(ಶಿವಾಜಿ ಕಟ್ಟಿಸಿದ ಸಜ್ಜನಘಡದ ಮಹಾದ್ವಾರ) |
ನಿಧಾನವಾಗಿ ಬೆಳಗಾಗಿತ್ತು. ನಿಮಗೆ ನನ್ನ ಕಡೆಯಿಂದ ತೋಫಾ ಇದೆ ಎಂದಿದ್ದೆನಲ್ಲ. ತೋರಿಸುತ್ತೇನೆ ಬನ್ನಿ ಎಂದವರೇ ಸಜ್ಜನಘಡಕ್ಕೆ ಬಲಕ್ಕೆ ತಿರುಗುವ ಕ್ರಾಸಿನಿಂದ ಸೀದಾ ಮುಂದಕ್ಕೆ ಆಟೋ ಚಾಲನೆ ಮಾಡಿದರು. ಮಾಡಿದವರೇ ಅಲ್ಲೊಂದು ಕಡೆ ಗುಡ್ಡದ ಮರುಕಲಿನಲ್ಲಿ ಆಟೋ ನಿಲ್ಲಿ ಇಳೀರಿ ಎಂದರು. ನಾವೆಲ್ಲ ಇಳಿದೆವು. ಇಳಿದಂತೆ ರಸ್ತೆಯನ್ನು ದಾಟಿ ಗುಡ್ಡವನ್ನು ಹತ್ತಿಸಿದರು ನಿಲೇಶ ಮಂತ್ರಿ. ಅಲ್ಲೊಂದು ಕಡೆ ನಮಗೆ ನಮ್ಮಷ್ಟೇ ದೊಡ್ಡ ಗಾತ್ರದ ಪೈಪ್ ಒಂದು ಕಾಣಿಸಿತು. ಪಕ್ಕದಲ್ಲಿದ್ದ ದೈತ್ಯ ಗುಡ್ಡವೊಂದರಿಂದ ಬಂದಿದ್ದ ಪೈಪ್ ಅದು. ಸೀದಾ ಸಜ್ಜನಘಡದ ಗುಡ್ಡದ ಮೇಲಕ್ಕೆ ಹಾಕಲಾಗಿತ್ತು. ನಾವೆಲ್ಲ ವಿಸ್ಮಯದಿಂದ ನೋಡುತ್ತಿದ್ದಂತೆ ಸಜ್ಜನಘಡಕ್ಕೆ ಪಕ್ಕದ ಗುಡ್ಡದಿಂದ ನೀರನ್ನು ಹರಿಸಲಾಗುತ್ತದೆ. ಅದಕ್ಕೆ ಈ ಪೈಪ್ ಹಾಕಲಾಗಿದೆ ಎಂದರು ನಿಲೇಶ ಮಂತ್ರಿ. ನಾವು ಒಮ್ಮೆ ಬೆರಗಾದೆವು. ಗುರುತ್ವಾಕರ್ಷಣ ಶಕ್ತಿಯನ್ನು ಬಳಕೆ ಮಾಡಿಕೊಂಡು ನೀರಿನ ಪೈಪ್ ಹಾಕಿರುವುದು ಖುಷಿಯನ್ನೂ ತಂದಿತು.
ಗುಡ್ಡದ ಮರುಕಲನ್ನು ದಾಟಿ ನೋಡಿದ ನಮಗೆ ದೂರದ ಕಣಿವೆಯಲ್ಲೊಂದು ಅಣೆಕಟ್ಟು ಕಾಣಿಸಿತು. ಕೃಷ್ಣಾ ನದಿಯ ಉಪನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಸಾಗರೋಪಾದಿಯಲ್ಲಿ ಕಾಣುತ್ತಿತ್ತು. ಮಂಜು ಬೀಳುತ್ತಿದ್ದ ಕಾರಣ ಸ್ವರ್ಗದ ಸಿರಿ ಭುವಿಗೆ ಇಳಿದು ಬಂದಿದೆಯೇನೋ ಎಂಬಂತೆ ಕಾಣಿಸಿತು. ನೋಡಿ ಈ ಅಣೆಕಟ್ಟನ್ನು ನಾಲ್ಕು ಮೀಟರ್ ಏರಿಸುತ್ತಾರಂತೆ ಎಂದು ಅಲ್ಲಿಯೇ ಮಾಹಿತಿ ನೀಡಿದರು ಮಂತ್ರಿ. ಕೆಲಕಾಲ ಅಲ್ಲಿ ನಿಂತು ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆವು.
