Sunday, June 16, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಊಟಿಗೆ ಬಂದಿದ್ದರ ಕುರುಹಾಗಿ ಚಳಿ ನಮ್ಮನ್ನು ಆವರಿಸಿತು..
ಬೈಕಿನ ಎಕ್ಸಲರೇಟರ್ ಹಿಡಿದ ಕೈ ಚಳಿಯಿಂದಾಗಿ ಕೊರಟಾಗುತ್ತಿತ್ತು.
ಆದರೂ ನಮ್ಮ ಹುಮ್ಮಸ್ಸಿಗೆ ತಡೆಯಿಲ್ಲ.  ವೇಗಕ್ಕೆ ಮಿತಿಯಿಲ್ಲ ..
ಒಮ್ಮೆ ರಾಘವ-ಕಿಟ್ಟುವಿನ ಬೈಕ್ ಮುಂದೆ.. ಮತ್ತೊಮ್ಮೆ ನಮ್ಮದು..

ಅಂತೂ ಇಂತೂ ಊಟಿಯನ್ನು ತಲುಪಿದೆವು..
ಗುಡ್ಡ ಬೆಟ್ಟಗಳ ನಡುವೆ ತಂಪಾಗಿರುವ ಊರು.. ನಮ್ಮ ಶಿರಸಿಯಷ್ಟು ದೊಡ್ಡದಿರಬಹುದು..
ಕರ್ನಾಟಕ ಹಾಗೂ ಕೇರಳಗಳ ಮಧ್ಯ ಸಿಲುಕಿ ಅಪ್ಪಚ್ಚಿಯಂತಾಗಿರುವ ಊರು.. ಅದ್ಯಾಕೆ ತಮಿಳುನಾಡಿಗೆ ಸೇರಿತೋ..
ಈ ಊರಿನಲ್ಲಿ ಮೋಡಗಳು ಬಂದು ಚುಂಬಿಸುತ್ತವೆ..
ನಮ್ಮನ್ನು ಆವರಿಸುತ್ತವೆ.. ಕಾಡುತ್ತವೆ.. ಗೊತ್ತಿಲ್ಲದಂತೆ ಕವನವಾಗಿ ಹರಿಯುತ್ತವೆ..

ನಾವು ಊಟಿಯನ್ನು ತಲುಪಿದಾಗ ಗಂಟೆ 9 ದಾಟಿರಬೇಕು..
ಇನ್ನೂ ಮಂಜಿನ ಮುಸುಕಿನಿಂದ ಎದ್ದಿರಲಿಲ್ಲ..
ಸೂರ್ಯ ಊಟಿಯ ಪಾಲಿಗೆ ರಜಾ ಡ್ಯೂಟಿ ಇರಬೇಕೇನೋ..
ಕಾಣೆಯಾಗಿದ್ದ..
ಊಟಿಯ ಕೆಳ ಭಾಗದಲ್ಲಿ ನಮ್ಮನ್ನು ಕಂಡು ನೆತ್ತಿ ಸುಡಲು ಯತ್ನಿಸಿದ್ದ ಸೂರ್ಯ ಇಲ್ಲಿ ಸದ್ದಿಲ್ಲದೇ ಓಡಿ ಹೋಗಿದ್ದ..
ಸೂರ್ಯನನ್ನು ಅಣಕಿಸೋಣ ಎನ್ನುವ ಭಾವ ನಮ್ಮಲ್ಲಿ ಕಾಡಿದ್ದು ಸುಳ್ಳಲ್ಲ..
ಹಾಳು ಹೊಟ್ಟೆಗೆ ಎಷ್ಟು ತಿಂದರೂ ಸಾಕಾಗೋದಿಲ್ಲ ಕಣ್ರಿ..
ಮತ್ತೆ ಹಸಿವಾಗಿತ್ತು.... ಏನಾದರೂ ತಿನ್ನಬೇಕು...
ಹೊಟೆಲ್ ಹುಡುಕಾಟ ಜಾರಿಯಾಯಿತು..

