Thursday, February 24, 2011

ಇವರ ಸಾಧನೆಗೆ ಸಾಟಿ ಯಾರು??

ಕಾಲಿಲ್ಲದ ರಾಘವೇಂದ್ರ ಸಮುದ್ರ ನದಿಗಳನ್ನು ಗೆದ್ದ...

ನಮ್ಮ ಸಮಾಜದಲ್ಲಿ, ನಮ್ಮ ನಡುವೆ ನೂರಾರು ಅಂಗವಿಕಲ ವ್ಯಕ್ತಿಗಳನ್ನು ಕಾಣುತ್ತಿರುತ್ತೇವೆ. ಯಾವುದೋ ಒಂದು ರೀತಿಯಲ್ಲಿ ಅಂಗವೈಕಲ್ಯವನ್ನು ಹೊಂದಿರುವ ಇವರಿಗೆ ಜನ್ಮಜಾತವಾಗಿ ಕೆಲವು ಪ್ರತಿಭೆಗಳು ಬಂದಿರುತ್ತವೆ. ಮತ್ತೆ ಕೆಲವರು ತಮ್ಮ ಅಂಗವೈಕಲ್ಯ ಮರೆತು ಹೋಗುವಂತೆ ಕಷ್ಟಪಟ್ಟು ಸಾಧನೆ ಮಾಡುತ್ತಾರೆ. ವಿಶ್ವದಾದ್ಯಂತ ಹೆಸರುವಾಸಿಯಾಗುತ್ತಾರೆ. ಅಂತವರ ಸಾಲಿಗೆ ಸೇರುವ ಓರ್ವ ಸಾಧಕ ನಮ್ಮ ಕನ್ನಡ ನಾಡಿನಲ್ಲಿಯೇ ಇರುವ ರಾಘವೇಂದ್ರ ಅಣ್ವೇಕರ್. ನಮ್ಮ ನಾಡಿನಲ್ಲೇ ಇದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವ್ಯಕ್ತಿ ಈತ.
ರಾಘವೇಂದ್ರ ಅಣ್ವೇಕರ್ ತನ್ನ ಅಂಗವೈಕಲ್ಯವನ್ನೂ ಮೀರಿ ನಿಂತ ಛಲಗಾರ. ಹುಟ್ಟಿದ ಕೆಲವೇ ದಿನಗಳಲ್ಲಿ ಕಾಡಿದ್ದು ಪೋಲಿಯೋ. ಅದರಿಂದಾಗಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೂ ಎದೆಗುಂದದೇ ಅಂತರಾಷ್ಟ್ರೀಯ ಈಜುಪಟುವಾಗಿ ರಾಘವೇಂದ್ರ ಬೆಳೆದುನಿಂತಿದ್ದಾನೆ. ದೈಹಿಕ ದೌರ್ಬಲ್ಯಗಳನ್ನು ಲೆಕ್ಕಿಸದೇ ಭಾರತಕ್ಕೆ ಕೀರ್ತಿ ತಂದುಕೊಟ್ಟ ಸಾಧಕ.
ಈಜಲಿಕ್ಕೆ ಕಾಲುಗಳೇಕೆ ಬೇಕು? ನಾನು ಕೈಗಳ ಮೂಲಕವೇ ಈಜಿ ತೋರಿಸಬಲ್ಲೆ ಎಂಬ ಛಲತೊಟ್ಟು ಅದನ್ನು ಮಾಡಿ ತೋರಿಸಿದ ಅಪರೂಪದ ಸಾಧಕ ರಾಘವೇಂದ್ರ. ಇವರ ಸಾಧನೆಗಳು ಬಹಳಷ್ಟು. ತಾವು ಪ್ರತಿನಿಧಿಸಿದ ಮೊಟ್ಟ ಮೊದಲ ರಾಷ್ಟ್ರೀಯ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಪದಕ ಗೆದ್ದು ತಮ್ಮ ಗೆಲುವಿನ ಅಭಿಯಾನ ಸಾಧಿಸಿದ ಇವರು ಇದುವರೆಗೂ ಹಿಮ್ಮೆಟ್ಟಿದ್ದೇ ಇಲ್ಲ. ಎದೆಗುಂದಿದ್ದಂತೂ ಇಲ್ಲವೇ ಇಲ್ಲ. ತಾವು ಭಾಗವಹಿಸಿದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 42 ಪದಕಗಳನ್ನು ಗೆಲ್ಲುವ ಮೂಲಕ ಯಾರೂ ಮಾಡದಂತಹ ಸಾಧನೆ ಮಾಡಿ ನಾಡಿಗೆ ಕೀರ್ತಿ ಕಲಶವಾಗಿದ್ದಾರೆ ರಾಘವೇಂದ್ರ.
