ಪರಿತಾಪಿಯ ಪ್ರೇಮಪತ್ರ
ಮನದ ಮೂಸೆಯಿಂದರಳಿದ ಪ್ರೇಮಕಾವ್ಯ
ಒಲವಿನ ಗೆಳತಿ,
ನೀನು ಇಷ್ಟು ಬೇಗ ಹೀಗೆ ರಿಯಾಕ್ಟ್ ಆಗ್ತೀಯಾ ಅಂತ ನಾನು ತಿಳಿದಿರಲಿಲ್ಲ. ನೀನು ಒಪ್ಪದೇ ಇರಬಹುದು, ನನ್ನ ಲೈಕ್ ಮಾಡದೇ ಇರಬಹುದು ಅಂದ್ಕೊಂಡಿದ್ದೆ. ನಿನ್ನ ನಿರ್ಧಾರ ಕೇಳಿನ ನನ್ನೊಡಲಿನಲ್ಲಿ ಅದೆಷ್ಟೋ ಹರ್ಷಗಳು ಚಿಲುಮೆ ಉಕ್ಕಿ ಒಡೆದು ಎಂತಹ ಮಧುರ ಯಾತನೆಯಾಯ್ತು ಅಂತೀಯಾ...
ನೀನು ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕ್ಷಣವೇ ನನ್ನ ಮನದ ಮರುಭೂಮಿಯೊಳಗೆ ವರ್ಷಧಾರೆ ಸುರಿದಂತಾಗಿಬಿಟ್ಟಿತು. ಅಂತೂ ಜೀವನದಲ್ಲಿ ಮೊದಲಬಾರಿಯೋ ಎಂಬಂತೆ ನಾನು ಆಸೆ ಪಟ್ಟಿದ್ದು, ಇಷ್ಟಪಟ್ಟಿದ್ದು ನನ್ನ ಕೈ ಹಿಡಿದಿದೆ. ಇಂಥಾ ಹೊತ್ನಲ್ಲೇ ನನ್ನ ಮನಸ್ಸು ಅದೆಷ್ಟು ಕವನಗಳನ್ನು ದೊಡ್ಡ ಹಬ್ಬದಲ್ಲಿ ಪುಂಡಿ ನಾರಿನ ಹಗ್ಗ ಹೊಸೆದಂತೆ ಹೊಸೆಯಲಾರಂಭಿಸಿದೆ ಗೊತ್ತಾ...
ಅದು ಹಾಗಿರಲಿ ಬಿಡು, ನನಗೆ ನೀನು ಯಾಕಿಷ್ಟವಾದೆ ಅನ್ನುವುದನ್ನು ಮೊದಲು ಹೇಳಿಬಿಡುತ್ತೇನೆ ಕೇಳು. ಆ ನಿನ್ನ ನಗು, ನಕ್ಕಾಗ ಗುಳಿ ಬೀಳುವ ಕೆನ್ನೆ, ಇಂಪಾದ ಧ್ವನಿ ಇವೆಲ್ಲವೂ ನನ್ನನ್ನು ಮೊದಲು ಇಂಪ್ರೆಸ್ ಮಾಡಿದ್ದು. ಆ ನಂತರ ನೀನು ಮೊದಲು ನನ್ನ ಕವನಗಳ ಅಭಿಮಾನಿಯಾಗಿ `ನೀನು ಚೊಲೋ ಕವನ ಬರೀತೆ ಹಾ.. ಐ ಲೈಕ್ ಇಟ್..' ಎಂದಾಗ ಹೊಸ ಗೆಳತಿಯೊಬ್ಬಳು ಸಿಕ್ಕಳು ಅಂದ್ಕೊಂಡಿದ್ದೆ. ಆ ನಂತರವೇ ಅಲ್ಲವೇ ನಾನು ನಿನ್ನನ್ನು ಸಂಪೂರ್ಣವಾಗಿ ಅರಿತಿದ್ದು.