Tuesday, February 25, 2025

ಬೆಂಕಿ

ಈಗಿನಂತೆಯೇ ಅದೂ ಕೂಡ ಬೆಟ್ಟಗಳಿಗೆ ಬೆಂಕಿ ಬೀಳುವ ಸಮಯ. ಅಲ್ಲೆಲ್ಲೋ ಬೆಟ್ಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಯ್ತಂತೆ, ಇಲ್ಲೆಲ್ಲೋ ಬೆಂಕಿ ಅವಘಡ ಆಯ್ತಂತೆ ಎಂಬ ಸುದ್ದಿಗಳು ಕಿವಿಗೆ ಬೀಳುತ್ತಿದ್ದ ಸಮಯವದು. ಆಗತಾನೆ ಹುಲ್ಲು ಒಣಗಿ ನಿಂತಿತ್ತು. ಬೆಟ್ಟ-ಗುಡ್ಡಗಳಲ್ಲೆಲ್ಲ ಒಣಗಿದ ಹುಲ್ಲುಗಳು ತಮ್ಮ ನೈಸರ್ಗಿಕ ಹಸಿರು ಬಣ್ಣವನ್ನು ಕಳೆದುಕೊಂಡು ಗಾಳಿಗೆ ತೂಗಾಡುತ್ತ-ತೊನೆದಾಡುತ್ತ ನಿಂತಿದ್ದವು. ಹೀಗಾಗಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದವು. ಇಂತಹ ಸುದ್ದಿಗಳನ್ನೆಲ್ಲ ಕೇಳುತ್ತಲೇ ನಾಗರಾಜ ತನ್ನ ಕಪ್ಪನೆಯ ಪಲ್ಸರ್‌ ಬೈಕ್ ತೆಗೆದುಕೊಂಡು ಶಿರಸಿಗೆ ಹೋಗಿದ್ದ. ಶಿರಸಿಯಲ್ಲಿ ಕೆಲಸ ಮುಗಿಸುವ ವೇಳೆಗಾಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಕತ್ತಲು ಆವರಿಸುತ್ತಿತ್ತು.

ರಾತ್ರಿಯ ಊಟಕ್ಕೆ ಸರಿಯಾಗಿ ಮನೆಯನ್ನು ತಲುಪಿಕೊಳ್ಳಬೇಕು ಎಂದುಕೊಳ್ಳುತ್ತಲೇ ಬೈಕ್‌ ಹತ್ತಿದ್ದ. ಗಿಡಮಾವಿನಕಟ್ಟೆಯನ್ನು ದಾಟಿ ಯಡಳ್ಳಿ ತಲುಪಬೇಕು ಎನ್ನುವಷ್ಟರ ವೇಳೆಗೆ ಆಗಲೇ ಎಲ್ಲಿಂದಲೋ ತೀವ್ರ ಸ್ವರೂಪದ ಗಾಳಿ ಬೀಸಿತ್ತು. ಗಾಳಿ ಬೀಸಿದಂತೆಲ್ಲ ದಟ್ಟ ಕಪ್ಪನೆಯ ಮೋಡ ಬಾನನ್ನು ತುಂಬಿಕೊಂಡಿತು. ʻಅರೆ ಮಳೆ ಬರಬಹುದಾ?ʼ ಎಂದುಕೊಂಡವನು ಮಳೆ ಬರುವ ಮೊದಲು ಮನೆ ತಲುಪಬೇಕು ಎಂದುಕೊಂಡು ಗಾಡಿಯ ಎಕ್ಸಲರೇಟರ್‌ ತಿರುಪಿದ. ಕಾನಗೋಡು ದಾಟಿ ಕಬ್ನಳ್ಳಿ ಕತ್ರಿ ಬರುತ್ತಿದ್ದಂತೆ ಜಿಟಿ ಜಿಟಿಯಾಗಿ ಶುರು ಹಚ್ಚಿಕೊಂಡ ಮಳೆ ಧೋ ಎನ್ನಲು ಶುರುವಾಯ್ತು. ಗಾಡಿ ಓಡಿಸುತ್ತಿದ್ದ ನಾಗರಾಜ ಗಾಡಿ ನಿಲ್ಲಿಸಿ ಬಸ್‌ ನಿಲ್ದಾಣದ ಒಳಕ್ಕೆ ಹೋಗಬೇಕು ಎಂದುಕೊಳ್ಳುತ್ತಿದ್ದಂತೆಯೇ ʻಓಹೋ ಇದು ಕಬ್ನಳ್ಳಿ ಕತ್ರಿ.. ಕಬ್ನಳ್ಳಿ ಕತ್ರಿಯಲ್ಲಿ ಬಸ್‌ ಸ್ಟಾಪ್‌ ಇಲ್ಲ..ʼ ಎನ್ನುವುದು ನೆನಪಾಯ್ತು.. ʻತಥ್..‌ʼ ಎಂದು ತಲೆಕೊಡವಿ, ಮಳೆಯಲ್ಲಿಯೇ ಗಾಡಿ ಓಡಿಸಿದ.
ಅಡ್ಕಳ್ಳಿ ಕತ್ರಿ ತಲುಪುವ ವೇಳೆಗೆ ಮಳೆ ತನ್ನ ಅಬ್ಬರವನ್ನು ನಿಲ್ಲಿಸಿ ಶಾಂತವಾಗುವ ಲಕ್ಷಣ ತೋರಿಸಿತ್ತು. ಕಲ್ಮಟ್ಟಿ ಹಳ್ಳ ಹತ್ತಿರಬಂದಂತೆಲ್ಲ ಮಳೆ ಸಂಪೂರ್ಣ ನಿಂತಿತ್ತು. ಮರಗಳಿಂದ ಬೀಳುವ ಹನಿಯ ಚಿಟ ಪಟ ಮಾತ್ರ ಇತ್ತು. ಅಡ್ಕಳ್ಳಿ ತಲುಪಿದಾಗಲಂತೂ ಮಳೆಯ ಸುಳಿವೇ ಇಲ್ಲ. ಮಳೆಯೇ ಬಂದಿಲ್ಲ ಎಂಬಂತೆ ನೆಲ ಒಣಗಿಕೊಂಡಿತ್ತು. ʻಹಾಳಾದ ಮಳೆ.. ನನಗೆ ತೊಂದ್ರೆ ಕೊಡುವ ಸಲುವಾಗಿಯೇ ಬಂತು..ʼ ಎಂದು ಬೈದುಕೊಂಡು ಬೈಕ್‌ ವೇಗ ಹೆಚ್ಚಿಸಿದ. ನೋಡನೋಡುತ್ತಿದ್ದಂತೆಯೇ ಮಾರಿಗದ್ದೆ ಬ್ರಿಜ್‌ ಕಾಣಿಸಿತು. ಅಘನಾಶಿನಿ ತೀರದ ಮಾರಿಗದ್ದೆ ಹೇಳಿ-ಕೇಳಿ ತಂಪಿನ ಜಾಗ. ಮಳೆಯಲ್ಲಿ ಒದ್ದೆಯಾಗಿದ್ದ ನಾಗರಾಜನಿಗೆ ಮಾರೀಗದ್ದೆ ಬ್ರಿಜ್‌ ಬಳಿ ಬಂದಂತೆಲ್ಲ ಚಳಿ ಶುರುವಾಯಿತು. ನಿಧಾನವಾಗಿ ಹಲ್ಲು ಕಟಕಟಿಸಲು ಶುರುವಾಯಿತು. ಮೊದಲು ಮನೆ ತಲುಪಿಕೊಂಡರೆ ಸಾಕು ಎಂದುಕೊಂಡ. ಹಿತ್ಲಕೈ ದಾಟಿ, ಗುಡ್ಡೇತೋಟ ಕ್ರಾಸ್‌ ದಾಟಿ ಇನ್ನೇನು ಗೋಳಿಕಟ್ಟಾ ಶಾಲೆಯ ಬಳಿ ಬರಬೇಕು, ರಸ್ತೆ ಪಕ್ಕದಲ್ಲಿ ಬೆಂಕಿ ಕಾಣಿಸಿತು. ಯಡಳ್ಳಿಯಲ್ಲಿ ಧೋ ಮಳೆ.. ಇಲ್ಲಿ ನೋಡಿದರೆ ಮಳೆಯ ಸುಳಿವೇ ಇಲ್ಲ. ಜೊತೆಗೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ ಎಂದುಕೊಳ್ಳುತ್ತಲೇ ಮುಂದಕ್ಕೆ ಸಾಗುತ್ತಿದ್ದವನಿಗೆ ಚಳಿ ಇನ್ನಷ್ಟು ಜಾಸ್ತಿಯಾದಂತೆನಿಸಿತು.
ಯಾವುದಕ್ಕೂ ಇಲ್ಲಿ ಬೈಕ್‌ ನಿಲ್ಲಿಸಿ ಸ್ವಲ್ಪ ಹೊತ್ತು ಬೆಂಕಿಗೆ ಮೈ ಒಡ್ಡಿ, ಒದ್ದೆ ಮೈಯನ್ನು ಒಣಗಿಸಿಕೊಂಡು ಹೋಗೋಣ ಎಂದು ಬೆಂಕಿಯ ಹತ್ತಿರಕ್ಕೆ ಹೋದ. ಅಂಗಿ, ಪ್ಯಾಂಟ್‌ ಎಲ್ಲ ಒದ್ದೆಯಾಗಿತ್ತು. ತೊಟ್ಟಿದ್ದ ಅಂಗಿಯನ್ನು ತೆಗೆದು ಸರಿಯಾಗಿ ಹಿಂಡಿದ್ದಲ್ಲದೇ ಕೊಡವಿ ಬೆಂಕಿಗೆ ಒಡ್ಡಿದ. ಒದ್ದೆ ಮೈಗೆ ಬೆಂಕಿಯ ಧಗೆ ತಾಗಿ ಹಿತವೆನ್ನಿಸಿತು. ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ತನ್ನ ಪಾಲಿಗೆ ಒಳ್ಳೆಯದೇ ಆಯಿತು ಎಂದು ಖುಷಿಯಾದ. ಹಾಗೆಯೇ ನೋಡುತ್ತಿದ್ದವನಿಗೆ ಅಲ್ಲಿಯೇ ಕಟ್ಟಿಗೆ ರಾಶಿ ಕಾಣಿಸಿತು.. ಪಾಪ ಯಾರೋ ಕಟ್ಟಿಗೆ ಸಂಗ್ರಹ ಮಾಡಿಟ್ಟಿದ್ದರು. ಸಂಪೂರ್ಣ ಕಟ್ಟಿಗೆಯ ರಾಶಿಗೆ ಬೆಂಕಿ ಬಿದ್ದೋಗಿದೆ, ಕಟ್ಟಿಗೆ-ಕುಂಟೆ ಎಲ್ಲ ಧಗಧಗನೆ ಉರಿಯುತ್ತಿದೆ ಎಂದುಕೊಂಡ. ಕೈಗೊಂದು ಬಡಿಗೆ ಸಿಕ್ಕಿತು, ಆ ಕಟ್ಟಿಗೆಯ ರಾಶಿಯ ಮೇಲೆ ರಪ್ಪನೆ ಬಡಿದ. ಕಿಡಿ ಹಾರಿತು. ಕಟ್ಟಿಗೆಯ ರಾಶಿಯನ್ನು ಬಡಿಗೆಯಿಂದ ಆಕಡೆಗೊಮ್ಮೆ-ಈ ಕಡೆಗೊಮ್ಮೆ ತಿರುವಿ ಹಾಕಿದೆ. ಬಿಂಕಿಯ ಜ್ವಾಲೆ ಇನ್ನಷ್ಟು ಹೆಚ್ಚಿದಂತಾಗಿ ನಾಗರಾಜನಿಗೆ ಮತ್ತಷ್ಟು ಹಿತವೆನ್ನಿಸಿತು.
ಮೈ, ಬಟ್ಟೆ ಎಲ್ಲ ಸರಿಯಾಗಿ ಒಣಗಿದೆ ಎಂಬ ತೃಪ್ತಿ ಸಿಕ್ಕಂತೆಯೇ ಮನೆಗೆ ಹೊರಟ ನಾಗರಾಜ. ಮನೆಯನ್ನು ತಲುಪುತ್ತಿದ್ದಂತೆಯೇ ನಾಗರಾಜನಿಗೆ ಅಪ್ಪಯ್ಯ ಎದುರಾದ. ʻಎಂತದ ತಮಾ, ಮಳೆಲ್ಲಿ ನೆನಕಂಡು ಬಂದಾಂಗೆ ಕಾಣಿಸ್ತಲ..ʼ ಎಂದ. ʻಹೌದಾ.. ಸಾಯ್ಲಿ.. ಶಿರಸಿಂದ ಹೊರಡಕಿದ್ರೆ ಎಲ್ಲ ಸರಿ ಇತ್ತಾ.. ಯಡಳ್ಳಿ ಹತ್ರ ಬರಕಿದ್ರೆ ಮಳೆ ಬಂತು.. ಅಡ್ಕಳ್ಳಿ ಕತ್ರಿ ತನಕ ಮಳೆಲಿ ನೆನಕಂಡು ಬಂದೆ..ʼ ಎಂದ.
ʻಓಹೋ ಹೌದನಾ...ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ʻಗೋಳಿಕಟ್ಟಾ ಶಾಲೆ ಹತ್ರ ಬ್ಯಾಣಕ್ಕೆ ಬೆಂಕಿ ಬಿದ್ದಾಂಗ್‌ ಕಾಣಸ್ತು.. ಅಲ್ಲಿ ನಿಂತಕಂಡು ಮೈ ಒಣಗಿಸಿಕೊಂಡು ಬಂದೆ..ʼ ಎಂದ ನಾಗರಾಜ..
ʻಆಂ? ಎಲ್ಲಿ? ಗೋಳಿಕಟ್ಟಾ ಶಾಲೆ ಹತ್ರ?ʼ ಅಪ್ಪಯ್ಯ ಕೇಳಿದ್ದ..
ʻಹೌದಾ.. ಯಾರದ್ದೋ ಮನೆ ಕಟ್ಟಿಗೆ ರಾಶಿಗೆ ಬೆಂಕಿ ಬಿದ್ದೋಜು..ʼ ಎಂದ
ಹೌಹಾರಿದ ಅಪ್ಪಯ್ಯ ʻಯೇ.. ಏನಂದೆ? ಮಾರಾಯ್ನೇ.. ಆ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಬಂದ್ಯಾ? ಥೋ... ಮೊದಲು ಸ್ನಾನ ಮಾಡು...ʼ ಎಂದ
ʻಎಂತಕ್ಕ? ಎಂತ ಆತಾ?ʼ
ʻಮಾರಾಯ್ನೇ ಆ ಊರಲ್ಲಿ ಒಬ್ಬವ ಸತ್ತೋಜ.. ಅವ್ನ ಸುಟ್ಟಿದ್ದಾಗಿತ್ತು ಆ ಬೆಂಕಿ. ಇವತ್ತು ಮದ್ಯಾಹ್ನ ಅಷ್ಟೇ ಸುಟ್ಟಿಕ್‌ ಬಂದಿದ್ದು ಅದು. ನಾನೂ ಹೋಗಿದ್ದಿ.. ನೀನು ಆ ಚಿತೆಯ ಬೆಂಕಿನ ಕಾಯ್ಸಿಕೊಂಡು ಬಂದೆಯಾ?..ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ನಾಗರಾಜನ ಬೆನ್ನಲ್ಲಿ ಛಳಕ್‌ ಅಂದಂತಾಯ್ತು.. ಬೆನ್ನ ಹುರಿಯ ಆಳದಲ್ಲಿ ಹುಟ್ಟಿಕೊಂಡ ಚಳಿ ನಿಧಾನವಾಗಿ ಮಯ್ಯನ್ನೆಲ್ಲ ಆವರಿಸಿತು. ಚಿತೆಯ ಬೆಂಕಿಯ ಬಿಸಿಯಂತೆ ಮೈ ಕೂಡ ಕಾವೇರತೊಡಗಿತು. ಕಣ್ಣು ಕತ್ತಲಿಟ್ಟುಕೊಂಡಂತಾಯಿತು. ನಾಗರಾಜನಿಗೆ ಮುಂದೇನಾಯಿತು ಎನ್ನುವುದೇ ಗೊತ್ತಾಗಲಿಲ್ಲ..!
(ಸತ್ಯ ಘಟನೆ ಆಧಾರಿತ)

Thursday, February 6, 2025

Ghost Writer ಭಾಗ -1


Chase the hunter


-----

A ghostwriter is a professional writer hired to create content on behalf of someone else, without receiving public credit for their work. Ghostwriters are commonly used for **books, articles, speeches, blog posts, and even music lyrics**. They help clients—such as celebrities, politicians, business executives, and experts—articulate their ideas in a polished and engaging manner.

