Friday, June 7, 2013

ಸುಜುಕಿ ಸರದಾರ

ಸುಜುಕಿ ಸರದಾರ

        ಅವನು ಹೆಸರಿಗೆ ತಕ್ಕಂತೆ ಸುಝುಕಿಯ ಸರದಾರ. ಊರಿನಲ್ಲೆಲ್ಲಾ ಆತನನ್ನು ಹಾಗೇಯೇ ಕರೆದು ಕರೆದು ಆತನ ಮೂಲನಾಮಧೇಯವೇ ಮರೆತಂತೆ ಆಗಿಬಿಟ್ಟಿತ್ತು. ಹಾಂ. ಸುಝುಕಿ ಸರದಾರನಿಗೆ ಆ ಹೆಸರು ಬರಲು ಮುಖ್ಯ ಕಾರಣವಾದ ಸುಝುಕಿ ಸಮುರಾಯ್ ಎಂಬ ಬೈಕೇ ಆತನ ಅತ್ಯಮೂಲ್ಯ ಆಸ್ತಿ. ಹಳೆಯದಾಗಿ, ಲಟ್ಟು ಹಿಡಿದು, ಪ್ರತಿಭಾಗವೂ ಗಡ ಗಡ ಅಲುಗುತ್ತಿದ್ದ ಆ ಬೈಕನ್ನು ಅದ್ಯಾವ ಕಾಲದಲ್ಲಿ ತಯಾರುಮಾಡಿದ್ದೋ..?
    ಹಾಗೆಯೇ, ಆ ಜುಝುಕಿಗೆ ಈತ ಬಹುಶಃ ಇಪ್ಪತ್ತೈದನೆಯ ಯಜಮಾನನಿರಬೇಕು..! ಸರದಾರನಿಗೂ ಅಷ್ಟೇ ತಂದ ಯಾವುದೇ ಕಂಪನಿಯ ಬೈಕುಗಳೂ ಅದೃಷ್ಟ ತರಲಿಲ್ಲ. ಕೈ ಹಿಡಿಯಲಿಲ್ಲ. ಕೊನೆಗೆ ಈ ಸಮುರಾಯ್ ಸುಝುಕಿ ಬೈಕನ್ನು ಗೆಳೆಯ ಅಮೀರ್ ಖಾನನಿಂದ ಚೌಕಾಸಿಗೆ ಕೊಂಡುಕೊಂಡಿದ್ದ. ಸರದಾರ ಅದನ್ನು ಕೊಂಡುಕೊಂಡ ನಂತರ ಕನಿಷ್ಠವೆಂದರೂ ಒಂದು ದಶಕದಿಂದೀಚೆಗೆ ಅದು ಆತನ ಸಾಥಿಯಾಗಿತ್ತು.
    ಸುಝುಕಿ ಸರದಾರ ಆ ಬೂಕು ಸಿಕ್ಕ ಮೇಲೆ ಅದೆಷ್ಟು ಪ್ರದೇಶಗಳವರೆಗೆ ಸವಾರಿ ಮಾಡಿದ್ದಾನೋ.. ಮೂಡುಬಂತೆಂದರೆ ಸಾಕು ಹೊಟ್ಟೆಗಷ್ಟು ಪೆಟ್ರೂಲು ಸುರಿದು ಯಾವುದಾದರೊಂದು ದಿಕ್ಕಿನ ಹಾದಿ ಹಿಡಿದು ಹೊರಟುಬಿಡುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ಮನೆಯ ನೆನಪಾದಾಗಲೇ.
    ಈ ಸುಝುಕಿ ಸರದಾರನಿಗೆ ಹೆಂಡಲಿಯಿಲ್ಲ. ಮಕ್ಕಳಿಲ್ಲ. ಈತನೊಬ್ಬ ಅಖಂಡ ಬ್ರಹ್ಮಚಾರಿ.. ಹಾಂ. ಈತ ಅನಾಥನೇನಲ್ಲ. . ಹೆತ್ತವರಿದ್ದಾರೆ., ತಕ್ಕಮಟ್ಟಿಗೆ ಇಂಗ್ಲೀಷನ್ನು ಎತ್ತಿ ಬಿಸಾಡುವಷ್ಟು ಓದಿಕೊಂಡಿದ್ದಾನೆ ಕೂಡ. ಹರೆಯದ ಹುಮ್ಮಸ್ಸಿನಲ್ಲಿ ಬೈಕು ಹೊಡೆಯುವ ಚಟ ಆತನಿಗೆ ಅಂಟಿಕೊಳ್ಳದೇ ಇದ್ದಿದ್ದರೆ ಇಷ್ಟುಹೊತ್ತಿಗೆ ಯಾವುದಾದರೂ ದೊಡ್ಡ ಕಾಂಟ್ರಾಕ್ಟ್ ಕೆಲಸ ಸಿಕ್ಕಿ ಮದುವೆಯೂ ಆಗಿ ಹೋಗಿತ್ತು.