ನಿನ್ನ ಗುಣಗಳು, ನಿನ್ನ ಗುರಿಗಳು, ಮನದಾಳದ ತುಮುಲಗಳು, ಭಾವನೆಗಳು, ಜೊತೆಗೆ ಬದುಕೂ ಕೂಡ.. ಇವೆಲ್ಲ ನನ್ನದರಂತೆಯೇ ಇವೆ ಎಂದು ಅರಿತಿದ್ದು ಆ ನಂತರವೇ ಅಲ್ಲವೇ. ಹೀಗೆಲ್ಲಾ ಇಷ್ಟಪಟ್ಟರೂ ನಿನ್ನ ಬಳಿ ನನ್ನ ಮನದಾಳದ ಬಯಕೆಯನ್ನು ತಿಳಿಸಲು ಅದೆಷ್ಟು ಕಷ್ಟಪಟ್ಟುಬಿಟ್ಟಿದ್ದೆನಲ್ಲಾ... ಎಲ್ಲರಿಗೂ ಹಾಗೆಯೇ ಆಗ್ತದಾ ಎಂಬ ತಳಮಳ.. ಮನದೊಳಗೆ ಅದೇನೋ ದುಗುಡ. ಹೇಳಿಕೊಳ್ಳಲಾಗದ ಚಡಪಡಿಕೆ. ನೀನು ಒಪ್ಕೋತೀಯೋ, ಇಲ್ವೋ.. ಸಿಟ್ಟಾಗಿಬಿಡ್ತೀಯೋ.. ನಿನ್ನೆಡೆಗೆ ಹುಟ್ಟಿದ ಪ್ರೀತಿ ನಮ್ಮಿಬ್ಬರ ನಡುವಣ ಸ್ನೇಹವನ್ನು ಕೊಂದುಹಾಕಿದರೆ... ಎಂಬ ಆತಂಕ.. ನೀನು ಎಲ್ಲಿ ನನ್ನನ್ನು ತಿರಸ್ಕರಿಸಿ, ನನ್ನನ್ನು ಅವಮಾನದ ಕೋಟೆಯೊಳಗೆ ಮುಳುಗುವಂತೆ ಮಾಡುತ್ತೀಯೋ ಎಂಬ ಭಯ.. ಇಂತಹ ಭಾವನೆಗಳ ತೊಳಲಾಟದ ನಡುವೆ ಅನೇಕ ದಿನಗಳನ್ನು ದೂಡಿದೆ.
ಇನ್ನಾಗೋದೇ ಇಲ್ಲ.. ಅಂತ ಕೊನೆಗೊಂದು ದಿನ ನೀನು ಕೇಳಿದ್ದ ಒಂದು ಪುಸ್ತಕದ ನಡುವಣ ಯಾವುದೋ ಪುಟದ ಮಧ್ಯ ನನ್ನ ಭಾವನೆಗಳನ್ನೆಲ್ಲ ಅಕ್ಷರ ರೂಪಕ್ಕೆ ಇಳಿಸಿ, ನನ್ನ ಪ್ರೀತಿಸ್ತೀಯಾ ಅಂತ ಕೇಳಿ ಬರೆದಿಟ್ಟುಬಿಟ್ಟಿದ್ದು ಇನ್ನೂ ನೆನಪಿದೆ ಅಲ್ವಾ.. ಕೊನೆಗೊಮ್ಮೆ ನೀನು ತಿರುಗಿ ಬಂದು ಸಿಟ್ಟಾಗದೇ ನನಗೆ ಪುಸ್ತಕ ಮರಳಿಸಿ ಹೂ ನಗು ನಕ್ಕು ಹೋದೆಯಲ್ಲಾ ಆಗಲೇ ನನಗೆ ಮೂರನೇ ಸಾರಿ ಜೀವ ಬಂದಿದ್ದು. ನಾನು ಕೊಟ್ಟ ಪತ್ರಕ್ಕೆ ಉತ್ತರವೋ ಎಂಬಂತೆ ನೀನು ಕೊಟ್ಟ ನವಿಲುಗರಿಯನ್ನು ಜೋಪಾನವಾಗಿ ಇಟ್ಟಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಹಾಂ ಮತ್ತೆ...ನಾನು ಪ್ರೇಮ ಪತ್ರ ಕೊಟ್ಟು, ನೀನು ಮರಳಿ ಉತ್ತರ ಹೇಳುವ ನಡುವೆ ನಾನು ಎದುರಿಸಿದ ಭಾವನೆಗಳು ಶಬ್ದಕ್ಕೆ ನಿಲುಕೋದಿಲ್ಲ..ಮುಂದೊಂದು ದಿನ ಎಂದಾದರೂ ಕವಿತೆಯಾಗಿ ಹೊರ ಬೀಳಬಹುದು ಬಿಡು..
