`ಹಲೋ... ಮಂಗಳೂರು ಮೇಲ್ ಪತ್ರಿಕೆನಾ..?'
`ಹೌದು.. ನೀವ್ಯಾರು? ಹೇಳಿ ಏನು ವಿಷಯ?'
`ನಾನು ವಿನಾಯಕ ಅಂತ.. ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವ ವಿಕ್ರಂ ಅವರ ಬಳಿ ಮಾತನಾಡಬೇಕಿತ್ತು..'
`ಒಂದ್ನಿಮಿಷ ಇರಿ.. ಹೇಳ್ತೀನಿ...'
ವಿಕ್ರಂ ಪೋನೆತ್ತಿಕೊಂಡ. `ಹಲೋ..' ಎಂದ. `ಏನಪ್ಪಾ...ದೊರೆ... ನೀನು ಮಂಗಳೂರಿಗೆ ಹೋಗಿ ನಮ್ಮನ್ನೆಲ್ಲ ಮರೆತೇಬಿಟ್ಯಾ?' ಎಂದ ವಿನಾಯಕ.
ಇದನ್ನು ಕೇಳಿದ್ದೇ ತಡ ವಿಕ್ರಂ ಅತ್ಯಾಶ್ಚರ್ಯದಿಂದ `ಅರೇ ವಿನಾಯ್ಕಾ.. ಎಂತದೋ ಮಾರಾಯಾ.. ಏನ್ ಶಾಕ್ ಕೊಟ್ಟು ಬಿಟ್ಯಾ? ಮತ್ತೆ..? ಎಲ್ಲಿಂದ ಮಾತಾಡ್ತಾ ಇದ್ದೆ? ಏನ್ ವಿಶೇಷ? ಹೇಂಗಿದ್ದೆ? ಮನೆಲ್ಲಿ ಎಲ್ಲಾ ಅರಾಮಿದ್ವಾ?' ಎಂದ ವಿಕ್ರಂ.
`ಎಲ್ಲಾ ಅರಾಮಿದ್ದ ಮಾರಾಯಾ.. ನೀನು ಹೆಂಗಿದ್ದೆ ಹೇಳು.. ಆನು ಯನ್ ಮೊಬೈಲಿಂದನೇ ಪೋನ್ ಮಾಡ್ತಾ ಇದ್ನಾ.. ನಿನ್ ಹತ್ರ ಮಾತಾಡನಾ ಹೇಳಿ ಸುಮಾರ್ ಟ್ರೈ ಮಾಡಿ.. ನಿಮ್ಮನಿಗೆ ಪೋನ್ ಮಾಡಿ ನಿನ್ ನಂಬರ್ ಇಸ್ಕಂಡು ಪೋನ್ ಮಾಡ್ತಾ ಇದ್ದಿ ನೋಡಿ.. ಏನೋ ದೊಡ್ ಮನ್ಷಾ.. ಪೇಪರ್ ಕೆಲಸಕ್ಕೆ ಸೇರಿದ್ದು ಎಲ್ಲಾ ಪೋನ್ ಮಾಡಿ ಹೇಳಲೆ ಆಕ್ತಿಲ್ಯನಾ..? ನಂಗವ್ವೇ ಪೋನ್ ಮಾಡಿ ಹೇಳವನಾ ನಿಂಗೆ..?' ಹುಸಿಮುನಿಸಿನಿಂದ ದಬಾಯಿಸಿದ ವಿನಾಯಕ.
`ಥೋ.. ಅದೆಂತಾ ಹೇಳವು ಮಾರಾಯಾ... ಏನೇನೋ ಆಗ್ತು.. ಲೈಫಲ್ಲಿ ಸಿಕ್ಕಾಪಟ್ಟೆ ತಿರುವು ಸಿಕ್ಕಿ ಈಗ ಪತ್ರಿಕೋದ್ಯಮಿಯೂ ಆಗ ಪ್ರಸಂಗ ಬಂತು ನೋಡು.. ಅದೆಲ್ಲಾ ನೀ ಎದುರಿಗೆ ಸಿಕ್ಕಾಗ ಹೇಳ್ತಿ.. ದೊಡ್ ಕಥೆ ಮಾರಾಯಾ...' ಎಂದ ವಿಕ್ರಂ
`ಅಡ್ಡಿಲ್ಯಾ.. ನಾನು ಹಿಂಗೆ ಸುಮ್ನೆ ಪೋನ್ ಮಾಡಿದ್ನಾ.. ನನ್ನ ಮೊಬೈಲ್ ನಂಬರ್ ಕೊಟ್ಟಾಂಗೂ ಆತು.. ನಿನ್ ಕೈಲಿ ಮಾತಾಡದಾಂಗೂ ಆತು.. ಸುಮಾರ್ ದಿನಾ ಆಗಿತ್ತಲಾ.. ಭಾವ ನೆಂಟ ಹೇಳದ್ನೇ ಮರೆತು ಹೋಗಿದ್ವನೋ ಅನ್ನೋವಷ್ಟ್ ಟೈಮಾಗಿತ್ತಲಾ...' ಎಂದ ವಿನಾಯಕ. `ಹುಂ' ಎಂದ ವಿಕ್ರಂ.. ಪೋನ್ ಇಡಲು ಹವಣಿಸುತ್ತಿದ್ದಂತೆ ವಿನಾಯಕನ ಮೊಬೈಲ್ ನಂಬರ್ ಬರೆದಿಟ್ಟುಕೊಂಡ. `ಹೇಯ್ ವಿನೂ.. ನಾನು ನಿನ್ ಹತ್ರ ಮಾತಾಡವಾ.. ಸಂಜೆ ಮಾತಾಡ್ತಿ.. ಬಹಳ ಇಂಟರೆಸ್ಟಿಂಗ್ ಆದ ಒಂದು ವಿಷ್ಯ ಇದ್ದು.. ಅದಕ್ಕೆ ನಿನ್ನ ಸಹಕಾರ, ಸಹಾಯ ಎಲ್ಲಾ ಬೇಕು.. ಸಂಜೆ ಮಾತಾಡ್ತಿ...' ಎಂದವನೇ ಪೋನ್ ಇಟ್ಟ.