Ghostwriting involves **deep research, adapting to the client’s voice, and maintaining confidentiality**. While the original author gets the credit, the ghostwriter is compensated for their work, often through a flat fee or royalties.

This profession is crucial in publishing, journalism, and content marketing, allowing busy individuals to share their insights without dedicating time to writing.

****

ಎರಡು ದಿನಗಳ ಹಿಂದೆ ಕೊರಿಯರ್‌ ಮೂಲಕ ಬಂದಿದ್ದ ಆ ಪತ್ರವನ್ನು ತೆರೆದು ಯೋಚಿಸುತ್ತ ಕುಳಿತಿದ್ದ ಡಿಟೆಕ್ಟಿವ್‌ ವಿಕ್ರಮ್ ಕುಮಾರ್!
ಎರಡು ದಿನಗಳ ಹಿಂದೆ ಕೊರಿಯರ್‌ ಒಂದು ಆತನಿಗೆ ಬಂದಿತ್ತು. ಅದರಲ್ಲಿ ಒಂದು ಪತ್ರವಿತ್ತು, ಜೊತೆಗೆ ೫೦ ಸಾವಿರ ರೂಪಾಯಿಗಳ ಹಣ ಕೂಡ ಇತ್ತು.
ಪತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರಿತ್ತು. ಆತನನ್ನು ಹುಡುಕಿಕೊಂಡು ಬರುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪತ್ರದ ಕೊನೆಯಲ್ಲಿ ಹುಡುಕಿಕೊಂಡು ಬರಬೇಕಿರುವ ವ್ಯಕ್ತಿ ಒಬ್ಬ ಘೋಸ್ಟ್‌ ರೈಟರ್!‌ ಈತನನ್ನು ಬಹಳಷ್ಟು ಜನರು ಹುಡುಕುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ, ಸಿನಿಮಾ ಜಗತ್ತು ಸೇರಿದಂತೆ ಹಲವು ವಿಭಾಗಗಳ ಪ್ರಮುಖರು ಈತನ ಬೆನ್ನು ಹತ್ತಿದ್ದಾರೆ. ಯಾರ ಕೈಗೂ ಸಿಗುತ್ತಿಲ್ಲ! ಆತನ ಬರಹಗಳು ಮಾತ್ರ ವೆಬ್‌ ಜಗತ್ತಿನಲ್ಲಿ ಪಬ್ಲಿಷ್‌ ಆಗುತ್ತಿದೆ. ಪಬ್ಲಿಷ್‌ ಆದ ನಂತರ ಸಾಕಷ್ಟು ವೈರಲ್‌ ಕೂಡ ಆಗುತ್ತಿದೆ. ಹಲವು ಸಾರಿ ಸಮಾಜದಲ್ಲಿ ಅಲ್ಲೋಲ-ಕಲ್ಲೋಲವನ್ನೂ ಸೃಷ್ಟಿ ಮಾಡಿದ ನಿದರ್ಶನ ಇದೆ.
ಆತನನ್ನು ಹುಡುಕಿಕೊಂಡು ಬರುವ ಮಹತ್ತರ ಜವಾಬ್ದಾರಿ ನಿನಗೆ ವಹಿಸಲಾಗುತ್ತಿದೆ. ಆತನನ್ನು ಹುಡುಕುತ್ತಿರುವವರೆಲ್ಲರ ಕಣ್ಣುತಪ್ಪಿಸಿ, ಅತ್ಯಂತ ಗೌಪ್ಯವಾಗಿ ಕಾರ್ಯ ನಿರ್ವಹಿಸಬೇಕು! ಈ ಪತ್ರದ ಜೊತೆ ಇರುವ ೫೦ ಸಾವಿರ ರೂಪಾಯಿ ಅಡ್ವಾನ್ಸ್!‌ ಕಾಲಕಾಲಕ್ಕೆ ಕೊರಿಯರ್‌ ಬರುತ್ತಿರುತ್ತದೆ ಹಾಗೂ ಹಣ ಸಂದಾಯ ಆಗುತ್ತಿರುತ್ತದೆ! ಪೂರ್ತಿ ಕೆಲಸ ಮುಗಿದ ನಂತರ ೧ ಕೋಟಿ ರೂಪಾಯಿ ಮೊತ್ತ ನೀಡಲಾಗುತ್ತದೆ! ಆತನ ಹೆಸರಿನಲ್ಲಿ ಪಬ್ಲಿಷ್‌ ಆದ ಬರಹಗಳ ಪೋಟೋ ಕಾಪಿ ಹಾಗೂ ಪ್ರಿಂಟೆಡ್‌ ಕಾಪಿಗಳು ಇಲ್ಲಿವೆ. ಕೂಡಲೇ ಕಾರ್ಯಪ್ರವೃತ್ತ ಆಗಬೇಕು! ಈ ಕೆಲಸ ಮಾಡೋದಿಲ್ಲ ಎನ್ನುವ ಆಯ್ಕೆ ನಿಮ್ಮೆದುರು ಇಲ್ಲವೇ ಇಲ್ಲ! ಒಪ್ಪಿಕೊಳ್ಳಲೇಬೇಕು ಇಲ್ಲವಾದಲ್ಲಿ ಮುಂದಿನ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಎಂದು ಪತ್ರದಲ್ಲಿ ಬರೆಯಲಾಗಿತ್ತು!

ಕೆಲಸವನ್ನು ನನಗೆ ವಹಿಸಿದ್ದಾರೋ ಅಥವಾ ಆರ್ಡರ್‌ ಮಾಡಿದ್ದಾರೋ? ಎಂದುಕೊಳ್ಳುತ್ತಲೇ ಘೋಸ್ಟ್‌ ರೈಟರ್‌ ಕುರಿತು ಮಾಹಿತಿ ಕಲೆ ಹಾಕುವತ್ತ ವಿಕ್ರಮ್‌ ಕುಮಾರ್‌ ಕಾರ್ಯಪ್ರವೃತ್ತನಾಗಿದ್ದ. ಘೋಸ್ಟ್‌ ರೈಟರ್‌ ಪಬ್ಲಿಷ್‌ ಮಾಡುತ್ತಿದ್ದ ವೆಬ್‌ ತಾಣಗಳನ್ನು ಸರ್ಚ್‌ ಮಾಡಲು ಮುಂದಾಗಿದ್ದ.

ಅನಾಮಧೇಯ ಕೊರಿಯರ್‌ ಬಂದು ತಲುಪಿದ ಎರಡು ದಿನಗಳ ವೇಳೆಗೆ ʻಘೋಸ್ಟ್‌ ರೈಟರ್‌ ಕುರಿತು ಹಲವು ಸಂಗತಿಗಳ ವಿಕ್ರಮ್‌ ಕುಮಾರ್‌ ಗೆ ಗೊತ್ತಾಗಿದ್ದವು. ಆತನನ್ನು ಹುಡುಕಲು ಹೊರಡುವುದೊಂದೇ ಬಾಕಿ ಇತ್ತು.

ತಲೆಯ ತುಂಬೆಲ್ಲ ಘೋಸ್ಟ್‌ ರೈಟರ್‌ನನ್ನು ತುಂಬಿಕೊಂಡು, ಯಾವ ಕಡೆಯಿಂದ ತನ್ನ ಪತ್ತೆದಾರಿಕೆ ಕಾರ್ಯ ಶುರುಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತನ್ನ ಮನೆ ಕಂ ಕಚೇರಿಯ ಕಾಲಿಂಗ್‌ ಬೆಲ್‌ ಸದ್ದು ಮಾಡಿತ್ತು.

ಬಾಗಿಲು ತೆರೆದು ನೋಡಿದರೆ ಬಾಗಿಲಲ್ಲಿ ಕೊರಿಯರ್‌ ಬಾಯ್‌ ನಿಂತಿದ್ದ! ಇನ್ನೊಂದು ಕೊರಿಯರ್‌ ಬಂದಿತ್ತು!
ಕೊರಿಯರ್‌ ಪಡೆದು ಫ್ರಂ ಅಡ್ರೆಸ್‌ ನೋಡಿದರೆ ʻಬೆಂಗಳೂರುʻ ಎಂದು ಬರೆದಿತ್ತು. ಕೊರಿಯರ್‌ ಬಾಅಯ್‌ ವಾಪಾಸ್‌ ತೆರಳಿದ ನಂತರ ಮನೆಯೊಳಗೆ ಬಂದು ವಿಕ್ರಮ್‌ ಕುಮಾರ್‌ ಆ ಕೊರಿಯರ್‌ ತೆರೆದ.
ಅದರೊಳಕ್ಕೆ ಇನ್ನಷ್ಟು ದುಡ್ಡು, ಒಂದಷ್ಟು ಮಾಹಿತಿ ಹಾಗೂ ಮತ್ತೊಂದು ಪತ್ರ ಇತ್ತು!

ಯಾರೋ ದೊಡ್ಡ ವ್ಯಕ್ತಿ, ಬಹಳ ಪ್ರಭಾವಿ, ಸಾಕಷ್ಟು ಕನೆಕ್ಷನ್‌ ಇರುವಾತನೇ ಈ ಕೆಲಸವನ್ನು ತನಗೆ ವಹಿಸುತ್ತಿದ್ದಾನೆ. ಘೋಸ್ಟ್‌ ರೈಟರ್‌ ಹುಡುಕುವ ಕಾರ್ಯದಲ್ಲಿ ತಾನು ಇನ್ನಷ್ಟು ಸೀರಿಯಸ್‌ ಆಗಬೇಕು ಎಂದುಕೊಳ್ಳುತ್ತಲೇ ವಿಕ್ರಮ್‌ ಕುಮಾರ್‌ ಪತ್ರವನ್ನು ಓದತೊಡಗಿದ!

ಓದುತ್ತಿದ್ದಂತೆಯೇ ನಿಧಾನವಾಗಿ ಬೆವರತೊಡಗಿದ

(ಮುಂದುವರಿಯುತ್ತದೆ)

Tuesday, January 14, 2025

ಮಾಳ ಹಾಗೂ ಹುಲಿ


ಬರಬಳ್ಳಿಯ ಗುಡ್ಡೆಮನೆ ಹೆಸರಿಗೆ ತಕ್ಕಂತೆ ಗುಡ್ಡದ ಮೇಲ್ಭಾಗದಲ್ಲಿರುವ ಮನೆ. ಅಲ್ಲಿಂದ ಕೂಗಳತೆ ದೂರದಲ್ಲಿ ವಾಸಂತಿ ಕೆರೆ. ಅದರ ಸುತ್ತಮುತ್ತಲೆಲ್ಲ ದಟ್ಟ ಕಾನನ. ಗುಡ್ಡೆಮನೆಯ ಜಮೀನು ವಾಸಂತಿ ಕೆರೆಯ ಕೆಳಭಾಗದಲ್ಲೇ ಇತ್ತು.


ವಾಸಂತಿ ಕೆರೆಯಿಂದ ಇನ್ನೊಂದು ದಿಕ್ಕಿನಲ್ಲಿ ಕೊಂಚ ದೂರದಲ್ಲಿಯೇ ಕಬ್ಬಿನ ಗದ್ದೆ ಮಾಡಲು ವಿಶ್ವೇಶ್ವರ ಮಾವ ಮುಂದಾಗಿದ್ದ. ಕಬ್ಬಿನ ಗದ್ದೆಗಾಗಿ ಬೀಜ ಹಾಕಿ, ಸರಿಯಾಗಿ ಮಣ್ಣು ಹಾಕಿ ಬಹುತೇಕ ಕೆಲಸ ಮುಗಿಸಿದ್ದ.

ಕಬ್ಬಿನಗದ್ದೆಗೆ ಹಂದಿಗಳ ಕಾಟ ವಿಪರೀತ. ಹಂದಿಗಳ ಗ್ವಾಲೆ ಕಬ್ಬಿನ ಗದ್ದೆಗೆ ದಾಳಿ ಕೊಟ್ಟರೆ ಮುಗಿದೇ ಹೋಯ್ತು ಸಂಪೂರ್ಣ ತಿಂದು ಹಾಳು ಮಾಡಿಬಿಡುತ್ತವೆ. ಹಂದಿಗಳಿಂದ ಕಬ್ಬಿನಗದ್ದೆ ರಕ್ಷಣೆಯೇ ದೊಡ್ಡ ಕೆಲಸ. ಕಬ್ಬಿನಗದ್ದೆಯನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕಾಗಿಯೇ ವಿಶ್ವೇಶ್ವರ ಮಾವ ಮಾಳವೊಂದನ್ನು ಕಟ್ಟಿ ಅದರ ಮೇಲೆ ರಾತ್ರಿ ಉಳಿದು ಕಬ್ಬಿನಗದ್ದೆಯನ್ನು ಕಾಯುವ ಕೆಲಸ ಮಾಡುತ್ತಿದ್ದ. ಹಂದಿಗಳು ಬಂದರೆ ಛೂ ಹಾಕಿ ಕೂಗಿ ಅವುಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದ.

