Saturday, March 23, 2013

ಬೇಡರ ವೇಷದ ಸಡಗರ

ನಗರದಾದ್ಯಂತ ಬೇಡರ ವೇಷದ ಸಡಗರ. ನಗರದ ಪ್ರಮುಖ ವೃತ್ತಗಳಲ್ಲಿ ಬೇಡನ ಅಬ್ಬರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಾದ್ಯಂತ ತಮಟೆಯ ಸದ್ದಿನ ಜೊತೆಗೆ ಬೇಡನ ಹೂಂಕಾರ, ಬೇಡರ ವೇಷವೆಂಬ ಸಂಪ್ರದಾಯದ ಕುಣಿತವನ್ನು ಕಾಣಬಹುದಾಗಿದೆ.
    ಶಿರಸಿ ಹಾಗೂ ಸುತ್ತಮುತ್ತಲಿನ ಕೆಲವೇ ಕಡೆಗಳಲ್ಲಿ ಕಾಣಬಹುದಾದ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಾಣಸಿಗುತ್ತದೆ. ಶಿರಸಿಯ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಬ್ರಮ ಮುಗಿಲುಮುಟ್ಟುತ್ತದೆ. ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತದೆ. ಕಳೆದ 20-22 ದಿವಸಗಳಿಂದಲೇ ಬೇಡರ ವೇಷದ ತಾಲೀಮು ಶುರುವಾಗಿದೆ. ಇದರಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೇಡರ ವೇಷದ ತಾಲೀಮು, ತಮಟೆ ಸದ್ದು ಸವರ್ೇ ಸಾಮಾನ್ಯವಾಗಿದೆ.
    ಕಳೆದ ಒಂದು ದಶಕಗಳ ಹಿಂದೆ ನಗರದಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಬೇಡರ ವೇಷವನ್ನು ಹಾಕಲಾಗುತ್ತಿತ್ತು. ಆದರೆ ಈಗ ಅವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗೆ ಬೇಡರ ವೇಷವನ್ನು ಹಾಕುವ ಗುಂಪೊಂದನ್ನು ಬಂಡಿ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕೆಲವೇ ಕೆಲವಿದ್ದ ಬಂಡಿಗಳ ಸಂಖ್ಯೆ ಈಗ ಬಹಳಷ್ಟು ಹೆಚ್ಚಿದೆ. ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ 15-20 ಬಂಡಿಗಳು ಸಂಚರಿಸಿ ಬೇಡರ ನೃತ್ಯವನ್ನು ಮಾಡಲಾಗುತ್ತದೆ. ಈ ವರ್ಷ ಅಜಮಾಸು 40ಕ್ಕೂ ಹೆಚ್ಚು ಬಂಡಿಗಳಿವೆ ಎಂದು ಹೇಳಲಾಗುತ್ತಿದೆ. ಗಲ್ಲಿಗೊಂದರಂತೆ ಬಂಡಿಗಳು ಹುಟ್ಟಿಕೊಂಡಿದ್ದು ಈಗಾಗಲೇ ತಾಲೀಮಿನಲ್ಲಿ ತೊಡಗಿಕೊಂಡಿವೆ. ನಗರದ ಅಧಿದೇವತೆ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಬಂಡಿ ನಂತರ ನಗರದ ವಿವಿಧ ಬೀದಿಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಸಂಚರಿಸುತ್ತವೆ. ರಾತ್ರಿ 10 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ಬೇಡರ ವೇಷದ ವೈವಿಧ್ಯತೆ ಕಾಣಬಹುದಾಗಿದೆ.
ಹಿನ್ನೆಲೆ
       ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಕಾಣ ಸಿಗಬಹುದಾದ ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆಗೆ ನಾಲ್ಕಾರು ಶತಮಾನಗಳ ಇತಿಹಾಸವಿದೆ. ಶಿರಸಿ ಪ್ರದೇಶಗಳನ್ನು ಆಳ್ವಿಕೆ ನಡೆಸಿದ್ದ ಸೋದೆಯ ಅರಸರ ಕಾಲದಿಂದ ಬೇಡರ ವೇಷವೆಂಬುದು ಚಾಲ್ತಿಗೆ ಬಂದಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತವೆ.
    ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆ ಬೆಳೆದು ಬಂದ ಕುರಿತು ಹಲವಾರು ಕಥೆಗಳೂ ಚಾಲ್ತಿಯಲ್ಲಿವೆ. ಶಿರಸಿ ಭಾಗದಲ್ಲಿ 15-16ನೇ ಶತಮಾನದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ದರೋಡೆಕೋರ ಬೇಡನ ಕಥೆಯನ್ನು ಈ ಕುರಿತು ಉಲ್ಲೇಖಿಸಲಾಗುತ್ತದೆ. ಜನರನ್ನು ಕಾಡುತ್ತಿದ್ದ ಕಾನನ ವಾಸಿ ಬೇಡನನ್ನು ಹಿಡಿಯಲು ಸೋದೆಯ ಅರಸ ಸೈನಿಕರನ್ನು ಅಟ್ಟಿ, ಹರಸಾಹಸದಿಂದ ಆತನನ್ನು ಬಂಧಿಸಲು ಯಶಸ್ವಿಯಾಗುತ್ತಾನೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಿಂದ ಹೂಂಕರಿಸುತ್ತಾನೆ. ಆತನನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ ಎನ್ನುವುದೊಂದು ಕಥೆ.
    ಸೋದೆ ಅರಸರ ಕಾಲದಲ್ಲಿ ಶಿರಸಿಯೆಂಬುದು ಚಿಕ್ಕ ಹಳ್ಳಿ. ಆದರೂ ಇಲ್ಲಿ ನಾಲ್ಕಾರು ಅಂಗಡಿ ಮುಂಗಟ್ಟುಗಳಿದ್ದು, ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಳ್ಳುವ ಪ್ರಮುಖ ಸ್ಥಳವಾಗಿತ್ತು. ಅಲ್ಲದೇ ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪಕರ್ಿಸುವ ಆಯಕಟ್ಟಿನ ಸ್ಥಳವೂ ಇದಾಗಿತ್ತು. ಸಂಪದ್ಭರಿತ ಈ ಸ್ಥಳದ ಮೇಲೆ ಬಹಮನಿ ಅರಸರ ಹಾಗೂ ಮೊಘಲರ ದಾಳಿ ಪದೆ ಪದೆ ನಡೆಯುತ್ತಿತ್ತು. ಅದನ್ನು ತಡೆಯುವ ಸಲುವಾಗಿ ಸೋದೆಯ ಅರಸ ಕಲ್ಯಾಣ ಶೆಟ್ಟಿ ಎನ್ನುವವನನ್ನು ಶಿರಸಿಯಲ್ಲಿ ನೇಮಕ ಮಾಡುತ್ತಾನೆ. ಕಲ್ಯಾಣ ಶೆಟ್ಟಿ ತನ್ನ ಬಂಟರ ಸಹಾಯದಿಂದ ಹೊರ ಭಾಗದ ಧಾಳಿಯನ್ನು ತಡೆಗಟ್ಟಲು ಯಶಸ್ವಿಯಾಗುತ್ತಾನೆ.