    ಇಷ್ಟೆಲ್ಲ ಹೇಳಿಯೂ ಆತನ ಉದ್ಯೋಗದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ ನೋಡಿ.. ಆತ ತನ್ನ ಊರಿನ ಸರಹದ್ದಿನಲ್ಲಿ ಎಲ್ಲೇ ಮನೆಯ ಗಿಲಾವು ಕೆಲಸವಿದ್ದಲ್ಲಿ ಮುದ್ದಾಂ ಮಾಡಿಬರುತ್ತಿದ್ದ.. ಗಿಲಾಯವೇ ಆತನಿಗ ಬರುತ್ತಿದ್ದ ಪರಮೋಚ್ಛ ಕೆಲಸ. ಹೀಗಿರುವ ಈ ಸರದಾರನ ಪರಿಚಯ ನನಗಾಗಿದ್ದು ಆಕಸ್ಮಿಕ. ಕೆಲವು ದಿನಗಳ ಹಿಂದೆ ನನಗೂ ಬೈಕೊಂದನ್ನು ಕೊಳ್ಳುವ ಉಮೇದಿಯಾಯಿತು. ಅದಕ್ಕಾಗಿಯೇ ಹುಡುಕುತ್ತಿದ್ದಾಗ ಯಾರೋ ಒಬ್ಬರು ಈ ಸರದಾರನನ್ನು ಪರಿಚಯಿಸಿ, ಈತನಿಗೆ ಬೈಕುಗಳ ಬಗ್ಗೆ ಸಂಪೂರ್ಣ ಗೊತ್ತು ಎಂದರು..
    ನನಗೆ ಪರಿಚಯವಾದ ಕೂಡಲೇ ಈ ಸರದಾರ ಎಲ್ಲಾ ಬೈಕುಗಳೂ `ವೇಸ್ಟ್..' ಎಂದೂ, ತನ್ನ ಸುಝುಕಿ ಸಮುರಾಯ್ ಬೈಕೇ ಬೆಸ್ಟ್ ಎಂದೂ ಹೇಳಿ, ಬಹಳೇ ಬಹಳ `ಕಾಯ್ದೆ ಕೊಚ್ಚಲಾರಂಭಿಸಿದ..'. ನಾನು ಅವನ ಹೊಗಳಿಕೆಗೆ ಮರುಳುಬಿದ್ದು ಬೈಕನ್ನು ಕೊಂಡುಕೊಳ್ಳುತ್ತಿದ್ದೆನೇನೋ.. ಆದರೆ ಒಮ್ಮೆ ಏಕೋ ಆ ಬೈಕನ್ನು ನೋಡಿಬಿಡಬೇಕೆಂದು ಅನ್ನಿಸಿತು... ನೋಡಿದೆ.. ನೋಡಿದರೆ ಅದನ್ನು ಬೈಕೆಂದು ಕರೆಯುವುದು ಹೇಗೆ..? ಯಾವ ದಿಕ್ಕಿನಿಂದ ಅದು ಬೈಕಿನಂತೆ ಕಾಣುತ್ತದೆ ಎಂಬ ಸಂದೇಹ ಮನದಲ್ಲಿ ಕಾಡಿತು. ಆ ಬೈಕು ಎಲುಬಿನ ಹಂದರವಾಗಿತ್ತು. ಮೂಳೆ ಚಕ್ಕಳವಾಗಿಬಿಟ್ಟಿತ್ತು... ಅಷ್ಟೇ ಅಲ್ಲದೇ ಆ ಬೈಕಿಗೆ ಮೈ ತುಂಬಾ ಕಲೆಗಳು, ಗಾಯದ ಗುರುತು.. `ಸಾಕಪ್ಪಾ ಸಾಕು..' ಎಂದು ಬೈಕನ್ನು ದೂರವಿಟ್ಟೆ.. ಸುಝುಕಿ ಸರದಾರ ನಕ್ಷತ್ರಿಕನಂತೆ ನನ್ನ ಪರಿಚಯಸ್ತನಾಗಿ ಕಾಡಲಾರಂಭಿಸಿದ.