ಆ ಮಳೆಗಾಲಕ್ಕೂ ಪೂರ್ವದಲ್ಲಿ ಅಮ್ಮ ತನ್ನ ಮೊದಲ ಹೆರಿಗೆಗೆ ತವರಿಗೆ ಬಂದಿದ್ದಳು. ಮಳೆಗಾಲ ಅದಾಗ ತಾನೇ ಕಳೆದಿತ್ತು. ಇನ್ನೇನು ಚಳಿಯೊಡೆಯುವ ಸಮಯ. ಅಕ್ಟೋಬರ್‌ ಮೊದಲ ವಾರವಿರಬೇಕು. ಎಂದಿನಂತೆ ಲಾಟೀನು ಹಿಡಿದು ವಿಶ್ವೇಶ್ವರ ಮಾವ ಮಾಳಕ್ಕೆ ಹೋಗಿದ್ದ. ಮನೆಯಲ್ಲಿ ಅಜ್ಜಿ ಹಾಗೂ ಅಮ್ಮ ಇಬ್ಬರೇ ಉಳಿದಿದ್ದರು. ಮಾಳಕ್ಕೆ ಹೋಗುವಾಗ ಲಾಟೀನನ್ನು ಹಿಡಿದು ಹೋಗಿದ್ದ ಮಾವ ಮಾಳದ ಕೆಳಗೆ ಸಣ್ಣದಾಗಿ ಬೆಂಕಿಯನ್ನು ಹಾಕಿ, ಮಾಳವನ್ನು ಏರಿ, ಮಾಳಕ್ಕೆ ಲಾಟೀನನ್ನು ನೇತುಹಾಕಿ ಮಲಗಿದ್ದ. ಚಳಿ ತೀವ್ರವಾಗಿಯೇ ಬೀಳತೊಡಗಿತ್ತು.

ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮಾವನಿಗೆ ಎಚ್ಚರವಾಯಿತು. ಇಡಿಯ ಮಾಳವೇ ಅಲ್ಲಾಡುತ್ತಿದ್ದ ಅನುಭವ. ಅರೇ ಭೂಮಿ ಕಂಪಿಸುತ್ತಿದೆಯೇ? ಇದೇನಾಗುತ್ತಿದೆ? ಮಾಳವೇಕೆ ಅಲ್ಲಾಡುತ್ತಿದೆ ಎಂಬ ಭಾವನೆ ಮನದಲ್ಲಿ ಮೂಡಿತ್ತು. ನಿಧಾನವಾಗಿ ಮಾಳದ ಮೇಲಿನಿಂದ ಕೆಳಕ್ಕೆ ಹಣಕಿದ. ಕೆಳಗೆ ನೋಡಿದವನೇ ಒಮ್ಮೆಲೆ ಹೌಹಾರಿದ. ಮಾಳದ ಮೇಲೆ ಕುಳಿತವನು ಒಮ್ಮೆಲೆ ಬೆವರಲಾರಂಭಿಸಿದ್ದ. ಆತನ ಜೀವ ಭಾಯಿಗೆ ಬಂದಂತಾಗಿತ್ತು. ಕೆಳಗಡೆ ಎಂಟಡಿ ಉದ್ದದ ದೈತ್ಯ ಪಟ್ಟೆಹುಲಿ ಮಾಳದ ಕಂಬಕ್ಕೆ ಶೇಡಿ ನಿಂತಿತ್ತು. ಕೆಳಗಡೆ ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಯನ್ನೇ ನೋಡುತ್ತಿತ್ತು.

ಉದ್ದದ ಪಟ್ಟೆಹುಲಿ ನೋಡಿದ ತಕ್ಷಣ ಮಾವನ ಮಾತು ಬಂದಾಗಿತ್ತು. ಕೂಗಿಕೊಳ್ಳಲು ಯತ್ನಿಸಿದರೂ ಬಾಯಿಂದ ಧ್ವನಿಯೇ ಹೊರಬರುತ್ತಿಲ್ಲ. ಎಂಟಡಿ ಎತ್ತರದ ಹುಲಿ ಜಿಗಿದರೆ ಸಾಕು ತಾನು ಅದರ ಬಾಯಿಗೆ ಆಹಾರವಾಗಬಹುದು, ಅಥವಾ ಮಾಳದ ಕಂಬಕ್ಕೆ ಸ್ವಲ್ಪವೇ ಗಟ್ಟಿಯಾಗಿ ಶೇಡಿದರೆ ಸಾಕು ಮಾಳವೇ ಉದುರಿ ಬೀಳಬಹುದು ʻಬರಬಳ್ಳಿ ಗಣಪ ಕಾಪಾಡಪ್ಪಾ..ʼ ಎಂದು ಮನಸ್ಸಿನಲ್ಲಿ ಬೇಡಿಕೊಂಡ. ಕೊರೆಯುವ ಚಳಿಯಿದ್ದರೂ ಯಾವಾಗಲೋ ಅದು ಹಾರಿಹೋದಂತಾಗಿತ್ತು. ಮೈ-ಮನಸ್ಸುಗಳಲ್ಲೆಲ್ಲ ಭಯದ ಬೆವರು ಕಿತ್ತು ಬರುತ್ತಿತ್ತು. ಒಂದು ಸಾರಿ ಜೀವ ಉಳಿದರೆ ಸಾಕು, ಮತ್ತೆ ಕಬ್ಬಿನ ಗದ್ದೆಯೂ ಬೇಡ, ಮಾಳದ ಸಹವಾಸವೂ ಬೇಡ ಎಂದುಕೊಂಡ.

ಮನೆಯ ದಿಕ್ಕಿಗೆ ಮುಖ ಮಾಡಿ ಮಾಳದಿಂದಲೇ ನೋಡಿದವನಿಗೆ ಮಿಣುಕು ಬೆಳಕು ಕಾಣಿಸಿದಂತಾಯಿತು. ಒಮ್ಮೆ ಗಟ್ಟಿಯಾಗಿ ಕೂಗಿಬಿಡಲೇ? ಕೂಗಿದರೆ ಅಬ್ಬೆಯಾದರೂ, ತಂಗಿ ಗಂಗುವಾದರೂ ಬರಬಹುದೇ? ಎಂದುಕೊಂಡ. ತಾನು ಕೂಗಿ, ಅವರ ಇರವನ್ನು ಅರಿತ ಹುಲಿ ಅತ್ತ ಕಡೆ ಧಾವಿಸಿದರೆ? ಅಬ್ಬೆಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ, ತಂಗಿ ತುಂಬಿದ ಗರ್ಭಿಣಿ. ಹುಲಿ ದಾಳಿ ಮಾಡುವುದು ಹಾಗಿರಲಿ, ಒಮ್ಮೆ ಗಟ್ಟಿಯಾಗಿ ಘರ್ಜಿಸಿ ಏನಾದರೂ ಅನಾಹುತ ಆದರೆ ಏನು ಮಾಡುವುದು ಭಗವಂತಾ? ಎಂದುಕೊಂಡ.

ಆದರೂ ಧೈರ್ಯ ಮಾಡಿ ಅಬ್ಬೆಯನ್ನೂ- ಗಂಗುವನ್ನೂ ಕರೆದ. ಮನೆಯ ಕಡೆಯಿಂದ ಮಾರುತ್ತರ ಬರಲಿಲ್ಲ. ಆದರೆ ಮಾಳದ ಕೆಳಗಿದ್ದ ಹುಲಿ ಮಾವನ ಕೂಗಿಗೆ ಗಮನ ನೀಡಿಲ್ಲದಿರುವುದು ಸಮಾಧಾನ ತಂದಿತ್ತು. ಮತ್ತೆ ಕರೆದ ಆಗಲೂ ನಿಶ್ಯಬ್ಧ. ಹುಲಿಯೂ ಆರಾಮಾಗಿ ನಿಂತಿತ್ತು. ಅದಾದ ನಂತರ ಧೈರ್ಯದಿಂದ ಕೂಗಿದ. ಆರೆಂಟು ಸಾರಿ ಕೂಗಿ ಕೂಗಿ ಕರೆದರೂ ಮನೆಯ ಕಡೆಯಿಂದ ಉತ್ತರ ಬರದೇ ಇದ್ದಾಗ ನಿಟ್ಟುಸಿರು ಬಿಟ್ಟ ವಿಶ್ವೇಶ್ವರ ಮಾವ ಹುಲಿಯಿಂದ ಪಾರಾಗುವುದು ಹೇಗೆ ಎಂದು ಆಲೋಚಿಸಲು ಶುರುಮಾಡಿದ.

ಕೈಯಲ್ಲಿ ಕುಡಗೋಲು ಇತ್ತಾದರೂ ದೈತ್ಯ ವ್ಯಾಘ್ರನ ಮೇಲೆ ದಾಳಿ ಮಾಡಿ, ಹುಲಿಯನ್ನು ಕೊಲ್ಲುವುದು ಹಾಗೂ ತಾನು ಬದುಕುವುದು ಸಾಧ್ಯವೇ? ಹುಲಿಯ ಆಯದ ಜಾಗಕ್ಕೆ ಪೆಟ್ಟು ಬೀಳಬೇಕು, ಒಂದೇ ಹೊಡೆತಕ್ಕೆ ಹುಲಿ ಸತ್ತು ಬೀಳಬೇಕು, ಅಷ್ಟಾದಾಗ ಮಾತ್ರ ತಾನು ಜೀವ ಸಹಿತ ಇರಲು ಸಾಧ್ಯ. ಹೊಡೆತ ತಪ್ಪಿದರೆ? ಹುಲಿಗೆ ಗಾಯವಾಗಿಬಿಟ್ಟರೆ? ಮುಗಿಯಿತಲ್ಲ ಕಥೆ ಎಂದುಕೊಂಡ. ಕುಡಗೋಲಿನಿಂದ ದಾಳಿ ಮಾಡುವ ಯೋಜನೆ ಕೈಬಿಟ್ಟ.

ಅಷ್ಟರಲ್ಲಿ ಆರಾಧ್ಯದೈವ ಬಲಮುರಿ ಗಣಪತಿಯೇ ದಾರಿ ತೋರಿಸಿದರೆ ಮಾಳದ ಮಾಡಿಗೆ ನೇತು ಹಾಕಿದ್ದ ಕಂದೀಲು ನೆನಪಾಯಿತು. ಮಾಳ ಅಲ್ಲಾಡಿದಂತೆಲ್ಲ ಕಂದೀಲು ಕೂಡ ಹೊಯ್ದಾಡುತ್ತಿತ್ತಾದರೂ, ಅದರಲ್ಲಿ ಸಣ್ಣದಾಗಿ ಉರಿಯುತ್ತಿದ್ದ ಬೆಳಕು ಆರಿರಲಿಲ್ಲ. ಕೂಡಲೇ ಲಾಟೀನನ್ನು ಹಿಡಿದ. ಅತ್ತ ಇತ್ತ ನೋಡಿದವನಿಗೆ ಮಾಳದ ಮಾಡಿಗೆ ಹಾಕಿದ್ದ ಮಡ್ಲು ಹೆಡ (ತೆಂಗಿನ ಟೊಂಗೆ) ಕಾಣಿಸಿತು. ಅದನ್ನು ಎಳೆದು ಬೆಂಕಿ ಕೊಟ್ಟೇ ಬಿಟ್ಟ. ಒಮ್ಮೆಲೆ ದೊಡ್ಡ ಸೂಡಿಯಷ್ಟು ದೊಡ್ಡದಾದ ಬೆಂಕಿ ಕಾಣಿಸಿಕೊಂಡಿತು. ಅದನ್ನು ಸೀದಾ ಮಾಳದ ಮೇಲೆ ಇಟ್ಟ. ಬೆಂಕಿ ಹೊತ್ತಿಕೊಂಡಂತೆಯೇ ಮತ್ತಷ್ಟು ಮಡ್ಲನ್ನು ತೆಗೆದು ಉರಿ ಜ್ವಾಲೆಯನ್ನು ದೊಡ್ಡದು ಮಾಡಿದ. ಬೆಂಕಿ ದೊಡ್ಡದಾದಂತೆಲ್ಲ ಮಾಳದ ಅಡಿಯಲ್ಲಿದ್ದ ಹುಲಿ ಬಿತ್ತು. ಎಲ್ಲೋ ಅದರ ಮೈಮೇಲೆ ಕೂಡ ಕಿಡಿ ಬಿದ್ದಿರಬೇಕು. ಸಣ್ಣದಾಗಿ ಮುಲುಕಿ ಅಲ್ಲಿಂದ ಕಾಲ್ಕಿತ್ತಿತು. ಮಾವ ನಿರಾಳನಾಗಿದ್ದ. ಆದರೆ ಬೆಂಕಿಯನ್ನು ನಂದಿಸುವ ಧೈರ್ಯ ಆತನಿಗೆ ಆಗಿರಲಿಲ್ಲ. ಮಾಳಕ್ಕೆ ಹಾಕಿದ್ದ ತೆಂಗಿನ ಗರಿ ಖಾಲಿಯಾಗುವವರೆಗೂ ಉರಿ ಒಟ್ಟುತ್ತಲೇ ಇದ್ದ.

ಮೂಡಣದಲ್ಲಿ ನೇಸರ ಮೂಡುವ ಹೊತ್ತಾಗುವ ವರೆಗೂ ಬೆಂಕಿಯನ್ನು ಹಾಕುತ್ತಲೇ ಇದ್ದ ಮಾವ. ಕಣ್ಣು ಕೆಂಪಗಾಗಿತ್ತು. ಕೂದಲು ಕೆದರಿ ಹೋಗಿತ್ತು. ಮಾಳದ ಮಾಡಿನ ತೆಂಗಿನ ಗರಿಗಳೆಲ್ಲ ಸಂಪೂರ್ಣ ಖಾಲಿಯಾಗಿತ್ತು. ಇನ್ನು ಮಾಳದ ಕಡೆಗೆ ಬರಲಾರೆ ಎಂದು ದೃಢ ನಿರ್ಧಾರ ಮಾಡಿ ಮಾಳ ಇಳಿದು ಮನೆಗೆ ಹೋಗಿ ಅಮ್ಮಕ್ಕಜ್ಜಿಗೂ ಗಂಗುವಿಗೂ ನಡೆದ ವಿಷಯವನ್ನು ಹೇಳಿದ. ಅವರಿಬ್ಬರೂ ನಡೆದಿದ್ದನ್ನು ಕೇಳಿ ನಡುಗಿ ಹೋಗಿದ್ದರು. ಸಧ್ಯ ಜೀವ ಉಳಿಯಿತಲ್ಲ ಎಂಬ ಸಮಾಧಾನ ಅವರದ್ದಾಗಿತ್ತು. ʻಮೊದ್ಲು ಮೊಠಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡಿ ಬಾ..ʼ ಅಮ್ಮಕ್ಕಜ್ಜಿ ಹೇಳಿದ್ದರು. ಮಾವ ಸ್ನಾನ ಮುಗಿಸಿ ಗಣಪನ ದೇಗುಲದ ಕಡೆಗೆ ಮುಖ ಮಾಡಿದ್ದ.

