ನಂತರ ಅವರು ಇನ್ನೇನು ವಾಪಾಸು ಹೊರಡಬೇಕು ಎನ್ನುವಷ್ಟರಲ್ಲಿ ವಿಕ್ರಮನಿಗೆ ಪ್ರದೀಪ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ಕುಡಲೇ `ಹಲೋ... ಏನಪ್ಪಾ ಇಲ್ಲಿ. ಏನ್ಮಾಡ್ತಾ ಇದ್ದೀಯಾ?' ಎಂದು ಕೇಳಿ ವಿಜೇತಾಳನ್ನು ಪ್ರದೀಪನಿಗೂ ಪ್ರದೀಪನನ್ನು ವಿಜೇತಾಳಿಗೂ ಪರಿಚಯಿಸಿದ.
ಇದು ಯಾರು ಬರೆದ ಕಥೆಯೋ... ನನಗಾಗಿ ಬಂದ ವ್ಯಥೆಯೋ...
ಎಂದು ಹಾಡುತ್ತಾ ಬರುತ್ತಿದ್ದ ಪ್ರದೀಪ ಇವರನ್ನು ನೋಡಿ ಒಮ್ಮೆಲೆ ಅವಕ್ಕಾದರೂ ಬೇಗನೆ ಸಾವರಿಸಿಕೊಂಡು `ನಮಸ್ಕಾರ, ನಮಸ್ತೆ.. ಹಲೋ.. ಹಾಯ್...' ಎಂದು ಹಲ್ಲುಕಿರಿಯತೊಡಗಿದ.
`ವಿಜೇತಾ.. ಈತ ಭರ್ಜರಿ ಹಾಡುಗಾರ. ಒಳ್ಳೆಯ ಅಡುಗೆಯಾತ.. ಬಹಳ ಕೊರೆಯುವ ವ್ಯಕ್ತಿ.. ಮೂರ್ನಾಲ್ಕು ವರ್ಷ ನನ್ನ ರೂಮ್ ಮೇಟು.. ಈದೀಗ ಬೇರೆ ಕಡೆ ರೂಮು ಮಾಡಿದ್ದಾನೆ. ಆದರೆ ಈತನ ದುರ್ಗುಣ ಎಂದರೆ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಡುವುದು. ನಿಘೂಡ ವ್ಯಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ ನೋಡು.. ' ಎಂದು ತಮಾಷೆ ಮಾಡಿದ ವಿಕ್ರಮ.
`ಹೇ ಸುಮ್ನಿರೋ.. ಸುಮ್ನಿರೋ..' ಎಂದು ತಿವಿಯುತ್ತಾ ಹೇಳಿದ ಪ್ರದೀಪ. ಒಮ್ಮೆಲೆ ಎಲ್ಲರಲ್ಲೂ ನಗು ಉಕ್ಕಿತ್ತು. ನಂತರ ಮಾತು ಮುಂದುವರಿಸುತ್ತಾ `ನಾನು ಇಲ್ಲೇ ರೂಮು ಮಾಡಿದ್ದೀನಿ. ಬನ್ನಿ.. ಎಲ್ಲ ಅಲ್ಲಿಗೆ ಹೋಗೋಣ.. ಅಲ್ಲಿ ಆರಾಮಾಗಿ ಮಾತಾಡೋಣ..' ಎಂದು ಹೇಳಿ ಅವರಿಬ್ಬರನ್ನೂ ಕರೆದೊಯ್ದ.. `ನಡಿಯಪ್ಪಾ...ನಡಿ... ನಿನ್ನ ನಳಪಾಕದ ಪರಿಚಯ ವಿಜೇತಾಗೂ ಆಗಿ ಹೋಗಲಿ...' ಎಂದು ಮತ್ತೊಮ್ಮೆ ತಮಾಷೆ ಮಾಡಿದ ವಿಕ್ರಮ. ಎಲ್ಲರೂ ನಗುತ್ತ ಪ್ರದೀಪನ ರೂಮಿನ ಕಡೆಗೆ ಪಾದ ಬೆಳೆಸಿದರು.
ಅವನದು ಮಹಡಿ ಮೇಲಿನ ದೊಡ್ಡ ರೂಮು. ಅಲ್ಲಿ ತರಹ ತರಹದ ವಸ್ತುಗಳಿದ್ದವು.ಗೋಡೆಯ ಮೇಲಂತೂ ಭಾರತ, ವಿಶ್ವ, ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ವಿವಿಧ ನಕಾಶೆಗಳು ತೂಗಾಡುತ್ತಿದ್ದವು. ಆ ರೂಮಿನ ಒಳಕ್ಕೆ ಕಾಲಿಡುತ್ತಿದ್ದಂತೆ `ನೀವು ಒಳ್ಳೆಯ ಸಲಹೆ ನೀಡಿದ್ರಿ.. ನೀವುಕೊಟ್ಟ ಸಲಹೆಯಿಂದಲೇ ವಿಕ್ರಂ ಅವರು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು ನೋಡಿ.. ಅದಕ್ಕೆ ನೀವು ಧನ್ಯವಾದಕ್ಕೂ, ಗೌರವಕ್ಕೂ ಅರ್ಹರು..' ಎಂದಳು ವಿಜೇತಾ.
