Monday, August 18, 2014

ಮೈಸೂರು ಹುಸೇನಿಯ ಕೈಚಳಕ ಸಾಂಜಿ ಕಲೆಯಲ್ಲಿ ಅರಳಿದ ಶ್ರೀಕೃಷ್ಣ

        ಸಾಂಝಿ ಎಂಬ ಚಿತ್ರಕಲೆ ನಮ್ಮ ದೇಶದ ಪುರಾತನ ಕಲಾ ಪ್ರಕಾರಗಳಲ್ಲೊಂದು. ಹಲವಾರು ಶತಮಾನಗಳ ಹಿಂದಿನಿಂದಲೂ ಈ ಕಲೆ ಸಂಪ್ರದಾಯದ ರೂಪದಲ್ಲಿ ಬಳಕೆಯಾಗುತ್ತಿದೆ. ಕಾಗದ ಕತ್ತರಿಯಲ್ಲಿ ಸಾಂಝಿ ಕಲೆಯನ್ನು ಮೂಡಿಸಿದವರೂ ಹಲವು ಮಂದಿ. ಅಂತವರಲ್ಲೊಬ್ಬರು ಮೈಸೂರಿನ ಎಸ್. ಎಫ್. ಹುಸೇನಿಯವರು.
ನಮ್ಮ ಪುರಾತನ ಅಪರೂಪದ ಜನಪದ ಕಲಾಪ್ರಕಾರಗಳಲ್ಲಿ ಸಾಂಝಿ(ಕಾಗದಕತ್ತರಿ) ಕಲೆಯೂ ಒಂದು. ಸಾಂಝಿಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಇವರು ಶ್ರೀಕೃಷ್ಣ ವಿಭಿನ್ನ, ವಿಶೇಷ ಚಿತ್ರಗಳನ್ನು ಬಹುಕಲಾತ್ಮಕವಾಗಿ ಕಾಗದದಲ್ಲಿ ಕತ್ತರಿ ಹಾಗು ಕಟರ್ ಸಹಾಯದಿಂದ ಸೂಕ್ಷ ್ಮವಾಗಿ ರಚಿಸಿದ್ದಾರೆ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಾಂಝಿ ಕಲೆ ಇದೀಗ ದೇಶ ವಿದೇಶಗಳಿಗೆ ವ್ಯಾಪಿಸಿದೆ. ಮೈಸೂರು ಹುಸೇನಿ ತಮ್ಮ ಕೈಚಳಕದಿಂದ ಸಾಂಝಿ ಕಲೆಯಲ್ಲಿ ಶ್ರೀಕೃಷ್ಣನನ್ನು ಮೂಡಿಸಿದ್ದಾರೆ.
ಆಧುನಿಕ ಜನರ ಜೀವನಶೈಲಿಬದಲಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಈ ವಿಶೇಷಕಲೆ ಇತ್ತೀಚೆಗೆ ಬಳಕೆಯಾಗದೆ ನಿಧಾನಗತಿಯಲ್ಲಿ ಜನಮಾನಸದಿಂದ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಕಲಾವಿದರು ಸಾಂಝಿಕಲೆಯನ್ನು ಉಳಿಸುವ, ಜನಪ್ರಿಯಗೊಳಿಸುವ ಕೆಲಸವನ್ನು ದೇಶದಹಲವೆಡೆ ನೆಡೆಸುತ್ತಿದ್ದಾರೆ. ಅಂತಹವರಲ್ಲಿ ಎಸ್.ಎಫ್.ಹುಸೇನಿ ಮೈಸೂರು ಸಹ ಒಬ್ಬರು.
ಮೈಸೂರು ಹುಸೇನಿ ಎಂದೇ ಪರಿಚಿತರಾಗಿರುವ ಎಸ್.ಎಫ್. ಹುಸೇನಿ ಈ ಕಲೆಯ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸುತ್ತಾ 22 ಜಿಲ್ಲೆಗಳಲ್ಲಿ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ, ಮತ್ತು ಆಸಕ್ತರಿಗೆ ಸಾಂಝಿ ಕಲೆ ಕಾಯರ್ಾಗಾರ ತರಬೇತಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ತಾವೇ ತಯಾರಿಸಿದ ವಿಶೇಷ ಸರಣಿ ಚಿತ್ರಗಳಾದ ಸಾಂಝಿಗಣಪ, ಸಾಂಝಿರಂಗೋಲಿ, ಸಾಂಝಿಮಾಸ್ಕ್, ಸಾಂಝಿಶಿವ, ಸಂಪ್ರಾದಾಯಕ, ಆಧುನಿಕ, ಜನಪದರೀತಿಯಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿ ಆಸಕ್ತರಿಗೆ ಈ ಕಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಏಕರೇಖಾಚಿತ್ರಗಳು, ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು, ಕಾಗದ ಭಿತ್ತಿಶಿಲ್ಪಗಳು, ಮತ್ತು ಸಾಂಝಿಜನಪದ ಕಾಗದ ಕತ್ತರಿಕಲೆ ಕಲಾಕೃತಿಗಳು ಹುಸೇನಿ ಅವರ ಕಲಾಪ್ರತಿಭೆಗೆ ಕೈಗನ್ನಡಿಯಾಗಿವೆ. ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ.
ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆಟರ್್ ಡಿಪ್ಲೊಮ ಮತ್ತು ಆಟರ್್ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕನರ್ಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಇವರು ಪಡೆದಿದ್ದಾರೆ.
ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 11 ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು 80ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕನರ್ಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.
ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ ಅವುಗಳಲ್ಲಿ ಮುಖ್ಯವಾಗಿ 1999 ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, 2001-ರಲ್ಲಿ ಮೈಸೂರಿನ ಕನ್ನಡಸಂಸ್ಕೃತಿ ಇಲಾಖೆಯಿಂದ ಯುವಸಂಭ್ರಮ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪಧರ್ೆಯಲ್ಲಿ 2001ರಿಂದ ಸತತ ನಾಲ್ಕು ಹಾಗು 2007ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್ಹಬ್ಬದಲ್ಲಿ 2009 ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, 1999ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್ಸ್ರವರ ರಾಕೊಫೇಸ್ಟ್ ಪ್ರಶಸ್ತಿ, ಕನರ್ಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್ಶಿಪ್ 1999 ಮತ್ತು 2000. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, 2001-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾ ಅಧ್ಯಯನ ಕೇಂದ್ರದಿಂದ ಪೋಸ್ಟರ್ ರಚನಗೆ ಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ 9845153277ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಬ್ಲಾಗ್: ಟಥಿಠಡಿಜಣಜಟಿ.ಛಟಠರಠಿಠಣ.ಟಿ  ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದಾಗಿದೆ. ನಮ್ಮ ನಡುವೆ ಇದ್ದು ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ ಹುಸೇನಿಯಂತವರು ಹಲವರಿಗೆ ಮಾದರಿಯಾಗಿತ್ತಾರೆ.
**
ಸಾಂಝಿ ಕಲೆಯ ಕುರಿತು ಮಾಹಿತಿ :
ಸಾಂಝಿ ಎನ್ನುವುದರ ಮೂಲ ಅರ್ಥ ಅಲಂಕಾರ, ಸಿಂಗಾರ. ಉತ್ತರಪ್ರದೇಶದಲ್ಲಿ ರಂಗೋಲಿಯನ್ನು ಸಾಂಝಿ ಎನ್ನುತ್ತಾರೆ.  ಮಥುರಾ ಸಾಂಝಿಕಲೆಯ ತವರು. ಶ್ರೀ ಕೃಷ್ಣನ ಜನ್ಮಸ್ಥಳವೆಂದು ಭಾರತೀಯರು ಪೂಜಿಸುವ ಸ್ಥಳದಲ್ಲಿ ಸಾಂಝಿಕಲೆಯನ್ನು ಕೃಷ್ಣಪರಮಾತ್ಮನ ಲೀಲೆ, ಪವಾಡ, ಗೀತೋಪದೇಶ, ಹೆಚ್ಚಾಗಿ ರಾಧಾಕೃಷ್ಣರ ರಾಸಲೀಲೆ ಮುಂತಾದವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ರೂಪಿಸಿ ಅವುಗಳನ್ನು ವಿನ್ಯಾಸ ರಚನೆಗೆ, ರಂಗೋಲಿ ವಿನ್ಯಾಸಗಳಿಗಾಗಿ ಒತ್ತುಕಲೆಯಾಗಿ ಸಾಂಝಿಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಕಾಲ ಕ್ರಮೇಣ ಆನೇಕ ಕಲಾ ಪ್ರವೀಣರು ವಿವಿಧ ದೇವಾನುದೇವತೆಗಳು, ಹೂಬಳ್ಳಿ, ಪ್ರಕೃತಿಯಂತಹ ಚಿತ್ರಗಳನ್ನು ರಚಿಸಿ ದೇವಸ್ಥಾನ, ರಥ, ರಥಬೀದಿ, ಪಲ್ಲಕ್ಕಿಅಲಂಕಾರ, ದೇವರಉತ್ಸವಕ್ಕೆ ಬಳಸುತ್ತಿದ್ದರಿಂದ ಇದನ್ನು ದೇವಸ್ಥಾನ ಕಲಾಸಾಂಝಿ ಎಂದು ಕರೆಯಲಾಗುತಿತ್ತು. ಕಾಗದದಲ್ಲಿ ಒಳ್ಳೆಯ ಚಿತ್ರಗಳನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅವುಗಳ ಮೇಲೆ ರಂಗೋಲಿ ಪುಡಿ, ಹೂಗಳನ್ನು ತುಂಬಿ ಕಾಗದತೆಗೆದಾಗ ಬಗೆಬಗೆಯ ಅಲಂಕಾರಿಕ ಚಿತ್ರಗಳು ಮೂಡುತ್ತಿದ್ದದ್ದು ಗೊತ್ತಾಯಿತು. ನಂತರ ತಮಗೆ ಬೇಕಾದ ಹಾಗೆ ಕಾಗದದ ಅಚ್ಚುಗಳನ್ನು ತಯಾರಿಸಿ ಅದನ್ನು ಒಂದು ಪರಿಪೂರ್ಣವಾದ ಕಲೆಯಾಗಿಸುವಷ್ಟು ಪರಿಣಿತಿಯನ್ನು ನಮ್ಮ ಹಿಂದಿನವರು ಪಡೆದಿದ್ದರು. ಹೀಗಾಗಿ ಇಂದೊದು ಪ್ರತ್ಯೇಕ ಕಲೆಯಾಗಿ ಬೆಳೆಯಿತು.