ಹಿಂದಿನ ಸಾರಿ ನಾನು, ರಾಘವ ಬಂದಿದ್ದೆವಲ್ಲ..
ಅದೇ ಹೋಟೆಲ್ ಹೋದೆವು..
ಒಳ ಹೋಗಿ ಕೈಕಾಲು ತೊಳೆಯೋಣ ಎಂದು ವಾಷಿಂಗ್ ಸಿಂಕಿಗೆ ಕೈಯೊಡ್ಡಿದರೆ ಆಹಾ ಸ್ವರ್ಗ ಸುಖ...
ನಳದಲ್ಲಿ ಬರುತ್ತಿದ್ದುದು ಬಿಸಿ ನೀರು...
ಮುತ್ತಿಕ್ಕುವ ಚಳಿಯಲ್ಲಿ.. ಕೊರೆಯುವ ಚಳಿಯಲ್ಲಿ... ಕಾಡುವ ಚಳಿಯಲ್ಲಿ...
ಬೆನ್ನಟ್ಟಿ ಆವರಿಸುವ ಚಳಿಯಲ್ಲಿ ಬಿಸಿನೀರನ್ನು ಕೊಟ್ಟರೆ ಏನಾಗಬೇಡ ನೀವೇ ಹೇಳಿ ಸಾರ್...
ಆಹಾ... ಎಷ್ಟು ಹೊತ್ತಾದೂ ಕೈ ತೊಳೆಯುವುದು ಮುಗಿಯುವುದೇ ಇಲ್ಲವೇನೋ..
ಹೊಟೆಲಿನ ಸಪ್ಲಾಯರ್ ಬಂದು ಬಯ್ಯಬಹುದೆಂಬ ಭಯದ ನಡುವೆ ಕೈ ತೊಳೆಯುವ ದೀರ್ಘ ಶಾಸ್ತ್ರ ಮುಗಿಯಿತು..

ಆರ್ಡರ್ ಮಾಡಬೇಕಲ್ಲ..
ನಾನು, ರಾಘು, ಕಿಟ್ಟು ನಮ್ಮ ಎಂದಿನ ಮಸಾಲೆ ದೋಸೆಯನ್ನು ಆರ್ಡರ್ ಮಾಡಿದೆವು..
ಇದೇನಿದು ಊಟಿಗೆ ಹೋಗಿ ಮಸಾಲೆದೋಸೆಯೇ ಎಂದು ಕೇಳಬೇಡಿ..
ನಮಗೆ ತಮಿಳು ಬರೋದಿಲ್ಲ..
ಬೇರೆ ತಿಂಡಿ ಸಿಗುತ್ತಿತ್ತೇನೋ..
ನಮಗೆ ಆರ್ಡರ್ ಮಾಡಲು ಭಾಷೆ ಬರಲಿಲ್ಲ..
ಮಸಾಲೆ ದೋಸೆ ಎಂದೆವು..
ತಿಂದೆವು...

ಮೋಹನ ಮಾತ್ರ ದೋಸೆಯಲ್ಲಿಯೇ ಇನ್ನೊಂದೆನೋ ಬಗೆ ಆರ್ಡರ್ ಮಾಡಿದ..
ತಂದಿಟ್ಟರು ನೋಡಿ.. ಅಬ್ಬಬ್ಬಾ...
ದೋಸೆಯ ತುಂಬಾ ಬೇವಿನ ಸೊಪ್ಪಿನ ರಾಶಿ..
ಆಗ ಮೋಹನನ ಮುಖ ನೋಡಬೇಕಿತ್ತು...
ಅದ್ಹೇಗೆ ತಿಂದನೋ... ಪಾಡು ಪಟ್ಟನೋ... ನಾವಂತೂ ನಕ್ಕೆವು...
ಹೊಟ್ಟೆಗಂತೂ ಬಿದ್ದಿತು.. ಮುಂದೆನು ಮಾಡೋದು..?

