Monday, December 7, 2015

ಅಘನಾಶಿನಿ ಕಣಿವೆಯಲ್ಲಿ-30

`ನಮ್ ಬದಿಗೆ ಕಳ್ಳರು ಬಂಜವಡಾ? 30-40ರಷ್ಟು ಜನ ಉತ್ತರ ಭಾರತದ ಬಂದಿದ ಬಂಜ ಹೇಳ್ತಾ ಇದ್ದ. ಬಂದವ್ವು ಮನುಷ್ಯರದ್ದು ಕಿಡ್ನಿ, ಕಣ್ಣು ಎಲ್ಲಾ ಕೀಳ್ತವಡಾ..' ಎಂದು ಮರುದಿನ ಶಾಲೆಯಿಂದ ಬಂದ ರಾಜೀವ ಮನೆಯಲ್ಲಿ ದೊಡ್ಡದಾಗಿ ಹೇಳಿದಾಗ ಎಲ್ಲರ ಕಿವಿ ನೆಟ್ಟಗಾಗಿದ್ದವು.
`ಸುಳ್ ಸುಳ್ ಸುದ್ದಿ ಹೇಳಡಾ ಮಾರಾಯಾ..' ಎಂದು ಮನೆಯ ಹಿರಿಯರು ಗದರುತ್ತಿದ್ದಂತೆ ರಾಜೀವ ಪಟ್ಟು ಬಿಡದೇ ಮತ್ತದೇ ವಿಷಯವನ್ನು ಹೇಳಿದ.
`ಶಾಲೆಯಲ್ಲಿ ದೋಸ್ತರೆಲ್ಲ ಮಾತನಾಡ್ತಾ ಇದ್ದಿದ್ದ. ಈ ವಿಷಯ ಹೇಳಿದ್ದ ನೋಡು. ನೇಪಾಳದ ಬದಿಯವ್ವು ಬಂಜವಡಾ ಹೇಳಿ ಹೇಳ್ತಾ ಇದ್ದ. ಗಂಡಸ್ರು, ಹೆಂಗಸ್ರು ಎಲ್ಲ ಬಂಜವಡಾ ಹೇಳಿ ಹೇಳಕತ್ತಾ ಇದ್ದಿದ್ದ..' ರಾಜೀವ ಮಂಕಾಗಿದ್ದರೂ ಸ್ಫುಟವಾಗಿ ಹೇಳಿದ್ದ.
ರಾಜೀವನ ಮಾತನ್ನು ಕೇಳಿ ಅಕ್ಕ ಪಕ್ಕದ ಮನೆಯವರೆಲ್ಲ ಅಲ್ಲಿಗೆ ಬಂದು ನೆರೆದರು. `ಹೌದು ನಾನೂ ಕೇಳಿದ್ದೆ. ಸಾಗರ ತಾಲೂಕಲ್ಲಿ ಮೊದಲು ಬಂದಿದ್ವಡಾ. ಈಗ ಸಿದ್ದಾಪುರ ಹಾಗೂ ಶಿರಸಿ ಬದಿಗೂ ಬಂಜ್ವಡಾ. ನನ್ ಕಿವಿಗೂ ಬಿಜ್ಜು ಈ ವಿಷ್ಯ. ಯಾರಾದ್ರೂ ಒಬ್ಬೊಬ್ರೇ ಹೋಗ್ತಾ ಇದ್ರೆ ಅವರನ್ನ ತಡೆದು ಅಡ್ಡ ಹಾಕಿ ಕೈಯಲ್ಲಿದ್ದಿದ್ದಿದ್ದು ಕಿತ್ತುಕೊಂಡು ಹೋಗ್ತವಡಾ..' ಪಕ್ಕದಲ್ಲಿದ್ದವರ್ಯಾರೋ ದನಿ ಸೇರಿಸಿದ್ದರು.