Sunday, August 17, 2014

ಹಿರಿಯರಿಗೆ ಜೈ ಎನ್ನಿ

          ಹಿರಿಯರು ನಮ್ಮ ಎದುರು ಓಡಾಡುವಂತ ವಿಶ್ವಕೋಶಗಳು. ಅವರ ಅನುಭವಗಳು ನಮಗೆ ದಾರಿದೀಪಗಳು. ಹಿರಿಯರಿಂದ ನಾವು ಕಲಿತಷ್ಟು ಮತ್ಯಾರಿಂದಲೂ ಕಲಿಯಲು ಸಾಧ್ಯವಿಲ್ಲ. ನಮ್ಮ ಬದುಕಿನ ದೀವಿಗೆ ಅವರು ಎಂದರೂ ತಪ್ಪಾಗಲಿಕ್ಕಿಲ್ಲ. ಅತ್ಯಂತ ವಯಸ್ಸಾದವರು ಅಪರೂಪದ ಕೆಲವು ಅಂಶಗಳನ್ನು ನನಗೆ ತಿಳಿಸಿದ್ದರು. ಅದನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ. ತೀರಾ ಇತ್ತೀಚಿನವರೆಗೂ ನಾನು ರಾತ್ರಿಯ ಊಟಕ್ಕೆ ಮೊಸರು ಹಾಕಿಕೊಳ್ಳುವವನು ಅದಕ್ಕೆ ಹಾಲನ್ನು ಹಾಕಿಕೊಳ್ಳುತ್ತಿರಲಿಲ್ಲ. ಒಂದು ದಿನ ಗಣಪಜ್ಜಿ ಮನೆಗೆ ಹೋಗಿದ್ದೆ. (ಗಣಪಜ್ಜಿಯ ಹಾಡುಗಳಲ್ಲಿ ಬಂದಿರುವ ಗಣಪಜ್ಜಿ ಕೋಡ್ಸರ) ಆಕೆಯ ಬಳಿಯಲ್ಲಿ ಮಾತನಾಡುತ್ತ ರಾತ್ರಿಯಾಯಿತು. ಅಜ್ಜಿಯ ಮನೆಯಲ್ಲಿ ಊಟಕ್ಕೆ ಒತ್ತಾಯಿಸಿದರು. ನಾನು ಹಾಗೂ ದೋಸ್ತ ಸಂಜಯ ಇದ್ದೆವಲ್ಲ. ಬೇಡ ಬೇಡ ಎನ್ನುತ್ತಲೇ ಊಟಕ್ಕೆ ಕುಳಿತೆವು. ಊಟದ ಕೊನೆಯಲ್ಲಿ ನನಗೆ ಮನೆಯವರು ಮೊಸರು ಬಡಿಸಿದರು. ಹಾಲು ಬೇಕಾ ಕೇಳಿದರು. ನಾನು ಬೇಡ ಎಂದೆ. ತಕ್ಷಣ ಅಜ್ಜಿ `ತಮಾ ಹಾಲು ಹಾಕ್ಯಳ..' ಎಂದು ಒತ್ತಾಯಿಸಿದರು. ನಾನು `ಬೇಡ.. ನನಗೆ ರೂಢಿಯಿಲ್ಲ..' ಎಂದೆ.. ಕೊನೆಗೆ ಅಜ್ಜಿ ಹೇಳಿದ್ದೆಂದರೆ `ತಮಾ.. ರಾತ್ರಿ ಊಟಕ್ಕೆ ಮೊಸರಿಗೆ ಯಾವಾಗಲೂ ಹಾಲು ಹಾಕಿಕೊಳ್ಳವು. ಇದರಿಂದಾಗಿ ಆಹಾರ ಬೇಗ್ನೆ ಜೀರ್ಣ ಆಗ್ತು. ಆಮೇಲೆ ಹುಳಿತೇಗು ಬರ್ತಿಲ್ಲೆ. ತಿನ್ನುವ ಆಹಾರ ದೇಹಕ್ಕೆ ಒಗ್ತು..' ಎಂದಳು. ನನ್ನ ಮನೆಯಲ್ಲಿಯೂ ರಾತ್ರಿ ಊಟಕ್ಕೆ ಮಜ್ಜಿಗೆಗೆ ಹಾಲು ಹಾಕಿಕೊಳ್ಳು ಎನ್ನುತ್ತಿದ್ದರು. ಆದರೆ ನಾನು ಕಾರಣ ಕೇಳಿದರೆ ಗೊತ್ತಿಲ್ಲವೆಂದೋ, ಹಾರಿಕೆಯದ್ದೋ ಉತ್ತರ ನೀಡಿದ್ದರು. ಆದರೆ ಈ ಅಜ್ಜಿ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗಾಗಿಸಿತು. ಅಂದಿನಿಂದ ರಾತ್ರಿ ಮೊಸರನ್ನಕ್ಕೆ ಹಾಲು ಬೆರೆಸಿ ಊಟ ಮಾಡುತ್ತಿದ್ದನೆ. ನಮ್ಮ ಹಿರಿಯರು ಯಾವುದಾದರೂ ಸಂಪ್ರದಾಯ ಹೇಳಿದರೆ ಖಂಡಿತ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇರುತ್ತದೆ ಎನ್ನುವುದು ಅರ್ಥವಾಯಿತು.
***
           ಇಂತಹ ಹಲವಾರು ಅನುಭವಗಳು ಆಗಿವೆ. ಇತ್ತೀಚೆಗೆ ಒಬ್ಬರನ್ನು ಭೇಟಿಯಾಗಿದ್ದೆ. ಅವರ ಬಳಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಸಿಡಿಟಿ ಕುರಿತು ಚರ್ಚೆ ಆರಂಭವಾಯಿತು. ಕೊನೆಗೆ ಅವರು ಹೇಳಿದ್ದು `ತಮಾ.. ನಮ್ಮಲ್ಲಿ ಹಿರಿಯರು ಊಟದ ಸಂದರ್ಭದಲ್ಲಿ ಸಾರು ಅಥವಾ ಸಾಂಬರ್ ಹಾಕ್ಯತ್ವಲಾ.. ಅದಕ್ಕೆಂತಕ್ಕೆ ತುಪ್ಪ ಎಣ್ಣೆ ಹಾಕ್ತ ಹೇಳು..' ಎಂದು ಕೇಳಿದರು. ನಾನು ಸುಮ್ಮನುಳಿದೆ. ಕೊನೆಗೆ ಅವರೇ ಮುಂದುವರಿದು `ಸಾಂಬಾರು ಅಥವಾ ಸಾರಿಗೆ ಎಣ್ಣೆ ಅಥವಾ ತುಪ್ಪ ಹಾಕಿಕೊಂಡರೆ ಎಸಿಡಿಟಿ ಆಗುವುದಿಲ್ಲ. ಅದೇ ಕಾರಣಕ್ಕೆ ಹಲಸಿನ ಹಣ್ಣಿನ ಕಡುಬು, ಉದ್ದಿನ ಇಡ್ಲಿಗಳಿಗೆಲ್ಲ ಎಣ್ಣೆ, ತುಪ್ಪ ಹಾಕುತ್ತಾರೆ.. ನೀ ಹಾಕ್ಯತ್ಯನಾ..?' ಎಂದು ಕೇಳಿದರು. ಇಲ್ಲವಲ್ಲ ಎಂದು ಉತ್ತರಿಸಿದೆ. ನಾಳಿಂದ ಹಾಂಗೆ ಮಾಡು.. ನಿಂಗೆ ಎಸಿಡಿಟಿ ಆಗ್ತಿಲ್ಲೆ.. ಎಸಿಡಿಟಿ ಸಮಸ್ಯೆಗಳಿದ್ದರೂ ಬಾಧಿಸ್ತಿಲ್ಲೆ.. ಎಂದರು. ನಾನು ಅಬ್ಬಾ ಹಿರಿಯರೆ ಎಂದುಕೊಂಡೆ. ಅವರ ಜ್ಞಾನಕ್ಕೆ ತಲೆದೋಗಿದೆ. ಈಗ ಸಾಂಬಾರು ಊಟದ ಸಂದರ್ಭದಲ್ಲಿ ಸಾಂಬಾರಿಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿಸಿಕೊಳ್ಳುತ್ತಿದ್ದೇನೆ.
***
         ಸಿಕ್ಕಾಪಟ್ಟೆ ತಲೆನೋವು. ಶೀತವಾಗಿರಲಿಲ್ಲ. ಆದರೆ ತಲೆ ಸಿಡಿತ ಮಾತ್ರ ಬಿಡುತ್ತಲೇ ಇರಲಿಲ್ಲ. ಬಿದ್ದು ಹೊಳ್ಳಾಡುವಷ್ಟು ತಲೆನೋವು. ಅಮ್ಮ ನೋಡಿದವಳೇ ಅದೇನೋ ಕಷಾಯ ಕೊಟ್ಟಳು, ಕೈಯಲ್ಲಿ ಆರ್ಕ್ಯೂಪ್ರೆಶರ್ ಮಾಡಿದಳು. ಅಷ್ಟೇ ಅಲ್ಲದೇ ತನಗೆ ಗೊತ್ತಿದ್ದ ಹಲವು ಔಷಧಿಗಳನ್ನು ಮಾಡಿದರೂ ತಲೆನೋವು ಕಡಿಮೆಯೇ ಆಗುತ್ತಿರಲಿಲ್ಲ. ತಲೆಯೇ ಸಿಡಿದುಹೋಗುತ್ತದೆಯೇನೋ ಎನ್ನುವಂತಾಗಿತ್ತು ನನಗೆ. ಗಂಟೆಗಳ ಕಾಲ ನಾನು ನೋವಿನಿಂದ ನರಳಾಡಿದೆ. ಕೊನೆಗೆ ಅದೆಲ್ಲಿ ಓದಿದ್ದಳೋ ಅಮ್ಮ, ದೊಡ್ಡದೊಂದು ನಿಂಬೆ ಕಾಯಿಯನ್ನು ಕೊಯ್ದು ಕಟ್ ಮಾಡಿ ಅದರ ರಸವನ್ನು ತೆಗೆದು ಕೊಬ್ಬರಿ ಎಣ್ಣೆಯ ಜೊತೆಗೆ ಸೇರಿಸಿ ತಲೆಗೆ ಹಾಕಿದಳು. ಅರೇ ಎರಡೇ ನಿಮಿಷದಲ್ಲಿ ತಲೆನೋವು ಮಾಯ..! ಏನಾಶ್ಚರ್ಯ. ಇದೆಂತಹ ಔಷಧಿ ಎಂದುಕೊಂಡು ಕೇಳಿದೆ. ತಲೆನೋವು ಅತಿಯಾಗಿ ಬಂದರೆ ಹೀಗೆ ಮಾಡಬೇಕು ಎಂದು ಹಿರಿಯರಿಂದ ಕೇಳಿದ್ದೆ. ಆದರೆ ನಾನು ಮಾಡಿರಲಿಲ್ಲ. ಈಗ ನಿನ್ನ ಮೇಲೆ ಪ್ರಯೋಗಿಸಿದೆ. ನೋಡು ತಕ್ಷಣಕ್ಕೆ ಕಡಿಮೆಯಾಯಿತು. ಎಂದಳು ಅಮ್ಮ. ಮತ್ತೊಮ್ಮೆ ಹಿರಿಯರಿಗೆ ಜಯವೆಂದೆ.
***
        ದೊಡ್ಡ ಹಬ್ಬ ದೀಪಾವಳಿಯಲ್ಲಿ ನಮ್ಮ ಕಡೆಯಲ್ಲಿ ಕೊನೆಯ ದಿನ ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯ ಆಚರಣೆ ಮಾಡುತ್ತಾರೆ. ಹಬ್ಬ ಕಳಿಸುವುದು ಎನ್ನುವ ಸಂಪ್ರದಾಯದ ಜೊತೆಗೆ ಉದ್ದನೆಯ ದಿಪ್ಪಳಿಗೆ ಕೋಲನ್ನು ಕಡಿದು ಅದಕ್ಕೆ ದೊಂದಿ ಮಾಡಿ ಬೆಂಕಿ ಕತ್ತಿಸಿ ನಮ್ಮ ನಮ್ಮ ಜಮೀನಿನ ಬಳಿ ಅದನ್ನು ಹುಗಿದು ದೊಡ್ಡದಾಗಿ ಜಾಗಟೆ ಬಡಿದು ಕೂಗಾಡಲಾಗುತ್ತದೆ. ತೀರಾ ಇತ್ತೀಚಿನ ದಿನಗಳ ವರೆಗೂ ನಾನು ಹಬ್ಬ ಕಳಿಸುವುದರ ಮಹತ್ವ ಅಥವಾ ಯಾಕೆ ಹೀಗೆ ಮಾಡುತ್ತಾರೆ ಎನ್ನುವುದನ್ನು ಅರಿತಿರಲಿಲ್ಲ. ಒಬ್ಬರು ಹೇಳಿದ್ದೆಂದರೆ ಹೀಗೆ ಮಾಡುವುದರಿಂದ ಬೆಂಕಿಯನ್ನು ಕಂಡು ನಮ್ಮ ಗದ್ದೆ, ತೋಟಗಳಿಗೆ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಹೆದರಿಸುತ್ತದೆ. ಬೆಳೆ ರಕ್ಷಣೆಯಾಗುತ್ತದೆ ಅಂತ. ಆಹಾ ಹಿರಿಯರೇ ನಿಮ್ಮ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಬಿಡಿ.

