Monday, July 7, 2014

ಗಣಪಜ್ಜಿಯ ಹಾಡುಗಳು

          ಈಗೊಂದು ಐದಾರು ವರ್ಷಗಳ ಹಿಂದೆ ನಾನು ಹಾಗೂ ಗೆಳೆಯ ಸಂಜಯ ಭಟ್ಟ ಬೆಣ್ಣೆಗದ್ದೆ ಹಳೆಯ ಹವ್ಯಕ ಹಾಡುಗಳನ್ನು ಸಂಗ್ರಹ ಮಾಡುವ ಕಾರ್ಯಕ್ಕಾಗಿ ಶಿರಸಿ-ಸಿದ್ದಾಪುರ ಸೀಮೆಯ ಹಲವಾರು ಹಳ್ಳಿಗಳನ್ನು ಹೊಕ್ಕಿದ್ದೆವು. ಆ ಹಳ್ಳಿಗಳ ಅಥವಾ ನಮಗೆ ಮಾಹಿತಿ ಬಂದ ಹಿರಿಯ ಹವ್ಯಕ ಮಹಿಳೆಯರನ್ನು ಹುಡುಕಿಕೊಂಡು ಹೋಗಿ ಅವರನ್ನು ಹಿಂದೂ ಬಿಡದೇ ಮುಂದೂ ಬಿಡದೆ ಕಾಡಿ, ಬೇಡಿ ಅವರ ಬಳಿಯಿಂದ ಹಳೆಯ ಹವ್ಯಕ ಹಾಡುಗಳನ್ನು ಸಂಗ್ರಹಿಸಿ ಬಂದಿದ್ದೆವು. ನಾವು ಹಾಡನ್ನು ಸಂಗ್ರಹಿಸಲು ತೆರಳಿದ ಬಹುತೇಕರು 80 ವರ್ಷ ವಯಸ್ಸನ್ನು ಮೀರಿದವರು. ಅವರಲ್ಲಿ ಹಲವರು ಹಾಸಿಗೆಯನ್ನು ಹಿಡಿದಿದ್ದರು. ಆ ಅಜ್ಜಿಯರೇ ಹೇಳಿದಂತೆ ಇದುವರೆಗೂ ಹೀಗೆ ಹವ್ಯಕ ಹಾಡುಗಳನ್ನು ಬರೆದುಕೊಳ್ಳುತ್ತೇವೆ ಎಂದು ಬಂದಿದ್ದು ನಾವೇ ಮೊದಲಂತೆ. ನಮಗೆ ಹೆಮ್ಮೆಯಾಗಿತ್ತು. ನನ್ನ ಹರಪೆಗೆ ಸಂಜಯ ಬಂದಿದ್ದ. ಆತನ ಹರಪೆಗೆ ನಾನು ಹೋಗಿದ್ದೆ.
           ಹಲವು ಅಜ್ಜಿಯರು ನಾವು ಬಂದ ಕಾರಣವನ್ನು ತಿಳಿಸಿದಾಗ ಖುಷಿಯಿಂದ ಹಾಡನ್ನು ಹೇಳಲು ತೊಡಗಿಕೊಂಡಿದ್ದರೆ ಮತ್ತೆ ಹಲವರ ಬಳಿ ಹಾಡನ್ನು ಬಾಯಿ ಬಿಡಿಸಲು ನಾವು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಈ ಅಜ್ಜಿಯರಿದ್ದಾರಲ್ಲ ಅವರಷ್ಟು ಕೊಮಣೆ ಮಾಡುವವರು ಇನ್ನೊಬ್ಬರಿಲ್ಲವೇನೋ ಅಂದುಕೊಂಡಿದ್ದೆವು. ಆದರೆ ಅಜ್ಜಿಯರಿಂದ ಆರಂಭದಲ್ಲಿ ಒಂದು ಹಳ್ಳಿ ಹಾಡನ್ನು ಬಾಯಿಬಿಡಿಸುವುದೇ ತಡ. ನೂರಾರು ಹಾಡುಗಳು ಸರ ಸರನೆ ಹೊರಬೀಳುತ್ತಿದ್ದವು. ನಾನು ಹಾಗೂ ಸಂಜಯ ಜಿದ್ದಿಗೆ ಬಿದ್ದಂತೆ ಅವರ ಬಾಯಿಂದ ಬರುತ್ತಿದ್ದ ಹಾಡನ್ನು ಬರೆದುಕೊಳ್ಳುತ್ತಿದ್ದರೂ ಕೈ ಸೋಲುತ್ತಿತ್ತು. ಅಷ್ಟು ಹಾಡುಗಳನ್ನು ಹಾಡುತ್ತಿದ್ದರು.
           ನನ್ನ ಬಳಿ ಅದ್ಯಾರೋ ಕೋಡ್ಸರದ ಗಣಪಜ್ಜಿಯ ವಿಷಯವನ್ನು ಹೇಳಿದ್ದರು. ಆಕೆ ನಮ್ಮ ಭಾಗದಲ್ಲಿ ಅತ್ಯಂತ ಹಿರಿಯ ಮಹಿಳಾ ಜೀವಿ ಎಂದೂ ಹೇಳಿದ್ದರು. ಅಜ್ಜಿಗೆ ಸಾವಿರಾರು ಹಳ್ಳಿ ಹಾಡುಗಳು ಗೊತ್ತಿವೆ. ಅಜ್ಜಿಗೆ ಹುಷಾರಿಲ್ಲ ಹಾಸಿಗೆ ಹಿಡಿದಿದ್ದಾರೆ ಎಂದೂ ಮಾಹಿತಿ ತಿಳಿಸಿದ್ದರು. ಸರಿ ಎಂದುಕೊಂಡು ನಾನು ಸಂಜಯನಿಗೆ ಪೋನಾಯಿಸಿದೆ. ಮರುದಿನವೇ ಬಂದ. ನಾನು, ಸಂಜಯ ಹಾಗೂ ನನ್ನ ತಂದೆಯವರಾದ ಸುಬ್ರಾಯ ಹೆಗಡೆಯವರು ನಮ್ಮೂರಿನಿಂದ ಕೋಡ್ಸರಕ್ಕೆ ನಡೆದುಕೊಂಡು ಅಜ್ಜಿಯನ್ನು ಹುಡುಕಿ ಹೊರಟೆವು. ಮನೆಗೆ ಹೋಗಿ ತಲುಪಿದಾಗ ನನ್ನ ತಂದೆಯವರು `ನನಗೆ ಈ ಮನೆಯವರು ಗೊತ್ತು. ಇವರು ಪರಿಚಯಸ್ಥರು. ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದರು..' ಎಂದು ಮಾಹಿತಿ ನೀಡಿದಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ.
         ಶತಮಾನಗಳಷ್ಟು ಹಳೆಯ ಮನೆ. ಆ ಮನೆಯ ಒಳ ಮೂಲೆಯಲ್ಲಿ ಕತ್ತಲೆಯಲ್ಲಿ ಅಜ್ಜಿ ಕುಳಿತಿದ್ದರು. ಹಾಸಿಗೆಯ ಮೇಲೆ ಮಲಗಿಕೊಂಡಿದ್ದರಿರಬೇಕು. ನಾವು ಬಂದ ವಿಷಯವನ್ನು ಆಕೆಯ ಮಗ ಅವರಿಗೆ ಹೇಳಿದರೂ ಗಣಪಜ್ಜಿಗೆ ಸ್ಪಷ್ಟವಾಗಿರಲಿಲ್ಲ. ಕೊನೆಗೆ ನನ್ನ ತಂದೆಯವರು `ನಾನು ಸುಬ್ರಾಯ, ದಂಟಕಲ್ ಮಂಕಾಳಕ್ಕನ ಮಗ, ಯಲೂಗಾರು ಅಜ್ಜನಮನೆ..' ಎಂದ ತಕ್ಷಣ ಅಜ್ಜಿಗೆ ಹಳೆಯ ನೆನಪುಗಳು ಮರುಕಳಿಸಿತಿರಬೇಕು. ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಗಣಪಜ್ಜಿ ನಾನು ನಿಮ್ಮ ಮನೆಗೆ ಬಂದಿದ್ದೆ ಎಂದರು. ನನ್ನ ಅಜ್ಜಿಯಾದ ಮಂಕಾಳಿ ಕೋಂ ವಿಘ್ನೇಶ್ವರ ಹೆಗಡೆಯವರ ಕುರಿತು ಹಲವಾರು ಸುದ್ದಿಗಳನ್ನು ಹೇಳಿದರು. ಇಂತಹ ಅಜ್ಜಿಗೆ ವಯಸ್ಸಾಗಿತ್ತಲ್ಲದೇ ವಯೋ ಸಹಜ ಕಾರಣದಿಂದ ಹಾಸಿಗೆ ಹಿಡಿದಿದ್ದು ಸಹಜವಾಗಿತ್ತು. ಅಜ್ಜಿಯ ವಳಿ ಈಗಲೇ ಬಂದು ಒಳ್ಳೆಯ ಕೆಲಸವನ್ನೇ ಮಾಡಿದೆವು. ಅಜ್ಜಿಯನ್ನು ನೋಡಿದರೆ ಜಾಸ್ತಿ ವರ್ಷ ಬದುಕಲಾರಳು ಎಂದುಕೊಂಡೆವು. ಆದರೆ ಅಜ್ಜಿಯ ಬಳಿ ಮಾತ್ರ ನಮ್ಮ ಅಸಲಿ ಕಾರಣವನ್ನು ಹೇಳಿದರೆ ಅಜ್ಜಿಗೆ ನಾಚಿಕೊಂಡಳು. ಹಳೆಯ ಹವ್ಯಕ ಹಾಡನ್ನು ಹೇಳಿ ಎಂದರೆ ಗೊತ್ತೇ ಇಲ್ಲ ಎನ್ನುವಂತೆ ಮಾಡಿದಳು. ನಮಗೆ ಒಮ್ಮೆ ಭ್ರಮ ನಿರಸನ.
           `ಸಂಜಯ ಈ ಅಜ್ಜಿಗೆ ಸಿಕ್ಕಾಪಟ್ಟೆ ಹಾಡು ಗೊತ್ತಿದೆ. ನಮ್ಮ ಸಂಗ್ರಹಕ್ಕೆ ಒಳ್ಳೆಯ ಸರಕುಗಳು ಸಿಗಬಹುದು..' ಎಂದು ಬೇರೆ ಹೇಳಿದ್ದೆ. ಸಂಜಯನಿಗೆ ನಾನು ಸುಳ್ಳು ಹೇಳಿದೆ ಎನ್ನುವ ಭಾವವೂ ಕಾಡಿತ್ತಂತೆ.(ಇತ್ತೀಚೆಗೆ ಸಿಕ್ಕಾಗ ಹೇಳಿದ್ದು). ಇವ ಪೊಕಳೆ ಬಿಟ್ಟ. ವಿನಯನನ್ನು ನಂಬಿ ನಾನು ಬಂದೆ ಥತ್... ಎಂದುಕೊಂಡ. ನನಗೋ ಅವಮಾನವಾದಂತಹ ಅನುಭವ. ಅಜ್ಜಿ ಬಾಯಿಬಿಡಲೊಲ್ಲೆ ಎನ್ನುತ್ತಿದ್ದಳು. ಕೊನೆಗೂ ಬಹಳ ಹೊತ್ತಿನ ನಂತರ ಅಜ್ಜಿ ಬಾಯಿಬಿಟ್ಟಳು. ನಮಗೆ ಅದರಲ್ಲೂ ನನಗೆ ಬಹಳ ಖುಷಿಯಾಯಿತು. ಆ ಅಜ್ಜಿ ಕೊನೆ ಕೊನೆಗೆ ಸುಮಾರು 50-60 ಹಾಡನ್ನು ಹೇಳಿರಬೇಕು. ಹಳೆಯಕಾಲದ ಹವ್ಯಕ ಹಾಸ್ಯ ಗೀತೆಗಳನ್ನು ಬಹಳಷ್ಟು ಹೇಳಿದಳು. ಮಾತು ಕೇಳದ ಮಗ, ತುಂಟ ತನ ಮಾಡುವ ಚಿಕ್ಕ ಹುಡುಗರನ್ನು ರಮಿಸುವುದು, ಸೊಕ್ಕಿನ ಸೊಸೆ, ಗಂಗೆ-ಗೌರಿ ಜಗಳ ಹೀಗೆ ಹತ್ತು ಹಲವು. ನಾವು ತೆಗೆದುಕೊಂಡು ಹೋಗಿದ್ದ ಪಟ್ಟಿ ಖಾಲಿಯಾಗಿ ಅವರ ಮನೆಯಲ್ಲಿ ಖಾಲಿ ಹಾಳೆಯನ್ನು ಕಡ ತೆಗೆದುಕೊಳ್ಳುವಷ್ಟು ಹಾಡನ್ನು ಹೇಳಿದಳು.
         ಅಜ್ಜಿಯ ಹಾಡಿನಿಂದ ಮದ್ಯಾಹ್ನ ಊಟವೂ ಅಲ್ಲಿಯೇ ಆಯಿತು. ರಾತ್ರಿಯ ಊಟವನ್ನೂ ಮಾಡಿದೆವು. ರಾತ್ರಿ ಅವರ ಮನೆಯಲ್ಲಿಯೇ ಉಳಿಯುವ ಒತ್ತಾಯವನ್ನು ಮಾಡಿದರಾದರೂ ನಾವು ಒಪ್ಪಲಿಲ್ಲ. ಇಂತಹ ಅಜ್ಜಿ ಹಳ್ಳಿ ಹಾಡಿನ ಜೊತೆಗೆ ಕೆಲವು ಆರೋಗ್ಯದ ಟಿಪ್ಸ್ ಗಳನ್ನೂ ಕೊಟ್ಟಿದ್ದು ವಿಶೇಷವಾಗಿತ್ತು. ನಮ್ಮ ಅದೃಷ್ಟವೋ ಜೊತೆಗೆ ದುರಾದೃಷ್ಟವೋ ಗೊತ್ತಿಲ್ಲ. ನಾವು ಅಲ್ಲಿಗೆ ಹೋಗಿ ಬಹಳಷ್ಟು ಹಾಡನ್ನು ಬರೆದುಕೊಂಡು ಬಂದಿದ್ದೆವು. ಇನ್ನೂ ಬಹಳಷ್ಟು ಹಾಡುಗಳನ್ನು ಬರೆಯುವುದು ಬಾಕಿ ಇತ್ತು. ಇನ್ನೊಂದು ದಿನ ಬರುತ್ತೇವೆ ಎಂದು ಬಂದಿದ್ದೆವು. ನಾವು ಹೋಗಿ ಬಂದ ತಿಂಗಳೊಪ್ಪತ್ತಿನಲ್ಲೇ ಆ ಅಜ್ಜಿ ತೀರಿಕೊಂಡ ಸುದ್ದಿ ಬಂದಿತು. ಓಹ್.. ಆ ಅಜ್ಜಿಯ ಜೊತೆಗೆ ಮರೆಯಾಗುತ್ತಿದ್ದ ಅದೆಷ್ಟೋ ಹಾಡುಗಳನ್ನು ಬರೆದಿಟ್ಟುಕೊಂಡೆವಲ್ಲ ಎನ್ನುವ ಸಮಾಧಾನ ಒಂದುಕಡೆಯಾದರೆ ಇನ್ನೂ ಅದೆಷ್ಟೋ ಹಾಡುಗಳನ್ನು ಬರೆದುಕೊಳ್ಳ ಬಹುದಿತ್ತು. ಆ ರಾತ್ರಿ ನಾವು ಅಲ್ಲಿ ಉಳಿದಿದ್ದರೆ ಮತ್ತಷ್ಟು ಹಾಡುಗಳನ್ನು ಬರೆದುಕೊಳ್ಳಬಹುದಿತ್ತಲ್ಲ.. ಎಷ್ಟೋ ಅಮೂಲ್ಯ ಹಾಡುಗಳು ಮರೆಯಾದವಲ್ಲ ಎನ್ನುವ ಭಾವನೆ ಕಾಡುತ್ತಿದೆ. ಅಜ್ಜಿಯ ಪೋಟೋ ಹೋಡೆದುಕೊಳ್ಳಲು ನಾವು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ನಾಚಿಕೆ ಕೊಟ್ಟೆಯಾದ ಅಜ್ಜಿ ಕೊನೆಗೂ ಪೋಟೋಕ್ಕೆ ನಿಲ್ಲಲಿಲ್ಲ. ನಮಗೆ ಈಗಲೂ `ಬ್ಯಾಡದಾ ತಮಾ.. ಯನ್ನ ಪೋಟೋ ಹೊಡೆಯದು ಬ್ಯಾಡಾ.. ಇಶ್ಶಿ.. ಸರಿ ಕಾಣ್ತಿಲ್ಲೆ.. ಥೋ ಆನು ಮುದುಕಿನಾ..' ಎಂದು ಹೇಳಿದ್ದು ಸದಾ ನೆನಪಾಗುತ್ತಿರುತ್ತದೆ.
             ಆ ಅಜ್ಜಿ ಹೇಳಿದ ಹಾಡುಗಳು ನಿಮ್ಮೆದುರು ಇಡುತ್ತಿದ್ದೇನೆ. ಈ ಹಾಡುಗಳಲ್ಲಿ ಹಲವು ಅಪೂರ್ಣವಾಗಿವೆ. ವಯಸ್ಸಾಗಿದ್ದ ಅಜ್ಜಿ  ಕಷ್ಟಪಟ್ಟು ನೆನಪು ಮಾಡುಕೊಂಡು ಹೇಳುತ್ತಿತ್ತು. ಆಗಾಗ ಅಜ್ಜಿಯ ಹಾಡಿನ ಸಾಲು ತಪ್ಪಿ ಹೋಗುತ್ತಿತ್ತು. ಆದ್ದರಿಂದ ಸಿಕ್ಕಷ್ಟು, ಇಲ್ಲಿಡುತ್ತೇನೆ. ಹಾಡುಗಳು ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ಅದನ್ನು ಪೂರ್ಣಗೊಳಿಸಿ..
**
ಬಾರೋ ಮಗನೆ ಮನಿಗೆ ಇಂದು
ದೂರ ಕೇಳಲಾರೆನಾ,
ನಾವು ನಮ್ಮ ಮನಿಗೆ ಹೋಗಿ
ದೇವರ ಪೂಜೆ ಮಾಡುವಾ..|
ಸಂಪಿಗೆ ವನಕೆ ಹೋಗಿ
ಸಂಪಿಂಗ್ಹೂವ ಕೊಯ್ವನಾ
ಸಂಪಿಗ್ಹೂವ ಕೊಯ್ದು ತಂದು
ದೇವರ ಚರಣಕೆ ಹಾಕ್ವನಾ |
ಬಾರೋ ಮಗನೆ ಮನಿಗೆ ಇಂದು
ದೂರ ಕೇಳಲಾರೆನಾ..
(ಮೊಮ್ಮಗನ ತಂಟೆಯ ಬಗ್ಗೆ ಅಕ್ಕಪಕ್ಕದ ಮನೆಯವರಿಂದ ಅತಿಯಾದ ದೂರುಗಳು ಬರಲಾರಂಭಿಸಿದಾಗ ಅಜ್ಜಿಯರು ರಮಿಸಿ ಕರೆಯುವ ಬಗೆ ಹೀಗಿತ್ತು.)

**
    ಸ್ಥಳದಲ್ಲಿಯೇ ಹಾಡನ್ನು ಹೊಸೆದು ಹಾಡುವ ಸಾಮರ್ಥ್ಯ ಹೊಂದಿದ್ದ ಅಜ್ಜಿ ನಾವು ಅಲ್ಲಿಗೆ ಹೋದಾಗ ಒಂದು ಹಾಡನ್ನು ಹೇಳಿದ್ದು ಹೀಗೆ..
ಅರ್ಧ ರಾತ್ರಿಲಿ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ಸರಗೆ ಕೊಡ್ತಿ ಹೇಳಿದ್ರಿ (ಸರಗೆ=ಆಭರಣ)
ಮನಿಗೆ ಹಾದಿ ಹಿಡಿದಿದ್ರಿ
ಸುಬ್ರಾಯ ಹೆಗಡೆರ ಬೆಡಗೆ
ಸುಬ್ರಾಯ ಹೆಗಡೆರ ಸೊಬಗೆ
ಸಂಜೆ ಹೊತ್ತಿಗೆ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ವಾಲೆ ಹೊತ್ತಿಗೆ ಬಂದಿದ್ರಿ
ಹಾಲು ಅನ್ನ ಉಂಡಿದ್ರಿ
ಸುಬ್ರಾಯ ಹೆಗಡೆರ ಬೆಡಗೇ
ಸುಬ್ರಾಯ ಹೆಗಡೆರ ಸೊಬಗೆ...

**
ಇನ್ನೊಂದು ಮಜವಾದ ಸಾಲುಗಳಿವೆ.. ಆದರೆ ಅರ್ಧಮರ್ಧ ಹೇಳಿದ ಅಜ್ಜಿಗೆ ಪೂರ್ತಿ ನೆನಪಾಗಲಿಲ್ಲ.. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ಎಂಟಕ್ಕೆದ್ದು ಗಂಟೆ ನೋಡಿ
ಗಂಟು ಮೋರೆ ಹಾಕ್ತಾಳ್ರೀ
ಗಂಟಿಗಷ್ಟು ಬುದ್ಧಿ ಇಲ್ಲ
ಎಂದು ನಮ್ಮವ್ವ ಹೇಳ್ತಾಳ್ರೀ..|
ಎಂತಾ ಕಾಲ ಬಂದೋಯ್ತು..
ಇಂತಾ ಕಾಲ ಬಂದದ್ದಿಲ್ಲ
ಎಂದು ನಮ್ಮವ್ವ ಹೇಳ್ತಾಳ್ರೀ..|

**
ತವರು ಮನೆಯಿಂದ ಗಂಡನ ಮನೆಗೆ ಹೊರಟ ಮಗಳ ಬಳಿ ತಾಯಿ ಕೆಲವು ಮಜಾ ಸಂಗತಿಗಳನ್ನು ಹೇಳಿಕೊಡುತ್ತಾಳೆ. ಕೆಲಸದ ಶ್ರಮ ತಪ್ಪಿಕೊಳ್ಳಲೋಸುಗ ಆಕೆ ಹೇಳುವ ಪಾಟ ಮಜವಾಗಿದೆ.  ಓದಿ ನೋಡಿ.. ಹಾಡು ಅಪೂರ್ಣವಾಗಿದೆ.. ಪೂರ್ತಿ ಗೊತ್ತಿದ್ದವರು ತಿಳಿಸಬಹುದು..

ಬೆಳಗು ಮುಂಜಾಮದಿ
ಏಳಕ್ಕೆದ್ದು ಚಹಾ ಆಯಿತೆ
ಎಂದೇ ಕೇಳು
ಬುದ್ದಿಯ ಮಾತ ಹೇಳುವೆ ನಿನಗೆ
ಸದ್ದಿಲ್ಲದೆ ನೀ ಕೇಳು|

ತೆಳ್ಳನೆ ಸೀರೆ ಒಳ್ಳೆಯ ಶೋಭೆ
ಗಂಡನ ಮನೆಯಲಿ ಪಡೆ ಮಗಳೆ
ಹೊಟೆಲಿನಿಂದ ಊಟಕೆ ತರಿಸಿ
ಅಡುಗೆಯ ಕಾಟವ ತಪ್ಪಿಸಿಕೊ..|

(ಈ ಹಾಡಿನಲ್ಲಿ ಸೂಕ್ಷ್ಮವಾಗಿ ಇರುವ ಪೋಲಿ ಶಬ್ದಗಳನ್ನು ಗಮನಿಸಿ.. ತೆಳ್ಳನೆ ಸೀರೆಯಲ್ಲಿ ಮೈ ಕಾಣುವಂತಿರಬೇಕು ಎನ್ನುವ ಮಾತನ್ನು ತಾಯಿ ಮಗಳಿಗೆ ಹೇಳುತ್ತಾಳೆ. ಗಂಡ ನಿನ್ನ ಬಳಿಯೇ ಗಮನ ಇರಿಸುತ್ತಾನೆ ಎಂದೂ ಹೇಳುತ್ತಾಳೆ.)(ಈ ಹಾಡು ಪೂರ್ತಿಯಾಗಿ ಸಿಕ್ಕರೆ ಇನ್ನೆಷ್ಟು ಮಜವಾಗಿರುತ್ತಿತ್ತೋ.. ಛೇ..)

(ಮುಂದಿನ ಕಂತಿನಲ್ಲಿ ಇನ್ನಷ್ಟು ಹಾಡುಗಳು ಕೊಡುತ್ತೇನೆ... ಗಣಪಜ್ಜಿ ಮರಳಲಿದ್ದಾಳೆ.. ಕಾಯಬೇಕಿದೆ..)

Sunday, July 6, 2014

ಮಾನವನ ಎತ್ತರ

ಎತ್ತರದ ಸಹ್ಯಾದ್ರಿ
ಉತ್ತರದ ಹಿಮಾಲಯ
ಇವು ಅದೆಷ್ಟು ಎತ್ತರ..?
ಬಾನಲ್ಲಿ ನೆಲೆಯಿಲ್ಲದೇ
ಕ್ಷಣಕ್ಷಣಕ್ಕೂ ಓಡುತ್ತಿರುವ
ಮೋಡಗಳೆಷ್ಟು ಎತ್ತರ..?
ನಾನೂ ಇರುವೆ
ಈ ಭೂಮಿಯ ಮೇಲೆ
ನಿಷ್ಪ್ರಯೋಜಕ ಚಿಕ್ಕ ಹುಲುಮಾನವ..||

ನಾನೇರಬಲ್ಲೆನೆ
ಬಹಳ ಎತ್ತರ..?
ನಾಮೀರ ಬಲ್ಲೆನೆ
ಎತ್ತರಕ್ಕಿಂತ ಎತ್ತರ..?
ಬಹುಷಃ ಇಲ್ಲವೇ ಇಲ್ಲ.|
ಎತ್ತರಕ್ಕೇರಲು ಸಾಧ್ಯವೇ ಇಲ್ಲ ||

ಕಾರಣ ನಾನು
ಕೇವಲ ಮಾನವ |
ಅಪೂರ್ಣ ಮಾನವ ||

**
(ಈ ಕವಿತೆಯನ್ನು ಬರೆದಿರುವುದು 14-01-2006ರಂದು ದಂಟಕಲ್ಲಿನಲ್ಲಿ)

Saturday, July 5, 2014

ಬೆಂಗಳೂರು ಬೈಟ್ಸ್..

(ರಾತ್ರಿ ವೇಳೆ ಬೆಂಗಳೂರು ಜಗಮಗ)
ಘಟನೆ-1
      ನಾನು ಬೆಂಗಳೂರಿಗೆ ಬಂದ ಹೊಸತು. ಉದ್ಯೋಗಕ್ಕಾಗಿ ಬೆಂಗಳೂರನ್ನು ಅಲೆಯುತ್ತಿದ್ದೆ. ಓದಿದ್ದು ಜರ್ನಲಿಸಂ ಆದರೂ ಹೋದ ತಕ್ಷಣ ಜಾಬ್ ಸಿಕ್ಕಿಬಿಡುತ್ತದೆಯೇ? ಎಲ್ಲ ಪೇಪರ್ ಹಾಗೂ ಟಿ.ವಿ. ಆಫೀಸುಗಳ ಅಡ್ರೆಸ್ ಡೌನ್ ಲೋಡ್ ಮಾಡಿಕೊಂಡು ಎಲ್ಲ ಆಫೀಸುಗಳಿಗೂ ರೆಸ್ಯೂಂ ಕೊಟ್ಟು ಬರುತ್ತಿದ್ದೆ. ಬಂದ ಆರಂಭದಲ್ಲಿ ನಾನು ಉಳಿದುಕೊಂಡಿದ್ದು ನನ್ನ ದೊಡ್ಡಮ್ಮನ ಮಗ ಗುರುಪ್ರಸಾದನ ಮನೆಯಲ್ಲಿ. ಆತ ಮನೆ ಮಾಡಿದ್ದೋ ಪೀಣ್ಯದ ಒಳಗಿರುವ ತಿಗಳರ ಪಾಳ್ಯದಲ್ಲಿ. ಮೆಜೆಸ್ಟಿಕ್ಕಿನಿಂದ ಅನಾಮತ್ತು 16-18 ಕಿ.ಮಿ ದೂರ. ನಾನು ಪೀಣ್ಯಕ್ಕೆ ಬಂದು, ಅಲ್ಲಿಂದ ಜಾಲಳ್ಳಿ ಕ್ರಾಸ್ ಮಾರ್ಗವಾಗಿ ಮೆಜೆಸ್ಟಿಕ್ಕೋ ಅಥವಾ ಇನ್ಯಾವುದೋ ಸ್ಥಳಕ್ಕೆ ಹೋಗುತ್ತಿದ್ದೆ. ನನಗೆ ಅಪ್ಪಿತಪ್ಪಿಯೂ ಸುಂಕದಕಟ್ಟೆ ಮೂಲಕ ಪೀಣ್ಯಕ್ಕೆ ಬರಲು ಇನ್ನೊಂದು ಮಾರ್ಗವಿದೆ ಎನ್ನುವುದು ಗೊತ್ತಿಲ್ಲ. ಒಂದು ದಿನ ಯಾವುದೋ ಆಫೀಸಿಗೆ ಹೋದವನು ಗುರಣ್ಣನ ಮನೆಗೆ ಮರಳುತ್ತಿದ್ದೆ. ಬಂದಿದ್ದು ಕೆ. ಆರ್. ಮಾರ್ಕೇಟಿಗೆ. ಅಲ್ಲಿ ಪೀಣ್ಯ 2 ಸ್ಟೇಜ್ ಬಸ್ಸು ಕಂಡಿತು ಹತ್ತಿ ಕುಳಿತೇಬಿಟ್ಟೆ. ಆ ಬಸ್ಸು ಮೈಸೂರು ರೋಡು, ಅಲ್ಲಿ ಇಲ್ಲಿ ಅಂತ ಸುತ್ತಾಡಿಕೊಂಡು ಸುಮ್ಮನಳ್ಳಿ ಸರ್ಕಲ್ ದಾಟಿ ಬಂದಿತು. ನನಗೆ ಜಾಲಹಳ್ಳಿ ಕ್ರಾಸ್ ರಸ್ತೆ ಬಿಟ್ಟರೆ ಬೇರೆ ಗೊತ್ತಿಲ್ಲದ ಕಾರಣ ಎಲ್ಲೋ ಬಂದು ಬಿಟ್ಟೆನಲ್ಲ ಎಂದುಕೊಂಡೆ. ಕಂಡಕ್ಟರ್ ನನ್ನು ಕೇಳಲು ಮರ್ಯಾದಿ. ಸುಮ್ಮನೆ ಕುಳಿತಿರುವುದನ್ನು ಬಿಟ್ಟು ಸುಂಕದ ಕಟ್ಟೆಯಲ್ಲಿ ಇಳಿದೆ. ಇನ್ನೇನು ಮಾಡುವುದು? ಮತ್ತೆ ಅಲ್ಲಿ ಮೆಜೆಸ್ಟಿಕ್ಕಿಗೆ ಹೋಗುವ ಬಸ್ಸನ್ನು ಹತ್ತಿ ಅಲ್ಲಿಂದ ಜಾಲಹಳ್ಳಿ ಕ್ರಾಸ್ ಮೂಲಕ ಪೀಣ್ಯಕ್ಕೆ ಹೋದೆ. ಆ ದಿನ ಮಾತ್ರ ನಾನು ಕೊಂಕಣವನ್ನು ಸುತ್ತಿ ಸುತ್ತಿ ಮೈಲಾರಕ್ಕೆ ಬಂದ ಅನುಭವ. ಪುಣ್ಯಕ್ಕೆ ಡೈಲಿ ಪಾಸ್ ಇದ್ದ ಕಾರಣ ದುಡ್ಡಿಗೆ ಚಕ್ರ ಬೀಳಲಿಲ್ಲ ಅನ್ನಿ. ಈಗಲೂ ಬೆಂಗಳೂರು ಅಂದ ತಕ್ಷಣ ಈ ಘಟನೆ ನೆನಪಾಗುತ್ತಿರುತ್ತದೆ.

ಘಟನೆ -2
       ಬೆಂಗಳೂರಿಗೆ ಹೋದ ಮೊದ ಮೊದಲಲ್ಲಿ ನನ್ನ ಹನೆ ಬರಹವೋ ಅಥವಾ ನಾನು ಅರ್ಜೆಂಟು ಮಾಡಿಕೊಳ್ಳುವುದು ಜಾಸ್ತಿಯೋ ಕಾರಣಗಳು ಗೊತ್ತಿಲ್ಲ. ನೋಡದೇ ಮಾಡದೇ ಬಸ್ಸು ಹತ್ತುವುದಕ್ಕೇನೋ ಎಲ್ಲ ಬಸ್ಸುಗಳೂ ನನ್ನನ್ನು ಕೆ. ಆರ್. ಮಾರ್ಕೇಟಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದವು. ನಾನು ಬಹಳಷ್ಟು ಸಾರಿ ಪ್ರಯತ್ನಿಸಿದರೂ ಮೆಜೆಸ್ಟಿಕ್ಕಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಬಸ್ಸು ಮಾರ್ಕೇಟಿಗೆ ಒಯ್ದು ನನ್ನನ್ನು ಬಿಡುತ್ತಿತ್ತು. ಇಲ್ಲೂ ಸಹ ಬೇರೆಯವರನ್ನು ಕೇಳಲು ಮುಜುಗರ ಪಟ್ಟುಕೊಂಡ ನಾನು ಪದ್ಮನಾಭ ನಗರಕ್ಕೆ ಹೋಗುವ ಒಂದು ಬಸ್ಸನ್ನು ಹತ್ತಿ ಕುಳಿತೆ. ಅಲ್ಲಿಗೆ ಹೋಗಿ ಅಲ್ಲಿಂದ ಮೆಜೆಸ್ಟಿಕ್ ಬೋರ್ಡು ಕಾಣುವ ಬಸ್ಸನ್ನು ಹತ್ತಿ ವಾಪಾಸು ಬರುವುದು ನನ್ನ ಐಡಿಯಾ. ಸರಿ ಬಸ್ಸು ಸೀದಾ ಪದ್ಮನಾಭ ನಗರಕ್ಕೆ ಹೋಯಿತು. ಅಲ್ಲಿ ಇಳಿದೆ. ಇಳಿದವನೇ ಎದುರಿಗೆ ಯಾವುದೋ ಬಸ್ಸು ಹೋಗುತ್ತಿತ್ತು ಬೋರ್ಡು ನೋಡಿದೆ. `ಕೆಂ.ಬ.ನಿ.' ಅಂತ ಇತ್ತು. ಓಡಿ ಬಂದು ಹತ್ತಲು ಯತ್ನಿಸಿದೆ ಆಗಲಿಲ್ಲ. ಕೊನೆಗೆ ಕೆಂ.ಬ.ನಿ.ಯನ್ನು ಬಾಯಲ್ಲಿ ಉರು ಹೊಡೆದುಕೊಂಡೆ. ಮುಂದೊಂದು ಬಸ್ ಬಂತು. ಆಗ ನನಗೆ ಮೆಜೆಸ್ಟಿಕ್ ನೆನಪಾಗಲಿಲ್ಲ. ಬದಲಾಗಿ `ಕೆಂ.ಬ.ನಿ. ಗೆ ಹೋಗುತ್ತಾ ಸಾರ್..'  ಎಂದು ಕಂಡಕ್ಟರ್ ಬಳಿ ಕೇಳಿದೆ. ಆತ ನನ್ನನ್ನು ಫುಲ್ ವೀಕ್ಷಣೆ ಮಾಡಿ ಸುಮ್ಮನಾದ. ನಾನು ಮತ್ತೆ ಕೇಳಿದೆ. ಆತ ಹಂಗಂದ್ರೆ ಯಾವುದು? ಎಲ್ಲಿ ಬರುತ್ತೆ ಅಂದ. ಥತ್... ಕೆಂ.ಬ.ನಿ. ಹೋಗೋದು ಹೆಂಗಪ್ಪಾ ಎಂದುಕೊಂಡೆ. ಕೊನೆಗೆ ಅದ್ಯಾವುದೋ ಬಸ್ಸಿಗೆ ಮೆಜೆಸ್ಟಿಕ್ ಅಂತ ಬೋರ್ಡಿತ್ತು. ಅದನ್ನು ಹತ್ತಿ ಬರುವ ವೇಳೆಗೆ ಕೆಂಬನಿ ಕಣ್ಣಲ್ಲಿ ಕಂಬನಿ ತರಿಸುವುದೊಂದು ಬಾಕಿ

ಘಟನೆ-3
         ಕೆಲಸಕ್ಕೆ ಸೇರಿ ಒಂದೆರಡು ತಿಂಗಳಾಗಿತ್ತೇನೋ. ರಾತ್ರಿ ಆಫೀಸು ಮುಗಿಸಿಕೊಂಡು ರೂಮಿಗೆ ಬರಬೇಕು. ರೂಮಿದ್ದುದು ಹೆರೋಹಳ್ಳಿಯಲ್ಲಿ. 11 ಗಂಟೆಯ ನಂತರ ಮೆಜೆಸ್ಟಿಕ್ಕಿಗೆ ಬಂದರೆ ಅಲ್ಲಿಂದ ಹೆರೋಹಳ್ಳಿ ಮಾರ್ಗದಲ್ಲಿ ತೆರಳುವ ಬಸ್ಸುಗಳೇ ಇರುತ್ತಿರಲಿಲ್ಲ. ಕೊನೆಗೆ ವಿಜಯನಗರ ಬಸ್ಸಿಗೆ ಹೋಗಿ ಟೋಲ್ ಗೇಟಿನಲ್ಲಿ ಇಳಿದು ಮಾರ್ಕೇಟ್ ಕಡೆಯಿಂದ ಬರುವ ಬಸ್ಸಿಗೆ ಹತ್ತಬೇಕಿತ್ತು. ಹತ್ತಿ ಹೋದೆ. ಅದ್ಯಾವುದೋ ಪುಣ್ಯಾತ್ಮ ಸುಂಕದಕಟ್ಟೆಯಿಂದ ಹೆರೋಹಳ್ಳಿ ವರೆಗೆ ಬೈಕಿನಲ್ಲಿ ನನ್ನನ್ನು ಕರೆದುಕೊಂಡು ಹೋದ. ಹೆರೋಹಳ್ಳಿಯ ಬಸ್ ಸ್ಟಾಪ್ ಬಳಿ ಇಳಿದು ನೂರು ಮೀಟರ್ ದೂರಕ್ಕೆ ಸಾಗಿದರೆ ನಮ್ಮ ರೂಂ. ರೂಮೆಂದರೆ ರೂಮಲ್ಲ. ಅದೊಂದು ಔಟ್ ಹೌಸ್ ಎನ್ನಬಹುದು. ದೊಡ್ಡದೊಂದು ಕಂಪೌಂಡು. ಕಂಪೌಂಡಿನ ಸುತ್ತಮುತ್ತ ಹಲಸು, ಹುಣಸೆ ಮರಗಳು. ನಮ್ಮ ಓನರ್ ಶಿವಣ್ಣ ದೂರದ ಸಂಬಂಧಿ. ನಮ್ಮ ಕಂಪೌಂಡಿನೊಳಗೆ ಶಿವಣ್ಣ ಬಾಳೆಗಿಡಗಳು ಹಾಗೂ ಹಲಸಿನ ಮರಗಳನ್ನು ಬೆಳೆದಿದ್ದ. ಇದರಿಂದಾಗಿ ಸಹಜವಾಗಿಯೇ ಆ ಮನೆಗೆ ಒಂದು ಭೀತಿ ಆವರಿಸಿಕೊಂಡಿತ್ತು. ನಾನು ಬೈಕಿಳಿದು ರೂಮಿನ ಕಡೆಗೆ ಬರುತ್ತಿದ್ದೆ.  ಪಲ್ಸರ್ ಬೈಕಿನಲ್ಲಿ ಮೂವರು ಬಂದರು. ಬಂದವರೇ ನನ್ನ ಬಳಿ `ಹೇರೋಹಳ್ಳಿಗೆ ಹೋಗೋದು ಹೇಗೆ ಸಾ..' ಎಂದರು. ನಾನು ದೋಸ್ತರಿಗೆ, ಗೆಳತಿಯರಿಗೆಲ್ಲ ಮೆಸೇಜ್ ಮಾಡುತ್ತ ಬರುತ್ತಿದ್ದವನು ಇದೇ ಹೇರೋಹಳ್ಳಿ ಎಂದೆ. ಹೌದಾ ಎಂದರು. ಕೊನೆಗೆ ಆಂದ್ರಹಳ್ಳಿ ಹೇಗೆ ಎಂದರು. ಅವರು ಬಂದಿದ್ದು ಆಂದ್ರಹಳ್ಳಿ ಕಡೆಯಿಂದ ಎನ್ನುವುದು ಸ್ಪಷ್ಟವಾಗಿತ್ತು. ನನಗೆ ಅನುಮಾನವಾಗಿ ನಾನು ಅವರನ್ನು ನೋಡುತ್ತಿದ್ದಂತೆಯೇ ಬೈಕಿನಿಂದ ಇಳಿದ ಇಬ್ಬರಲ್ಲಿ ಒಬ್ಬಾತ ಬಂದು ನನ್ನನ್ನು ಹಿಂದಿನಿಂದ ಹಿಡಿದುಕೊಂಡ. ಒಬ್ಬಾತ ಮುಂದೆ ಬಂದ. ನನಗೆ ಗಾಭರಿ, ಭಯ. ಎಲ್ಲೋ ಸಿಕ್ಕಿ ಹಾಕಿಕೊಂಡೆನಲ್ಲ ಅಂತ. ರೂಮಿನಲ್ಲಿ ದೋಸ್ತ ಕಮಲಾಕರನಿದ್ದ. ಕೂಗಿದೆ. ಕೇಳಿಸಲಿಲ್ಲವೇನೋ. ಅವರು ನನ್ನನ್ನು ಹಿಡಿದುಕೊಂಡಿದ್ದರು. ಹೈಸ್ಕೂಲಿಗೆ ಹೋಗುವಾಗ ಗುರಣ್ಣನ ಒತ್ತಾಯಕ್ಕೆ ಮಣಿದು ಕುಂಗ್ ಫು ಕ್ಲಾಸಿಗೆ ಹೋಗಿದ್ದೆ. ಹಾಳಾದ್ದು ಇವರು ನನ್ನನ್ನು ಹಿಡಿದುಕೊಂಡಿದ್ದಾಗ ಕುಂಗ್ ಫು ನೆನಪಾಗಲೇ ಇಲ್ಲ. ಹಿಡಿದುಕೊಂಡು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ನಾನು ಫುಲ್ ಕೊಸರಾಡಿದೆ. ಕೊಸರಾಡಿದ ಹೊಡೆತಕ್ಕೆ ನನ್ನ ಸೊಂಟದಲ್ಲಿದ್ದ ಬೆಲ್ಟು ಕಿತ್ತು ಬಂದಿತು. ಆತ ಬೆಲ್ಟನ್ನು ಹಿಒಡಿದುಕೊಂಡಿದ್ದ. ತಕ್ಷಣವೇ ನಾನು ಬ್ಯಾಗನ್ನು ಎಸೆದು ಓಡಿದೆ ಓಡಿದೆ.. ಓಡಿಯೇ ಓಡಿದೆ. ಬೈಕಿನ ಮೇಲೆ ಹಿಂಬಾಲಿಸಿ ಬರಲು ಯತ್ನಿಸಿದರು. ಅಷ್ಟರಲ್ಲಿ ಯಾವುದೋ ಬೈಕು ಬಂದ ಕಾರಣ ಅವರು ವಾಪಾಸಾದರು. ಮತ್ತೂ ಹದಿನೈದು ನಿಮಿಷದ ನಂತರ ನಾನು ಸುಧಾರಿಸಿಕೊಂಡು ವಾಪಾಸು ಬಂದು ನಿಧಾನಕ್ಕೆ ಯಾರಾದರೂ ಇದ್ದಾರಾ ಎಂದು ನೋಡಿಕೊಂಡು ರೂಪಿನೊಳಗೆ ಹೋದರೆ ಕಮಲಾಕರ ಜಸ್ಟ್ ಎದ್ದು ಕುಳಿತುಕೊಂಡಿದ್ದ. ನಾನು ಗಾಬರಿಯಾಗಿದ್ದನ್ನು ನೋಡಿ `ಎಂತಾ ಆತಲೆ..' ಎಂದ. ನಾನು ಹೇಳಿದೆ. `ಹೌದಾ.. ನಂಗೆ ಏನೋ ಧ್ವನಿ ಕೇಳಿಸಿತ್ತು. ಆದರೆ ಏನೋ ಎಲ್ಲೋ ಇರಬೇಕು ಎಂದುಕೊಂಡು ಸುಮ್ಮನೆ ಇದ್ದೆ..' ಎಂದ. ತಲೆ ರಿಮ್ಮೆಂದಿತು.
      ನನಗೆ ಈಗಲೂ ಅವರು ಯಾಕೆ ನನ್ನ ಮೇಲೆ ದಾಳಿ ಮಾಡಿದ್ದರು ಅರ್ಥವಾಗಿಲ್ಲ. ಕೈಯಲ್ಲಿದ್ದ ಮೊಬೈಲಿಗೋ ಅಥವಾ ನನ್ನ ಬಳಿ ದುಡ್ಡಿದೆ ಎಂದೋ ದಾಳಿ ಮಾಡಿದ್ದರೇನೋ. ಫುಲ್ ಟೈಟಾಗಿದ್ದರು. ಆದರೆ ದೇವರು ದೊಡ್ಡವನು ನಾನು ಬಚಾವಾಗಿದ್ದೆ. ಬೆಂಗಳೂರೆಂಬ ನಗರಿ ನೆನಪಾದಾಗ ಈ ಘಟನೆಯೂ ನನ್ನನ್ನು ಕಾಡುತ್ತಲೇ ಇರುತ್ತದೆ.

ಘಟನೆ-4
        ನಾನು ಇದ್ದ ರೂಮಿನ ಬಗ್ಗೆ ಮೇಲೆ ತಿಳಿಸಿದೆನಲ್ಲ. ಅದಕ್ಕೆ ಏಳಡಿಯ ದೊಡ್ಡ ಕಂಪೌಂಡು.  ಅದರೊಳಗೆ ಎರಡು ರೂಮುಗಳ ಮನೆ. ಕನಿಷ್ಟ 8 ಜನ ಆರಾಮಾಗಿ ಉಳಿಯುವಂತಹದ್ದು. ಆ ಕಂಪೌಂಡಿನೊಳಗೆ ನಾವು ಕ್ರಿಕೆಟ್ ಆಡುತ್ತಿದ್ದೆವು. ಅಷ್ಟು ದೊಡ್ಡದಿತ್ತು ಕಂಪೌಂಡ್ ಒಳಗೆ ಜಾಗ. ಅದರೊಳಗೆ ಬಾಳೆ ಗಿಡಗಳಿದ್ದವು, ಸೀತಾಫಲ, ಹಲಸಿನ ಗಿಡಗಳೂ ಇದ್ದವು. ವೆನಿಲ್ಲಾವನ್ನೂ ಹಾಕಿದ್ದರು ನಮ್ಮ ಓನರ್ ಶಿವಣ್ಣ. ನಾನು, ಕಮಲಾಕರ, ರಾಘವ, ಮೋಹನ, ಕಿಟ್ಟು ಅಲ್ಲಿ ಮೊದಲಿಗೆ ಉಳಿದುಕೊಂಡಿದ್ದೆವಾದರೂ ಕೊನೆಯಲ್ಲಿ ನಾನು ಹಾಗೂ ಕಮಲಾಕರ ಇಬ್ಬರೇ ಉಳಿಯುವಂತಾಗಿತ್ತು. ವೆನಿಲ್ಲಾ, ಸೀತಾಫಲ, ಹಲಸಿನ ಫಸಲನ್ನು ನೋಡಿಕೊಂಡು ಉಳಿಯುವ ಕರಾರಿನ ಮೇರೆಗೆ ಶಿವಣ್ಣನ ಔಟ್ ಹೌಸಿನಲ್ಲಿ ಉಳಿದಿದ್ದ ನಾವು ಅದಕ್ಕೆ ಪ್ರತಿಯಾಗಿ ಯಾವುದೇ ಬಾಡಿಗೆಯನ್ನು ನೀಡುತ್ತಿರಲಿಲ್ಲ. ನಮ್ಮ ವಟ್ ಹೌಸಿನ ಪಕ್ಕದ ಫಾರ್ಮ್ ಹೌಸಿನಲ್ಲಿದ್ದ ತಿಪ್ಪೇಶನ ಮನೆಯ ಬಾವಿಯಿಂದ ಹೇರಳ ನೀರು ಸಿಗುತ್ತಿತ್ತು. ತಿಂಗಳಿಗೆ 50 ರು. ದರ ನಿಗದಿ ಮಾಡಿದ್ದ. ಆತನಿಗೆ ಮಸ್ಕಾ ಹೊಡೆದು ಎರಡು ತಿಂಗಳಿಗೆ 50 ರು. ಕೊಟ್ಟು ನಾವು ನೀರು ಬಿಡಿಸಿಕೊಳ್ಳುತ್ತಿದ್ದೆವು. ಬೆಂಗಳೂರು ನಗರಿ ಬೆಳೆಯುತ್ತಿದ್ದ ಸ್ಥಳ ನಾವಿದ್ದ ಏರಿಯಾ ಎಂದರೂ ತಪ್ಪಿಲ್ಲ. ಅರ್ಧಮರ್ಧ ಕಾಲಿ ಜಾಗಗಳಿದ್ದವು. ಹೆಚ್ಚಿನವು ಸೈಟುಗಳಾಗಿದ್ದವು. ನಮ್ಮ ರೂಮಿನ ಬಳಿ ಒಬ್ಬ ವಯಸ್ಸಾದ ವ್ಯಕ್ತಿ ಬರುತ್ತಿದ್ದರು. ಅವರಿಗೆ ನಾವು ತಾತಪ್ಪ ಎಂದು ಕರೆಯುತ್ತಿದ್ದೆವು. ಅವರು ಬರುತ್ತಿದ್ದುದು ಎಲ್ಲೋ ಖಾಲಿ ಎಸ್ಟೇಟನ್ನು ನೋಡಿ ಟಾಯ್ಲೆಟ್ ಮಾಡುವುದಕ್ಕಾಗಿ. ಬಂದವರು ಅಪರೂಪಕ್ಕೊಮ್ಮೆ ನಮ್ಮ ಬಳಿ ಮಾತನಾಡುತ್ತಿದ್ದರು. ಉದ್ದಕ್ಕೆ ಕಪ್ಪಗಿದ್ದ ಆತನ ದೇಹದಲ್ಲಿ ತಲೆಗೂದಲು ಹಾಗು ಕುರುಚಲು ಗಡ್ಡ ಇವಷ್ಟೇ ಬೆಳ್ಳಗಿದ್ದವು. ತಮಿಳು ಮೂಲದವನಿರಬೇಕು. ಒಂದಿನ ಬಂದವನೇ ನಮ್ಮ ಕಂಪೌಂಡಿನಲ್ಲಿ ಬಿಟ್ಟಿದ್ದ ಹಲಸಿನ ಹಣ್ಣನ್ನು ಕೊಡಲು ಸಾಧ್ಯವೇ ಎಂದು ಕೇಳಿದ. ನಾನು ಕೊಡಲು ಒಪ್ಪಲಿಲ್ಲ. ಎರಡು ಮೂರು ದಿನಗಳ ಕಾಲ ಪದೇ ಪದೆ ಕೇಳಿದ. ನಾನು ಶಿವಣ್ಣನನ್ನು ಕೇಳಿ ಕೊಡಬೇಕು ಎನ್ನುತ್ತಲೇ ಇದ್ದೆ. ಕೊನೆಗೊಮ್ಮೆ ರಾತ್ರಿಯ ವೇಳೆ ಆ ತಾತಪ್ಪ ಹಲಸಿನ ಹಣ್ಣನ್ನು ಕದ್ದೊಯ್ಯಲು ಕಂಪೌಂಡ್ ಜಿಗಿದು ಬಂದಿದ್ದ. ಕಮಲಾಕರನ ಬಳಿ ಸಿಕ್ಕಿ ಹಾಕಿಕೊಮಡು ಬಿಟ್ಟ. ಕಮಲಾಕರ ದೊಡ್ಡ ರಾಡನ್ನು ಎತ್ತಿಕೊಂಡು ಹೊಡೆಯುವುದೊಂದು ಬಾಕಿ ಇತ್ತು. ಕೊನೆಗೆ ಆ ತಾತಪ್ಪ ಹೇಳಿದ್ದಿಷ್ಟು `ಈ ಜಮೀನೆಲ್ಲಾ ನಂದೇ ಆಗಿತ್ರೀ.. ಈಗ ಹತ್ತು ವರ್ಷಗಳ ಹಿಂದೆ ಇವನ್ನೆಲ್ಲ ಮಾರಾಟ ಮಾಡಿಬಿಟ್ಟೆ. ನಿಮ್ ಓನರ್ರು ನನ್ನ ಬಳಿ ತೆಗೆದುಕೊಂಡಿದ್ದು ಈ ಜಮೀನನ್ನು. ಪಕ್ಕದ ತಿಪ್ಪೇಶಿ ಇರುವ ಜಮೀನೂ ನನ್ನದೇ ಆಗಿತ್ತು. ಆರು ಎಕರೆ ಜಮೀನಿತ್ತು ನಂದು. ಈಗ ಏನೂ ಇಲ್ಲ. ಸ್ಲಮ್ ಏರಿಯಾದಲ್ಲಿ ಮಲಗಿಕೊಳ್ತಾ ಇದ್ದೀನಿ. ಈ ಜಮೀನು ನೋಡಿದಾಗೆಲ್ಲ ನನ್ನ ಹೊಟ್ಟೆಯಲ್ಲಿ ಬೆಂಕಿ ಹಾಕಿದ ಹಂಗಾಗ್ತದ್ರೀ. ಈ ಹಲಸಿನ ಹಣ್ಣನ್ನು ನನಗೆ ಕೊಡೋದಿಲ್ಲ ಅಂತ ನೀವು ಹೇಳ್ತೀರಿ. ಆದರೆ ಈ ಹಲಸಿನ ಗಿಡ ನೆಟ್ಟಿದ್ದು ನಾನೇ. ಆದರೆ ಅದನ್ನು ಈಗ ನಾನು ಕೊಯ್ಯುವ ಹಂಗಿಲ್ಲ.. ಛೇ..' ಎಂದುಕೊಂಡು ಹಲುಬಿದ. ಒಂದಾನೊಂದು ಕಾಲದಲ್ಲಿ ಜಮೀನಿನ ಒಡೆಯನಾಗಿದ್ದಾತ ತಕ್ಷಣಕ್ಕೆ ದುಡ್ಡು ಬರ್ತದೆ ಎನ್ನುವ ಕಾರಣಕ್ಕಾಗಿ ಇದ್ದ ಬದ್ದ ಜಮೀನನ್ನು ಮಾರಾಟ ಮಾಡಿ ಬಕ್ಕಾ ಬಾರಲು ಬಿದ್ದದ್ದ. ಆತನ ಬದುಕು ಮುಂಡಾಮೋಚಿತ್ತು. ಆತನ ಹಿಂದಿನ ಬದುಕಿಗೂ ಈಗಿನ ಬದುಕಿಗೂ ತಾಳೆ ಹಾಕಿ ನೋಡಲು ಪ್ರಯತ್ನಿಸಿದೆ. ನನ್ನ ಅರಿವಿಗೆ ನಿಲುಕಲಿಲ್ಲ. ಹಾಳಾಗಿ ಹೋಗು ಎಂದು ಒಂದು ಹಲಸಿನ ಹಣ್ಣನ್ನು ಕೊಟ್ಟು ಮತ್ತೆ ಇತ್ತ ಕಡೆ ಬರಬೇಡ ಎಂದು ತಾಕೀತು ಮಾಡಿ ಕಳಿಸಿದ್ವಿ.
          `ಮರುದಿನ ಮತ್ತೊಂದು ಹಲಸಿನ ಕಾಯಿ ಮರದಿಂದ ಕಾಣೆಯಾಗಿತ್ತು.'