ವಾಪಾಸು ಬಂದು ಮತ್ತೆ ಆಟೋವನ್ನು ಏರಿದೆವು. ತಿರುಗಿಸಿದ ಆಟೋವನ್ನು ಸೀದಾ ಸಜ್ಜನಘಡದ ಕಡೆಗೆ ಚಲಾಯಿಸಿದ. ಮತ್ತೊಂದೆರಡು ಅಂಕುಡೊಂಕನ್ನು ಹಾದು ಹೋದ ಆಟೋ ಒಂದು ಕಿಲೋಮೀಟರ್ ನಂತರ ಸಜ್ಜನಘಡವನ್ನು ತಲುಪಿತು. ಸಜ್ಜನಘಡದ ಪ್ರಮುಖ ದ್ವಾರದಿಂದ ಬಹುದೂರದಲ್ಲಿಯೇ ಆಟೋ ನಿಲ್ಲಿಸಿದ ಮಂತ್ರಿ. ಸಾಕಷ್ಟು ವಾಹನಗಳು ಆಗಲೇ ಸಜ್ಜನಘಡಕ್ಕೆ ಬಂದಿದ್ದವು. ಆಟೋ ಇಳಿದವರೇ ನಿಲೇಶ ಮಂತ್ರಿಯ ಜೊತೆ ನಾನು, ಪ್ರಶಾಂತ ಹಾಗೂ ಸಂಜಯ ನಿಂತುಕೊಂಡು ಪೋಟೋ ತೆಗೆಸಿಕೊಂಡೆವು. ಹೋಗುವ ಮುನ್ನ ಬಾಯಿತುಂಬಾ ನಮ್ಮನ್ನು ಹರಸಿ ಹೋದ ನಿಲೇಶ ಮಂತ್ರಿ. ಈ ಗಡಬಡೆಯಲ್ಲಿ ನಿಲೇಶ ಮಂತ್ರಿಯ ಮೊಬೈಲ್ ನಂಬರ್ ತೆಗೆದುಕೊಳ್ಳುವುದನ್ನು ನಾವು ಮರೆತೇ ಬಿಟ್ಟಿದ್ದೆವು ಬಿಡಿ.
ಮೂವರೂ ಸಜ್ಜನಘಡವನ್ನು ಏರಲು ಹೊರಟ ಸಂದರ್ಭದಲ್ಲಿ ಚುಮು ಚುಮು ಮಳೆ. 17ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ ಕಲ್ಲಿನ ದಾಡಿ. ದೈತ್ಯ ಕೋಟೆ. ನಡೆದು ಸಾಗಿದೆವು. ಅಲ್ಲೊಂದು ಕಡೆ ಶಿವಾಜಿ ಮಹಾರಾಜ ನಿರ್ಮಾಣ ಮಾಡಿದ್ದ ಬೃಹತ್ ದ್ವಾರವೊಂದು ನಮ್ಮನ್ನು ಸ್ವಾಗತಿಸಿತು. ಈ ದ್ವಾರದ ಬಳಿ ನಾವೆಲ್ಲ ಮತ್ತೆ ಪೋಟೋ ತೆಗೆಸಿಕೊಂಡೆವು. ದೈತ್ಯ ದ್ವಾರಕಮಾನನ್ನು ಕಲ್ಲಿನಿಂದ ಮಾಡಿದ್ದರೆ ಅದಕ್ಕೆ ಮಾಡಲಾಗಿದ್ದ ಬಾಗಿಲು ಮರ ಹಾಗೂ ಕಬ್ಬಿಣದ್ದಾಗಿತ್ತು. ಸೀದಾ ಒಳನಡೆದ ನಮಗೆ ಅಲ್ಲೊಂದು ಮ್ಯಾಪ್ ಕಾಣಿಸಿತು. ಮುನ್ನಡೆದೆವು.
