Sunday, May 13, 2018

ಇವರು ಜೀವಮಾನದಲ್ಲೇ ನೋ ಬಾಲ್ ಹಾಕಿಲ್ಲ

(Lans Gibbs)
ಪ್ರಸ್ತುತ ಕ್ರಿಕೆಟ್‌ನಲ್ಲಿ ಇತರೆ ರೂಪದಲ್ಲಿ ತಂಡಕ್ಕೆ ಮಾರಕವಾಗುವಂತಹ ನೋಬಾಲ್‌ನ್ನು ಆಗೀಗ ಕಾಣುತ್ತೇವೆ. ನೋ ಬಾಲ್ ಕಾರಣದಿಂದ ಪಂದ್ಯವನ್ನೇ ಕಳೆದುಕೊಂಡಂತಹ ನಿದರ್ಶನಗಳೂ ಹಲವಿದೆ. ಪ್ರಸ್ತುತ ಒಂದಲ್ಲ ಒಂದು ಆಟಗಾರ ಕನಿಷ್ಠ ಒಂದಾದರೂ ನೋಬಾಲ್ ಹಾಕಿಯೇ ಇರುತ್ತಾನೆ. ನೋಬಾಲ್ ನಂತರದ ಎಸೆತ ಫ್ರೀ ಹಿಟ್ ಆಗುವ ಕಾರಣ ನೋಬಾಲ್ ಹಾಕಿದ ಆಟಗಾರರನ್ನು ಶಪಿಸುತ್ತೇವೆ. ಇದು ಬಿಡಿ ತಮ್ಮ ಕ್ರಿಕೆಟ್ ಜೀವನದಲ್ಲಿ ನೋಬಾಲ್ ಹಾಕದೇ ಇರುವ ಆಟಗಾರರೂ ಇದ್ದಾರೆ.
ಹೌದು. ಕ್ರಿಕೆಟ್ ಕಂಡ ಸಹಸ್ರ ಸಹಸ್ರ ಆಟಗಾರರಲ್ಲಿ ಕೆಲವೇ ಕೆಲವರು ತಮ್ಮ ಬದುಕಿನಲ್ಲಿ ಒಂದೇ ಒಂದು ನೋಬಾಲ್ ಕೂಡ ಹಾಕಿಲ್ಲ. ಹೀಗೆ ನೋಬಾಲ್ ಹಾಕದೇ ಇರುವ ಐವರು ಆಟಗಾರರ ಕಿರುನೋಟ ಇಲ್ಲಿದೆ.

(dennis lilly)
ಲ್ಯಾನ್ಸ್  ಗಿಬ್ಸ್
ವೆಸ್ಟ್  ಇಂಡೀಸ್ ಕಂಡ ಹೆಸರಾಂತ ಸ್ಪಿನ್ ಬೌಲರ್ ಲ್ಯಾನ್ಸ್  ಗಿಬ್ಸ್ . ಇಂಗ್ಲೆೆಂಡಿನ ಟ್ರೆಡ್ ಟ್ರೂಮನ್‌ರ ನಂತರ ಟೆಸ್ಟ್  ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಖ್ಯಾಾತಿ ಇವರಿಗಿದೆ. ಅಷ್ಟೇ ಅಲ್ಲ ಲ್ಯಾನ್ಸ್  ಗಿಬ್ಸ್  300 ವಿಕೆಟ್ ಪಡೆದ ಮೊಟ್ಟ ಮೊದಲ ಸ್ಪಿನ್ನರ್ ಎನ್ನುವ ಗರಿಮೆಯನ್ನೂ ಹೊಂದಿದ್ದಾಾರೆ. 79 ಟೆಸ್‌ಟ್‌ ಆಡಿರುವ ಇವರು ಒಟ್ಟೂ 311 ವಿಕೆಟ್ ಪಡೆದಿದ್ದಾಾರೆ. ಜೊತೆಗೆ 3 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಇಷ್ಟು ಪಂದ್ಯಗಳನ್ನಾಡಿದ್ದರೂ ಇವರು
ಒಂದೇ ಒಂದು ನೋ ಬಾಲ್ ಹಾಕಿಲ್ಲ. ನೋ ಬಾಲ್ ಎಸೆಯದ ಏಕೈಕ ಸ್ಪಿನ್ನರ್ ಇದ್ದರೆ ಅದು ಲ್ಯಾನ್ಸ್  ಗಿಬ್ಸ್  ಮಾತ್ರ.

(Ioan BOTHAM)
ಡೆನ್ನಿಸ್ ಲಿಲ್ಲಿ
ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಸ್ಟ್ರೇಲಿಯಾದ ಲೆಜೆಂಡ್ ವೇಗದ ಬೌಲರ್‌ಗಳ ಯಾದಿಯಲ್ಲಿ ಸ್ಥಾನ ಪಡೆದಿರುವವರಲ್ಲೊಬ್ಬರು ಲಿಲ್ಲಿ. 1971ರಿಂದ 1984ರ ಅವಯಲ್ಲಿ ಕ್ರಿಕೆಟ್ ಆಟದಲ್ಲಿ ಮಿನುಗಿದ ಲಿಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ತಮ್ಮ 13 ವರ್ಷದ ಕ್ರಿಕೆಟ್ ಬದುಕಿನಲ್ಲಿ ಲಿಲ್ಲಿ 70 ಟೆಸ್ಟ್ ಆಡಿ 355 ವಿಕೆಟ್ ಕಿತ್ತಿದ್ದಾಾರೆ. 23 ಬಾರಿ ಐದು ವಿಕೆಟ್ ಗೊಂಚಲು ಹಾಗೂ 7 ಬಾರಿ 10 ವಿಕೆಟ್ ಗೊಂಚಲು ಉರುಳಿಸಿದ್ದಾಾರೆ. ಅಲ್ಲದೇ 63 ಏಕದಿನ ಪಂದ್ಯಗಳನ್ನಾಾಡಿರುವ ಲಿಲ್ಲಿ 20.83ರ ಸರಾಸರಿಯಲ್ಲಿ 103 ವಿಕೆಟ್ ಕಿತ್ತಿದ್ದಾಾರೆ. ಇವರೂ ಕೂಡ ಒಂದೇ ಒಂದು ನೋ ಬಾಲ್ ಹಾಕಿಲ್ಲ.

(Imraan KHAN)
ಇಯಾನ್ ಬಾಥಮ್
ಇಂಗ್ಲೆೆಂಡಿನ ಹೆಸರಾಂತ ಆಟಗಾರ ಇಯಾನ್ ಬಾಥಮ್. ಸಾರ್ವಕಾಲಿಕ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಟೆಸ್ಟ್  ಹಾಗೂ ಏಕದಿನ ಪಂದ್ಯಗಳಲ್ಲಿ ವಿಶೇಷ ಸಾಧನೆ ಮೆರೆದವರು ಇವರು. ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 116 ಏಕದಿನ ಪಂದ್ಯಗಳಲ್ಲಿ 145 ವಿಕೆಟ್ ಹಾಗೂ 102 ಟೆಸ್‌ಟ್‌ ಪಂದ್ಯಗಳಲ್ಲಿ 383 ವಿಕೆಟ್ ಕಬಳಿಸಿದ್ದಾರೆ. ಇವರೂ ಕೂಡ ಒಂದೇ ಒಂದು ನೋಬಾಲ್ ಹಾಕಿಲ್ಲ. ಅಷ್ಟೇ ಏಕೆ ಒಂದೇ ಒಂದು ವೈಡ್ ಕೂಡ ಹಾಕಿಲ್ಲ.

