Tuesday, September 22, 2015

ಅಂ-ಕಣ-6

ಸಲಿಗೆ(ಸಲುಗೆ)

ಕೆಲವರನ್ನು 
ಹತ್ತಿರ ಬಿಟ್ಟುಕೊಂಡರೆ 
ತಲೆಯ ಮೇಲೆ 
ಹತ್ತಿ ಕುಳಿತುಕೊಳ್ಳುತ್ತಾರೆ..!!!

ಗೊಂದಲ

ಆಕೆ ತಿರುಗಿ 
ನೋಡುತ್ತಾಳೆ ಎಂದುಕೊಂಡೆ
ಕನ್ನಡಿಯಲ್ಲಿ ಇಣುಕಿದಳು ||

ಆರ್ತನಾದ

ಭಗವಾನರಿಗೆ 
ಪ್ರಶಸ್ತಿ ಕೊಟ್ಟ 
ಸಾಹಿತ್ಯ ಅಕಾಡೆಮಿ 
ಪ್ರತಿಭಟನೆಗೆ ಪ್ರತಿಯಾಗಿ 
ಹೀಗೆ ಹೇಳಬಹುದೇ?
`ಹೇ ಭಗವಾನ್....!!!'

ಬದಲಾವಣೆ

ನನ್ನನ್ನು ಬದಲಿಸಿದಳು
ಅವಳು ಬದಲಾದಳು ||

ಅಯ್ಯೋ ಪಾಪ:

ಹಿಂದೆ  ಭಗವಾನ್ ಅಂತ ಕನ್ನಡ ಸಿನೆಮಾ ಒಂದು ಬಂದಿತ್ತು. ದರ್ಶನ್ ಹಾಗೂ ಸಾಯಿಕುಮಾರ್ ಹೀರೋ ಆಗಿದ್ದರು. ಸಿನೆಮಾದಲ್ಲಿ ಹಲವಾರು ಭರ್ಜರಿ ಡೈಲಾಗುಗಳಿದ್ದವು. ಸಾಯಿಕುಮಾರ್ ಬ್ರಾಂಡಿನ ಹೇಯ್... ನಿನ್ನ..ನ್.. ಅನ್ನುವ ಡೈಲಾಗುಗಳಿಗೂ ಕೊರತೆಯಿರಲಿಲ್ಲ. ಇದೀಗ ಭಗವಾನ್ ಹೇಳಿಕೆಗಳು ಅದೇ ರೀತಿ ಇದೆ. ಒಟ್ನಲ್ಲಿ ಅಯ್ಯೋ ಪಾ...ಪ..

ವೈರುಧ್ಯ :

ಭಗವಂತ ಅಂದರೆ
ಗೌರವ
ಭಗವಾನ್ ಎಂದರೆ
ರೌರವ ||

ಕಾಣೆ

ಆಕೆ
ಕನ್ನಡಿಯಲ್ಲಿ ಕಂಡೂ
ಕಾಣೆಯಾದಳು ||

Monday, September 21, 2015

ಮಧ್ಯರಾತ್ರಿಯ ಕನಸು

ಮಧ್ಯರಾತ್ರಿಯ ಕನಸು
ಸವಿಯಲಿಕೆ ಬಲು ಸೊಗಸು
ಸವಿದು ಸವಿದೊಡೆ ಅದುವೆ
ಜೇನಿನಂತೆ, ಸವಿಯ ಸಂತೆ ||

ಮಧ್ಯರಾತ್ರಿಯ ಕನಸು
ಒಮ್ಮೆ ಭೀತಿಯ ತಿನಿಸು
ಮನದ ದೈರ್ಯಕೆ ಅಳುಕು
ಶಬ್ದದಂತೆ, ಜೀರುಲಿಯೆ ಅಂತೆ ||

ಮಧ್ಯರಾತ್ರಿಯ ಕನಸು
ಹೇಳಲಿಕೆ ಬಲು ಸೊಗಸು
ಸುಲಿದ ಕದಳಿಯ ಫಲವ
ಮೆಲ್ಲಿದಂತೆ, ರಸವ ಹೀರಿದಂತೆ ||

ಮಧ್ಯರಾತ್ರಿಯ ಕನಸು
ಅರ್ಥವಾಗದದು ಮನಸು
ಹಲವೆಂಟು ಚಿತ್ರಣವು
ಅರಿಯದಂತೆ, ಏನೂ ತಿಳಿಯದಂತೆ ||

ಮಧ್ಯರಾತ್ರಿಯ ಕನಸು
ಹೊಂದಿಹುದು ಹಲ ಧಿರಿಸು
ಹಲವಕ್ಕೆ ಕೆಲವಕ್ಕೆ ಅರ್ಥವಿಲ್ಲ
ಇದ್ದರೂ, ಅದು ವ್ಯರ್ಥವಂತೆ ||

------

(ಈ ಕವಿತೆಯನ್ನು ಬರೆದಿರುವುದು 04-04-2006ರಂದು ದಂಟಕಲ್ಲಿನಲ್ಲಿ)

Thursday, September 3, 2015

ಓಡಿ ಹೋಗಡ

ಮನೆ ಬಿಟ್ಟು, ಸಂಗ ತೊಟ್ಟು
ಓಡಿ ಹೋಗಡ ಕೂಸೆ
ಅಪ್ಪ ಅಮ್ಮನ ಜೊತೆಗೆ ಇಪ್ಪಲೆ
ನಿಂಗೇನು ಜಡಾ?

