Sunday, September 30, 2018

ಪ್ರೀತಿಯ ಕರೆ

ನಿನ್ನ ಪ್ರೀತಿಯ ಕರೆಯು
ನನ್ನಿಲ್ಲೇ ನಿಲ್ಲಿಸಿತು
ಇಳಿಸಂಜೆ ಹೊಸ್ತಿಲಲಿ
ಹೋಗದಂತೆ |

ಮಧುರ ಗಾನದ ಉಲಿಯು
ಸುಮ್ಮನೇ ಕಾಡಿತು
ಕೈಹಿಡಿದು ನಿಲ್ಲಿಸಿತು
ಹೊರಳದಂತೆ |

ನಿನ್ನೊಲವ ಕಿರು ನಗೆಯು
ನನ್ನೆದೆಯ ಕುಣಿಯಿಸಿತು
ಎದೆ ಬಡಿತ ಮಿಡಿಯಿಸಿತು
ಮಿಂಚಿನಂತೆ |

Saturday, September 29, 2018

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ (ನಮ್ಮೂರ ಚಿತ್ರಗಳು-೨)

(Ekadashi Gudda)
ನಮ್ಮೂರು ದಂಟಕಲ್ ಹಾಗೂ ನಮ್ಮೂರ ಪಕ್ಕದಲ್ಲೇ ಇರುವ, ನಮ್ಮೂರಿನಂತದ್ದೇ ಊರು ಮುತ್ಮುರ್ಡು. ನಮ್ಮೂರಿನಲ್ಲಿ ಆರೇ ಆರು ಮನೆಗಳಿದ್ದರೆ, ಮುತ್ಮುರ್ಡಿನಲ್ಲಿ ಹತ್ತಕ್ಕೂ ಅಧಿಕ ಮನೆಗಳಿವೆ. ಈ ಕಾರಣದಿಂದ ನಮ್ಮೂರಿಗಿಂತ ಸ್ವಲ್ಪ ಹೆಚ್ಚಿನ ಪ್ರಾತಿನಿಧ್ಯ ಮುತ್ಮುರ್ಡಿಗೆ ಸಿಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ. ನಮ್ಮೂರಿಗೂ, ಮುತ್ಮುರ್ಡಿಗೂ ನಡುವೆ ಒಂದು ಶಾಲೆಯಿದೆ. ೧ನೇ ಕ್ಲಾಸಿನಿಂದ ಹಿಡಿದು ಐದನೇ ಕ್ಲಾಸಿನ ವರೆಗೆ ಓದಲು ಅವಕಾಶ ವಿರುವ ಕಿರಿಯ ಪ್ರಾಥಮಿಕ ಶಾಲೆ ಇದು.ಹತ್ತು ಹಲವು ಕಾರಣಗಳಿಂದ ಇದು ವಿಶಿಷ್ಟವಾದುದು.
ಮಹಾತ್ಮಾ ಗಾಂಧೀಜಿ ಜನ್ಮದಿನದ ೧೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶದಲ್ಲಿ ಹಾಗೂ ರಾಜ್ಯಾದ್ಯಂತ ಹಲವಾರು ಶಾಲೆಗಳನ್ನು ನಿರ್ಮಿಸಲಾಯಿತಂತೆ. ಹೀಗೆ ನಿರ್ಮಾಣಗೊಂಡ ಶಾಲೆಗಳಲ್ಲೊಂದು, ನಮ್ಮೂರಿನದ್ದು. ಹೀಗಾಗೇ ಗಾಂಧಿ ಶತಾಬ್ದಿ ಶಾಲೆ ಎಂದೂ ನಮ್ಮೂರಿನ ಶಾಲೆಯನ್ನು ಹಿರಿಯರು ಕರೆಯುತ್ತಿದ್ದುದು ನನಗಿನ್ನೂ ನೆನಪಿದೆ. ಎರಡೂ ಊರುಗಳ ನಡುವೆ ಶಾಲೆ ಇದ್ದರೂ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುತ್ಮುರ್ಡು-ದಂಟಕಲ್ ಎಂಬ ಉದ್ದನೆಯ ಹೆಸರಿದ್ದರೂ, ಆಡು ಮಾತಿನಲ್ಲಿ ಅದು ಮುತ್ಮುರ್ಡು ಶಾಲೆ ಎಂದೇ ಕರೆಸಿಕೊಳ್ಳುತ್ತಿತ್ತು.
ಇಂತಹ ಶಾಲೆಗೆ ಮೊದಲು ಕಲಿಸಲು ಬಂದವರು ಮಾದೇವ ಮಾಸ್ತರರು ಎನ್ನುವುದು ನನ್ನ ಅಜ್ಜನ ಬಾಯಿಂದ ಆಗಾಗ ಕೇಳಿ ಬರುತ್ತಿದ್ದ ಮಾತು. ಶಾಲೆಯನ್ನು ತೆರೆದವರೂ ಅವರೇ ಎಂದೂ ಎಲ್ಲೋ ಕೇಳಿದ್ದೆ ಬಿಡಿ. ಮಾದೇವ ಮಾಸ್ತರರು ಪೋಸ್ಟ್ ಮಾಸ್ತರರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರಂತೆ. ಊರಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೂ ಕಾರಣರಾದವರಂತೇ ಎಂಬೆಲ್ಲ ಮಾತುಗಳನ್ನೂ ಕೇಳಿದ್ದೇನೆ.
ಮುತ್ಮೂರ್ಡಿನ ಸುಬ್ಬಜ್ಜ (ಸುಬ್ರಾಯ ಹೆಗಡೆ) ಈ ಶಾಲೆಯ ಆರಂಭಕ್ಕೆ ಕಾರಣರಾದವರು ಎನ್ನುವ ಮಾತುಗಳೂ ಇದೆ. ಗೋಕರ್ಣದ ಕೋಟಿ ತೀರ್ಥ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದ ಸುಬ್ಬಜ್ಜ ಈ ಶಾಲೆಯನ್ನು ನಿರ್ಮಾಣ ಮಾಡಿ, ಅಲ್ಲಿಗೆ ಶಿಕ್ಷಕರು ಬರುವಂತೆ ಮಾಡಿದರು ಎನ್ನುವ ಮಾತುಗಳು ಅವರಿವರ ಬಾಯಲ್ಲಿ ಕೇಳಿ ಬಂದಿದೆ. ಒಟ್ಟಿನಲ್ಲಿ ಶಾಲೆ ನಿರ್ಮಾಣ ಮಾಡಿದ್ಯಾರು ಎನ್ನುವುದು ಗೊಂದಲಕ್ಕೆ ಕಾರಣವಾದರೂ ಶಾಲೆಯಿಂದ ನೂರಾರು ಜನರಿಗೆ ವಿದ್ಯಾದಾನವಾಗಿದೆ ಎನ್ನುವುದು ಸುಳ್ಳಲ್ಲ.