ಇಮ್ರಾನ್ ಖಾನ್
ಪಾಕಿಸ್ತಾನದ ಲೆಜೆಂಡ್ ಆಟಗಾರ ಇಮ್ರಾನ್ ಖಾನ್. ಪಾಕ್‌ಗೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ. ಭಾರತದ ವಿರುದ್ಧ ಭಾರತದಲ್ಲಿ ಪಾಕಿಸ್ತಾಾನವನ್ನು ಗೆಲ್ಲಿಸಿದ ಮೊದಲ ನಾಯಕ ಎನ್ನುವ ಹೆಸರು ಇವರಿಗಿದೆ.  ತಮ್ಮ ಕ್ರಿಕೆಟ್ ಬದುಕಿನಲ್ಲಿ ಇಮ್ರಾನ್ ಖಾನ್ ಆಡಿದ್ದು 88 ಟೆಸ್ಟ್ . ಕಬಳಿಸಿದ್ದು 362 ವಿಕೆಟ್. ಅಲ್ಲದೇ 175 ಏಕದಿನ ಪಂದ್ಯಗಳನ್ನಾಾಡಿ 182 ವಿಕೆಟ್‌ಗಳನ್ನೂ ಕಿತ್ತಿದ್ದಾಾರೆ. ಕ್ರಿಕೆಟ್ ಜೀವನದಲ್ಲಿ ನೋಬಾಲ್ ಎಸೆಯದ ಐದೇ ಐದು ಬೌಲರ್‌ಗಳಲ್ಲಿ ಇವರೂ ಒಬ್ಬರು.

ಕಪಿಲ್ ದೇವ್
ಭಾರತಕ್ಕೆ ಮೊಟ್ಟಮೊದಲು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್. ಭಾರತ ಕ್ರಿಕೆಟ್‌ನ ಮಹಾನ್ ಆಟಗಾರರಲ್ಲಿ ಒಬ್ಬ. ಹರ್ಯಾಣದ ಹರಿಕೇನ್ ಎನ್ನುವ ಖ್ಯಾತಿಯನ್ನು ಹೊಂದಿರುವ ಕಪಿಲ್ ದೇವ್ 131 ಟೆಸ್‌ಟ್‌ ಹಾಗೂ 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 434 ಹಾಗೂ ಏಕದಿನ ಪಂದ್ಯಗಳಲ್ಲಿ 253 ವಿಕೆಟ್‌ಗಳನ್ನು ಕಿತ್ತಿದ್ದಾಾರೆ. ತಮ್ಮ 16 ವರ್ಷದ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ನೋಬಾಲ್ ಕೂಡ ಎಸೆದಿಲ್ಲ.

ಈ ಐವರು ಬೌಲರ್‌ಗಳು ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋಬಾಲ್ ಹಾಕಿಲ್ಲ. ಇತ್ತೀಚೆಗೆ ನೋಬಾಲ್, ವೈಡ್ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇವರು ನೀಡುವ ಅತಿರಿಕ್ತ ರನ್ನುಗಳು ಪಂದ್ಯದ ಗತಿಯನ್ನೇ ಬದಲಿಸುತ್ತಿವೆ. ಹೀಗಿದ್ದಾಗ ಈ ಐವರು ಬೌಲರ್‌ಗಳು ಎಲ್ಲರಿಗೂ ಮಾದರಿ ಎನ್ನಿಸುತ್ತಾಾರೆ.

Sunday, April 29, 2018

ಐಪಿಎಲ್‌ಗೆ ಆಯ್ಕೆಯಾದ ಅಚ್ಚರಿಯ ಆಟಗಾರರು

ಐಪಿಎಲ್ ಎನ್ನುವುದು ಹಲವು ಪ್ರತಿಭಾವಂತರ ಪಾಲಿಗೆ ಹೆಜ್ಜೆ ಮೂಡಲು ಇರುವ ವೇದಿಕೆ. ಪ್ರತಿಭಾ ಪ್ರದರ್ಶನಕ್ಕೆ ಇರುವ ಸ್ಥಳ. ಇಲ್ಲಿ ಹೆಸರಾಂತ ಆಟಗಾರರಿಗೆ ಇರುವಷ್ಟೇ ಬೇಡಿಕೆ ಪ್ರತಿಭಾವಂತರ ಕುರಿತೂ ಇದೆ. ಯಾವುದೇ ರಾಷ್ಟ್ರಗಳಿರಲಿ ಅಂತಹ ರಾಷ್ಟ್ರದ ಪ್ರತಿಭಾವಂತ ಆಟಗಾರರಿಗೆ ಐಪಿಎಲ್ ಮಣೆ ಹಾಕುತ್ತದೆ.
ಐಪಿಎಲ್ ಇತಿಹಾಸವನ್ನು ಗಮನಿಸಿದರೆ ಹಲವಾರು ಅಚ್ಚರಿಯ ಆಯ್ಕೆಯನ್ನು ಕಾಣಲು ಸಾಧ್ಯವಿದೆ. ಕಮ್ರಾನ್ ಖಾನ್ ಎಂಬ ಕೂಲಿ ಕಾರ್ಮಿಕ, ಕ್ರಿಕೆಟ್ ಜಗತ್ತಿಗೆ ಗೊತ್ತೇ ಇರದಿದ್ದ ಪೌಲ್ ವಾಲ್ತಾಟಿ ಎಂಬ ಆಟಗಾರ ಹೀಗೆ ಹಲವರನ್ನು ಬೆಳಕಿಗೆ ತಂದಿದೆ. ವೆಸ್‌ಟ್‌ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮುಂತಾದ ಹೆಸರಾಂತ ರಾಷ್ಟ್ರಗಳ ಆಟಗಾರರಿಗೆ ಮಾತ್ರವಲ್ಲ ಅ್ಘಾನಿಸ್ತಾಾನ, ನೇಪಾಳ, ಕೀನ್ಯಾಾಗಳಂತಹ ರಾಷ್ಟ್ರಗಳಲ್ಲಿನ ಆಟಗಾರರಿಗೂ ಐಪಿಎಲ್ ವೇದಿಕೆಯಾಗಿರುವುದು ವಿಶೇಷ.
2018ರ ಐಪಿಎಲ್‌ನಲ್ಲಿ ನೇಪಾಳ ಹಾಗೂ ಅ್ಘಾನಿಸ್ತಾನದ ಆಟಗಾರರನ್ನು ಪ್ರಾಾಂಚಾಯ್ಸಿಗಳು ಕೊಂಡುಕೊಂಡಿವೆ. ತನ್ಮೂಲಕ ಕ್ರಿಕೆಟ್ ಲೋಕದ ಪ್ರತಿಭಾವಂತರಿಗೆ ವಿಶ್ವ ಮಟ್ಟದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿವೆ. ಈ ಹಿಂದೆ ಕೀನ್ಯಾದ ತನ್ಮಯ್ ಮಿಶ್ರಾ ಎಂಬ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಂಡುಕೊಂಡಿತ್ತು. ಆದರೆ ತನ್ಮಯ್ ಮಿಶ್ರಾ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ.
ಐದು ಆವೃತ್ತಿಗಳಲ್ಲಿ ಕೋಲ್ಕತ್ತಾಾ ನೈಟ್ ರೈಡರ್ಸ್ ತಂಡ ಪರ ಆಟವಾಡಿದ್ದ ರ್ಯಾಾನ್ ಟೆನ್ ಡೆಶ್ಕಾಟೆ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಕ್ರಿಕೆಟ್ ಲೋಕದಲ್ಲಿ ಇನ್ನೂ ಆರಂಭಿಕ ಹೆಜ್ಜೆಗಳನ್ನಿಡುತ್ತಿರುವ ನೆದರ್ಲೆಂಡ್ ತಂಡದ ಈ ಆಟಗಾರನ ಪ್ರತಿಭೆಯನ್ನು ಗುರುತಿಸಿದ್ದ ಕೋಲ್ಕತ್ತಾಾ ತಂಡ ಉತ್ತಮ ಅವಕಾಶ ನೀಡಿತ್ತು. ಈ ಅವಕಾಶ ಸದುಪಯೋಗ ಪಡಿಸಿಕೊಂಡಿದ್ದ ಡೆಶ್ಕಾಟೆ ಉತ್ತಮ ಪ್ರದರ್ಶನದ ಮೂಲಕ ತಂಡದ ಖಾಯಂ ಆಟಗಾರನಾಗಿದ್ದರು.