    ಮಲ್ಲೇಶಿ ಎನ್ನುವವನು ಕಲ್ಯಾಣ ಶೆಟ್ಟಿಯ ಬಂಟರಲ್ಲೊಬ್ಬ. ಈತನ ಕಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎನ್ನುವ ಕಾರಣದಿಂದಲೇ ವೈರಿಗಳ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಾನೆ. ಕಣ್ಣಿನಲ್ಲಿ ವಿಶೇಷ ಶಕ್ತಿಯುಳ್ಳ ಮಲ್ಲೇಶಿ ರಾತ್ರಿಯ ಸಂದರ್ಭದಲ್ಲಿ ವೈರಿ ಪಡೆಯನ್ನು ಸೋಲಿಸಲು ಕಾರಣನಾಗುತ್ತಾನೆ. ಕೊನೆಗೊಮ್ಮೆ ಕಣ್ಣಿನ ವಿಶೇಷ ಶಕ್ತಿಯೇ ಆತನಲ್ಲಿ ಅಹಂಕಾರ ಬೆಳೆಯುವುದಕ್ಕೆ ಕಾರಣವಾಗುತ್ತದೆ. ವಿಶೇಷ ಶಕ್ತಿಯಿರುವ ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ತಾನೊಬ್ಬ ಮಹಾನ್ ವ್ಯಕ್ತಿ ಎಂದು ಸೊಕ್ಕಿನಿಂದ ಮೆರೆಯುವ ಮಲ್ಲೇಶಿ ಪಟ್ಟಣದ ಮಹಿಳೆಯರ ಮೇಲೆ ಕಣ್ಣು ಹಾಕಲು ಯತ್ನಿಸುತ್ತಾನೆ.
    ಅಂದಿನ ಶಿರಸಿಯ ಮಹಿಳೆಯರು, ಹುಡಿಗಿಯರಿಗೆ ತೊಂದರೆ ನೀಡುವ ಮಲ್ಲೇಶಿ ಅವರನ್ನು ಹೊತ್ತೊಯ್ಯಲು ಪ್ರಾರಂಭಿಸುತ್ತಾನೆ. ಹೀಗಿರಲು ಒಂದು ದಿನ ಕಲ್ಯಾಣ ಶೆಟ್ಟಿಯ ಮಗಳಾದ ರುದ್ರಾಂಬೆಯ ಮೇಲೆ ಮಲ್ಲೇಶಿಯ ದೃಷ್ಟಿ ಹಾಯುತ್ತದೆ. ರುದ್ರಾಂಬೆಯನ್ನು ಬಯಸುವ ಮಲ್ಲೇಶಿ ಆಕೆಯನ್ನು ತನ್ನ ಜೊತೆಗೆ ಬರುವಂತೆ ಕೇಳಿಕೊಳ್ಳುತ್ತಾನೆ. ಆತನ ಹಾವಳಿಯನ್ನು ಅರಿತಿದ್ದ ರುದ್ರಾಂಬೆ ಮಲ್ಲೇಶಿಗೆ ಪಾಠವನ್ನು ಕಲಿಸುವ ಸಲುವಾಗಿ ಆತನ ಜೊತೆಗೆ ಹೋಗಲು ಒಪ್ಪಿಕೊಳ್ಳುತ್ತಾಳೆ.
    ಈ ನಡುವೆ ಮಲ್ಲೇಶಿಯ ಗುಣಾವಗುಣಗಳನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಸೂಕ್ತ ಸಮಯವನ್ನು ಎದುರುನೋಡುತ್ತಿರುತ್ತಾಳೆ. ಪ್ರತಿ ಹುಣ್ಣಿಮೆಯ ದಿನ ಮಾರಿಕಾಂಬೆ (ದೇವಿ)ಯ ಪೂಜೆ ಮಾಡುವ ವಿಷಯವನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ಪಾಠ ಕಲಿಸಲು ಇದೇ ಸೂಕ್ತ ಸಮಯವೆಂದು ನಿರ್ಧರಿಸಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಆತ ಪೂಜೆ ಮಾಡುತ್ತಿದ್ದಾಗ ಮಲ್ಲೇಶಿಯ ಕಣ್ಣಿಗೆ ರಾಸಾಯನಿಕಗಳನ್ನು ಎರಚಿಬಿಡುತ್ತಾಳೆ. ಇದರಿಂದಾಗಿ ಕಣ್ಣಿನ ಶಕ್ತಿ ಕಳೆದುಕೊಳ್ಳುವ ಮಲ್ಲೇಶಿ ವೇದನೆಯಿಂದ ಕೂಗಿಕೊಳ್ಳುತ್ತಾನೆ. ಆತನ ಕಣ್ಣು ಕುರುಡಾಗುತ್ತದೆ. ಇದರಿಂದಾಗಿ ಹಳ್ಳಿಯ ಜನರಿಗೆಲ್ಲ ಸಂತಸವಾಗಿ ಸಂಭ್ರಮಾಚರಣೆಗಳನ್ನು ನಡೆಸುತ್ತಾರೆ. ಮಲ್ಲೇಶಿಯನ್ನು ಹಗ್ಗದಿಂದ ಬಂಧಿಸಿ ಆತನನ್ನು ಊರಿನಾದ್ಯಂತ ಮೆರವಣಿಗೆ ಮಾಡುತ್ತಾರೆ. ಕಣ್ಣಿನ ವೇದನೆ ಹಾಗೂ ಬಂಧನದ ಸಿಟ್ಟಿನಿಂದ ಹೂಂಕರಿಸುವ ಮಲ್ಲೇಶಿಯನ್ನು ರುದ್ರಾಂಬೆ ಕೆಣಕುತ್ತ ಮುಂದೆ ಸಾಗುತ್ತಾಳೆ. ನಂತರ ಸತಿ ಸಹಗಮನದ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ರುದ್ರಾಂಬೆಯ ನೆನಪಿಗಾಗಿ ಬೇಡರ ವೇಷವನ್ನು ಹಾಕಿ ಕುಣಿಯಲಾಗುತ್ತದೆ ಎನ್ನುವುದು ಹಿರಿಯರ, ಪ್ರಾಜ್ಞರ ಅಂಬೋಣವಾಗಿದೆ.
ಆಚಾರ ವಿಚಾರ   
ಬೇಡರ ವೇಷವನ್ನು ಹಾಕಿ ಕುಣಿಯುವವನು ಕೈಗೊಳ್ಳಬೇಕಾದ ಕೆಲವು ವಿಶಿಷ್ಟ ಆಚಾರ ವಿಚಾರಗಳೂ ಇವೆ. ಮೂರು ದಿನಗಳ ಕಾಲ ನಡೆಯುವ ಬೇಡರ ವೇಷದ ಕುಣಿತವನ್ನು ಮೊದಲೇ ನಿರ್ಧರಿಸಿಕೊಳ್ಳಲಾಗುತ್ತದೆ. ಯಾವ ದಿನ ಯಾವ ಭಾಗದ ವ್ಯಕ್ತಿ ವೇಷ ಹಾಕಬೇಕೆಂದು ಮೊದಲೇ ತಿಳಿದುಕೊಂಡು ಅವರದೇ ಆದ ಕೆಲವು ಆಚಾರ ವಿಚಾರ, ಸಂಪ್ರದಾಯಗಳನ್ನು ಕೈಗೊಳ್ಳುತ್ತಾರೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ಬಣ್ಣ ತೊಡುವ ಮೊದಲು ದೇವರಿಗೆ ಕಾಯಿ ಇಟ್ಟು ಪೂಜೆ ಮಾಡುತ್ತಾನೆ. ಆ ದಿನ ಆತನಿಗೆ ಮಾಂಸಾಹಾರ ನಿಷಿದ್ದ. ಕೇವಲ ಹಾಲು ಹಾಗೂ ದೇವರ ನೈವೇದ್ಯದ ಹಣ್ಣುಗಳನ್ನು ಮಾತ್ರ ತಿನ್ನುತ್ತಾನೆ.
          ಬೇಡರ ವೇಷ ತೊಡುವವನಿಗೆ ಇನ್ನೊಬ್ಬ ವ್ಯಕ್ತಿ ಬಣ್ಣ ಹಚ್ಚುತ್ತಾನೆ. ಬಣ್ಣ ಹಚ್ಚುವ ವ್ಯಕ್ತಿ ಮೊದಲೇ ವೀಳ್ಯದೆಲೆ, ದಕ್ಷಿಣೆ, ಕಾಣಿಕೆಗಳನ್ನು ನೀಡಿ ಬಣ್ಣ ಹಚ್ಚಲು ಪ್ರಾರಂಭಿಸುತ್ತಾನೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ದೇವರಿಗೆ ಸಮಾನ ಎನ್ನುವ ನಂಬಿಕೆಯಿರುವ ಕಾರಣ ಆತನನ್ನು ವಿಶೇಷ ಗೌರವದಿಂದ ಕಾಣಲಾಗುತ್ತದೆ. ಬೇಡನ ವೇಷ ತೊಟ್ಟವನು ಬಣ್ಣ ಹಚ್ಚಿದ ನಂತರ ಕನ್ನಡಿಯಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಳ್ಳಬಾರದು ಎನ್ನುವ ಸಂಪ್ರದಾಯವೂ ಚಾಲ್ತಿಯಲ್ಲಿದೆ.
