ಮೇಲ್ನೋಟಕ್ಕೆ ಸೀದಾ ಸಾದಾ ಹಳ್ಳಿಯಂತೆ ಕಂಡಿತು ವಿಜೋಯ್ ನಗರ. ನಾವು ಮುಂದೆ ಮುಂದಕ್ಕೆ ಹೆಜ್ಜೆ ಇಟ್ಟಂತೆಲ್ಲ ಬಿಸಿಲು ಕಾಯಿಸಿಕೊಳ್ಳುತ್ತಿದ್ದ, ಜಾಗಿಂಗ್ ಮಾಡುತ್ತಿದ್ದ, ವ್ಯಾಯಾಮ ಮಾಡುತ್ತಿದ್ದ ನಿವೃತ್ತ ಮಿಲಿಟರಿ ಅಧಿಕಾರಿಗಳು ಕಾಣಿಸಿಕೊಂಡರು. ನಾವು ಅಪರಿಚಿತರಾಗಿದ್ದರೂ ಆಶ್ನಾಳನ್ನು ನಮ್ಮ ಜತೆ ನೋಡಿ ಕುತೂಹಲಯುಕ್ತ ನಗುವನ್ನು ಅವರು ಮುಖದ ಮೇಲೆ ತೋರ್ಪಡಿಸಿ ಮುಂದಕ್ಕೆ ಸಾಗುತ್ತಿದ್ದರು.
ನಮ್ಮನ್ನು ನಡೆಸಿಕೊಂಡು ಹೋಗುತ್ತಿದ್ದ ಆಶ್ನಾ ಯಾವು ಯಾವುದೋ ರಸ್ತೆಯಲ್ಲಿ, ಅಂಕುಡೊಂಕಾಗಿ ನಮ್ಮನ್ನು ಸುತ್ತಿಸಿ ಒಂದು ಮನೆಯ ಎದುರು ನಮ್ಮನ್ನು ಕರೆದೊಯ್ದು ಅಸ್ಸಾಮಿ ಭಾಷೆಯಲ್ಲಿ ದೊಡ್ಡದಾಗಿ ಕರೆದಳು. ಮನೆಯಿಂದ ಮಧ್ಯಮ ವಯಸ್ಸಿನ ಒಬ್ಬರು ವ್ಯಕ್ತಿ ಹೊರಬಂದು ಆಶ್ನಾಳ ಕಡೆಗೆ ಸಂಭ್ರಮದಿಂದ ನೋಡಿದರು. ಆಶ್ನಾ ಹಾಗೂ ಆ ವ್ಯಕ್ತಿಯ ನಡುವೆ ಕೊಂಚ ಮಾತುಕತೆ ನಡೆಯಿತು. ನಂತರ ನಮ್ಮ ಕಡೆಗೆ ಅವರು ತಿರುಗಿದರು. ಆಶ್ನಾ ಆ ವ್ಯಕ್ತಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ನಂತರ ಮನೆಯೊಳಕ್ಕೆ ನಾವು ಕಾಲಿರಿಸಿದೆವು.
ಮನೆಯ ಕೆಲವು ಸದಸ್ಯರು ಹೊರಕ್ಕೆ ಬಂದರು. ಒಂದುಬ್ಬರು ನಮಗೆ ಅದೇನೇನೋ ತಿಂಡಿಯನ್ನೋ, ಬೇರೆ ಇನ್ನೇನನ್ನೋ ತಂದುಕೊಟ್ಟರು. ಆಶ್ನಾ ಅದೆಲ್ಲವನ್ನೂ ತೆಗೆದುಕೊಳ್ಳುವಂತೆ ಹೇಳಿ ಒಳಕ್ಕೆ ನಡೆದಳು. ನಾವು ಮೌನವಾಗಿ ಅವರು ಕೊಟ್ಟಿದ್ದನ್ನು ತಿನ್ನುತ್ತ ಕುಳಿತೆವು.
