Wednesday, July 6, 2016

ಬನವಾಸಿ ದೇವಾಲಯಕ್ಕೆ ವನವಾಸ ಯೋಗ.... ಸೋರುತಿಹುದು ಮಧುಕೇಶ್ವರನ ದೇವಾಲಯ

ಪಂಪನ ನಾಡಿನಲ್ಲಿ ಇದೇನು ದುಸ್ಥಿತಿ? ಕಣ್ಮುಚ್ಚಿ ಕುಳಿತ ಪುರಾತತ್ವ ಇಲಾಖೆ

---------------------


ಕನ್ನಡದ ಪ್ರಪ್ರಥಮ ರಾಜರು ಎನ್ನಿಸಿಕೊಂಡಿರುವ ಕದಂಬರ ಆರಾಧ್ಯದೈವ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ. ಆದಿಕವಿ ಪಂಪ ಮೆಚ್ಚಿ ಹಾಡಿಹೊಗಳಿದ ಬನವಾಸಿಯ ಮಧುಕೇಶ್ವರನ ದೇವಸ್ಥಾನಕ್ಕೆ ವನವಾಸ ಯೋಗ ಪ್ರಾಪ್ತಿಯಾಗಿದೆ.
 ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಬನವಾಸಿಯ ಮಧುಕೇಶ್ವರ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದು ಎನ್ನುವ ಖ್ಯಾತಿಯನ್ನು ಹೊಂದಿದೆ. ಕದಂಬ ವಂಶಸ್ಥರು ತಮ್ಮ ರಾಜಧಾನಿಯಾದ ಬನವಾಸಿಯಲ್ಲಿ ನಿತ್ಯ ಆರಾಧನೆಗಾಗಿ ನಿಮರ್ಾಣ ಮಾಡಿರುವ ದೇವಾಲಯವೀಗ ಮಳೆ ಬಂದರೆ ಸಾಕು ಸೋರುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡು ದೇವಸ್ಥಾನ ಅಭಿವೃದ್ಧಿ ಮಾಡಬೇಕಾಗಿದ್ದ ಪುರಾತತ್ವ ಇಲಾಖೆ ಕಣ್ಮುಚ್ಚಿ ಕುಳಿತಿದೆ.
 ಕನ್ನಡದ ಪ್ರಪ್ರಥಮ ರಾಜಧಾನಿ ಎನ್ನುವ ಖ್ಯಾತಿ ಬನವಾಸಿಗಿದೆ. ಬನವಾಸಿಯ ಹೃದಯ ಭಾಗದಲ್ಲಿಯೇ ಇರುವ ಮಧುಕೇಶ್ವರ ದೇವಾಲದ ಬಗ್ಗೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವಿದೆ. ಈ ಪ್ರದೇಶದಲ್ಲಿಯೇ ಆದಿಕವಿ ಪಂಪ ಬನವಾಸಿಯ ಚೆಲುವನ್ನು ವಣರ್ಿಸಿದ್ದಾನೆ ಎನ್ನುವ ಪ್ರತೀತಿಯಿದೆ. ಅಪರೂಪದ ಶಿಲಾಮಂಚ ಈ ದೇವಸ್ಥಾನದ ಆವರಣದಲ್ಲಿಯೇ ಇದೆ. ಬೃಹತ್ ನಂದಿ, ಶಿಲಾದೇಗುಲ ಭವ್ಯವಾಗಿದೆ. ಕನರ್ಾಟಕದ ಪ್ರಾಚೀನ ಶಿಲಾ ವಿನ್ಯಾಸಗಳನ್ನು ಒಳಗೊಂಡಿರುವ ಮಧುಕೇಶ್ವರ ದೇವಾಲಯ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಶಿರಸಿಯಿಂದ 24 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದ್ದು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಪುರಾತತ್ವ ಇಲಾಖೆ ವ್ಯಾಪ್ತಿಗೆ ಈ ದೇವಾಲಯ ಸೇರ್ಪಡೆಯಾದ ನಂತರದಿಂದ ಇದುವರೆಗೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಲೇ ದೇವಾಲಯ ಜೀರ್ಣಗೊಳ್ಳುತ್ತಿದ್ದು ಮಳೆಗಾಲದಲ್ಲಿ ಸೋರಲು ಆರಂಭಿಸಿದೆ.
 ದೇವಸ್ಥಾನ ಸೋರುತ್ತಿರುವುದರಿಂದ ಆವರಣದಲ್ಲಿರುವ ಸುಂದರ ಕೆತ್ತನೆಯ ಕಂಬಗಳು, ಕೂಡುಗಟ್ಟೆಗಳಿಂದ ಆವೃತವಾದ ಸುಖನಾಸಿನಿ, ಮುಖಮಂಟಪ, ಪ್ರದಕ್ಷಿಣಾ ಪಥ, ದೇವಾಲಯದ ಗರ್ಭಗುಡಿ, ಆವರಣದಲ್ಲಿನ ಆಸನಗಳು, 7.5 ಅಡಿ ಎತ್ತರದ ಭವ್ಯ ನಂದಿ ವಿಗ್ರಹಗಳೆಲ್ಲ ಮಳೆ ನೀರಿನಲ್ಲಿ ತೋಯುತ್ತಿದೆ. ಬಹುತೇಕ ಶಿಲಾಕೃತಿಗಳು ಒದ್ದೆಯಾಗಿ ಹಸುರು ಬಣ್ಣಕ್ಕೆ ತಿರುಗುತ್ತಿದೆ. ನಿರಂತರವಾಗಿ ಮಳೆ ನೀರು ಸೋರುವುದರಿಂದ ಶೀಲಾಮಯ ದೇವಾಲಯದ ಪದರಗಳು ಜೀರ್ಣವಾಗುತ್ತಿವೆ. ಕಳೆದೆರಡು ವರ್ಷಗಳಿಂದ ಮಳೆ ಪ್ರಾರಂಭವಾಗುತ್ತಿದ್ದಂತೆ ಇದೇ ರೀತಿ ದೇವಾಲಯ ಸಂಪೂರ್ಣ ಸೋರುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಪುರಾತತ್ವ ಇಲಾಖೆ ಮಾತ್ರ ಜಾಣ ಕುರುಡುತನ ತೋರುತ್ತಿದೆ. ಪರಿಣಾಮವಾಗಿ ಇತಿಹಾಸದ ಭವ್ಯ ಕುರುಹೊಂದು ಸದ್ದಿಲ್ಲದೇ ನಶಿಸಿಹೋಗುತ್ತಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
 ಎರಡು ಸಾವಿರ ವರ್ಷಗಳಿಂದ ಮಳೆ ಬಿಸಿಲಿನ ಘಾಸಿಗೊಳಗಾಗಿ ನವೆದಿದ್ದ ಈ ಶಿಲಾದೇಗುಲ 1970ರ ದಶಕದಲ್ಲಿ ಮೊದಲ ಬಾರಿಗೆ ಸೋರಲು ಆರಂಭವಾಗಿತ್ತು. ಆ ಸಂದರ್ಭದಲ್ಲಿ ಪುರಾತತ್ವ ಇಲಾಖೆ ದೇವಸ್ಥಾನದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಮಧುಕೇಶ್ವರನ ದೇವಾಲಯದ ಮೇಲ್ಚಾವಣಿಯ ಗಾರೆ ಲೇಪವನ್ನು ತೆಗೆದು ರಾಸಾಯನಿಕ ಲೇಪವನ್ನು ಬಳಿದಿತ್ತೆನ್ನಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ದೇವಾಲಯ ಸೋರುವ ಪ್ರಕರಣ ಪುನರಾವತರ್ಿತವಾಗುತ್ತಿದೆ. 2010ರ ಆಸುಪಾಸಿನಲ್ಲಿ ಮತ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ಶಿಲೆಗಳಿಗೆ ಲೋಪವಾಗದಿರಲು ಬೆಲ್ಲ, ಮಣ್ಣು, ಸುಣ್ಣ, ದಾಲ್ಚಿನ್ನಿ ಎಣ್ಣೆ ಹಾಗೂ ರಾಸಾಯನಿಕಗಳನ್ನು ಸೇರಿಸಿ ಇಡೀ ದೇವಾಲಯದ ಮೇಲಿನ ಛಾವಣಿಯನ್ನು ಸ್ಥಳಿಕರನ್ನು ದೂರವೇ ಇಟ್ಟು ಪುರಾತತ್ವ ಇಲಾಖೆ ಗುಟ್ಟಾಗಿ ಮಾಡಿ ಮುಗಿಸಿತ್ತು. ಪುರಾತತ್ವ ಇಲಾಖೆಯ ಈ ಕಾರ್ಯದ ಬಗ್ಗೆ ಆ ಸಂದರ್ಭದಲ್ಲಿ ಅಸಮಧಾನವೂ ವ್ಯಕ್ತವಾಗಿತ್ತು. ಪಾರದರ್ಶಕತೆ ಇಲ್ಲದೆ ಈವರೆಗೆ ಮೂರ್ನಾಲ್ಕು ಬಾರಿ ದುರಸ್ಥಿ ಕಾರ್ಯ ಕೈಗೊಂಡರೂ ಸೋರುವುದು ಮಾತ್ರ ನಿಲ್ಲದಿರುವುದು ದುರಂತ ಎನ್ನುತ್ತಾರೆ ಬನವಾಸಿಗರು.
 ಇತಿಹಾಸ ಮರುಕುಳಿಸುತ್ತದೆ ಎನ್ನುವ ಗಾದೆಯ ಮಾತಿದ್ದರೂ ಬನವಾಸಿಯ ದೇವಾಲಯದ ಮಟ್ಟಿಗೆ ಸೋರುವ ಇತಿಹಾಸ ಮರುಕುಳಿಸುತ್ತಿರುವದು ಕನ್ನಡಿಗರಿಗೆ ಅಪಮಾನದ ಸಂಗತಿಯಾಗಿದೆ. ತಕ್ಷಣ ದೇವಾಲಯದ ಜೀಣೋದ್ಧಾರ ಕೈಗೊಂಡು ಕನ್ನಡದ ಹೆಮ್ಮೆಯ ದೇವಾಲಯವನ್ನು ರಕ್ಷಿಸಬೇಕು ಎನ್ನುವುದು ಕನ್ನಡಿಗರ ಒತ್ತಾಸೆಯಾಗಿದೆ. ಜಡ್ಡುಗಟ್ಟಿರುವ ಪುರಾತತ್ವ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಲವಾರು ನಿಯಮಗಳನ್ನು ಮುಂದಿಡುವ ಪುರಾತತ್ವ ಇಲಾಖೆ, ಬನವಾಸಿ ದೇವಾಲಯದ ವಿಷಯದಲ್ಲಿ ತೋರುತ್ತಿರುವ ಅಸಡ್ಡೆ ಅಕ್ಷಮ್ಯವಾದುದು. ಈ ಕುರಿತಂತೆ ಜವಾಬ್ದಾರಿ ಮರೆತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೂಡಲೇ ದೇವಸ್ಥಾನ ಸೋರುವುದನ್ನು ತಡೆಗಟ್ಟುವ ಅಗತ್ಯವೂ ಇದೆ. ಹೀಗಾದಾಗ ಮಾತ್ರ ಸಹಸ್ರ ವರ್ಷಗಳಿಂದ, ಕವಿಗಳಿಂದ ಹಾಡಿ ಹೊಗಳಿಸಿಕೊಂಡು ಬಂದಿರುವ ಬನವಾಸಿಯ ಮಧುಕೇಶ್ವರ ದೇಗುಲ ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಉಳಿಯಬಹುದಾಗಿದೆ.