ನನ್ನ ಅಪ್ಪನ ಬಳಿ ಕೇಳಿದ್ದ ಸಂದರ್ಭದಲ್ಲಿ, ತಾನು ಈ ಶಾಲೆಯಲ್ಲಿ ಓದಿಲ್ಲ ಎಂದೂ, ಕೋಡ್ಸರದ ಬಳಿಯ ಬಿಡಕಿ ಶಾಳೆಯಲ್ಲಿ ಓದಿದ್ದೆಂದೂ ಹೇಳಿದ್ದ. ನನ್ನ ಅಪ್ಪನ ವಾರಗೆಯವರ್ಯಾರೂ ಕೂಡ ಈ ಶಾಲೆಯಲ್ಲಿ ಓದಿಲ್ಲ. ಅಂದರೆ ನನ್ನ ಅಪ್ಪನ ನಂತರದ ೧೦-೧೨ ವರ್ಷಗಳ ತರುವಾಯ ಈ ಶಾಲೆ ಆರಂಭಗೊಂಡಿದೆ. ಸುತ್ತಮುತ್ತ ಯಾವುದೇ ಶಾಲೆ ಇಲ್ಲದ ಸಂದರ್ಭದಲ್ಲಿ ಆರಂಭಗೊಂಡ ಶಾಲೆ ಪ್ರಮುಖವಾಗಿ ದಂಟಕಲ್ ಹಾಗೂ ಮುತ್ಮೂರ್ಡು ಗ್ರಾಮಗಳ ಮಕ್ಕಳ ವಿದ್ಯಾದಾನಕ್ಕೆ ಕಾರಣವಾಗಿದೆ.
ಅಜ್ಜ, ಹಾಗೂ ಅಪ್ಪನ ನೆನಪಿನ ಅಂಗಣದಿಂದ ತಿಳಿದು ಬಂದ ವಿಷಯವೇನೆಂದರೆ, ಆ ದಿನಗಳಲ್ಲಿ ಅಡಕಳ್ಳಿಯಲ್ಲಿ (೧೯೬೨ರಲ್ಲಿ ಆರಂಭ) ಶಾಲೆ ಆರಂಭಗೊಂಡಿದ್ದರೂ, ಮುತ್ಮುರ್ಡು ಹಾಗೂ ದಂಟಕಲ್ ಗ್ರಾಮಗಳ ಮಕ್ಕಳು ದಟ್ಟ, ಗವ್ವೆನ್ನುವ ಕಾಡು, ಗುಡ್ಡ, ತುಂಬಿ ಹರಿಯುವ ಹಳ್ಳಗಳನ್ನು ದಾಟಿ ಅಡಕಳ್ಳಿಗೆ ಹೋಗುವುದು ತ್ರಸದಾಯಕವಾಗಿತ್ತು. ದೊಡ್ಡದೊಂದು ತಾಯಿ ಬೇರಿಗೆ ಮರಿ ಟಿಸಿಲುಗಳಿರುವಂತೆ ಮುತ್ಮುರ್ಡಿನಂತಹ ಶಾಲೆಗಳು ತರುವಾಯ ಆರಂಭವಾದವು. ಮೊದ ಮೊದಲಿಗೆ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ತರಗತಿಗಳು ನಡೆಯುತ್ತಿದ್ದವು. ಅಂಗನವಾಡಿ, ಬಿನ್ನೆತ್ತಿ, ಒಂದು, ಎರಡು, ಮೂರು, ನಾಲ್ಕು ಕ್ಲಾಸುಗಳ ವರೆಗೆ ಓದಿದ ತರುವಾಯ ಅಡ್ಕಳ್ಳಿ ಶಾಲೆಯತ್ತ ಮುಖ ಮಾಡಬೇಕಿತ್ತು. ಹೀಗಾಗಿ ಹಲವರಿಗೆ ಈ ಶಾಲೆ ಅನುಕೂಲವಾಯಿತು.
ಮುತ್ಮುರ್ಡ್ ಶಾಲೆಯ ಮಾಸ್ತರ್ರು ರೋಲು ದೊಣ್ಣೆಯಲ್ಲಿ ಹೊಡೆಯುತ್ತಿದ್ದರಂತೆ. ಹುಡುಗರು ಕೈನ್ನು ಟೇಬಲ್ ಮೇಲೆ ಇರಿಸುವಂತೆ ಹೇಳಿ, ರೋಲು ದೊಣ್ಣೆಯ ಮೂಲಕ ಕುಟ್ಟಾಣಿಯಲ್ಲಿ ಕವಳ ಕುಟ್ಟುವಂತೆ ಕುಟ್ಟುತ್ತಿದ್ದಂತೆ, ಒಂದರಿಂದ ೨೦ರವರೆಗೆ ಮಗ್ಗಿ ಹೇಳುವುದರ ಜತೆಗೆ ಉಲ್ಟಾ ಪಲ್ಟಾ ಹೇಳುವಂತೆ ಕಾಟ ಕೊಡುತ್ತಿದ್ದರಂತೆ, ಹೇಳದಿದ್ದರೆ ಕಾಲಿನ ಮೊಣಕಾಲಿನ ಕೆಳಗೆ ಮೂಳೆಯ ಮೇಲೆ ಟಣಾರನೆ ಭಾರಿಸುತ್ತಿದ್ದರಂತೆ, ಅಷ್ಟಲ್ಲದೇ ಒಂದ್ ಮುಕ್ಕಾಲ್ ಮುಕ್ಕಾಲು ಎಂದು ಮಗ್ಗಿಯನ್ನು ಮುಕ್ಕಾಲರ ರೀತಿಯಲ್ಲಿ, ಅರ್ಧದ ರೀತಿಯಲ್ಲೆಲ್ಲ ಹೇಳಿಸುತ್ತಿದ್ದರಂತೆ ಎಂಬ ಅಂತೆ ಕಂತೆಗಳೆಲ್ಲ ನಾವು ಸಣ್ಣವರಿದ್ದಾಗ ಕಿವಿಗೆ ಬಿದ್ದು, ಮುತ್ಮುರ್ಡ್ ಶಾಲೆಯ ಮಾಸ್ತರರ ಬಗ್ಗೆ ಭಯ ಹುಟ್ಟಿಸಿದ್ದವು.
ಇದೆಲ್ಲ ತಮಾಷೆಯಿರಬೇಕು ಬಿಡು, ಸುಮ್ಮನೇ ನಮ್ಮನ್ನು ಹೆದರಿಸಲು ಮಾಡುತ್ತಿರುವ ನಾಟಕ ಎಂದು ನಮ್ಮದೇ ವಾರಗೆಯ ಹುಡುಗನೊಬ್ಬ ಹೇಳಿದ್ದ. ನಾವು ಅದನ್ನು ನಂಬಿಕೊಂಡಿದ್ದೆವು. ಆದರೆ ನಮ್ಮೂರಿನ ಹಿರಿಯಜ್ಜನೊಬ್ಬ ಕಾಲು, ಮುಕ್ಕಾಲರ, ಅರ್ಧದ ಮಗ್ಗಿಗಳನ್ನು ಸರಾಗವಾಗಿ ಹೇಳಿದ್ದು ಕೇಳಿದ್ದಾಗಲೆಲ್ಲ ಮುತ್ಮುರ್ಡು ಶಾಲೆಯ ಕುರಿತಾದದ್ದೆಲ್ಲ ಸುಳ್ಳಲ್ಲ, ಅಂತೆ, ಕಂತೆಯಲ್ಲ ಎನ್ನಿಸಿದ್ದವು.
ನನ್ನ ಅರಿವಿಗೆ ಬರುವ ಸಂದರ್ಭದಲ್ಲಿ ಈ ಶಾಲೆ ಎನ್ನುವುದು ಹಾಳು ಬಿದ್ದಿತ್ತು. ನಮ್ಮೂರ ಬೆನ್ನಿಗೆ ಉದ್ದಕ್ಕೆ ನಿಂತಿರುವ ಏಕಾದಶಿ ಗುಡ್ಡದ ಬುಡದಲ್ಲಿ ಒಂದೇ ಒಂದು ಕೊಠಡಿ, ಮುರಿದು ಹೋಗಿದ್ದ ಒಂದು ಭಾಗಿಲು, ಅಲ್ಲಲ್ಲಿ ಕಿತ್ತು ಹೋದ ಹಾಗೂ ಯಾರೋ ಕದ್ದುಕೊಂಡು ಹೋದ ಹಂಚುಗಳನ್ನೊಳಗೊಂಡ ಒಂದು ಮಾಡು. ಅರ್ಧ ಬಿದ್ದಿದ್ದ ಗೋಡೆ, ಬೀಗವೇ ಇರದಿದ್ದ ಬಾಗಿಲು. ಒರಲೆಯ ಮನೆ. ಆಗೀಗ ಬಿಕ್ಕೆ ಹಣ್ಣಿಗೋ, ಕವಳಿ ಹಣ್ಣಿಗೋ, ಪರಗೆ ಹಣ್ಣಿಗೋ ಅಥವಾ ಚೌತಿಯ ಸಂದರ್ಭದಲ್ಲಿ ಗೌರಿ ಹೂ ಮುಂತಾದ ಫಲವಳಿಗೆ ಸಾಮಾನು ಸಂಗ್ರಹಿಸಲು ಏಕಾದಶಿ ಗುಡ್ಡ ಹತ್ತಿದ ಸಂದರ್ಭದಲ್ಲಿ ಮುತ್ಮುರ್ಡು ಶಾಲೆಯ ಹಳೆಯ, ಶಿಥಿಲ ಕಟ್ಟಡ ನಮ್ಮ ಕಣ್ಣಿಗೆ ಬೀಳುತ್ತಿತ್ತಲ್ಲದೇ, ನಮ್ಮೊಳಗೆ ನಮಗೇ ಗೊತ್ತಿಲ್ಲದಂತೆ ಭಯವನ್ನು ಹುಟ್ಟು ಹಾಕುತ್ತಿತ್ತು.