ಹಳ್ಳಿ ಮನೆ ಒಳ್ಳೆ ಬಾಳು
ನಿಂಗೆಂತಾ ಕಷ್ಟಾ ಕೂಸೆ
ಅಪ್ಪನ ಪ್ರೀತಿ, ಅಮ್ಮನ ಅಕ್ಕರೆ
ಮರೆತು ಬಿಡಡಾ |

ಕನಸು ಕಟ್ಟಿದ ಅಪ್ಪ ಅಮ್ಮನ
ಮರೆತು ಹೋಗಡಾ ಕೂಸೆ
ಓಡಿ ಹೋಗಿ ಎಲ್ಲ ಬಿಟ್ಟು
ಕಣ್ಣೀರ್ ಹಾಕ್ಸಡಾ |

ಕೂಸುಗಳಿಗೆ ಓದ್ಸೋದ್ ತಪ್ಪು
ಅಂತ ಹೇಳ್ಸಡಾ ಕೂಸೆ
ಮನೆ ಪ್ರೀತಿ ನೀರಲ್ ಹೋಮದ
ಹಂಗೆ ಮಾಡ್ಸಡಾ |

ಓಡುವ ಮುನ್ನ ಮನೆಯ ಪ್ರೀತಿ
ನೆನಪು ಮಾಡ್ಕಳೇ ಕೂಸೆ
ಅಪ್ಪ ಅಮ್ಮನ ಹೆಸರಿಗೆ ಹೊಲಸು
ಕಳಂಕ ಹೊರ್ಸಡಾ ||

****

(ಓಡಿ ಹೋಗುವ ಕೂಸುಗಳಿಗೆ ಬುದ್ಧಿ ಹೇಳುವ ರೀತಿಯದ್ದೊಂದು ಟಪ್ಪಾಂಗುಚ್ಚಿ ಸಾಂಗ್. ಮುಂದಿನ ದಿನಗಳಲ್ಲಿ ಈ ಸಾಂಗನ್ನೇ ವಿಸ್ತರಿಸಿ 2, 3ನೇ ಭಾಗ ಮಾಡುವ ಆಲೋಚನೆಯೂ ಇದೆ. ಸುಮ್ಮನೆ ತಮಾಷೆಗೆ ಬರೆದಿದ್ದು. ತೀರಾ ಮನಸಿಗೆ ಹಚ್ಗ್ಯಳಡಿ. ಮನಸಿಗೆ ಹಚ್ಗ್ಯಂಡಿ ಅಂದ್ರೆ ಆ ಎಂತಾ ಮಾಡಲೂ ಬರ್ತಿಲ್ಲೆ..)

Sunday, August 23, 2015

ಮಗುವಿನ ನಗು

ತೊಟ್ಟಿಲಲಿ ಮಲಗಿದ್ದ
ಪುಟ್ಟ ಕಂದನ ನಗುವು
ಮನೆಯೆಲ್ಲಾ ತುಂಬಿತ್ತು
ನನ್ನೊಲವ ಸೆಳೆದಿತ್ತು ||

ತೊಟ್ಟಿಲೊಳಗೆ ಆಡುತ್ತ
ಕೇಕೆಯನು ಹಾಕುತ್ತ
ಮಗುವದು ನಲಿದಿತ್ತು
ಕವಿ ಹೃದಯವ ತಾಕಿತ್ತು ||

ಜಗವದು ಕುಣಿವಂತೆ
ಮಾಡುವ ಶಕ್ತಿಯದು
ಪುಟ್ಟ ಮಗು ಮೂಡಿಸುವ
ಮುಗ್ಧತೆಯ ನಗೆಗಿತ್ತು ||

ಮಗುವದು ನಗುತಿರಲು
ಶಶಿಯುದಿಸಿ ಬಂದಂತೆ
ದೇವರನು ಕಂಡಂತೆ
ಜೀವ ಪುಳಕಗೊಂಡಿತು ||

****

(ಈ ಕವಿತೆಯನ್ನು ಬರೆದಿರುವುದು 19-12-2005ರಂದು ದಂಟಕಲ್ಲಿನಲ್ಲಿ)