ಅಚ್ಚರಿಯಲ್ಲಿಯೇ ವಿನಾಯಕನೂ ಪೋನ್ ಇಟ್ಟಿದ್ದ.
*****
ವಿನಾಯಕ ವಿಕ್ರಮನ ಮಾವನ ಮಗ. ಒಂದೇ ವಾರಗೆಯವರು. ವಿನಾಯಕನ ಊರು ಶಿರಸಿ-ಸಿದ್ದಾಪುರ ಮಾರ್ಗ ಮದ್ಯದ ಕಾನಸೂರು ಬಳಿಯ ದಂಟಕಲ್ ಎಂಬ ಚಿಕ್ಕ ಹಳ್ಳಿ. ವಿಕ್ರಂ ಹಾಗೂ ವಿನಾಯಕ ಇಬ್ಬರಿಗೂ ಪರಸ್ಪರ ಅಜ್ಜನಮನೆ ಸಂಬಂಧ. ಅಂದರೆ ವಿನಾಯಕನ ತಂದೆಯ ತಂಗಿ ವಿಕ್ರಮನ ತಾಯಿ. ಅದೇ ರೀತಿ ವಿಕ್ರಮನ ತಂದೆಯ ತಂಗಿ ವಿನಾಯಕನ ತಾಯಿ. ಯಾವ ಸಾಲಿನಿಂದ ನೋಡಿದರೂ ಇಬ್ಬರಿಗೂ ಪರಸ್ಪರ ಅಜ್ಜನಮನೆ ನೆಂಟಸ್ತನ. ಬಾಲ್ಯದಿಂದ ಇಬ್ಬರೂ ಆಪ್ತರು.
ಹೇಳಿದಂತೆಯೇ ಸಂಜೆಯ ವೇಳೆಗೆ ವಿಕ್ರಮ, ವಿನಾಯಕನಿಗೆ ಪೋನ್ ಮಾಡಿದ. ವಿಕ್ರಮನಿಂದ ಪೋನ್ ಬರುತ್ತದೆ ಎನ್ನುವ ಕಾರಣಕ್ಕಾಗಿ ಸಿಗ್ನಲ್ ಸಿಗದ ತನ್ನೂರಿನಿಂದ ಮೊಬೈಲ್ ಸಿಗ್ನಲ್ ಇರುವ ಸ್ಥಳಕ್ಕೆ ಬಂದು ಕಾಯುತ್ತಿದ್ದ ವಿನಾಯಕ. ಆರಂಭದಲ್ಲಿ ಉಭಯಕುಶಲೋಪರಿಯನ್ನೆಲ್ಲ ತಿಳಿಸಿದ ಮೇಲೆ ವಿಕ್ರಂ `ಶಿರಸಿಯಲ್ಲಿ ಸಧ್ಯದಲ್ಲಿ ಯಾವುದಾದರೂ ಕೊಲೆ, ದರೋಡೆ, ಹೊಡೆದಾಟ ಇತ್ಯಾದಿ ಏನಾದರೂ ಗಲಾಟೆ ನಡೆದಿತ್ತಾ?' ಎಂದ.
`ಸಧ್ಯ ಇಲ್ಲ.. ಈಗೊಂದು ತಿಂಗಳ ಹಿಂದೆ ಜಾತ್ರೆ ಟೈಮ್ನಲ್ಲಿ ಏನೇನೋ ನಡೆದಿತ್ತು.. ದರೋಡೆ ಆಗಿತ್ತು.. ಗಲಾಟೆನೂ ಸುಮಾರು ಆಗಿತ್ತು.. ಆಮೇಲೆ ಈಗೊಂದು 15 ದಿನದ ಹಿಂದೆ ಸ್ಮಗ್ಲಿಂಗ್ ವಿಚಾರದಲ್ಲಿ ಇಬ್ಬರು ಕಾಲೇಜು ಹುಡುಗರನ್ನು ಪೊಲೀಸರು ಅರೆಸ್ಟ್ ಮಾಡಿದ್ರು..' ಎಂದ ವಿನಾಯಕ.
