Thursday, November 6, 2014

ತಿರುಗಾಟ

ಭೂಮಿಯಂತೆ ನಾನೂ ಕೂಡ
ನಿಂತ ಕಡೆಗೆ ನಿಲ್ಲಲಾರೆ
ಒಮ್ಮೆ ಇಲ್ಲಿ ಹಾಗೇ ಮುಂದೆ
ತಿರುಗಿ ಸಾಗುತಿರುವೆನು |

ಯಾರ ಹಂಗೂ ನನಗೆ ಇಲ್ಲ
ಸ್ಪಷ್ಟ ನೆಲೆಯ ಕುರುಹೂ ಇಲ್ಲ
ಅಲೆಮಾರಿಯ ಬದುಕು ಪೂರಾ
ಮುಟ್ಟುವುದಿಲ್ಲ ಯಾವುದೇ ತೀರ |

ಮನಸಿನಂತೆ ನನ್ನ ವೇಗ
ಕ್ಷಣದಿ ಬದುಕು ಆವೇಗ
ಬಂಧನವು ಬಾಳಲಿ ಇಲ್ಲ
ತಿರುಕತನವೇ ತುಂಬಿದೆಯಲ್ಲ |

ತಿರುಗಾಟವೇ ನನ್ನ ಬದುಕು
ನಿಲುವಿಗಿಲ್ಲ ಇಂಥ ಝಲಕು
ನಡೆಯುತಲೇ ಗೆಲ್ಲುವೆ
ಸಾಗುತಲೇ ಬದುಕುವೆ |

**
(ಈ ಕವಿತೆಯನ್ನು ಬರೆದಿರುವುದು 09-10-2006ರಂದು ದಂಟಕಲ್ಲಿನಲ್ಲಿ)
( ಆಕಾಶವಾಣಿ ಕಾರವಾರದಲ್ಲಿ ಈ ಕವಿತೆಯನ್ನು 23-01-2008ರಂದು ವಾಚನ ಮಾಡಲಾಗಿದೆ)