ಮಾಸ್ತರ್ ಮಂದಿ-6

ಹರೀಶ ನಾಯ್ಕ :
              ನಾನು ಐದನೇ ಕ್ಲಾಸಿನಲ್ಲಿದ್ದಾಗ ಶಾಲೆಗೆ ಶಿಕ್ಷಕರಾಗಿ ಬಂದವರು ಹರೀಶ ನಾಯ್ಕರು. ಮೊಟ್ಟಮೊದಲ ಪೋಸ್ಟಿಂಗ್ ನಮ್ಮ ಶಾಲೆ. ಬಹಳ ಯಂಗ್ ಎಂಡ್ ಎನರ್ಜೆಟಿಕ್ ಆಗಿದ್ದ ಮಾಸ್ತರ್ ಬಹಳ ಚೆಂದ ಹಾಡು ಹೇಳುತ್ತಿದ್ದರು. ಪೋಸ್ಟಿಂಗಿಗೆ ಹಾಕುವ ಮುನ್ನ ಉತ್ತರ ಕನ್ನಡ ಜಿಲ್ಲೆಯ ಮ್ಯಾಪನ್ನು ನೋಡಿದ ಹರೀಶ ಮಾಸ್ತರ್ರಿಗೆ ಅಡ್ಕಳ್ಳಿ ಶಾಲೆ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದಂತೆ ಕಾಣಿಸಿತಂತೆ. ಒಳ್ಳೆಯ ಶಾಲೆ ಶಿರಸಿಗೂ ಹತ್ತಿರ ಇರಬಹುದು ಎಂದು ಪೋಸ್ಟಿಂಗ್ ಹಾಕಿಸಿಕೊಂಡು ಬಂದೇ ಬಿಟ್ಟರು. ಬಂದ ಮೇಲೆಯೇ ಗೊತ್ತಾಗಿದ್ದು ಮುಖ್ಯ ರಸ್ತೆಯಿಂದ ಅಡ್ಕಳ್ಳಿ ಶಾಲೆ 2 ಕಿಮಿ ದೂರದಲ್ಲಿದೆ ಎನ್ನುವುದು. ಶಿರಸಿಗೇನೋ 15 ಕಿ.ಮಿ ದೂರದಲ್ಲಿ ಶಾಲೆಯಿತ್ತು. ಆದರೆ ಶಾಲೆಗೆ ಬಸ್ ಸಂಪರ್ಕ ಬೇಕಲ್ಲ. ದಿನಕ್ಕೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದೊಂದು ಬಸ್ಸುಗಳಿದ್ದವು. ಅದನ್ನು ಬಿಟ್ಟರೆ ಬೇರೆ ಬಸ್ಸುಗಳೇ ಇರಲಿಲ್ಲ. ಹೀಗಾಗಿ ಅಡ್ಕಳ್ಳಿಯ ಸುತ್ತಮುತ್ತಲ ಊರುಗಳಲ್ಲಿ ಎಲ್ಲಾದರೂ ಉಳಿದುಕೊಳ್ಳಲು ಜಾಗವಿದೆಯೇ ಎಂದು ಪ್ರಯತ್ನಿಸಿದರು. ಅವರಿಗೆ ಎಲ್ಲೂ ಜಾಗಸಿಗಲಿಲ್ಲ. ಕೊನೆಗೆ ಶಾಲೆಯ ಪಕ್ಕದಲ್ಲಿಯೇ ಇದ್ದ ಕ್ವಾಟ್ರಸ್ಸಿನಲ್ಲಿ ಉಳಿದುಕೊಂಡರು. ಮುತ್ಮುರ್ಡಿನ ಕಿರಿಯ ಪ್ರಾಥಮಿಕ ಶಾಲೆಗೆ ಆಗತಾನೆ ಮಾಸ್ತರ್ರಾಗಿ ಬಂದಿದ್ದ ರಮೇಶ ನಾಯ್ಕರೂ ಅವರ ಜೊತೆ ಉಳಿದುಕೊಳ್ಳಲು ಆರಂಭಿಸಿದರು.
             ಹರೀಶ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಬಂದ ದಿನ ನಾನು ದೋಸ್ತ ವಿಜಯನ ಜೊತೆಗೆ ಅಡ್ಕಳ್ಳಿಯ ಆರ್. ಜಿ. ಹೆಗಡೇರ ಮೆನೆಗ ಹೋಗಿದ್ದೆ. ಶಾಲೆಗೆ ಹೊಸ ಮಾಸ್ತರ್ರು ಬರ್ತಾರಂತೆ. ಅರ್ಜೆಂಟು ಬರಬೇಕಂತೆ ಎಂದು ಹೇಳಲು ನಾವು ತೆರಳಿದ್ದೆವು. ನಾವು ವಾಪಾಸು ಬರುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆಗೆ ಆರ್. ಜಿ. ಹೆಗಡೇರ ಮನೆಗೆ ಬರುತ್ತಿರುವುದು ಕಾಣಿಸಿತ್ತು. ಗಡ್ಕರ್ ಮಾಸ್ತರ್ರು ನಮ್ಮನ್ನು ತೋರಿಸಿ `ನೋಡ್ರೀ.. ಇವ್ರೂ ನಿಮ್ಮ ಕ್ಲಾಸಿಗೆ ಬರೋ ಹುಡುಗರು. ಇಂವ ಹಾಂಗೆ.. ಅಂವ ಹೀಂಗೆ..' ಎಂದು ನನ್ನ ಹಾಗೂ ವಿಜಯನ ಗುಣಗಾನ ಮಾಡಿದರು. ನಾವು ಮಾಸ್ತರ್ರು ಹಂಗಂತೆ.. ಹಿಂಗಂತೆ ಎನ್ನುತ್ತಾ ಶಾಲೆಗೆ ಮರಳಿದ್ದೆವು.
           ಬಂದವರೇ ನಮ್ಮನ್ನೆಲ್ಲ ಪರಿಚಯ ಮಾಡಿಕೊಂಡರು. ಬಂದ ಹೊಸತರಲ್ಲಿ ನನಗೆ, ವಿಜಯನಿಗೆ ಹಾಗೂ ಹರೀಶ ಮಾಸ್ತರ್ರಿಗೆ ವಿಶೇಷ ಬಂಧ ಬೆಳೆಯಿತು. ಆದರೆ ಯಾವಾಗ ತಿಂಗಳೊಪ್ಪತ್ತಿನಲ್ಲಿ ಅವರು ಶೆಳಕೆಯಿಂದ ನಮಗೆಲ್ಲ ಹೊಡೆಯಲು ಆರಂಭಿಸಿದರೂ ಆವಾಗ ನಾವೂ ಬುದ್ಧಿವಂತಿಕೆಯಿಂದ ಸ್ವಲ್ಪ ಡಿಸ್ಟೆನ್ಸ್ ಮೆಂಟೆನ್ ಮಾಡಿದೆವು. ನಾವು ಬಿಟ್ಟರೂ ಹರೀಶ ಮಾಸ್ತರ್ರು ಬಿಡಬೇಕಲ್ಲ. ನಮ್ಮನ್ನು ಕಾಡಿದರು. ಅದೇನೇನೋ ಕೆಲಸಗಳನ್ನು ಕೊಟ್ಟರು. ವಿಜ್ಞಾನ ವಿಷಯವೆಂದರೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದ ನಮಗೆಲ್ಲ ವಿಜ್ಞಾನ ಪ್ರಯೋಗಗಳನ್ನು ಮಾಡುವುದು ಎಂದರೆ ಹೀಗೆ ಎನ್ನುವುದನ್ನು ತೋರಿಸಿಕೊಟ್ಟರು. ಲಿಟ್ಮಸ್ ಕಾಗದ ಬಣ್ಣ ಬದಲಾಯಿಸುವುದು ಇವೆಲ್ಲ ಅವರಿಂದಲೇ ನೋಡಿದ್ದು. ಲಿಟ್ಮಸ್ ಕಾಗದ ಹರೀಶ ಮಾಸ್ತರ್ರ ಕೈಯಲ್ಲಿ ಬಣ್ಣ ಬದಲಾಯಿಸಿದ್ದನ್ನು ನೋಡಿ ಈ ಮಾಸ್ತರ್ರು ಪಕ್ಕಾ ಮಂತ್ರವಾದಿಯೋ ಅಥವಾ ಇಂದ್ರಜಾಲಿಕನೋ ಇರಬೇಕು ಎಂದೂ ಆಲೋಚಿಸಿದ್ದೆವು ಬಿಡಿ. ಆದರೆ ಯಾವಾಗ ಶಾಸ್ತ್ರ ಸಹಿತವಾಗಿ ಯಾಕೆ ಆ ಕಾಗದ ಬಣ್ಣ ಬದಲಾಯಿಸಿತು ಎನ್ನುವನ್ನು ತಿಳಿಸಿದಾಗ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳು ಇಟ್ಟಿದ್ದೆವು.
             ನಾನು ಹಾಗೂ ವಿಜಯ ಆ ದಿನಗಳಲ್ಲಿ ಒಂದೇ ದೋಣಿ ಕಳ್ಳರು ಬಿಡಿ. ನಮ್ಮ ಕ್ಲಾಸಿನಲ್ಲಿ ಮೂವರು ಗಂಡು ಹುಡುಗರು ಇದ್ದೆವು. ಏಳು ಜನರ ಹುಡುಗಿಯರು. ಮೂವರ ಪೈಕಿ ಮಹೇಶ ಬುದ್ಧಿವಂತನೆಂಬ ಹಣೆಪಟ್ಟಿ ಕಟ್ಟಿಕೊಂಡು ನಮ್ಮಿಂದ 1 ಪೋಟ್ ಡಿಸ್ಟೆನ್ಸಿನಲ್ಲಿ ಇರುತ್ತಿದ್ದ. ನಾನು ಹಾಗೂ ವಿಜಯ ಇಬ್ಬರೂ ಸಮಾನ ದುಃಖಿಗಳು.. ಸಮಾನ ಸುಖಿಗಳು. ಅಂಕಗಳೂ ಹೆಚ್ಚೂ ಕಡಿಮೆ ಒಂದೇ ಹದದಲ್ಲಿ ಬೀಳುತ್ತಿದ್ದವು ಬಿಡಿ. ಹುಡುಗಿಯರಲ್ಲಿ ಸಂಧ್ಯಾ ಹಾಗೂ ಸವಿತಾ ಎಂಬಿಬ್ಬರು ಇದ್ದರು. ಅವರೂ ಕೂಡ ಓದುವುದರಲ್ಲಿ ಎತ್ತಿದ ಕೈ. ಮಹೇಶನಿಗೆ ಸವಾಲು ಹಾಕಿ ಓದುತ್ತಿದ್ದ ಇವರು ಆಗೀಗ ಮಹೇಶನನ್ನು ಹಿಂದಕ್ಕೆ ಹಾಕುತ್ತಲೂ ಇರುತ್ತಿದ್ದರು. ವೀಣಾ ಎಂಬಾಕೆಯೊಬ್ಬಳಿದ್ದಳು. ಆಕೆಗೂ ನನಗೂ ಹಾಗೂ ವಿಜಯನಿಗೂ ಹೆಚ್ಚೂ ಕಡಿಮೆ ಒಂದೇ ಸಮನಾದ ಅಂಕಗಳು ಬರುತ್ತಿದ್ದವು. ವೀಣಾ, ಸಂಧ್ಯಾ, ಹಾಗೂ ಸವಿತಾರಿಗೆ ನಾನು ಹಾಗೂ ವಿಜಯ ಬಹಳ ಆಪ್ತರು. ಮಹೇಶ ಸಾಕಷ್ಟು ಸೊಕ್ಕು ಮಾಡುತ್ತಿದ್ದ ಕಾರಣ ಅವನನ್ನು ಕಂಡರೆ ಉಳಿದವರಿಗೆ ಅಷ್ಟಕ್ಕಷ್ಟೇ ಆಗಿತ್ತು. ನಾನು ಹಾಗೂ ವಿಜಯ ಸಿಕ್ಕಾಪಟ್ಟೆ ಓದುವವರಿಗೆ ಕಾಂಪಿಟೇಟರ್ ಅಲ್ಲ. ಆ ಕಾರಣದಿಂದ ನಾವು ಆಪ್ತರಾಗಿರಬಹುದು. ಅದು ಹಾಗಿರಲಿ ಬಿಡಿ. ಶಶಿಕಲಾ, ರಂಜನಾ ಹಾಗೂ ವಿಜಯಲಕ್ಷ್ಮೀ ಎಂಬ ಮತ್ತೂ ಮೂವರು ಇದ್ದರು. ಅವರೆಲ್ಲ ನಮಗಿಂತ ಸ್ವಲ್ಪ ಕಡಿಮೆ ಮಾರ್ಕ್ಸ್ ಪಡೆಯುತ್ತಿದ್ದ ಕಾರಣ ಅವರ ಪಡೆಯೇ ಬೇರೆ ಆಗಿತ್ತು.
             ಹೀಗಿದ್ದ ನಮ್ಮ ಕ್ಲಾಸಿನಲ್ಲಿ ನೀವು ನಂಬ್ತೀರೋ ಇಲ್ಲವೋ, ನಾನು ಹಾಗೂ ವಿಜಯ ಇಬ್ಬರೂ ವೀಣಾಳಿಗೆ ಲೈನ್ ಹೊಡೆಯುತ್ತಿದ್ದೆವು. ಆಕೆಯನ್ನು ಇಂಪ್ರೆಸ್ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದೆವು. ನನ್ನ ಬಳಿ ಜಾಸ್ತಿ ಮಾತನಾಡಿದರೆ ವಿಜಯ, ವಿಜಯನ ಬಳಿ ಜಾಸ್ತಿ ಮಾತನಾಡಿದರೆ ನಾನು ಇಬ್ಬರೂ ಪೈಪೋಟಿಗೆ ಬಿದ್ದಂತೆ ಆಕೆಯನ್ನು ಇಂಪ್ರೆಸ್ ಮಾಡುವ ಪ್ರಯತ್ನ ಪ್ರತಿ ದಿನ ಸಾಗುತ್ತಿತ್ತು. ಹರೀಶ ಮಾಸ್ತರ್ರಿಗೆ ನಾವೆಲ್ಲರೂ ಆಪ್ತರೇ. ನಾನು ಹಾಗೂ ವಿಜಯ ಇಬ್ಬರೂ ಆಕೇಶಿಯಾ ಗಿಡದ್ದೋ ಇಲ್ಲವೇ ಗಾಳಿ ಗಿಡದ್ದೋ ಶಳಕೆಯನ್ನು ತರುವ ಕೆಲಸ ಮಾಡಬೇಕಿತ್ತು. ತಂದ ತಪ್ಪಿಗೆ ನಮಗೇ ಮೊದಲ ಹೊಡೆತ ಬೀಳುತ್ತಿತ್ತು.
