಂಗ್ರಹ ಮಾಡಬಹುದಿತ್ತೇನೋ. ಬಹುದೊಡ್ಡದಾಗಿದ್ದ ತೊಟ್ಟಿ ಇದೀಗ ಒಡೆದು ಹೋಗಿತ್ತು. ಒಂದು ಪಾರ್ಶ್ವ ಕುಸಿದು ಬಿದ್ದಿತ್ತು. ಆ ನೀರಿನ ಟ್ಯಾಂಕ್ ಇದೀಗ ಅವಸಾನದ ಕೊನೆಯ ಮೆಟ್ಟಿಲಿನಲ್ಲಿತ್ತು. ಮಾತನಾಡಲು ಆರಂಭಿಸಿದ ಅಜ್ಜ `ಇದೋ ನೋಡಿ ಇದೇ ಟ್ಯಾಂಕಿನಲ್ಲಿ ನೀರನ್ನು ಸಂಗ್ರಹ ಮಾಡಲಾಗುತ್ತಿತ್ತು. ಈ ಟ್ಯಾಂಕಿಗೆ ಕನಿಷ್ಟ ಮೂರು ಕಿಮಿ ದೂರದಿಮದ ನೀರು ಹರಿದು ಬರುತ್ತಿತ್ತು. ನಮ್ಮೂರಿನ ಎತ್ತರದ  ಗುಡ್ಡದ ಮೇಲೊಂದು ಕೆರೆಯಿದೆ. ಅದರಿಂದ ನೀರು ಬರುತ್ತಿತ್ತು. ಈ ಟ್ಯಾಂಕಿನಲ್ಲಿ ಸಂಗ್ರಹ ಮಾಡಿ, ಕೆಳಗೆ ಮನೆಯ ಬಳಿ ಚಿಕ್ಕ ಗಾತ್ರದ ಟರ್ಬೈನ್ ಕೂರಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.. ನೋಡಿ..' ಎಂದರು.
            `ಅಜ್ಜಾ.. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದುದು ಯಾವಾಗ?' ಎಂದು ಕೇಳುದ್ದಳು ವಿಜೇತಾ..
            `ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭ ಮಾಡಿದ್ದು. ಯನ್ನ ಅಪ್ಪಯ್ಯ ಗಣೇಶ ಹೆಗಡೆ ವಿದ್ಯುತ್ ಉತ್ಪಾದನೆ ಕಾರ್ಯಕ್ಕೆ ಮುಂದಾಗಿದ್ದು. ನಂತರ ಆನೂ ಸುಮಾರ್ ವರ್ಷ ವಿದ್ಯುತ್ ಉತ್ಪಾದನೆ ಮಾಡ್ತಿದ್ದಿ. 1972ರ ಸಮಯದಲ್ಲಿ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಕಾರ್ಯ ಶುರು ಆತು. ಆವಾಗ ನಮ್ಮೂರಿಗೆ ಕರೆಮಟ್ ಬಂತು. ಆಮೇಲೆ ಈ ವಿದ್ಯುತ್ ಉತ್ಪಾದನೆ ಕಾರ್ಯ ನಿಲ್ಲಿಸಿದ್ಯ..' ಎಂದರು ಗಣಪಜ್ಜ.
           ಎಲ್ಲರೂ ಬೆರಗಾಗಿ ಕೇಳುತ್ತಿದ್ದರು. ಮನೆ ಮನೆಗಳಲ್ಲಿ ಕಿರು ಜಲವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಇದೀಗ ಎಲ್ಲ ಕಡೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಕಾರ್ಯವನ್ನು ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿಯೇ ಕೈಗೊಮಡ ಗಣಪಜ್ಜ ಹಾಗೂ ಗಣೇಶಜ್ಜನ ಬಗ್ಗೆ ಹೆಮ್ಮೆ ಮೂಡಲಾರಂಭಿಸಿತ್ತು. ಗುಡ್ಡವನ್ನು ಇಳಿಸಿಕೊಂಡು ಎಲ್ಲರನ್ನೂ ಕರೆದೊಯ್ದ ಗಣಪಜ್ಜ. ಗುಡ್ಡದ ಕೆಳಭಾಗದಲ್ಲಿ ಒಮದು ಕಡೆ ನಿಲ್ಲಿಸಿದ. ಅಲ್ಲೊಂದು ದೊಡ್ಡ ದಿಬ್ಬ, ಮುರಿದು ಹೋಗಿದ್ದ ಕೆಲವು ಯಂತ್ರಗಳಿದ್ದವು. `ಇದೇ ನೋಡಿ.. ಟರ್ಬೈನ್ ಕೂರಿಸಿದ್ದ ಜಾಗ..' ಎಂದ.