ಊಟಿಯಲ್ಲಿ ವರ್ಡ್ ಫೇಮಸ್ಸಾಗಿರುವ ಬೊಟಾನಿಕ್ಕಲ್ ಗಾರ್ಡನ್ ನೋಡೋಣ್ವಾ ಎಂಬ ಚರ್ಚೆ ನಮ್ಮದು..
ನೋಡುವಂತದ್ದು ಎಂತದೂ ಇಲ್ಲ.. ಬರಿ ಗಾರ್ಡನ್ನು ಎನ್ನುವ ತೀರ್ಮಾನಕ್ಕೆ ಬಂದು ಬೇರೆ ಎಲ್ಲಾದರೂ ಹೋಗಬಹುದಾ..? ಎನ್ನುವ ಚರ್ಚೆ ಮತ್ತೆ ಸಾಗಿತು..
ಊಟಿಯಲ್ಲಿಯೇ ಅತ್ಯಂತ ಎತ್ತರವಾದ  ಹಾಗೂ ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಳ ಎಂದು ಹೆಸರಾಗಿರುವ `ದೊಡ್ಡಬೆಟ್ಟ'ಕ್ಕೆ ಹೋಗೋಣ ಎಂದು ಗಾಡಿಯನ್ನು ಗುರ್ರೆನ್ನಿಸಿದೆವು...
ಊಟಿಯ ರಸ್ತೆಗಳು ತುಂಬಾ ವಿಚಿತ್ರ ಕಣ್ರೀ.. ಬಳುಕಿ ಬಳುಕಿ ಸಾಗುತ್ತವೆ.. ಎಲ್ಲಲೆಲ್ಲೋ ಒಳಹೊಕ್ಕಿ ಮತ್ತೆಲ್ಲೋ ಹೊರಬರುತ್ತವೆ..
ಊಟಿಯನ್ನು ತಲುಪುವ ಎರಡು ಪ್ರಮುಖ ರಸ್ತೆಗಳೆಂದರೆ ಒಂದು ಮೈಸರೂ ಇನ್ನೊಂದು ಕೂನೂರು..
ಸುತ್ತಮುತ್ತ ಚಿಕ್ಕ ಪುಟ್ಟ ಊರುಗಳಿವೆ..
ಟೈಮಿದ್ದರೆ ಹೋಗಬಹುದು.. ಆದರೆ ದೊಡ್ಡಬೆಟ್ಟವನ್ನು ಮರೆಯುವ ಹಾಗಿಲ್ಲ..
ಸುತ್ತುಬಳಸಿ, ಇಣುಕಿ, ಬಳುಕಿ ದೊಡ್ಡಬೆಟ್ಟವನ್ನು ಹತ್ತತೊಡಗಿದೆವು..

ದಾರಿಯಲ್ಲೆಲ್ಲೋ ಫಾರಿನ್ನು ಮಂದಿಗಳ ಗುಂಪು ಸಿಕ್ಕಿತು.. ಅದ್ಯಾರೋ ಗೂಡು ಅವರನ್ನು ಪಾದಯಾತ್ರೆಯ ಮೂಲಕ ದೊಡ್ಡಬೆಟ್ಟಕ್ಕೆ ಕರೆದೊಯ್ಯುತ್ತಿದ್ದ.
ಅವರನ್ನು ನಿಲ್ಲಿಸಿ ಹಾಯ್ ಎಂದೆವು... ನಡು ನಡುವೆ ನಮ್ಮ ಕ್ಯಾಮರಾ ಕೆಲಸದಲ್ಲಿ ನಿರತವಾಗಿತ್ತು.

ಅಂತೂ ಇಂತೂ ದೊಡ್ಡ ಬೆಟ್ಟವನ್ನು ಹತ್ತಿದೆವು..
ಆಗಲೇ ಮಂಜಿನ ಮುಸುಕು ಅದನ್ನು ಆವರಿಸಿತ್ತು..
ಏನೋ ಅವ್ಯಕ್ತ ಖುಷಿಯಲ್ಲಿ ಮನಸ್ಸು ಪ್ರಫುಲ್ಲವಾಗಿತ್ತು..
ಬ್ರಿಟೀಷರು ಎಂತ ಚಂದ ಜಾಗ ಹುಡುಕ್ತಾರಲ್ಲ ಅನ್ನಿಸಿತು.

ಯಾಕೋ ಮನಸ್ಸು ಮಾತ್ರ..

ಮಂಜು ತಬ್ಬಿತು ನೆಲವ ಬಿಮ್ಮನೆ... ಎಂದು ಹಾಡೋಣ ಎನ್ನಿಸತು.. ಆದರೆ ಅಶ್ವತ್ ಅವರು ನೆನಪಾಗಿ ಸುಮ್ಮನಾದೆ..
ಚಳಿಯಲಿ ಜೊತೆಯಲಿ.. ಆಗಾ.. ನಿಸರ್ಗ ಸುಂದರ ಸ್ಥಳಕ್ಕೆ ವರ್ಣನೆ ಮಾಡಲು ಪದಪುಂಜಗಳು ಸಾಲುತ್ತಿಲ್ಲ...

