Sunday, October 7, 2018

ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರಿಗೂ ಬೇಕು ನಿರ್ದಿಷ್ಠ ಮಾನದಂಡ

ಮಾಯಾಂಕ್ ಅಗರ್ವಾಲ್, ಕರುಣ್ ನಾಯಕರ್ ಹಾಗೂ ಮುರಳಿ ವಿಜಯ್ ಅವರುಗಳ ಪ್ರಕರಣವನ್ನು ಗಮನಿಸಿದರೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅಂಶ ಬೆಳಕಿಗೆ ಬರುತ್ತದೆ. ಆಯ್ಕೆ ಮಂಡಳಿಯು ಪ್ರತಿಭಾವಂತ ಆಟಗಾರರನ್ನು ಪದೇ ಪದೆ ಕಡೆಗಣಿಸುತ್ತಿರುವುದನ್ನು ಗಮನಿಸಿದರೆ  ಆಯ್ಕೆ ಸಮಿತಿಯಲ್ಲಿ ರಾಜಕೀಯ ತೀವ್ರವಾಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ದಟ್ಟವಾಗಿದೆ.
ಕಳೆದ ನಾಲ್ಕೈದು ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಭಾರತದ ಆಯ್ಕೆ ಸಮಿತಿ ನಡೆದುಕೊಂಡ ರೀತಿ ಹಾಗೂ ತೆಗೆದುಕೊಂಡ ನಿರ್ಧಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರತಿಭಾವಂತ ಆಟಗಾರರು ದೇಸೀಯ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೂ, ಅವರನ್ನು ಪದೇ ಪದೆ ಕಡೆಗಣನೆ ಮಾಡುವ ಮೂಲಕ ಸಾಕಷ್ಟು ಟೀಕೆಗೂ ಕಾರಣರಾಗಿದ್ದಾರೆ.
ಕರ್ನಾಟಕದ ಪ್ರತಿಭಾವಂತ ಆಟಗಾರ ಮಾಯಾಂಕ ಅಗರ್ವಾಲ್. ದೇಸೀಯ ಕ್ರಿಕೆಟ್ ಕೂಟಗಳಲ್ಲಿ ಮಾಯಾಂಕ್ ಕಳೆದೆರಡು ವರ್ಷಗಳ ಅವಧಿಯಲ್ಲಿ ರನ್ ಗುಡ್ಡೆಯನ್ನೇ ನಿರ್ಮಿಸಿದ್ದಾರೆ. ಆದರೆ ಈಗಿನ ವಿಂಡೀಸ್ ವಿರುದ್ಧದ ಪಂದ್ಯಾವಳಿ ವರೆಗೂ ಮಾಯಾಂಕ್‌ರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿರಲೇ ಇಲ್ಲ. ಹಿರಿಯ ಆಟಗಾರರು, ಅಭಿಮಾನಿಗಳು ಒತ್ತಾಯ ಮಾಡಿ, ಟೀಕೆ ಮಾಡಿದ ಮೇಲೆಯೇ ಮಾಯಾಂಕ್ ತಂಡಕ್ಕೆ ಆಯ್ಕೆಯಾಗುವಂತಾಯಿತು.
ಕರುಣ್ ನಾಯರ್, ಭಾರತ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕವನ್ನು ಸಿಡಿಸಿದ ಖ್ಯಾತಿ ಹೊಂದಿದ್ದಾರೆ. ಇಂಗ್ಲೆೆಂಡ್ ವಿರುದ್ಧದ ಟೆಸ್‌ಟ್‌ ಸರಣಿಗಾಗಿ ಕರುಣ್ ನಾಯರ್‌ರನ್ನು ಆಯ್ಕೆ ಮಾಡಲಾಗಿತ್ತು. ಐದಕ್ಕೆ ಐದು ಪಂದ್ಯಗಳಲ್ಲಿ ಕರುಣ್‌ಗೆ ಅವಕಾಶ ನೀಡದೇ ಅವಮಾನ ಮಾಡಲಾಯಿತು. ಐದೂ ಪಂದ್ಯಗಳಲ್ಲಿ ಬೇಂಚ್ ಕಾಯಿಸಿದ ಕರುಣ್ ನಾಯರ್ ನಿರಾಶರಾಗಬೇಕಾಯಿತು. ಅದೇ ಕಾರಣಕ್ಕಾಗಿ ಕರುಣ್ ನಾಯರ್, ಈ ಸರಣಿಯ ವೇಳೆ ಆಯ್ಕೆ ಮಂಡಳಿ ಹಾಗೂ ಮ್ಯಾನೇಜ್‌ಮೆಂಟ್ ತಮ್ಮನ್ನು ಸಂಪರ್ಕಿಸಿಲ್ಲ ಎಂದೂ ಹೇಳಿದರು. ಹೀಗೆ ಅವಕಾಶ ನೀಡದ ಆಯ್ಕೆ ಮಂಡಳಿ, ವಿಂಡೀಸ್ ಸರಣಿಗೆ ಕಾರಣವಿಲ್ಲದೇ ಕರುಣ್‌ರನ್ನು ಆಯ್ಕೆ ಮಾಡದೇ ಇದ್ದುದು ಸಾಕಷ್ಟು ಅನುಮಾನಗಳಿಗೂ, ಟೀಕೆಗಳಿಗೂ ಕಾರಣವಾಯಿತು.
ಇದೇ ವೇಳೆ ಭಾರತ ತಂಡದ ಮುರಳಿ ವಿಜಯ್ ಕೂಡ ತಮ್ಮ ಬಳಿ ಆಯ್ಕೆ ಮಂಡಳಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇಂಗ್ಲೆೆಂಡ್ ಸರಣಿಯ 4ನೇ ಪಂದ್ಯದ ಬಳಿಕ ಹಾಗೂ ವಿಂಡೀಸ್ ಸರಣಿಗೆ ತಂಡದ ಆಯ್ಕೆ ಸಂದರ್ಭದಲ್ಲಿ ಆಯ್ಕೆ ಸಮಿತಿ ತಮ್ಮ ಬಳಿ ಮಾತನ್ನಾಡಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾಾರೆ. ಇದನ್ನೆಲ್ಲ ಗಮನಿಸಿದಾಗ ಆಯ್ಕೆ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ರಾಜಕೀಯದ ದಾಳವಾಗಿ ಆಯ್ಕೆ ಸಮಿತಿ ಬಳಕೆಯಾಗುತ್ತಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದೆ.