Tuesday, November 26, 2024

ಬರಬಳ್ಳಿ ಬಸ್ಸಿನ ಪ್ರಯಾಣದಲ್ಲಿ ಅನಾವರಣಗೊಳ್ಳುತ್ತಿದ್ದ ಅಚ್ಚರಿಯ ಲೋಕ

ನಮ್ಮ ಬಾಲ್ಯವನ್ನು ಹಸಿರಾಗಿ ಇರಿಸಿರುವುದರಲ್ಲಿ ಬರಬಳ್ಳಿಯ ಪಾತ್ರ ಬಹಳ ದೊಡ್ಡದು. ಬರಬಳ್ಳಿಯ ನೆನಪುಗಳು ಈಗಲೂ ಮನಸ್ಸಿನಲ್ಲಿ ನೆನಪಿನ ತರಂಗಗಳನ್ನು ಏಳಿಸುತ್ತಿರುತ್ತವೆ. ರಜಾ ಬಂತೆಂದರೆ ಸಾಕು ನಾನು, ಕಾನಲೆಯಿಂದ ಗಿರೀಶಣ್ಣ, ಗುರಣ್ಣ, ತಂಗಿ ಸುಪರ್ಣರೆಲ್ಲ ಬರಬಳ್ಳಿಗೆ ಓಡುತ್ತಿದ್ದೆವು. ಬೇಸಿಗೆಯ ರಜಾದಲ್ಲಿ ಬರಬಳ್ಳಿಯಲ್ಲಿ ನಮ್ಮ ಪಾರುಪತ್ಯ ನಡೆಯುತ್ತಿತ್ತು. ಇಂತಹ ಬರಬಳ್ಳಿಗೆ ದಿನಕ್ಕೆ ಒಂದೋ ಎರಡೋ ಬಸ್ಸುಗಳು ಹೋಗುತ್ತಿದ್ದವು. ಆ ಬಸ್ಸುಗಳೇ ನಮ್ಮನ್ನು ಬರಬಳ್ಳಿಗೆ ತಲುಪಿಸುತ್ತಿತ್ತು. ಹೀಗೆ
ಬರಬಳ್ಳಿಗೆ ತೆರಳುವ ಬಸ್ಸಿನ ಕಥೆಯನ್ನೇ ನಾನು ನಿಮಗೆ ಹೇಳಲು ಹೊರಟಿದ್ದು.
ಬರಬಳ್ಳಿಗೆ ನನಗೆ ನೆನಪಿರುವ ಹಾಗೆ ಮದ್ಯಾಹ್ನ ೧ ಗಂಟೆಗೆ ಯಲ್ಲಾಪುರದಿಂದ ಒಂದು ಬಸ್ಸು ಹಾಗೂ ಸಂಜೆ ೫ ಗಂಟೆಗೆ ಒಂದು ಬಸ್ಸು ಇತ್ತು. ವಾಪಾಸ್‌ ಬರಬಳ್ಳಿಯಿಂದ ಮುಂಜಾನೆ ೯ ರ ವೇಳೆಗೆ ಬರುವ ಬಸ್ಸು ಹಾಗೂ ಸಂಜೆ ೪ ಗಂಟೆಗೆ ಯಲ್ಲಾಪುರಕ್ಕೆ ತೆರಳುವ ಬಸ್ಸುಗಳಿರುತ್ತಿದ್ದವು. ಕಾಳಿ ನದಿಯ ಕೊಡಸಳ್ಳಿ ಅಣೆಕಟ್ಟು ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳುವ ವೇಳೆಗೆ ಮೂರು ಬಸ್ಸುಗಳು ಆಗಿದ್ದಿರಬಹುದೇನೋ ಎಂಬ ನೆನಪು. ಈ ಬಸ್ಸುಗಳ ಸಮಯವನ್ನೇ ಹುಡುಕಿ ನಾವು ಬರಬಳ್ಳಿಗೆ ಹೋಗುತ್ತಿದ್ದೆವು.
೧೯೯೦ರ ದಶಕದ ಕಥೆಯನ್ನು ನಾನು ಹೇಳಲು ಹೊರಟಿರುವುದು. ಆಗ ಯಲ್ಲಾಪುರದಲ್ಲಿ ಬಸ್‌ ಡಿಪೋ ಇರಲಿಲ್ಲ. ಬರಬಳ್ಳಿ ಇರಲಿ ಅಥವಾ ಯಲ್ಲಾಪುರದ ಗ್ರಾಮೀಣ ಬಸ್ಸುಗಳು ಇರಲಿ ಅವೆಲ್ಲ ಶಿರಸಿಯಿಂದಲೇ ಬರಬೇಕಿತ್ತು. ಶಿರಸಿಯಿಂದ ಬಸ್‌ ಬಂದರಷ್ಟೇ ಯಲ್ಲಾಪುರದ ಗ್ರಾಮೀಣ ಭಾಗಗಳಿಗೆ ಬಸ್‌ ಬಿಡುತ್ತಿದ್ದರು. ಶಿರಸಿಯಿಂದ ಬಸ್‌ ಬಂದಿಲ್ಲ ಎಂದಾದರೆ ಯಲ್ಲಾಪುರದ ಗ್ರಾಮೀಣ ಭಾಗಗಳಿಗೆ ಬಸ್‌ ಕ್ಯಾನ್ಸಲ್‌ ಆಗುತ್ತಿತ್ತು. ಮದ್ಯಾಹ್ನ ೧ ಗಂಟೆಗೆ ಯಲ್ಲಾಪುರದಿಂದ ಬಿಡುವ ಬಸ್ಸೂ ಕೂಡ ಶಿರಸಿಯಿಂದಲೇ ಬರಬೇಕಿತ್ತು. ಇನ್ನೂ ಮಜವಾದ ಸಂಗತಿ ಎಂದಾದರೆ ಶಿರಸಿಯಿಂದ ಯಲ್ಲಾಪುರಕ್ಕೆ ಹಾಗೂ ಅಲ್ಲಿಂದ ಬರಬಳ್ಳಿಗೆ ಬರುವ ಬಸ್‌ ಸಾಗರದಿಂದ ಹೊರಡುತ್ತಿತ್ತು. ಮುಂಚಿನ ದಿನ ರಾತ್ರಿ ವೇಳೆಗೆ ಸಾಗರ ತೆರಳುವ ಬಸ್‌ ಸಾಗರದಲ್ಲಿ ಹಾಲ್ಟ್‌ ಮಾಡಿ, ಮರುದಿನ ಸಾಗರದಿಂದ ಹೊರಟು ನಂತರ ಶಿರಸಿಗೆ ಬಂದು ಅಲ್ಲಿಂದ ಯಲ್ಲಾಪುರಕ್ಕೆ ಬಂದು ಆ ನಂತರ ಬರಬಳ್ಳಿಗೆ ಬರುತ್ತಿತ್ತು.
ಬರಬಳ್ಳಿಗೆ ಹೋಗುವ ಬಸ್‌ ಸಾಗರದಿಂದ ಬರುತ್ತದೆ ಎಂಬ ವಿಷಯವನ್ನು ಹೇಗೋ ತಿಳಿದುಕೊಂಡಿದ್ದ ಅಪ್ಪ, ನನ್ನನ್ನೂ, ನನ್ನ ತಂಗಿಯನ್ನೂ, ಅಮ್ಮನನ್ನೂ ಕಾನಸೂರಿನ ತನಕ ಕರೆದುಕೊಂಡು ಬಂದು ಆ ಬಸ್ಸನ್ನು ಹತ್ತಿಸುತ್ತಿದ್ದರು. ಕೆಲವೊಮ್ಮೆ ಕಾಕತಾಳೀಯವೋ ಎನ್ನುವಂತೆ ಅದೇ ಬಸ್ಸಿನಲ್ಲಿ ಕಾನಲೆಯಿಂದ ಬಂದ ಗಿರೀಶಣ್ಣ, ಗುರಣ್ಣರೂ, ಕಾನಲೆ ದೊಡ್ಡಮ್ಮರೂ ಇರುತ್ತಿದ್ದರು. ಅವರಿಗೆ ಅಮ್ಮ ಮೊದಲೆ ಪತ್ರ ಬರೆದು ಇಂತ ದಿನ ಹೋಗುತ್ತಿದ್ದೇವೆ ಎಂಬ ವಿಷಯ ತಿಳಿಸುತ್ತಿದ್ದಳೋ ಏನೋ? ಗೊತ್ತಿಲ್ಲ. ಆದರೆ ಕಾನಸೂರಿನಲ್ಲಿ ಬಸ್‌ ಹತ್ತುವ ವೇಳೆಗೆ ಗೀರೀಶಣ್ಣ ಬಸ್ಸಿನಲ್ಲಿ ಇದ್ದು ನಮ್ಮನ್ನು ಮಾತನಾಡಿಸುತ್ತಿದ್ದ ಕ್ಷಣಗಳು ಇನ್ನೂ ನೆನಪಿದೆ.
ಕಾನಸೂರಿನಲ್ಲೆಲ್ಲ ರಶ್‌ ಆಗಿರುತ್ತಿದ್ದ ಬಸ್‌ ಶಿರಸಿಯಲ್ಲಿ ಒಮ್ಮೆಗೇ ಖಾಲಿಯಾಗುತ್ತಿತ್ತು. ಶಿರಸಿ ಬಸ್‌ ನಿಲ್ದಾಣದಲ್ಲಿ ಜನವೋ ಜನ. ಅವರೆಲ್ಲ ಕಿಡಕಿಯಿಂದ ಟವೇಲ್‌, ಬ್ಯಾಗ್‌ ಇತ್ಯಾದಿಗಳನ್ನು ತೂರಿಸಿ ಸೀಟ್‌ ಬುಕ್‌ ಮಾಡುವುದರೊಳಗೆ ನಾನು, ಗಿರೀಶಣ್ಣರಾದಿಯಾಗಿ ನಮ್ಮ ಪಟಾಲಂ ಡ್ರೈವರ್‌ ಸೀಟಿನ ಪಕ್ಕದ ಉದ್ದನೆಯ ಸೀಟಿನಲ್ಲಿ ಆಸೀನರಾಗುತ್ತಿದ್ದೆವು.
ಕೆಲವು ಸಂದರ್ಭದಲ್ಲಿ ಬಸ್ಸಿಗೆ ಕ್ಯಾಬಿನ್‌ ಇರುತ್ತಿತ್ತು. ಅಂದರೆ ಈಗಿನಂತೆ ಡ್ರೈವರ್‌ ಪಕ್ಕದಲ್ಲಿ ಉದ್ದನೆಯ ಸೀಟ್‌ (ಈಗಿನ ಬಸ್ಸುಗಳಲ್ಲಿ ಸೀಟ್‌ ನಂಬರ್‌ ೪೬, ೪೭,೪೮) ಇರುತ್ತಿರಲಿಲ್ಲ. ಡ್ರೈವರ್‌ಗಳಿಗೆ ಪ್ರಯಾಣಿಕರು ತೊಂದರೆ ಕೊಡಬಾರದೆಂದು ದೊಡ್ಡ ಕ್ಯಾಬಿನ್‌ ಮಾಡಿ ಜಾಲರಿಯನ್ನು ಹೊಡೆದು ಖಾಲಿ ಬಿಡುತ್ತಿದ್ದರು. ಆ ಕ್ಯಾಬಿನ್‌ ಒಳಗೆ ಒಂದು ಸೀಟ್‌ ಡ್ರೈವರ್‌ ಮಲಗಲು ಅನುಕೂಲವಾಗುವಂತೆ ಇರುತ್ತಿತ್ತು. ಹಳೆಯ ಕಾಲದ ಉದ್ದನೆಯ ಗೇರ್‌ ಬಹುತೇಕ ಕ್ಯಾಬಿನ್‌ ತುಂಬಿಸುತ್ತದೆಯೇನೋ ಎನ್ನಿಸುವಂತಿತ್ತು. ಈ ಗೇರುಗಳನ್ನು ಹಾಕುವಾಗ ಕಿರ್ರೋ ಎನ್ನುವ ಶಬ್ದ ಕಿವಿಗೆ ಬೀಳುತ್ತಿತ್ತು. ಶಿರಸಿಯಲ್ಲಿ ಬಸ್‌ ಖಾಲಿಯಾಗುತ್ತಿದ್ದಂತೆಯೇ ಕ್ಯಾಬಿನ್‌ ಇರುವ ಬಸ್ಸಿನಲ್ಲಿ ನಾವು ಡ್ರೈವರ್‌ ಹಿಂಭಾಗದ ಮೂರು ಜನ ಕೂರುವ ಸೀಟಿನಲ್ಲಿ ವಿರಾಜಮಾನರಾಗುತ್ತಿದ್ದೆವು. ಕ್ಷಣಮಾತ್ರದಲ್ಲಿ ಬಸ್‌ ಭರ್ತಿಯಾದ ಬಸ್‌ ಶಿರಸಿಯಿಂದ ೧೦ ಗಂಟೆಯೋ, ೧೦.೩೦ಕ್ಕೋ ಯಲ್ಲಾಪುರ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು.
ಬಸ್‌ ಡ್ರೈವರ್‌ ಪಕ್ಕದ ಸೀಟಿನಲ್ಲಿ, ಡ್ರೈವರ್‌ ಹಿಂಭಾಗದಲ್ಲಿ ಕುಳಿತಿರುತ್ತಿದ್ದ ನಮಗಂತೂ ಕಾಣಿಸುವ ದೃಶ್ಯ ವೈಭವಗಳು ಆಹಾ. ಅಂಕುಡೊಂಕಿನ ರಸ್ತೆ, ಡ್ರೈವರ್‌ ಬಸ್‌ ಚಲಾಯಿಸುತ್ತಿದ್ದ ವೈಖರಿಗೆ ತಲೆದೂಗುತ್ತ ಆಗೀಗ ನಮ್ಮ ನಮ್ಮಲ್ಲೆ ಮಾತಾಡಿಕೊಳ್ಳುತ್ತ, ಜಗಳ ಕಾಯುತ್ತ ಸಾಗುತ್ತಿದ್ದೆವು. ತಾರಗೋಡ, ಭೈರುಂಭೆ, ಉಮ್ಮಚಗಿ ದಾಟಿ ಮಂಚೀಕೇರಿ ಬರುವ ತನಕ ನಮ್ಮ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗುತ್ತಿತ್ತು. ಎಷ್ಟು ಸಾಗಿದರೂ ಯಲ್ಲಾಪುರವೇ ಬರುವುದಿಲ್ಲವಲ್ಲ ಎಂದು ಆಗೀಗ ಗೊಣಗುತ್ತ, ಮಧ್ಯ ಮಧ್ಯದಲ್ಲಿ ತೂಕಡಿಸುತ್ತ, ಕಿರು ನಿದ್ದೆ ಮಾಡುತ್ತ ಏಳುತ್ತಿದ್ದೆವು. ಅಮ್ಮ-ದೊಡ್ಡಮ್ಮ ನಿರಾತಂಕವಾಗಿ, ಬಿಡುವಿಲ್ಲದಂತೆ ಮಾತಾಡುತ್ತ ಬರುತ್ತಿದ್ದರು. ʼಇನ್ನೇನು ಮಂಚೀಕೇರಿ ದಾಟಿ ಬೇಡ್ತಿ ಸೇತುವೆ ಬಂತೆಂದರೆ ಧಿಗ್ಗನೆ ಎದ್ದು ಕುಳಿತುಕೊಳ್ಳುತ್ತಿದ್ದೆವು.