           ಯಾವುದೋ ಕಾಲದಲ್ಲಿ ಮುರಿದು ಬಿದ್ದಂತಿತ್ತು. ಯಂತ್ರದ ಬಿಡಿ ಭಾಗಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. `ಅಜ್ಜಾ.. ಯಾಕೆ ಈ ವಿದ್ಯುತ್ ಉತ್ಪಾದನಾ ಯಂತ್ರ ಹೀಗಾಗಿದೆ.? ಯಾಕೆ ನೀವು ನಂತರದ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಿಲ್ಲ?' ವಿಜೇತಾಳೇ ಕೇಳಿದ್ದಳು.
           `ಜೋಗದ ವಿದ್ಯುತ್ ಬಂತಲೆ ತಂಗಿ.. ಆ ವಿದ್ಯುತ್ ಎಲ್ಲ ಕಡೆ ಬಳಕೆ ಮಾಡಲೆ ಹಿಡಿದ. ನಂತರದ ದಿನಗಳಲ್ಲಿ ಈ ವಿದ್ಯುತ್ ಉತ್ಪಾದನೆ ಮಾಡೋದು ಕಷ್ಟದ ಕೆಲಸ ಅನ್ನಿಶ್ಚು. ಕಡಿಮೆ ದರದಲ್ಲಿ ಜೋಗದ ವಿದ್ಯುತ್ ಸಿಗಲೆ ಶುರು ಆತು. ಆವಾಗ ಇದನ್ನು ಬಿಡದೇ ಆಗ್ತು ಅಲ್ದಾ.. ನಿರ್ವಹಣೆ ಮಾಡೋದು ಕಷ್ಟ ಆಗ್ತಾ ಬಂತು ನೋಡು.. ಯನ್ನ ತರುವಾಯ ಮತ್ಯಾರೂ ಮಾಡವ್ ಇಲ್ಲೆ ಅನ್ನಿಶಿ ಬಿಟ್ ಹಾಕಿದಿ.. ಕಾಲ ಕ್ರಮೇಣ ಎಲ್ಲಾ ಹಾಳಾಗೋತು..' ಎಂದು ನಿಟ್ಟುಸಿರು ಬಿಟ್ಟರು ಗಣಪಜ್ಜ.
           `ಸುಮಾರ್ ಎಷ್ಟು ಪ್ರಮಾಣದಲ್ಲಿ ಕರೆಂಟು ಉತ್ಪಾದನೆ ಮಾಡ್ತಿದ್ದಿ?' ಪ್ರದೀಪ ಕೇಳಿದ್ದ.
           `ಹುಂ.. ಸುಮಾರ್ ಉತ್ಪಾದನೆ ಮಾಡ್ತಿದ್ಯ ನೋಡಿ. ನಮ್ಮೂರಿಗೆಲ್ಲಾ ಸಿಂಗಲ್ ಫೆಸ್ ಕರೆಂಟ್ ಕೊಡಲೆ ಸಾಕಾಗ್ತಿತ್ತು, ನಮ್ಮನೆಲಿ ಅವಲಕ್ಕಿ ಗಿರಣಿ ನಡೆಸ್ತಾ ಇದ್ದಿದ್ಯ. ಆದರೆ ನಿರ್ವಹಣೆ ಕಷ್ಟ ಆಗ್ತಾ ಬಂತು. ಹಂಗಾಗಿ ಬಿಡಕಾತು..' ಎಂದರು ಅಜ್ಜ.
           `ನಮ್ಮೂರಿನಲ್ಲಿ ಕರೆಂಟು ಉತ್ಪಾದನೆ ಮಾಡೋದು ಶಾಲೆಗಳಲ್ಲಿ ಪಾಠವಾಗಿ ಬಂದಿತ್ತಂತೆ..' ಎಂದ ವಿನಾಯಕ
