ಪ್ರದೀಪ ತಕ್ಷಣ ಸಾವರಿಸಿಕೊಂಡಿದ್ದ. `ಯಾಕೆ ಸುಮ್ಮ ಸುಮ್ಮನೇ ನನ್ನ ಮೇಲೆ ಅನುಮಾನ ಪಡುತ್ತೀರಿ? ನಾನು ಈ ಮೊದಲೇ ಹೇಳಿದ್ದೇನಲ್ಲ. ನಾನು ಪ್ರೈವೆಟ್ ಡಿಟೆಕ್ಟಿವ್ ಅಂತ. ಹೌದು. ಸುಮ್ಮನೇ ಇಂತಹ ಕೆಲಸಗಳನ್ನೆಲ್ಲ ಮಾಡುತ್ತಿರುತ್ತೇನೆ. ಈಗ ನಾನು ಪೋನ್ ಮಾಡಿದ್ದೂ ಕೂಡ ಪೊಲೀಸ್ ಸ್ಟೇಷನ್ನಿಗೆ. ಇಲ್ಲಿ ಮಾತನಾಡಿದರಲ್ಲ ಕಳ್ಳರು ಬಂದಿದ್ದಾರೆ ಅಂತ. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾತನಾಡಿ ಚರ್ಚೆ ಮಾಡಿದ್ದಷ್ಟೇ..' ಎಂದ.
`ಹೌದಾ? ಹಾಗಾದರೆ ಅದನ್ನು ಮುಚ್ಚಿಡುವುದೇಕೆ? ಏನಂದರು ಪೊಲೀಸರು? ಯಾಕೆ ನಮ್ಮ ಬಳಿ ಈ ವಿಷಯವನ್ನು ಮುಚ್ಚಿಡಬೇಕು ಅಂತ ಮಾಡ್ತೀಯಾ?' ವಿಕ್ರಮ ಕೇಳಿದ್ದ.
`ಯಾರು ಮುಚ್ಚಿಡಲು ನೋಡಿದ್ದು ಮಾರಾಯಾ? ನಾನು ಹೇಳುವ ಮೊದಲೇ ನೀನೇ ಕೇಳ್ತಾ ಇದ್ದೆ. ನೋಡು ಕಳ್ಳರು ಬಂದಿರುವುದು ಸುಳ್ಳು ಸುದ್ದಿ ಅಂತೆ. ನೇಪಾಳಿಗಳು ಬಂದಿದ್ದಾರೆ ಎನ್ನುವುದೂ ಸುಳ್ಳು ಸುದ್ದಿ. ವೈಜಯಂತಿಪುರದಲ್ಲಿ ನೇಪಾಳಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ ಎನ್ನುವ ಸುದ್ದಿ ನಿಜ. ಆದರೆ ಕೂಲಿ ಕೆಲಸಕ್ಕೆ ಬಂದಿದ್ದ ನೇಪಾಳಿ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಹೆಡೆಮುರಿಕಟ್ಟಿ ಪೊಲೀಸರಿಗೆ ಕೊಟ್ಟಿದ್ದಾರೆ. ಪಾಪ ಆ ನೇಪಾಳಿಗೆ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲವಂತೆ. ಉಳಿದಂತೆ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಭಾಗದಲ್ಲಿ ಕಳ್ಳರು ಬಂದಿದ್ದಾರೆ ಎನ್ನುವುದು ಮಾತ್ರ ಸುಳ್ಳು ಸುದ್ದಿಯೇ ಹೌದು. ಮರಗಳ್ಳರು ಈ ರೀತಿ ಹಬ್ಬಿಸಿರಬಹುದು ಎಂಬುದು ಪೊಲೀಸರ ಗುಮಾನಿ..' ಎಂದ ಪ್ರದೀಪ.
ಸ್ವಲ್ಪ ನಿರಾಳನಾದ ವಿಕ್ರಮ. ಆದರೂ ಪ್ರದೀಪನ ಮೇಲಿದ್ದ ಸಂದೇಹ ಮಾತ್ರ ಕಡಿಮೆಯಾಗಿರಲಿಲ್ಲ. `ನಿನ್ನ ಮಾತನ್ನು ನಂಬಬಹುದಾ?' ತೀಕ್ಷ್ಣವಾಗಿ ಕೇಳಿದ್ದ.
