Thursday, February 3, 2011

ತಾ ತಾ ಗುಬ್ಬಿ ತಾವನ ಗುಬ್ಬಿ.. ಮುಚ್ಚಳ ತೆಗೆದರೆ ಮುನ್ನೂರು ಗುಬ್ಬಿ


ಮನೆಯ  ಮಾಳಿಗೆಯ ಮೇಲೆ ಅತ್ತ ಇತ್ತ ಹಾರಾಡುತ್ತಾ, ಚಿಂವ್ ಚಿಂವ್ ಎನ್ನುವ ಕೂಗು ಹಾಕುತ್ತಾ ಮನುಷ್ಯ ವಾಸಸ್ಥಾನದ ಸುತ್ತಮುತ್ತ ಅಡ್ಡಾಡುವ ಗುಬ್ಬಿಗಳು ಮಾನವನ ಪ್ರಾಚೀನ ಒಡನಾಡಿ. ಗುಬ್ಬಿಯನ್ನು ಇಂಗ್ಲೀಷಿನಲ್ಲಿ ಸ್ಪಾರೋ ಎಂದು ಕರೆಯುತ್ತಾರೆ. 
ಎನಿಮೇಲಿಯಾ ಪ್ರಬೇ‘ಕ್ಕೆ ಸೇರಿದ ಇದು ಪೆಸ್ಸಿರೈಡೆ ಕುಟುಂಬದ ಜೀವಿ.

ಆಹಾರ-ವಿಹಾರ-ವೈವಿಧ್ಯ 
ಗುಬ್ಬಿಗಳಲ್ಲಿ ಮುಖ್ಯವಾಗಿ ಎರಡು ವಿಧ. ಮನೆ ಗುಬ್ಬಿ ಹಾಗೂ ಕಾಡಿನ ಗುಬ್ಬಿ ಎಂಬ ಎರಡು ವಿಧವಿರುವ ಗುಬ್ಬಿಗಳಲ್ಲಿ ಒಂದು ವರ್ಗ ಸದಾ ಮಾನವನ ಇರುವಿಕೆಯನ್ನು ಬಯಸುತ್ತದೆ. ಮತ್ತೊಂದು ವರ್ಗ ಕಾಡಿನಲ್ಲಿಯೇ ವಾಸಿಸುತ್ತದೆ.
ಇವು ಯಾವಾಗಲೂ ಗುಂಪು ಗುಂಪಾಗಿಯೇ ವಾಸಿಸುತ್ತವೆ. ನೂರಕ್ಕೂ ಹೆಚ್ಚಿನ ಸಂಖ್ಯೆಯ ಗುಂಪುಗುಂಪುಗಳನ್ನು ರಚಿಕೊಂಡಿರುವ ಗುಬ್ಬಿಗಳು ಬಹಳ ಚಿಕ್ಕ ಪಕ್ಷಿಗಳು. ಇವುಗಳ ಗಾತ್ರ 11 ಸೆಂಟೀಮೀಟರರ್ನಿಂದ 15 ಸೆಂಟಿಮೀಟರ್ಗಳು. ಕೆಲವೊಂದು ಗುಬ್ಬಿಗಳು 18 ಸೆಂಟೀಮೀಟರ್ಗಳಷ್ಟು ದೊಡ್ಡದಾಗಿ ಬೆಳೆಯುವುದೂ ಉಂಟು. 
ಗುಬ್ಬಿ ವಿಶ್ವವ್ಯಾಪಿ ಪಕ್ಷಿ. ಗುಬ್ಬಿಗಳಿಲ್ಲದ ಪ್ರದೇಶವೇ ಇಲ್ಲ. ಏಷ್ಯಾ, ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ಗುಬ್ಬಿಗಳು ಕಾಣಸಿಗುತ್ತವೆಯಾದರೂ ಅವುಗಳ ಗಾತ್ರದಲ್ಲಿ ಬದಲಾವಣೆಯಿರುತ್ತವೆ.ಗುಬ್ಬಿಗಳು ಹೆಚ್ಚಾಗಿ ಹಣ್ಣುಗಳು, ಬೀಜಗಳು, ಕಾಳುಗಳು ಹಾಗೂ ಚಿಕ್ಕ ಚಿಕ್ಕ ಕೀಟಗಳನ್ನು ತಿನ್ನುತ್ತವೆ. ಸೀಬೆ ಹಣ್ಣುಗಳೆಂದರೆ ಇವಕ್ಕೆ ಅಚ್ಚುಮೆಚ್ಚು. ಆದ್ದರಿಂದಲೇ ಸೀಬೆ ಮರದ ಸುತ್ತ ಇವುಗಳು ದಂಡುಕಟ್ಟಿಕೊಂಡು ವಾಸಿಸುತ್ತವೆ.ಬಣ್ಣ-ಅಂದ-ಚೆಂದಸಾಮಾನ್ಯವಾಗಿ ಮಾಸಲು ಬಣ್ಣ ಹೊಂದಿರುವ ಈ ಗುಬ್ಬಿಯ ದೇಹದ ಮೆಲೆ ಅಲ್ಲಲ್ಲಿ ಬಿಳಿ ಬಣ್ಣದ ರೋಮಗಳಿರುತ್ತವೆ. ಉದ್ದನೆಯ ಪುಕ್ಕ ಹೊಂದಿರುವ ಇವು ರೆಕ್ಕೆ ಬಡಿಯುವ ವೇಗ ಬಹಳ ಜೋರು.ಹೆಣ್ಣು ಗುಬ್ಬಿಯನ್ನು ಆಕರ್ಷಿಸಲು ಗಂಡು ಗುಬ್ಬಿ ತನ್ನ ದೇಹ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಅಲ್ಲದೆ ತನ್ನ ದೇಹವನ್ನು ವಿಶಿಷ್ಟವಾಗಿ ಬಾಗಿಸಿ ಬಳುಕಿಸುವ ಮೂಲಕ ಅದು ಎಲ್ಲರನ್ನೂ ಆಕರ್ಷಿಸುತ್ತದೆ.

ಗೌರವದ ಭಾವನೆ
ಕರ್ನಾಟಕದಲ್ಲಿ ಸುಗ್ಗಿ ಕಾಲದಲ್ಲಿ ಗುಬ್ಬಿಗಳು ಹೆಚ್ಚಳವಾಗುತ್ತವೆ. ಆದ್ದರಿಂದಲೇ ಕರ್ನಾಟಕದ ಹಳ್ಳಿಗರು ಗುಬ್ಬಿಯನ್ನು ಸುಗ್ಗಿಯ ದೂತರು ಎಂದೇ ಕರೆಯುತ್ತಾರೆ. ಹಳ್ಳಿಗರಿಗೆ ಗುಬ್ಬಿ ಎಂದರೆ ಪವಿತ್ರ ಭಾವನೆ. ಅದನ್ನು ಬಹಳ ಗೌರವದಿಂದ ಕಾಣುತ್ತಾರೆ. ಕೆಲವೊಮ್ಮೆ ಇವು ಭತ್ತದ ಬೆಳೆಯನ್ನು ತಿಂದರೂ ಹೆಚ್ಚಿನ ವೇಳೆ ಇವು ಭತ್ತಕ್ಕೆ ಕಾಟ ಕೊದುವ ಕೀಟಗಳನ್ನು ತಿನ್ನುತ್ತವೆ. ಆದ್ದರಿಂದ ಇವುಗಳೂ ರೈತನ  ಮಿತ್ರನಾಗಿಯೇ ಹೆಸರುವಾಸಿ.

ಮೊಟ್ಟೆ-ಮರಿ
ಮನೆಯ ಮಾಡಿನ ಮೇಲೆ, ತಾರಸಿ ಮೇಲೆ ಗೂಡು ಕಟ್ಟುವ ಗುಬ್ಬಿಗಳು ಒಮ್ಮೆಲೆ 2-3 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ ಗಂಡು ಹಾಗೂ ಹೆಣ್ಣು ಗುಬ್ಬಿಗಳು ಸರದಿ ಪ್ರಕಾರ ಕಾವು ಕೂರುತ್ತವೆ. ಮೊಟ್ಟೆಯೊಡೆದು ಹೊರ ಬರುಬ ಮರಿ ದೊಡ್ಡದಾಗಿ, ರೆಕ್ಕೆ ಬಲಿತು ಹಾರಲು ಪ್ರಾರಂಭಿಸುವವರೆಗೂ ಅದರ ಆರೈಕೆ ಈ ಎರಡೂ ಗುಬ್ಬಿಗಳದ್ದು. ಇವು ಹೆಚ್ಚು ಸಂಘ ಜೀವಿಗಳು. ಜೊತೆ ಜೊತೆಯಾಗಿ ಜೀವಿಸುವ ಇವು ಬಹಳ ಚೊಕ್ಕಟ ಪ್ರಾಣಿಗಳು. ತಮ್ಮ ದೇಹವನ್ನು ಶುಚಿಯಾಗಿಡಲು ಹೆಚ್ಚಿನ ಮಹತ್ವ ನೀಡುವ ಇವು ನೀರಿನಲ್ಲಿ ಆಗಾಗ ಸ್ನಾನ ಮಾಡುತ್ತವೆ. ಅಲ್ಲದೆ ಆಗಾಗ ತಮ್ಮ ದೇಹವನ್ನು ಶುಚಿಯಾಗಿಡಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತವೆ.
ಈ ಗುಬ್ಬಿಗಿಗೂ ಮಕ್ಕಳೆಂದರೆ ಪ್ರೀತಿ. ಪುಟ್ಟ ಪುಟ್ಟ ಮಕ್ಕಳು ಬಯಲಿನಲ್ಲಿ ಕೈಯಲ್ಲಿ ಏನಾದರೂ ತಿಂಡಿಗಳನ್ನು ಹಿಡಿದುಕೊಂಡಿದ್ದರೆ ಇವು ತುಸು ಹೆಚ್ಚು ಸಲಿಗೆ ತೆಗೆದುಕೊಂಡು ಯಾವುದೇ ಭಯವಿಲ್ಲದೆ ಮಕ್ಕಳ ಕೈಯಲ್ಲಿನ ತಿಂಡಿಗಳಿಗೆ ಬಾಯಿ ಹಾಕುತ್ತವೆ. ಬೆಕ್ಕುಗಳು, ಕಾಗೆಗಳು, ಗೂಬೆಗಳು, ಈ ಮುಂತಾದ ಪ್ರಾಣಿಗಳು ಗುಬ್ಬಿ ಪಾಲಿಗೆ ಯಮದೂತರು. ತಮ್ಮ ಆಹಾರಕ್ಕಾಗಿ ಗುಬ್ಬಿಗಳನ್ನಿವು ಬೇಟೆಯಾಡಿ ತಿನ್ನುತ್ತವೆ.