ಹಿಂದೆಲ್ಲ ನಮ್ಮೂರಿನಲ್ಲಿ ಒಂದೊಂದು ಮನೆಗಳಲ್ಲಿ ಹತ್ತಾರು ಜನ ಮಕ್ಕಳಿದ್ದು, ಅವರೆಲ್ಲ ಮುತ್ಮುರ್ಡು ಶಾಲೆಗೆ ಓದಲು ಹೋಗುತ್ತಿದ್ದರಂತೆ. ಕ್ರಮೇಣ ಕೇಂದ್ರ ಸರ್ಕಾರದ ಕುಟುಂಬ ಯೋಜನೆಯಂತಹ ಜನಸಂಖ್ಯಾ ನಿಯಂತ್ರಣದ ಯೋಜನೆಗಳು ಮನೆ ಮನೆಗಳನ್ನು ಹೊಕ್ಕ ಮೇಲೆ ನಮ್ಮೂರಲ್ಲಿ ಹಾಗೂ ಮುತ್ಮುರ್ಡುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಕ್ರಮೇಣ ಮುತ್ಮುರ್ಡು ಶಾಲೆಗೂ ವಿದ್ಯಾರ್ಥಿಗಳ ಬರ ಎದುರಾಯಿತು. ಹೀಗಿದ್ದಾಗಲೇ ಸರ್ಕಾರ ಮಕ್ಕಳು ಕಡಿಮೆ ಇರುವ ಶಾಲೆಗಳನನು ಮುಚ್ಚುವ ನಿರ್ಧಾರ ಮಾಡಿತು. ಮುತ್ಮುರ್ಡು ಶಾಲೆಗೂ ಬಾಗಿಲು ಹಾಕುವ ಪ್ರಸಂಗ ಎದುರಾಯಿತು. ನಾವು ಶಾಲೆಗೆ ಹೋಗುವ ವೇಳೆಗೆ ಮುತ್ಮುರ್ಡು ಶಾಲೆಗೆ ಬೀಗ ಬಿದ್ದು ಒಂದು ದಶಕಗಳೇ ಕಳೆದಿತ್ತೇನೋ. ಹೀಗಾಗಿ ನಾನು ಬಿನ್ನೆತ್ತಿಯಿಂದ ಅಡ್ಕಳ್ಳಿ ಶಾಲೆಯನ್ನೇ ಆಶ್ರಯಿಸಬೇಕಾಯಿತು.
ಇಂತಹ ಶಾಲೆ ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಮತ್ತೊಮ್ಮೆ ತೆರೆಯುವ ಮುನ್ಸೂಚನೆ ಸಿಕ್ಕಿತು. ಮುತ್ಮುರ್ಡಿನ ಎಂ. ಎಸ್. ಹೆಗಡೆ ಅವರ ಪ್ರಯತ್ನದ ಫಲವಾಗಿ ಶಾಲೆ ಬಾಗಿಲು ತೆರೆಯಿತು. ಮೊದಲ ವರ್ಷ ಎಂ. ಎಸ್. ಹೆಗಡೆಯವರ ಮಗ ಓಂಕಾರ ಶಾಲೆಯ ಏಕೈಕ ಅಧಿಕರತ ವಿದ್ಯಾರ್ಥಿ. ತದನಂತರದಲ್ಲಿ ನನ್ನ ತಂಗಿ, ನನ್ನದೇ ಓರಗೆಯ ಪಕ್ಕದ ಮನೆಯ ಹುಡುಗಿ, ತಂಗಿಯ ಓರಗೆಯ ಇನ್ನೋರ್ವ ಹುಡುಗ ಹೀಗೆ ಹಲವರು ಶಾಲೆಗೆ ಏರಿದರು. ಶಾಲೆಗೆ ದಾಖಲಾದ ಮಕ್ಕಳ ಸಂಕ್ಯೆ ೧೦ನ್ನೂ ದಾಟಿತು. ಓರ್ವ ಶಿಕ್ಷಕಿ ಕೂಡ ಕಾನಸೂರಿನಿಂದ ಬಂದು ಹೋಗಲು ಆರಂಭಿಸಿದರು. ಈ ದಿನಗಳಲ್ಲಿ ನಾನೂ ಕೆಲವು ಕಾಲ ಮುತ್ಮುರ್ಡು ಶಾಲೆಗೆ ಹೋಗಲು ಆರಂಭಿಸಿದ್ದೆ. ಕೊನೆಗೆ ನನ್ನ ಅಡ್ಕಳ್ಳಿ ಶಾಲೆಯ ಹೆಡ್ಮಾಸ್ತರ್ ಆಗಿದ್ದ ರಮೇಶ್ ಗಡ್ಕರ್ ಅವರು ನನ್ನ ಅಪ್ಪನನ್ನು ಶಾಲೆಗೆ ಕರೆಸಿ, ವಿನಯನ್ನು ಮುತ್ಮುರ್ಡು ಶಾಲೆಗೆ ಸೇರಿಸುವುದಾದರೆ ಟಿಸಿ ಕೊಡುತ್ತೇನೆ ನೋಡಿ ಎಂದಿದ್ದೂ, ಅಪ್ಪ ಅದಕ್ಕೆ ಸುತಾರಾಂ ಒಪ್ಪದೇ, ನನ್ನನ್ನು ಮತ್ತೊಮ್ಮೆ ಅಡ್ಕಳ್ಳಿ ಶಾಲೆಗೆ ಹೋಗುವಂತೆ ಮಾಡಿದ್ದೂ ಆಯಿತು.
ಅದಾಗಿ ಹತ್ತಾರು ವರ್ಷಗಳ ಕಾಲ ಮುತ್ಮುರ್ಡು ಶಾಲೆ ಬಾಗಿಲು ತೆರೆದಿತ್ತು. ಸೀಮಾ ಮೇಡಂರಿಂದ ಆರಂಭಗೊಂಡು, ಪಿ. ಜಿ. ಹಾವಗೋಡಿ, ರಮೇಶ ನಾಯ್ಕ ಮುಂತಾದ ಮಾಸ್ತರರು ಶಿಕ್ಷಕರಾಗಿ ಬಂದಿದ್ದರು. ತದನಂತರದಲ್ಲಿ ನನ್ನ ಚಿಕ್ಕಪ್ಪನೇ ಶಾಲೆಗೆ ಮಾಸ್ತರರಾಗಿಯೂ ಬಂದಿದ್ದರು.
ಹೀಗಿದ್ದ ಸಂದರ್ಭದಲ್ಲೇ ಶಾಲೆಗೆ ಹೊಸ ಕಟ್ಟಡವೂ ಮಂಜೂರಾಯಿತು. ಸಿಮೆಂಟಿನ ಕಟ್ಟಡ, ಹಳೆಯ ಕಟ್ಟಡದ ಮುಂಭಾಗದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿತು. ಒಂದೇ ಕೊಠಡಿಯನ್ನು ಹೊಂದಿದ್ದ ಈ ಕಟ್ಟಡ ಸಾಕಷ್ಟು ಸುಭದ್ರವೂ, ವಿಶಾಲವೂ ಆಗಿತ್ತು. ಇಷ್ಟರ ಜತೆಗೆ ಶಾಲೆಗೊಂದು ಬೋರ್ವೆಲ್, ದೊಡ್ಡ ಮೈದಾನ ಎಲ್ಲವೂ ನಿರ್ಮಾಣವಾಯಿತು. ಅಷ್ಟಾದರೂ ಶಾಲೆಯ ವಿದ್ಯಾರ್ಥಿಗಳ ಸಂಕ್ಯೆ ೧೫ದನ್ನು ದಾಟಲಿಲ್ಲ. ಈ ನಡುವೆ ಶಾಲೆಯಲ್ಲಿ ಐದನೇ ತರಗತಿಯೂ ಆರಂಭವಾಯಿತು.
ಈ ನಡುವೆ ಶಾಲೆಯಲ್ಲಿ ಬೆಳ್ಳಿ ಹಬ್ಬ ಆಚರಸುವ ನಿರ್ಧಾರಕ್ಕೆ ಊರಿನ ಸಸಹೃದಯಿಗಳು ಬಂದರು. ಶಾಲೆ ಆರಂಭಗೊಂಡು ೫೦ ವರ್ಷದ ಮೇಲೆ ಅನೇಕ ವಸಂತಗಳು ಕಳೆದಿದ್ದರೂ, ಶಾಲೆಯಲ್ಲಿ ಸಂಭ್ರಮ ಸಡಗರ ಹೆಚ್ಚಿತು. ಬೆಳ್ಳಿ ಹಬ್ಬದ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಣೆಗೆ ಮುಂದಾಗಲಾಯಿತು. ವಿದ್ಯಾರ್ಥಿಗಳ ಜತೆಗೆ ಪಾಲಕರು ಹಾಗೂ ಪೋಷಕರಿಗೂ ವಿವಿಧ ಸ್ಪರ್ಧೆಗಳನ್ನು ಇರಿಸಲಾಗಿತ್ತು. ನಂತರ ಸ್ಥಳೀಯ ಶಾಸಕರೂ ಕಾರ್ಯಕ್ರಮಕ್ಕೆ ಆಗಮಿಸಿದರು. ಅಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನೂ ಹಲವು ಕಾರ್ಯಕ್ರಮ ನೀಡಿದೆ. ಹಾಸ್ಯ ಕಾರ್ಯಕ್ರಮ ಹಲವರನ್ನು ಸೆಳೆಯಿತು ಕೂಡ. ಇದೇ ವೇಳೆ ನಮ್ಮೂರಿನ ಸಾಧಕ ರಾಮಚಂದ್ರ ಹೆಗಡೆ ಹಾಗೂ ಮುತ್ಮೂರ್ಡಿನ ಸಾಧಕ ನಾಗೇಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರೋ ನಾಲ್ಕೋ ನಡೆದಿದ್ದ ನೆನಪು.
ವಿದ್ಯಾರ್ಥಿಗಳ ಸಂಕ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕು ಎಂದು ನಮ್ಮದೇ ರಾಜ್ಯ ಸರ್ಕಾರ ಆದೇಶ ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ಮುತ್ಮುರ್ಡು ಶಾಲೆಗೆ ಆತಂಕ ಎದುರಾಯಿತು. ಈ ಶಾಲೆಯನ್ನು ಹತ್ತಿರದ ಶಾಲೆಗಳ ಜತೆಗೆ ವಿಲೀನ ಮಾಡಬೇಕು ಎನ್ನುವುದು ಆಡಳಿತ ವರ್ಗದ ಆದೇಶವಾಯಿತು. ಮುತ್ಮುರ್ಡು ಶಾಲೆಯನ್ನು ಪಕ್ಕದ ಅಡ್ಕಳ್ಳಿ ಶಾಲೆಯ ಜತೆಗೆ ವಿಲೀನ ಮಾಡುವ ಸಂದರ್ಭದಲ್ಲಿ ಮತ್ಮುರ್ಡು ಶಾಲೆಗೆ ಒಂದು ಕೊಠಡಿ, ಒಂದು ಮಾಸ್ತರು, ನಾಲ್ಕು ಮಕ್ಕಳು, ಒಂದು ಅಡುಗೆಯವರಿದ್ದರು. ಇದರಲ್ಲಿ ಶಾಲಾ ಕೊಠಡಿ ಹೊರತುಪಡಿಸಿ ಉಳಿದದ್ದೆಲ್ಲ ಒಂದೇ ಮನೆಯದ್ದಾಗಿತ್ತು ಎನ್ನುವುದು ವಿಶಿಷ್ಟ ಸಂಗತಿ. ಅಷ್ಟೇ ಏಕೆ ಆ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದವರೂ ಕೂಡ ಅದೇ ಶಿಕ್ಷಕ, ವಿದ್ಯಾರ್ಥಿ ಕುಟುಂಬದವರೂ ಎಂಬುದು ವಿಚಿತ್ರ, ವಿಸ್ಮಯ ಸಂಗತಿಯಾಗಿತ್ತು.
ಅಂದಹಾಗೆ ಈಗ ಮುತ್ಮುರ್ಡು ಶಾಲೆ ಬಾಗಿಲು ಹಾಕಿದೆ. ದೈತ್ಯ ಎಕಾದಶಿ ಗುಡ್ಡದ ಬುಡದಲ್ಲಿ ಬಿಳಿಯ ಬಣ್ಣದ ಶಾಲೆ ಮಳೆ-ಗಾಳಿಯ ಅಬ್ಬರಕ್ಕೆ ಸಾಕ್ಷಿಯಾಗಿ ನಿಂತಿದೆ. ನನ್ನ ತಂಗಿಯ ಓರಗೆಯವರು ನೆಟ್ಟಿದ್ದ ತೆಂಗಿನ ಗಿಡಗಳು ನಿಧಾನವಾಗಿ ದೊಡ್ಡದಾಗುತ್ತಿವೆ. ಹೂವಿನ ಗಿಡಗಳು ಆಗಾಗ ಹೂವರಳಿಸಿಕೊಂಡು ನಗುತ್ತ ನಮ್ಮನ್ನು ಕರೆಯುತ್ತಿವೆ. ಹಳೆಯ ಕಟ್ಟಡ ಅವಸಾನ ತಲುಪಿ ತನ್ನ ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದರೆ, ಹೊಸ ಕಟ್ಟಡದ ಬಣ್ಣ ಮಾಸಿದೆ. ಊರಿನಲ್ಲಿ ವಿದ್ಯಾರ್ಥಿಗಳ ಸಂಕ್ಯೆ ಹೆಚ್ಚಾದರೆ ಮತ್ತೊಮ್ಮೆ ಶಾಲೆ ಬಾಗಿಲು ತೆರೆಯಬಹುದು.
ಹಲವು ನೆನಪುಗಳ ಗುಚ್ಛವನ್ನೇ ಒಳಗೊಂಡಿರುವ ಮುತ್ಮುರ್ಡು ಶಾಲೆ ನಮ್ಮ ನೆನಪುಗಳನ್ನು ಮತ್ತೊಮ್ಮೆ ಉದ್ದೀಪನ ಗೊಳಿಸುವ ಕಾರ್ಯ ಕೈಗೊಳ್ಳುತ್ತದೆ. ಬಾಲ್ಯದ ಕ್ರಿಯಾಶೂಲತೆಗೆ, ಜೀವಂತಿಕೆಗೆ, ಇಂದಿನ ಸೃಜನಶೀಲತೆಗೆ ಇಂತಹ ಶಾಲೆಗಳ ಪಾತ್ರ ಬಹಳ ಮಹತ್ವದ್ದು.