********************

 ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ತೆಗೆದರೆ ದೇಗುಲ ಹಾಳಾಗುತ್ತದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಬನವಾಸಿ ದೇಗುಲ ಸೋರುತ್ತಿದ್ದರೂ ಕೂಡ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿ ಮರೆತ ಪುರಾತತ್ವ ಇಲಾಖೆ ಹೀಗೆ ಹಾಳುಗೆಡವುವ ಸಲುವಾಗಿ ದೇವಸ್ಥಾನವನ್ನು ವಹಿಸಿಕೊಳ್ಳಬೇಕಾಗಿತ್ತೇ? ಹುಬ್ಬಳ್ಳಿಯಲ್ಲಿ ಕುಳಿತ ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ದೇಗುಲ ಸೋರುವುದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಕ್ರೋಶದಿಂದದ ನುಡಿಯುತ್ತಿದ್ದಾರೆ.

Wednesday, June 29, 2016

ಈ ಬೆಕ್ಕಿಗೆ ಹಾಲು, ಅನ್ನ ಬೇಡವೇ ಬೇಡ : ಹಣ್ಣೆಂದರೆ ಪಂಚಪ್ರಾಣ

ತೆನಾಲಿರಾಮನ ಬೆಕ್ಕು ನೆನಪಿಸುವ ಮಾಜರ್ಾಲ

ವಿಕಟಕವಿ ತೆನಾಲಿ ರಾಮನ ವಿಚಿತ್ರ ಸ್ವಭಾವದ ಬೆಕ್ಕು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಹಾಲನ್ನು ಇಟ್ಟರೆ ಮಾರು ದೂರ ಓಡುವ ತೆನಾಲಿ ರಾಮನ ಬೆಕ್ಕಿನ ಕಥೆಯನ್ನು ಪ್ರತಿಯೊಬ್ಬರೂ ಕೇಳಿರುತ್ತಾರೆ. ಇಂತಹುದೇ ಒಂದು ಬೆಕ್ಕು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಟಕಲ್ನಲ್ಲಿದೆ. ತನ್ನ ವಿಶಿಷ್ಟ ಸ್ವಭಾವದಿಂದಾಗಿ ಮನಸೆಳೆಯುತ್ತಿದೆ.
 ಕಾನಸೂರು ಬಳಿಯ ದಂಟಕಲ್ನ ಗಂಗಾ ಹೆಗಡೆ ಎನ್ನುವವರ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ವಾಸವಿರುವ ಬೆಕ್ಕು ತನ್ನ ವಿಶಿಷ್ಟ ಗುಣದಿಂದಾಗಿ ಅಚ್ಚರಿಯನ್ನು ಹುಟ್ಟುಹಾಕಿದೆ. ಇವರ ಮನೆಯಲ್ಲಿರುವ ಬೆಕ್ಕು ಅನ್ನವನ್ನು ತಿನ್ನುವುದಿಲ್ಲ. ಬೆಕ್ಕಿಗೆ ಹಾಲು ಎಂದರೆ ಪಂಚಪ್ರಾಣ. ಮನೆ ಮನೆಗಳಲ್ಲಿ ಇಡುವ ಹಾಲನ್ನು ಕದ್ದು ಕುಡಿಯುವ ಬೆಕ್ಕು ಸವರ್ೇ ಸಾಮಾನ್ಯ. ಆದರೆ ಇವರ ಮನೆಯಲ್ಲಿರುವ ಬೆಕ್ಕು ಹಾಲನ್ನೂ ಕೂಡ ಕುಡಿಯುವುದಿಲ್ಲ. ಹಾಲಿನ ಪಾತ್ರೆಯನ್ನು ಬೆಕ್ಕಿನ ಎದುರು ಇಟ್ಟರೂ ಕೂಡ ಅದರ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗಾದರೆ ಬೆಕ್ಕು ಏನನ್ನು ಕುಡಿಯುತ್ತದೆ, ತಿನ್ನುತ್ತದೆ ಎನ್ನುವ ಕುತೂಹಲ ಸಹಜ. ಇದರ ಆಹಾರವೂ ಕೂಡ ಅಷ್ಟೇ ವಿಶಿಷ್ಟವಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
 ಗಂಗಾ ಹೆಗಡೆಯವರು ಸಾಕಿರುವ ಈ ಬೆಕ್ಕು ಅನ್ನದ ಬದಲಾಗಿ ವಿವಿಧ ಹಣ್ಣುಗಳನ್ನು ತಿನ್ನುತ್ತದೆ. ಹಲಸಿನ ಹಣ್ಣು, ಮಾವು, ಪೇರಲೆ ಹೀಗೆ ವಿವಿಧ ಹಣ್ಣುಗಳನ್ನು ತಿನ್ನುವ ಬೆಕ್ಕಿಗೆ ಪಪ್ಪಾಯಿ ಹಣ್ಣೆಂದರೆ ಪಂಚಪ್ರಾಣ. ದೊಡ್ಡ ಗಾತ್ರದ ಪಪ್ಪಾಯಿ ಹಣ್ಣನ್ನು ಒಂದೇ ದಿನದಲ್ಲಿ ತಿಂದು ಮುಗಿಸುವ ಈ ಬೆಕ್ಕು ಒಂದೆರಡು ಸಾರಿ ಪಪ್ಪಾಯಿ ಮರವನ್ನು ಏರಿ ಹಣ್ಣನ್ನು ತಿಂದಿರುವ ನಿದರ್ಶನಗಳೂ ಇದೆ. ಇದಲ್ಲದೇ ಅವಲಕ್ಕಿ ಕೂಡ ಬೆಕ್ಕಿನ ಇಷ್ಟದ ತಿಂಡಿಗಳಲ್ಲೊಂದು ಎಂಬುದು ಗಂಗಾ ಹೆಗಡೆಯವರ ಅಭಿಪ್ರಾಯ. ಹಲಸಿನ ಹಪ್ಪಳ, ಹಲಸಿನಕಾಯಿ ಚಿಪ್ಸ್, ಕರಿದ ಪದಾರ್ಥಗಳೆಂದರೆ ಈ ಬೆಕ್ಕಿಗೆ ಅಷ್ಟೇ ಅಚ್ಚುಮೆಚ್ಚು. ಪಪ್ಪಾಯಿ ಹಣ್ಣು ಹಾಗೂ ಕರಿದ ತಿಂಡಿಗಳಿಗಾಗಿ ಎಲ್ಲರಿದ್ದರೂ ಓಡಿ ಬರುತ್ತದೆ ಎಂದು ಅವರು ಮಾಹಿತಿ ನೀಡುತ್ತಾರೆ. ಹಾಲನ್ನೇ ಕುಡಿಯದ ಈ ಬೆಕ್ಕು ನೀರನ್ನು ಮಾತ್ರ ಕುಡಿಯುತ್ತದೆ ಎಂದೂ ಅವರು ಮಾಹಿತಿ ನೀಡುತ್ತಾರೆ.
 ಎರಡು ವರ್ಷಗಳ ಹಿಂದೆ ಕಾನಸೂರಿನ ಮುಸ್ಲೀಮರ ಮನೆಯೊಂದರಿಂದ ಎರಡು ಬೆಕ್ಕಿನ ಮರಿಗಳನ್ನು ತಂದಿದ್ದೆವು. ಎರಡೂ ಬೆಕ್ಕಿನ ಮರಿಗಳಿಗೆ ಹಾಲನ್ನು ಕೊಟ್ಟರೆ ದೂರ ಹೋಗುತ್ತಿದ್ದವು. ಅನ್ನವನ್ನು ಹಾಕಿದರೂ ತಿನ್ನುತ್ತಿರಲಿಲ್ಲ. ದಿನದಿಂದ ದಿನಕ್ಕೆ ಬೆಕ್ಕಿನಮರಿಗಳು ಸೊರಗಲು ಆರಂಭಿಸಿದ್ದವು. ಅವುಗಳನ್ನು ನೋಡಲು ಆಗದೇ ಬೇರೆ ಬೇರೆ ಆಹಾರಗಳನ್ನು ಅವುಗಳ ಮುಂದೆ ಇಟ್ಟೆವು. ಕೊನೆಗೆ ಅವಲಕ್ಕಿ, ಹಣ್ಣು ಈ ಮುಂತಾದ ಆಹಾರಗಳನ್ನು ಸೇವಿಸಲು ಆರಂಭಿಸಿದವು. ಕಳೆದ ವರ್ಷ ಒಂದು ಬೆಕ್ಕು ಸಾವನ್ನಪ್ಪಿತು. ಆದರೆ ಈಗ ಇರುವ ಇನ್ನೊಂದು ಬೆಕ್ಕು ವಿಶಿಷ್ಟ ಆಹಾರಾ ಪದ್ಧತಿಯಿಂದಲೇ ಜೀವಿಸುತ್ತಿದೆ ಎಂದು ಗಂಗಾ ಹೆಗಡೆ ತಿಳಿಸುತ್ತಾರೆ.
 ಸಾಕು ಪ್ರಾಣಿಗಳು ಹಣ್ಣುಗಳನ್ನು ತಿನ್ನುವ ಬಗ್ಗೆ ಆಗೊಮ್ಮೆ ಈಗೊಮ್ಮೆ ಕೇಳಿರುತ್ತೇವೆ. ಆದರೆ ಅನ್ನವನ್ನೇ ತಿನ್ನದೇ, ಹಾಲನ್ನು ಕುಡಿಯದೇ ಹಣ್ಣನ್ನು, ಕರಿದ ತಿಂಡಿಗಳನ್ನು ಮಾತ್ರ ಮೆಲ್ಲುವ ಇಂತಹ ಬೆಕ್ಕು ಅಪರೂಪವೇ ಸರಿ. ತನ್ನಿಷ್ಟದ ಆಹಾರದ ಬದಲಾಗಿ ಫಲಾಹಾರವನ್ನೇ ಮೈಗೂಡಿಸಿಕೊಂಡ ಈ ಬೆಕ್ಕು ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ನಿಲ್ಲುತ್ತದೆ. ಇಂತಹ ವಿಶಿಷ್ಟ ಗುಣದ ಬೆಕ್ಕಿನ ಕುರಿತು ಮಾಹಿತಿ ಪಡೆದವರೂ ಕೂಡ ಬೆಕ್ಕನ್ನು ವೀಕ್ಷಿಸಿ, ಅದರ ಗುಣದ ಬಗ್ಗೆ ಅಚ್ಚರಿ ಪಡಲು ಆರಂಭಿಸಿದ್ದಾರೆ.
.......
ನಾನು ಇದುವರೆಗೂ 25ಕ್ಕೂ ಹೆಚ್ಚಿನ ಬೆಕ್ಕುಗಳನ್ನು ಸಾಕಿದ್ದೇನೆ. ಆದರೆ ಇಷ್ಟು ವಿಶಿಷ್ಟ ಆಹಾರ ಪದ್ಧತಿಯ ಬೆಕ್ಕನ್ನು ನೋಡಿದ್ದು ಇದೇ ಮೊದಲು. ಮೊದ ಮೊದಲು ಇದು ವಿಚಿತ್ರವೆನ್ನಿಸಿದ್ದರೂ ಕೂಡ ಈಗ ಈ ಗುಣಗಳೇ ವಿಶಿಷ್ಟ ಎನ್ನಿಸುತ್ತಿದೆ.
ಗಂಗಾ ಹೆಗಡೆ
ದಂಟಕಲ್
ಬೆಕ್ಕಿನ ಮಾಲಕಿ