ಮೂರ್ನಾಲ್ಕು ಕಟ್ಟಡಗಳನ್ನು ದಾಟಿ ಮುಂದಕ್ಕೆ ಸಾಗಿದ ನಮಗೆ ಸ್ಥಳಿಯರ್ಯಾರೋ ಸ್ನಾನ ಮಾಡುವ ಸ್ಥಳ ತೋರಿಸಿದರು. ಬಿಸಿನೀರು ಕೂಡ ಬರ್ತದೆ. ಸ್ನಾನ ಮಾಡಬಹುದು ಎಂದರು. ಪ್ರಶಾಂತ ಭಾವ ಮೊದಲು ಸ್ನಾನಕ್ಕೆ ಹೋದ. ಆತನ ನಂತರ ನಾನು, ನನ್ನ ನಂತರ ಸಂಜಯ ಸ್ನಾನ ಮುಗಿಸಿದ. ಸ್ನಾನ ಮುಗಿಸಿ ಶುಭ್ರ ಬಿಳಿ ಬಣ್ಣದ ಲುಂಗಿ ಹಾಗೂ ಉತ್ತರೀಯವನ್ನು ಹೊದ್ದು ಮುನ್ನಡೆದೆವು. ನಮ್ಮ ಧಿರಿಸು ಎಂತವರನ್ನೂ ಮೋಡಿ ಮಾಡುವಂತಿತ್ತು. ವಾಪಾಸು ಬಂದು ಛತ್ರವೊಂದರಲ್ಲಿ ನಮ್ಮ ಲಗೇಜನ್ನು ಇರಿಸಲು ಅನುವಾದೆವು. ನಮ್ಮ ದಿರಿಸನ್ನು ನೋಡಿ ಬೆರಗಾದ ಆ ಛದ್ರದ ಉಸ್ತುವಾರಿ ನೋಡಿಕೊಂಡವರು ನಮಗೆ ಪ್ರತ್ಯೇಕ ಕೋಣೆಯೊಂದನ್ನು ನೀಡಿದರು. ಈ ಕೋಣೆಯಲ್ಲಿ ನಮ್ಮ ಲಗೇಜನ್ನು ಇರಿಸಿ ಸಮರ್ಥ ರಾಮದಾಸರ ಆರಾಧ್ಯ ದೈವವನ್ನು ನೋಡಲು ಮುನ್ನಡೆದೆವು.
ಆರಂಭದಲ್ಲಿಯೇ ಸದ್ಗರು ಶ್ರೀಧರಸ್ವಾಮಿಗಳು ತಪಸ್ಸನ್ನಾಚರಿಸಿದ ಶ್ರೀಧರ ಕುಟಿ ನಮ್ಮ ಸೆಳೆಯಿತು. ಸೀದಾ ಒಳಗೆ ಹೊರಟೆವು. ಶ್ರೀಧರ ಸ್ವಾಮಿಗಳ ಭವ್ಯ ಮೂರ್ತಿಯೊಂದು ಕೋಣೆಯೊಳಗೆ ಬೆಳಗುತ್ತಿತ್ತು. ಅದರ ಹೊರಭಾಗದಲ್ಲಿ ಕೆಲಕಾಲ ನಿಂತ ನಾವು ನಂತರ ಧ್ಯಾನಕ್ಕೆ ಕುಳಿತೆವು. ಕೆಲಕಾಲ ಮೈಮರೆತು ಧ್ಯಾನ ಮಾಡುತ್ತಿದ್ದಂತೆಯೇ ಕುಟಿಯ ಒಳಭಾಗದಿಂದ ವೃದ್ಧರೊಬ್ಬರು ಬಂದರು. `ನಿಮಗೆ ಎಲ್ಲಾಯಿತು?' ಎಂದು ಕೇಳಿದರು. ನಮಗೆ ಒಮ್ಮೆ ತಬ್ಬಿಬ್ಬು. ಅಚ್ಚ ಮರಾಠಿಯ ಮಧ್ಯದಲ್ಲಿರುವ ಸ್ಥಳದಲ್ಲಿ ಕನ್ನಡ ಭಾಷೆಯಲ್ಲಿ ನಮ್ಮನ್ನು ಮಾತನಾಡಿಸಿದ್ದರು. ಅಷ್ಟೇ ಅಲ್ಲ ಹವ್ಯಕ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾವು ಬೆರಗಿನಿಂದ ಕರ್ನಾಟಕ ಎಂದೆವು. `ಅದು ಗೊತ್ತಾತು. ಕರ್ನಾಟಕದಲ್ಲಿ ಎಲ್ಲಿ?' ಎಂದರು. ನಾನು ಹಾಗೂ ಸಂಜಯ ಸಿರಸಿ ಎಂದರೆ ಪ್ರಶಾಂತ ಯಲ್ಲಾಪುರ ಎಂದ.