           `ಹೌದು.. ಪಾಠವಾಗಿ ಕಲಿಸ್ತಾ ಇದ್ದರು. ಕನ್ನಡ ಶಾಲೆಯಲ್ಲಿ ನೀರಿನ ಹೌದು ಎಂಬ ತಲೆಬರಹದ ಅಡಿಯಲ್ಲಿ ಪಾಠ ಕಲಿಸಲಾಗುತ್ತಿತ್ತು. 1980ರ ದಶಕದ ವರೆಗೂ ಆ ಪಾಠ ಇತ್ತು. ಈಗ ಇಲ್ಲ. ಮೊನ್ನೆ ಮೊನ್ನೆಯ ವರೆಗೂ ನಮ್ಮೂರಿಗೆ ಈ ನೀರಿನ ಹೌದನ್ನು ನೋಡುವ ಸಲುವಾಗಿಯೇ ಮಕ್ಕಳು ಪ್ರವಾಸಕ್ಕೆ ಬರ್ತಾ ಇದ್ದಿದ್ದ. ಈಗಲೇ ಬರ್ತಾ ಇಲ್ಲೆ ನೋಡಿ..' ಎಂದು ಗಣಪಜ್ಜ ಹೇಳಿದ. ಎಲ್ಲರೂ ನಿಟ್ಟುಸಿರು ಬಿಟ್ಟರು.
           ಗಣಪತಿ ಹೆಗಡೆಯವರು ತೋರಿಸಿದ ಟರ್ಬೈನ್, ಟ್ಯಾಂಕು, ಮಿಲ್ಲು ಇವೆಲ್ಲ ಬಹುತೇಕ ಅವಸಾನದ ಹಾದಿಯನ್ನು ತಲುಪಿಯಾಗಿ ಆಗಿತ್ತು. ಕೊನೆಯ ಕೊಂಡಿಗಳಷ್ಟೇ ಉಳಿದಕೊಂಡಿದ್ದವು. ಪ್ರತಿಯೊಬ್ಬರೂ ಈ ಕಾರಣದಿಂದ ಮರುಕ ಪಟ್ಟುಕೊಂಡರು. `ಅಲ್ಲಾ ಅಜ್ಜಾ ಈಗಲೂ ನಮ್ಮ ಸರ್ಕಾರ ವಿದ್ಯುತ್ತನ್ನು ಮನೆಯಲ್ಲಿ ಉತ್ಪಾದನೆ ಮಾಡೋದಾದ್ರೆ ಅವರಿಗೆ ಸಹಾಯ, ಸಹಕಾರ ಎಲ್ಲ ಕೊಡ್ತದಂತಲ್ಲಾ..' ಎಂದಳು ವಿಜೇತಾ.
           `ತಥ್.. ಅದೆಂತಾ ಕೇಳ್ತೆ.. ಯಾವ್ದಕ್ಕೂ ಈಗ ದುಡ್ಡು ಇಲ್ದೇ ಹೋದ್ರೆ ಆಗ್ತಿಲ್ಲೆ. ನೀನು ಲಂಚ ಮಡಗಿದ್ಯ, ನಿಂಗೆ ಎಲ್ಲಾನೂ ಸಿಕ್ತು. ಈಗಲೂ ಆನು ಲಂಚ ಕೊಟ್ಟಿದ್ರೆ ಈ ವಿದ್ಯುತ್ ಉತ್ಪಾದನೆ ಮಾಡೋದ್ನ ಮುಂದುವರಿಶಿಗ್ಯಂಡು ಹೋಪಲೆ ಆಗ್ತಿತ್ತು. ಆದರೆ ಊಹೂಂ.. ಆನು ಹಂಗೆ ಮಾಡಂವ ಅಲ್ಲ. ಲಂಚಾ ಎಲ್ಲಾ ಕೊಡಂವ ಅಲ್ಲ ಆನು. ಯನ್ನ ಅಪ್ಪಯ್ಯ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅಂಥವ್ನ ಮಗ ಆಗಿ ಆನು ಲಂಚ ಗಿಂಚ ಕೊಟ್ಟು ಕೆಲ್ಸ ಮಾಡಿಸ್ಕಂಬದು ಅಂದ್ರೆ.. ಶಿ ಶಿ..' ಎಂದು ಗಣಪಜ್ಜ ಹೇಳಿದಾಗ ಹೆಮ್ಮೆಯಿಮದ ಬೀಗಿದಳು ವಿಜೇತಾ.
           `ಅಲ್ಲಾ ಅಜ್ಜಾ.. ನಿಂಗೆ 90 ವರ್ಷದ ಮೇಲೆ ಆತು.. ನಿಮ್ಮ ಕಾಲದಲ್ಲಿ ಹ್ಯಾಂಗಿತ್ತು.. ಯಾವ್ ಯಾವ್ ಥರಾ ಆಗಿತ್ತು.. ಎಲ್ಲಾ ಹೇಳು.. ನೀವು ನಿಮ್ಮ ಹರೆಯದಲ್ಲಿ ಅದೇನೇನು ಸಾಹಸಗಳನ್ನು ಮಾಡಿದ್ದಿರೋ.. ಅದೆಲ್ಲವನ್ನೂ ಹೇಳಿ..' ಎಂದು ಪಕ್ಕಾ ಪತ್ರಕರ್ತನ ಹಾಗೆ ಕೇಳಿದ ವಿಕ್ರಮ. ಅಜ್ಜನ ಮನಸ್ಸು ಉಲ್ಲಾಸಗೊಂಡಿತ್ತು. ಮಾತಿನ ಹುಕಿಗೆ ಬಿದ್ದಿದ್ದ ಅಜ್ಜ ತನ್ನ ಕಾಲದ ಸಾಹಸಗಳನ್ನು ಹೇಳಲು ಆರಂಭಿಸಿದ್ದ.