            ನಮಗೆ ಪರೀಕ್ಷೆಗಳಲ್ಲಿ ಸಿಕ್ಕಾಪಟ್ಟೆ ಮಾರ್ಕ್ಸು ಬೀಳ್ತಿತ್ತು ಅಂದ್ಕೋಬೇಡಿ. ನಾವೆಲ್ಲ ಎಪಿಎಲ್ ಕಾರ್ಡಿನ ಥರದವರು. ತೀರಾ 25ಕ್ಕೆ 20 ಬೀಳದಿದ್ದರೂ ಪಾಸ್ ಮಾರ್ಕ್ಸ್ ಆಗಿದ್ದ 9ರಿಂದ 18ರ ನಡುವೆ ಯಾವುದಾದರೂ ಒಂದು ಮಾರ್ಕ್ಸಿಗೆ ದಾಸರಾಗುತ್ತಿದ್ದೆವು. 20ರ ಮೇಲೇ ಏನಿದ್ದರೂ ಮಹೇಶನಿಗೋ, ಸಂಧ್ಯಾಳಿಗೋ, ಸವಿತಾಳಿಗೋ ಸಿಗಲಿ ಬಿಡಿ ಎಂದು ಬಿಟ್ಟಿದ್ದೆವು. ಆಗೊಮ್ಮೆ ಈಗೊಮ್ಮೆ ಗಣಿತದಲ್ಲಿ ನಾವು ನಪಾಸಾಗುವುದೂ ಇತ್ತು. ಆ ದಿನಗಳಲ್ಲಿ ನಮಗೆ ನಮ್ಮ ಮಾರ್ಕ್ಸ್ ಕಾರ್ಡುಗಳನ್ನು ಮನೆಯಲ್ಲಿ ತೋರಿಸುವುದು ಎಂದರೆ ಪರಮ ಭಯದ ಸಂಗತಿ. ನನ್ನ ಮನೆಯಲ್ಲಂತೂ ಮೊದಲ ಸ್ಥಾನವನ್ನೇ ಗಳಿಸಿಕೊಳ್ಳಬೇಕು ಎಂದು ಫರ್ಮಾನು ಹೊರಡಿಸಿಬಿಟ್ಟಿದ್ದರು. ಆದರೆ ಸಿ. ಎಂ. ಹೆಗಡೆಯವರಂತಹ ಮಾಸ್ತರ್ರು ಇದ್ದ ಕಾರಣ ನಾನು ಎಷ್ಟು ಓದಿದ್ದರೂ ಬೀಳುವ ಅಂಕಗಳು ಅಷ್ಟಕ್ಕಷ್ಟೇ ಆಗಿತ್ತು ಬಿಡಿ. ನಮಗೆಲ್ಲ ಆಗ ನಮ್ಮ ಸೀನಿಯರ್ ಆಗಿದ್ದ ಗಣಪತಿಯೇ ಆಪದ್ಭಾಂಧವ. ಮನೆಯಲ್ಲಿ ಮಾರ್ಕ್ಸ್ ಕಾರ್ಡುಗಳನ್ನು ಯಾವ ಸಂದರ್ಭದಲ್ಲಿ ತೋರಿಸಬಾರದು, ಯಾವ ಸಂದರ್ಭದಲ್ಲಿ ತೋರಿಸಬೇಕು ಎಂಬುದನ್ನು ತಿಳಿಸ ಹೇಳುತ್ತಿದ್ದ. ತೀರಾ ಪಾಸು ಮಾರ್ಕ್ಸ್ ಬೀಳದೇ ಇದ್ದರೆ ಆತನೇ ನಮ್ಮ ಮನೆಯ ಅಪ್ಪ, ಅಮ್ಮನ ಸಹಿಯನ್ನು ಫೋರ್ಜರಿ ಮಾಡಿ ಮಾರ್ಕ್ಸ್ ಕಾರ್ಡಿನ ಮೇಲೆ ಹಾಕುತ್ತಿದ್ದ. ನಾವು ಮೊದ ಮೊದಲು ಹೆದರುತ್ತಿದ್ದರೂ ನಂತರ ಮನೆಯವರ ಕಾಟ ತಪ್ಪಿಸಿಕೊಳ್ಳಲು ಗಣಪತಿಯ ಮೊರೆಯನ್ನೇ ಹೋಗಿದ್ದೆವು ಬಿಡಿ. ಕೊನೆಗೊಂದು ದಿನ ಮನೆಯಲ್ಲಿ ಈ ಸಂಗತಿ ಗೊತ್ತಾಗಿ ರಾದ್ಧಾಂತವಾಗಿದ್ದು ಬೇರೆಯ ಸಂಗತಿ. ಇದನ್ನು ಇನ್ನೊಮ್ಮೆ ಹೇಳುತ್ತೇನೆ. ಮಾರ್ಕ್ಸುಗಳ ಬೆನ್ನು ಹತ್ತದೇ ಅದರ ಬದಲಾಗಿ ಉಳಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗ ಕಡೆಗೆ ನಾವು ಕಣ್ಣು ಹಾಯಿಸಿದ್ದೆವು.
           ಶಾಲೆಯ ಕ್ರೀಡಾರಂಗದಲ್ಲಿ ನಾನು ಮುಂದಡಿಯಿಟ್ಟಿದ್ದೆ. ನನ್ನ ಕಾಲದಲ್ಲಿ 100 ಮೀಟರ್ ಓಟದಲ್ಲಿ ಶಾಲೆಯ ಪ್ರತಿನಿಧಿ ನಾನಾಗಿದ್ದೆ. ಕಬ್ಬಡ್ಡಿ ತಂಡದಲ್ಲಿ ನನ್ನ ಸೇರಿಸಿಕೊಂಡಿದ್ದರು. ಆದರೆ ನಾನು ರೈಡರ್ರೂ ಆಗಿರಲಿಲ್ಲ. ಡಿಫೆಂಡರ್ರೂ ಆಗಿರಲಿಲ್ಲ. ತಂಡ 7 ಜನರಲ್ಲಿ ನಾನು ಇದ್ದೆ ಅಷ್ಟೆ. ಸುಮ್ಮನೆ ನಿಲ್ಲುತ್ತಿದ್ದೆ. ಲಾಸ್ಟ್ ಮೇಂಬರ್ ಆಗಿ ಔಟಾಗುತ್ತಿದ್ದೆ. ವಾಲೀಬಾಲ್ ಆಡುತ್ತಿದ್ದೆನಾದರೂ ಸರ್ವೀಸ್ ನೆಟ್ ದಾಟುತ್ತಿರಲಿಲ್ಲ. ಕುಳ್ಳಗಿದ್ದ ಕಾರಣ ಖೋ ಖೋ ಚನ್ನಾಗಿ ಆಡುತ್ತಿದ್ದೆ. ಸಿಕ್ಕಾಪಟ್ಟೆ ಓಡುತ್ತಿದ್ದ ಕಾರಣ ಬಹಳ ಬೇಗನೆ ಸುಸ್ತಾಗುತ್ತಿತ್ತು. ಲಾಂಗ್ ಜಂಪ್ ವೀರನಾಗಿದ್ದೆ. ಬಹಳ ದಿನಗಳ ಪ್ರಾಕ್ಟೀಸ್ ಮಾಡಿದ ತಪ್ಪಿಗೆ ಕ್ರೀಡಾಕೂಟದಲ್ಲಿ 2ನೇ ಸ್ಥಾನ ಲಭ್ಯವಾಗಿತ್ತು ಎನ್ನುವುದು ಹೆಮ್ಮೆಯೇ ಹೌದು. ಕ್ರೀಡಾರಂಗದಲ್ಲಿ ವಿಜಯನೂ ಸಾಕಷ್ಟು ಸಾಧನೆ ಮಾಡಿದ್ದ ಬಿಡಿ.
             ನಾಟಕ, ಅದೂ ಇದೂ ಎಂದು ನಮ್ಮದು ಹಲವು ಆಲೋಚನೆಗಳು. ಹರೀಶ ಮಾಸ್ತರ್ರ ಕನಸಿಗೆ ನಾವು ಶಿಲೆಯಂತೆ ಸಿಕ್ಕಿದ್ದೆವು. ನಮ್ಮನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡಿದ್ದರು. ವಿಚಿತ್ರವೆಂದರೆ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಹೆಚ್ಚಿನ ಕಾರ್ಯಕ್ರಮದಲ್ಲಿ ನಾನು ಕುಡುಕನ ಪಾತ್ರವೋ, ಅಥವಾ ಅದಕ್ಕೆ ಸಂಬಂಧಿಸಿದಂತೆ ಪಾತ್ರಗಳೋ ಸಿಗುತ್ತಿದ್ದವು ಎನ್ನುವುದು ಮಾತ್ರ ವಿಚಿತ್ರವೇ ಹೌದು ನೋಡಿ. ನಮ್ಮ ಎಲ್ಲ ಕಾರ್ಯಕ್ರಮಗಳಿಗೆ ಹರೀಶ ಮಾಸ್ತರ್ರೇ ಸಿಂಗರ್ ಆಗಿದ್ದರು. ಘಟ್ಟದ ಕೆಳಗಿನ ಹೊನ್ನಾವರ ತಾಲೂಕಿನ ಯಾವುದೋ ಊರಿನವರಾಗಿದ್ದ ಹರೀಶ ಮಾಸ್ತರ್ರು ನಮ್ಮ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು ಎನ್ನಿ.
              ಆಗೊಮ್ಮೆ, ಈಗೊಮ್ಮೆ ಹರೀಶ ಮಾಸ್ತರ್ರು ನಮ್ಮ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರು. ಕ್ರೀಡಾಕೂಟಕ್ಕೆ ತಯಾರು ಮಾಡಲಿಕ್ಕೂ ಮುಂದಾಗುತ್ತಿದ್ದರು. ರಮೇಶ ಗಡ್ಕರ್ ಮಾಸ್ತರ್ರ ಜೊತೆ ವಿಶ್ರಾಂತಿ ವೇಳೆಯಲ್ಲಿ ಚೆಸ್ ಆಡುವ ಮೂಲಕ ನನಗೆ ಬಹುದೊಡ್ಡ ಕಾಟವನ್ನು ತಪ್ಪಿಸಿದ ಖ್ಯಾತಿ ಹರೀಶ ಮಾಸ್ತರ್ರದ್ದಾಗಿತ್ತು. ಹರೀಶ ಮಾಸ್ತರ್ರು ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡದೇ ಇದ್ದಲ್ಲಿ ನಾನು ಅದೆಷ್ಟೋ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ ಬಿಡಿ. ಈ ಕಾರಣದಿಂದಾಗಿ ನಾನು ಹರೀಶ ಮಾಸ್ತರ್ರನ್ನು ಎಷ್ಟೋ ಪಾಲು ನೆನಪಿಸಿಕೊಳ್ಳಬೇಕು. ಹರೀಶ ಮಾಸ್ತರ್ರು ಎಂದರೆ ನೆನಪಾಗುವುದು ಇಷ್ಟೇ ನೋಡಿ. ನಾನು ಏಳನೆ ಕ್ಲಾಸಿನವರೆಗೂ ಅವರ ಕೈಯಲ್ಲೇ ಓದುತ್ತಿದ್ದೆ. ನಾನು ಶಾಲೆ ಮುಗಿಸಿ ಬೇರೆಡೆಗೆ ಹೋಗುವ ಮುನ್ನ ಅವರ ಬಳಿ ದಿನಗಟ್ಟಲೆ ಮಾತನಾಡಿದ್ದೂ ಇದೆ. ನಾನು ಹೈಸ್ಕೂಲು ಸೇರಿ ಒಂದೆರಡು ವರ್ಷಗಳಾದರೂ ಹರೀಶ ಮಾಸ್ತರ್ರು ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆದರೆ ಆ ನಂತರದ ದಿನಗಳಲ್ಲಿ ಸಿ. ಎಂ. ಹೆಗಡೆಯವರ ರಾಜಕಾರಣದಿಂದಾಗಿ ಹರೀಶ ಮಾಸ್ತರ್ರು ವರ್ಗಾವಣೆ ಮಾಡಿಸಿಕೊಂಡು ಹೋದರು ಎನ್ನುವ ಸುದ್ದಿಯೂ ಕೇಳಿಬಂದಿತು. ಗಡ್ಕರ್ ಮಾಸ್ತರ್ ಹಾಗೂ ತಾರಕ್ಕೋರು ಇಂತಹ ಕಾರಣದಿಂದಲೇ ವರ್ಗ ಮಾಡಿಸಿಕೊಂಡು ಹೋದರು ಎನ್ನುವುದನ್ನು ಕೇಳಿ ಸಿ. ಎಂ. ಹೆಗಡೆಯವರ ಬಗ್ಗೆ ಸಿಟ್ಟೂ ಬಂದಿತ್ತು.
             ಹೈಸ್ಕೂಲಿನಲ್ಲಿ 8ನೇ ಕ್ಲಾಸಿನಲ್ಲಿ ಸಿಕ್ಕಾಪಟ್ಟೆ ಓದಿ ನಾನು ಮೊದಲ ಸ್ಥಾನ ಪಡೆದುಕೊಂಡು ಬಂದಾಗ ನನ್ನ ಅಪ್ಪ ಗಡ್ಕರ್ ಮಾಸ್ತರ್ ಹಾಗೂ ಹರೀಶ ಮಾಸ್ತರ್ರ ಬಳಿ ಹೇಳಿದ್ದರಂತೆ. ಅದನ್ನು ಕೇಳಿ ಸಂತೋಷ ಪಟ್ಟಿದ್ದ ಈ ಇಬ್ಬರೂ ಮಾಸ್ತರ್ರು ನಾನು ಮೊದಲ ಸ್ಥಾನ ಪಡೆದಿದ್ದನ್ನು ಕೇಳಿ ಬಹಳ ಜನರ ಬಳಿ ಹೊಗಳಿದ್ದರಂತೆ. ನಮ್ಮ ಶಾಲೆಯಲ್ಲಿ ವಿನಯ ಬಹಳ ಕಷ್ಟಪಟ್ಟಿದ್ದ ಬಿಡಿ. ಆದರೆ ಹೈಸ್ಕೂಲಿನಲ್ಲಾದರೂ ಆತನಿಗೆ ಒಳ್ಳೆಯದಾಗುತ್ತಿದೆಯಲ್ಲ. ಅಷ್ಟು ಸಾಕು ಬಿಡಿ. ಹಿಂಗೇ ಚನ್ನಾಗಿ ಓದಲು ಹೇಳಿ ಎಂದೂ ಹೇಳಿದ್ದರಂತೆ. ಈಗಲೂ ಅವರ ಮಾತುಗಳು ನನ್ನನ್ನು ಕಾಡುತ್ತಿರುತ್ತವೆ. ನೆನಪಾಗುತ್ತಿರುತ್ತವೆ.

