Tuesday, March 19, 2013

ಕೊನೆ ಗೌಡರೆಡೆಗಿನ ಹೊಣೆ

ಕೊನೆ ಗೌಡರೆಡೆಗಿನ ಹೊಣೆ


ತೀರಾ ಇತ್ತೀಚೆಗೆ ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ ಒಬ್ಬ ಕೊನೆ ಗೌಡ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಸತ್ತೇ ಹೋದ. ಶಿರಸಿ ಸೀಮೆಯಲ್ಲಿ ಇನ್ನೊಬ್ಬ ಮರದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಒಂದೆರಡು ವರ್ಷಗಳ ಹಿಂದೆ ನಮ್ಮೂರ ಬಳಿಯ ಗವಿನಗುಡ್ಡದಲ್ಲಿ ಒಬ್ಬ ಕೊನೆಗೌಡ ಮರದಿಂದ ಬಿದ್ದಿದ್ದ., ಬಿದ್ದವನು ಒಕ್ಕುಡುತೆ ನೀರಿಗೆ ಬಾಯ್ದೆರೆಯಲಿಲ್ಲ. ನಂತರವೇ ಇರಬಹುದು ನಮ್ಮೂರ ಭಾಗದಲ್ಲಿ ಕೊನೆಗೌಡರ ಕಡೆಗಷ್ಟು ಹೊಣೆಗಾರಿಕೆಯನ್ನು ತೋರಿಸಿ ಅದನ್ನು ನೆನಪು ಮಾಡಿಕೊಂಡಿದ್ದು.
 ಕೊನೆಗೌಡ ಎಂದ ಮೇಲೆ ಆತನ ಸ್ಪಷ್ಟ ಚಿತ್ರಣ ನೀಡಬೇಕಲ್ಲ..!! ಇಲ್ಲಿದೆ ಕೇಳಿ., ಕೊನೆಗೌಡನೆಂದಕೂಡಲೇ ನಮಗೆ ನೆನಪಿಗೆ ಬರುವಂತದ್ದು, ಉದ್ದನೆಯ ದೋಟಿ ಅಡಿಕೆ ಮರವನ್ನು ಎಳೆದು ಬಾಗಿಸಿ ತರಲು ಉಪಯೋಗಿಸುವಂತದ್ದು, ಕೊಯ್ದ ಕೊನೆ ಉದುರದಂತೆ, ಚದುರದಂತೆ ಭೂಮಿಗಿಳಿಸಲು ಹನುಮನ ಬಾಲದಂತಹ ಉದ್ದನೆಯ ಹಗ್ಗ, ಕೈಯಲ್ಲಿ ಮೋಟುಗತ್ತಿ, ಕಾಲಲ್ಲಿ ತಳೆ, ಮರದ ಮೇಲೆಯೇ ಕುಳಿತು ಕೆಲಸ ಮಾಡಲು ಕಡಕುಮಣೆ ಹಾಗೂ ಮೀಟರುಗಟ್ಟೆ ದೂರಕ್ಕೆ ಬರುವ ಆತನ ಮೈಯ ಎಣ್ಣೆಯ ವಾಸನೆ.
 ಇವೆಲ್ಲವುಗಳ ಜೊತೆಗೆ ನಮಗೆ ನೆನಪಾಗುವುದು ಮರವೇರುವ ಆತನ ಕೌಶಲ್ಯ. ಜೊತೆ ಜೊತೆಯಲ್ಲಿಯೇ ಮರದಿಂದ ಮರಕ್ಕೆ ದಾಟುವ ಆತನ ಚಾಕಚಕ್ಯತೆ. ಒಂದೆ ಒಂದು ಅಡಿಕೆಯೂ ಉದುರದಂತೆ ಕೊನೆಯನ್ನು ಕೊಯ್ದು ಭೂಮಿಯ ಮೇಲೆ ಹಗ್ಗ ಹಿಡಿದು ನಿಲ್ಲುವ ವ್ಯಕ್ತಿಗೆ ತಲುಪುವಂತೆ ರೊಂಯ್ಯನೆ ಬಿಡುವ ಕೊನೆಗೌಡನ ಕೆಲಸ ಸುಲಭದ್ದಲ್ಲ ಬಿಡಿ. ಹಾಳಾದವ್ನು.., ಇವತ್ತು ಬರ್ಲೇ ಇಲ್ಲ ಮಾರಾಯಾ ಎಂದು ಕೊನೆಗೌಡನನ್ನು ಬಯ್ಯುವುದು ಸುಲಭ.. ಆದರೆ ಆತನ ಕೆಲಸದ ಕುರಿತು ಬಲ್ಲವರೇ ಹೇಳಬೇಕು.