Saturday, May 28, 2016

ಅಜ್ಜ ನೆಟ್ಟ ಆಲದ ಮರ

ಅಜ್ಜ ನೆಟ್ಟ ಆಲದ ಮರಕ್ಕೆ
ನೂರಾರು ಬೀಳಲು
ಬುಡದಲ್ಲಿ ಕುಳಿತ ಗೊಲ್ಲನ ಕೈಯಲ್ಲಿ
ಒಂದೇ ಒಂದು ಕೊಳಲು |

ಆಲದ ಮರದಲಿ ಹಕ್ಕಿಯ ಕಲರವ
ಬುಡದಲಿ ದನಗಳು ಅಂಬಾ
ಒಟ್ಟಿಗಿದ್ದೂ ಬಿಟ್ಟಿರಲಾರೆ
ಕಲಿಯಬೇಕಿದೆ ತುಂಬಾ |

ಅಜ್ಜನ ಕೋಲಿದು ನನ್ನೆಯ ಕುದುರೆ
ಬಾಯಿಪಾಟದ ಏಟು
ಅಜ್ಜಿಯ ಕವಳದ ತಬಕಲಿ ಕಲ್ಲು
ಇದೇ ರೂಪಾಯಿ ನೋಟು |

ಆಲದ ತೋಳು ಮೈಲುಗಳಾಚೆ
ಹಾಸಿದೆ ಪ್ರೀತಿಯ ಚಪ್ಪರ
ಒಡಲಲಿ ನೆರಳು ಬದುಕಿಗೆ ರಕ್ಷಣೆ
ತಡೆದಿದೆ ಗಾಳಿಯ ಅಬ್ಬರ |

ಅಪ್ಪನ ಸಾಲಕ್ಕೆ ಅಮ್ಮನೇ ಜಾಮೀನು
ಬದುಕಲಿ ಬೇರೆ ಏನು
ಹಗಲಿನ ಕೋಪಕೆ ಇರುಳಲಿ ಮದ್ದು
ಉಂಡು ಮಲಗಿದ ಮೇಲೆ ಇನ್ನೇನು |

ಆಲದ ಬಿಳಲಿಗೆ ಗೆದ್ದಲು ಕಾಟ
ನಗರದ ಕಡೆಗೆ ಓಟ
ಆಲದ ಬುಡದಲಿ ನೆರಳೇ ಇಲ್ಲ
ಕಟುಕನ ಉರುಳಿನ ಕಾಟ |

ಆಲದ ಮರದಲಿ ಎಲೆಯೇ ಇಲ್ಲ
ತಂಪಿನ ನೆಳಲು ನಾಪತ್ತೆ
ಬುಡದಲ್ಲಿ ಅಂಬಾ ಹಸುಗಳೇ ಇಲ್ಲ
ಜೀವಕೆ ಬಂದ ಆಪತ್ತೇ |

ಆಲದ ಬಿಳಲು ಮಕ್ಕಳ ಪಾಲಿಗೆ
ಜೀವನ ಜೋಕಾಲಿ
ಅಂದಿಗೆ ಮುಗಿದಿದೆ ಇಂದೇನಿಲ್ಲ
ಬಿಳಲು ಖಾಲಿ ಪೀಲಿ |

-------------

(ಈ ಕವಿತೆಯನ್ನು ಬರೆದಿರುವುದು ಮೇ.26, 2016ರಂದು)

(ಈ ಕವಿತೆಯನ್ನು ಮೇ.28ರಂದು ಶಿರಸಿ ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಥಮ ಪ್ರಾಂತ ಸಮ್ಮೇಳನದಲ್ಲಿ ವಾಚಿಸಲಾಗಿದೆ. ಕೆಲವು ದಿನಗಳಿಂದ ಥ್ರೋಟ್ ಇನ್ಫೆಕ್ಷನ್ ಆಗಿದ್ದ ಕಾರಣ ನನಗೆ ಕವಿತೆ ವಾಚಿಸಲು ಸಾಧ್ಯವೇ ಆಗಲಿಲ್ಲ. ಕೊನೆಗೆ ನನ್ನ ಬದಲಾಗಿ ಮಿತ್ರ ಗಿರಿಧರ ಕಬ್ನಳ್ಳಿ ವಾಚಿಸಿದರು. ಕೊನೆಗೆ ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರ ಬಳಿ ಆಶಿವರ್ಾದ ಪಡೆದುಕೊಂಡೆ. ಆ ಸಂದರ್ಭದಲ್ಲಿ ದೊಡ್ಡರಂಗೇಗೌಡರು ನಿನ್ನಲ್ಲಿ ಒಳ್ಳೊಳ್ಳೆಯ ಕವಿತೆ ಬರಲಿ. ಧ್ವನಿಯನ್ನು ಮೊದಲು ಸರಿ ಮಾಡಿಕೊ. ನಿನ್ನ ಕವಿತೆಯನ್ನು ಚನ್ನಾಗಿ ವಾಚಿಸು ಎಂದು ಹರಸಿದರು. ಧನ್ಯನಾದೆ ಗುರುವರ್ಯ

Thursday, May 26, 2016

ಶತಮಾನದಲ್ಲಿ ಇದೇ ಮೊದಲ ಬಾರಿ ಹರಿವು ನಿಲ್ಲಿಸಿದ ಅಘನಾಶಿನಿ/ ಅಳಿವಿನ ಅಂಚಿನಲ್ಲಿವೆ ನೀರುನಾಯಿಗಳು

ಬಿಸಿಲ ಬೇಗೆಗೆ ಬಸವಳಿದ ಮಲೆನಾಡು

ಮಲೆನಾಡಿನಲ್ಲಿ ಬರದ ಬೇಗೆಗೆ ಜಲಮೂಲಗಳು ಬತ್ತಲು ಆರಂಭಿಸಿದೆ. ಮಲೆನಾಡಿನ ನದಿಗಳು, ಹಳ್ಳಗಳು ಬತ್ತಿವೆ. ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಘನಾಶಿನಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಹರಿವು ನಿಲ್ಲಿಸಿದೆ.