ದೊಡ್ಡಬೆಟ್ಟದ ತುದಿಯಲ್ಲೊಂದು ಬಿಎಸ್ಸೆನ್ನೆಲ್ ಟವರ್ ಇದೆ.. ನಮ್ಮಲ್ಲಿ ಟವರ್ ಗಳ ಹಾಗೆ ಸಿಗ್ನಲ್ ಪ್ರಾಬ್ಲಮ್ಮಾ ಗೊತ್ತಿಲ್ಲ..
ನಮ್ಮ ಮೊಬೈಲಿನಲ್ಲಿದ್ದ ಐಡಿಯಾ ಅಲ್ಲಿ ಏರ್ ಸೆಲ್ ಆಗಿ ಧೋನಿಯನ್ನು ನೆನಪು ಮಾಡ್ತಾ ಇತ್ತು..
ದೊಡ್ಡಬೆಟ್ಟದ ತುದಿಯಲ್ಲೊಂದು ದೂರದರ್ಶಕ ಇಡಲಾಗಿದೆ..

ಫೀಸಿನೊಂದಿಗೆ ನೋಡಬಹುದು..
ಬೆಟ್ಟದ ತುದಿಯಿಂದ ಊಟಿಯ ಯಾವುದೋ ಮೂಲೆಯನ್ನೋ, ಜನಜಂಗುಳಿಯನ್ನೋ ತೋರಿಸುತ್ತಾರೆ..
ಎರಡು ಸಾರಿ ನೋಡಿದ ಮೇಲೆ ಮುಗಿಯಿತು..
ಮುಂದಿನವರಿಗೆ ಬಿಟ್ಟುಕೊಡಬೇಕು... ಸಕ್ಕತ್ ಲಾಸ್ ಬಡ್ಡಿಮಕ್ಕಳು ಅಂತ ಬಯ್ದು ಬಂದಿದ್ದಾಯ್ತು..

ಅಲ್ಲೆ ಹತ್ತಿರದಲ್ಲಿ ಡೆತ್ ಪಾಯಿಂಟಿದೆ..
ಅಮೃತವರ್ಷಿಣಿಯಲ್ಲಿ ತೋರಿಸ್ತಾರಲ್ಲ ಅದೇ.. ಸುಹಾಸಿನಿ, ಶರತ್ ಬಾಬು ಬೀಳುವ ಜಾಗ..
ಅಲ್ಲಿಗೆ ಹೋಗಿ ನಿಂತರೆ ಏನೋ ಭಯ ನಮ್ಮನ್ನು ಕಾಡುತ್ತದೆ...

ಸಾಲು ಸಾಲಿಗೆ ಬೇಲಿಗಳು... ವಾರ್ನಿಂಗನ್ನು ಮಾಡುವ ವಾಚ್ ಮೆನ್ನುಗಳು..
ಕಬ್ಬಿಣದ ಬೇಲಿ ಸಾಕಾಗದು ಎಂಬಂತೆ ಹಗ್ಗವನ್ನು ಹಾಕಿರುತ್ತಾರೆ...
ಮುಂದೆ ಹೋಗಬೇಡಿ ಎಂದು ತಮಿಳಿನಲ್ಲಿ ಹೇಳುತ್ತಾರೆ.. ನಮಗೆ ಅರ್ಥವಾಗುವುದಿಲ್ಲ... ಇರಲಿ..


