ಭೂಲೋಖದ ಮಹಾಪಿತ ದೇವಣ್ಣ ಇಂದ್ರನಾದ ಕಥೆ ಇದು..
ಓದಿ.. ಎರಡು ಸಾಲು ಬರೆಯಿರಿ..
ದೇವಣ್ಣ ಅದ್ಯಾಕೆ ಸ್ವರ್ಗಕ್ಕೆ ಹೋಗಲಿಲ್ಲ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಆತ ಸತ್ತು ಸ್ವರ್ಗದ ಕಡೆಗೆ ಪಯಣ ಬೆಳೆಸುವ ವೇಳೆಗಾಗಲೆ ಸ್ವರ್ಗದ ಬಾಗಿಲನ್ನು ಹಾಕಿ ಕೆಲವೇ ನಿಮಿಷಗಳಾಗಿತ್ತು. ಹೀಗಾಗಿ ದೇವಣ್ಣ ಸ್ವರ್ಗಕ್ಕೆ ಹೋಗುವುದನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದ.
ದೇವಣ್ಣ ನರಕಕ್ಕೆ ಹೋದ. ಆದರೆ ಅಲ್ಲಿ ಚಿತ್ರಗುಪ್ತ ಈತನ ತಂಟೆ ಬೇಡ ಎಂದು ಇವನ ಕೇಸಿನ ಫೈಲಿನ ಹಿಯರಿಂಗನ್ನು ತಡಮಾಡುತ್ತಲೇ ಇದ್ದ. ದೇವಣ್ಣನಿಗಿಂತ ಮುಂಚೆ ಮರಣಿಸಿದ ಅನೇಕ ಘಟಾನುಗಟಿ ನಾಯಕರ ಕೇಸಿನ ಹಿಯರಿಂಗು ಬಾಕಿ ಇದ್ದಿದ್ದೂ, ದೇವಣ್ಣನ ಕೇಸಿನ ಹಿಯರಿಂಗ್ ತಡವಾಗಲು ಮುಖ್ಯ ಕಾರಣವಿರಬಹುದು. ಈ ಕಾರಣಕ್ಕಾಗಿ ನರಕಕ್ಕೆ ಹೋದರೂ ದೇವಣ್ಣನಿಗೆ ಯಾವುದೇ ಶಿಕ್ಷೆ ಇಲ್ಲ ಎಂಬಂತಾಗಿ ಆತ ಹಾಯಾಗಿದ್ದ.
ಆತ ಹೇಳಿ ಕೇಳಿ ದೇವಣ್ಣ. ಸುಮ್ಮನಿರುವ ಜಾಯಮಾನದವನ್ನಲ್ಲ. ನರಕಕ್ಕೆ ಹೋದ ಕೆಲವೇ ಸಮಯದಲ್ಲಿ ಚಿತ್ರಗುಪ್ತನ ಗೆಳೆತನ ಮಾಡಿಯೇ ಬಿಟ್ಟ. ಮಾಡಿದ್ದಷ್ಟೇ ಅಲ್ಲ, ಯಾವಾಗಲೂ ಚಿತ್ರಗುಪ್ತನ ಅಕ್ಕಪಕ್ಕದಲ್ಲಿಯೇ ಸುಳಿದಾಡುತ್ತಾ ಕಟ್ಟೆ ಪಂಚಾಯ್ತಿ ಪ್ರಾರಂಭಿಸಿದ್ದ.