Tuesday, September 25, 2018

ಪ್ರೀತಿಯ ಎರಡು ಕಿರುಗತೆಗಳು

ಪ್ಯಾಂಟು-ಪ್ರೀತಿ

`ಪ್ರೀತಿ ಅಂದರೆ ಜೀನ್ಸ್ ಪ್ಯಾಂಟಿನ ಥರಾ ಕಣೋ..' ಅವಳಂದಳು
`ಯಾಕೆ..ಹಾಗೆ..?' ನಾನು ಕೇಳಿದೆ..
`ಜೀನ್ಸ್ ಪ್ಯಾಂಟ್ ನೋಡು ಎಷ್ಟು ರಫ್ & ಟಫ್. ಅಂತ.. ಎಷ್ಟೇ ಸಾರಿ ಹಾಕಿದ್ರೂ ಹಾಳಾಗೋಲ್ಲ. ಕೊಳಕಾದ್ರೂ ತೊಂದ್ರೆ ಇಲ್ಲ.. ಮತ್ತೆ ಮತ್ತೆ ಹಾಕ್ಕೋಬಹುದು.. ಒಂಥರಾ ಖುಷಿ ಕೊಡುತ್ತೆ... ಪ್ರೀತಿ ಕೂಡ ಹಾಗೇ ಅಲ್ವಾ..' ಅವಳೆಂದಳು..
`ಆದ್ರೆ ಜೀನ್ಸು ಹರಿಯಬಾರದ ಜಾಗದಲ್ಲೇ ಹರಿಯುತ್ತಲ್ಲೇ...ಅದಕ್ಕೆ ಹೊಲಿಗೆ ಕೂಡ ಬಹಳ ಕಷ್ಟ ಮಾರಾಯ್ತಿ..' ಎಂದೆ..
`ತೂ.. ಹೋಗೋ' ಎಂದಳು..
`ಪ್ರೀತಿ ಅಂದರೆ ಫಾರ್ಮಲ್ಸ್ ಪ್ಯಾಂಟ್ ಥರಾ ಕಣೆ...' ಅಂದೆ.
`ಓಹೋ...' ಅಂದವಳು `ಹೇಗೆ..?' ಅಂದಳು..
`ಆ ಪ್ಯಾಂಟುಗಳು ಎಷ್ಟು ಡೀಸೆಂಟ್ ಅಲ್ವಾ..? ನೋಡಿದ ತಕ್ಷಣ ಏನೋ ಗೌರವ ಮೂಡುತ್ತದೆ. ಮತ್ತೆ ಮತ್ತೆ ಫಾರ್ಮಲ್ಸ್ ಹಾಕಬೇಕು ಎನ್ನಿಸುತ್ತದೆ...' ಎಂದೆ.
`ಆದರೆ..' ಎಂದ ಅವಳು `ನನ್ನಂತಹ ಮಾಸ್ ನವರಿಗೆ ಫಾರ್ಮಲ್ಸ್ ಇಷ್ಟ ಆಗೋದಿಲ್ಲ ಕಣೋ..' ಎಂದಳವಳು..
ನಾನು ಆಲೋಚಿಸಿದೆ.. ಕೊನೆಗೆ ಹೇಳಿದೆ.
`ಬಿಡು.. ಪ್ರೀತಿ ಜೀನ್ಸ್ ಬೇಕಾದರೂ ಆಗಿರಲಿ.. ಫಾರ್ಮಲ್ಸ್ ಬೇಕಾದರೂ ಆಗಿರಲಿ. ಆಯ್ಕೆ ನಮ್ಮದೇ ಅಲ್ಲವಾ..? ಎರಡನ್ನೂ ಪ್ರಯತ್ನಿಸಿದರಾಯಿತು..' ಎಂದೆ.. ಕಣ್ಣುಮಿಟುಕಿಸಿದೆ..
ಒಮ್ಮೆ ಕೈಯನ್ನು ಚಿವುಟಿದಳು..
ಹಾಯ್ ಎಂದೆ.. ನಕ್ಕಳು..