ಬೇಡ್ತಿ ನದಿ ಸೇತುವೆ ಅಂದಿನಿಂದ ಇಂದಿನವರೆಗೂ ನಮಗೊಂದು ವಿಸ್ಮಯವೇ. ಅಂಕುಡೊಂಕಿನ ಇಳುಕಲನ್ನು ಹಾದು ಬಂದು ಉದ್ದನೆಯ ಆದರೆ ಅಗಲದಲ್ಲಿ ಸಣ್ಣದಾಗಿರುವ ಈ ಸೇತುವೆಯ ಮೇಲೆ ಬಸ್‌ ಸಾಗುತ್ತಿದ್ದಾಗ ಬೇಡ್ತಿನದಿಯಲ್ಲಿ ನೀರಿದೆಯೇ ಎಂದು ನೋಡುವ ತವಕ ನಮಗೆಲ್ಲ. ಅಘನಾಶಿನಿಯಲ್ಲಿ ಎಂತಹ ಸಮಯದಲ್ಲೂ ನೀರು ಬತ್ತುವುದಿಲ್ಲ ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಪಕ್ಕದಲ್ಲಿದ್ದ ಗಿರೀಶಣ್ಣ ಶರಾವತಿ ನದಿ ಎಷ್ಟು ದೊಡ್ಡ ಗೊತ್ತಾ.. ಅದರಲ್ಲಿ ಅಷ್ಟು ನೀರಿದೆ, ಇಷ್ಟು ನೀರಿದೆ ಎನ್ನುತ್ತಿದ್ದ. ಬೇಡ್ತಿ ಸೇತುವೆಯ ಕೆಳಗೆ ಬತ್ತಿದ ನದಿ, ಖಾಲಿ ಖಾಲಿ ಕಲ್ಲು ಹಾಸು ನಮ್ಮನ್ನು ಎಷ್ಟು ನಿರಾಸೆಗೊಳಿಸುತ್ತಿತ್ತೆಂದರೆ ಛೇ.. ಇದನ್ನು ಯಾರಾದರೂ ನದಿ ಎನ್ನುತ್ತಾರಾ? ನೀರಿಲ್ಲದ ಈ ನದಿಗೆ ಯಾಕಾದರೂ ಸೇತುವೆ ಕಟ್ಟುತ್ತಾರೋ ಎನ್ನಿಸುತ್ತಿತ್ತು. ಮಳೆಗಾಲದಲ್ಲಿ ಬೇಡ್ತಿಯ ಅಬ್ಬರ ನಮಗೇನು ಗೊತ್ತಿತ್ತು ಹೇಳಿ..
ಬೇಡ್ತಿ ನದಿ ದಾಟಿದ್ದೇ ತಡ ನಮಗೆ ಉತ್ಸಾಹ ಬರುತ್ತಿತ್ತು. ಯಾವಾಗ ಉಪಳೇಶ್ವರ ದಾಟಿದೆವೋ ನಾವು ಕೂತಲ್ಲಿ ಕೂರುತ್ತಿರಲಿಲ್ಲ.. ನಿಂತಲ್ಲಿ ನೀಲ್ಲುತ್ತಿರಲಿಲ್ಲ. ಇನ್ನೇನು ಯಲ್ಲಾಪುರ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ದೊಡ್ಡ ಎಪಿಎಂಸಿ ನಮ್ಮನ್ನು ಚಕಿತಗೊಳಿಸುತ್ತಿತ್ತು. ಬೆಳಿಗ್ಗೆ ತಿಂಡಿ ತಿಂದ ನಂತರ ನಾವೇನೂ ತಿಂದಿಲ್ಲ ಎನ್ನುವುದು ನೆನಪಾಗುತ್ತಿದ್ದಂತೆ ಹಸಿವೂ ಕಾಡುತ್ತಿತ್ತು. ಇನ್ನೇನು ಯಲ್ಲಾಪುರ ಬಂದೇ ಬಿಡ್ತಲ್ಲ.. ಅಜಮಾಸು ೧೨ ಗಂಟೆಯೋ ಹನ್ನೆರಡೂ ಕಾಲೋ ಆಗಿರುತ್ತಿತ್ತು. ಮತ್ತೊಮ್ಮೆ ಯಲ್ಲಾಪುರದಲ್ಲಿ ಬಸ್‌ ಖಾಲಿ ಖಾಲಿ.. ಆದರೆ ಬಸ್‌ನಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನರು ಯಲ್ಲಾಪುರದಲ್ಲಿ ಕಾಯುತ್ತಿರುತ್ತಾರೆ ಎನ್ನುವುದು ನಮಗೆ ಅಲ್ಲಿಗೆ ಹೋದ ನಂತರವೇ ಗೊತ್ತಾಗುತ್ತಿದ್ದುದು.
ರಶ್ಶಿನ ನಡುವೆ ಸೀಟಿನಲ್ಲಿ ಬ್ಯಾಗ್..‌ ಕರ್ಚೀಫ್‌ ಟವೇಲ್‌ ಎಲ್ಲ ಇಟ್ಟು ನಾವು ಬಸ್ಸಿನಿಂದ ಇಳಿಯುತ್ತಿದ್ದೆವು. ಅಲ್ಲಿರುವ ಬಸ್‌ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಇಡ್ಲಿಯೋ, ಬನ್‌ ತಿಂದು ಕಷಾಯ ಕುಡಿದರೆ ನಮ್ಮ ಹೊಟ್ಟೆ ತಂಪಾಗುತ್ತಿತ್ತು. ಮತ್ತೆ ರಶ್‌ ಇರುವ ಬಸ್ಸಿನಲ್ಲಿ ಒದ್ದಾಡಿ ಗುದ್ದಾಡಿ ನಮ್ಮ ಸೀಟ್‌ ಇರುವ ಜಾಗಕ್ಕೆ ಬರುವ ವೇಳೆಗೆ ಉಸ್ಸಪ್ಪಾ ಎನ್ನಿಸುತ್ತಿತ್ತು.
ಅಪ್ಪನ ಜತೆ ಬರಬಳ್ಳಿಗೆ ಹೋಗುವಾಗ ಹೀಗೆ ಆಗುತ್ತಿರಲಿಲ್ಲ. ಯಾವು ಯಾವುದೋ ಬಸ್‌, ಟೆಂಪೋಗಳ ಮೂಲಕ ಯಲ್ಲಾಪುರಕ್ಕೆ ಅಪ್ಪ ನಮ್ಮನ್ನು ಕರೆದುಕೊಂಡು ಬರುತ್ತಿದ್ದ. ಯಲ್ಲಾಪುರದಲ್ಲಿ ಬರಬಳ್ಳಿ ಬಸ್‌ ಈಗ ಬರುತ್ತೆ, ಆಗ ಬರುತ್ತೆ ಎಂದು ನಾವು ಕಾಯುತ್ತ ಹೈರಾಣಾಗುತ್ತಿದ್ದೆವು. ಒಂದು ವೇಳೆ ಬರಬಳ್ಳಿಗೆ ಹೋಗುವ ಬಸ್‌ ಯಲ್ಲಾಪುರ ನಿಲ್ದಾಣಕ್ಕೆ ಬಂದೇ ಬಿಟ್ಟಿತು ಅಂದ್ಕೊಳ್ಳಿ ಮೊದಲು ಸೀಟ್‌ ಹಿಡಿಯುವುದಕ್ಕೆ ಓಡುತ್ತಿದ್ದೆವು. ಆಗ ನನ್ನ ತಂಗಿ ಪುಟ್ಟ (ಐದು ವರ್ಷ) ಇದ್ದಳೇನೋ. ಅಪ್ಪ ಆಕೆಯನ್ನು ಬಸ್ಸಿನ ಗ್ಲಾಸ್‌ ತೆಗೆದು ಕಿಟಕಿ ಮೂಲಕ ಒಳಕ್ಕೆ ಕಳಿಸುತ್ತಿದ್ದ. ಆಕೆ ಸೀಟ್‌ ಹಿಡಿದುಕೊಳ್ಳುತ್ತಿದ್ದಳು.
******
ನಲವತ್ತು ಜನ ಹಿಡಿಯುವ ಯಲ್ಲಾಪುರ-ದೇಹಳ್ಳಿ-ಬರಬಳ್ಳಿ ಬಸ್ಸಿನಲ್ಲಿ ಕನಿಷ್ಟವೆಂದರೂ ಅರವತ್ತು ಜನರು ತುಂಬಿರುತ್ತಿದ್ದರು. ಉಸಿರಾಡಲೂ ಜಾಗವಿಲ್ಲವೇನೋ ಎಂಬಂತಾಗುತ್ತಿತ್ತು. ಇನ್ನೂ ಎಷ್ಟು ಹೊತ್ತಿಗೆ ಬಸ್‌ ಹೊರಡುತ್ತೆ? ಎಂಬ ಕಾತುರ, ರೇಜಿಗೆ ಎಲ್ಲ ಓಟ್ಟೊಟ್ಟಿಗೆ ಆಗುತ್ತಿತ್ತು. ಅಮ್ಮ-ದೊಡ್ಡಮ್ಮನಿಗಂತೂ ಬರಬಳ್ಳಿಯ ನೆಂಟರು, ಸಂಬಂಧಿಕರ ಬಳಗವೇ ಬಸ್ಸಿನಲ್ಲಿ ಸಿಕ್ಕು ಉಭಯಕುಶಲೋಪರಿಗಳು ಬಿಡುವಿಲ್ಲದಂತೆ ನಡೆಯುತ್ತಿದ್ದವು. ಬಸ್ಸಿನಲ್ಲಿ ಸಿಗುವ ಗುಡ್ಡೆ ನರಸಿಂಹಣ್ಣ, ಬಾರೆ ಶಿವರಾಮ ಭಾವ, ಗುಡ್ಡೆಮನೆಯ ವಿಶ್ವೇಶ್ವರ (ಮಾವ), ಜಪದಮನೆ ಡಾಕ್ಟರು, ಡಿ ಎನ್.‌ ಗಾಂವ್ಕಾರ್‌, ಪಾಟೀಲ ರಾಮಣ್ಣ ಹೀಗೆ ಇನ್ನೂ ಹಲವರು ಬಸ್ಸಿನಲ್ಲಿ ಸಿಕ್ಕಿ ʻಅರೇ ಗಂಗೂ.. ಯಾವಾಗ ಬೈಂದೆ.. ಉದಿಯಪ್ಪಾಗ ಮನಿಂದ ಹೊರಟಿದ್ಯ..ʼ ಎಂದು ಕೇಳುವಾಗ ನಮಗಂತೂ ಬಸ್ಸಿನ ತುಂಬೆಲ್ಲ ನಮ್ಮವರೇ ಇದ್ದಾರಲ್ಲ ಎನ್ನಿಸುತ್ತಿತ್ತು. ಯಲ್ಲಾಪುರದಿಂದ ಬಿಸಗೋಡ, ದೇಹಳ್ಳಿ, ಕಟ್ಟಿಗೆ, ಸಾತೊಡ್ಡಿ ಮಾರ್ಗವಾಗಿ ಬರಬಳ್ಳಿಗೆ ತೆರಳುವ ಬಸ್‌ ಸಂಖ್ಯೆ. **** ಎಂದರೆ ಮೈಕಿನಲ್ಲಿ ಹೇಳುತ್ತಿದ್ದಂತೆ ಇನ್ನೇನು ಬಸ್‌ ಹೊರಡುತ್ತದೆ ಎನ್ನುವ ಸಮಾಧಾನ ನಮಗೆ. ಅಷ್ಟೆರಲ್ಲಿ ಒಬ್ಬ ಕುಳ್ಳನೆಯ ಆದರೆ ಸದೃಢ ಗಾತ್ರದ ವ್ಯಕ್ತಿ ಐಸ್‌ ಕ್ಯಾಂಡಿ ಗಾಡಿಯನ್ನು ತಳ್ಳಿಕೊಂಡು ಬರುತ್ತಿದ್ದ. ಅದನ್ನು ಕೊಡಿಸೆಂದು ನಾವು ಹರಪೆ ಮಾಡುತ್ತಿದ್ದೆವು. ನಮ್ಮ ಹಟಕ್ಕೆ ಮಣಿದು ಕೊನೆಗೂ ಐಸ್ಕ್ರೀಂ ಕೊಡಿಸುತ್ತಿದ್ದರು.
ಸುಡುಬಿಸಿಲಿನ ಮದ್ಯಾಹ್ನದ ಒಂದು ಗಂಟೆ ಸಮಯವನ್ನು ಮೀರುವ ವೇಳೆಗೆ ಬಸ್‌ ಡ್ರೈವರ್‌ ಬಸ್ಸಿಗೆ ಹತ್ತಿಕೊಂಡು ಎರಡು ಸಾರಿ ಹಾರನ್‌ ಭಾರಿಸಿ ನಾವು ಹೊರಡುತ್ತಿದ್ದೇವೆ, ಎಲ್ಲರೂ ಹತ್ತಿಕೊಳ್ಳಿ ಎಂದು ಸಾರುತ್ತಿದ್ದಂತೆಯೇ ಎಲ್ಲರೂ ಓಡಿ ಬಂದು ಬಸ್‌ ಏರುತ್ತಿದ್ದರು. ಬಸ್ಸಿನ ತುಂಬೆಲ್ಲ ನಮ್ಮ ನೆಂಟರ ಬಲಗವೇ ಇರುತ್ತಿದ್ದುದರಿಂದ ನಮ್ಮ ಟಿಕೆಟನ್ನು ಯಾರು ತೆಗೆಸಿದರೋ.. ಕಂಡಕ್ಟರ್‌ ಬಳಿ ಅಮ್ಮ-ದೊಡ್ಡಮ್ಮ ಹಣ ಕೊಡಲು ಹೋದಾಗ ನಿಮ್ಮ ಟಿಕೆಟ್‌ ಮಾಡಿ ಆಗಿದೆ ಎನ್ನುತ್ತಿದ್ದರು. ಅಮ್ಮ-ದೊಡ್ಡಮ್ಮ ಬಸ್ಸಿನಲ್ಲಿ ಹಿಂದೆ ತಿರುಗಿ ನೋಡಿದರೆ ಯಾವುದೋ ನೆಂಟರು ತಲೆಯಾಡಿಸಿ, ಸನ್ನೆ ಮಾಡುತ್ತಿದ್ದರು.