ಹೀಗಿರಲು ಹಲವು ವಸಂತಗಳು ಕಳೆದವು. ಒಂದು ದಿನ ಯಾವುದೋ ದುರ್ಮುಹೂರ್ತದಲ್ಲಿ ನರಕಾಧಿಪತಿ ಯವನ ಕಣ್ಣಿಗೆ ದ್ಯಾವಣ್ಣ ಬಿದ್ದನೋ ಅಥವಾ ದ್ಯಾವಣ್ಣನ ಕಣ್ಣಿಗೆ ನರಕಾಧಿಪತಿ ಬಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ ಮುಖಾಮುಖಿಯಾದರು. ಮಾನವನಾದ ದ್ಯಾವಣ್ಣ ಯಮರಾಜನ ಜೊತೆ ಮಾತುಕಥೆ ಪ್ರಾರಂಭಿಸಿದ. ಅಷ್ಟೇ ಅಲ್ಲ, ತೀರಾ ಹತ್ತಿರದ ವ್ಯಕ್ತಿಯಾಗಿ ರೂಪುಗೊಂಡು ಬಿಟ್ಟ. ಯಮನೂ ಇತ್ತೀಚೆಗೆ ತುಂಬಾ ಪಾಸ್ಟಾಗಿ ಓಡುತ್ತಿರುವ ಬೂಮಿಯ ವಿಷಯವನ್ನು ಅರಿತಿರದ ಕಾರಣ ದೇವಣ್ಣನಿಂದ ಅದನ್ನು ಕೆಲಿ ತಿಳಿದುಕೊಂಡ. ದ್ಯಾವಣ್ಣನಿಗೂ ತನ್ನ ಮಾತನ್ನು ಕೆಳುವವರು ಬೇಕಿತ್ತು. ಸಿಕ್ಕಿದ್ದೇ ಛಾನ್ಸು ಎಂಬಂತೆ ದ್ಯಾವಣ್ಣ ತನ್ನ ಎಂದಿನ ಬೆಣ್ಣೆ ಮಾತನ್ನು ಶುರು ಹಚ್ಚಿದ ಅಲ್ಲದೆ ಯಮನಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬೆಣ್ಣೆ ಹಚ್ಚಿದ. ತನ್ನ ರಾಜಕೀಯ ವಿವಿಧ ಚತುರಪಟ್ಟುಗಳು, ತಾನು ಅಧಿಕಾರ ಹಿಡಿಯಲು ಮಾಡಿದ ಪ್ರಯತ್ನಗಳು ಈ ಮುಂತಾದವುಗಳನ್ನೆಲ್ಲ ಪುರಾಣದ ಕಥೆಗಳಂತೆ ಹೇಳಿದ. ಜೊತೆಗೆ ತಾನು ಕರ್ನಾಟಕದಲ್ಲಿ ಹುಟ್ಟಲೆ ಬಾರದಿತ್ತು ಎಂದೂ ಹೇಳಿ ಕನ್ನಡಿಗರೆಡೆಗಿನ ತನ್ನ ಶತಮಾನದ ದ್ವೇಷವನ್ನೂ ಕಾರಿಕೊಂಡ.
ಮಾತು ಲೋಕಾಭಿರಾಮದ ಡೆಡ್ ಎಂಡ್ನಲ್ಲಿ ಇನ್ನೇನು ಟರ್ನ್ ತೆಗೆದುಕೊಳ್ಳಬೇಕು ಎಂಬಂತಿದ್ದಾಗ ಯಮನ ಬಳಿ ದ್ಯಾವಣ್ಣ ತನ್ನ ಕೂದಲಿಲ್ಲದ ತಲೆಯನ್ನು ಓಡಿಸಿದ. ಅಲ್ಲದೆ ನೀನ್ಯಾಕೆ ಸ್ವರ್ಗಾಧಿಪತಿಯಾಗಬಾರದು ಎಂದು ಯಮರಾಜನನ್ನು ಪ್ರಶ್ನಿಸಿಬಿಟ್ಟ. ಇಲ್ಲಿಯವರೆಗೂ ಕೊಟ್ಟ ಕುದುರೆಯನ್ನು ಏರಿ ಸವಾರಿ ಮಾಡುತ್ತಿದ್ದ ಯಮನಿಗೆ ದ್ಯಾವಣ್ಣ ಕೇಳಿದ ಪ್ರಶ್ನೆ ಕಾಡಿಬಿಟ್ಟಿತು. ಅಲ್ಲದೆ ಆತನ ಪ್ರಶ್ನೆಯಲ್ಲೂ ತರ್ಕವಿದೆಯಲ್ಲ ಎನಿಸಿತು.
ಕೊನೆಗೆ ಯಮ ಡೈರೆಕ್ಟಾಗಿ ಇಂದ್ರನ ಬಳಿ ಹೋಗಿ ನಿನ್ನ ಸ್ಥಾನವನ್ನು ನನಗೆ ಬಿಟ್ಟುಕೊಡು ಎಂದು ಕೇಳಿದ. ದಕ್ಕೆ ಇಂದ್ರ ಒಪ್ಪಲಿಲ್ಲ. ಪರಿಣಾಮ ಇಂದ್ರ ಹಾಗೂ ಯಮನಿಗೆ ಶರಂಪರ ಜಗಳವಾಯಿತು. ಪರಿಹಾರ ದೊರೆಯದಾದಾಗ ಯಮ ದ್ಯಾವಣ್ಣನ ಸಲಹೆಯ ಮೆರೆಗೆ ಹೈಕಮಾಂಡ್ ವಿಷ್ಣುವಿನ ಅಪೀಲ್ ಹೋದ. ವಿಷ್ಣುವಿಗೂ ಮೊದಲು ಈ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗಲೇ ಇಲ್ಲ.