ರಶೀದ್ ಖಾನ್
ವಿಶ್ವ ಟಿ20 ಕ್ರಿಿಕೆಟ್‌ನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿಿರುವ ಹೆಸರು ರಶೀದ್ ಖಾನ್. ಅ್ಘಾನಿಸ್ತಾಾನದ ಈ ಆಟಗಾರ ಟಿ20ಯ ನಂ.1 ಬೌಲರ್. ಸನ್ ರೈಸರ್ಸ್ ಹೈದರಾಬಾದ್ ತಂಡವು 2017ರ ಆವೃತ್ತಿಿಯಲ್ಲೇ ರಶೀದ್ ಖಾನ್‌ರನ್ನು ಕೊಂಡುಕೊಂಡಿದ್ದುಘಿ, ಈ ಆವೃತ್ತಿಿಯಲ್ಲಿ  ರೀಟೇನ್ ಮಾಡಿಕೊಂಡಿದೆ. ಅವರು ಅತ್ಯುತ್ತಮ ಪ್ರದರ್ಶನ ತೋರುತ್ತಿಿದ್ದಾಾರೆ. ತಮ್ಮ ವಿಶಿಷ್ಟ ಬೌಲಿಂಗ್ ಮೂಲಕ ಸಾಧನೆ ಮಾಡುತ್ತಿಿರುವ ರಶೀದ್ ಖಾನ್ ಐಪಿಎಲ್‌ನಲ್ಲಿ ಆಡಿದ ಮೊದಲ ಅ್ಘಾನಿಸ್ತಾಾನದ ಆಟಗಾರ ಎನ್ನುವ ಖ್ಯಾಾತಿಗೂ ಪಾತ್ರರಾಗಿದ್ದಾಾರೆ. ಇನ್ನೂ 18 ವರ್ಷ ವಯಸ್ಸಿಿನ ರಶೀದ್ ಖಾನ್ ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಆಗಿದ್ದಾಾರೆ.

ಜಹೀರ್ ಖಾನ್ ಪಖ್ತೀನ್
ಅ್ಘಾನ್‌ನ ಇನ್ನೋೋರ್ವ ಸ್ಪಿಿನ್ನರ್ ಜಹೀರ್ ಖಾನ್ ಪಖ್ತೀನ್‌ರನ್ನು ರಾಜಸ್ತಾಾನ ರಾಯಲ್‌ಸ್‌ ತಂಡವು 60 ಲಕ್ಷ ರೂ.ಗಳನ್ನು ನೀಡಿ ಕೊಂಡುಕೊಂಡಿದೆ. ಆಸ್ಟ್ರೇಲಿಯಾದ ಸ್ಪಿಿನ್ ದಂತಕತೆ ಶೇನ್ ವಾರ್ನ್ ಅವರು ವಿಶೇಷ ಆದ್ಯತೆಯ ಮೇರೆಗೆ ಆ್ಘಾನ್‌ನ ಈ ಚೈನಾಮನ್ ಬೌಲರ್‌ನನ್ನು ಕೊಂಡುಕೊಂಡಿದೆ. ಪಖ್ತೀನ್ ತಮ್ಮ ತಂಡದ ಇನ್ನೋೋರ್ವ ಆಟಗಾರ ರಶೀದ್ ಖಾನ್‌ರಂತೆಯೇ ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾಾರೆ. ಪಖ್ತೀನ್‌ಗೆ ಇದುವರೆಗೂ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಿಲ್ಲಘಿ.

ಮೊಹಮ್ಮದ್ ನಬಿ
ಅ್ಘಾನ್‌ನ ಇನ್ನೋೋರ್ವ ಆಟಗಾರ ಮೊಹಮದ್ ನಬಿಯನ್ನೂ 1 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೊಂಡುಕೊಂಡಿದೆ. ಉತ್ತಮ ಆಲ್‌ರೌಂಡರ್ ಆಗಿರುವ ನಬಿ ಐಪಿಎಲ್‌ನಲ್ಲಿ ಇನ್ನೂ ಛಾಪು ಮೂಡಿಸಬೇಕಿದೆ. ಉತ್ತಮ ಬೌಲಿಂಗ್ ಹಾಗೂ ಅಗತ್ಯದ ಸಂದರ್ಭದಲ್ಲಿ ಬ್ಯಾಾಟಿಂಗ್ ಮಾಡುವ ಸಾಮರ್ಥ್ಯ ನಬಿಯ ಪ್ಲಸ್ ಪಾಯಿಂಟ್

ಮುಜೀಬ್-ಉರ್-ರೆಹಮಾನ್
17 ವರ್ಷದ ಅ್ಘಾನ್ ಆಟಗಾರನನ್ನು ಕಿಂಗ್‌ಸ್‌ ಇಲೆವೆನ್ ಪಂಜಾಬ್ 4 ಕೋಟಿ ರೂಪಾಯಿಗೆ ಕೊಂಡುಕೊಂಡಿದೆ. ಉತ್ತಮ ಸ್ಪಿಿನ್ನರ್ ಆಗಿರುವ ಮುಜೀಬ್-ಉರ್ ರೆಹಮಾನ್ ಅ್ಘಾನ್‌ನ ಇನ್ನೋೋರ್ವ ಆಟಗಾರ ರಶೀದ್ ಖಾನ್‌ರಂತೆಯೇ ಪ್ರತಿಭಾವಂತ. ಈಗಾಗಲೇ ಐಪಿಎಲ್‌ನಲ್ಲಿ ಆಡಿರುವ ಮುಜೀಬ್ ಪಂಜಾಬ್ ತಂಡದ ಪಾಲಿಗೆ ಉತ್ತಮ ಆಟಗಾರ.

ಸಂದೀಪ್ ಲಮಿಚ್ಚನೆ
ಇನ್ನೂ ಕ್ರಿಿಕೆಟ್ ಲೋಕದಲ್ಲಿ ಕಣ್ಣುಬಿಡುತ್ತಿಿರುವ ರಾಷ್ಟ್ರ ನೇಪಾಳ. ಈ ನೇಪಾಳದ ಸ್ಪಿಿನ್ನರ್ 17 ವರ್ಷದ ಸಂದೀಪ್ ಲಮಿಚ್ಚನೆಯನ್ನು ದಿಲ್ಲಿ ಡೇರ್ ಡೆವಿಲ್‌ಸ್‌ ತಂಡವು 20 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಕೊಂಡುಕೊಂಡಿದೆ. ನೇಪಾಳದ ಈ ಆಟಗಾರ ಐಪಿಎಲ್‌ಗೆ ಆಯ್ಕೆೆಯಾಗಿರುವುದು ನೇಪಾಳದ ಕ್ರಿಿಕೆಟ್ ಬೆಳವಣಿಗೆಗೆ ಇನ್ನಷ್ಟು ಪೂರಕವಾಗಬಹುದಾಗಿದೆ. ಸಂದೀಪ್ ಇನ್ನೂ ಐಪಿಎಲ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿಲ್ಲಘಿ. ಸಾಕಷ್ಟು ನಿರೀಕ್ಷೆೆಗಳು ಈತನ ಮೇಲಿದ್ದುಘಿ, ಮುಂದಿನ ದಿನಗಳಲ್ಲಿ ದಿಲ್ಲಿ ತಂಡ ಸಂದೀಪ್ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳುವ ನಿರೀಕ್ಷೆೆಯಿದೆ.


Thursday, March 8, 2018

ನಾನೆಂಬ ಭಾಷಣಕಾರ...!

ಡಿಗ್ರಿ ಫೈನಲ್ ನಲ್ ಇದ್ದಾಗ ನಡೆದ ಘಟನೆ...

