Sunday, May 24, 2015

ಮಾಸ್ತರ್ ಮಂದಿ-1

              ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ವ್ಯಕ್ತಿಯ ಬದುಕನ್ನು ರೂಪಿಸುವವರು ಶಿಕ್ಷಕರು ಎಂದರೆ ತಪ್ಪಾಗಲಿಕ್ಕಿಲ್ಲ. ನನ್ನ ಬದುಕಿನಲ್ಲಿ ಅದೆಷ್ಟೋ ಶಿಕ್ಷಕರು ಬಂದು ಹೋಗಿದ್ದಾರೆ. ಬಿನ್ನೆತ್ತಿಯಿಂದ ಹಿಡಿದು ಕಾಲೇಜು ಕೊನೆಯ ವರ್ಷದ ವರೆಗೆ 50ಕ್ಕೂ ಹೆಚ್ಚು ಜನ ನನ್ನ ಬದುಕನ್ನು ರೂಪಿಸಿದವರು. ಅವರ ಬಗ್ಗೆ ಒಂದಿಷ್ಟು ಮಾತು ನಾನು ಹೇಳಿಕೊಳ್ಳಲೇಬೇಕು. ನನಗೆ ನೆನಪಿರುವಷ್ಟು ಶಿಕ್ಷಕರ ಬಗ್ಗೆ ಹೇಳುತ್ತೇನೆ. ಈ ಶಿಕ್ಷಕರು ನನ್ನ ಪಾಲಿಗೆ ಸಿಹಿಯೂ ಆಗಿದ್ದಾರೆ, ಕಹಿಯೂ ಆಗಿದ್ದಾರೆ. ಅಂತವರ ಬಗ್ಗೆ ನೆನಪು ಮಾಡಿಕೊಳ್ಳುವ ಲೇಖನ ಇದು. ಬರೆಯುತ್ತ ಸಾಗುತ್ತೇನೆ. ಕಂತುಗಳ ಲೆಕ್ಕವಾದರೂ ಆದೀತು.