`ಹೌದಾ..? ಎಂತಾ ಸ್ಮಗ್ಲಿಂಗ್ ಅದು?'
`ಹುಲಿಯುಗುರು ಸ್ಮಗ್ಲಿಂಗ್ ಮಾಡ್ತಾ ಇದ್ದಿದ್ದ.. ಕಾಲೇಜು ಹುಡುಗ್ರು.. ಗಂಧದ ತುಂಡೂ ಇತ್ತು.. ಪೊಲೀಸರು ಅರೆಸ್ಟ್ ಮಾಡಿದ್ದು ಗೊತ್ತಿತ್ತು.. ಒಂದೆರಡ್ ದಿನಾ ಭಯಂಕರ ಗಲಾಟೆ ಆಗಿತ್ತು.. ಆಮೇಲ ಇದ್ದಕ್ಕಿದ್ದಾಂಗೆ ತಂಡ್ ಆಜು.. ಇದ್ ಬಿಟ್ರೆ ಮತ್ತೆಂತದ್ದೂ ಆದಾಂಗಿಲ್ಲೆ ನೋಡು..' ಎಂದ ವಿನಾಯಕ
`ಹೌದಾ... ಆಮೇಲೆ ಎಂತಾದ್ರೂ ಆಜಾ..?' ವಿಕ್ರಂ ಕೇಳಿದ
`ಮತ್ತೆಂತದ್ದೂ ಇಲ್ಲೆ... ಎಲ್ಲಾ ಸರಿ.. ನೀ ಎಂತಕ್ಕೆ ಇದನ್ನೆಲ್ಲಾ ಕೇಳ್ತಾ ಇದ್ದೆ? ಶಿರಸಿಯಲ್ಲಿ ನಡೆದ ದರೋಡೆ, ಸ್ಮಗ್ಲಿಂಗ್ ಬಗ್ಗೆ ನಿಂಗೆಂತಕ್ಕೋ ಅಷ್ಟೆಲ್ಲ ಆಸಕ್ತಿ?' ಎಂದು ಪ್ರಶ್ನಿಸಿದ್ದ ವಿನಾಯಕ.
`ಎಂತಕ್ಕೂ ಅಲ್ಲಾ ಮಾರಾಯಾ.. ನಮ್ ಆಪೀಸಿಗೆ ಒಂದು ಸುದ್ದಿ ಬಂದಿತ್ತು.. ಶಿರಸಿ ರಿಪೋರ್ಟರ್ರೋ ಅಥವಾ ಮತ್ಯಾರೋ ವರದಿ ಮಾಡಿದ್ದು.. ಅದು ನಿಜಾನೋ ಸುಳ್ಳೋ.. ಹೇಳಿ ಕನ್ಫರ್ಮ್ ಮಾಡ್ಕಂಬಲೆ ಕೇಳಿದ್ನಾ..' ಎಂಬ ಸುಳ್ಳನ್ನು ಹೇಳಿ ಪೋನ್ ಇಟ್ಟ. ವಿಕ್ರಮನಿಗೆ ಎಲ್ಲೋ ಏನೋ ಹೊಳೆದಂತಾಯಿತು. ತಾನು ಮಾಡುತ್ತಿದ್ದ ತನಿಖಾ ವರದಿಗೂ ವಿನಾಯಕ ಹೇಳಿದ್ದ ಅಂಶಕ್ಕೂ ಸಾಕಷ್ಟು ಸಂಬಂಧವಿದೆಯೇನೋ ಅನ್ನಿಸಿತು.