ಆಯ್ಕೆ ಸಮಿತಿ ಹಾಗೂ ಅನುಭವ
ಆಯ್ಕೆ ಸಮಿತಿಯು 5 ಸದಸ್ಯರನ್ನು ಮತ್ತು ಸಂಚಾಲಕರನ್ನು ಹೊಂದಿರುತ್ತದೆ. ಆಯ್ಕೆ ಸಮಿತಿಯ 5 ಸದಸ್ಯರು ಮಾತ್ರ ತಂಡದ ಆಯ್ಕೆಗೆ ಮತ ಚಲಾಯಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಸಂಚಾಲಕನು ಕಾರ್ಯದರ್ಶಿಯಾಗಿದ್ದು, ಹಿರಿಯ ಆಯ್ಕೆ ತಂಡಕ್ಕೆ ಬಿಸಿಸಿಐ ಮತ್ತು ಜೂನಿಯರ್ ಆಯ್ಕೆ ತಂಡದ ಜೂನಿಯರ್ ಕಾರ್ಯದರ್ಶಿ ಹುದ್ದೆಗಳಿರುತ್ತವೆ.
ಆಯ್ಕೆ ಸಮಿತಿಯಲ್ಲಿರುವ 5 ಸದಸ್ಯರನ್ನು ಸಾಂಪ್ರದಾಯಿಕವಾಗಿ 5 ಕ್ರಿಕೆಟ್ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ. ಉತ್ತರ ವಲಯ, ಕೇಂದ್ರ ವಲಯ, ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯಗಳಿವೆ. 5 ಸದಸ್ಯರಲ್ಲಿ ಒಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಬಿಸಿಸಿಐ ಆಯ್ಕೆ ಮಾಡುತ್ತದೆ. ಲೋಧಾ ಸಮಿತಿಯ ಶಿಫಾರಸಿನ ಒತ್ತಡದಿಂದಾಗಿ, ಬಿಸಿಸಿಐ 2016 ರಲ್ಲಿ ವಲಯ ವ್ಯವಸ್ಥೆಯನ್ನು ರದ್ದುಗೊಳಿಸಿತು.
ತಂಡದ ನಾಯಕ ಮತ್ತು ತರಬೇತುದಾರ ತಂಡದ ಆಯ್ಕೆ ಸಮಿತಿ ಸಭೆಗಳಿಗೆ ಆಹ್ವಾನ ನೀಡಲಾಗುತ್ತದೆ, ಆದರೆ ತಂಡ ಆಯ್ಕೆಗಳಲ್ಲಿ ನಾಯಕ ಮತ್ತು ತರಬೇತುದಾರರಿಗೆ ಮತದಾನದ ಹಕ್ಕು ಇರುವುದಿಲ್ಲ.
ಪ್ರಸ್ತುತ ಭಾರತ ತಂಡದ ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಿದ್ದಾರೆ. ಮುಖ್ಯಸ್ಥರಾಗಿ ಮಾಜಿ ವಿಕೆಟ್ ಕೀಪರ್ ಎಂ. ಎಸ್. ಕೆ. ಪ್ರಸಾದ್  ಇದ್ದರೆ, ಉಳಿದ ಸದಸ್ಯರಾಗಿ ದೇವಾಂಗ್ ಗಾಂಧಿ ಹಾಗೂ ಶರಣದೀಪ್ ಸಿಂಗ್ ಇದ್ದಾರೆ.
ಈ ಆಟಗಾರರಲ್ಲಿ ಎಂ. ಎಸ್. ಕೆ. ಪ್ರಸಾದ್ ಆಡಿದ್ದು 6 ಟೆಸ್‌ಟ್‌ ಹಾಗೂ 17 ಏಕದಿನ ಪಂದ್ಯಗಳನ್ನು ಮಾತ್ರ. ದೇವಾಂಗ್ ಗಾಂಧಿ ಆಡಿದ್ದು 4 ಟೆಸ್‌ಟ್‌ ಹಾಗೂ 3 ಏಕದಿನ ಪಂದ್ಯಗಳು. ಶರಣದೀಪ್ ಸಿಂಗ್ ಆಡಿದ್ದು 3 ಟೆಸ್‌ಟ್‌ ಹಾಗೂ 5 ಏಕದಿನ ಪಂದ್ಯಗಳನ್ನು ಮಾತ್ರ. ವಿಚಿತ್ರವೆಂದರೆ ಇಷ್ಟು ಅಲ್ಪ ಕ್ರಿಕೆಟ್ ಆಡಿದವರು ಭಾರತ ತಂಡವನ್ನು ಆಯ್ಕೆ ಮಾಡುತ್ತಾರೆ. ಇನ್ನೂ ವಿಚಿತ್ರ ಎಂದರೆ, ಈ ಎಲ್ಲಾ ಆಟಗಾರರು ಸೇರಿ ಭಾರಿಸಿದ ರನ್‌ಗಳನ್ನು ಕರುಣ್ ನಾಯರ್ ತಮ್ಮ ಒಂದೇ ಇನ್ನಿಿಂಗ್‌ಸ್‌ (303 ನಾಟೌಟ್)ನಲ್ಲಿ ಭಾರಿಸಿದ್ದಾರೆ.

ಮಾನದಂಡಗಳು
ಈ ವೈರುದೈ ಗಮನಿಸಿದಾಗ ಭಾರತದ ಆಯ್ಕೆ ಸಮಿತಿ ಸದಸ್ಯರಾಗುವವರು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವಿಗಳಾಗಿರುವುದು ಅಗತ್ಯ ಎನ್ನುವುದು ಅಭಿಮಾನಗಳ ಅಭಿಮತವಾಗಿದೆ. ಕನಿಷ್ಟ 25 ಟೆಸ್‌ಟ್‌‌ಗಳು ಹಾಗೂ 25 ಏಕದಿನ ಪಂದ್ಯಗಳನ್ನಾದರೂ ಆಡಿರಬೇಕು ಎನ್ನುವ ಅಭಿಪ್ರಾಯ ದಟ್ಟವಾಗಿ ಕೇಳಿ ಬರುತ್ತಿದೆ. ಏಕದಿನ ಹಾಗೂ ಟೆಸ್‌ಟ್‌‌ಗಳಲ್ಲಿ ಕನಿಷ್ಟ 1000 ರನ್ ಭಾರಿಸಿರಬೇಕು ಅಥವಾ 50 ವಿಕೆಟ್ ಕಬಳಿಸಿರಬೇಕು. ಇಂತವರನ್ನು ಮಾತ್ರ ಆಯ್ಕೆ ಸಮಿತಿಗೆ ಸದಸ್ಯರನ್ನಾಗಿ ಮಾಡಬೇಕೆಂಬ ಆಗ್ರಹಗಳು ಕೇಳಿ ಬಂದಿವೆ. ಇಲ್ಲವಾದಲ್ಲಿ ಈಗ ನಡೆಯುತ್ತಿರುವಂತಹ ಅಧ್ವಾಾನಗಳು ಮತ್ತೂ ಮುಂದುವರಿಯುವುದು ಸಹಜ ಎಂಬಂತಾಗಿದೆ.

Saturday, October 6, 2018

ರ್ಯಾಂಕ್ ತೆಗೆದುಕೊಳ್ಳಿ ಆದರೆ ಫಸ್ಟ್ ರ್ಯಾಂಕ್ ರಾಜು ಆಗಬೇಡಿ

ಕಾಲೇಜು ಎನ್ನುವುದೊಂದು ನಾಲೇಜಿನ ಜಗತ್ತು. ಎಲ್ಲ ವಿಷಯಗಳನ್ನು ಅರಿತುಕೊಳ್ಳುವ ಪ್ರಪಂಚ. ಇಂತಹ ಕಾಲೇಜು ಕೇವಲ ಓದಿಗೆ ಮಾತ್ರ ಸೀಮಿತವಾಗದಿರಲಿ. ರಚನಾತ್ಮಕ ಕಾರ್ಯಗಳು, ಸೃಜನಶೀಲತೆಯನ್ನು ಪ್ರಚುರಪಡಿಸಿಕೊಳ್ಳುವಲ್ಲಿ ಕಾಲೇಜು ವೇದಿಕೆಯಾಗಲಿ.
ಕಾಲೇಜು ಎಂದ ಮೇಲೆ ಓದು ಎಷ್ಟು ಮುಖ್ಯವೋ, ಅದರ ಜತೆ ಜತೆಯಲ್ಲಿಯೇ ನಾವು ಕೈಗೊಳ್ಳುವ ವಿವಿಧ  ಕಾರ್ಯಗಳು, ರಚನಾತ್ಮಕ ಕೆಲಸಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಬರೀ ಓದು, ಮಾರ್ಕ್ಸ್, ರ್ಯಾಂಕ್  ಎಂದು ಬದುಕಿದವರಿಗಿಂತ, ಆವರೇಜ್ ಮಾರ್ಕ್ಸ್  ತೆಗೆದವರು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗಬಲ್ಲರು.
ಬರೀ ಓದಿ ಓದಿ ಪುಸ್ತಕದ ಹುಳುವಾಗಿ, ಸಮಾಜದ ನಡುವೆ ಫಸ್ಟ್ ರ್ಯಾಂಕ್ ರಾಜು ಆಗುವುದರ ಬದಲು, ಲಾಸ್ಟ  ಬೇಂಚ್ ಹುಡುಗನಾಗಿ, ಕಾಲೇಜಿನ ರಸ ನಿಮಿಷಗಳನ್ನು, ಆ ದಿನಗಳ ಎಲ್ಲ ಸಂತಸಗಳನ್ನು ಸವಿಯುವವನು ಖುಷ್ ಖುಷಿಯಾಗಿ ಬದುಕುತ್ತಾನೆ. ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾನೆ.
ಹಾಗಾದರೆ ಓದು ಹೊರತು ಪಡಿಸಿ ಕಾಲೇಜು ಟೈಮಲ್ಲಿ ಏನೇನು ಮಾಡಬಹುದು? ಆಟೋಟವೋ, ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇನ್ಯಾವುದೋ ಅಂಶಗಳು ಥಟ್ಟನೆ ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಅವು ಮಾತ್ರವಲ್ಲ ಇನ್ನೂ ಹಲವು ಅಂಶಗಳಲ್ಲಿ ಕಾಲೇಜು ಹುಡುಗರು ತಮ್ಮನ್ನು ತಾವು ತೊಡಗಿಸಿಕೊಂಡು, ಪ್ರತಿಭೆಯನ್ನು, ವ್ಯಕ್ತಿತ್ವವನ್ನು ಪ್ರದರ್ಶಿಸಬಹುದು. ರೂಪಿಸಿಕೊಳ್ಳಬಹುದು. ಅಂತಹ ಕೆಲವು ಸಂಗತಿಗಳ ಬಗ್ಗೆ ಕಣ್ಣು ಹಾಯಿಸೋಣ ಬನ್ನಿ.