ಸತೀಶ ಮಾಸ್ತರ್ರು :
                     ನನಗೆ ನೆನಪಿರುವಂತೆ ಸತೀಶ ಮಾಸ್ತರ್ರು ನನ್ನ ಶಾಲಾ ಜೀವನದ ಮೊಟ್ಟ ಮೊದಲ ಮಾಸ್ತರ್ರು. ಬಿನ್ನೆತ್ತಿಯಿಂದ ಹಿಡಿದು ಒಂದನೇ ಕ್ಲಾಸಿನಲ್ಲಿ ಕಲಿಸಿದ ಈ ಮಾಸ್ತರ್ರ ನೆನಪು ಅಸ್ಪಷ್ಟವಾಗಿದೆ. 4ನೇ ವರ್ಷದಿಂದ ಬಿನ್ನೆತ್ತಿಗೆ ಹೋಗಲು ಶುರು ಮಾಡಿದ್ದ ನಾನು 6ನೇ ವರ್ಷದ ವರೆಗೂ ಬಿನ್ನೆತ್ತಿಯಲ್ಲೇ ಉಳಿದುಕೊಳ್ಳಲು ಈ ಮಾಸ್ತರ್ರೇ ಪ್ರಮುಖ ಕಾರಣ. ಎಲ್ಲ ಹುಡುಗರಿಗಿಂತ ಕುಳ್ಳಗೆ ಕಾಣುತ್ತಿದ್ದ ನಾನು 6 ವರ್ಷವಾದರೂ 4 ವರ್ಷದ ಹುಡುಗರಂತೆ ಕುಳ್ಳಗೇ ಇದ್ದೆ. ಪ್ರತಿವರ್ಷ ಅವರು ನನ್ನನ್ನು ತಲೆಯ ಮೇಲಿನಿಂದ ಕೈಯನ್ನು ಉದ್ದ ಹಿಡಿದು ಕಿವಿಯನ್ನು ಮುಟ್ಟು ಎನ್ನುತ್ತಿದ್ದರು. ಆದರೆ ನನ್ನ ಕೈ ಕಿವಿಗೆ ತಲುಪುತ್ತಿರಲಿಲ್ಲ. ಇನ್ನೂ ಸಮಾ ವರ್ಷವಾಗಿಲ್ಲ ಎಂದು ಹೇಳಿ ನನ್ನನ್ನು 1ನೇ ಕ್ಲಾಸಿಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದವರು ಈ ಮಾಸ್ತರ್ರು.
                    ಈ ಮಾಸ್ತರ್ರು ನಾನು ಕಲಿಯುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳ-ಕೋಡ್ಸಿಂಗೆಯಿಂದ ರಸ್ತೆ ಮಾರ್ಗದ ಮೂಲಕ ಅನಾಮತ್ತು 6 ಕಿಮಿ ದೂರದ ಕೋಡ್ಸರದಲ್ಲಿ ಉಳಿದುಕೊಳ್ಳುತ್ತಿದ್ದರು. ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ 3 ಕಿ.ಮಿ ನಡೆದು ಪ್ರತಿದಿನ ಶಾಲೆಗೆ ಬರುತ್ತಿದ್ದ ಸತೀಶ ಮಾಸ್ತರ್ರು ಕಪ್ಪಗಿದ್ದರು. ಥಟ್ಟನೆ ನೋಡಿದರೆ ಸಿನಿಮಾ ನಟ, ಹಿರಿಯ ಐಎಎಸ್ ಅಧಿಕಾರಿ ಕೆ. ಶಿವರಾಮು ಅವರನ್ನು ನೆನಪಿಸುವಂತಿದ್ದರು ಅವರು. ಮೂರ್ನಾಲ್ಕು ವರ್ಷ ನಮ್ಮೂರ ಶಾಲೆಯಲ್ಲಿ ಕಲಿಸಿದ್ದರೇನೋ. ಆದರೆ ನಾನು 1ನೇ ಕ್ಲಾಸಿಗೆ ಬರುವ ವೇಳೆಗೆ ಅವರು ವರ್ಗವಾಗಿ ಹೋಗಿದ್ದರು.
                   ಸತೀಶ ಮಾಸ್ತರ್ರು ನಮ್ಮೂರ ಶಾಲೆಗೆ ಕಲಿಸಲು ಬರುವ ವೇಳೆಗೆ ಇಡೀ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಒಬ್ಬರೇ ಶಿಕ್ಷಕರಿದ್ದರು. ಆಗ ನಮ್ಮೂರಿನಲ್ಲಿ ಎಸ್ಎಸ್ಎಲ್ಸಿ ಓದಿ ಮುಗಿಸಿದ್ದ ನನ್ನ ಅತ್ತೆಯಂದಿರು ಇಬ್ಬರನ್ನು ಪಾರ್ಟ್ ಟೈಮಿಗೆ ಕಲಿಸಲು ಬರುವಂತೆ ಹೇಳಿದ್ದು ಇನ್ನೂ ನೆನಪಿದೆ. ಬಿನ್ನೆತ್ತಿ ಓದಲು ಬರುತ್ತಿದ್ದ ನನಗೆ ನನ್ನ ಅತ್ತೆಯಂದಿರು ಶಿಕ್ಷಕಿಯರಾಗಿ ಕಲಿಸುತ್ತಿದ್ದರು. ಸುಧತ್ತೆ ಹಾಗೂ ಶಾಂತಲತ್ತೆ ಎಂಬ ಹೆಸರಿನ ಅವರನ್ನು ನಾನು ಶಾಲೆಯಲ್ಲಿಯೂ ಸುಧತ್ತೆ ಹಾಗೂ ಶಾಂತಲತ್ತೇ ಎಂದೇ ಕರೆಯುತ್ತಿದ್ದೆ. ಒಂದಿನ ಈ ಅತ್ತೆಯರು ನನ್ನನ್ನು ಕರೆದು `ಶಾಲೆಯಲ್ಲಿ ಅತ್ತೆ ಅನ್ನಬೇಡ. ಟೀಚರ್ ಎಂದು ಕರಿ. ನೆಂಟಸ್ತನ ಏನಿದ್ದರೂ ಮನೆಯಲ್ಲಿ ನೋಡಿಕೊ..' ಎಂದು ಹೇಳಿದ್ದಿನ್ನೂ ನನ್ನ ನೆನಪಿನಲ್ಲಿ ಸ್ಪಷ್ಟವಾಗಿಯೇ ಇದೆ. ಬಹುಶಃ ಅತ್ತೆಯರು ಹೀಗೆ ಹೇಳಿದ ನಂತರವೇ ನಮ್ಮ ನೆಂಟರು ಯಾರಾದರೂ ಮಾಸ್ಟರಾಗಿ ನನಗೆ ಕಲಿಸಲು ಬಂದರೆ ಶಾಲೆಯಲ್ಲಿ ಅವರನ್ನು ಸರ್ ಎಂದು ಸಂಬೋಧನೆ ಮಾಡಬೇಕು, ಮನೆಯಲ್ಲಿ ಮಾತ್ರ ನೆಂಟರಾಗಿ ಕಾಣಬೇಕು ಎಂಬುದು ಅರಿವಾದದ್ದು. ಇಂತಹ ಅತ್ತೆಯರಿಗೆ ಸರಿಯಾಗಿ ಸಂಬಳ ಕೊಡಲಿಲ್ಲ ಎಂದು ಅತ್ತೆಯರ ಅಪ್ಪ ಸತೀಶ ಮಾಸ್ತರ್ರ ಬಳಿ ಜಗಳ ಕಾಯ್ದಿದ್ದು ಇನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
                  ಇಂತಹ ಮಾಸ್ತರ್ರು ನಮ್ಮೂರ ಶಾಲೆಯಿಂದ ಟ್ರಾನ್ಸಫರ್ ಆಗುವ ವೇಳೆಗೆ ಕುಳ್ಳೀಶ್ವರ ಮಾಸ್ತರ್ರು ಶಿಕ್ಷಕರಾಗಿ ಬಂದಿದ್ದರು. ಅವರಲ್ಲದೇ ಅನಸೂಯಕ್ಕೋರು, ಗಣೇಶ ಭಟ್ಟರು ಮಾಸ್ತರ್ರಾಗಿ ಬಂದಿದ್ದು ನನಗಿನ್ನೂ ನೆನಪಿದೆ. ಆ ಸಂದರ್ಭದಲ್ಲಿಯೇ ತಾರಕ್ಕೋರು ಕೂಡ ನಮ್ಮ ಶಾಲೆಗೆ ಅಕ್ಕೋರಾಗಿ ಬಂದಿದ್ದರು.
                  ಸತೀಶ ಮಾಸ್ತರ್ರ ಕಾಲದಲ್ಲೇ ನನ್ನ ಬದುಕಿನಲ್ಲೊಂದು ಮಜವಾದ ಸಂಗತಿ ಜರುಗಿತ್ತು. ಅದಿನ್ನೂ ನನ್ನ ನೆನಪಿನಲ್ಲಿ ಹಸಿಯಾಗಿದೆ. ನಾನು ಆವತ್ತೊಂದಿನ ಅದೇನೋ ನೆಪವನ್ನು ಹೂಡಿ ಶಾಲೆಗೆ ಹೋಗಿರಲಿಲ್ಲ. ನನ್ನ ಗ್ರಹಚಾರಕ್ಕೆ ಆ ದಿನವೇ ಶಾಲೆಯಲ್ಲಿ ಕ್ರೀಡಾಕೂಟವನ್ನು ಮಾಡಿಬಿಟ್ಟಿದ್ದರು. ನಾನು ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದೆನಾದರೂ ಕಳ್ಳಬಿದ್ದ ಕಾರಣ ಭಾಗವಹಿಸವುದು ತಪ್ಪಿ ಹೋಗಿತ್ತು. ಆಮೇಲೆ ನಾನು ನನ್ನನ್ನು ಹಳಿದುಕೊಂಡು ಸುಮ್ಮನಾಗಿದ್ದೆ ಮರೆತೂ ಹೋಗಿತ್ತು. ಕೊನೆಗೊಂದು ದಿನ ಶಾಲಾ ವಾರ್ಷಿಕೋತ್ಸವ ಬಂದಿತ್ತು. ಆಗ ಇದ್ದಕ್ಕಿದ್ದಂತೆ ಮೈಕಿನಲ್ಲಿ ನನ್ನ ಹೆಸರನ್ನು ಕರೆದಾಗ ಮಾತ್ರ ನಾನು ಬೆಚ್ಚಿ ಬಿದ್ದಿದ್ದೆ. ಕ್ರೀಡಾಕೂಟದಲ್ಲಿ ನನಗೂ ಒಂದು ಬಹುಮಾನ ಬಂದಿತ್ತು. ಆಟದಲ್ಲಿ ಭಾಗವಹಿಸಿದ್ದಕ್ಕಾಗಿ ಸಮಾಧಾನಕರ ಬಹುಮಾನ ನನಗೆ ಪ್ರಾಪ್ತವಾಗಿತ್ತು. ಅರ್ರೇ ಶಾಲೆಗೆ ಹೋಗದ ನಾನು ಬಹುಮಾನ ಪಡೆದುಕೊಂಡಿದ್ದೆ ಎನ್ನುವುದು ಮಾತ್ರ ಬಹಳ ತಮಾಷೆಯ ವಿಷಯವಾಗಿತ್ತು. ಕೊನೆಗೆ ಗೊತ್ತಾಗಿದ್ದೇನೆಂದರೆ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಕೂಡ ಆಟದಲ್ಲಿ ಭಾಗವಹಿಸಲಿ, ಭಾಗವಹಿಸದೇ ಇರಲಿ, ಯಾವುದೇ ತಾರತಮ್ಯ ಮಾಡದೇ ಪ್ರಶಸ್ತಿ ಪತ್ರ ನೀಡಬೇಕು ಎಂದು ಸತೀಶ ಮಾಸ್ತರ್ರು ಆಲೋಚಿಸಿದ್ದರಂತೆ. ಅದಕ್ಕೆ ತಕ್ಕಂತೆ ಅವರು ನಡೆದುಕೊಂಡಿದ್ದರು. ನನಗೆ ಪ್ರಶಸ್ತಿ ಬಂದಿತ್ತು.
               ಇಂತಹ ಸತೀಶ ಮಾಸ್ತರ್ರು ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ರಾತ್ರಿಯಿಂದ ಬೆಳಗಿನವರೆಗೂ ವಾರ್ಷಿಕೋತ್ಸವದ ನಿಮಿತ್ತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಸಾರಿ ಘಾಟಿ ಮುದುಕಿ ಎನ್ನುವ ನಾಟಕವೂ ನಡೆದಿತ್ತು. ಅದರಲ್ಲಿ ಮಾಸ್ತರ್ರು ಪಾತ್ರ ಮಾಡಿದ್ದರು. ಅವರ ಮನೋಜ್ಞ ನಟನೆಗೆ ಬಹಳಷ್ಟ ಬಹುಮಾನಗಳು ಬಂದಿದ್ದು ನೆನಪಿನಲ್ಲಿದೆ. ಆಗಲೇ ಸ್ಟೇಜ್ ಹತ್ತಿದ್ದ ನಾನು ನಾಲ್ಕೈದು ಡ್ಯಾನ್ಸುಗಳನ್ನೂ ಮಾಡಿದ್ದೆ. ನಮ್ಮೂರಿನ, ನನ್ನದೇ ವಾರಗೆಯ ಕೂಸು ರಂಜನಾ `ಭಾಳ ಒಳ್ಳೇಯೋರ್ ನಮ್ಮಿಸ್ಸು,, ಏನ್ ಕೇಳಿದ್ರೂ ಯೆಸ್ ಯೆಸ್ಸು..' ಎನ್ನುವ ಹಾಡಿಗೆ ಸ್ಟೇಜಿನ ಮೇಲೆ ಹೋಗಿ ಪಕ್ಕದಲ್ಲಿ ನಿಂತಿದ್ದ ಶಿಕ್ಷಕರನ್ನು ನೋಡಿ ಡ್ಯಾನ್ಸ್ ಮಾಡಿದ್ದಿನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
               ಆ ವಾರ್ಷಿಕೋತ್ಸವದ ದಿನವೇ ನಾನು ಮೊಟ್ಟ ಮೊದಲ ಬಾರಿಗೆ ಉಲ್ಕಾಪಾತವನ್ನು ನೋಡಿದ್ದು. ತಾರಕೆಯೊಂದು ಆಗಸದಲ್ಲಿ ಸೊಯ್ಯನೆ ಹಾರಿ ಹೋಗಿ ಉರಿದು ಭಸ್ಮವಾಗಿತ್ತು. ಅದನ್ನು ನೋಡುತ್ತಿದ್ದ ನನ್ನ ಮಿತ್ರ ಮಹೇಶ ಎಂಬಾತ, ನೋಡು ಈಶ್ವರ ತನ್ನ ಮೂರನೇ ಕಣ್ಣನ್ನು ಬಿಟ್ಟಿದ್ದಾನೆ. ಯಾರನ್ನೋ ಸುಟ್ಟು ಹಾಕಿದ್ದ ನೋಡು ಎಂದು ಹೇಳಿದ್ದು ಇನ್ನೂ ನೆನಪಿನಲ್ಲಿಯೇ ಇದೆ.
                 ಸತೀಶ ಮಾಸ್ತರ್ರಿದ್ದಾಗಲೇ ನಮ್ಮೂರ ಶಾಲೆ ಮೊಟ್ಟ ಮೊದಲ ಬಾರಿಗೆ ಕಾನಸೂರು ಕೇಂದ್ರ ಶಾಲಾ ಮಟ್ಟದಲ್ಲಿ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿತ್ತು. ಅಷ್ಟಲ್ಲದೇ ಹೆಗ್ಗರಣಿಯಲ್ಲಿ ನಡೆಯುತ್ತಿದ್ದ ವಲಯ ಮಟ್ಟದಲ್ಲೂ ವೀರಾಗ್ರಣಿಯಾಗಿ ಸಿದ್ದಾಪುರ ತಾಲೂಕಾ ಮಟ್ಟದಲ್ಲೂ ಭಾಗವಹಿಸಿತ್ತು. ಅವರಿದ್ದಾಗಲೇ ಆರಡಿ ಎತ್ತರದ ರವಿ ಹಾಗೂ ಆತನ ತಮ್ಮ ಹರೀಶ ಎಂಬಿಬ್ಬರು 100 ಮೀಟರ್, 200 ಮೀಟರ್, 500 ಮೀಟರ್ ಸೇರಿದಂತೆ ಓಟದ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡು ಬಂದಿದ್ದರು. ನನಗೆ ಇವರು ಆಗ ಬಹಳ ವಿಸ್ಮಯದ ವ್ಯಕ್ತಿಗಳಾಗಿ ಕಂಡಿದ್ದರು. ಶಾಲೆಗೆ ಪ್ರಶಸ್ತಿ ತಂದುಕೊಟ್ಟ ಇವರ ಮೇಲೆ ಭಯಂಕರ ಹೆಮ್ಮೆ ಮೂಡಿತ್ತು. ಇಂತಹ ಪ್ರಶಸ್ತಿ ಬಾಚಿಕೊಂಡು ಬಂದಿದ್ದ ಈ ಸಹೋದರರು ಕೊನೆಗೊಂದು ದಿನ ಸತೀಶ ಮಾಸ್ತರ್ರ ಕೈಯಲ್ಲಿ ಕಳ್ಳ ಎನ್ನುವ ಬಿರುದನ್ನೂ ಪಡೆದುಕೊಂಡಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿತ್ತು.
             ಶಾಲೆಯಲ್ಲಿ ಏನೋ ಒಂದು ಕಳುವಾಗಿತ್ತಂತೆ. ಅದಕ್ಕೆ ಸರಿಯಾಗಿ ಎಲ್ಲರನ್ನೂ ಪ್ರಶ್ನಿಸಿದ್ದರು ಸತೀಶ ಮಾಸ್ತರ್ರು. ಆದರೆ ಹರೀಶ ಹಾಗೂ ರವಿ ಮಾತ್ರ ಸರಿಯಾಗಿ ಉತ್ತರ ಹೇಳಿರಲಿಲ್ಲ. ಅದಕ್ಕೆ ಪ್ರತಿಯಾಗಿ ಸತೀಶ ಮಾಸ್ತರ್ರು ಸಿಕ್ಕಾಪಟ್ಟೆ ಹೊಡೆದು ಹಾಕಿದ್ದರು. ನನಗಿನ್ನೂ ಸತೀಶ ಮಾಸ್ತರ್ರು ಆರು ಅಡಿ ಎತ್ತರದ ರವಿಯನ್ನು ಹೊಡೆಯುತ್ತಿದ್ದುದು ಹಾಗೂ ಆತ ದಿನವಿಡೀ ಅಳುತ್ತಿದ್ದುದು ನೆನಪಿನಲ್ಲಿದೆ.
               ಹೀಗಿದ್ದಾಗ ಒಂದು ದಿನ ನಮ್ಮ ಶಾಲೆಯಲ್ಲೊಂದು ಗಲಾಟೆ ನಡೆದು ಹೋಗಿತ್ತು. 7ನೇ ತರಗತಿ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅದೊಂದು ದಿನ ಅವರು ಶಾಲೆಗೆ ಬರಲು ಲೇಟಾಗಿತ್ತು. ಅದೇ ಸಂದರ್ಭದಲ್ಲಿ ಒಬ್ಬ ಹುಡುಗ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿಬಿಟ್ಟಿದ್ದ. 7ನೇ ತರಗತಿಯಲ್ಲೇ ಲವ್ ನಡೆದಿತ್ತು. ಆ ಹುಡುಗಿ ಅದೇನು ಹೇಳಿದಳೋ. ಬಹುಶಃ ಯೆಸ್ ಅಂದಿರಬೇಕು. ಹುಡುಗ ನಾಯ್ಕರ ಪೈಕಿ. ಹುಡುಗಿ ಬ್ರಾಹ್ಮಣರವಳು. 7ನೇ ತರಗತಿಯ ಲವ್ ಗಲಾಟೆಗೆ ಕಾರಣವಾಗಿತ್ತು. ಅದ್ಹೇಗೆ ಸತೀಶ ಮಾಸ್ತರ್ರಿಗೆ ಗೊತ್ತಾಯಿತೋ. ಶಾಲೆಗೆ ಬಂದವರೇ ಹುಡುಗ, ಹುಡುಗಿ, ಅವರ ಲವ್ವಿಗೆ ಸಹಾಯ ಮಾಡಿದವರು, ಅವರ ಕ್ಲಾಸಿನವರು ಎಲ್ಲರನ್ನೂ ನಿಲ್ಲಿಸಿ ಹೊಡೆತದ ಮೇಲೆ ಹೊಡೆತ ಕೊಟ್ಟಿದ್ದರು. ಸತತ ಮೂರು ದಿನ ಹೊಡೆದಿದ್ದು ನೆನಪಿದೆ. ಶಾಲೆಯಲ್ಲಿ ಸಿಕ್ಕಾಪಟ್ಟೆ ಕಿಲಾಡಿ ಎನ್ನುವ ಬಿರುದನ್ನು ಗಳಿಸಿಕೊಂಡಿದ್ದ ನನಗೆ ಮೂರು ದಿನಗಳ ಸತೀಶ ಮಾಸ್ತರ್ರ ಪ್ರತಾಪ ನೊಡಿ 15 ದಿನ ಪುಂಗಿ ಬಂದಾಗಿತ್ತು.
                ಕೊನೆಗೊಂದು ದಿನ ಸತೀಶ ಮಾಸ್ತರ್ರ ವರ್ಗಾವಣೆಯಾಗಿತ್ತು. ಅವರು ಅದೆಷ್ಟೇ ರುದ್ರ ಪ್ರತಾಪ ತೋರಿಸಲಿ, ಸಿಟ್ಟು ಮಾಡಲಿ, ಪ್ರೀತಿಯನ್ನು ತೋರಿಸಲಿ, ನಮ್ಮಲ್ಲಿ ಅದೇನೋ ಬಂಧ ಬೆಳೆದು ಬಿಟ್ಟಿತ್ತು. ಶಾಲೆ ಬಿಟ್ಟು ಹೋಗುವಾಗ ಮಾತ್ರ ಪ್ರತಿಯೊಬ್ಬರಿಗೂ ಒಂದೊಂದು ಲೋಟವನ್ನು ಕೊಡುಗೆಯಾಗಿ ಕೊಟ್ಟು ಹೋಗಿದ್ದರು. ಪ್ರೀತಿಯ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರ ನೆನಪಿನ ಕಾಣಿಕೆ ಎಂದು ಬರೆದ ಚೂಪಿ ಮುಕುಳಿಯ ಸ್ಟೀಲ್ ಲೋಟ ಮೊನ್ನೆ ಮೊನ್ನೆ ಮೊನ್ನೆಯ ವರೆಗೂ ನನ್ನ ಬಳಿ ಇತ್ತು. ಇಂತಹ ಸತೀಶ ಮಾಸ್ತರ್ರು ಈಗ ಎಲ್ಲಿದ್ದಾರೋ? ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಮೊದಲ ಶಿಕ್ಷಕರು ಸದಾ ನೆನಪಿನಲ್ಲಿದ್ದಾರೆ.