ಒಂದಿನ ಯಾವ್ದೋ ಎನ್ಜಿಒ ದವರು ಕಾಲೇಜಿಗೆ ಬಂದಿದ್ದರು. ಡಿ.1ರ ಎಡವೋ ಬಲವೋ...
ಏಡ್ಸ್ ದಿನಾಚರಣೆ ಕುರಿತಂತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಬಂದಿದ್ದರು. ಏಡ್ಸ್ ದಿನಾಚರಣೆ ಪ್ರಯುಕ್ತ ಒಂದು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಏಡ್ಸ್ ನಿಯಂತ್ರಣದ ಕುರಿತು ಭಾಷಣ ಮಾಡಬೇಕು.
ನಾವ್ ಫೈನಲ್ ಇಯರ್ ನವ್ರಿಗೆ ಒಂದು ಕ್ಲಾಸು ಆಫ್ ಇತ್ತು. ಹಾಗಾಗಿ ಆ ಕಾರ್ಯಕ್ರಮಕ್ಕೆ ಹೋದೆವು. ನಮ್ಮ ಗ್ಯಾಂಗಿನ ಖಾಯಂ ಸದಸ್ಯರಾದ ರಾಘವ, ನಾನು, ವಂದನಾ ಜೋಶಿ, ಶ್ರದ್ಧಾ ಹೀಗೆ ಹಲವರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಹೋದ್ವಿ.
ಹೋದರೆ ಆ ಕಾರ್ಯಕ್ರಮದಲ್ಲಿ ನಾವೇ ಮೊದಲ ಆಡಿಯನ್ಸು. ವೇದಿಕೆಯ ಮೇಲೆ ನಾಲ್ಕೋ ಐದೋ ಜನರು ಕುಳಿತಿದ್ದರು. ಯಾರಾದ್ರೂ ಬರ್ತಾರೇನೋ ಅಂತ ಗೆಸ್ಟುಗಳು ಕಾಯ್ತಿದ್ದರು. ಬಲಿ ಕಾ ಬಕ್ರಾ ಎಂಬಂತೆ ನಾವು ಸಿಕ್ಕೆವು. ಆರೋ-ಏಳೋ ಜನರಷ್ಟೇ ನಾವು ಹೋಗಿ ಸಂಪೂರ್ಣ ಖಾಲಿಯಿದ್ದ ಖುರ್ಚಿಗಳಲ್ಲಿ ಕುಳಿತೆವು.
ಭಾಷಣ ಸ್ಪರ್ಧೆಗೆ ಹೆಸರು ಯಾರ್ಯಾರು ಕೊಡ್ತೀರಿ ಎಂದು ಕೇಳಿದಾಗ ನಮ್ ಬಳಗದ ಘಟಾನುಘಟಿ ಮಾತುಗಾರರಾದ ರಾಘವ, ವಂದನಾ ಅವರೆಲ್ಲ ಹೆಸರು ಕೊಟ್ಟರು. ರಾಘವ, ಗಣೇಶ ಎಲ್ಲರೂ ಕೊಟ್ಟರು. ರಾಘವ ಸೀದಾ ನನ್ನ ಬಳಿ ಬಂದವನೇ ನೀನೂ ಹೆಸರು ಕೊಡಲೆ ಅಂದ... ನಾನೆಂತ ಹೆಸರು ಕೊಡೋದು ಮಾರಾಯಾ.. ಸುಮ್ನಿರು ಅಂದೆ. ನನ್ನ ಬಳಿ ನೀನು ಮಾಡ್ತೆ... ಹಾಂಗೆ ಹೀಂಗೆ ಅಂತೆಲ್ಲ ಸವಾಲು ಹಾಕಿದ... ಆತು ಕೊಡು ಮಾರಾಯಾ ಅಂದೆ...
ನನಗೆ ಆ ದಿನಗಳಲ್ಲಿ ವಿಪರೀತ ಸ್ಟೇಜ್ ಫಿಯರ್ ಇತ್ತು. ಸ್ಟೇಜ್ ಫಿಯರ್ ವಿಚಿತ್ರ ರೀತಿ. ಸ್ಟೇಜ್ ಮೇಲೆ ಹೋದ ಎರಡು ನಿಮಿಷ ಕಕ್ಕಾಬಿಕ್ಕಿಯಾಗಿ ಬ್ಬೆಬ್ಬೆಬ್ಬೆ ಅನ್ನುವಷ್ಟು.. ಅದಲ್ಲದೇ ಭಾಷಣಗಳನ್ನೆಲ್ಲ ಮಾಡಿದವನೇ ಅಲ್ಲ ನಾನು. ಎಲ್ಲೋ ಟೈಮಿಂಗ್ಸ್ ಪಂಚ್ ಗಳನ್ನು ಹೊಡೆದು ಹಾಸ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ನನ್ನನ್ನು ಭಾಷಣಕ್ಕೆ ಹೆಸರು ಕೊಡುವಂತೆ ಮಾಡಿದ್ದ ರಾಘವ.
ಭಾಷಣ ಸ್ಪರ್ಧೆಗೆ ಹೆಸರು ಕೊಟ್ಟವರು ಆರು ಜನ.ಸಂಘಟಕರ ಬಳಿ ಹೋಗಿ, ನಿಮಗೆ ಜನ ಕಡ್ಮೆ ಇದ್ದಾರಲ್ಲ ಹಂಗಾಗಿ ಹೆಸ್ರು ಕೊಡ್ತಾ ಇದ್ದೇನೆ.. ಅಂತ ಹೇಳಿದೆ. ಖರ್ಮ ಕಾಂಡ ಎನ್ನುವಂತೆ ಮೊದಲ ಭಾಷಣಕ್ಕೆ ನನ್ನನ್ನೇ ಕರೆದುಬಿಡಬೇಕೆ... ನಾನು ಸೀದಾ ಸಂಘಟಕರ ಬಳಿ ನನಗೆ ಪ್ರಿಪೇರ್ ಆಗೋಕೆ ಟೈಂ ಬೇಕು ಎಂದೆ. ಆತು.. ಲಾಸ್ಟ್ ನೀನೇ ಭಾಷಣ ಮಾಡು ಎಂದರು.
ಸಂಘಟಕರು ಅಷ್ಟ್ ಹೇಳಿದ್ದೇ ತಡ ನಾನು ಸ್ಟೈಲಾಗಿ ಪ್ರಿಪೇರ್ ಆಗೋಕೆ ಹೋದೆ. ನೋಡ ನೋಡುತ್ತಿದ್ದಂತೆ ಎಲ್ಲರ ಭಾಷಣ ದಿಢೀರನೆ ಮುಗಿಯಿತೇ ಅನ್ನಿಸಿತು. ಒಬ್ಬೊಬ್ಬರದೇ ಭಾಷಣ ಮುಗಿಯುತ್ತ ಬಂದಾಗಲೂ ನನ್ನೊಳಗಿನ ಸ್ಟೇಜ್ ಫಿಯರ್ ಭೂತ ದೊಡ್ಡದಾಗುತ್ತಿದ್ದ. ಸುದೀರ್ಘ ಭಾಷಣ ಮಾಡುವ ರಾಘವ, ವಂದನಾ, ಗಣೇಶರೆಲ್ಲ ಯಾವ ಮಾಯದಲ್ಲಿ ಭಾಷಣ ಮುಗಿಸಿಬಿಟ್ಟಿದ್ದರೋ ಏನೋ...