Wednesday, November 5, 2014

ಬೆಂಗಾಲಿ ಸುಂದರಿ -37

(ಭಾರತ-ಬಾಂಗ್ಲಾ ಗಡಿ)
          `ಹಾಗಾದರೆ ನೀವು ಭಾರತದೊಳಕ್ಕೆ ನುಸುಳಬೇಕು ಎಂದುಕೊಂಡಿದ್ದೀರಿ...' ನೇರವಾಗಿ ಮಾತಿಗೆ ಇಳಿದಿದ್ದರು ಅರ್ಚಕರು.
          `ಹೌದು.. ನಮ್ಮ ಪಾಲಿಗೆ ಅದೇ ಒಳ್ಳೆಯ ನಿರ್ಧಾರ. ನಿಮ್ಮಿಂದ ಸಹಾಯ ನಿರೀಕ್ಷಿಸಬಹುದೆ?' ಎಂದು ಕೇಳಿದ್ದ ವಿನಯಚಂದ್ರ.
          `ಈ ನರಕದಿಂದ ಪಾರಾಗುತ್ತೀರಿ ಎಂದಾದರೆ ನಾನು ನಿಮಗೆ ಸಹಾಯ ಮಾಡಲು ಸಿದ್ಧ.. ನೋಡಿ.. ಏನು ಮಾಡಬಲ್ಲೆ ನಾನು ನಿಮಗೆ..?' ಎಂದು ಕೇಳಿದರು ಅರ್ಚಕರು.
           `ಭಾರತದ ಗಡಿಗೆ ಹೋಗಲು, ಭಾರತದೊಳಕ್ಕೆ ನುಸುಳಲು ಸುಲಭವಾಗುವಂತಹ ಸ್ಥಳವನ್ನು ತಿಳಿಸಿ. ನಿಮಗೆ ಮಾಹಿತಿಯಿದ್ದರೆ ನಮಗೆ ಹೇಳಿ..' ಕೇಳಿದ್ದ ವಿನಯಚಂದ್ರ.
            `ಹುಂ. ಖಂಡಿತ ಹೇಳಬಲ್ಲೆ.. ಭಾರತದ ಗಡಿಯೊಳಕ್ಕೆ ನುಸುಳಬಹುದು. ಆದರೆ ಬಹಳ ಹುಷಾರಾಗಿರಬೇಕು. ಭಾರತದ ಗಡಿ ಭದ್ರತಾ ಪಡೆಯ ಯೋಧರ ಕಣ್ಣು ತಪ್ಪಿಸುವುದು ಸುಲಭದ ಕೆಲಸವಲ್ಲ ನೋಡಿ. ಈಗೊಂದು ವರ್ಷದ ವರೆಗೂ ಭಾರತದ ಗಡಿ ನುಸುಳುವುದು ಬಹಳ ಸುಲಭದ ಕೆಲಸವಾಗಿತ್ತು. ಆದರೆ ಈಗೀಗ ಕಟ್ಟು ನಿಟ್ಟು ಹೆಚ್ಚಾಗುತ್ತಿದೆ ಎಂದು ಕೇಳಿದ್ದೇನೆ. ಸ್ವಲ್ಪ ಎಚ್ಚರ ತಪ್ಪಿದರೂ ಯೋಧರು ಹೊಡೆಯುವ ಗುಂಡೇಟಿಗೆ ಜೀವ ತೆರಬೇಕಾಗುತ್ತದೆ..' ಎಂದು ಅರ್ಚಕರು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು. ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ನಿಟ್ಟುಸಿರು ಬಿಟ್ಟರು.
             ಮಾತು ಬಾಂಗ್ಲಾದೇಶದ ಪರಿಸ್ಥಿತಿಯ ಕಡೆಗೆ ಹೊರಳಿತು. ಅರ್ಚಕರು ವಿನಯಚಂದ್ರ ಹಾಗೂ ಮಧುಮಿತಾ ಢಾಕಾದಿಂದ ಪಡಿಪಾಟಲು ಪಟ್ಟುಕೊಂಡು ರಂಗಪುರದ ವರೆಗೆ ಬಂದಿದ್ದನ್ನು ಕೇಳಿ ಬೇಜಾರು ಮಾಡಿಕೊಂಡರು. ರೈಲಿನಲ್ಲಿ ಬಂದಿದ್ದರೆ ಎರಡು ದಿನಗಳಲ್ಲಿ ತಲುಪಬಹುದಾದ ದೂರವನ್ನು ಹದಿನೈದು ದಿನಗಳ ಕಾಲ ವ್ಯಯಿಸಿದ್ದಕ್ಕೆ ವ್ಯಥೆ ಪಟ್ಟುಕೊಂಡರು. ಮಾರ್ಗ ಮಧ್ಯೆ ನಡೆದ ಅವಘಡಗಳ ವಿಷಯ ಕೇಳಿ ಮತ್ತಷ್ಟು ವ್ಯಾಕುಲಗೊಂಡರು.
            `ಭಾರತದಿಂದ ಬೇರ್ಪಟ್ಟಾದ ಎಂತಹ ನಾಡಾಗಿತ್ತು ಗೋತ್ತಾ ಇದು.. ಆದರೆ ಹೇಗಿದ್ದ ನಾಡು ಹೇಗೆ ಬದಲಾಯಿತು ನೋಡಿ.. ಛೇ.. ಆ ನಾಡು ಹೀಗೆ ಸದಾ ನರಕವಾಗಬೇಕು ಎನ್ನುವ ಆಲೋಚನೆ ಹೊಂದಿದ್ದ ಬ್ರಿಟೀಷರು ಅಖಂಡ ಬಾಂಗ್ಲಾ ನಾಡನ್ನು 1910ರ ದಶಕದಲ್ಲಿ ಒಡೆದರೇನೋ ಅನ್ನಿಸುತ್ತಿದೆ. ಆಗ ಒಡೆದ ನಾಡು ಹಾಗೂ ಮನಸುಗಳು ಇನ್ನೆಂದಿಗೂ ಒಂದಾಗದಷ್ಟು ದೂರವಾಗಿಬಿಟ್ಟಿವೆ. 1947ರಲ್ಲಿ ಭಾರತದಿಂದ ಪೂರ್ವ ಪಾಕಿಸ್ತಾನವಾಗಿ ಬದಲಾದ ಈ ನಾಡಿನಲ್ಲಿ ನಂತರದ 24 ವರ್ಷಗಳು ನರಕ ಎಂದರೂ ತಪ್ಪಲ್ಲ. ಪಶ್ಚಿಮ ಪಾಕಿಸ್ತಾನ ಅಥವಾ ಈಗಿನ ಪಾಕಿಸ್ತಾನದ ಆಡಳಿತ ಶಾಹಿಗಳು ಈ ನಾಡಿನ ಮೇಲೆ ನಿರಂತರ ದಬ್ಬಾಳಿಕೆ ನಡೆಸಿದರು. ಅದೊಮ್ಮೆ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಪಕ್ಷವೇ ಚುನಾವಣೆಯಲ್ಲಿ ಬಹುಮತ ಪಡದಾಗ ಮಾತ್ರ ಪಶ್ಚಿಮ ಪಾಕಿಸ್ತಾನದ ಕ್ರೂರತನ ಮೇರೆ ಮೀರಿತು. 1971ರಲ್ಲಿ ಏಕಾಏಕಿ ಈ ನಾಡಿನ ಮೇಲೆ ಪಾಕಿಸ್ತಾನಿ ಸೈನ್ಯಗಳು ನುಗ್ಗಿಬಂದವು. ಬಾಂಗ್ಲಾದೇಶಿಯರನ್ನು ಕಂಡಕಂಡಲ್ಲಿ ಕೊಚ್ಚಿ ಹಾಕಿದರು. ಬಾಂಗ್ಲಾ ಮಹಿಳೆಯರನ್ನು ಬೀದಿ ಬೀದಿಗಳಲ್ಲಿ ಅತ್ಯಾಚಾರ ಮಾಡಿದರು. ಪಾಕಿಸ್ತಾನದ ರಕ್ತಪೀಪಾಸುತನ ಯಾವ ರೀತಿ ಇತ್ತೆಂದರೆ ಬೆದರಿದ ಬಾಂಗ್ಲಾ ನಾಡಿನವರು ಭಾರತಕ್ಕೆ ವಲಸೆ ಹೋದರು. ಹೆಚ್ಚೂ ಕಡಿಮೆ 2 ಲಕ್ಷ ಜನರು ಭಾರತದ ಗಡಿ ದಾಟಿ ಹೋದರು. ಆಗ ಸಮಸ್ಯೆಯಾಗಿದ್ದು ಭಾರತಕ್ಕೆ. ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಈ ಸಮಸ್ಯೆ ಪರಿಹರಿಸುವ ಸಲುವಾಗಿ ಮಧ್ಯಪ್ರವೇಶ ಮಾಡಿದರು. ಪಾಕಿಸ್ತಾನಕ್ಕೆ ತಾಕೀತು ನೀಡಿದರು. ಆದರೆ ಕೇಳದ ಪಾಕಿಸ್ತಾನ ಬಾಂಗ್ಲಾದೇಶಿಯರನ್ನು ಕೊಲ್ಲುತ್ತಲೇ ಇತ್ತು. ಇಂದಿರಾಗಾಂಧಿ ಯುದ್ಧ ಘೋಷಣೆ ಮಾಡಿದರು. ಪಾಕಿಸ್ತಾನಿ ಸೈನ್ಯವನ್ನು ಬಗ್ಗು ಬಡಿದರು. ಬಾಂಗ್ಲಾದೇಶ ಉದಯವಾಯಿತು..' ಎಂದು ದೀರ್ಘವಾಗಿ ಹೇಳಿದರು ಆ ಅರ್ಚಕರು.
            ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ಸುಮ್ಮನೆ ಕೇಳುತ್ತಿದ್ದರು. ಅರ್ಚಕರೇ ಮುಂದುವರಿದು  `ಆಗ ಬಾಂಗ್ಲಾದೇಶದಲ್ಲಿ ಕನಿಷ್ಟವೆಂದರೂ 10 ಲಕ್ಷ ಜನ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ. 10 ಲಕ್ಷಕ್ಕೂ ಅಧಿಕ ಮಹಿಳೆಯರ ಮಾನಭಂಗವಾಗಿದೆ. ಕೊಲ್ಲಲ್ಪಟ್ಟವರಲ್ಲಿ 2 ಲಕ್ಷಕ್ಕೂ ಅಧಿಕ ಹಿಂದೂಗಳಿದ್ದರೆ, ಅಷ್ಟೇ ಸಂಖ್ಯೆಯ ಮಹಿಳೆಯರು ಪಾಕಿಸ್ತಾನಿ ಸೈನ್ಯದ ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ. ಭಾರತ 1971ರ ಯುದ್ಧದಲ್ಲಿ ಗೆದ್ದು 90 ಸಾವಿರ ಪಾಕಿಸ್ತಾನಿ ಸೈನಿಕರನ್ನು ಸೆರೆ ಹಿಡಿದಿತ್ತಲ್ಲ.. ಅವರನ್ನು ಬೇಶರತ್ತಾಗಿ ಬಿಡುಗಡೆ ಮಾಡಿತ್ತು. ಆಗ ನಾವೆಲ್ಲ ಬೇಜಾರು ಮಾಡಿಕೊಂಡಿದ್ದವು. ಭಾರತ ಆಗ ಆ ಸೈನಿಕರಿಗೆ ತಕ್ಕ ಪಾಠ ಕಲಿಸಬೇಕಿತ್ತು. ಅವರಿಗೆ ಶಿಕ್ಷೆ ನೀಡಬೇಕಿತ್ತು. ಆದರೆ ಭಾರತ ಹಾಗೆ ಮಾಡಲೇ ಇಲ್ಲ. ಅವರನ್ನು ಬಿಟ್ಟು ಕಳಿಸಿತು...'ಎಂದರು ಅರ್ಚಕರು.
(ಭಾರತ-ಬಾಂಗ್ಲಾ ಗಡಿಯಲ್ಲಿ ನಿವಾಸಿಗಳು)
             `ನೀವೂ ಭಾರತಕ್ಕೆ ಬಂದು ಬಿಡಿ...' ಎಂದು ಹೇಳಿದ ವಿನಯಚಂದ್ರ.