`ಹೌದು ಈ ವಿಷಯ ನನ್ನ ಕಿವಿಗೂ ಬಂಜು. ಕಳ್ಳರು ಬಂದಿದ್ದು ನಿಜ. ಅವ್ರು ಕಳ್ಳರೋ, ದರೋಡೆಕೋರರೋ ಅಥವಾ ಮಾನವನ ಅಂಗಾಂಗಗಳನ್ನು ಕದ್ದು ಮಾರಾಟ ಮಾಡುವವರೋ ಗೊತ್ತಿಲ್ಲ ನೋಡಿ.. ಎರಡೋ ಮೂರೋ ಜನರನ್ನು ಅಡ್ಡಗಟ್ಟಿದ್ದು ನನ್ನ ಕಿವಿಗೂ ಬಿಜ್ಜು. ಬೇಣದಗದ್ದೆ ಬಾಬೂನ್ನ ಮೊನ್ನೆ ಸಂಜೆ ಅಡ್ಡಗಟ್ಟಿದಿದ್ವಡಾ ನೋಡಿ. ಹಸುಮನೆಯ ರಾಮಣ್ಣನ್ನೂ ಅಡ್ಡ ಹಾಕಿದಿದ್ದ ಹೇಳಿ ಸುದ್ದಿ ಸಿಕ್ಕಿದ್ದು. ಯಾವುದೋ ಪೇಪರ್ರಲ್ಲೂ ಬಂಜಪಾ..' ಎಂದರು ಇನ್ನೊಬ್ಬರು ಹಿರಿಯರು.
`ಹೌದಾ.. ಆನೂ ಪೇಪರ್ ಓದಿದ್ದಿ. ಅದರಲ್ಲಿ ಗಾಳಿ ಸುದ್ದಿ ಹೇಳೂ ಕೊಟ್ಟಿದ್ವಲಾ..' ಅವರಲ್ಲೇ ಶುರುವಾಗಿತ್ತು ವಾದ.
`ಸುಳ್ಳು ಸುದ್ದಿ ಹೇಳಾಗಿದ್ದರೆ ಬಾಬೂ ಹಾಗೂ ರಾಮಣ್ಣನ ಅಡ್ಡ ಹಾಕಿದವ್ವು ಯಾರು?' ಮತ್ತೊಬ್ಬಾತ ಬಾಯಿ ಹಾಕಿದ್ದ.
ಈ ವಿಷಯವನ್ನು ಮೌನವಾಗಿ ಕೇಳುತ್ತಿದ್ದ ವಿಕ್ರಮ ಹಾಗೂ ವಿನಾಯಕ ದೋರದಲ್ಲಿದ್ದ ಪ್ರದೀಪ, ವಿಜೇತಾರನ್ನು ಕರೆದರು. ಪ್ರದೀಪ ಹಾಗೂ ವಿಜೇತಾರಿಗೆ ಈ ವಿಷಯ ಬಹಳ ಆಸಕ್ತಿಕರ ಎನ್ನಿಸಿತು.