ಕೊನೆಗೂ ನನ್ನ ಹೆಸರು ಕರೆದರು. ಸೀದಾ ಹೋದೆ. `ಏಡ್ಸ್ ಮಾರಿ.. ಮಾರಿ...' ಅಂತೇನೋ ಶುರು ಹಚ್ಚಿಕೊಂಡೆ. ಮೂರು... ನಾಲ್ಕು.. ಐದು ವಾಕ್ಯಗಳು ಸರಸರನೆ ಬಂದವು.. ಅಷ್ಟಾದ ಮೇಲೆ ಇನ್ನೇನು ಮಾತನಾಡುವುದು? ನಾನು ಪ್ರಿಪೇರ್ ಮಾಡಿಕೊಂಡಿದ್ದೆಲ್ಲ ಖಾಲಿಯಾದಂತಾಯಿತು. ಒಂದ್ ಕಥೆ ಹೇಳ್ತೇನೆ ಅಂತೆಲ್ಲ ಶುರು ಹಚ್ಚಿಕೊಂಡೆ. ಒಂದ್ ಅಜ್ಜಿಗೆ ಏಡ್ಸ್ ಅಂದರೆ ಏನು ಅನ್ನೋದೆ ಗೊತ್ತಿಲ್ಲ.. ಅಂತೇನೋ ಸುಳ್ಳೆ ಪಿಳ್ಳೆ ಕಥೆ ಹೇಳಿದೆ.. ರಾಘವ ನನ್ನ ಹೆಸರು ಕೊಟ್ಟಿದ್ದ.. ಎಂತ ಹೊಲ್ಸು ಭಾಷಣ ಮಾಡ್ತ ಅಂತ ಮನಸಲ್ಲೇ ಬೈದುಕೊಂಡಿರಬೇಕು.
ನನ್ ಭಾಷಣ ಮುಗಿದಾಗ ಹೆಂಗ್ ಚಪ್ಪಾಳೆ ಬಿತ್ತು ಅಂತೀರಿ.. ನಾನು ಫುಲ್ ಖುಷಿ ಆಗಿದ್ದೆ.. ಆದರೆ ನನ್ನ ಭಾಷಣ ಚನ್ನಾಗಿತ್ತು ಅಂತಲ್ಲ.. ಕಾರ್ಯಕ್ರಮದ ಕೊಟ್ಟ ಕೊನೆಯ ಸ್ಪರ್ಧಿ ಮುಗಿಸಿದ.. ಇನ್ಯಾರೂ ಬಾಕಿ ಇಲ್ಲ ಅಂತ ನನ್ನ ಸಹಪಾಟಿಗಳು ಚಪ್ಪಾಳೆಯನ್ನು ದೊಡ್ಡದಾಗಿ ತಟ್ಟಿದ್ದರು.
ಅಂತೂ ಎರಡೋ ಮೂರೋ ನಿಮಿಷ ಮುಗಿಸಿ ವಾಪಾಸ್ ಬಂದು ಖಾಲಿ ಚೇರಲ್ಲಿ ಕುಳಿತಾಗ ಮೈಯಲ್ಲಿ ಸಿಕ್ಕಾಪಟ್ಟೆ ಬೆವರು.. ಹಾರ್ಟ್ ಬೀಟು ಫುಲ್ ರೈಸು...
ಅದೇನೋ ಆಯ್ತು.. ಆಮೇಲೆ ಮುಖ್ಯ ಕಾರ್ಯಕ್ರಮ.. ಸಂಘಟಕರು ಯಾರೋ ಒಂದೆರಡು ಜನ ಮಾತನಾಡಲು ಬಂದರು. ಒಬ್ಬಾತ ನನ್ನ ಭಾಷಣ ಉಲ್ಲೇಖ ಮಾಡಿದ.. ನನ್ನ ತಲೆ ಗಿರ್ರೆನ್ನುತ್ತಲೇ ಇತ್ತು. ಆ ಸಂಘಟಕ `ಒಬ್ಬರು ಅಜ್ಜಿ ಕಥೆ ಹೇಳಿದರು... ಏಡ್ಸ್ ಕುರಿತು ಅಜ್ಜಿಗೆ ಜಾಸ್ತಿ ತಿಳಿದಿರುತ್ತೆ. ಮೊಮ್ಮಗಳಿಗೆ ಅಲ್ಲ' ಎಂದರು. ನಾನಂತೂ ಮುಖ ಮುಚ್ಚಿಕೊಳ್ಳುವುದೊಂದು ಬಾಕಿ.
ಅಂತೂ ಇಂತೂ ಕೊನೆಗೆ ಬಹುಮಾನ ನೀಡುವ ಸಮಯ ಬಂದಿತು. ಮೊದಲ ಬಹುಮಾನ `ವಿನಯ್ ಹೆಗಡೆ..' ಅಂದರು.. ನಾನು ಬೆಚ್ಚಿ ಬಿದ್ದಿದ್ದೆ. ನನಗೆ ಮೊದಲ ಬಹುಮಾನವಾ?
ಪಕ್ಕದಲ್ಲಿದ್ದ ರಾಘವ `ಹೋಗಲೆ ವಿನಯಾ..' ಅಂದ...
`ಸುಮ್ನಿರಲೇ ತಮಾಷೆ ಮಾಡಡ..' ಅಂದೆ.
`ನಿನ್ ಹೆಸರೆ ಕರಿತಾ ಇದ್ವಲೇ..' ಅಂದ..
`ಹೆಂಗ್ ಸಾಧ್ಯ ಅಂದೆ..'
ಸಂಘಟಕರು ಭಾಷಣದಲ್ಲಿ ನಿನ್ ಕಥೆ ಉಲ್ಲೇಖ ಮಾಡಿದ್ವಲಾ.. ಅದಕ್ಕಾಗಿ ಅವರಿಗೆ ತಪ್ಪಿನ ಅರಿವಾಗಿ ಬಹುಮಾನ ಕೊಡ್ತಾ ಇದ್ವಲೇ..' ರಾಘವ ರೈಲು ಬಿಟ್ಟಿದ್ದ. ಆದರೂ ನಾನು ಎದ್ದು ಹೋಗಲಿಲ್ಲ.
ಕೊನೆಗೆ ಸಂಘಟಕರು ಉಳಿದೆಲ್ಲ ಪ್ರೈಜ್ ಕೊಟ್ಟರು. ಮೊದಲ ಬಹುಮಾನ ಎಂದವರೇ... ಇರ್ರೀ.. ಸ್ವಲ್ಪ ಗೊಂದಲ ಇದೆ ಎಂದರು..
ರಾಘವ ಮತ್ತೆ `ನಿಂಗೇಯಲೆ ಪ್ರೈಜ್ ಬಂದಿದ್ದು..' ಎಂದಿದ್ದ.
ನನಗೆ ಎಷ್ಟು ಕಾನ್ಫಿಡೆನ್ಸ್ ಇತ್ತು ಅಂದ್ರೆ ಖಂಡಿತವಾಗಿಯೂ ನನಗೆ ಬಹುಮಾನ ಬರೋದಿಲ್ಲ.. ಎಂದುಕೊಂಡಿದ್ದೆ.
ಕೊನೆಗೂ ಸಂಘಟಕರ ಗೊಂದಲ ಪರಿಹಾರವಾಯಿತು. `ನನ್ನ ಹೆಸರನ್ನೇ ಕರೆದರು.!! ನನಗೆ ಶಾಕ್ ಮೇಲೆ ಶಾಕ್..
ವಿಧಿ ಇಲ್ಲದೇ ಎದ್ದು ಹೋದೆ. `ವಿನಯ್ ಹೆಗಡೆ.. ಹಾಗೂ ವಂದನಾ ಜೋಶಿ...' ಬನ್ನಿ ಇಲ್ಲಿ ಅಂದರು..
ಇಬ್ರೂ ಹೋದ್ವಿ...
ಇಬ್ಬರೂ ಭಾಷಣ ಮಾಡಿದ ನಂಬರ್ ಅದಲು ಬದಲಾಗಿದೆ.. ಹಂಗಾಗಿ ಗೊಂದಲ ಆಗಿತ್ತು... ಎಂದರು.
ವಂದನಾ ಜೋಶಿ ಅವರನ್ನು ಪ್ರಥಮ ಎಂದು ಘೋಷಿಸುತ್ತಿದ್ದೇನೆ... ಎಂದರು... ಅಲ್ಲಿಗೆ ನನ್ನ ಕಾನ್ಫಿಡೆನ್ಸ್ ಪಕ್ಕಾ ಆಗಿತ್ತು.. ಆದರೂ ನನ್ನನ್ನೇಕೆ ಕರೆದರು.. ಅನ್ನೋ ಕುತೂಹಲ ಇತ್ತಲ್ಲ...
ಕೊನೆಗೂ ನನಗೊಂದು ಸರ್ಟಿಫಿಕೆಟ್ ಸಿಕ್ಕಿತು. ತಗೊಂಡು ನೋಡಿದರೆ ನನಗೆ 6ನೇ ಪ್ರೈಜ್ ಬಂದಿತ್ತು.
ಆಗಿದ್ದಿಷ್ಟೇ...
ಹೆಸರು ಕೊಟ್ಟಿದ್ದ ಆರು ಜನರಲ್ಲಿ ನನಗೆ ಆರನೇ ಬಹುಮಾನ ಬಂದಿತ್ತು ಅಷ್ಟೇ...
ಆದರೆ ಹಲವು ಅನುಭವ.. ಪಾಠಗಳನ್ನು ಅದು ಕಲಿಸಿತ್ತು... ಪ್ರಮುಖವಾಗಿ ಸ್ಟೇಜ್ ಫಿಯರನ್ನು ಓಡಿಸಿತ್ತು...