             `ಇಲ್ಲ.. ನಾನು ಭಾರತಕ್ಕೆ ಬರುವುದಿಲ್ಲ. ಕಾರಣಗಳು ಹಲವಿದೆ. ಬಾಂಗ್ಲಾ ನಾಡಿನಲ್ಲಿ ಹಿಂದೂಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮುಂಚೆ ಹಲವಾರು ದೇವಾಲಯಗಳಿದ್ದವು. ಅವೂ ಈಗ ಗಣನೀಯವಾಗಿ ಕಾಣೆಯಾಗಿದೆ. ನಾನು ಪೂಜೆ ಮಾಡುತ್ತಿರುವ ಈ ದೇವಾಲಯವೂ ಬಾಂಗ್ಲಾ ನಾಡಿನ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದು. ನಾನು ಬಾರತಕ್ಕೆ ಬಂದರೆ ಈ ದೇವಾಲಯದ ಪೂಜೆ ಜನ ಸಿಗುವುದಿಲ್ಲ. ಇದು ಮೊದಲ ಕಾರಣ. ನಾನು ಇಲ್ಲೇ ಹುಟ್ಟಿ ಬೆಳೆದವನು. ತಾಯ್ನಾಡು ಹೇಗೆ ಇರಲಿ ಅಲ್ಲೇ ಬಾಳಿ ಬದುಕಬೇಕಾದುದು ಅನಿವಾರ್ಯ. ಅತ್ಯಗತ್ಯ ಕೂಡ. ಈ ನಾಡು ಎಂತಹುದೇ ನರಕ ಆಗಿರಲಿ ನಾನು ಇಲ್ಲೇ ಬದುಕುತ್ತೇನೆ. ನಿಮ್ಮಂತಹ ಹಲವಾರು ಜನ ಹಿಂದೂಗಳು ಆಗಾಗ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಕೆಲವರು ಭಾರತದ ಗಡಿಗೆ ತಲುಪಿಸಲು ಸಹಾಯ ಕೇಳುತ್ತಾರೆ. ಅಂತವರಿಗೆ ನಾನು ಸಹಾಯ ಮಾಡುತ್ತೇನೆ. ನಾನೂ ಭಾರತಕ್ಕೆ ಬಂದರೆ ಅಂತವರಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ. ನಾನು ಮಾಡಲೇಬೇಕಾದ ಕೆಲಸಗಳು ಇನ್ನೂ ಹಲವಿದೆ. ನಿಮ್ಮಂತಹ ಹಲವು ಹಿಂದೂಗಳನ್ನು ಭಾರತದ ಗಡಿ ತಲುಪಿಸಬೇಕಾಗಿದೆ. ನಾನು ಬರುವುದಿಲ್ಲ..' ಎಂದು ಹೇಳಿದ ಅರ್ಚಕರ ಧ್ವನಿ ಗದ್ಗದಿತವಾದಂತಿತ್ತು. ಅವರು ಬಾವುಕರಾಗಿದ್ದರಾ? ಕತ್ತಲೆಯಲ್ಲಿ ಗೊತ್ತಾಗಲಿಲ್ಲ.
             ಮೂವರಿಗೂ ಒಮ್ಮೆ ಮಾತು ಹೊರಡಲಿಲ್ಲ. ಮೌನವೇ ಇದ್ದಕ್ಕಿದ್ದಂತೆ ಆವರಿಸಿತು. ರಂಗಪುರದ ಹೊರ ಬೀದಿಯಿನ್ನೂ ಎಚ್ಚರಿತ್ತು. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆನ್ನುವ ಸದ್ದು ಕಿವಿಗೆ ಕೇಳುತ್ತಿತ್ತು. ದೇವಸ್ಥಾನದ ಪಕ್ಕದ ಕೋಣೆಯೊಂದರ ಮಂದ್ರ ಬೆಳಕು ಎಲ್ಲೆಡೆ ಆವರಿಸಿತ್ತು. `ನಿಮ್ಮ ಕುಟುಂಬ...' ಎಂದು ಕೇಳಿದ ವಿನಯಚಂದ್ರ ಏನೋ ನೆನಪಾದವನಂತೆ ನಾಲಿಗೆ ಕಚ್ಚಿಕೊಂಡ.
             `ನನ್ನ ಕುಟುಂಬ.. ಬಾಂಗ್ಲಾದೇಶದ ಹಿಂಸೆಗೆ ಬಲಿಯಾಗಿ 10 ವರ್ಷಗಳು ಕಳೆದವು. 2004ರ ವೇಳೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಬಹಳವಾಗಿತ್ತು. ರಂಗಪುರದಲ್ಲಿಯೂ ಹಿಂಸಾಚಾರ ಹೆಚ್ಚಿಬಿಟ್ಟಿತ್ತು. ಮುಸ್ಲೀಮರು ಕಂಡಕಂಡಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದರು. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಹಿಂದೂಗಳಿಗೆ ಸೇರಿದ್ದ ತುಂಡು ಜಮೀನನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದರು. ಹಿಂದೂ ಹುಡುಗಿಯರನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದರು. ಅಷ್ಟೇ ಅಲ್ಲದೇ ಹೆಚ್ಚಿನ ಹಿಂದೂ ಹುಡುಗಿಯರನ್ನು ತಮ್ಮ ಮನೆಗಳಲ್ಲಿ ತಮ್ಮ ದೇಹಸುಖ ತೀರಿಸುವ ದಾಸಿಗಳನ್ನಾಗಿ ಮಾಡಿಕೊಂಡಿದ್ದರು. ಈಗಲೂ ಹಲವು ಹಿಂದೂ ಯುವತಿಯರು ಬಾಂಗ್ಲಾದ ಮುಸ್ಲೀಮರ ಮನೆಗಳಲ್ಲಿ ದಾಸಿಯರಾಗಿ, ಜೀತದ ಬದುಕು ಬಾಳುತ್ತಿದ್ದಾರೆ. ನರಕಯಾತನೆ ಅನುಭವಿಸುತ್ತಿದ್ದಾರೆ. 2004ರಲ್ಲಿ ನನ್ನ ಹೆಂಡತಿಯನ್ನು ಹಿಂಸಾಚಾರಿಗಳು ಅತ್ಯಾಚಾರ ಮಾಡಿ ಕೊಂದು ಹಾಕಿದರು. ನನ್ನ ಮಗಳನ್ನು ಎತ್ತಿಕೊಂಡು ಹೋದರು. ಈ ವರೆಗೂ ನನ್ನ ಮಗಳು ಏನಾದಳು ಎನ್ನುವುದು ಗೊತ್ತಿಲ್ಲ. ಬದುಕಿದ್ದಾಳೋ, ಸತ್ತಿದ್ದಾಳೋ ಗೊತ್ತಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂವಾಗಿ ಹುಟ್ಟುವುದೇ ತಪ್ಪು. ಇನ್ನು ಹಿಂದೂ ಹುಡುಗಿಯಾಗಿ ಹುಟ್ಟುವುದಂತೂ... ಬೇಡ ಬಿಡಿ..' ಎಂದರು ಅವರು. ಮತ್ತೆ ಮೌನ ತುಂಬಿತು.
            `ನಾವೀಗ ಭಾರತ ತಲುಪುವುದು ಹೇಗೆ? ಯಾವ ಮಾರ್ಗದಲ್ಲಿ ಹೋದರೆ ಉತ್ತಮ?' ವಿನಯಚಂದ್ರನೇ ಕೇಳಿದ್ದ. ಕೆಲಕಾಲದ ನಂತರ.
             `ನೀವೀಗ ಸೀದಾ ತೀಸ್ತಾನದಿಯನ್ನು ದಾಟಿ ಕುರಿಗ್ರಾಮದ ಕಡೆಗೆ ಸಾಗಿ. ಅಲ್ಲಿಂದ 10 ಕಿ.ಮಿ ಅಂತರದಲ್ಲಿ ಭಾರತದ ಗಡಿಯಿದೆ. ಕುರಿಗ್ರಾಮದಿಂದ ಧಾರ್ಲಾ ನದಿಯನ್ನು ದಾಟಬೇಕು. ಅಲ್ಲೊಂದು ಕಡೆ ಕಚ್ಚಾ ರಸ್ತೆಯಿದೆ. ಅದು ಸೀದಾ ಭಾರತದ ಗಡಿಗೆ ಸಾಗುತ್ತದೆ. ಜಮುನಾ ನದಿ ದಡದತ್ತ ನಾವು ಸಾಗಬೇಕು. ಸಂಜೆಯಾಗುವ ಸಮಯವನ್ನೇ ಆಯ್ದುಕೊಂಡು ಸೂರ್ಯ ರಶ್ಮಿ ಇಳಿದ ಮೇಲೆ ಗಡಿಯೊಳಕ್ಕೆ ನುಸುಳಬೇಕು. ಗಡಿಯಲ್ಲಿ ಒಂದಿಷ್ಟು ಕಾವಲು ಗೋಪುರಗಳಿವೆ. ಅಲ್ಲಿಂದ ಸರ್ಚ್ ಲೈಟ್ ಗಳು ನಿರಂತರವಾಗಿ ಗಡಿಯಮೇಲೆ ಹರಿದಾಡುತ್ತಲೇ ಇರುತ್ತವೆ. ಆ ದೀಪದ ಬೆಳಕಿಗೆ ನಾವು ಸಿಗದಂತೆ ಸಾಗಿದರೆ ನುಸುಳಬಹುದು. ಆದರೆ ಬಹಳ ಅಪಾಯದ ಸಂಗತಿ. ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ನಾಳೆ ಬೆಳಿಗ್ಗೆ ದೇವಸ್ಥಾನದ ಪೂಜೆ ಮುಗಿಸಿದ ನಂತರ ನೀವು ಪ್ರಯಾಣ ಮಾಡಿ. ನಿಮ್ಮ ಜೊತೆಗೆ ನಾನು ಬರುತ್ತೇನೆ. ಭಾರತದ ಗಡಿಯವರೆಗೆ ತಲುಪಿಸಿ ಬರುತ್ತೇನೆ..' ಎಂದರು ಅರ್ಚಕರು.
             `ಒಂದುವೇಳೆ ನಾವು ಗಡಿ ದಾಟುವಾಗ ಭಾರತದ ಸೈನ್ಯಕ್ಕೆ ಸಿಕ್ಕುಬಿದ್ದರೆ..?' ಎಂದು ಕೇಳಿದ ವಿನಯಚಂದ್ರ.
              `ನೀವು ಕಬ್ಬಡ್ಡಿ ಆಟಗಾರರಲ್ಲವಾ. ಅದನ್ನು ಹೇಳಿದ. ಆದಷ್ಟು ಸೈನ್ಯವನ್ನು ನಂಬಿಸಲು ಯತ್ನಿಸಿ. ಇಲ್ಲವಾದರೆ ತೊಂದರೆಯಿಲ್ಲ. ನಿಮ್ಮನ್ನು ಹಿಡಿದು ಮಿಲಿಟರಿ ಜೈಲಿಗೆ ತಳ್ಳಬಹುದು. ಆಗ ವಿಚಾರಣೆ ಸಂದರ್ಭದಲ್ಲಿ ನಡೆದಿದ್ದೆಲ್ಲವನ್ನೂ ತಿಳಿಸಿ. ಸೈನ್ಯದ ಅಧಿಕಾರಿಗಳ ಬಳಿ ನಿಮ್ಮ ವಿಳಾಸ, ಇತ್ಯಾದಿಗಳನ್ನೆಲ್ಲ ಹೇಳಿ ತಪಾಸಣೆ ಮಾಡಲು ಹೇಳಿ. ನಂತರ ನಿಮ್ಮನ್ನು ಬಿಟ್ಟು ಬಿಡಬಹುದು. ಆದರೆ ಒಂದಂತೂ ನಿಜ ನೋಡಿ ಗಡಿಯೊಳಕ್ಕೆ ನುಸುಳಿದ್ದಕ್ಕೆ ನಿಮಗೆ ಸಾದಾ ಶಿಕ್ಷೆಯಂತೂ ಖಂಡಿತ. ಏಕೆಂದರೆ ಯಾವುದೇ ದೇಶದಲ್ಲಿ ಗಡಿ ನುಸುಳುವಿಕೆ ಅಪರಾಧವೇ ಹೌದು..' ಎಂದರು ಅರ್ಚಕರು.
             `ಭಾರತದ ಸೈನ್ಯವೇನೋ ಸರಿ. ಬಾಂಗ್ಲಾದೇಶದ ಸೈನ್ಯದ ಸಮಸ್ಯೆ ಇಲ್ಲವೇ? ' ಎಂದು ಕೇಳಿದ್ದ ವಿನಯಚಂದ್ರ.
             `ಬಾಂಗ್ಲಾದೇಶದ ಸೈನ್ಯ ಗಡಿಯಲ್ಲಿ ಇರುತ್ತದೆ. ಆದರೆ ಅವರಂತಹ ಲಂಚಕೋರರು ಇನ್ನೊಬ್ಬರಿಲ್ಲ. ಅವರಿಗೆ ಒಂದಿಷ್ಟು ದುಡ್ಡು ಕೊಟ್ಟರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಾರೆ. ಇನ್ನೊಂದು ವಿಶೇಷ ಸಂಗತಿಯನ್ನು ನಾನಿಲ್ಲಿ ಹೇಳಲೇಬೇಕು. ಭಾರತದವರಿಗೆ ಗಡಿ ಕಾಯುವುದು ಬಹಳ ಮುಖ್ಯದ ಕೆಲಸ. ಆದರೆ ಬಾಂಗ್ಲಾದವರಿಗೆ ಹಾಗಲ್ಲ. ಬಹುದೊಡ್ಡ ದೇಶ ಭಾರತ ತನ್ನ ನಾಡನ್ನು ಕಾಪಾಡಿಕೊಳ್ಳುವ ಸಲುವಾಗಿ ಗಡಿಯನ್ನು ಕಟ್ಟುನಿಟ್ಟಾಗಿ ಕಾಯುತ್ತಿರುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಏನಿದೆ. ಎಲ್ಲರೂ ಭಾರತಕ್ಕೇ ನುಸುಳಲು ನೋಡುತ್ತಿರುತ್ತಾರೆ. ಆದರೆ ಯಾವೊಬ್ಬನೂ ಬಾಂಗ್ಲಾದತ್ತ ಮುಖ ಮಾಡುವುದಿಲ್ಲ. ಈ ಸಂಗತಿ ಬಾಂಗ್ಲಾ ಸೈನ್ಯಕ್ಕೆ ಗೊತ್ತಿದೆ. ಆದ್ದರಿಂದ ಅವರು ಸುಮ್ಮನೇ ಇರುತ್ತಾರೆ. ಭಾರತದವರು ಮಾತ್ರ ಗಡಿಯನ್ನು ಕಾಯಲು ಸಾಕಷ್ಟು ಕಷ್ಟಪಡುತ್ತಾರೆ..' ಎಂದು ಹೇಳಿದರು ಅರ್ಚಕರು.