-----------------

ಚಂದಮಾಮ

ನಾನು ನಿಂಗೋಸ್ಕರ ಬಾನಿನ ಚಂದಮಾಮನನ್ನೇ ಕೈಯಲ್ಲಿ ಹಿಡಿದು ತಂದುಕೊಡುತ್ತೇನೆ...' ಅದೊಂದು ಸಿನಿಮಾದಲ್ಲಿ ಹೀರೋ ಹೇಳುತ್ತಿದ್ದಂತೆ ಅವಳು ಕೇಳಿದಳು `ನೀನೂ ನಂಗೋಸ್ಕರ ಚಂದಮಾಮನನ್ನು ತರುತ್ತೀಯಾ..?'
ನಾನೆಂದೆ `ಊಹೂಂ..' ಅವಳ ಕಣ್ಣಲ್ಲಿ ಹನಿಗೂಡಿತ್ತು... ಅದು ಭೂಮಿಗಿಳಿಯುವ ಮೊದಲೇ ಹೇಳಿದ್ದೆ..
`ಚಂದಮಾಮನನ್ನು ತರುವುದು ಅಸಾಧ್ಯ ಎನ್ನೋದು ನಿಂಗೂ ಗೊತ್ತು ನಂಗೂ ಗೊತ್ತು... ಅದರ ಬದಲು ಒಂದು ಕೆಲಸ ಮಾಡೋಣ.. ನಾನು-ನೀನು ಇಬ್ಬರೂ ಸೇರಿ ಚಂದಮಾಮನ ನಾಡಿಗೊಂದು ಯಾನ ಮಾಡೋಣ... ಅಲ್ಲಿ ನಾನು ನೀನು ಇಬ್ಬರೇ ಇದ್ದುಬಿಡೋಣ...' ಎಂದೆ.
ಕಣ್ಣೀರು ಇಂಗಿ ಆನಂದಭಾಷ್ಪ ಸುರಿದಿತ್ತು. ಬೆಚ್ಚಗೆ ಅವಳು ತಬ್ಬಿಕೊಂಡಿದ್ದಳು..

ಭಾವಗಳು


ಹಳೆಯ ಡೈರಿಗೆ ಒರಲೆ ಹಿಡಿದಿದೆ
ನೆನಪು ಮಾಸಿದೆ ಮನದಲಿ|...
ಬದುಕು ಹಳಸಿದೆ ನಗುವ ಮರೆತಿದೆ
ನಲಿವು ಅಡಗಿದೆ ಎದೆಯಲಿ||

ನೂರು ಕಾಲದ ಕನಸು ಕರಗಿದೆ
ತುಕ್ಕು ಹಿಡಿದಿದೆ ಭಾವಕೆ|
ನಿಶೆಯ ಕೂಗಿಗೆ ಉಸಿರು ನಡುಗಿದೆ
ಭಯವು ಹೆಚ್ಚಿದೆ ತನುವಲಿ||

ಹಳೆಯ ಜಾಗದಿ ಹೊಸತು ಮುಡಿದೆ
ಕವಿತೆ ಹುಟ್ಟಿದೆ ಚಿತ್ತದಿ|
ಮನದಿ ಹೀಗೆಯೆ ಮಧುರ ಭಾವವು
ಚಣದಿ ಮೂಡಿದೆ ಅರಿಯದೆ||

Thursday, September 20, 2018

ಬಂಡೂಲ (ನಾನು ಓದಿದ ಪುಸ್ತಕಗಳು-೪)