(ಮುಂದುವರಿಯುತ್ತದೆ)

Friday, August 15, 2014

ಮತ್ತಷ್ಟು ಹನಿಗಳು

ಭಿನ್ನತೆ

ನೀವು ಹದಿನಾಲ್ಕು ಗಂಟೆ ಕೆಲಸ ಮಾಡಿದರೆ
ನಾನು ಹದಿನೈದು ಗಂಟೆ ಕೆಲಸ ಮಾಡುತ್ತೇನೆ
ಎಂದರು ನರೇಂದ್ರ ಮೋದಿ |
ಅಯ್ಯೋ ಸುಮ್ಕಿರಿ ಸಾರ್.. ಆವಯ್ಯ ಏನೋ ಹೇಳ್ತಾನೆ..
ಹಾಗಂತ ನಾನು ಆರೋಗ್ಯ ಹಾಳ್ಮಾಡ್ಕಳಕಾಗಾಕಿಲ್ಲ ಆಆಆಆಆಆ...
ಎಂದು ಆಕಳಿಕೆ ತೆಗೆದರು ಸಿದ್ಧರಾಮಯ್ಯ..||

ವ್ಯತ್ಯಾಸ

ಮೋದಿ ಮಾಡಿದರೆ ಭಾಷಣ
ಮತ್ತೆ ಮತ್ತೆ ಅನ್ನಿಸುತ್ತದೆ ಕೇಳೋಣ
ಸಿದ್ದು ಮಾಡಿದರೆ ಭಾಷಣ
ಸಾಕ್ ಸುಮ್ನೆ ಹೋಗಣ್ಣ..!!

ವಾಟಾಳ್

ಕನ್ನಡ  ಕನ್ನಡ ಎಂದ ಕೂಡಲೇ
ನೆನಪಾಗುವ ಕಟ್ಟಾಳು
ಹೋರಾಟದ ವಾಟಾಳು |

ಎಂತ ವಿಪರ್ಯಾಸ?