ಪಠ್ಯಕ್ಕೆ  ಅಂಟಿಕೊಳ್ಳುವುದರಿಂದ ಆಗುವ ಅಪಾಯಗಳು
ಕೇವಲ ಪಠ್ಯಕ್ಕೆ, ಓದಿಗೆ ಅಂಟಿಕೊಂಡರೆ ಬದುಕಿನಲ್ಲಿ ಪಾಯ ಉಂಟಾಗುವುದೇ ಅಧಿಕ. ಕೇವಲ ಪಠ್ಯಕ್ಕೆ ಅಂಟಿಕೊಂಡವರಲ್ಲಿ ಹೆಚ್ಚಿನ ಜನರು ನಂತರ ಬದುಕಿನಲ್ಲಿ ಕಳೆದೇ ಹೋಗಿದ್ದಾರೆ. ಜೀವನವನ್ನು ಸಮರ್ಪಕವಾಗಿ ಕಟ್ಟಿಕೊಳ್ಳಲು ಎಡವಿದ್ದಾರೆ. ಸಮಾಜದ ನಡುವೆ ಬಾಳಿ ಬದುಕಲು ಒದ್ದಾಡಿ, ಬದುಕನ್ನು ಅಂತ್ಯಗೊಳಿಸಿಕೊಂಡವರೂ ಇದ್ದಾರೆ. ಕೇವಲ ಪಠ್ಯಕ್ಕೆ ಅಂಟಿಕೊಂಡವರು ಫಸ್ಟ್  ರ್ಯಾಂಕ್  ರಾಜುಗಳಾಗಿ ಬದುಕನ್ನು ಕಾಮೆಡಿ ಮಾಡಿಕೊಂಡವರೂ ಅನೇಕರು ನಮ್ಮ ಮುಂದೆಯೇ ನಿದರ್ಶನಗಳಾಗಿದ್ದಾರೆ. ಪಠ್ಯದ ಹುಳುಗಳು ನಾಲ್ಕು ಜನರ ನಡುವೆ ಬೆರೆಯುವುದಕ್ಕೆ ಸಾಧ್ಯ ವಾಗದೇ ಬವಣೆ ಪಡುವುದನ್ನು ನೋಡಿದ್ದೇವೆ. ಅಷ್ಟೇ ಅಲ್ಲದೇ ಬದುಕಿನಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಅದಕ್ಕೆ ಇತರರ ನೆರವಿಲ್ಲದೆಯೇ, ಸ್ವತಂತ್ರವಾಗಿ ತೆಗೆದುಕೊಂಡಿದ್ದಂತೂ ಇಲ್ಲವೇ ಇಲ್ಲ ಬಿಡಿ. ಬರೀ ಪಠ್ಯದ ಹುಳುವಾಗುವುದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಪಠ್ಯದಿಂದ ಆಚೆಗೂ ಇಣುಕುವ ಪ್ರಯತ್ನ ಮಾಡಿದಾಗ ಬದುಕು ಸುಂದರವಾಗಬಲ್ಲದರು.

ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ
ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಪ್ರತಿಯೊಬ್ಬರ ಬದುಕಿನಲ್ಲಿ ಪಠ್ಯದಷ್ಟೇ ಬಹಳ ಮುಖ್ಯ. ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮೈಮನಗಳನ್ನು ತಿಳಿಯಾಗಿಸಬಲ್ಲದು. ಆಟೋಟಗಳು ದೇಹಕ್ಕೆ ಹಿತಕಾರಿ, ಆರೋಗ್ಯಕಾರಿ. ಆಟೋಟಗಳಲ್ಲಿ ಪಾಲ್ಗೊಳ್ಳದೇ ಇರುವುದು, ದೇಹಕ್ಕೆ ವ್ಯಾಾಯಾಮಗಳನ್ನು ನೀಡದೇ ಇರುವುದು ಅನಾರೋಗ್ಯಗಳಿಗೆ ಅವಕಾಶ ನೀಡದಂತೆ. ಕ್ರಿಕೆಟ್, ಓಟ, ಷಟಲ್ ಬ್ಯಾಡ್ಮಿಿಂಟನ್ ಹೀಗೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿದರೆ ದೇಹಗಳಿಗೆ ರೀಲ್ಯಾಕ್ಸ್  ಸಿಗುತ್ತದೆ. ಇನ್ನು ಚದುರಂಗ (ಚೆಸ್) ನಂತರ ಮೈಂಡ್ ಗೇಮುಗಳು ನಮ್ಮ ಮನಸ್ಸನ್ನು ಚುರುಕಾಗಿಸುತ್ತದೆ. ಕಾಲೇಜು ದಿನಗಳಲ್ಲಿ ಓದು ಎಷ್ಟು ಅಗತ್ಯವೋ, ಇಂತಹ ಆಟೋಟಗಳಲ್ಲಿ ಭಾಗವಹಿಸುವುದೂ ಕೂಡ ಅಷ್ಟೇ ಮುಖ್ಯ.
ಇನ್ನು ವಿವಿಧ  ಆಟಗಳಲ್ಲಿ, ಓಟದಂತಹ ಸ್ಪರ್ಧೆಗಳಲ್ಲಿ  ಕಾಲೇಜುಗಳನ್ನು ಪ್ರತಿನಿಸುವುದೂ ಕೂಡ ಬಹಳ ಹೆಮ್ಮೆಯ ಸಂಗತಿಯೇ ಸರಿ. ಯಾವ್ಯಾವುದೋ ಕಾಲೇಜುಗಳಿಗೆ  ಸ್ಪರ್ಧೆಗಳಿಗಾಗಿ ತೆರಳಿ, ಆ ಕಾಲೇಜಿನ ಅಂಗಳದಲ್ಲಿ ನಮ್ಮ ಕಾಲೇಜನ್ನು ಪ್ರತಿನಿಸಿ ಗೆಲುವು ಸಾಸುವ ಸಂದರ್ಭದಲ್ಲಿ  ನೀಡುವಂತಹ ಖುಷಿ ಓದಿ ರ್ಯಾಂಕ್ ಪಡೆದಾಗ ನೀಡುವ ಖುಷಿಗಿಂತ ಹೆಚ್ಚು. ಇನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಬ್ಲೂ ಆಗಿ ಹೊರಹೊಮ್ಮಿದಾಗಲಂತೂ ಆಗುವ ಸಂತಸ, ಸಂಭ್ರಮಕ್ಕೆ ಪಾರವೇ ಇಲ್ಲ ಬಿಡಿ.

ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಳ್ಳುವಿಕೆ
ಕ್ರೀಡೆಗಳಷ್ಟೇ ಕಾಲೇಜು ದಿನಗಳಲ್ಲಿ ಬಹು ಮುಖ್ಯವಾಗುದು ಸಾಂಸ್ಕೃತಿಕ ರಂಗ. ಕಾಲೇಜಿನ ಮಟ್ಟದಲ್ಲಿ ಯಾವುದೋ ನಾಟಕವೋ, ಹಾಡೋ, ನೃತ್ಯದಲ್ಲೋ ಪಾಲ್ಗೊಳ್ಳುವ ಮೂಲಕ ನಮ್ಮೊಳಗಿನ ಸಾಂಸ್ಕೃತಿಕ ಪ್ರತಿಭೆಯನ್ನು ಒರೆಗೆ ಹಚ್ಚುವುದೂ ಕೂಡ ಬಹುಮುಖ್ಯ. ಕಾಲೇಜು ದಿನಗಳಲ್ಲಿಯೇ ತಮ್ಮ ಸಾಂಸ್ಕೃತಿಕ ಶಕ್ತಿಯನ್ನು ನಾಲ್ಕು ಜನರ ಮುಂದೆ ಪ್ರದರ್ಶನ ಮಾಡುವ ಮೂಲಕ, ಬದುಕನ್ನು ಬದಲಿಸಿಕೊಂಡವರು ಹಲವರು. ಸಾಂಸ್ಕೃತಿಕ ರಂಗದಲ್ಲಿ ಕಣ್ಮಣಿಯಾಗಿ ಮೆರೆದವರೂ ಅನೇಕ ಜನರಿದ್ದಾರೆ. ಇಂತಹ ಸಾಂಸ್ಕೃತಿಕ ವಲಯದಲ್ಲಿ ಕಾಲೇಜು ವಿದ್ಯಾಾರ್ಥಿಗಳು ಮಿಂಚುವ ಮೂಲಕ ಕಾಲೇಜನ್ನು, ವಿಶ್ವವಿದ್ಯಾಲಯವನ್ನು ಪ್ರತಿನಿಸಿದಾಗಲೂ  ಸಿಗುವ ಸಂತಸ, ಸಂಭ್ರಮ  ಅನಿರ್ವಚನೀಯವಾದುದು.