ಕೊನೆಗೆ ಸಂಚಾರಿ ನಾರದರು ಬಂದು ಇಬ್ಬರಿಗೂ ಚುನಾವಣೆ ನಡೆಸಿ ಗೆದ್ದವರು ಇಂದ್ರನಾಗಲಿ ಎಂದಾಗ ಎಲ್ಲರೂ ಹೌದೆಂದರು. ಈ ಕಾರಣದಿಂದ ದೇವಲೋಕದಲ್ಲಿ ಚುನಾವಣೆ ನಡೆಯಲು ಮೊದಲಾಯಿತು. ಇಂದ್ರ ಹಾಗೂ ಆತನ ಬೆಂಬಲಿಗರು, ಯಮ ಹಾಗೂ ಆತನ ಬೆಂಬಲಿಗರು ದೇವಲೋಕದಲ್ಲಿ ಚುನಾವಣೆಗೆ ನಿಂತುಬಿಟ್ಟರು. ಇಷ್ಟರಲ್ಲಾಗಲೇ ದೇವಲೋಕದಲ್ಲಿಯೂ ವರ್ಡ್ ಫೆಮಸ್ ಆಗಿದ್ದ ದ್ಯಾವಣ್ಣ ಸಹ ಒಂದು ಕೈ ನೋಡಿಬಿಡುವಾ ಎಂದು ಚುನಾವಣೆಗೆ ಸ್ಪರ್ಧಿಸಿದ್ದ.!!
ಕೊನೆಗೊಮ್ಮೆ ಚುನಾವಣೆ ಸಾಂಗವಾಗಿ ನೆರವೇರಿ ಫಲಿತಾಂಶವೂ ಹೊರಬಿದ್ದಿತು. ವಿಚಿತ್ರವೆಂದರೆ ಇಂದ್ರ ಹಾಗೂ ಯಮ ಅವರವರ ಜೊತೆಗಾರರೊಡನೆ ಸಮ ಪ್ರಮಾಣದ ಕ್ಷೇತ್ರಗಳಲ್ಲಿ ಗೆದ್ದು ಬಿಟ್ಟಿದ್ದರು. ಮತ್ತೆ ಹಲೆ ಸಮಸ್ಯೆಯೆ ಮುಂದುವರಿಯುವ ಲಕ್ಷಣಗಳೆಲ್ಲ ನಿಚ್ಚಳವಾಗಿ ಕಣ್ಣೆದುರು ರಾಚತೊಡಗಿತು. ಆದರೆ ವಿಚಿತ್ರವೆಂದರೆ ದ್ಯಾವಣ್ಣ ದೇವಲೋಕದಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದುಬಿಟ್ಟಿದ್ದ. ! ಹೀಗಾಗಿ ದ್ಯಾವಣ್ಣ ಸ್ವರ್ಗದ ಅಧಿಪತಿಯ ನಿರ್ಣಯಿಸುವ ನಿರ್ಣಾಯಕ ವ್ಯಕ್ತಿಯಾಗಿಬಿಟ್ಟಿದ್ದ. ಆತ ಬೆಂಬಲ ನೀಡಿದ ವ್ಯಕ್ತಿಗಳು ಇಂದ್ರನಾಗುವ ಸಾಧ್ಯತೆಗಳಿದ್ದವು.
ಆಗ ಪುನಃ ತನ್ನ ಬೋಳು ತಲೆಯನ್ನು ಓಡಿಸಿದ ದ್ಯಾವಣ್ಣ ಸೀದಾ ಇಂದ್ರನ ಬಳಿ ಹೋಗಿ ಮೈತ್ರಿ ಮಾಡಿಕೊಂಡ. ಮೈತ್ರಿಗೆ ಮುನ್ನ ಹಲವಾರು ಕರಾರು ಪತ್ರಗಳನ್ನಿಟ್ಟು ಅದಕ್ಕೆ ಸಹಿಯನ್ನೂ ಹಾಕಿಸಿಕೊಂಡ.! ಆ ಪ್ರಕಾರವಾಗಿ ದೇವಲೋಕದಲ್ಲಿ ತಾನೆ ಮೊದಲ ಅವಧಿಕೆ ಇಂದ್ರನಾಗಬೇಕು ಎಂದು ಪಟ್ಟುಹಿಡಿದ. ಮೊದಲಿನ ಅಧಿಕಾರದ ರುಚಿ ಕಂಡಿದ್ದ ಇಂದ್ರ ಇದಕ್ಕೆ ಕಣ್ಣು ಮುಚ್ಚಿ ಒಪ್ಪಿಕೊಂಡ. ಪರಿಣಾಮವಾಗಿ ದ್ಯಾವಣ್ಣ ಸ್ವರ್ಗಕ್ಕೇ ರಾಜನಾಗಿ ಎಲ್ಲರ ಅಚ್ಚರಿಗೆ ಕಾರಣನಾಗಿಬಿಟ್ಟ.