 ಕೊನೆಗೌಡನ ಕುರಿತು ಬರಹದ ಮೂಲಕ ಹೇಳುವುದು ಬಹಳ ಸುಲಭ. ಆದರೆ ಕೊನೆಗೌಡರ ವೃತ್ತಿ ಬಹಳ ಕಠಿಣವಾದುದು. ಮರವೇರಿದ ಕೊನೆಗೌಡನನ್ನು ಕೆಳಗಿನಿಂದ ಯಾರಾದರೂ ನೋಡಿದರೆ ಕೆಳಗಿನವರಿಗೆ ತಲೆ ತಿರುಗುತ್ತದೆ. ಅಂತದ್ದರಲ್ಲಿ ಮಂಗನಿಗಿಂತ ಸಲೀಸಾಗಿ, ಮಿಗಿಲಾಗಿ ಚಕಚಕನೆ ಕುಪ್ಪಳಿಸಿ ಮರವನ್ನೇರುವ, ಅಷ್ಟೇ ಸಲೀಸಾಗಿ ಮರದಿಂದ ಮರಕ್ಕೆ ದಾಟುವ ಕೊನೆಗೌಡರಿಗೆ ಭಯವಾಗುವುದಿಲ್ಲವಾ..? ಗೊತ್ತಿಲ್ಲ. ಜೀವ ಕೈಯಲ್ಲಿ ಹಿಡಿದಾದರೂ ಮರವೇರಿ ಆತ ಅಡಿಕೆ ಕೊಯ್ಯುತ್ತಾನಲ್ಲಾ, ಅಂಥವರೇ ಗ್ರೇಟ್ ಆಗುತ್ತಾರೆ. ಆದರೆ ನಮಗದು ತಿಳಿಯುವುದೇ ಇಲ್ಲ.
 ನಾವು ಕೊಡುವ ನಾನೂರು ರೂಪಾಯಿ ಕಡಿಮೆಯಾಯ್ತು ವಡಿಯಾ ಎಂದು ಕೊನೆಗೌಡ ಕ್ಯಾತೆ ತೆಗೆದ ಸಂದರ್ಭದಲ್ಲಿ ಹಚ್ಚಾಹುಚ್ಚಿ ಬಯ್ಯುವ ನಮಗೆ ಆತನ ಕೆಲಸದ ವೈಖರಿಯೇಕೆ ತಿಳಿದುಬರುವುದಿಲ್ಲ..? ಕೆಲಸಕ್ಕೆ ಬಂದ ವಪ್ಪತ್ತಿನಲ್ಲೆ ಕನಿಷ್ಟವೆಂದರೂ ಮೂರ್ನಾಲ್ಕು ಕ್ವಿಂಟಾಲು ಅಡಿಕೆ ಕೊಯ್ಯುವ ಸಾಮಥ್ರ್ಯವಿರುವ ಕೊನೆಗೌಡರಿಗೆ ನಾನೂರು ರೂಪಾಯಿ ಕಡಿಮೆಯ ಬಾಬ್ತೇ ಸರಿ. ಅವನ ಕೆಲಸದ ವೈಖರಿಗೆ ಅಷ್ಟಾದರೂ ಬೇಡವೇ..? ಅಡಿಕೆಗೆ ಕೊಳೆಮದ್ದು ಹೊಡೆಸಿ, ಕೊನೆಕೊಯ್ಲಿನ ಸಂದರ್ಭದಲ್ಲಿ ಹಸಿಯಡಿಕೆ-ಗೋಟಿನ ಕೊನೆ (ತೆರಿಯಡಿಕೆ ಪ್ರೀ..), ಕೊಯ್ಯುವ ವ್ಯಕ್ತಿಗೆ ಮಾಡಿದ ಶ್ರಮಕ್ಕೆ ತಕ್ಕ ಬೆಲೆ ಬಂದರೆ ಆತ ಹಷರ್ಿಸುತ್ತಾನೆ.
 `ಹ್ವಾಯ್.. ಹೆಗುಡ್ರೂ... ನಾನ್ ಬಂದೇನಿ.. ಜಲ್ದಿ ಆಸ್ರಿಗೆ ರೆಡಿ ಮಾಡಿ.. ಮರಾ ಹತ್ತಾಕ್ ಹೋಗ್ಬೇಕು.. ಇವತ್ತೆಷ್ಟೇ ಹೊತ್ತಾದ್ರೂ.. ದೊಡ್ಡಪಾಲು, ಹೊಳೆಯಂಚಿನ ಪಾಲು ಕೊನೆಕೊಯ್ದೇ ಮರ ಇಳಿಯೂದ್ ಸಯ್ಯಿ... ಕೊನೆ ಕೊಯ್ಯಾಕ್ ನೀವ್ ಗಟ್ಟಿಯಾಗಿರ್ರಿ... ಮಧ್ಯ ಕೈಕೊಟ್ಬುಡ್ಬೇಡಿ... ' ಎಂದು ತಮಾಷೆಯಾಗಿ ಹೇಳುತ್ತಾ... ತನಗೆ ತಾನೇ ಗುರಿಯನ್ನೂ ನಿರ್ಧರಿಸಿಕೊಂಡು ಕೆಲಸ ಪ್ರಾರಂಭಿಸುವ ಕೊನೆಗೌಡನ ಕಾರ್ಯಕ್ಕೆ ತಲೆದೂಗಲೇಬೇಕು.. ಬಿಡಿ ಇದು ಆಗಿನ ಮಾತು. ಈಗಿನ ಕೊನೆಗೌಡರುಗಳು ಆದಷ್ಟು ಕಳ್ಳಬೀಳಲು ಯತ್ನಿಸುತ್ತಾರೆ. ಸಾಕಷ್ಟು ಕಿರಿಕಿರಿಯನ್ನೂ ಮಾಡುತ್ತಾರೆ. ಆದ್ರೂ ಅವರ ಕೆಲಸಕ್ಕೆ ನಮ್ಮದೊಂದು ಹ್ಯಾಟ್ಸಾಫ್ ಹೇಳಲೇ ಬೇಕು. ಅಲ್ವೇ.

1 comment: