Monday, December 29, 2014

ಚಿನಕುರುಳಿ ಹನಿಗಳು

ನೆಪ

ಹುಲಿಯ ನೆಪದಲ್ಲಿ
ಶೆಟ್ಟರ್ ಚಾರ್ಜು
ಅದಕ್ಕೆ ಕಾರಣ
ರಾಣಾ ಜಾರ್ಜು !

ದುಂಡಿರಾಜ್

ಪದ ಪದಗಳನ್ನು
ಒಟ್ಟಿಗೆ ಇಟ್ಟರು
ಚುಟುಕ ಬರೆದರು
ದುಂಡೀರಾಜರು |
ಇಷ್ಟವಾದರು ||

ಕಾರಣ

ಹುಲಿ ನೆಪದಲ್ಲಿ
ಆರಂಭವಾಯಿತು
ಹಣಾ-ಹಣಿ
ಆರಂಭಿಸಿದವರು
ಮಾತ್ರ
ರಾಜಕಾರಣಿ ||

ನೆನಪು

ಐಸಿಸ್, ತಾಲಿಬಾನ್
ಮುಂತಾದ ಉಗ್ರ
ಸಂಘಟನೆಗಳು
ನೂರಾರು...|
ಈ ನಡುವೆಯೂ ನೆನಪಾದರು
ಇಷ್ಟವಾದರು
ಅಬ್ದುಲ್ ಕಲಾಮರು |


Sunday, December 28, 2014

ಅಘನಾಶಿನಿ ಕಣಿವೆಯಲ್ಲಿ-5

        ಇದಾಗಿ ಒಂದೆರಡು ದಿನ ಕಳೆದಿರಬಹುದು. ಆ ದಿನ ಬೆಳ್ಳಂಬೆಳಿಗ್ಗೆ ಪ್ರದೀಪ ಏಕಾಏಕಿ ವಿಕ್ರಮನ ರೂಮಿಗೆ ಬಂದ. ಅವನನ್ನು ಕಂಡ ವಿಕ್ರಂ `ಏನಪ್ಪಾ ಎಲ್ಲೊ ಹೋಗಿದ್ದೆ. ಬಹಳ ದಿನ ಆಯ್ತಲ್ಲ ನಿನ್ನ ಸುಳಿವಿಲ್ಲದೇ. ಬೇಕಾದಾಗ ಸಿಗೋನಲ್ಲ ನೀನು. ನೀ ಭಲೇ ಆಸಾಮಿ. ಯಾವಾಗಾದ್ರೂ ಬರ್ತೀಯಾ.. ಯಾವಾಗಾದ್ರೂ ಸಿಕ್ತೀಯಾ.. ನಾಪತ್ತೆ ಆಗ್ತೀಯಾ.. ಏನಪ್ಪಾ ಏನ್ ಕಥೆ ನಿಂದು..?' ಎಂದು ಕೇಳಿದ.
        `ಏನಿಲ್ಲ ಮಾರಾಯಾ. ಎಂತದ್ದೋ ಇಂಪಾರ್ಟೆಂಟ್ ಕೆಲಸ ಇತ್ತು.  ಅದರಲ್ಲಿ ತಲ್ಲೀನ ಆಗಿದ್ದೆ. ಅದಕ್ಕಾಗಿ ಬಂದಿರಲಿಲ್ಲ ನೋಡು. ಅದಿರ್ಲಿ ಏನೋ ಪೇಪರ್ ನವರು ಸಂದರ್ಶನಕ್ಕೆ ಬಂದಿದ್ದರಂತೆ. ಭಾರಿ ಭಾರಿ ರಿಪೋರ್ಟೂ ಆಗಿದ್ಯಂತೆ. ಏನಪ್ಪಾ ವಿಶೇಷ?' ಎಂದು ಕೇಳಿದ ಪ್ರದೀಪ.
        `ಅದನ್ನೇ ಹೇಳಿದ್ನಪ್ಪ. ಅವರಿಗೆ ನಿನ್ನ ಪರಿಚಯ ಮಾಡ್ಕೊಡೋಣ ಅಂದುಕೊಂಡಿದ್ದರೆ ನೀನು ನಾಪತ್ತೆ...' ಎಂದ ವಿಕ್ರಂ.
         `ಅದಿರ್ಲಿ.. ಒಂದು ಮುಖ್ಯ ವಿಷ್ಯ ಹೇಳ್ಬೇಕಿತ್ತು. ಅದೇನಂದ್ರೆ ನಾವು ಬೆಂಗಳೂರಿಗೆ ಹೋಗಿದ್ವಲ್ಲಾ ಆಗೆಲ್ಲಾ ನಾನು ಬಹಳ ಜನರನ್ನು ನೋಡಿದೆ. ಒಬ್ಬತ್ತಾ ನಮ್ಮನ್ನ ಅದರಲ್ಲೂ ಮುಖ್ಯವಾಗಿ ನಿನ್ನನ್ನ ಫಾಲೋ ಮಾಡ್ತಾ ಇದ್ದ..' ಎಂದ ಪ್ರದೀಪ.
        `ಹಹ್ಹ... ತಮಾಷೆ ಮಾಡ್ತಿದ್ದೀಯಾ.. ಬೇರೆ ಕೆಲಸ ಇಲ್ಲವಾ ನಿನಗೆ.? ಹೊತ್ತಲ್ಲದ ಹೊತ್ತಲ್ಲಿ ಜೋಕ್ ಮಾಡಬೇಡ.. ನನ್ನನ್ನ ಫಾಲೋ ಮಾಡೋಕೆ ನಾನೇನು ರಜನೀಕಾಂತನಾ? ಅಥವಾ ಮತ್ತಿನ್ಯಾರಾದ್ರೂ ಸೆಲೆಬ್ರಿಟಿನಾ? ಹೋಗ್ ಹೋಗೋ.. ನಿನ್ ಮಾತಿಗೂ ಒಂದು ಮಿತಿ ಇರಲಿ ಮಾರಾಯಾ..' ಎಂದ ವಿಕ್ರಂ.
        `ಇಲ್ಲ ಮಾರಾಯಾ.. ರಿಯಲಿ. ನಾನು ನಿಜಾನೇ ಹೇಳ್ತಾ ಇದ್ದೀನಿ. ನಾನು ಅಬಸರ್ವ್ ಮಾಡ್ತಾ ಇದ್ದೆ ಮಾರಾಯಾ.. ನೀನು ನಂಬೋದಾದ್ರೆ ನಂಬು.. ಬಿಟ್ಟರೆ ಬಿಡು. ಆದರೆ ಹುಷಾರಾಗಿರು ಅಷ್ಟೇ.. ನೀನು ನಂಬಲಿಲ್ಲ ಅಂದರೆ ನನ್ನ ಗಂಟೆಂತದ್ದೂ ಖರ್ಚಾಗೋದಿಲ್ಲ ಮಾರಾಯಾ..' ಎಂದು ಹೇಳಿದವನೇ `ಸರಿ ನಾನಿನ್ನು ಬರ್ತೀನಿ..' ಎಂದವನೇ ಹೊರಟೇ ಹೋದ.
         ವಿಕ್ರಮನಿಗೆ ಒಮ್ಮೆ ದಿಗ್ಬ್ರಮೆ ಆಯಿತು. ಇದೇನಪ್ಪಾ ಇದು ಹೀಗೆ ಎಂದುಕೊಂಡ. ನನ್ನನ್ನು ಫಾಲೋ ಮಾಡೋರೂ ಇದ್ದಾರಾ? ಯಾರು ಅವರು? ಯಾಕೆ ನನ್ನನ್ನು ಫಾಲೋ ಮಾಡ್ತಾ ಇದ್ದಾರೆ? ಪ್ರದೀಪನೇ ಸುಳ್ಳು ಹೇಳಿದನೇ? ಅಥವಾ ಆತ ಹೇಳಿದ್ದರಲ್ಲಿ ನಿಜವಿರಬಹುದೇ? ಇದರಲ್ಲೇನೋ ನಿಘೂಡತೆಯಿದೆ. ಈ ಪ್ರದೀಪನನ್ನೇ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಆತನ ಮಾತನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಏನಾದ್ರೂ ಆಗ್ಲಿ. ಸಮಸ್ಯೆ ಹತ್ತಿರಕ್ಕೆ ಬಂದಾಗ ನೋಡಿಕೊಳ್ಳೋಣ ಎಂದು ಆ ವಿಷಯವನ್ನು ಅಲ್ಲಿಗೆ ಮರೆತುಬಿಟ್ಟ ವಿಕ್ರಂ. ಇದಾಗಿ ಬಹಳ ದಿನಗಳವರೆಗೆ ಅಂದರೆ ಹೆಚ್ಚೂ ಕಡಿಮೆ ತಿಂಗಳುಗಳ ಕಾಲ ಪ್ರದೀಪನ ಪತ್ತೆಯೇ ಇರಲಿಲ್ಲ. ಹಾಗೆಯೇ ಆ ಅಪರಿಚಿತ ವ್ಯಕ್ತಿಯೂ ಕೂಡ.

***5***

           ನಂತರ ವಿಕ್ರಮನಿಗೆ ಅದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ವಿಕ್ರಮನಿಗೆ ತನ್ನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಮೇಲೆಯೇ ಆಸಕ್ತಿ ಕಳೆದುಹೋಯಿತು. ಆಗೀಗ ತನ್ನ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದನಾದರೂ ಏನೋ ಒಂದು ಅನ್ಯಮನಸ್ಕ ಭಾವನೆ ಅವನಲ್ಲಿ ಬೆಳೆದು ಬಿಟ್ಟಿತ್ತು. ತಾನು ಹೋಗದಿದ್ದರೂ ಅವನು ತರಬೇತಿ ನೀಡಿದ ಹುಡುಗರು ಕೇಂದ್ರದಲ್ಲಿ ಚನ್ನಾಗಿ ಕಲಿಸುತ್ತಿದ್ದರು. ತಾನಿಲ್ಲದಿದ್ದರೂ ತರಬೇತಿ ಕೇಂದ್ರ ಬೆಳೆಯುತ್ತದೆ ಎನ್ನುವುದು ಆತನ ಅನುಭವಕ್ಕೆ ಬಂದಿತ್ತು.
            ಇದೇ ಸಂದರ್ಭದಲ್ಲಿ ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ಬಳಿಯಲ್ಲೇ ತಲೆಯೆತ್ತಿದ್ದ ಇನ್ನೊಂದು ವ್ಯಾಯಾಮ ಶಾಲೆ ಪ್ರಭಲವಾಗಿಬಿಟ್ಟಿತ್ತು. ಆ ತರಬೇತಿ ಕೇಂದ್ರದ ತರಹೇವಾರಿ ಗಿಮ್ಮಿಕ್ಕಿನ ಎದುರು ವಿಕ್ರಮನ ತರಬೇತಿ ಕೇಂದ್ರ ಸೋಲಲು ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ಅಲ್ಲಿನ ಕೆಲವು ಕುತಂತ್ರಿಗಳ ಕುತಂತ್ರವನ್ನೂ ಮಾಡಿದರು. ಸುತ್ತಮುತ್ತಲೂ ವಿಕ್ರಮನ ತರಬೇತಿ ಕೇಂದ್ರದ ಹೆಸರನ್ನೂ ಹಲವರು ಹಾಳುಮಾಡಿಬಿಟ್ಟರು. ವಿಕ್ರಮನಲ್ಲಿ ಕಲಿಯುತ್ತಿದ್ದ ಅನೇಕರು ಎದುರಾಳಿ ತರಬೇತಿ ಕೇಂದ್ರವನ್ನು ಸೇರುವಲ್ಲಿಗೆ ವಿಕ್ರಮ ಸೋತು ಸುಣ್ಣವಾಗಿದ್ದ. ಇದ್ದಕ್ಕಿದ್ದಂತೆ ತನಗೇ ಈ ರೀತಿಯ ಮಂಕು ಕವಿಯಿತು ಎನ್ನುವುದು ವಿಕ್ರಮನಿಗೆ ತಿಳಿಯಲೇ ಇಲ್ಲ. ಕೊನೆಗೆ ಒಂದು ದಿನ ವಿಕ್ರಮ ತಾನು ಪ್ರೀತಿಯಿಂದ ಕಟ್ಟಿ ಬೆಳೆಸಿದ್ದ ಅದ್ವೈತ ಆತ್ಮರಕ್ಷಣೆ ಕೇಂದ್ರವನ್ನು ಅನಿವಾರ್ಯವಾಗಿ ಬಾಗಿಲು ಹಾಕಿದ.
       ಅದ್ವೈತ ಆತ್ಮರಕ್ಷಣೆಯನ್ನು ಬಾಗಿಲು ಹಾಕುವ ಸಂದರ್ಭದಲ್ಲಿ ವಿಕ್ರಮ ಸಾಲಕ್ಕೂ ತುತ್ತಾಗಬೇಕಾಯಿತು. ಎಲ್ಲರೂ ಬಿಟ್ಟುಹೋಗುತ್ತಿದ್ದ ಸಂದರ್ಭದಲ್ಲಿ ಕೈ ಹಿಡಿದವರು ಯಾರೂ ಇರಲಿಲ್ಲ. ಸಹಾಯ ಮಾಡಬಹುದಾಗಿದ್ದ ಪ್ರದೀಪ ಕಾಣೆಯಾಗಿದ್ದ. ಆತ್ಮರಕ್ಷಣೆ ಕೇಂದ್ರದ ಬಿಲ್ಡಿಂಗಿನ ಬಾಡಿಗೆ ತುಂಬಲೂ ಹಣವಿಲ್ಲದಂತಾದ ಪರಿಸ್ಥಿತಿ ಆತನದ್ದಾಗಿತ್ತು. ಕೊನೆಗೆ ಬಾಗಿಲು ಹಾಕಿ ಅಲ್ಲಿದ್ದ ಕೆಲವೊಂದು ಜಿಮ್ ವಸ್ತುಗಳನ್ನು ಮಾರಾಟ ಮಾಡಿದಾಗ ಸಾಲದ ಮೊತ್ತ ಕೊಂಚ ಇಳಿಕೆಯಾಗಿತ್ತಾದರೂ ಪೂರ್ತಿ ಚುಕ್ತಾ ಆಗಿರಲಿಲ್ಲ.
        ವ್ಯಾಯಾಮ ಕೇಂದ್ರದ ಬಾಗಿಲು ಹಾಕಿದ ಮರುಕ್ಷಣದಿಂದ ವಿಕ್ರಂ ನಿರುದ್ಯೋಗಿಯಾಗಿದ್ದ. ತಾನು ಓದಿದ್ದ ಡಿಗ್ರಿ ಸರ್ಟಿಫಿಕೇಟನ್ನು ಹಿಡಿದು ಹಲವು ಕಡೆಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ. ಆದರೆ ವಿಕ್ರಮನ ದುರಾದೃಷ್ಟವೋ ಏನೋ ಎಲ್ಲೂ ಉದ್ಯೋಗ ಸಿಗಲಿಲ್ಲ. ಆತ ಪ್ರಯತ್ನಿಸುವುದು ಬಿಡಲಿಲ್ಲ. ಉದ್ಯೋಗವೂ ಹದಪಟ್ಟಿಗೆ ಸಿಗಲಿಲ್ಲ.
        ಹೀಗಿದ್ದಾಗಲೇ ಅವನ ಊರಾದ ಕಣ್ಣೀರು ಮನೆಯಿಂದ ತಂಗಿ ರಮ್ಯ ಬರೆದಿದ್ದ ಪತ್ರ ಬಂದು ತಲುಪಿತು. ತಂದೆ ಮನೆಯಲ್ಲಿ ಬಹಳ ಸಿಟ್ಟಾಗಿದ್ದಾರೆಂದೂ, ಬೆಂಗಳೂರಿಗೆ ಹೋಗುವುದು ಇಷ್ಟವಿರಲಿಲ್ಲವೆಂದೂ ತಿಳಿಯಿತು. ಆದರೆ ಮನೆಯ ಉಳಿದೆಲ್ಲ ಸದಸ್ಯರೂ ಇದರಿಂದ ಸಿಟ್ಟಾಗಿದ್ದಾರೆಂದೂ, ಬೆಂಗಳೂರು ಪ್ರವಾಸ ಶುಯಭವಾಗಲಿ ಎಂದು ತಿಳಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಎಲ್ಲರೂ ಹಾಗಿರುವಾಗ ಅಪ್ಪನೇಕೆ ಹೀಗೆ ಎಂದುಕೊಂಡ ವಿಕ್ರಂ. ಮತ್ತೆ ಪುನಃ ಕೆಲಸ ಹುಡುಕುವ ಕಾರ್ಯ ಆರಂಭವಾಯಿತು. ಕೊನೆಗೊಮ್ಮೆ `ಮಂಗಳೂರು ಮೇಲ್' ಪತ್ರಿಕೆಯಲ್ಲಿ ಕೆಲಸ ಖಾಲಿಯಿದೆ ಎನ್ನುವುದು ತಿಳಿದುಬಂದಿತು. ಕೊನೆಯ ಪ್ರಯತ್ನ ಮಾಡೋಣ ಎಂದುಕೊಂಡು ಪತ್ರಿಕಾ ಕಚೇರಿಯ ಕಡೆಗೆ ಹೊರಟ.
       ಇನ್ನೇನು ಪತ್ರಿಕಾಲಯದ ಕಾಂಪೋಂಡ್ ಒಳಕ್ಕೆ ಕಾಲಿಡುವಷ್ಟರಲ್ಲಿ ಒಂದು ಸ್ಕೂಟಿ ಹೊರಗಿನಿಂದ ಬಂದಿತು. ಒಂದು ಕ್ಷಣ ಒಳಹೋಗುವವನು ನಿಂತ. ಆ ಸ್ಕೂಟಿಯ ಮೇಲೆ ಬಂದಿದ್ದಾಕೆಯೇ ಬಂದಿದ್ದಾಕೆಯೇ ವಿಜೇತಾ. ಆಕೆ ತಮ್ಮ ಪತ್ರಿಕಾಲಯದ ಎದುರು ವಿಕ್ರಮನನ್ನು ಕಂಡು ಒಂದರೆಘಳಿಗೆ ಅವಾಕ್ಕಾದಳು. ಅಚ್ಚರಿಯಿಂದ ನೋಡಿ, ಸ್ಕೂಟಿ ನಿಲ್ಲಿಸಿದರು.
       `ಏನಿಲ್ಲಿ? ಪತ್ರಿಕಾಲಯದ ಮೇಲೆ ಕರಾಟೆ, ಕುಂಗ್ ಫೂ ತೋರ್ಸೋಕೆ ಬಂದ್ರಾ?' ಎಂದು ತಮಾಷೆಯಿಂದ ಕೇಳಿದಳು.
       `ಇಲ್ಲ.. ಕೆಲಸ ಕೇಳೋಕೆ ಬಂದಿದ್ದೇನೆ..' ಎಂದು ಸೀರಿಯಸ್ಸಾಗಿಯೇ ಹೇಳಿದ.
       `ವಾಟ್... ನಿಮ್ ಕುಂಗ್-ಫೂ.. ಕರಾಟೆ ಶಾಲೆಯ ಕತೆ ಏನಾಯ್ತು?' ಎಂದು ಅಚ್ಚರಿಯಿಂದ ಕೇಳಿದಳು ವಿಜೇತಾ. ಆಕೆಗೆ ತುಸು ಹೆಚ್ಚೆನ್ನಿಸುವಂತೆ ತನ್ನ ಈಗಿನ ಸ್ಥಿತಿಗೆ ಕಾರಣ ತಿಳಿಸಿದ. ಆಗ ಆಕೆ ತಮ್ಮ ಪತ್ರಿಕೆಯಲ್ಲಿ ಕೆಲಸ ಖಾಲಿ ಇರುವುದನ್ನು ಹೇಳಿ, ಆ ಕೆಲಸಕ್ಕೆ ಸೇರಬಹುದು ತಾನು ಈ ಕುರಿತು ಮಾತನಾಡುತ್ತೇನೆ ಎಂದೂ ಹೇಳಿದಳು. ಆಫೀಸಿನೊಳಕ್ಕೆ ಕರೆದೊಯ್ದಳು.
       ಕಚೇರಿ ಒಳಗೆ ಹಲವಾರು ಜನರಿದ್ದರು. ಹಲವು ಕಂಪ್ಯೂಟರ್ ಗಳು. ಕಂಪ್ಯೂಟರ್ ಮುಂದೆ ಕುಳಿತು ಚಕ ಚಕನೆ ಕೆಲಸ ಮಾಡುತ್ತಿದ್ದ ಜನರು, ಏನೋ ಗಡಿಬಿಡಿ, ಧಾವಂತದಲ್ಲಿದ್ದಂತೆ ಕಾಣುವ ಜನರು. ಎರಡು ಮಹಡಿಯ ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ಪ್ರಿಂಟಿಂಗ್ ಮೆಷಿನುಗಳು ಗರ್ರೆನ್ನುತ್ತಿದ್ದರೆ ಮೇಲ್ಮಹಡಿಯಲ್ಲಿ ಕಚೇರಿ ಕೆಲಸ ನಡೆಯುತ್ತಿತ್ತು. ಆಕೆ ಸೀದಾ ವಿಕ್ರಮನನ್ನು ಸಂಪಾದಕರ ಕೊಠಡಿಯೊಳಕ್ಕೆ ಕರೆದೊಯ್ದಳು. ಸಂಪಾದಕರು ಯಾರೋ? ಹೇಗೋ? ಏನೋ ಎಂದುಕೊಳ್ಳುತ್ತಲೇ ಒಳಗೆ ಹೋದವನಿಗೆ ಒಮ್ಮೆಲೆ ಆಶ್ವರ್ಯ. ಯಾಕಂದ್ರೆ ಒಳಗೆ ಸಂಪಾದಕ ಸ್ಥಾನದಲ್ಲಿದ್ದವರು ನವೀನಚಂದ್ರ. ಇದನ್ನು ನೋಡಿ ವಿಕ್ರಂ `ಇದೇನ್ ಸಾರ್. ನೀವು ಈ ಸೀಟಲ್ಲಿ..' ಎಂದು ಅಚ್ಚರಿಯಿಂದಲೇ ಕೇಳಿದ.
       ನಸುನಗುತ್ತ ಮಾತನಾಡಿದ ನವೀನ್ ಚಂದ್ರ `ಓಹ್ ವಿಕ್ರಂ. ಬನ್ನಿ.. ಬನ್ನಿ.. ಮೊದಲಿದ್ದ ಸಂಪಾದಕರು ರಿಟೈರ್ ಆದರು ನೋಡಿ. ಇದೀಗ ನಾನೇ ಈ ಪತ್ರಿಕೆಗೆ ಸಂಪಾದಕ..' ಎಂದರು. `ಅದ್ಸರಿ.. ಇದೇನು ತಾವಿಲ್ಲಿಗೆ ಬಂದಿದ್ದು..?' ಎಂದೂ ಕೇಳಿದರು.
       `ಸರ್ ಕೆಲಸ ಖಾಲಿಯಿದೆ ಅಂತ ತಿಳಿಯಿತು. ಅದಕ್ಕೆ ಕೆಲಸ ಕೇಳೋಣ ಅಂತ ಬಂದಿದ್ದೇನೆ..' ನೇರವಾಗಿ ಹೇಳಿದ ವಿಕ್ರಂ ತನ್ನೆಲ್ಲ ವಿಷಯಗಳನ್ನೂ ತಿಳಿಸಿದ. ಒಮ್ಮೆ ದೀರ್ಘನಿಟ್ಟುಸಿರು ಬಿಟ್ಟ ನವೀನಚಂದ್ರ ಅವರು ತಲೆ ಕೊಡವಿದರು. `ಸರ್ ನಾನು ಜರ್ನಲಿಸಂ ಓದಿಲ್ಲ. ಆದರೆ ರಿಪೋಟರ್ಿಂಗು, ಪೋಟೋಗ್ರಫಿಯಲ್ಲಿ ಆಸಕ್ತಿಯಿದೆ. ತಾವು ಈ ಕೆಲಸ ಕೊಟ್ಟರೆ ಅನುಕೂಲವಾಗುತ್ತದೆ. ನನಗೆ ಈಗ ಕೆಲಸದ ಅನಿವಾರ್ಯತೆ ಬಹಳ ಅಗತ್ಯ..' ಎಂದು ಪಟಪಟನೆ ಹೇಳಿದ ವಿಕ್ರಂ.
       ನೋಡಿ ವಿಕ್ರಂ. ನಮ್ಮಲ್ಲಿ ಇರೋದು ವರದಿಗಾರರ ಕೆಲಸ. ಈ ಕೆಲಸ ಮಾಡೋಕೆ ಜರ್ನಲಿಸಂ ಆಗಿರಬೇಕು ಅನ್ನುವ ಕಡ್ಡಾಯವೇನಿಲ್ಲ. ಧೈರ್ಯ, ಬರವಣಿಗೆ, ಆಸಕ್ತಿ ಇಷ್ಟಿದ್ದರೆ ಸಾಕು. ನಿಮಗೆ ಈ ಕೆಲಸ ಕೊಡುತ್ತಿದ್ದೇನೆ. ಒಂದೆರಡು ದಿನ ನಮ್ಮ ವರದಿಗಾರರ ಜೊತೆಗೆ ಓಡಾಡಿ. ಕೆಲಸ ಅರಿವಾಗುತ್ತದೆ. ಬೇಕಾದರೆ ವಿಜೇತಾಳ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ಸಹನೆ, ಶೃದ್ಧೆ ಇರಲಿ. ನಿಮ್ಮಲ್ಲಿ ಅಗಾಧ ಧೈರ್ಯ ಇದೆ. ಯಾವುದಕ್ಕೂ ಭಯ ಪಡೋದಿಲ್ಲ ಎನ್ನುವ ನಂಬಿಕೆಯಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮಗೆ ಬಹುದೊಡ್ಡ ಜವಾಬ್ದಾರಿಗಳನ್ನು ವಹಿಸಬಹುದು. ಏಕಾಗ್ರತೆ, ನಂಬಿಕೆ, ಕೆಲಸದೆಡೆಗೆ ಪ್ರೀತಿ ಇಟ್ಟುಕೊಳ್ಳಿ..' ಎಂದು ನವೀನಚಂದ್ರ ಹೇಳುತ್ತಿದ್ದಂತೆ `ಓಕೆ ಸರ್.. ಆಗ್ಲಿ.. ನನಗೆ ಒಪ್ಗೆ ಇದೆ. ನಿಮ್ಮ ನಂಬಿಕೆ ಹಾಳು ಮಾಡೋದಿಲ್ಲ ನಾನು..' ಎಂದು ವಿಕ್ರಂ ಹೇಳಿದ.
`ನಿನ್ನ ಕೆಲಸದ ವಿವರ, ನೀತಿ-ನಿಯಮ ಇತ್ಯಾದಿಗಳ ಬಗ್ಗೆ ವಿಜೇತಾ ಹೇಳುತ್ತಾಳೆ. ಅವಳ ಹತ್ರ ತಿಳ್ಕೋ. ಆದ್ರೆ ನೆನಪಿಟ್ಕೋ ಅವಳ ಹತ್ತಿರ ಕೆಲಸ ಮಾಡೋದು ಬಹಳ ಡೇಂಜರ್ರು. ಅವಳೂ ಕೂಡ ಹುಂಭ ಧೈರ್ಯದ ಹುಡುಗಿ. ಎಂತೆಂತದ್ದೋ ಸುದ್ದಿಗಳನ್ನು ಹೆಕ್ಕಿ ತರುತ್ತಾಳೆ. ಸಾಕಷ್ಟು ಜನರು ಅವಳ ಮೇಲೆ ಅಟ್ಯಾಕ್ ಮಾಡುತ್ತಿರುತ್ತಾರೆ. ನೀನು ಜೊತೆಗಿದ್ರೆ ಅವಳಿಗೆ ಶಕ್ತಿ ಬರುತ್ತದೆ. ಧೈರ್ಯ ಇದ್ದರೆ ಮಾತ್ರ ಈ ಫೀಲ್ಡು ಗೆಲ್ಲಿಸುತ್ತದೆ..' ಎಂದು ಅರ್ಧ ಉಪದೇಶ ಮತ್ತರ್ಧ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು ನವೀನಚಂದ್ರ.
      ಏನನ್ನೋ ಹೇಳಲು ಬಾಯಿತೆರೆದ ವಿಕ್ರಂ `ಥ್ಯಾಂಕ್ಯೂ ಸರ್.. ನಿಮ್ಮ ಈ ಉಪಕಾರ ಎಂದಿಗೂ ಮರೆಯೋದಿಲ್ಲ..' ಎನ್ನುತ್ತಾ ವಿಜೇತಾಳ ಹಿಂದೆ ಹೊರಟ. ಆಗ ಆತನ ಮನಸ್ಸಿನಲ್ಲಿ `ನನ್ನ ಕಥೆಯನ್ನು ಹೇಳುವ ಮೊದಲೆ ನವೀನಚಂದ್ರ ಅವರು ತಮಗೆಲ್ಲಾ ಗೊತ್ತಿದೆ ಎನ್ನುವಂತೆ ವತರ್ಿಸಿದರಲ್ಲ. ನಾನು ಹೇಳುವ ಮೊದಲೇ ಅವರೇ ನನ್ನ ಕುಂಗ್ ಫೂ ಕರಾಟೆ ಶಾಲೆಯ ವ್ಯಥೆಯನ್ನೆಲ್ಲ ಅವರೇ ಮೊದಲು ಹೇಳುತ್ತಿದ್ದರಲ್ಲ.. ಇದು ಹೇಗೆ?' ಎನ್ನುವ ಅನುಮಾನ ಕಾಡಿತು. ಪತ್ರಿಕೆಯವರಲ್ವಾ.. ಗಮನಿಸಿರಬೇಕು ಎಂದುಕೊಂಡು ಸುಮ್ಮನಾದ.
       ಆಕೆ ಸೀದಾ ಕಚೇರಿಯ ಒಳಕ್ಕೆ ಹೋಗಿ ಉಪಸಂಪಾದಕರ ಕೊಠಡಿಯನ್ನು ಹೊಕ್ಕಳು. ಉಪಸಂಪಾದಕರು ಹೇಗಿತರ್ಾರೋ, ಯಾರೋ? ಅವರು ಇನ್ನೇನು ಕೇಳುತ್ತಾರೋ ಎನ್ನುವ ಆಲೋಚನೆಯಲ್ಲಿಯೇ ವಿಕ್ರಂ ಒಳಹೋದ. ನೋಡಿದರೆ ವಿಜೇತಾ ಉಪಸಂಪಾದಕರ ಸೀಟಿನಲ್ಲಿ ಕುಳಿತಿದ್ದಳು. ವಿಸ್ಮಯದಿಂದ ನೋಡುತ್ತಿದ್ದಾಗಲೇ `ನೋಡು ಹೇಳಲಿಕ್ಕೆ ಮರೆತಿದ್ದೆ. ನಾನು ಪತ್ರಿಕೆಯ ಉಪಸಂಪಾದಕು. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಹತ್ತಾರು ಜನ ಉಪಸಂಪಾದಕರಿರ್ತಾರೆ. ಆದರೆ ನಮ್ಮದು ಬೆಳೆಯುತ್ತಿರುವ ಪತ್ರಿಕೆ. ಇದಕ್ಕೆ ನಾನು ಉಪಸಂಪಾದಕಿ. ನವೀನಚಂದ್ರ ಸರ್ ಸಂಪಾದಕರಾದ ಮೇಲೆ ನಾನು ಉಪಸಂಪಾದಕಿಯಾದೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಹುದ್ದೆ ಖಾಲಿಯಿದೆ. ಅದಕ್ಕೆ ನಿನ್ನನ್ನು ಸೇರಿಸಿಕೊಳ್ತಾ ಇರೋದು..' ಎಂದಳು.
         `ನಿಮ್ಮನ್ನು ನಮ್ಮ ಕ್ರೈಂ ರಿಪೋರ್ಟರ್ ಆಗಿ ಸೇರಿಸಿಕೊಳ್ತಾ ಇದ್ದೀವಿ. ಅಪರಾಧ ವರದಿ ಮಾಡೋದು ನಿಮ್ಮ ಮುಖ್ಯ ಕೆಲಸ. ಸಾಕಷ್ಟು ರಿಸ್ಕಿನ ಕೆಲಸ. ಆದರೆ ನಿಮ್ಮ ಮೊದಲಿನ ಕೆಲಸ ಇಲ್ಲಿ ಸಹಾಯಕ್ಕೆ ಬರಬಹುದು. ಚಾಲೇಂಜಿಂಗ್ ಆಗಿರುತ್ತದೆ. ಆದರೆ ಅದೇ ಮಜಾ ಕೊಡುತ್ತದೆ. ಮೊದಲು 15 ದಿನ ಜೊತೆಗೆ ನಾನು ಇದ್ದು ಕೆಲಸ ಹೇಳಿಕೊಡುತ್ತೇನೆ. ನಂತರ ನಿಮಗೆ ಎಲ್ಲ ರೂಢಿಯಾಗುತ್ತದೆ. ನಿಮಗೆ ಪ್ರಾರಂಭದಲ್ಲಿ 12 ಸಾವಿರ ರು. ಸಂಬಳ ನಿಗದಿ ಮಾಡಿದ್ದಾರೆ. ಮುಂದೆ ನಿಮ್ಮ ಕೆಲಸದ ವೈಖರಿ ನೋಡಿ ಸಂಬಳ ಏರಿಕೆಯಾಗುತ್ತ ಹೋಗುತ್ತದೆ. ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುತ್ತಿದ್ದೀರಾ. ಶುಭವಾಗಲಿ. ಯಶಸ್ಸು ನಿಮಗೆ ಸಿಗಲಿ.  ನೀವು ಯಶಸ್ವಿಯಾಗುತ್ತೀರಾ. ಇದು ನನ್ನ ಹಾಗೂ ನವೀನಚಂದ್ರ ಅವರ ನಂಬಿಕೆ. ಹೇಳಿ ಯಾವಾಗಿಂದ ಕೆಲಸಕ್ಕೆ ಬರುತ್ತೀರಾ?' ಎಂದು ಕೇಳಿದಳು ವಿಜೇತಾ.
         `ಈಗಲೇ ಬರಲು ನಾನು ತಯಾರು..' ಎಂದವನ ಮುಖವನ್ನು ಒಮ್ಮೆ ನೋಡಿ ಮೆಚ್ಚುಗೆ ಸೂಚಿಸಿದಳು ವಿಜೇತಾ. `ಈಗ ಬೇಡ.. ನಾಳಿಂದ ಬನ್ನಿ.. ' ಎಂದವಳೇ `ಬನ್ನಿ ನಮ್ಮ ಆಫೀಸಿನ ಎಲ್ಲರನ್ನೂ ಪರಿಚಯ ಮಾಡಿಕೊಡ್ತೀನಿ..' ಎಂದು ಕರೆದುಕೊಂಡು ಹೋಗಿ ಎಲ್ಲರನ್ನೂ ಪರಿಚಯಿಸಿದಳು.
         ಕೆಲಸ ಸಿಕ್ಕ ಖುಷಿಯಲ್ಲಿ ಅಲ್ಲಿ ಇಲ್ಲಿ ಸುತ್ತಾಡಿ ಮರಳಿ ಮನೆಗೆ ಬರುವಾಗ ಸಂಜೆಯಾಗುತ್ತಿತ್ತು. ಮನೆಗೆ ಪೋನ್ ಮಾಡಿದರೆ ಎಂದಿನಂತೆ ಡೆಡ್ಡಾಗಿತ್ತು. ಪತ್ರ ಗೀಚಿ ಸುಮ್ಮನಾದ. `ಅಂತೂ ಕೆಲಸ ಸಿಕ್ತಲ್ಲ..' ಎಂದು ನಿಟ್ಟುಸಿರು ಬಿಟ್ಟ.
         ಮರುದಿನದಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ. ಮೊದ ಮೊದಲು ಸ್ವಲ್ಪ ಕಷ್ಟವಾಯಿತಾದರೂ ವಾರ ಕಳೆಯುವಷ್ಟರಲ್ಲಿ ಪತ್ರಿಕೋದ್ಯಮ ಅರ್ಥವಾಗತೊಡಗಿತ್ತು. ನಂತರ ಯಾವುದೇ ಸಮಸ್ಯೆಯಾಗಲಿಲ್ಲ. ಮೊದ ಮೊದಲು ವಿಜೇತಾ ವಿಕ್ರಂನಿಗೆ ಮಾರ್ಗದರ್ಶನ ನೀಡಿದಳು. ನಂತರ ವಿಕ್ರಂ ಸ್ವತಂತ್ರವಾಗಿ ಕೆಲಸ ಮಾಡತೊಡಗಿದ.

****

       ಕೆಲಸ ಕೊಡಿಸಿದ ಕಾರಣಕ್ಕೋ ಅಥವಾ ಕೆಲಸ ಬಗ್ಗೆ ಮಾರ್ಗದರ್ಶನ ನೀಡಿದ್ದಕ್ಕೋ ವಿಜೇತಾಳ ಬಗ್ಗೆ ವಿಕ್ರಮನಿಗೆ ಮನಸ್ಸಿನಲ್ಲಿ ಗೌರವ ಮನೆಮಾಡಿತ್ತು. ಆಕೆಯ ಜೊತೆಗಿನ ಓಡಾಡ ಸ್ನೇಹಭಾವವನ್ನೂ ತುಂಬಿತ್ತು. ಉತ್ತಮ ಸ್ನೇಹಿತರಾಗಿ ಕೆಲದಿನಗಳಲ್ಲಿಯೇ ಅವರು ಬದಲಾಗಿದ್ದರು. ಕೆಲವೊಮ್ಮೆ ಆಕೆ ತಾನು ಹೋಗುತ್ತಿದ್ದ ಕೆಲಸಕ್ಕೂ ಕರೆದೊಯ್ಯುತ್ತಿದ್ದಳು. ತೀರಾ ರಿಸ್ಕೆನ್ನಿಸುತ್ತಿದ್ದ ಕೆಲಸದಲ್ಲಿ ವಿಕ್ರಂ ಜೊತೆಗಿರುತ್ತಿದ್ದ. ಆಪ್ತವಾದಾಗ ತನ್ನ ಮನೆಗೂ ಕರೆದೊಯ್ದಿದ್ದಳು ವಿಜೇತಾ. ಮನೆಯಲ್ಲಿ ಆಕೆಯ ತಂದೆ, ತಾಯಿ ಹಾಗೂ ತಮ್ಮ ಇದ್ದರು. ಚಿಕ್ಕ ಕುಟುಂಬದಲ್ಲಿ ತಂದೆ ಏನೋ ಕೆಲಸ ಮಾಡುತ್ತಿದ್ದ. ತಮ್ಮ ಇನ್ನೂ ಓದುತ್ತಿದ್ದ.
     
****

       ಹೀಗಿದ್ದಾಗಲೇ ಒಂದು ದಿನ ಮಂಗಳೂರಿನ ಬಂದರಿನಲ್ಲಿ ಒಬ್ಬನ ಕೊಲೆಯಾಗಿತ್ತು. ಇದರ ವರದಿಗಾರಿಕೆಯ ಕೆಲಸ ವಿಕ್ರಮನದ್ದಾಗಿತ್ತು. ಮಂಗಳೂರು ಮೇಲ್ ಪತ್ರಿಕೆ ಕೊಲೆ ಅಥವಾ ಇನ್ಯಾವುದೋ ನಿಘೂಡ ಸನ್ನಿವೇಶಗಳು ನಡೆದಿದ್ದ ಸಂದರ್ಭದಲ್ಲಿ ಅದನ್ನು ಪತ್ತೆ ಹಚ್ಚುವ ಕಾರ್ಯವನ್ನೂ ಮಾಡುತ್ತಿತ್ತು. ಈ ಕಾರಣಕ್ಕಾಗಿಯೇ ಮಂಗಳೂರು ಮೇಲ್ ಓದುಗರ ಮನಸ್ಸಿನಲ್ಲಿ ವಿಭಿನ್ನ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕೊಲೆಯ ಕುರಿತು ವರದಿಯ ಜೊತೆಗೆ ಪತ್ತೆದಾರಿ ಕೆಲಸವನ್ನೂ ಮಾಡುವ ಆಲೋಚನೆ ವಿಕ್ರಮನದ್ದಾಗಿತ್ತು. ಆತ ಅದಾಗಲೇ ಕೊಂಡಿದ್ದ ತನ್ನ ಹೊಸ ಬೈಕನ್ನೇರಿ ಹೊರಡಲು ಅನುವಾಗುತ್ತಿದ್ದಂತೆಯೇ ವಿಜೇತಾ ತಾನೂ ಬರುತ್ತೇನೆಂದಳು. ನವೀನಚಂದ್ರನ ಒಪ್ಪಿಗೆ ಪಡೆದು ಹೊರಟಳು.
        ಇವರು ಹೋಗುವ ವೇಳೆಗಾಗಲೇ ಶವದ ಮಹಜರು ನಡೆದಿತ್ತು. ಪೊಲೀಸರು ಜನರನ್ನು ಚದುರಿಸುತ್ತಿದ್ದರು. ಇವರು ಹೋಗಿ ಎಲ್ಲ ರೀತಿಯ ವರದಿ ಪಡೆದು ಸತ್ತವನ ಪೋಟೋ ತೆಗೆದುಕೊಂಡರು. ಮಾಹಿತಿ ಎಲ್ಲ ಪಡೆದ ನಂತರ ತಿಳಿದಿದ್ದೇನೆಂದರೆ ಕೊಲೆಯಾಗಿದ್ದವನೊಬ್ಬ ಪೊಲೀಸ್ ಅಧಿಕಾರಿ. ಆದರೆ ಆ ಅಧಿಕಾರಿ ತನ್ನ ಡ್ಯೂಟಿಯ ವಸ್ತ್ರದಲ್ಲಿರಲಿಲ್ಲ. ಆತನನ್ನು ಬೆಳಗಿನ ಜಾವದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ಬಳಕೆ ಮಾಡಿದ್ದ ಚಾಕು ಅಲ್ಲಿ ಇರಲಿಲ್ಲ. ಆರೋಪಿ ಚಾಣಾಕ್ಷತನದಿಂದ ಹತ್ಯೆ ಮಾಡಿದ್ದ. ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗದೇ ಇದ್ದಿದ್ದು ಸೊಷ್ಟವಾಗಿತ್ತು. ಪೊಟೋಗ್ರಾಫರ್ ಗಳು ಒಂದಿಷ್ಟು ಜನ ಶವದ ವಿವಿಧ ಭಂಗಿಯ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಎಲ್ಲವನ್ನು ಸಂಗ್ರಹಿಸಿ ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ವಿಕ್ರಮನ ಕಣ್ಣಿಗೊಂದು ಲಾಕೆಟ್ ನೆಲದ ಮೇಲೆ ಬಿದ್ದಿರುವುದು ಕಾಣಿಸಿತು. ಜನಜಂಗುಳಿಯ ನಡುವೆ ಯಾರ ಗಮನಕ್ಕೂ ಬಂದಿರಲಿಲ್ಲ. ವಿಕ್ರಮ ಬಗ್ಗಿ ಅದನ್ನು ಎತ್ತಿಕೊಂಡ. ಆ ಲಾಕೆಟ್ ತೀರಾ ವಿಶೇಷವಾಗಿರದಿದ್ದರೂ ಎಸ್. ಎಂದು ಬರೆದಿದ್ದ ಕೀ ಬಂಚ್ ಅದಾಗಿತ್ತು. ಇರ್ಲಿ.. ನೋಡೋಣ ಎಂದು ಅದನ್ನು ಕಿಸೆಯಲ್ಲಿ ಹಾಕಿಕೊಂಡ.
        ಬಹುಶಃ ಈ ಕೀಬಂಚ್ ಮುಂದೆ ಹಲವು ಚಿತ್ರ ವಿಚಿತ್ರ ತಿರುವುಗಳಿಗೆ, ತೊಂದರೆಗೆ ಒಡ್ಡುತ್ತದೆ ಎನ್ನುವುದು ಗೊತ್ತಿದ್ದಿದ್ದರೆ ವಿಕ್ರಮ ಆ ಲಾಕೇಟನ್ನು ಎತ್ತಿಟ್ಟುಕೊಳ್ಳುತ್ತಲೇ ಇರಲಿಲ್ಲವೇನೋ. ಪಾ..ಪ.. ಆತನಿಗೆ ಅದು ಗೊತ್ತಾಗಲೇ ಇಲ್ಲ. ಅಷ್ಟಕ್ಕೂ ಅದೆಲ್ಲಾ ತಿಳಿಯಲು ಆತನೇನು ಜ್ಯೋತಿಷಿಯೇ..?

(ಮುಂದುವರಿಯುತ್ತದೆ)     

Saturday, December 27, 2014

ಒಲವು

(ರೂಪದರ್ಶಿ: ಅನುಷಾ ಹೆಗಡೆ)
ಕವಿತೆಯಾಗು ಗೆಳತಿ ನೀನು
ನನ್ನ ಬಾಳಿಗೆ
ತುಂಬಿ ಬಿಡಲಿ ಒಂದೇ ಕ್ಷಣ ದಿ
ಮನದ ಜೋಳಿಗೆ!

ನೀನೆಂದರೆ ನನ್ನ ಒಳಗೆ
ಸದಾ ಅಕ್ಷರ
ನಿನ್ನ ಕಾಣದಿರೆ ಅಂದು
ಮನವು ತತ್ತರ !

ನೀನೆಂಬುದು ನನ್ನ ಪಾ
ಲಿಗೊಂದು ಅದ್ಭುತ
ನಿನ್ನ ಕಡೆಗೆ ನನ್ನ ಒಲವು
ಮೇರು ಪರ್ವತ !

ಸದಾ ನಿನ್ನ ನಗುವೊಂದೇ
ನನ್ನ ಬದುಕ ಶಕ್ತಿ
ನಿನ್ನ ಒಲವು ನನಗೆ ಸಿಗಲು
ಬದದುಕಿಗಂದೇ ತೃಪ್ತಿ.



Thursday, December 25, 2014

ತಮಾಷೆಯ ಹನಿಗಳು

ಕಂಸ

ಕಂಸ ಎಂದರೆ ಕೃಷ್ಣನ
ಮಾವ ಎನ್ನುವುದೊಂದೇ ಅಲ್ಲ|
ಇನ್ನೊಂದಿದೆ.
ಆಗಾಗ ಬರಹದ, ಮದ್ಯ ಹಾಗೂ
ವ್ಯಾಕರಣದ ನಡುವೆ
ಬಂದು ಕಾಡುತ್ತಿರುತ್ತದೆ ||

ಶನಿ

ಇಂದಿನ ಸಾಲಿಗರಂತೆ
ಎಲ್ಲೆಂದರಲ್ಲಿ ತಡೆದು
ಕಾಟ ಕೊಡುವಾತ |
ಕೈಯ, ಮೈಯ
ತ್ರಾಣ ಹೀರಿ ಬಿಡುವಾತ |

ಗಾಢ-ಪ್ರೀತಿ

ನನ್ನ ಕಣ್ಣಿಗೆ ನೀನು
ಸುಂದರ ಹೂವಿನಂತೆ ಕಾಣುವೆ |
ಆದ್ದರಿಂದ ನಾನು ದುಂಬಿಯಂತೆ
ನಿನ್ನ ಹೀರುತ್ತಿರುವೆ ||

ಅರ್ಜುನ

ಇವನೇ ಆಧುನಿಕ ರಾಜಕೀಯ
ವ್ಯಕ್ತಿಗಳಿಗೆ ಆದರ್ಶ ವ್ಯಕ್ತಿ |
ಏಕೆಂದರೆ ಇವನೇ ಕೃಷ್ಣ
ಮಾಡಿದ ಅಷ್ಟೂ ಕೆಲಸಗಳನ್ನು
ತಾನೇ ಮಾಡಿದ್ದೆಂದಾತ ||

ನಾಂಡ್ರೋಲಿನ್

ಆಗೊಮ್ಮೆ ಆಗಿದ್ದ ಅಕ್ತರ್
ಪಾಕಿಸ್ತಾನಕ್ಕೆ ಮಹಾನ್ |
ಆದರೆ ಆ ಪುಣ್ಯಾತ್ಮನನ್ನು
ಹಾಳು ಮಾಡಿದ್ದು ಮಾತ್ರ ನಾಂಡ್ರೋಲಿನ್ ||

Wednesday, December 24, 2014

ಅಘನಾಶಿನಿ ಕಣಿವೆಯಲ್ಲಿ-4


          ಮೂರ್ತಿಗಳ ಮನೆಯನ್ನು ಸೇರುವ ವೇಳೆಗೆ ಆಗಲೇ ಮದ್ಯಾಹ್ನ ಕಳೆದು ಸಂಜೆ ಧಾವಿಸುತ್ತಿತ್ತು. ಬಂದವರು ವಿಶ್ರಾಂತಿಗಾಗಿ ನಿಲ್ಲಲೇ ಇಲ್ಲ. ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡುವ ಹುಚ್ಚು ಎಲ್ಲರಿಗೂ. ತಿರುಗಿದರು. ಮೂರ್ತಿಯವರ ಮನೆಯಿದ್ದ ಮಲ್ಲೇಶ್ವರಂ, ಬ್ರಿಗೇಡ್ ರೋಡ್, ಎಂ. ಜಿ. ರೋಡ್ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಓಡಾಡಿ ಬಂದರು. ಮರಳಿ ಮೂರ್ತಿಯವರ ಮನೆ ಸೇರುವ ವೇಳೆಗೆ ಸಂಜೆ 9ನ್ನೂ ದಾಟಿತ್ತು.
           ಬರುವ ವೇಳೆಗೆ ಅಲ್ಲಿಯೇ ಇದ್ದ ಮೂರ್ತಿಯವರು `ಏನ್ರಪ್ಪಾ ಬೆಂಗಳೂರು ತಿರುಗಾಡಿ ಬಂದಿರಾ? ಯಾವ್ ಯಾವ್ ಕಡೆಗೆ ಹೋಗಿದ್ರಿ?' ಎಂದು ಕೇಳಿದರು.
          `ಇಲ್ಲ.. ಇಲ್ಲ.. ಎಲ್ಲ ಕಡೆ ಹೋಗಿಲ್ಲ.. ಮಲ್ಲೇಶ್ವರಂ ಅಷ್ಟೇ ಓಡಾಡಿದ್ವಿ ನೋಡಿ..' ಎಂದು ತಮಾಷೆ ಮಾಡಿದ ವಿಕ್ರಂ. `ಹಿಡಿಸ್ತಾ ಬೆಂಗಳೂರು?' ಕೇಳಿದರು ಮೂರ್ತಿಗಳು.
           `ಹುಂ.. ಬೆಂಗಳೂರು ಹಿಡಿಸದರೇ ಇದ್ದರೆ ಹೇಗೆ ಹೇಳಿ? ಮಂಗಳೂರಿನಂತೆ ಸೆಖೆ, ಉಪ್ಪುನೀರು ಯಾವುದೂ ಇಲ್ಲಿಲ್ಲ. ತಂಪು ಹವೆ, ಆಹ್ಲಾದಕರ ವಾತಾವರಣ.. ಬಹಳ ಖುಷಿಯಾಗುತ್ತದೆ..' ಎಂದ ವಿಕ್ರಂ. ಆ ಸಮಯದಲ್ಲಿ ಮೂರ್ತಿಯವರ ಮನೆಯವರೆಲ್ಲ  ಆಗಮಿಸಿದ್ದರು. ಹೀಗಾಗಿ ಎಲ್ಲರನ್ನೂ ಮತ್ತೊಮ್ಮೆ ಪರಿಚಯಿಸಿದರು.

*****4*****

           `ನೋಡಿ.. ನಾಳೆ ಜವರಿ 26. ಎಲ್ಲರೂ ಗಣರಾಜ್ಯೋತ್ಸವದ ತಲೆಬಿಸಿಯಲ್ಲಿ ಇರ್ತಾರೆ. ಇಂಥ ಟೈಮನ್ನು ನಾವು ಹಾಳುಮಾಡ್ಕೋಬಾರ್ದು. ಇಂಥ ಹೊತ್ತಲ್ಲಿ ಪೊಲೀಸರು ಬೇರೆ ಕಡೆ ಯೋಚನೆ ಮಾಡ್ತಿರ್ತಾರೆ. ನಾವು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಈ ವಸ್ತುಗಳನ್ನ ಅಂದ್ರೆ ಗಾಂಜಾ, ಕೋಕೋ ಎಲೆಗಳು, ಆಯುರ್ವೇದ ಔಷಧಿಗಳು, ಆಫೀಮು ಇವನ್ನೆಲ್ಲ ಸಾಗಿಸಬೇಕು. ಕಾರವಾರ, ತದಡಿ, ಭಟ್ಕಳ, ಅಂಕೋಲಾ, ಧಾರೇಶ್ವರ  ಈ ಭಾಗಗಳಲ್ಲಿ ಬೀಚಿನ ಮೂಲಕ ವಿದೇಶಗಳಿಗೆ ಈ ವಸ್ತುಗಳನ್ನು ಸಾಗಿಸುವುದು ಸುಲಭ. ನೆನಪಿರ್ಲಿ ಎಲ್ಲ ಕಡೆ ಹುಷಾರಾಗಿರಬೇಕು. ವಿದೇಶದಿಂದ ಬರುವ ಮಾಲುಗಳನ್ನು ಸರಿಯಾಗಿ ಸಂಗ್ರಹ ಮಾಡಿಕೊಳ್ಳಿ. ಬಂದ ಮಾದಕ ವಸ್ತುಗಳನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಶಿರಸಿಯಲ್ಲೂ ಈ ಕಾರ್ಯ ಸಮರ್ಪಕವಾಗಿ ಆಗಬೇಕು. ನೆನಪಿರ್ಲಿ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮೆಲ್ಲರ ತಲೆ ಎಗರುತ್ತದೆ ನೆನಪಿಟ್ಕೊಂಡಿರಿ..' ಎಂದು ಒಬ್ಬಾತ ಅದೊಂದು ನಿಘೂಡ ಸ್ಥಳದಲ್ಲಿ ತನ್ನವರಿಗೆ ಹೇಳುತ್ತಿದ್ದ. ಉಳಿದವರು ಅದಕ್ಕೆ ತಲೆಯಲ್ಲಾಡಿಸುತ್ತಿದ್ದರು.
           ಜನರನ್ನು ಒಳ್ಳೆಯತನದಿಂದ ಕೆಟ್ಟತನಕ್ಕೆಳೆಯುವ, ಅವರಿಗೆ ಬೇರೆ ಯಾವುದರೆಡೆಗೂ ಯೋಚನೆಯೇ ಇರದಂತೆ, ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಜಾಲವೊಂದು ಅಲ್ಲಿತ್ತು. ಅಲ್ಲದೇ ಮಲೆನಾಡಿನ ಮಡಿಲಲ್ಲಿ ಬೆಳೆಯುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಕದ್ದು ಸಾಗಿಸಿ ಬಹು ರಾಷ್ಟ್ರೀಯ, ಔಷಧಿ ತಯಾರಿಕಾ ಸಂಸ್ಥೆಗಳಿಗೆ ಮಾರಾಟವನ್ನು ಮಾಡಲಾಗುತ್ತಿತ್ತು. ಈ ಜಾಲಕ್ಕೆ ಜನರ ಒಳಿತು, ಕೆಡುಕುಗಳು ಇಷ್ಟವಿರಲಿಲ್ಲ. ಹಣಗಳಿಕೆಯೊಂದೇ ಮೂಲೋದ್ಧೇಶವಾಗಿತ್ತು. ಪೊಲೀಸ್ ಇಲಾಖೆ ಇವರ ಬೆನ್ನು ಬಿದ್ದು ದಶಕಗಳೇ ಕಳೆದಿದ್ದವು. ಆದರೆ ಇಲಾಖೆ ಚಿಕ್ಕ ಜಾಡನ್ನು ಹಿಡಿಯಲೂ ವಿಫಲವಾಗಿತ್ತು. ಗೂಢಚರ ಇಲಾಖೆ ತಮ್ಮ ಅಧಿಕಾರಿಗಳನ್ನು ಈ ಜಾಲದ ಹಿಂದೆ ಬಿಟ್ಟಿತ್ತು. ಜೊತೆ ಜೊತೆಯಲ್ಲಿ ಖಾಸಗಿ ಗೂಢಚಾರರೂ ಕೂಡ ತಮ್ಮದೇ ಕೆಲಸವನ್ನು ಮಾಡಲು ಆರಂಭಿಸಿದ್ದರು. ಈ ಜಾಲವನ್ನು ಬೇಧಿಸಿದರೆ ತಮಗೆ ಹೆಮ್ಮೆ ಎಂದುಕೊಂಡಿದ್ದರು. ಆದರೆ ಒಂದು ಸಣ್ಣ ಎಳೆ ಸಿಕ್ಕಿತು ಎಂದು ಹುಡುಕಲು ಆರಂಭಿಸಿದರೆ ಗೊಂದಲ ಉಂಟಾಗಿ ಎತ್ತೆತ್ತಲೋ ಸಾಗುತ್ತಿತ್ತು.

****

         ಜನವರಿ 26. ಗಣರಾಜ್ಯದ ದಿನ. ಮೊದಲೇ ನಿರ್ಧರಿಸಿದಂತೆ ವಿಕ್ರಂ ಹಾಗೂ ಜೊತೆಗಾರರು ವಿಧಾನ ಸೌಧದ ಎದುರು ಬಂದು ಸೇರಿದರು. ಅಲ್ಲಿಂದ ಪರೇಡ್ ಗ್ರೌಂಡಿಗೆ ಹೋದರು. ಏನೋ ವಿಶೇಷ ನಡೆಯುತ್ತದೆ ಎಂದುಕೊಂಡು ಹೋದವರಿಗೆ ರಾಜಕಾರಣಿಗಳ ಭಾಷಣ ಬೇಸರವನ್ನು ತರಿಸಿತು. ನಿರಾಸೆಯಿಂದ ಸುತ್ತಮುತ್ತಲೂ ಓಡಾಡಲು ಆರಂಭಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣವನ್ನು ವೀಕ್ಷಿಸಿ, ಹತ್ತಿರದಲ್ಲೇ ಇದ್ದ ಕಬ್ಬನ್ ಪಾರ್ಕನ್ನು ವೀಕ್ಷಣೆಗೆ ಹೊರಟರು. ಕಬ್ಬನ್ ಪಾರ್ಕಿನಲ್ಲಿದ್ದ ಪ್ರೇಮಿಗಳ ಜೋಡಿಗಳನ್ನು ನೋಡಿ ಬೆರಗಾದರು. ಕೆಲವೆಡೆ ಅಸಹ್ಯವನ್ನೂ ಪಟ್ಟುಕೊಂಡರು. ಜೊತೆಗಿದ್ದ ಪ್ರದೀಪನ ಕಣ್ಣಿಗೆ ವಿಶೇಷ ಸಂಗತಿಯೊಂದು ಬಿದ್ದಿತು. ವಿಕ್ರಂ ಹಾಗೂ ಅವನ ಜೊತೆಗಾರರು ಎಲ್ಲ ಕಡೆಗೆ ಓಡಾಡುತ್ತಿದ್ದರೂ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸುತ್ತಿದ್ದ. ಬಹಳ ಸಮಯದಿಂದ ವಿಕ್ರಂ-ಜೊತೆಗಾರರು ಹೋದ ಕಡೆಯಲ್ಲೆಲ್ಲ ಬರುತ್ತಿದ್ದ. ಚಲನವಲನ ವೀಕ್ಷಿಸುತ್ತಿದ್ದ. ಪ್ರದೀಪ ಮೊದ ಮೊದಲು ಇದನ್ನು ಅಲಕ್ಷಿಸಿದನಾದರೂ ನಂತರ ಆ ವ್ಯಕ್ತಿ ಹಿಂಬಾಲಿಸುತ್ತಿದ್ದುದು ಖಚಿತವಾದ ನಂತರ ತಾನು ಸ್ವಲ್ಪ ಎಚ್ಚರಿಕಿಯಿಂದ ಇರತೊಡಗಿದೆ. ಈ ವಿಷಯವನ್ನು ಮೊದಲು ವಿಕ್ರಂನಿಗೆ ತಿಳಿಸೋಣ ಎಂದುಕೊಂಡನಾದರೂ ಕೊನೆಗೆ ಬೇಡ ಎಂದುಕೊಂಡು ಸುಮ್ಮನಾದ. ಹಾಗಾದರೆ ಹೀಗೆ ಹಿಂಬಾಲಿಸುತ್ತಿದ್ದ ವ್ಯಕ್ತಿ ಯಾರು? ಪ್ರದೀಪನೇನಾದರೂ ವಿಕ್ರಂನಿಗೆ ಈ ವಿಷಯ ತಿಳಿಸಿದ್ದರೆ ಮುಂದೇನಾದರೂ ತಿರುವು ಘಟಿಸುತ್ತಿತ್ತೇ? ಇದೇನಿದು ಇಂತಹ ಗೂಢತೆ?

*****

             ಒಂದೆರಡು ದಿನಗಳನ್ನು ಬೆಂಗಳೂರಿನಲ್ಲಿ ಕಳೆದ ಮೇಲೆ ನಿರ್ಣಾಯಕ ಎನ್ನಿಸಿದಂತಹ ದಿನಗಳು ಬಂದವು. ಜನವರಿ 28. ಆ ದಿನದ ಸೂರ್ಯ ಟೆನ್ಶನ್ ನೊಂದಿಗೆ ಹುಟ್ಟಿದನೇನೋ ಎನ್ನುವಂತೆ ಎಲ್ಲರಿಗೂ ಅನ್ನಿಸತೊಡಗಿತ್ತು. ಎಲ್ಲರೂ ಸಮಗ್ರ ತಯಾರಿಯೊಂದಿಗೆ ನಿಗದಿತ ಸ್ಥಳಕ್ಕೆ ಹೋದರು. ಅಲ್ಲಾಗಲೇ ಜನರೆಲ್ಲರೂ ಸೇರಿದ್ದರು.
             ಅದೊಂದು ದೊಡ್ಡ ಬಯಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದವು. ಅಲ್ಲಿ ಹೋಗಿ ಕುಳಿತುಕೊಳ್ಳುವ ವೇಳೆಗಾಗಲೇ ಸ್ಪರ್ಧಾ ಘೋಷಣೆಯೂ ಆಯುತು. ಪ್ರಾರಂಭದ ಒಂದೆರಡು ಸ್ಪರ್ಧೆಗಳಲ್ಲಿ ಗೆಲುವುಗಳನ್ನೇ ಕಾಣಲಿಲ್ಲ. ನಂತರ ಜೂಡೋದಲ್ಲಿ ಒಬ್ಬಾತ ಬಹುಮಾನ ಗಳಿಸಿದ. ನಂತರ ಗೆಲುವೆಂಬುದು ಎಲ್ಲ ಕಡೆಗಳಿಂದಲೋ ಎದ್ದೋಡಿ ಬಂದಿತು. ಕುಂಗ್-ಫೂ, ಕತ್ತಿ-ವರಸೆ, ಕರಾಟೆ, ವಾಲ್ ಕ್ಲೈಂಬಿಂಗ್ ಗಳಲ್ಲೆಲ್ಲಾ ಭರ್ಜರಿ ಗೆಲುವುದು ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ತಂಡಗಳಿಗಾಯಿತು.
            ತಮಾಷೆಗೆ ಎಂಬಂತೆ 3 ಸ್ಪರ್ಧೆಗಳಲ್ಲಿ ವಿಕ್ರಂ ಪಾಲ್ಗೊಂಡಿದ್ದ. ಆದರೆ ಆ ಮೂರೂ ಸ್ಪರ್ಧೆಯ ಪ್ರಥಮ ಸ್ಥಾನ ವಿಕ್ರಂನಿಗೆ ಮೀಸಲಾಯಿತು. ಇದರಿಂದ ಖುಷಿಯೋ ಖುಷಿ ಹೊಂದಿದ ಆತ.
            ಒಟ್ಟಿನಲ್ಲಿ ಬೆಂಗಳೂರಿನ ಪ್ರವಾಸ ಗೆಲುವನ್ನೇ ತಂದಿತು ಅವರಿಗೆ. ಮರುದಿನ ಕನ್ನಡದ ಬಹುತೇಕ ಎಲ್ಲಾ ಕ್ರೀಡಾ ಪುಟಗಳಲ್ಲಿ ಇವರ ಸಾಧನೆಯನ್ನು ಪ್ರಶಂಶಿಸಿ ಬರೆದಿದ್ದರು. ಮಂಗಳೂರ ಸಾಹಸಿಗರು, ವಿಕ್ರಂನ ತಂಡದ ವಿಕ್ರಮ ಮುಂತಾದ ತಲೆಬರಹದೊಂದಿಗೆ ವರದಿಗಳು ಬಂದಿದ್ದವು. ಹೀಗೆ ಒಮ್ಮಿಂದೊಮ್ಮೆಲೆ ವಿಕ್ರಮ ಕರ್ನಾಟಕದಾದ್ಯಂತ ಮನೆ ಮಾತಾದ. ಇದರಿಂದ ಮೂರ್ತಿಯವರ ಮನೆಯಲ್ಲಂತೂ ಬಹಳ ಸಂತಸ ಪಟ್ಟರು. ತಾವೇ ಗೆದ್ದಂತೆ ಕುಣಿದಾಡತೊಡಗಿದರು.
            ವಿಕ್ರಂ ತಂಡದವರು ಜನವರಿ 29ರಂದು ಬೆಂಗಳೂರಿನಲ್ಲೇ ಉಳಿದು ಜನವರಿ 30ರಂದು ಮಂಗಳೂರಿಗೆ ವಾಪಾಸಾದರು. ರೂಮಿನಲ್ಲಿ ಬಂದು ಕುಳಿತುಕೊಳ್ಳುವಷ್ಟರಲ್ಲೇ ವಿಕ್ರಮನ ಮೊಬೈಲ್ ಬಿಡುವಿಲ್ಲದಂತೆ ರಿಂಗಣಿಸತೊಡಗಿತ್ತು. ಪೋನಿನ ಮೇಲೆ ಫೋನ್. ಅಭಿನಂದನೆಗಳ ಸುರಿಮಳೆ. ಎಲ್ಲ ಕರೆಗಳನ್ನು ಸ್ವೀಕರಿಸಿ, ಅವರ ಅಭಿನಂದನೆಯನ್ನು ಸ್ವೀಕರಿಸುವಷ್ಟರಲ್ಲಿ ವಿಕ್ರಂ ಸುಸ್ತೋ ಸುಸ್ತು.
           ಆ ದಿನ ವಿಕ್ರಂ ಬಹಳ ಸಂತಸದಿಂದ ಸ್ವರ್ಗಕ್ಕೇ  ಮೂರು ಗೇಣು ಎಂಬಂತೆ ಆಡತೊಡಗಿದ್ದ. ಅದರ ನೆನಪಲ್ಲೇ ಆತ ಮಲಗಿ ಸವಿ ಕನಸನ್ನೂ ಕಾಣಲಾರಂಭಿಸಿದ.

****
     
          ಮರುದಿನ, ವಿಕ್ರಂ ಬಹಳ ಲೇಟಾಗಿ ಎದ್ದ. ತಿಂಡಿ ಇತ್ಯಾದಿಯನ್ನು ಮುಗಿಸುವ ವೇಳೆಗಾಗಲೇ ಆತನ ರೂಮಿನ ಕಾಲಿಂಗ್ ಬೆಲ್ ಸದ್ದಾಗತೊಡಗಿತು. ಹೋಗಿ ಬಾಗಿಲು ತೆಗೆದ. ಬಾಗಿಲಲ್ಲಿ ಒಬ್ಬಾಕೆ ನಿಂತಿದ್ದಳು. ಹಿಂದೆ ಒಬ್ಬಾತ ಗಡ್ಡದವನು ನಿಂತಿದ್ದ. ವಿಕ್ರಮನಿಗೆ ಒಮ್ಮೆಲೆ ಅಚ್ಚರಿಯಾದರೂ ಸಾವರಿಸಿಕೊಂಡು ಅವರನ್ನು ಒಳಕ್ಕೆ ಸ್ವಾಗತಿಸಿದ. ಬ್ಯಾಚುಲರ್ ರೂಮ್. ಒಳಗಿದ್ದ ವಸ್ತುಗಳು ಸಾಕಷ್ಟು ಅಸ್ತವ್ಯಸ್ತವಾಗಿದ್ದವು. ಮುಜುಗರದಿಂದ ಅವನ್ನೆಲ್ಲ ಮುಚ್ಚಿಡುವ ಪ್ರಯತ್ನ ಮಾಡಿದ. ಬಂದ ಆಗಂತುಕರು ನಕ್ಕರು.
          ಅವರೀರ್ವರೂ ಒಳಕ್ಕೆ ಬಂದವರೇ ತಮ್ಮ ಪರಿಚಯವನ್ನು ತಿಳಿಸಿದರು. ಅವರೀರ್ವರಲ್ಲಿ ಒಬ್ಬಾಕೆ ವಿಜೇತಾ ಎಂದೂ, ಇನ್ನೊಬ್ಬ ಗಡ್ಡಧಾರಿ ವ್ಯಕ್ತಿ ನವೀನಚಂದ್ರ ಎಂದೂ ತಿಳಿಯಿತು. ನವೀನಚಂದ್ರ ಮಂಗಳೂರು ಮೇಲ್ ಪತ್ರಿಕೆಯ ಉಪಸಂಪಾದಕರೆಂದೂ, ವಿಜೇಜಾ ಅದರ ವರದಿಗಾರ್ತಿಯೆಂದೂ ತಿಳಿಯಿತು. ನವೀನಚಂದ್ರ ಸುಮಾರು 50ರ ಆಸುಪಾಸಿನವನು. ವಿಜೇತಾಳಿಗೆ ಬಹುಶಃ 22-23 ಇರಬಹುದು. ಆಗ ತಾನೇ ಕಾಲೇಜನ್ನು ಮುಗಿಸಿ ಬಂದಿದ್ದಳೇನೋ ಎಂದುಕೊಂಡ. ಚಂದನೆಯ ದುಂಡು ಮುಖ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನಿಸುವಂತಿದ್ದಳು ಅವಳು.
         `ನಿಮ್ಮ ಬಗ್ಗೆ ಪೇಪರಿನಲ್ಲಿ ನೋಡಿದೆ. ನಿಮ್ಮಂಥವರು ಮಂಗಳೂರಿನವರು ಎಂದರೆ ಹೆಮ್ಮೆಯ ಸಂಗತಿ. ಹಾಳು ಬಿದ್ದು ಹೋಗುತ್ತಿರುವ ಇಂದಿನ ಯುವ ಜನತೆಗೆ ತಿಳಿ ಹೇಳಲು ನಿಮ್ಮನ್ನು ಬಳಸಿ, ನಿಮ್ಮ ಸಂದರ್ಶನ ಮಾಡಲು ಬಂದಿದ್ದೇವೆ.' ಎಂದು ನವೀನಚಂದ್ರ ಹೇಳಿದರು.
          `ಅಯ್ಯೋ ಅಂತಹ ದೊಡ್ಡ ಸಾಧನೆ ನಾವೇನೂ ಮಾಡಿಲ್ಲ.. ಥೋ... ಬಿಡಿ..' ಎಂದ ವಿಕ್ರಂ.
          `ಇಲ್ಲ.. ಇಲ್ಲ.. ನೀವು ಈಗ ಮಾಡಿರುವ ಸಾಧನೆ ಬಹು ದೊಡ್ಡದು ನೋಡಿ..' ಎಂದಳು ವಿಜೇತಾ. ಆಕೆಯ ಧ್ವನಿ ಮಧುರವಾಗಿತ್ತು.
          `ಏನೋ, ಎಂಥೋ.. ನಾನು ಕಲಿಸಿದೆ, ನನ್ನ ಪ್ರೆಂಡ್ಸ್ ಪ್ರದೀಪ್ ಜೊತೆಗಿದ್ದು ಸಹಾಯ ಮಾಡಿದ. ಗೆದ್ವಿ. ಅದಿರ್ಲಿ ಬಿಡಿ.. ನಿಮ್ಮನ್ನ ನನ್ನ ಸಾಹಸಿ ತಂಡದ ಬಳಿಗೆ ಕರೆದೊಯ್ಯುತ್ತೇನೆ. ಬನ್ನಿ ಎಂದು ಅವರನ್ನು ಕರೆದೊಯ್ದ.
           ಹೀಗೆ ಕರೆದೊಯ್ದಿದ್ದನ್ನೂ ಕೂಡ ಆ ಅಪರಿಚಿತ ವ್ಯಕ್ತಿ ವೀಕ್ಷಿಸಿ, ಫಾಲೋ ಮಾಡುತ್ತಿದ್ದ. ಆತ ತಾನು ಕಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾನೆ ಎನ್ನುವುದು ಮಾತ್ರ ನಿಘೂಡವಾಗಿತ್ತು.
          ವಿಕ್ರಂ ಅವರಿಬ್ಬರನ್ನೂ ಅದ್ವೈತ ಆತ್ಮರಕ್ಷಣೆ ಕೇಂದ್ರಕ್ಕೆ ಕರೆದೊಯ್ದ. ಎಲ್ಲರನ್ನೂ ಪರಿಚಯಿಸಿದ. ಅವರು ಏನೇನೋ ಪ್ರಶ್ನೆ ಕೇಳಿದರು. ಇವರು ಉತ್ತರಿಸಿದರು. ಆದರೆ ಆ ದಿನ ಮಾತ್ರ ಪ್ರದೀಪನ ಸುಳಿವೇ ಇರಲಿಲ್ಲ. ಆತನ ಪರಿಚಯಿಸಲು ಆದಿನ ಸಾಧ್ಯವಾಗಲೇ ಇಲ್ಲ. ನವೀನ ಚಂದ್ರ ಹಾಗೂ ವಿಜೇತಾ ಇಬ್ಬರೂ ತಮ್ಮನ್ನು ಮತ್ತೆ ಭೇಟಿಯಾಗಬೇಕೆಂದು ಹೇಳಿ ಹೊರಟುಹೋದರು.
          ಮರುದಿನ ಮಂಗಳೂರು ಮೇಲ್ ನಲ್ಲಿ ಇವರ ಸಂದರ್ಶನವೇ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿತ್ತು. ಇದರಿಂದ ಖುಷಿಯಾದ ವಿಕ್ರಂ ಅದಕ್ಕೆ ಕಾರಣರಾದವರಿಗೆ ಮನದಲ್ಲಿಯೇ ಥ್ಯಾಂಕ್ಸ್ ಎಂದುಕೊಂಡ. ಮುಂದೊಂದು ದಿನ ಇದೇ ಹೊಸ ತಿರುವನ್ನು ನೀಡಲಿತ್ತು.

*****

(ಮುಂದುವರಿಯುತ್ತದೆ)