ಅಲ್ಲಿಂದ ಮತ್ತೆ ಮರಳಿ ಬಂದು ದೊಡ್ಡಬೆಟ್ಟದ ತುದಿಯಲ್ಲಿರುವ ಕಲ್ಲಿನ ಬೇಂಚಿನ ಮೇಲೆ ನಾವು ನಾಲ್ವರು ಕುಳಿತುಕೊಳ್ಳುವ ವೇಳೆಗೆ ಆಗಲೇ ನಮ್ಮ ಸುತ್ತಮುತ್ತ ಮಂಜಿನ ಮೋಡ ಬರಲಾರಂಭಿಸಿತ್ತು..
ಮುಖವನ್ನೆಲ್ಲ ತಣ್ಣಗೆ ಮಾಡುತ್ತ.. ಹನಿಯನ್ನು ತೊಟ್ಟಿಕ್ಕುತ್ತ ಮಂಜು ನಮ್ಮನ್ನು ಆವರಿಸಿತು..
ಏನೋ ಸಂತೋಷ.. ಮತ್ತಷ್ಟು ಪೋಟೋಗಳು ಕ್ಲಿಕ್ಕಿಸಲ್ಪಟ್ಟವು...
ಮರಳಿ ಬರುವಾಗ ಅಲ್ಲಿನ ಲೋಕಲ್ ಮಾರ್ಕೆಟ್ ಗೆ ಹೋದೆವು.. ತರಹೇವಾರಿ ಚಸ್ಮಾಗಳಿದ್ದವು.. ಟೋಪಿಗಳಿದ್ದವು.. ಇನ್ನೂ ಏನೇನೋ ಚಿತ್ರ ವಿಚಿತ್ರ ಐಟೆಮ್ಮುಗಳಿದ್ದೆವು..
ಕೊಳ್ಳುವವರ ಪೋಸಿನಲ್ಲಿ ಹೋಗಿ ರೇಟು ಕೇಳಿ.. ಚೌಕಾಸಿ ಮಾಡಿ.. ಬ್ಯಾಡ ಎಂದು ಬಿಟ್ಟು ಬಂದೆವು...
ಹಳೆಯಕಾಲದ ಯಾವುದೋ ಸೇಡನ್ನು ತೀರಿಸಿಕೊಂಡ ಖುಷಿ ನಮಗೆ..
ಕೆಕ್ಕರುಗಣ್ಣಿನ ಉತ್ತರ ನೀಡಿದ್ದ ಅಂಗಡಿಯ ಹುಡುಗಿ.../ಮಧ್ಯವಯಸ್ಸಿನ ಹೆಂಗಸು...
ಅಂತೂ ದೊಡ್ಡ ಬೆಟ್ಟ ನೋಡಿದ್ದಾಯ್ತು.. ಕಣ್ತುಂಬಿಕೊಂಡಿದ್ದಾಯ್ತು.. ಮರಳಬೇಕಲ್ಲ...
ಸೂರ್ಯ ನೆತ್ತಿಗೆ ಬರುವ ಹೊತ್ತಾಗಿದ್ದರೂ ಪತ್ತೆಯಿರಲಿಲ್ಲ.. ಹಾಳು ಹೊಟ್ಟೆ ಮತ್ತೆ ಮತ್ತೆ ಬೆಲ್ಲು ಬಾರಿಸುತ್ತದೆ ನೋಡಿ...

ಬರ್ರೋ ಹೋಗೋಣ ಎಂದು ವಾಪಸ್ಸಾಗಲು ಹೊರಟೆವು...
ಊಟಿಯಲ್ಲಿ ಊಟಕ್ಕೊಂದು ಹೋಟೆಲ್ ಹುಡುಕಬೇಕು... ಲೋಕಲ್ ಮಾರ್ಕೇಟನ್ನು ಸುತ್ತಾಡುವ ಕುತೂಹಲವಿತ್ತು..
ಊಟದ ನಂತರ ಮಾಡೋಣ ಎನ್ನುವ ಚರ್ಚೆ.. ತಿಂಡಿ ತಿಂದು ಹೋಗೋಣ.. ಊಟಿಯಿಂದ ಮರಳುವ ದಾರಿಯಲ್ಲಿ ಒಂದು ಕಡೆ ಒಳ್ಳೆಯ ಊಟ ಸಿಗುತ್ತದೆ.. 60 ರು. ಆದರೂ ಚನ್ನಾಗಿದೆ.. ಎಂದು ರಾಘವ ಐಡೀರಿಯಾ ಕೊಟ್ಟ..
ಸರಿ ಎಂದೆವು..
ಅಲ್ಲಿ ಮಾರ್ಕೇಟ್ ಸುತ್ತಾಡಿ ಕೊಳ್ಳುವುದನ್ನು ಕೊಳ್ಳೊಣ ಎಂದು ಹೊರಟೆವು..

(ಮುಂದುವರಿಯುತ್ತದೆ)

No comments:

Post a Comment