ಮನೆಯ ವ್ಯಕ್ತಿಗಳು ನಮ್ಮ ಬಳಿ ಬಂದು ಅಸ್ಸಾಮಿ ಭಾಷೆಯಲ್ಲಿ ಮಾತನಾಡುತ್ತಿದ್ದರಾದರೂ ನಮಗೆ ಸರಿಯಾಗಿ ಅರ್ಥವಾಗಲಿಲ್ಲ. ನಾವು ನಗುವಿನ ಮೂಲಕವೋ, ತಲೆ ಅಲ್ಲಾಡಿಸುವ ಮೂಲಕವೋ ಉತ್ತರ ನೀಡಿದೆವು. ಕೆಲ ಸಮಯದ ನಂತರ ವಾಪಾಸು ಬಂದ ಆಶ್ನಾ ಮನೆಯ ಎಲ್ಲ ಸದಸ್ಯರನ್ನು ನನಗೆ ಪರಿಚಯಿಸಿದಳು. ನಾವು ಎಲ್ಲಿಂದ ಬಂದೆವು ಎಂಬುದನ್ನೂ, ಯಾಕಾಗಿ ಬಂದಿದ್ದೇವೆ ಎಂಬುದನ್ನೂ ಹೇಳಿದಳು. ಆ ಮನೆಯ ಕೆಲವು ವ್ಯಕ್ತಿಗಳು ನಾವು ಬಂದ ಕಾರಣವನ್ನು ಕೇಳಿ ನಮ್ಮನ್ನು ವಿಚಿತ್ರವಾಗಿ ನೋಡಲು ಆರಂಭಿಸಿದರು. ಅಲ್ಲಿಂದ ಇಲ್ಲಿಗೆ ಯಾವುದೋ ಸಂದರ್ಭದಲ್ಲಿ ಪ್ರೀತಿಸಿದ ಹುಡುಗಿಯನ್ನು ಹುಡುಕಿ ಬಂದಿದ್ದಾನಲ್ಲ. ಇವನ್ಯಾರೋ ತಿಕ್ಕಲು ಸ್ವಭಾವದವನಿರಬೇಕು ಎಂದುಕೊಂಡಿದ್ದಾರೇನೋ ಅಂದುಕೊಂಡೆ.
`ನಿಮಗೆ ಇನ್ನೊಬ್ಬ ಪ್ರಮುಖ ವ್ಯಕ್ತಿಯನ್ನು ಪರಿಚಯ ಮಾಡಿಕೊಡಬೇಕು..’ ಎಂದಳು ಆಶ್ನಾ.
ನಾವು ಕುತೂಹಲದಿಂದ ನೋಡುತ್ತಿದ್ದಾಗಲೇ
`ಬನ್ನಿ ಒಳಕ್ಕೆ..’ ಎಂದು ಕರೆದೊಯ್ದಳು.
ಕೋಣೆಯೊಂದರ ಒಳಕ್ಕೆ ಸಂಜಯ ಕಾಲಿರಿಸಿದ.
ಅವನ ಹಿಂದೆ ಹೋದ ನಾನು ಒಮ್ಮೆ ಬೆಚ್ಚಿ ಬಿದ್ದು ನಿಂತೆ. ನಾನು ನೋಡುತ್ತಿರುವುದು ಸುಳ್ಳೋ,
ಸತ್ಯವೋ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ ಆಶ್ನಾ `ಈಕೆ ನನ್ನ ಅಮ್ಮ..’ ಎಂದು
ಪರಿಚಯಿಸಿದಳು.
ರೂಮಿನಲ್ಲೊಂದು ಮಂಚವಿತ್ತು. ಆ ಮಂಚದ
ಮೇಲೆ ಕೃಷಕಾಯ ಮಹಿಳೆಯೊಬ್ಬಳು ಕುಳಿತಿದ್ದಳು. ಕಣ್ಣಿನ ಸುತ್ತ ಕಪ್ಪು ಕಲೆಗಳು ಗಾಢವಾಗಿದ್ದವು.