ಆದರೂ.. ನೀನು ಒಪ್ಪಿಬಿಟ್ಟೆಯಲ್ಲಾ.. ಇನ್ನೇನು ಬಿಡು.. ಒಂದು ಟೆನ್ಶನ್ ತಪ್ಪಿದ ಹಾಗಾಯಿತು. ಹಾಗೇ ನನ್ನ ಬದುಕಿನಲ್ಲಿ ಬಂದಿದ್ದೀಯಾ.. ನನ್ನ ಮನಸ್ಸಿನ ಮೂಟೆಗೆ ನಿನ್ನ ಬದುಕೆಂಬ ಮೊಬೈಲಿನಿಂದ ಆಗಾಗ ಮೆಸೇಜ್ ಮಾಡ್ತಾ ಇರು ಮಾರಾಯ್ತಿ,,, ನನ್ನ ಇನ್ ಬಾಕ್ಸ್ ಖಾಲಿ ಹೊಡಿತಾ ಇದೆ. ಅದಕ್ಕಾಗಿಯೇ ಕಾಯ್ತಾ ಇದ್ದೇನೆ.. ಈಗಷ್ಟೇ ನೀನು ನನ್ನಿಂದ ಬೀಳ್ಕೊಟ್ಟು, ನಾಳೆ ಬರ್ತೀನಿ ಅಂತ ಹೇಳಿ ಹೋಗಿದ್ದೀಯಾ,.. ಹುಚ್ಚು ಖೋಡಿ ಮನಸ್ಸು ಕೇಳ್ತಾನೇ ಇಲ್ಲ ನೋಡು... ಬರಹಕ್ಕೆ ಹಚ್ಚಿಬಿಟ್ಟಿದೆ..
ಮತ್ತೆ ನಾಳೆ ಸಿಗ್ತೀನಿ.. ಬದುಕಿನ ಭಾವನೆಗಳ ವಿನಿಮಯ ಮಾಡಿಕೊಳ್ಳೋಣ.. ಸರಿ ಮಾರಾಯ್ತಿ.. ಈಗ ಇನ್ನು ಹೆಚ್ಚು ಹೇಳಲಾರೆ.. ಭಾವದಾಟ ಮೇರೆ ಮೀರ್ತಾಇದೆ.. ಬರಹಕ್ಕೊಂದು ಕೊನೆ ಬಿಂದು ಇಡ್ತೀನಿ..
ಇಂತಿ ನಿನ್ನವ
ತೇಜಸ್ವಿ.
ಮತ್ತೆ ನಾಳೆ ಸಿಗ್ತೀನಿ.. ಬದುಕಿನ ಭಾವನೆಗಳ ವಿನಿಮಯ ಮಾಡಿಕೊಳ್ಳೋಣ.. ಸರಿ ಮಾರಾಯ್ತಿ.. ಈಗ ಇನ್ನು ಹೆಚ್ಚು ಹೇಳಲಾರೆ.. ಭಾವದಾಟ ಮೇರೆ ಮೀರ್ತಾಇದೆ.. ಬರಹಕ್ಕೊಂದು ಕೊನೆ ಬಿಂದು ಇಡ್ತೀನಿ..
ಇಂತಿ ನಿನ್ನವ
ತೇಜಸ್ವಿ.
(ಪ್ರೇಮದ ಕಾಣಿಕೆ.. ಪ್ರೀತಿಯಲ್ಲಿ ಬಿದ್ದವನ ಮೊದಲ ಪ್ರೇಮಪತ್ರ ಹೀಗಿರಬಹುದಾ... ಸುಮ್ಮನೇ ಬರೆದಿದ್ದು.. ಹೆಂಗಿದೇ ಅನ್ನೋದನ್ನು ಕಮೆಂಟಿಸಿ..)
No comments:
Post a Comment