ಸಾಮಾಜಿಕ ಕಾರ್ಯಗಳು
ಓದು, ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಪಾಲ್ಗೊಳ್ಳುವುದರ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶ ಬಹಳ ಇದೆ. ಇಂತಹ ಸಾಮಾಜಿಕ ಕಾರ್ಯಗಳು, ಮುಂದಿನ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ನೀಡುತ್ತವೆ. ಜತೆಗೆ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ ಕಾರ್ಯಗಳು ಕಾಲೇಜು ದಿನಗಳಲ್ಲಿ ಇಂತಹ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಾಗಿದೆ. ಎನ್‌ಸಿಸಿಯು ಮುಂದಿನ ಬದುಕಿನಲ್ಲಿ ದೇಶಸೇವೆ, ಸೈನ್ಯ ಸೇರುವಿಕೆಯಂತಹ ಹಲವು ಅವಕಾಶಗಳನ್ನು ತೆರೆದಿಡುತ್ತದೆ. ಅಲ್ಲದೇ ನಾಯಕತ್ವ ಗುಣವನ್ನೂ ಕೂಡ ಬೆಳೆಸುತ್ತದೆ. ಎನ್‌ಎಸ್‌ಎಸ್ ಕೂಡ ಬದುಕನ್ನು ವಿಭಿನ್ನ ರೀತಿಯಲ್ಲಿ, ವಿಶಿಷ್ಟವಾಗಿ ಕಟ್ಟಿಕೊಡುತ್ತದೆ. ಸಮಾಜವನ್ನು ಬದಲಾಯಿಸುವ ಅವಕಾಶವನ್ನು ನೀಡುತ್ತದೆ. ಎನ್‌ಸಿಸಿ ಕ್ಯಾಾಂಪುಗಳಂತೂ ನಾಯಕತ್ವ ಗುಣವನ್ನು ಬೆಳೆಸುವುದರ ಜತೆಗೆ ಸಮಾಜದ ನಡುವೆ ನಮ್ಮ ಬೆಲೆಯನ್ನು ಹೆಚ್ಚಿಸುತ್ತವೆ. ಗ್ರಾಮಾಭ್ಯುದಯ , ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಹೀಗೆ ವಿವಿಧ  ರಂಗದಲ್ಲಿ ಬೆಳವಣಿಗೆಗೂ ಎನ್‌ಎಸ್‌ಎಸ್ ಕಾರಣವಾಗುತ್ತದೆ.

ಕಾಲೇಜು ದಿನಗಳಲ್ಲಿ ಓದುವುದರ ಜತೆ ಜತೆಯಲ್ಲಿಯೇ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಬಹುದು. ಕಿರುಚಿತ್ರಗಳನ್ನು ನಿರ್ಮಿಸಬಹುದು, ಪತ್ರಿಕೆಗಳಿಗೆ ಬರಹಗಳನ್ನು ಬರೆಯಬಹುದು. ಸದೃಢ ಆರೋಗ್ಯಕ್ಕಾಗಿ ಯೋಗದಂತಹ ತರಗತಿಗಳನ್ನು ನಡೆಸಬಹುದು. ಸ್ವತಃ ನಾವೂ ಕೂಡ ಯೋಗಾಸನಗಳನ್ನು ನಡೆಸಿ ನಮ್ಮ ಮೈಮನಗಳನ್ನು ತಿಳಿಯಾಗಿರಿಸಿಕೊಳ್ಳಬಹುದು. ಯಾವುದೋ ವಾಹಿನಿಗಳಲ್ಲಿ ಆಂಕರ್ ಆಗಬಹುದು. ಅಷ್ಟೇ ಏಕೆ ಕಾಲೇಜು ಕಾರ್ಯಕ್ರಮಗಳಲ್ಲಿಯೂ ಉತ್ತಮ ನಿರೂಪಕರಾಗಿ ಎಲ್ಲರ ಮನವನ್ನು ಗೆಲ್ಲಬಹುದು.

ಪಾರ್ಟ್ ಟೈಂ ಕಾರ್ಯಗಳು
ಕಾಲೇಜು ಓದಿನ ಜತೆ ಜತೆಯಲ್ಲಿಯೇ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಬದುಕು ನಡೆಸಿದವರು ಹಲವರಿದ್ದಾರೆ. ತಮ್ಮ ಬದುಕಿನ ಅನ್ನವನ್ನು ತಾವೇ ಕಂಡುಕೊಂಡವರೂ ಇದ್ದಾರೆ. ಬಿಡುವಿನ ವೇಳೆಯಲ್ಲಿ ಯಾವುದೋ ಕಾರ್ಯಗಳನ್ನು ನಡೆಸಿ ಪಾಕೆಟ್ ಮನಿಯನ್ನು ಮಾಡಿಕೊಂಡವರಿದ್ದಾರೆ. ಇಂತಹ ವ್ಯಕ್ತಿಗಳು ಮನಿ ಮ್ಯಾನೇಜ್‌ಮೆಂಟನ್ನು ಹೆಚ್ಚು ತಿಳಿದುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳು ಬದುಕಿನಲ್ಲಿ ಸಾಕಷ್ಟು ಯಶಸ್ವಿಯಾಗಬಲ್ಲರು.

ಲವ್ ಮಾಡಿ ನೋಡು..
ಕಾಲೇಜು ಬದುಕಿನಲ್ಲಿ ಪ್ರೀತಿ-ಪ್ರೇಮ-ಪ್ರಣಯ ಸಹಜ. ಪ್ರತಿಯೊಬ್ಬನಿಗೂ, ಪ್ರತಿಯೊಬ್ಬಳಿಗೂ ಕೂಡ ಪ್ರೀತಿ ಎಂಬುದು ಚಿಗುರೊಡೆದೇ ಇರುತ್ತದೆ. ಯಾರೋ ಒಬ್ಬರು ಅವನ/ಳ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡೇ ಇರುತ್ತಾಾರೆ. ಅವರವರಿಗೆ ಅರಿವಿಲ್ಲದಂತೆಯೇ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡು ಭದ್ರವಾಗಿ ನೆಲೆಯೂರಿ ನಿಂತಿರುತ್ತಾರೆ. ಕೆಲವರು ತಮ್ಮೊಳಗಿನ ಸುಪ್ತ ಪ್ರೀತಿಯನ್ನು ಅವನ/ಳ ಬಳಿ ಹೇಳಿಕೊಂಡರೆ ಇನ್ನೂ ಹಲವರು ಹೇಳಿಕೊಳ್ಳದೇ ತೊಳಲಾಡುತ್ತಿರುತ್ತಾರೆ. ಹಲವರಿಗೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ ಎನ್ನುವುದು ತಪ್ಪು. ಆದರೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮದಲ್ಲಿ ಇದ್ದೂ ಬದುಕನ್ನು ಸುಂದರವಾಗಿ ಕಟ್ಟಿಕೊಂಡವರು ನಮ್ಮ ನಡುವೆಯೇ ಉದಾಹರಣೆಯಾಗಿ ನಿಂತಿದ್ದಾರೆ.

ಲಾಸ್ಟ ಲೈನ್ಸ್
ಕಾಲೇಜು ಹುಡುಗ್ರಾ. . .  ಹುಡುಗೀರ್ರಾ . . . ಬರೀ ಓದು ಓದು ಎಂದು ಓದುಗುಳಿಯಾಗಬೇಡಿ. ಓದಿನ ಜತೆಗೆ ಇತರ ಹಲವು ಸಂಗತಿಗಳು ಜಗತ್ತಿನಲ್ಲಿ ಸುಂದರವಾಗಿದೆ. ಅದರ ಕಡೆಗೂ ಗಮನ ಹರಿಸಿ. ಕಾಲೇಜು ದಿನಗಳಲ್ಲಿ ಓದಿನ ಜತೆ ಜತೆಯಲ್ಲಿಯೇ ಪಡೆದುಕೊಳ್ಳುವ ಇತರ ಖುಷಿಗಳು ಬದುಕಿನಾದ್ಯಂತ ನೆನಪಿನಲ್ಲಿ ಇರುತ್ತವೆ. ಇವನ್ನು ಒಮ್ಮೆ ತಪ್ಪಿಸಿಕೊಂಡರೆ ಮತ್ತೆ ಎಷ್ಟು ಪರಿತಪಿಸಿದರೂ ಸಿಗಲಾರದು. ಹೀಗಾಗಿ ಹೇಳೋದಿಷ್ಟೆ.. . ಜಸ್ಟ್  ಹ್ಯಾಪಿಯಾಗಿರಿ..