ಹಾಗಾದರೆ ಶಿರಸಿಯೇ ಎಸ್ ಗುಂಪಿನ ಕಾರ್ಯಸ್ಥಾನವೇ? ತಾನು ಯಾವುದಕ್ಕೂ ಒಮ್ಮೆ ಶಿರಸಿಗೆ ಹೋಗಿಬರಬೇಕು ಎಂದು ಕೊಂಡ ವಿಕ್ರಮ. ಶಿರಸಿಯಲ್ಲಿ ಯಾರನ್ನು ಬಂಧಿಸಿದ್ದರೋ ಅವರನ್ನು ಮಾತನಾಡಿಸಿದರೆ ಏನಾದರೂ ಸಿಗಬಹುದು. ಅಂದರೆ ನಾನು ಶಿರಸಿಗೆ ಸಾಧ್ಯವಾದಷ್ಟು ಬೇಗನೆ ಹೋಗಲೇಬೇಕು ಎಂದುಕೊಂಡವನು ರೂಮಿನಲ್ಲಿದ್ದ ಟಿವಿಯನ್ನು ಹಾಕಿದ. ಟಿವಿಯಲ್ಲಿ ಶಿರಸಿಯಲ್ಲೊಂದು ಕೊಲೆಯಾಗಿದೆಯೆಂದೂ, ಕೊಲೆಯಾದ ವ್ಯಕ್ತಿ ಶಿರಸಿಯಲ್ಲಿ ಕೆಲ ದಿನಗಳ ಹಿಂದೆ ಸ್ಮಗ್ಲಿಂಗ್ ವ್ಯವಹಾರದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದನೆಂದೂ, ಕೊಲೆ ಮಾಡಿದವರು ತಲೆ ತಪ್ಪಿಸಿಕೊಂಡಿದ್ದಾರೆಂದೂ ತಿಳಿಯಿತು. ಆಗಲೇ ವಿಕ್ರಮನಿಗೆ ತನ್ನ ತನಿಖೆ ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತಿದ್ದಂತೆ ಮತ್ತೆಲ್ಲೋ ಹಾದಿ ತಪ್ಪುತ್ತಿದೆ ಎಂದು ಅರ್ಥವಾಯಿತು. ಆದರೂ ಶಿರಸಿಗೆ ಹೋಗಿ ಪ್ರಯತ್ನಿಸುವುದು ಒಳಿತು ಎಂದುಕೊಂಡ. ಬದುಕಿರುವ ಇನ್ನೊಬ್ಬ ಕಾಲೇಜು ವಿದ್ಯಾರ್ಥಿಯನ್ನಾದರೂ ಮಾತನಾಡಿಸೋಣ ಎಂದುಕೊಂಡ.
ಮರುದಿನವೇ ಆತ ನವೀನಚಂದ್ರರ ಛೇಂಬರಿಗೆ ಹೋದ. ನವೀನಚಂದ್ರರು ಆಗಲೇ ಅಲ್ಲಿ ಕುಳಿತಿದ್ದರು. ಒಳಬಂದ ವಿಕ್ರಮನನ್ನು ನೋಡಿ `ವಿಕ್ರಂ... ನಂಗ್ಯಾಕೋ ನೀವು ಈ ತನಿಖೆಯನ್ನು ಕೈ ಬಿಡುವುದೇ ಒಳ್ಳೆಯದು ಎನ್ಸುತ್ತೆ. ಇದರಿಂದ ಉಪಯೋಗ ಇಲ್ಲ. ಜೊತೆಗೆ ಅಪಾಯವೇ ಹೆಚ್ಚು. ಏನಂತೀಯಾ?' ಎಂದರು.
`ಆದ್ರೆ ಸರ್.. ಈಗ ನಾನು ಒಂದು ಹಂತದೆಡೆಗಿನ ಹುಡುಕಾಟವನ್ನು ಮುಗಿಸಿದ್ದೇನೆ. ಇಲ್ಲಿ ಮುಖ್ಯ ಪಾತ್ರ ವಹಿಸುವುದು ಎಸ್ ಲಾಕೇಟಿನ ಒಂದು ಗುಂಪು. ಆ ಗುಂಪಿನ ಕಾರ್ಯಸ್ಥಳವೋ ಅಥವಾ ಪ್ರಮುಖ ಪ್ರದೇಶವೋ ಗೊತ್ತಿಲ್ಲ. ಅದು ಶಿರಸಿ ಎನ್ನುವುದು ತಿಳಿದಿದೆ. ಇಂತಹ ಸಮಯದಲ್ಲಿ ನನ್ನ ಹುಡುಕಾಟವನ್ನು ನಿಲ್ಲಿಸಲಾರೆ ಸರ್..' ಎಂದ ವಿಕ್ರಂ.
`ಹಾಗಲ್ಲಪ್ಪಾ... ಈ ನಿನ್ನ ತನಿಖೆ ಬಹಳ ಡೇಂಜರ್ರು. ಇಲ್ಲಿ ಹಲವು ರೀತಿಯ ತೊಂದರೆ ಬರಬಹುದು. ಅದೂ ಅಲ್ದೆ ಆ ಗುಂಪು ಕೊಲ್ಲೋದಕ್ಕೂ ಹೇಸೋದಿಲ್ಲ ಎನ್ನುವುದು ಅರಿವಾಗಿದೆ. ಮಂಗಳೂರು ಹಾಗೂ ಶಿರಸಿಗಳಲ್ಲಿ ನಡೆದಿರೋ ಕೊಲೆಗಳೇ ಇದಕ್ಕೆ ಸಾಕ್ಷಿ. ಸುಮ್ನೆ ಅಪಾಯವನ್ನು ಮೈಮೇಲೆಳೆದುಕೊಳ್ಳುವಂತದ್ದು ಏನಿದೆ? ಅಂತಹ ಕೆಲಸವನ್ನು ನಾವ್ಯಾಕೆ ಮಾಡ್ಬೇಕು ಹೇಳಿ. ' ಎಂದರು ನವೀನಚಂದ್ರ.