 ಅಘನಾಶಿನಿ ನದಿ ಮುಖ್ಯವಾಗಿ ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುತ್ತದೆ. ನಂತರ ಈ ಎರಡೂ ಕವಲುಗಳು ಸಿದ್ದಾಪುರ ತಾಲೂಕಿನ ಮಾನಿಹೊಳೆ ಎಂಬಲ್ಲಿ ಸಂಗಮವಾಗಿ ಉಂಚಳ್ಳಿಯಲ್ಲಿ ಜಲಪಾತದ ಮೂಲಕ ಧುಮ್ಮಿಕ್ಕಿ ಕರಾವಳಿ ಪ್ರದೇಶವನ್ನು ಸೇರುತ್ತದೆ. ನಂತರ ಕುಮಟಾ ತಾಲೂಕಿನಲ್ಲಿ ಹರಿದು ಹೋಗುವ ನದಿ ಅಘನಾಶಿನಿ ಎಂಬಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರವನ್ನು ಸೇರುವುದಕ್ಕೂ ಮೊದಲು 98 ಕಿಲೋಮೀಟರ್ ದೂರ ಹರಿಯುತ್ತದೆ. ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
 ಅಘನಾಶಿನಿ ನದಿ ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಶತಮಾನಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಕೆಪ್ಪ ಜೋಗ ಎನ್ನುವ ಹೆಸರನ್ನು ಪಡೆದು, ಎಲ್ಲರ ಕಿವಿ ಕಿವುಡಾಗುವಂತೆ ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲತಾದ ಸದ್ದು ಅಡಗಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ.
 ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಎಪ್ರಿಲ್ ತಿಂಗಳಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿತ್ತು. ಮೇ ತಿಂಗಳ ಆರಂಭದಲ್ಲಿಯೇ ನೀರು ಹರಿಯುವುದು ನಿಂತಿದೆ. ಶಿರಸಿ ನಗರಕ್ಕೆ ಅಘನಾಶಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನೀರು ಹರಿಯುವುದು ನಿಂತಿರುವ ಪರಿಣಾಮ ಶಿರಸಿ ನಗರಕ್ಕೆ ನೀರಿನ ಸರಬರಾಜು ನಿಂತಿದೆ. ಇದರಿಂದಾಗಿ ಶಿರಸಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಇದಲ್ಲದೇ ಅಘನಾಶಿನಿ ನದಿಯ ನೀರನ್ನೇ ಅವಲಂಭಿಸಿದ್ದ ಶಿರಸಿ ತಾಲೂಕಿನ ರೇವಣಕಟ್ಟಾ, ಸರಕುಳಿ, ಸಿದ್ದಾಪುರ ತಾಲೂಕಿನ ಹಿತ್ಲಕೈ, ಬಾಳೂರು, ಬಾಳೇಸರ ಮುಂತಾದ ಗ್ರಾಮಗಳಲ್ಲಿ ನೀರಿಲ್ಲದೇ ಜನಸಾಮಾನ್ಯರು ಹೈರಾಣಾಗಿದ್ದಾರೆ.
 ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ಕೂಡ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆಯಲ್ಲಿ ನೀರಿಲ್ಲ. ಭತ್ತಗುತ್ತಿಗೆ ಹೊಳೆಯ ಮೂಲ ಎನ್ನಿಸಿಕೊಂಡಿರುವ ಹನುಮಂತಿ ಕೆರೆ ಹೂಳು ತುಂಬಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯಲ್ಲಿಯೂ ಕೂಡ ನೀರಿಲ್ಲ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗಿದೆ.
ದೇವರ ಅಭಿಷೇಕಕ್ಕೂ ನೀರಿಲ್ಲ :
 ಅಘನಾಶಿನಿ ನದಿ ತೀರದಲ್ಲಿದ್ದ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕಕೂ ನೀರಿಲ್ಲ. ದೇವರ ಪೂಜೆಗಾಗಿ ಕಿಲೋಮೀಟರ್ ದೂರದಿಂದ ನೀರು ಹೊತ್ತು ತರಬೇಕಾದಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಗುಡ್ಡೇತೋಟದ ಕೋಟೆ ವಿನಾಯಕ, ಬಾಳೂರಿನ ದೇವಾಲಯಗಳಲ್ಲಿ ದೇವರ ಅಭಿಷೇಕಕ್ಕೆ ದೂರದ ಸ್ಥಳಗಳಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಅಘನಾಶಿನಿ ನದಿಯಲ್ಲಿಯೇ ಆಳದ ಹೊಂಡಗಳಲ್ಲಿ ನಿಂತುಕೊಂಡಿರುವ ನೀರನ್ನು ತಂದು ದೇವಾಲಯ, ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಮಲೆನಾಡಿನ ಹಳ್ಳಿಗಳಲ್ಲಿಯೂ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
 ಕೇವಲ ಅಘನಾಶಿನಿ ಮಾತ್ರವಲ್ಲ ಮಲೆನಾಡಿನಲ್ಲಿ ಹಲವಾರು ನದಿಗಳು ಬತ್ತಲು ಆರಂಭವಾಗಿದೆ. ಯಲ್ಲಾಪುರಕ್ಕೆ ನೀರಿನ ಮೂಲವಾಗಿದ್ದ ಬೇಡ್ತಿ ನದಿ ಈಗಾಗಲೇ ಬತ್ತಿ ಹೋಗಿದೆ. ಶಾಲ್ಮಲಾ ನದಿ ಕೂಡ ಬತ್ತಲು ಆರಂಭವಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಹಳ್ಳಗಳು, ಜಲಮೂಲಗಳೆಲ್ಲ ಸಂಪೂರ್ಣವಾಗಿ ಬತ್ತಿಹೋಗಿದೆ. ಬರದ ಬೇಗೆ ಮಲೆನಾಡಿಗರನ್ನು ಹೈರಾಣಾಗಿಸಿದೆ. ಯಾವಾಗ ಮಳೆ ಬರುತ್ತದೆಯೋ ಎಂದು ಜನಸಾಮಾನ್ಯರು ಆಗಸದತ್ತ ಮುಖ ಮಾಡುತ್ತಿದ್ದಾರೆ.

--------

 ಅಘನಾಶಿನಿ ನದ ಈ ಹಿಂದೆ ಯಾವಾಗಲೂ ಬತ್ತಿರಲಿಲ್ಲ. ನನಗೆ ತಿಳಿದಂತೆ ಅಘನಾಶಿನಿ ನದಿ ಯಾವಾಗಲೂ ನೀರಿನ ಹರವನ್ನು ನಿಲ್ಲಿಸಿರಲಿಲ್ಲ. 1870ರ ದಶಕದಲ್ಲಿ ಭಾರಿ ಬರಗಾಲ ಬಂದ ಸಂದರ್ಭದಲ್ಲಿ ಉಳಿದ ಕಡೆಗಳಲ್ಲಿ ನೀರಿನ ಬವಣೆ ಆಗಿತ್ತಂತೆ. ಆದರೆ ಅಘನಾಶಿನಿ ನದಿ ಅಂತಹ ಸಂದರ್ಭದಲ್ಲಿಯೂ ಕೂಡ ಬತ್ತಿರಲಿಲ್ಲ. ಈ ಸಾರಿ ಸಂಪೂರ್ಣವಾಗಿ ಬತ್ತಿಹೋಗಿದೆ. ಗುಡ್ಡೇತೋಟದ ಕೋಟೆ ವಿನಾಯಕ ದೇವರಿಗೆ ಅಭಿಷೇಕ ಮಾಡಲು ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.ದತ್ತಾತ್ರೆಯ ಭಟ್
ಅರ್ಚಕರು