ಅನಸೂಯಕ್ಕೋರು :
             ಅನಸೂಯಕ್ಕೋರಿಗೆ ನಾವು ಯಾವತ್ತೂ ಅನಸೂಯಕ್ಕೋರು ಎಂದು ಕರೆದಿದ್ದೇ ಇಲ್ಲ. ಹೆಡ್ಡಕ್ಕೋರು ಎಂದು ಅಡ್ಡ ಹೆಸರಿನಲ್ಲಿ ಕರೆದೇ ರೂಢಿ. ನಾನು ಬಿನ್ನೆತ್ತಿಯಲ್ಲಿದ್ದಾಗ ಅನಸೂಯಕ್ಕೋರು ನನಗೆ ಕಲಿಸಲು ಬಂದಿದ್ದರು. ಇವರ ಬಗ್ಗೆ ಹೆಚ್ಚೇನೂ ನನಗೆ ಗೊತ್ತಿಲ್ಲ ಬಿಡಿ. ಬಿನ್ನೆತ್ತಿಯಾಗಿದ್ದ ಕಾರಣ ನಾನು ಬಹಳ ಶಾಲೆಗೆ ಕಳ್ ಬೀಳುತ್ತಿದ್ದೆ. ಆವಾಗೆಲ್ಲಾ ಜೊತೆಯಲ್ಲಿದ್ದ ಹುಡುಗರು ಹೆಡ್ಡಕ್ಕೋರು ಹೊಡಿತ್ರು ತಡಿ ಎಂದು ಹೇಳುತ್ತಿದ್ದುದು ನೆನಪಿನಲ್ಲಿರುತ್ತಿತ್ತು. ಆದರೆ ಬಿನ್ನೆತ್ತಿಯಾದ ಕಾರಣ ಅವರು ಮಾಫಿ ಮಾಡುತ್ತಿದ್ದರು.
                  ಇಂತಹ ಸಂದರ್ಭದಲ್ಲಿಯೇ ಬಯಲು ಸೀಮೆಯ ಒಬ್ಬ ಹುಡುಗ ನನ್ನ ಗೆಳೆಯನಾಗಿ ಸಿಕ್ಕಿದ್ದ. ಅವನ ಹೆಸರೂ ವಿನಯನೇ.  ಹಳೆಯ ಶಾಲೆಯಲ್ಲಿ ಇದ್ದಿದ್ದು 2 ರೂಮುಗಳಾಗಿದ್ದವು. ಜೊತೆಗೆ ಹಾಲು ಡೇರಿ ಎಂದು ಕರೆಯುವ ಒಂದು ಔಟ್ ಹೌಸ್ ಶಾಲೆಯಿಂದ ಸ್ವಲ್ಪ ದೂರದಲ್ಲಿತ್ತು. ಬಿನ್ನೆತ್ತಿ, ಒಂದನೇ ಕ್ಲಾಸ್ ಹಾಗೂ 2ನೇ ಕ್ಲಾಸಿನ ಮಕ್ಕಳು ಈ ಔಟ್ ಹೌಸಿನಲ್ಲಿ ಉಳಿದುಕೊಳ್ಳಬೇಕಿತ್ತು. ಸರಿ ಸುಮಾರು 40 ಜನರಿದ್ದೆವೇನೋ. ಒಂದು ದಿನ ನಾನು ಹಾಗೂ ದೋಸ್ತ ವಿನಯ, ಅಡಕಳ್ಳಿಯ ವಿಜಯ ಔಟ್ ಹೌಸ್ ಶಾಲೆಯಲ್ಲಿ ಕುಳಿತಿದ್ದೆವು. ಎಲ್ಲರೂ ಪಾಠ ಕೇಳುತ್ತಿದ್ದರೆ ನಾವು ಮಾತ್ರ ಸುತ್ತ ಮುತ್ತ ಇದ್ದ ಮರ, ಬೆಟ್ಟ ಗುಡ್ಡ ನೋಡುತ್ತಿದ್ದೆವು. ಆಗಲೇ ಶಾಲೆಗೆ ಹೊಂದಿಕೊಂಡಂತೆ ಇದ್ದ ಮರವೊಂದರ ಮೇಲೆ ದೊಡ್ಡದೊಂದು ಹಾವಿರುವುದು ನಮ್ಮ ಕಣ್ಣಿಗೆ ಬಿದ್ದು ಬಿಟ್ಟಿತ್ತು. ದೊಡ್ಡದಾಗಿ ಗಲಾಟೆ ಎಬ್ಬಿಸಿದೆವು. ಗಲಾಟೆಯಿಂದಾಗಿ ಒಮ್ಮೆಲೆ ಎಲ್ಲರಿಗೆ ದಿಗ್ಭ್ರಮೆ. ಕೊನೆಗೆ ಸತೀಶ ಮಾಸ್ತರ್ರು ಯಾರನ್ನೋ ಕರೆಸಿ ಆ ಹಾವನ್ನು ಕೊಲ್ಲಿಸಿದ್ದು ನೆನಪಿನಲ್ಲಿದೆ. ಈ ಘಟನೆಯ ನಂತರ ಔಟ್ ಹೌಸಿನಲ್ಲಿ ಎಲ್ಲರಿಗೂ ಕಲಿಸುವ ಕಾರ್ಯಕ್ಕೆ ಪುಲ್ ಸ್ಟಾಪ್ ಬಿದ್ದಿತ್ತು. ನಾವೆಲ್ಲ ಕಿಕ್ಕಿರಿದು ತುಂಬಿದ್ದ ಶಾಲೆಯ ಮುಖ್ಯ ಕೊಠಡಿಗೆ ವಾಪಾಸಾಗಿದ್ದೆವು.