ಘಟನೆ-5
        ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿದ ಹೊಸತು. ಆ ಆಫೀಸಿದ್ದ ಜಾಗ ರಿಚ್ ಮಂಡ್ ಟೌನ್. ಬೆಂಗಳೂರಿನ ಶ್ರೀಮಂತ ಸ್ಥಳಗಳಲ್ಲಿ ಅದೊಂದು. ಎತ್ತ ನೋಡಿದರತ್ತ ದೊಡ್ಡ ದೊಡ್ಡ ಬಿಲ್ಡಿಂಗುಗಳು. ಒಂದು ಭಾಗದಲ್ಲಿ ದಿ ಪೆವಿಲಿಯನ್ ಹೊಟೆಲ್ಲು, ಇನ್ನೊಂದು ಕಡೆಯಲ್ಲಿ ದಿವಾಕರ ಭವನ, ಮತ್ತೊದಂದು ಕಡೆಯಲ್ಲಿ ದೊಡ್ಡದೊಂದು ಆರ್ಕೇಡು. ಒಟ್ಟಿನಲ್ಲಿ ಸಖತ್ ಏರಿಯಾ ಎಂದುಕೊಂಡು ಕೆಲಸ ಮಾಡುತ್ತಿದ್ದೆ. ಕೆಲಸಕ್ಕೆ ಸೇರಿದ ನಾಲ್ಕೇ ದಿನದಲ್ಲಿ ಆ ಏರಿಯಾದ ಸಮಸ್ಯೆ ನನಗೆ ಅರ್ಥವಾಗತೊಡಗಿತು. ಮದ್ಯಾಹ್ನದ ಊಟ ಮಾಡಬೇಕೆಂದರೆ ಎಲ್ಲೂ ಹೊಟೆಲುಗಳೇ ಇಲ್ಲ. ಇದ್ದೊಂದು ಹೊಟೆಲಿನಲ್ಲಿ ಇಡ್ಲಿ ಸಿಗುತ್ತದೆ. ಆದರೆ ಊಟ ಸಿಗುತ್ತಿಲ್ಲ. ನಾನು ಬೆರೆ ಪಕ್ಕಾ ವೆಜ್ಜು. ವೆಜ್ಜ್ ಹೊಟೆಲ್ ಇಲ್ಲವೇ ಇಲ್ಲ. ಒಂದು ದಿನ ಪೂರ್ತಿ ಆ ಭಾಗದಲ್ಲಿ ಹೊಟೆಲ್ ಹುಡುಕುವುದಕ್ಕಾಗಿ ಸಮಯ ಹಾಳು ಮಾಡಿದ್ದೆ. ಕೊನೆಗೆ ಅಲ್ಲೊಂದು ಜ್ಯೂಸ್ ಸೆಂಟರ್ ಸಿಕ್ಕಿತ್ತು. ಬೇಕೆಂದರೆ ಅಲ್ಲಿ ಬ್ರೆಡ್ ರೋಸ್ಟ್, ತರಹೇವಾರಿ ಜ್ಯೂಸುಗಳನ್ನು ಕೊಡುತ್ತಿದ್ದರು. ಬರ್ಗರುಗಳು, ಪಿಜ್ಜಾಗಳು ಹೇರಳವಾಗಿ ಸಿಗುತ್ತಿದ್ದವು. ಆ ಜ್ಯೂಸ್ ಸೆಂಟರಿಗೆ ಬರುವವರೆಲ್ಲರೂ ಅವನ್ನು ಬಿಟ್ಟು ಬೇರೆ ತಿಂದೇ ಗೊತ್ತಿಲ್ಲವೇನೋ ಎನ್ನುವಂತಿದ್ದರು. ಬರೀ ಪಪ್ಸುಗಳನ್ನು ತಿಂದೇ ಬದುಕುತ್ತಾರೋ ಎನ್ನುವಂತವರು. ನಾನು ಒಮದೆರಡು ದಿನ ಅವರಂತೆ ಪಪ್ಸ್, ಪಿಜ್ಜಾ ತಿಂದು ಆಪಲ್ ಜ್ಯೂಸನ್ನೋ, ಚಿಕ್ಕೂ ಜ್ಯೂಸನ್ನೋ ಕುಡಿದು ಬದುಕು ನಡೆಸಲು ಯತ್ನಿಸಿದೆ. ಊಹೂಂ ಯಾಕೋ ಒಗ್ಗಲಿಲ್ಲ. ಬಿಟ್ಟುಬಿಟ್ಟೆ.
          ಅದೊಂದು ದಿನ ಅದೇ ಜ್ಯೂಸ್ ಸೆಂಟರಿನ ಬಾಜಿನಲ್ಲಿ ಬಹಳಷ್ಟು ಜನರು ಗುಂಪುಕಟ್ಟಿಕೊಂಡಿದ್ದರು. ಹೈ ಫೈ ಏರಿಯಾ ಗಲಾಟೆ ಗಿಲಾಟೆ ಎಲ್ಲ ನಡೆಯುವುದು ಅಸಾಧ್ಯ. ಆದರೆ ಇಲ್ಯಾಕೆ ಹೀಗೆ ಜನ ಸೇರಿದ್ದಾರೆ ಎನ್ನುವ ಕುತೂಹಲದಿಂದ ನಾನು ಇಣುಕಿದೆ. ಒಬ್ಬಾಕೆ ಹೆಂಗಸು. ಭಿಕ್ಷೆ ಬೇಡುತ್ತಿದ್ದವಳು. ಮಗುವನ್ನೆತ್ತಿಕೊಂಡು ಬಿದ್ದಿದ್ದಾಳೆ. ಎಚ್ಚರತಪ್ಪಿ ಹೋಗಿದೆ. ಕೆಲ ಹೊತ್ತು ಆಕೆಯ ಸುದ್ದಿಗೆ ನಾನೂ ಸೇರಿದಂತೆ ಯಾರೂ ಹೋಗಿರಲಿಲ್ಲ. ಕೊನೆಗೆ ಯಾರೋ ಒಬ್ಬಾಕೆ ಅರ್ಧ ಪ್ಯಾಂಟನ್ನು ಹಾಕಿಕೊಂಡಿದ್ದವಳು ಅವಳ ಬಳಿ ಹೋಗಿ ಅವಳನ್ನು ಹಿಡಿದೆತ್ತಿ ನೀರನ್ನು ಹಾಕಿ ತಟ್ಟಿದಳು. ಸ್ವಲ್ಪ ಹೊತ್ತಿನ ನಂತರ ಆಕೆಗೆ ಎಚ್ಚರ ಬಂತು. ಮಡಿಲಿನಲ್ಲಿದ್ದ ಮಗು ಕಿಟಾರನೆ ಕಿರುಚುತ್ತಿತ್ತು. ಯಾರೋ ಜ್ಯೂಸ್ ಸೆಂಟರಿಗೆ ಹೋಗಿ ಒಂದು ಪಪ್ಸನ್ನು ತಂದುಕೊಟ್ಟರು. ಆಗ ಆ ಭಿಕ್ಷುಕಿ ಹೇಳಿದ್ದು `ಮುರು ದಿನದಿಂದ ಊಟ ಮಾಡಿರಲಿಲ್ಲ. ಅದಕ್ಕೆ ಹೀಗಾಯಿತು. ನನಗೆ ಊಟ ಇದ್ದರೆ ಕೊಡಿ. ಈ ಪಪ್ಸ್ ಬೇಡ..' ಎಲ್ಲರೂ ಆಕೆಯನ್ನೇ ದಿಟ್ಟಿಸುತ್ತ, ಮಿಕಿ ಮಿಕಿ ನೋಡುತ್ತ ನಿಟ್ಟುಸಿರು ಬಿಡುತ್ತ ಹೋದರು. `ಇಲ್ಲಿ ಪಿಜ್ಜಾ ಬರ್ಗರ್ ಬಿಟ್ಟರೆ ಊಟ ಸಿಗೋದಿಲ್ಲ ಕಣಮ್ಮಾ..' ಎನ್ನಬೇಕು ಎಂದುಕೊಂಡೆ. ಮಾತು ಗಂಟಲಿಂದ ಹೊರ ಬೀಳಲಿಲ್ಲ. ಸುಮ್ಮನೆ ಅಲ್ಲಿಂದ ಜಾರಿಕೊಂಡು ಬಂದುಬಿಟ್ಟಿದ್ದೆ.

ಘಟನೆ-6
          ಈ ಘಟನೆ ಮುಜುಗರ ಎನ್ನಿಸಬಹುದು. ಆದರೆ ಹೇಳಲೆಬೇಕು. ನಮ್ಮ ರೂಮಿನಿಂದ ಕೂಗಳತೆ ದೂರದಲ್ಲಿ ಒಂದು ಶೆಡ್ ಇತ್ತು. ಸಿಮೆಂಟಿನ ಶೀಟ್ ಹಾಕಿದ್ದ ಹೋಲೋಬ್ಲಾಕ್ ಕಲ್ಲಿನಿಂದ ಮಾಡಿದ್ದ ಶೆಡ್ ಅದು. ಅಲ್ಲಿ ಒಂದು ಜೋಡಿ ವಾಸ ಮಾಡುತ್ತಿತ್ತು. ಒಂದು ಪ್ರೈಮರಿ ಶಾಲೆಗೆ ಹೋಗುವ  ಹುಡುಗಿ ಹಾಗೂ ಇನ್ನೊಂದು ಎರಡು ವರ್ಷಕ್ಕೂ ಕಡಿಮೆ ವಯಸ್ಸಿನ ಮಗು ಅಲ್ಲಿತ್ತು. ಪ್ರೈಮರಿ ಶಾಲೆಗೆ ಹೋಗುವ ಹುಡುಗಿ ನೋಡಲು ಆಕರ್ಷಕವಾಗಿದ್ದಳು. ನಾವು ಯುವಕರು. ಆಕೆಯನ್ನು ಛೇಡಿಸುವುದು, ಮಾತನಾಡಲು ಪ್ರಯತ್ನಿಸುವುದು ಮಾಡುತ್ತಲೇ ಇದ್ದೆವು. ನನ್ನ ರೂಮ್ ಮೇಟುಗಳು ಆಕೆಯನ್ನು ನೊಡಲು ಹವಣಿಸುತ್ತಿದ್ದರು. ಒಂದೆರಡು ಸಾರಿ ಕನಸಲ್ಲೂ ಅವರಿಗೆ ಅವಳು ಕಾಣಿಸಿಕೊಂಡಿರಬೇಕು. `ಲೇ.. ಅವ್ಳು ನೋಡೋ ಎಷ್ಟು ಚನ್ನಾಗಿದ್ದಾಳೆ.. ಸೂಪರ್ ಫಿಗರ್ ಮಗಾ.. ಆ ಬಾಡಿ ನೋಡು.. ಓಹ್..' ಎಂದುಕೊಂಡು ಮನಸ್ಸಲ್ಲಿ ಮಂಡಿಗೆ ತಿನ್ನುತ್ತಿದ್ದರು. ನಮಗೆಲ್ಲ ಬಹಳ ವಿಚಿತ್ರವೆನ್ನಿಸಿದ್ದು ಪ್ರೈಮರಿ ಶಾಲೆಗೆ ಹೋಗುವ ಆ ಹುಡುಗಿ ಬೆಳೆದಿದ್ದ. ಹದಿ ಹರೆಯದಲ್ಲಿ ಬೆಳೆಯಬೇಕಿದ್ದ ಅಂಗಾಂಗಗಳೆಲ್ಲ ಪ್ರೈಮರಿಯಲ್ಲೇ ಬೆಳೆದಿದ್ದವು. `ಸಿಟಿ ಮೇಲಿನ ಹುಡುಗೀರು ಬಹಳ ಬೇಗನೆ ಬೆಳೆದು ಬಿಡ್ತಾರಮ್ಮಾ..' ಎಂದು ಕಮಲೂ ಬಹುದಿನಗಳಿಂದ ಮನಸ್ಸಿನಲ್ಲಿ ಸಿದ್ಧಪಡಿಸಿಕೊಂಡಿದ್ದ ಪಿಎಚ್ಡಿಯನ್ನು ಒಂದು ದಿನ ಮಂಡಿಸಿದ್ದ. ವಯಸ್ಸು ಚಿಕ್ಕದಾಗಿದ್ದರೂ ಹೀಗೇಕೆ ಎನ್ನುವ ಕೆಟ್ಟ ಕುತೂಹಲ ನಮ್ಮನ್ನು ಕಾಡದೇ ಬಿಡಲಿಲ್ಲ. ಕೊನೆಗೊಂದು ದಿನ ಆ ಹುಡುಗಿ ಮಾತಿಗೆ ಸಿಕ್ಕಳು. ನಾನು ಕುತೂಹಲದಿಂದ ಮನೆಯಲ್ಲಿ ಯಾರ್ಯಾರು ಇದ್ದಾರೆ ಎಂದು ಕೇಳಿದೆ. ಅದಕ್ಕವಳು `ಅಮ್ಮ.. ಚಿಕ್ಕಪ್ಪ.. ಇದ್ದಾರೆ..' ಎಂದಿದ್ದಳು. ನಾನು `ಅಪ್ಪ..?' ಎಂದು ಕೇಳಿದ್ದೆ. `ಇಲ್ಲ.. ಅಮ್ಮ ಈಗ ಚಿಕ್ಕಪ್ಪನ ಜೊತೆಗೆ ವಾಸ ಮಾಡುತ್ತಿದ್ದಾರೆ. ಅಪ್ಪನನ್ನು ಬಿಟ್ಟು ಬಂದಿದ್ದಾರೆ.' ಎಂದಳು. ನನಗೆ ಮಾತೇ ಹೊರಡಲಿಲ್ಲ. ಕೊನೆಗೆ ಆಕೆಯ ತಮ್ಮನ ಬಗ್ಗೆ ಕೇಳಿದಾಗ ಆ ಮಗು ಚಿಕ್ಕಪ್ಪನದ್ದು. ಚಿಕ್ಕಪ್ಪ ಹಾಗೂ ಅಮ್ಮನಿಗೆ ಹುಟ್ಟಿದ್ದೆಂದೂ ತಿಳಿಸಿದಳು. ನನ್ನಲ್ಲಿ ಮಾತುಗಳಿರಲಿಲ್ಲ. ಇದಾಗಿ ಹಲವು ದಿನಗಳ ನಂತರ ಆ ಮನೆಯಲ್ಲಿ ಒಂದು ದಿನ ಗಲಾಟೆ. ಕುತೂಹಲದಿಂದ ನೋಡಿದರೆ ಆ ಮನೆಯ ಚಿಕ್ಕಪ್ಪ ಈ ಹುಡುಗಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಒಂದೆರಡು ವರ್ಷಗಳಿಂದ ಈ ರೀತಿ ನಿರಂತರವಾಗಿ ಕಿರುಕುಳ ನೀಡುತ್ತ ಬರುತ್ತಿದ್ದುದು ಆ ದಿನ ಆ ಹುಡುಗಿಯ ತಾಯಿಗೆ ಗೊತ್ತಾಗಿತ್ತು. ಕಮಲೂ ಹೊಸದೊಂದು ಥಿಯರಿ ಮಂಡಿಸಿದ್ದ. `ಆ ಚಿಕ್ಕಪ್ಪ ಆಕೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣದಿಂದಲೇ ಆಕೆ ಚಿಕ್ಕ ವಯಸ್ಸಿನಲ್ಲಿಯೇ ಆ ರೀತಿ ಬೆಳೆದಿದ್ದಳು.. ಈಗ ಗೊತ್ತಾಯ್ತಾ..' ಎಂದಿದ್ದ.  ಈಗ ಆ ಹುಡುಗಿ ಪಿಯುಸಿ ಓದುತ್ತಿದ್ದಾಳೆ. ಆಕೆಯ ಅಮ್ಮ ಚಿಕ್ಕಪ್ಪನನ್ನು ಬಿಟ್ಟಿದ್ದಾಳೋ ಇಲ್ಲವೋ ಗೊತ್ತಿಲ್ಲ.

ಘಟನೆ -7
          ರೂಮಿನಲ್ಲಿ ಒಂದು ರಾತ್ರಿ ಇದ್ದಕ್ಕಿದ್ದಂತೆ ಎಚ್ಚರಾಯಿತು. ನಮ್ಮ ರೂಮಿನ ಪಕ್ಕದಲ್ಲಿ ದಡಾ ಬಡಾ ಸದ್ದು. ಏನನ್ನೋ ಅಗೆದಂತೆ, ಕಿತ್ತು ಒಗೆದಂತೆಲ್ಲ ಸದ್ದು. ಆಲಿಸಿದೆ. ರೂಮಿನ ಹೊರಗೆ ಒಂದು ಭಾಗದಿಂದ ಕೇಳಿಬರುತ್ತಿತ್ತು. `ನಂಗ್ಯಾಕೆ..?' ಎಂದುಕೊಂಡು ಸುಮಾರು ಹೊತ್ತು ಹಾಸಿಗೆಯಲ್ಲೇ ಹೊರಳಾಡಿ ಮಲಗಲು ಯತ್ನಿಸಿದೆ. ಗಂಟೆಗಟ್ಟಲೆ ಆದರೂ ಸದ್ದು ಕೇಳುತ್ತಲೇ ಇತ್ತು. ಕುತೂಹಲ ಹೆಚ್ಚಿತು. ಸುಮ್ಮನೆ ಹೋಗಿ ಕಂಪೌಂಡ್ ಹತ್ತಿ ಹಲಸಿನ ಮರದ ನಡುವಿನಿಂದ ಇಣುಕಿದೆ. ಹತ್ತೊ ಹದಿನೈದೋ ಜನರ ಗುಂಪು ಪಕ್ಕದ ಸೈಟಿನಲ್ಲಿ ಅರ್ಧಮರ್ಧ ಕಟ್ಟಿದ್ದ ಮನೆಯೊಂದನ್ನು ಕೆಡವಿ ಹಾಕುತ್ತಿದ್ದರು. ಯಾರೋ ಏನೋ.. ಮನೆ ಸರಿಯಾಗಿರಲಿಲ್ಲ ಅದಕ್ಕೆ ಕೆಡವಿ ಹಾಕುತ್ತಿರಬೇಕು ಎಂದುಕೊಂಡು ಸದ್ದು ಮಾಡದಂತೆ, ಯಾರಿಗೂ ಗೊತ್ತಾಗದಂತೆ ಇಳಿದು ಬಂದು ಮಲಗಿದೆ.
            ಹೆರೋಹಳ್ಳಿಯ ಯೋಗೀಶ ಎಂಬಾತ ನಮಗೆ ಆಗ ಪರಿಚಯದಲ್ಲಿದ್ದ ಆ ಭಾಗದ ರೌಡಿ ಶೀಟರ್. ಆತ ರೂಮಿಗೆ ಬಂದಿದ್ದ. ಆತನ ಬಳಿ ರಾತ್ರಿ ನಾನು ನೋಡಿದ ಸಂಗತಿಯನ್ನು ತಿಳಿಸಿದೆ. ಆತ `ಅರೇ ಇಷ್ಟು ಬೇಗ ಆ ಮನೆ ಕೆಡವಿಬಿಟ್ರಾ..?' ಎಂದ. ಯಾಕೆ ನಿಂಗೆ ಗೊತ್ತಿತ್ತಾ ಎಂದು ಕೇಳಿದೆ. ಅದಕ್ಕವನು `ಇದೆಲ್ಲ ರಿಯಲ್ ಎಸ್ಟೇಟ್ ಕೆಲಸ ಮಾರಾಯಾ.. ಆ ಜಾಗದ ಬಗ್ಗೆ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ಕಣ್ಣಿತ್ತು. ಆ ಜಾಗವನ್ನು ಯಾರೋ ಕೊಂಡುಕೊಂಡು ಮನೆ ಕೆಲಸವನ್ನೂ ಆರಂಭಿಸಿಬಿಟ್ಟಿದ್ದರು. ಆದರೆ ಆ ಉದ್ಯಮಿಗೆ ಅದು ಇಷ್ಟ ಇರಲಿಲ್ಲ. ಹಲವು ಸಾರಿ ಹಲವು ರೀತಿಯಿಂದ ಆ ಜಾಗ ಬಿಟ್ಟು ಹೋಗು ಎಂದು ಹೇಳಿದ್ದರೂ ಮನೆ ಮಾಲಿಕ ಕೇಳಿರಲಿಲ್ಲ. ರಾಜಿ ಪಂಚಾಯ್ತಿಕೆಗೆ ನನ್ನ ಬಳಿಯೂ ಬಂದಿತ್ತು. ಆದರೆ ಇಬ್ಬರ ನಡುವೆ ರಾಜಿಯಾಗಿರಲಿಲ್ಲ. ಕೊನೆಗೆ ರಿಯಲ್ ಎಸ್ಟೇಟ್ ಉದ್ಯಮಿ ಜನರನ್ನು ಬಿಟ್ಟು ರಾತ್ರೋ ರಾತ್ರಿ ಮನೆ ಕೀಳಿಸಿಬಿಟ್ಟ. ಬೆಂಗಳೂರಲ್ಲಿ ಇದೆಲ್ಲ ಕಾಮನ್ನು ಬಿಟ್ಹಾಕು.. ಇದಕ್ಕೆಲ್ಲ ತಲೆ ಕೆಡಿಸ್ಕೋಬೇಡ. ಬಾ ಕ್ರಿಕೆಟ್ ಆಡೋಣ.. ಬಾಲ್ ಹಾಕು..' ಎಂದಿದ್ದ.
            ನನ್ನ ಮನಸ್ಸಿನಲ್ಲಿ ಮತ್ತೆ ಭಾವನೆಗಳ ತರಂಗಗಳು ಎದ್ದಿದ್ದವು.