------------

 ಬರದ ಕಾರಣ ಅಘನಾಶಿನಿ ನದಿ ಶತಮಾನಗಳ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಹರಿವನ್ನು ನಿಲ್ಲಿಸಿದೆ. ಈ ಅಘನಾಶಿನಿ ನದಿಯ ಹಲವು ಕಡೆಗಳಲ್ಲಿ ಬೀಡು ಬಿಟ್ಟು, ಆವಾಸಸ್ಥಾನ ಮಾಡಿಕೊಂಡಿದ್ದ ಅಪರೂಪದ ನೀರು ನಾಯಿಗಳು ಬಿಸಿಯಾಗಿರುವ ನೀರು ಹಾಗೂ ಆಹಾರದ ಅಭಾವದಿಂದಾಗಿ ಸಾವಿನ ಅಂಚನಲ್ಲಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ 98 ಕಿಲೋಮೀಟರ್ ದೂರದ ವರೆಗೆ ಹರಿದು ಸಮುದ್ರ ಸೇರುವ ಅಘನಾಶಿನಿ ನದಿಯಲ್ಲಿ ಅಪರೂಪದ ಜೀವಿಯಾಗಿರುವ ನೀರುನಾಯಿಗಳು ವಾಸಸ್ಥಾನ ಮಾಡಿಕೊಂಡಿವೆ. ಕುಮಟಾ ತಾಲೂಕಿನ ಉಪ್ಪಿನಪಟ್ಟಣದಿಂದ ಉಂಚಳ್ಳಿ ಜಲಪಾತದ ವರೆಗಿನ ಪ್ರದೇಶದಲ್ಲಿ, ಘಟ್ಟದ ಮೇಲಿನ ಸಿದ್ದಾಪುರ ತಾಲೂಕಿನ ಮಾನಿಹೊಳೆಯ ಸುತ್ತಮುತ್ತ, ಶಿರಸಿ-ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಬಾಳಗಾರ, ನಾಡಗುಳಿ ಮುಂತಾದ ಪ್ರದೇಶದಲ್ಲಿ ಅಘನಾಶಿನಿ ನದಿಯಲ್ಲಿ ನೀರುನಾಯಿಗಳು ವಾಸಿಸುತ್ತವೆ. ಅಘನಾಶಿನಿ ನದಿಯ ಆಳದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇವು ಗುಂಪು ಗುಂಪಾಗಿ ವಾಸ ಮಾಡುತ್ತಿವೆ. ಆದರೆ ಅಘನಾಶಿನಿ ನದಿ ಬರದ ಬೇಗೆಯಿಂದಾಗಿ ಹರಿವು ನಿಲ್ಲಿಸಿರುವ ಕಾರಣ ಅಪರೂಪದ ನೀರುನಾಯಿಗಳು ಸಾವಿನ ಅಂಚಿನಲ್ಲಿವೆ.
 ಇಂಗ್ಲೀಷಿನಲ್ಲಿ ಲೂತ್ರಾ ಲೂತ್ರಾ ಎನ್ನುವ ಹೆಸರಿನಿಂದ ಕರೆಯಲ್ಪಡುವ ನೀರುನಾಯಿಗಳು ಭಾರತದಲ್ಲಿ ಕಾಶ್ಮೀರ, ಅಸ್ಸಾಂಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ದಕ್ಷಿಣ ಭಾರತದ ಹಲವು ಕಡೆಗಳಲ್ಲಿಯೂ ನೀರುನಾಯಿಗಳನ್ನು ಕಾಣಬಹುದಾಗಿದೆ. ಆದರೆ ಕನರ್ಾಟಕದಲ್ಲಿ ಈ ನೀರು ನಾಯಿಯ ಆವಾಸ ಸ್ಥಾನ ಬಹಳ ಸೀಮಿತವಾಗಿದೆ. ಶುದ್ಧ ನೀರು ಇರುವ ಆಳವಾದ ನದಿಗಳಲ್ಲಿ ಇವು ಜೀವಿಸುತ್ತವೆ. ಉತ್ತರ ಕನ್ನ ಜಿಲ್ಲೆಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ಮಾತ್ರ ಈ ನೀರು ನಾಯಿಗಳು ಕಾಣಸಿಗುತ್ತವೆ. ಶತಮಾನಗಳ ಹಿಂದೆ ಶರಾವತಿ ಹಾಗೂ ಕಾಳಿ ನದಿಗಳಲ್ಲಿಯೂ ನೀರುನಾಯಿಗಳು ಇದ್ದವಂತೆ. ಆದರೆ ನಂತರದ ದಿನಗಳಲ್ಲಿ ಶರಾವತಿ, ಕಾಳಿ ನದಿಗಳಲ್ಲಿ ನೀರುನಾಯಿಗಳು ನಶಿಸಿಹೋದವು. ಆದರೆ ಅಘನಾಶಿನಿ ನದಿಯಲ್ಲಿ ಮಾತ್ರ ಸಂತಾನವೃದ್ಧಿ ಮಾಡಿಕೊಂಡು ಬದುಕಿದ್ದವು. ಆಳದ ನೀರಿನಲ್ಲಿ ಇರುವ ಮೀನುಗಳು, ಏಡಿಗಳು, ಕಪ್ಪೆಗಳು, ಕೊಕ್ಕರೆ, ನೀರುಕೋಳಿ, ಬಾತುಕೋಳಿಗಳು ನೀರುನಾಯಿಗಳ ಪ್ರಮುಖ ಆಹಾರ. ನದಿ ಸಮೀಪದ ಬಂಡೆಗಳ ಪೊಟರೆಗಳಲ್ಲಿ ಇವು ವಾಸ ಮಾಡುತ್ತವೆ. ನೋಡಲು ಬಹು ಸುಂದರವಾಗಿರುವ, ಮುದ್ದುಮುದ್ದಾಗಿರುವ ನೀರುನಾಯಿಗಳು ಒಮ್ಮೆಗೆ ಗರಿಷ್ಟ 4 ಮರಿಗಳನ್ನು ಹೆರುತ್ತವೆ. 60 ದಿನಗಳ ಅವಧಿಯಲ್ಲಿ ಗರ್ಭಧರಿಸಿ ಮರಿ ಹಾಕುತ್ತವೆ.