ಯಲ್ಲಾಪುರದಲ್ಲಿ ಇನ್ನೂ ಹೈವೆ ಆಗಿರದ ಸಮಯ ಅದು. ವಾಹನಗಳೆಲ್ಲ ಈಗಿನ ಸಂತೆ ಜಅದ ಮೂಲ ಬಸ್‌ ನಿಲ್ದಾಣದ ಬಳಿ ಬಂದೇ ಸಾಗುತ್ತಿತ್ತು. ಯಲ್ಲಾಪುರ ನಿಲ್ದಾಣದಿಂದ ನಿಧಾನವಾಗಿ ಹೊರಡುವ ಬಸ್‌ ಕಿರು ರಸ್ತೆಯಲ್ಲಿ ಸಾಗಿ ಮುಂದಡಿ ಇಡುತ್ತಿದ್ದಂತೆಯೆ ಅಗೋ ಜೋಡುಕೆರೆ, ಅಲ್ಲಿ ನೋಡು ಹೋಲಿ ರೋಜರಿ ಹೈಸ್ಕೂಲು.. ಆ ಹೈಸ್ಕೂಲಿಗೆ ಕಟ್ಟಿಕೊಂಡ ಜೇನು ನೋಡು.. ಅರೆರೆ ಸಾತೊಡ್ಡಿ ಜೋಗಕ್ಕೆ ಎಷ್ಟು ದೊಡ್ಡ ಬೋರ್ಡ್‌ ಹಾಕಿದ್ದಾರಲ್ಲ.. ಎಂಬ ಮಾತುಗಳೊಡನೆ ಬಸ್ಸಿನೊಳಗಿದ್ದ ನಾವು ಮುಂದಕ್ಕೆ ಸಾಗುತ್ತಿದ್ದೆವು. ಬಸ್‌ ಹುಬ್ಬಳ್ಳಿ ರಸ್ತೆಯಿಂದ ತಿರುಗಿ ಬಿಸಗೋಡ್‌ ರಸ್ತೆ ಹಿಡಿಯುವ ವೇಳೆಗಾಗಲೇ ಪಕ್ಕದಲ್ಲಿದ್ದ ಗಿರೀಶಣ್ಣ ʻಸಾತೋಡ್ಡಿಗೆ ಯಾಕೆ ಸಾತೊಡ್ಡಿ ಜೋಗ ಅಂತ ಹಾಕಿದ್ದಾರೆ. ಅದು ಸಾತೊಡ್ಡಿ ಜಲಪಾತ ಅಲ್ಲವಾ? ಜೋಗ ಅಂದ್ರೆ ಜೋಗ ಜಲಪಾತ ಮಾತ್ರ.. ಯಲ್ಲಾಪುರದವರು ಎಲ್ಲ ಜಲಪಾತಗಳಿಗೂ ಜೋಗ ಎನ್ನುತ್ತಾರೆ.. ಆದರೆ ಜಲಪಾತ ಅಂತ ಕರೀಬೇಕಲ್ಲವಾ..ʼ ಎಂಬ ತರ್ಕವನ್ನು ನಮ್ಮೆದುರು ಹೂಡುತ್ತಿದ್ದ. ಹೌದಿರಬಹುದು ಎಂದುಕೊಂಡು ನಾವು ಸುಮ್ಮನಾಗುತ್ತಿದ್ದೆವು. ಆದರೆ ಈಗ ಗೊತ್ತಾಗಿದ್ದೆಂದರೆ ಸಾತೊಡ್ಡಿ ಜಲಪಾತಕ್ಕೆ ಮಿನಿ ಜೋಗಜಲಪಾತ ಎಂಬ ಹೆಸರಿದೆ ಎನ್ನುವುದು. ಬಿಡಿ ಆಗ ಗೊತ್ತಿದ್ದಿದ್ದರೆ ಗಿರೀಶಣ್ಣನ ಎದುರು ವಾದ ಮಾಡಬಹುದಿತ್ತು!
ಫುಲ್‌ ಪ್ಯಾಕ್‌ ಆಗಿದ್ದ ಬಸ್‌ ಅದ್ಯಾವುದೋ ದೇವಸ್ಥಾನವನ್ನು ದಾಟಿ ಕಾರೆಮನೆ ಕ್ರಾಸ್‌ ದಾಟಿ ಮುಂದಕ್ಕೆ ಹೊರಟಿತು. ಅಲ್ಲೆಲ್ಲೋ ಬಸ್‌ ಬರಬಳ್ಳಿಗೆ ಹೋಗುವ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿಕೊಂಡಾಗ ನಮ್ಮ ಮನದಲ್ಲೇನೋ ಗಾಬರಿ. ಅರೆ ಇದೆಲ್ಲೋ ಬೇರೆ ಕಡೆ ಹೊರಟಿತಲ್ಲ! ಆ ಬಸ್‌ ಸೀದಾ ಬಿಸಗೋಡ್‌ಗೆ ಹೋಗುತ್ತಿತ್ತು. ಅಲ್ಲಿ ಆಗ ದೊಡ್ಡ ಮ್ಯಾಂಗನಿಸ್‌ ಗಣಿ ಇತ್ತು. ಅಲ್ಲಿ ರಾಜ್ಯದ, ಹೊರ ರಾಜ್ಯದ ಕಾರ್ಮಿಕರೆಲ್ಲ ಕೆಲಸ ಮಾಡುತ್ತಿದ್ದರು. ಅಲ್ಲಿ ತೆಗೆದ ಮ್ಯಾಂಗನಿಸ್‌ ಅದಿರನ್ನು ಬೇರೆ ದೇಶಕ್ಕೆಲ್ಲ ರಫ್ತು ಮಾಡುತ್ತಿದ್ದರಂತೆ. ಬೀಸಗೋಡಿಗೆ ಹೋಗಿ ಅಲ್ಲೊಂದು ಸರ್ಕಲ್‌ನಲ್ಲಿ ಸುತ್ತು ಹಾಕಿ ನಿಲ್ಲುತ್ತಿತ್ತು. ಅರ್ಧಕ್ಕರ್ಧ ಬಸ್‌ ಖಾಲಿಯಾಗುತ್ತಿದ್ದಂತೆ ಮರಳಿ ನಾಲ್ಕೈದು ಕಿಲೋಮೀಟರ್‌ ಸಾಗಿ ಬರಬಳ್ಳಿಗೆ ತೆರಳುವ ಮಾರ್ಗ ಹಿಡಿಯುತ್ತಿತ್ತು. ನಮ್ಮ ಜಿವಾದ ಪ್ರಯಾಣ ಈಗ ಶುರುವಾಗುತ್ತಿತ್ತು.
ಬೀಸಗೋಡ್‌ ಕ್ರಾಸಿನಿಂದ ಬರಬಳ್ಳಿಗೆ ೧೮ ಕಿಲೋಮೀಟರ್.‌ ರಸ್ತೆಯಂತೂ ಅಬ್ಬಬ್ಬಾ ದೇವರೆ.. ಎನ್ನುವಂತಿತ್ತು. ಎರಡು ಗಂಟೆಯಿರಬೇಕು ಆನಗೋಡ್‌ ದಾಟಿ ಬಸ್‌ ದೇಹಳ್ಳಿ ತಲುಪಿದ ತಕ್ಷಣ ಡ್ರೈವರ್‌ ಬಸ್‌ ಇಳಿದು ನಾಪತ್ತೆಯಾಗುತ್ತಿದ್ದ. ಕಂಡಕ್ಟರ್‌ ʻಹತ್‌ ನಿಮಿಷ ಟೈಮಿದೆ.. ಹೊಟ್ಟೆಗೆ ಹಾಕೋರು ಹಾಕ್ಕೋಳ್ಳಿ..ʼ ಎನ್ನುತ್ತಿದ್ದ. ಮದ್ಯಾಹ್ನದ ಬಸ್‌ ಅಲ್ವಾ.. ಡ್ರೈವರ್‌ ದೇಹಳ್ಳಿಯಲ್ಲಿ ಊಟಕ್ಕೆ ಹೋಗುತ್ತಿದ್ದ. ದೇಹಳ್ಳಿಯಲ್ಲಿ ಕೆಲವರು ಹೊಟೆಲ್‌ಗೆ ಹೋದರೂ ನಾವು ಬಸ್ಸಿನಲ್ಲೇ ಕುಳಿತಿರುತ್ತಿದ್ದೆವು. ಅದೇ ವೇಳೆಗೆ ಬಳಗಾರದಿಂದ ಬರುವ ಇನ್ನೊಂದು ಬಸ್‌ ನಮಗೆ ಸಿಕ್ಕು, ಆ ಬಸ್ಸಿನ ಡ್ರೈವರ್‌ ಕೂಡ ಊಟಕ್ಕೆ ಇಳಿದು ಹೋಗುವ ಕಾರ್ಯವೂ ನಡೆಯುತ್ತಿತ್ತು.
ಹದಿನೈದೋ-ಇಪ್ಪತ್ತೋ ನಿಮಿಷದಲ್ಲಿ ಊಟ ಮುಗಿಸುತ್ತಿದ್ದ ಡ್ರೈವರ್‌ ಬಸ್ಸನ್ನು ಏರಿ ಮತ್ತೆ ಹಾರನ್‌ ಭಾರಿಸುತ್ತಿದ್ದ. ಎಲ್ಲರೂ ಬಸ್‌ ಏರಿ ಬಸ್‌ ಹೊರಡುತ್ತಿತ್ತು. ಅಲ್ಲಿಂದ ಶುರು ನೋಡಿ ದೊಡ್ಡ ಈಳಿಜಾರು ರಸ್ತೆ. ಕೆಲವು ಕಿಲೋಮೀಟರ್‌ ಅಂತರದಲ್ಲಿ ಗಣೇಶಗುಡಿ ಎಂಬ ಊರು ಸಿಗುತ್ತಿತ್ತು. ಇಲ್ಲೊಂದು ಗಣೇಶನ ದೇವಸ್ಥಾನ ಇರುವ ಕಾರಣ ಗಣೇಶಗುಡಿ ಎಂದೇ ಹೆಸರಾದ ಊರು ಅದು. ಆಗ ಗಣೇಶಗುಡಿಯ ತನಕ ಟಾರು ರಸ್ತೆ ಇತ್ತು. ಅಲ್ಲಿಂದ ಮುಂದೆ ಸಂಪೂರ್ಣ ಖಡಿ ರಸ್ತೆ. ಗಣೇಶಗುಡಿಯ ತನಕ ಮಳೆಗಾಲದಲ್ಲೂ ಬಸ್‌ ಬರುತ್ತಿತ್ತು. ಆ ನಂತರ ಏನಿದ್ದರೂ ಡ್ರೈವರ್‌ ಮರ್ಜಿ. ಡ್ರೈವರ್‌ ಗೆ ಮನಸ್ಸಿರದಿದ್ದರೆ ಗಣೇಶಗುಡಿಯಲ್ಲಿಯೇ ಬಸ್‌ ವಾಪಾಸದರೂ ಆಗಬಹುದಿತ್ತು. ಕೆಲವೊಮ್ಮೆ ಪ್ರಯಾಣಿಕರೆಲ್ಲ ಡ್ರೈವರ್‌ ಬಳಿ ಕಾಡಿ ಬೇಡಿ ದಮ್ಮಯ್ಯ ದಾತಾರ ಹಾಕಿ ಬಸ್ಸನ್ನು ಮುಂದೆ ಬಿಡಿಸಿಕೊಂಡು ಹೋಗಿರುವ ಸಂದರ್ಭಗಳೂ ಇತ್ತು. ನಮ್ಮ ಪುಣ್ಯಕ್ಕೆ ಬಸ್‌ ಗಣೇಶಗುಡಿಯಲ್ಲಿ ವಾಪಾಸ್‌ ಯಾವತ್ತೂ ಆಗಿರಲಿಲ್ಲ.
ಮೊದಲೇ ನಿಧಾನಗತಿಯಲ್ಲಿದ್ದ ಬಸ್‌ ಕಚ್ಚಾ ರಸ್ತೆ ಶುರುವಾದ ಕೂಡಲೇ ಇನ್ನಷ್ಟು ನಿಧಾನವಾಗುತ್ತಿತ್ತು. ಕಟ್ಟಿಗೆ ಊರಿಗೆ ಬರುವ ವೇಳೆಗೆ ಅದೆಷ್ಟು ಸ್ಲೋ ಎಂದರೆ ಗಂಟೆಗೆ ಕನಿಷ್ಟ ಎಂಟು ಕಿಲೋಮೀಟರ್‌ ಇರಬಹುದೇನೋ ಅನ್ನಿಸುತ್ತಿತ್ತು. ಅದೆಷ್ಟು ಕರ್ವಿಂಗುಗಳು.. ಅದೆಷ್ಟು ಭಯಾನಕ ಇಳಿಜಾರು.. ರಸ್ತೆ ಪಕ್ಕದಲ್ಲಿ ಅಲ್ಲೆಲ್ಲೋ ಕಾಣುತ್ತಿದ್ದ ದೈತ್ಯ ಬಂಡೆಗಲ್ಲು.. ಈ ಕಲ್ಲು ಈಗ ಬಿದ್ದರೆ ಏನ್‌ ಮಾಡೋದು,, ಈ ಮರ ಈಗ ಬಿದ್ದರೆ ಏನಾಗಬಹುದು... ಹೀಗೆ ನಾನಾ ಆಲೋಚನೆಗಳು.. ಉರಿಬಿಸಿಲಾದರೂ ದಟ್ಟ ಮರಗಳ ಕಾರಣ ಸೂರ್ಯನ ಕಿರಣಗಳು ಭೂಮಿಗೆ ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದವು. ಅಲ್ಲೆಲ್ಲೋ ಶಿವಪುರ ಎಂಬ ಬೋರ್ಡನ್ನು ಕಂಡೆವು. ಅರೇ ಶಿವಪುರ ಬೋರ್ಡಿನ ಮೇಲೊಂದು ಶಿವಲಿಂಗದ ಚಿತ್ರ ಬಿಡಿಸಿದ್ದಾರಲ್ಲ! ಎಂಬ ಅಚ್ಚರಿ.. ʻಅಮ್ಮ ಶಿವಪುರ ಎಲ್ಲಿ..ʼ ಎಂದು ಕೇಳಿದರೆ ʻಮಗಾ ಅದು ಕಾಳಿ ನದಿಯ ಆಚೆ ದಡದಲ್ಲಿದೆ.. ಅಲ್ಲಿಗೆ ಹೋಗೋದು ಕಷ್ಟ.. ದೋಣಿ ದಾಟಿ ಹೋಗಬೇಕು..ʼ ಎಂಬ ಉತ್ತರ ಅಮ್ಮನಿಂದ ಬರುತ್ತಿತ್ತು.