(ಮುಂದುವರಿಯುತ್ತದೆ)
(ವಿ,. ಸೂ : ಗಣಪಜ್ಜ ಹೇಳಿದ ಸಂಗತಿಗಳೆಲ್ಲ ನಿಜವಾಗಿಯೂ ನಡೆದಿದ್ದು.)

Friday, April 3, 2015

ಆದರಕೆ ಮೆರಗು


ನಿನ್ನ ಅಧರದ ಮೇಲೆ
ಮಿನುಗುತಿದೆ ಕಿರು ಮಚ್ಚೆ
ನೋಡಿದಂತೆಲ್ಲ ಮನದಿ
ಪ್ರೀತಿ ಹೆಚ್ಚು ||

ಮಾತನಾಡಿದ ಒಡನೆ
ಮೆರೆಯುತಿದೆ ಕಿರುಮಚ್ಚೆ
ನನ್ನ ಎದೆಯಾಳದಲಿ
ಚಿಕ್ಕ ಕಿಚ್ಚು ||

ನಿನ್ನ ಅಧರಕೆ ಮಚ್ಚೆಯೇ
ಬಲು ಸೊಬಗು
ನನ್ನ ಅಧರದಿ ಅದರ
ಮುತ್ತಲೇನು? ||

ಸೊಬಗಿನ ತುಟಿಗಳನು
ಕಾಪಿಡಿದು ಉಳಿಸಿಕೊ
ನನ್ನ ಪ್ರೀತಿಗೆ ಅದುವೆ
ಚಿನ್ನ ರನ್ನ, ಕನಸೇ ಇನ್ನಾ ||

**

(ಈ ಕವಿತೆ ಬರೆದಿರುವುದು ಎ.3, 2014ರಂದು ಶಿರಸಿಯಲ್ಲಿ)