`ಓಹ್... ಅದರಲ್ಲಿ ನಂದೇನಿದೆ? ಅವ್ನು ನನ್ನ ಗುಡ್ ಪ್ರೆಂಡೂ.. ಬೇಜಾರ್ನಲ್ಲಿದ್ದ.. ಅದಕ್ಕೆ ಒಂದೆರಡು ಸಲಹೆ ಕೊಟ್ಟೆ ಅಷ್ಟೇ. ಆದರೆ ಪ್ರಯತ್ನ ಪಟ್ಟು ಗೆದ್ದಿದ್ದು ವಿಕ್ರಂ ಹಾಗೂ ಆತನ ಬಳಿ ಕಲಿತವರು.. ನಾನು ನಿಮಿತ್ತ ಮಾತ್ರ...' ಎಂದ ಪ್ರದೀಪ.
`ಆದ್ರೂ ಸೋಲಲು ಆರಂಭವಾದಾಗ ನಿಮ್ಮಂಥವರ ಆಶಾವಾದದ ನುಡಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಗೆಲುವಿನ ಕಡೆಗೆ ಮುಖ ಮಾಡಿಸುತ್ತದೆ...'
`ಅದೂ ಹೌದೆನ್ನಿ.. ಒಂದ್ನಿಮಿಷ.. ಟೀ ಮಾಡ್ಕೊಂಡು ಬರ್ತೀನಿ...' ಎಂದು ಪ್ರದೀಪ ಹೇಳುತ್ತಿದ್ದಂತೆ.. `ಮೊದ್ಲು ಆ ಕೆಲಸ ಮಾಡಪ್ಪಾ... ಬಾಯೆಲ್ಲಾ ಉಪ್ಪುಪ್ಪಾಗಿದೆ...' ಎಂದ ವಿಕ್ರಂ. ಕೆಲವೇ ಸಮಯದಲ್ಲಿ ಟೀ ಮಾಡಿಕೊಂಡು ಬಂದ. ವಿಕ್ರಂ, ವಿಜೇತಾ ಕುಳಿತು ಮಾತನಾಡುತ್ತಿದ್ದರೆ ಪ್ರದೀಪ ಕಿಟಕಿ ಬಳಿ ಹೋಗಿ ಮಾತನಾಡುತ್ತ ನಿಂತಿದ್ದ. ಕೆಲವು ನಗು, ತಮಾಷೆ,ಗಳೆಲ್ಲ ಆ ಸಂದರ್ಭದಲ್ಲಿ ಹಾದು ಹೋದವು.
ಹೀಗೆ ಮಾತನಾಡುತ್ತಿದ್ದಂತೆ ಪ್ರದೀಪದ ದೃಷ್ಟಿ ಕಿಟಕಿಯಿಂದ ಹೊರಕ್ಕೆ ಹಾಯಿತು. ತಕ್ಷಣ ವಿಕ್ರಮನನ್ನು ಕರೆದು `ಶ್.. ಅಲ್ಲಿನೋಡು ನಾನು ಆ ದಿನ ಹೇಳಿದ್ನಲ್ಲಾ.. ಅದೇ ಫಾಲೋ ಮಾಡುವ ವ್ಯಕ್ತಿ. ಕಾಂಪೌಂಡ್ ಹತ್ತಿರ ಇಣುಕುತ್ತಿದ್ದಾನೆ ನೋಡು.. ' ಎಂದು ಹೇಳಿ ಬಾಯಿ ಮುಚ್ಚುವುದರೊಳಗಾಗಿ `ಒಂದೈದ್ ನಿಮಿಷ ನೀವಿಬ್ರೂ ಇಲ್ಲೇ ಇರಿ..' ಎಂದು ಹೇಳುತ್ತಾ ವಿಕ್ರಂ ಹೊರಗೋಡಿದ. ವಿಕ್ರಂ ಒಳ್ಳೆಯ ರನ್ನರ್ ಎನ್ನುವುದನ್ನು ಅರಿತಿದ್ದ ಪ್ರದೀಪ ಖಂಡಿತವಾಗಿಯೂ ಆ ಇಣುಕು ವ್ಯಕ್ತಿಯನ್ನು ಹಿಡಿದೇ ತರುತ್ತಾನೆ ಎನ್ನುವುದು ಖಾತ್ರಿಯಾಗಿತ್ತು.
ಮತ್ತೈದು ನಿಮಿಷದಲ್ಲಿ ವಿಕ್ರಂ ಏದುಸಿರು ಬಿಡುತ್ತಾ ತಿರುಗಿ ಬಂದ. ತಕ್ಷಣ ಪ್ರದೀಪ `ಸಿಕ್ಕಿದ್ನಾ ಆತ..?' ಎಂದ.
`ಬೆನ್ನಟ್ಟಿಕೊಂಡು ಹೋದೆ.. ಸಿಟಿ ಏರಿಯಾ ನೋಡಿ.. ತಪ್ಪಿಸಿಕೊಂಡು ಬಿಟ್ಟ.. ಬಡ್ಡೀಮಗ.. ನಾನೇ ಸ್ಪೀಡು ಅಂದ್ರೆ ನನಗಿಂತ ಸ್ಪೀಡಾಗಿ ಓಡ್ತಾನೆ...' ಎಂದ ವಿಕ್ರಂ. ಕೆಲ ಸಮಯದ ವರೆಗೆ ಈ ವಿಷಯದ ಕುರಿತು ಚರ್ಚೆ ನಡೆಯಿತು. ನಂತರ ವಿಜೇತಾ ಪ್ರದೀಪನಲ್ಲಿ `ನೀವು ಏನು ಕೆಲಸ ಮಾಡ್ತಾ ಇದ್ದೀರಿ?' ಎಂದು ಕೇಳಿದಾಗ ಪ್ರದೀಪ ಅದೇನೋ ಹಾರಿಕೆಯ ಉತ್ತರ ನೀಡಿದ. ಮತ್ತರೆಘಳಿಗೆಯಲ್ಲಿ ವಿಜೇತಾ ಹಾಗೂ ವಿಕ್ರಂ ಆಫೀಸಿನ ಕಡೆಗೆ ಹೊರಟರು.
ದಾರಿಯಲ್ಲಿ ವಿಜೇತಾ `ಅದ್ಯಾರೋ ನಿನ್ನ ಫಾಲೋ ಮಾಡ್ತಾರೆ ಅಂದನಲ್ಲಾ.. ಅದೇನು ಮಾರಾಯಾ.? ವಿಚಿತ್ರವಾಗಿದೆಯಲ್ಲ...' ಎಂದಳು.. `ನನಗೂ ಗೊತ್ತಿಲ್ಲ... ಆದರೂ ಆಶ್ಚರ್ಯವಾಗ್ತಾ ಇದೆ...' ಎಂದ ವಿಕ್ರಂ.
`ಈ ಪ್ರದೀಪ ಬಹಳ ವಿಚಿತ್ರ ಅನ್ನಿಸ್ತಿದೆ ಕಣೋ.. ಏನೋ ನಿಗೂಢ.. ನೀ ಹೇಳಿದ್ದು ಸತ್ಯ.. ಅರ್ಥವಾಗುತ್ತಿಲ್ಲ.. ಕೇಳಿದ್ದಕ್ಕೊಂದಕ್ಕೂ ಸರಿಯುತ್ತರ ಕೊಡೋದಿಲ್ಲ.. ಎಲ್ಲದ್ದಕ್ಕೂ ಹಾರಿಕೆ ಉತ್ತರ.. ಮಾತು ತಪ್ಪಿಸುತ್ತಾನೆ.. ಕಣ್ಣಲ್ಲಿ ಅದೇನೋ ಅನುಮಾನದ ಸೆಳಕು.. ಚಂಚಲತೆ... ಆತ ಅದೇನು ಕೆಲಸ ಮಾಡ್ತಿದ್ದಾನೆ?' ಎಂದಳು ವಿಜೇತಾ.
`ಹೌದು.. ಆತನ ಬಗ್ಗೆ ನನಗೆ ಗೊತ್ತಿದದ್ದು ಶೆ.10ರಷ್ಟು ಮಾತ್ರ. ಇನ್ನೂ ಶೆ.90ರಷ್ಟು ನನಗೆ ಅರ್ಥವೇ ಆಗಿಲ್ಲ. ಮೂರು ವರ್ಷ ನನ್ನ ರೂಂ ಮೇಟ್ ಆಗಿದ್ದ ಅಷ್ಟೇ.. ಆದರೆ ಎಲ್ಲೂ ತನ್ನ ವಿಷಯವನ್ನು ನನಗೆ ಹೇಳಿಯೇ ಇಲ್ಲ. ನಾನೂ ಕೇಳಲಿಲ್ಲ ಬಿಡು.. ನಿಜಕ್ಕೂ ಆತ ಅದೇನು ಕೆಲಸ ಮಾಡ್ತಾನೆ.. ಹೇಗೆ ಜೀವನ ನಡೆಸ್ತಿದ್ದಾನೆ ಒಂದೂ ನನಗೆ ಗೊತ್ತಿಲ್ಲ.. ನನ್ನ ಹಾಗೂ ಅವನ ಕಷ್ಟದ ದಿನಗಳಲ್ಲಿ ಇಬ್ಬರೂ ಒಟ್ಟಿದ್ದೆವು ಎನ್ನುವುದಷ್ಟೇ ಸತ್ಯ ನೋಡು..' ಎಂದ ವಿಕ್ರಂ.
`ಹೋಗ್ಲಿ ಬಿಡು...' ಎಂದಳು ವಿಜೇತಾ.. ಅಷ್ಟರಲ್ಲಿ ಪತ್ರಿಕಾಲಯ ಬಂದಿತ್ತು. ಇಬ್ಬರೂ ಹೋಗಿ ವರದಿಯನ್ನು ತಯಾರಿಸಿದರು.