***

(ಬೆಂಗಳೂರಿನಲ್ಲಿದ್ದಾಗ ನನ್ನೆದುರು ಘಟಿಸಿದ ಹಾಗೂ ನಾನೂ ಒಂದು ಭಾಗವಾದ ಏಳು ಘಟನೆಗಳನ್ನು ನಿಮ್ಮೆದುರು ಇಟ್ಟಿದ್ದೇನೆ. ಕೆಲವು ಫನ್ನಿ, ಮತ್ತೆ ಕೆಲವು ವಿಷಾದಕರವಾದುದು. ಹೆಚ್ಚಿನ ಸಾರಿ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲವಲ್ಲಾ ಎಂದುಕೊಂಡು ಸುಮ್ಮನಾದಂತವುಗಳು. ಬೇಜಾರು ಮಾಡಿಕೊಂಡಂತಹ ಘಟನೆಗಳು.. ನನ್ನ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಇದು. ಇನ್ನೂ ಹಲವು ಅನುಭವಗಳಿವೆ. ಮುಂದಿನ ದಿನಗಳಲ್ಲಿ ಅದನ್ನು ನಿಮ್ಮ ಮುಂದೆ ಇರಿಸುವ ಪ್ರಯತ್ನ ಮಾಡಲಾಗುವುದು.)