ಕೆನ್ನೆಗಳು ಇಳಿ ಬಿದ್ದಿದ್ದವು. ಆದರೆ ಕಣ್ಣಿನಲ್ಲಿ ಮಾತ್ರ ಅದೇನೋ ಬೆಳಕು. ಆಕೆಯೂ ನಮ್ಮನ್ನು
ನೋಡಿದಳು. ಆಕೆಗೂ ನನ್ನನ್ನು ನೋಡಿ ಅಚ್ಚರಿಯಾಗಿತ್ತು.
ನಾನು ಯಾರನ್ನು ಹುಡುಕಿ ಬಂದಿದ್ದೆನೋ,
ಅಸ್ಸಾಮಿನ ತುಂಬೆಲ್ಲ ಹುಡುಕಾಡಲು ಯತ್ನಿಸಿದ್ದೆನೋ ಅವಳೇ, ವಿದ್ಯುಲ್ಲತಾ ಅಲ್ಲಿ ಕುಳಿತಿದ್ದಳು.
ಆಕೆಯದೇಹ ಆಕೆಯ ಮಾತನ್ನು ಕೇಳುತ್ತಿರಲಿಲ್ಲ. ಸಾವಿನ ಕದವನ್ನು ತೆರೆಯುತ್ತ ಕಷ್ಟಪಟ್ಟು
ಜೀವಿಸಿದ್ದಳು. ಬಹುಶಃ ನಾನು ಬರುತ್ತೇನೆ ಎಂದು ಭಾವಿಸಿಯೇ ಆಕೆ ಜೀವ ಹಿಡಿದಿದ್ದಳೇನೋ
ಎನ್ನಿಸಿತು.
`ವಿನೂ… ನೀನು… ಕೊನೆಗೂ ಬಂದೆಯಾ…’ಕಣ್ಣರಳಿಸಿ
ಕೇಳಿದಳು.
ನನ್ನ ಬಾಯಿಂದ ಮಾತು ಹೊರಡಲಿಲ್ಲ.
ಅಚ್ಚರಿಯಿಂದ ವಿದ್ಯುಲ್ಲತಾಳ ಮಾತು ಕೇಳಿದ ಆಶ್ನಾ `ಅಮ್ಮಾ.. ಇವರು ನಿಮಗೆ ಮೊದಲೇ ಗೊತ್ತಿತ್ತಾ?’
ಎಂದಳು. ವಿದ್ಯುಲ್ಲತಾ ಮಾತಾಡಲಿಲ್ಲ. ಕಣ್ಣಲ್ಲಿ ನೀರು ಸುರಿಯಲಾರಂಭಿಸಿತ್ತು. ನನಗೂ ದುಃಖ
ಉಮ್ಮಳಿಸಿತ್ತು.
`ನೀನು ಬಂದೇ ಬರುತ್ತೀಯಾ ಎನ್ನುವುದು
ನನಗೆ ಗೊತ್ತಿತ್ತು… ಆದರೆ ಇಷ್ಟ ತಡವಾಗಿ ಬರುತ್ತೀಯಾ ಎನ್ನುವುದು ಗೊತ್ತಿರಲಿಲ್ಲ…’ ಎಂದು
ಉಸಿರೆಳೆಯುತ್ತಾ ಹೇಳಿದಳು ವಿದ್ಯುಲ್ಲತಾ.
`ಏನಿದು? ಏನಾಯಿತು ವಿದ್ಯುಲ್ಲತಾ?’
ಎಂದು ಹೇಳಿದವನೇ ಆಕೆಯ ಬಳಿ ಹೋಗಿ ಆಕೆಯ ಮಂಚದ ಮೇಲೆ ಕಳಿತು ಹಿತವಾಗಿ ಭುಜ ನೇವರಿಸಿದೆ. ಆಕೆ
ನನ್ನ ಭುಜಕ್ಕೆ ಒರಗಿಕೊಂಡಳು.