 ಅಘನಾಶಿನಿ ನದಿಯಲ್ಲಿ ವಾಸ ಮಾಡುತ್ತಿದ್ದ ನೀರುನಾಯಿಗಳಿಗೆ ಈವರೆಗೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈ ಸಾರಿ ಬರದ ಬೇಗೆಯಿಂದಾಗಿ ಅಘನಾಶಿನಿ ನದಿ ಹರಿವು ನಿಲ್ಲಿಸಿ ಸಂಪೂರ್ಣ ಬತ್ತಿದೆ. ಆಳದ ಗುಂಡಿಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವಲ್ಲಿ ನೀರು ನಾಯಿ ಬದುಕಿದೆಯಾದರೂ ಬದಲಾದ ಪ್ರಾಕೃತಿಕ ಕಾರಣಗಳಿಂದಾಗಿ ಸಾವಿನ ಅಂಚಿನಲ್ಲಿವೆ. ಅಲ್ಲಲ್ಲಿ ನಿಂತಿರುವ ನೀರು ಬಿಸಿಲಿನ ಬೇಗೆಗೆ ಬಿಸಿಯಾಗಿದೆ. ನೀರಿನಲ್ಲಿದ್ದ ಮೀನುಗಳು ಈಗಾಗಲೇ ಸತ್ತು ತೇಲುತ್ತಿವೆ. ತಂಪು ನೀರಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ನೀರುನಾಯಿಗಳು ಏಕಾಏಕಿ ಬಿಸಿಯಾಗಿರುವ ನೀರಿನಿಂದಾಗಿ ಚಡಪಡಿಸುತ್ತಿವೆ. ಸೂಕ್ಷ್ಮವಾಗಿರುವ ನೀರುನಾಯಿಗಳ ಚರ್ಮ ಇದಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದಲ್ಲದೇ ಪ್ರಮುಖ ಆಹಾರವಾಗಿರುವ ಕಪ್ಪೆ, ಮೀನು, ಏಡಿಗಳೆಲ್ಲ ಬಿಸಿಲಿನ ಬೇಗೆಗೆ ಸತ್ತಿವೆ. ನೀರುಕೋಳಿ, ಬಾತುಕೋಳಿಗಳು ನೀರಿನ ಮೂಲವನ್ನು ಅರಸಿ ಬೇರೆ ಕಡೆಗೆ ವಲಸೆ ಹೋಗಿವೆ. ಇದರಿಂದಾಗಿ ಆಹಾರ ಕೂಡ ಸಿಗದಂತೆ ಆಗಿರುವ ನೀರುನಾಯಿಗಳು ಸಾವಿನ ಅಂಚನ್ನು ತಲುಪುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮೂನರ್ಾಲ್ಕು ದಿನಗಳ ಕಾಲ ಅಲ್ಪ ಮಳೆಯಾಗಿದೆ. ಮಳೆಯ ಕಾರಣದಿಂದ ವಾತಾವರಣ ತಂಪಾಗಿದ್ದರೂ ಕೂಡ ನದಿಗಳಲ್ಲಿ ನೀರು ಹರಿದಿಲ್ಲ. ಅಘನಾಶಿನಿ ನದಿಯ ಪಾತ್ರದಲ್ಲಿ ಮಳೆ ಸುರಿದಿದ್ದರೂ ಇದರಿಂದಾಗಿ ಬತ್ತಿದ ನದಿಗೆ ಜೀವ ಬಂದಿಲ್ಲ. ಪರಿಣಾಮವಾಗಿ ಸಾವಿನ ಅಂಚು ತಲುಪಿರುವ ನೀರುನಾಯಿಗಳ ಬದುಕು ಇನ್ನೂ ದುರಂತದತ್ತಲೇ ಸಾಗುತ್ತಿದೆ. ಜೂನ್ ತಿಂಗಳಿನಲ್ಲಿ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಈಗಾಗಲೇ ಸಾವಿನ ಅಂಚಿನಲ್ಲಿರುವ ನೀರುನಾಯಿಗಳು ಇನ್ನೂ 15 ದಿನಗಳ ಕಾಲ ಸ್ವಲ್ಪ ನೀರಿನಲ್ಲಿ, ಆಹಾರವಿಲ್ಲದೇ ಬದುಕುವುದು ಅಸಾಧ್ಯ ಎನ್ನುವಂತಾಗಿದೆ.
 ಅಘನಾಶಿನಿ ನದಿ ಹರಿವು ನಿಲ್ಲಿಸಿದ ಪರಿಣಾಮ ಈಗಾಗಲೇ ಮೀನು, ಕಪ್ಪೆ, ಏಡಿ ಮುಂತಾದ ಜಲಚರಗಳ ಮೇಲೆ ಉಂಟಾಗಿದ್ದು ಅದರ ನಂತರದ ಹಂತ ಎಂಬಂತೆ ನೀರುನಾಯಿಗಳು ಬಲಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ನದಿಯ ಅಕ್ಕಪಕ್ಕದಲ್ಲಿರುವ ಅಪ್ಪೆಮರಗಳು, ಮಿಡಿಮಾವಿನ ಮರಗಳಮೇಲೂ ಉಂಟಾಗಲಿದೆ. ಈ ನದಿ ಪಾತ್ರದಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ನದಿಯನ್ನು ಪುನಶ್ಚೇತನಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಎಲ್ಲ ಜೀವ ಸಂಕುಲ ನಾಮಾವಶೇಷವಾಗುವುದರಲ್ಲಿ ಸಂದೇಹವೇ ಇಲ್ಲ