ಸ್ವಲ್ಪ ಹೊತ್ತಿನಲ್ಲಿಯೇ ನವೀನಚಂದ್ರನಿಂದ ಚಿಕ್ರಮನಿಗೆ ಕರೆ ಬಂದಿತು. `ಯಾಕೆ ಕರೆದಿರಬಹುದು..?' ಎಂಬ ಆಲೋಚನೆಯಲ್ಲಿಯೇ ವಿಕ್ರಂ ನವೀನಚಂದ್ರರ ಕೋಣೆಯೊಳಕ್ಕೆ ಹೋದ. ಅಲ್ಲಿ ನವೀನಚಂದ್ರ ವಿಕ್ರಮನನ್ನು ಕುಳಿತುಕೊಳ್ಳಲು ಹೇಳಿದ. ಕೊಲೆಯ ವಿಷಯದ ಕುರಿತು ಮಾತನಾಡತೊಡಗಿದರು. `ನೋಡಿ ವಿಕ್ರಂ. ಈ ಕೊಲೆಯ ಬಗ್ಗೆ ನನಗ್ಯಾಕೋ ಅಪಾರ ಕುತೂಹಲ. ಈ ಮೊದಲು ನಾನು ಕ್ರೈಂ ರಿಪೋರ್ಟರ್ ಆಗಿದ್ದಕ್ಕೋ ಅಥವಾ ಬೇರಿನ್ಯಾವುದಕ್ಕೋ ಗೊತ್ತಿಲ್ಲ. ಕೊಲೆಗಳ ಬೆನ್ನತ್ತಿ ಹೋಗುವುದು ಅಂದರೆ ನನಗೆ ವಿಶೇಷ ಆಸಕ್ತಿ. ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು? ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಹುಡುಕಿಕೊಂಡು ಹೋಗಿದ್ದಿದೆ. ಕೊಲೆ ಆರೋಪಿಗಳನ್ನು ಪೊಲೀಸರು ಹುಡುಕುವ ವಿಧಾನ, ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಮಾಡಿದ್ದೇನೆ. ಪೊಲೀಸರು ಎಡವುವುದು, ಒತ್ತಡಕ್ಕೆ ಮಣಿದು ಕೊಲೆಗಾರನನ್ನು ತಪ್ಪಿಸುವುದು ಇತ್ಯಾದಿಗಳೂ ನಡೆದಿದ್ದಿದೆ. ಅನೇಕ ಸಾರಿ ನಾನು ಇಂತಹ ತನಿಖಾ ವರದಿ ನಡೆಸಿದ ಕಾರಣ ನಿಜವಾದ ಆರೋಪಿ ಸಿಕ್ಕಿಬಿದ್ದಿದ್ದೂ ಇದೆ. ಆತ ತಪ್ಪಿಸಿಕೊಳ್ಳುವುದಕ್ಕೆ ಆಸ್ಪದವೇ ಇಲ್ಲದಂತೆ ಆಗಿದ್ದೂ ಇದೆ. ಬಹುಶಃ ಈ ಕಾರಣಕ್ಕೇ ನಮ್ಮ ಪತ್ರಿಕೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಇಂತಹ ಅನೇಕ ತನಿಖಾ ವರದಿಗಳನ್ನು ಮಾಡಿ ಸತ್ಯವನ್ನು ಬೇಧಿಸಿದೆ. ಈಗಲೂ ನಾವ್ಯಾಕೆ ಇವತ್ತು ನಡೆದಿರುವ ಕೊಲೆ ಕೇಸನ್ನು ಬೆನ್ನತ್ತಬಾರದು?' ಎಂದರು.
ವಿಕ್ರಮನಿಗೆ ಸ್ಪಷ್ಟವಾದಗೇ ಸುಮ್ಮನೇ ಕುಳಿತಿದ್ದ.. `ನಾವು ಒಂದು ಕೆಲಸ ಮಾಡೋಣ. ಇವತ್ತು ನಡೆದ ಕೊಲೆಯ ಕೇಸಿನ ಬೆನ್ನತ್ತೋಣ. ನಾವು ಅಂದರೆ ನೀನು ಈ ಕೊಲೆಯ ಬಗ್ಗೆ ತನಿಖೆ ಮಾಡಬೇಕು. ಆದರೆ ನಾವು ಪೊಲೀಸರ ಕಾನೂನನ್ನು ಕೈಗೊಳ್ಳುವುದಿಲ್ಲ. ಬದಲಾಗಿ ಅಪರಾಧಿಗಳ ಜಾಡನ್ನು ಹುಡುಕುತ್ತ ಹೋಗೋಣ. ಪೊಲೀಸರು ಎಲ್ಲಾದರೂ ದಾರಿ ತಪ್ಪಿದರೆ ಅವರಿಗೆ ಇದರಿಂದ ಅನುಕೂಲವಾಗುತ್ತದೆ. ಸುದ್ದಿ ಮಾಡಿದ ನಮಗೂ ಹೆಸರು ಬರುತ್ತದೆ. ಸಾಕಷ್ಟು ರಿಸ್ಕ್ ಕೂಡ ಇದೆ. ಆಗುತ್ತೆ ಅಂತಾದರೆ ಹೇಳು.. ನಮ್ಮಿಂದ ನಿನಗೆ ಸಂಪೂರ್ಣ ಬೆಂಬಲ ಇರುತ್ತದೆ. ಅದೆಷ್ಟೇ ಒತ್ತಡ ಬಂದರೂ ನಾವು ನೋಡಿಕೊಳ್ಳುತ್ತೇನೆ.. ಏನಂತೀಯಾ?' ಎಂದು ನವೀನಚಂದ್ರ.
`ಸರ್.. ನಾನೂ ಅದನ್ನೇ ಆಲೋಚನೆ ಮಾಡ್ತಾ ಇದ್ದೆ. ಇದೂ ನನಗೆ ಹೊಸ ಅನುಭವ. ಆದರೆ ನಾನು ಇದನ್ನು ಮಾಡಲು ತಯಾರಾಗಿದ್ದೇನೆ. ಪೊಲೀಸರು ಆರೋಪಿಯನ್ನು ಪತ್ತೆ ಮಾಡುವ ಮುನ್ನ ನಾವು ಮಾಡಿದರೆ ಮಜವಾಗಿರುತ್ತದೆ. ಮೈಮನಗಳಲ್ಲಿ ನನಗೆ ಈಗ ರೋಮಾಂಚನ ಆಗ್ತಾ ಇದೆ.. ಖಂಡಿತ ನಾನು ಇದನ್ನು ಮಾಡೇ ಮಾಡ್ತೀನಿ ಸರ್..' ಎಂದ ವಿಕ್ರಂ.
`ಗುಡ್... ನಿನಗೆ ಈ ಕುರಿತು ನಮ್ಮಿಂದ ಸಂಪೂರ್ಣ ಬೆಂಬಲ ಇದ್ದೇ ಇದೆ. ನೀನು ಎಲ್ಲಿಯೇ ಓಡಾಡು, ಎಷ್ಟು ದಿನ ಬೇಕಾದರೂ ತೆಗೆದುಕೊ.. ದುಡ್ಡು ಖರ್ಚಾಗಲಿ.. ಅದಕ್ಕೆ ಚಿಂತೆ ಬೇಡ.. ನಿನಗೆ ಕಾರ್ ಡ್ರೈವಿಂಗ್ ಬರುತ್ತೆ ಅಂತಾದರೆ ನನ್ನ ಕಾರನ್ನು ಒಯ್ಯಬಹುದು. ಆದರೆ ಹುಷಾರಾಗಿರಬೇಕು. ಈ ವಿಷಯ ಯಾರಿಗೂ ಗೊತ್ತಗಬಾರದು. ನಿನ್ನ ಎಚ್ಚರಿಕೆಯಲ್ಲಿ ನೀನಿರಬೇಕು..' ಎಂದರು ನವೀನಚಂದ್ರ.
`ಖಂಡಿತ ಸರ್.. ಏನಾದರೂ ಅಗತ್ಯಬಿದ್ದರೆ ಹೇಳ್ತೀನಿ ಸರ್.. ' ಎಂದು ಹೇಳಿ ಹೊರಬಂದವನಿಗೆ ಆ ದಿನವಿಡೀ ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿಗಳಿಗೆ ಆದಂತಹ ಖುಷಿ ಮನೆಮಾಡಿತ್ತು. ಆತ ರಾತ್ರಿ ತನ್ನ ರೂಮಿಗೆ ಬಂದು ಆ ದಿನದ ಘಟನೆಗಳೆಲ್ಲವನ್ನೂ ಮೆಲುಕು ಹಾಕತೊಡಗಿದ. ಕೊಲೆ, ವಿಜೇತಾಳ ಸಂ ಗಡ ಹೋಗಿ ಅದನ್ನು ವರದಿ ಮಾಡಿದ್ದು. ಪ್ರದೀಪನ ಅನಿರೀಕ್ಷಿತ ಭೇಟಿ, ಅಪರಿಚಿತನ ಬೆನ್ನಟ್ಟಿದ್ದು, ನವೀನಚಂದ್ರ ಹೇಳಿದ ಮಾತುಗಳೆಲ್ಲವೂ ಪದೇ ಪದೆ ನೆನಪಾದವು. ಜೊತೆಗೆ ಎಸ್. ಮಾರ್ಕಿನ ಲಾಕೆಟ್ ಕೂಟ ನೆನಪಾಯಿತು. ಯಾಕೋ ಈ ದಿನ ನಡೆದ ಎಲ್ಲ ಘಟನೆಗಳೂ ತನ್ನ ಬದುಕಿನಲ್ಲಿ ಮುಖ್ಯವಾಗಲಿದೆ. ಪದೆ ಪದೇ ಮನಸ್ಸಿಗೆ ನಾಟಲಿದೆ ಎನ್ನಿಸತೊಡಗಿತ್ತು ವಿಕ್ರಮನಿಗೆ. ಆ ದಿನ ಮಾರ್ಚ್ 28.
***********6************
ಹೊಸ ಲ್ಯಾಪ್ ಟಾಪ್ ಹಾಗೂ ಮೊಬೈಲನ್ನು ನವೀನಚಂದ್ರ ನಂತರದ ದಿನಗಳಲ್ಲಿ ವಿಕ್ರಮನಿಗೆ ಕೊಡುಗೆಯಾಗಿ ನೀಡಿದ್ದ. ವಿಕ್ರಮ ಅವಾಕ್ಕಾಗಿದ್ದ. ಕೊನೆಗೊಂದು ದಿನ ಈ ಕುರಿತು ವಿಜೇತಾಳಲ್ಲಿ ವಿಚಾರಿಸಿದಾಗ ನವೀನಚಂದ್ರ ಆಗರ್ಭ ಶ್ರೀಮಂತರೆಂದೂ ಪತ್ರಿಕೆ ನಡೆಸುವುದು ಅವರ ಹವ್ಯಾಸವೆಂದೂ ದೊಡ್ಡ ದೊಡ್ಡ ಬಿಸಿನೆಸ್ಸುಗಳ ಒಡೆಯನೆಂದೂ ಹೇಳಿದಳು. ಬಿಡುವಿದ್ದಾಗ ಬಿಸಿನೆಸ್ ಕೆಲಸ ಮಾಡಿ ಟೈಮಿದ್ದಾಗ ಪತ್ರಿಕಾ ಕಚೇರಿಗೆ ಬರುವುದು ಅವರ ಪ್ರಮುಖ ಕಾರ್ಯ. ತಾನು ಕಷ್ಟದಲ್ಲಿದ್ದಾಗ ಪತ್ರಿಕೆ ತನಗೆ ಅನ್ನ ನೀಡಿದೆ. ಆ ಕಾರಣಕ್ಕಾಗಿ ಪತ್ರಿಕೆಯ ಋಣ ತಿರಿಸಬೇಕು ಎನ್ನುವುದು ಅವರ ಮನಸ್ಥಿತಿ. ಹೀಗಾಗಿ ಅವರು ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ತನಗೆ ಯಾರೇ ಇಷ್ಟವಾದರೂ, ಅವರ ಕಾರ್ಯವೈಖರಿ ಮೆಚ್ಚುಗೆಯಾದರೂ ಅವರಿಗೆ ಕೊಡುಗೆ ಕೊಡುತ್ತಾರೆ. ನಿನ್ನ ಕಾರ್ಯವೈಖರಿ ನವೀನಚಂದ್ರರಿಗೆ ಇಷ್ಟವಾಗಿದೆ. ಆ ಕಾರಣಕ್ಕಾಗಿಯೇ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕೊಡುಗೆ ಕೊಟ್ಟಿದ್ದಾರೆ. ನಿನ್ನ ಕೆಲಸಕ್ಕೆ ಅನುಕೂಲವಾಗಲಿ ಅಂತ..' ಎಂದಳು ವಿಜೇತಾ.
ಅದಾಗಿ ಮತ್ತೆರಡು ದಿನಗಳು ಕಳೆಯುವಷ್ಟರಲ್ಲಿ ಪತ್ರಿಕಾ ಕಚೇರಿಗೆ ಹೊಸ ಹೊಸ ವರದಿಗಾರರನ್ನು, ಉಪ ಸಂಪಾದಕರನ್ನೂ ನೇಮಕ ಮಾಡಲಾಗಿತ್ತು. ಪತ್ರಿಕೆಯನ್ನು ಮಂಗಳೂರಿನಿಂದಾಚೆ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿತ್ತು. ವಿಕ್ರಮನಿಗೂ ಜವಾಬ್ದಾರಿ ಹೆಚ್ಚಿತ್ತು. ಜೊತೆ ಜೊತೆಯಲ್ಲಿ ಕೊಲೆಯ ಜಾಡನ್ನು ಹಿಡಿಯತೊಡಗಿದ್ದ. ಪತ್ರಿಕಾಲಯದಲ್ಲಿ ಸಾಕಷ್ಟು ಹೊಸಬರನ್ನು ಸೇರಿಸಿದ್ದ ಕಾರಣ ವಿಕ್ರಮ ಹಾಗೂ ವಿಜೇತಾಳ ಮೇಲಿದ್ದ ಒತ್ತಡ ಕಡಿಮೆಯಾಗಿತ್ತು. ಅಲ್ಲದೇ ಅವರು ಉತ್ತಮ ವರದಿಗಳನ್ನು ಮಾಡಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.
****
ಸುಮಾರು ಒಂದು ವಾರ ಕಳೆದರೂ ಕೊಲೆಯ ಬಗ್ಗೆ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಲಿಲ್ಲ. ಯಾವ ದಿಕ್ಕಿನಲ್ಲಿ ಸಾಗಿದರೂ ಕೊಲೆಯ ವಿವರ ತಿಳಿಯಲಿಲ್ಲ. ಕೊಲೆಗೆ ಬಳಕೆ ಮಾಡಿದ ಆಯುಧದ ಬಗ್ಗೆಯೂ ತಿಳಿಯಲಿಲ್ಲ. ಇದರಿಂದ ಜನಸಾಮಾನ್ಯರು ಬೇಸರಗೊಂಡಿದ್ದರು. ಖಾಸಗಿ ಪತ್ತೆದಾರರೂ, ಗುಪ್ತಚರರು ತಾವೂ ಒಂದು ಕೈ ನೋಡುವ ಎಂದು ಕೆಲಸ ಶುರುಮಾಡಿದ್ದರು. ವಿಕ್ರಮನಿಗೆ ಸಿಕ್ಕಿದ್ದ ಎಸ್ ಲಾಕೆಟ್ ಆರೋಪಿಯ ಲಾಕೆಟ್ ಎಂದೂ ಆತನ ಹಿಂದೆ ದೊಡ್ಡ ಗುಂಪಿನ ಕರಾಮತ್ತಿದೆಯೆಂದೂ ಅನ್ನಿಸತೊಡಗಿತ್ತು. ಆ ಗುಂಪು ದರೋಡೆ, ಕಳ್ಳ ಸಾಗಾಣಿಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ ಎನ್ನುವುದೂ ತಿಳಿದುಬಂದಿತು. ಅದನ್ನು ನವೀನಚಂದ್ರನಿಗೆ ತಿಳಿಸಿಯೂ ಆಗಿತ್ತು.
ಆ ದಿನ ಬಹುಶಃ ಎಪ್ರಿಲ್ 4. ವಿಕ್ರಂ ಕೊಲೆ ನಡೆದ ಸ್ಥಳಕ್ಕೆ ಹೋಗಿದ್ದವನು ಪ್ರದೀಪನನ್ನು ಮಾತನಾಡಿಸಿ ಹೋಗೋಣ ಎಂದು ಆತನ ರೂಮಿನ ಕಡೆಗೆ ಹೆಜ್ಜೆ ಹಾಕಿದ. ಪ್ರದೀಪ ಇದ್ದಾನೋ ಇಲ್ಲವೋ ಎಂಬ ಗೊಂದಲದಲ್ಲಿಯೇ ರೂಮಿನ ಬಾಗಿಲು ತಟ್ಟಿದ. ಅಚ್ಚರಿಯೆಂಬಂತೆ ರೂಮಿನಲ್ಲಿದ್ದ ಪ್ರದೀಪ ಬಾಗಿಲು ತೆಗೆದ. ವಿಕ್ರಮನನ್ನು ಕಂಡ ಪ್ರದೀಪ ಒಮ್ಮೆ ಗಲಿಬಿಲಿಪಟ್ಟುಕೊಂಡ. ಯಾವುದೋ ಒಂದು ವಸ್ತುವನ್ನು ಲಗುಬಗೆಯಿಂದ ಮುಚ್ಚಿಟ್ಟ. ವಿಕ್ರಮನ ಕಣ್ಣು ಇದನ್ನು ಗಮನಿಸಿಬಿಟ್ಟಿತ್ತು. ನಂತರ ಪ್ರದೀಪ ಟೀ ಮಾಡಲು ಹೋದಾಗ ವಿಕ್ರಂ ಆ ವಸ್ತುವನ್ನು ಎತ್ತಿಟ್ಟುಕೊಂಡ. ಅದೊಂದು ಮ್ಯಾಪ್. ಅದನ್ನು ವಿಕ್ರಂ ಎತ್ತಿಟ್ಟುಕೊಂಡಿದ್ದು ಪ್ರದೀಪನಿಗೆ ಆ ದಿನ ತಿಳಿಯಲೇ ಇಲ್ಲ. ಅದೂ ಇದೂ ಮಾತನಾಡಿದ ವಿಕ್ರಂ ಸೀದಾ ತನ್ನ ರೂಮಿಗೆ ಮರಳಿದ.
ರೂಮಿಗೆ ಬಂದು ನಿಧಾನವಾಗಿ ಕುಳಿತು ಆ ಮ್ಯಾಪನ್ನು ಬಿಚ್ಚಿ ನೋಡಿದ. ಅದು ಸಾಮಾನ್ಯವಾಗಿ ಮಿಲಿಟರಿಯವರು ಬಳಸುವಂತಹ ಮ್ಯಾಪ್. ಅದರಲ್ಲಿ ದೇಶದ ಪ್ರತಿಯೊಂದು ಪ್ರದೇಶದ ಸಮಗ್ರ ಚಿತ್ರಣ, ಆರ್ಥಿಕ ವ್ಯವಸ್ಥೆ, ಅರಣ್ಯ, ಖನಿಜ ಸಂಪತ್ತು ಇತ್ಯಾದಿ ಎಲ್ಲ ವಿವರಗಳೂ ಇರುತ್ತವೆ. ಇದೂ ಹಾಗೆಯೇ ಇತ್ತು. ವಿಕ್ರಂ ಮುಖ್ಯವಾಗಿ ಗಮನಿಸಿದ ಅಂಶವೆಂದರೆ ಮ್ಯಾಪಿನ ಕೆಲವೊಂದು ಕಡೆಗಳಲ್ಲಿ ಎಸ್ ಮಾರ್ಕುಗಳಿದ್ದವು. ಆ ಚಿನ್ಹೆ ಕರ್ನಾಟಕದ ಕೆಲವು ಕಡೆಗಳಲ್ಲಿ ಮಾತ್ರ ಇತ್ತು. ಆತ ಎಲ್ಲ ಊರುಗಳನ್ನೂ ಬರೆದಿಟ್ಟುಕೊಂಡ. ಮಂಗಳೂರು, ಬೆಂಗಳೂರು, ಬೀದರ್, ತುಮಕೂರು, ವಿಜಯಪುರದ ಜೊತೆಗೆ ಶಿರಸಿಯ ಬಳಿ ಎಸ್. ಮಾರ್ಕನ್ನು ಪೆನ್ನಿನ ಮೂಲಕ ಬರೆಯಲಾಗಿತ್ತು. ವಿಕ್ರಮನಿಗೆ ಸಿಕ್ಕಾಪಟ್ಟೆ ತಲೆ ಹನ್ನೆರಡಾಣೆ ಆಗತೊಡಗಿತು. ಶಿರಸಿಗೂ ಎಸ್. ಮಾರ್ಕಿಗೂ ಎಂತಾ ಸಂಬಂಧ.? ಶಿರಸಿಯನ್ನು ಎಸ್. ಎಂದು ಸಂಬೋಧನೆ ಮಾಡಿದ್ದಾರಾ? ಹಾಗಾದರೆ ಮಂಗಳೂರನ್ನು ಎಂ. ಎಂದೂ ಬೀದರನ್ನು ಬಿ. ಎಂದೂ ತುಮಕೂರನ್ನು ಟಿ. ಎಂದೂ ಯಾಕೆ ಮಾರ್ಕ್ ಮಾಡಿಲ್ಲ? ಏನಿದು ಎಸ್? ಈ ಎಸ್.ಗೂ ತನ್ನ ಬಳಿ ಇರುವ ಎಸ್. ಲಾಕೆಟಿಗೂ ಏನಾದರೂ ಸಂಬಂಧ ಇದೆಯಾ? ಈ ಎಸ್. ಮ್ಯಾಪಿನಿಂದ ಏನಾದರೂ ತನಗೆ ಲಾಭವಾಗಬಹುದಾ ಎಂದರೆಲ್ಲ ಆಲೋಚನೆ ಮಾಡತೊಡಗಿದ ವಿಕ್ರಂ. ಆಲೋಚಿಸಿದಂತೆಲ್ಲ ಗೊಂದಲವೇ ಹೆಚ್ಚಾಯಿತು. ಪರಿಹಾರ ಮಾತ್ರ ಸಿಗಲಿಲ್ಲ.
ವಿಕ್ರಮ ಹೀಗೆ ಆಲೋಚನೆ ಮಾಡಿದಂತೆಲ್ಲ ಪ್ರದೀಪನ ಬಗ್ಗೆ ಅನುಮಾನಗಳು ಹೆಚ್ಚತೊಡಗಿದವು. ಇಂತಹ ಮ್ಯಾಪ್ ಪ್ರದೀಪನಿಂದ ಸಿಗುತ್ತದೆ ಎಂದು ಆಲೋಚಿಸಿದರ ವಿಕ್ರಂ ಪ್ರದೀಪನೂ ಒಬ್ಬ ಆರೋಪಿಯಾ ಅಥವಾ ತನ್ನಂತೆ ತನಿಖೆಗೆ ಕೈ ಹಾಕಿದವನಾ? ಎಂದು ಆಲೋಚಿಸಿದನಾದರೂ ಈ ಎರಡನ್ನೂ ನಂಬಲು ಮನಸ್ಸು ನಿರಾಕರಿಸಿತು. ಆತನ ಮನಸ್ಸಿನಲ್ಲಿ ಎಸ್. ಮಾರ್ಕಿನ ಲಾಕೆಟ್ ಆರೋಪಿಯದೇ, ಅಥವಾ ಯಾವುದಾದರೂ ಒಂದು ಕಂಪನಿಯದ್ದೇ ಎಂದೂ ಆಲೋಚನೆ ಮೂಡಿತು. ಹೀಗಿದ್ದಾಗಲೇ ಅಲ್ಲಿಗೆ ಪ್ರದೀಪ ಹಾಜರಾಗಿದ್ದ.
ರೂಮಿನೊಳಕ್ಕೆ ಬಂದವನೇ ವಿಕ್ರಮನ ಬಳಿ `ಹೇಯ್.. ನೀನು ಮೊದಲು ಆ ಮ್ಯಾಪನ್ನು ನನಗೆ ಕೊಡು.. ಅದು ನನಗೆ ಬಹಳ ಅಗತ್ಯ..' ಎಂದು ಹೇಳಿದವನೇ ತಕ್ಷಣ ಏನೋ ಹೊಳೆದಂತೆ `ನೀನು ಆರೋಪಿನ ಹುಡುಕ್ತಾ ಇದ್ದೀಯಾ ಅಲ್ವಾ.. ಹೇಗೋ ಈ ವಿಷಯ ಗೊತ್ತಾಯಿತು. ನಿನಗೆ ಅನುಕೂಲವಾಗಲಿ ಅಂತಲೇ ಈ ಮ್ಯಾಪನ್ನು ನಾನು ಸಂಪಾದನೆ ಮಾಡಿ ತಂದಿದ್ದು..' ಎಂದು ಹೇಳಿದ.
ವಿಕ್ರಮನಿಗೆ ಇದರಲ್ಲೇನೋ ನಿಘೂಡತೆಯಿದೆ ಎನ್ನಿಸಿತು. ಮ್ಯಾಪಿನಲ್ಲಿದ್ದದ್ದನ್ನೆಲ್ಲ ತಾನು ಬರೆದಿಟ್ಟುಕೊಂಡಿದ್ದೇನೆ. ಮನಸ್ಸಿನಲ್ಲಿ ಅದು ಅಚ್ಚಾಗಿದೆ. ತನಗೆ ಇನ್ನು ಅದರ ಅಗತ್ಯವಿಲ್ಲ ಎಂದುಕೊಂಡ ವಿಕ್ರಂ ಮ್ಯಾಪನ್ನು ಪ್ರದೀಪನಿಗೆ ವಾಪಾಸ್ ನೀಡಿದ. ಮ್ಯಾಪ್ ಸಿಕ್ಕ ತಕ್ಷಣವೇ ಪ್ರದೀಪ ಅಲ್ಲಿಂದ ಜಾಗ ಖಾಲಿ ಮಾಡಿದ.
ಈ ಘಟನೆಯಿಂದ ಪ್ರದೀಪನ ಬಗ್ಗೆ ವಿಕ್ರಮನಲ್ಲಿದ್ದ ಅನುಮಾನಗಳು ಜಾಸ್ತಿಯಾದವು. ಪ್ರದೀಪ ಯಾರು? ಕಳ್ಳನಾ? ಪೊಲೀಸನಾ? ಮಿತ್ರನಾ? ಕೊಲೆಗಾರನಾ? ಇಷ್ಟಕ್ಕೂ ಈ ಮ್ಯಾಪನ್ನು ಇಟ್ಟುಕೊಂಡು ಪ್ರದೀಪ ಮಾಡುವುದೇನಿದೆ? ಈ ಕೊಲೆಗೂ ಪ್ರದೀಪನಿಗೂ ಏನಾದರೂ ಸಂಬಂಧ ಇದೆಯಾ? ಕೊಲೆಯಲ್ಲಿ ಪ್ರದೀಪನ ಪಾತ್ರ ಏನಿದೆ? ಎಂದೆಲ್ಲ ಆಲೋಚಿಸಿದ ವಿಕ್ರಮ. ಆಲೋಚನೆ ಮಾಡಿದಂತೆಲ್ಲ ಪ್ರದೀಪ ಮತ್ತಷ್ಟು ನಿಘೂಡ ವ್ಯಕ್ತಿಯಾಗುತ್ತ ಹೋದ.
***
(ಮುಂದುವರಿಯುತ್ತದೆ..)