`ನಿನ್ನ ಬಿಟ್ಟು ಬಂದ ನಂತರ ಏನೇನೋ
ಆಗೋಯ್ತು ವಿನು. ಅಸ್ಸಾಮಿಗೆ ಮರಳಿದಾಗಲೇ ಈಕೆ ನನ್ನ ಗರ್ಭದಲ್ಲಿ ಬೆಳೆಯುತ್ತಿರುವುದು
ಅರಿವಾಯಿತು. ಇದನ್ನು ಕೇಳಿ ನನ್ನ ಮನೆಯವರೆಲ್ಲ ಕೆಂಡಾಮಂಡಲರಾದರು. ನನ್ನನ್ನು ಹೊಡೆದು, ಬಡಿದು
ಮಾಡಿದರು. ಅಬಾರ್ಷನ್ ಮಾಡಿಸಲು ಯತ್ನಿಸಿದರು. ಆದರೆ ನಾನು ಒಪ್ಪದೇ ಉಳಿಸಿಕೊಂಡೆ. ಆಮೇಲೆ ನನ್ನ
ಮನೆಯವರು ಮರ್ಯಾದೆಗೆ ಅಂಜಿ ನನ್ನ ಸಮೇತ ಅಸ್ಸಾಮಿನಿಂದ ಇಲ್ಲಿಗೆ ವಲಸೆ ಬಂದರು. ಇಲ್ಲಿ ನಾನು
ಆಶ್ನಾಳಿಗೆ ಜನ್ಮ ಕೊಟ್ಟೆ. ನಂತರ ನನ್ನ ಬದುಕು ಸಂತಸದ ಅಲೆಯಲ್ಲಿ ತೇಲುತ್ತಿತ್ತು. ನಾನು ಚಿಕ್ಕ
ಪುಟ್ಟ ಕೆಲಸಗಳನ್ನು ಮಾಡುತ್ತ ಬದುಕು ಸಾಗಿಸುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ನಾನು ಎಚ್ಚರ
ತಪ್ಪಿ ಬಿದ್ದಿದ್ದೆ..’ ಎಂದು ಉಸಿರೆಳೆದುಕೊಂಡಳು ವಿದ್ಯುಲ್ಲತಾ.
`ಎಚ್ಚರ ಬಂದಾಗ ನಾನು ಮಿಲಿಟರಿಯವರೇ
ನಡೆಸುವ ಆಸ್ಪತ್ರೆಯಲ್ಲಿದ್ದೆ. ಪರೀಕ್ಷೆ ನಡೆಸಿದಾಗ ನನಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು
ತಿಳಿದುಬಂತು. ಆ ನಂತರ ನನ್ನ ಬದುಕು ಹೀಗಾಯಿತು ನೋಡು. ಆ ಪ್ರತಿ ಕ್ಷಣದಲ್ಲಿಯೂ ನೀನು ಬರ್ತೀಯಾ
ಅಂತ ಕಾಯುತ್ತಿದ್ದೆ. ಒಳಮನಸ್ಸು ನೀನು ಬರಲ್ಲ ಎನ್ನುತ್ತಿತ್ತು. ಆದರೆ ಕೊನೆಗೂ ಬಂದೆಯಲ್ಲ. ನಾನು
ಧನ್ಯ ನಾನು ಧನ್ಯ…’ ಎಂದು ಹಲುಬಿದಳು ವಿದ್ಯುಲ್ಲತಾ.
`ಸಮಾಧಾನ ಮಾಡ್ಕೊ ವಿದ್ಯುಲ್ಲತಾ…’
ಎಂದೆ.
ಆಕೆ ಸುಮ್ಮನಾಗಲಿಲ್ಲ. ಹತ್ತಿರದಲ್ಲಿಯೇ
ಇದ್ದ ಆಶ್ನಾಳನ್ನು ಕರೆದು `ನೋಡು, ನೀನು ಅಪ್ಪನ ಬಗ್ಗೆ ವಿಚಾರಿಸಿದಾಗೆಲ್ಲ ನಾನು ಸರಿಯಾಗಿ
ಉತ್ತರ ನೀಡುತ್ತಿರಲಿಲ್ಲವಲ್ಲಾ.. ಈಗ ಹೇಳ್ತೇನೆ ನೋಡು. ಇವರೇ ನಿನ್ನ ಅಪ್ಪ.. ನೀನು ಅಪ್ಪ ಇಲ್ಲದ
ವ್ಯಕ್ತಿಯಲ್ಲ.. ಇವರೇ, ಇವರೇ ನಿನ್ನ ತಂದೆ..’ ಎಂದು ನನ್ನ ಕಡೆಗೆ ತೋರಿಸಿದಾಗ ಆಶ್ನಾ ಅವಾಕ್ಕಾಗಿದ್ದಳು.