Tuesday, October 2, 2018

ಕಥೆಯ ಕಾಯಿಲೆ

ಅರಳರಳಿ ಮರುಮರಳಿ
ಸುಳಿದು ಬರುತಿದೆ ಕಥೆಯ ಕಾಯಿಲೆ
ನೋವುಂಟು ನಲಿವುಂಟು
ಸುರುಳಿ ಸೊಳ್ಳೆಯ ಬತ್ತಿ ಕಥೆಯ ಕಾಯಿಲೆ

ಅಕ್ಕರೆಯ ಪ್ರೀತಿ ಸಕ್ಕರೆಯ ರೀತಿ
ಸೋಲನ್ನೂ ಮರೆಸುತಿದೆ ಖ್ಯಾತಿ
ಅತ್ತಿತ್ತ ಹುಯ್ದಾಡಿ ಸುತ್ತೆಲ್ಲ ಸುಳಿದಾಡಿ
ಮರಳಿ ಬರುತಿದೆ ಕಥೆಯ ಕಾಯಿಲೆ

ಮನಸು ಅಂತರಗಂಗೆ
ಹರಿಸಿ ಪ್ರೀತಿಯ ಗಂಗೆ
ತೆರೆ ತೆರೆಯ ನೆರಳಲ್ಲಿ
ಮತ್ತೆ ನೆನಪಾಗುತಿದೆ ಕಥೆಯ ಕಾಯಿಲೆ

ಜನನ ಮರಣದ ನಡುವೆ
ನೋವು ನಲಿವಿನ ಗೊಡವೆ
ಪ್ರೀತಿ ಸ್ನೇಹದ ಒಡವೆ
ಹೊತ್ತು ತರುತಿದೆ ಕಥೆಯ ಕಾಯಿಲೆ

ನಗುವು ಅಳುವಿನ ಬದುಕು
ಒಲವು ಸೇಡಿನ ಇಣುಕು
ನೆನಪು ನಲಿವಿನ ಪಲಕು
ಕರೆಯ ಕೊಟ್ಟಿದೆ ಕಥೆಯ ಕಾಯಿಲೆ


******



(ಕನ್ನಡದ ಇನ್ನೊಂದು ಚಿತ್ರಕ್ಕೆ ಈ ಹಾಡನ್ನು ಬರೆದುಕೊಟ್ಟಿದ್ದೆ. ಖಂಡಿತವಾಗಿಯೂ ಇದನ್ನು ಬಳಸಿಕೊಳ್ಳುತ್ತೇವೆ.. ಶೀಘ್ರದಲ್ಲಿಯೇ ನಿಮಗೆ ವಿತ್ ಮ್ಯೂಸಿಕ್ ಹಾಡನ್ನು ಕಳಿಸುತ್ತೇವೆ ಎಂದು ನಿರ್ದೇಶಕರು ಹೇಳಿದ್ದರು.
ಹಾಡನ್ನು ಬರೆಯುವ ಮೊದಲು ಸುರುಳಿ ಸೊಳ್ಳೆಯ ಬತ್ತಿ ಹಾಗೂ ಕಥೆಯ ಕಾಯಿಲೆ ಎನ್ನುವ ಎರಡು ಶಬ್ದಗಳನ್ನು ಕೊಟ್ಟು ಇವೆರಡೂ ಹಾಡಿನ ಮೊದಲ ಪ್ಯಾರಾದಲ್ಲಿ ಇರಲೇಬೇಕು ಎಂದಿದ್ದರು. ಇದೇ ಏಕೆ ಎಂದರೆ, ಅದನ್ನೇ ಸಿನಿಮಾ ಟೈಟಲ್ ಮಾಡುವುದಾಗಿ ಹೇಳಿದ್ದರು. ಆಮೇಲೆ ಈ ಹೆಸರು ಬಳಕೆಯಾಗಲಿಲ್ಲ. ಚಿತ್ರ ಬಿಡುಗಡೆಯೂ ಆಯ್ತುಘಿ. ಅದರಲ್ಲಿ ನನ್ನ ಹಾಡೂ ಕೂಡ ಬಳಕೆ ಆಗಿರಲಿಲ್ಲ. ಎನಿವೇ.. ಆ ಹಾಡು ಇಲ್ಲಿದೆ ನೋಡಿ)

Sunday, September 30, 2018

ಪ್ರೀತಿಯ ಕರೆ

ನಿನ್ನ ಪ್ರೀತಿಯ ಕರೆಯು
ನನ್ನಿಲ್ಲೇ ನಿಲ್ಲಿಸಿತು
ಇಳಿಸಂಜೆ ಹೊಸ್ತಿಲಲಿ
ಹೋಗದಂತೆ |

ಮಧುರ ಗಾನದ ಉಲಿಯು
ಸುಮ್ಮನೇ ಕಾಡಿತು
ಕೈಹಿಡಿದು ನಿಲ್ಲಿಸಿತು
ಹೊರಳದಂತೆ |

ನಿನ್ನೊಲವ ಕಿರು ನಗೆಯು
ನನ್ನೆದೆಯ ಕುಣಿಯಿಸಿತು
ಎದೆ ಬಡಿತ ಮಿಡಿಯಿಸಿತು
ಮಿಂಚಿನಂತೆ |

Saturday, September 29, 2018

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ (ನಮ್ಮೂರ ಚಿತ್ರಗಳು-೨)