ನಾವು ಇತ್ತ ಆಂಗ್ಲರ ವಿರುದ್ಧ
ಭಾರತ ಗೆದ್ದ ಸಂತಸ ಆಚರಿಸುತ್ತಿದ್ದರೆ
ಅತ್ತ ಇಂಗ್ಲೆಂಡಿನಲ್ಲಿ ಭಾರತ
ಆಂಗ್ಲರ ಎದುರು ಮಂಡಿಯೂರುತ್ತಿದೆ |

ವಾಲು-ಡೋಲು

ಭಾರತದಲ್ಲಿ
ಡಬ್ಬಲ್ ಸೆಂಚೂರಿ ಹೊಡೆದ
ಚೆತೇಶ್ವರ ಪೂಜಾರನಿಗೆಂದರು
ಮತ್ತೊಬ್ಬ ದಿ. ವಾಲು|
ಇಂಗ್ಲೆಂಡಿಗೆ ಹೋದ ನಂತರ
ಆತ ಆಗಿದ್ದಾನೆ
ತೂತಾದ ಡೋಲು ||

Thursday, August 14, 2014

ಗೋಲಾರಿ ವಯ್ಯಾರಿ

ಗುಡ್ಡದ ತುದಿಯಿಂದ ಹಾಲ್ನೊರೆಯುಕ್ಕಿದಂತೆ ಕಣಿವೆಯಾಳಕ್ಕೆ ಧುಮ್ಮುಕ್ಕುವ ಸೊಬಗು, ಅಕ್ಕ ಪಕ್ಕದ ಕಾನನದ ನಡುವಿನಿಂದ ಕಿವಿಯನ್ನು ಇಂಪಾಗಿ ತಟ್ಟುವ ಹಕ್ಕಿಗಳ ದನಿ, ಜೊತೆ ಜೊತೆಯಲ್ಲಿಯೇ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರ ಹರ್ಷದ ಕೇಕೆ. ಈ ಎಲ್ಲವುಗಳೂ ಮಿಳಿತವಾಗಿರುವುದು ಕಾರವಾರ ತಾಲೂಕಿನ ತೊಡೂರು ಗ್ರಾಮದ ಅರಣ್ಯ ಮಧ್ಯವಿರುವ ಗೋಲಾರಿ ಜಲಪಾತದಲ್ಲಿ.
ಒಂದೆಡೆ ತಲೆಯೆತ್ತಿ ನೋಡಿದರೂ ಕಾಣಿಸದ ಹಸಿರಿನಿಂದಾವೃತವಾದ ಕಡಿದಾದ ಗುಡ್ಡ. ಇನ್ನೊಂದೆಡೆ ಅರಣ್ಯ. ನಡುವೆ ಧೋ ಎಂದು ಅಬ್ಬರಿಸುತ್ತ ಸೊಬಗನ್ನು ಕಟ್ಟಿಕೊಡುವ ಗೋಲಾರಿ ಜಲಪಾತವನ್ನು ನೋಡುತ್ತಿದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಜಲಪಾತದ ಸುಂದರ ಚಿತ್ರಣವನ್ನು ಕಣ್ಣಲ್ಲಿ ಹಿಡಿದು ತುಂಬಿಕೊಳ್ಳಲು ಯತ್ನಿಸಿದಷ್ಟೂ ಎಲ್ಲಿ ಕಳೆದುಕೊಂಡು ಬಿಡುತ್ತೇವೆಯೋ ಎನ್ನುವ ದುಗುಡ ನೋಡುಗನನ್ನು ಆವರಿಸುತ್ತದೆ.
ಗೋಲಾರಿ ಜಲಪಾತ ವೀಕ್ಷಣೆಗೆ ಯಾವುದೇ ಸಮಯದ ತೊಂದರೆಯಿಲ್ಲ. ಬೇಸಿಗೆಯಿರಲಿ, ಮಳೆಗಾಲವಿರಲಿ ಅಥವಾ ಕೊರೆಯುವ ಚಳಿಗಾಲವಿರಲಿ ವರ್ಷದ ಎಲ್ಲ ಕಾಲದಲ್ಲಿಯೂ ದರ್ಶನ ಸಾಧ್ಯ. ಕಡು ಬೇಸಿಗೆಯಲ್ಲೂ ಜಲಪಾತದಲ್ಲಿ ಸಾಕಷ್ಟು ನೀರಿರುವ ಕಾರಣ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಬೆಟ್ಟದ ತುದಿಯಿಂದ ಸುಮಾರು 65 ಅಡಿ ಎತ್ತರದಿಂದ ಧುಮ್ಮಿಕ್ಕುವ ಗೋಲಾರಿ ಜಲಪಾತದ ಸದಾ ಕಾಲ ಜನಜಾತ್ರೆ ಸೇರಿರುತ್ತದೆ. ಚಾರಣ ಮಾಡುವರಿಗೆ, ವಾರದ ತುಂಬ ಬಿಡುವಿಲ್ಲದೇ ದುಡಿದು ವಾರಾಂತ್ಯದಲ್ಲಿ ಬದಲಾವಣೆ ಬಯಸುವವರಿಗೆ ಈ ಜಲಪಾತ ಹೇಳಿಮಾಡಿಸಿದ ತಾಣ.
ಜಲಪಾತಗಳ ಜಿಲ್ಲೆ ಎಂದು ಖ್ಯಾತಿಯನ್ನು ಗಳಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಜಲಪಾತಗಳಿವೆ. ಅವುಗಳಲ್ಲಿ ಹಲವು ಜಲಪಾತಗಳಿನ್ನೂ ಬೆಳಕಿಗೆ ಬಂದಿಲ್ಲ. ಗೋಲಾರಿ ಜಲಪಾತವನ್ನು ನೋಡಬೇಕೆಂದರೂ ಕೂಡ ಸ್ವಲ್ಪ ಮೈಕೈ ನೋಯಿಸಿಕೊಳ್ಳಲೇ ಬೇಕು. ತೊಡೂರ ಬಳಿಯ ಕಾನನದ ಮಧ್ಯದಿಂದ ಕಲ್ಲು ಬಂಡೆಗಳನ್ನು ಹತ್ತಿ, ಹಳ್ಳಗಳನ್ನು ಜಿಗಿಯುತ್ತಾ, ಗಿಡ ಗಂಟಿಗಳ ಮುಳ್ಳುಗಳ ನಡುವೆ ನುಸುಳುತ್ತ ಸಾಗಿದರೆ ದರ್ಶನ ಕೊಡುತ್ತಾಳೆ ಗೋಲಾರಿ. ಕೊಂಚ ಚಾರಣ ಮಾಡಿ ಆಗುವ ಆಯಾಸ ಜಲಪಾತ ವೀಕ್ಷಣೆಯಿಂದ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಮೈಮನಗಳಲ್ಲಿ ರೋಮಾಂಚನವನ್ನು ಹುಟ್ಟು ಹಾಕುವ ಗೋಲಾರಿ ಜಲಪಾತದ ಒಡಲಿನಲ್ಲಿ ಪ್ರವಾಸಿಗರು ಸ್ನಾನದ ಸುಖವನ್ನು ಅನುಭವಿಸುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದ ವೇಳೆಯಲ್ಲಿ ಅರಣ್ಯಪ್ರದೇಶದಲ್ಲಿ ಸುರಿಯುವ ಮಳೆ ಹಳ್ಳದ ಮೂಲಕ ಸಾಗಿ, ಭೀಮನಬುಗುರಿ ಹಾಗೂ ಸಾವನಾಳ ಎನ್ನುವ ಪ್ರದೇಶದಿಂದ ಹರಿದು ಬಂದು ಗೋಲಾರಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತಾಳೆ. ಹಳ್ಳ ಸಮುದ್ರ ಸೇರುವ ತವಕ ಜಲಪಾತದ ರೂಪದಲ್ಲಿ ಎದ್ದು ಕಾಣುತ್ತದೆ.
ಗೋಲಾರಿ ಜಲಪಾತ ಉತ್ತಮ ಪಿಕ್ನಿಕ್ ಸ್ಪಾಟ್. ಚಾರಣ ಪ್ರಿಯರಿಗಂತೂ ಹೇಳಿಮಾಡಿಸಿದಂತಹ ತಾಣ. ಈ ಕಾರಣದಿಂದಲೇ ಉತ್ತರ ಕನ್ನಡ ಜಿಲ್ಲೆಯಿಂದಲ್ಲದೇ ನೆರೆಯ ಗೋವಾ ರಾಜ್ಯ, ಉಡುಪಿ ಜಿಲ್ಲೆಯಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಮೈಮನಸ್ಸುಗಳಿಗೆ ಜಲಪಾತದ ನೀರನ್ನು ಒಡ್ಡಿಕೊಳ್ಳುವ ಮೂಲಕ ಖುಷಿಯನ್ನು ತುಂಬಿಕೊಂಡು ಕ್ರಿಯಾಶೀಲರಾಗಿ ಮರಳುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕೆಲವು ಕಟ್ಟುನಿಟ್ಟಿನ ಕೆಲಸಗಳೂ ಇವೆ. ಜಲಪಾತದ ಫಾಸಲೆಯಲ್ಲಿ ಪ್ಲಾಸ್ಟಿಕ್ ಎಸೆಯುವಂತಿಲ್ಲ. ಗಾಜಿನ ಬಾಟಲಿಗಳನ್ನು ಎಸೆಯುವುದೂ ನಿಶಿದ್ಧ. ಪ್ರಕೃತಿಯ ನಡುವೆ ಇರುವ ಜಲಪಾತದ ಸೌಂದರ್ಯವನ್ನು ತ್ಯಾಜ್ಯವನ್ನೆಸೆಯುವ ಮೂಲಕ ಹಾಳು ಮಾಡಬಾರದೆಂದು ಸ್ಥಳೀಯರು ಆಗ್ರಹಿಸುತ್ತಾರೆ. ಜಲಪಾತಕ್ಕೆ ತೆರಳುವವರು ಕುಡಿಯುವ ನೀರು, ಆಹಾರಗಳನ್ನು ಒಯ್ಯುವುದು ಕಡ್ಡಾಯ. ಮತ್ಯಾಕೆ ತಡ? ಒಮ್ಮೆ ಬಂದು ಜಲಪಾತದ ಸೌಂದರ್ಯವನ್ನು ಸವಿದು ಹೋಗಿ.
ಜಲಪಾತಕ್ಕೆ ಹೋಗುವ ಬಗೆ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ 17 ಕಿಮೀ ಅಂತರದಲ್ಲಿರುವ ತೋಡೂರು ಗ್ರಾಮಕ್ಕೆ ಸಾಗಬೇಕು. ಅಲ್ಲಿಂದ ಸುಮಾರು 4 ಕಿಮೀನಷ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ಇಲ್ಲಿಯವರೆಗೆ ವಾಹನಗಳು ತೆರಳುತ್ತವೆ. ಅವನ್ನು ಇಲ್ಲಿಯೇ ನಿಲ್ಲಿಸಿ ಸುಮಾರು 2-3 ಕಿಮೀ ಅರಣ್ಯ ಪ್ರದೇಶದಲ್ಲಿ ಕಲ್ಲು ಬಂಡೆಗಳನ್ನು ಹತ್ತಿಳಿಯುತ್ತಾ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನು ದಾಟುತ್ತಾ ಚಾರಣದ ಮೂಲಕ ಸಾಗಿದರೆ ಅಲ್ಲೇ ಸಿಗುತ್ತದೆ ಗೋಲಾರಿ ಫಾಲ್ಸ್ ದರ್ಶನ ಸಾಧ್ಯ. ಬೆಂಗಳೂರಿನಿಂದ ಆಗಮಿಸುವವರು ಶಿವಮೊಗ್ಗ-ಶಿರಸಿ ಮೂಲಕ ಅಥವಾ ಹುಬ್ಬಳ್ಳಿ-ಅಂಕೋಲಾ ಮೂಲಕ ತೊಡೂರಿಗೆ ಆಗಮಿಸಿ ಅಲ್ಲಿಂದ ಬರಬಹುದಾಗಿದೆ.