Thursday, April 2, 2015

ಮತ್ತೆ ಬಾ ಗೆಳತಿ

ಒಲವ ದಾಹವು ಮನದಿ ಮೆರೆದಿದೆ
ಗೆಳತಿ ಬದುಕಲಿ ಮತ್ತೆ ಬಾ |

ಮನದಿ ತುಂಬಿಹ ಸುಪ್ತ ಭಾವವ
ಮತ್ತೆ ನೀನು ಮೆರೆಸು ಬಾ |
ಎದೆಯ ಬೆಂಕಿಗೆ ತೈಲವಾಗದೆ
ಒಲವ ತಂಪನು ಹರಿಸು ಬಾ ||

ನಿದ್ದೆಗಣ್ಣಿನ ಮಬ್ಬು ಹರಿಸುತ
ನನ್ನ ಕೆನ್ನೆಯ ಚಿವುಟು ಬಾ |
ಕಾರಿರುಳಿನ ಸೊಂಪು ನಿದ್ದೆಯ
ಕನಸ ನಡುವಲಿ ಕಾಡು ಬಾ |

ಎದುರು ಪರ್ವತ ನೂರು ನಿಂತಿದೆ
ಜೊತೆಗೆ ಹೆಜ್ಜೆಯ ಹಾಕುವೆ |
ನಿನ್ನ ಜೊತೆಯಲಿ ನಾನು ನಿಲ್ಲುವೆ
ಹರುಷದಂತಿಮ ಮುಟ್ಟುವಾ ||

***

(ಈ ಕವಿತೆಯನ್ನು ಬರೆದಿರುವುದು 2-04-2015ರಂದು ಶಿರಸಿಯಲ್ಲಿ)

ಅಂ-ಕಣ-4

ಸುಮ್ನೆ ಒಂದು ಚಿಕ್ಕ ಹನಿ :

ಕಾರಣ

ದಕ್ಷಿಣ ಆಪ್ರಿಕಾ
ಕ್ರಿಕೆಟ್ ತಂಡ
ಕ್ಯಾಚ್ ಬಿಟ್ಟಿತು |
ಮ್ಯಾಚ್ ಬಿಟ್ಟಿತು ||

ಸುಮ್ನೆ ಬರ್ಕಂಡಿದ್ದು-
ನಮ್ಮ ಮನೆಯಲ್ಲಿ
ಹಲಸಿನಹಣ್ಣು ಆದಾಗಲೆಲ್ಲ ನಾನು
ಉಗ್ರ ನರಸಿಂಹನಾಗುತ್ತೇನೆ |

ಸುಮ್ನೇ ಫೀಲಿಂಗು -

ನಮ್ಮ ಮನಸ್ಸಿನಲ್ಲಿ ಒಬ್ಬಂಟಿ ಎನ್ನುವ ಭಾವನೆ ಹೋಗುವ ವರೆಗೂ
ನಮ್ಮ ಪ್ರೀತಿ ಇನ್ನೂ ಹಣ್ಣಾಗಿಲ್ಲ ಎಂಬುದು ಖಾತ್ರಿ |

ಎಂತಾ ವಿಚಿತ್ರ -

ನಾನೇ ಬರೆದ
ಕಥೆಯ ನಾಯಕನ
ಮದುವೆ ಫಿಕ್ಸಾಗಿದೆ..!!

ಹೀಗೊಂದು ಆವಾಜ್ -

ಬರಿಯೋದ್ ಬರೀತಿಯಾ
ನನ್ನ ಬಗ್ಗೆ ಸ್ವಲ್ಪ ಚನ್ನಾಗಿ ಬರಿ ಮಾರಾಯಾ..
ಇಲ್ದೇ ಹೋದ್ರೆ ನಿನ್ ತಿಥಿ ಮಾಡ್ಬಿಡ್ತೀನಿ ಹುಷಾರ್..
ಕಥೆಯೊಂದರ ಪಾತ್ರ ಆವಾಜ್ ಹಾಕಿತ್ತು..