(Ekadashi Gudda)
ನಮ್ಮೂರು ದಂಟಕಲ್ ಹಾಗೂ ನಮ್ಮೂರ ಪಕ್ಕದಲ್ಲೇ ಇರುವ, ನಮ್ಮೂರಿನಂತದ್ದೇ ಊರು ಮುತ್ಮುರ್ಡು. ನಮ್ಮೂರಿನಲ್ಲಿ ಆರೇ ಆರು ಮನೆಗಳಿದ್ದರೆ, ಮುತ್ಮುರ್ಡಿನಲ್ಲಿ ಹತ್ತಕ್ಕೂ ಅಧಿಕ ಮನೆಗಳಿವೆ. ಈ ಕಾರಣದಿಂದ ನಮ್ಮೂರಿಗಿಂತ ಸ್ವಲ್ಪ ಹೆಚ್ಚಿನ ಪ್ರಾತಿನಿಧ್ಯ ಮುತ್ಮುರ್ಡಿಗೆ ಸಿಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ. ನಮ್ಮೂರಿಗೂ, ಮುತ್ಮುರ್ಡಿಗೂ ನಡುವೆ ಒಂದು ಶಾಲೆಯಿದೆ. ೧ನೇ ಕ್ಲಾಸಿನಿಂದ ಹಿಡಿದು ಐದನೇ ಕ್ಲಾಸಿನ ವರೆಗೆ ಓದಲು ಅವಕಾಶ ವಿರುವ ಕಿರಿಯ ಪ್ರಾಥಮಿಕ ಶಾಲೆ ಇದು.ಹತ್ತು ಹಲವು ಕಾರಣಗಳಿಂದ ಇದು ವಿಶಿಷ್ಟವಾದುದು.
ಮಹಾತ್ಮಾ ಗಾಂಧೀಜಿ ಜನ್ಮದಿನದ ೧೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶದಲ್ಲಿ ಹಾಗೂ ರಾಜ್ಯಾದ್ಯಂತ ಹಲವಾರು ಶಾಲೆಗಳನ್ನು ನಿರ್ಮಿಸಲಾಯಿತಂತೆ. ಹೀಗೆ ನಿರ್ಮಾಣಗೊಂಡ ಶಾಲೆಗಳಲ್ಲೊಂದು, ನಮ್ಮೂರಿನದ್ದು. ಹೀಗಾಗೇ ಗಾಂಧಿ ಶತಾಬ್ದಿ ಶಾಲೆ ಎಂದೂ ನಮ್ಮೂರಿನ ಶಾಲೆಯನ್ನು ಹಿರಿಯರು ಕರೆಯುತ್ತಿದ್ದುದು ನನಗಿನ್ನೂ ನೆನಪಿದೆ. ಎರಡೂ ಊರುಗಳ ನಡುವೆ ಶಾಲೆ ಇದ್ದರೂ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ ಎಂಬ ಉದ್ದನೆಯ ಹೆಸರಿದ್ದರೂ, ಆಡು ಮಾತಿನಲ್ಲಿ ಅದು ಮುತ್ಮುರ್ಡು ಶಾಲೆ ಎಂದೇ ಕರೆಸಿಕೊಳ್ಳುತ್ತಿತ್ತು.
ಇಂತಹ ಶಾಲೆಗೆ ಮೊದಲು ಕಲಿಸಲು ಬಂದವರು ಮಾದೇವ ಮಾಸ್ತರರು ಎನ್ನುವುದು ನನ್ನ ಅಜ್ಜನ ಬಾಯಿಂದ ಆಗಾಗ ಕೇಳಿ ಬರುತ್ತಿದ್ದ ಮಾತು. ಶಾಲೆಯನ್ನು ತೆರೆದವರೂ ಅವರೇ ಎಂದೂ ಎಲ್ಲೋ ಕೇಳಿದ್ದೆ ಬಿಡಿ. ಮಾದೇವ ಮಾಸ್ತರರು ಪೋಸ್ಟ್ ಮಾಸ್ತರರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರಂತೆ. ಊರಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೂ ಕಾರಣರಾದವರಂತೇ ಎಂಬೆಲ್ಲ ಮಾತುಗಳನ್ನೂ ಕೇಳಿದ್ದೇನೆ.
ಮುತ್ಮೂರ್ಡಿನ ಸುಬ್ಬಜ್ಜ (ಸುಬ್ರಾಯ ಹೆಗಡೆ) ಈ ಶಾಲೆಯ ಆರಂಭಕ್ಕೆ ಕಾರಣರಾದವರು ಎನ್ನುವ ಮಾತುಗಳೂ ಇದೆ. ಗೋಕರ್ಣದ ಕೋಟಿ ತೀರ್ಥ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದ ಸುಬ್ಬಜ್ಜ ಈ ಶಾಲೆಯನ್ನು ನಿರ್ಮಾಣ ಮಾಡಿ, ಅಲ್ಲಿಗೆ ಶಿಕ್ಷಕರು ಬರುವಂತೆ ಮಾಡಿದರು ಎನ್ನುವ ಮಾತುಗಳು ಅವರಿವರ ಬಾಯಲ್ಲಿ ಕೇಳಿ ಬಂದಿದೆ. ಒಟ್ಟಿನಲ್ಲಿ ಶಾಲೆ ನಿರ್ಮಾಣ ಮಾಡಿದ್ಯಾರು ಎನ್ನುವುದು ಗೊಂದಲಕ್ಕೆ ಕಾರಣವಾದರೂ ಶಾಲೆಯಿಂದ ನೂರಾರು ಜನರಿಗೆ ವಿದ್ಯಾದಾನವಾಗಿದೆ ಎನ್ನುವುದು ಸುಳ್ಳಲ್ಲ.
ನನ್ನ ಅಪ್ಪನ ಬಳಿ ಕೇಳಿದ್ದ ಸಂದರ್ಭದಲ್ಲಿ, ತಾನು ಈ ಶಾಲೆಯಲ್ಲಿ ಓದಿಲ್ಲ ಎಂದೂ, ಕೋಡ್ಸರದ ಬಳಿಯ ಬಿಡಕಿ ಶಾಳೆಯಲ್ಲಿ ಓದಿದ್ದೆಂದೂ ಹೇಳಿದ್ದ. ನನ್ನ ಅಪ್ಪನ ವಾರಗೆಯವರ್ಯಾರೂ ಕೂಡ ಈ ಶಾಲೆಯಲ್ಲಿ ಓದಿಲ್ಲ. ಅಂದರೆ ನನ್ನ ಅಪ್ಪನ ನಂತರದ ೧೦-೧೨ ವರ್ಷಗಳ ತರುವಾಯ ಈ ಶಾಲೆ ಆರಂಭಗೊಂಡಿದೆ. ಸುತ್ತಮುತ್ತ ಯಾವುದೇ ಶಾಲೆ ಇಲ್ಲದ ಸಂದರ್ಭದಲ್ಲಿ ಆರಂಭಗೊಂಡ ಶಾಲೆ ಪ್ರಮುಖವಾಗಿ ದಂಟಕಲ್ ಹಾಗೂ ಮುತ್ಮೂರ್ಡು ಗ್ರಾಮಗಳ ಮಕ್ಕಳ ವಿದ್ಯಾದಾನಕ್ಕೆ ಕಾರಣವಾಗಿದೆ.
ಅಜ್ಜ, ಹಾಗೂ ಅಪ್ಪನ ನೆನಪಿನ ಅಂಗಣದಿಂದ ತಿಳಿದು ಬಂದ ವಿಷಯವೇನೆಂದರೆ, ಆ ದಿನಗಳಲ್ಲಿ ಅಡಕಳ್ಳಿಯಲ್ಲಿ (೧೯೬೨ರಲ್ಲಿ ಆರಂಭ) ಶಾಲೆ ಆರಂಭಗೊಂಡಿದ್ದರೂ, ಮುತ್ಮುರ್ಡು ಹಾಗೂ ದಂಟಕಲ್ ಗ್ರಾಮಗಳ ಮಕ್ಕಳು ದಟ್ಟ, ಗವ್ವೆನ್ನುವ ಕಾಡು, ಗುಡ್ಡ, ತುಂಬಿ ಹರಿಯುವ ಹಳ್ಳಗಳನ್ನು ದಾಟಿ ಅಡಕಳ್ಳಿಗೆ ಹೋಗುವುದು ತ್ರಸದಾಯಕವಾಗಿತ್ತು. ದೊಡ್ಡದೊಂದು ತಾಯಿ ಬೇರಿಗೆ ಮರಿ ಟಿಸಿಲುಗಳಿರುವಂತೆ ಮುತ್ಮುರ್ಡಿನಂತಹ ಶಾಲೆಗಳು ತರುವಾಯ ಆರಂಭವಾದವು. ಮೊದ ಮೊದಲಿಗೆ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ತರಗತಿಗಳು ನಡೆಯುತ್ತಿದ್ದವು. ಅಂಗನವಾಡಿ, ಬಿನ್ನೆತ್ತಿ, ಒಂದು, ಎರಡು, ಮೂರು, ನಾಲ್ಕು ಕ್ಲಾಸುಗಳ ವರೆಗೆ ಓದಿದ ತರುವಾಯ ಅಡ್ಕಳ್ಳಿ ಶಾಲೆಯತ್ತ ಮುಖ ಮಾಡಬೇಕಿತ್ತು. ಹೀಗಾಗಿ ಹಲವರಿಗೆ ಈ ಶಾಲೆ ಅನುಕೂಲವಾಯಿತು.