ನನ್ನ ಕಣ್ಣಲ್ಲೂ, ವಿದ್ಯುಲ್ಲತಾಳ ಕಣ್ಣಲ್ಲೂ, ಆಶ್ನಾಳ ಕಣ್ಣಲ್ಲೂ ನೀರಿತ್ತು. ಇದೆಲ್ಲವನ್ನು
ನೋಡುತ್ತಿದ್ದ ಸಂಜಯನ ಕಣ್ಣಲ್ಲೂ ನೀರಿನ ಹನಿಗಳು ಮೂಡಿದ್ದವು.
`ನೋಡು ವಿನೂ, ನಿನ್ನ ನೆನಪಿಗಾಗಿ,
ನಿನ್ನ ಪವಿತ್ರ ಪ್ರೀತಿಯ ಸಲುವಾಗಿ ಇವಳಿಗೆ ಆಶ್ನಾ ಎಂಬ ಹೆಸರಿಟ್ಟಿದ್ದೇನೆ. ಆಶ್ನಾ ಎಂದರೆ
ಪವಿತ್ರ ಪ್ರೀತಿಯ ಪ್ರತೀಕ, ಪವಿತ್ರ ಪ್ರೀತಿಯಲ್ಲಿ ನಂಬಿಕೆ ಉಳ್ಳವಳು ಎಂದರ್ಥ.. ನೋಡು ಇನ್ನು
ನನಗೆ ಯಾವುದೇ ನಿಶ್ಚಿಂತೆಯಿಲ್ಲ. ನನ್ನ ಮಗಳಿಗಿನ್ನೂ ನೀನಿದ್ದೀಯ. ಇನ್ನು ಯಾವುದೇ ಕ್ಷಣದಲ್ಲಿಯೂ
ನಾನು ನಿಶ್ಚಿಂತೆಯಿಂದ ಕಣ್ಮುಚ್ಚಬಹುದು.. ಸಾರ್ಥಕವಾಯಿತು ನನ್ನ ಬದುಕು.. ‘ ಹಲುಬುತ್ತಲೇ
ಇದ್ದಳು ವಿದ್ಯುಲ್ಲತಾ.
ನನ್ನಲ್ಲಿ ಮಾತಿರಲಿಲ್ಲ. ನಾನು ಆಕೆಯ
ಭುಜವನ್ನು, ತಲೆಯನ್ನು ನೇವರಿಸುತ್ತಲೇ ಇದ್ದೆ.
-------
ಇದಾಗಿ ಐದಾರು ದಿನಗಳ ನಂತರ
ವಿದ್ಯುಲ್ಲತಾ ಕಣ್ಮುಚ್ಚಿದಳು. ಕೊನೆಯ ಹಂತದಲ್ಲಿದ್ದ ಬ್ಲಡ್ ಕ್ಯಾನ್ಸರ್ ವಿದ್ಯುಲ್ಲತಾಳನ್ನು
ಆಪೋಷನ ತೆಗೆದುಕೊಂಡಿತ್ತು. ನಮ್ಮಲ್ಲಿನ ದುಃಖ ಹೇಳತೀರದಾಗಿತ್ತು. ಅದೇ ವಿಜೋಯ್ ನಗರದಲ್ಲಿ ನಾನು
ಹಾಗೂ ಆಶ್ನಾ ಜೊತೆಯಾಗಿ ಆಕೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದೆವು. ನನ್ನ ವಿದ್ಯುಲ್ಲತಾ
ಅಗ್ನಿಯಲ್ಲಿ ಲೀನವಾಗಿದ್ದಳು. ಸಿಕ್ಕಿಯೂ ಸಿಗದಂತೆ ಮಾಯವಾಗಿದ್ದಳು.