Friday, July 4, 2014

ಕೊಡಸಳ್ಳಿಯನ್ನು ಬೆಂಬಿಡದ ಅಪಾಯ

(ಕೊಡಸಳ್ಳಿ ಅಣೆಕಟ್ಟು)
ಜಿಲ್ಲೆಯ ಜೀವ ನದಿಯಾದ ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟೆಯ ಮೇಲುಸ್ಥರದಲ್ಲಿ ಸೂಪಾ ಜಲಾಶಯದ ಅಣೆಕಟ್ಟುಗಳಿವೆ. ಕೊಡಸಳ್ಳಿ ಅಣೆಕಟ್ಟೆಯ ಒಂದು ಪಾಶ್ರ್ವದಲ್ಲಿ ಭೂಕುಸಿತವಾಗುತ್ತಲಿದೆ.
        ಬರಬಳ್ಳಿ, ಕೊಡಸಳ್ಳಿ, ಬುಗರಿಗದ್ದೆ, ಬೀರಖೊಲ್ ಮುಂತಾದ ಊರುಗಳು ಕಾಳಿಯ ಒಡಲು ಸೇರಿವೆ. ಆದರೆ ಈ ಊರುಗಳಿದ್ದ ಪಕ್ಕದ ಸ್ಥಳಗಳು ಭೂಕುಸಿತಕ್ಕೊಳಗಾಗಿವೆ. ಸುತ್ತಲಿನ ಅರಣ್ಯ ಪ್ರದೇಶದಲ್ಲೂ ಭೂಕುಸಿತ ಆಗುತ್ತಲೇ ಇದೆ. 1997ರಲ್ಲಿ ಅಣೆಕಟ್ಟೆಯ ಒಂದು ಪಾಶ್ರ್ವದಲ್ಲಿ ಉಂಟಾದ ಭೂಕುಸಿತ ಯಲ್ಲಾಪುರ ತಾಲೂಕಿನ ಜನತೆಯನ್ನು ಕಂಗೆಡಿಸಿತ್ತು. ನದಿಯ ಅಕ್ಕಪಕ್ಕದಲ್ಲಿರುವ ಅರಣ್ಯ ನಾಶದಿಂದಾಗಿಯೇ ಭೂಕುಸಿತ ಉಂಟಾಗುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
          ಕಾಳಿ ನದಿಯ ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರು ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿವೆ. ಅಲ್ಲಲ್ಲಿ ಕಂದಕಗಳು ಸೃಷ್ಠಿಯಾಗಿವೆ. ಧಾರಣಾ ಶಕ್ತಿಯ ಅಧ್ಯಯನ ಮಾಡದೇ ಅಣೆಕಟ್ಟೆ ಕಟ್ಟಿದ್ದರಿಂದಾಗಿ ಇಂತಹ ಅವಾಂತರಗಳು ಉಂಟಾಗುತ್ತಿದೆ ಎನ್ನುವ ಅಭಿಪ್ರಾಯ ಪರಿಸರ ಪ್ರಿಯರದ್ದಾಗಿದೆ.
         ಕೊಡಸಳ್ಳಿ ಅಣೆ ಕಟ್ಟೆಯಿಂದಾಗಿ 400 ಕುಟುಂಬಗಳು ಸ್ಥಳಾಂತರಗೊಳಿಸಲ್ಪಟ್ಟವು. 2000 ಜನರಿಗೆ ಪುನವ್ರಸತಿ ಕಲ್ಪಿಸಬೇಕಾಯಿತು. ಕೃಷಿ ಕಾರ್ಮಿಕರಿಗೆ ಒಂದು ಎಕರೆ ಕೃಷಿ ಜಮೀನನ್ನು ನೀಡಲಾಯಿತು. ಒಂದು ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿದ ರೈತರಿಗೆ ಮೂರು ಎಕರೆ ಜಮೀನು, ಮೂರು ಎಕರೆಗಿಂತ ಹೆಚ್ಚು ಜಮೀನನ್ನು ಕಳೆದುಕೊಂಡವರಿಗೆ ಐದು ಎಕರೆ ಜಮೀನು ನೀಡಲಾಯಿತು.  ಆದರೆ ಸರಕಾರ ನಿಗದಿಗೊಳಿಸಿದ ಪರಿಹಾರದ ಮೊತ್ತವನ್ನು ನೀಡಿಲ್ಲ. ಈ ಕಾರಣಕ್ಕಾಗಿ ಅನೇಕ ನಿರಾಶ್ರಿತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
          ಕೊಡಸಳ್ಳಿ ಅಣೆಕಟ್ಟೆಯಲ್ಲಿ ಹೂಳು ತುಂಬುತ್ತಿದೆ. ಮುಳುಗಡೆಯಾಗದಿರುವ ಸ್ಥಳಗಳಲ್ಲಿಯೂ ಮರವನ್ನು ಕಡಿಯಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ 4 ಸಾವಿರ ಎಕರೆ ಅರಣ್ಯನಾಶವಾಗಿದೆ. 1519 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. 1 ಸಾವಿರ ಎಕರೆ ಕೃಷಿ ಪ್ರದೇಶ ಕಾಳಿ ನದಿಯ ಮಡಿಲು ಸೇರಿದೆ.
          ಕಾಳಿ ಕಣಿವೆ ಅಮೂಲ್ಯ ಸಸ್ಯ ಪ್ರಬೇಧಗಳನ್ನು ಹೊಂದಿದ್ದರೂ ಭಾಗಶಃ ಹಿನ್ನೀರಿನಲ್ಲಿ ಮುಳುಗಿಹೋಗಿದೆ. ಸಾಲು ಸಾಲು ಅಣೆಕಟ್ಟೆಗಳಿಂದಾಗಿ ವನ್ಯಜೀವಿಗಳು ಪಲಾಯನ ಮಾಡಿವೆ. ಕಾಡುಪ್ರಾಣಿಗಳು ಊರಿನತ್ತ ಮುಖ ಮಾಡಿವೆ. ಹುಲಿ, ಚಿರತೆ, ಕರಡಿ, ಆನೆ, ಹಂದಿಗಳು ಗ್ರಾಮೀಣ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಪ್ರಾಣಿಗಳು ರೈತ ಸಮೂಹಕ್ಕೆ ಶತ್ರುಗಳಂತಾಗಿವೆ.
    ಕೊಡಸಳ್ಳಿ ಪ್ರದೇಶದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕುಸಿತ ಕುರಿತು ತಕ್ಷಣಕ್ಕೆ ಕ್ರಮ ಕೈಗೊಳ್ಳುವಂತಾಗಬೇಕು. ಭೂಕುಸಿತದ ಕಾರಣ ಕಂಡು ಹಿಡಿಯಲು ಅಧ್ಯಯನ, ಸಂಶೋಧನೆ ಆಗಬೇಕಾಗಿದೆ. ಈ ಅಣೆಕಟ್ಟೆಯ ಮೇಲ್ಭಾಗದ ಪ್ರದೇಶ ಭೂಕಂಪನ ವಲಯವಿದೆ ಎನ್ನುವುದು ಈಗಾಗಲೇ ಬಹಿರಂಗಗೊಂಡ ಸತ್ಯವಾಗಿದೆ. ಹಾಗಾಗಿ ಕೊಡಸಳ್ಳಿ ಅಣೆಕಟ್ಟೆಯ ಸುರಕ್ಷಿತತೆ ಕುರಿತು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
           ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿಗೆ ಸೇರಲ್ಪಡುವ ಗ್ರಾಮಗಳು ಕೊಡಸಳ್ಳಿ ಅಣೆಕಟ್ಟೆಯ ಪ್ರಭಾವಲಯಕ್ಕೆ ಒಳಪಟ್ಟಿವೆ. ಈಗಾಗಲೇ ಹಲವಾರು ಯೋಜನೆಗಳಿಂದ ಹೈರಾಣಾಗಿರುವ ಯಲ್ಲಾಪುರ ತಾಲೂಕಿನ ಜನತೆ ಈಗ ಈ ಅಣೆಕಟ್ಟೆಯ ಪಕ್ಕದಲ್ಲಿ ಬಿರುಕು ಕಾಣಿಸಿಕೊಂಡಿರುವುದಕ್ಕೆ ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಸರಕಾರ ಎಚ್ಚೆತ್ತುಕೊಂಡು ತುತರ್ಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರ ಆಗ್ರಹವಾಗಿದೆ.
ಕೊಡಸಳ್ಳಿ ಡ್ಯಾಂನ ಸುತ್ತ ಮುತ್ತ ಎಷ್ಟು ಸುರಕ್ಷಿತ ? 
    ರಾಜ್ಯಕ್ಕೆ ಬೆಳಕು ನೀಡಲು ತ್ಯಾಗ ಮಾಡಿದ ಜನರ ಬದುಕೇ ಕತ್ತಲೆಯ ಕೂಪವಾಗುತ್ತಿದೆ. ತೋಟ, ಗದ್ದೆ, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಸೂರಿಗಾಗಿ  ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಸೃಷ್ಟಿಯಾಗಿದ್ದದ್ದು ಕೊಡಸಳ್ಳಿ ಮತ್ತು ಸುತ್ತ ಮುತ್ತಲಿನ ಊರಿನವರದ್ದಾಗಿದೆ.
   ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಆಣೆ ಕಟ್ಟು ಕಟ್ಟುವ ಯೋಜನೆ ರೂಪಿತ ಗೊಳ್ಳುತ್ತಿದ್ದಂತೆ ಈ ಪ್ರದೇಶದ ಜನ ಕಂಗಾಲಾದರು.  ಸರಕಾರಕ್ಕೆ ಮೊರೆಯಿಟ್ಟರು. ಪರಿಹಾರಕ್ಕಾಗಿ ಅಂಗಲಾಚಿದರು. ಅಣೆಕಟ್ಟೆ ಕಟ್ಟುವ ಪೂರ್ವದಲ್ಲಿ ನೀಡಿದ ಭರವಸೆಗಳೆಲ್ಲ ಹುಸಿಯಾದವು. ಯೋಜನೆ ಕಾರ್ಯಗತ ಗೊಳ್ಳುತ್ತಿದ್ದಂತೆ  ಅನಿವಾರ್ಯವಾಗಿ ತಲೆ ತಲಾಂತರ ಗಳಿಂದ ಪೋಷಿಸಿಕೊಂಡು ಬಂದ ಮನೆ, ಜಮೀನುಗಳನ್ನು ಬಿಡಬೇಕಾಯಿತು.  ಸರಕಾರ ಕೆಲವರಿಗೆ  ಪರಿಹಾರ ನೀಡಿದರೂ ಅದು ಸಮರ್ಪಕವಾಗಿರಲಿಲ್ಲ. ಇನ್ನಷ್ಟು ಜನರಿಗೆ ಪರಿಹಾರವೂ ಸಿಕ್ಕಿಲ್ಲ.  ನ್ಯಾಯಾಲಯಕ್ಕೆ ಅಲೆಯುವುದೂ ತಪ್ಪಿಲ್ಲ.
    ತಮ್ಮ ಭೂಮಿಯನ್ನು ಕಳೆದುಕೊಂಡು ನಿರ್ಗತಿರಾದ ಜನ ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಇನ್ನಷ್ಟು ಹಣಗಳನ್ನು ಬರಿಸಬೇಕಾದ ಸ್ಥಿತಿ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಕಾಳಿ ನಿರಾಶ್ರತರಿಗೆ ಬಂದಿದೆ. ತಮ್ಮ ಭೂಮಿಗೆ ಸರಿಯಾದ ಪರಿಹಾರ ದೊರೆಯಲಿಲ್ಲವೆಂಬ ಕಾರಣಕ್ಕಾಗಿ ಅನೇಕ ನಿರಾಶ್ರಿತ ರೈತರು  ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಘಟನೆ ನಡೆದಿದ್ದು  ಇತ್ತೀಚೆಗಿನ ವರದಿಯೇನಲ್ಲ.
    ಅಂತೆಯೇ ಓರ್ವ ನಿರಾಶ್ರಿತರಿಗೆ ಪರಿಹಾರದ ಮೊತ್ತ 95 ಲಕ್ಷ ರೂ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು. ಆದರೆ  ಕೆ.ಪಿ.ಸಿಯವರು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿರುವ ಕೆಪಿಸಿ ಯ  ಶಕ್ತಿ ಭವನವನ್ನು ನ್ಯಾಯಾಲಯ ಹರಾಜು ಹಾಕುವಂತೆ ಆದೇಶಿಸಿತು. ಆಗ ಎಚ್ಚೆತ್ತುಕೊಂಡ ಕರ್ನಾಟಕ ಪವರ್ ಕಾರ್ಪೋರೇಷನ್ ಗೋಪಾಲ ಗಾಂವ್ಕರ್ ಅವರಿಗೆ 95 ಲಕ್ಷ ರೂ ಪರಿಹಾರ ನೀಡಿತು.
    ಕೊಡಸಳ್ಳಿ ನಿರಾಶ್ರಿತರು ಕೆ.ಪಿ.ಸಿ ವಿರುದ್ಧ ಪರಿಹಾರಕ್ಕಾಗಿ 450  ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲಿ 100 ಪ್ರಕರಣಗಳು ಮುಕ್ತಾಯ ಕಂಡಿವೆ. ನಿಜ ಹೇಳ ಬೇಕೆಂದರೆ ರೈತರ ಭೂಮಿಯ ಬೆಲೆ ರೈತರೇ ನಿರ್ಧರಸ ಬೇಕು ವಿನಹ ಇನ್ನಾರು ನಿರ್ಧರಿಸಲಾಗದು. ತಮ್ಮ ಭೂಮಿಗೆ ಎಷ್ಟು ಫಸಲು ನೀಡುವ ಶಕ್ತಿ ಇದೆ ಎಂಬುದು ಅವರಿಗೇ ತಿಳಿದ ವಿಷಯ.
     ಕೊಡಸಳ್ಳಿ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಬರಬಳ್ಳಿ, ಕೊಡಸಡಳ್ಳಿ, ಬೀರ್ಖೋಲ್, ಬುಗ್ರಿಗದ್ದೆ, ಸೇರಿದಂತೆ ಅನೇಕ ಹಳ್ಳಿಗಳು ಮುಳುಗಡೆ ಹೊಂದಿದ್ದವು. ಡ್ಯಾಂ ಪಕ್ಕ ಬಿರುಕು ಬಿಟ್ಟು ಮುಚ್ಚಲಾಗಿದ್ದು. ಈಗ ಅರಣ್ಯ ಪ್ರದೇಶವೂ ಕುಸಿತವಾಗುತ್ತಿದೆ. ಭೂಮಿಯ ಧಾರಣ ಶಕ್ತಿ ಕಡಿಮೆಯಾಗಿರುವಂತೆ ಗೋಚರಿಸುತ್ತಿದೆ. ಸರಿಯಾದ ಪರಿಹಾರವಿಲ್ಲದೇ ನ್ಯಾಯಕ್ಕಾಗಿ ಅಲೆದಾಟದ ಹೋರಾಟಗಳು ನಡೆದೇ ಇದೆ.  ಇದು ಕೊಡಸಳ್ಳಿ ನಿರಾಶ್ರಿತರ ಗೋಳಾಗಿದೆ. ಸಂಬಂದ ಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಇನ್ನಾದರೂ ಇವರ ನೋವಿಗೆ ಸ್ಪಂದಿಸುತ್ತಾರೋ ಎನ್ನುವುದನ್ನು ಕಾಲವೇ ಹೇಳಬೇಕಾಗಿದೆ.
(ಅಣೆಕಟ್ಟೆಯಿಂದ ಶಿವಪುರ ಗ್ರಾಮಸ್ಥರಿಗೆ ನಿತ್ಯ ನರಕ)
      1997 ರಲ್ಲಿ ಡ್ಯಾಂ ಪಕ್ಕದಲ್ಲಿ ಕಲ್ಲುಗುಡ್ಡ ಕುಸಿತವಾಗಿ ಭಯವನ್ನುಂಟು ಮಾಡಿತ್ತು. ನದಿಯಲ್ಲಿ ಹೂಳು ತುಂಬುತ್ತಿದೆ. ಮುಳುಗಡೆಯಾಗದಿರುವ ಸ್ಥಳಗಳಲ್ಲಿಯೂ ಅರಣ್ಯದ ಮರವನ್ನು ಕಡಿಯಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ 4 ಸಾವಿರ ಎಕರೆ ಅರಣ್ಯನಾಶವಾಗಿದೆ. 1519 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. 1 ಸಾವಿರ ಎಕರೆ ಕೃಷಿ ಪ್ರದೇಶ ಕಾಳಿ ನದಿಯ ಮಡಿಲು ಸೇರಿದೆ. ಎತ್ತರ ಪ್ರಧೇಶದಲ್ಲಿನ ಅರಣ್ಯ ನಾಶಮಾಡಿರುವುದರಿಂದಲೇ ಗುಡ್ಡ ಕುಸಿತಕ್ಕೆ ಕಾರಣ ಎನ್ನುವುದು ಮೂಲ ನಿವಾಸಿ ಶಿವರಾಮ ಗಾಂವ್ಕರ ಹಾಗೂ ಗಜಾನನ ಭಟ್ಟ ಅವರ ಅಂಬೋಣವಾಗಿದೆ.
       ಬರಬಳ್ಳಿಯ ಅನೇಕ ಕಡೆಗಳಲ್ಲಿ  ದೊಡ್ಡದಾದ ಬಿರುಕುಗಳು ಕಾಣಲಾರಂಬಿಸಿವೆ. ಅಲ್ಲಲ್ಲಿ ಭೂ ಕುಸಿತವಾಗಿ  ಕಂದರಗಳು ಸೃಷ್ಟಿಯಾಗುತ್ತಿವೆ. ಕಾಳಿ ನದಿಯ ಹಿನ್ನೀರಿನ ಸನಿಹವಿರುವ ಅಂದರೆ ಕೇವಲ ಒಂದುವರೆ ಕಿ.ಮಿ ಅಂತರದಲ್ಲಿ ಭಾಗಿನಕಟ್ಟಾ ಗ್ರಾಮವಿದೆ. ಈ ಗ್ರಾಮದ ಜನತೆಯಲ್ಲಿ ಈಗಾಗಲೇ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಕಾಳಿ ಹಿನ್ನೀರಿನ ಅನೇಕ ಪ್ರದೇಶಗಳಲ್ಲಿ ಭೂ ಕುಸಿತಗಳು ಸಂಭವಿಸಿದ್ದು ಈ ಭಾಗವೆಲ್ಲಾ ಎಷ್ಟು ಸುರಕ್ಷಿತ ಎನ್ನುವ ವಿಚಾರ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಸ್ಥಳೀಯ ಗ್ರಾಮಗಳಿಗೆ  ಹಾವು, ಹುಳ-ಹುಪ್ಪಟೆಗಳು ಮನೆಯೊಳಗೇ ಬರುತ್ತಿರುವುದು ಈ ವರೆಗಿನ ಅನುಭವವಾಗಿದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಅವುಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಈ ಕುರಿತು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
         ನಿರಾಶ್ರಿತರಿಗಾಗಿ ಈಗಾಗಲೇ ಅಂಕೋಲಾ ತಾಲೂಕಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ಅಲ್ಲಿ ಶಾಶ್ವತವಾದ ಯಾವೊಂದು ಮೂಲಭೂತ ಸೌಲಭ್ಯ ಕೂಡಾ ಇಲ್ಲವೆಂದು ನಿರಾಶ್ರಿತರು ಆರೋಪಿಸುತ್ತಿದ್ದಾರೆ ಅದಕ್ಕೋಸ್ಕರ ಜಿಲ್ಲಾಧಿಕಾರಿಯವರ ಕಛೇರಿ ಎದುರು ಮಾರ್ಚ ತಿಂಗಳಿನಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.
          ಅದೇನೇ ಇರಲಿ ಕಾಳಿ ಹಿನ್ನೀರಿನ ಪ್ರದೇಶದ ಸುತ್ತ ಮುತ್ತಲೂ ಎಷ್ಟು ಕಿ.ಮೀ ಅಂತರ ಸುರಕ್ಷಿತ ಎಂಬ ಮಾತನ್ನು ಸಂಬಂದ ಪಟ್ಟ ಅಧಿಕಾರಿಗಳು ಹೇಳಬೇಕಿದೆ. ಈಗಾಗಲೇ ಕೈಗಾ ಅಣುವಿಕಿರಣದಿಂದ ರೋಗಕ್ಕೆ ತುತ್ತಾದ ಈ ಭಾಗದ ಸಾರ್ವಜನಿಕರು ಭಯ-ಭೀತರಾಗಿದ್ದಾರೆ. ಜೊತೆಗೆ ಈ ಭಯವೂ ಸೇರಿ ಊರಿಗೆ ಊರೇ ಗುಳೆ ಹೋಗುವಂತಹ ಪರಿಸ್ಥಿತಿ ಉದ್ಭವವಾಗಿದೆ.
           ಉತ್ತರ ಕನ್ನಡ ಜಿಲ್ಲೆ  ರಾಜ್ಯಕ್ಕೆ, ರಾಷ್ಟ್ರಕ್ಕೆ ಬೆಳಕು ನೀಡುವ ಸಲುವಾಗಿ ಸಾಕಷ್ಟು ತ್ಯಾಗ ಮಾಡಿದೆ. ಆದರೆ ಸರಕಾರ ಈ ಜನರ ನೋವಿಗೆ ತಕ್ಕ ರೀತಿಯಲ್ಲಿ ಈವರೆಗೂ ಸ್ಪಂದಿಸಿಲ್ಲ. ಕೈಗಾ ಅಣುಸ್ಥಾವರ ಸ್ಥಾಪನೆಗೂ ಪೂರ್ವದಲ್ಲಿ  ಕಾಲಕಾಲಕ್ಕೆ ಆರೋಗ್ಯ ಸಮೀಕ್ಷೆ, ಸುಸಜ್ಜಿತವಾದ ಆಸ್ಪತ್ರೆ, ಪ್ರಯೋಗಾಲಯ ನಿಮರ್ಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಈ ವರೆಗಿನ ಅನುಭವದಲ್ಲಿ ಅವೆಲ್ಲವೂ ಹುಸಿಯಾಗಿದೆ.
          ನೌಕಾ ನೆಲೆಗಾಗಿ ಸಹಸ್ರ ಸಂಖ್ಯೆಯ ಕುಟುಂಬಗಳು ನೆಲೆ ಕಳೆದುಕೊಂಡವು. ಇಂದಿಗೂ ನೌಕಾ ನೆಲೆ ನಿರಾಶ್ರತರು ತಮಗೊಂದು ಸೂರು ಬೇಕು ತಕ್ಕ ಪರಿಹಾರ ಬೇಕು ಎಂದು ಹೋರಾಟ ಮಾಡುತ್ತಲೇ ಇದ್ದಾರೆ. ನೌಕಾ ನೆಲೆಯ ಅಧಿಕಾರಿಗಳಾಗಲಿ ಅಥವಾ ಕೇಂದ್ರ ಸರಕಾರವಾಗಲೀ ಈ ವರೆಗೂ ಜಪ್ಪಯ್ಯ ಎಂದಿಲ್ಲ. ಕರಾವಳಿಯಲ್ಲಿ ಕೃಷಿ ಯೋಗ್ಯ ಭೂ ಪ್ರದೇಶ ವಿರಳ. ಮೀನುಗಾರಿಕೆ ಮುಖ್ಯ ಕಸುಬಾಗಿದೆ. ನೌಕಾ ನೆಲೆ ಯೋಜನೆ ಅನುಷ್ಠಾನ ಗೊಳ್ಳುತ್ತಿದ್ದಂತೆ ಮೀನುಗಾರಿಕೆಗೂ ಅಡ್ಡಿಯುಂಟಾಯಿತು. ಇದ್ದ ಕಸುಬು ಕಳೆದುಕೊಂಡ ಮೀನುಗಾರರು ದಿಕ್ಕಾಪಾಲಾದರು. ಮನೆ ಕಳೆದುಕೊಂಡವರಿಗೆ ಸೂರು ಸಿಕ್ಕಿಲ್ಲ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.
           ಕಾಳಿ ನದಿಗೆ ಐದು ಆಣೆ ಕಟ್ಟು ಕಟ್ಟಲಾಯಿತು.  ಸೂಪಾ ತಾಲೂಕೇ ಮುಳುಗಡೆಯಾಯಿತು. ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ನಿರಾಶ್ರಿತರಾದರು. ಇವರೆಲ್ಲರಿಗೆ ರಾಮನಗರ ಎಂಬ ಬೆಂಗಾಡಿನಲ್ಲಿ ಪುನರ್ವಸತಿಗಾಗಿ ಜಾಗ ತೋರಿಸಲಾಯಿತು. ಯಾವ ಮೂಲಭೂತ ವ್ಯವಸ್ಥೆಯನ್ನೂ  ಕಲ್ಪಿಸಲಾಗಿಲ್ಲ. ಕುಡಿಯುವ ನೀರಿಗೂ ತತ್ವಾರವಾಗಿದೆ. ವಾಸ್ತವ್ಯದ ಮನೆ ಅವಾಸ್ತವಿಕವಾಗಿದೆ.  ಮಳೆಗಾಲದಲ್ಲಿ ಮಳೆಯ ನೀರಿನಲ್ಲೇ ಮಲುಗಬೇಕಾದಂತಹ ಧಾರುಣ ಪರಿಸ್ಥಿತಿ ಇದೆ. ಪರಿಹಾರದ ಮೊತ್ತವು ಯಾರ ಯಾರದ್ದೋ ಪಾಲಾಯಿತು. ಈಗ ಈ ಜನರಿಗೆ ಪಡಿತರ ಚೀಟಿಯನ್ನೂ ಸಮರ್ಪಕವಾಗಿ ವಿತರಣೆ ಮಾಡಲಾಗಿಲ್ಲ. ಈ ಕಾರಣಕ್ಕಾಗಿ ಇವರಿಗೆ ಪಡಿತರ ಧವಸ ದಾನ್ಯಗಳು ಲಭ್ಯವಾಗುತ್ತಿಲ್ಲ.  ಇದೇ ರೀತಿಯ ಮತ್ತೊಂದು ಕರುಣಾಜನಕ ಕಥೆ ಇದೇ ಕಾಳಿ ನದಿಗೆ ಕೊಡಸಲ್ಳಿ ಎಂಬಲ್ಲಿ ಕಟ್ಟಲಾದ ಅಣೆ ಕಟ್ಟೆಯಿಂದ ಉದ್ಭವಿಸಿದೆ.
        ಕೊಡಸಳ್ಳಿ ಅಣೆ ಕಟ್ಟೆ ಕಟ್ಟಿದಾಗ 400 ಕುಟುಂಬಗಳು ತೆರವು ಗೊಳಿಸಲ್ಪಟ್ಟವು. 2000 ಜನರನ್ನು ಸ್ಥಳಾಂತರಿಸಲಾಯಿತು. ಕೃಷಿ ಕಾರ್ಮಿಕರಿಗೆ ಒಂದು ಎಕರೆ ಕೃಷಿ ಜಮೀನನ್ನು ನೀಡಲಾಯಿತು. ಒಂದು ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿದ ರೈತರಿಗೆ ಮೂರು ಎಕರೆ ಜಮೀನು, ಮೂರು ಎಕರೆಗಿಂತ ಹೆಚ್ಚು ಜಮೀನನ್ನು ಕಳೆದುಕೊಂಡವರಿಗೆ ಐದು ಎಕರೆ ಜಮೀನು ನೀಡಲಾಯಿತು.  ಆದರೆ ಈ ಜಮೀನು ಉತ್ಕೃಷ್ಟ ಎನ್ನುವಂತದ್ದಲ್ಲ. ಈ ಜಾಗದಲ್ಲೇ ಮನೆಯನ್ನೂ ಕಟ್ಟಿಕೊಳ್ಳಬೇಕು.  ಸರಕಾರ ನಿಗದಿ ಪಡಿಸಿದ ಪರಿಹಾರದ ಮೊತ್ತವನ್ನೂ ನೀಡಿಲ್ಲ.
         ಬೀರ್ಖೋಲ್ ಶಂಕರ ಗಾಂವ್ಕರ್ ಹಾಗೂ ರಾಮಚಂದ್ರ ಗಾಂವ್ಕರ್ ಸೇರಿದಂತೆ  ನಾಲ್ಕು ಕುಟುಂಬಗಳಿಗೆ ಬಿಡಿಗಾಸಿನ ಪರಿಹಾರವನ್ನೂ ನೀಡಲಾಗಿಲ್ಲ. ಮನೆ, ಜಮೀನು ಹೀಗೆ ಏನನ್ನೂ ನೀಡದ ಕಾರಣ ಈ ಕುಟುಂಬಗಳ ಜೀವನವೇ ಮೂರಾಬಟ್ಟೆಯಾಗಿದೆ.
        ಹಲವಾರು ಕುಟುಂಬಗಳಿಗೆ ನೀಡಿಲಾದ ಜಮೀನಿಗೆ ಈ ವರೆಗೂ ಪಟ್ಟಾ ನೀಡಲಾಗಿಲ್ಲ. ಸ್ಥಳಾಂತರಗೊಂಡು 14 ವರ್ಷಗಳಾದರೂ ನಿರಾಶ್ರಿತರಿಗೆ ಸಮರ್ಪಕ ರಸ್ತೆ ಮಾಡಿಕೊಟ್ಟಿಲ್ಲ. ಕುಡಿಯುವ ನೀರು ಸಮರ್ಪಕ ಸರಬರಾಜಾಗುತ್ತಿಲ್ಲ. ಏಪ್ರಿಲ್-ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ತೀವ್ರತೆ ಉಂಟಾಗುತ್ತದೆ. ನಿರಾಶ್ರಿತರಿಗೆ ಉಚಿತವಾಗಿ ಮತ್ತು ವ್ಯವಸ್ಥಿತವಾದ ವಿದ್ಯುತ್ ನೀಡಬೇಕೆನ್ನುವುದು ಸರಕಾರದ ನಿಯಮ. ಆದರೆ ಇಲ್ಲಿ ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
        ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶವಾದ  ಶಿವಪುರ ಮತ್ತು ನೇತ್ರಿಗಿ ಗ್ರಾಮ ದ್ವೀಪವಾಗುತ್ತದೆ. ಯಲ್ಲಾಪುರದಿಂದ ಈ ಊರಿಗೆ ತೆರಳಬೇಕಾದರೆ ತೆಪ್ಪದ ಮೂಲಕ ಹೋಗಬೇಕು. ಈ ತೆಪ್ಪದಲ್ಲಿ ಹೋಗುವಾಗ ಅನೇಕರು ಹಿನ್ನೀರಿನಲ್ಲಿ ಬಿದ್ದ ಉದಾಹರಣೆ ಇದೆ. ಅದೇ ರೀತಿ ದ್ವಿಚಕ್ರ ವಾಹನಗಳೂ ಸಹ ಕಾಳಿ ನದಿ ಹಿನ್ನೀರು ತನ್ನ ಒಡಲೊಳಗೆ ಸೆಳೆದುಕೊಂಡಿದೆ.  ರಸ್ತೆಯ ಮುಕಾಂತರ ಈ ಊರಿಗೆ ಹೋಗುವುದಾದರೆ 60 ಕಿ.ಮೀ ಗಿಂತ ಹೆಚ್ಚು ಸುತ್ತಿ ಬಳಸಿ ಹೋಗಬೇಕು. ಅಲ್ಲಿಯ ರಸ್ತೆಯೂ ಎಕ್ಕುಟ್ಟಿ ಹೋಗಿದೆ. ಶಿವಪುರದ ಜನರು ಬೆಳಕಿಗಾಗಿ ಸರಕಾರದತ್ತ ನೋಡದೇ ತಾವೇ ನಿಮರ್ಿಸಿಕೊಂಡ ಶಕ್ತಿಯ ಮೂಲಕ ಬೆಳಕನ್ನು ಪಡೆದುಕೊಂಡಿದ್ದಾರೆ. ಇಂತಹ ಸ್ವಾವಲಂಬಿ ಊರುಗಳಿಗೆ  ಕಡೆಯ ಪಕ್ಷ ವ್ಯವಸ್ಥಿತವಾದ ರಸ್ತೆ, ಸೇತುವೆಯನ್ನಾದರೂ ಕಲ್ಪಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ.
         ಕಾಳಿ ಕಣಿವೆ ಅಮೂಲ್ಯ ಸಸ್ಯ ಪ್ರಬೇದಗಳನ್ನು ಹೊಂದಿದೆ. ಅದೇ ರೀತಿ ಅಪರೂಪದ ವನ್ಯ ಜೀವಿಗಳ ತಾಣವೂ ಆಗಿತ್ತು. ಆದರೆ ಒಂದರ ಮೇಲೊಂದು ಅಣೆ ಕಟ್ಟೆಗಳು ತಲೆ ಎತ್ತುತ್ತಿದ್ದಂತೆ ಅಪರೂಪದ ಸಸ್ಯರಾಶಿ  ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಪ್ರಾಣಿ ಸಂತತಿ ನಶಿಸುವ ಹಂತ ತಲುಪಿತು. ಕಾಡು ಮೃಗಗಳು ಕಣ್ಮರೆಯಾದವು. ಅಳಿದುಳಿದ ವನ್ಯ ಜೀವಿಗಳು ನಾಡಿನತ್ತ ಮುಖ ಮಾಡಿದವು. ಕಾಳಿ ಕಣಿವೆಯ ಜೀವ ವೈವಿದ್ಯತೆಗೆ ಧಕ್ಕೆ ಯಾಗಿದ್ದಂತೂ ಸುಳ್ಳಲ್ಲ.
ಈಗ ತುರ್ತಾಗಿ ಆಗಬೇಕಾದ ಕೆಲಸವೆಂದರೆ ಕೊಡಸಳ್ಳಿ ಅಣೆ ಕಟ್ಟೆಯ ಸುತ್ತ ಮುತ್ತಲ ಪ್ರದೇಶಗಳ ಬೌಗೋಲಿಕ ಸಂಶೋಧನೆಯಾಗಬೇಕಿದೆ. ಭೂಮಿ ಕುಸಿಯುತ್ತಿರುವುದರ ಕುರಿತು ಅಧ್ಯಯನವಾಗಬೇಕು. ಸೂಪಾ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾದ ಅನೆಕಟ್ಟೆಯ ತಳಭಾಗದಲ್ಲಿ ಭೂಕಂಪನ ಪ್ರದೇಶವಿದೆ ಎನ್ನುವುದು 80 ರ ದಶಕದಲ್ಲೇ ಗೋಚರಿಸಿದ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ಭೂ ವಿಜ್ಞಾನಿಗಳು ಭೂ ಕುಸಿತ ಕುರಿತು  ತಕ್ಷಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಇಲ್ಲೇನಾದರೂ ಭೂ ಕಂಪಿಸಿದ್ದೇ ಆದರೆ ಯಲ್ಲಾಪುರ ತಾಲೂಕಿನ ಕೆಲವು ಪ್ರದೇಶ ಮತ್ತು ಕಾರವಾರ ತಾಲೂಕು ಪ್ರಳಯವನ್ನೆದುರಿಸುವ ಅಪಾಯವಿದೆ. ಹಾಗಾಗಿಯೇ ಮುಂಜಾಗ್ರತೆ ಅನಿವಾರ್ಯ. ಅದೇ ರೀತಿ ಕೊಡಸಳ್ಳಿ ನಿರಾಶ್ರಿತರ ಬದುಕನ್ನು ಹಸನ ಮಾಡುವ ಕೆಲಸವಾಗಬೇಕಿದೆ.  ಸರಕಾರ ಇತ್ತ ಗಮನ ನೀಡುವ ಅಗತ್ಯವಿದೆ.