ಮುತ್ಮುರ್ಡ್ ಶಾಲೆಯ ಮಾಸ್ತರ್ರು ರೋಲು ದೊಣ್ಣೆಯಲ್ಲಿ ಹೊಡೆಯುತ್ತಿದ್ದರಂತೆ. ಹುಡುಗರು ಕೈನ್ನು ಟೇಬಲ್ ಮೇಲೆ ಇರಿಸುವಂತೆ ಹೇಳಿ, ರೋಲು ದೊಣ್ಣೆಯ ಮೂಲಕ ಕುಟ್ಟಾಣಿಯಲ್ಲಿ ಕವಳ ಕುಟ್ಟುವಂತೆ ಕುಟ್ಟುತ್ತಿದ್ದಂತೆ, ಒಂದರಿಂದ ೨೦ರವರೆಗೆ ಮಗ್ಗಿ ಹೇಳುವುದರ ಜತೆಗೆ ಉಲ್ಟಾ ಪಲ್ಟಾ ಹೇಳುವಂತೆ ಕಾಟ ಕೊಡುತ್ತಿದ್ದರಂತೆ, ಹೇಳದಿದ್ದರೆ ಕಾಲಿನ ಮೊಣಕಾಲಿನ ಕೆಳಗೆ ಮೂಳೆಯ ಮೇಲೆ ಟಣಾರನೆ ಭಾರಿಸುತ್ತಿದ್ದರಂತೆ, ಅಷ್ಟಲ್ಲದೇ ಒಂದ್ ಮುಕ್ಕಾಲ್ ಮುಕ್ಕಾಲು ಎಂದು ಮಗ್ಗಿಯನ್ನು ಮುಕ್ಕಾಲರ ರೀತಿಯಲ್ಲಿ, ಅರ್ಧದ ರೀತಿಯಲ್ಲೆಲ್ಲ ಹೇಳಿಸುತ್ತಿದ್ದರಂತೆ ಎಂಬ ಅಂತೆ ಕಂತೆಗಳೆಲ್ಲ ನಾವು ಸಣ್ಣವರಿದ್ದಾಗ ಕಿವಿಗೆ ಬಿದ್ದು, ಮುತ್ಮುರ್ಡ್ ಶಾಲೆಯ ಮಾಸ್ತರರ ಬಗ್ಗೆ ಭಯ ಹುಟ್ಟಿಸಿದ್ದವು.
ಇದೆಲ್ಲ ತಮಾಷೆಯಿರಬೇಕು ಬಿಡು, ಸುಮ್ಮನೇ ನಮ್ಮನ್ನು ಹೆದರಿಸಲು ಮಾಡುತ್ತಿರುವ ನಾಟಕ ಎಂದು ನಮ್ಮದೇ ವಾರಗೆಯ ಹುಡುಗನೊಬ್ಬ ಹೇಳಿದ್ದ. ನಾವು ಅದನ್ನು ನಂಬಿಕೊಂಡಿದ್ದೆವು. ಆದರೆ ನಮ್ಮೂರಿನ ಹಿರಿಯಜ್ಜನೊಬ್ಬ ಕಾಲು, ಮುಕ್ಕಾಲರ, ಅರ್ಧದ ಮಗ್ಗಿಗಳನ್ನು ಸರಾಗವಾಗಿ ಹೇಳಿದ್ದು ಕೇಳಿದ್ದಾಗಲೆಲ್ಲ ಮುತ್ಮುರ್ಡು ಶಾಲೆಯ ಕುರಿತಾದದ್ದೆಲ್ಲ ಸುಳ್ಳಲ್ಲ, ಅಂತೆ, ಕಂತೆಯಲ್ಲ ಎನ್ನಿಸಿದ್ದವು.
ನನ್ನ ಅರಿವಿಗೆ ಬರುವ ಸಂದರ್ಭದಲ್ಲಿ ಈ ಶಾಲೆ ಎನ್ನುವುದು ಹಾಳು ಬಿದ್ದಿತ್ತು. ನಮ್ಮೂರ ಬೆನ್ನಿಗೆ ಉದ್ದಕ್ಕೆ ನಿಂತಿರುವ ಏಕಾದಶಿ ಗುಡ್ಡದ ಬುಡದಲ್ಲಿ ಒಂದೇ ಒಂದು ಕೊಠಡಿ, ಮುರಿದು ಹೋಗಿದ್ದ ಒಂದು ಭಾಗಿಲು, ಅಲ್ಲಲ್ಲಿ ಕಿತ್ತು ಹೋದ ಹಾಗೂ ಯಾರೋ ಕದ್ದುಕೊಂಡು ಹೋದ ಹಂಚುಗಳನ್ನೊಳಗೊಂಡ ಒಂದು ಮಾಡು. ಅರ್ಧ ಬಿದ್ದಿದ್ದ ಗೋಡೆ, ಬೀಗವೇ ಇರದಿದ್ದ ಬಾಗಿಲು. ಒರಲೆಯ ಮನೆ. ಆಗೀಗ ಬಿಕ್ಕೆ ಹಣ್ಣಿಗೋ, ಕವಳಿ ಹಣ್ಣಿಗೋ, ಪರಗೆ ಹಣ್ಣಿಗೋ ಅಥವಾ ಚೌತಿಯ ಸಂದರ್ಭದಲ್ಲಿ ಗೌರಿ ಹೂ ಮುಂತಾದ ಫಲವಳಿಗೆ ಸಾಮಾನು ಸಂಗ್ರಹಿಸಲು ಏಕಾದಶಿ ಗುಡ್ಡ ಹತ್ತಿದ ಸಂದರ್ಭದಲ್ಲಿ ಮುತ್ಮುರ್ಡು ಶಾಲೆಯ ಹಳೆಯ, ಶಿಥಿಲ ಕಟ್ಟಡ ನಮ್ಮ ಕಣ್ಣಿಗೆ ಬೀಳುತ್ತಿತ್ತಲ್ಲದೇ, ನಮ್ಮೊಳಗೆ ನಮಗೇ ಗೊತ್ತಿಲ್ಲದಂತೆ ಭಯವನ್ನು ಹುಟ್ಟು ಹಾಕುತ್ತಿತ್ತು.
ಹಿಂದೆಲ್ಲ ನಮ್ಮೂರಿನಲ್ಲಿ ಒಂದೊಂದು ಮನೆಗಳಲ್ಲಿ ಹತ್ತಾರು ಜನ ಮಕ್ಕಳಿದ್ದು, ಅವರೆಲ್ಲ ಮುತ್ಮುರ್ಡು ಶಾಲೆಗೆ ಓದಲು ಹೋಗುತ್ತಿದ್ದರಂತೆ. ಕ್ರಮೇಣ ಕೇಂದ್ರ ಸರ್ಕಾರದ ಕುಟುಂಬ ಯೋಜನೆಯಂತಹ ಜನಸಂಖ್ಯಾ ನಿಯಂತ್ರಣದ ಯೋಜನೆಗಳು ಮನೆ ಮನೆಗಳನ್ನು ಹೊಕ್ಕ ಮೇಲೆ ನಮ್ಮೂರಲ್ಲಿ ಹಾಗೂ ಮುತ್ಮುರ್ಡುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಕ್ರಮೇಣ ಮುತ್ಮುರ್ಡು ಶಾಲೆಗೂ ವಿದ್ಯಾರ್ಥಿಗಳ ಬರ ಎದುರಾಯಿತು. ಹೀಗಿದ್ದಾಗಲೇ ಸರ್ಕಾರ ಮಕ್ಕಳು ಕಡಿಮೆ ಇರುವ ಶಾಲೆಗಳನನು ಮುಚ್ಚುವ ನಿರ್ಧಾರ ಮಾಡಿತು. ಮುತ್ಮುರ್ಡು ಶಾಲೆಗೂ ಬಾಗಿಲು ಹಾಕುವ ಪ್ರಸಂಗ ಎದುರಾಯಿತು. ನಾವು ಶಾಲೆಗೆ ಹೋಗುವ ವೇಳೆಗೆ ಮುತ್ಮುರ್ಡು ಶಾಲೆಗೆ ಬೀಗ ಬಿದ್ದು ಒಂದು ದಶಕಗಳೇ ಕಳೆದಿತ್ತೇನೋ. ಹೀಗಾಗಿ ನಾನು ಬಿನ್ನೆತ್ತಿಯಿಂದ ಅಡ್ಕಳ್ಳಿ ಶಾಲೆಯನ್ನೇ ಆಶ್ರಯಿಸಬೇಕಾಯಿತು.
ಇಂತಹ ಶಾಲೆ ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಮತ್ತೊಮ್ಮೆ ತೆರೆಯುವ ಮುನ್ಸೂಚನೆ ಸಿಕ್ಕಿತು. ಮುತ್ಮುರ್ಡಿನ ಎಂ. ಎಸ್. ಹೆಗಡೆ ಅವರ ಪ್ರಯತ್ನದ ಫಲವಾಗಿ ಶಾಲೆ ಬಾಗಿಲು ತೆರೆಯಿತು. ಮೊದಲ ವರ್ಷ ಎಂ. ಎಸ್. ಹೆಗಡೆಯವರ ಮಗ ಓಂಕಾರ ಶಾಲೆಯ ಏಕೈಕ ಅಧಿಕರತ ವಿದ್ಯಾರ್ಥಿ. ತದನಂತರದಲ್ಲಿ ನನ್ನ ತಂಗಿ, ನನ್ನದೇ ಓರಗೆಯ ಪಕ್ಕದ ಮನೆಯ ಹುಡುಗಿ, ತಂಗಿಯ ಓರಗೆಯ ಇನ್ನೋರ್ವ ಹುಡುಗ ಹೀಗೆ ಹಲವರು ಶಾಲೆಗೆ ಏರಿದರು. ಶಾಲೆಗೆ ದಾಖಲಾದ ಮಕ್ಕಳ ಸಂಕ್ಯೆ ೧೦ನ್ನೂ ದಾಟಿತು. ಓರ್ವ ಶಿಕ್ಷಕಿ ಕೂಡ ಕಾನಸೂರಿನಿಂದ ಬಂದು ಹೋಗಲು ಆರಂಭಿಸಿದರು. ಈ ದಿನಗಳಲ್ಲಿ ನಾನೂ ಕೆಲವು ಕಾಲ ಮುತ್ಮುರ್ಡು ಶಾಲೆಗೆ ಹೋಗಲು ಆರಂಭಿಸಿದ್ದೆ. ಕೊನೆಗೆ ನನ್ನ ಅಡ್ಕಳ್ಳಿ ಶಾಲೆಯ ಹೆಡ್ಮಾಸ್ತರ್ ಆಗಿದ್ದ ರಮೇಶ್ ಗಡ್ಕರ್ ಅವರು ನನ್ನ ಅಪ್ಪನನ್ನು ಶಾಲೆಗೆ ಕರೆಸಿ, ವಿನಯನ್ನು ಮುತ್ಮುರ್ಡು ಶಾಲೆಗೆ ಸೇರಿಸುವುದಾದರೆ ಟಿಸಿ ಕೊಡುತ್ತೇನೆ ನೋಡಿ ಎಂದಿದ್ದೂ, ಅಪ್ಪ ಅದಕ್ಕೆ ಸುತಾರಾಂ ಒಪ್ಪದೇ, ನನ್ನನ್ನು ಮತ್ತೊಮ್ಮೆ ಅಡ್ಕಳ್ಳಿ ಶಾಲೆಗೆ ಹೋಗುವಂತೆ ಮಾಡಿದ್ದೂ ಆಯಿತು.