Monday, March 5, 2018

ನಾನು ನೋಡಿದ ಚಿತ್ರಗಳು -3

ಕುಮ್ಕಿ (ತಮಿಳು)

ಗ್ರಾಮಕ್ಕೆ ಬಂದವರಿಗೆ ರಾಜವೈಭೋಗ. ಗ್ರಾಮದವರೆಲ್ಲ ಇವರನ್ನು ದೇವರಂತೆ ಕಾಣುತ್ತಾರೆ. ಈ ಸಂದರ್ಭದಲ್ಲೇ ಕಥಾನಾಯಕನಿಗೆ ನಿಜ ಸಂಗತಿ ತಿಳಿಯುತ್ತದೆ. ಆತ ಗ್ರಾಮಕ್ಕೆ ವಾಪಾಸಾಗಬೇಕೆಂದು ಹಟ ಹಿಡಿಯುತ್ತಾನೆ. ಇನ್ನೊಂದಿನ ಇರೋಣ ಪ್ಲೀಸ್.. ಇನ್ನೊಂದೇ ದಿನ... ಎಂದು ದಿನ ಸಾಗಹಾಕುವ ಮಾವ.. ಹೀಗಿದ್ದಾಗಲೇ ಆತನಿಗೆ ಕಥಾ ನಾಯಕಿ ಕಾಣಿಸಿಕೊಳ್ಳುತ್ತಾಳೆ. ಹಿತವಾಗಿ ಲವ್ವಾಗುತ್ತದೆ.

ಇದು ನಾನು ಇತ್ತೀಚೆಗೆ ನೋಡಿದ ಕುಂಕಿ ಎನ್ನುವ ತಮಿಳು ಚಿತ್ರದಲ್ಲಿ ಗಾಢವಾಗಿ ಕಾಡುವ ಸನ್ನಿವೇಶ.

ದಟ್ಟ ಕಾಡು, ಕಾಡಿನಲ್ಲಿ ವ್ಯವಸಾಯ ಮಾಡುವ ಗ್ರಾಮಸ್ತರು. ಅವರಿಗೆ ಆಗಾಗ ಬಂದು ಕಾಟ ಕೊಡುವ ಕಾಡಿನ ಆನೆ. ಕಾಡಿನ ಆನೆಗೆ ಬಲಿಯಾಗುತ್ತಿರುವ ಜನ.

ಇಷ್ಟಾದರೂ ಅರಣ್ಯ ಇಲಾಖೆಯ ಸಹಾಯವನ್ನು ಪಡೆಯದ ಸ್ವಾಭಿಮಾನಿ ಗ್ರಾಮಸ್ಥರು. ಅರಣ್ಯ ಅಧಿಕಾರಿಗೋ ಈ ಗ್ರಾಮದ ನಾಯಕನ ಮಗಳ (ಲಕ್ಷ್ಮೀ ಮೇನನ್) ಮೇಲೆ ಕಣ್ಣು. ನಾನಿಲ್ಲ ಅಂದ್ರೆ ಕಾಡಾನೆಗೆ ನೀವೆಲ್ಲ ಬಲಿಯಾಗ್ತೀರಾ ಹುಷಾರು.. ಎನ್ನುವ ಅರಣ್ಯಾಧಿಕಾರಿ, ನೀವ್ ಹೆಂಗ್ ಬದುಕ್ತೀರೋ ನಾನೂ ನೋಡ್ತಿನಿ ಅಂತ ಲೈಟಾಗಿ ಆವಾಜನ್ನೂ ಹಾಕುತ್ತಾನೆ.

ಕಾಡಾನೆಯ ಕಾಟಕ್ಕೆ ಪರಿಹಾರ ಹುಡುಕಬೇಕು ಎನ್ನುವಾಗ ಗ್ರಾಮದ ನಾಯಕನಿಗೆ ನಾಡಿನ ಆನೆಯನ್ನು ತರಿಸಿ, ಅದರಿಂದಾಗಿ ಕಾಡಿನ ಆನೆಯ ಹಾವಳಿ ಮಟ್ಟ ಹಾಕುವ ಸಲಹೆಯನ್ನೊಬ್ಬರು ನೀಡುತ್ತಾರೆ. ಅದಕ್ಕೆ ತಕ್ಕಂತೆ ನಾಯಕ ನಾಡಿನಿಂದ ಸಾಕಾನೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿ, ಮುಂದಾಗುತ್ತಾನೆ.

****

ಚಿತ್ರದ ನಾಯಕ (ವಿಕ್ರಂ ಪ್ರಭೂ) ನಗರದಲ್ಲಿ ಆನೆಯೊಂದರ ಮಾಲೀಕ. ಆತ ಸಣ್ಣಪುಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತ, ಸರ್ಕಸ್ ನಲ್ಲಿ ತೊಡಗಿಕೊಳ್ಳುತ್ತ ಆನೆಯ ಹೊಟ್ಟೆ ತುಂಬಿಸುವ ತನ್ಮೂಲಕ ಜೀವನ ಕಟ್ಟಿಕೊಳ್ಳುವ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಆತನಿಗೊಬ್ಬ ಸೋದರ ಮಾವ. ದುಡ್ಡಿಗೆ ಹಾತೊರೆಯುವವನು. ಸುಳ್ಳು ಹೇಳಿ ವಿಕ್ರಂ ಪ್ರಭು ಹಾಗೂ ಆನೆಯನ್ನು ಕಾಡಿನ ಕಡೆಗೆ ಮುಖ ಮಾಡುವಂತೆ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ನಾಡಿನಲ್ಲಿ ಹಸಿದ ಆನೆ ಕೆಲವು ಕಡೆ ಆಹಾರ ಕದ್ದು ತಿಂದು, ಎಲ್ಲರಿಂದ ಬೈಗುಳಕ್ಕೂ ಕಾರಣವಾಗಿರುತ್ತದೆ. ಆನೆಯನ್ನು ಊರುಬಿಡಿಸಬೇಕು ಎಂಬುದು ಎಲ್ಲರ ವಾದವಾಗಿ, ಅನಿವಾರ್ಯವಾಗಿ ಕಥಾನಾಯಕ ಕಾಡಿನ ನಡುವಿನ ಗ್ರಾಮದ ಕಡೆಗೆ ಮುಖ ಮಾಡುತ್ತಾನೆ.

ನಾಯಕಿಯ ಮೇಲೆ ಲವ್ವಾಗಿರುವ ಕಾರಣ ನಾಯಕ ಅಲ್ಲೇ ಇರಲು ಮುಂದಾಗುತ್ತಾನೆ. ಕೊನೆಗೊಂದು ದಿನ ಆಕೆಯ ಪ್ರಾಣ ರಕ್ಷಣೆ ಮಾಡುತ್ತಾನೆ. ಆಕೆಗೂ ಈತನ ಮೇಲೆ ಲವ್ವಾಗುತ್ತದೆ.

ಹೀಗಿದ್ದಾಗಲೇ ಗ್ರಾಮದ ಮುಖ್ಯಸ್ಥ ತನ್ನ ಮಗಳಿಗೆ ಗಂಡು ನಿಶ್ಚಯವಾಗಿದೆ, ತಮ್ಮೂರಿನ ಪಾಲಿಗೆ ದೇವರಾಗಿ ಬಂದ ನೀವೇ ಮುಂದು ನಿಂತು ಮದುವೆ ಮಾಡಿಸಬೇಕು ಎಂದು ಕಥಾನಾಯಕನ ಬಳಿ ಹೇಳಿದಾಗ ನಾಯಕನಿಗೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಪ್ರೀತಿಯ ಸುದ್ದಿಯನ್ನು ಅಪ್ಪನ ಬಳಿ ಹೇಳು ಎಂದು ದುಂಬಾಲು ಬೀಳುವ ನಾಯಕಿ...