    ಮರೆತೆಬಿಟ್ಟಿದ್ದೆ.. ಅವನ ಒತ್ತಾಯಕ್ಕೆ ಮಣಿದು ನಾಲ್ಕೈದು ಬಾರಿ ಅವನೊಡನೆ ಬೇರೆ ಬೇರೆಯ ಒಂದೆರಡು ಪ್ರಸಿದ್ಧ ತಾಣಗಳಿಗೆ ಆ ಬೈಕಿನೊಂದಿಗೆ ಹೋಗಿದ್ದೆ.. ದಾರಿಯ ನಡುವೆ ಎಲ್ಲಾದರೂ ಕೈ ಕೊಡಬಹುದೇನೋ ಎನ್ನುವ ಭಯ ಕೊನೆಯವರೆಗೂ ನನ್ನನ್ನು ಕಾಡದೇ ಬಿಡಲಿಲ್ಲ. ಕೈಕೊಟ್ಟಿದ್ದರೆ ಕಥೆ ಕರ್ಮಕಾಂಡವಾಗಿಬಿಡುತ್ತಿತ್ತು.. ಅದನ್ನು ನಾನೇ ತಳ್ಳಬೇಕಿತ್ತಲ್ಲ... ಆದರೆ ಸಧ್ಯ ಹಾಗಾಗಲಿಲ್ಲ.. ಬೈಕಿಗೆ ಸಲಾಂ ಹೊಡೆದರೂ ನನ್ನನ್ನು ಯಾವುದೋ ಮಾಯೆಯಲ್ಲಿ ಕಾಡಲು ಪ್ರಾರಂಭಿಸಿಯೂ ಇತ್ತು.
    ಜಪಾನಿನ ಯಾವುದೋ ಕಂಪನಿಯಲ್ಲಿ ತಯಾರಾಗಿ ಭಾರತದ ಮಾರುಕಟ್ಟೆಯನ್ನು ಹೊಕ್ಕಿದ್ದ ಸಮುರಾಯ್ ನ ಸುಝುಕಿ ಬೈಕು ಯಾರ್ಯಾರದ್ದೋ ಮೂಲಕ ನಮ್ಮೂರ ಸರದಾರನ ಕೈ ತಲುಪಿತ್ತು.. ಆ ಬೈಕು ತನ್ನ ಯವ್ವನದ ಹಾದಿಯಲ್ಲಿ ಒಂದು ಗುಟುಕು ಪೆಟ್ರೂಲಿಗೆ ಅದೆಷ್ಟು ದೂರದ ವರೆಗೆ ಕುದುರೆಯಂತೆ ಓಡುತ್ತಿತ್ತೋ.. ಆದರೆ ಈಗ ಅದರ ಹೊಟ್ಟೆಗೆ ಕುಡಿದಷ್ಟೂ ಪೆಟ್ರೂಲು ಸಾಲದು.. ಜೊತೆಗೆ ಬೈಕೂ ಸಹ ಕೆಲವು ಕಿಲೋಮೀಟರುಗಳವರೆಗೆ ಜೋರಾಗಿ ಓಡಿದರೂ ದಮ್ಮು ಹಿಡಿದ ರೋಗಿಯು ಕೆಮ್ಮುವಂತೆ ಆಗಾಗ ಕೆಮ್ಮುತ್ತಾ ನಿಂತುಬಿಡುತ್ತದೆ.
    ಇಷ್ಟರ ಜೊತೆಗೆ ಪೆಟ್ರೂಲಿನ ಬೆಲೆಯೂ ಗಗನಮುಖಿಯಾಗಿದೆ.. 2 ರು. ಕಡಿಮೆ ಯಾಗುವ ಪೆಟ್ರೂಲ್ ಮರುದಿನವೇ 3.50 ರು ಜಾಸ್ತಿಯಾಗಿ ಬಿಡುತ್ತದೆ. ಇಂತಹ ಸಮಯದಲ್ಲಿಯೇ ಸರದಾರ ಬುದ್ಧಿವಂತಿಕೆಯನ್ನು ಪ್ರದರ್ಶಿಸತೊಡಗಿದ್ದಾನೆ. ಸುಮ್ಮನೆ ಆ ಬೈಕಿನ ಹೊಟ್ಟೆಗೆ ಪೆಟ್ರೂಲು ಹಾಕುವ ಬದಲಾಗಿ ಎಷ್ಟು ಬೇಕೋ.. ಅಷ್ಟು ಕುಡಿ ಎಂದು ಸೀಮೆಎಣ್ಣೆಯನ್ನು ಹಾಕತೊಡಗಿದ್ದಾನೆ. ಹಾಗಾಗಿ ಆತನ ಬೈಕು ಆ ದಾರಿಯಲ್ಲಿ ಸಾಗಿಹೋದ ಹತ್ತು ನಿಮಿಷಗಳಾದರೂ ಅಲ್ಲಿ ಸೀಮೆ ಎಣ್ಣೆಯ ಘಮಲು ಮೂಗಿಗೆ ರಪ್ಪಂತ ಬಡಿಯುತ್ತಲೇ ಇರುತ್ತದೆ.