ಆಕೆಯ ಅಂತ್ಯ ಸಂಸ್ಕಾರ ಮುಗಿದ ಎರಡನೇ
ದಿನಕ್ಕೆ ನಾನು ಹಾಗೂ ಸಂಜಯ ವಿಜೋಯ್ ನಗರದಿಂದ ದಿಬ್ರುಘಡಕ್ಕೆ ಹೋಗುವ ವಿಮಾನವನ್ನು ಏರಿದ್ದೆವು.
ನಮ್ಮ ಜತೆಯಲ್ಲಿ ಆಶ್ನಾ ಕೂಡ ಇದ್ದಳು. ನನ್ನ ಭುಜಕ್ಕೊರಗಿ ಕಣ್ಣೀರುಗರೆಯುತ್ತಿದ್ದ ಆಕೆಯನ್ನು
ಹೇಗೆ ಸಮಾಧಾನ ಮಾಡುವುದು ಎನ್ನುವುದೇ ತಿಳಿಯಲಿಲ್ಲ.
ದಿಬ್ರುಘಡದಲ್ಲಿ ಇಳಿದ ಸಂದರ್ಭದಲ್ಲಿಯೇ
ನನ್ನಾಕೆ ಪೋನ್ ಮಾಡಿದ್ದಳು. ಆಕೆಗೆ ನಡೆದ ವಿಷಯವನ್ನೆಲ್ಲ ತಿಳಿಸಿದೆ. ಆಕೆ ನಿಟ್ಟುಸಿರು ಬಿಟ್ಟು
ಬನ್ನಿ, ಇಬ್ಬರ ದಾರಿಯನ್ನು ಎದುರು ನೋಡುತ್ತಿರುತ್ತೇನೆ ಎಂದಳು. ನಾವು ದಿಬ್ರುಘಡದಿಂದ
ಗುವಾಹಟಿಗೆ ಬಂದು ಬೆಂಗಳೂರಿಗೆ ಬರುವ ವಿಮಾನವನ್ನೇರಿದೆವು.
`ನಿಮ್ಮ ಕಡೆಗೆ ಅದೇನೋ ಆತ್ಮೀಯ ಭಾವ
ಮೂಡಿತ್ತು. ಆ ಸಂದರ್ಭದಲ್ಲೆಲ್ಲ ನಿಮ್ಮಂತಹ ಅಪ್ಪ ನನಗಿದ್ದರೇ ಎಂದುಕೊಳ್ಳುತ್ತಿದ್ದೆ.
ಕೊನೆಗೊಮ್ಮೆ ನೀವೇ ನನ್ನ ಅಪ್ಪ ಎನ್ನುವುದು ತಿಳಿದಾಗ ನನ್ನ ಮನಸ್ಸಿನಲ್ಲಿ ಸಂತೋಷ, ಸಿಟ್ಟು
ಎಲ್ಲವೂ ಮೂಡಿತು. ನೀವು ಸಿಕ್ಕಿದ್ದಕ್ಕೆ ಖುಷಿ, ಇಷ್ಟು ದಿನ ಅಪ್ಪ ಇದ್ದೂ ಇಲ್ಲದಂತಾಗು ಮಾಡಿದ್ದ
ನಿಮ್ಮ ಕುರಿತು ಸಿಟ್ಟು ಮೂಡಿತು. ನಾನು ಅಪ್ಪ-ಅಮ್ಮ ಇಬ್ಬರ ಜತೆಗೂ ಖುಷಿಯಾಗಿ ಕಳೆಯೋಣ ಅಂತ ಅಂದುಕೊಂಡಿದ್ದೆ..
ಆದರೆ ಆಗ ಅಮ್ಮ ಇದ್ದಳು ನೀನಿರಲಿಲ್ಲ. ಈಗ ನೀನಿದ್ದೀಯಾ.. ಅಮ್ಮ ಇಲ್ಲ…’ ಎಂದು ಆಶ್ನಾ
ಗದ್ಗದಿತವಾಗಿ ಹೇಳುತ್ತಲೇ ಇದ್ದಳು. ನನ್ನಲ್ಲಿ ಮಾತುಗಳಿರಲಿಲ್ಲ.
(ಮುಗಿಯಿತು)