ಪಿ. ಜಿ. ಹಾವಗೋಡಿ :
               ಹೌದು. ಹಾವಗೋಡಿ ಮಾಸ್ತರ್ ನನಗ ಕೆಲಕಾಲ ಕಲಿಸಿದ್ದಾರೆ. ಹಾವಗೋಡಿ ಮಾಸ್ತರ್ರನ್ನು ನಾನು ಮೊದಲು ನೋಡಿದ್ದು ಮುತ್ಮೂರ್ಡು ಶಾಲೆಗೆ ಅವರು ಮಾಸ್ತರ್ರಾಗಿ ಬರುತ್ತಿದ್ದ ಸಂದರ್ಭದಲ್ಲಿ. ನಮ್ಮೂರ ಸ್ಕಿಡ್ ಆಗುವ ರಸ್ತೆಯಲ್ಲಿ ಲೂನಾ ಮೇಲೆ ಬರುತ್ತಿದ್ದರು ಅವರು. ಅದೊಮ್ಮೆ ನಾವು ನಡೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ  ನಮ್ಮೆದುರೇ ಅವರ ಲೂನಾ ಗಿರಿಗಿರಿ ತಿರುಗಿ ಲಗಾಟಿ ಹೊಡಯುವಂತಾಗಿತ್ತು. ಆಗ ನಮ್ಮನ್ನು ನೋಡಿದ ಹಾವಗೋಡಿ ಮಾಸ್ತರ್ರು `ನೋಡ್ರಾ ತಮಾ.. ಹೆಂಗ್ ಮುಕಳಿ ಕುಂಡೆ ತಿರುಗಿಸ್ತು ಈ ಗಾಡಿ..' ಎಂದಿದ್ದು ನೆನಪಿನಲ್ಲಿದೆ.
               ಮುಂದೆ ಇದೇ ಹಾವಗೋಡಿ ಮಾಸ್ತರ್ರು ಕೋಡ್ಸರ ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಯಾರಿಗೋ ಗೆರೆಪಟ್ಟಿಯಲ್ಲಿ ಹೊಡೆದಿದ್ದರಂತೆ. ಹೊಡೆದಿದ್ದ ಪರಿಗೆ ಗೆರೆಪಟ್ಟಿ ಮುರಿದು ಹೋಗಿದ್ದರೆ ಹೊಡೆತ ತಿಂದವನಿಗೆ ದೊಡ್ಡ ಗಾಯವಾಗಿತ್ತಂತೆ. ನಾಲ್ಕು ದಿನ ಜ್ವರ ಮಾಡಿದ್ದನಂತೆ. ಆ ಬಾಲಕನ ತಂದೆ ತಾಯಿಯರು ಬಂದು ಹಾವಗೋಡಿ ಮಾಸ್ತರ್ರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನೆಯನ್ನೂ ಮಾಡಿದ್ದರಂತೆ. ಈ ಸುದ್ದಿಯನ್ನೆಲ್ಲ ಕೇಳಿದಾಗ ಹಾವಗೋಡಿ ಮಾಸ್ತರ್ರೆಂದರೆ ಯಾರೋ ಭಯೋತ್ಪಾದಕರೇ ಇರಬೇಕು ಎಂದುಕೊಂಡಿದ್ದೆವು ಬಿಡಿ. ಇಂತಹ ಮಾಸ್ತರ್ರಿಗೆ ಏಳನೇ ತರಗತಿಯಲ್ಲಿ `ಸೇತುಬಂಧ' ಪರೀಕ್ಷೆಯ ಪೇಪರ್ ಚೆಕ್ ಮಾಡುವ ಕೆಲಸ ಸಿಕ್ಕಿತ್ತು. ನನ್ನ ಪೇಪರ್ರನ್ನು ಚೆಕ್ ಮಾಡಿದ್ದರು. ನನಗೆ ಸಿಕ್ಕಾಪಟ್ಟೆ ಅಂಕಗೂ ಬಿದ್ದಿದವು ಬಿಡಿ.
             ಆಮೇಲೆ ಯಾವಾಗಲೋ ಒಮ್ಮೆ ಬಹುಶಃ ಐದನೇ ಕ್ಲಾಸಿನಲ್ಲಿ ಇರಬೇಕು. ಅವರು ನನಗೆ ಶಿಕ್ಷಕರಾಗಿ ನಮ್ಮ ಶಾಲೆಗೆ ಬಂದಿದ್ದರು. ಕನ್ನಡ ವಿಷಯವನ್ನು ಬಹಳ ಚನ್ನಾಗಿ ಕಲಿಸುತ್ತಿದ್ದರು ಅವರು. ಆದರೆ ಅವರ ಮೇಲೆ ಇದ್ದ ಒಂದೇ ಬೇಜಾರು ಎಂದರೆ ನಮಗೆ ಆಟದ ಪಿರಿಯಡ್ಡಿನಲ್ಲಿ ಆಟಕ್ಕೇ ಬಿಡುತ್ತಿರಲಿಲ್ಲ. ಆಗಲೂ ಪಾಠವನ್ನೇ ಕಲಿಸುತ್ತಿದ್ದರು. ಕೊನೆಗೊಮ್ಮೆ ನಾವು ವಿದ್ಯಾರ್ಥಿಗಳೆಲ್ಲ ಸೇರಿ ಮಾಸ್ತರ್ರ ಬಳಿ ಗಲಾಟೆ ಮಾಡಿದಾಗಲೇ ನಮ್ಮನ್ನು ಆಟಕ್ಕೆ ಬಿಡಲು ಆರಂಭ ಮಾಡಿದ್ದು. ಹಾವಗೋಡಿ ಮಾಸ್ತರ್ರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಮತ್ತಿನ್ನೇನೂ ವಿಶೇಷ ಘಟನೆಗಳು ಜರುಗಲಿಲ್ಲ ಬಿಡಿ.