ಅಳಿವಿನ ಅಂಚಿನಲ್ಲಿ..
ಸುಮಾರು 10 ಸಾವಿರ ವರ್ಷಗಳಿಗಿಂತ ಹಿಂದಿನಿಂದಲೂ ಮಾನವ ಹಾಗೂ ಗುಬ್ಬಿಯ ಒಡನಾಟ ಸಾಗಿ ಬಂದಿದೆ. ನಮ್ಮ ಜನಪದದ ಕಥೆಗಳಲ್ಲೂ ಗುಬ್ಬಿಗಳು ಹಾಸು ಹೊಕ್ಕಾಗಿವೆ. ಮಕ್ಕಳ ಪ್ರೀತಿಯ ಕಾಕಣ್ಣ ಗುಬ್ಬಣ್ಣ ಕಥೆಯಲ್ಲಿಯೂ ಇವುಗಳಿಗೆ ಬಹು ಮುಖ್ಯ ಸ್ಥಾನ. ಆಸೆ ಬುರುಕ ಕಾಗೆಗೆ ಪುಟಾಣಿ ಗುಬ್ಬಿ ಬಿದ್ಧಿಕಲಿಸುವ ಬಗೆಯಂತೂ ಮಕ್ಕಳನ್ನು ಆಧುನಿಕ ಕಾರ್ಟೂನುಗಳಿಗಿಂತ ಹೆಚ್ಚಾಗಿ ಸೆಳೆಯುತ್ತವೆ. ಇಂತಹ ಗುಬ್ಬಿಗಳು ಇದೀಗ ಅಳಿವಿನ ಅಂಚಿನಲ್ಲಿವೆ. ಮಾನವ ಆಧುನಿಕತೆಯತ್ತ ಸಾಗಿದಂತೆಲ್ಲ ಗುಬ್ಬಿ ಅವನತಿಯತ್ತ ಸಾಗುತ್ತಿದೆ. 
5-10 ವರಷಳ ಹಿಂದೆ ಲಕ್ಷಾಂತರ ಗುಬ್ಬಿಗಳು ಕಾಣಸಿಗುತ್ತಿದ್ದವು. ಆದರೆ ಈಗ ಒಂದೆರಡು ಗುಬ್ಬಿಯನ್ನು ನೋಡಬೇಕಾದರೂ ಕಷ್ಟ ಪಡಬೇಕು. ಮಾನವ ತೀವ್ರಗತಿಯಲ್ಲಿ ಯಾಂತ್ರೀಕೃತನಾಗುತ್ತಿದ್ದಾನೆ. ಇದರ ಪರಿಣಾಮ ಇಂತಹ ಮುಗ್ಧ ಪ್ರಾಣಿ ಹಾಗೂ ಪಕ್ಷಿಗಳ ಮೇಲಾಗುತ್ತಿದೆ. ಮೊಬೈಲ್ ತರಂಗಾಂತರಗಳು ಗುಬ್ಬಿಗಳ ಆರೋಗ್ಯಕ್ಕೆ ಮಾರಕ ಎಂಬ ಸಂಶೋಧನೆಯೊಂದು ಹೊರಬಿದ್ದಿದೆ. ಅದಕ್ಕೆ ತಕ್ಕಂತೆ ಗುಬ್ಬಿಗಳೂ ಕಣ್ಮರೆಯಾಗುತ್ತಿವೆ. ಗುಬ್ಬಿಗಳನ್ನು ರಕ್ಷಿಸಿ ಅವುಗಳ ಜೀವನಕ್ಕೆ ಬದುಕಿಗೆ ನೆರವಾಗದಿದ್ದಲ್ಲಿ ಮುಂದೊಮ್ಮೆ ಕಾಕಣ್ಣ ಗುಬ್ಬಣ್ಣ ಕಥೆಗಳಲ್ಲಿ ಮಾತ್ರ ಇವು ಉಳಿದುಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳ ಪ್ರೀತಿಯ ಗುಬ್ಬಿಗಳು ಕಣ್ಮರೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ವಿ ಸು...
ಪತ್ರಿಕೆಯೊಂದಕ್ಕೆ ಬರೆದ ಬರಹದ ಯಥಾವತ್ ಪ್ರತಿ..

No comments:

Post a Comment