ಅಷ್ಟರಲ್ಲಿ ಮನೆಯ ಮಹಿಳೆಯರೊಬ್ಬರು ಬಂದು `ಕಳ್ಳರು ಆಗಿದ್ರೂ ಆಗಿರಲಕ್ಕು. ನಾವು ಸಣ್ಣಕಿದ್ದಾಗ ಇರಾಣಿ ಮಂದಿ ಅಂತ ಬರ್ತಿದ್ದ. ನೂರು ಜನರ ಇರಾಣಿ ಜನರ ಗುಂಪು ಊರಿಗೆ ಬರುವ ಮೊದಲೇ ಊರ ಮುಖಂಡನ ಬಳಿ ಪರವಾನಗಿ ಪತ್ರವನ್ನು ಪಡೆದುಕೊಳ್ತಾ ಇತ್ತು. ಆ ಪರವಾನಗಿ ಪತ್ರವನ್ನು ಇರಾಣಿ ಮಂದಿಗಳ ಖದರಿಗೆ ಹೆದರಿ ಪಟೇಲ ಬರಕೊಡ್ತಿದ್ದ. ಅಂವ ಬರೆದು ಕೊಡಲೆ ಒಪ್ಪದೇ ಇದ್ದರೆ ಕೈಕಾಲು ತೆಗೆದು ಬರೆದಿಕೊಳ್ತಿದ್ದ. ಮನೆ ಮನೆಗೆ ಬರುತ್ತಿದ್ದ ಇರಾಣಿ ಮಂದಿಗಳಿಗೆ ಅವರು ಕೇಳಿದ್ದನ್ನು ಕೊಡಲೇಬೇಕಿತ್ತು. ಇಲ್ಲೆ ಹೇಳಾಗಿದ್ದರೆ ಮನೆಯಲ್ಲಿನ ಹೆಣ್ಣು ಮಕ್ಕಳನ್ನೂ ಎಳೆದುಕೊಂಡು ಹೋಗ್ತಿದ್ದರು.. ಈಗ ಬಂದಿರುವ ಕಳ್ಳರೂ ಹಂಗೇ ಇದ್ದಿಕ್ಕು..' ಎಂದಾಗ ಮಾತ್ರ ಒಬ್ಬಿಬ್ಬರು ದಿಘಿಲಾದರು. ಪ್ರದೀಪನ ಕಣ್ಣು ಈಗ ಮಾತ್ರ ಬಹಳ ಗಂಭೀರವಾಯಿತು. ಕಳ್ಳರ ಬಂದಿದ್ದು ಹೌದಾ? ಇದರ ಹಿಂದಿನ ಮರ್ಮ ಏನೋ ಇದೆ ಎನ್ನಿಸುತ್ತದೆ ಎಂದು ಆಲೋಚಿಸಿದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗಣಪಜ್ಜ `ಹೋಯ್.. ಎಂತದ್ರೋ ಅದು..' ಎಂದ. ಪ್ರತಿಯೊಬ್ಬರೂ ತಮಗೆ ತಿಳಿದಿದ್ದ ವಿಷಯವನ್ನು ಮತ್ತೊಮ್ಮೆ ಸಾದ್ಯಂತವಾಗಿ ವಿವರಿಸಿದರು.
`ಇರಾಣಿ ಮಂದಿಗ ಬರ್ತಿದ್ದ ಅನ್ನೊಂದು ನಂಗೂ ಗೊತ್ತಿದ್ದು. ನಾನೂ ನೋಡಿದ್ದಿ ಅವರನ್ನಾ. ಇರಾನ್ ಹಾಗೂ ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆದಿದ್ದ ಸಂದರ್ಭದಲ್ಲಿ ಇರಾನ್ ನಲ್ಲಿ ನಿರಾಶ್ರಿತರಾದವರು ಹೀಗೆ ಬಂದಿದ್ದರು ಎನ್ನುವುದನ್ನು ನಾನು ಕೇಳಿದ್ದೇನೆ. ಇರಾಕ್ ಸೊಕಾ ಸುಮ್ಮನೆ ಇರಾನ್ ಮೇಲೆ ಯುದ್ಧ ಮಾಡಿತ್ತಲ್ಲ. ಆಗ ಭಾರತ ನಿರಾಶ್ರಿತರಿಗೆ ಎಲ್ಲ ಸೌಲಬ್ಯವನ್ನು ನೀಡುವ ಭರವಸೆ ನೀಡಿತ್ತಲ್ಲ. ಆ ಭರವಸೆಯ ಲಾಭವನ್ನು ಪಡೆದುಕೊಂಡು ಇರಾನಿ ಮಂದಿ ಹೀಗೆ ಮಾಡುತ್ತಿದ್ದರು. ಆದರೆ ಯಾವಾಗ ಇರಾಣಿ ಮಂದಿಗಳು ಮಾಡುತ್ತಿದ್ದ ಹಾವಳಿಯ ವಿವರ ಭಾರತ ಸರ್ಕಾರಕ್ಕೆ ಗೊತ್ತಾಯಿತೋ ಆ ನಂತರದ ದಿನಗಳಲ್ಲಿ ಇರಾಣಿ ಮಂದಿಗಳ ಹಾವಳಿಗೆ ಸರ್ಕಾರ ಕಡಿವಾಣ ಹಾಕಿತು. ಕಟ್ಟು ನಿಟ್ಟಾಗಿ ಇರಾಣಿ ಮಂದಿಗಳ ಮೇಲೆ ಕಣ್ಣಿಟ್ಟು ಅವರನ್ನು ತಂಡು ಮಾಡಿತು. ಆದರೆ ಈಗ ಕಳ್ಳರು ಬಂದಿದ್ದಾರೆ, ಅವರು ಮನುಷ್ಯರ ಅಂಗಾಂಗಗಳನ್ನು ಕಳ್ಳತನ ಮಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಅನುಮಾನಗಳಿವೆ. ಈಗೊಂದು ದಶಕದ ಹಿಂದೆ ಇಂಥದ್ದೇ ಸುದ್ದಿಯಾಗಿತ್ತು ನೋಡಿ..'ಎಂದರು ಗಣಪಜ್ಜ.
ಎಲ್ಲರೂ ತದೇಕಚಿತ್ತರಾಗಿ ಕೇಳುತ್ತಿದ್ದಂತೆಯೇ ಮಾತು ಮುಂದುವರಿಸಿದ ಗಣಪಜ್ಜ `ಈಗ್ಗೆ ಒಂದು ದಶಕಗಳ ಹಿಂದೆಯೂ ಇದೇ ರೀತಿ ಕಳ್ಳರು ಬಂದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದೇ ಸುದ್ದಿ ನಂತದಲ್ಲಿ ಯಾವುದೋ ಮೋಹಿನಿ ದಾರಿ ಹೋಕರನ್ನು ಕಾಡುತ್ತಾಳೆ ಎನ್ನುವ ರೀತಿಯೂ ಬದಲಾಗಿತ್ತು. ಜನರು ಗಾಳಿ ಸುದ್ದಿಯ ಜಾಡಿಗೆ ಬಲಿಯಾಗಿದ್ದರು. ಆ ದಿನಗಳಲ್ಲಿ ಪ್ರತಿಯೊಬ್ಬರೂ ತಲೆಗೊಂದರಂತೆ ಮಾತನಾಡಿದ್ದರು. ಆದರೆ ವಾಸ್ತವದಲ್ಲಿ ಅಂತಹ ಗಾಳಿ ಸುದ್ದಿಯ ಹಿಂದಿನ ಅಸಲಿಯತ್ತು ಬೇರೆ ಇತ್ತು ನೋಡಿ..' ಎಂದರು ಅಜ್ಜ.
`ಅಂದರೆ ಕಳ್ಳರು ಬಂದಿದ್ದಾರೆ ಅನ್ನೋದು ಸುಳ್ಳಾ..?' ನಡುವೆ ಬಾಯಿ ಹಾಕಿದ್ದ ಒಬ್ಬರು ಸುಮ್ಮನಿರಲಾರದೇ ಕೇಳಿಯೂ ಬಿಟ್ಟರು.
`ಹೌದು. ಬಹುಶಃ ಕಳ್ಳರು ಬಂದಿದ್ದಾರೆ ಎನ್ನುವುದು ಗಾಳಿ ಸುದ್ದಿಯೇ ಹೌದು. ಇದು ಮರಗಳ್ಳರು, ಕಳ್ಳನಾಟಾ ಮಾಡುವವರು ಹರಿಬಿಡುವ ಗಾಳಿ ಸುದ್ದಿ. ದಶಕದ ಹಿಂದೆ ಇದೇ ಗಾಳಿ ಸುದ್ದಿ ಹಬ್ಬಿದ್ದಾಗಲೂ ಕಳ್ಳ ನಾಟಾ ಹೊಡೆಯುವವರಿಂದಲೇ ಹೀಗಾಗಿದೆ ಎಂಬುದು ಗೊತ್ತಾಗಿತ್ತು. ಈಗಲೂ ಹಾಗೇ ಆಗಿರಬೇಕು..' ಎಂದರು ಗಣಪಜ್ಜ.