          ಪ್ರೈಮರಿ ಬದುಕು ಕಳೆದು ಎಷ್ಟೋ ವರ್ಷಗಳು ಕಳೆದು ಹೋಗಿದೆ. ಆ ದಿನಗಳಲ್ಲಿ ನಮ್ಮದು ಹಸಿ ಮನಸ್ಸೇ ಸರಿ. ಏನೇ ನಡೆದಿದ್ದರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತವೆ. ಆ ಕಾರಣದಿಂದಲೇ ಬಹಳಷ್ಟು ಸಂಗತಿಗಳನ್ನು ನಾನು ಇಲ್ಲಿ ಉಲ್ಲೇಖ ಮಾಡಿದ್ದೇನೆ. ತಾರಕ್ಕೋರನ್ನೋ, ಗಡ್ಕರ್ ಮಾಸ್ತರ್ರನ್ನೋ, ಹರೀಶ ಮಾಸ್ತರ್ರನ್ನೋ ಪ್ರೀತಿಯಿಂದ ಕಾನುತ್ತಿದ್ದೇನೆ, ನೆನೆಯುತ್ತೇನೆ ಎಂದರೆ ಆ ದಿನಗಳಲ್ಲಿ ಅವರು ತೋರಿದ ಅಕ್ಕರೆಗಳೆ ಕಾರಣವಾಗುತ್ತವೆ. ಜಿ. ಎಸ್. ಭಟ್ಟರಂತೂ ಅವರ ಸಿಟ್ಟಿನಿಂದಲೇ ನೆನಪಿನಲ್ಲಿ ಉಳಿದು ಹೋಗಿದ್ದಾರೆ. ಇನ್ನು ಸಿ. ಎಂ. ಹೆಗಡೆಯವರ ಬಗ್ಗೆ ನಾನು ಹೀಗೆ ಅಂದುಕೊಳ್ಳಲಿಕ್ಕೆ ಕಾರಣ ಅವರೇ ಬಿಡಿ. ಅಲ್ಲಿಂದ ಮುಂದಕ್ಕೆ ನನ್ನ ಹೈಸ್ಕೂಲಿನ ಬದುಕು ಆರಂಬಗೊಂಡಿತು. ಏಳನೇ ಕ್ಲಾಸಿಗೆ ಆಗ ಇದ್ದ ಪಬ್ಲಿಕ್ ಪರೀಕ್ಷೆಯಲ್ಲಿ ನಾಲ್ಕನೇ ಟಾಪರ್ ಆಗಿ ಪಾಸಾಗಿದ್ದೆ. ಸಂದ್ಯಾ, ಸವಿತಾ, ಮಹೇಶ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದರೆ ನಾನು ನಾಲ್ಕನೇ ಸ್ಥಾನ ಪಡೆದಿದ್ದೆ. ವಿಜಯ ನನಗಿಂತ ಮೂರು ಅಂಕ ಕಡಿಮೆ ಪಡೆದುಕೊಂಡು ಮುಂದಿನ ಸ್ಥಾನ ಪಡೆದುಕೊಂಡಿದ್ದ. ಶಾಲೆಗೆ ದೊಡ್ಡದಂದು ಟೇಬಲ್ಲನ್ನು ಕೊಡುಗೆಯಾಗಿ ಕೊಟ್ಟು ನಾವು ಶಾಲೆಯನ್ನು ಬಿಟ್ಟಿದ್ದೆವು. ಆಮೇಲಿಂದ ಬೇರೆಯದೇ ಬದುಕು ಆರಂಭಗೊಂಡಿತ್ತು. ಹೈಸ್ಕೂಲು ನಮ್ಮನ್ನು ಕೈಬೀಸಿ ಕರೆದಿತ್ತು.

(ಮುಂದುವರಿಯುತ್ತದೆ)
(ಮುಂದಿನ ಕಂತಿನಲ್ಲಿ ನನ್ನ ಹೈಸ್ಕೂಲು ಬದುಕಿನ ಮಾಸ್ತರ್ರ ಬಗ್ಗೆ ಬರೆಯಲಿದ್ದೇನೆ)