    ಇತ್ತೀಚೆಗೆ ಅವನಿಗೆ ಆ ಬೈಕನ್ನು ಮಾರಾಟ ಮಾಡಬೇಕೆಂಬ ಹುಚ್ಚು ಹತ್ತಿಬಿಟ್ಟಿತ್ತು. ತಾನು ಅಲ್ಲಿ ಇಲ್ಲಿ ಮನೆಯ ಗಿಲಾಯ ಮಾಡಿ ದುಡಿಯುತ್ತಿದ್ದ ಕಾಸನ್ನೆಲ್ಲ ಆ ಬೈಕು ಒಂದೇ ಗುಕ್ಕಿಗೆ ನುಂಗಲಾರಂಭಿಸಿದಾಗ ಆತನಿಗೆ ಆಗ ಬೈಕೆಂಬುದು ಬಿಳಿ ಆನೆಯನ್ನು ಕಟ್ಟಿ ಸಾಕಿದಂತೆ ಅನ್ನಿಸಿತ್ತು.. ಆದರೆ ಲಡಕಾಸಿ ಬೈಕನ್ನು ಕೊಳ್ಳುವವರು ಬೇಕಲ್ಲ..!! ಹಾಗಾಗಿಯೇ ಆತ `ಏನಯ್ಯಾ.. ಸರದಾರ . ಬೈಕನ್ನು ಮಾರ್ತೀಯಂತೆ..' ಎಂದು ಯಾರಾದರೂ ಕೇಳಿದ ತಕ್ಷಣ `ಯಾಕೆ..? ತಗೋಳ್ತೀಯಾ..? ಹೆಚ್ಚೇನೂ ಬೇಡ . ಒಂದು ಸಾವ್ರ ಸಾಕು ಅಷ್ಟೇ ' ಎನ್ನುತ್ತಿದ್ದ. ಕೆಳಿದವರು ನಗುತ್ತ ಸದ್ದಿಲ್ಲದೇ ಎದ್ದು ಬರುತ್ತಿದ್ದರು.

    ಸರದಾರನ ಪುರಾಣ ಹೇಳುವದರಲ್ಲಿ ಮುಳುಗಿದ್ದ ನಾನು ಮುಖ್ಯ ವಿಷಯವನ್ನು ಹೇಳಲು ಮರೆತೇಬಿಟ್ಟಿದ್ದೆ ನೋಡಿ.. ನಾನೊಮ್ಮೆ ಏನೋ ತುರ್ತು ಕಾರಣವೆಂದು ಆ ಬೈಕನ್ನು ತೆಗೆದುಕೊಂಡು ಹೋಗಿದ್ದೆ. ಅದರ ಆತ್ಮಚರಿತ್ರೆಯನ್ನು ನಾನು ತಿಳಿದಿದ್ದರೂ, ಏನೋ ಅರ್ಜೆಂಟು ಕೆಲಸವಿತ್ತಾದ್ದರಿಂದ ಸರ್ದಾರನ ಬಳಿ `ಪೆಟ್ರೂಲ್ ಹಾಕಿಸ್ತೀನಿ ಮಾರಾಯಾ..' ಎನ್ನುವ ಆಣೆ ಮುತ್ತುಗಳನ್ನು ಉದುರಿಸಿ ಬೈಕನ್ನು ಒಯ್ದಿದ್ದೆ.. ಆ ಬೈಕು ನಾನು ಕೊಂಡು ಹೋಗುವಾಗಲೇನೋ ಸರಿಯಾಗಿಯೇ ಇತ್ತು. ತವರಿಗೆ ಹೊರಟ ಹೆಂಡತಿಯಂತೆ.. ಆದರೆ ಮರಳಿ ಬರುವಾಗ ಶುರುಹಚ್ಚಿಕೊಂಡಳು ನೋಡಿ ತನ್ನ ವರಾತವ.. !! ಒಮ್ಮೆ ಕೆಮ್ಮಿತು.. ಸುಮ್ಮನಾಗಿಸಿದೆ. ಚೈನಿನ ಆಳದಲ್ಲೆಲ್ಲೋ ಶಬ್ದಮಾಡಿತು. ಬಿಚ್ಚಿ ಸರಿ ಮಾಡಿದೆ. ಏನೇನೋ ತರಲೆ ತಾಪತ್ರಯ ಶುರುಮಾಡಿತು.. ನಾನು ಸರಿಮಾಡಿಯೇ ಸಿದ್ಧ ಎಂದು ಮುಂದುವರಿದೆ. ಕೊನೆಗೊಮ್ಮೆ ಎಲ್ಲ ಸರಿಯಾಯಿತೆಂದು ಗಾಡಿ ಚಾಲೂಮಾಡಿ ಹೊರಟೆ. ಗಾಡಿಗೂ ಸ್ವಲ್ಪ ಸುಸ್ತಾಗಿತ್ತೇನೆಓ.. ಕೆಲವು ಕಿ.ಮಿಗಳ ವರೆಗೆ ನಿರಾತಂಕವಾಗಿ ಸಾಗಿತು.. ಆದರೆ ನಮ್ಮೂರು ಇನ್ನೂ 5 ಕಿಲೋಮೀಟರ್ ಇದೆ ಎನ್ನುವಾಗ ಮಾತ್ರ ನೋಡಿ.. ಗ್ರಾಚಾರ ಭಯಂಕರ ಖರಾಬ್ ಇತ್ತು.. ವೇಗದೂತನಂತೆ ಸಾಗುತ್ತಿದ್ದೆ. ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿಬಿಟ್ಟಿತು. ಗೇರ್ ಹಾಕಿ ವೇಗ ಕಡಿಮೆ ಮಾಡೋಣ ಎಂದರೆ ಊಹೂಂ ಸರಿಯಾದ ಸಮಯಕ್ಕೆ ಸಿಕ್ಕಿಬಿದ್ದೀದೀಯಾ ಎನ್ನುವಂತೆ ಗೇರಿಗೂ ಬೀಳೋದಿಲ್ಲ.. ಏನೇ ಶತಪ್ರಯತ್ನ ಮಾಡಿದರೂ ಬೈಕು ನಿಲ್ಲುತ್ತಿಲ್ಲ.. ಸಾಬರ ತರಾ ಕಾಲನ್ನು ನೆಲಕ್ಕೆ ಒತ್ತಿ ಹಿಡಿದು ಬೈಕ್ ನಿಲ್ಲಿಸಲು ಯತ್ನಿಸಿದೆ. ಕಾಲು ನೋವು ಮಾಡಿಕೊಂಡದ್ದೇ ಬಂತು.. ಕೊನೆಗೂ ದೇವರು ದೊಡ್ಡವನಿದ್ದ.. ಗಾಡಿ ಅದ್ಹೇಗೋ ನಿಂತಿತು.. ಉಸಿರನ್ನು ಎರಡೆರಡು ಸಲ ಬಿಟ್ಟೆ..