Wednesday, April 1, 2015

ಜಲಪಾತದ ಒಡಲಿನಲ್ಲಿ ನಡೆದ ಕವಿಗೋಷ್ಟಿ

(ಶಿರ್ಲೆ ಜಲಪಾತ)
ಒಂದೆಡೆ ಜಲಪಾತದ ಜುಳು ಜುಳು ನಿನಾದ ಕಿವಿಗಪ್ಪಳಿಸುತ್ತಿದ್ದರೆ ಮತ್ತೊಂದು ಕಡೆ ಕವಿಗಳ ಪ್ರೇಮ ಕವಿತೆಗಳ ವಾಚನ ಕಿವಿಗೆ ತಂಪನ್ನು ನೀಡುತ್ತಿತ್ತು. ಇದು ನಡೆದಿದ್ದು ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತದಲ್ಲಿ ನಡೆದ ಕವಿತೆ ಬಳಗದ ಕವಿಗೋಷ್ಟಿಯಲ್ಲಿ.
ವಾಟ್ಸಾಪ್ ಮೂಲಕ ಪರಿಚಿತರಾದ ಕವಿಗಳು ತಮ್ಮ ತಮ್ಮಲ್ಲಿ ಸಮಾನಾಸಕ್ತರನ್ನು ಜೊತೆ ಸೇರಿಸಿಕೊಂಡು ಕವಿತೆ ಬಳಗವನ್ನು ಮಾಡಿಕೊಂಡು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ರಚನಾತ್ಮಕ ಕಾರ್ಯಕ್ರಮಗಳಿಗೆ ಮುನ್ನುಡಿ ಎನ್ನುವಂತೆ ಜಲಪಾತದಲ್ಲಿ ಕವಿಗೋಷ್ಟಿ ನಡೆಯಿತು. ಪ್ರೇಮಕವಿ ಎಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಕೆ. ಎಸ್. ನರಸಿಂಹ ಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಕವಿಗಳು ತಾವು ಬರೆದ ಪ್ರೇಮ ಕವಿತೆಗಳನ್ನು ವಾಚನ ಮಾಡಿದರು.
ಯಾವುದೋ ವೇದಿಕೆಯಲ್ಲಿ, ಸಬೆ ಸಮಾರಂಭಗಳಲ್ಲಿ, ಉತ್ಸವಗಳಲ್ಲಿ ಕವಿಗೋಷ್ಟಿಗಳು ನಡೆಯುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕವಿಗೋಷ್ಟಿಗಳು ನಡೆಯುವುದು ಸಾಮಾನ್ಯಲಾದರೆ ಪ್ರಕೃತಿಯ ಮಡಿನಿಲ್ಲಿ, ನಿಸರ್ಗದ ನಟ್ಟ ನಡುವೆ ಇರುವ ಜಲಪಾತದ ಎದುರು ಕವಿಗೋಷ್ಟಿ ನಡೆಯುವುದು ಹೊಸ ಕಲ್ಪನೆ. ಇಂತಹ ಹೊಸದೊಂದು ಕಾರ್ಯಕ್ರಮಕ್ಕೆ ಕವಿತೆ ಬಳಗ ನಾಂದಿ ಹಾಕಿಕೊಟ್ಟಂತಾಗಿದೆ. ಹೊಸ ಹೊಸ ಕವಿತೆಗಳಿಗೆ ವಿಶೇಷ ಪ್ರಾಧ್ಯಾನ್ಯತೆ ಕೊಟ್ಟು ನಡೆದ ಕವಿಗೋಷ್ಟಿ ಯಶಸ್ವಿಯಾಯಿತು. ಜಲಪಾತದಲ್ಲಿ ನಡೆದ ಕವಿಗೋಷ್ಟಿ ಹೊಸತನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು. ಕವಿಗೋಷ್ಟಿಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಮುಂಡಗೋಡ, ಬೆಂಗಳೂರು, ಬೆಳಗಾವಿ ಈ ಮುಂತಾದ ಪ್ರದೇಶಗಳಿಂದ ಆಗಮಿಸಿದ್ದ ಕವಿಗಳು, ಕವಿತೆಗಳು ಆಗಮಿಸಿದ್ದವು.