ಅದಾಗಿ ಹತ್ತಾರು ವರ್ಷಗಳ ಕಾಲ ಮುತ್ಮುರ್ಡು ಶಾಲೆ ಬಾಗಿಲು ತೆರೆದಿತ್ತು. ಸೀಮಾ ಮೇಡಂರಿಂದ ಆರಂಭಗೊಂಡು, ಪಿ. ಜಿ. ಹಾವಗೋಡಿ, ರಮೇಶ ನಾಯ್ಕ ಮುಂತಾದ ಮಾಸ್ತರರು ಶಿಕ್ಷಕರಾಗಿ ಬಂದಿದ್ದರು. ತದನಂತರದಲ್ಲಿ ನನ್ನ ಚಿಕ್ಕಪ್ಪನೇ ಶಾಲೆಗೆ ಮಾಸ್ತರರಾಗಿಯೂ ಬಂದಿದ್ದರು.
ಹೀಗಿದ್ದ ಸಂದರ್ಭದಲ್ಲೇ ಶಾಲೆಗೆ ಹೊಸ ಕಟ್ಟಡವೂ ಮಂಜೂರಾಯಿತು. ಸಿಮೆಂಟಿನ ಕಟ್ಟಡ, ಹಳೆಯ ಕಟ್ಟಡದ ಮುಂಭಾಗದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿತು. ಒಂದೇ ಕೊಠಡಿಯನ್ನು ಹೊಂದಿದ್ದ ಈ ಕಟ್ಟಡ ಸಾಕಷ್ಟು ಸುಭದ್ರವೂ, ವಿಶಾಲವೂ ಆಗಿತ್ತು. ಇಷ್ಟರ ಜತೆಗೆ ಶಾಲೆಗೊಂದು ಬೋರ್ವೆಲ್, ದೊಡ್ಡ ಮೈದಾನ ಎಲ್ಲವೂ ನಿರ್ಮಾಣವಾಯಿತು. ಅಷ್ಟಾದರೂ ಶಾಲೆಯ ವಿದ್ಯಾರ್ಥಿಗಳ ಸಂಕ್ಯೆ ೧೫ದನ್ನು ದಾಟಲಿಲ್ಲ. ಈ ನಡುವೆ ಶಾಲೆಯಲ್ಲಿ ಐದನೇ ತರಗತಿಯೂ ಆರಂಭವಾಯಿತು.
ಈ ನಡುವೆ ಶಾಲೆಯಲ್ಲಿ ಬೆಳ್ಳಿ ಹಬ್ಬ ಆಚರಸುವ ನಿರ್ಧಾರಕ್ಕೆ ಊರಿನ ಸಸಹೃದಯಿಗಳು ಬಂದರು. ಶಾಲೆ ಆರಂಭಗೊಂಡು ೫೦ ವರ್ಷದ ಮೇಲೆ ಅನೇಕ ವಸಂತಗಳು ಕಳೆದಿದ್ದರೂ, ಶಾಲೆಯಲ್ಲಿ ಸಂಭ್ರಮ ಸಡಗರ ಹೆಚ್ಚಿತು. ಬೆಳ್ಳಿ ಹಬ್ಬದ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಣೆಗೆ ಮುಂದಾಗಲಾಯಿತು. ವಿದ್ಯಾರ್ಥಿಗಳ ಜತೆಗೆ ಪಾಲಕರು ಹಾಗೂ ಪೋಷಕರಿಗೂ ವಿವಿಧ ಸ್ಪರ್ಧೆಗಳನ್ನು ಇರಿಸಲಾಗಿತ್ತು. ನಂತರ ಸ್ಥಳೀಯ ಶಾಸಕರೂ ಕಾರ್ಯಕ್ರಮಕ್ಕೆ ಆಗಮಿಸಿದರು. ಅಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನೂ ಹಲವು ಕಾರ್ಯಕ್ರಮ ನೀಡಿದೆ. ಹಾಸ್ಯ ಕಾರ್ಯಕ್ರಮ ಹಲವರನ್ನು ಸೆಳೆಯಿತು ಕೂಡ. ಇದೇ ವೇಳೆ ನಮ್ಮೂರಿನ ಸಾಧಕ ರಾಮಚಂದ್ರ ಹೆಗಡೆ ಹಾಗೂ ಮುತ್ಮೂರ್ಡಿನ ಸಾಧಕ ನಾಗೇಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರೋ ನಾಲ್ಕೋ ನಡೆದಿದ್ದ ನೆನಪು.
ವಿದ್ಯಾರ್ಥಿಗಳ ಸಂಕ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕು ಎಂದು ನಮ್ಮದೇ ರಾಜ್ಯ ಸರ್ಕಾರ ಆದೇಶ ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ಮುತ್ಮುರ್ಡು ಶಾಲೆಗೆ ಆತಂಕ ಎದುರಾಯಿತು. ಈ ಶಾಲೆಯನ್ನು ಹತ್ತಿರದ ಶಾಲೆಗಳ ಜತೆಗೆ ವಿಲೀನ ಮಾಡಬೇಕು ಎನ್ನುವುದು ಆಡಳಿತ ವರ್ಗದ ಆದೇಶವಾಯಿತು. ಮುತ್ಮುರ್ಡು ಶಾಲೆಯನ್ನು ಪಕ್ಕದ ಅಡ್ಕಳ್ಳಿ ಶಾಲೆಯ ಜತೆಗೆ ವಿಲೀನ ಮಾಡುವ ಸಂದರ್ಭದಲ್ಲಿ ಮತ್ಮುರ್ಡು ಶಾಲೆಗೆ ಒಂದು ಕೊಠಡಿ, ಒಂದು ಮಾಸ್ತರು, ನಾಲ್ಕು ಮಕ್ಕಳು, ಒಂದು ಅಡುಗೆಯವರಿದ್ದರು. ಇದರಲ್ಲಿ ಶಾಲಾ ಕೊಠಡಿ ಹೊರತುಪಡಿಸಿ ಉಳಿದದ್ದೆಲ್ಲ ಒಂದೇ ಮನೆಯದ್ದಾಗಿತ್ತು ಎನ್ನುವುದು ವಿಶಿಷ್ಟ ಸಂಗತಿ. ಅಷ್ಟೇ ಏಕೆ ಆ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದವರೂ ಕೂಡ ಅದೇ ಶಿಕ್ಷಕ, ವಿದ್ಯಾರ್ಥಿ ಕುಟುಂಬದವರೂ ಎಂಬುದು ವಿಚಿತ್ರ, ವಿಸ್ಮಯ ಸಂಗತಿಯಾಗಿತ್ತು.
ಅಂದಹಾಗೆ ಈಗ ಮುತ್ಮುರ್ಡು ಶಾಲೆ ಬಾಗಿಲು ಹಾಕಿದೆ. ದೈತ್ಯ ಎಕಾದಶಿ ಗುಡ್ಡದ ಬುಡದಲ್ಲಿ ಬಿಳಿಯ ಬಣ್ಣದ ಶಾಲೆ ಮಳೆ-ಗಾಳಿಯ ಅಬ್ಬರಕ್ಕೆ ಸಾಕ್ಷಿಯಾಗಿ ನಿಂತಿದೆ. ನನ್ನ ತಂಗಿಯ ಓರಗೆಯವರು ನೆಟ್ಟಿದ್ದ ತೆಂಗಿನ ಗಿಡಗಳು ನಿಧಾನವಾಗಿ ದೊಡ್ಡದಾಗುತ್ತಿವೆ. ಹೂವಿನ ಗಿಡಗಳು ಆಗಾಗ ಹೂವರಳಿಸಿಕೊಂಡು ನಗುತ್ತ ನಮ್ಮನ್ನು ಕರೆಯುತ್ತಿವೆ. ಹಳೆಯ ಕಟ್ಟಡ ಅವಸಾನ ತಲುಪಿ ತನ್ನ ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದರೆ, ಹೊಸ ಕಟ್ಟಡದ ಬಣ್ಣ ಮಾಸಿದೆ. ಊರಿನಲ್ಲಿ ವಿದ್ಯಾರ್ಥಿಗಳ ಸಂಕ್ಯೆ ಹೆಚ್ಚಾದರೆ ಮತ್ತೊಮ್ಮೆ ಶಾಲೆ ಬಾಗಿಲು ತೆರೆಯಬಹುದು.
ಹಲವು ನೆನಪುಗಳ ಗುಚ್ಛವನ್ನೇ ಒಳಗೊಂಡಿರುವ ಮುತ್ಮುರ್ಡು ಶಾಲೆ ನಮ್ಮ ನೆನಪುಗಳನ್ನು ಮತ್ತೊಮ್ಮೆ ಉದ್ದೀಪನ ಗೊಳಿಸುವ ಕಾರ್ಯ ಕೈಗೊಳ್ಳುತ್ತದೆ. ಬಾಲ್ಯದ ಕ್ರಿಯಾಶೂಲತೆಗೆ, ಜೀವಂತಿಕೆಗೆ, ಇಂದಿನ ಸೃಜನಶೀಲತೆಗೆ ಇಂತಹ ಶಾಲೆಗಳ ಪಾತ್ರ ಬಹಳ ಮಹತ್ವದ್ದು.