`ಸರ್.. ನಾನು ಮೊದಲು ಇಲ್ಲಿ ಸೇರೋವಾಗ ನಿಮಗೆ ಹೇಳಿದ್ದೆ. ಅದರ ಜೊತೆಗೆ ನಾನು ಮಾಡ್ತಿರೋ ವೃತ್ತಿಯೇ ಅಂತದ್ದಾಗಿದೆ. ಹರಿತವಾದ ಕತ್ತಿಯ ಮೇಲೆ ನಡೆದುಕೊಂಡು ಓಡಾಡುವಂತದ್ದು. ಅದರಲ್ಲಿ ತಿರುಗಿ ಬರುವ ಪ್ರಶ್ನೆಯೇ ಇಲ್ಲ ಸಾರ್.. ನೀವ್ ಹೆದರಬೇಡಿ... ಎಂತದ್ದೇ ಸಮಸ್ಯೆ ಬಂದರೂ ನಾನು ಹಿಂದಕ್ಕೆ ತಿರುಗೋದಿಲ್ಲ..'
`ಆದ್ರೂ... ಒಂದ್ ಸಾರಿ ಆಲೋಚನೆ ಮಾಡಿ..'
`ಇಲ್ಲ ಸಾರ್.. ನಾನು ಈ ಹುಡುಕಾಟ ನಿಲ್ಲಿಸೋದಿಲ್ಲ. ಏನೇ ಕಷ್ಟ ಬಂದರೂ.. ಸಾವೇ ಎದುರಿಗೆ ಬಂದರೂ ಅದನ್ನು ಎದುರಿಸಿ ನಿಲ್ಲುತ್ತೇನೆ...'
|
(ಮಲೆನಾಡಿನಲ್ಲಿ ಮಂಜಿನ ಮುಂಜಾವು) |
`ಹಹ್ಹಹ್ಹ..! ವೆಲ್ ಡನ್..ಗುಡ್ ವಿಕ್ರಂ. ನಾನು ಮಾಡಿದ ಪರೀಕ್ಷೆಯಲ್ಲಿ ನೀನು ಗೆಲುವು ಸಾಧಿಸಿದೆ. ನಾನು ನಿನ್ನನ್ನು ಪರೀಕ್ಷೆ ಮಾಡಲಿಕ್ಕಾಗಿ ಕೇಳಿದ್ದೆ. ಆದರೆ ನೀನು ಅದಕ್ಕೆ ಹೆದರಲಲ್ಲಿಲ್ಲ ನೋಡು. ಕೇಸಿನ ಬಗ್ಗೆ ನಿನ್ನ ನಿಷ್ಟೆ ಯಾವ ರೀತಿ ಇರಬಹುದು ಎಂದುಕೊಂಡೆ. ಪರವಾಗಿಲ್ಲ.. ಒಳ್ಳೆ ಕೆಲಸ ಹಾಕ್ಕೊಂಡಿದ್ದೀಯಾ.. ಗುಡ್..' ಎಂದರು ನವೀನಚಂದ್ರ.
`ಓಹ್... ನಾನು ಇದೇನಿದು ಅಂದ್ಕೊಂಡೆ.. ಯಾಕೆ ಹೀಗೆ ಅವರು ಹೇಳ್ತಾ ಇದ್ದಾರೆ ಎಂದೂ ಆಲೋಚನೆ ಮಾಡಿದ್ದೆ ನೋಡಿ..'
`ನೋಡು.. ಒಂದು ಮುಖ್ಯ ಸುದ್ದಿ ಹೇಳ್ಬೇಕು. ನಿಮ್ಮೂರು ಇರೋದು ಉತ್ತರ ಕನ್ನಡದಲ್ಲಿ ಅಲ್ವಾ? ಅಲ್ಲಿಯೇ ಈ ಗುಂಪಿನ ಕಾರ್ಯಸ್ಥಾನ ಇರೋದು ಅಂತ ಹೇಳಿದ್ರಿ ನೀವು. ನೀವ್ಯಾಕೆ ಅಲ್ಲಿಗೆ ಹೋಗಿ ನಿಮ್ಮ ತನಿಖೆ ಮುಂದುವರಿಸಬಾರದು? ಈ ಕುರಿತು ಒಂದೆರಡು ದಿನ ತಡವಾದರೂ ತೊಂದರೆಯಿಲ್ಲ. ಆದರೆ ನಿಜವಾದ ಆರೋಪಿ, ಈ ಎಲ್ಲದ್ದಕ್ಕೂ ಕಾರಣವಾಗಿರುವ ತಂಡ ಸಿಕ್ಕಿಬಿಟ್ಟರೆ ಅಷ್ಟೇ ಸಾಕು. ನಿನಗೆ ಎಷ್ಟು ದಿನದ ರಜೆ ಬೇಕಾದರೂ, ಜೊತೆಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನನ್ನಿಂದ ಹಾಗೂ ನಮ್ಮ ಆಫೀಸಿನಿಂದ ಸಿಗುತ್ತದೆ...' ಎಂದರು ನವೀನಚಂದ್ರ.
`ನಾನೂ ಅದನ್ನೇ ತಿಳಿಸೋಕೆ ಬಂದೆ ಸಾರ್.. ನಾನು ಇವತ್ತು ಸಂಜೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ. ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್. ಸರ್.. ನನಗೆ ಕನಿಷ್ಟ 2 ವಾರದ ರಜೆ ಬೇಕು. ನಾನು ಅಲ್ಲಿನ ಹುಡುಕಾಟಾನ ಕಾಲಕಾಲಕ್ಕೆ ತಕ್ಕಂತೆ ನಡೆಯುವ ವಿದ್ಯಮಾನಗಳನ್ನು ವರದಿ ಮಾಡ್ತೀನಿ ಸರ್. ಆದರೆ ನನ್ನ ತನಿಖೆ ಪೂರ್ತಿ ಆಗುವ ವರೆಗೂ ಆ ವರದಿ ಪತ್ರಿಕೆಯಲ್ಲಿ ಬರಬಾರದು..' ಎಂದ ವಿಕ್ರಮ.
ಸರಿ. ಆದ್ರೆ ಒಂದು ಮುಖ್ಯವಾದ ವಿಷಯ. ನೀನು ಅಲ್ಲಿಗೆ ಹೋದಾಗ ಪೇಪರ್ರಿನವನು ಅಂತ ಹೇಳಬೇಡ. ಯಾವುದಾದರೂ ರಿಸರ್ಚ್ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿ. ಜೊತೆಗೆ ನನ್ನ ಕಾರನ್ನೂ ತೆಗೆದುಕೊಂಡು ಹೋಗು. ಸಹಾಯಕ್ಕೆ ಬರುತ್ತೆ. ' ಎಂದು ಹೇಳಿದರು. ಇದಾದ ನಂತರವೂ ಹಲವು ವಿಷಯಗಳು ವಿನಿಮಯವಾದವು. ನಂತರ ವಿಕ್ರಂ ತನ್ನ ರೂಮಿಗೆ ಮರಳಿದ.
************7**************
ಸರಿ. ಹೊರಡುವ ವಿಷಯವನ್ನು ವಿಜೇತಾಳಿಗೆ ತಿಳಿಸಿದ. ವಿಷಯವನ್ನು ಕೇಳಿದವಳೇ ತಾನೂ ಬರುವುದಾಗಿ ಹಟ ಹಿಡಿದಳು. ಕೊನೆಗೆ ನವೀನಚಂದ್ರನ ಒಪ್ಪಿಗೆ ಮೇರೆಗೆ ಆಕೆಯೂ ಹೊರಟಳು. ವಿಕ್ರಂ ಹಾಗೂ ವಿಜೇತಾ ತಮ್ಮೆಲ್ಲ ಲಗೇಜುಗಳನ್ನು ಕಾರಿನಲ್ಲಿ ತುಂಬಿ ಹೊರಡಲು ಅನುವಾಗುತ್ತಿದ್ದಂತೆ ಪ್ರದೀಪ ಪ್ರತ್ಯಕ್ಷನಾದ. ಅದ್ಯಾರು ಹೇಳಿದ್ದರೋ, ಹೇಗೆ ಗೊತ್ತಾಯಿತೋ.. ಪ್ರದೀಪ ತನ್ನೆಲ್ಲಾ ಲಗೇಜುಗಳ ಸಮೇತ ತಯಾರಾಗಿ ಬಂದಿದ್ದ. ತಾನೂ ವಿಕ್ರಮನ ಜೊತೆಗೆ ಬರುತ್ತೇನೆ ಎಂದು ಹೇಳಿದವನೇ ವಿಕ್ರಮನ ಮಾತಿಗೂ ಕಾಯದೇ ಕಾರನ್ನೇರಿಬಿಟ್ಟ. ವಿಕ್ರಮ ಬೇಡ ಬೇ ಎನ್ನುತ್ತಿದ್ದರೂ ಅದನ್ನು ಪ್ರದೀಪ ಕೇಳದಂತಿದ್ದ. ವಿಧಿಯಿಲ್ಲದೇ ವಿಕ್ರಮ ಗಾಡಿ ಚಾಲೂ ಮಾಡಿದ.! ಕತೆ ಇಲ್ಲಿಂದ ಸಂಪೂರ್ಣ ಬದಲಾವಣೆಯ ಮಾರ್ಗ ಹಿಡಿದಿತ್ತು. ಮಲೆನಾಡು ಕರೆದಿತ್ತು.
ಎಷ್ಟು ಬೇಡವೆಂದರೂ ನವೀನಚಂದ್ರರು ತಮ್ಮ ಕಾರನ್ನು ವಿಕ್ರಮನಿಗಾಗಿ ನೀಡಿದ್ದರು. ಅಂತೂ ರಾತ್ರಿಯ ಹೊತ್ತಿಗೆ ವಿಕ್ರಮ, ವಿಜೇತಾ ಹಾಗೂ ಪ್ರದೀಪ ನಿಘೂಡಗಳ ತವರು ಉತ್ತರ ಕನ್ನಡದ ಕಡೆಗೆ ಹೊರಟರು. ವಿಕ್ರಮನಿಗೆ ಮತ್ತೆ ತನ್ನ ಮನೆಗೆ ಮರಳುವ ತವಕ. ಹಿಡಿದ ಕೆಲಸವನ್ನು ಬೇಗನೇ ಮುಗಿಸುವ ತುಡಿತ ಇದ್ದರೆ ಅರಿಯದ ಸುಂದರ ಜಿಲ್ಲೆಯ ಕಡೆಗೆ ಸಾಗುತ್ತಿರುವ ಬಗ್ಗೆ ವಿಜೇತಾ ಹಾಗೂ ಪ್ರದೀಪರಲ್ಲಿ ಕುತೂಹಲವಿತ್ತು. ಇಲ್ಲಿ ವಿಕ್ರಮನ ಮನಸ್ಸು ಪ್ರದೀಪನೆಡೆಗೆ ಮಾತ್ರ ಚಿಕ್ಕದೊಂದು ಅನುಮಾನದ ಎಳೆಯನ್ನು ಹರಿಯಬಿಟ್ಟಿತ್ತು. ಆದರೂ ಪ್ರದೀಪನ ಜೊತೆಗೆ ಮೊದಲಿನಂತೆ ವರ್ತನೆ ಮಾಡುತ್ತಿದ್ದ.
ವೇಗವಾಗಿ ಚಲಿಸುತ್ತಿದ್ದ ಕಾರಿಗಿಂತ, ಕಾರಿನಲ್ಲಿ ಕುಳಿತಿದ್ದ ಮೂವರ ಮನಸ್ಸುಗಳು ಮತ್ತಷ್ಟು ವೇಗವಾಗಿ ಎತ್ತೆತ್ತಲೋ ಓಡುತ್ತಿದ್ದವು. ವಿಕ್ರಮ ಮತ್ತೆ ಮತ್ತೆ ತನ್ನ ಹುಡುಕಾಟದ ಬಗ್ಗೆ ಆಲೋಚಿಸುತ್ತಿದ್ದರೆ, ವಿಜೇತಾ ತಾನು ಇಲ್ಲಿಗೆ ಹೊರಡಲು ಮನೆಯಲ್ಲಿ ಒಪ್ಪಿಗೆ ಕೇಳಿದಾಗ ಮನೆಯವರು ಏನೋ ಹೇಳಲು ಹೊರಟವರು ಹಾಗೇ ತಡೆದು ಒಪ್ಪಿಗೆ ನೀಡಿದ ತಂದೆ ತಾಯಿಯರ ನಡೆಯ ಬಗ್ಗೆ ಆಲೋಚಿಸುತ್ತಿದ್ದಳು.
ಪ್ರದೀಪ ಮಾತ್ರ ಆಗಾಗ `ಭೀಗಿ ಭೀಗಿ ರಾತೋ ಮೆ....' ಅಂತಲೋ.. `ಯಾರು ಯಾರು ನೀ ಯಾರು..?' ಅಂತಲೋ ಸಂಬಂಧವೇ ಇಲ್ಲದ ಯಾವು ಯಾವುದೋ ಹಾಡುಗಳನ್ನು ಹಾಡುತ್ತಿದ್ದ. ಜೊತೆಗೆ ತನ್ನ ಕುಟುಂಬದ ಬಗ್ಗೆ ಆಲೋಚನೆ ಮಾಡುತ್ತಿದ್ದ. ಈ ಮೂವರ ನಡುವೆ ಕಾರಿನಲ್ಲಿದ್ದ ಟೇಪ್ ರೆಕಾರ್ಡರ್ ಮಾತ್ರ ಮುಖೇಶನ ಹಾಡುಗಳನ್ನು ಒಂದರ ಹಿಂದೊಂದರಂತೆ ಹಾಡುತ್ತಿದ್ದವು. ಈ ಎಲ್ಲ ಕಾರಣಗಳಿಂದ ಕಾರಿನಲ್ಲಿ ಮೌನ ಇರಲಿಲ್ಲ. ಮಂದ್ರ ದನಿಯಲ್ಲಿ ಹಾಡು ಕೇಳಿಸುತ್ತ ಮನಸ್ಸು ತಣ್ಣಗೆ ಹರಿಯತೊಡಗಿತ್ತು.
ಅಜಮಾಸು 300 ಕಿ.ಮಿ ಸಾಗಿದ ನಂತರ ಅಂಕೋಲಾ ಸಿಕ್ಕಿತು. ಅಲ್ಲೊಂದು ಕಡೆ ಕಾರನ್ನು ನಿಲ್ಲಿಸಿದ ವಿಕ್ರಮ. ಅಲ್ಲಿ ಚಹಾ ಕುಡಿದು ಮುಖಕ್ಕೆ ನೀರನ್ನು ರಪ್ಪನೆ ಚಿಮುಕಿಸಿ, ಆಗೀಗ ಸುಳಿದು ಬರುತ್ತಿದ್ದ ನಿದ್ದೆಗೆ ಗುಡ್ ಬೈ ಹೇಳಿದ ವಿಕ್ರಮ. ವಿಜೇತಾ ಆಗೀಗ ವಿಕ್ರಮನ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದಳು. ಅದಕ್ಕೆಲ್ಲ ದೀರ್ಘವಾಗಿ ಉತ್ತರಿಸುತ್ತಿದ್ದ. ಆಗಾಗ ಪ್ರದೀಪನ ಹಾಸ್ಯ ರಸಾಯನದ ತುಣುಕುಗಳೂ ಚೆಲ್ಲುತ್ತಿದ್ದವು. ಬಾಳೆಗುಳಿ ಕ್ರಾಸಿನಲ್ಲಿ ಬಲಕ್ಕೆ ತಿರುಗಿಸಿ ಕಾರನ್ನು ಹುಬ್ಬಳ್ಳಿ ರಸ್ತೆಯ ಕಡೆಗೆ ಚಾಲನೆ ಮಾಡಿದರು. ಮಧ್ಯರಾತ್ರಿಯ ಸಮಯ ಮೀರಿ ಬೆಳಗಿನ ಮುಂಜಾವು ದೂರದ ಭೀಮನವಾರೆ ಗುಡ್ಡದಲ್ಲಿ ಇಣುಕಲು ಪ್ರಯತ್ನಿಸುತ್ತಿತ್ತು. ಅಲ್ಲೆಲ್ಲೋ ಆಗಾಗ ಸಿಗುತ್ತಿದ್ದ ಲೈಟುಗಳು., ಎದುರಿನಿಂದ ಬರುತ್ತಿದ್ದ ವಾಹನಗಳ ಭರ್ರೆನ್ನುವ ಸದ್ದು, ಕಾಡಿನ ನಡುವಣ ಒಂಟಿ ಪಯಣ.. ಏನೋ ಒಂಥರಾ ಎನ್ನಿಸಿತು. ಸ್ವಲ್ಪ ಸಮಯದಲ್ಲಿ ಅರಬೈಲ್ ಘಟ್ಟದ ಅಂಕುಡೊಂಕು ಸಿಕ್ಕಿತು. ವೇಗವಾಗಿ ಹತ್ತಿ ಯಲ್ಲಾಪುರವನ್ನು ತಲುಪುವ ವೇಳಗೆ ಸೂರ್ಯ ಬಾನಂಚಿನಲ್ಲಿ ಮತ್ತಷ್ಟು ಏರಿ ಬಂದಿದ್ದ.
ಮುಂಜಾನೆಯ ಚುಮು ಚುಮು ಬೆಳಕಿನಲೆಯ ಆಗಮನದ ಜೊತೆ ಜೊತೆಯಲ್ಲಿಯೇ ಕಾರು ಒಂದೆರಡು ರಸ್ತೆಯನ್ನು ಹಾದು, ಕೊನೆಗೊಂದು ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸಾಗಿತು. ಮೊದಲ ಸೂರ್ಯನ ಕಿರಣ ಧರೆಯನ್ನು ಮುತ್ತಿಕ್ಕುವ ವೇಳೆಗೆ ಮನೆಯೊಂದರ ಅಂಗಳದಲ್ಲಿ ಕಾರು ಬಂದು ನಿಂತಿತು. ಆಗಲೇ ವಿಜೇತಾ ಹಾಗೂ ಪ್ರದೀಪರು ನಿದ್ರೆಗೆ ಜಾರಿದ್ದರು. ಮನೆಯಂಗಳದಲ್ಲಾಗಲೇ ಸುಂದರ ರಂಗೋಲಿ ಮಿನುಗುತ್ತಿತ್ತು. ವಿಕ್ರಮ ಒಮ್ಮೆ ಕಾರಿನ ಹಾರನ್ ಮಾಡಿದ. ಮನೆಯೊಳಗಿನಿಂದ ಹೊರ ಬಂದ ಒಬ್ಬಾಕೆ ಯಾರು ಬಂದಿರಬಹುದು ಬೆಳ್ಳಂಬೆಳಿಗ್ಗೆ ಎಂದು ಕುತೂಹಲ, ಗಾಭರಿಯಿಂದ ನೋಡಲು ಆರಂಭಿಸಿದಳು.
(ಮುಂದುವರಿಯುತ್ತದೆ)