**
(ಈ ಲೇಖನ ಆ.14, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರುಕೇರಿಯಲ್ಲಿ ಪ್ರಕಟಗೊಂಡಿದೆ)
(ಈ ಲೇಖನಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ನೀಡಿದ ಅಚ್ಯುತಕುಮಾರ ಯಲ್ಲಾಪುರ ಅವರಿಗೂ ಧನ್ಯವಾದಗಳು)

Wednesday, August 13, 2014

ಬೆಂಗಾಲಿ ಸುಂದರಿ-21

(ಢಾಕಾ-ಅಶೂಲಿಯಾ ಹೆದ್ದಾರಿ ನಡುವೆ ಸಿಗುವ ನದಿಯಲ್ಲಿ ದೋಣಿಯ ಮೂಲಕ ಸಾಗುತ್ತಿರುವುದು)
         ಸಲೀಂ ಚಾಚಾನ ಮನೆಯಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಉಳಿದಕೊಂಡಿದ್ದು ನಾಲ್ಕೋ ಐದೋ ದಿನಗಳು ಅಷ್ಟೇ. ಸಲೀಂ ಚಾಚಾನ ಮನೆಯವರೆಲ್ಲ ಯಾವುದೋ ಜನ್ಮದ ನೆಂಟರೋ ಎನ್ನುವಷ್ಟು ಆಪ್ತರಾಗಿಬಿಟ್ಟಿದ್ದರು. ಅದ್ಯಾವ ಋಣಾನುಬಂಧವೋ ಏನೋ ಹಿಂದುಗಳೆಂದು ಗೊತ್ತಾದರೆ ಯಾವ ಕ್ಷಣದಲ್ಲಿ ದಾಳಿ ಮಾಡುತ್ತಾರೋ ಎನ್ನುವ ಭಯದ ನಡುವೆಯೂ ತಮ್ಮ ದೇಶದಲ್ಲಿ ಬದುಕಲು ಆಶ್ರಯ ಕೊಟ್ಟಿದ್ದರು. ತಮ್ಮದೇ ಮಕ್ಕಳೇನೋ ಎನ್ನುವಂತೆ ಸಲಹಿದ್ದರು. ಸುರಕ್ಷಿತ ಜಾಗಕ್ಕೆ ತಮ್ಮನ್ನು ಕಳಿಸಲೋಸುಗ ತಮ್ಮ ಪ್ರಾಣವನ್ನೇ ಒತ್ತಯಿಟ್ಟು ಕೆಲಸ ನಿರ್ವಹಿಸಿದ್ದರು. ಬಹುಶಃ ಸಲೀಂ ಚಾಚಾನ ಮನೆಯಲ್ಲಿ ಇಬ್ಬರು ಹಿಂದೂಗಳು ಆಶ್ರಯ ಪಡೆದಿದ್ದಾರೆ ಎಂದು ಹಿಂಸಾವಾದಿಗಳಿಗೆ ಗೊತ್ತಾಗಿದ್ದರೆ ಸಲೀಂ ಚಾಚಾನ ಕುಟುಂಬವೂ ಅಪಾಯಕ್ಕೆ ಈಡಾಗುತ್ತಿತ್ತು. ಆದರೆ ಅಂತಹ ಅಪಾಯವನ್ನು ಲೆಕ್ಕಿಸದೇ ತಮ್ಮ ಜೊತೆಗೆ ನಿಂತಿದ್ದ ಚಾಚಾನ ಕುಟುಂಬದ ಬಗ್ಗೆ ಇಬ್ಬರಲ್ಲೂ ಅಭಿಮಾನ ಮೂಡಿತು. ಅವರಿದ್ದ ಜಾಗದಿಂದ ಆಚೆಯ ಜಗತ್ತು ಉರಿದು ಬೀಳುತ್ತಿದ್ದರೂ ಕೂಡ ತಮ್ಮ ಕೂದಲೂ ಕೊಂಕದಂತೆ ಕಾಪಾಡಿದ್ದರು. ಪ್ರೀತಿಯನ್ನು ನೀಡಿದ್ದರು. ಮಧುಮಿತಾಳಂತೂ ತಂದೆ ತಾಯಿಗಳನ್ನು ಅರೆಕ್ಷಣದಲ್ಲಿ ಕಳೆದುಕೊಂಡು ಚಾಚಾನ ಮನೆಗೆ ಬಂದಿದ್ದಳು. ತಂದೆ-ತಾಯಿ-ಬಂಧು-ಬಳಗ ಕಳೆದುಹೋದ ಕಹಿ ನೆನಪು ಮಧುಮಿತಾಳನ್ನು ಕಾಡದಂತೆ ನೋಡಿಕೊಂಡಿದ್ದರು ಚಾಚಾನ ಕುಟುಂಬ. ಚಾಚಾನ ಕುಟುಂಬದ ಇಂತಹ ಕಾರ್ಯಕ್ಕೆ ಎಷ್ಟು ಋಣ ಸಂದಾಯ ಮಾಡಿದರೂ ಸಾಲದು ಎಂದುಕೊಂಡ ವಿನಯಚಂದ್ರ.
            ಅದೊಂದು ಸಂಜೆ ಸಲೀಂ ಚಾಚಾ ಭಾರತದ ಕಡೆಗೆ ತೆರಳುವ ಸಮಯ ಸನಿಹವಾಯ್ತು ಎಂದು ಘೋಷಿಸಿದರು. ಕೊನೆಯ ತಯಾರಿಗಳೆಲ್ಲ ಪೂರ್ಣಗೊಂಡಿದ್ದವು. ಚಾಚಾನ ಮನೆಯ ಸದಸ್ಯರುಗಳೆಲ್ಲ ತಮ್ಮ ಮನೆಯ ಜನರೇ ತಮ್ಮಿಂದ ದೂರವಾಗುತ್ತಿದ್ದಾರೋ ಎನ್ನುವಂತೆ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮಧುಮಿತಾ ಹಾಗೂ ವಿನಯಚಂದ್ರನನ್ನು ಕಳಿಸಿಕೊಡಲು ತಯಾರಾಗಿದ್ದರು. ಮಧುಮಿತಾಳ ಕಣ್ಣಿನಲ್ಲೂ ನೀರಿತ್ತು. ವಿನಯಚಂದ್ರ ಸುಮ್ಮನೆ ನೋಡುತ್ತಿದ್ದ. ಹೊರಗೆ ಸಂಪೂರ್ಣ ಕತ್ತಲಾಗಿತ್ತು. ಮಧುಮಿತಾ ಸಲೀಂ ಚಾಚಾನ ಮನೆಯ ಹಿರಿಯರಿಗೆಲ್ಲ ನಮಸ್ಕರಿಸಿ ಹೊರಡಲು ಅನುವಾದಳು. ವಿನಯಚಂದ್ರ ಎಲ್ಲರಿಗೂ ಕಣ್ಣಲ್ಲಿಯೇ ಕೃತಜ್ಞತೆಗಳನ್ನು ಹೇಳಿದ್ದ.