ಈಶ್ವರ ನಾಯ್ಕರು :
            ಈಶ್ವರ ನಾಯ್ಕರು ಸತೀಶ ಮಾಸ್ತರು ಕಲಿಸುತ್ತಿದ್ದ ಸಂದರ್ಭದಲ್ಲಿಯೇ ಶಾಲೆಗೆ ಬಂದವರು. ಕೇವಲ 5 ಅಡಿ ಎತ್ತರ ಇದ್ದ ಈ ಮಾಸ್ತರ್ರನ್ನು ಎಲ್ಲರೂ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುತ್ತಿದ್ದರು. ಅವರಿಗೆ ಹೀಗೆ ಕರೆಯುವುದಕ್ಕೂ ಮಜವಾದ ಕಾರಣವಿದೆ. ಈಗಿನಂತೆ ಆಗಲೂ ಮಾಸ್ತರ್ರು ಮಕ್ಕಳ, ಜನರ ಗಣತಿ ಮಾಡಲೇಬೇಕಿತ್ತು. ದಂಟಕಲ್ಲಿಗೆ ಬಂದಿದ್ದ ಈ ಶ್ವರ ಮಾಸ್ತರ್ರನ್ನು ನೋಡಿ ನನ್ನ ಪಕ್ಕದ ಮನೆಯ ಅತ್ತೆಯರು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಆಗಷ್ಟೇ ಹೈಸ್ಕೂಲನ್ನು ಮುಗಿಸಿದ್ದ ಅತ್ತೆಯರು ಈಶ್ವರ ಮಾಸ್ತರ್ರು ಕುಳ್ಳಗಿದ್ದಾರೆ ಎಂಬುದನ್ನೇ ದೊಡ್ಡ ಜೋಕ್ ಮಾಡಿ ನಗಲು ಆರಂಭಿಸಿದ್ದರು. ಇದರಿಂದಾಗಿ ಅವಮಾನ ಪಟ್ಟುಕೊಂಡಿದ್ದ ಮಾಸ್ತರ್ರು ನೊಂದುಕೊಂಡು ವಾಪಸಾಗಿದ್ದರು. ಆ ದಿನದ ನಂತರ ಈಶ್ವರ ನಾಯ್ಕರ ಪ್ರಸ್ತಾಪ ಬಂದಾಗಲೆಲ್ಲ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುವುದು ರೂಢಿಯಾಗಿತ್ತು.
               ಈ ಈಶ್ವರ ಮಾಸ್ತರ್ರು ಇದ್ದ ಸಂರ್ಭದಲ್ಲಿಯೇ ಒಂದು ಘಟನೆ ನಡೆಯಿತು. ಶಾಲೆಯಲ್ಲಿ ಎಲ್ಲರೂ ಕ್ರಿಕೆಟ್ ಹುಚ್ಚಿಗೆ ಬಲಿಯಾಗಿದ್ದ ಸಂದರ್ಭದಲ್ಲಿ ಸತೀಶ ಮಾಸ್ತರ್ರು ನಮ್ಮಲ್ಲಿ ಪುಟ್ ಬಾಲ್ ಹುಚ್ಚನ್ನು ಬೆಳೆಸಲು ಮುಂದಾಗಿದ್ದರು. ಎಲ್ಲ ಹುಡುಗರನ್ನೂ ಎದುರಿಗೆ ನಿಲ್ಲಿಸಿ ಪುಟ್ ಬಾಲ್ ಕೊಟ್ಟು ಬಿಟ್ಟಿದ್ದರು. ಎಲ್ಲರ ಜೊತೆ ನಾನೂ ಹುರುಪಿನಿಂದ ಆಡಲು ಶುರು ಮಾಡಿದ್ದೆ. ಹೀಗಿದ್ದಾಗಲೇ ದತ್ತಾತ್ರೆಯ ಎಂಬ ದೈತ್ಯ ಹುಡುಗನೊಬ್ಬ ಜೋರಾಗಿ ಓಡಿಬಂದು ನನಗೆ ಢಿಕ್ಕಿ ಹೊಡೆದು ಬಿಟ್ಟಿದ್ದ. ಢಿಕ್ಕಿ ಹೊಡೆದ ರಭಸಕ್ಕೆ ನಾನು ಹಾರಿ ಹೋಗಿ ದೊಪ್ಪನೆ ಬಿದ್ದಿದ್ದೆ. ಬಿದ್ದ ಹೊಡೆತಕ್ಕೆ ಕಲ್ಲಿಗೆ ಜೋರಾಗಿ ನನ್ನ ತಲೆ ಬಡಿದು ಬಿಟ್ಟಿತ್ತು. ಬಡಿದ ರಭಸಕ್ಕೆ ತಲೆ ಒಡೆದು ಬಳಬಳನೆ ರಕ್ತ ಸುರಿಯಲು ಆರಂಭವಾಗಿತ್ತು. ತಕ್ಷಣವೇ ಹೆದರಿದ ಸತೀಶ ಮಾಸ್ತರ್ರು ಆಟವನ್ನು ಖೈದು ಮಾಡಿದ್ದರು. ಓಡಿ ಹೋದ ಕುಳ್ಳೀಶ್ವರ ಮಾಸ್ತರ್ರು ತಾವು ಚಾ ಮಾಡಲು ಬಳಕೆ ಮಾಡುತ್ತಿದ್ದ ಚಾಸೊಪ್ಪನ್ನು ತಂದು ಗಾಯಗೊಂಡ ನನ್ನ ತಲೆಗೆ ಹಾಕಿದ್ದರು. ರಕ್ತ ಬರುವುದು ನಿಂತಿತ್ತು. ಈಗಲೂ ನನ್ನ ತಲೆಯ ಮೇಲೆ ಚಿಕ್ಕಂದಿನ ಆ ಗಾಯ ಹಾಗೇ ಉಳಿದುಕೊಂಡಿದೆ. ಆ ಗಾಯದ ಕಲೆಯನ್ನು ಮುಟ್ಟಿಕೊಂಡಾಗೆಲ್ಲ ಸತೀಶ ಮಾಸ್ತರ್ರು, ಕುಳ್ಳೀಶ್ವರ ಮಾಸ್ತರ್ರು, ಪುಟಬಾಲ್ ಆಟ ಹಾಗೂ ನನಗೆ ಢಿಕ್ಕಿ ಹೊಡೆದ ದತ್ತಾತ್ರೇಯ ನೆನಪಾಗುತ್ತಿರುತ್ತಾರೆ.

(ಮುಂದುವರಿಯುತ್ತದೆ)

ಚುಟುಕು-ಗುಟುಕು

ದೂರದಿಂದ ಹಕ್ಕಿಯೊಂದು
ತನ್ನ ಮರಿಯ ಮನದಿ ನೆನೆದು
ಚಿಕ್ಕ ಗುಡುಕು ನೀಡಲೆಂದು
ಹಾರಿ ಬಂದಿತು ||

ಕಾಡಿನಲ್ಲಿ ಬೇಟೆಯರಸಿ
ನದಿಗಳಲ್ಲಿ ಮೀನು ಹುಡುಕಿ
ಮರಿಯ ಹಸಿವು ತಣಿಸಲೆಂದು
ಗುಟುಕು ತಂದಿತು ||

ಮರಿಯು ತಾನು ದಾಹದಿಂದ
ತಾಯ ತಾನು ಬೇಗ ಕರೆಯೆ
ಮರಿಯ ಧ್ವನಿಯ ತಾನು ಕೇಳಿ
ಓದಿ ಬಂದಿತು ||

ತಾನು ತಂದ ಬೇಟೆಯನ್ನು
ಚಿಕ್ಕ ಪುಟ್ಟ ಮರಿಗೆ ನೀಡಿ
ತನ್ನ ಮರಿಯ ಹಸಿವು ನೀಗಿ
ಖುಷಿಯ ಹೊಂದಿತು ||

ಈ ದೃಶ್ಯ ಕವಿಗೆ ಕಂಡು
ಕವಿಯ ಹೃದಯ ಪುಳಕಗೊಂಡು
ಕವನವೊಂದು ಹೊರಗೆ ಬರಲು
ತವಕಗೊಂಡಿತು ||

ಕವಿಯು ಬರೆದ ನಾಲ್ಕು ಸಾಲೆ
ಬಾವ ತುಂಬಿ ಹಾಡಿದಾಗ
ಬರೆದ ಬರಹವದು ಆಗ
ಕವನವಾಯಿತು ||

**********

(ಈ ಕವಿತೆಯನ್ನು ಬರೆದಿರುವುದು 26-11-2004ರಂದು ನಾಣೀಕಟ್ಟಾದಲ್ಲಿ)
(ಪಿಯುಸಿ ಓದುತ್ತಿದ್ದ ಸಂದರ್ಭ. ಆಗಷ್ಟೇ ಕವಿತೆಗಳನ್ನು ಬರೆಯಲು ಆರಂಭ ಮಾಡಿದ್ದೆ. ಒಂದಿಷ್ಟು ಬಾಲಿಶ ಕವಿತೆಗಳನ್ನು ಬರೆದು ವಗಾಯಿಸಿದ್ದೆ. ಅದನ್ನು ದೋಸ್ತರು ಕಂಡು ನನಗೆ ಕವಿಯೆಂಬ ಪಟ್ಟವನ್ನೂ ಕಟ್ಟಿಬಿಟ್ಟಿದ್ದರು. ಈ ವಿಷಯ ನಮ್ಮ ಕನ್ನಡ ಉಪನ್ಯಾಸಕರಾದ ವಿ. ಎಸ್. ಹೆಗಡೆಯವರ ಕಿವಿಗೂ ಬಿದ್ದಿತ್ತು. ನನ್ನ ಕವಿತೆ ಯಾವ ರೀತಿ ಇರಬಹುದು ಎಂಬುದನ್ನು ಪರೀಕ್ಷೆ ಮಾಡಲು ಬಹುಶಃ ಇಟ್ಟರೇನೋ ಅನ್ನಿಸುತ್ತಿದೆ. ಒಂದು ಕವನ ಬರೆಯುವ ಸ್ಪರ್ಧೆ ಇಟ್ಟರು. ಹಕ್ಕಿಯ ಚಿತ್ರವೊಂದನ್ನು ಇಟ್ಟರು. ಗುಟುಕು ನೀಡುತ್ತಿದ್ದ ಹಕ್ಕಿಯ ಚಿತ್ರ ಅದು. ಅದನ್ನು ನೋಡಿ ಕವಿತೆ ಬರೆಯಬೇಕಿತ್ತು. ಎಲ್ಲರಿಗಿಂತ ಲೇಟಾಗಿ ಬಂದು ಕವಿತೆ ಬರೆಯಲು ಕುಳಿತು ಏನೋ ಬರೆದು ಕೊಟ್ಟು ಬಂದಿದ್ದೆ. ಮಜಾ ಅಂದರೆ ನನ್ನ ಕವಿತೆಗೆ ಮೊದಲ ಸ್ಥಾನ ಬಂದಿತ್ತು. ನನ್ನ ಕವಿತೆ ಚನ್ನಾಗಿರಲಿಲ್ಲ ಎಂದುಕೊಂಡಿದ್ದೆ. ಮೊದಲ ಪ್ರಶಸ್ತಿ ಬಂದ ನಂತರ ಅನ್ನಿಸಿದ್ದೆಂದರೆ ಉಳಿದವರೆಲ್ಲರೂ ನನಗಿಂತ ಕೆಟ್ಟದಾಗಿ ಬರೆದಿದ್ದರು ಎನ್ನುವುದು. ಅದೇ ಕವಿತೆ ಇಲ್ಲಿದೆ ನೋಡಿ. 2004-05ನೇ ಸಾಲಿನ ಕವಿತಾ ರಚನೆ ಸ್ಪರ್ಧೆಯಲ್ಲಿ ಮೊಟ್ಟಮೊದಲ ಬಹುಮಾನ ತಂದುಕೊಟ್ಟ ಕವಿತೆ)

ಅಘನಾಶಿನಿ ಕಣಿವೆಯಲ್ಲಿ-19

           ತೊಂಭತ್ತು ವಸಂತಗಳ ಮೇಲೆ ನಾಲ್ಕೈದು ವಸಂತಗಳನ್ನು ಕಳೆದಿದ್ದ ಗಣಪಜ್ಜನ ಬಳಿ ಮಾತನಾಡಿದಂತೆಲ್ಲ ಬೆರಗಿಗೆ ಕಾರಣವಾದ. ನಮ್ಮ ಹಿರಿಯರು ಅದೆಷ್ಟೆಲ್ಲ ಕೆಲಗಳಲ್ಲಿ ಕ್ರಿಯಾಶೀಲರಾಗಿ ಇರುತ್ತಿದ್ದರಲ್ಲ ಎನ್ನಿಸಿತು. ಗಣಪಜ್ಜನ ನೆನಪಿನ ಖಜಾನೆಯೊಳಗಿನ ಒಂದೆರಡು ಮುತ್ತುಗಳನ್ನಷ್ಟೇ ಯುವಪಡೆ ಪಡೆದುಕೊಂಡಿತ್ತು. ಅಷ್ಟಕ್ಕೇ ಅಚ್ಚರಿಯೊಂದಿಗೆ ಬಾಯಿ ಬಾಯಿ ಬಿಡಲು ಆರಂಭವಾಗಿತ್ತು. ಖಜಾನೆಯಲ್ಲಿ ಇನ್ನೂ ಲಕ್ಷಾಂತರ ಮುತ್ತುಗಳು ಬಾಕಿಯಿದ್ದವು. ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ರಕ್ಷಣೆ ಮಾಡಿ, ಬೆಳೆಸಿದ ಬಗೆ, ಅಡಿಕೆಯಿಂದ ಪಾನೀಯವನ್ನು ತಯಾರು ಮಾಡಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೆರೆಮನೆ ವಾಸ ಇನ್ನೂ ಅದೆಷ್ಟೋ ವಿಷಯಗಳು ಗಣಪಜ್ಜನ ಬಾಯಿಂದ ಕೇಳಬೇಕೆನ್ನಿಸಿತ್ತು. ಮತ್ತೊಮ್ಮೆ ಇವುಗಳನ್ನು ಕೇಳಲು ಬರುತ್ತೇವೆ ಎಂದು ಎಲ್ಲರೂ ವಾಪಸಾದರು.
              ವಿನಾಯಕನ ಮನೆಗೆ ಮರಳಿದ ನಂತರವೂ ಗಣಪಜ್ಜ ಮಾತುಗಳು ಎಲ್ಲರ ಮನಸ್ಸಿನಲ್ಲಿ ತಕ ಥೈ ಆಡುತ್ತಿತ್ತು. ಮತ್ತೆ ಮತ್ತೆ ಚರ್ಚೆ ಮಾಡಿದರು ಎಲ್ಲರೂ. ಹುಲಿ ಹೊಡೆದ ಗಣಪಜ್ಜ ಜಿಮ್ ಕಾರ್ಬೆಟ್ಟನ ಹಾಗೇ ಆಗಿಬಿಟ್ಟಿದ್ದ. ವಿನಾಯಕನ ಮನೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡುತ್ತಿದ್ದಾಗಲೇ ಒಂದಿಬ್ಬರು ಹಿರಿಯರು ಗಣಪಜ್ಜ ಹುಲಿ ಹೊಡೆದಿರಲಿಲ್ಲವೆಂದೂ ಮುತ್ಮುರ್ಡಿನ ಸುಬ್ಬಜ್ಜ ಹುಲಿ ಹೊಡೆದವನೆಂದೂ ಆಗ ಜೊತೆಯಲ್ಲಿ ಇದ್ದವನು ಮಾತ್ರ ಗಣಪಜ್ಜನೆಂದೂ ಹೇಳಿದರು. ಗಣಪಜ್ಜನೇ ಹುಲಿ ಹೊಡೆದನಾ ಅಥವಾ ಸುಬ್ಬಜ್ಜ ಹೊಡೆದನಾ ಎನ್ನುವ ಬಗ್ಗೆ ಕೆಲಕಾಲ ಚರ್ಚೆಯೂ ನಡೆಯಿತು. ಕೊನೆಗೆ ಯಾರೇ ಹುಲಿ ಹೊಡೆದಿರಲಿ, ಅದೊಂದು ವಿಶೇಷ ಘಟನೆಯೇ ಹೌದು. ಹುಲಿಯನ್ನು ಹೊಡೆಯುವುದು ಸಾಮಾನ್ಯ ಕೆಲಸವಲ್ಲ. ಗಣಪಜ್ಜ ತಾನು ಹುಲಿ ಹೊಡೆದಿದ್ದೇನೆ ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದಾನೆ ಎಂದರೆ ಆತ ಖಂಡಿತವಾಗಿಯೂ ಹೊಡೆದಿರಲೇಬೇಕು ಎಂದುಕೊಂಡರು ಎಲ್ಲರೂ.

***

            `ಹಾಗಾದರೆ ಬಂದವರು ಯಾರು? ಪೋಲೀಸರೇನಲ್ಲವಲ್ಲ.' ಎಂದು ಆ ಗುಂಪಿಗೆ ನಾಯಕನೆನ್ನಿಸಿಕೊಂಡವನು ಕೇಳಿದ್ದ.
            `ಅಲ್ಲ. ಅವರು ಪೊಲೀಸರಲ್ಲ. ಪೊಲೀಸರಿಗೆ ಮಾಹಿತಿ ಕೊಡುವವರೂ ಅಲ್ಲ. ಅದೇನೋ ಕಾಡು ಸುತ್ತುವವರಂತೆ. ಕಾಡಿನ ಬಗ್ಗೆ ರಿಸರ್ಚ್ ಮಾಡುವವರಂತೆ ನೋಡಿ. ಪಾತರಗಿತ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ಬಂದಿದ್ದಾರಂತೆ. ಅವನೊಬ್ಬನಿದ್ದಾನಲ್ಲ ಆ ದಂಟಕಲ್ಲಿನಲ್ಲಿ ಓದಿಕೊಂಡವನು. ವಿನಾಯಕ. ಅವನ ನೆಂಟರಂತೆ ನೋಡಿ. ಒಂದಿಬ್ಬರು ಹೊರಗಿನಿಂದಲೂ ಬಂದಿದ್ದಾರಂತೆ. ಇವರಿಂದ ನಮಗೆ ಏನೂ ತೊಂದರೆಯಾಗಲಿಕ್ಕಿಲ್ಲ' ಎಂದು ಇನ್ನೊಬ್ಬ ಮಾಹಿತಿ ನೀಡಿದ.
              `ಊಹೂ. ಅವರು ಯಾವುದೇ ಕಾರಣಕ್ಕೆ ಬಂದಿರಲಿ. ಅವರನ್ನು ನಂಬುವ ಮುಟ್ಠಾಳತನವಂತೂ ಮಾಡಲೇಬಾರದು. ಮೊದಲು ಅವರನ್ನು ನಮ್ಮ ಕಾಡಿನಿಂದ ದೂರಕ್ಕೆ ಓಡಿಸಲೇಬೇಕಾದ ಅನಿವಾರ್ಯತೆಯಿದೆ. ಅದಕ್ಕೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಿ. ಎಚ್ಚರ ಎಲ್ಲಿಯೂ ಇದು ನಮ್ಮ ಕೆಲಸ ಎಂದು ಗೊತ್ತಾಗದಂತೆ ಮುಂದುವರಿಯಿರಿ. ಮೊದಲು ಅವರನ್ನು ಇಲ್ಲಿಂದ ಕಳಿಸಿ.' ಎಂದು ಆಜ್ಞೆ ನೀಡಿದ್ದ ಮುಖ್ಯಸ್ಥ. ಮಾಹಿತಿ ನೀಡಲು ಬಂದಿದ್ದವನು ಸರಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ.