(ಗಡಿ ನುಸುಳುವವರು ಮಾಡಿಕೊಂಡ ಕಳ್ಳದಾರಿ)
             ಅರ್ಚಕರೇ ಮುಂದುವರಿಸಿದರು. `ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಬಾಂಗ್ಲಾ ಸೈನ್ಯದವರೂ ಆಗೀಗ ಭಾರತದ ಸೈನ್ಯದವರ ಮೇಲೆ ದಾಳಿ ಮಾಡುತ್ತಾರೆ. ಭಾರತದ ಗಡಿ ಬೇಲಿಯನ್ನು ಧ್ವಂಸವೂ ಮಾಡುತ್ತಿರುತ್ತಾರೆ. ಭಾರತೀಯ ಸೈನಿಕರ ಬಂಕರುಗಳ ಮೇಲೆ ಗುಂಡಿನ ಸುರಿಮಳೆ ಸುರಿಸುತ್ತಾರೆ. ಶೆಲ್ ದಾಳಿಯನ್ನೂ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣವೊಂದಿದೆ. ಬಾಂಗ್ಲಾದೇಶಿಯರು ಭಾರತದೊಳಕ್ಕೆ ನುಸುಳಬೇಕಾದರೆ ಭಾರತದವರ ಕಟ್ಟಿನಿಟ್ಟಿನ ಪಹರೆ ತಪ್ಪಿಸಲು ಈ ಕ್ರಮ ಮಾಡಲಾಗುತ್ತದೆ. ಬಾಂಗ್ಲಾ ಸೈನ್ಯಕ್ಕೆ ದುಡ್ಡುಕೊಟ್ಟರೆ ಅವರು ಗಡಿಯ ಯಾವುದಾದರೂ ಒಂದು ಕಡೆ ದಾಳಿ ಮಾಡಿ ಅಲ್ಲಿ ನುಸುಳಲು ಅನುಕೂಲವಾಗುವಂತೆ ಜಾಗ ಮಾಡುತ್ತಾರೆ. ಅದೇ ಸಮಯದಲ್ಲಿ ಯಾರಾದರೂ ನುಸುಳುತ್ತಿದ್ದರೆ ಅವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಗಡಿಯ ಇನ್ನೊಂದು ಪ್ರದೇಶದಲ್ಲಿ ಭಾರತದ ಸೈನ್ಯದ ಮೇಲೆ ದಾಳಿ ನಡೆಸಿ ಗಮನವನ್ನು ತಪ್ಪಿಸುತ್ತಾರೆ. ಭಾರತೀಯ ಸೈನಿಕರ ಗಮನ ಅತ್ತಕಡೆಯಿದ್ದಾಗ ಇತ್ತ ಬಾಂಗ್ಲಾದೇಶಿಯರು ನುಸುಳಿಬಿಟ್ಟಿರುತ್ತಾರೆ. ಆದರೆ ಈಗೀಗ ಬಾಂಗ್ಲಾ ಸೈನಿಕರ ಇಂತಹ ಕಾರ್ಯಗಳು ಭಾರತೀಯ ಸೈನಿಕರಿಗೆ ಗೊತ್ತಾಗಿದೆ. ಹಾಗಾಗಿ ಅವರು ಬೇರೆ ರೀತಿಯ ಕಾರ್ಯ ಕೈಗೊಳ್ಳುತ್ತಿದ್ದಾರೆ...' ಎಂದು ತಿಳಿಸಿದರು ಅರ್ಚಕರು.
          `ನಾವು ಭಾರತ ತಲುಪುವುದು ಕಷ್ಟವೆನ್ನುತ್ತೀರಾ..?' ಎಂದು ಕೇಳಿದ ವಿನಯಚಂದ್ರ.
          `ಕಷ್ಟವೇ...' ಎಂದವರು ಕೊಂಚ ಹೊತ್ತು ಆಲೋಚಿಸಿದ ನಂತರ `ಒಂದು ಮಾರ್ಗವಿದೆ.. ಆದರೆ ಆ ಮಾರ್ಗ ಎಷ್ಟು ಸಮಂಜಸ ಎಂಬುದು ಗೊತ್ತಿಲ್ಲ.. ಆದರೂ ಪ್ರಯತ್ನಿಸಬಹುದು. ಭಾರತ ಹಾಗೂ ಬಾಂಗ್ಲಾ ವಿಭಜನೆಯಾದಾಗ ಒಂದಷ್ಟು ವಿಶಿಷ್ಟ ಸಂಗತಿಗಳು ಜರುಗಿವೆ. ಯಾವುದೇ ಎರಡು ದೇಶಗಳು ಗಡಿ ಮಾಡಿಕೊಳ್ಳುವಾಗ ತಮ್ಮ ತಮ್ಮ ನಡುವೆ  ಎಲ್ಲ ಪ್ರದೇಶಗಳನ್ನೂ ಪ್ರತ್ಯೇಕವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಭಾರತ-ಬಾಂಗ್ಲಾ ಗಡಿಯ ನಡುವೆ ಹಾಗಾಗಿಲ್ಲ. ಇಲ್ಲಿ ಕೆಲವು ಪ್ರದೇಶಗಳಿನ್ನೂ ಗೊಂದಲದ ಗೂಡಾಗಿಯೇ ಉಳಿದಿವೆ. ಬಾಂಗ್ಲಾ ನಾಡಿನೊಳಗೆ ಭಾರತದ ಪ್ರದೇಶಗಳಿವೆ. ಭಾರತದೊಳಗೆ ಬಾಂಗ್ಲಾ ಭೂಮಿಯೂ ಇದೆ..' ಎಂದರು ಅರ್ಚಕರು.
         `ಏನು? ಏನದು? ನನಗೆ ಅರ್ಥವಾಗಿಲ್ಲ..' ಎಂದ ವಿನಯಚಂದ್ರ.
         `ಹೌದು.. ಇದು ಅರ್ಥವಾಗಲು ಕೊಂಚ ಕಷ್ಟವೇ. ಬಾಂಗ್ಲಾ ದೇಶದ ಗಡಿಯೊಳಗೆ ಭಾರತದ ಭೂಮಿಯಿದೆ ಎಂದನಲ್ಲ. ನದಿಯೊಳಗಿನ ದ್ವೀಪದ ಹಾಗೆ. ನದಿಯಲ್ಲಿ ದ್ವೀಪ ನೋಡಿದ್ದೀಯಲ್ಲ ಸುತ್ತೆಲ್ಲ ನೀರು. ಮಧ್ಯ ಮಾತ್ರ ಭೂಮಿ. ಹಾಗೆಯೇ ಇಲ್ಲೂ ಕೂಡ. ಸುತ್ತೆಲ್ಲ ಬಾಂಗ್ಲಾ ನಾಡು. ನಡುವೆ ಭಾರತದ ಭೂಮಿ. ಭಾರತದ ಪ್ರದೇಶದಲ್ಲೂ ಕೂಡ ಹಾಗೆಯೇ ಇದೆ. ಗಡಿ ಗುರುತಿಸುವಿಕೆಯಲ್ಲಿ ಆದ ಗೊಂದಲವೇ ಇದಕ್ಕೆ ಕಾರಣ.  ತೀಸ್ತಾ ನದಿಯ ಪಕ್ಕದಲ್ಲಿ ಒಂದು ಪ್ರದೇಶವಿದೆ. ಅದರ ಬಗ್ಗೆ ಹೇಳಿದರೆ ನಿಮ್ಮ ತಲೆ ಹನ್ನೆರಡಾಣೆಯಾಗುವುದರಲ್ಲಿ ಸಮದೇಹವೇ ಇಲ್ಲ. ಬಾಂಗ್ಲಾದ ಆ ಪ್ರದೇಶದ ನಡುವೆ ವರ್ತುಲದಂತೆ 6-8 ಕಿ.ಮಿ ಪ್ರದೇಶ ಭಾರತಕ್ಕೆ ಸೇರಿದ್ದು. ಆದರೆ ಭಾರತದ ಗಡಿಗೆ ಈ ಪ್ರದೇಶ ಸೇರಿಲ್ಲ. ಭಾರತದ ಗಡಿಗೂ ಭಾರತದ್ದೇ ಆದ ಈ ಭೂ ಪ್ರದೇಶಕ್ಕೂ ನಡುವೆ 3-4 ಕಿ.ಮಿ ದೂರವಿದೆ. ಭಾರತೀಯರು ಯಾರಾದರೂ ಇಲ್ಲಿಗೆ ಬರಬೇಕೆಂದರೆ ಭಾರತದ ಗಡಿಯನ್ನು ದಾಟಿ ಬಾಂಗ್ಲಾ ದೇಶದಲ್ಲಿ ಪ್ರಯಾಣ ಮಾಡಿ ಮತ್ತೆ ಇತ್ತ ಬರಬೇಕು. ಅದೇ ರೀತಿ ಭಾರತದ ಈ ಭೂ ಪ್ರದೇಶ ಅಂದೆನಲ್ಲ ಅದರೊಳಗೆ ಇನ್ನೊಂದು ವರ್ತುಲದಂತಹ ಪ್ರದೇಶವಿದೆ. ಅದು ಬಾಂಗ್ಲಾದೇಶಕ್ಕೆ ಸೇರಿದ್ದು. ಇದೊಂಥರಾ ವೃತ್ತದೊಳಗೆ ವೃತ್ತ ಎಂಬಂತಿದೆ. ಇನ್ನೂ ಮಜವಾದ ಸಂಗತಿ ಏನೆಂದರೆ ಇಲ್ಲಿ ಒಬ್ಬ ಜಮೀನ್ದಾರ ತನ್ನ ಜಮೀನು ಬಾಂಗ್ಲಾದ್ದು ಎಂದರೆ ಮತ್ತೊಬ್ಬಾತ ತನ್ನದು ಭಾರತದ್ದು ಎನ್ನುತ್ತಾನೆ. ಕಂದಾಯ ವಸೂಲಿ, ಅಭಿವೃದ್ಧಿ ಇತ್ಯಾದಿಗಳೆಲ್ಲ ಬಹಳ ಕಷ್ಟ. ಬಾಂಗ್ಲಾ ದೇಶ ಹಾಗೂ ಭಾರತದ ಗಡಿಗಳು ಎಷ್ಟು ಅಂಕುಡೊಂಕಾಗಿದೆ ಎಂದರೆ ಅದನ್ನು ವಿವರಣೆ ಮಾಡುವುದು ಕಷ್ಟ. ಗಡಿಯಲ್ಲಿ ಭಾರತದ ಒಂದು ರಸ್ತೆಯಿದೆ. ಆ ರಸ್ತೆಯ ಎರಡೂ ಅಂಚುಗಳು ಬಾಂಗ್ಲಾದೇಶಕ್ಕೆ ಸೇರಿದ್ದು. ನಡುವಿನ ರಸ್ತೆ ಮಾತ್ರ ಭಾರತದ್ದು. ಆಚೆ ಕಾಲಿಟ್ಟರೆ ಬಾಂಗ್ಲಾ ಈಚೆ ಕಾಲಿಟ್ಟರೆ ಬಾಂಗ್ಲಾ. ಇಂತಹ ಪ್ರದೇಶಗಳು ಭಾರತದ ಒಳ ನುಸುಳಲು ಹೇಳಿಮಾಡಿಸಿದಂತಹ ಪ್ರದೇಶಗಳು. ನಿಮ್ಮನ್ನು ಇಂತಹುದೇ ಒಂದು ಪ್ರದೇಶಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತೇನೆ. ಸಾಧ್ಯವಾದರೆ ನೀವು ಅಲ್ಲಿಂದಲೇ ಭಾರತ ತಲುಪಬಹುದು..' ಎಂದರು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ತಲೆಯಲ್ಲಾಡಿಸಿದರು. ಆದರೆ ಇಬ್ಬರಲ್ಲೂ ಗಡಿ ಸಮಸ್ಯೆ ಬಗೆ ಹರಿದಿರಲಿಲ್ಲ.
             ಮೂವರಿಗೂ ನಿದ್ದೆ ಹತ್ತುತ್ತಿತ್ತು. ಬೆಳಿಗ್ಗೆ ಸಾಗಬೇಕಾದ ದೂರ ಸಾಕಷ್ಟಿತ್ತು. ಮರುದಿನ ವಿನಯಚಂದ್ರ ಹಾಗೂ ಮಧುಮಿತಾರ ಬದುಕಿನ ಅವಿಸ್ಮರಣೀಯ ದಿನವಿತ್ತು. ಸಾವು-ಬದುಕನ್ನು ನಿರ್ಧಾರ ಮಾಡುವ ದಿನವಾಗಿತ್ತು. ಅದೃಷ್ಟ ಕೈ ಹಿಡಿದರೆ ಭಾರತ ತಲುಪುವುದು ಇಲ್ಲವಾದರೆ ಭಾರತೀಯ ಸೈನಿಕರ ಗುಂಡೇಟಿಗೆ ಬಲಿಯಾಗಿ ಜೀವತೆರಬೇಕಿತ್ತು. ನಾಳೆ ದಿನ ಹೇಗೋ ಏನೋ ಎನ್ನುವ ಆಲೋಚನೆಯಲ್ಲಿದ್ದ ವಿನಯಚಂದ್ರ ಹಾಗೂ ಮಧುಮಿತಾರಿಗೆ ಯಾವಾಗ ನಿದ್ದೆ ಆವರಿಸಿತ್ತೋ ಗೊತ್ತಾಗಲಿಲ್ಲ.

Sunday, November 2, 2014

ಮೌನ ಭೋಜನ

ಮೌನಭೋಜನ
ಏನೆಲ್ಲಾ ನೀಡಿತು ? ಹೊಸತನ !
ಘಮ್ಮೆಂದು ಕಂಪುಚೆಲ್ಲಿ ಮನವ
ತಣಿದು-ಕುಣಿಸಿದ ಧೂಪದ ಕಂಪು,
ಜೊತೆಗೆ ಹರ್ಷಾನಂದವ ನೀಡಿದ
ಕೊಳಲಗಾನದ ಇಂಪು |

ಮೌನಭೋಜನ..
ನವ ಜೀವೋದ್ಧೀಪನ |
ಹಣತೆಯಿಂದ ಬೆಳಕು ಚೆಲ್ಲಿ
ಬಾಳು ಬೆಳಗುವ ದೀಪ,
ಮೌನ ಮೆರೆಯುವ ನಿಶೆಯ ಹೊಸ್ತಿಲೊಳು
ಆತ್ಮ-ಮನಸ್ಸು ಪಡೆದಿದೆ
ಹೊಸದಾದ ಒಂದು ರೂಪ |

ಮೌನಭೋಜನ..
ಮರೆಯದ ಮಧುರ ಭಾವನ |
ಚಿರಂತನ | ಕಾಪಿಡಿದು ಕೊನೆಯ
ಜೀವ ಬಿಂದು ಉಳಿವವರೆಗೆ
ಮೈಝುಮ್ಮೆನ್ನಿಸುವ ಭಾವ ಮಿಲನ
ಜೊತೆಗೆ ಭಾವಸ್ಫುರಣ |

ಮೌನಭೋಜನ..
ಸ್ಫೂರ್ತಿಯ ಬಟ್ಟಲೊಳು,
ಮನದ ತುಂಬಾ ತೃಪ್ತಿ ಇಟ್ಟು
ಬದುಕಿಗೊಂದು ನವ ಸ್ಫೂರ್ತಿಯಾಗಿ
ಸವಿ ನೆನಪಿಟ್ಟ ಕವನ |
ಭಾವ ತಂತುಗಳ ಮಿಲನ |

ಮೌನಭೋಜನ..
ಸ್ಪೂರ್ತಿ-ಮಾರ್ಗದರ್ಶಿ-ಚೇತನಾ |
ಬಾಳಿಗೆ ಹೊಸತು ಪ್ರೇರಣಾ |
ಕಳೆದಿದೆ ಏಕತಾನ |
ಗದ್ದಲದ ಗುಡ್ಡದೊಳು
ಮೌನ ಹೃದಯ ಸ್ಪಂದನ |

***
(ಈ ಕವಿತೆಯನ್ನು ಬರೆದಿರುವುದು ಹುಳಗೋಳದಲ್ಲಿ 18-12-2006ರಂದು)
(ನಾನು ಕಾಲೇಜು ಓದುತ್ತಿದ್ದ ದಿನಗಳಲ್ಲಿ ಎಬಿವಿಪಿಯಲ್ಲಿ  ಅರೆಕಾಲಿಕ ಸದಸ್ಯನಾಗಿದ್ದೆ. ಆ ಸಂದರ್ಭದಲ್ಲಿ ಎಬಿವಿಪಿಯಿಂದ ಹುಳಗೋಳದಲ್ಲಿ ಸ್ಪೂರ್ತಿ-2006ರ ಎಂಬ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿತ್ವ ವಿಕಸನದ ಆ ಶಿಬಿರದಿಂದ ನಾನು ಕಲಿತದ್ದು ಹಲವಷ್ಟು. ಆ ಸಂದರ್ಭದಲ್ಲಿ ಮೌನಭೋಜನ ಎನ್ನುವ ಹೊಸ ವಿಧಾನವನ್ನು ನಾನು ಸವಿದ ನಂತರ ಬರೆದಿದ್ದು ಈ ಕವನ.
ಈ ಮೌನಭೋಜನದ ಬಗ್ಗೆ ನಾವು ಹೇಳುವುದು ಸಾಕಷ್ಟಿದೆ. ಬ್ರಾಹ್ಮಣರ ಮನೆಗಳಲ್ಲಿ ಉಪನಯನವಾದ ನಂತರ ಉಪಾಕರ್ಮ ಆಗುವ ವರೆಗೆ ಊಟಕ್ಕೆ ಕುಳಿತಾಗ ಮಾತನಾಡಬಾರದು ಎನ್ನುವ ನಿಯಮ/ಶಾಸ್ತ್ರವಿದೆ. ನನ್ನ ಉಪನಯನದ ಸಂದರ್ಭದಲ್ಲೂ ನಾನು ಹೀಗೆ ಮಾಡಿದ್ದೆ. ಈಗಿನವರು ಹಾಗೆಮಾಡಿದ್ದು ನಾ ಕಾಣೆ ಬಿಡಿ. ಅದೇ ರೀತಿಯ ಈ ಮೌನಭೋಜನ ಕೊಂಚ ವಿಶಿಷ್ಟವಾದುದು ಎಂದೇ ಹೇಳಬಹುದು. ವಿದ್ಯುತ್ ದೀಪವಿಲ್ಲದೇ ಹಣತೆಯ ದೀಪದ ಬೆಳಕಲ್ಲಿ ಮೌನವಾಗಿ ಊಟವನ್ನು ಮಾಡುವುದೇ ಈ ಪ್ರಕ್ರಿಯೆ.
ಹಣತೆ ಸೂಸುವ ಮಂದ್ರಬೆಳಕು. ಘಮ್ಮೆನ್ನುವಾ ವಾಸನೆ ಸುತ್ತೆಲ್ಲ ಪರಿಸರವನ್ನು ಆವರಿಸಿ ವಿಶಿಷ್ಟ ಅನುಭವ ನೀಡಿದರೆ ಆ ಸಂದರ್ಭದಲ್ಲಿ ಹಾಕಲಾಗುವ ಕೊಳಲ ನಿನಾದ ಮನಸ್ಸನ್ನು ತಲ್ಲೀನಗೊಳಿಸುತ್ತದೆ. `ಇಂತದ್ದು ಬೇಕು, ಇದು ಬೇಡ..' ಎಂದು ಕೈ ಸನ್ನೆಯಲ್ಲೇ ಹೇಳಿ ಹಾಕಿಸಿಕೊಳ್ಳುವ, ಬೇಡವೆನ್ನುವ ವಿಧಾನವಂತೂ ಮಜಾ ಕೊಡುತ್ತದೆ. ಇಂತಹ ಮೌನಭೋಜನ ಉಣ್ಣುವವರಿಗಷ್ಟೇ ಅಲ್ಲ ಬಡಿಸುವವರಿಗೂ ಸವಾಲು ಕೂಡ ಹೌದು. ಇಂತದ್ದೊಂದು ಮೌನಭೋಜನದ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳಬೇಡಿ. ನೀವೂ ಭಾಗವಹಿಸಿ. ಉಂಟಾಗುವ ಆನಂದ ಎಲ್ಲರಿಗೂ ಹಂಚಿ )

Saturday, November 1, 2014

ಬೆಂಗಾಲಿ ಸುಂದರಿ-36

(ತಾಹತ್ ಮಹಲ್ ರಂಗಪುರ)
           ಬಸ್ಸು ನಿಧಾನವಾಗಿ ಚಲಿಸುತ್ತಿತ್ತು. ಬಸ್ಸಿನ ಆಮೆವೇಗ ಬಹುಬೇಗನೆ ಬೇಸರ ತರಿಸಿಬಿಟ್ಟಿತು. ಚಲಿಸುವ ವೇಳೆಯಲ್ಲಿ ಬಸ್ಸಿನ ಪ್ರತಿಯೊಂದು ಭಾಗಗಳೂ ನಡುಗುತ್ತಿದ್ದವು. ವಿನಯಚಂದ್ರನಂತೂ ದೇವರೇ ಈ ಬಸ್ಸು ಎಲ್ಲಿಯೂ ಕೈಕೊಡದೇ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದ. ಏದುಸಿರು ಬಿಡುತ್ತಾ ಬಸ್ಸು ಸಾಗುತ್ತಿತ್ತು. ಮತ್ತೊಂರ್ಧ ತಾಸಿನ ನಂತರ ಬೋಗ್ರಾ ನಗರವನ್ನು ದಾಟಿದ ಬಸ್ಸು ರಂಗಪುರದತ್ತ ಮುಖ ಮಾಡಿತು. ಮಾರ್ಗ ಕ್ರಮಿಸಿದಂತೆಲ್ಲ ಬಸ್ಸಿನಲ್ಲಿ ನಿಧಾನಕ್ಕೆ ಜನ ತುಂಬಲಾರಂಭಿಸಿದರು.
           ಆಮೆವೇಗದ ಕಾರಣ ಪ್ರಯಾಣ ಮತ್ತಷ್ಟು ದೀರ್ಘವಾಗುತ್ತಿದೆಯಾ ಎಂದುಕೊಂಡ ವಿನಯಚಂದ್ರ. ಮನಸ್ಸಿನಲ್ಲಿ ಅದೇನೋ ಅಸಹನೆ. ಬಸ್ಸಂತೂ ಏರಿಳಿತವೇ ಇಲ್ಲವೇನೋ ಎಂಬಂತೆ ಸಾಗುತ್ತಿತ್ತು. ರಂಗಪುರವನ್ನು ಯಾವಾಗ ತಲುಪುತ್ತೇನಪ್ಪಾ ದೇವರೆ ಎನ್ನಿಸದೇ ಇರಲಿಲ್ಲ. ನೂನ್ಗೋಲಾ, ನಾಮೂಜಾ ಈ ಮುಂತಾದ ಊರುಗಳನ್ನು ಹಿಂದಕ್ಕೆ ಹಾಕು ಬಸ್ಸು ಮುಮದೆ ಸಾಗಿತು. ಮಧುಮಿತಾ ವಿನಯಚಂದ್ರನಿಗೆ ಪ್ರತಿ ಊರುಗಳು ಬಮದಾಗಲೂ ಬೆಂಗಾಲಿಯ ಹೆಸರುಗಳನ್ನು ಓದಿ ಹೇಳುತ್ತಿದ್ದಳು. ವಿನಯಚಂದ್ರ ತಲೆಯಲ್ಲಾಡಿಸುತ್ತಿದ್ದ. ಗೋವಿಂದೋಗೋಂಜ್ ಎಂಬ ಊರನ್ನು ತಲುಪುವ ವೇಳೆಗೆ ಒಂದೆರಡು ತಾಸುಗಳು ಕಳೆದಿತ್ತು. ನಿಧಾನವಾಗಿ ಏರುತ್ತಿದ್ದ ಬಿಸಿಲಿನ ಕಾರಣ ಬಸ್ಸಿನೊಳಗೆ ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತಿತ್ತು. ಬಸ್ಸಿನ ನೆತ್ತಿ ಕಾದಂತೆಲ್ಲ ಒಳಗೆ ಕುಳಿತವರು ಚಡಪಡಿಸತೊಡಗಿದರು.
           ನಡುವೆಲ್ಲೋ ಜಮುನಾ ನದಿಯನ್ನು ಸೇರುವ ಉಪನದಿಯೊಂದು ಸಿಕ್ಕಿತು. ಈ ನದಿಯ ಬಳಿ ಬಸ್ಸನ್ನು ನಿಲ್ಲಿಸಿದ ಡ್ರೈವರ್ ಓಡಿ ಹೋಗಿ ಬಾಟಲಿಯಲ್ಲಿ ನೀರನ್ನು ಹಿಡಿದುಕೊಂಡು ಬಂದು ಬಸ್ಸಿನ ರೇಡಿಯೇಟರ್ ಗೆ ಹಾಕಿದ. ಒಮ್ಮೆ ಬಸ್ಸಿನ ಅಂತರಾಳದ ಬಾಯಾರಿಕೆಗೆ ತಂಪನ್ನು ನೀಡಿದ ಚಾಲಕ ಮತ್ತೆ ಬಸ್ಸನ್ನು ಮುಂದಕ್ಕೋಡಿಸಿದ. ವೇಗ ಮಾತ್ರ ಹೆಚ್ಚಲಿಲ್ಲ. ಇನ್ನೊಂದು ತಾಸಿನ ಪಯಣದ ನಂತರ ಬಸ್ಸು ಪಾಲಾಶ್ಬಾರಿ ಎಂಬಲ್ಲಿಗೆ ಹಾಗೂ-ಹೀಗೂ ಎಂಬಂತೆ ಬಂದು ತಲುಪಿತು. ಅಲ್ಲಿಗೆ ಬಂದು ತಲುಪಿದ ಬಸ್ಸು ಒಮ್ಮೆ ಗರ್ರ್ ಎಂದು ಸದ್ದು ಮಾಡಿ ಸ್ಥಬ್ಧವಾಯಿತು. ನಂತರ ಡ್ರೈವರ್ ಏನೇ ಪ್ರಯತ್ನ ಮಾಡಿದರೂ ಮತ್ತೆ ಮುಂದಕ್ಕೆ ಹೊರಡಲಿಲ್ಲ. ಸದ್ದನ್ನೂ ಮಾಡಲಿಲ್ಲ.
           `ನಾನಾಗ್ಲೇ ಹೇಳಿದ್ದೆ. ಈ ಬಸ್ಸು ಎಲ್ಲಾದರೂ ಕೈಕೊಡುತ್ತದೆ ಅಂತ.. ನೋಡು.. ಈಗ ಏನಾಯ್ತು ಅಂತ..' ಎಂದು ಮಧುಮಿತಾಳನ್ನು ಛೇಡಿಸಿದ ವಿನಯಚಂದ್ರ. ಹುಂ ಎಂದಳಾಕೆ. ಬಸ್ಸಿನಲ್ಲಾಗಲೇ ಗುಜು ಗುಜು ಶುರುವಾಗಿತ್ತು. ಕೆಲವರು ಸಣ್ಣದಾಗಿ ಗಲಾಟೆಯನ್ನೂ ಆರಂಭಿಸಿದರು. ಸೀಟಿನಿಂದೆದ್ದ ವಿನಯಚಂದ್ರ ನುಗ್ಗಾಡಿ ಮುಂದಕ್ಕೆ ಹೋಗಿ ಕಂಡಕ್ಟರ್ ಬಳಿ ಬಸ್ಸು ಮುಂದಕ್ಕೆ ಹೋಗದ ಕಾರಣ ತಮ್ಮ ಪ್ರಯಾಣದ ಹಣವನ್ನು ಮರಳಿಸುವಂತೆ ಕೇಳಿದ. ವಿನಯಚಂದ್ರನ ಹಿಂದಿ ಅರ್ಥವಾಗದಂತೆ ನೋಡುತ್ತಿದ್ದ ಕಂಡಕ್ಟರ್ ಬಳಿ ಮಧುಮಿತಾ ಬಂದು ವಿವರಿಸಿದಳು. ಕೊನೆಗೆ ಕಂಡಕ್ಟರ್ ಒಪ್ಪಲಿಲ್ಲ. ವಿನಯಚಂದ್ರನ ವಾದವನ್ನು ಕೇಳುತ್ತಿದ್ದ ಒಂದಷ್ಟು ಪ್ರಯಾಣಿಕರು ವಿನಯಚಂದ್ರನ ಪರವಾಗಿ ನಿಂತರು. ಸಣ್ಣ ಪ್ರಮಾಣದ ಗಲಾಟೆಯೇ ನಡೆಯಿತು. ಒಂದಿಬ್ಬರು ತೋಳೇರಿಸಿಕೊಂಡು ಕಂಡಕ್ಟರನ ಮೇಲೇರಿ ಹೋದರು. ಹೆದರಿದ ಕಂಡಕ್ಟರ್ ಹಣ ವಾಪಾಸು ನೀಡಲು ಮುಂದಾದ. ವಿನಯಚಂದ್ರ ಮೊದಲಿಗೆ ಹಣವನ್ನು ಇಸಿದುಕೊಂಡು ಗುಂಪಿನಿಂದ ಹೊರಬಂದ. `ಅಬ್ಬ ಇಷ್ಟಾದರೂ ಸಿಕ್ಕಿತಲ್ಲ. ಮುಂದಿನ ಪ್ರಯಾಣ ಹೇಗೆ ಮಾಡೋದು ಅಂದ್ಕೊಂಡಿದ್ದೆ. ಉಪವಾಸದಲ್ಲೇ ಭಾರತ ಗಡಿಯವರೆಗೆ ತಲುಪಬೇಕಾ ಎಂದುಕೊಂಡಿದ್ದೆ. ಆದರೆ ಪ್ರಯಾಣದ ಜೊತೆಗೆ ದುಡ್ಡೂ ಸಿಕ್ಕಿತು ನೋಡು..' ಎಂದವನೇ ಹಣ ಎಣಿಸಲು ಆರಂಭಿಸಿದ. ತಾನಂದುಕೊಂಡಿದ್ದಕ್ಕಿಂತ ಜಾಸ್ತಿ ಹಣ ವಾಪಾಸು ಬಂದಿತ್ತು. ಮತ್ತೊಮ್ಮೆ ಮುಖ ಊರಗಲವಾಯಿತು ವಿನಯಚಂದ್ರನಿಗೆ.
        ಊರಿನ ದಾರಿಯಲ್ಲಿ ನಡೆದು ಹೊರಟವರು ಕಂಡ ಕಂಡ ವಾಹನಕ್ಕೆಲ್ಲ ಕೈ ಮಾಡಲು ಆರಂಭಿಸಿದರು. ಆದರೆ ಮೊದ ಮೊದಲು ಯಾವ ವಾಹನಗಳೂ ನಿಲ್ಲಲಿಲ್ಲ. ಕೊನೆಗೊಂದು ಲಡಕಾಸಿ ಜೀಪು ಸಿಕ್ಕಿತು. ಜೀಪು ನೋಡಿದ ವಿನಯಚಂದ್ರ ಏರಲು ಅನುಮಾನ ಮಾಡಿದ. ಕೊನೆಗೆ ಮಧುಮಿತಾಳೇ `ಸಾಧ್ಯವಾದಷ್ಟು ದೂರದ ವರೆಗೆ ಹೋಗೋಣ..ಪ್ರಯಾಣ ಮಾಡಿದ್ದಷ್ಟೇ ಬಂತು.. ಮತ್ತೆ ಇಂತಹ ಅವಕಾಶ ಸಿಗುತ್ತದೆ ಎನ್ನುವುದು ಕಷ್ಟ ನೋಡಿ..' ಎಂದಳು. ವಿನಯಚಂದ್ರ ಒಪ್ಪಿಕೊಂಡು ಜೀಪೇರಿದ. ಜೀಪು ನಿಧಾನವಾಗಿ ಮುಂದಕ್ಕೆ ಸಾಗಿತು. ಅಂಕುಡೊಂಕಿನ ಹಾದಿಯಲ್ಲಿ ಸಾಗಿದ ಜೀಪು ಮಿಥಾಪುರ, ಪೀರ್ ಗಂಜ್, ದುರ್ಗಾಪುರಗಳನ್ನು ದಾಟಿ ಹಿಥೋಂಪುರಕ್ಕೆ ಆಗಮಿಸಿತು. ಆ ಊರು ಬಂದ ತಕ್ಷಣ ಜೀಪಿನ ಯಜಮಾನ ವಿನಯಚಂದ್ರನ ಬಳಿ `ಎಲ್ಲಿಗೆ ಹೋಗುತ್ತಿರುವುದು..' ಎಂದು ವಿಚಾರಿಸಿದ. ಮಧುಮಿತಾ `ರಂಗಪುರ್..' ಎಂದಳು. ಕೊನೆಗೆ ಜೀಪಿನ ಯಜಮಾನ ಅವರನ್ನು ಅಲ್ಲೇ ಇಳಿಸಿ ತಾನು ಬೇರೊಂದು ದಾರಿಯಲ್ಲಿ ಹೊರಟ. ಇವರ ಬಳಿ ಪ್ರಯಾಣದ ದರವನ್ನು ಇಸಿದುಕೊಳ್ಳಲಿಲ್ಲ. ವಿನಯಚಂದ್ರ ಮೇಲೆಬಿದ್ದು ದುಡ್ಡಕೊಡಬೇಕಾ ಎಂದೂ ಕೇಳಲಿಲ್ಲ.
         `ನೋಡು ಮಧು.. ದುಡ್ಡಿನ ಶಿಲ್ಕು ನಮ್ಮ ಬಳಿ ಕಡಿಮೆ ಇದೆ ಎಂದಾದರೆ ಪೈಸೆ ಪೈಸೆಗೆ ಲೆಕ್ಖಮಾಡಬೇಕಾಗುತ್ತದೆ. ಕೊಡುವ ಮೊತ್ತದಲ್ಲಿ ಒಂದು ರು. ಉಳಿದರೂ ಸಾಕು ಎನ್ನಿಸುತ್ತದೆ. ಈಗ ನೋಡು ಆ ಕಂಡಕ್ಟರ್ ದುಡ್ಡು ವಾಪಾಸು ಕೊಟ್ಟಿದ್ದಕ್ಕೆ ಮನಸ್ಸು ಹೂವಾಗುತ್ತಿದೆ... ' ಎಂದ ವಿನಯಚಂದ್ರ.
          `ಹೌದು.. ದುಡ್ಡು ಸಿಕ್ಕಾಪಟ್ಟೆ ಕೈಗೆ ಸಿಗುತ್ತಿದ್ದರೆ ಖರ್ಚು ಮಾಡುವುದೇ ಗೊತ್ತಾಗುವುದಿಲ್ಲ. ಆದರೆ ಈಗ ನೋಡು ಇರುವ ದುಡ್ಡನ್ನೇ ಎಷ್ಟು ಕಡಿಮೆಯೋ ಅಷ್ಟು ಕಡಿಮೆ ಪ್ರಮಾಣದಲ್ಲಿ ಖರ್ಚು ಮಾಡಬೇಕು. ದುಡ್ಡನ್ನು ಸಮರ್ಪಕವಾಗಿ ಬಳಕೆ ಮಾಡುವುದನ್ನು ಕಲಿಸುತ್ತದೆ ಇದು..' ಎಂದಳು.
           `ಚಿಕ್ಕಂದಿನಿಂದ ನನಗೆ ಅಪ್ಪ ಕೈತುಂಬಾ ಹಣಕೊಡುತ್ತಿದ್ದರು. ಕೊಟ್ಟ ಹಣಕ್ಕೆ ಲೆಕ್ಖ ನೀಡು ಅನ್ನುತ್ತಿದ್ದರು. ನಾನು ಅವರ ಕಣ್ಣು ಕಟ್ಟಲು ಲೆಕ್ಖ ಬರೆದಿದ್ದೂ ಇದೆ. ಆಗ ಬೇಕಾಬಿಟ್ಟಿ ಖರ್ಚು ಮಾಡಿದ್ದೆ. ಆದರೆ ಕೆಟ್ಟದ್ದಕ್ಕೆ ಖರ್ಚು ಮಾಡಲಿಲ್ಲ. ನಾನು ಖರ್ಚು ಮಾಡಿದ್ದೆಲ್ಲವೂ ಒಳ್ಳೆಯದಕ್ಕೇ ಎಂದುಕೊಂಡಿದ್ದೆ. ಆದರೆ ಈಗ ಮಾತ್ರ ದುಡ್ಡಿನ ಮಹತ್ವ ಗೊತ್ತಾಗುತ್ತಿದೆ. ಆಗ ಕಲಿತಿದ್ದಕ್ಕಿಂತ ಹೆಚ್ಚು ಈಗ ಕಲಿತಿದ್ದೇನೆ. ದುಡ್ಡಿಗೆ ನಮಸ್ಕಾರ ಕೊಡಬೇಕು ಅನ್ನಿಸುತ್ತದೆ..' ಎಂದ ವಿನಯಚಂದ್ರ.
           `ಹೌದು ವಿನು.. ಕಲಿಕೆ ನಿರಂತರ. ಯಾರಿಂದ, ಹೇಗೆ, ಯಾವಾಗ ಕಲಿಯುತ್ತೇವೆ ಎನ್ನುವುದನ್ನು ಹೇಳಲು ಬರುವುದಿಲ್ಲ ನೋಡು. ದುಡ್ಡು ನಮಗೆ ಭಾರಿ ಪಾಠ ಕಲಿಸುತ್ತದೆ. ಕೆಳಕ್ಕೆ ತಳ್ಳುತ್ತದೆ. ಮೇಲೆ ಬರಲು ಸಹಾಯ ಮಾಡುತ್ತದೆ..' ಎಂದಳು ಮಧುಮಿತಾ. ತಲೆಯಲ್ಲಾಡಿಸಿದ ವಿನಯಚಂದ್ರ.
(ಬೇಗಂ ರೋಖಿಯಾ ವಿಶ್ವವಿದ್ಯಾಲಯ ರಂಗಪುರ)
           ರಂಗಪುರ ಹತ್ತಿರದಲ್ಲೇ ಇತ್ತು. ವಾಹನ ಸಿಗುವ ವರೆಗೆ ನಡೆಯುತ್ತ ಸಾಗೋಣ ಎಂದು ನಿರ್ಧಾರ ಮಾಡಿದ ಇಬ್ಬರೂ ಮುಂದಕ್ಕೆ ಹೆಜ್ಜೆ ಹಾಕಿದರು. ದಾರಿ ಸಾಗುತ್ತಲೇ ಇದ್ದರೂ ಯಾವೊಂದು ವಾಹನವೂ ಇವರ ಬಳಿ ನಿಲ್ಲಲಿಲ್ಲ. ಮದ್ಯಾಹ್ನದ ಉರಿಬಿಸಿಲು ಕಡಿಮೆಯಾಗಿ ಸಂಜೆ ಮೂಡುತ್ತಿತ್ತು. ಆಗಲೇ ಇಬ್ಬರಿಗೂ ಮದ್ಯಾಹ್ನ ಏನೂ ತಿಂದಿಲ್ಲ ಎನ್ನುವುದು ಅರಿವಾಯಿತು. ರಂಗಪುರ ತಲುಪುವ ವರೆಗೆ ಏನನ್ನೂ ತಿನ್ನಬಾರದು ಎಂದು ನಿರ್ಧರಿಸಿ ಬೇಗ ಬೇಗನೆ ಹೆಜ್ಜೆ ಹಾಕಿದರು ಇಬ್ಬರೂ. ಹಸಿವಾಗಿರುವುದು ಮರೆಯಲಿ ಎನ್ನುವ ಕಾರಣಕ್ಕೆ ಯಾವು ಯಾವುದೋ ಸುದ್ದಿಗಳನ್ನು ಮಾತನಾಡುತ್ತ ಬರುತ್ತಿದ್ದರು. ಪೈರ್ ಬಂದ್ ಎನ್ನುವ ಊರು ಸಿಕ್ಕಿತು ಅವರಿಗೆ. ಅಲ್ಲಿಗೆ ಬರುವ ವೇಳೆಗೆ ಹಸಿವೆಯನ್ನು ತಾಳಲಾರೆ ಎನ್ನುವಂತಾಗಿತ್ತು ಇಬ್ಬರಿಗೂ. ರಸ್ತೆಯ ಅಕ್ಕಪಕ್ಕದಲ್ಲಿ ಜೋಳ ಬೆಳೆದು ನಿಂತಿದ್ದು ಕಾಣಿಸಿತು. ಉದ್ದುದ್ದದ ಜೋಳದ ಕುಂಡಿಗೆಗಳು ಬೆಳೆದಿದ್ದವು. ವಿನಯಚಂದ್ರ ತಡೆಯಲಾದರೆ ಹೋಗಿ ಒಂದೆರಡನ್ನು ಕಿತ್ತುಕೊಂಡು ಬಂದ.  ಇಬ್ಬರೂ ತಿನ್ನಲಾರಂಭಿಸಿದರು. ಚೀಲದಲ್ಲಿ ಕೊಂಚವೇ ನೀರಿತ್ತು. ನೀರನ್ನು ಕುಡಿಯುವ ವೇಳೆಗೆ ಹಸಿವು ಕೊಂಚ ಅಡಗಿದಂತಾಯಿತು. ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದರು.
           ವಿಸ್ತಾರವಾದ ಬಯಲು, ನಡು ನಡುವೆ ಸಿಗುವ ಒಣಗಿದ ಹೊಳೆಗಳು ಪದೇ ಪದೆ ಸಿಕ್ಕವು. ರಂಗಪುರ ನಿಧಾನವಾಗಿ ಹತ್ತಿರಾಗುತ್ತಿತ್ತು. ನಡು ನಡುವೆ ಒಂದೆರಡು ಅಡ್ಡ ರಸ್ತೆಗಳೂ ಸಿಕ್ಕವು. ಮತ್ತೊಂದರ್ಧ ತಾಸಿನ ಪಯಣದ ವೇಳೆಗೆ ಸೂರ್ಯನಾಗಲೇ ಕಂತಿದ್ದ. ನಿಧಾನವಾಗಿ ಕತ್ತಲಾವರಿಸಿಬಿಟ್ಟಿತ್ತು. ರಂಗಪುರ ನಗರದ ಹೊರ ಭಾಗದಲ್ಲೇ ಪ್ರಯಾಣ ಮಾಡಬಹುದಾದ ಬೈಪಾಸ್ ರಸ್ತೆ ಕೂಡ ಸಿಕ್ಕಿತು. ಅಲ್ಲಿ ವಿನಯಚಂದ್ರ `ನಾವು ಯಾವ ಮಾರ್ಗದಲ್ಲಿ ಸಾಗೋದು?' ಎಂದು ಕೇಳಿದ. `ಬೈಪಾಸ್.. ಬೇಡ ಮಾರಾಯಾ.. ಇಂತಹ ಬೈಪಾಸ್ ರಸ್ತೆಯಲ್ಲೇ ಅಲ್ಲವಾ ಸಲೀಂ ಚಾಚಾನನ್ನು ಕಳೆದುಕೊಂಡಿದ್ದಲ್ಲವಾ? ನಗರದೊಳಗೇ ಹೋಗೋಣ.. ಇವತ್ತು ರಾತ್ರಿ ಪ್ರಯಾಣ ಖಂಡಿತ ಸಾಧ್ಯವಾಗದ ಮಾತು. ಅಲ್ಲೆಲ್ಲಾದರೂ ಪಾರ್ಕು ಇದ್ದರೆ ಅಲ್ಲೇ ಮಲಗೋಣ. ಬೋಗ್ರಾದಲ್ಲಿ ಮಲಗಿದಂತೆ.. ಇಲ್ಲಿಂದ ಭಾರತದ ಗಡಿ ತೀರಾ ದೂರವೇನಲ್ಲ. ಒಂದೆರಡು ದಿನದ ಪಯಣ ಅಷ್ಟೇ. ಸಲೀಂ ಚಾಚಾ ಹೇಳಿದ ಏಜೆಂಟನ ಪೋನ್ ನಂಬರ್ ನನ್ನ ಬಳಿ ಇದೆ. ಒಮ್ಮೆ ಪೋನ್ ಮಾಡಿ ನೋಡೋಣ. ಆತನ ಸಹಾಯ ಸಿಕ್ಕರೆ ಹಾಗೆ.. ಇಲ್ಲವಾದರೆ ನಾವೇ ಒಂದು ಪ್ರಯತ್ನ ಮಾಡೋಣ..' ಎಂದಳು. ಆಕೆಯ ಸಲಹೆ ಸರಿಯೆನ್ನಿಸಿತು.
        ರಂಗಪುರ ನಗರಿಯೆಡೆಗೆ ತೆರಳುವ ರಸ್ತೆಯಲ್ಲೇ ಮುನ್ನಡೆದರು. ಅರ್ಧ ಗಂಟೆಯ ನಂತರ ರಂಗಪುರ ನಗರಿ ಕತ್ತಲೆಯ ಜೊತೆಗೆ, ಬೆಳಕಿನ ದೀಪಗಳೊಡನೆ ಬರಮಾಡಿಕೊಂಡಿತು. ಎಲ್ಲೆಲ್ಲೂ ಝಗಮಗಿಸುವ ಬೆಳಕು, ರಸ್ತೆಯ ತುಂಬೆಲ್ಲ ಸೈಕಲ್ ರಿಕ್ಷಾಗಳು, ಬೆಂಗಾಲಿಯಲ್ಲಿ ಮಾತನಾಡುತ್ತ ಓಡಾಡುವ ಜನ, ಕಣ್ಣಿಗೆ ಕಾಣಿಸಿತು. ನಗರದೊಳಗೆ ಕಾಲಿಟ್ಟಂತೆಲ್ಲ ಉಬ್ಬರ ಮನಸ್ಸೂ ಉಲ್ಲಾಸಗೊಂಡಿತು. ಅಲ್ಲೆಲ್ಲೋ ಒಂದು ಬೀದಿಯಲ್ಲಿ ಸಾಗುತ್ತಿದ್ದಾಗಲೇ ಒಂದು ದೇವಸ್ಥಾನ ಕಣ್ಣಿಗೆ ಬಿದ್ದಿತು. ಅಚ್ಚರಿಯಿಂದ ನೋಡದವರೇ ದೇವಸ್ಥಾನದ ಒಳಹೊಕ್ಕರು. ದೇವಸ್ಥಾನದಲ್ಲೇ ಇದ್ದ ಅರ್ಚಕರೊಬ್ಬರು ಇವರನ್ನು ಅನುಮಾನದಿಂದಲೇ ನೋಡಿದರು. ಕೊನೆಗೆ ಮಧುಮಿತಾಳೇ ಬೆಂಗಾಲಿಯಲ್ಲಿ ಎಲ್ಲ ವಿಷಯ ತಿಳಿಸಿದಾಗ ಅರ್ಚಕರು ದೇವಸ್ಥಾನದ ಒಳಗೆ ಉಳಿಯಲು ಅವಕಾಶ ಮಾಡಿಕೊಟ್ಟರು. ರಾತ್ರಿಯೂಟವನ್ನೂ ನೀಡಿದರು. ಹಸಿದಿದ್ದ ಇಬ್ಬರೂ ಬೇಗ ಬೇಗನೆ ಊಟ ಮಾಡಿದರು. ಊಟ ಮುಗಿದ ನಂತರ ಅರ್ಚಕರು ಮಾತಿಗೆ ಕುಳಿತರು.

(ಮುಂದುವರಿಯುತ್ತದೆ)

ಭಲೆ ಭೀಮನವಾರೆ

(ಭೀಮನಗುಡ್ದದಲ್ಲಿ ಸೂರ್ಯೋದಯ)
ಮೂಡಣದಲ್ಲಿ ಸೂರ್ಯ ಉದಯಿಸುತ್ತಿದ್ದರೆ ಮನಸ್ಸಿನಲ್ಲಿ ಉಂಟಾಗುವ ರೋಮಾಂಚನ ಬಣ್ಣಿಸಲಸದಳ. ಬಾನು ಕೆಂಪಾಗಿ, ಕಿತ್ತಳೆ ಹಣ್ಣಿನ ಬಣ್ಣದಲ್ಲಿ ನೇಸರ ಆಗಸದಲ್ಲಿ ಎತ್ತರೆತ್ತರಕ್ಕೆ ಬರುತ್ತಿದ್ದರೆ ನೋಡುಗರ ಮನಸ್ಸಿನಲ್ಲಿ ಉಂಟಾಗುವ ಆನಂದ ಬಣ್ಣಿಸಲಸದಳ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭೀಮನವಾರೆ ಗುಡ್ಡದ ಸುಂದರ ಚಿತ್ರಣ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಮಳೆ ಬೀಳುವ ಪ್ರದೇಶ ಎನ್ನುವ ಖ್ಯಾತಿಯನ್ನು ಗಳಿಸಕೊಂಡಿರುವ ಸಿದ್ದಾಪುರ ತಾಲೂಕಿನ ನಿಲ್ಕುಂದದ ಫಾಸಲೆಯಲ್ಲಿಯೇ ಇರುವ ಸುಂದರ ಸ್ಥಳ ಭೀಮನವಾರೆಗುಡ್ಡ. ಸೂರ್ಯೋದಯ ಹಾಗೂ ಸೂರ್ಯಾಸ್ತ ಕಣ್ಣು ತುಂಬಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳ. ಪಶ್ಚಿಮ ಘಟ್ಟದ ಕೊಟ್ಟ ಕೊನೆಯಲ್ಲಿರುವ ಈ ಪ್ರದೇಶದಲ್ಲಿ ನಿಂತು ನೋಡಿದರೆ ಕರಾವಳಿ ಭಾಗದ ದೂರದೂರದ ಚಿತ್ರಣ ಕಣ್ಣಿಗೆ ತುಂಬುತ್ತದೆ. ಕೆಳಗಿನ ಆಳದಲ್ಲೆಲ್ಲೋ ಅಂಗೈನ ರೇಖೆಗಳ ಆಕಾರದಲ್ಲಿ ಹರಿದು ಹೋಗುವ ಅಘನಾಶಿನಿ ನದಿಯಂತೂ ಮನಸ್ಸಿನಲ್ಲಿ ಸಂತಸಕ್ಕೆ ರೆಕ್ಕೆ ಕಟ್ಟುತ್ತದೆ.
ನೆರಳು ಬೆಳಕಿನ ಚಿತ್ತಾರ
ದ್ವಾಪರಯುಗದಲ್ಲಿ ವನವಾಸದಲ್ಲಿದ್ದ ಪಾಂಡವರು ಈ ಪ್ರದೇಶದಲ್ಲೆಲ್ಲ ಸುತ್ತಾಡಿದ್ದರಂತೆ. ಆಗ ಭುಜಬಲ ಪರಾಕ್ರಮಿ ಭೀಮ ಈ ಸ್ಥಳದಲ್ಲಿ ಒಂದು ವಾರೆಯಾಗಿ ಮಲಗಿ ವಿಶ್ರಮಿಸಿದ್ದನಂತೆ. ಆ ಕಾರಣಕ್ಕಾಗಿಯೇ ಈ ಸ್ಥಳಕ್ಕೆ ಭೀಮನವಾರೆ ಗುಡ್ಡ ಎನ್ನುವ ಹೆಸರು ಬಂದಿದೆ. ಭೀಮ ಮಲಗಿದ್ದ ಎನ್ನುವುದಕ್ಕೆ ಕುರುಹು ಎಂಬಂತೆ ಭೂಮಿಯ ಮೇಲೆ ಮಡಿಕೆ ಮಡಿಕೆಗಳೆದ್ದಿವೆ. ತಲೆದಿಂಬಿನಂತಹ ರಚನೆ ಮೇಲಕ್ಕೆದ್ದು ವಿಸ್ಮಯವನ್ನು ಹುಟ್ಟಿಸುತ್ತದೆ. ಭೀಮನವಾರೆಗುಡ್ಡದ ತುತ್ತ ತುದಿಯಲ್ಲಿ ನಿಂತರೆ ಬೀಸಿ ಬರುವ ಅಬ್ಬರದ ಗಾಳಿಯಂತೂ ಎದೆಯೊಳಗೆ ತಲ್ಲಣವನ್ನು ಮುಡಿಸುವಂತದ್ದು. ಅಕ್ಕಪಕ್ಕದಲ್ಲಿ ಪ್ರಪಾತ ನಡುವೆ ಕಾಲು ಹಾದಿಯಷ್ಟೇ ಇರುವ ಗುಡ್ಡವಂತೂ ನೋಡಿದಷ್ಟೂ ಖುಷಿಯನ್ನು ಕೊಡುತ್ತದೆ.
ಭೀಮನಗುಡ್ಡದ ಸುತ್ತಮುತ್ತ ದಟ್ಟವಾದ ಕಾಡಿದೆ. ಗುಡ್ಡದ ತುದಿಯಲ್ಲಿ ನಿಂತುಕೊಂಡರೆ ಕೆಳಭಾಗದಲ್ಲಿ ಜಲಪಾತ ಧುಮ್ಮಿಕ್ಕುವ ಸದ್ದು ಕಿವಿಗಪ್ಪಳಿಸುತ್ತದೆ. ಕರಾವಳಿ ಪ್ರದೇಶವನ್ನು ಆವರಿಸಿರುವ ಮಂಜು, ಊದ್ದಕ್ಕೆ ಅಂಕುಡೊಂಕಾಗಿ ಹರಿದು ಹೋಗಿರುವ ಅಘನಾಶಿನಿ ನದಿ, ತಲವಾರಿನಲ್ಲಿ ಕಡಿದಂತೆ ಚೂಪಾಗಿರುವ ಗುಡ್ಡಗಳು ನೋಡಿದಷ್ಟೂ ನೋಡಬೇಕು ಎನ್ನಿಸುತ್ತದೆ. ಮುಂಜಾನೆ 6 ಗಂಟೆಗೆಲ್ಲ ಭೀಮನವಾರೆ ಗುಡ್ಡವನ್ನು ತಲುಪಿದರಂತೂ ಸೂರ್ಯೋದಯದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಕರ್ನಾಟಕದಲ್ಲಿ ಆಗುಂಬೆಯ ಸೂರ್ಯೋದಯ, ಸೂರ್ಯಾಸ್ತ ಹೆಸರುವಾಸಿ. ಅದಕ್ಕೆ ಸಾಟಿಯಾಗುವಂತಹ ಸೌಂದರ್ಯ ಭೀಮನವಾರೆಗುಡ್ಡದ್ದು ಎಂದರೂ ತಪ್ಪಾಗಲಿಕ್ಕಿಲ್ಲ.
ಈ ಸುಂದರ ತಾಣವನ್ನು ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೆಳಗಿನ ಜಾವದಲ್ಲಿ ಗುಡ್ಡವನ್ನೇರುತ್ತಾರೆ. ಜೊತೆ ಜೊತೆಯಲ್ಲಿಯೇ ಸಂಜಯಾಗುವುದನ್ನೇ ಕಾಯುತ್ತ ಸೂಯರ್ಾಸ್ತವನ್ನು ನೋಡಿ ಆನಂದಿಸುತ್ತಾರೆ. ಭೀಮನವಾರೆ ಗುಡ್ಡವನ್ನು ನೋಡಲು ಆಗಮಿಸುವ ಪ್ರವಾಸಿಗರು ಹತ್ತಿರದಲ್ಲಿಯೇ ಇರುವ ಉಂಚಳ್ಳಿ ಜಲಪಾತ, ವಾಟೆಹೊಳೆ ಜಲಪಾತ, ನಿಲ್ಕುಂದದ ಪ್ರಾಚೀನ ದೇವಾಲಯ ವೀಕ್ಷಣೆ ಮಾಡಬಹುದಾಗಿದೆ. 10 ಕಿ.ಮಿ ಅಂತರದಲ್ಲೇ ಇರುವ ಲಕ್ಕಿಕುಣಿ ಬೆಟ್ಟ, ಬೆಣ್ಣೆಹೊಳೆ ಜಲಪಾತ, ಮಂಜುಗುಣಿ ದೇವಾಲಯಗಳನ್ನೂ ನೋಡಬಹುದಾಗಿದೆ. ಈ ಪ್ರಸಿದ್ಧ ತಾಣಕ್ಕೆ ಆಗಮಿಸುವವರು ಸಿದ್ದಾಪುರಕ್ಕೆ ಆಗಮಿಸಿ ಹಾರ್ಸಿಕಟ್ಟಾ ಹೆಗ್ಗರಣಿಯ ಮೂಲಕ ಬರಬಹುದಾಗಿದೆ. ಹುಬ್ಬಳ್ಳಿ ಭಾಗದ ಪ್ರವಾಸಿಗರು ಶಿರಸಿ-ಅಮ್ಮೀನಳ್ಳಿ ಮೂಲಕ ಭೀಮನಗುಡ್ಡವನ್ನು ತಲುಪಬಹುದಾಗಿದೆ. ಮಂಗಳೂರು ಭಾಗದವರು ಕುಮಟಾದಿಂದ ಬಂಡಲಕ್ಕೆ ಆಗಮಿಸಿ ಅಲ್ಲಿಂದ ಭೀಮನವಾರೆಗುಡ್ಡ ತಲುಪಬಹುದಾಗಿದೆ. ಶಿರಸಿಯಿಂದ 33 ಕಿ.ಮಿ, ಸಿದ್ದಾಪುರದಿಂದ 45 ಕಿ.ಮಿ ಹಾಗೂ ಕುಮಟಾದಿಂದ 60 ಕಿ.ಮಿ ದೂರದಲ್ಲಿ ಈ ಸುಂದರ ಸ್ಥಳವಿದೆ.
ಭೀಮನವಾರೆ ಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪರಿಸರವನ್ನು ಹಾಳುಗೆಡವುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಬಿಸಾಡುವುದು, ತಿನ್ನಲು ತಂದ ತಿಂಡಿಗಳನ್ನು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಭೀಮನಗುಡ್ಡದಲ್ಲಿ ನಿರ್ಮಾಣ ಮಾಡಿರುವ ವೀಕ್ಷಣಾ ಗೋಪುರದಲ್ಲಿ ಫೈರ್ ಕ್ಯಾಂಪ್ ಮಾಡುವ ಮೂಲಕ ಅದನ್ನು ಹಾಳುಮಾಡುತ್ತಿದ್ದರೆ ಗೋಪುರದ ಗೋಡೆಗಳ ಮೇಲೆ ತಮ್ಮ ವಿಕಾರ ಅಕ್ಷರಗಳನ್ನು ಬರೆಯುವ ಮೂಲಕ ಅಂದಗೆಡಿಸುತ್ತಿದ್ದಾರೆ. ಈ ತಾಣದ ಸುತ್ತಮುತ್ತ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ. ಭೀಮನಗುಡ್ಡಕ್ಕೆ ಆಗಮಿಸುವ ಪ್ರವಾಸಿಗರು ಇಂತಹ ಕಾರ್ಯಗಳನ್ನು ನಿಲ್ಲಿಸಬೇಕಾಗಿದೆ. ನಿಸರ್ಗದ ಮಡಿಲಿನಲ್ಲಿರುವ ಸುಂದರ ಪ್ರದೇಶದ ಅಂದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರವಾಸಿಗರ ಮೇಲಿದೆ. ನಮ್ಮದೇ ನಾಡಿನ ಭಾಗವನ್ನು ಸುಂದರವಾಗಿ ಇಟ್ಟುಕೊಳ್ಳುವ ಕಾರ್ಯವೂ ನಡೆಯಬೇಕಾಗಿದೆ.