ಇನ್ನೊಂದೇ ದಿನ ಇದ್ದು ನಾಡಾನೆಯಿಂದ ಕಾಡಾನೆಯನ್ನು ಹೆಡೆಮುರಿ ಕಟ್ಟೋಣ ಎನ್ನುವ ಮಾವ..

ನಿನ್ನನ್ನೇ ನಂಬಿದ್ದೇನೆ.. ನೀನೇ ದೇವರು... ನನ್ನ ಮಗಳ ಮದುವೆ ಮಾಡಿಸು ಮಾರಾಯಾ ಎನ್ನುವ ಗ್ರಾಮದ ಮುಖ್ಯಸ್ಥ...

ಈ ನಡುವೆ ಅರಣ್ಯಾಧಿಕಾರಿ ಬಂದು ನಾಯಕ-ನಾಯಕಿಯರ ಪ್ರೀತಿಯ ಕುರಿತು ಗ್ರಾಮದ ಮುಖ್ಯಸ್ಥನ ಬಳಿ ಬಂದು ಹೇಳಿದರೂ ನಂಬದ ಗ್ರಾಮಸ್ಥರು...

ಮುಂದೇನಾಗುತ್ತೆ?

ನಾಯಕನಿಗೆ ನಾಯಕಿ ಸಿಗ್ತಾಳಾ...? ನಾಡಾನೆಯಿಂದ ಕಾಡಾನೆ ಸಂಹಾರವಾಗುತ್ತಾ? ಕಥಾ ನಾಯಕ ನಾಡಿಗೆ ಮರಳಿ ಬರ್ತಾನಾ?

ಇದೆಲ್ಲಕ್ಕೂ ಉತ್ತರ ಚಿತ್ರದಲ್ಲಿ ಲಭ್ಯ..

*************

ಹೆಸರಾಂತ ನಟ ಪ್ರಭು ಗಣೇಶನ್ ಅವರ ಮಗನಾದರೂ ವಿಕ್ರಂ ಪ್ರಭು ಅಚ್ಚರಿಯ ನಟನೆ ನೀಡಲು ಯಶಸ್ವಿಯಾಗಿದ್ದಾರೆ. ಬೊಮ್ಮನ್ ಎಂಬ ಹೆಸರಿನ ಪಾತ್ರದಲ್ಲಿ ವಿಕ್ರಂ ಪ್ರಭು ಅದ್ಭುತವಾಗಿ ನಟಿಸಿದ್ದಾನೆ. ಅಲ್ಲಿ ಎಂಬ ಪಾತ್ರದಲ್ಲಿ ಕಥಾ ನಾಯಕಿ ಇಷ್ಟವಾಗುತ್ತಾಳೆ... ಗ್ರಾಮೀಣ ಹುಡುಗಿಯಾಗಿ ಆಕೆಯ ನಟನೆಗೆ ಫುಲ್ ಮಾರ್ಕ್ಸ್ ಕೊಡಬಹುದು. ಚಿತ್ರ ಮುಗಿದ ನಂತರವೂ ಆಕೆ ಕಾಡುವಲ್ಲಿ ಯಶಸ್ವಿಯಾಗುತ್ತಾಳೆ.

ಉಳಿದಂತೆ ನಾಯಕನ ಮಾವ, ಗ್ರಾಮ ಮುಖ್ಯಸ್ಥರ ಪಾತ್ರಧಾರಿಗಳು ಉತ್ತಮವಾಗಿ ನಟಿಸಿದ್ದಾರೆ.

ಕಥಾ ಹಂದರ ಬಹುತೇಕ ಕನ್ನಡದ ಮುಂಗಾರು ಮಳೆಯನ್ನು ಹೋಲುತ್ತದೆ. ಪಾತ್ರ, ಸಂದರ್ಭಗಳು ಬೇರೆ ಬೇರೆ. ಮೊಲದ ಬದಲು ಇಲ್ಲಿ ಆನೆ ಬಂದಿದೆ. ಹಸಿರು.. ಅಲ್ಲೂ ಇದೆ.. ಇಲ್ಲೂ ಇದೆ. ಆದರೆ ಮುಂಗಾರು ಮಳೆಯಂತಹ ಕ್ಲೈಮ್ಯಾಕ್ಸು... ಮಾತು ಇಲ್ಲಿಲ್ಲ.

ಅಂದಹಾಗೆ ಇಲ್ಲೂ ಮುಂಗಾರು ಮಳೆಯಂತೆಯೇ ಜೋಗದ ದೃಶ್ಯವಿದೆ. ಮುಂಗಾರು ಮಳೆಯಲ್ಲಿ ಕುಣಿದು ಕುಣಿದು ಬಾರೆ ಎಂದಿದ್ದ ಜೋಡಿ, ಇಲ್ಲಿ ಸೊಲ್ಲಿಟ್ಟಲೇ..... ಎನ್ನುವುದು ವಿಶೇಷ. ಮುಂಗಾರು ಮಳೆಗಿಂತ ಚನ್ನಾಗಿ ಜೋಗವನ್ನು ಸೆರೆ ಹಿಡಿಯಲಾಗಿದೆ.

ಮಳೆಗಾಲ, ಹಸಿರು, ಚಿಟ ಪಟ ಹನಿಗಳು, ಕಾಡಿನ ಪರಿಸರ, ಮನುಷ್ಯ-ಆನೆಯ ಒಡನಾಟ, ಕಾಡಾನೆಯ ರೌದ್ರ, ಹಣಕ್ಕಾಗಿನ ಹಪಹಪಿತನ... ಆಹಾ... ಚಿಕ್ಕ ಚಿಕ್ಕ ಅಂಶಗಳಿಗೂ ಹೆಚ್ಚಿನ ಮಹತ್ವ ಕೊಡಲಾಗಿದೆ. ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ. ಆಧುನಿಕ ಕಾಲದಲ್ಲಿಯೂ ಇಂತಹದ್ದೊಂದು ಊರು ಇದೆಯಾ ಎನ್ನುವಂತಾಗುತ್ತದೆ.

ಬಾಲ್ಯದಲ್ಲಿ ಇಷ್ಟವಾದ ಮಾಳ.. ರಾತ್ರಿ ಕಾಡಿನಲ್ಲಿ ಗದ್ದೆಯನ್ನು ಕಾಯುವುದು,.. ಸೂಡಿ... ಇತ್ಯಾದಿಗಳು ನಮ್ಮ ಈಸ್ಟ್ ಮನ್ ಕಲರಿನ ಲೈಫಿಗೆ ಕರೆದೊಯ್ಯುತ್ತವೆ.

ತಮಿಳು ಹಾಗೂ ಮಲೆಯಾಳಿಗಳು ಉತ್ತಮ ಹಾಗೂ ವಿಭಿನ್ನ ಕಥೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಕುಂಕಿ ಕೂಡ ಅದಕ್ಕೆ ಹೊರತಾಗಿಲ್ಲ.

ಹತ್ತು ಹಾಡುಗಳ... ಹತ್ತಾರು ಪ್ರಶಸ್ತಿ ಪಡೆದಿರುವ ಈ ಚಿತ್ರವನ್ನು ನೀವೂ ನೋಡಿ... ಖಂಡಿತ ಖುಷಿ ನೀಡುತ್ತದೆ.