    ನಂತರ ಆತನನ್ನು ನಾಲ್ಕಾರು ಜನರು ತಮಟೆ ಬಡಿಯುವ ಮೂಲಕ ನಗರ ಸಂಚಾರಕ್ಕೆ ಕರೆದೊಯ್ಯುತ್ತಾರೆ. ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ದೇವರಿಗೆ ಸೇರಿದ ಸ್ಥಳಗಳಿವೆ. ಅಂದರೆ ಮಾರಿಕಾಂಬೆಗೆ ಸೇರಿದ ಪ್ರದೇಶ, ದೇವಿಕೆರೆಯಲ್ಲಿ ಭೂತಪ್ಪನ ಕಟ್ಟೆ, ಶಿವಾಜಿ ಚೌಕದಲ್ಲಿ ವೀರಾಂಜನೇಯನಿಗೆ ಸೇರಿದ ಕಟ್ಟೆ ಪ್ರದೇಶ ಹೀಗೆ. ಆ ದೇವರಿಗೆ ಸೇರುವ ಜಾಗದ ಗಡಿಯನ್ನು ಬೇಡರ ವೇಷಧಾರಿ ಕಾಲಿಟ್ಟ ತಕ್ಷಣ ಆತನಿಗೆ ಆ ದೇವರು ರಕ್ಷಣೆ ನೀಡಿ, ದುಷ್ಟ ಶಕ್ತಿಗಳ ಕಾಟವನ್ನು ತಡೆಗಟ್ಟುವಂತೆ ಸುಳಿಕಾಯಿ ಒಡೆಯಲಾಗುತ್ತದೆ. ಇದು ಬೇಡ ವೇಷಧಾರಿಗೆ ಶ್ರೇಯಸ್ಸನ್ನು ತಂದುಕೊಡುತ್ತದೆ ಎನ್ನುವ ನಂಬಿಕೆಯಿದೆ.
    ಬದಲಾದ ಕಾಲಘಟ್ಟದಲ್ಲಿ ಈ ಸಂಪ್ರದಾಯಗಳಲ್ಲಿ ಹಲವು ಬಿಟ್ಟುಹೋಗಿದೆ. ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಪ್ರದಾಯಗಳನ್ನು ಬದಲಾಯಿಸಿಕೊಂಡಿದ್ದಾರೆ. ಕಷ್ಟದ ಕೆಲವು ಸಂಪ್ರದಾಯಗಳು ಮರೆಯಾಗಿದೆ. ಸುಲಭದ ಸಂಪ್ರದಾಯಗಳು ಹಾಗೆಯೇ ಉಳಿದಿವೆ. ಬೇಡರ ವೇಷವನ್ನು ಹಾಕುವ ವ್ಯಕ್ತಿಗೆ ಅಪಾರವಾದ ದೈಹಿಕ ಸಾಮಥ್ರ್ಯದ ಅಗತ್ಯವಿರುತ್ತದೆ. ಮೈಲಿಗಟ್ಟಲೆ ನಡೆಯಬೇಕು, ಕುಣಿಯಬೇಕು. ರಂಜಿಸಬೇಕು. ಇದಕ್ಕಾಗಿ ಸಾಕಷ್ಟು ಶ್ರಮವಹಿಸಬೇಕು ಎಂದು ಬೇಡರ ವೇಷದ ಖ್ಯಾತಿಯ ಸಂತೋಷ ಕುಮಾರ್ ಅಭಿಪ್ರಾಯಪಡುತ್ತಾರೆ.