`ಹಾಗಾದರೆ ವೈಜಯಂತಿ ಪುರದಲ್ಲಿ ನೇಪಾಳಿ ವ್ಯಕ್ತಿಯೊಬ್ಬನನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಪೇಪರಿನಲ್ಲಿ ಬಂದಿತ್ತಲ್ಲ.. ಅದೇನು..' ಒಬ್ಬಾತ ಕೇಳಿಯೇಬಿಟ್ಟಿದ್ದ.
`ಅದು ನನಗೆ ಗೊತ್ತಿಲ್ಲ. ಆದರೆ ಕಳ್ಳರು ಬಂದಿದ್ದಾರೆ, ಅವರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಮಾತ್ರ ಶುದ್ಧ ಸುಳ್ಳು. ಇದು ಕಳ್ಳ ನಾಟಾ ಹೊಡೆಯುವವರು ಹಬ್ಬಿಸಿದ ಸುದ್ದಿಯೇ ಹೌದು..' ಅಜ್ಜ ಖಂಡತುಂಡವಾಗಿ ಹೇಳಿದ್ದರು.
`ಹಾಗಾದರೆ ಬಾಬೂ ಹಾಗೂ ರಾಮಣ್ಣನನ್ನ ಅಡ್ಡಗಟ್ಟಿದ್ದಾರೆ ಎಂದರಲ್ಲ. ಅದೂ ಸುಳ್ಳಾ?..' ಇನ್ನೊಬ್ಬಾತ ವಾದಿಸಿದ್ದ.
`ಅವರನ್ನು ಅಡ್ಡಗಟ್ಟಿದ್ದಾರೆ ಅಂತ ಅವರೇ ಬಂದು ಹೇಳಿದರಾ? ಇಲ್ಲವಲ್ಲ. ಯಾರೋ ಹೇಳಿದ್ದು ತಾನೆ? ಇಷ್ಟಕ್ಕೂ ಈ ಬಾಬೂ ಹಾಗೂ ರಾಮಣ್ಣ ಏನು ಸುಭಗರಲ್ಲವಲ್ಲ.. ನಮ್ಮ ಭಾಗದಲ್ಲಿ ಕಳ್ಳ ನಾಟಾ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೆಸರಾದವರಲ್ಲವೇ? ಯಾರಾದರೂ ಸಾಮಾನ್ಯ ವ್ಯಕ್ತಿಯನ್ನು ಕಳ್ಳರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿದೆಯಾ ಹೇಳಿ? ಇಲ್ಲ ತಾನೇ? ಕಳ್ಳ ನಾಟಾ ಮಾಡುವ ವ್ಯಕ್ತಿಗಳನ್ನೇ ಕಳ್ಳರು ಅಡ್ಡಗಟ್ಟುತ್ತಾರೆ ಎಂದರೆ ಇದರ ಹಿಂದೆ ಬೇರೆ ಏನೋ ಹುನ್ನಾರವಿದೆ ಎನ್ನಿಸುವುದಿಲ್ಲವೇ?' ಗಣಪಜ್ಜ ಹೇಳಿದ್ದ. ಆತನ ಮಾತು ಕೇಳಿದವರಿಗೆಲ್ಲ ಏನೋ ಹೊಳೆದಂತಾಯಿತು.