ಘಟ್ಟವನ್ನು ಇಳಿದಂತೆಲ್ಲ ಬಸ್‌ ಡ್ರೈವರ್‌ ಅಕ್ಕಪಕ್ಕದ ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದುದನ್ನು ನೋಡಿ ʻಎಂತ ನಾಟಾ ಬಿದ್ದಿದೆ ಮಾರಾಯಾ.. ವಾಪಾಸ್‌ ಬರುವಾಗ ಬಸ್ಸಲ್ಲಿ ಹಾಕ್ಕೊಂಡು ಹೋಗ್ವಾ..?ʼ ಎಂದು ಕಂಡಕ್ಟರ್‌ ಬಳಿ ತಮಾಷೆಯಿಂದ ಹೇಳುತ್ತಿದ್ದ. ಕೆಲವು ಸಾರಿ ಅತಿಯಾದ ಸೆಖೆಯ ಕಾರಣ ಬಸ್‌ ಡ್ರೈವರ್‌ ತನ್ನ ಮೇಲಂಗಿ ಕಳಚಿ ಬನಿಯನ್‌ ಹಾಕಿಕೊಂಡೇ ವಾಹನ ಚಾಲನೆ ಮಾಡಿದ್ದೂ ಇದೆ.
ಅಂತೂ ಇಂತೂ ಸಾತೊಡ್ಡಿಗೆ ಬಸ್‌ ಬರುವ ವೇಳೆಗೆ ಮೂರೂವರೆ-ಮೂರು ಮುಕ್ಕಾಲು ದಾಟುತ್ತಿತ್ತು. ಬೇಸಿಗೆಯ ಕೆಲವು ತಿಂಗಳುಗಳನ್ನು ಬಿಟ್ಟರೆ ಉಳಿದ ಹೆಚ್ಚಿನ ತಿಂಗಳುಗಳು ಸಾತೊಡ್ಡಿಯ ತನಕ ಮಾತ್ರ ಬಸ್‌ ಬರುತ್ತಿತ್ತು. ಆ ಸಂಮಯದಲ್ಲೆಲ್ಲ ಯಲ್ಲಾಪುರ-ಸಾತೊಡ್ಡಿ-ಯಲ್ಲಾಪುರ ಎಂಬ ಹೆಸರಿನೊಂದಿಗೆ ಬಸ್‌ ಓಡಾಟ ಮಾಡುತ್ತಿತ್ತು. ಸಾತೊಡ್ಡಿಯ ತನಕ ಬಸ್‌ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಂದ ಬರಬಳ್ಳೀಯ ತನಕ ನಮಗೆಲ್ಲ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಬಿಸಿಲಿನಿಂದ ಕಾದು ಬಿಸಿಯಾದ ಉಸುಕು ಮಣ್ಣಿನಿಂದ ಒಡಗೂಡಿದ ರಸ್ತೆಯಲ್ಲಿ ಕನಿಷ್ಟ ೨-೩ ಕಿಲೋಮೀಟರ್‌ ನಡೆದು ಬರಬಳ್ಳಿಗೆ ತಲುಪಬೇಕಿತ್ತು. ಹೆಜ್ಜೆ ಇಟ್ಟರೆ ಪಾದ ಮುಚ್ಚುವಷ್ಟು ಧೂಳಿನ ರಸ್ತೆ. ಸಾತೊಡ್ಡಿಯಿಂದ ಕೆಲವೆ ಮಾರು ದೂರದಲ್ಲಿ ಸಾತೊಡ್ಡಿ ಜಲಪಾತದ ಹಳ್ಳಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಈ ಸೇತುವೆ ನಿರ್ಮಾಣವಾದಾಗ ಬಸ್‌ ಬರಬಳ್ಳಿ ತಲುಪುತ್ತಿತ್ತು. ಇಲ್ಲವಾದಲ್ಲಿ ಸಾತೊಡ್ಡಿಯಲ್ಲೇ ಬಸ್‌ ವಾಪಾಸಾಗುತ್ತಿತ್ತು. ಈ ಹಳ್ಳಬನ್ನು ದಾಟಿ ರಸ್ತೆ ಪಕ್ಕ ಕೊಂಚ ದೂರದಲ್ಲಿ ಹರಿಯುತ್ತಿದ್ದ ಕಪ್ಪು ಬಣ್ಣದ ಕಾಳಿ ನದಿಯನ್ನು ನೋಡುತ್ತ, ಇನ್ನೊಂದು ಕಡೆ ದೈತ್ಯ ಬಂಡೆಗಲ್ಲುಗಳ ಬೆಟ್ಟವನ್ನು ಕಣ್ತುಂಬಿಕೊಳ್ಳುತ್ತ ನಾವು ಹೋಗುತ್ತಿದ್ದೆವು. ಅಲ್ಲೆಲ್ಲೋ ಒಂದು ಕಡೆ ಬಾರೆ ಶಿವರಾಮ ಭಾವನ ಮನೆ ಇತ್ತು. ಅಲ್ಲೊಂದು ಕಡೆ ರಸ್ತೆ ಕೊಡಸಳ್ಳಿ ಕಡೆಗೆ ಕವಲಾಗುತ್ತಿತ್ತು. ದಟ್ಟ ಬೇಸಿಗೆಯಲ್ಲಿ ಬರಬಳ್ಳಿ ಬಸ್‌ ಮುಂದಕ್ಕೆ ಕೊಡಸಳ್ಳಿ ತನಕವೂ ಹೋಗಿ ಬರುತ್ತಿತ್ತೆನ್ನಿ.
ಬಾರೆ ಶಿವರಾಮ ಭಾವನ ಮನೆ ನಂತರ ಒಂದು ಕಿರುಹಳ್ಳ ಇದ್ದು ಅದನ್ನು ದಾಟುವ ಬಸ್‌ ತೋಟದ ಪಕ್ಕದಲ್ಲಿನ ಕಚ್ಚಾ ರಸ್ತೆಯಲ್ಲಿ ಏದುಸಿರು ಬಿಡುತ್ತ ಬರಬಳ್ಳಿ ಬಲಮುರಿ ಗಣಪತಿ ದೇವಸ್ಥಾನದ ಅಂಗಳಕ್ಕೆ ಬಂದು ನಿಲ್ಲುವ ಹೊತ್ತಿಗೆ ನಮಗಂತೂ ಸ್ವರ್ಗ ಕೈಗೆ ಸಿಕ್ಕ ಅನುಭವ. ಸ್ಥಳೀಯರ ಪಾಲಿಗೆ ಮೊಠ ಎಂದು ಕರೆಸಿಕೊಂಡ ದೇವಸ್ಥಾನದ ಬಳಿ ಡ್ರೈವರ್‌ ಇಳಿದು ಕೆಲಕಾಲ ವಿಶ್ರಮಿಸಿ, ಸ್ಥಳೀಯರೊಂದಿಗೆ ಹರಟೆ ಹೊಡೆದು ನಂತರ ಗಣಪತಿ ದೇವಸ್ಥಾನಕ್ಕೆ ತೆರಳಿ ಗಂಟೆ ಹೊಡೆದು ನಮಿಸಿ ವಾಪಾಸ್‌ ಯಲ್ಲಾಪುರ ಕಡೆಗೆ ತೆರಳುತ್ತಿದ್ದ.
ಯಲ್ಲಾಪುರ ಪಟ್ಟಣದಿಂದ ೩೧-೩೩ ಕಿಲೋಮೀಟರ್‌ ದೂರದ ಬರಬಳ್ಳಿಗೆ ಬಂದು ಹೋಗುತ್ತಿದ್ದ ಈ ಬಸ್‌ ಬಹಳಷ್ಟು ಜನರ ಪಾಲಿಗೆ ಅನಿವಾರ್ಯ ಸಂಪರ್ಕ ಸೇತು ಆಗಿತ್ತು. ಹೊರ ಜಗತ್ತಿನ ಜೊತೆಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಸಾಧನ ಎನ್ನಿಸಿಕೊಂಡಿತ್ತು. ಒಮ್ಮೆಯಂತೂ ಬರಬಳ್ಳಿಯಲ್ಲಿನ ಮಹಿಳೆಯೊಬ್ಬರಿಗೆ ಹೆರಿಗೆ ಅವಧಿ ಮೀರಿ, ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭದಲ್ಲಿ ಆ ಮನೆಯ ನಿವಾಸಿಗಳು ಮಧ್ಯರಾತ್ರಿ ಡ್ರೈವರನ್ನು ಎಬ್ಬಿಸಿ ಬಸ್ಸಿನಲಿ ಕೂರುವಷ್ಟು ಜನರ ದುಡ್ಡನ್ನು ಕಟ್ಟಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕುರಿತು ಹಿರಿಯರಿಂದ ನಾನು ಕೇಳಿದ್ದೇನೆ.
ಒಮ್ಮೊಮ್ಮೆ ಮುರಲಿ, ಇನ್ನೊಮ್ಮೆ ರಾಘವೇಂದ್ರ ಮುಂತಾದ ಹೆಸರಿನ ಡ್ರೈವರುಗಳು ಬರಬಳ್ಳಿಗೆ ಬರುತ್ತಿದ್ದರು. ಹೆಚ್ಚಿನವರು ಬಯಲು ಸೀಮೆಯವರು. ಕಾಡನ್ನೇ ನೋಡಿರದ ಅವರು ದಾರಿಯಲ್ಲಿ ನಮಗಿಂತ ಹೆಚ್ಚು ಬೆರಗು, ಅಚ್ಚರಿಯೊಂದಿಗೆ ಬಸ್‌ ಚಾಲನೆ ಮಾಡುತ್ತಿದ್ದುದು ಇನ್ನೂ ನೆನಪಿದೆ. ಇದೆಂತಹ ಕಾಡಿಗೆ ಬಂದೆನಪ್ಪಾ ಎಂದು ಅಲವತ್ತುಕೊಂಡ ಒಂದೆರಡು ಡ್ರೈವರುಗಳು ನಂತರದ ಸಂದರ್ಭದಲ್ಲಿ ಬರಬಳ್ಳಿ ಟ್ರಿಪ್‌ ತಪ್ಪಿಸಿಕೊಂಡಿದ್ದರ ಬಗ್ಗೆಯೂ ಕೇಳಿದ್ದೆ.
ಬರಬಳ್ಳಿ ದೇವಸ್ಥಾನದ ಬಳಿ ನಾವು ಇಳಿದಿದ್ದೇ ತಡ, ಅಲ್ಲಿಂದ ಅರ್ಧ ಕಿಲೋಮೀಟರ್‌ ದೂರದಲ್ಲಿದ್ದ ಗುಡ್ಡೆಮನೆ ಎಂಬ ಅಜ್ಜನ ಮನೆಗೆ ಪೇರಿ ಕೀಳುತ್ತಿದ್ದೆವು. ಅದೂ ಕೂಡ ಹೇಗೇ ಅಂತೀರಾ, ಬರಬಳ್ಳಿ ಬಸು ಬರುತ್ತಲ್ಲ.. ಥೇಟು ಅದನ್ನು ಅನುಕರಿಸುತ್ತ ಸಾಗುತ್ತಿದ್ದೆವು. ಡ್ರೈವರ್‌ ಬಸ್‌ ಚಾಲನೆ ಮಾಡುತ್ತಿದ್ದ ಬಗೆಯನ್ನು ನಾವೂ ಅನುಕರಿಸಿ, ನಾವೂ ಅಂಗಿಯನ್ನು ಕಳಚಿ ಬಾಯಲ್ಲಿ ʻಬುರ್...‌ ಎನ್ನುತ್ತ... ಆಗಾಗ ಪಾಂವ್..‌ ಪಾಂವ್‌ ಎಂಬ ಹಾರನ್ನು ಹಾಕುತ್ತ ಸಾಗುತ್ತಿದ್ದುದು ಇನ್ನೂ ನೆನಪಿನಲ್ಲಿದೆ. ಅಜ್ಜನಮನೆ ತಲುಪುವ ವೇಳೆಗೆ ಬಸ್ಸಿಗಾದಷ್ಟೇ ಸುಸ್ತು ನಮಗೂ ಆಗಿರುತ್ತಿತ್ತು. ಬೆಳಿಗ್ಗೆ ಹೊರಟ ನಾವು ಹಗಲು ಪೂರ್ತಿ ಪ್ರಯಾಣ ಮಾಡಿ ಬಹುತೇಕ ಸಾಯಂಕಾಲದ ವೇಏಗೆ ಅಜ್ಜನಮನೆ ತಲುಪುತ್ತಿದ್ದೆವು.
ಇದು ನಮ್ಮ ಪಾಲಿನ ಬರಬಳ್ಳಿ ಬಸ್ಸಿನ ಪ್ರಯಾಣದ ನೆನಪು. ಈ ಬರಬಳ್ಳಿ ಬಸ್ಸು ಕೊಡಸಳ್ಳಿ ಡ್ಯಾಂ ಪೂರ್ಣಗೊಂಡು ಬರಬಳ್ಳಿ ಎಂಬ ಸ್ವರ್ಗದ ನಡುವೆ ಇದ್ದ ಊರು ಮುಳುಗುವ ತನಕವೂ ಬರುತ್ತಿತ್ತು. ಈಗ ಊರು ನೀರಿನಡಿಯಲ್ಲಿದೆ. ಬಸ್ಸು ನಮ್ಮ ನೆನಪಿನಲ್ಲಿ ಆಗೀಗ ಸುಳಿಯುತ್ತಿರುತ್ತದೆ.