ನಾನು ಇಷ್ಟಪಟ್ಟು ಕೈಗೆತ್ತಿಕೊಂಡ ಪುಸ್ತಕ ಬಂಡೂಲ. ಆದರೆ ಕಷ್ಟಪಟ್ಟು ಓದಿ ಮುಗಿಸಿದ ಪುಸ್ತಕ ಇದು ಎಂದರೆ ತಪ್ಪಾಗಲಿಕ್ಕಿಲ್ಲ.
ಬಿಲ್ಲಿ ವಿಲಿಯಮ್ಸ್ ಎಂಬ ಆನೆ ಮಾನವನ ಕುರಿತು ಇಂಗ್ಲೀಷಿನಲ್ಲಿ ವಿಕಿ ಕಾನ್ಸ್ ಟೆಂಟೇನ್ ಕ್ರೂಕ್ ಬರೆದಿರುವ ಪುಸ್ತಕವನ್ನು ರಾಜ್ಯಶ್ರೀ ಕುಳಮರ್ವ ಅವರು ಕನ್ನಡಕ್ಕೆ ತಂದಿದ್ದಾರೆ.
೧೯೧೫ರಿಂದ ೧೯೪೫ರ ವರೆಗಿನ ಕಾಲಘಟ್ಟದಲ್ಲಿನ ಸನ್ನಿವೇಶಗಳನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಮಾನವ ಹಾಗೂ ಆನೆಯ ಸಂಬಂಧವನ್ನು ಅವಿನಾಭಾವವಾಗಿ ತೆರೆದಿಡುವ ಕೆಲಸವನ್ನು ಪುಸ್ತಕ ಮಾಡುತ್ತದೆ. ೧೯೨೦ರ ದಶಕದಲ್ಲಿ ತೇಗದ ಮರದ ಉದ್ದಿಮೆಗಾಗಿ ನಮ್ಮ ದೇಶದ ಪಕ್ಕದಲ್ಲೇ ಇರುವ ಬರ್ಮಾಕ್ಕೆ ಆಗಮಿಸುವ ಬಿಲ್ಲಿ ವಿಲಿಯಮ್ಸ್ ಅಥವಾ ಎಲಿಫೆಂಟ್ ಬಿಲ್, ಆ ನಾಡಿನಲ್ಲಿ ಒಂದಾಗುವ ಅಂಶಗಳನ್ನು ಕ್ರುಕ್ ಬಹಳ ಸವಿಸ್ತಾರವಾಗಿ ತಿಳಿಸಿದ್ದಾರೆ.
೧೯೨೦ರ ದಶಕದ ಭಾರತ, ಆ ಸಂದರ್ಭದಲ್ಲಿನ ಬರ್ಮಾ, ಅಲ್ಲಿನ ಬೌದ್ಧ ಧರ್ಮ, ಆನೆಗಳು, ತೇಗದ ಮರಗಳಿಗಾಗಿ ಬ್ರಿಟಿಷ್ ಕಂಪನಿಗಳು ಮಾಡುವ ಕಾರ್ಯಗಳು ಇತ್ಯಾದಿಗಳ ಕುರಿತು ಹೆಚ್ಚಿನ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಾಗುತ್ತವೆ. ಅದೇ ರೀತಿ ೧೯೩೯ರಿಂದ ೧೯೪೫ರ ಅವಧಿಯಲ್ಲಿ ನಡೆದ ೨ನೇ ಮಹಾಯುದ್ಧದ ಸಂದರ್ಭದ ಘಟನೆಗಳೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿವರಿಸಲ್ಪಟ್ಟಿದೆ.
ವಿಶ್ವದ ಕ್ಲಿಷ್ಟ ಭಾಷೆಯಲ್ಲಿ ಒಂದು ಬರ್ಮೀಸ್. ಅದನ್ನು ಕಲಿಯುವ ಬಿಲ್ಲಿ, ತದ ನಂತರ ತನ್ನ ಕುತೂಹಲವನ್ನು ಆನೆಗಳ ಕಡೆಗೆ ತೋರಿಸುವುದು, ಬರ್ಮಾದ ನೂರಾರು ಆನೆಗಳ ಜತೆ ಒಡನಾಡುವುದು, ಅವುಗಳ ದೇಖರೇಖಿ ನೋಡಿಕೊಳ್ಳುವುದು, ಖಾಯಿಲೆಗಳಿಗೆ ಔಷಧಿ ಒದಗಿಸುವುದು, ಆಸ್ಪತ್ರೆ ತೆರೆಯುವುದು ಇವೆಲ್ಲ ಇಷ್ಟವಾಗುತ್ತವೆ. ಬಂಡೂಲ ಎಂಬ ಮಹಾ ದೈತ್ಯ ಆನೆ ಬಲ್ಲಿಯ ಒಡನಾಡಿಯಾಗುವುದು, ಆತನನ್ನು ಆನೆ ಹಾಗೂ ಆನೆಯನ್ನು ಆತ ಕಾಪಾಡುವುದೂ ಕೂಡ ಪುಸ್ತಕದ ಪ್ರಮುಖ ಅಂಶಗಳಲ್ಲಿ ಒಂದು.
ಪುಸ್ತಕ ಬರೆದ ವಿಕ್ಕಿಯವರು ಹೇಳಿಕೊಳ್ಳುವಂತೆ ಬಿಲ್ಲಿ ವಿಲಿಯಮ್ಸ್ ಆತ್ಮಕಥೆ ಬರೆಯುವ ಸಂದರ್ಭದಲ್ಲಿ ಮೂರ್ನಾಲ್ಕು ವರ್ಷ ಹೋಂ ವರ್ಕ್ ಮಾಡಿಕೊಂಡಿದ್ದರಂತೆ. ಬಿಲ್ಲಿ ವಿಲಿಯಮ್ಸ್ ಓಡಾಡಿದ ಸ್ಥಳಗಳಲ್ಲಿ ತಾವೂ ಓಡಾಟ ಮಾಡಿದ್ದರಂತೆ. ನೂರಾರು ಜನರನ್ನು ಸಂದರ್ಶನ ಮಾಡಿದ್ದರಂತೆ. ಈ ಕಾರಣದಿಂದ ಪುಸ್ತಕ ಬಹು ಸುದೀರ್ಘವಾಗಿದೆ.
ಇದನ್ನು ಕನ್ನಡಕ್ಕೆ ಅನುವಾಅದಿಸಿದ್ದು ನಮ್ಮದೇ ಕಾಸರಗೋಡಿನ ರಾಜ್ಯಶ್ರೀ ಕುಳಮರ್ವ. ರಾಜ್ಯಶ್ರೀ ಅವರೇ ಹೇಳುವಂತೆ ಇದು ತಮ್ಮ ಮೊಟ್ಟ ಮೊದಲ ಅನುವಾದದ ಪುಸ್ತಕವಂತೆ. ಬಿ. ಆರ್. ಶಂಕರ್ ಅನುವಾದ ಸಾಹಿತ್ಯ ಮಾಲೆ ಅಡಿಯಲ್ಲಿ ಛಂದ ಪುಸ್ತಕವು ಪ್ರಕಟಿಸಿದೆ. ಅನಾಮತ್ತು ೪೫೦ ಪುಟಗಳ ಪುಸ್ತಕ.
ರಾಜಜ್ಯಶ್ರೀಯವರದ್ದು ಮೊದಲ ಅನುವಾದಿತ ಪುಸ್ತಕವಾದ್ದರಿಂದ ಸ್ವಲ್ಪ ಮಾಫಿಯನ್ನು ನೀಡಬಹುದು. ಆದರೆ ಪುಸ್ತಕವನ್ನು ಬಹುವಾಗಿ ಎಳೆದಂತೆ ಅನ್ನಿಸುತ್ತದೆ. ಸಾಹಸಮಯ ಅಂಶವನ್ನು ತೀರಾ ಸಾಮಾನ್ಯವಾಗಿ ಹೇಳಲಾಗಿದೆಯೇನೋ ಅನ್ನಿಸುತ್ತದೆ. ಇನ್ನೂ ರೋಚಕವಾಗಿ ಕಟ್ಟಿಕೊಡಬಹುದಿತ್ತು. ಬಹುಶಃ ಇದು ಮೂಲ ಲೇಖಕಿ ವಿಕಿಯವರದ್ದೇ ತಪ್ಪಿರಬಹುದು. ಆದರೆ ರಾಜ್ಯಶ್ರೀಯವರು ಮೊದ ಮೊದಲ ಅಧ್ಯಾಯಗಳಲ್ಲಿ ಪಿನ್ ಟು ಪಿನ್ ಅನುವಾದಕ್ಕೆ ಯತ್ನಿಸಿದ್ದರಿಂದ ಓದುವಾಗ ಕೊಂಚ ಸಮಸ್ಯೆ ಆಗುತ್ತದೆ.
ರಾಜ್ಯಶ್ರಿಯವರು ೧೯೦೦ರ ಕಾಲದ ಪುಸ್ತಕ ಅನುವಾದ ಮಾಡಿದ್ದರಿಂದ, ಅದೇ ಕಾಲದ ಕನ್ನಡ ಬಳಕೆಗೆ ಯತ್ನಿಸಿರುವುದು ವಿಚಿತ್ರ ಎನ್ನಿಸುತ್ತದೆ. ಇನ್ನು ಕನ್ನಡಕ್ಕೆ ಅನುವಾದಿಸಿ ತಂದ ಸಂದರ್ಭದಲ್ಲಿ ಕನಿಷ್ಟ ೧೫೦ ಪುಟಗಳನ್ನು ಕಡಿಮೆ ಮಾಡಬಹುದಿತ್ತು. ಹಲವು ಅಂಶಗಳನ್ನು ಸುದೀರ್ಘ ಗೋಳಿಸಿದ್ದು, ಪುಸ್ತಕವನ್ನು ಸರಾಗಿ ಓದುವಲ್ಲಿ ಹಿನ್ನಡೆಯನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೇ ನಾನು ಈ ಪುಸ್ತಕವನ್ನು ಇಷ್ಟಪಟ್ಟು ತೆಗೆದುಕೊಂಡರೂ ಕಷ್ಟಪಟ್ಟು ಓದಿ ಮುಗಿಸಿದೆ. (ಸಾಮಾನ್ಯವಾಗಿ ೧ ವಾರ ಅಥವಾ ೧೦ ದಿನಗಳ ಅಂತರದಲ್ಲಿ ದೊಡ್ಡ ಪುಸ್ತಕಗಳನ್ನು ಓದುವ ನಾನು ಈ ಪುಸ್ತಕ ಓದಲು ತೆಗೆದುಕೊಂಡಿದ್ದು ಬರೋಬ್ಬರಿ ೩ ತಿಂಗಳು)
ಮೂರು ಪ್ರಮುಖ ಭಾಗಗಳಾಗಿ ವಿಂಗಡನೆಯಾಗಿರುವ ಈ ಪುಸ್ತಕದಲ್ಲಿ ಮೂರನೇ ಭಾಗದಲ್ಲಿ ವೇಗ ಪಡೆದುಕೊಳ್ಳುತ್ತದೆ. ಬಹುಶಃ ಮೂರನೇ ಭಾಗಕ್ಕೆ ಬರುವ ವೇಳೆಗೆ ರಾಜ್ಯಶ್ರೀಯವರು ಅನುವಾದದಲ್ಲಿ ಪಳಗಿರಬೇಕು. ಮೊದಲೆರಡು ಭಾಗಗಳಲ್ಲಿ ನಿಧಾನವಾಗುವ ಓದು ಮೂರನೇ ಭಾಗದಲ್ಲಿ ಸರಾಗವಾಗುತ್ತದೆ. ರಾಜ್ಯಶ್ರೀಯವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಲಿ. ಆದರರೆ ಅನುವಾದದ ಸಂದರ್ಭದಲ್ಲಿ ಕೊಂಚ ಗಮನ ಹರಿಸಲಿ ಎನ್ನುವುದು ನನ್ನ ಚಿಕ್ಕ ಸಲಹೆ.