ಈ ವಿಶಿಷ್ಟ ಈಜು ಪಟುವಿನ ಸಾಧನೆಗೆ ಕೊನೆಯಿಲ್ಲ. 2003ರಲ್ಲಿ ಹಾಂಕಾಂಗ್ನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಈಜು ಸ್ಫರ್ಧೆಯಲ್ಲಿ ಮೊಟ್ಟಮೊದಲ ಬಾರಿಗೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ, ಚೊಚ್ಚಲ ಪ್ರಯತ್ನದಲ್ಲಿಯೇ 3 ಬೆಳ್ಳಿ ಹಾಗೂ 3 ಕಂಚುಗಳನ್ನು ಗೆದ್ದು ರಾಷ್ಟ್ರಕ್ಕೆ ಗೌರವ ತಂದಿದ್ದಾರೆ. ಅಲ್ಲದೆ ಕನ್ನಡ ನಾಡಿನ ಗೌರವವನ್ನು ವಿಶ್ವದ ಎಲ್ಲಡೆ ಪ್ರಚುರಪಡಿಸಿದ್ದರು.
ಇವರ ಸಾಧನೆಗೆ ಕೊನೆಯೇ ಇಲ್ಲ. ಇದುವರೆಗೆ 6 ಬಾರಿ ಅಂತರಾಷ್ಟ್ರೀಯ ಈಹು ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಘವೇಂದ್ರ ಅಣ್ವೇಕರ್ 20ಕ್ಕೂ ಹೆಚ್ಚಿನ ಪದಕಗಳನ್ನು ಗೆದ್ದಿದ್ದಾರೆ. ಇವಷ್ಟೇ ಅಲ್ಲ. ಸಮುದ್ರದಲ್ಲಿ ಈಜುವ ಕಷ್ಟಕರ ಸಾಹಸಕ್ಕೂ ಕೈಹಾಕಿ ಅದರಲ್ಲೂ ಜಯಗಳಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ 38 ಕಿಲೋಮೀಟರ್ ದೂರದವರೆಗೆ ಈಜುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ದೂರವನ್ನು ಇವರು 5 ಗಂಟೆ56 ನಿಮಿಷಗಳಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಅಷ್ಟೇ ಏಕೆ ಭಾಗೀರತಿ ನದಿಯಲ್ಲಿ 81 ಕಿಲೋಮೀಟರ್ ದೂರವನ್ನು ಸತತ 11 ಗಂಟೆ 50 ನಿಮಿಷಗಳಕಾಲ ಈಜಿ ಗುರಿ ತಲುಪಿದ ಸಾಧನೆ ಮಾಡಿದ್ದಾರೆ. ಈಜುವುದರಲ್ಲಿ ಇನ್ನೂ ಹಲವೆಂಟು ಸಾಧನೆಗಳನ್ನು ಕೈಗೊಂಡಿರುವ ಇವರು ಸತತ 12 ಗಂಟೆಗಳ ಕಾಲ ಹಿಮ್ಮುಖವಾಗಿ ಈಜುವ ಹಾಗೂ ತೇಲುವ ಸಾಧನೆಯನ್ನು ಕೈಗೊಂಡಿದ್ದಾರೆ. ಇವರ ಈ ಸಾಧನೆಗೆ, ಶ್ರಮಕ್ಕೆ ನದಿ, ಸಮುದ್ರಗಳೇ ಹೆದರಿ ನಿಂತು ಬಿಟ್ಟಿವೆ.