(ಬೆಣ್ಣೆ ಭಟ್ಟರಿಂದ ಕವಿತಾ ವಾಚನ)
ಕವಿತೆ ಬಳಗ ಹಮ್ಮಿಕೊಂಡಿದ್ದ ಕವಿಗೋಷ್ಟಿಯನ್ನು ಕೃಷಿ ಸಂಶೋಧಕ ಡಾ. ರವಿ ಭಟ್ಟ ಬರಗದ್ದೆ ಅವರು ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಯನ್ನು ಓದುವ ಮೂಲಕ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹಟ್ಟಿಕೊಂಡ ಕವಿತೆ ಬಳಗ, ತನ್ನ ಆರಂಭಿಕ ದಿನಗಳಿಂದಲೂ ವಿಶಿಷ್ಟತೆಗಳಿಂದ ಹೆಸರನ್ನು ಪಡೆದುಕೊಂಡಿದೆ. ಇದೀಗ ಜಲಪಾತದಲ್ಲಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳುವ ಮತ್ತೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕವಿ ಟಿ. ಆರ್. ಪ್ರಕಾಶ ಭಾಗ್ವತ ಅವರು ಮಾತನಾಡಿ ಹೊಸ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕವಿತೆ ಬರೆಯುವುದಕ್ಕೆ ಮುಂದಾಗುತ್ತಿದ್ದಾರೆ. ಇದು ಸಂತಸದ ಸಂಗತಿ. ಹಿರಿಯ ಕವಿಗಳಲ್ಲಿ ಅದೆಷ್ಟೋ ಭಿನ್ನಾಭಿಪ್ರಾಯಗಳನ್ನು ನಾವು ಕಂಡಿದ್ದೇವೆ. ಕನ್ನಡ ಸಾಹಿತ್ಯದ ದಿಗ್ಗಜ ಕವಿಗಳೆಂದೇ ಗುರುತಿಸಿಕೊಂಡವರೂ ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದನ್ನು ಕಂಡಿದ್ದೇವೆ. ಆದರೆ ಇಂದಿನ ತಲೆಮಾರಿನ ಕವಿಗಳು, ಯುವ ಸಾಹಿತಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿಲ್ಲ. ಒಬ್ಬರಿಗೆ ಇನ್ನೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಪರಸ್ಪರ ಸಹಕಾರವನ್ನು ಕೊಡುತ್ತಿದ್ದಾರೆ. ಅದೇ ರೀತಿ ಯುವ ಕವಿಗಳು ಭಾವಗೀತೆಗಳನ್ನು ಬರೆಯಲು ಮುಂದಾಗಬೇಕಾದ ಅಗತ್ಯವಿದೆ. ಭಾವಗೀತೆಗಳು ಜನಮಾನಸವನ್ನು ತಟ್ಟುತ್ತವೆ. ಬಾವಗೀತೆಗಳ ಮೂಲಕ ಕವಿತೆ ಯಶಸ್ವಿಯಾದಾಗ ಕಾವ್ಯ ಸಾರ್ಥಕ ಎನ್ನಿಸಿಕೊಳ್ಳುತ್ತವೆ. ಹಳೆಯ ತಲೆಮಾರಿನ ಭಾವಗೀತೆಗಳನ್ನು ಬರೆಯುವ ಕವಿಗಳ ನಂತರ ಉಂಟಾಗಿರುವ ಶೂನ್ಯವನ್ನು ಹೊಸ ಕವಿಗಳು ತುಂಬಿಕೊಡಬೇಕಾದ ಅಗತ್ಯವಿದೆ. ನಾವು ಇಂದು ನಿಸರ್ಗ ಹಾಗೂ ಸಾಮಾಜಿಕ ಸಮಾನತೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಕುರಿತು ಕಾವ್ಯ ಪ್ರಪಂಚ ಹೆಚ್ಚು ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಹೇಳಿದರು.