Sunday, March 4, 2018

ಬೆಣ್ಣೆಯಂತಹ ಜಲಪಾತ



ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರು. ಇಲ್ಲಿನ ಪ್ರತಿಯೊಂದೂ ತಾಲೂಕಿನಲ್ಲಿಯೂ ಹತ್ತಾರು ಜಲಪಾತಗಳು ಕಣ್ಣಿಗೆ ಬೀಳುತ್ತವೆ. ಜಲಪಾತಗಳು ನಯನ ಮನೋಹರವಾಗಿ, ನೋಡುಗರ ಕಣ್ಮನವನ್ನು ಸೆಳೆಯುತ್ತವೆ. ಶಿರಸಿ ತಾಲೂಕಿನಲ್ಲಿರುವ ಬೆಣ್ಣೆ ಹೊಳೆ ಜಲಪಾತ ಕೂಡ ನೋಡುಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಜಲಪಾತಗಳಲ್ಲಿ ಒಂದು.
ಅಘನಾಶಿನಿ ನದಿಯ ಉಪನದಿಯಾಗಿರುವ ಬೆಣ್ಣೆ ಹೊಳೆಯ ಸೃಷ್ಟಿಯೇ ಬೆಣ್ಣೆ ಜಲಪಾತ. ಈ ಜಲಪಾತದ ಹೆಸರು ಅನ್ವರ್ಥಕವಾದುದು. ಬಾನಂಚಿನಿಂದ ಭುವಿಗೆ ಬೆಣ್ಣೆ ಮುದ್ದೆಯೇ ಉರುಳಿ ಬೀಳುತ್ತಿದೆಯೇನೋ ಎನ್ನುವಂತಹ ದೃಶ್ಯ ವೈಭವ. ನೋಡಿದಷ್ಟೂ ನೋಡಬೇಕೆನ್ನಿಸುವ ಜಲಪಾತ ಹಾಗೂ ಪ್ರಕೃತಿಯ ಸೌಂದರ್ಯ. ಬೆಣ್ಣೆಯಂತಹ ಈ ಜಲಪಾತ ಉತ್ತರ ಕನ್ನಡದ ಸುಂದರ ಜಲಪಾತಗಳಲ್ಲಿ ಒಂದು ಎನ್ನುವ ಅಭಿದಾನವನ್ನೂ ಪಡೆದುಕೊಂಡಿದೆ. 200 ಅಡಿಗೂ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಪಶ್ಚಿಮ ಘಟ್ಟದ ಒಡಲೊಳಗೆ ಹುದುಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.



ಕಾಡಿನ ಒಡಲಿನಲ್ಲಿ ಬೆಚ್ಚಗಿರುವ ಈ ಜಲಪಾತದ ಕುರಿತು ಎಷ್ಟು ವರ್ಣಿಸಿದರೂ ಕಡಿಮೆಯೇ ಎನ್ನಬಹುದು. ಕಾಡಿನ ನಡುವೆ ಇರುವ ಉಂಬಳಗಳು, ಜಿಗಣೆಗಳು ನಿಮ್ಮ ರಕ್ತವನ್ನು ಹೀರಲು ಕಾಯುತ್ತಿರುತ್ತವೆ. ಸೂರ್ಯನ ರಶ್ಮಿಗಳು ಭೂಮಿಯನ್ನು ಮುತ್ತಿಕ್ಕಲಾರದಷ್ಟು ದಟ್ಟ ಕಾಡುಗಳು ನಿಮ್ಮಲ್ಲೊಂದು ಅವ್ಯಕ್ತ ಭೀತಿಯನ್ನು ಹುಟ್ಟು ಹಾಕುತ್ತವೆ. ಆಗೀಗ ಗೂಂಕೆನ್ನುವ ಲಂಗೂರ್‌ಗಳು, ಮಂಗಗಳು ಥಟ್ಟನೆ ನಿಮಗೆ ಹಾಯ್ ಎಂದು ಹೇಳಿ ಮನಸ್ಸನ್ನು ಮೆಚ್ಚಿಸುತ್ತವೆ. ಕೂಗಾಡುವ ಹಕ್ಕಿಗಳ ಇಂಚರ ಕಿವಿಯ ಮೇಲೆ ನರ್ತನ ಮಾಡುತ್ತವೆ. ಅದೃಷ್ಟವಿದ್ದರೆ ಕಾಡು ಪ್ರಾಣಿಗಳ ದರ್ಶನ ಭಾಗ್ಯವೂ ಸಾಧ್ಯವಾದೀತು.
ಹಾಲು ಬಣ್ಣದ, ಬೆಣ್ಣೆಯ ಮುದ್ದೆಯಂತಹ ಜಲಪಾತ ನೋಡಬೇಕಾದಲ್ಲಿ ಅರ್ಧ ಕಿಲೋಮೀಟರಿನಷ್ಟು ನಡಿಗೆ ಅನಿವಾರ್ಯ. ಜಲಪಾತದ ನೆತ್ತಿಗೂ, ಕಷ್ಟಪಟ್ಟು ಸಾಗಿದರೆ ಜಲಪಾತದ ಬುಡಕ್ಕೂ ಹೋಗಬಹುದು. ಜಲಪಾತದ ಒಡಲಿನ ಗುಂಡಿ ಆಳವಾಗಿರುವುದರಿಂದ ಅಲ್ಲಿ ಈಜುವುದು ಅಪಾಯಕರ. ಬೆಣ್ಣೆ ಹೊಳೆ ಜಲಪಾತದ ಕೆಳಭಾಗದಲ್ಲಿ ಚಿಕ್ಕ ಪುಟ್ಟ ಅನೇಕ ಸರಣಿ ಜಲಪಾತಗಳೇ ಇವೆ. ಕಷ್ಟಪಟ್ಟು, ಚಾರಣ ಮಾಡಿ ತೆರಳಿದರೆ ಜಲಪಾತ ದರ್ಶನದಿಂದ ಆಯಾಸವೆಲ್ಲ ಪರಿಹಾರವಾಗಬಹುದಾಗಿದೆ.

ಶಿರಸಿ ಹಾಗೂ ಸಿದ್ದಾಪುರ ರಸ್ತೆಯಲ್ಲಿ ರಾಗಿಹೊಸಳ್ಳಿಗೂ ಸನಿಹದ ಕಸಗೆ ಎಂಬಲ್ಲಿನ ದಟ್ಟ ಕಾಡಿನ ನಡುವೆ ಇರುವ ಬೆಣ್ಣೆ ಜಲಪಾತ ವೀಕ್ಷಣೆಗೆ ಸಪ್ಟೆಂಬರ್‌ನಿಂದ ಜನವರಿ ವರೆಗೆ ಪ್ರಶಸ್ತ ಕಾಲ. ಶಿರಸಿಯಿಂದ ಹಾಗೂ ಕುಮಟಾದಿಂದ ಕನಿಷ್ಟ 30-35 ಕಿಲೋಮೀಟರ್ ದೂರದಲ್ಲಿದೆ. ಜಲಪಾತದ ನೆತ್ತಿಯ ವರೆಗೂ ಕಚ್ಚಾ ರಸ್ತೆಯಿದೆ. ಅರ್ಧ ಕಿಲೋಮೀಟರ್ ನಡೆದುಕೊಂಡು ಹೋಗುವುದು ಅನಿವಾರ್ಯ. ಜಲಪಾತಕ್ಕೆ ತೆರಳ ಬೇಕಾದಲ್ಲಿ ಸ್ವಂತ ವಾಹನ ಅನಿವಾರ್ಯ. ತೀರಾ ಹಾಳಾಗಿರುವ ರಸ್ತೆಯಿಂದಾಗಿ ವಾಹನಗಳಲ್ಲಿ ಅನಿವಾರ್ಯ ಸಂದರ್ಭಗಳಿಗೆ ಬೇಕಾಗುವ ಸಲಕರಣೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಇಲ್ಲವಾದಲ್ಲಿ ಕಾಡಿನಲ್ಲಿ ಹೈರಾಣಾಗುವುದು ನಿಶ್ಚಿತ.


ಕಡ್ಡಾಯ ಸೂಚನೆ :
ಜಲಪಾತಕ್ಕೆ ಹಲವಾರು ಜನರು ಆಗಮಿಸುತ್ತಾರೆ. ಆಗಮಿಸುವವರಲ್ಲಿ ಪ್ರಮುಖ ವಿನಂತಿಯನ್ನು ಸ್ಥಳೀಯರು ಮಾಡುತ್ತಾರೆ. ಸಸ್ಯಶ್ಯಾಮಲೆಯ ಸ್ಥಳವನ್ನು ಮಲಿನ ಮಾಡುವುದು ಕಡ್ಡಾಯವಾಗಿ ನಿಷೇಧ. ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆಯದೇ ನಿಸರ್ಗವನ್ನು ಅದರ ಪಾಡಿಗೆ ಹಾಗೇ ಬಿಟ್ಟು ಬಿಡಬೇಕೆಂಬುದು ಪರಿಸರಾಸಕ್ತರ ಕಳಕಳಿ.