---------

 ನೀರುನಾಯಿಗಳು ಅಪರೂಪದ ಪ್ರಾಣಿಗಳು. ಅಳಿವಿನ ಅಂಚಿನಲ್ಲಿವೆ. ಇವನ್ನು ದೊಡ್ಡ ಪ್ರಮಾಣದಲ್ಲಿ ಚರ್ಮಕ್ಕಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಇದೀಗ ನದಿ ಬತ್ತಿ ಹೋಗಿರುವಂತಹ ಅಪರೂಪದ ಕಾರಣದಿಂದಾಗಿ ಸಾಯುತ್ತಿದೆ. ಯಾವುದೇ ನದಿಯಲ್ಲಿ ಕನಿಷ್ಟ ಪಾರಿಸಾರಿಕ ಹರಿವು ಇರುವುದು ಅನಿವಾರ್ಯ. ಕನಿಷ್ಟ ಪಾರಿಸಾರಿಕ ಹರಿವು ಇದ್ದಾಗ ಮಾತ್ರ ನದಿ ನೀರನ್ನು ಅವಲಂಬಿಸಿರುವ ಜೀವಿ, ವೃಕ್ಷ, ಪಕ್ಷಿ ಸಂಕುಲಗಳು ಜೀವಂತ ಇರುತ್ತವೆ. ಅದು ನಿಂತರೆ ಏನು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ನದಿ ಹರಿವು ನಿಂತಾಗಲೇ ಈ ರೀತಿ ದುರಂತ ಸಂಭವಿಸುತ್ತಿದೆ. ಇನ್ನು ನದಿ ತಿರುವು ಮಾಡಿದರೆ ಎಂತಹ ದುಷ್ಪರಿಣಾಮ ಆಗಬಹುದು ಎನ್ನುವುದು ಊಹೆಗೂ ನಿಲುಕುವುದಿಲ್ಲ.ಬಾಲಚಂದ್ರ ಸಾಯಿಮನೆ
ಪರಿಸರ ವಿಜ್ಞಾನಿ


(VISHWAVANI ARTICLE)