***

            ದಂಟಕಲ್ ಎಂದ ಕೂಡಲೇ ಗತ ಇತಿಹಾಸದಲ್ಲಿ  ಕಳೆದುಹೋಗಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಹೇಗೆ ನೆನಪಿಗೆ ಬರುತ್ತದೆಯೋ ಅದೇ ರೀತಿ ಅಪ್ಪೆಮಿಡಿಯೂ ಕೂಡ. ಉಪ್ಪಿನಕಾಯಿ ಪ್ರಿಯರಿಗೆಲ್ಲ ಅಪ್ಪೆಮಿಡಿ ಪರಮಾಪ್ತ. ಅಚ್ಚುಮೆಚ್ಚು. ಅಪ್ಪೆಮಿಡಿ ಪ್ರಿಯರೆಲ್ಲ ಅನಂತ ಭಟ್ಟನ ಅಪ್ಪೆಮಿಡಿಯನ್ನು ಇಷ್ಟಪಡುತ್ತಾರೆ. ಇಂತಹ ಅಪ್ಪೆಮಿಡಿ ತಳಿ ಅವಸಾನದ ಅಂಚಿನಲ್ಲಿದ್ದಾಗ ಅದನ್ನು ಉಳಿಸಿ ಬೆಳೆಸಿದ ಕೀರ್ತಿ ದಂಟಕಲ್ಲಿಗೆ ಸಲ್ಲುತ್ತದೆ. ದಂಟಕಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಗಣೇಶಜ್ಜ, ಗಣೇಶಜ್ಜನ ಮಗ ಗಣಪಜ್ಜ, ದೊಡ್ಡಮನೆಯ ವಿಘ್ನೇಶ್ವರ ಹೆಗಡೇರು ಈ ಮುಂತಾದವರೆಲ್ಲ ಅನಂತ ಭಟ್ಟನ ಅಪ್ಪೆಮಿಡಿ ತಳಿಯನ್ನು ಸಂರಕ್ಷಿಸಿದವರು ಎಂದರೆ ತಪ್ಪಾಗಲಿಕ್ಕಿಲ್ಲ.
              ಹಳೆಯ ಇತಿಹಾಸದ ಘಟನೆಗಳನ್ನು ಈಗಿನ ಜಮಾನಾಕ್ಕೆ ಹೇಳಬೇಕೆಂದರೆ ಗಣಪಜ್ಜ ಮಾತ್ರ ಉಳಿದುಕೊಂಡಿದ್ದ. ಊರಿನಲ್ಲಿ ಶತ ವಸಂತಗಳ ಹತ್ತಿರ ವಯಸ್ಸನ್ನು ಕಂಡಿದ್ದವನು ಗಣಪಜ್ಜ ಮಾತ್ರವೇ. ಆತ ಮಾತ್ರ ತನ್ನೂರಿನಲ್ಲಿ ನಡೆದ 1 ಶತಮಾನದ ಘಟನೆಗಳನ್ನು ಹೇಳಬಲ್ಲವನಾಗಿದ್ದ. ಆದ್ದರಿಂದ ನಮ್ಮ ಕಥೆಯ ನಾಯಕರು ಆತನ ಬೆನ್ನು ಬಿದ್ದಿದ್ದರು. ವಯಸ್ಸಾಗಿದ್ದರೂ ಗಪ್ಪಜ್ಜನಿಗೆ ಹರೆಯದ ಹುಡುಗರು ತನ್ನ ಬಳಿ ಮಾತನಾಡಲು ಬಂದ ತಕ್ಷಣ ಯವ್ವನ ಮರಳಿದಂತೆ ಕ್ರಿಯಾಶೀಲನಾಗಿದ್ದ. ಹೊಸ ಹುರುಪಿನೊಂದಿಗೆ ಕಾರ್ಯಪ್ರವೃತ್ತನೂ ಆಗಿದ್ದ.
             ಅಪ್ಪೆಮಿಡಿಯ ಪರಿಚಯ ಮಾಡಿಕೊಡು ಎಂದು ಯುವಪಡೆ ಹೇಳಿದ ತಕ್ಷಣವೇ ಗಪ್ಪಜ್ಜ ತನ್ನ ತೋಟದ ಕಡೆಗೆ ಎಲ್ಲರನ್ನೂ ಕರೆದೊಯ್ದಿದ್ದ. ತೋಟದ ಸಾಲಿನಲ್ಲಂತೂ ಎತ್ತ ನೋಡಿದರತ್ತ ಅಪ್ಪೆಮಿಡಿಯ ಮರಗಳು. 30-40-50 ವರ್ಷಗಳಾಗಿದ್ದ ಅಪ್ಪೆಯ ಮರಗಳು. ಎಪ್ರಿಲ್ ತಿಂಗಳಾಗಿದ್ದ ಕಾರಣ ಆಗಷ್ಟೇ ಮಾವಿನ ಕಸ್ತ್ರಗಳು ಕಾಯಾಗುತ್ತಿದ್ದವು. ಒಂದೆರಡು ಕಡೆಗಳಲ್ಲಿ ಕಾಯಿಗಳನ್ನು ಕೊಯ್ಯಲೂ ಆರಂಭಿಸಲಾಗಿತ್ತು. ಹೋದವರೇ ಅಜ್ಜ ತಮ್ಮ ಜಮೀನಿನಲ್ಲಿದ್ದ ಅಪ್ಪೆಮಿಡಿಯ ಮರಗಳನ್ನೆಲ್ಲ ತೋರಿಸಿದರು. ಒಂದೆರಡು ಕಡೆಗಳಲ್ಲಿ ಕೊಯ್ಯುತ್ತಿದ್ದ ಅಪ್ಪೆಮಿಡಿಗಳನ್ನು ತಿನ್ನಲೂ ಕೊಟ್ಟರು. `ಮಿಡಿಯನ್ನು ಚೂರು ಮಾಡಿ ಬಾಯಿಗಿಟ್ಟವರಿಗೆ ಒಮ್ಮೆಲೆ ಆಹ್.. ಎನ್ನುವ ಉದ್ಘಾರ. ಅಷ್ಟು ರುಚಿಕರವಾಗಿತ್ತು ಅಪ್ಪೆಮಿಡಿ.
           `ತಮಾ ಯಾರಾದ್ರೂ ಬೆಂಕಿಪೆಟ್ಗೆ ತಂಜ್ರಾ?' ಎಂದು ಕೇಳಿದ್ದ ಗಣಪಜ್ಜ.
           ಪ್ರದೀಪ ತನ್ನ ಬಳಿ ಲೈಟರ್ ಇದೆ ಎಂದು ಹೇಳಿದವನೇ ಕೊಟ್ಟ. `ತಮಾ ನೀ ಲೈಟರ್ ಹಚ್ಚು. ನಾ ಎಂತದ್ದೋ ತೋರಿಸ್ತಿ' ಎಂದರು. ಅಲ್ಲೇ ಇದ್ದ ಅಪ್ಪೆಮಿಡಿಯನ್ನು ಅದರ ಚೊಟ್ಟಿನ ಸಮೇತ ತಂದರು. `ಈಗ ಲೈಟರ್ ಹಚ್ಚು' ಎಂದರು. ಪ್ರದೀಪ ಲೈಟರ್ ಹಚ್ಚಿದ ತಕ್ಷಣ ಅಪ್ಪೆಮಿಡಿಯ ಚೊಟ್ಟನ್ನು ಚಟ್ಟನೆ ಮುರಿದರು. ಮುರಿದ ರಭಸಕ್ಕೆ ಅಪ್ಪೆಮಿಡಿಯ ಸೊನೆ ಭುರ್ರನೆ ಹಾರಿತು. ಲೈಟರ್ ನಲ್ಲಿ ಹೊತ್ತಿಸಿದ್ದ ಬೆಂಕಿಗೆ ಆ ಸೊನೆಯನ್ನು ಹಿಡಿದರು ಗಣಪಜ್ಜ. ಇದ್ದಕ್ಕಿದ್ದಂತೆ ಆ ಸೊನೆಗೆ ಭರ್ರನೆ ಬೆಂಕಿ ಹೊತ್ತಿಕೊಂಡಿತು. ಅಷ್ಟೇ ಅಲ್ಲದೇ ಅಪ್ಪೆಮಿಡಿಯ ಚೊಟ್ಟಿಗೂ ಬೆಂಕಿ ಹಿಡಿದು ಕೆಲಕಾಲ ಸರಸರನೆ ಉರಿಯಿತು. ಎಲ್ಲರ ಕಣ್ಣಲ್ಲೂ ವಿಸ್ಮಯ. `ನೋಡಿ ಯಾವ ಅಪ್ಪೆಮಿಡಿಯ ಸೊನೆಗೆ ಚನ್ನಾಗಿ ಬೆಂಕಿ ಹೊತ್ತಿಕೊಳ್ಳುತ್ತದೆಯೋ ಅಂವು ಅತ್ಯುತ್ತಮ ತಳಿಯ ಅಪ್ಪೆಮಿಡಿ ಎನ್ನುವ ಮಾತಿದ್ದು. ನೋಡಿ ಈ ಅಪ್ಪೆಮಿಡಿಗೆ ಅದ್ಯಾವ್ ರೀತಿ ಬೆಂಕಿ ಹತ್ತಿಗ್ಯಂಜು ಹೇಳಿ. ಹಿಂಗ್ ಇರವು ಅಪ್ಪೆಮಿಡಿ ಅಂದ್ರೆ. ಅಗ್ ದಿ ಹೈಕ್ಲಾಸ್ ಅಪ್ಪೆಮಿಡಿ ಇದು.' ಎಂದರು ಅಜ್ಜ.
            `ಅಪ್ಪೆಮಿಡಿಯ ಸೊನೆಯಲ್ಲಿ ಸ್ಪರಿಟ್ ಇರುತ್ತದೆ ಎಂದು ಕೇಳಿದ್ದೆ..' ಎಂದ ವಿನಾಯಕ
             `ಸ್ಪರಿಟ್ಟೋ ಎಂತದ್ದೋ.. ಯಂಗಂತೂ ಗೊತ್ತಿಲ್ಲೆ ತಮಾ. ಅನಂತಭಟ್ಟನ ಅಪ್ಪೆಮಿಡಿಯ ಸೊನೆಗೆ ಚೊಲೋ ಬೆಂಕಿ ಹತ್ತಿಗ್ಯತ್ತು ನೋಡು. ಅದೇ ರೀತಿ ಜೀರಿಗೆ ವಾಸನೆ, ಯಾಲಕ್ಕಿ ವಾಸನೆ, ಗುಂಡಪ್ಪೆ ಇವ್ಕೂ ಚೊಲೋ ಬೆಂಕಿ ಹತ್ತಿಗ್ಯತ್ತು. ಆದರೆ ವಾಸನೆ ಇಲ್ಲದ್ದೇ ಹೋದ ಅಪ್ಪೆಮಿಡಿಗೆ ಹಿಂಗ್ ಬೆಂಕಿ ತಗತ್ತಿಲ್ಲೆ ನೋಡಿ..' ಎಂದರು ಗಣಪಜ್ಜ.
             ಹಳ್ಳಿಗರ ಜ್ಞಾನ ಅದೆಷ್ಟು ವಿಶಿಷ್ಟವಾಗಿರುತ್ತದೆಯಲ್ಲ ಎಂದುಕೊಂಡರು ಎಲ್ಲರೂ. `ದೇಶಾದ್ಯಂತ ಅಪ್ಪೆಮಿಡಿ ಮರಗಳನ್ನು ನೆಟ್ಟು ಬಿಡೋಣ. ಆಮೇಲೆ ಅದರ ಸೊನೆ ಸಂಗ್ರಹ ಮಾಡಿ ಇಂಧನ ತಯಾರಿಸೋಣ. ದೇಶಕ್ಕೆ ಅಗತ್ಯವಾಗಿರುವ ಪೆಟ್ರೂಲ್, ಡಿಸೇಲ್, ಅಡುಗೆ ಇಂಧನದ ಹೊರೆ ತಪ್ಪುತ್ತದೆ ಅಲ್ಲವಾ?' ಎಂದ ಪ್ರದೀಪ. ಎಲ್ಲರೂ ಒಮ್ಮೆಲೆ ನಕ್ಕರು.
            `ತಮಾ.. ಅಪ್ಪೆಮಿಡಿ ಸೊನೆ ಸಂಗ್ರಹ ಮಾಡೋದು ಸುಲಭ ಅಲ್ಲ. 100 ಎಂ. ಎಲ್ ಸೊನೆ ಸಂಗ್ರಹ ಮಾಡವು ಅಂದ್ರೆ ಹೆಚ್ಚೂ ಕಡಿಮೆ 10 ಸಾವಿರಕ್ಕೂ ಜಾಸ್ತಿ ಅಪ್ಪೆಮಿಡಿ ಬೇಕಾಗ್ತು ನೋಡು. ಒಂದೊಂದು ಮರಕ್ಕೆ 10 ಲಕ್ಷ ಕಾಯಿ ಬಿಟ್ಟರೆ ಹೆಚ್ಚೂ ಕಡಿಮೆ 1 ಲೀಟರ್ ಸೊನೆ ಸಂಗ್ರಹ ಮಾಡ್ಲಕ್ಕು. ಅಪ್ಪೆಮಿಡಿ ಸೊನೆಗೆ 100 ಎಂ.ಎಲ್.ಗೆ ಹೆಚ್ಚೂ ಕಡಿಮೆ 1000 ರೂಪಾಯಿ ಇದ್ದು. ಇದು ಸುಲಭ ಅಲ್ದೋ. ದುಬಾರಿ ಆಗ್ತು. ನಿನ್ ಪ್ಲಾನು ಬಿಟ್ಟಾಕು. ಆದರೆ ಅಪ್ಪೆಮಿಡಿ ಮರ ಬೇಳೆಸು ಅಡ್ಡಿಲ್ಲೆ..' ಎಂದರು ಗಣಪಜ್ಜ.