`ನಂಬಿದರೆ ನಂಬಿ, ಬಿಟ್ಟರೆ ಬಿಡಿ. ನಾನು ಹೇಳಿದ್ದು ನಿಜ. ನಾನು ಹೇಳಿದ ಮಾತ್ರಕ್ಕೆ ನೀವು ನಂಬಲೇಬೇಕು ಎನ್ನುವುದೇನೂ ಇಲ್ಲ. ನಂಬುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು. ನಾನು ಜಾಸ್ತಿ ಏನೂ ಹೇಳಲಾರೆ..' ಪ್ರದೀಪ ಅಷ್ಟೇ ಒರಟಾಗಿ ಉತ್ತರ ನೀಡಿದ್ದ.
ಅಷ್ಟರಲ್ಲಿ ನಡುವೆ ಬಾಯಿ ಹಾಕಿದ ವಿನಾಯಕ `ಸುಮ್ಮನೆ ಯಾಕೆ ಅನುಮಾನ ಎಲ್ಲ. ನಾವು ವಾದ ಮಾಡಿ ಪ್ರಯೋಜನ ಇಲ್ಲ. ಸುಮ್ಮನೇ ಕಾಲಕ್ಷೇಪ ಮಾಡೋದಷ್ಟೇ ಆಗ್ತು. ಮುಂದೇನು ಮಾಡೋದು ಅನ್ನೊದನ್ನ ಮೊದಲು ಹೇಳಿ..' ಎಂದ.
`ಸುಮ್ಮನೇ ಇರಲಿಕ್ಕಂತೂ ಬರುವುದಿಲ್ಲ. ಈಗಾಗಲೇ ಇಷ್ಟು ದೂರ ಬಂದಾಗಿದೆ. ಮುಂದೆ ಏನಾದರೂ ಮಾಡಲೇಬೇಕು..' ವಿಕ್ರಮ ಕೂಡ ಹೇಳಿದ್ದ.
`ಮೊದಲು ಬಾಬುವನ್ನು ಹುಡುಕೋಣ. ಆತನನ್ನು ಮಾತನಾಡಿಸೋಣ. ನಿಧಾನವಾಗಿ ಕೇಳೋಣ. ಇಲ್ಲವಾದಲ್ಲಿ ನಮ್ಮ ವರಸೆಯಲ್ಲಿ ಆತನ ಬಾಯಿ ಬಿಡಿಸೋಣ. ಆದಷ್ಟು ಬೇಗ ಈ ಕೆಲಸ ಆಗಬೇಕು. ಸೂರ್ಯ ಶಿಖಾರಿ ಗುಂಪಿನ ಬಗ್ಗೆ ಆತನಲ್ಲಿ ಮಾಹಿತಿ ಸಿಕ್ಕರೂ ಸಿಗಬಹುದು. ಅಥವಾ ಇನ್ನೊಬ್ಬನನ್ನೂ ಮಾತನಾಡಿಸಬಹುದು. ಸಾಧ್ಯವಾದರೆ ಈಗಲೇ ಹೊರಡೋಣ ಬನ್ನಿ..' ಎಂದವನೇ ಪ್ರದೀಪ ಅವಸರಿಸಿದ. ವಿಕ್ರಮ, ವಿನಾಯಕ ಹಾಗೂ ವಿಜೇತಾರೂ ಪ್ರದೀಪನ ಜಾಡು ಹಿಡಿದರು.
****
`ಇಷ್ಟು ದಿನಗಳಾದರೂ ನಿಮ್ಮ ಕೈಯಲ್ಲಿ ಏನೂ ಆಗಲಿಲ್ಲ ಎಂದರೆ ಏನರ್ಥ.? ದಂಟಕಲ್ಲಿಗೆ ಬಂದಿರುವವರನ್ನು ಹೊಡೆದು ಹಾಕಿ, ಇಲ್ಲವೇ ಬೆದರಿಸಿ ವಾಪಾಸ್ ಕಳಿಸಿ. ಅದಾಗದಿದ್ದಲ್ಲಿ ಅವರನ್ನು ಕೊಂದು ಹಾಕಿ ಎಂದು ಹೇಳಿದ್ದೆ. ಯಾಕೆ ಈ ಕೆಲಸ ಮುಂದುವರಿದಿಲ್ಲ?' ತಂಡದ ನಾಯಕ ಅಬ್ಬರಿಸುತ್ತಿದ್ದರೆ ಎದುರಿದ್ದವರು ಬೆದರಿ ತೊಪ್ಪೆಯಾಗುತ್ತಿದ್ದರು.