ಇಷ್ಟೇ ಆಗಿದ್ದಿದ್ದರೆ ದೇವಣ್ಣನ ವ್ಯಕ್ತಿತ್ವಕ್ಕೆ ಅಂತಹ ವಿಶೇಷ ಅರ್ಥಗಳೇ ಬರುತ್ತಿರಲಿಲ್ಲ. ತನ್ನ ಇಂದ್ರಾವಧಿ ಮುಗಿಯುತ್ತ ಬಂದಂತೆ ದ್ಯಾವಣ್ಣ ತನ್ನ ಎಂದಿನ ಡಬ್ಬಲ್ಗೇಮ್ ಪ್ರಾರಂಭಿಸಿದ. ಇದರಿಂದ ಮಾಜಿ ಇಂದ್ರ ಸಿಟ್ಟಾದ. ದ್ಯಾವಣ್ಣ ತನಗೂ ಮಾಜಿ ಇಂದ್ರನಿಗೂ ನಡುವೆ ಸಿದ್ಧಾಂತ ಬೇಧವಿದೆ ಎಂದು ದೇವಲೋಕದ ಪತ್ರಕರ್ತ ನಾರದರಲ್ಲಿ ಪೇಪರ್ ಸ್ಟೇಟ್ಮೆಂಟ್ ಕೊಟ್ಟ.! ಕೊನೆಗೊಮ್ಮೆ ಎಲ್ಲರ ನಿರೀಕ್ಷೆಯಂತೆ ಆ ಮಧುರ ಮೈತ್ರಿ ಮುರಕೊಂಡು ಬಿತ್ತು.
ಹೀಗಾದ ನಂತರ ದ್ಯಾವಣ್ಣ ಮತ್ತೆ ಯಮನ ಬಳಿ ಬಂದ. ಮೊದ ಮೊದಲು ಯಮ ದ್ಯಾವಣ್ಣನ ವಿರುದ್ಧ ಎಗರಾಡಿದರೂ, ಆ ನಂತರ ದ್ಯಾವಣ್ಣನ ರಂಗುರಂಗಿನ ರಂಗೀನ್ ಮಾತಿಗೆ ಕರಗಿ ನೀರಾಗಿ ದ್ಯಾವಣ್ಣನ ಜೊತೆ ಹೊಂದಾಣಿಕೆಗೆ ಮುಂದಾದ. ಮತ್ತದೇ ಅಧಿಕಾರದ ಆಮಿಷ ಎದುರಿಟ್ಟ. ಒಪ್ಪದಿದ್ದ ಯಮನಿಗೆ ಉಪೇಂದ್ರ (ಉಪ + ಇಂದ್ರ) ಪಟ್ಟವನ್ನು ನೀಡುವುದಾಗಿ ಪುಸಲಾಯಿಸಿದ. ಹಲವಾರು ಆಣೆ ಪ್ರಮಾಣಗಳನ್ನೂ ನೀಡಿದ. ಕೊನೆಗೊಮ್ಮೆ ಯಮ ಒಪ್ಪಿಕೊಂಡ ಇದರಿಂದಾಗಿ ದ್ಯಾವಣ್ಣ ಮತ್ತೊಮ್ಮೆ ಇಂದ್ರ ಪದವಿಗೆ ಏರಿದ. ಯಮ ಉಪೆಂದ್ರನಾಗಿಬಿಟ್ಟ.