              ಬೆಂಕಿಗೆ ಅನಂತಭಟ್ಟನ ಅಪ್ಪೆಮಿಡಿ ಸೊನೆ ಸುಟ್ಟ ವಾಸನೆ ಘಮ್ಮೆನ್ನುತ್ತಿತ್ತು. ಅಪ್ಪೆಮಿಡಿ ಚೂರನ್ನು ತಿಂದವರಿಗೆ ಬಾಯೆಲ್ಲ ಅಪ್ಪೆಮಿಡಿ ಸುವಾಸನೆಯಾದಂತೆ ಅನ್ನಿಸುತ್ತಿತ್ತು. ಬಾಯಿಂದ ತೇಗು ಬಂದರೂ ಅಪ್ಪೆಮಿಡಿಯ ಸುವಾಸನೆಯೇ ಬರುತ್ತಿತ್ತು. `ತಮಾ ಇದು ಬಹಳ ಜೀರ್ಣಕಾರಿ. ನೀವ್ ಎಷ್ಟೇ ಊಟ ಮಾಡ್ಕ್ಯಂಡ್ ಬಂದಿದ್ದರೂ ಅಪ್ಪೆಮಿಡಿ ಬೇಗನೇ ಜೀರ್ಣ ಮಾಡಿ ಹಾಕ್ ಬಿಡ್ತು. ಅದ್ಕೇ ಉಪ್ಪಿನಕಾಯಿಗೆ ಅನಂತಭಟ್ಟನ ಮಿಡಿ ಅಂದ್ರೆ ಶ್ರೇಷ್ಟ ಅಂತಾ ಹೇಳ್ತ. ಇಡೀ ಉಪ್ಪಿನಕಾಯಿ ಭರಣಿಗೆ 100 ರು ಅಪ್ಪೆಮಿಡಿ ಹಾಕಿ ಅದರಲ್ಲಿ 5-6 ಅನಂತಭಟ್ಟನ ಅಪ್ಪೆಮಿಡಿ ಮಿಕ್ಸ್ ಮಾಡಿದ್ರೆ ಇಡೀ ಭರಣಿಯ ರುಚಿಯನ್ನೇ ಬದಲು ಮಾಡಿಬಿಡ್ತಿ ಇದು. ಎಲ್ಲ ಅಪ್ಪೆ ಮಿಡಿನೂ ಅನಂತ ಭಟ್ಟನ ಅಪ್ಪೆಮಿಡಿಯೇನೋ ಅಂಬಂತೆ ಮಾಡತು' ನೋಡಿ ಎಂದರು ಗಣಪಜ್ಜ.
              ತಿಂದರೆ ತೆಂಗಿನ ಕಾಯಿಯ ಚೂರಿನಂತೆ ಕರಂ ಕರಂ ಎನ್ನುತ್ತಿದ್ದ ಅಪ್ಪೆಮಿಡಿ ಅಷ್ಟು ಹುಳಿಯೂ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ ಮಿಕ್ಸ್ ಉಪ್ಪಿನಕಾಯಿಯ ನಾಲ್ಕು ಪಟ್ಟು ದರ ಅನಂತ ಭಟ್ಟನ ಅಪ್ಪೆಮಿಡಿ ಉಪ್ಪಿನಕಾಯಿಗೆ ಇದೆ ಎಂಬುದು ಎಲ್ಲರಿಗೂ ನೆನಪಾಯಿತು. `ಅಜ್ಜಾ.. ಈ ಅನಂತಭಟ್ಟನ ಅಪ್ಪೆಮಿಡಿ ತಳಿ ಉಳಿಸಿದ ಸಾಹಸಗಾಥೆ ನಂಗಕ್ಕಿಗೆ ಹೇಳಿ' ಎಂದ ವಿನಾಯಕ.
             `ಅದೊಂದ್ ದೊಡ್ಡ ಕಥೆ. ಈಗ ಇಲ್ಲೆಲ್ಲಾ ಇಷ್ಟೆಲ್ಲಾ ಅನಂತಭಟ್ಟನ ಅಪ್ಪೆಮಿಡಿ ಮರಗಳು ಕಾಣ್ತಲಾ. ಆದರೆ ಮೊದಲು ಇಲ್ಲೆಲ್ಲೂ ಅಪ್ಪೆಮಿಡಿ ಮರ ಇತ್ತಿಲ್ಲೆ. ಬಾಳೂರು ಹತ್ತಿರ ಭಯಂಕರ ಎತ್ತರದ ಮರ ಒಂದಿತ್ತು. ಅದೇ ಈ ನಮ್ಮೆ ಎಲ್ಲಾ ಅನಂತ ಭಟ್ಟನ ಅಪ್ಪೆಮಿಡಿ ಮರಗಳ ಅಪ್ಪ-ಅಮ್ಮ. ಅಂತಹ ದೈತ್ಯ ಮರವನ್ನ ಯಾರೂ ಹತ್ತತ್ವಿದ್ದಿಲ್ಲೆ. ಆದರೆ ಅನಂತಭಟ್ಟ ಹೇಳಂವ ಒಬ್ಬಂವ ಪ್ರತಿ ವರ್ಷ ಆ ಮರ ಹತ್ತಿ ಅಪ್ಪೆಮಿಡಿ ಕೊಯ್ಕಂಡು ಬರ್ತಿದ್ದ. ಒಂದ್ ವರ್ಷ ಅಂವ ಮರದಿಂದ ಉರ್ಡಿ ಬಿದ್ದು ಸತ್ತೋದ. ಆ ಮೇಲೆ ಈ ಅಪ್ಪೆಮಿಡಿಗೆ ಅನಂತಭಟ್ಟನ ಅಪ್ಪೆಮಿಡಿ ಎಂದೂ ಹೆಸರು ಬಂತು. ಮರಕ್ಕೆ ಅನಂತಭಟ್ಟನ ಅಪ್ಪೆಮರ ಅಂತನೂ ಹೆಸರು ಬಂತು. ಮರಕ್ಕೆ ಭಯಂಕರ ವಯಸ್ಸಾಗಿತ್ತು. ಯನ್ನ ಅಪ್ಪಯ್ಯ ಗಣೇಶ ಹೆಗಡೇರು ಆ ಮರದ ಟೊಂಗೆ ತಗಂಡು ಬಂದು ಅದರ ಕಸಿ ಮಾಡಿ ಬೆಳೆಸಿದ್ರು. ಈಗ ದಂಟಕಲ್ ತುಂಬ ಅನಂತಭಟ್ಟನ ಅಪ್ಪೆಮರವೇ ಕಾಣಿಸ್ತು. ಇಷ್ಟೇ ಅಲ್ಲ. ಈ ಅಪ್ಪೆಮರ ಎಲ್ಲ ಕಡೆಗಳಲ್ಲಿ ಸೀಮೋಲ್ಲೋಂಘನವೂ ಮಾಡಿದ್ದು.'
               `ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ. ಶಿವರಾಮ ಕಾರಂತರ ಸಹೋದರ ಕೋ.ಲ. ಕಾರಂತರು ಈ ಅಪ್ಪೆಮಿಡಿ ಕಸಿ ಮಾಡಿ ತಮ್ಮೂರಲ್ಲಿ ಅನಂತಭಟ್ಟನ ಅಪ್ಪೆಮರದ ಫಾರ್ಮನ್ನೇ ಮಾಡಿದ್ದರು. ಆದರೆ ಅವರ ಊರಿನಲ್ಲಿ ಮರಕ್ಕೆ ಒಂದೇ ಒಂದೂ ಕಾಯಿ ಬಂಜಿಲ್ಲೆ. ಅಘನಾಶಿನಿ ನದಿ ದಡದ ಮೇಲೆ ಇದ್ದರೆ ಮಾತ್ರ ಅನಂತಭಟ್ಟನ ಅಪ್ಪೆಮರ ಕಾಯಿ ಬಿಡ್ತು ಹೇಳಿ ಮಾತಿದ್ದು. ಅದ್ಕೆ ಬೇರೆ ಕಡೆ ಎಲ್ಲೂ ಕಾಯಿ ಬಿಡ್ತಿಲ್ಲೆ. ಇಲ್ಲಿ ಇಷ್ಟೆಲ್ಲ ಹುಲುಸಾಗಿ ಬೆಳೆಯುವ ಅಪ್ಪೆಮಿಡಿ, ಅಪ್ಪೆಮರ ಬೇರೆ ಕಡೆ ಇಷ್ಟ ಚೊಲೋ ಬೆಳಿತಿಲ್ಲೆ. ಬಹುಶಃ ಈ ಮಣ್ಣಿನ ಗುಣ ಈ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ಲಕ್ಕು. ಇಲ್ಲಿಯ ಜೈವಿಕ ವಿಕಾಸ ಅನಂತಭಟ್ಟನ ಅಪ್ಪೆಮಿಡಿ ಮರಕ್ಕೆ ಚೊಲೋ ಆಗ್ತಿಕ್ಕು ನೋಡಿ' ಎಂದರು ಗಣಪಜ್ಜ.
             ಅಪ್ಪೇಮಿಡಿಯ ವಿಶಿಷ್ಟತೆಗಳು ಎಲ್ಲರಲ್ಲಿಯೂ ಬೆರಗನ್ನು ತಂದಿತ್ತು. `ತಗಳಿ ಈ ಅಪ್ಪೆಮಿಡಿನ ಮನೆಗೆ ತಗಂಡು ಹೋಗಿ ಚಟ್ನಿ, ಅಪ್ಪೆಹುಳಿ ಮಾಡ್ಕಂಡು ಊಟ ಮಾಡಿ' ಎಂದು 100ಕ್ಕೂ ಹೆಚ್ಚು ಅಪ್ಪೆಮಿಡಿಗಳನ್ನು ಕೊಟ್ಟರು. ಮಾರುಕಟ್ಟೆಯಲ್ಲಿ 1 ಅನಂತಭಟ್ಟನ ಅಪ್ಪೆಮಿಡಿಗೆ ಕನಿಷ್ಟ 10 ರು. ಇದೆ ಎಂದು ವಿನಾಯಕ ಪಿಸುಗುಟ್ಟಿದ. ವಾಪಾಸು ಮನೆಗೆ ಬಂದು ಅಪ್ಪೆಮಿಡಿ ಚಟ್ನಿ ಮಾಡಿಸಿಕೊಂಡು ತಿಂದರು ಎಲ್ಲರೂ. ಅಪ್ಪೆಮಿಡಿಯ ಅಪ್ಪೆಹುಳಿ ಮಾಡಿಸಿಕೊಂಡು ಊಟ ಮಾಡಿದರು. ಪ್ರದೀಪನಂತೂ ಎಂದೂ ಕಾಣದವನಂತೆ ಅಪ್ಪೆಹುಳಿಯನ್ನು ಊಟಕ್ಕೆ ಬಡಿಸಿಕೊಂಡು ಉಂಡ. ಅಷ್ಟೇ ಅಲ್ಲದೇ ಅಪ್ಪೆಹುಳಿಯನ್ನು ಪದೇ ಪದೆ ಕುಡಿದ. ಪ್ರದೀಪ ಅಪ್ಪೆಹುಳಿಯ ಪರಮಾಪ್ತ ಅಭಿಮಾನಿಯಾಗಿಬಿಟ್ಟಿದ್ದ.
           ಅಷ್ಟರಲ್ಲಿ ತುಂಟತನ ಮಾಡಿದ ವಿನಾಯಕ `ಈ ಅಪ್ಪೆಹುಳಿ ಇದೆಯಲ್ಲ ಇದು ಬ್ರಾಹ್ಮಣರ ಪಾಲಿಗೆ ವೈನ್ ಎಂದೇ ಕರೆಸಿಕೊಳ್ಳುತ್ತದೆ. ಅಷ್ಟು ಕಿಕ್ ಕೊಡುತ್ತದೆ ಮಾರಾಯಾ. ಇದನ್ನು ಊಟ ಮಾಡಿದರೆ ಸಿಕ್ಕಾಪಟ್ಟೆ ನಿದ್ದೆ ಬರುತ್ತದೆ. ಅಷ್ಟೇ ಅಲ್ಲ ಮಂಪರೂ ಕೂಡ.. ನೀನು ಅಷ್ಟೆಲ್ಲ ಊಟ ಮಾಡಿದೆಯಲ್ಲ. ಇದೀಗ ನಿನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸುತ್ತೇವೆ ಇರು ' ಎಂದ. ಪ್ರದೀಪ ಹೌಹಾರಿದ. ಊಟ ಮಾಡಿದ ತಕ್ಷಣವೇ ಪ್ರದೀಪನಿಗೆ ಗಡದ್ದು ನಿದ್ದೆ. ಗಣಪಜ್ಜನ ಜೊತೆಯಲ್ಲಿ ಹೀಗೊಂದು ದಿನ ಸಾರ್ಥಕವಾಗಿ ಕಳೆಯಿತು ಎಂದುಕೊಂಡಳು ವಿಜೇತಾ. ಮಾಡುವ ಕೆಲಸ ಇನ್ನೂ ಸಾಕಷ್ಟಿತ್ತು. ಸೂರ್ಯಕುದುರೆಯನ್ನು ಹುಡುಕಬೇಕಿತ್ತು. ಸೂರ್ಯಶಿಖಾರಿಯನ್ನೂ ಕೈಗೊಳ್ಳಬೇಕಿತ್ತು. ನಾಳೆಯಿಂದಲೇ ಈ ಕೆಲಸಕ್ಕೆ ತೊಡಗಿಕೊಳ್ಳಬೇಕು ಎಂದುಕೊಂಡಳು ವಿಜೇತಾ. ಆದರೆ ಮರುದಿನ ಮಾತ್ರ ಎಂದಿನಂತಿರಲಿಲ್ಲ. ಬೆಳ್ಳಂಬೆಳಿಗ್ಗೆ ದೊಡ್ಡದೊಂದು ಶಾಕ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