Monday, November 18, 2024

ಯಕ್ಷಗಾನ-ತಾಳಮದ್ದಲೆಯ ಸ್ವಾರಸ್ಯಕರ ಘಟನೆಗಳು

1960ರ ದಶಕದ ಚಳಿಗಾಲದ ಒಂದು ಸಂಜೆ. ಆಗತಾನೆ ಕರ್ಕಿ ಮೇಳದವರು ಆಟ ಮುಗಿಸಿ ಊರ ಕಡೆ ಹೊರಟಿತ್ತು. ಆಗೆಲ್ಲ ನಡೆದುಕೊಂಡೇ ಊರು ತಲುಪುವುದು ವಾಡಿಕೆ. ಮುಂದಿನ ಆಟ ಎಲ್ಲೋ, ಯಾವಾಗಲೋ ಎಂದು ಮೇಳದ ಮೇಲ್ವಿಚಾರಕರು ಮಾತಾಡಿಕೊಳ್ಳುತ್ತ ಸಾಗಿದ್ದರು. ನಿಧಾನವಾಗಿ ಸೂರ್ಯ ಕಂತಿದ್ದ.
ಬಹಳ ದೂರ ನಡೆದುಕೊಂಡು ಹೋಗುತ್ತಿದ್ದ ವೇಳೆಗಾಗಲೇ ಸಂಪೂರ್ಣ ಕತ್ತಲಾಗಿತ್ತು. ಇನ್ನೂ ತಮ್ಮ ತಮ್ಮ ಊರು ತಲುಪುವುದು ತುಂಬಾ ದೂರ ಉಳಿದಿತ್ತು. ಹೀಗಿದ್ದಾಗ ಅದ್ಯಾವುದೋ ಒಂದು ಊರಿನ ಹೊರವಲಯ, ಅಲ್ಲೊಬ್ಬರು ಮಹನೀಯರು ಈ ಮೇಳದವರನ್ನು ಎದುರಾದರು. ಊಭಯಕುಶಲೋಪರಿಯೆಲ್ಲ ನಡೆಯಿತು.
ಎದುರಾದ ಆಗಂತುಕರು ಮೇಳದ ಬಳಿ ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲ ವಿಚಾರಿಸಿದರು. ಅದಕ್ಕೆ ಮೇಳದವರು ತಮ್ಮ ಕಥೆಯನ್ನೆಲ್ಲ ಹೇಳಿದರು. ಕೊನೆಗೆ ಅಲ್ಲಿ ಸಿಕ್ಕ ಆಗಂತುಕರು, ʻತಮ್ಮೂರಿನಲ್ಲೂ ಒಂದು ಆಟ ಆಡಿʼ ಎಂದರು.
ಮೇಳದವರು ʻಆಟಕ್ಕೆ ಸ್ಥಳ ಬೇಕು.. ಜನ ಎಲ್ಲ ಬರಬೇಕಲ್ಲʼ ಎಂದರು.
ʻಜಾಗ ಎಲ್ಲ ತಯಾರಿದೆ.. ಜನರೂ ಬರುತ್ತಾರೆ. ನೀವು ವೇಷ ಕಟ್ಟಿಕೊಳ್ಳುವ ವೇಳೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ..ʼ ಎಂದರು ಆ ವ್ಯಕ್ತಿ.
ಎಲ್ಲರೂ ಒಪ್ಪಿಕೊಂಡು, ಆ ಆಗಂತುಕನ ಹಿಂಬಾಲಿಸಿ ಮುನ್ನಡೆದರು. ಅರ್ಧ ಫರ್ಲಾಂಗಿನಷ್ಟು ದೂರ ಸಾಗಿದ ನಂತರ ಅಲ್ಲೊಂದು ಕಡೆ ಯಕ್ಷಗಾನದ ಆಟ ನಡೆಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೇಳದ ಮಹನೀಯರು ಮೆಚ್ಚುಗೆ ಸೂಚಿಸಿ, ವೇಷ ಕಟ್ಟಲು ಹೊರಟರು.
ಕೆಲ ಸಮಯದಲ್ಲಿ ವೇಷ ಕಟ್ಟಿ ಮುಗಿಯಿತು. ಭಾಗವತರು ಹಾಡಲು ಶುರುಮಾಡಿದರು.
ಕೆಲ ಸಮಯದ ತನಕ ಆಟ ಸಾಂಗವಾಗಿ ನೆರವೇರಿತು. ಅಷ್ಟರಲ್ಲಿ ಮುಖ್ಯ ಪಾತ್ರಧಾರಿಯ ಪ್ರವೇಶವೂ ನಡೆಯಿತು. ಚಂಡೆಯ ಸದ್ದು ಮುಗಿಲು ತಲುಪುವಂತಿತ್ತು. ಆರ್ಭಟದೊಂದಿಗೆ ಮುಕ್ಯ ಪಾತ್ರಧಾರಿ ರಂಗವನ್ನು ಪ್ರವೇಶಿಸಿದ್ದಲ್ಲದೇ ಮಂಡಿಕುಣಿತವನ್ನೂ ಶುರು ಹಚ್ಚಿಕೊಂಡರು.
ಪಾತ್ರಧಾರಿಯ ಆರ್ಭಟ ಹೇಗಿತ್ತೆಂದರೆ ವೇದಿಯ ಮುಂದೆ ಕುಳಿತು ಆಟವನ್ನು ನೋಡುತ್ತಿದ್ದವರೆಲ್ಲ ಒಮ್ಮೆಲೆ ಆವೇಶ ಬಂದವರಂತೆ ಕುಣಿಯಲು ಶುರು ಮಾಡಿದರು. ಕ್ಷಣಕ್ಷಣಕ್ಕೂ ಪಾತ್ರಧಾರಿಯ ಕುಣಿತ ಹೆಚ್ಚಾಯಿತು. ಭಾಗವತರ ಭಾಗವತಿಕೆ, ಚಂಡೆಯ ಸದ್ದು ಹೆಚ್ಚಿದಂತೆಲ್ಲ ನೋಡುತ್ತಿದ್ದ ಜನಸಮೂಹ ಕೂಡ ಜೋರು ಜೋರಾಗಿ ಕುಣಿಯ ಹತ್ತಿದರು.
ಭಾಗವತಿಕೆ ಮಾಡುತ್ತಿದ್ದ ಭಾಗವತರು ಈ ಜನಸಮೂಹದ ನರ್ತನವನ್ನು ನೋಡಿದವರೇ ದಂಗಾಗಿ ಹೋದರು.
ʻಇದೇನಿದು ಈ ರೀತಿ ಜನರು ಕುಣಿಯುತ್ತಿದ್ದಾರಲ್ಲʼ ಎಂದು ಒಮ್ಮೆ ವಿಸ್ಮಯವಾದರೂ ನಿಜವಾದ ಕಾರಣ ತಿಳಿದು ದಂಗಾಗಿ ಹೋದರು.
ತಕ್ಷಣವೇ ʻಗಂಟು ಮೂಟೆಯ ಕಟ್ಟಿರೋ..ʼ ಎಂದು ಜೋರಾಗಿ ಪದ ಹಾಡಲು ಶುರು ಮಾಡಿದರು.
ಇದುವರೆಗೂ ಸರಿಯಾಗಿ ಹಾಡುತ್ತಿದ್ದ ಭಾಗವತರು ಇದೇನು ಹೊಸದಾಗಿ ಗಂಟು ಮೂಟೆಯ ಕಟ್ಟಿರೋ ಎನ್ನುವ ಪದ ಹಾಡುತ್ತಿದ್ದಾರಲ್ಲ ಎನ್ನುವ ಅನುಮಾನದಲ್ಲಿ ಪಾತ್ರಧಾರಿಗಳು ಭಾಗವತರನ್ನು ನೋಡಲು ಆರಂಭಿಸಿದರು.
ಆಗ ಭಾಗವತರು
ʻಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..ʼ ಎಂದು ಇನ್ನೊಮ್ಮೆ ರಾಗವಾಗಿ ಹಾಡಿದರು. ಆಗಲೂ ಪಾತ್ರಧಾರಿಗಳಿಗೆ ಅರ್ಥವಾಗಿರಲಿಲ್ಲ.
ಭಾಗವತರು ಮತ್ಯೊಮ್ಮೆ
'ಗಮನಿಸಿ ಕೇಳೊರೋ
ಹಿಂದು ಮುಂದಿನ ಪಾದ
ಕೊಂದು ತಿನ್ನುವ ಮೊದಲು
ಗಂಟು ಮೂಟೆಯ ಕಟ್ಟಿರೋ..' ಎಂದು ಹಾಡಿದರು.
ತಕ್ಷಣವೇ ಎಚ್ಚೆತ್ತ ಎಲ್ಲರೂ ಕೈಗೆ ಸಿಕ್ಕಿದ್ದನ್ನು ಕಟ್ಟಿಕೊಂಡು, ಗಂಟು ಮೂಟೆ ಕಟ್ಟಿಕೊಂಡು ಓಡಲು ಆರಂಭಿಸಿದರು.
ಭಾಗವತರ ಪದಕ್ಕೆ ಕುಣಿಯುತ್ತಿದ್ದ ಭೂತಗಳ ಗುಂಪು ಊರ ಹೊರಗಿನ ಸ್ಮಷಾನದಲ್ಲಿ ಬಹಳ ಹೊತ್ತಿನ ತನಕ ಕುಣಿಯುತ್ತಲೇ ಇತ್ತು.

(ಹಿರಿಯರು ಅನೇಕ ಸಾರಿ ಹೇಳಿದ್ದ ಈ ಕಥೆ.. ಯಲ್ಲಾಪುರ ಭಾಗದಲ್ಲಿ ಪ್ರಚಲಿತದಲ್ಲಿದೆ. ಪ್ರತಿಯೊಬ್ಬರೂ ಈ ಕಥೆ ನಿಜವೆಂದೇ ಹೇಳುತ್ತಾರೆ. ಹೀಗಾಗಿ ನಾನು ಕೇಳಿದ ಕಥೆಯನ್ನು ಯಥಾವತ್ತಾಗಿ ಇಲ್ಲಿಟ್ಟಿದ್ದೇನೆ. ಯಾರಿಗಾದರೂ ಈ ಬಗ್ಗೆ ಗೊತ್ತಿದ್ದರೆ ಸವಿಸ್ತಾರವಾಗಿ ತಿಳಿಸಿ)



********************

ತೊಂಭತ್ತರ ದಶಕದಲ್ಲಿ ನಡೆದ ಕತೆ ಇದು

ಆಗಿನ ದಿನಗಳಲ್ಲಿ ಕನ್ನಡ ಶಬ್ದಗಳ ಮದ್ಯ ಚಿಕ್ಕ ಚಿಕ್ಕ ಇಂಗ್ಲೀಷ್‌ ಶಬ್ದಗಳ ಬಳಕೆ ದಣಿ ದಣೀ ಶುರುವಾಗುತ್ತಿದ್ದ ಸಮಯ.
ಯಲ್ಲಾಪುರದ ಯಾವುದೋ ಒಂದು ಊರಿನಲ್ಲಿ ತಾಳಮದ್ದಲೆ ಸಂಭ್ರಮ. ರಾತ್ರಿ ಇಡೀ ತಾಳಮದ್ದಲೆ ನಡೆಯುವ ಸಂಭ್ರಮ. ತಾಳಮದ್ದಲೆಯನ್ನು ಸವಿಯುವ ಸಲುವಾಗಿ ಇಡಿಯ ಊರಿಗೆ ಊರೆ ನಲಿದಿತ್ತು. ಶ್ರೀಕೃಷ್ಣ ಸಂಧಾನದ ಪ್ರಸಂಗ.
ಶ್ರೀಕೃಷ್ಣ ಸಂಧಾನಕ್ಕಾಗಿ ವಿಧುರನ ಮನೆಗೆ ಬಂದು, ನಂತರ ದುರ್ಯೋಧನನ ಸಭೆಯಲ್ಲಿ ಸಂಧಾನದ ಮಾತುಕತೆಯನ್ನೆಲ್ಲ ಆಡಿ ಮುಗಿದಿತ್ತು. ಕೃಷ್ಣ-ದುರ್ಯೋಧನನ ಪಾತ್ರಧಾರಿಗಳೆಲ್ಲ ಭಾರಿ ಭಾರಿಯಾಗಿ ತಮ್ಮ ವಾಗ್ಝರಿಯನ್ನು ಹರಿಸಿದ್ದರು.
ಶ್ರೀಕೃಷ್ಣ ದುರ್ಯೋಧನನ ಜತೆ ಸಂಧಾನ ವಿಫಲವಾಗಿ ತೆರಳಿದ ನಂತರ ದುರ್ಯೋಧನ ವಿಧುರನನ್ನು ಜರಿಯುವ ಸಂದರ್ಭ ಬಂದಿತ್ತು. ಶ್ರೀಕೃಷ್ಣ ದುರ್ಯೋಧನನ ಸಭೆಗೆ ಮೊದಲು ಬರದೇ ವಿಧುರನ ಮನೆಗೆ ಹೋಗಿದ್ಯಾಕೆ ಎಂದೆಲ್ಲ ಪ್ರಶ್ನಿಸಿ ನಾನಾ ರೂಪದಿಂದ ವಿಧುರನನ್ನು ಬೈದು ಆಗಿತ್ತು.
ಇದರಿಂದ ಮನನೊಂದ ವಿಧುರ ಆಪತ್ಕಾಲದಲ್ಲಿ ಕೌರವರ ರಕ್ಷಣೆಗಾಗಿ ಇರಿಸಿದ್ದ ಬಿಲ್ಲು-ಬಾಣಗಳನ್ನು ಮುರಿದು ಹಾಕುವ ಸಂದರ್ಭವೂ ಬಂದಿತ್ತು. ಸಭಾಸದರೆಲ್ಲ ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ಸವಿಯುತ್ತಿದ್ದರು.
ಭಾಗವತರ ಹಾಡುಗಾರಿಕೆ, ಪಾತ್ರಧಾರಿಗಳ ವಾದ-ಪ್ರತಿವಾದಗಳೆಲ್ಲ ಉತ್ತಮವಾಗಿ ನಡೆಯುತ್ತಿದ್ದವು. ನೋಡುಗರು ವಾಹ್‌ ವಾಹ್‌ ಎನ್ನುವಂತೆ ತಾಳಮದ್ದಲೆ ಸಾಗುತ್ತಿತ್ತು.
ಹೀಗಿದ್ದಾಗಲೇ ದುರ್ಯೋಧನನ ಮಾತುಗಳಿಗೆ ವಿಧುರ ಉತ್ತರ ನೀಡಬೇಕು. ಆದರೆ ಆ ಸಂದರ್ಭದಲ್ಲಿ ವಿಧುರನಿಗೆ ಮಾತನಾಡಲು ಆಗುತ್ತಲೇ ಇಲ್ಲ. ಆತನಿಗೆ ತಾನು ಏನು ಮಾತನಾಡಬೇಕು ಎನ್ನುವುದು ಮರೆತು ಹೋಗಿದೆ. ವಾಸ್ತವದಲ್ಲಿ ವಿಧುರನ ಪಾತ್ರಧಾರಿ ʻಹೌದು.. ಹೌದು..ʼ ಎನ್ನಬೇಕಿತ್ತು. ಆದರೆ ಆ ಮಾತು ಮರೆತು ಹೋಗಿದೆ.
ದುರ್ಯೋಧನ ಎರಡು ಸಾರಿ ತನ್ನ ಮಾತನ್ನಾಡಿದರೂ ವಿಧುರನಿಂದ ಉತ್ತರ ಬರಲೇ ಇಲ್ಲ. ಕೊನೆಗೆ ದುರ್ಯೋಧನ ಪಾತ್ರಧಾರಿ ಭಾಗವತರಿಗೆ ಸನ್ನೆ ಮಾಡಿದ್ದಾಯ್ತು. ಭಾಗವತರು ವಿಧುರನ ಪಾತ್ರಧಾರಿ ಕಡೆ ನೋಡಿ ಹಾಡಿನ ರೂಪದಲ್ಲಿ ಎಚ್ಚರಿಸಿದರು.
ಕೊನೆಗೆ ಎಚ್ಚೆತ್ತುಕೊಂಡ ವಿಧುರನ ಪಾತ್ರಧಾರಿ ʻYes Yes..' ಎಂದ. ಕನ್ನಡದ ತಾಳಮದ್ದಲೆಯಲ್ಲಿ ಇಂಗ್ಲೀಷ್‌ ಶಬ್ದ ಬಂದಿದ್ದು ಪ್ರೇಕ್ಷಕರಾದಿಯಾಗಿ ಎಲ್ಲರಿಗೂ ಒಮ್ಮೆ ಅಚ್ಚರಿಯಾಗಿತ್ತು. ಇದೇನಿದು ಎಂದು ಆಲೋಚನೆ ಶುರು ಮಾಡಲು ಆರಂಭಿಸಿದ್ದರು.
ತಕ್ಷಣವೇ ಭಾಗವತರು ʻ ವಿಧುರ ಯೆಸ್‌ ಎಂದ....ʼ ಎಂದು ರಾಗವಾಗಿ ಹಾಡಲು ಶುರು ಮಾಡಿದರು.
ಈ ಪ್ರಸಂಗ ಮುಗಿದ ಕೆಲವು ದಿನಗಳವರೆಗೂ ವಿಧುರ ಯೆಸ್‌ ಎಂದ ಎನ್ನುವ ಸಂಗತಿ ಜನರ ಬಾಯಲ್ಲಿ ಚರ್ಚೆಯಾಗುತ್ತಲೇ ಇತ್ತು. ತಾಳಮದ್ದಲೆಯ ಸವಿಯನ್ನುಂಡವರು ಆಗೀಗ ಈ ಸನ್ನಿವೇಶದ ಕುರಿತು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದುದೂ ಜಾರಿಯಲ್ಲಿತ್ತು. ಯಲ್ಲಾಪುರದ ಕೆಲವರಿಗೆ ಈಗಲೂ ವಿಧುರ ಯೆಸ್‌ ಎಂದ ಎನ್ನುವ ತಾಳಮದ್ದಲೆಯ ಸನ್ನಿವೇಶ ನೆನಪಾಗಬಹುದು. ಯಲ್ಲಾಪುರದ ಭಾಗದ ಜನರಿಗೆ ಈ ಬಗ್ಗೆ ಜಾಸ್ತಿ ಗೊತ್ತಿದ್ದರೆ ತಿಳಿಸಿ.
ಇಂತಹ ಯಕ್ಷಗಾನ ಹಾಗೂ ತಾಳಮದ್ದಲೆಯ ತಮಾಷೆಯ ಸನ್ನಿವೇಶಗಳಿದ್ದರೆ ನೀವೂ ತಿಳಿಸಿ