-ವಿಶ್ವಾಮಿತ್ರ ಹೆಗಡೆ

**
(ವಿಶ್ವಮಿತ್ರ ಹೆಗಡೆ ಅವರು `ಕನ್ನಡಪ್ರಭ' ಪತ್ರಿಕೆಯಲ್ಲಿ ಎರಡು ವರ್ಷಗಳ ಹಿಂದೆ ಬರೆದಿದ್ದ ಒಂದು ವರದಿ. ಆಳುವ ಸರ್ಕಾರದ ಜಾಢ್ಯ ಇನ್ನೂ ಹೋಗಿಲ್ಲ. ಸಮಸ್ಯೆ ಹಾಗೆಯೇ ಇದೆ. ನಿಮ್ಮ ಅರಿವಿಗೆ ಬರಲಿ ಎನ್ನುವ ಕಾರಣಕ್ಕಾಗಿ ಈ ಬ್ಲಾಗಿನಲ್ಲಿ ಹಾಕಿದ್ದೇನೆ. ಓದಿ ಅಭಿಪ್ರಾಯಿಸಿ)

Thursday, July 3, 2014

ನಾವು ಹವ್ಯಕರು-2

(ಹವ್ಯಕ ಮಹನೀಯರೊಬ್ಬರ ಸಾಂದರ್ಭಿಕ ಚಿತ್ರ : ಕಾಮತ್ ಪಾಟ್ ಪೌರಿಯಿಂದ ಎರವಲು ಪಡೆದಿದ್ದು)
ನಾವು ಹವ್ಯಕರು ನಾವು ಹವ್ಯಕರು
ಹಳ್ಳಿ ಹೈದರು, ಪೇಟೆಯಲಿ ಶೂರರು ||

ಬಾಯಲ್ಲಿ ಗುಟ್ಕಾ, ಫಟಾಫಟ್ ಬಾಯ್ಲೆಕ್ಕ
ಆರೆಲೆ ಮೂರೆಲೆ ಇಸ್ಪಿಟ್ ಲೆಕ್ಕ
ಹುಂಡು ಗಿಂಡೆಲ್ಲ ಭಾರಿ ಪಕ್ಕಾ
ನಾವು ಹವ್ಯಕರು ||

ವಾರಕ್ಕೊಮ್ಮೆ ಉಪವಾಸ
ಆಗೀಗ ಸಂಕಷ್ಟಿ ಪಂಚಕಜ್ಜಾಯ
ಮಠದ ಕಡೆ ಪಯಣ
ನಾವು ಹವ್ಯಕರು ||

ತೋಟದಲ್ಲಿ ಅಡಿಕೆ,
ಜೊತೆ ಜೊತೆ ವೆನಿಲ್ಲಾ
ರಬ್ಬರು, ಕಾಳುಮೆಣಸು
ನಾವು ಹವ್ಯಕರು ||

ಎಮ್ಮೇಟಿ ಬೈಕು,
ಮಾರುತಿ 800 ಕಾರು
ಕೈಯಲ್ ನೋಕಿಯಾ ಮೊಬೈಲು
ನಾವು ಹವ್ಯಕರು ||

ಡೈರಿಗೆ ಹಾಲು, ಕಾಲುವೆಲಿ ಕಾಲು
ಕೊಳೆಮದ್ದಿಗೆ ಔಷಧಿ
ತೋಟದ ಪರೀಧಿ
ನಾವು ಹವ್ಯಕರು ||

ಮನಸಂತೂ ಮುಗ್ಧ
ಕಂಜೂಸಿ ಜುಗ್ಗ
ಸಾಲದ ಶೂಲ
ನಾವು ಹವ್ಯಕರು ||

ಪೇಟೆಯ ಕಡೆಗೆ ಪಯಣ
ಸತ್ಕಾರದಲ್ಲಿ ದೋಸೆ ಪಕ್ಕಾ
ಎಪಿಎಂಸಿ ಮಾರ್ಕೆಟು ಲೆಕ್ಕ
ನಾವು ಹವ್ಯಕರು ||

ಏನಂದ್ರೂ ಬೇಜಾರಿಲ್ಲೆ
ಹವ್ಯಕರಂದ್ರೆ ಸುಮ್ನೆ ಅಲ್ಲ
ಭೂಮಿಗ್ ಬಿದ್ರೂ ಮೀಸೆ ಮಣ್ಣಲ್ಲ
ನಾವ್ ಹವ್ಯಕರು, ಪ್ರೀತಿಯ ಕರು ||

**
(ಹವ್ಯಕರ ಬಗ್ಗೆ ಹಿಂದೆ ಒಂದು ಕವಿತೆ ಬರೆದಿದ್ದೆ. ಆಗ ಅದೇ ಕವಿತೆಗೆ 2, 3 ನೇ ಭಾಗಗಳು ಬರಬಹುದು ಎಂದೂ ಹೇಳಿದ್ದೆ. ಇದು ಎರಡನೇ ಭಾಗ. ಮುಂದಿನ ದಿನಗಳಲ್ಲಿ ಮೂರನೇ ಭಾಗ ಬಂದರೂ ಬರಬಹುದು. ಹವ್ಯಕರ ಗುಣಗಾನ ಮಾಡುವ ಕವಿತೆ. ಗಂಭೀರವಾಗುವುದು ಬೇಡ. ಸುಮ್ಮನೆ ಓದಿ ಖುಷಿ ಪಡಲೊಂದು ಕವಿತೆ.)
(ಈ ಕವಿತೆಯನ್ನು ಬರೆದಿದ್ದು 03-07-2014ರಂದು ಶಿರಸಿಯಲ್ಲಿ)