    ಇನ್ನು ಮುಂದೆ ಈ ಬೈಕಿನಲ್ಲಿಯೇ ನಮ್ಮೂರಿಗೆ ಹೋದರೆ `ಬಿದಿರು ಮೋಟಾರಿನ ಪ್ರಯಾಣ' ಕಟ್ಟಿಟ್ಟ ಬುತ್ತಿ ಎನ್ನಿಸಿತು. ತಳ್ಳಲು ಪ್ರಾರಂಭಿಸಿದೆ.. ನಾನು ಬೈಕ್ ತಳ್ಳುವುದನ್ನು ನೋಡಿದ ಇತರರಿಗೆ ನಗುವೋ ನಗು.. ನಾನು, ಸರದಾರನ ಸುಝುಕಿ ಬೈಕನ್ನು ತಳ್ಳುವುದು ಅವರಿಗೆ ಅತ್ಯಾನಂದ ನೀಡಿರಬೇಕು..!! ಯಾರೋ ಒಬ್ಬಿಬ್ಬರು `ಮಾರಾಯ್ರೆ ನಿಮಗೆ ನಾನಾದ್ರೂ ನನ್ನ ಸೈಕಲ್ಲನ್ನಾದ್ರೂ ಕೊಡ್ತಿದ್ದೆ.. ಈ ಸರದಾರನ ಬೈಕೆಂತಕ್ಕೆ ಬೇಕಿತ್ರಾ..? ನೋಡಿ.. ಈಗ ಹಣೆಬರಹ ನಿಮ್ದು.. ತಳ್ಳಿ.. ' ಎಂದು ನನ್ನ ನಸೀಬಿಗಷ್ಟು ಉಪ್ಪುಖಾರ ಹಚ್ಚಿದರು. ಮನಸ್ಸು ಚುರ್ರೆಂದು ಸಿಟ್ಟಾಯಿತಾದರೂ ಸುಮ್ಮನಾದೆ.. ಕೊನೆಗೂ ಮದ್ಯಾಹ್ನದ ಉರಿಬಿಸಿಲಿನಲ್ಲಿ 3-4 ಕಿ.ಮಿ ದೂರ ಬೈಕನ್ನು ತಳ್ಳಿಕೊಂಡು ಸರದಾರನಿಗೆ ಬೈಕನ್ನು ಕೊಟ್ಟೆ.. ಆಗಲೇ ಮಿರಾಕಲ್ ಸಂಭವಿಸಿದ್ದು ನೋಡಿ.. ಹಾಳಾದ ಬೈಕು ತಕ್ಷಣವೇ `ಕೈ ಮರಚಲು ಎಮ್ಮೆಯಂತೆ.. ಆತ ಹೇಳಿದಂತೆ ಕೇಳಲು ಪ್ರಾರಂಭಿಸಿತು.. ನಾನು ಬೈಕಿಗೆ ಸಲಾಮು ಹೊಡೆದೆ..
    ಇಂತಹ ಸುಝುಕಿ ಸಮುರಾಯ್ ಬೈಕನ್ನು ಕೊನೆಗೂ ಕೊಳ್ಳುವವರು ಸಿಗಲಿಲ್ಲ. ಅದು ಮತ್ತೊಮ್ಮೆ ಮಾರಾಟವಾಗಿ ಗಿನ್ನಿಸ್ ದಾಖಲೆಗೆ ಪಾತ್ರವಾಗುವ ಸುಸಂದರ್ಭ ತಪ್ಪಿಹೋಯಿತು ಎಂದು ನಮಗೆ ಅನ್ನಿಸತೊಡಗಿತು. ಆದರೆ ಸರದಾರ ಸುಮ್ಮನೆ ಇರುವವನಲ್ಲ ನೋಡಿ.. ಬುದ್ಧಿ ಓಡಿಸಿದ.. ಪರಿಣಾಮ ಗುಜರಿ ಅಂಗಡಿಗೆ ಕೆ.ಜಿ. ಗೆ 10ರುಪಾಯಿಯಂತೆ 95 ಕೆಜಿಯ ಬೈಕನ್ನು ಮಾರಿ 950 ರೂಪಾಯಿ ಮಾಡಿಕೊಂಡು ಬದುಕಿದೆಯಾ ಬಡಜೀವವೆ ಎಂದುಕೊಂಡ.. ಬೈಕು ಮಾರಿದರೂ ಆತ ಈಗಲೂ ಸುಝುಕಿ ಸರದಾರನಾಗಿಯೇ ಇದ್ದಾನೆ.
    ಈಗಲೂ ನಮ್ಮೂರಿನ ಜಡ್ಡೀರಾಮನ ಗುಜರಿ ಅಂಗಡಿಯ ಟಾಪಿನ ಮೇಲೆ ಸುಝುಕಿ ಸಮುರಾಯ್ ಬೈಕಿನ ಪಳೆಯುಳಿಕೆಗಳಾದ ಎರಡು ಗಾಲಿಗಳು ಹುಡುಕಿದರೆ ಕಣ್ಣಿಗೆ ಬೀಳುತ್ತವೆ.. ಶತಮಾನದ ಪಳೆಯುಳಿಕೆಗಳಂತೆ.. ವೀರಗಲ್ಲುಗಳಂತೆ.

1 comment:

  1. ಮೊದಲು ಹಾಕಿರುವ ಚಿತ್ರ YAMAHA RX100 ದಂತೆ ಕಾಣಿಸುತ್ತಿದೆಯಲ್ಲ!!!

    ReplyDelete