`ನಾವು ಮಾಡದ ಕೆಲಸವಿಲ್ಲ ಬಾಸ್. ನಕ್ಸಲರ ಪಟ್ಟ ಕಟ್ಟಿ ಪೊಲೀಸ್ ಠಾಣೆಗೆ ಹಾಕಿದ್ದರೂ ಅವರು ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆ ನೋಡಿ. ಬಹುಶಃ ಬಂದವರಿಗೆ ದೊಡ್ಡ ದೊಡ್ಡವರ ಕೈ ಇರಬೇಕು ಅನ್ನಿಸುತ್ತದೆ..' ಎಂದ ಬಂಟನೊಬ್ಬ.
`ವಾಟ್. ಪೊಲೀಸ್ ಸ್ಟೇಷನ್ನಿಗೆ ಕಳಿಸಿದ್ದರೂ ಏನೂ ಆಗಲಿಲ್ಲವಾ? ಹಾಗಾದರೆ ಅವರು ಸಾಮಾನ್ಯರಲ್ಲ ಅನ್ನಿಸುತ್ತದೆ. ಬಾಸು ಗೌಡನ ತಂಡದ ಮೇಲೆ ದಾಳಿ ನಡೆಸಿದಾಗಲೇ ಅಂದುಕೊಂಡಿದ್ದೆ. ಅದು ನಿಜವಾಗುತ್ತಿದೆ. ಈ ಭಾಗದವರ್ಯಾರೂ ಮರಕಡಿಯುವವರ ವಿರುದ್ಧ ತಿರುಗಿ ಬೀಳುವುದಿಲ್ಲ. ನಮ್ಮವರ ಮೇಲೆ ತಿರುಗಿ ಬಿದ್ದಿದ್ದಾರೆ ಎಂದರೆ ಇವರ್ಯಾರೋ ಭಲೆ ಆಸಾಮಿಗಳೇ ಇರಬೇಕು ಎಂದುಕೊಂಡೆ. ಅದು ನಿಜವಾಗುತ್ತಿದೆ..' ಸ್ವಗತದಲ್ಲಿ ಹೇಳಿಕೊಂಡಂತೆ ಹೇಳಿದ ಗುಂಪಿನ ನಾಯಕ.
`ಹೌದು ಬಾಸ್. ಅವರು ಮನೆ ಮನೆಗೆ ಹೋಗಿ ನಮ್ಮವರನ್ನು ಹುಡುಕುತ್ತಿದ್ದಾರಂತೆ. ಮೊನ್ನೆ ಬಾಸು ಗೌಡನ ಮನೆಯ ಬಳಿಗೂ ಹೋಗಿದ್ದರಂತೆ. ಬಾಸು ಗೌಡನ ಮನೆಯವರು ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾರಂತೆ. ಈಗಾಗಲೇ ಸತ್ತು ಹೋಗಿದುವ ನಮ್ಮ ತಂಡದ ವ್ಯಕ್ತಿಯ ಮನೆಗೂ ಹೋಗಿ ಬಂದಿದ್ದಾರಂತೆ. ಆತ ಸಹಜವಾಗಿ ಸತ್ತಿದ್ದಾನಾ ಅಥವಾ ಅಸಹಜವಾಗಿ ಸಾವನ್ನಪ್ಪಿದ್ದಾನಾ ಎಂದೆಲ್ಲ ಹುಡುಕಿದ್ದಾರಂತೆ. ಮತ್ತೆ ಇನ್ಯಾರ ಬಳಿ ಮಾಹಿತಿಗೆ ಹೋಗುತ್ತಾರೋ ಗೊತ್ತಿಲ್ಲ. ಬಹುಶಃ ಸರ್ಕಾರ ನಮ್ಮ ವಿರುದ್ಧ ಯಾರಾದರೂ ವಿಶೇಷ ಅಧಿಕಾರಿಗಳನ್ನು ಇವರ ರೂಪದಲ್ಲಿ ಕಳುಹಿಸಿರಬಹುದು..' ಜೊತೆಯಲ್ಲಿದ್ದವನು ಹಲುಬಿಕೊಂಡಿದ್ದ.