ವಿಚಿತ್ರ:
ಈ ಪುಸ್ತಕದಲ್ಲಿ ಜಪಾನಿಯರ ಕ್ರೌರ್ಯ, ಯುದ್ಧ ಇತ್ಯಾದಿಗಳನ್ನು ಸಾಕಷ್ಟು ವಿವರಿಸಲಾಗಿದೆ. ಓರ್ವ ಬ್ರಿಟೀಷ್ ಲೇಖಕಿಯಾಗಿ ವಿಕಿ ಕ್ರೂಕ್ ಜಪಾನಿಯರನ್ನು ಕಟ್ಟಿಕೊಡುತ್ತಾರೆ. ನಾವು ನಮ್ಮ ಇತಿಹಾಸಗಳಲ್ಲಿ ನೋಡಿದಂತೆ, ಬರ್ಮಾ, ಮಿಜೋರಾಮ್, ಮಣಿಪುರ ಇತ್ಯಾದಿ ಕಡೆಗಳಲ್ಲಿ ನಮ್ಮ ಹೆಮ್ಮೆಯ ಸುಭಾಷರು ಭಾರತದ್ದೇ ಫೌಜಿಗಳ ದಂಡು ಕಟ್ಟಿಕೊಂಡು ಸ್ವಾತಂತ್ರ್ಯ ಯುದ್ಧ ಮಾಡಿದರು ಎನ್ನುವುದನ್ನು ಕೇಳುತ್ತೇವೆ. ಆದರೆ ಬಂಡೂಲ ಪುಸ್ತಕದಲ್ಲಿ ಸುಭಾಷರ ಕುರಿತು ಒಂದೇ ಒಂದು ಅಂಶವೂ ಇಲ್ಲದಿರುವುದು ವಿಚಿತ್ರ. ಬರ್ಮಾ ಹಾಗೂ ಭಾರತದ ಗಡಿಯಲ್ಲಿ ಯುದ್ಧಗಳ ನಡುವೆ ಸಿಕ್ಕಿಕೊಳ್ಳುವ ಬಿಲ್ಲಿ ವಿಲಿಯಮ್ಸ್ ಕೂಡ ಸುಭಾಷರ ಬಗ್ಗೆ ಮಾತನಾಡುವುದಿಲ್ಲ. ಇದು ಬಿಲ್ಲಿ ವಿಲಿಯಮ್ಸ್, ಕ್ರುಕ್ ಅವರ ಉದ್ದೇಶ ಪೂರ್ವಕ ಕೆಲಸವೋ ಅಥವಾ ಆ ಸಂದರ್ಭದ ಯುದ್ಧಗಳನ್ನು ಬ್ರಿಟೀಷರು ವರ್ಸಸ್ ಜಪಾನಿಯರು ಎಂದೇ ಬಿಂಬಿಸಿದ್ದೋ ಗೊತ್ತಿಲ್ಲ. ಈ ಪುಸ್ತಕದಲ್ಲಿ ಸುಭಾಷರ ಹೋರಾಟಗಳನ್ನು ಉಲ್ಲೇಖಿಸಿದ್ದರೆ, ಅಂದಿನ ಕಾಲದ ಇನ್ನೊಂದು ಮಜಲು ತೆರೆದುಕೊಳ್ಳುತ್ತಿತ್ತು.
ಇನ್ನು ಪುಸ್ತಕದ ಹೆಸರು ಬಂಡೂಲ ಎಂದಿದ್ದರೂ, ಬಂಡೂಲ ಎಂಬ ಆನೆಯ ಉಲ್ಲೇಖ ಬಹಳ ಕಡಿಮೆ ಇದೆ. ಬಂಡೂಲನ ಸಾಹಸಗಳನ್ನು ಇನ್ನಷ್ಟು ತೆರೆದಿಡಬಹುದಿತ್ತೇನೋ.

ಅಂದಹಾಗೆ ಈ ಪುಸ್ತಕಕ್ಕೆ ೩೨೦ ರೂಪಾಯಿ ದರ ಇದೆ.
ಸಾಹಸ ಪುಸ್ತಕಗಳು, ಪ್ರಾಣಿಗಳು ಅದರಲ್ಲಿಯೂ ಆನೆಗಳ ಕುರಿತು ಆಸಕ್ತಿ ಇರುವವರು ತಪ್ಪದೇ ಓದಬೇಕು.