Sunday, August 31, 2014

ನಮ್ಮೂರ ಹಸಿರಹೊಲ


ಹಸಿರು ಗಿರಿ ಕಾನನದ ನಡು ನಡುವೆ
ಅಗೋ ಅಲ್ಲಿ, ನೋಡಲ್ಲಿ, ಕಾಣುತ್ತಿದೆ
ನಮ್ಮುರ ಹಸಿರು ಹೊಲ |

ಅಕ್ಕಪಕ್ಕದಿ ಗುಡ್ಡ, ದೈತ್ಯಮರ
ಹಸಿರು ತೆನೆ, ಮರತೆಂಗು
ಅಲ್ಲಿ ಮೆರೆದಿತ್ತು ಹೊಲ |

ಕೆಂಪು ಕಂಪಿನ ನೆಲ
ಅಘನಾಶಿನಿಯ ಜೊತೆ ಜುಳು ಜುಳು ತಾಳ
ನಡುವೆ ನಗುತ್ತಿತ್ತು ನಮ್ಮೂರ ಹೊಲ |

ಅಡಿಕೆ ತೋಟದ ನಡುವೆ
ಜವುಗು ಬರಡಿನ ಜೊತೆಗೆ
ಬದುಕಿ ನಿಂತಿತ್ತು ನಮ್ಮೂರ ಹೊಲ |

ಭತ್ತ ಧಾನ್ಯದ ಉಳುಮೆ
ಕಬ್ಬು-ಸೇಂಗಾದ ಮೊಳಕೆ
ಬೆಳೆ ಬೆಳೆದಿತ್ತು ನಮ್ಮೂರ ಹೊಲ |

ಹಸಿದವಗೆ ಜೀವ,
ಜೀವ ಸಂಕುಲಕ್ಕೆ ಆಹಾರ ಜಾಲ
ಇದೇ ಈ ನಮ್ಮುರ ಹೊಲ |

**

(ಈ ಕವಿತೆಯನ್ನು ಬರೆದಿರುವುದು ದಂಟಕಲ್ಲಿನಲ್ಲಿ 9-11-2007ರಂದು)

Thursday, August 28, 2014

ಮತ್ತಿನ್ನೊಂದಿಷ್ಟು ಹನಿ ಚುಟುಕಗಳು

ಹೆಸರು

ಕನ್ನಡದ ಮೇರು ನಟ
ಡಾ. ರಾಜ್ಕುಮಾರ್.
ಅವರ ಮಗ ರಾಘವೇಂದ್ರ ರಾಜ್ಕುಮಾರ್
ಅವರ ಮಗ 
ವಿನಯ ರಾಜ್ಕುಮಾರ್..
ಅವನಿಗೆ ಮಗುವಾದರೆ
............. ರಾಜ್ಕುಮಾರ್
ಅಂತ ಹೆಸರಿಡಬಹುದೇನೋ..!!

ತಲೆಮಾರು

ಹಿಂದಿಯಲ್ಲಿ
ಮುಖೇಶ್ ಕುಮಾರ್
ಅದ್ಭುತ ಹಾಡುಗಾರರು.
ಅವರ ಮಗ ನಿತಿನ್ ಮುಖೇಶ್..
ನಿತಿನ್ ಮುಖೇಶ್ ಮಗ
ನೀಲ್ ನಿತಿನ್ ಮುಖೇಶ್..
ನೀಲ್ ನಿತಿನ್ ಗೆ ಮಗುವಾದರೆ
..... ನೀಲ್ ನಿತಿನ್ ಮುಖೇಶ್..
ಅಂತಿರಬಹುದಾ?

ಸಾಧ್ಯತೆ

ಒಂದು ವೇಳೆ
ದೇವೆಗೌಡರ ಜೆಡಿಎಸ್ ಕೂಡ ಇಬ್ಭಾಗವಾದರೆ
ಒಂದು ಭಾಗಕ್ಕೆ ಕುಮಾರಸ್ವಾಮಿ ಹಾಗೂ ಇನ್ನೊಂದು ಭಾಗಕ್ಕೆ ರೇವಣ್ಣ 
ಮುಖ್ಯಸ್ಥರಾದರೆ.. ಇಬ್ಭಾಗವಾಗುವ ಪಕ್ಷದ ಹೆಸರುಗಳು
ಹೀಗಿರಬಹುದೇ?
ಜೆಡಿಎಸ್ (ಕೆ)
ಜೆಡಿಎಸ್ (ಆರ್)..

ಸೋಲು

ಕೈ ಪಕ್ಷ
ಕಮಲದ ಪಕ್ಷಗಳ
ಗಾಳಿಯಲ್ಲಿ
ಹೋರಾಡಲು
ವಿಫಲವಾಗಿ
ಕೈಚೆಲ್ಲಿದೆ
ಮುದ್ದೆ ಪಕ್ಷ..!!

ಗಣೇಶ ಚತುರ್ಥಿ

ವರ್ಷಕ್ಕೊಮ್ಮೆ ಬರುವನು
ಗೌರಿ ಮಗ ಗಣೇಶ
ತರುವನು ಹರುಷ |
ಸಡಗರ ಸಂತೋಷ,
ರಸ ನಿಮಿಷ|
ಈಶನ ಮಗ ಗಣೇಶ
ತರುವನು ಹೊಸ ಆಶಾ ||

Wednesday, August 27, 2014

ಬೆಂಗಾಲಿ ಸುಂದರಿ-23

(ನಂದನ ಪಾರ್ಕ್)
          ಬಾಂಗ್ಲಾ ನಾಡಿನಲ್ಲಿ ಯಾವ ಕ್ಷಣ ಹೇಗಿರ್ತದೋ ಯಾರೂ ಊಹೆ ಮಾಡುವುದು ಅಸಾಧ್ಯ. ಇವತ್ತು ಶಾಂತವಾಗಿದ್ದ ಜಾಗ ನಾಳೆ ಹಿಂಸಾಚಾರ ಪೀಡಿತವಾಗಲೂಬಹುದು. ಇಂದು ಹೊತ್ತು ಉರಿಯುವ ಪ್ರದೇಶ ನಾಳೆ ಶಾಂತವಾಗಲೂ ಬಹುದು. ಅಷ್ಟು ವಿಚಿತ್ರವಾದ ನಾಡು ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಾಲಿಗಳು ಎಷ್ಟು ಸ್ನೇಹಿತರೋ ಅಷ್ಟೇ ಸಿಟ್ಟಿನವರೂ ಕೂಡ. ಹೊಸದಾಗಿ ನೋಡುವವರಿಗೆ ಬಾಂಗ್ಲಾ ಸುಲಭಕ್ಕೆ ಅರ್ಥವಾಗುವುದಿಲ್ಲ. ವಿನಯಚಂದ್ರನ ಪಾಡೂ ಅದೇ ರೀತಿಯಾಗಿತ್ತು. ಹಲವು ಜನರು ಬಾಂಗ್ಲಾದ ಕುರಿತು ಹಲವು ಬಗೆಯಲ್ಲಿ ಹೇಳಿದ್ದರೂ ಈ ನಾಡು ಮಾತ್ರ ಅರ್ಥವಾಗಿರಲಿಲ್ಲ. ಪ್ರತಿ ದಿನ ಹೊಸ ಬಗೆಯಲ್ಲಿ ತಿಳಿಯುತ್ತ ಹೋಗುತ್ತಿತ್ತು ಬಾಂಗ್ಲಾ.
           ಸಲೀಂ ಚಾಚಾ ಕೂಡ ಬಾಂಗ್ಲಾ ನಾಡಿನ ಹಲವು ವೈಶಿಷ್ಟ್ಯಗಳ ಬಗ್ಗೆ ವಿವರಿಸುತ್ತ ಹೋಗುತ್ತಿದ್ದ. ಮಾತಿನ ನಡುವೆಯೆಲ್ಲೋ ಸಲೀಂ ಚಾಚಾ ಅಡಿಕೆಯ ಕುರಿತು ಹೇಳಿದ. ತಕ್ಷಣ ವಿನಯಚಂದ್ರನ ಕಿವಿ ನೆಟ್ಟಗಾಯಿತು. ಮಾತಿಗೆ ನಿಂತ ವಿನಯಚಂದ್ರ `ಅಡಿಕೆ ನಮ್ಮ ಜೀವನಾಧಾರ. ನಮ್ಮ ಮಲೆನಾಡಿನಲ್ಲಿ ಮನೆ ಮನೆಗಳಲ್ಲಿ ಅಡಿಕೆ ಬೆಳೆದು ಜೀವನ ನಡೆಸುತ್ತಾರೆ. ಆದರೆ ಬಾಂಗ್ಲಾದೇಶದ ಅಡಿಕೆಗಳು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತವೆ. ಭಾರತಕ್ಕೆ ಕಳ್ಳ ದಾರಿಯಲ್ಲಿ ಬಾಂಗ್ಲಾ ಅಡಿಕೆ ಬರುವ ಕಾರಣ ನಮ್ಮ ಅಡಿಕೆಗೆ ಬೆಲೆ ಪಾತಾಳಕ್ಕೆ ಕುಸಿಯುತ್ತಿವೆ. ಈಗೀಗ ಈ ಕಳ್ಳ ಸಾಗಾಣಿಕೆ ತಡೆಯಲು ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಬಾಂಗ್ಲಾ ನಾಡಿನಲ್ಲಿ ಈ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಾರೆ ಎಂದರೆ ಅಚ್ಚರಿಯಾಗುತ್ತಿದೆ..' ಎಂದ.
           `ಹುಂ.. ನಾನೂ ಈ ಬಗ್ಗೆ ಕೇಳಿದ್ದೆ. ಅನೇಕ ಬಾಂಗ್ಲಾ ಅಡಿಕೆ ಬೆಳೆಗಾರರು ನನಗೆ ಪರಿಚಯವಿದ್ದಾರೆ. ಅವರು ಆಗಾಗ ಮಾತನಾಡುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಅವರು ಭಾರತಕ್ಕೆ ನನ್ನ ಮಾಲು ಹೇಗಾದರೂ ಹೋಗಿಬಿಟ್ಟರೆ ಸಾಕು. ನಾನು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿರುತ್ತಾರೆ. ಭಾರತದ ಮಾರುಕಟ್ಟೆಯೇ ಇವರಿಗೂ ಜೀವನಾಧಾರ. ಎರಡೂ ರಾಷ್ಟ್ರಗಳು ಅಡಿಕೆ ಕುರಿತು ಒಪ್ಪಂದ ಮಾಡಿಕೊಂಡಿದ್ದರೆ ಇಲ್ಲಿನ ಅನೇಕ ಬೆಳೆಗಾರರು ಜೀವನ ಕಟ್ಟಿಕೊಳ್ಳುತ್ತಿದ್ದರು..' ಎಂದ ಸಲೀಂ ಚಾಚಾ.
            `ಇಲ್ಲ ಚಾಚಾ.. ನಮ್ಮಲ್ಲಿ ಅಡಿಕೆ ಹೇರಳವಾಗಿ ಬೆಳೆಯುತ್ತಾರೆ. ನಮ್ಮ ಅಡಿಕೆ ಫಸಲು ಬಹಳವಿರುವ ಕಾರಣ ಬೇರೆ ದೇಶಗಳ ಅಡಿಕೆ ಬೇಕಾಗುವುದೇ ಇಲ್ಲ. ನಮ್ಮ ಅಡಿಕೆ ಮಾರುಕಟ್ಟೆ ಹಾಳು ಮಾಡುವ ಸಲುವಾಗಿ ಕಡಿಮೆ ಬೆಲೆಯಲ್ಲಿ ಇಲ್ಲಿನ ಅಡಿಕೆ ಕೊಳ್ಳಲಾಗುತ್ತಿದೆ. ಹೀಗೆ ಮಾಡುವುದರಿಂದ ಬಾಂಗ್ಲಾ ಬೆಳೆಗಾರರಿಗೂ ಒಳ್ಳೆ ಬೆಲೆ ಸಿಗುವುದಿಲ್ಲ. ನಮ್ಮ ಅಡಿಕೆ ಬೆಳೆಗಾರರೂ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗುತ್ತದೆ. ಅದೇ ಕಾರಣಕ್ಕೆ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅಡಿಕೆ ಬೆಳೆಗಾರ ಅಲ್ಪ ಸ್ವಲ್ಪ ಹಣವನ್ನು ಕಾಣುವಂತಾಗಿದೆ..' ಎಂದ ವಿನಯಚಂದ್ರ. ಸಲೀಂ ಚಾಚಾ.. ಹುಂ ಎಂದು ದೀರ್ಘ ನಿಟ್ಟುಸಿರು ಬಿಟ್ಟ.
           ಅಲ್ಲೆಲ್ಲೋ ಸೈಕಲ್ ಚಾಲಿಸುತ್ತಿದ್ದವನು ಕೊಂಚ ಬಿಡುವು ಕೊಟ್ಟ ಚಾಚಾ. ನಿಲ್ಲಿಸಿದವನೇ ವಿನಯಚಂದ್ರನ ಬಳಿ ಬಲಗಡೆಯಲ್ಲಿ ಕೈಮಾಡಿ ತೋರಿಸುತ್ತ ಪನಿಸೈಲ್ ಆಚೆಗೆ ಭವಾನಿಪುರ ಅಂತೊಂದು ಪ್ರದೇಶವಿದೆ. ಅಲ್ಲಿ ಭವಾನಿ ದೇವಾಲಯವಿದೆ. ಬಹಳ ಚನ್ನಾಗಿದೆ. ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಬರುತ್ತಾರೆ ಎಂದ.  ಭಾರತದಲ್ಲಿ ಹಿಂದೂ ಊರುಗಳ ಹೆಸರುಗಳನ್ನೆಲ್ಲ ಅಹ್ಮದಾಬಾದ್, ಹೈದರಾಬಾದ್, ಫರೂಕಾಬಾದ್, ಹೀಗೆ ಮುಸ್ಲಿಂ ಹೆಸರುಗಳಾಗಿ ಬದಲಾಗಿದೆ. ಆದರೆ ಬಾಂಗ್ಲಾದಂತಹ ಮುಸಲ್ಮಾನರು ಬಹುಸಂಖ್ಯಾತರಾಗಿರುವ ದೇಶದಲ್ಲೂ ಹಿಂದೂ ಹೆಸರಾದ ಭವಾನಿಪುರವನ್ನು ಬದಲಾಯಿಸದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿ ತಂದಿತು. ನಿಜಕ್ಕೂ ಬಾಂಗ್ಲಾ ನಾಡು ಅಚ್ಚರಿಯ ಮೂಟೆಯಂತೆ ಅನ್ನಿಸಿತು.
            ಆದರೂ ವಿನಯಚಂದ್ರನ ಮನಸ್ಸಿನಲ್ಲಿ ಬಾಂಗ್ಲಾದಲ್ಲಿನ ಹಿಂಸಾಚಾರದ ಬಗ್ಗೆಯೇ ಆಲೋಚನೆಗಳು. ಇಷ್ಟೆಲ್ಲ ವಿಶಿಷ್ಟವಾಗಿರುವ ನಾಡಿನಲ್ಲೇಕೆ ಈ ಪರಿಯ ಹಿಂಸಾಚಾರ? ಯಾಕೋ ಅರ್ಥವಾಗಲಿಲ್ಲ. ತಲೆ ಕೊಡವಿದ. ಸಲೀಂ ಚಾಚಾ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ. ಸೈಕಲ್ ಏರಿದ ಕೆಲ ಸಮಯದಲ್ಲಿಯೇ ನಂದನ ಪಾರ್ಕ್ ಸಿಕ್ಕಿತು. ಸಲಿಂ ಚಾಚಾ ನಂದನ ಪಾರ್ಕಿನ ವಿಶೇಷತೆಗಳನ್ನು ತಿಳಿಸಿದ. ಇದೊಂದು ಫ್ಯಾಂಟಸಿ ಪಾರ್ಕ್ ಎಂದೂ ಹೇಳಿದ. ಇಲ್ಲಿಂದ ಮುಂದೆ ಅಪ್ಪಟ ಗ್ರಾಮೀಣ ಬಾಂಗ್ಲಾ ನಾಡು ತೆರೆದುಕೊಳ್ಳಲಿತ್ತು. ಬ್ರಹ್ಮಪುತ್ರಾ ನದಿಯ ವಿಶಾಲವಾದ ಹರವಿನ ಪ್ರದೇಶದಲ್ಲಿ ಸಾಗಬೇಕಿತ್ತು. ನಂದನ ಪಾರ್ಕಿನಿಂದ ನೇರ ರಸ್ತೆಯಲ್ಲಿ ಸಾಗಿದರೆ ಸಿಗುವ ಊರೇ ಚಂದ್ರ. ಊರಿಗೆ ಚಂದ್ರ ಎನ್ನುವ ಹೆಸರು ಇಡಲಾಗಿದೆ. ಎಷ್ಟು ಚೆಂದವಲ್ಲವಾ ಎಂದುಕೊಂಡ ವಿನಯಚಂದ್ರ. ತನ್ನ ಹೆಸರಲ್ಲೂ ಚಂದ್ರವಿದೆಯಲ್ಲ. ಊರ ಹೆಸರೂ ಚಂದ್ರ ಎಂದೂ ಅನ್ನಿಸಿತು ಆತನಿಗೆ. ಚಂದ್ರ ಎನ್ನುವ ಹೆಸರಿನ ಊರು ಹೇಗಿರಬಹುದು ಎನ್ನುವ ಕುತೂಹಲವೂ ಮೂಡಿತು. ಚಂದ್ರ ಊರಿಗೆ ಜಯದೇವಪುರ ಹಾಗೂ ತಂಗೈಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯೂ ಹಾದುಹೋಗಿದೆ. ಮುಂದೇ ಇದೇ ಮಾರ್ಗದಲ್ಲಿ ಸಾಗಬೇಕಾಗುತ್ತದೆ ಎಂದು ಮಾಹಿತಿ ನೀಡಿದ ಸಲೀಂ ಚಾಚಾ.
           ಮತ್ತೊಂದು ಹತ್ತು ಕಿ.ಮಿ ಪಯಣದ ನಂತರ ಸಿಕ್ಕಿತು ಚಂದ್ರ. ಅರ್ಧ ಗ್ರಾಮೀಣ ಅರ್ಧ ನಗರ ಪ್ರದೇಶ. ದೊಡ್ಡದೊಂದು ಸುಂದರ ಮಸೀದಿ ಇಲ್ಲಿದೆ. ಹಾಲುಬಿಳುಪಿನ ಮಸೀದಿಯ ಗುಮ್ಮಟದಲ್ಲಿ ಚಿನ್ನದ ಬಣ್ಣದ ಹಾಳೆಯ ಲೇಪನ ಮಾಡಿದ್ದು ಎಂತಹ ಪ್ರವಾಸಿಗರನ್ನೂ ಕೂಡ ಇದು ಸೆಳೆಯುತ್ತದೆ. ಚಂದ್ರ ನಗರಿಯ ಮುಖ್ಯ ವೃತ್ತದ ಬಳಿ ಸಾಗುತ್ತಿದ್ದಂತೆಯೇ ಈ ಊರಿನಲ್ಲಿ ಏನೋ ಸರಿಯಿಲ್ಲ ಎನ್ನಿಸಿತು. ಇದನ್ನು ಮೊದಲು ಗಮನಿಸಿದ್ದು ಸಲೀಂ ಚಾಚಾ. ಅಲ್ಲಲ್ಲಿ ಬ್ಯಾರಿಕೇಡ್ ಗಳಿದ್ದವು. ಕೆಲವು ಕಡೆಗಳಲ್ಲಿ ಪೊಲೀಸರೂ ನಿಂತಿದ್ದರು. ಈ ಊರಿನಲ್ಲಿ ಹಿಂಸಾಚಾರ ಶುರುವಾಗಿದೆಯಾ ಎಂದುಕೊಂಡರು ಸೈಕಲ್ ಮೇಲಣ ಪಯಣಿಗರು. ಹಾಗಾಗದಿದ್ದರೆ ಸಾಕು ಎನ್ನುವ ಬಾವವೂ ಮೂಡಿತು. ಅವ್ಯಕ್ತ ಭೀತಿಯ ನಡುವೆಯೇ ಸೈಕಲ್ ತುಳಿಯತೊಡಗಿದ ಸಲೀಂ ಚಾಚಾ.
(ಚಂದ್ರಾ ನಗರಿಯ ಸುಂದರ ಮಸೀದಿ)
           ಚಂದ್ರ ನಗರಿಯ ಫಾಸಲೆಯನ್ನು ಇನ್ನೇನು ದಾಟಬೇಕು ಎನ್ನುವಷ್ಟರಲ್ಲಿ ಒಬ್ಬ ಪೊಲೀಸಿನವನು ಇವರನ್ನು ಅಡ್ಡಗಟ್ಟಿದ. ಸೈಕಲ್ ನಿಲ್ಲಿಸಿದವನೇ ಲಾಠಿಯನ್ನೆತ್ತಿಕೊಂಡು ಗದರಿಸುತ್ತಲೇ ಬಂದ. ಸಲೀಂ ಚಾಚಾ ಸುಮ್ಮನೆ ನಿಂತಿದ್ದ. ಪೊಲೀಸಿನವನು ಬಯ್ಯುತ್ತಲೇ ಯಾರು ನೀವೆಲ್ಲ ಈ ಮುಂತಾಗಿಯೇ ವಿಚಾರಣೆ ಆರಂಭಿಸಿದ. ಸಲೀಂ ಚಾಚಾ ತನ್ನ ಮಗ ಹಾಗೂ ಸೊಸೆ ಸೈಕಲ್ ಮೇಲೆ ಸಾಗುತ್ತಿದ್ದಾರೆ. ಮಿರ್ಜಾಪುರಕ್ಕೆ ಸೈಕಲ್ ಮೇಲೆ ಬರುತ್ತೇವೆಂದೆ ಹರಕೆ ಹೊತ್ತುಕೊಂಡಿದ್ದೇವೆ ಎಂದ. ಆದರೂ ಪೊಲೀಸ ಸುಮ್ಮನಾಗಲಿಲ್ಲ. ಕೊನೆಗೆ ವಿನಯಚಂದ್ರನ ಬಳಿ ಬಂದು ಹೆಸರೇನು ಎಂದೆಲ್ಲ ಕೇಳಿದ. ಅದಕ್ಕೆ  ವಿನಯಚಂದ್ರ ಗಟ್ಟಿಯಾಗಿಯೇ `ಅಹಮದ್' ಎಂದ. ಪೊಲೀಸನ ಕಣ್ಣು ಮಧುಮಿತಾಳ ಮೇಲೆ ಬಿದ್ದಿತ್ತು. ಆಕೆಯನ್ನೇ ಪದೆ ಪದೆ ನೋಡಲಾರಂಭಿಸಿದ್ದ. ವಿನಯಚಂದ್ರನಿಗೆ ಕಸಿವಿಸಿಯಾಗಿತ್ತು. ಯಾಕೋ ಆಕೆಯ ಬಗ್ಗೆ ಅನುಮಾನ ಬಂದಂತೆ ಪೊಲೀಸ ವರ್ತನೆ ಮಾಡತೊಡಗಿದ. ಕೊನೆಗೆ ಮಧುಮಿತಾಳ ಬಗ್ಗೆ ವಿಚಾರಣೆ ಮಾಡಿದ. ಪೊಲೀಸ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟರೂ ಪೊಲೀಸಿನವ ಸೊಕಾ ಸುಮ್ಮನೆ ಗಲಾಟೆಯನ್ನು ಆರಂಭಿಸಿದ್ದ. ಸಲೀಂ ಚಾಚಾನಿಗೆ ಯಾಕೋ ಪರಿಸ್ಥಿತಿ ಹದ ತಪ್ಪುತ್ತಿದೆ ಎನ್ನಿಸಿತು. ವಿನಯಚಂದ್ರನೂ ನಿಧಾನವಾಗಿ ತಾಳ್ಮೆ ಕಳೆದುಕೊಳ್ಳುತ್ತಿದ್ದ.
             ಕೊನೆಗೊಮ್ಮೆ ಪೊಲೀಸ ವಿನಯಚಂದ್ರನ ಜೊತೆಗೂ ಗಲಾಟೆ ಆರಂಭಿಸಿದ. ವಿನಯಚಂದ್ರ ಹಲವು ಸಾರಿ ಪೊಲೀಸನನ್ನು ಸಮಾಧಾನ ಮಾಡಲು ನೋಡಿದ. ಕೊನೆಗೆ ಇದ್ದಕ್ಕಿದ್ದಂತೆ ಅದೇನನ್ನಿಸಿತೋ ಏನೋ ರಪ್ಪನೆ ಕಪಾಳಕ್ಕೆ ಬಾರಿಸಿಯೇ ಬಿಟ್ಟ. ವಿನಯಚಂದ್ರನ ಹೊಡೆತ ಯಾವ ರೀತಿಯಿತ್ತೆಂದರೆ ಒಂದು ಸಾರಿ ಪೊಲೀಸ ಹಿಂದಕ್ಕೆ ಸರಿದನಲ್ಲದೇ ಕೆನ್ನೆಯನ್ನು ಹಿಡಿದುಕೊಂಡು ಸುಧಾರಿಸಿಕೊಳ್ಳುತ್ತ ಕುಳಿತ. ಸಿಟ್ಟಿಗೆದ್ದ ವಿನಯಚಂದ್ರ ಹಿಂದಿಯಲ್ಲಿ ಬಯ್ಯಲು ಆರಂಭಿಸಿದ್ದ. ಪೊಲೀಸನಿಗೂ ಸಿಟ್ಟು ಬಂದಿತ್ತೇನೋ. ವಿನಯಚಂದ್ರನನ್ನು ಗುರಾಯಿಸತೊಡಗಿದ್ದ. ಸಲೀಂ ಚಾಚಾ ಮಾತ್ರ ಬಹು ದೊಡ್ಡ ತಪ್ಪು ಸಂಭವಿಸಿಬಿಟ್ಟಿತು ಎನ್ನುವಂತೆ ಭಯಭೀತನಾಗಿದ್ದ. ವಿನಯಚಂದ್ರ ಹೊಡೆಯಲಿಕ್ಕೆ ಹೊಡೆದಿದ್ದ. ಹೊಡೆದ ನಂತರವೇ ತಾನೆಂತ ಕೆಲಸ ಮಾಡಿದೆ ಎನ್ನುವ ಅರಿವಾಗತೊಡಗಿತ್ತು. ಪೊಲೀಸ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಷ್ಟರಲ್ಲೇ ಸಲೀಂ ಚಾಚಾ ಬೇಗ ಬೇಗನೆ ಸೈಕಲ್ ಹತ್ತಿ ಹೊರಟೇಬಿಟ್ಟಿದ್ದ. ಪೊಲೀಸ ಇದ್ದ ಜಾಗದಿಂದ ಕೆಲವು ಕಿ.ಮಿ ದಾಟಿ ಬಂದನಂತರವೇ ಎಲ್ಲರೂ ಸಮಾಧಾನಗೊಂಡಿದ್ದು.
            ಸಲೀಂ ಚಾಚಾ ಮೊದಲಿಗೆ ವಿನಯಚಂದ್ರನನ್ನು ತರಾಟೆಗೆ ತೆಗೆದುಕೊಂಡ. ಇಷ್ಟು ಸಿಟ್ಟಾಗುವುದು ಬೇಡವೇ ಬೇಡ. ಇಂತಹ ತಪ್ಪು ಮಾಡಿದರೆ ನೀವು ಬಾಂಗ್ಲಾ ನಾಡನ್ನು ದಾಟಿ ಭಾರತಕ್ಕೆ ಹೋಗುವುದೇ ಇಲ್ಲ. ಬಾಂಗ್ಲಾದ ಯಾವುದಾದರೂ ಒಂದು ಗದ್ದೆ ಬಯಲಿನಲ್ಲಿ ಖತಂ ಆಗುತ್ತೀರಿ. ಬಾಂಗ್ಲಾದ ಭತ್ತದ ಗದ್ದೆಗೆ ನಿಮ್ಮ ರಕ್ತ ನೀರಿನಂತೆ ಆಗುತ್ತದೆ. ಹೀಗೆ ಮಾಡಬೇಡ ಬೇಟಾ ಎಂದೂ ಹೇಳಿದ. ವಿನಯಚಂದ್ರ ಕೂಡ ತನ್ನರಿವಿಲ್ಲದಂತೇ ಈ ರೀತಿ ಆಗಿದ್ದೆಂದೂ ಹೇಳಿದ. ಮೂವರೂ ಒಬ್ಬರಿಗೊಬ್ಬರು ತಿಳಿ ಹೇಳಿಕೊಂಡು ಮುನ್ನಡೆದರು.
            ಕೆಲ ಕಿಲೋಮೀಟರುಗಳ ಪಯಣದ ನಂತರ ಕಾಲಿಯಾಕೈರ್ ಎಂಬ ಪಟ್ಟಣ ಸಿಕ್ಕಿತು. ಕಾಲಿಯಾಕೈರ್ ಪಟ್ಟಣವನ್ನು ತಲುಪುವ ವೇಳೆಗೆ ಪೊಲೀಸರು ಇನ್ನು ತಮ್ಮನ್ನು ಹುಡುಕಿ ಬರಲಾರರು ಎನ್ನುವ ಧೈರ್ಯ ಬಂದಿತು. ಮುಂದಕ್ಕೆ ಪಯಣಿಸಿದರು. ಆ ಊರಿನ ಫಾಸಲೆಯಲ್ಲಿ ಹರಿಯುತ್ತಿದ್ದ ನದಿಯ ಮೇಲಿನಿಂದ ಬೀಸಿ ಬರುತ್ತಿದ್ದ ತಂಗಾಳಿ ಮುಂಜಾವಿಗೆ ಹೊಸ ಬೆಡಗನ್ನು ನೀಡಿತು. ಹಗಲಿನಲ್ಲಿ ಪ್ರಯಾಣ ಮಾಡುವುದು ಬೇಡ ಎನ್ನುವ ನಿರ್ಧಾರ ಮಾಡಿದ್ದರೂ ಮಿರ್ಜಾಪುರವನ್ನು ತಲುಪಲೇಬೇಕು ಎನ್ನುವ ಕಾರಣಕ್ಕಾಗಿ ಬೆಳಗಾದರೂ ಸೈಕಲ್ ಹೊಡೆಯೋಣ ಎಂದುಕೊಂಡರು. ಮಿರ್ಜಾಪುರದಲ್ಲಿ ಭಾರತದ ಗಡಿಯೊಳಕ್ಕೆ ಕಳಿಸುವ ಏಜೆಂಟ್ ಭೇಟಿಯಾಗಿ ಅಗತ್ಯದ ನಿರ್ದೇಶನಗಳನ್ನು ನೀಡಲಿದ್ದ. ಆ ಕಾರಣಕ್ಕಾಗಿ ಏನೇ ತೊಂದರೆಯಾದರೂ ಸೈಕಲ್ ರಿಕ್ಷಾ ತುಳಿದು ಮಿರ್ಜಾಪುರವನ್ನು ಎಷ್ಟು ತ್ವರಿತವಾಗಿ ಸಾಧ್ಯವೋ ಅಷ್ಟು ಬೇಗ ತಲುಪುವ ನಿರ್ಧಾರ ಮಾಡಿದರು. ಬಾಂಗ್ಲಾ ನಾಡಿನ ಬಾನಿನಲ್ಲಿ ಸೂರ್ಯ ಉದಯಿಸಲು ಆರಂಭಿಸಿದ್ದ. ಮೂಡಣ ದಿಕ್ಕು ಕೆಂಪಾಗಿತ್ತು. ನಾಚಿದ ನಾರಿಯ ಕೆನ್ನೆಯಂತೆ ಸುಂದರವಾಗಿತ್ತು. ಬಾನಿನಲ್ಲಿ ಕೈ ಕೈ ಹಿಡಿದುಕೊಂಡು ಹೊರಟಂತೆ ಹಕ್ಕಿಗಳ ಹಿಂಡು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೊರಟಿದ್ದವು. ಅಲ್ಲೆಲ್ಲೊ ಚಿಕ್ಕ ಕೆರೆಯ ಬಳಿ ಸೈಕಲ್ ನಿಲ್ಲಿಸಿ ಪ್ರಾತರ್ವಿಧಿಗಳನ್ನು ಮುಗಿಸಿ ವಿನಯಚಂದ್ರ ಸೈಕಲ್ ತುಳಿಯಲು ಏರಿದ.

(ಮುಂದುವರಿಯುತ್ತದೆ..)

Monday, August 25, 2014

ಹೊಸ ಹನಿಗಳು

ಹೇಳಿಕೆ


ಅಚ್ಛೆ ದಿನ ಆನೆವಾಲೇ ಹೈ

ಎಂದು ಮೋದಿ ಹೇಳುತ್ತಿದ್ದರೂ
ಪೆಟ್ರೂಲ್ ಬೆಲೆ ಹೆಚ್ಚಾಗಿದೆ ನೋಡಿ
ಎಂದರು ಯು. ಟಿ. ಖಾದರು |
ಕಳೆದ ಹತ್ತು ವರ್ಷಗಳಿಂದ
ಅವರು ಸುಮ್ಮನಿದ್ದರು ||


ಹೊಣೆಗಾರಿಕೆ



ರಾಷ್ಟ್ರದಲ್ಲಿ ಹೀನಾಯ

ಸೋಲನ್ನು ಅನುಭವಿಸಿದ್ದರೂ
ಉಪ ಚುನಾವಣೆಯಲ್ಲಿ
ಗೆದ್ದ ತಕ್ಷಣ
ಸೋಲಿನ ಹೊಣೆ ಹೊತ್ತು
ಮೋದಿ ರಾಜಿ ನಾಮೆ ಕೊಡಬೇಕು
ಎಂದರಂತೆ ಕಾಂಗ್ರೆಸ್ಸಿಗರು |


ನಾಯಕತ್ವ



ರಾಷ್ಟ್ರದಲ್ಲಿ ಕಾಂಗ್ರೆಸ್

ಸೋತಾಗ ಕಾಂಗ್ರೆಸ್ಸಿಗರು
ಸೋಲಿಗೆ ಎಲ್ಲರೂ ಹೊಣೆ ಎಂದರು |
ಉಪ ಚುನಾವಣೆಯಲ್ಲಿ 
ಕಾಂಗ್ರೆಸ್ ಗೆದ್ದಾಗ ಮಾತ್ರ
ರಾಹುಲ್ ಗಾಂಧಿ ಯುವ ನಾಯಕತ್ವ
ಕಾರಣ ಎಂದರು. ||

ಪತಿವೃತೆ


ಪತಿಯನ್ನೇ
ವೃತವೆಂದು ತಿಳಿದು
ಸದಾಕಾಲ ಆತನನ್ನೇ
ಸೇವಿಸುವವಳು
ಪತಿವೃತೆ ||


ರಮ್ಯ

ಆಕೆ ಬಹು ರೂಪವತಿ
ರಮ್ಯ|
ನೋಡಲೂ ಕೂಡ ಅಷ್ಟೇ
ರಮ್ಯ |
ಜೊತೆಗೆ ಬಯಸಿದಾಗಲೆಲ್ಲ
ಮತ್ತು ನೀಡುವಳು
ಅದೇ RUMಯಾ ||

Sunday, August 24, 2014

50000

 
      ಖಂಡಿತ ಇದು ಹಂಚಿಕೊಳ್ಳಲೇಬೇಕಾದಂತಹ ಖುಷಿಯ ಸಂಗತಿ. ಹೌದು ಅಘನಾಶಿನಿ ಬ್ಲಾಗ್ ವೀಕ್ಷಕರ ಸಂಖ್ಯೆ 50000 ತಲುಪಿದೆ. ಯಾರ್ಯಾರು ನನ್ನ ಬ್ಲಾಗ್ ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದೀರೋ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಲೇ ಬೇಕಾದದ್ದು ನನ್ನ ಕರ್ತವ್ಯ.
           ನಾನು ಈ ಬ್ಲಾಗನ್ನು ಬರೆಯಲು ಆರಂಭಿಸಿದ್ದು 29-08-2009ರಂದು. ಅದಕ್ಕೂ ಮುನ್ನ ಬರೆಯುತ್ತಿದ್ದೆನಾದರೂ ಬ್ಲಾಗ್ ಲೋಕ ನನಗೆ ಅಪರಿಚಿತವಾಗಿತ್ತು. ಬ್ಲಾಗ್ ಲೋಕವೇನು ಕಂಪ್ಯೂಟರ್ ಎಂಬುದೇ ನನಗೆ ಅಪರಿಚತವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆಗ ತಾನೆ ಕಂಪ್ಯೂಟರ್ ಕಲಿತಿದ್ದ ಹೊಸತು, ದೋಸ್ತರ ಸಲಹೆಯ ಮೇರೆಗೆ ಆರ್ಕುಟ್ ಅಕೌಂಟ್ ಓಪನ್ ಮಾಡಿದ್ದೆ. ನಾನು ಬರೆಯುವುದರ ಬಗ್ಗೆ ತಿಳಿದಿದ್ದ ದೋಸ್ತರು ಬ್ಲಾಗ್ ಮಾಡು ಎಂದು ಸಲಹೆ ಕೊಟ್ಟರು. ಒಂದು ಬ್ಲಾಗ್ ಮಾಡಿ ಸುಮ್ಮನೆ ಇಟ್ಟಿದ್ದೆ. ನೆನಪಾದಾಗ ಒಂದೆರಡು ಕವಿತೆಯೋ ಖಯಾಲಿಯ ಬರಹಗಳನ್ನೋ ಬರೆಯುತ್ತಿದ್ದೆ. 2011ರ ವರೆಗೂ ನಾನು ಬರೆದಿದ್ದು 10-15 ಬರಹಗಳಷ್ಟೆ. ಆದರೆ 2012ರಿಂದ ನಾನು ಆಕ್ಟಿವ್ ಆಗಿ ಬ್ಲಾಗ್ ಲೋಕದಲ್ಲಿ ಬರವಣಿಗೆಯನ್ನು ಆರಂಭಿಸಿದೆ. ಅಲ್ಲಿಂದೀಚೆಗೆ ಅಜಮಾಸು 315 ಬರಹಗಳು ನನ್ನ ಬ್ಲಾಗಿನ ಗೋಡೆಯಲ್ಲಿ ಮೂಡಿವೆ.
           ಅಘನಾಶಿನಿ ಎಂಬುದು ನನ್ನ ಬ್ಲಾಗಿಗೆ ಇಟ್ಟ ಹೆಸರು. ಇದಕ್ಕೆ ಹಲವು ಕಾರಣಗಳಿದೆ. ನಾನು ಹುಟ್ಟಿ ಬೆಳೆದ ದಂಟಕಲ್ ಎಂಬ ಊರಿನ ಅಂಚಿನಲ್ಲಿ ಹರಿಯುವ ನದಿ ಅಘನಾಶಿನಿ. ನನ್ನ ಬರವಣಿಗೆಯ ಓಂಕಾರ ಆರಂಭವಾದದ್ದು ಇದೇ ಅಘನಾಶಿನಿಯ ದಡದ ಮೇಲೆ. ನನ್ನ ನೋವು, ಖುಷಿಯ ಸನ್ನಿವೇಶಗಳಿಗೆಲ್ಲ ಅಘನಾಶಿನಿಯೇ ಮೆಟ್ಟಿಲಾದದ್ದು. ಗೆದ್ದಾಗಲೂ ಸೋತಾಗಲೂ ಅಘನಾಶಿನಿ ನದಿಯ ದಡದ ಬಂಡೆಗಳ ಮೇಲೆ ನಿಂತಿದ್ದಿದೆ ನಾನು. ಇಂತಹ ಕಾರಣಕ್ಕಾಗಿಯೇ ನಾನು ನನ್ನ ಬ್ಲಾಗಿಗೆ ಅಘನಾಶಿನಿ ಎಂದೂ ಟ್ಯಾಗ್ ಲೈನ್ ನನ್ನು ನದಿ ಕಣಿವೆ ಹುಡುಗನ ಭಾವ ಭಿತ್ತಿ ಎಂದೂ ಬರೆದಿದ್ದು.
           ಅಘನಾಶಿನಿ ಎಂಬ ಹೆಸರಿನ ಮೂರು ಬ್ಲಾಗುಗಳಿವೆ. ಗಂಗಾಧರ ಹೆಗಡೆ ಅವರ ಅಘನಾಶಿನಿ, ಸಮನ್ವಯಾ ಅವರ ಅಘನಾಶಿನಿ ಹಾಗೂ ನನ್ನ ಅಘನಾಶಿನಿ ಬ್ಲಾಗುಗಳು. ಈ ಮೂರರ ಪೈಕಿ ಗಂಗಾಧರ ಹೆಗಡೆ ಅವರು ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಲ್ಲಿಯೇ ಅವರೂ ಬ್ಲಾಗನ್ನು ಬರೆಯಲು ಶುರು ಮಾಡಿದರು. ಸಮನ್ವಯಾ ಅವರು ಒಂದೆರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದರು. ಆದರೆ ನನ್ನ ಬ್ಲಾಗು ಉಳಿದ ಇಬ್ಬರು ಬರೆದ ಬ್ಲಾಗಿಗಿಂತ ಹೆಚ್ಚು ಜನರನ್ನು ತಲುಪಿದೆ ಎನ್ನುವ ಹೆಮ್ಮೆ ನನ್ನದು. ಹಾಗಂತ ಅವರದ್ದು ಚನ್ನಾಗಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ಅವರಿಬ್ಬರೂ ಆಕ್ಟಿವ್ ಆಗಲೇ ಇಲ್ಲ. ನಾನು ಆಕ್ಟಿವ್ ಆಗಿ ಬರೆಯುತ್ತಲೇ ಇದ್ದೇನೆ ಅಷ್ಟೆ.
          ಇಂದಿಗೂ ನನಗೆ ನೆನಪಿದೆ. ನಾನು ಮೊಟ್ಟಮೊದಲು ಬರೆದಿದ್ದೊಂದು ಕವಿತೆ. ನಾನು ಓದಿದ್ದು ಕಾನಲೆಯ ಹೂಸ್ಕೂಲಿನಲ್ಲಿ. ನಾನು 8 ನೇ ಕ್ಲಾಸ್ ಇದ್ದಾಗ ಅಣ್ಣ ಗಿರೀಶನದ್ದೊಂದು ಚಿಕ್ಕ ಬರಹ ತರಂಗದಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಖುಷಿಯಿಂದ ನಾನು ಒಂದು ಹನಿಗವಿತೆ ಬರೆದು ಕಳಿಸಿದ್ದೆ. ಅದೂ ಚಿಣ್ಣರ ಅಂಗಳವೋ, ಬಾಲವನವೋ ಏನೋ ಒಂದಕ್ಕೆ. ಮಕ್ಕಳ ಕವಿತೆ. ತರಂಗದವರು ಅದನ್ನು ಪ್ರಕಟವನ್ನೂ ಮಾಡಿಬಿಟ್ಟರು. ಅದಕ್ಕೆ ನನಗೆ 30 ರು. ಸಂಭಾವನೆಯೂ ಬಂದಿತು. ಆ ನಂತರ ಗುರಣ್ಣನಿಗೆ ಒಂದಷ್ಟು ದಿನ ಬರೆಯುವ ಹುಚ್ಚು ಹತ್ತಿತ್ತು. ಆತ ಡಿಗ್ರಿ ಓದುತ್ತಿದ್ದ. ಸಾಕಷ್ಟು ಹುಡುಗಿಯರನ್ನೂ ಪ್ರೀತಿಸುತ್ತಿದ್ದ. ಆ ಕಾರಣಕ್ಕಾಗಿ ಹಲವು ಕವಿತೆಗಳನ್ನೂ ಒಗಾಯಿಸುತ್ತಿದ್ದ. ಹೀಗಿದ್ದಾಗಲೇ ಕಾನ್ಲೆಯ ಗುಡ್ಡದ ನೆತ್ತಿಯಲ್ಲಿ ಕುಳಿತು ಒಂದು ನಮ್ಮ ಶಾಲೆಯ ಚಂದಿರ ಅಂತ ಒಂದು ಕವಿತೆ ಬರೆದಿದ್ದೆ. ಇಂದು ರೀತಿ ಅಲ್ಲಿ ನೋಡು ಚಂದ್ರ ಬಿಂಬ, ಇಲ್ಲಿ ನೋಡು ಲೈಟ್ ಕಂಬ ರೀತಿಯ ಕವಿತೆ. ಬರೆದವನೇ ಗುರಣ್ಣನಿಗೆ ತೋರಿಸಿದ್ದೆ. ಹಿಗ್ಗಾಮುಗ್ಗಾ ಬೈದಿದ್ದ. ನಾನು ಬೇಜಾರು ಮಾಡ್ಕೊಂಡಿದ್ದೆ.
           ಅದಾದ ನಂತರ `ಇದು ನನ್ನದು.' ಎನ್ನುವ ಕವಿತೆ ಬರೆದಿದ್ದು ಫಸ್ಟ್ ಪಿಯುಸಿಯಲ್ಲಿ ನಮ್ಮೂರಿನ ಹುಳ್ಕಿನ ಜಡ್ಡಿ ಗದ್ದೆಯ ಗೇರು ಮರದ ಮೇಲೆ ಕುಳಿತು. ಆ ಮೇಲೆ ನಾನು ಫಸ್ಟ್ ಪಿಯುಸಿಯಲ್ಲಿ ಸೂರನಕೇರಿಯ ಗಣೇಶಜ್ಜನ ಮನೆಯಲ್ಲಿ ಉಳಿದುಕೊಂಡು ನಾಣಿಕಟ್ಟಾ ಕಾಲೇಜಿಗೆ ಹೋಗುತ್ತಿದ್ದೆ. ನಾನು ಹಾಗೂ ಗಿರೀಶಣ್ಣ ಇಬ್ಬರೂ ಪತ್ರದ ಮೂಲಕ ಪತ್ರಿಕೆಯೊಂದನ್ನು ಮಾಡಿದ್ದೆವು. ಆತ ಸಹೃದಯಿ ಎನ್ನುವ ತಲೆಬರಹದ ಅಡಿಯಲ್ಲಿ 2.50 ರು. ಅಂತರ್ದೇಸಿ ಪತ್ರದಲ್ಲಿ ಥೇಟು ಒಂದು ಪತ್ರಿಕೆ ಯಾವ ರೀತಿ ವಿವಿಧ ಸುದ್ದಿ, ಲೇಖನ, ಕಥೆ, ಕವನಗಳನ್ನು ಹೊಂದಿರುತ್ತದೆಯೋ ಅದೇ ರೀತಿ ಬರೆದು ಕಳಿಸುತ್ತಿದ್ದ. ನಾನು ಚಿಂತಾಮಣಿ ಎನ್ನುವ ಹೆಸರಿನಲ್ಲಿ ಬರೆದು ಕಳಿಸುತ್ತಿದ್ದೆ. ಸರಿಸುಮಾರು 2 ವರ್ಷ ಈ ರೀತಿ ನಾವು ಬರೆದುಕೊಳ್ಳುತ್ತಿದ್ದೆವು. ಆ ದಿನಗಳಲ್ಲಿಯೇ ಇರಬೇಕು ನನ್ನ ಬರವಣಿಗೆ ಇನ್ನಷ್ಟು ಜೋರಾದದ್ದು. `ಅಘನಾಶಿನಿ ಕಣಿವೆಯಲ್ಲಿ..' ಅಂತ ಒಂದು ಕಾದಂಬರಿಯನ್ನು ಆ ದಿನಗಳಲ್ಲಿಯೇ ನಾನು ಬರೆಯಲು ಆರಂಭಿಸಿದ್ದು. ಆದರೆ ಆ ಕಾದಂಬರಿ ಇನ್ನೂ ಪೂರ್ಣಗೊಂಡಿಲ್ಲ..!
            ಪ್ರೈಮರಿ ಶಾಲೆಯ ದಿನಗಳಿಂದ ಓದುವುದು ನನ್ನ ಗೀಳು. ಅದರಲ್ಲೂ ತೇಜಸ್ವಿಯೆಂದರೆ ನನ್ನ ಪಂಚಪ್ರಾಣ. ತೇಜಸ್ವಿ ನನಗೆ ಮೊಟ್ಟಮೊದಲು ಓದಲು ಸಿಕ್ಕಿದ್ದು 4ನೇ ಕ್ಲಾಸಿನಲ್ಲಿ. ವಾರಕ್ಕೊಂದು ಪುಸ್ತಕ ತೆಗೆದುಕೊಂಡು ಓದುವ ಗೃಂಥಾಲಯ ಚಟುವಟಿಕೆಯ ಅಂಗವಾಗಿ ತೇಜಸ್ವಿಯವರ ಪರಿಸರದ ಕಥೆ ಸಿಕ್ಕಿತ್ತು. ಅದಾದ ಮೇಲೆ ಹಕ್ಕಿಗಳ ಬಗ್ಗೆ ಬರೆದ ಪುಸ್ತಕ ಹೀಗೆ ಹತ್ತು ಹಲವು. ಹೈಸ್ಕೂಲಿನಲ್ಲಿಯೂ ಅಷ್ಟೇ. ಸಿಕ್ಕ ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಕಾನ್ಲೆ ಪ್ರೈಮರಿ ಶಾಲೆ ಮಾಸ್ತರ್ ಚಿದಂಬರ ಅವರ ಬಳಿ ಹರಪೆ ಬಿದ್ದು ಶಿವರಾಮ ಕಾರಂತರ ಬಾಲ ವಿಜ್ಞಾನ ಸರಣಿಗಳನ್ನು ಓದಿದ್ದೆ. ನಂತರ ಪಿಯುಸಿಯಲ್ಲಿ ವಿ. ಎಸ್. ಹೆಗಡೆಯವರು ಕನ್ನಡ ಲೆಕ್ಚರ್. ಆ ದಿನಗಳಲ್ಲಿ ಹಲವಾರು ಪುಸ್ತಕಗಳನ್ನು ಒತ್ತಾಯವಾಗಿ ಓದಿಸುತ್ತಿದ್ದರು. ಕರ್ವಾಲೋವನ್ನು ಆ ದಿನಗಳಲ್ಲಿ 50ಕ್ಕೂ ಅಧಿಕ ಸಾರಿ ಓದಿದ್ದೆ. ಯಯಾತಿ, ಹಿಟ್ಟಿನಹುಂಜ, ತುಘ್ಲಕ್ ಹೀಗೆ ಹಲವಾರು ಪುಸ್ತಕಗಳು ನನ್ನ ಒಡನಾಡಿಯಾಗಿದ್ದವು. ಡಿಗ್ರಿಗೆ ಬಂದ ಮೇಲಂತೂ ಎರಡು ದಿನಕ್ಕೊಂದು ಕಾದಂಬರಿಯೋ, ಕವನ ಸಂಕಲನವೋ ನನಗೆ ಬೇಕಿತ್ತು. ಮಿತ್ರ ರಾಘವ, ಪೂರ್ಣಿಮಾ, ಚೈತ್ರಿಕಾ ಆದಿ ಬೇದೂರು, ನಾಗರಾಜ ಹೆಗಡೆ, ಕೃಷ್ಣಮೂರ್ತಿ ದೀಕ್ಷಿತ ಇವರ ಗೃಂಥಾಲಯ ಕಾರ್ಡುಗಳನ್ನು ಪಡೆದು ನಾನು ಪುಸ್ತಕಗಳನ್ನು ಓದುತ್ತಿದ್ದೆ. ಇವೇ ನನ್ನ ಬರವಣಿಗೆಯನ್ನು ರೂಪಿಸಿದಂತವುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
           ಪಿಯುಸಿ ಮುಗಿದಿತ್ತು. ಮನೆಯಲ್ಲಿ ಮುಂದಕ್ಕೆ ಓದೋದು ಬೇಡವೇ ಬೇಡ ಎಂದು ಪಟ್ಟಾಗಿ ಕೂತಿದ್ದರು ಅಪ್ಪ. ಅಮ್ಮನಿಗೆ ಮಗ ಓದಲಿ ಎನ್ನುವ ಆಸೆಯಿತ್ತು. ಡಿಗ್ರಿ ಮಾಡೋದೇ ಸೈ. ಯಾವ ಡಿಗ್ರಿ ಮಾಡೋದು? ಮಾಮೂಲಿ ಹಿಸ್ಟರಿ, ಎಕನಾಮಿಕ್ಸು, ಪೊಲಿಟಿಕಲ್ ಸೈನ್ಸು ಮಾಡಿದರೆ ಏನೂ ಆಗೋದಿಲ್ಲ ಎಂದರು ಲಾಯರ್ ಗಣಪಣ್ಣ. ಸೋ ಇನ್ನೇನಪ್ಪಾ ಅಂತಿದ್ದಾಗ ಈಗ ವಿಜಯವಾಣಿಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಮ್ಮ ಭಾರತಿ ಹೆಗಡೆ `ತಮಾ ನೀನು ಬರಿತ್ಯಲಾ.. ಯಾಕೆ ಜರ್ನಲಿಸಂ ಮಾಡ್ಲಾಗ?' ಎಂದದ್ದೇ ತಡ ಎಲ್ಲೆಲ್ಲಿ ಜರ್ನಲಿಸಂ ಕೋರ್ಸಿಗಳಿವೆ ಎನ್ನುವುದನ್ನು ಹುಡುಕಲಾರಂಭಿಸಿದ್ದೆ. ಶಿರಸಿ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರ್ನಲಿಸಂ ಇತ್ತು. ಆಪ್ಷನಲ್ ಇಂಗ್ಲೀಷು ಪೊಲಿಟಿಕಲ್ ಸೈನ್ಸು ಜರ್ನಲಿಸಂಗ್ಗೆ ಜೈ ಎಂದು ಸೇರಿಕೊಂಡೆ. ಡಿಗ್ರಿ ಮೊದಲ ವರ್ಷದಲ್ಲಿ ನನ್ನ ಸೀನಿಯರ್ ಆಗಿದ್ದ ಸಂಜಯ ಭಟ್ಟ ಬೆಣ್ಣೆ, ಗಣೇಶ ಮುರೇಗಾರ್, ಅಶ್ವತ್ಥ ಹೆಗಡೆ, ಸುಭಾಷ ಧೂಪದಹೊಂಡ, ಚೈತ್ರಾ ಹೆಗಡೆ, ರೂಪಾ ಇವರೆಲ್ಲ `ತಮಾ ನೀನು ಡಿಗ್ರಿಯಲ್ಲಿ ಎಷ್ಟು ಬರೆಯುತ್ತಿಯೋ, ಅದೆಷ್ಟು ಬೈಲೈನ್ ಬರುತ್ತದೆಯೋ ಅದು ನಿನಗೆ ಮುಂದಿನ ನಿನ್ನ ವೃತ್ತಿ ಬದುಕಿಗೆ ಪೂರಕವಾಗುತ್ತದೆ.. ಮೂರು ವರ್ಷದಲ್ಲಿ ಇಂತಿಷ್ಟು ಬೈಲೈನ್ ಬರಬೇಕು ಎನ್ನುವ ಗುರಿ ಇಟ್ಟುಕೊ...' ಎಂದರು. ನಾನು ಮೂರು ವರ್ಷದಲ್ಲಿ `50' ಬೈಲೈನ್ ಬರಬೇಕೆಂಬ ಗುರಿ ಇಟ್ಟುಕೊಂಡೆ. ಬರೆದೆ ಬರೆದೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆ, ವಾರ ಪತ್ರಿಕೆ, ಮಂತ್ಲಿ, ಹದಿನೈದು ದಿನದ ಪತ್ರಿಗೆಳಿಗೆಲ್ಲ ಬರೆದೆ. ಹಲವು ಪತ್ರಿಕಗೆಳು ಪ್ರಕಟಿಸಿದವು. ಸಂಭಾವನೆಯನ್ನೂ ಕೊಟ್ಟವು. ಪರಿಣಾಮವಾಗಿ ಮೂರು ವರ್ಷದಲ್ಲಿ 100ಕ್ಕೂ ಅಧಿಕ ಬೈಲೈನ್ ಬಂದವು. ಖಂಡಿತವಾಗಿಯೂ ಈ ಬೈಲೈನ್ ಗಳು ನನ್ನ ವೃತ್ತಿ ಬದುಕಿಗೆ ಸಹಕಾರಿಯಾದವು.
           ಡಿಗ್ರಿ ಟೈಮಿನಲ್ಲಿ ಕಂಪ್ಯೂಟರ್ ಕಲಿತಿದ್ದೆನಾದರೂ ತೀರಾ ಬ್ಲಾಗ್ ಬರೆಯುವ ಹಂತ ಮುಟ್ಟಿರಲಿಲ್ಲ. ಡಿಗ್ರಿ ಮುಗಿಸಿ ಎಲ್ಲ ಪತ್ರಿಕಾ ಕಚೇರಿಗಳಿಗೂ ರೆಸೂಮ್ ಕಳಿಸಿ, ಹೊಟ್ಟೆ ಪಾಡಿಗೆ ಸಿದ್ದಾಪುರ ಕೆಡಿಸಿಸಿ ಬ್ಯಾಂಕಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವ ಸಂದರ್ಭದಲ್ಲೇ ಆರ್ಕುಟ್ಟು, ಫೇಸ್ಬುಕ್ಕು, ಬ್ಲಾಗು ಶುರು ಮಾಡಿಕೊಂಡಿದ್ದು. ನಂತರ ಸಿದ್ದಾಪುರ ಎ.ಪಿಎಂ.ಸಿ.ಯಲ್ಲಿ ಡೈಲಿ ವೇಜಸ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅಘನಾಶಿನಿ ಹುಟ್ಟಿಕೊಂಡಿದ್ದು. ಅಲ್ಲಿಂದ ಮುಂದೆ ನಿಮಗೆ ಗೊತ್ತೇ ಇದೆ. ಮುಂದೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಕರೆದು ಕೆಲಸ ಕೊಟ್ಟಿತು. ಅದಾದ ಮೇಲೆ ನಾನು ಉದಯವಾಣಿಗೆ ಹೋದೆ.
            2011 ನನ್ನ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟ ವರ್ಷ. ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ಸ್ಪೋರ್ಟ್ಸ್ ರಿಪೋರ್ಟರ್ ಆಗಿ ಲೈಫು ಲೈಟಾಗಿ ಓಡುತ್ತಿದೆ ಎನ್ನುವಾಗಲೇ ಬದುಕು ತಿರುವು ಕೊಟ್ಟಿತ್ತು. ಪರಿಣಾಮವಾಗಿ ಮನೆಗೆ ವಾಪಾಸು ಬಂದೆ. ಒಂದಾರು ತಿಂಗಳು ಸುಮ್ಮನೆ ಉಳಿದೆ. ಆಮೇಲೆ ಕನ್ನಡಪ್ರಭದಲ್ಲಿ ನನ್ನ ಕೆಲಸ ಶುರುವಾಯಿತು. ಈ ನನ್ನ ಹಾದಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದವರು ಹಲವರು. ಖಂಡಿತವಾಗಿಯೂ ಅವರ ಬಗ್ಗೆ ನಾನು ಹೇಳಲೇಬೇಕು.
            ಪ್ರೈಮರಿಯ ತಾರಾ ಮೇಡಮ್ಮು, ಸೊಕಾ ಸುಮ್ಮನೆ ಕಾರಣವಿಲ್ಲದೇ ಹಂಗಿಸುತ್ತಿದ್ದ ಸಿ. ಎಂ. ಹೆಗಡೆರು, ಹೈಸ್ಕೂಲಿನಲ್ಲಿ ಇಂಗ್ಲೀಷು ಹೇಳಿಕೊಟ್ಟ ಬಿಆರೆಲ್ಲು, ಹಿಸ್ಟರಿಯನ್ನು ರೋಚಕವಾಗಿ ಕಲಿಸಿದ ಲಕ್ಷಪ್ಪ ಮಾಸ್ತರ್ರು, ಹೊಡೆತದ ಮೂಲಕ ಅಲ್ಪ ಸ್ವಲ್ಪ ವಿದ್ಯೆಯನ್ನು ತಲೆಗೆ ಹತ್ತುವಂತೆ ಮಾಡಿದ ಪಿಬಿಎನ್ನು, ಮುಷ್ಟಿಕಟ್ಟಿಕೊಂಡು ಬೆನ್ನಿಗೆ ಗುದ್ನ ನೀಡುತ್ತಿದ್ದ  ಕಟ್ಬಿಟಿನಕೆರೆ ಎಸ್ಸೆಚ್ಚು, ಕನ್ನಡವನ್ನು ಚನ್ನಾಗಿ ಕಲಿಸಿದರೂ `ನ' ದಿಂದ ಕೊನೆಗೊಳ್ಳುವ ಶಬ್ದವನ್ನು ನನನನ ಎಂದು ಉಚ್ಛರಿಸುತ್ತಿದ್ದ ಗ್ರೇಸ್ ಪ್ರೇಂ ಕುಮಾರಿ, ಪಿಯುಸಿಯ ರಾ. ಜಿ. ಭಟ್ಟರು, ದೇವೇಂದ್ರ ಮೂರ್ತಿಗಳು, ಪಿಯುಸಿ ಕೊನೆಯ ವರ್ಷದಲ್ಲಿ ನಾನು ಹಾಗೂ ಅವರ ನಡುವೆ ಜಗಳವಾಗಿದ್ದರೂ ನನ್ನ ಏಳಿಗೆಗೆ ಕಾರಣವಾದ ವಿ. ಎಸ್. ಹೆಗಡೆಯವರು, ಉಮಾಕಾಂತ ಶಾಸ್ತ್ರಿಗಳು ಕಲಿಸಿದ್ದು ಕಡಿಮಯೇನಲ್ಲ. ಡಿಗ್ರಿಯಲ್ಲಂತೂ ಹುಡುಗರಿಗೆ ಮಾತ್ರ ಸಿಕ್ಕಾಫಟ್ಟೆ ಬಯ್ಯುತ್ತಿದ್ದ ವಿಜಯನಳಿನಿ ರಮೇಶ್ ಮೇಡಮ್ಮು, ತಮಾಷೆಯಾಗಿ ಕಲಿಸುತ್ತಿದ್ದ ರಾಜು ಹೆಗಡೆಯವರು, ಪ್ರತಿದಿನ ಒಬ್ಬೊಬ್ಬರನ್ನಾಗಿ ಎದ್ದು ನಿಲ್ಲಿಸಿ ಇವತ್ತಿನ ಪೇಪರ್ ಓದಿಕೊಂಡು ಬಂದಿದ್ದೀರಾ? ಏನು ಬಂದಿದೆ ಹೇಳಿ ಎಂದು ಕೇಳಿ, ಕ್ಲಾಸಿನಲ್ಲಿ ಶಿಕ್ಷೆ ನೀಡುತ್ತಿದ್ದ ಸಚ್ಚಿದಾನಂದ ಹೆಗಡೆಯವರು, ಗೀತಾ ವಸಂತ ಮೇಡಮ್ಮು, ರಾಘವೇಂದ್ರ ಜಾಜಿಗುಡ್ಡೆ, ನಂತರದ ದಿನಗಳಲ್ಲಿ ವೃತ್ತಿಯಲ್ಲಿ ತೊಡಗಿಕೊಮಡಾಗ ತಿದ್ದಿದ ಹರಿಪ್ರಕಾಶ ಕೋಣೆಮನೆ, ಮುಂಜಾನೆ ಸತ್ಯ, ರವಿ ದೇವಳಿ, ಶಿವಪ್ರಕಾಶ್, ಉದಯವಾಣಿಯಲ್ಲಿದ್ದಾಗ ಅಕ್ಷರಗಳನ್ನು ತಿದ್ದಿದ ರಾಘವೇಂದ್ರ ಗಣಪತಿ, ರವಿ ಹೆಗಡೆ, ಈಗ ಕನ್ನಡಪ್ರಭದಲ್ಲಿ ನನ್ನನ್ನು ತಿದ್ದುತ್ತಿರುವ ವಿಶ್ವೇಶ್ವರ ಭಟ್ಟರು, ವಿಶ್ವಾಮಿತ್ರ ಹೆಗಡೆಯವರು ಎಲ್ಲರಿಂದಲೂ ನಾನು ಕಲಿತದ್ದು ಹಲವು. ಬಹುಶಃ ಅವರು ನನ್ನನ್ನು ತಿದ್ದದೇ ಇದ್ದಿದ್ದರೆ ನಾನು ಖಂಡಿತ ಹೀಗಿರುತ್ತಿರಲಿಲ್ಲ. ನಾನು ಹಾದಿ ತಪ್ಪಿದಾಗಲೆಲ್ಲ ಹೀಗಲ್ಲ.. ಹೀಗೆ ಎಂದು ಹೇಳಿದವರೇ ಎಲ್ಲರೂ. ಅವರೆಲ್ಲರಿಗೂ ನಾನು ಶರಣು.
           ಇದೀಗ ಬ್ಲಾಗಿನ ಬಗ್ಗೆ ಒಂಚೂರು ಹೇಳಲೇ ಬೇಕು. ಖಂಡಿತವಾಗಿಯೂ 50 ಸಾವಿರ ಜನರು ನನ್ನ ಬ್ಲಾಗ್ ವೀಕ್ಷಣೆ ಮಾಡುತ್ತಾರೆ ಎನ್ನುವುದು ಬ್ಲಾಗ್ ಆರಂಭಿಸಿದಾಗ ನನಗೆ ಅನ್ನಿಸಿರಲಿಲ್ಲ. ಸುಮ್ಮನೆ ನಾನು ಬರೆಯುತ್ತೇನೆ. ಆದರೆ ಅದನ್ನು ಎಷ್ಟು ಜನರು ನೋಡುತ್ತಾರೆ ಎಂದುಕೊಂಡಿದ್ದೆ. 2011ರಿಂದೀಚೆಗೆ 3 ವರ್ಷದಲ್ಲಿ ಅಜಮಾಸು 38ರಿಂದ 40 ಸಾವಿರ ಜನರು ಬ್ಲಾಗನ್ನು ನೋಡಿದ್ದಾರೆ. ಭಾರತವೊಂದೇ ಅಲ್ಲ ಅಮೆರಿಕಾ, ಜರ್ಮನಿ, ರಷ್ಯಾ, ಬಹರೈನ್, ಯುಎಇ, ಸಿಂಗಾಪುರ, ಬೊಲಿವಿಯಾ, ಉಕ್ರೇನ್, ಪೊಲಾಂಡ್, ಆಸ್ಟ್ರೇಲಿಯಾ ಹೀಗೆ ಹತ್ತು ಹಲವು ದೇಶಗಳವರು ಬ್ಲಾಗ್ ವೀಕ್ಷಣೆ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯ ಅಭಿಪ್ರಾಯಗಳನ್ನೂ ತಿಳಿಸಿದ್ದಾರೆ. ಒಂದಿಷ್ಟು ಬರಹಗಳು ಭಾರಿ ಚರ್ಚೆಯನ್ನೂ ಕಂಡಿವೆ. ಅವುಗಳ ನಡುವೆ ಕಂಡೂ ಕಾಣದಂತಾಗಿ ಹೋಗಿದ್ದು ಇನ್ನೂ ಹಲವಾರು ಲೇಖನಗಳು, ಬರಹಗಳು.
          ಮೊಟ್ಟ ಮೊದಲು ಬರೆದ ಅಘನಾಶಿನಿ ಕಣೀವೆಯಲ್ಲಿ ಕಾದಂಬರಿಯನ್ನೇ ಇನ್ನೂ ಮುಗಿಸಿಲ್ಲ. ಅಂತದ್ದರಲ್ಲಿ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನು ಡೈರೆಕ್ಟಾಗಿ ಬ್ಲಾಗಲ್ಲಿ ಬರೆಯಲು ಆರಂಭಿಸಿದ್ದೇನೆ. ಅದೀಗ ಅರ್ಧಕ್ಕೂ ಅಧಿಕ ಮುಗಿದಿದೆ. ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ. ಖುಷಿಯ ಸಂಗತಿಯೆಂದರೆ ಎರಡು ಪ್ರಕಾಶನದವರು ನನ್ನ ಬರವಣಿಗೆಯ ಪುಸ್ತಕಗಳನ್ನು ಪ್ರಕಟಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆದರೆ ನನಗೆ ಭಯವಾಗುತ್ತಿದೆ. ಪುಸ್ತಕಗಳನ್ನು ಪ್ರಕಟಿಸುವಷ್ಟು ದೊಡ್ಡವನಾಗಿದ್ದೀನಾ ನಾನು? ಇನ್ನೂ ಕೆಲವು ವರ್ಷದ ನಂತರ ಪುಸ್ತಕ ಪ್ರಟಿಸೋಣ ಎಂದುಕೊಂಡು ಪ್ರಕಾಶನದವರಿಗೆ ಉತ್ತರ ನೀಡಿಲ್ಲ. ಅವರು ಕೇಳುತ್ತಲೇ ಇದ್ದಾರೆ. ನಾನು ಒಪ್ಪಿಗೆ ನೀಡಲಾ, ಬೇಡವಾ ಎನ್ನುವ ಗೊಂದಲದಲ್ಲಿಯೇ ಇದ್ದೇನೆ.
          ನನ್ನ ಬರವಣಿಗೆಯಲ್ಲಿ ಮನೆಯಲ್ಲಿ ಬೆಂಬಲವಾಗಿ ನಿಂತವರು ಹಲವರು. ಮೊಟ್ಟಮೊದಲಿಗೆ ನೆನೆಯಬೇಕಾದದ್ದು ಅಮ್ಮನನ್ನು. ಅಮ್ಮನ ಒತ್ತಾಸೆಯೇ ನನಗೆ ಬರೆಯಲು ಪ್ರೇರೇಪಣೆ. ಮಾವ ಪ. ಗ. ಭಟ್ಟರ ಆಶೀರ್ವಾದವೂ ಇದೆ. ಅಪ್ಪ-ತಂಗಿಯರ ಪ್ರೀತಿ ಕೂಡ ಮರೆಯುವಂತಿಲ್ಲ. ಜೊತೆಯಲ್ಲಿ ಹಲವು ಸಾರಿ ನೇರಾ ನೇರ, ಮತ್ತೆ ಕೆಲವು ಸಾರಿ ವ್ಯಂಗ್ಯವಾಗಿ ಸಲಹೆಯನ್ನು ನೀಡಿ, ಪ್ರತಿಕ್ರಿಯೆ ಕೊಡುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳದೇ ಹೇಗಿರಲಿ?
            ನನಗಂತೂ 50 ಸಾವಿರ ಜನರು ವೀಕ್ಷಣೆ ಮಾಡಿರುವುದು ಬಹಳ ಖುಷಿಯನ್ನು ತಂದಿದೆ. 5 ವರ್ಷದಲ್ಲಿ ಈ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಮುಂದೆ ಕೂಡ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಾನು ಕೆಟ್ಟದಾಗಿ ಬರೆದಿದ್ದರೆ ಮುಲಾಜಿಲ್ಲದೆ ತಿಳಿಸಿ. ಒಳ್ಳೆಯದಿದ್ದರೆ ಅಭಿಪ್ರಾಯ ತಿಳಿಸಿ. 1 ಲಕ್ಷ ಜನರು ವೀಕ್ಷಣೆ ಮಾಡಿದಾಗ ಮತ್ತೆ ನಾನು ಆ ಖುಷಿ ಹಂಚಿಕೊಳ್ಳಲು ಸಿಗುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ನಾನು ಬಯಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.