ಹಲವು ವರ್ಷಗಳವರೆಗೆ ಅಧಿಕಾರ ನಡೆಸಿದ ನಂತರ ಕೊನೆಗೊಮ್ಮೆ ಅಧಿಕಾರವನ್ನು ನಡೆಸಿದ ನಂತರ ಯಮನಿಗೆ ಅಧಿಕಾರ ಬಿಟ್ಟುಕೊಡುವ ಕಾಲ ಹತ್ತಿರಕ್ಕೆ ಬಂತು. ಮತ್ತೆ ಗೌಡಣ್ಣ ತನ್ನ ವರಾತ ಪ್ರಾರಮಭಿಸಿದ. ಆದರೆ ಯಮ ಈ ಸಾರಿ ದ್ಯಾವಣ್ಣನ ವಿರುದ್ಧ ತಿರುಗಿ ಬಿದ್ದ.! ಮತ್ತೆ ಮೈತ್ರಿ ಮುರಿದುಬಿತ್ತು. ಬಗೆಹರಿಯದಂತಹ ಹಳೆಯ ಸಮಸ್ಯೆ ಮತ್ತೆ ಮುಂದುವರಿಯಿತು. ಕೊನೆಗೆ ಭಗವಾನ್ ಮಹಾವಿಷ್ಣುವಿಗೆ ಸಮಸ್ಯೆ ಪರಿಹಾರ ಮಾಡಲಾಗದೇ ಕೆಲಕಾಲ ರಾಷ್ಟ್ರಪತಿ ಆಳ್ವಿಕೆ ಹೇರಿದ. ಇದರಿಂದ ಯಮ ಹಾಗೂ ಇಂದ್ರರು ಕಂಗಾಲಾದರು. ರಾಷ್ಟ್ರಪತಿ ಆಳ್ವಿಕೆ ಬೇಡವೆಂದರು. ಅಷ್ಟರಲ್ಲಿ ಬುದ್ದಿ ಬಂದಿದ್ದ ಯಮ ತನಗೆ ಕೊಟ್ಟಕುದುರೆಯೇ ಸಾಕು, ತಾನು ನರಕಾಧಿಪತಿಯಾಗಿದ್ದರೇ ಒಳ್ಳೆಯದು ಎಂದು ಒಪ್ಪಿಕೊಂಡ ಕಾರಣ ಸಮಸ್ಯೆ ಅರಾಮಾವಾಗಿ ಕಳೆದುಹೋಯಿತು.
ಅಷ್ಟರಲ್ಲಿ ದ್ಯಾವಣ್ಣನ ಕೆಸು ಹಿಯರಿಂಗಿಗೆ ಬಂತು. ಎಲ್ಲರೂ ದ್ಯಾವಣ್ಣನಿಗೆ ಶಿಕ್ಷೆ ನೀಡಬೇಕು ಅಂದುಕೊಂಡರೂ ಯಾವ ಶಿಕ್ಷೆ ನೀಡಬೇಕೆಂಬುದು ಬಗೆ ಹರಿಯಲಿಲ್ಲ. ಕೊನೆಗೆ ಎಲ್ಲರೂ ನಾರದರು ಕೊಟ್ಟ ’ಗೌಡಣ್ಣ ಮತ್ತೆ ಪುನಃ ಕರ್ನಾಟಕದಲ್ಲೇ ಹಾ(ಆ)ಸನದಲ್ಲೇ ಹುಟ್ಟಲಿ’ ಎಂಬ ನಿರ್ಣಯಕ್ಕೆ ಒಪ್ಪಿ ಶಿಕ್ಷೆ ಜಾರಿಮಾಡಿದರು. ಅಷ್ಟರಲ್ಲಿ ಕಾಂಪ್ರಮೈಸ್ ಆಗಿದ್ದ ಯಮ ಹಾಗೂ ಇಂದ್ರರಿಗೆ ತಮ್ಮ ತಮ್ಮ ಹಳೆಯ ಕೆಲಸಗಳೇ ಮುಂದುವರಿದಿದ್ದವು.
ಕರ್ನಾಟಕದಲ್ಲಿ ಮರಳಿ ಹುಟ್ಟುವ ಮುನ್ನ ದ್ಯಾವಣ್ಣ ದೇವಲೋಕದ ಪತ್ರಕರ್ತ ನಾರದರ ಬಳಿ ಪೇಪರ್ ಸ್ಟೇಟ್ಮೆಂಟ್ ಕೊಡುತ್ತಾ ’ಛೇ ನಾನು ದೇವಲೋಕಕ್ಕೆ ಕಾಲಿಡಬಾರದಿತ್ತು. ಕಾಲಿಟ್ಟು ತಪ್ಪು ಮಾಡಿಬಿಟ್ಟೆ....’ ಎಂದ !!