`ಓಹೋ ಇಷ್ಟೆಲ್ಲ ನಡೆದಿದೆಯಾ? ಇದನ್ನೆಲ್ಲ ಮೊದಲೇ ತಿಳಿಸಲು ನಿಮಗೇನು ಆಗಿತ್ತು. ಇಷ್ಟು ದಿನ ಸುಮ್ಮನೇ ಇದ್ರಲ್ಲ. ತಲೆ ಹಾಳಾಗಿತ್ತಾ ನಿಮಗೆ. ಇದಕ್ಕೆ ಏನಾದರೂ ಮಾಡಲೇಬೇಕು. ಇಲ್ಲವಾದಲ್ಲಿ ನಮಗೆ ಉಳಿಗಾಲ ಇಲ್ಲ. ನಮ್ಮ ಬೆಂಡೆತ್ತಿ ಬಿಡುತ್ತಾರೆ..' ಎಂದು ಆಲೋಚಿಸಿದ ಆ ಗುಂಪಿನ ನಾಯಕ ಕೂಡಲೇ ಹೇಳಿದ `ನೋಡಿ ಇನ್ನು ನಾವು ಸುಮ್ಮನಿದ್ದರೆ ಆಗುವುದಿಲ್ಲ. ಕೂಡಲೇ ಆ ತಂಡದ ಮೇಲೆ ದಾಳಿ ಮಾಡಿ. ಪದೇ ಪದೆ ದಾಳಿ ಮಾಡಿ. ಸಧ್ಯಕ್ಕೆ ಅವರನ್ನು ಕೊಲ್ಲುವುದು ಬೇಡ. ಆದರೆ ಒಬ್ಬಿಬ್ಬರ ಕೈಕಾಲು ಮುರಿದು ಹಾಕಿ. ಹೆದರಿ ವಾಪಾಸು ಹೋಗುವಂತೆ ಮಾಡಿ. ಇದೆಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತೀರಿ ಎನ್ನುವುದು ನಿಮಗೆ ಬಿಟ್ಟಿದ್ದು. ತಿಳೀತಾ?' ಕಟ್ಟಾಜ್ಞೆ ಮಾಡಿದ್ದ. ಉಳಿದವರು ತಲೆಯಲ್ಲಾಡಿಸಿ ಹೊರಟಿದ್ದರು.
ಮುಂದಿನ ದಿನಗಳು ಇನ್ನಷ್ಟು ತೀಕ್ಷ್ಣವಾಗಲಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ದಾಳಿ ಮಾಡಲು ಸಜ್ಜಾಗಿದ್ದರು. ಈ ದಾಳಿಯಲ್ಲಿ ಒಂದೆರಡು ನಡೆಯಬಾರದಂತಹ ಘಟನೆಗಳೂ ನಡೆಯಲಿದ್ದವು. ಅದೇನಿರಬಹುದು?
****
ಬಾಬುವಿನ ಮನೆಗೆ ಹೋಗುವ ವೇಳೆಗೆ ಬಾಬು ಮನೆಯಲ್ಲಿ ಮಲಗಿದ್ದ. ಹಗಲು ಹೊತ್ತಿನಲ್ಲಿ ಇವನ್ಯಾಕೆ ನಿದ್ದೆ ಮಾಡುತ್ತಿದ್ದಾನೆ ಎನ್ನುವ ಅನುಮಾನ ಪ್ರತಿಯೊಬ್ಬರಲ್ಲಿಯೂ ಕಾಡಲು ಆರಂಭಿಸಿದ್ದರೂ ಅರೆಘಳಿಗೆಯಲ್ಲಿಯೇ `ರಾತ್ರಿ ಮರಗಳ್ಳತನ ಮಾಡಲು ಹೋಗುವ ಕಾರಣ ಹಗಲಿನಲ್ಲಿ ನಿದ್ದೆ ಮಾಡುತ್ತಾನೆ. ನೈಟ್ ಡ್ಯೂಟಿ ಮನುಷ್ಯ..' ಎಂದುಕೊಂಡರು ಎಲ್ಲರೂ.