ದೈಹಿಕ ದೌರ್ಬಲ್ಯವನ್ನು ಹೊಂದಿದ್ದರೂ ಅದಕ್ಕೆ ಅಂಜದೇ. ಅಳುಕದೆ ಶ್ರಮ ಹಾಕಿ, ಸಾಧನೆ ಮಾಡಿ ಎಲ್ಲರ ಪಾಲಿಗೆ ಪ್ರೇರಣೆಯಾಗವಂತಹ ಈ ತ್ರಿವಿಕ್ರಮ ಈಜುಪಟು ರಾಘವೇಂದ್ರ ಅಣ್ವೇಕರ್ ವಿಶಿಷ್ಟ ಸಾಧಕ. ಎಲ್ಲ ಅಂಗಗಳೂ ಸರಿಯಾಗಿ ಇದ್ದೂ, ಯಾವುದಕ್ಕೂ ಬಾರದಂತಿರುವವರ ನಡುವೆ ಈತ ವಿಶಿಷ್ಟವಾಗಿ ಕಾಣುತ್ತಾನೆ. ಅಷ್ಟೇ ಅಲ್ಲ ಬದುಕಿನಲ್ಲಿ ಪದೆ ಪದೆ ಎಡವಿದವರಿಗೆ ಸ್ಫೂರ್ತಿಯಾಗುತ್ತಾರೆ.

ನಿಕ್ ವುಸಿಸಿಕ್
ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರಾಶರಾದವರಿಗೆ, ಅನೇಕ ಕಷ್ಟಗಳನ್ನು ಎದುರಿಸಿ ಹತಾಶೆ ಹೊಂದಿದವರಿಗೆ ಬದುಕಿನ ಬಗ್ಗೆ ಛಲ ಮೂಡಲು ಸ್ಫೂರ್ತಿಯಾಗುವಂತಹ ವ್ಯಕ್ತಿ ನಿಕ್ ವುಸಿಸಿಕ್.
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ಹುಟ್ಟಿದ ನಿಕನ  ಕಥೆ ಕೇಳಿದರೆ ಎಂತಹ ಕಲ್ಲೆದೆಯ ವ್ಯಕ್ತಿಗಳೂ ಒಮ್ಮೆ ಕಣ್ಣೀರಾಗುತ್ತಾರೆ. ಈ ವಿಶಿಷ್ಟ ವ್ಯಕ್ತಿಗೆ ಹುಟ್ಟಿನಿಂದಲೇ ಕೈಗಳಿಲ್ಲ, ಕಾಲುಗಳೂ ಇಲ್ಲ. ಅವೆರಡರ ಬದಲಿಗೆ ಆ ಜಾಗದಲ್ಲಿ ಒಮದೆರಡು ಚಿಕ್ಕ ಚಿಕ್ಕ ಮಾಂಸದ ತುಂಡುಗಳಿವೆ ಅಷ್ಟೇ.
ಈತ ಹುಟ್ಟಿದ ತಕ್ಷಣ ನಿಕ್ನ ತಾಯಿ ಈತನನ್ನು ನೋಡಿ ಒಮ್ಮ ಮೂರ್ಛೆ ಬಿದ್ದಿದ್ದಳಂತೆ. ನೋಡಿದ ವೈದ್ಯರೂ ಹೌಹಾರಿ ಈತ ಬದುಕುವವನಲ್ಲ ಎಂದಿದ್ದರಂತೆ. ಆದರೆ ನಿಕ್ ಬದುಕಿ ಬಿಟ್ಟ. ಆತನ ತಾಯಿ ಆತನನ್ನು ಸಾಧಕನನ್ನಾಗಿ ಮಾಡಲು ಪಣ ತೊಟ್ಟಳು. ಆತನಿಗೆ ಚಿಕ್ಕಂದಿನಿಂದಲೇ ಈಜುವುದನ್ನು ಕಲಿಸಿದಳು. ಓದಲು ಕಲಿಸಿದಳು, ಬಾಯಿಯ ಮೂಲಕ ಬರೆಯಲು ಕಲಿಸಿದಳು. ತಾಯಿಯ ಒತ್ತಾಸೆಯಂತೆ ನಿಕ್ ಬಹು ಬೇಗನೆ ಅವೆಲ್ಲವನ್ನೂ ಕಲಿತ. ಕಷ್ಟಪಟ್ಟು ಈಜುವುದನ್ನು ಕಲಿತ. ಎಲ್ಲ ಕ್ಲಾಸುಗಳನ್ನೂ ಉತ್ತಮ ದರ್ಜೆಯಲ್ಲಿ ಪಾಸುಮಾಡುತ್ತ ಕಳೆದ. ಅಷ್ಟೇ ಅಲ್ಲ ಆತ ಗಾಲ್ಫ್ ಆಡುವುದನ್ನೂ ಕಲಿತ.