ವೇಷ-ಭೂಷಣ
    ನವಿಲುಗರಿಯ ಕಿರೀಟ, ಕೈಯಲ್ಲೊಂದು ಕತ್ತಿ, ಗುರಾಣಿ, ಕತ್ತಿಯ ತುದಿಯಲ್ಲಿ ನಿಂಬೆಯಹಣ್ಣು, ಕುತ್ತಿಗೆಗೆ ನೋಟಿನ ಹಾರ, ಕೆಂಪು ಬಣ್ಣದ ಧಿರಿಸು, ಕಡಿ ಕಾರುವ ಕಣ್ಣು, ಕೋಡು ಈ ಮುಂತಾದ ವಿಚಿತ್ರ ರೌದ್ರ ಧಿರಿಸನ್ನು ಧರಿಸುವ ಬೇಡರ ವೇಷಧಾರಿ ಕುಣಿಯುತ್ತ ಸಾಗಿದರೆ ಆತನನ್ನು ಹಗ್ಗದ ಮೂಲಕ ಎರಡೂ ದಿಕ್ಕಿನಲ್ಲಿ ಇಬ್ಬರು ಹಿಡಿದು ನಿಯಂತ್ರಿಸುತ್ತಾರೆ. ತಮಟೆ, ವಾದ್ಯಗಳನ್ನು ಬಾರಿಸುತ್ತ ಸಾಗುತ್ತಿದ್ದರೆ ಬೇಡರ ವೇಷಧಾರಿ ಹೂಂಕರಿಸುತ್ತಾ, ಕುಣಿಯುತ್ತಾ ಸಾಗುವ ದೃಷ್ಯವೇ ಸುಂದರವಾದುದು. ಈ ಬೇಡರವೇಷವನ್ನು ನೋಡುವ ಸಲುವಾಗಿಯೇ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಶಿರಸಿಗೆ ಆಗಮಿಸುತ್ತಾರೆ.
    ಶನಿವಾರ, ಭಾನುವಾರ ಹಾಗೂ ಸೋಮವಾರ ರಾತ್ರಿ ನಡೆಯುವ ಈ ಬೇಡರ ವೇಷವನ್ನು ನೋಡುವ ಸೊಬಗೇ ಬೇರೆ. ಬೇಡರ ವೇಷವೆಂಬ ನಮ್ಮೊಳಗಿನ ವಿಶೇಷ ಸಂಪ್ರದಾಯ, ಕಲೆ, ಜಾನಪದ ಪ್ರಾಕಾರಕ್ಕೆ ಸಾರ್ವಜನಿಕರೂ ಸಹಕರಿಸಿ, ಬೇಡರ ವೇಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ನೃತ್ಯಕ್ಕೆ, ತಲೆದೂಗಿ ಶ್ರಮಕ್ಕೆ ವಿಸ್ಮಯ ಪಡಬೇಕಿದೆ.
ಹಾಗಾದ್ರೆ ಯಾಕೆ ತಡ ಮಾಡ್ತಾ ಇದ್ದೀರಿ... ಈಗ್ಲೇ ಬನ್ನಿ.... ಮುಗಿದು ಹೋಗುವ ಮುನ್ನ ಕಣ್ಮನವನ್ನು ತಣಿಸಿಕೊಳ್ಳಿ....
ಹೋ....... ಹಾ........ಹೀ.....

2 comments:

  1. ವಿನಯ,
    ಬೆಡರವೇಷ ಕುರಿತು ಇತಿಹಾಸದಲ್ಲಿ ಹುದುಗಿ ಹೋಗಿರುವ ಮಾಹಿತಿಯನ್ನು ಕೆದಕಿ ತೆಗೆದು ಹಂಚುವ ಪ್ರಯತ್ನ ಶ್ಲಾಘನೀಯ. ಈ ಎಲ್ಲಾ ರೀತಿಯ ಪ್ರಯತ್ನಗಳಿಗೆ ಶುಭ ಹಾರೈಕೆಗಳು...

    ಸುಹಾಸ. ಹೋರಾ. ಶಿರಸಿ.

    ReplyDelete