`ಬೇಗ.. ನಿಮ್ಮ ಧ್ಯಾನ ಮುಗಿಸಿ ಬನ್ನಿ. ಒಳಗೆ ಪ್ರಸಾದ ಕೊಡುತ್ತೇನೆ..' ಎಂದರು ವೃದ್ಧರು. `ನಿಮಗೆ ಎಲ್ಲಾಯಿತು? ನಮ್ಮನ್ನು ಹೇಗೆ ಗುರುತಿಸಿದಿರಿ..' ಎಂದು ಸಂಜಯ ಕೇಳಿಯೇಬಿಟ್ಟ. `ನನಗೆ ಕುಮಟಾ ಆಯಿತು. ನಿಮ್ಮ ಬಟ್ಟೆ ಹಾಗೂ ನಿಮ್ಮ ಸಂಸ್ಕೃತಿಯೇ ನನಗೆ ಎಲ್ಲವನ್ನು ಹೇಳಿತು. ಬನ್ನಿ ಒಳಗೆ..' ಎಂದವರೇ ನಮ್ಮನ್ನು ಒಳಕ್ಕೆ ಕರೆದೊಯ್ದರು. ಆ ಕುಟಿಯ ಒಳಗೆ ಸಾಮಾನ್ಯರಿಗೆ ಯಾರಿಗೂ ಪ್ರವೇಶವಿರಲಿಲ್ಲ. ಆದರೆ ಆ ವೃದ್ಧರು ನಮ್ಮನ್ನು ಒಳಕ್ಕೆ ಕರೆದೊಯ್ದಿದ್ದರು. ಒಳಕ್ಕೆ ಹೋದವರೇ ಎರಡೂ ಬೊಗಸೆಯನ್ನು ಹಿಡಿಯಿರಿ ಎಂದರು. ಕೈಯಲ್ಲಿ ದೊಡ್ಡದೊಂದು ಬುತ್ತಿಯನ್ನು ನೀಡಿದರು. ತಿನ್ನಿ ಎಂದರು. ಆಹ್. ಎಂತಾ ಮಧುರವಾಗಿತ್ತು ಅದು ಅಂತೀರಿ. ಸಕ್ಕರೆ, ಬೆಣ್ಣೆಯ ಮಿಶ್ರಣವಾದ ಅಂತಹ ಆಹಾರವನ್ನು ಯತಿವರೇಣ್ಯರು ಸೇವಿಸುತ್ತಾರಂತೆ. ತಿಂದು ಮುಗಿಸುತ್ತಿದ್ದಂತೆಯೇ ಬಾಳೆಯ ಹಣ್ಣಿನ ಪಾಯಸವನ್ನು ಬೊಗಸೆ ತುಂಬಾ ನೀಡಿದರು. ಕುಡಿದೆವು. ನಾವು ಬೆಳಿಗ್ಗೆ ಏನನ್ನೂ ತಿಂದಿರಲಿಲ್ಲ. ಆದರೆ ಆ ವೃದ್ಧರು ನೀಡಿದ ಆ ಪ್ರಸಾದವಿದೆಯಲ್ಲ ಅದು ನಮಗೆ ಹಸಿವನ್ನು ಮರೆಸಿತು. ಜೀವನದಲ್ಲಿ ಇಷ್ಟು ರುಚಿಕರವಾದದ್ದನ್ನು ತಿಂದಿಲ್ಲವೇನೋ ಎನ್ನಿಸಿತು. ಸಜ್ಜನಘಡದಲ್ಲಿ ಎಲ್ಲವನ್ನೂ ನೋಡಿಕೊಂಡು ಬನ್ನಿ. ಒಂದು ವೇಳೆ ಇಲ್ಲಿಯೇ ಉಳಿಯುತ್ತೀರಿ ಎಂದಾದರೆ ಈ ಕುಟೀರಕ್ಕೆ ಬನ್ನಿ ಎನ್ನುವ ವೃದ್ಧರು ಹೇಳುತ್ತಿದ್ದಂತೆಯೇ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದಿದ್ದೆವು.
(ಮುಂದುವರಿಯುತ್ತದೆ)