`ಇದು ನಿಸ್ಸಂಶಯವಾಗಿ ಕಳ್ಳನಾಟಾ ಹೊಡೆಯುವುರದ್ದೇ ಕೆಲಸ. ತಮ್ಮ ಕೆಲಸ ಮಾಡಿಕೊಳ್ಳಲು ನೇಪಾಳಿ ಕಳ್ಳರ ಹೆಸರನ್ನು ಹೇಳಿ ಬಿಟ್ಟಿದ್ದಾರೆ ಅಷ್ಟೇ. ಬೇಕಾದರೆ ಪರೀಕ್ಷೆ ಮಾಡಿಕೊಳ್ಳಿ..' ಎಂದು ಹೇಳಿದವರೇ ಹೆಗಲ ಮೇಲಿದ್ದ ಬಿಳಿಯ ಟರ್ಕೀಸ್ ಟವೇಲನ್ನು ಒಮ್ಮೆ ಝಾಡಿಸಿ `ಇದೇ ಫರ್ಮಾನು..' ಎಂಬಂತೆ ಎದ್ದು ಹೋದರು ಗಣಪಜ್ಜ. ಒಮ್ಮೆ ಅಲ್ಲಿ ದೀರ್ಘ ಮೌನ ಆವರಿಸಿತು. ಆ ನಂತರ ಪ್ರತಿಯೊಬ್ಬರೂ ಒಬ್ಬರ ಹಿಂದೆ ಒಬ್ಬರಂತೆ ನಿಧಾನವಾಗಿ ಜಾಗ ಖಾಲಿ ಮಾಡಿದರು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಮಾತ್ರ ಹೊಸತೇನೋ ಮಾರ್ಗ ಸಿಕ್ಕಂತಾಗಿತ್ತು. ತಕ್ಷಣ ಪ್ರದೀಪ ಅಲ್ಲಿಯೇ ಇದ್ದ ಪೋನ್ ಬಳಿ ತೆರಳಿ ಚಕಚಕನೆ ನಂಬರ್ ಡಯಲ್ ಮಾಡಿದ. ಅರೆಘಳಿಗೆಯಲ್ಲಿ ಯಾರಿಗೋ ಪೋನ್ ಮಾಡಿ ವಿಷಯವನ್ನು ತಿಳಿಸಿದ. ಮತ್ತೆ ಅರೆ ಘಳಿಗೆಯಲ್ಲಿ ಪ್ರದೀಪ ಪೋನ್ ಮಾಡಿದ್ದ ವ್ಯಕ್ತಿ ಏನೋ ಹೇಳಿದಂತಾಯಿತು. ಪ್ರದೀಪ ಪೋನ್ ಇರಿಸಿ ಉಳಿದವರ ಬಳಿ ಬಂದ.
ವಿಕ್ರಮ ಅಸಹನೆಯಿಂದ `ಯಾರಿಗೆ ಪೋನ್ ಮಾಡಿದ್ದು? ಯಾಕೆ ಮಾಡಿದ್ದು? ಮಾರಾಯಾ ಮೊದಲಿನಿಂದಲೂ ನೀನು ಏನೋ ಒಂದು ರೀತಿ ನಿಘೂಢ ಕೆಲಸ ಮಾಡ್ತಾ ಇದ್ದೀಯಾ? ಹೇಳ್ಕೊಂಡು ಮಾಡು. ಅದೇನು ಅಂತ. ನಿನ್ನ ಮೇಲೆ ಬಹಳ ಅನುಮಾನ ಬರ್ತಾ ಇದೆ. ಇಷ್ಟಕ್ಕೂ ನೀನು ಯಾರು ಅಂತ. ಕೇಳಿದರೆ ಏನೋ ಸುಳ್ಳು ಹೇಳ್ತೀಯಲ್ಲಾ.. ಈಗ ನೀನು ನಿಜ ಹೇಳಲೇಬೇಕು..' ಎಂದ. ವಿನಾಯಕ, ವಿಜೇತಾರು ವಿಕ್ರಮನ ಜೊತೆಗೂಡಿದ್ದರು. ಪ್ರದೀಪ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದ.

(ಮುಂದುವರಿಯುತ್ತದೆ..)

No comments:

Post a Comment