(ಮುಂದುವರಿಯುತ್ತದೆ)

Wednesday, May 20, 2015

ಪ್ರಕೃತಿ

(ಚಿತ್ರ : ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು)
ಈ ಭೂಮಿಯು ದೇವ ಮಂದಿರ
ಸೃಷ್ಟಿ ಸೊಬಗಿದು ಸುಂದರ
ಜೀವ ಜೀವವು ಸೇರಿ ಇರುವೆಡೆ
ಇರುವ ಬಾನಿನ ಚಂದಿರ ||

ಶಿಲ್ಪಕಲೆಗಳ ಹಾಗೆ ಇರುವ
ಗುಡ್ಡ ಬೆಟ್ಟ ನದಿಗಳು
ಸಾಲು ಸಾಲು ಗಿಡಮರಗಳು
ಬಾಗಿ ತೂಗುತಿರ್ಪವು ||

ಜಗಕೆ ಬೆಳಕೇ ಆಗಿರುವ
ಸರ್ವ ವಂದ್ಯ ಸೂರ್ಯನು
ದಿನ ದಿನವೂ ದಣಿಯದೇ
ಅಮರ ಜೀವ ಕೊಡುವನು ||

ತೇಗ ಮತ್ತಿಯ ಮರಗಳೆಲ್ಲವು
ಹಸಿರ ಹೊನ್ನು ಆಗಿದೆ
ಮಾನವನ ಜೀವದೊಡನೆ
ಪ್ರಕೃತಿಯ ಸೊಬಗು ನರಳಿದೆ ||

***
(ನಾನು ಪಿಯುಸಿ ಓದುವಾಗ ಬರೆದ ಕವಿತೆಗಳ ಮಾಲಿಕೆಯಲ್ಲಿ ಇದೂ ಒಂದು. ಇನ್ನೂ ಕವಿ ಮನಸ್ಸು ಅರಳುತ್ತಿದ್ದ ಕಾಲದ ಕವಿತೆ. ಸ್ವಲ್ಪ ಸುಧಾರಿಸಿಕೊಂಡು ಓದಿ)
(ಈ ಕವಿತೆ ಬರೆದಿರುವುದು 08-07-2004ರಂದು ದಂಟಕಲ್ಲಿನಲ್ಲಿ)
(ಬಾಲಸುಬ್ರಹ್ಮಣ್ಯ, ನಿಮ್ಮೊಳಗೊಬ್ಬ ಬಾಲು ಅವರ ಚಿತ್ರವನ್ನು ಅವರ ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದೇನೆ. ಅವರ ಬಳಿ ಕ್ಷಮೆ ಕೋರುತ್ತಾ..)

Tuesday, May 19, 2015

ಕರೆ

ಹೇ ಯುವಕ ಸಾಧಿಸು
ಫಲ ಸಿಗುವ ವರೆಗೆ ಸಾಧಿಸು
ಗುರಿ ತಲುಪುವ ವರೆಗೆ ಸಾಧಿಸು
ಜೀವ ವಿರುವ ವರೆಗೂ ಜಯಿಸು ||

ಕಲ್ಲು ಮುಳ್ಳುಗಳ ದಾರಿ
ಈ ಬಾಳಿನೊಳು ತುಂಬಿಹುದು
ಅವನೆಲ್ಲ ಸರಿಸಿ ಪಕ್ಕಕ್ಕಿಟ್ಟು ನೀ
ಲೋಕದೊಳು ಜಯಗಳಿಸು ||

ಈ ಜೀವನವೊಂದು ಸ್ಪರ್ಧೆ
ಗೆಲುವೊಂದೆ ಬಾಳಿನ ಗುರಿ
ಕೊನೆಯ ಜಯವ ಪಡೆದು ನಿಲ್ಲಲು
ಅತಿಮ ಚರಣದವರೆಗೂ ಸಾಧಿಸು ||

ದುಃಖ ನಿರಾಸೆ ಬಾಳಿನಲಿ
ತುಂಬಿಹುದು ಪ್ರತಿ ಕ್ಷಣದಲಿ
ಅವುಗಳೆಲ್ಲವ ತಾಳುಮೆಯಿಂದ
ಜಯಿಸು ನೀ ಜಗದಲಿ ||

****
(ಈ ಕವಿತೆಯನ್ನು ಬರೆದಿರುವುದು 15-03-2004ರಂದು ದಂಟಕಲ್ಲಿನಲ್ಲಿ)
(11 ವಸಂತಗಳ ಹಿಂದೆ ಬರೆದ ಈ ಕವಿತೆ ನನ್ನ ನನ್ನ ಬರವಣಿಗೆಯ ಪಯಣದ ನಾಲ್ಕನೇ ಕವಿತೆ. ಮೊದಲ ತೊದಲು ಹೀಗಿದೆ ನೋಡಿ)