ಅಯ್ಯೋ ಹೀಗಾಯಿತಲ್ಲ, ಎಂದು ಆತ ಎಂದಿಗೂ ಹೇಳಲಿಲ್ಲ. ತನ್ನ ವೈಕಲ್ಯಗಳನ್ನೇ ತನ್ನ ಸಾಧನೆಗೆ ಮೆಟ್ಟಿಲನ್ನಾಗಿ ಮಾಡಿಕೊಂಡ ನಿಕ್ ನಮ್ಮೆಲ್ಲರಿಗಿಂತ ಮೇಲ್ಮಟ್ಟಕ್ಕೇರಿದ. ಈಗ ನಿಕ್ಗೆ 28 ವರ್ಷ ವಯಸ್ಸು. ವಿಶ್ವದಾದ್ಯಂತ ಪ್ರವಾಸ ಮಾಡುವ ಈತ ಅಲ್ಲಿನ ಜನರಿಗೆ ತನ್ನ ಸಾಧನೆಯ ಚಿತ್ರಣಗಳನ್ನು ತೋರಿಸಿ ಅವರಲ್ಲಿ ಆಶಾವಾದ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾನೆ. ಬದುಕಿನಲ್ಲಿ ಸೋತವರಿಗೆ ಬದುಕಿನ ಕಡೆಗೆ ಉತ್ಸಾಹ ಮೂಡಿಸುವ ಕೆಲಸವನ್ನು ನಿಕ್ ಯಾವಾಗಲೂ ಕೈಗೊಳ್ಳುತ್ತಿರುತ್ತಾನೆ. ಈತ ಮಾತಾಡಿರುವ ಸಿಡಿಗಳು ವಿಶ್ವದಲ್ಲಿ ಅದೆಸ್ಸ್ಟಾ ಸಂಖ್ಯೆಯಲ್ಲಿ ಮಾರಾಟವಾಗಿವೆ. ಆತನ ಸಾಧನೆಯ ವೀಡಿಯೋ ತುಣುಕುಗಳಿಗೆ ವಿಶ್ವದಾದ್ಯಂತ ಬೇಡಿಕೆ ಇವೆ. ಪಾಶ್ಚಾತ್ಯ ರಾಷ್ಟ್ರಗಳ ಅದೆಷ್ಟೋ ಯುವಕರು ನಿಕ್ನ ಮಾತಿಗೆ ಮರುಳಾಗಿ ಬದುಕಿನೆಡೆಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅದೆಷ್ಟೋ ಜನ ನಿಕ್ನ ಅಭಿಮಾನಿಗಳಾಗಿದ್ದಾರೆ. ಕೈಕಾಲುಗಳಿಲ್ಲದಿದ್ದರೂ ಸಾಧಿಸಬಲ್ಲೆ ಎಂಬುದಕ್ಕೆ ನಿಕ್ನೇ ಸ್ಫೂರ್ತಿ.
ಇಂತಹ ಸಾಧಕರ ನಡುವೆ ನಾವು ಅದೆಷ್ಟು ಕುಬ್ಜರಾಗುತ್ತೇವೆ ಅಲ್ಲವೇ. ನಮಗೆ ಇಂತಹ ವ್ಯಕ್ತಿಗಳು ಅದೆಷ್ಟು ಸ್ಫೂರ್ತಿಯನ್ನು ನೀಡುತ್ತಾರೆ ಅಲ್ಲವೇ?


No comments:

Post a Comment