`ಯಾರೋ ಬಂದಿದ್ದಾರೆ. ಅರ್ಜೆಂಟು ಮಾತನಾಡಬೇಕಂತೆ..' ಎಂಬ ಹೆಂಡತಿಯ ಮಾತಿಗೆ ದಿಗ್ಗನೆ ಎದ್ದು ಕುಳಿತಿದ್ದ ಬಾಬು. `ಯಾರು ಬಂದಾರೆ? ಎಂತದಂತೆ ಅವರದ್ದು..? ನಾ ಮನೆಯಾಗೆ ಇಲ್ಲ ಅಂತ ಹೇಳಬೇಕಿತ್ತು..' ಹೆಂಡತಿ ಬಳಿ ಗದರಿದ ಬಾಬು.
`ಅಯ್ಯೋ ನಾ ಹೇಳಿದ್ದು ಕೇಳಿಸ್ಕಣಲಿಲ್ಲ. ಪೋಲೀಸರು ಅಂದರಪ್ಪಾ.. ನಾಲ್ಕೈದ್ ಜನ ಐದಾರೆ. ಅವ್ರೇ ಮನೆಯೊಳಿಕೆ ಬರ್ತೆ ಅಂತ ಹೇಳ್ತಿದ್ರು. ನಾನೇ ಬ್ಯಾಡ ಅಂತೇಳಿ ಬಂದೆ. ಎಂತಾ ಭಾನಗಡಿ ಮಾಡೀರಿ..?' ಹೆಂಡತಿ ಕೇಳಿದ್ದಳು.
ಪೊಲೀಸರು ಬಂದಿದ್ದಾರಂತೆ ಎನ್ನುವ ಮಾತು ಕೇಳಿ ಬಾಬು ಬೆಚ್ಚಿ ಬಿದ್ದಿದ್ದ. ಪೊಲೀಸರು ಯಾಕ್ ಬಂದ್ರಪ್ಪಾ.? ಎಂದುಕೊಂಡವನು ಹೊರಕ್ಕೆ ಹೋಗಿ ಮಾತನಾಡಲಾ ಎಂದುಕೊಂಡ. ಆದರೆ ಧೈರ್ಯ ಸಾಲಲಿಲ್ಲ. ಮಾತನಾಡುವ ಬದಲು ಓಡಿ ಹೋಗುವುದೇ ಒಳ್ಳೆಯದು ಎಂದುಕೊಂಡ. ತಕ್ಷಣವೇ ಮನೆಯ ಹಿತ್ತಲಕಡೆಯ ಬಾಗಿಲಿನ ಬಳಿ ಹೋದ. ಬಾಗಿಲು ತೆಗೆದು ಓಡಲಾರಂಭಿಸಿದ. ಆಗ ಇದ್ದಕ್ಕಿದ್ದಂತೆ ಒಬ್ಬಾತ ಅಡ್ಡ ಬಂದು ಬಾಬುವಿನ ಕಾಲಿಗೆ ತನ್ನ ಕಾಲನ್ನು ಅಡ್ಡ ಹಾಕಿಬಿಟ್ಟಿದ್ದ. ಕಾಲು ಎಡವಿ ಬಾಬು ದಭಾರನೆ ಬಿದ್ದಿದ್ದ. ಕಾಲು ಎಡವಿದ ವ್ಯಕ್ತಿ ಯಾರೆಂದು ನೋಡಿದರೆ ಅವನೇ ಪ್ರದೀಪ.
ಹಿಂಬಾಗಿಲಿನಿಂದ ಓಡಿ ಹೋಗಬಹುದು ಎನ್ನುವ ಅನುಮಾನ ಬಂದಿದ್ದರಿಂದ ಪ್ರದೀಪ ಅದಕ್ಕೆ ಸಜ್ಜಾಗಿದ್ದ. ಹಿಂಬಾಗಿಲಿನ ಬಳಿ ಹೋಗಿ ನಿಂತುಕೊಂಡಿದ್ದ. ವಿಕ್ರಮ ಹಾಗೂ ವಿನಾಯಕರಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನವನ್ನೂ ನೀಡಿದ್ದ. ಪ್ರದೀಪ ಆಲೋಚಿಸಿದಂತೆಯೇ ಆಗಿತ್ತು. ಬಾಬು ದಬಾರನೆ ಬಿದ್ದಿದ್ದ. `ಅಯ್ಯಪ್ಪೋ.. ನಾ ಸತ್ತೆ..' ಎಂದು ಬಾಬು ಒರಲಿದ್ದ.
ಬಿದ್ದವನನ್ನು ಹಿಡಿದು ಪ್ರದೀಪ ಹೆಡೆಮುರಿ ಕಟ್ಟಿದ. ಇದನ್ನು ನೋಡಿದ ಬಾಬುವಿನ ಹೆಂಡತಿ ರೋಧಿಸಲು ಆರಂಭಿಸಿದ್ದಳು. ಗಂಡ ಏನೋ ಭಾನಗಡಿ ಮಾಡಿಕೊಂಡಿದ್ದಾನೆ ಎಂಬುದು ಹೆಂಡತಿಗೆ ಖಾತ್ರಿಯಾಗಿತ್ತು. ಅದಕ್ಕೆ ದೊಡ್ಡದಾಗಿ ಅಳಲು ಶುರುವಿಟ್ಟುಕೊಂಡಿದ್ದಳು.
ಮೊದಲಿನಿಂದಲೂ ಗಂಡನ ಬಗ್ಗೆ ಅನುಮಾನವಿತ್ತು ಬಾಬುವಿನ ಮಡದಿಗೆ. ಮೂರು ವರ್ಷ ಬಾಂಬೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಮನೆ ಬಿಟ್ಟು ಹೋಗಿದ್ದ ಬಾಬು ದಿಲ್ ದಾರ್ ಆಗಿ ವಾಪಾಸ್ ಬಂದಿದ್ದ. ವಾಪಾಸು ಬಂದವನ ಕೈಯಲ್ಲಿ ಬಾಂಬೆಯಲ್ಲಿ ಎಂತಾ ಕೆಲಸ ಮಾಡ್ತಿದ್ರಿ ಎಂದು ಮಡದಿ ಕೇಳಿದ್ದಳು. ಅದಕ್ಕವನನು ಹೊಟೆಲ್ ಉದ್ಯಮ ಎಂದು ಹೇಳಿದ್ದ. ಗಂಡನ ಉದ್ಯಮದ ಬಗ್ಗೆ ಊರು ತುಂಬಾ ಹೇಳಿಕೊಂಡು ಬಂದಿದ್ದ ಮಡದಿಗೆ ಒಂದಿಬ್ಬರು `ಅದೆಂಗೆ ನಿನ್ ಗಂಡ ಮೂರು ವರ್ಷದಾಗೆ ಅಷ್ಟೆಲ್ಲ ದುಡ್ ಮಾಡ್ಕಂಡ್ ಬಂದಾನೆ? ದಿಟವಾಗಿಯೂ ನಿನ್ ಗಂಡ ಹೊಟೆಲ್ ಮಾಡ್ತಿದ್ನಾ ಅಥವಾ ಬೇರೆ ಇನ್ನೇನಾದರೂ ದಂಧೆ ಮಾಡ್ ತಿದ್ನಾ..?' ಎಂದು ಕೇಳಿದಾಗಲೇ ಅನುಮಾನದ ಕಿಡಿ ಹೊತ್ತುಕೊಂಡಿತ್ತು. ನಂತದರ ದಿನಗಳಲ್ಲಿ ಬಾಂಬೆಯಿಂದ ಬಂದರು, ಕೇರಳದಿಂದ ಬಂದರು, ಬೆಂಗಳೂರಿನವರು ಎಂದು ಹೇಳಿಕೊಂಡು ಬಹಳಷ್ಟು ಜನರು ಅಪರಿಚಿತರು ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ತನಗೆ ಅರ್ಥವಾಗದ ಭಾಷೆಯಲ್ಲಿ ಅವರು ಮಾತನಾಡುತ್ತಿದ್ದರು. ಅವರು ಬಂದು ಹೋದ ಮರುದಿನ ಬಾಬು ಮನೆಗೆ ಬೇಕಾದಂತಹ ದುಬಾರಿ ವಸ್ತುಗಳನ್ನೆಲ್ಲ ತಂದು ಗುಡ್ಡೆ ಹಾಕುತ್ತಿದ್ದ. ದೊಡ್ಡದೊಂದು ಟಿವಿ, ಪ್ರಿಜ್, ಗ್ರೈಂಡರ್, ಮಿಕ್ಸರ್ ಹೀಗೆ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳನ್ನು ತಂದು ಹಾಕುತ್ತಿದ್ದರೆ ಮೊದ ಮೊದಲು ಖುಷಿ ಪಟ್ಟಿದ್ದಳು. ಆದರೆ ನಂತರ ಮಾತ್ರ ಆಕೆಗೆ ಭಯವಾಗತೊಡಗಿತ್ತು.