Friday, May 20, 2016

ಹಿಂದೂ ರಥೋತ್ಸವಕ್ಕೆ ರಥ ಕಟ್ಟುವವರು ಮುಸ್ಲೀಮರು

ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಭಾವೈಕ್ಯತೆ

 ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅನೇಕ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಅನೇಕ ಕಡೆಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ಹಿಂದೂ-ಮುಸ್ಲೀಮರು ಹಲವಾರು ಸಂದರ್ಭಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಇಂತಹದ್ದೊಂದು ಭಾವೈಕ್ಯತೆಗೆ ಸೋಂದಾ ಸ್ವರ್ಣವಲ್ಲಿ ಮಠದ ರಥೋತ್ಸವ ಕೂಡ ಸಾಕ್ಷಿಯಾಗುತ್ತ ಬಂದಿದೆ.
 ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುದಶರ್ಿಯ ದಿನದಂದು ಲಕ್ಷ್ಮೀನೃಸಿಂಹ ದೇವರ ರಥೋತ್ಸವ ನಡೆಯುತ್ತದೆ. ಈ ರಥೋತ್ಸವದಲ್ಲಿ ಎಳೆಯಲ್ಪಡುವ ರಥವನ್ನು ಮುಸ್ಲೀಮರೇ ಕಟ್ಟುತ್ತಾರೆ. ಹಿಂದೂಗಳ ಮಠವಾದ ಸ್ವರ್ಣವಲ್ಲಿ ಮುಸ್ಲೀಮರು ರಥ ನಿಮರ್ಾಣ ಮಾಡುತ್ತಾರೆ. ಶತ ಶತಮಾನಗಳಿಂದಲೂ ಈ ಆಚರಣೆ ನಡೆಯುತ್ತಲೇ ಬಂದಿರುವುದು ಸ್ವರ್ಣವಲ್ಲಿ ಮಠದ ಹಾಗೂ ಲಕ್ಷ್ಮೀನೃಸಿಂಹ ದೇವರ ರಥೋತ್ಸವದ ವೈಶಿಷ್ಟ್ಯವಾಗಿದೆ.
 ಪ್ರಾಚೀನ ಕಾಲದಿಂದಲೂ ಸ್ವರ್ಣವಲ್ಲಿಯಲ್ಲಿ ಸೋದೆ ಪೇಟೆಯ ಖಾಜಿ ಕುಟುಂಬವು ರಥವನ್ನು ಕಟ್ಟುವ ಕೆಲಸವನ್ನು ಶೃದ್ಧೆಯಿಂದ ಮಾಡಿಕೊಂಡು ಬರುತ್ತಿದೆ. ರಥ ಕಟ್ಟುವ ಕೆಲಸ ಮಾತ್ರವಲ್ಲದೇ ಹಬ್ಬ ಹರಿದಿನಗಳ ನಗಾರಿ ಬಾರಿಸುವ ಕೆಲಸವನ್ನೂ ಈ ಕುಟುಂಬಕ್ಕೆ ಸೇರಿದ ಮುಸ್ಲೀಮರು ಮಾಡಿಕೊಂಡು ಬರುತ್ತಿದ್ದಾರೆ. ಈ ಕುರಿತಂತೆ ಸ್ವರ್ಣವಲ್ಲಿ ಮಠದಲ್ಲಿ ವಿಚಾರಿಸಿದಾಗ ಸ್ವರ್ಣವಲ್ಲಿ ಮಠದ ಸುತ್ತಮುತ್ತಲ ಎಲ್ಲಾ ಮಠಗಳಲ್ಲಿಯೂ ಮುಸ್ಲೀಮರೇ ರಥವನ್ನು ಕಟ್ಟುತ್ತಿದ್ದರು. ಆದರೆ ಈಗ ಸ್ವರ್ಣವಲ್ಲಿ ಮಠದಲ್ಲಿ ಮಠದಲ್ಲಿ ಮಾತ್ರ ಮುಸ್ಲೀಮರು ರಥ ಕಟ್ಟುವ ಕಾರ್ಯ ನಡೆಯುತ್ತಿದೆ.
 ಹೊನ್ನಳ್ಳಿ ಎಂದು ಜನರ ಆಡುಮಾತಿನಲ್ಲಿ ಕರೆಸಿಕೊಳ್ಳುವ ಸ್ವರ್ಣವಲ್ಲಿ ಮಠದಲ್ಲಿ ನಡೆಯುವ ರಥೋತ್ಸವವು ವರ್ಷದ ಕೊಟ್ಟಕೊನೆಯ ರಥೋತ್ಸವ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ರಥೋತ್ಸವಕ್ಕೂ 15 ದಿನ ಮೊದಲು ಅಂದರೆ ಅಕ್ಷಯ ತೃತೀಯಾದ ದಿನ ರಥವನ್ನು ತೆಗೆದು ಅದಕ್ಕೆ ಸೋದೆ ಪೇಟೆಯ ಅಬ್ದುಲ್ ಕರೀಬ್ ಖಾಸಾಬ್ (ಬಾಬು) ತಂಡವು ರಥವನ್ನು ವ್ಯವಸ್ಥಿತವಾಗಿ ಕಟ್ಟಲು ಆರಂಭಿಸುತ್ತದೆ. ಹಿಂದೆ ರಥವನ್ನು ಕಟ್ಟಲು ಅಬ್ದುಲ್ ಕರೀಂ ಖಾ ಸಾಬ್, ಅಬ್ದುಲ್ ರಜಾಕ್ ಅಬ್ದುಲ್ ರಸೀದ್, ಖಾಸೀಮ್ ಉಸ್ಮಾನ್ ಖಾನ್ ಹಾಗೂ ಇಬ್ರಾಹೀಮ್ ಉಸ್ಮಾನ್ ಖಾನ್ ಈ ನಾಲ್ಕು ಕುಟುಂಬಕ್ಕೆ ಸೇರಿದ ಸದಸ್ಯರುಗಳು ರಥ ಕಟ್ಟಲು ಶೃದ್ಧೆಯಿಂದ ಶ್ರಮಿಸುತ್ತಿದ್ದರು. ಇದಲ್ಲದೇ ಮಠದ ಇನ್ನಿತರ ಧಾಮರ್ಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈ ಕುಟುಂಬದಲ್ಲಿ ಅದೆಷ್ಟೋ ಜನರು ಉದ್ಯೋಗದ ನಿಮಿತ್ತ ಬೇರೆಡೆಗೆ ತೆರಳಿದ್ದಾರೆ. ಈಗ ಅಬ್ದುಲ್ ಕರೀಮ್ ಖಾ ಸಾಬ್ ಕುಟುಂಬ ಮಾತ್ರ ರಥ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.

 ರಥ ನಿಮರ್ಾಣಕ್ಕಾಗಿ ಪ್ರತಿ ವರ್ಷವೂ ಹೊನ್ನಾವರ ತಾಲೂಕಿನ ಹಳ್ಳಲಿಯೊಂದರಿಂ ಅಜಮಾಸು 8000 ರು. ಮೌಲ್ಯದ ವಿಶಿಷ್ಟವಾದ ಕತ್ತವನ್ನು ತರಲಾಗುತ್ತದೆ. ಹೊಸ ಕತ್ತವನ್ನು ರಥದ ಆರಂಭಿಕ ಕೆಲಸಕ್ಕೆ ಬಳಕೆ ಮಾಡಿದರೆ ಹಳೆಯದಾಗಿರುವ ಕತ್ತವನ್ನು ಮರುವರ್ಷ ಎರಡನೆಯ ಹಂತದ ರಥ ಕಟ್ಟಲು ಬಳಕೆ ಮಾಡಲಾಗುತ್ತದೆ. ಒಮ್ಮೆ ಕತ್ತವನ್ನು ತೆಗೆದುಕೊಂಡು ಬಂದರೆ ಅದನ್ನು ಐದು ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. 15 ದಿನಗಳ ಅಂತರದಲ್ಲಿ ಖಾಜಿ ಕುಟುಂಬವು ರಥದ ಸಂಪೂರ್ಣ ನಿಮರ್ಾಣದ ಕಾರ್ಯಗಳನ್ನು ನಡೆಸುತ್ತದೆ. ರಥದ ಪತಾಕೆ ಕಟ್ಟುವವರೆಗೂ ನಿರಂತರವಾಗಿ ಈ ತಂಡದ ಕೆಲಸಗಳು ನಡೆಯುತ್ತವೆ. ಇದಲ್ಲದೇ ರಥೋತ್ಸವದ ದಿನ ರಥ ಸಾಗುವ ದಾರಿಯುದ್ದಕ್ಕೂ ರಥದ ನಿಯಂತ್ರಣಕ್ಕಾಗಿ ಸನ್ನೆಯನ್ನು ಹಾಕುವುದು, ರಥೋತ್ಸವದ ನಂತರದಲ್ಲಿ ರಥಕ್ಕೆ ಕಟ್ಟಲಾದ ಪರಿಕರಗಳನ್ನು ಬಿಚ್ಚುವುದು, ಅವುಗಳನ್ನು ಸ್ವಸ್ಥಾನದಲ್ಲಿ ಇಡುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಜವಾಬ್ದಾರಿಗಳನ್ನೂ ಕೈಗೊಳ್ಳುತ್ತದೆ. ರಥವನ್ನು ಕಟ್ಟಿಕೊಮಡು ಬರುತ್ತಿರುವ ಖಾಜಿ ಕುಟುಂಬಕ್ಕೆ ಪ್ರತಿ ವರ್ಷ ರಥ ನಿಮರ್ಾಣ ಮಾಡಿದ್ದಕ್ಕೆ ಪ್ರತಿಯಾಗಿ ದವಸ-ಧಾನ್ಯಗಳನ್ನು ಗೌರವಧನವಾಗಿ ನೀಡಲಾಗುತ್ತದೆ.
 ಹವ್ಯಕರ ಮಠವಾಗಿರುವ ಸ್ವರ್ಣವಲ್ಲಿಯ ರಥೋತ್ಸವದ ರಥವನ್ನು ಮುಸ್ಲೀಮರೇ ಕಟ್ಟುವ ಮೂಲಕ ಭಾವೈಕ್ಯತೆ, ಧರ್ಮ ಸಾಮರಸ್ಯವನ್ನು ಜಗತ್ತಿಗೆ ಸಾರಲಾಗುತ್ತಿದೆ. ಹಿಂದೂ-ಮುಸ್ಲಿಮರ ಅಪರೂಪದ ಭಾವೈಕ್ಯ ಕಾರ್ಯಕ್ಕೆ ಇದೊಂದು ನಿದರ್ಶನವಾಗಿದೆ.