(ಸಂಚಾಲಕ ನಾಗರಾಜ ವೈದ್ಯರ ಮಾತು)
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತೆ ಬಳಗದ ಸಂಚಾಲಕ ನಾಗರಾಜ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕವಿತೆ ಬಳಗದಲ್ಲಿದ್ದ ಕವಿಗಳ್ನು ಭೌತಿಕವಾಗಿ ಒಂದೆಡೆ ಸೇರಿಸುವುದು ಈ ಕವಿಗೋಷ್ಟಿಯ ಹಿಂದಿರುವ ಪ್ರಮುಖ ಕಾರಣ. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆಗಳ ಮೂಲಕ ಸಿಗುತ್ತಾರೆ. ಆದರೂ ದೂರವಿದ್ದುಬಿಡುತ್ತಾರೆ. ಅಂತವರನ್ನು ಒಂದೆಡೆ ಸೇರಿಸಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳವುದು ಪ್ರಮುಖ ಉದ್ದೇಶ. ಈ ಉದ್ದೇಶ ಇಂದು ಸಫಲವಾಗಿದೆ ಎಂದರು.
ಉಪನ್ಯಾಸಕ, ಬರಹಗಾರ ರಾಜು ಹೆಗಡೆ ಅವರು ಸಾಂದರ್ಭಿಕವಾಗಿ ಮಾತನಾಡಿ ಕವಿತೆಯನ್ನು ವಾಚನ ಮಾಡಿದರು. ನಾಗರಾಜ ವೈದ್ಯ -ಪ್ರೇಮದ ಹತ್ತು ಹನಿಗಳು, ಸಂಜಯ ಭಟ್ಟ ಬೆಣ್ಣೆ - ಮಧುಕುಟಿಗ, ಸಿಂಧುಚಂದ್ರ - ಪ್ರೇಮವೆಂದರೆ ಇದೇನಾ, ಶರೀಪ ಹಾಸರ್ಿಕಟ್ಟಾ - ಬಾ ಮುತ್ತು ಚೆಂಡೇ, ಗಣಪತಿ ಬಾಳೆಗದ್ದೆ-ಅವಳು, ಎನ್. ವಿ. ಮಂಜುನಾಥ-ಅವನ ನೆನಪಿಗಾಗಿ, ಮಾನಸಾ ಹೆಗಡೆ-ಪುಟ್ಟ ಬೊಗಸೆಯ ಪದಗಳು, ವಿನಯ ದಂಟಕಲ್-ಒಮ್ಮೆ ತಿರುಗಿ ನೋಡು, ಚೈತ್ರಿಕಾ ಹೆಗಡೆ-ಮತ್ತೆ ಮಳೆ ಹೊಯ್ಯುತಿದೆ, ರಾಜು ಹೆಗಡೆ-ಒಂದು ಕವನ ವಾಚನ, ಪ್ರಕಾಶ ಭಾಗ್ವತ-ಬಾರದಿರು ಹಾಲಿರುಳೆ ಎನ್ನುವ ಕವಿತೆಗಳನ್ನು ವಾಚನ ಮಾಡಿದರು.
ಕವಿಗೋಷ್ಟಿಯಲ್ಲಿ ಕೇವಲ ಕವಿಗಳು ಮಾತ್ರ ಪಾಲ್ಗೊಳ್ಳದೇ `ಶಿರ್ಲೆ`ಯ ಸ್ಥಳೀಕರು, ಅನೇಕ ಪರ ಊರಿನ ಕಾವ್ಯಾಸಕ್ತರು ಪಾಲ್ಗೊಂಡಿದ್ದರು. ಯುವ ಕವಿಗಳ ಪ್ರೇಮ ಕವಿತೆಗಳಿಗೆ ಮೆಚ್ಚುಗೆ ಸೂಸಿ, ತಲೆದೂಗಿದರು. ಬರಹಗಾರ ಸಂಜಯ ಭಟ್ಟ ಬೆಣ್ಣೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.


***
(ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ)