Sunday, August 24, 2014

50000

 
      ಖಂಡಿತ ಇದು ಹಂಚಿಕೊಳ್ಳಲೇಬೇಕಾದಂತಹ ಖುಷಿಯ ಸಂಗತಿ. ಹೌದು ಅಘನಾಶಿನಿ ಬ್ಲಾಗ್ ವೀಕ್ಷಕರ ಸಂಖ್ಯೆ 50000 ತಲುಪಿದೆ. ಯಾರ್ಯಾರು ನನ್ನ ಬ್ಲಾಗ್ ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದೀರೋ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಲೇ ಬೇಕಾದದ್ದು ನನ್ನ ಕರ್ತವ್ಯ.
           ನಾನು ಈ ಬ್ಲಾಗನ್ನು ಬರೆಯಲು ಆರಂಭಿಸಿದ್ದು 29-08-2009ರಂದು. ಅದಕ್ಕೂ ಮುನ್ನ ಬರೆಯುತ್ತಿದ್ದೆನಾದರೂ ಬ್ಲಾಗ್ ಲೋಕ ನನಗೆ ಅಪರಿಚಿತವಾಗಿತ್ತು. ಬ್ಲಾಗ್ ಲೋಕವೇನು ಕಂಪ್ಯೂಟರ್ ಎಂಬುದೇ ನನಗೆ ಅಪರಿಚತವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆಗ ತಾನೆ ಕಂಪ್ಯೂಟರ್ ಕಲಿತಿದ್ದ ಹೊಸತು, ದೋಸ್ತರ ಸಲಹೆಯ ಮೇರೆಗೆ ಆರ್ಕುಟ್ ಅಕೌಂಟ್ ಓಪನ್ ಮಾಡಿದ್ದೆ. ನಾನು ಬರೆಯುವುದರ ಬಗ್ಗೆ ತಿಳಿದಿದ್ದ ದೋಸ್ತರು ಬ್ಲಾಗ್ ಮಾಡು ಎಂದು ಸಲಹೆ ಕೊಟ್ಟರು. ಒಂದು ಬ್ಲಾಗ್ ಮಾಡಿ ಸುಮ್ಮನೆ ಇಟ್ಟಿದ್ದೆ. ನೆನಪಾದಾಗ ಒಂದೆರಡು ಕವಿತೆಯೋ ಖಯಾಲಿಯ ಬರಹಗಳನ್ನೋ ಬರೆಯುತ್ತಿದ್ದೆ. 2011ರ ವರೆಗೂ ನಾನು ಬರೆದಿದ್ದು 10-15 ಬರಹಗಳಷ್ಟೆ. ಆದರೆ 2012ರಿಂದ ನಾನು ಆಕ್ಟಿವ್ ಆಗಿ ಬ್ಲಾಗ್ ಲೋಕದಲ್ಲಿ ಬರವಣಿಗೆಯನ್ನು ಆರಂಭಿಸಿದೆ. ಅಲ್ಲಿಂದೀಚೆಗೆ ಅಜಮಾಸು 315 ಬರಹಗಳು ನನ್ನ ಬ್ಲಾಗಿನ ಗೋಡೆಯಲ್ಲಿ ಮೂಡಿವೆ.
           ಅಘನಾಶಿನಿ ಎಂಬುದು ನನ್ನ ಬ್ಲಾಗಿಗೆ ಇಟ್ಟ ಹೆಸರು. ಇದಕ್ಕೆ ಹಲವು ಕಾರಣಗಳಿದೆ. ನಾನು ಹುಟ್ಟಿ ಬೆಳೆದ ದಂಟಕಲ್ ಎಂಬ ಊರಿನ ಅಂಚಿನಲ್ಲಿ ಹರಿಯುವ ನದಿ ಅಘನಾಶಿನಿ. ನನ್ನ ಬರವಣಿಗೆಯ ಓಂಕಾರ ಆರಂಭವಾದದ್ದು ಇದೇ ಅಘನಾಶಿನಿಯ ದಡದ ಮೇಲೆ. ನನ್ನ ನೋವು, ಖುಷಿಯ ಸನ್ನಿವೇಶಗಳಿಗೆಲ್ಲ ಅಘನಾಶಿನಿಯೇ ಮೆಟ್ಟಿಲಾದದ್ದು. ಗೆದ್ದಾಗಲೂ ಸೋತಾಗಲೂ ಅಘನಾಶಿನಿ ನದಿಯ ದಡದ ಬಂಡೆಗಳ ಮೇಲೆ ನಿಂತಿದ್ದಿದೆ ನಾನು. ಇಂತಹ ಕಾರಣಕ್ಕಾಗಿಯೇ ನಾನು ನನ್ನ ಬ್ಲಾಗಿಗೆ ಅಘನಾಶಿನಿ ಎಂದೂ ಟ್ಯಾಗ್ ಲೈನ್ ನನ್ನು ನದಿ ಕಣಿವೆ ಹುಡುಗನ ಭಾವ ಭಿತ್ತಿ ಎಂದೂ ಬರೆದಿದ್ದು.
           ಅಘನಾಶಿನಿ ಎಂಬ ಹೆಸರಿನ ಮೂರು ಬ್ಲಾಗುಗಳಿವೆ. ಗಂಗಾಧರ ಹೆಗಡೆ ಅವರ ಅಘನಾಶಿನಿ, ಸಮನ್ವಯಾ ಅವರ ಅಘನಾಶಿನಿ ಹಾಗೂ ನನ್ನ ಅಘನಾಶಿನಿ ಬ್ಲಾಗುಗಳು. ಈ ಮೂರರ ಪೈಕಿ ಗಂಗಾಧರ ಹೆಗಡೆ ಅವರು ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಲ್ಲಿಯೇ ಅವರೂ ಬ್ಲಾಗನ್ನು ಬರೆಯಲು ಶುರು ಮಾಡಿದರು. ಸಮನ್ವಯಾ ಅವರು ಒಂದೆರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದರು. ಆದರೆ ನನ್ನ ಬ್ಲಾಗು ಉಳಿದ ಇಬ್ಬರು ಬರೆದ ಬ್ಲಾಗಿಗಿಂತ ಹೆಚ್ಚು ಜನರನ್ನು ತಲುಪಿದೆ ಎನ್ನುವ ಹೆಮ್ಮೆ ನನ್ನದು. ಹಾಗಂತ ಅವರದ್ದು ಚನ್ನಾಗಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ಅವರಿಬ್ಬರೂ ಆಕ್ಟಿವ್ ಆಗಲೇ ಇಲ್ಲ. ನಾನು ಆಕ್ಟಿವ್ ಆಗಿ ಬರೆಯುತ್ತಲೇ ಇದ್ದೇನೆ ಅಷ್ಟೆ.
          ಇಂದಿಗೂ ನನಗೆ ನೆನಪಿದೆ. ನಾನು ಮೊಟ್ಟಮೊದಲು ಬರೆದಿದ್ದೊಂದು ಕವಿತೆ. ನಾನು ಓದಿದ್ದು ಕಾನಲೆಯ ಹೂಸ್ಕೂಲಿನಲ್ಲಿ. ನಾನು 8 ನೇ ಕ್ಲಾಸ್ ಇದ್ದಾಗ ಅಣ್ಣ ಗಿರೀಶನದ್ದೊಂದು ಚಿಕ್ಕ ಬರಹ ತರಂಗದಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಖುಷಿಯಿಂದ ನಾನು ಒಂದು ಹನಿಗವಿತೆ ಬರೆದು ಕಳಿಸಿದ್ದೆ. ಅದೂ ಚಿಣ್ಣರ ಅಂಗಳವೋ, ಬಾಲವನವೋ ಏನೋ ಒಂದಕ್ಕೆ. ಮಕ್ಕಳ ಕವಿತೆ. ತರಂಗದವರು ಅದನ್ನು ಪ್ರಕಟವನ್ನೂ ಮಾಡಿಬಿಟ್ಟರು. ಅದಕ್ಕೆ ನನಗೆ 30 ರು. ಸಂಭಾವನೆಯೂ ಬಂದಿತು. ಆ ನಂತರ ಗುರಣ್ಣನಿಗೆ ಒಂದಷ್ಟು ದಿನ ಬರೆಯುವ ಹುಚ್ಚು ಹತ್ತಿತ್ತು. ಆತ ಡಿಗ್ರಿ ಓದುತ್ತಿದ್ದ. ಸಾಕಷ್ಟು ಹುಡುಗಿಯರನ್ನೂ ಪ್ರೀತಿಸುತ್ತಿದ್ದ. ಆ ಕಾರಣಕ್ಕಾಗಿ ಹಲವು ಕವಿತೆಗಳನ್ನೂ ಒಗಾಯಿಸುತ್ತಿದ್ದ. ಹೀಗಿದ್ದಾಗಲೇ ಕಾನ್ಲೆಯ ಗುಡ್ಡದ ನೆತ್ತಿಯಲ್ಲಿ ಕುಳಿತು ಒಂದು ನಮ್ಮ ಶಾಲೆಯ ಚಂದಿರ ಅಂತ ಒಂದು ಕವಿತೆ ಬರೆದಿದ್ದೆ. ಇಂದು ರೀತಿ ಅಲ್ಲಿ ನೋಡು ಚಂದ್ರ ಬಿಂಬ, ಇಲ್ಲಿ ನೋಡು ಲೈಟ್ ಕಂಬ ರೀತಿಯ ಕವಿತೆ. ಬರೆದವನೇ ಗುರಣ್ಣನಿಗೆ ತೋರಿಸಿದ್ದೆ. ಹಿಗ್ಗಾಮುಗ್ಗಾ ಬೈದಿದ್ದ. ನಾನು ಬೇಜಾರು ಮಾಡ್ಕೊಂಡಿದ್ದೆ.
           ಅದಾದ ನಂತರ `ಇದು ನನ್ನದು.' ಎನ್ನುವ ಕವಿತೆ ಬರೆದಿದ್ದು ಫಸ್ಟ್ ಪಿಯುಸಿಯಲ್ಲಿ ನಮ್ಮೂರಿನ ಹುಳ್ಕಿನ ಜಡ್ಡಿ ಗದ್ದೆಯ ಗೇರು ಮರದ ಮೇಲೆ ಕುಳಿತು. ಆ ಮೇಲೆ ನಾನು ಫಸ್ಟ್ ಪಿಯುಸಿಯಲ್ಲಿ ಸೂರನಕೇರಿಯ ಗಣೇಶಜ್ಜನ ಮನೆಯಲ್ಲಿ ಉಳಿದುಕೊಂಡು ನಾಣಿಕಟ್ಟಾ ಕಾಲೇಜಿಗೆ ಹೋಗುತ್ತಿದ್ದೆ. ನಾನು ಹಾಗೂ ಗಿರೀಶಣ್ಣ ಇಬ್ಬರೂ ಪತ್ರದ ಮೂಲಕ ಪತ್ರಿಕೆಯೊಂದನ್ನು ಮಾಡಿದ್ದೆವು. ಆತ ಸಹೃದಯಿ ಎನ್ನುವ ತಲೆಬರಹದ ಅಡಿಯಲ್ಲಿ 2.50 ರು. ಅಂತರ್ದೇಸಿ ಪತ್ರದಲ್ಲಿ ಥೇಟು ಒಂದು ಪತ್ರಿಕೆ ಯಾವ ರೀತಿ ವಿವಿಧ ಸುದ್ದಿ, ಲೇಖನ, ಕಥೆ, ಕವನಗಳನ್ನು ಹೊಂದಿರುತ್ತದೆಯೋ ಅದೇ ರೀತಿ ಬರೆದು ಕಳಿಸುತ್ತಿದ್ದ. ನಾನು ಚಿಂತಾಮಣಿ ಎನ್ನುವ ಹೆಸರಿನಲ್ಲಿ ಬರೆದು ಕಳಿಸುತ್ತಿದ್ದೆ. ಸರಿಸುಮಾರು 2 ವರ್ಷ ಈ ರೀತಿ ನಾವು ಬರೆದುಕೊಳ್ಳುತ್ತಿದ್ದೆವು. ಆ ದಿನಗಳಲ್ಲಿಯೇ ಇರಬೇಕು ನನ್ನ ಬರವಣಿಗೆ ಇನ್ನಷ್ಟು ಜೋರಾದದ್ದು. `ಅಘನಾಶಿನಿ ಕಣಿವೆಯಲ್ಲಿ..' ಅಂತ ಒಂದು ಕಾದಂಬರಿಯನ್ನು ಆ ದಿನಗಳಲ್ಲಿಯೇ ನಾನು ಬರೆಯಲು ಆರಂಭಿಸಿದ್ದು. ಆದರೆ ಆ ಕಾದಂಬರಿ ಇನ್ನೂ ಪೂರ್ಣಗೊಂಡಿಲ್ಲ..!
            ಪ್ರೈಮರಿ ಶಾಲೆಯ ದಿನಗಳಿಂದ ಓದುವುದು ನನ್ನ ಗೀಳು. ಅದರಲ್ಲೂ ತೇಜಸ್ವಿಯೆಂದರೆ ನನ್ನ ಪಂಚಪ್ರಾಣ. ತೇಜಸ್ವಿ ನನಗೆ ಮೊಟ್ಟಮೊದಲು ಓದಲು ಸಿಕ್ಕಿದ್ದು 4ನೇ ಕ್ಲಾಸಿನಲ್ಲಿ. ವಾರಕ್ಕೊಂದು ಪುಸ್ತಕ ತೆಗೆದುಕೊಂಡು ಓದುವ ಗೃಂಥಾಲಯ ಚಟುವಟಿಕೆಯ ಅಂಗವಾಗಿ ತೇಜಸ್ವಿಯವರ ಪರಿಸರದ ಕಥೆ ಸಿಕ್ಕಿತ್ತು. ಅದಾದ ಮೇಲೆ ಹಕ್ಕಿಗಳ ಬಗ್ಗೆ ಬರೆದ ಪುಸ್ತಕ ಹೀಗೆ ಹತ್ತು ಹಲವು. ಹೈಸ್ಕೂಲಿನಲ್ಲಿಯೂ ಅಷ್ಟೇ. ಸಿಕ್ಕ ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಕಾನ್ಲೆ ಪ್ರೈಮರಿ ಶಾಲೆ ಮಾಸ್ತರ್ ಚಿದಂಬರ ಅವರ ಬಳಿ ಹರಪೆ ಬಿದ್ದು ಶಿವರಾಮ ಕಾರಂತರ ಬಾಲ ವಿಜ್ಞಾನ ಸರಣಿಗಳನ್ನು ಓದಿದ್ದೆ. ನಂತರ ಪಿಯುಸಿಯಲ್ಲಿ ವಿ. ಎಸ್. ಹೆಗಡೆಯವರು ಕನ್ನಡ ಲೆಕ್ಚರ್. ಆ ದಿನಗಳಲ್ಲಿ ಹಲವಾರು ಪುಸ್ತಕಗಳನ್ನು ಒತ್ತಾಯವಾಗಿ ಓದಿಸುತ್ತಿದ್ದರು. ಕರ್ವಾಲೋವನ್ನು ಆ ದಿನಗಳಲ್ಲಿ 50ಕ್ಕೂ ಅಧಿಕ ಸಾರಿ ಓದಿದ್ದೆ. ಯಯಾತಿ, ಹಿಟ್ಟಿನಹುಂಜ, ತುಘ್ಲಕ್ ಹೀಗೆ ಹಲವಾರು ಪುಸ್ತಕಗಳು ನನ್ನ ಒಡನಾಡಿಯಾಗಿದ್ದವು. ಡಿಗ್ರಿಗೆ ಬಂದ ಮೇಲಂತೂ ಎರಡು ದಿನಕ್ಕೊಂದು ಕಾದಂಬರಿಯೋ, ಕವನ ಸಂಕಲನವೋ ನನಗೆ ಬೇಕಿತ್ತು. ಮಿತ್ರ ರಾಘವ, ಪೂರ್ಣಿಮಾ, ಚೈತ್ರಿಕಾ ಆದಿ ಬೇದೂರು, ನಾಗರಾಜ ಹೆಗಡೆ, ಕೃಷ್ಣಮೂರ್ತಿ ದೀಕ್ಷಿತ ಇವರ ಗೃಂಥಾಲಯ ಕಾರ್ಡುಗಳನ್ನು ಪಡೆದು ನಾನು ಪುಸ್ತಕಗಳನ್ನು ಓದುತ್ತಿದ್ದೆ. ಇವೇ ನನ್ನ ಬರವಣಿಗೆಯನ್ನು ರೂಪಿಸಿದಂತವುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
           ಪಿಯುಸಿ ಮುಗಿದಿತ್ತು. ಮನೆಯಲ್ಲಿ ಮುಂದಕ್ಕೆ ಓದೋದು ಬೇಡವೇ ಬೇಡ ಎಂದು ಪಟ್ಟಾಗಿ ಕೂತಿದ್ದರು ಅಪ್ಪ. ಅಮ್ಮನಿಗೆ ಮಗ ಓದಲಿ ಎನ್ನುವ ಆಸೆಯಿತ್ತು. ಡಿಗ್ರಿ ಮಾಡೋದೇ ಸೈ. ಯಾವ ಡಿಗ್ರಿ ಮಾಡೋದು? ಮಾಮೂಲಿ ಹಿಸ್ಟರಿ, ಎಕನಾಮಿಕ್ಸು, ಪೊಲಿಟಿಕಲ್ ಸೈನ್ಸು ಮಾಡಿದರೆ ಏನೂ ಆಗೋದಿಲ್ಲ ಎಂದರು ಲಾಯರ್ ಗಣಪಣ್ಣ. ಸೋ ಇನ್ನೇನಪ್ಪಾ ಅಂತಿದ್ದಾಗ ಈಗ ವಿಜಯವಾಣಿಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಮ್ಮ ಭಾರತಿ ಹೆಗಡೆ `ತಮಾ ನೀನು ಬರಿತ್ಯಲಾ.. ಯಾಕೆ ಜರ್ನಲಿಸಂ ಮಾಡ್ಲಾಗ?' ಎಂದದ್ದೇ ತಡ ಎಲ್ಲೆಲ್ಲಿ ಜರ್ನಲಿಸಂ ಕೋರ್ಸಿಗಳಿವೆ ಎನ್ನುವುದನ್ನು ಹುಡುಕಲಾರಂಭಿಸಿದ್ದೆ. ಶಿರಸಿ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರ್ನಲಿಸಂ ಇತ್ತು. ಆಪ್ಷನಲ್ ಇಂಗ್ಲೀಷು ಪೊಲಿಟಿಕಲ್ ಸೈನ್ಸು ಜರ್ನಲಿಸಂಗ್ಗೆ ಜೈ ಎಂದು ಸೇರಿಕೊಂಡೆ. ಡಿಗ್ರಿ ಮೊದಲ ವರ್ಷದಲ್ಲಿ ನನ್ನ ಸೀನಿಯರ್ ಆಗಿದ್ದ ಸಂಜಯ ಭಟ್ಟ ಬೆಣ್ಣೆ, ಗಣೇಶ ಮುರೇಗಾರ್, ಅಶ್ವತ್ಥ ಹೆಗಡೆ, ಸುಭಾಷ ಧೂಪದಹೊಂಡ, ಚೈತ್ರಾ ಹೆಗಡೆ, ರೂಪಾ ಇವರೆಲ್ಲ `ತಮಾ ನೀನು ಡಿಗ್ರಿಯಲ್ಲಿ ಎಷ್ಟು ಬರೆಯುತ್ತಿಯೋ, ಅದೆಷ್ಟು ಬೈಲೈನ್ ಬರುತ್ತದೆಯೋ ಅದು ನಿನಗೆ ಮುಂದಿನ ನಿನ್ನ ವೃತ್ತಿ ಬದುಕಿಗೆ ಪೂರಕವಾಗುತ್ತದೆ.. ಮೂರು ವರ್ಷದಲ್ಲಿ ಇಂತಿಷ್ಟು ಬೈಲೈನ್ ಬರಬೇಕು ಎನ್ನುವ ಗುರಿ ಇಟ್ಟುಕೊ...' ಎಂದರು. ನಾನು ಮೂರು ವರ್ಷದಲ್ಲಿ `50' ಬೈಲೈನ್ ಬರಬೇಕೆಂಬ ಗುರಿ ಇಟ್ಟುಕೊಂಡೆ. ಬರೆದೆ ಬರೆದೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆ, ವಾರ ಪತ್ರಿಕೆ, ಮಂತ್ಲಿ, ಹದಿನೈದು ದಿನದ ಪತ್ರಿಗೆಳಿಗೆಲ್ಲ ಬರೆದೆ. ಹಲವು ಪತ್ರಿಕಗೆಳು ಪ್ರಕಟಿಸಿದವು. ಸಂಭಾವನೆಯನ್ನೂ ಕೊಟ್ಟವು. ಪರಿಣಾಮವಾಗಿ ಮೂರು ವರ್ಷದಲ್ಲಿ 100ಕ್ಕೂ ಅಧಿಕ ಬೈಲೈನ್ ಬಂದವು. ಖಂಡಿತವಾಗಿಯೂ ಈ ಬೈಲೈನ್ ಗಳು ನನ್ನ ವೃತ್ತಿ ಬದುಕಿಗೆ ಸಹಕಾರಿಯಾದವು.
           ಡಿಗ್ರಿ ಟೈಮಿನಲ್ಲಿ ಕಂಪ್ಯೂಟರ್ ಕಲಿತಿದ್ದೆನಾದರೂ ತೀರಾ ಬ್ಲಾಗ್ ಬರೆಯುವ ಹಂತ ಮುಟ್ಟಿರಲಿಲ್ಲ. ಡಿಗ್ರಿ ಮುಗಿಸಿ ಎಲ್ಲ ಪತ್ರಿಕಾ ಕಚೇರಿಗಳಿಗೂ ರೆಸೂಮ್ ಕಳಿಸಿ, ಹೊಟ್ಟೆ ಪಾಡಿಗೆ ಸಿದ್ದಾಪುರ ಕೆಡಿಸಿಸಿ ಬ್ಯಾಂಕಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವ ಸಂದರ್ಭದಲ್ಲೇ ಆರ್ಕುಟ್ಟು, ಫೇಸ್ಬುಕ್ಕು, ಬ್ಲಾಗು ಶುರು ಮಾಡಿಕೊಂಡಿದ್ದು. ನಂತರ ಸಿದ್ದಾಪುರ ಎ.ಪಿಎಂ.ಸಿ.ಯಲ್ಲಿ ಡೈಲಿ ವೇಜಸ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅಘನಾಶಿನಿ ಹುಟ್ಟಿಕೊಂಡಿದ್ದು. ಅಲ್ಲಿಂದ ಮುಂದೆ ನಿಮಗೆ ಗೊತ್ತೇ ಇದೆ. ಮುಂದೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಕರೆದು ಕೆಲಸ ಕೊಟ್ಟಿತು. ಅದಾದ ಮೇಲೆ ನಾನು ಉದಯವಾಣಿಗೆ ಹೋದೆ.
            2011 ನನ್ನ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟ ವರ್ಷ. ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ಸ್ಪೋರ್ಟ್ಸ್ ರಿಪೋರ್ಟರ್ ಆಗಿ ಲೈಫು ಲೈಟಾಗಿ ಓಡುತ್ತಿದೆ ಎನ್ನುವಾಗಲೇ ಬದುಕು ತಿರುವು ಕೊಟ್ಟಿತ್ತು. ಪರಿಣಾಮವಾಗಿ ಮನೆಗೆ ವಾಪಾಸು ಬಂದೆ. ಒಂದಾರು ತಿಂಗಳು ಸುಮ್ಮನೆ ಉಳಿದೆ. ಆಮೇಲೆ ಕನ್ನಡಪ್ರಭದಲ್ಲಿ ನನ್ನ ಕೆಲಸ ಶುರುವಾಯಿತು. ಈ ನನ್ನ ಹಾದಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದವರು ಹಲವರು. ಖಂಡಿತವಾಗಿಯೂ ಅವರ ಬಗ್ಗೆ ನಾನು ಹೇಳಲೇಬೇಕು.
            ಪ್ರೈಮರಿಯ ತಾರಾ ಮೇಡಮ್ಮು, ಸೊಕಾ ಸುಮ್ಮನೆ ಕಾರಣವಿಲ್ಲದೇ ಹಂಗಿಸುತ್ತಿದ್ದ ಸಿ. ಎಂ. ಹೆಗಡೆರು, ಹೈಸ್ಕೂಲಿನಲ್ಲಿ ಇಂಗ್ಲೀಷು ಹೇಳಿಕೊಟ್ಟ ಬಿಆರೆಲ್ಲು, ಹಿಸ್ಟರಿಯನ್ನು ರೋಚಕವಾಗಿ ಕಲಿಸಿದ ಲಕ್ಷಪ್ಪ ಮಾಸ್ತರ್ರು, ಹೊಡೆತದ ಮೂಲಕ ಅಲ್ಪ ಸ್ವಲ್ಪ ವಿದ್ಯೆಯನ್ನು ತಲೆಗೆ ಹತ್ತುವಂತೆ ಮಾಡಿದ ಪಿಬಿಎನ್ನು, ಮುಷ್ಟಿಕಟ್ಟಿಕೊಂಡು ಬೆನ್ನಿಗೆ ಗುದ್ನ ನೀಡುತ್ತಿದ್ದ  ಕಟ್ಬಿಟಿನಕೆರೆ ಎಸ್ಸೆಚ್ಚು, ಕನ್ನಡವನ್ನು ಚನ್ನಾಗಿ ಕಲಿಸಿದರೂ `ನ' ದಿಂದ ಕೊನೆಗೊಳ್ಳುವ ಶಬ್ದವನ್ನು ನನನನ ಎಂದು ಉಚ್ಛರಿಸುತ್ತಿದ್ದ ಗ್ರೇಸ್ ಪ್ರೇಂ ಕುಮಾರಿ, ಪಿಯುಸಿಯ ರಾ. ಜಿ. ಭಟ್ಟರು, ದೇವೇಂದ್ರ ಮೂರ್ತಿಗಳು, ಪಿಯುಸಿ ಕೊನೆಯ ವರ್ಷದಲ್ಲಿ ನಾನು ಹಾಗೂ ಅವರ ನಡುವೆ ಜಗಳವಾಗಿದ್ದರೂ ನನ್ನ ಏಳಿಗೆಗೆ ಕಾರಣವಾದ ವಿ. ಎಸ್. ಹೆಗಡೆಯವರು, ಉಮಾಕಾಂತ ಶಾಸ್ತ್ರಿಗಳು ಕಲಿಸಿದ್ದು ಕಡಿಮಯೇನಲ್ಲ. ಡಿಗ್ರಿಯಲ್ಲಂತೂ ಹುಡುಗರಿಗೆ ಮಾತ್ರ ಸಿಕ್ಕಾಫಟ್ಟೆ ಬಯ್ಯುತ್ತಿದ್ದ ವಿಜಯನಳಿನಿ ರಮೇಶ್ ಮೇಡಮ್ಮು, ತಮಾಷೆಯಾಗಿ ಕಲಿಸುತ್ತಿದ್ದ ರಾಜು ಹೆಗಡೆಯವರು, ಪ್ರತಿದಿನ ಒಬ್ಬೊಬ್ಬರನ್ನಾಗಿ ಎದ್ದು ನಿಲ್ಲಿಸಿ ಇವತ್ತಿನ ಪೇಪರ್ ಓದಿಕೊಂಡು ಬಂದಿದ್ದೀರಾ? ಏನು ಬಂದಿದೆ ಹೇಳಿ ಎಂದು ಕೇಳಿ, ಕ್ಲಾಸಿನಲ್ಲಿ ಶಿಕ್ಷೆ ನೀಡುತ್ತಿದ್ದ ಸಚ್ಚಿದಾನಂದ ಹೆಗಡೆಯವರು, ಗೀತಾ ವಸಂತ ಮೇಡಮ್ಮು, ರಾಘವೇಂದ್ರ ಜಾಜಿಗುಡ್ಡೆ, ನಂತರದ ದಿನಗಳಲ್ಲಿ ವೃತ್ತಿಯಲ್ಲಿ ತೊಡಗಿಕೊಮಡಾಗ ತಿದ್ದಿದ ಹರಿಪ್ರಕಾಶ ಕೋಣೆಮನೆ, ಮುಂಜಾನೆ ಸತ್ಯ, ರವಿ ದೇವಳಿ, ಶಿವಪ್ರಕಾಶ್, ಉದಯವಾಣಿಯಲ್ಲಿದ್ದಾಗ ಅಕ್ಷರಗಳನ್ನು ತಿದ್ದಿದ ರಾಘವೇಂದ್ರ ಗಣಪತಿ, ರವಿ ಹೆಗಡೆ, ಈಗ ಕನ್ನಡಪ್ರಭದಲ್ಲಿ ನನ್ನನ್ನು ತಿದ್ದುತ್ತಿರುವ ವಿಶ್ವೇಶ್ವರ ಭಟ್ಟರು, ವಿಶ್ವಾಮಿತ್ರ ಹೆಗಡೆಯವರು ಎಲ್ಲರಿಂದಲೂ ನಾನು ಕಲಿತದ್ದು ಹಲವು. ಬಹುಶಃ ಅವರು ನನ್ನನ್ನು ತಿದ್ದದೇ ಇದ್ದಿದ್ದರೆ ನಾನು ಖಂಡಿತ ಹೀಗಿರುತ್ತಿರಲಿಲ್ಲ. ನಾನು ಹಾದಿ ತಪ್ಪಿದಾಗಲೆಲ್ಲ ಹೀಗಲ್ಲ.. ಹೀಗೆ ಎಂದು ಹೇಳಿದವರೇ ಎಲ್ಲರೂ. ಅವರೆಲ್ಲರಿಗೂ ನಾನು ಶರಣು.
           ಇದೀಗ ಬ್ಲಾಗಿನ ಬಗ್ಗೆ ಒಂಚೂರು ಹೇಳಲೇ ಬೇಕು. ಖಂಡಿತವಾಗಿಯೂ 50 ಸಾವಿರ ಜನರು ನನ್ನ ಬ್ಲಾಗ್ ವೀಕ್ಷಣೆ ಮಾಡುತ್ತಾರೆ ಎನ್ನುವುದು ಬ್ಲಾಗ್ ಆರಂಭಿಸಿದಾಗ ನನಗೆ ಅನ್ನಿಸಿರಲಿಲ್ಲ. ಸುಮ್ಮನೆ ನಾನು ಬರೆಯುತ್ತೇನೆ. ಆದರೆ ಅದನ್ನು ಎಷ್ಟು ಜನರು ನೋಡುತ್ತಾರೆ ಎಂದುಕೊಂಡಿದ್ದೆ. 2011ರಿಂದೀಚೆಗೆ 3 ವರ್ಷದಲ್ಲಿ ಅಜಮಾಸು 38ರಿಂದ 40 ಸಾವಿರ ಜನರು ಬ್ಲಾಗನ್ನು ನೋಡಿದ್ದಾರೆ. ಭಾರತವೊಂದೇ ಅಲ್ಲ ಅಮೆರಿಕಾ, ಜರ್ಮನಿ, ರಷ್ಯಾ, ಬಹರೈನ್, ಯುಎಇ, ಸಿಂಗಾಪುರ, ಬೊಲಿವಿಯಾ, ಉಕ್ರೇನ್, ಪೊಲಾಂಡ್, ಆಸ್ಟ್ರೇಲಿಯಾ ಹೀಗೆ ಹತ್ತು ಹಲವು ದೇಶಗಳವರು ಬ್ಲಾಗ್ ವೀಕ್ಷಣೆ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯ ಅಭಿಪ್ರಾಯಗಳನ್ನೂ ತಿಳಿಸಿದ್ದಾರೆ. ಒಂದಿಷ್ಟು ಬರಹಗಳು ಭಾರಿ ಚರ್ಚೆಯನ್ನೂ ಕಂಡಿವೆ. ಅವುಗಳ ನಡುವೆ ಕಂಡೂ ಕಾಣದಂತಾಗಿ ಹೋಗಿದ್ದು ಇನ್ನೂ ಹಲವಾರು ಲೇಖನಗಳು, ಬರಹಗಳು.
          ಮೊಟ್ಟ ಮೊದಲು ಬರೆದ ಅಘನಾಶಿನಿ ಕಣೀವೆಯಲ್ಲಿ ಕಾದಂಬರಿಯನ್ನೇ ಇನ್ನೂ ಮುಗಿಸಿಲ್ಲ. ಅಂತದ್ದರಲ್ಲಿ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನು ಡೈರೆಕ್ಟಾಗಿ ಬ್ಲಾಗಲ್ಲಿ ಬರೆಯಲು ಆರಂಭಿಸಿದ್ದೇನೆ. ಅದೀಗ ಅರ್ಧಕ್ಕೂ ಅಧಿಕ ಮುಗಿದಿದೆ. ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ. ಖುಷಿಯ ಸಂಗತಿಯೆಂದರೆ ಎರಡು ಪ್ರಕಾಶನದವರು ನನ್ನ ಬರವಣಿಗೆಯ ಪುಸ್ತಕಗಳನ್ನು ಪ್ರಕಟಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆದರೆ ನನಗೆ ಭಯವಾಗುತ್ತಿದೆ. ಪುಸ್ತಕಗಳನ್ನು ಪ್ರಕಟಿಸುವಷ್ಟು ದೊಡ್ಡವನಾಗಿದ್ದೀನಾ ನಾನು? ಇನ್ನೂ ಕೆಲವು ವರ್ಷದ ನಂತರ ಪುಸ್ತಕ ಪ್ರಟಿಸೋಣ ಎಂದುಕೊಂಡು ಪ್ರಕಾಶನದವರಿಗೆ ಉತ್ತರ ನೀಡಿಲ್ಲ. ಅವರು ಕೇಳುತ್ತಲೇ ಇದ್ದಾರೆ. ನಾನು ಒಪ್ಪಿಗೆ ನೀಡಲಾ, ಬೇಡವಾ ಎನ್ನುವ ಗೊಂದಲದಲ್ಲಿಯೇ ಇದ್ದೇನೆ.
          ನನ್ನ ಬರವಣಿಗೆಯಲ್ಲಿ ಮನೆಯಲ್ಲಿ ಬೆಂಬಲವಾಗಿ ನಿಂತವರು ಹಲವರು. ಮೊಟ್ಟಮೊದಲಿಗೆ ನೆನೆಯಬೇಕಾದದ್ದು ಅಮ್ಮನನ್ನು. ಅಮ್ಮನ ಒತ್ತಾಸೆಯೇ ನನಗೆ ಬರೆಯಲು ಪ್ರೇರೇಪಣೆ. ಮಾವ ಪ. ಗ. ಭಟ್ಟರ ಆಶೀರ್ವಾದವೂ ಇದೆ. ಅಪ್ಪ-ತಂಗಿಯರ ಪ್ರೀತಿ ಕೂಡ ಮರೆಯುವಂತಿಲ್ಲ. ಜೊತೆಯಲ್ಲಿ ಹಲವು ಸಾರಿ ನೇರಾ ನೇರ, ಮತ್ತೆ ಕೆಲವು ಸಾರಿ ವ್ಯಂಗ್ಯವಾಗಿ ಸಲಹೆಯನ್ನು ನೀಡಿ, ಪ್ರತಿಕ್ರಿಯೆ ಕೊಡುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳದೇ ಹೇಗಿರಲಿ?
            ನನಗಂತೂ 50 ಸಾವಿರ ಜನರು ವೀಕ್ಷಣೆ ಮಾಡಿರುವುದು ಬಹಳ ಖುಷಿಯನ್ನು ತಂದಿದೆ. 5 ವರ್ಷದಲ್ಲಿ ಈ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಮುಂದೆ ಕೂಡ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಾನು ಕೆಟ್ಟದಾಗಿ ಬರೆದಿದ್ದರೆ ಮುಲಾಜಿಲ್ಲದೆ ತಿಳಿಸಿ. ಒಳ್ಳೆಯದಿದ್ದರೆ ಅಭಿಪ್ರಾಯ ತಿಳಿಸಿ. 1 ಲಕ್ಷ ಜನರು ವೀಕ್ಷಣೆ ಮಾಡಿದಾಗ ಮತ್ತೆ ನಾನು ಆ ಖುಷಿ ಹಂಚಿಕೊಳ್ಳಲು ಸಿಗುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ನಾನು ಬಯಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

Saturday, August 23, 2014

ಅನಂತಮೂರ್ತಿಯವರಿಗೊಂದು ನಮನ


ಅನಂತ ಮೂರ್ತಿಯವರು ಇನ್ನಿಲ್ಲ.
ಕನ್ನಡ ಸಾಹಿತ್ಯ ಲೋಕಕ್ಕೆ ಶಾಕ್ ಸುದ್ದಿ ಹೌದು.
ಬದುಕಿದ್ದಾಗ ಹಲವಾರು ರೀತಿಯ ಸುದ್ದಿಗಳಿಗೆ ಗ್ರಾಸವಾಗಿ, ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು ಸದಾ ಸುದ್ದಿಯಲ್ಲಿ ಇರುತ್ತಿದ್ದವರು. ಇತ್ತೀಚಿನ ದಿನಗಳಲ್ಲಿ ಯಾವುದೇ ಕಾದಂಬರಿ, ಕಥೆ, ಸೇರಿದಂತೆ ಪುಸ್ತಕಗಳನ್ನು ಬರೆಯದಿದ್ದರೂ ಹಲವು ರೀತಿಯ ಹೇಳಿಕೆಗಳನ್ನು ಕೊಟ್ಟು ಸದಾ ಚರ್ಚೆಯಲ್ಲಿ ಇರುತ್ತಿದ್ದವರು. ಕಲಬುರ್ಗಿ ಪ್ರಕರಣವಂತೂ ಅನಂತಮೂರ್ತಿಯವರ ಮೇಲೆ ಸಾಕಷ್ಟು ಟೀಕೆಗಳನ್ನೂ ಬರುವಂತೆ ಮಾಡಿತು. ಮೋದಿ ಪ್ರದಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವನ್ನು ಓಲೈಕೆ ಮಾಡಲು ಯತ್ನಿಸಿದರಾದರೂ ಜನಸಾಮಾನ್ಯರು ಅನಂತ ಮೂರ್ತಿಯವರ ವಿರುದ್ಧ ತಿರುಗಿಬಿದ್ದರು. ಮೋದಿಯವರು ಪ್ರಧಾನಿಯಾದ ನಂತರವಂತೂ ಅನಂತ ಮೂರ್ತಿಯವರ ಬಳಿ ಯಾವಾಗ ದೇಶ ಬಿಟ್ಟು ಹೋಗುತ್ತೀರಿ ಎಂದು ಕೇಳಿದವರು ಹಲವರು. ಅದಕ್ಕೆ ಪ್ರತ್ಯುತ್ತರವಾಗಿ ಅನಂತಮೂರ್ತಿ ಅದೇನೋ ಸಬೂಬು ಹೇಳಿ ನುಣುಚಿಕೊಂಡರು. ಆದರೆ ಇತ್ತೀಚಿನ ಎರಡು ತಿಂಗಳಲ್ಲಿ ಅನಂತಮೂರ್ತಿಯವರು ಯಾವುದೇ ವಿವಾದದ ಹೇಳಿಕೆ ಕೊಡದೇ ಇದ್ದಾಗಲೇ ಏನೋ ಸರಿಯಿಲ್ಲ ಎನ್ನುವ ಭಾವನೆಯನ್ನು ಎಲ್ಲರಲ್ಲೂ ಹುಟ್ಟು ಹಾಕಿತ್ತು. ಬಹುಶಃ ಮೂರ್ತಿ ಮೇಲೆ ಮೂತ್ರ ವಿಷಯದ ಮೇಲೆ ವಿವಾದವಾಗಿದ್ದೆ ಕೊನೆಯಿರಬೇಕು. ಆ ನಂತರ ಅವರಿಂದ ವಿವಾದಗಳಾಗಲಿಲ್ಲ. ನಂತರದ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಖಂಡಿತವಾಗಿಯೂ ಅವರನ್ನು ಕಾಡಿರಬೇಕು. ಅವರು ಸುಮ್ಮನಿದ್ದರು.
ನಾನು ಅನಂತ ಮೂರ್ತಿ ಅವರು ಬರೆದಿದ್ದನ್ನು ಓದಿದ್ದು ಬಹಳ ಕಡಿಮೆ. ಅನಂತಮೂರ್ತಿಯವರ ಸಂಸ್ಕಾರ ಹಾಗೂ ಭಾರತೀಪುರ ಈ ಎರಡು ಕಾದಂಬರಿಗಳನ್ನು ನಾನು ಓದಿದ್ದೇನೆ. ಇವನ್ನು ಓದಿದ್ದೂ ನನ್ನ ಕಾಲೇಜು ದಿನಗಳಲ್ಲಿ. ಖಂಡಿತವಾಗಿಯೂ ಆ ದಿನಗಳಲ್ಲಿ ಈ ಪುಸ್ತಕಗಳನ್ನು ನಾನು ಓದಲು ಕಷ್ಟಪಟ್ಟಿದ್ದು ನಿಜ. ನನ್ನ ಅಂದಿನ ಯೋಚನಾ ಲಹರಿ, ಅಧವಾ ನನ್ನ ಮಟ್ಟಕ್ಕೆ ಅದು ಒಗ್ಗಲಿಲ್ಲ. ಗಡುಚೆನ್ನಿಸಿತು.ಬಹುಶಃ ಆ ನಂತರವೇ ಅನಂತಮೂರ್ತಿಯವರ ಪುಸ್ತಕಗಳನ್ನು ಕಂಡರೆ ಅದರತ್ತ ನಾಣು ಅಷ್ಟಾಗಿ ಗಮನ ಹರಿಸಲಿಲ್ಲ. ಆದರೆ ಈಗ ಮತ್ತೊಮ್ಮೆ ಅವರ ಪುಸ್ತಕಗಳನ್ನು ಓದಬೇಕೆಂಬ ಮನಸ್ಸಾಗುತ್ತಿದೆ.
ಅನಂತಮೂರ್ತಿಯವರ ವಿರುದ್ಧ ನನಗೆ ತಿಳಿದಂತೆ ಮೊಟ್ಟ ಮೊದಲು ಬರೆದಿದ್ದು ಪ್ರತಾಪ ಸಿಂಹ ಅವರಿರಬೇಕು. ಪ್ರತಾಪ್ ಸಿಂಹ ಅವರು ಬೆತ್ತಲೆ ಜಗತ್ತಿನ ಅಂಕಣದಲ್ಲಿ ಬರೆದಿದ್ದ ಲೇಖನವೊಂದನ್ನು ಅನಂತಮೂರ್ತಿ ಅವರು ವಿರೋಧಿಸಿದಾಗ ಸಾಕಷ್ಟು ವಾದಗಳು ಜರುಗಿತ್ತು. ಪ್ರತಾಪಸಿಂಹ ಅನಂತಮೂರ್ತಿಯವರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಆ ನಂತರವೇ ಅನಂತಮೂರ್ತಿಯವರು ಹಲವು ಸಂದರ್ಭಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನೋ ಅಥವಾ ಅಂತಹ ಘಟನೆಗಳನ್ನೋ ಉಂಟುಮಾಡುತ್ತಿದ್ದರು. ಈ ಅಂಶಗಳನ್ನು ಖಂಡಿತ ಅವರ ತೆಗಳಿಕೆಗೆ ಹೇಳುತ್ತಿಲ್ಲ. ಸಾಹಿತ್ಯ ಜಗತ್ತಿನಲ್ಲಿ, ಬದುಕಿನಲ್ಲಿ ಅವರು ದೊಡ್ಡ ಹೆಮ್ಮರ. ನಾನು ಚಿಕ್ಕದೊಂದು ಎಲೆ ಅಷ್ಟೆ. ಆದರೆ ಅವರು ನಿಧನರಾಗಿರುವ ಈ ಸಂದರ್ಭದಲ್ಲಿ ಅವರ ಬಗ್ಗೆ ಹೊಗಳುತ್ತಿರುವ ಸಂದರ್ಭದಲ್ಲಿಯೇ ಅವರ ಈ ವಿಷಯಗಳೂ ನನಗೆ ನೆನಪಾಗುತ್ತಿವೆ.
ಈ ಸಂದರ್ಭದಲ್ಲಿಯೇ ಇನ್ನೊಂದು ವಿಷಯವನ್ನೂ ನಾನು ಹೇಳಲೇಬೇಕು. ನಿನ್ನೆ ಸಂಜೆ ಅನಂತಮೂರ್ತಿಯವರು ನಿಧನರಾದಾಗ ಅನೇಕರು ಪಟಾಕಿ ಹೊಡೆದು ಸಂಭ್ರಮಿಸಿದರು. ಮಂಗಳೂರು, ಚಿಕ್ಕಮಗಳೂರುಗಳಲ್ಲಿ ಪಟಾಕಿ ಹೊಡೆದರು. ಶಿರಸಿಯಲ್ಲೂ ಪಟಾಕಿ ಹೊಡೆದರು. ಇದು ನಿಜಕ್ಕೂ ಖಂಡನೀಯ ವಿಷಯವೇ ಹೌದು. ಅವರು ಎಂತದ್ದೇ ಹೇಳಿಕೆ ಕೊಟ್ಟಿರಲಿ ಆದರೆ ಸಾಹಿತ್ಯದ ವಿಷಯಕ್ಕೆ ಬಂದಾಗ ಮೇರು ಪರ್ವತವಾಗಿಯೇ ನಿಲ್ಲುತ್ತಾರೆ. ಪಟಾಕಿ ಹೊಡೆದು ಸಂಭ್ರಮಿಸಿದವರಲ್ಲಿ ಯಾರೊಬ್ಬರೂ ಸಾಹಿತ್ಯದಲ್ಲಿ ಸಾಧನೆ ಮಾಡಿದವರೆಂದು ಅನ್ನಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಇನ್ನೊಂದು ವಿಷಯ ಅಂದರೆ ವ್ಯಕ್ತಿಯೊಬ್ಬರು ಸತ್ತಾಗ ಸಂಭ್ರಮಿಸುವುದಿದೆಯಲ್ಲ.. ಛೇ. ಖಂಡಿತವಾಗಿಯೂ ವ್ಯಕ್ತಿ ಸತ್ತಾಗ ಪಟಾಕಿ ಹೊಡೆಯುವುದು ಎಷ್ಟು ದುರಂತವೋ ಅದೇ ರೀತಿ ಪಟಾಕಿ ಹೊಡೆದು ಸಂಭ್ರಮ ಪಡುತ್ತಾರೆ ಎಂದರೆ ಬಹುಶಃ ಆ ವ್ಯಕ್ತಿಯ ಜೀವನದ ದುರಂತವೂ ಇರಬೇಕು. ಸತ್ತ ಮೇಲೆ ಸಿಟ್ಟು, ದ್ವೇಷ, ವಿರೋಧವೆಲ್ಲ ಮಣ್ಣಾಗುತ್ತವೆ ಎನ್ನುತ್ತಾರೆ. ಆದರೆ ಅನಂತಮೂರ್ತಿಯವರು ಸತ್ತ ಮೇಲೂ ಪಟಾಕಿ ಹೊಡೆದು ಸಂಭ್ರಮಿಸಿದರು ಎಂದರೆ ಪಟಾಕಿ ಹೊಡೆದವರಲ್ಲಿ ಅದ್ಯಾವಪರಿ ಆಕ್ರೋಶವಿರಬಹುದು? ಅಬ್ಬಾ ಅನ್ನಿಸುತ್ತಿದೆ.
ಅನಂತಮೂರ್ತಿಯವರು ನಿಧನರಾದ ತಕ್ಷಣ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಿತು. ಸರ್ಕಾರಿ ಕಚೇರಿಗಳಿಗೂ ರಜೆಯನ್ನು ನೀಡಿತು. ಬಹುಶಃ ರಾಜ್ಯ ಸರ್ಕಾರ ರಜೆ ನೀಡಿ ತಪ್ಪು ಮಾಡಿತೇನೋ ಎನ್ನಿಸುತ್ತಿದೆ. ಏಕೆಂದರೆ ರಜೆ ಸಿಕ್ಕಿತೆಂದರೆ ಎಂಜಾಯ್ ಮಾಡಲಿಕ್ಕೆ ಕೊಟ್ಟಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೂಡಿಬಿಟ್ಟಿದೆ. ಯಾವ ಕಾರಣಕ್ಕೆ ರಜೆ ಕೊಟ್ಟಿದ್ದಾರೆ ಎಂಬುದನ್ನು ಯಾರೂ ಆಲೋಚಿಸುವುದಿಲ್ಲ. ರಜಾ ಸಿಕ್ಕಿತಲ್ಲ ಎಂದು ಸಂಭ್ರಮಿಸುತ್ತಾರೆ. ಅನಂತಮೂರ್ತಿಯವರಿರಲಿ ಅಥವಾ ಇನ್ಯಾವುದೇ ಗಣ್ಯರು, ಸಾಹಿತಿಗಳು, ಮಾಜಿ ಮು.ಮಂ, ರಾಜಕಾರಣಿಗಳು ನಿಧನರಾದಾಗಲೂ ರಜಾ ಕೊಡಲಾಗುತ್ತದೆ. ರಜಾ ಕೊಟ್ಟಿದ್ದು ನಿಧನರಾಗಿದ್ದಾರೆ, ಶೋಕ ವ್ಯಕ್ತಪಡಿಸಲು. ಆದರೆ ಜನರು ಮಾತ್ರ ರಜಾದಲ್ಲಿ ಮಜಾ ಉಡಾಯಿಸುತ್ತಾರೆ. ಕೊಡುವ ರಜೆ ಮಜಾ ಮಾಡಲು ಬಳಕೆಯಾಗುತ್ತದೆ ಎಂದಾದರೆ ಗಣ್ಯರು ಸತ್ತಾಗ ಯಾಕೆ ರಜಾ ಘೋಷಣೆ ಮಾಡಬೇಕು? ಖಂಡಿತವಾಗಿಯೂ ಮಜಾ ಮಾಡಲು ಬಳಕೆಯಾಗುವ ಇಂತಹ ಘೋಷಿತ ರಜಾಗಳೂ ನಿಧನರಾದವರಿಗೆ ಅವಮಾನವನ್ನು ಉಂಟುಮಾಡುವುದಿಲ್ಲವೇ? ಸತ್ತಾಗ ಪಟಾಕಿ ಹೊಡೆದು ಸಂಬ್ರಮಿಸಿದ್ದಕ್ಕೂ, ರಜಾಕ್ಕೂ ವ್ಯತ್ಯಾಸವೆಲ್ಲಿ ಬರುತ್ತದೆ? ಬಹುಶಃ ಶನಿವಾರ ಕೊಟ್ಟ ರಜಾ ಕೂಡ ಎಷ್ಟೋ ಜನರಿಗೆ ವಿಕೆಂಡ್ ಪಾರ್ಟಿಗೋ, ಅದ್ಯಾವುದೋ ಟ್ರಿಪ್ಪಿಗೋ ಬಳಕೆಯಾಗಿರಬಹುದು. ಇದು ಅನಂತಮೂರ್ತಿಯವರಿಗೆ ಮಾಡಿದ ಅವಮಾನವಾಗಲಿಲ್ಲವೇ? ರಜಾ ಘೋಷಣೆ ಅವಮಾನ ಮಾಡುವುದಾದರೆ ಖಂಡಿತವಾಗಿಯೂ ಇಂತಹ ರಜಾ ಘೋಷಣೆ ನಿಲ್ಲಿಸಬೇಕು. ಅದರ ಬದಲಾಗಿ ನಿಧನರಾದ ವ್ಯಕ್ತಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ಕಚೇರಿಗಳಲ್ಲಿ 1 ತಾಸೋ, 2 ತಾಸೋ ಹೆಚ್ಚುವರಿ ಕೆಲಸವನ್ನು ಮಾಡಬೇಕು. ಆ ಮೂಲಕವಾದರೂ ಸಾವನ್ನಪ್ಪಿದ ಮಹಾನ್ ಸಾಧಕರಿಗೆ ಗೌರವ ನೀಡುವಂತಹ ಪ್ರಕ್ರಿಯೆ ಬೆಳೆಯಬೇಕು. ಹಾಗಾದಾಗ ಮಾತ್ರ ನಿಧನರಾದವರ ಆತ್ಮಕ್ಕೆ ಶಾಂತಿ ದೊರಕಬಹುದು ಎನ್ನುವುದು ನನ್ನ ಭಾವನೆ

ಅನಂತಮೂರ್ತಿಯವರ ಆತ್ಮಕ್ಕೆ ಶಾಂತಿ ದೊರಕಲಿ.

Friday, August 22, 2014

ಬೆಂಗಾಲಿ ಸುಂದರಿ-22

(ಸೈಕಲ್ ರಿಕ್ಷಾ)
              ಸೈಕಲ್ ತುಳಿಯುತ್ತಲೇ ಇದ್ದ. ನೇರ ರಸ್ತೆ ಹಿಂದಕ್ಕೆ ಸರಿಯುತ್ತಲೇ ಇತ್ತು. ಬೆಸರವಾಗದಿರಲಿ ಎನ್ನುವ ಕಾರಣಕ್ಕೆ ಸಲೀಂ ಚಾಚಾ ಇಳಿದನಿಯಲ್ಲಿ ವಿನಯಚಂದ್ರನ ಜೊತೆಗೆ ಮಾತನಾಡುತ್ತಲೇ ಇದ್ದರು. ಇದ್ದಕ್ಕಿದ್ದಂತೆ ಅದೆಲ್ಲಿದ್ದರೋ ಎಂಬಂತೆ ಆರೇಳು ಜನ ಇವರಿದ್ದ ಸೈಕಲ್ ರಿಕ್ಷಾದ ಕಡೆಗೆ ನುಗ್ಗಿಬಂದರು. ನುಗ್ಗಿದ ರೀತಿಯಲ್ಲಿಯೇ ಆ ಗುಂಪು ದರೋಡೆಕೋರರೆಂದು ಮೇಲ್ನೋಟಕ್ಕೆ ತಿಳಿಯಬಹುದಾಗಿತ್ತು. ನುಗ್ಗಿದವರೇ ಸೈಕಲ್ ರಿಕ್ಷಾವನ್ನು ಅಡ್ಡಗಟ್ಟಿದರು. ಕ್ಷಣಕಾಲ ತಬ್ಬಿಬ್ಬಾದ ವಿನಯಚಂದ್ರ. ಅಷ್ಟೇ ಸಾಕಿತ್ತು. ಇಬ್ಬರು ಹಿಡಿದು ಸೈಕಲ್ ನಿಲ್ಲಿಸಿ ವಿನಯಚಂದ್ರನನ್ನು ಕೈಯಲ್ಲಿದ್ದ ಹಗ್ಗದಿಂದ ಕಟ್ಟಿಹಾಕಿದರು. ಸಾಕಷ್ಟು ದೃಢಕಾಯನಾಗಿದ್ದರೂ ಹಲವರ ಎದುರು ವಿನಯಚಂದ್ರನ ಆಟ ನಡೆಯಲಿಲ್ಲ. ಸಲೀಂ ಚಾಚಾ ಹಾಗೂ ಮಧುಮಿತಾಳನ್ನೂ ಹಿಡಿದರು.
            ಹಾಯಾಗಿ ಮಲಗಿ ನಿದ್ರಿಸುತ್ತಿದ್ದ ಮಧುಮಿತಾ ಒಮ್ಮೆ ಬೆಚ್ಚಿ ಬಿದ್ದು ಎದ್ದಳು. ಆದರೆ ಆಕೆ ಅಷ್ಟರಲ್ಲಿ ಬಂಧಿಯಾಗಿದ್ದರು. ಸಲೀಂ ಚಾಚಾ ಅದೇನೋ ಬಯ್ಯುತ್ತಿದ್ದ. ಬೆಂಗಾಲಿ ಹಾಗೂ ಉರ್ದುವಾದ್ದರಿಂದ ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ದರೋಡೆಕೋರರ ಗುಂಪು ಸೈಕಲ್ ರಿಕ್ಷಾವನ್ನು ಪರಿಶೀಲಿಸಿತು. ಅದರಲ್ಲಿದ್ದ ಬ್ಯಾಗನ್ನು ಹುಡುಕಿ ಅಲ್ಲಿದ್ದ ಹಣವನ್ನೂ, ಬೆಲೆ ಬಾಳುವ ವಸ್ತುಗಳನ್ನೂ ದೋಚಿಕೊಂಡಿತು. ವಿನಯಚಂದ್ರನಿಗೆ ಎರಡೇಟು ಹೊಡೆದು, ಹಗ್ಗದಿಂದ ಕಟ್ಟಿಹಾಕಿ ಮುಂದಕ್ಕೆ ಹೋದರು. ಸಲೀಂ ಚಾಚಾ ಕಷ್ಟಪಟ್ಟು ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಮಧುಮಿತಾ ಹಾಗೂ ವಿನಯಚಂದ್ರನನ್ನೂ ಬಿಡಿಸಿದರು. ಸಲೀಂ ಚಾಚಾ ತಮ್ಮ ಜೀವ ಉಳಿದಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ. ಹೊಡೆಸಿಕೊಂಡಿದ್ದ ಹೊಡೆತದಿಂದ ವಿನಯಚಂದ್ರ ಸುಧಾರಿಸಿಕೊಳ್ಳುತ್ತಿದ್ದ.
                   ಮಧುಮಿತಾ `ಹಾಳಾದವರು.. ನಮ್ಮ ಎಲ್ಲ ಹಣವನ್ನೂ ಅಗತ್ಯ ವಸ್ತುಗಳನ್ನೂ ದೋಚಿಕೊಂಡು ಹೋದರು..' ಎಂದು ಹಿಡಿಶಾಪ ಹಾಕಿದಳು.
                   ಸಲೀಂ ಚಾಚಾ `ಪುಣ್ಯ.. ಅವರು ನಿನಗೇನೂ ಮಾಡಲಿಲ್ಲವಲ್ಲ..' ಎಂದರು. ನಿಧಾನವಾಗಿ ವಿನಯಚಂದ್ರ ಸುಧಾರಿಸಿಕೊಳ್ಳತೊಡಗಿದ.
             ದರೋಡೆಕೋರರು ಏನೇನನ್ನು ಕದ್ದೊಯ್ದಿದ್ದಾರೆ ಎಂದು ಪರೀಕ್ಷೆ ಮಾಡತೊಡಗಿದರು. ಬ್ಯಾಗಿನಲ್ಲಿದ್ದ ಸಂಪೂರ್ಣ ಹಣವನ್ನು ಅವರು ಹೊತ್ತೊಯ್ದಿದ್ದರು. ಅಷ್ಟೇ ಅಲ್ಲದೇ ವಿನಯಚಂದ್ರದ ಅತ್ಯಮೂಲ್ಯ ಕಾಗದಪತ್ರಗಳನ್ನೂ ಒಯ್ದುಬಿಟ್ಟಿದ್ದರು. ಮೊಬೈಲ್ ಕೂಡ ಕಿತ್ತುಕೊಂಡು ಹೋಗಿದ್ದರು. ಮಧುಮಿತಾ ಆಭರಣ ಧರಿಸುವ ಹುಚ್ಚಿನವಳಲ್ಲವಾದ್ದರಿಂದ ಆಭರಣ ಒಯ್ದಿರಲಿಲ್ಲ. ವಿನಯಚಂದ್ರ ಹಾಗೂ ಮಧುಮಿತಾ ಭಾರತಕ್ಕೆ ಹೋಗಬೇಕೆಂದಿದ್ದರೆ ಬಾಂಗ್ಲಾದಲ್ಲಿ ಇನ್ನೂ ನೂರಾರು ಕಿ.ಮಿ ಸಾಗಬೇಕಿತ್ತು. ಕೈಯಲ್ಲಿದ್ದ ಹಣವೆಲ್ಲ ದರೋಡೆಕೋರರ ಪಾಲಾಗಿತ್ತು. ಹಣವಿಲ್ಲದೇ ಮುಂದೆ ಸಾಗುವುದು ಬಹಳ ದುಸ್ತರವಾಗಿತ್ತು. ಸುಧಾರಿಸಿಕೊಂಡ ವಿನಯಚಂದ್ರ ಸಲೀಂ ಚಾಚಾನ ಬಳಿ ಮುಂದೇನು ಮಾಡುವುದು ಎಂದು ಕೇಳಿದ. ಸಲೀಂ ಚಾಚಾ ಏನೇ ಮಾಡಿದರೂ ಪ್ರಯಾಣ ನಿಲ್ಲುವುದು ಬೇಡ. ಮುಂದಕ್ಕೆ ಹೋಗೋಣ ಎಂದರು. ವಿನಯಚಂದ್ರ ತನ್ನ ಗುರುತಿನ ಚೀಟಿಯ ಬಗ್ಗೆ ಅನುಮಾನ ಉಂಟಾಯಿತು. ಬ್ಯಾಗನ್ನು ಹುಡುಕಿದ. ದರೋಡೆಕೋರರು ವಿನಯಚಂದ್ರನ ಗುರುತಿನ ಚೀಟಿಯನ್ನೂ ಕಿತ್ತುಕೊಂಡು ಹೋಗಿದ್ದರು. ಭಾರತಕ್ಕೆ ಪೋನು ಮಾಡೋಣ ಎಂದುಕೊಂಡರೆ ಮೊಬೈಲ್ ಪೋನ್ ಕೂಡ ಹೊತ್ತುಕೊಂಡು ಹೋಗಿದ್ದರು.
            ಸಲೀಂ ಚಾಚಾ ತಾನೇ ಸೈಕಲ್ ಚಲಾಯಿಸಲು ಆರಂಭಿಸಿದ. ಕೆಲವು ಗಂಟೆಗಳ ನಂತರ ಅಶೂಲಿಯಾ ಪಟ್ಟಣ ಸಿಕ್ಕಿತು. ಆಗ ಬೆಳಗಿನ ಜಾವ ಮೂಡುತ್ತಿತ್ತು. ಸಲೀಂ ಚಾಚಾ ಮೊದಲು ಅಶೂಲಿಯಾದಲ್ಲಿ ಉಳಿಯೋಣ ಎಂದು ಹೇಳಿದ್ದನಾದರೂ ಪ್ರಯಾಣ ಮುಂದುವರಿಸೋಣ ಎನ್ನುವ ನಿರ್ಧಾರ ಕೈಗೊಂಡಿದ್ದ. ಅಶೂಲಿಯಾದಿಂದ ಒಂದು ತಾಸಿನ ಅವಧಿಗೆ ಜಿರಾಬೋ ಪಟ್ಟಣ ಕೂಡ ಹಿಂದಕ್ಕೆ ಸರಿಯಿತು. ಕೊನೆಗೊಮ್ಮೆ ಜಿರಾಬೋದ ನಂತರ ಸಿಗುವ ಘೋಸ್ಬಾಗ್ ನಲ್ಲಿ ಉಳಿಯುವ ನಿರ್ಧಾಕ್ಕೆ ಸಲೀಂ ಚಾಚಾ ಬಂದಿದ್ದ. ಅಶೂಲಿಯಾ ಹಾಗೂ ಜಿರಾಬೋಗಳ ನಡುವೆ ಮಧ್ಯ ಮಧ್ಯ ಗದ್ದೆ ಬಯಲುಗಳಿದ್ದರೂ ಜಿರಾಬೋ ಘೋಸ್ಬಾಗ್ ಒಂದಕ್ಕೊಂದು ಕೂಡಿಕೊಂಡಿದ್ದವು. ಮಧ್ಯಮ ವರ್ಗದವರೇ ಹೆಚ್ಚಾಗಿದ್ದ ಪಟ್ಟಣ ಗೋಸ್ಬಾಗ್. ಗೋಸ್ಬಾಗ್ ತೆರಳುವ ವೇಳೆಗೆ ಪೂರ್ವದಲ್ಲಿ ಸೂರ್ಯ ಉದಯಿಸಿದ್ದ. ಮಧುಮಿತಾಳಿಗೆ ಹೊಟ್ಟೆ ಚುರುಗುಡುತ್ತಿತ್ತಾದರೂ ಹಸಿವಾಗಿದೆ ಎನ್ನಲು ಮುಜುಗರ. ಕೈಯಲ್ಲಿ ದುಡ್ಡಿಲ್ಲ. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತೊಯ್ದಿದ್ದರು. ಸಲೀಂ ಚಾಚಾನೇ ಮಧುಮಿತಾ ಹಾಗೂ ವಿನಯಚಂದ್ರನ ಬಳಿ ಹೊಟೆಲಿಗೆ ತೆರಳಿ ತಿಂಡಿ ತಿನ್ನೋಣ ಎಂದ. ಆದರೆ ವಿನಯಚಂದ್ರ ಹಾಗೂ ಮಧುಮಿತಾ ತಮಗೆ ಹಸಿವಿಲ್ಲ ಎಂದು ಹೇಳಿದರು. ಆದರೆ ಸಲೀಂ ಚಾಚಾನಿಗೆ ಅಸಲಿ ವಿಷಯ ತಿಳಿದಿತ್ತು. ತಕ್ಷಣವೇ ಕಣ್ಣು ಮಿಟುಕಿಸುತ್ತಾ `ಯಾಕೆ ದುಡ್ಡಿಲ್ಲ ಅಂತ ತಿಂಡಿ ಕೂಡ ತಿನ್ನೋದಿಲ್ಲವಾ? ಬನ್ನಿ ದುಡ್ಡಿದೆ..' ಎಂದು ಹೇಳಿದರು.
          `ಚಾಚಾ.. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತುಕೊಂಡು ಹೋಗಿದ್ದಾರೆ. ದುಡ್ಡಿದೆ ಅನ್ನುತ್ತೀಯಲ್ಲಾ... ಹಹ್ಹಾ..' ಎಂದ ವಿನಯಚಂದ್ರ.
          `ಅಯ್ಯೋ ಹುಚ್ಚಪ್ಪಾ... ತಾಳು..' ಎಂದವನೇ ಸಲೀಂ ಚಾಚಾ ಸೀದಾ ಸೈಕಲ್ ರಿಕ್ಷಾದ ಪ್ರಯಾಣಿಕರು ಕೂರುವ ಸೀಟನ್ನು ಹರಿಯಲಾರಂಭಿಸಿದ. ಸೀಟಿನ ಅಡಿಯಲ್ಲಿತ್ತು ದುಡ್ಡು. ಸಾವಿರ ಸಾವಿರ ಗಟ್ಟಲೆ ಹಣ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರ ಕಣ್ಣಲ್ಲೂ ಅಚ್ಚರಿ. ಇದೇನು ಎಂಬಂತೆ ನೋಡಿದರು. ಸಲೀಂ ಚಾಚಾ `ಯಾವುದಕ್ಕೂ ಇರಲಿ ಎಂಬಂತೆ ಇಟ್ಟಿದ್ದೆ. ಯಾವಾಗಲೋ ಇಟ್ಟಿದ್ದೆ. ಅಂತೂ ಹೀಗೆ ಉಪಯೋಗಕ್ಕೆ ಬಂತು. ನೋಡು 10 ಸಾವಿರಕ್ಕೂ ಅಧಿಕ ಇದೆ.  ನಮ್ಮ ಹಿರಿಯರು ಇಂತದ್ದಕ್ಕೆ ಆಪದ್ಧನ ಎಂದು ಹೇಳುವುದಲ್ಲವಾ?' ಎಂದರು. ಸಲೀಮ ಚಾಚಾನ ಮುಂದಾಲೋಚನೆ ಖುಷಿ ತಂದಿತು.
           ಹತ್ತಿರದಲ್ಲೇ ಇದ್ದ ಹೊಟೆಲೊಂದಕ್ಕೆ ಹೋಗಿ ತಿಂಡಿ ತಿಂದರು. ಅಲ್ಲೊಂದು ಕಡೆ ರೂಮು ಮಾಡಿ ಕೊಂಚ ವಿಶ್ರಾಂತಿ ಪಡೆದುಕೊಂಡರು. ಮದ್ಯಾಹ್ನದ ಊಟ ಮುಗಿಸಿ ಸಂಜೆಯ ಉಟವನ್ನು ಕಟ್ಟಿಸಿಕೊಂಡು ಇಳಿ ಸಂಜೆಯಲ್ಲಿ ಪ್ರಯಾಣವನ್ನು ಮತ್ತೆ ಆರಂಭಿಸಿದರು. ಗೋಸ್ಭಾಗ್ ನಿಂದ ನರೋಸಿನ್ಹೋಪುರ ಮತ್ತೊಂದು ತಾಸಿನಲ್ಲಿ ಸಿಕ್ಕಿತು. ಬೆಂಗಾಲಿಯರು ಎಲ್ಲವನ್ನೂ ಓ ಎಂದು ಕರೆಯುತ್ತಾರೆ. ಭಾರತದ ಅಸ್ಸಾಂ ಬೆಂಗಾಲಿಗರ ಬಾಯಲ್ಲಿ ಅಸ್ಸೋಂ ಆಗುತ್ತದೆ. ನರಸಿಂಹಪುರ ನರೋಸಿಂಹೋಪುರವಾಗುತ್ತದೆ. ಬೆಂಗಾಲಿ ಭಾಷೆಯ ವಿಶಿಷ್ಟವೇ ಇದು. ನರೋಸಿಂಹೋಪುರ ಬೆಂಗಾಲಿಯ ಅತ್ಯಂತ ಪುರಾತನ ಪಟ್ಟಣಗಳಲ್ಲೊಂದು. ಢಾಕಾ-ಅಶೂಲಿಯಾ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ನರೋಸಿಂಹೋಪುರವಿದ್ದರೆ ಇನ್ನೊಂದು ಭಾಗದಲ್ಲಿ ಗದ್ದೆ ಬಯಲುಗಳು ವಿಸ್ತಾರವಾಗಿ ಹರಡಿಕೊಂಡಿದ್ದವು. ಸಲೀಂ ಚಾಚಾ ಹುರುಪಿನಿಂದ ಸೈಕಲ್ ಚಲಾಯಿಸುತ್ತಿದ್ದರು. ಮಧುಮಿತಾ ಹಾಗೂ ವಿನಯಚಂದ್ರ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
            ಮತ್ತೆ ಕೆಲವು ಕಿಲೋಮೀಟರುಗಳ ಅಂತರದಲ್ಲಿ ಜಾಮ್ಗೋರಾ ಪಟ್ಟಣ ಸಿಕ್ಕಿತು. ಜಾಮ್ಗೋರಾ ನಗರಿ ಬೈಪೈಲ್ ಎಂಬ ಪಟ್ಟಣದ ಉಪನಗರಿ. ಸಾಕಷ್ಟು ವಿಸ್ತಾರವಾಗಿಯೂ ಇತ್ತು. ನಗರದಲ್ಲಿ ಜನಸಂಚಾರ ಜೋರಾಗಿತ್ತು. ರಾತ್ರಿಯಾದರೂ ಜನಸಾಮಾನ್ಯರು ಓಡಾಡುತ್ತಿದ್ದರು. ವಿನಯಚಂದ್ರ, ಸಲೀಂ ಚಾಚಾ ಹಾಗೂ ಮಧುಮಿತಾಳ ಮನಸ್ಸಿನಲ್ಲಿ ಆತಂಖ ದೂರವಾಗಿತ್ತು. ಬೈಪೈಲ್ ನಗರಿಯ ಗಲ್ಲಿಗಲ್ಲಿಗಳು ಸೆಳೆಯುವಂತಿದ್ದವು. ಮಧುಮಿತಾ ತಾನು ಹಿಂದೊಮ್ಮೆ ಈ ನಗರಿಯಲ್ಲಿ ಅಡ್ಡಾಡಿರುವುದಾಗಿ ತಿಳಿಸಿದಳು. ನಗರಿ ಅಭಿವೃದ್ಧಿಯಲ್ಲಿ ಮುಂದುವರಿದಂತೆ ಕಾಣಿಸಿತು. ಒಂದೆರಡು ಸೆಣಬಿನ ಕಾರ್ಖಾನೆಗಳೂ ಕಾಣಿಸಿದವು. ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸಿದವು. ಬಾಂಗ್ಲಾದ ಮುಂದುವರಿದ ಪ್ರದೇಶದಲ್ಲಿ ಇದೂ ಒಂದು ಎನ್ನಬಹುದು.
            ಮುಂದಕ್ಕೆ ಸಾಗಿದಂತೆ ನಬೀನಗರ-ಚಂದ್ರ ರಸ್ತೆ ಸಿಕ್ಕಿತು. ರಸ್ತೆಯಲ್ಲಿ ಬಲಕ್ಕೆ ಹೊರಳಿ ಮುಂದಕ್ಕೆ ಸಾಗಿತು ಸೈಕಲ್ ರಿಕ್ಷಾ. ಉದ್ದನೆಯ ಹೆದ್ದಾರಿಯಲ್ಲಿ ಸಾಳು ಸಾಲು ವಾಹನಗಳು ಸಾಗುತ್ತಿದ್ದವು. ರೊಯ್ಯಂನೆ ಓಡುವ ವಾಹನಗಳ ಹಾರನ್ ಶಬ್ದ ಕಿವಿಗೆ ರಾಚುತ್ತಿತ್ತು. ಬೈಪೈಲ್ ನಗರದಲ್ಲಿ ಸಾಕಷ್ಟು ಜನದಟ್ಟಣೆಯೂ ಇತ್ತು. ರಸ್ತೆ ರಸ್ತೆಗಳಲ್ಲಿ ಕೆಂಪುದೀಪವಿತ್ತು. ಈ ನಡುವೆ ವಿನಯಚಂದ್ರ ತಾನೇ ಸೈಕಲ್ ತುಳಿಯಲು ಮುಂದಾದ. ಸೈಕಲ್ ಏರಿದ. ಹಿಂದಿನ ಸೀಟಿಗೆ ಹೋಗಿ ಕುಳಿತ ಸಲೀಂ ಚಾಚಾ `ಬೇಟಿ.. ಈ ಹುಡುಗನಿದ್ದಾನಲ್ಲ ಬಹಳ ಒಳ್ಳೆಯವನು. ನಿನಗೆ ಒಳ್ಳೆಯ ಗಂಡನಾಗುತ್ತಾನೆ. ನೀನು ಇವನನ್ನು ಪ್ರೀತಿಸಿ ಒಳ್ಳೆಯ ಕೆಲಸವನ್ನು ಮಾಡಿದೆ. ಈತನಲ್ಲಿ ಒಳ್ಳೆಯ ಗುಣಗಳೇ ಇವೆ. ಕೆಟ್ಟವನಲ್ಲ. ಈತನ ಜೊತೆ ಚನ್ನಾಗಿ ಬಾಳು.. ನಿನ್ನ ಬದುಕು ಬಂಗಾರವಾಗುತ್ತದೆ..' ಎಂದರು.
           ನಾಚಿಕೊಂಡ ಮಧುಮಿತಾ ಸುಮ್ಮನೆ ತಲೆಯಾಡಿಸಿದಳು. ವಿನಯಚಂದ್ರನ ಜೊತೆಗೆ ಬಾಳಿದಂತೆ, ಖುಷಿಯಿಂದ ಬದುಕಿದಂತೆ ಕನಸು ಕಾಣಲಾರಂಭಿಸಿದಳು. ಮುಂದೆ ಬರುವ ಕಷ್ಟದ ದಿನಗಳ ಅರಿವು ಆಕೆಗೆ ಇರಲಿಲ್ಲವಾದ್ದರಿಂದ ಆ ಕ್ಷಣ ಸ್ವರ್ಗದಂತೆ ಭಾಸವಾಯಿತು.
            ಬೈಪೈಲ್ ನಗರ ದಾಟುತ್ತಿದ್ದಂತೆಯೇ ಮತ್ತೆ ಗದ್ದೆ ಬಯಲುಗಳು ಕಾಣಲಾರಂಭಿಸಿದವು. ಅಲ್ಲೊಂದು ಕಡೆ ಸೈಕಲ್ ರಿಕ್ಷಾ ನಿಲ್ಲಿಸಿ ಊಟಕ್ಕೆ ಮುಂದಾದರು. ರಸ್ತೆಯ ಪಕ್ಕದ ಗದ್ದೆ ಬಯಲಿನಲ್ಲಿ ಕುಳಿತು ಕಟ್ಟಿಸಿಕೊಂಡಿದ್ದ ಊಟವನ್ನು ಬಿಚ್ಚಿದರು. ಗದ್ದೆಯಿಂದ ಬೀಸಿ ಬರುತ್ತಿದ್ದ ಚಳಿಗಾಳಿ ಹಲ್ಲನ್ನು ಕಟಕಟಿಸುವಂತೆ ಮಾಡುತ್ತಿತ್ತು. ಊಟ ಮುಗಿಸಿ ನೀರು ಕುಡಿದು ಮತ್ತೆ ಸೈಕಲ್ ಬಳಿ ಹೋಗುವ ವೇಳೆಗೆ ಮಧುಮಿತಾಳಂತೂ ಚಳಿಯಿಂದ ಕಟಕಟಿಸಲು ಆರಂಭಿಸಿದ್ದಳು. ವಿನಯಚಂದ್ರ ಆಕೆಯನ್ನು ತಬ್ಬಿ ಹಿಡಿದು ಸೈಕಲ್ ಏರಿದ. ಸಲೀಂ ಚಾಚಾ ಸೈಕಲು ತುಳಿಯಲು ತೊಡಗಿದರು. ತನ್ನ ಕಾಲಮೇಲೆ ಮಧುಮಿತಾಳ ತಲೆಯನ್ನು ಇರಿಸಿಕೊಂಡು ನೇವರಿಸತೊಡಗಿದ. ಮಧುಮಿತಾಳಿಗೆ ಹಿತವಾಗಿತ್ತು. ಖುಷಿಯಿಂದ ನಸುನಕ್ಕಿದ್ದಳು. `ಯಾವ ಜನ್ಮದ ಪುಣ್ಯವೋ ಏನೋ.. ನೀ ನಂಗೆ ಸಿಕ್ಕಿದ್ದೀಯಾ ಗೆಳೆಯಾ.. ಬದುಕಿನಲ್ಲಿ ಏನೇನಾಗ್ತದೋ.. ನಾ ನಿನ್ ಜೊತೆಗಿರ್ತೀನಿ...' ಪಿಸುಗುಟ್ಟಿದಳು ಮಧುಮಿತಾ.
         `ಹೀಗೆ ಇದ್ದು ಬಿಡೋಣ ಅನ್ನಿಸ್ತದೆ ಕಣೆ. ಈಗ ಕಷ್ಟವಿದೆ ನಿಜ. ಮುಂದಿನ ಬದುಕು ಸುಂದರವಾಗಿರಬಹುದು. ಆಶಾವಾದದಲ್ಲೇ ಬದುಕು ಸಾಧಿಸಬೇಕು. ಈ ಬಾಂಗ್ಲಾ ನಾಡನ್ನು ಒಮ್ಮೆ ದಾಟಿ ಬಿಡೋಣ ಮುಂದೆ ಒಳ್ಳೆಯ ದಿನಗಳು ನಮಗೆ ಸಿಗಬಹುದು. ನನ್ನ ಪ್ರೀತಿಯ ಕರ್ನಾಟಕ, ಅಲ್ಲಿ ಪಶ್ಚಿಮ ಘಟ್ಟದಲ್ಲಿ, ಮಲೆನಾಡಿನ ಗುಡ್ಡದ ತಪ್ಪಲಿನಲ್ಲಿ ಇರುವ ದೊಡ್ಡ ಮನೆಯಲ್ಲಿ ನಾನು-ನೀನು ರಾಜ ರಾಣಿಯರಂತೆ ಬದುಕೋಣ. ಜೊರಗುಡುವ ಮಳೆ, ಕೊರೆಯುವ ಚಳಿ, ಬೇಸಿಗೆಯ ಹಿತವಾತಾವರಣ ಅಲ್ಲಿದೆ. ಮನೆಯೆದುರು ಇರುವ ಅಡಕೆ ತೋಟಗಳು, ಹಿಂಭಾಗದಲ್ಲಿರುವ ದಟ್ಟ ಕಾಡು ಖಂಡಿತ ನಿನಗೆ ಇಷ್ಟವಾಗುತ್ತದೆ. ಇನ್ನು ನನ್ನ ಅಪ್ಪ-ಅಮ್ಮನ ಬಗ್ಗೆ ಹೇಳಲೇಬೇಕು. ನಾನು ಇಷ್ಟಪಟ್ಟಿದ್ದು ಅವರಿಗೂ ಖಂಡಿತ ಇಷ್ಟವಾಗುತ್ತದೆ. ನನ್ನ ಆಯ್ಕೆಗೆ ಅವರು ಎದುರಾಡಿಲ್ಲ. ಎದುರಾಡುವುದೀ ಇಲ್ಲ. ನಾನು ಈಗಾಲೇ ನಿನ್ನ ಬಗ್ಗೆ ಹೇಳಿದ್ದೇನೆ. ಖಂಡಿತ ಅವರು ನಮಗಾಗಿ ಕಾಯುತ್ತಿರುತ್ತಾರೆ. ಇನ್ನು ತಂಗಿಯಂತೂ ಪ್ರೀತಿಯಿಂದ ಆದರಿಸುತ್ತಾಳೆ..' ಎಂದ.
          `ಹುಂ..' ಎಂದಳು ಮಧುಮಿತಾ. `ನಮ್ಮ ಮನೆಯ ಬಗ್ಗೆ ಬಹಳ ಕುತೂಹಲವಾಗ್ತಿದೆ ವಿನೂ.. ಆದರೆ ಅಲ್ಲಿಗೆ ಹೋಗಲಿಕ್ಕೆ ಇನ್ನೂ ಬಹಳ ಸವಾಲನ್ನು ಎದುರಿಸಬೇಕಿದೆ.. ಅಲ್ಲವಾ..' ಎಂದಳು ಮಧುಮಿತಾ.
        ಸಲೀಂ ಚಾಚಾ ನಡುವೆ ಬಾಯಿ ಹಾಕಿ `ಏನೂ ಆಗೋದಿಲ್ಲ.. ನಿಮ್ಮನ್ನು ಭಾರತದ ಗಡಿಯೊಳಗೆ ಹಾಕುವುದೇ ನನ್ನ ಜವಾಬ್ದಾರಿ.. ಹೆದರಬೇಡಿ. ನಾನಿರುವ ತನಕ ನಿಮಗೇನೂ ಆಗುವುದಿಲ್ಲ..' ಎಂದ. ಚಾಚಾನ ಪ್ರೀತಿಗೆ ಜೋಡಿ ಹಕ್ಕಿಗಳು ಕಣ್ಣೀರಾಗುವುದೋಂದೇ ಬಾಕಿ.  ಮನಸ್ಸಿನಲ್ಲಿಯೇ ಆತನಿಗೊಂದು ಧನ್ಯವಾದ ಹೇಳಿದರು. ಸೈಕಲ್ ಮುಂದಕ್ಕೆ ಸಾಗುತ್ತಲೇ ಇತ್ತು. `ಇದೋ ನೋಡಿ ಹೀಗೆ ಸಾಗಿದರೆ ಚಕ್ರೋಬೋರ್ತಿ (ಚಕ್ರವರ್ತಿ) ಅನ್ನುವ ಊರು ಸಿಗುತ್ತದೆ. ಮುಂದಕ್ಕೆ ಸಿಗುತ್ತದಲ್ಲ ಅದೇ ಪನೀಸೈಲ್. ಎಂತೆಂತ ಪ್ರದೇಶಗಳಿವೆ.. ನೋಡಿ..' ಎಂದು ಕತ್ತಲೆಯಲ್ಲಿಯೇ ಚಾಚಾ ಬೋರ್ಡನ್ನು ತೋರಿಸಿ ವಿವರಿಸುತ್ತಿದ್ದರೆ ಹಿಮದೆ ಕುಳಿತ ಜೋಡಿ ಹಕ್ಕಿಗಳು ಸುಮ್ಮನೆ ಕಣ್ತುಂಬಿಕೊಳ್ಳುತ್ತಿದ್ದವು. ಯಾವುದೋ ಕನಸಿನ ನಗರಿಯಲ್ಲಿ ರಥದ ಮೇಲೆ ಸಾಗಿದಂತೆ ಅವರಿಗೆ ಅನ್ನಿಸುತ್ತಿತ್ತು.

(ಮುಂದುವರಿಯುತ್ತದೆ..)

ಕಹಿ ಕಹಿ ಹನಿಗಳು

ಇಬ್ಬಗೆ

ಇಸ್ರೇಲಿ ಯೋಧರು
ಭಯೋತ್ಪಾದಕರನ್ನು ಕೊಂದರೆ
ಭಾರತದ ಬುದ್ಧಿ ಜೀವಿಗಳು
ಕೂಗ್ಯಾಡಿದರು. ಹುಯ್ಯಲಿಟ್ಟರು.
ಅತ್ತು ಕರೆದರು..|
ಮಾನವ ಹಕ್ಕುಗಳ ಉಲ್ಲಂಘನೆಯೆಂದರು. |
ಉಗ್ರರು
ಪತ್ರಕರ್ತರ ತಲೆ ಕಡಿದರು |
ಭಾರತದ ಬುದ್ಧಿ ಜೀವಿಗಳು
ನಿದ್ದೆಹೋದರು,
ಸುಮ್ಮನುಳಿದರು ||

ಎರಡು ಮುಖ

ಮದನಿಗೆ ಹಿಂದೂಗಳ ಮೆಲೆ ಸಿಟ್ಟು
ಭಾರತೀಯರನ್ನು ಕೊಲ್ಲಲು
ಸದಾ ಹವಣಿಸುವ ಪಟ್ಟು|
ಆದರೆ ಆರೋಗ್ಯ ಉಳಿಸಿಕೊಳ್ಳಲು
ಬೇಕಾಗಿದ್ದು ಮಾತ್ರ
ಆಯುರ್ವೇದ ಎಂಬುದು
ಬಚ್ಚಿಟ್ಟ ಗುಟ್ಟು ||

ವಾಟಾಳ ಪ್ರತಾಪ

ಕನ್ನಡದ ಕುರಿತು
ಯಾವಾಗಲೂ ಎದ್ದರು
ವಾಟಾಳರು |
ಉಳಿದ ಸಮಯದಲ್ಲಿ ಮಾತ್ರ
ಯಾವಾಗಲೂ ಕಾಣರು |

ಬುದ್ದಿಜೀವಿಯೆಂದರೆ

ಬುದ್ಧಿ ಜೀವಿಗಳೆಂದರೆ
ಬುದ್ದಿ ಹೆಚ್ಚಾಗಿ
ಲದ್ದಿಗಳಂತಾಗಿರುವ
ಜೀವಿಗಳು |

Thursday, August 21, 2014

ಬೆತ್ತಲೆ ಮರ ಬಿತ್ತಲೆ

ಮರವೊಂದರ ಗಾತ್ರ ಎಷ್ಟು ದೊಡ್ಡದಿರಬಹುದು? 10 ಅಡಿ, 15 ಅಡಿ? ಶಿರಸಿ ತಾಲೂಕಿನ ಕೆಂಗ್ರೆಹೊಳೆಯ ಕಾನಿನಲ್ಲಿ ಒಂದು ಮರವಿತ್ತು. ಆ ಮರದ ಸುತ್ತಳತೆಯನ್ನು ಅರಿಯಬೇಕಾದರೆ 15-20 ಮಂದಿ ಅಕ್ಕಪಕ್ಕ ಕೈ ಅಗಲಿಸಿ ನಿಂತು ಮರವನ್ನು ತಬ್ಬಿ ಹಿಡಿಯಬೇಕಿತ್ತು. ಅಂತಹ ಹೆಮ್ಮರ ಇದೀಗ ಮುರಿದು ಬಿದ್ದಿದೆ.
ಸ್ಥಳೀಯರ ಬಾಯಲ್ಲಿ ಮಲೆಯಾಳಿಮರ ಎಂದು ಕರೆಯಲ್ಪಡುತ್ತಿದ್ದ ಹೆಮ್ಮರದ ನೈಜ ಹೆಸರು ಬೊಂಡಾಲೆ ಎಂದು. ಈ ಮರದ ವೈಜ್ಞಾನಿಕ ನಾಮಧೇಯ ಟೈಟ್ರಾಮೆಲಸ್ ನ್ಯೂಡಿಫ್ಲೋರಾ. ಈ ಮರದ ಬುಡದಲ್ಲಿ ಅರಣ್ಯ ಇಲಾಖೆ ಹಾಕಿರುವ ಫಲಕದ ಮೇಲೆ ಮರದ ಸುತ್ತಳತೆ 7 ಮೀಟರ್ (22 ಅಡಿ 9 ಇಂಚು) ಹಾಗೂ ಎತ್ತರ 52 ಮೀಟರ್ (169 ಅಡಿ) ಎಂದು ನಮೂದು ಮಾಡಲಾಗಿದೆ. ಅಗಾಧ ಗಾತ್ರವನ್ನು ಹೊಂದಿದ್ದ ಈ ಮರ ನೂರಾರು ಜೇನು ಕುಟುಂಬಗಳಿಗೆ ಗೂಡು ಕಟ್ಟಲು ಆಶ್ರಯ ನೀಡಿತ್ತು. ಈ ಕಾರಣದಿಂದಾಗಿ ಈ ಮರವನ್ನು ಜೇನುಮರ ಎಂದೂ ಕರೆಯಲಾಗುತ್ತಿತ್ತು.
ಶಿರಸಿ ನಗರದಿಂದ 8 ಕಿ.ಮಿ ದೂರದ ಕೆಂಗ್ರೆಹೊಳೆಯ ಅರವಿಂದ ನರ್ಸರಿ ಬಳಿಯ ಕಾಡಿನಲ್ಲಿದ್ದ ಈ ಮರದ ಆಯಸ್ಸು 350 ರಿಂದ 400 ವರ್ಷಗಳಿಗಿಂತಲೂ ಅಧಿಕ. ಅಂದರೆ ಭಾರತಕ್ಕೆ ಬ್ರಿಟೀಷರು ಆಗಮಿಸಿದ್ದ ಸಂದರ್ಭ. ಬ್ರಿಟೀಷರು ಭಾರತಕ್ಕೆ ಬಂದಿದ್ದು, ವ್ಯಾಪಾರವನ್ನು ಮಾಡಿದ್ದು, ಭಾರತವನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದು, ಭಾರತೀಯರ ಸ್ವಾತಂತ್ರ್ಯಹೋರಾಟ, ಸ್ವತಂತ್ರವಾಗಿದ್ದು ಇವೆಲ್ಲವನ್ನೂ ಈ ಮರ ಕಂಡಿತ್ತು. ನಾಲ್ಕು ಶತಮಾನಗಳ ಕಾಲ ಮರಗಳ್ಳರ ಕೊಡಲಿಯೇಟಿಗೆ ಬಲಿಯಾಗದೇ ಅಗಾಧವಾಗಿ ನಿಂತಿತ್ತು. ದೈತ್ಯವಾಗಿ ಕಂಡಿತ್ತು. ಹುಲೇಕಲ್, ಸಾಲಕಣಿ, ಕೆಂಗ್ರೆಹೊಳೆ, ಓಣಿಕೇರಿ, ವಾನಳ್ಳಿ ಈ ಭಾಗದ ಸಾರ್ವಜನಿಕರಂತೂ ಈ ದೈತ್ಯಮರವನ್ನು ತಮ್ಮ ಭಾಗದ ಹೆಮ್ಮೆ ಎಂದೇ ಆರಾಧಿಸುತ್ತ ಬಂದಿದ್ದರು.
ಈ ಮರದ ಅಗಲವಾದ ಬೇರುಗಳ ಗಾತ್ರವನ್ನು ಗಮನಿಸಿದರೆ ನೋಡುಗರು ವಿಸ್ಮಯ ಪಡುವಂತಿತ್ತು. ಮರದ ಸುತ್ತಲೂ ಚಾಚಿರುವ ಬೇರುಗಳಲ್ಲಿ ಒಂದು ಬೇರಿನಿಂದ ಇನ್ನೊಂದು ಬೇರಿನ ನಡುವೆ ಆರಡಿಯ ಆಜಾನುಬಾಹು ನಿಂತಿದ್ದರೂ ಬೇರಿನ ಇನ್ನೊಂದು ಪಕ್ಕದಲ್ಲಿ ನಿಂತಿದ್ದವರಿಗೆ ಕಾಣುತ್ತಿರಲಿಲ್ಲ. ಅಷ್ಟೇ ಏಕೆ ಈ ಬೇರುಗಳ ನಡುವೆ ಆರೆಂಟು ಅಡಿಯ ಕೋಣೆಗಳನ್ನೂ ಮಾಡಿ ಬದುಕಬಹುದಿತ್ತು. ಈ ಕೆಲವೇ ಕೆಲವು ಅಂಶಗಳೇ ಮರದ ಬೃಹತ್ ಗಾತ್ರವನ್ನು ಕಣ್ಣಮುಂದೆ ಕಟ್ಟಿಕೊಡುತ್ತವೆ.
ಪರಿಸರ ಹೋರಾಟಗಾರ, ಬರಹಗಾರ ಶಿವಾನಂದ ಕಳವೆಯವರ ಪರಿಸರ ಕಾಳಜಿಯಿಂದಾಗಿ ಈ ಮರದ ರಕ್ಷಣೆ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿತ್ತು. ಈ ಮರವನ್ನು ಅರಣ್ಯಗಳ್ಳರು ಕಡಿಯದಂತೆ ವಿಶೇಷ ಮುತುವರ್ಜಿಯನ್ನೂ ವಹಿಸಲಾಗಿತ್ತು. ಮರದ ಮೇಲೆ ನೂರಾರು ಜೇನು ಕುಟುಂಬಗಳು ಸದಾಕಾಲ ಗೂಡು ಕಟ್ಟಿಕೊಂಡು ಇರುತ್ತಿದ್ದವು. ಈ ಕಾರಣದಿಂದಲೇ ಮರ ವಿಶೇಷತೆಯನ್ನು ಪಡೆದುಕೊಂಡಿತ್ತು. ಸ್ಥಳೀಯರು ಈ ಮರದಿಂದ ಜೇನುತುಪ್ಪವನ್ನು ಸಂಗ್ರಹ ಮಾಡುತ್ತಿದ್ದರು. ಜೇನುತುಪ್ಪ ಸಂಗ್ರಹಿಸುವಾಗ ಮರಕ್ಕೆ ಪೂಜೆ ಮಾಡಿ ನಂತರ ಜೇನುತುಪ್ಪ ಸಂಗ್ರಹಿಸುತ್ತಿದ್ದುದು ಮರ-ಜೇನು ಹಾಗೂ ಮನುಷ್ಯರ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.
ತನ್ನ ಬೃಹತ್ ಗಾತ್ರದಿಂದಲೇ ಪರಿಸರ ಪ್ರಿಯರನ್ನೂ ಪ್ರವಾಸಿಗರನ್ನೂ ಈ ಮರ ತನ್ನತ್ತ ಸೆಳೆದುಕೊಂಡಿತ್ತು. ಪ್ರತಿ ವಾರ ಈ ಮರವನ್ನು ನೋಡಲೆಂದೇ ನೂರಾರು ಜನ ಕೆಂಗ್ರೆ ಹೊಳೆಯ ಈ ಕಾಡಿಗೆ ಪಿಕ್ ನಿಕ್ ಬರುತ್ತಿದ್ದರು. ಈ ಮರವನ್ನು ನೋಡಿ ವಿಸ್ಮಯರಾಗುತ್ತಿದ್ದರು. ಮರದ ಬುಡದಲ್ಲಿ ಕುಳಿತು ಪೋಟೋ ಕ್ಲಿಕ್ಕಿಸುತ್ತಿದ್ದರು. ಮರದ ದೈತ್ಯತೆ, ದೊಡ್ಡ ದೊಡ್ಡ ಬೇರುಗಳನ್ನು ನೋಡಿ ಖುಷಿಪಡುತ್ತಿದ್ದರು. ಮರದ ಬುಡದಲ್ಲಿ ಆಡುತ್ತಿದ್ದರು.
ಪಶ್ಚಿಮ ಘಟ್ಟದಲ್ಲಿ ಇಂತಹ ಮರಗಳು ಸಾಕಷ್ಟಿವೆ. ಪ್ರತಿ ಐದು ಕಿ.ಮಿ ಗೆ ಒಂದು ದೈತ್ಯ ಮರವಿದ್ದು ಇಂತಹ ದೈತ್ಯ ಮರಕ್ಕೆ ಜೇನುಗಳು ಗೂಡು ಕಟ್ಟಲು ಆಗಮಿಸುತ್ತವೆ. ಆದ್ದರಿಂದ ಇಂತಹ ಮರಗಳನ್ನು ಜೇನುಮರ ಎಂದು ಕರೆಯುತ್ತಾರೆ. ಮೃದು ಜಾತಿಯ ಈ ಮರ ಬೇಸಿಗೆಯಲ್ಲಿ ತನ್ನ ಸಂಪೂರ್ಣ ಎಲೆಗಳನ್ನು ಉದುರಿಸುತ್ತವೆ. ಆದ್ದರಿಂದಲೇ ಈ ಮರವನ್ನು ಬೆತ್ತಲೆ ಮರ ಎಂದೂ ಕರೆಯಲಾಗುತ್ತದೆ. ಹುಲೇಕಲ್, ಸಾಲಕಣಿ, ವಾನಳ್ಳಿ ಭಾಗದ ಈ ದೈತ್ಯ ಮರ ಮಳೆಗಾಲದಲ್ಲಿ ಮುರಿದು ಬಿದ್ದಿದೆ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ.
ಇಂತಹ ದೈತ್ಯ ಮರ ಈ ಮಳೆಗಾಲದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮುರಿದುಬಿದ್ದಿದೆ. ಮರದ ರೆಂಬೆ ಕೊಂಬೆಗಳೆಲ್ಲ ಭೂಮಿಪಾಲಾಗಿದೆ. ಜೇನು ಗೂಡು, ಹಕ್ಕಿಗಳು, ಕೀಟ, ಪತಂಗಗಳಿಂದ ತುಂಬಿ ತುಳುಕುತ್ತಿದ್ದ ಮರದ ರೆಂಬೆ, ಕೊಂಬೆಗಳೆಲ್ಲ ಭೂಮಿಗೊರಗಿವೆ. ಮೃದು ಜಾತಿಯ ಮರ ಮುರಿದು ಬಿದ್ದಿರುವುದು ಸ್ಥಳೀಯರ ಮನಸ್ಸಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ತಮ್ಮ ಪ್ರದೇಶದ ಹೆಮ್ಮೆಯಾಗಿದ್ದ ಜೇನುಮರದ ಅವಸಾನದಿಂದ ಸ್ಥಳೀಯರು, ಪರಿಸರ ಪ್ರೇಮಿಗಳು ಕಣ್ಣೀರುಗರೆಯುತ್ತಿದ್ದಾರೆ. ಮರವೊಂದು ಕಟ್ಟಿಕೊಟ್ಟಿದ್ದ ಕಲರವ ಸ್ಥಬ್ಧವಾಗಿದೆ. ಮರವೂ ಕೂಡ ಪ್ರವಾಸಿಗರನ್ನು ಸೆಳೆಯಬಲ್ಲದನ್ನು ತೋರಿಸಿಕೊಟ್ಟಿದ್ದ ಮರ ಇನ್ನಿಲ್ಲವಾಗಿದೆ. ಶತಮಾನಗಳ ಕಥೆ ಹೇಳುತ್ತಿದ್ದ ಮಹಾಮರ ಕಣ್ಮುಚ್ಚಿದೆ. ತನ್ಮೂಲಕ ಮರ ನೆನಪಾಗಿ ಉಳಿದಿದೆ.

***
(ಇದು ಆ.21,2014ರ ಬೈ2ಕಾಫಿಯ ಟೂರು ಕೇರಿಯಲ್ಲಿ ಪ್ರಕಟಗೊಂಡಿದೆ)