ದಿನ ಕಳೆದಂತೆ ಬಾಬುವಿನ ದಿನಚರಿಯೂ ಬದಲಾಗತೊಡಗಿತ್ತು. ಮೊದಮೊದಲು ಗಂಡ ಪ್ರತಿದಿನ ರಾತ್ರಿ ಮನೆಯಲ್ಲಿ ಉಳಿದು ನಿದ್ದೆ ಮಾಡುತ್ತಿದ್ದ. ಆಮೇಲಾಮೇಲೆ ವಾರದಲ್ಲಿ ಒಂದು ದಿನ ರಾತ್ರಿ ಅದೇನೋ ಕೆಲಸವಿದೆ ಎಂದು ಹೋಗುತ್ತಿದ್ದ. ಬೆಳಿಗ್ಗೆ ಬಂದು ಮನೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ. ಆಮೇಲಾಮೇಲೆ ಬಾಬು ವಾರಕ್ಕೆರಡು ದಿನ, ನಂತರದ ದಿನಗಳಲ್ಲಿ ಮಾರಕ್ಕೆ ನಾಲ್ಕು ದಿನ ರಾತ್ರಿ ಹೊರಕ್ಕೆ ಹೋಗುವ ಚಾಳಿ ಶುರುವಾಗಿತ್ತು. ಗಂಡನನ್ನು ಒಂದೆರಡು ಸಾರಿ ದಬಾಯಿಸಿ ಕೇಳಿಯೂ ಬಿಟ್ಟಿದ್ದಳು ಆಕೆ. ಅದಕ್ಕವನು ಶಿರಸಿಯಲ್ಲಿ ಕೆಲಸ ಸಿಕ್ಕಿದೆ. ರಾತ್ರಿ ಪಾಳಿಯ ಕೆಲಸ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆನೆ. ದೊಡ್ಡದೊಂದು ಬ್ಯಾಂಕಿನ ಎಟಿಎಂ ಮಿಷಿನ್ ಕಾಯುವ ಕೆಲಸ ಎಂದು ಹೇಳಿದ್ದ. ಆದರೆ ಹೆಂಡತಿ ನಂಬಿರಲಿಲ್ಲ. ಬಾಬು ಸುಳ್ಳು ಹೇಳುತ್ತಿರಬಹುದು ಎನ್ನುವುದು ಆಕೆಯ ಮನಸ್ಸಿನಲ್ಲಿ ಹಾಸುಹೊಕ್ಕಾಗಿತ್ತು. ಇದೀಗ ಮನೆಯ ಬಾಗಿಲಿಗೆ ಪೊಲೀಸರು ಬಂದಿದ್ದಾರೆ ಎನ್ನುವುದು ಕೇಳಿದಾಗ ಮಾತ್ರ ಗಂಡ ಏನೋ ದೊಡ್ಡ ಭಾನಗಡಿ ಮಾಡಿಕೊಂಡಿದ್ದಾನೆ ಎನ್ನುವುದು ಖಾತ್ರಿಯಾಗಿತ್ತು. ಪ್ರದೀಪ ಬಾಬುವಿನ ಹೆಂಡತಿಯ ಬಳಿ ನಾವು ಪೊಲೀಸರು ಎಂದು ಹೇಳಿದ್ದು ಸರಿಯಾದ ಪರಿಣಾಮವನ್ನೇ ಬೀರಿತ್ತು.
(ಮುಂದುವರಿಯುತ್ತದೆ..)