             ಹಿಂಸಾ ಪೀಡಿತ ಬಾಂಗ್ಲಾ ನಾಡಿನಲ್ಲಿ ಹಗಲು ಪ್ರಯಾಣಕ್ಕಿಂತ ರಾತ್ರಿ ಪ್ರಯಾಣ ಸುರಕ್ಷಿತ ಎಂದು ಆಲೋಚಿಸಿದ್ದ ಸಲೀಂ ಚಾಚಾ ಅದೇ ಕಾರಣಕ್ಕಾಗಿಯೇ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ್ದ. ರಾತ್ರಿಯಾಗುತ್ತಲೇ ಹೊರಟು ಬೆಳಕು ಮೂಡುವ ವರೆಗೂ ಪ್ರಯಾಣ ಮಾಡಬೇಕಿತ್ತು. ಬೆಳಿಗ್ಗೆ ಸುರಕ್ಷಿತ ಜಾಗವನ್ನು ಹಿಡಿದು ಉಳಿದುಕೊಳ್ಳಬೇಕಿತ್ತು. ಯಾರಿಗೂ ತಾವು ಹಿಂದುಗಳೆಂದು ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರ ಹಾಗೂ ಮಧುಮಿತಾ ತಮ್ಮ ಚಹರೆಯನ್ನು ಬದಲಿಸಿಕೊಂಡಿದ್ದರು. ವಿನಯಚಂದ್ರ ತನ್ನನ್ನು ಅಹಮದ್ ಎಂದೂ ಮಧುಮಿತಾ ತನ್ನನ್ನು ರಜಿಯಾ ಎಂದೂ ಕರೆದುಕೊಂಡಿದ್ದರು. ಭಾರತದ ಗಡಿಯೊಳಗೆ ಹೋಗುವ ವರೆಗೂ ಈ ಹೆಸರಿನಲ್ಲಿಯೇ ತಮ್ಮನ್ನು ಎಲ್ಲರಿಗೂ ಪರಿಚಯ ಮಾಡಿಕೊಳ್ಳಬೇಕೆಂದು ಚಾಚಾ ಕಟ್ಟು ನಿಟ್ಟಾಗಿ ತಿಳಿಸಿದ್ದ. ಅಲ್ಲದೇ ಭಾರತದ ಗಡಿಯ ವರೆಗೆ ತಾನೂ ಬಂದು ಹೋಗುತ್ತೇನೆಂದು ಹೇಳಿದ್ದ.
                ವಿನಯಚಂದ್ರ ಸಲೀಂ ಚಾಚಾನ ಬಳಿ `ಚಾಚಾ.. ನಾವು ತೊಂದರೆಯಿಲ್ಲದೇ ತಲುಪುತ್ತೇವೆ. ನೀವು ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ..' ಎಂದು ಹೇಳಿದರೂ ಕೇಳದೇ `ನಿಮ್ಮನ್ನು ಭಾರತದ ಗಡಿಯವರೆಗೆ ಸುರಕ್ಷಿತವಾಗಿ ತಲುಪಿಸುವ ಹೊಣೆ ನನ್ನದು. ನೀನು ಎಷ್ಟೇ ಬೇಡ ಎಂದರೂ ನಾನು ಬಂದೇ ಬರುತ್ತೇನೆ..ಸುಮ್ಮನೆ ಹೊರಡಿ' ಎಂದು ಪಟ್ಟಾಗಿ ಹೇಳಿದ್ದರು. ವಿನಯಚಂದ್ರ ಸುಮ್ಮನುಳಿದಿದ್ದ.
             ಕೆಲವರೇ ಹಾಗೆ ಹಚ್ಚಿಕೊಂಡರೆ ಮುಗಿಯಿತು. ಏನು ಮಾಡಿದರೂ ಬಿಡುವುದಿಲ್ಲ. ಹಾದಿ ತಪ್ಪುವ ಸಂದರ್ಭದಲ್ಲೆಲ್ಲ ಜೊತೆ ನಿಂತು ದಡ ಮುಟ್ಟಿಸುವ ಕೆಲಸವನ್ನು ಮಾಡುತ್ತಾರೆ. ಅಂತವರಲ್ಲೊಬ್ಬ ಸಲೀಂ ಚಾಚಾ. ಸರಿಯಾಗಿ ಕತ್ತಲಾದ ನಂತರ ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ. ಹೊರ ಬಂದವನೇ ಆಚೆ ಈಚೆ ನೋಡಿ ಯಾರಿಗೂ ಅನುಮಾನ ಬಾರದಂತೆ ಕೆಲಸ ನಿರ್ವಹಿಸಿದ. ತನ್ನದೇ ಸೈಕಲ್ ರಿಕ್ಷಾದ ಮೂಲಕ ಹೊರಡಿಸಿದ ಸಲೀಂ ಚಾಚಾ. ತಮ್ಮ ತಮ್ಮ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡಿದ್ದ ವಿನಯಚಂದ್ರ, ಮಧುಮಿತಾ ಸಲೀಂ ಚಾಚಾನ ಸೈಕಲ್ಲನ್ನೇರಿದರು. ಕತ್ತಲೆಯಲ್ಲಿಯೇ ಬೇಗ ಬೇಗನೆ ಸೈಕಲ್ ತುಳಿಯಲು ಆರಂಭಿಸಿದ. ಸಲೀಂ ಚಾಚಾನಲ್ಲಿ ಎಲ್ಲಿ ಅಡಗಿತ್ತೋ ದೈತ್ಯಶಕ್ತಿ. ದಿನದಿಂದ ದಿನಕ್ಕೆ ಯುವ ಹುಮ್ಮಸ್ಸು ಆತನಲ್ಲಿ ಮನೆ ಮಾಡುತ್ತಿದೆಯೇನೋ ಎನ್ನಿಸಿತ್ತು. ಇಳಿದನಿಯಲ್ಲಿ ಮಾತನಾಡುತ್ತ, ಬಹುಹೊತ್ತು ಮಾತಿಲ್ಲದೇ ಪಯಣ ಮುಂದಕ್ಕೆ ಸಾಗಿತು.
                 ಅಪಾಯದ ಪರಿಸ್ಥಿತಿಯಿರುವ ಕಾರಣ ಸಾಧ್ಯವಾದಷ್ಟೂ ಒಳ ರಸ್ತೆಯನ್ನು ಬಳಕೆ ಮಾಡಬೇಕಾಗಿತ್ತು. ಜೊತೆ ಜೊತೆಯಲ್ಲಿ ಸಾಕಷ್ಟು ಸುತ್ತುಬಳಸಿನ ಮಾರ್ಗದಲ್ಲಿಯೂ ಪ್ರಯಾಣ ಮಾಡಬೇಕಾಗಿ ಬಂದಿತು. ಯಾಕೋ ಮೊದಲ ಬಾರಿಗೆ ಸಲೀಂ ಚಾಚಾನಿಗೆ ಢಾಕಾದ ಬೀದಿಗಳು ಬಹು ವಿಸ್ತಾರವಾಗಿದೆಯೇನೋ ಎನ್ನಿಸಿತು. ಎಷ್ಟು ಸೈಕಲ್ ತುಳಿದರೂ ಢಾಕಾ ಮುಗಿಯುತ್ತಲೇ ಇಲ್ಲವಲ್ಲ ಎಂದೂ ಅನ್ನಿಸತೊಡಗಿತ್ತು. ಬೀದಿ ಬೀದಿಗಳಲ್ಲೆಲ್ಲ ಪೊಲೀಸ್ ಬ್ಯಾರಿಕೇಡ್ ಗಳು, ನಾಕಾಬಂದಿಗಳಿದ್ದವು. ಅಲ್ಲಲ್ಲಿ ಪೊಲೀಸರು ನಿಂತು ಪಹರೆ ಕಾಯುತ್ತಿದ್ದರು. ಅವರ ಕೈಯಲ್ಲಂತೂ ಕೊಲ್ಲುವ ಬಂದೂಕುಗಳು ಲೋಡಾಗಿ ಕಾಯುತ್ತಿದ್ದವು. ಹಿಂಸಾಚಾರಿ ಕಂಡರೆ ಸಾಕು ಬೇಟೆಯಾಡುವ ದಾಹವನ್ನು ಆ ಬಂದೂಕುಗಳು ಹೊಂದಿದ್ದಂತೆ ಕಾಣಿಸಿತು.
            ದಾರಿಯಲ್ಲಿ ಹಲವಾರು ಕಡೆಗಳಲ್ಲಿ ಪೊಲೀಸರು ಕಾಣಿಸಿದ್ದರೂ ಯಾರೊಬ್ಬರೂ ಇವರನ್ನು ತಡೆಯಲಿಲ್ಲ. ಢಾಕಾದಿಂದ ಇನ್ನೇನು ಹೊರಗೆ ಹೋಗಬೇಕು ಎನ್ನುವಂತಹ ಸಮಯದಲ್ಲಿ ಒಂದು ಕಡೆಯಲ್ಲಿ ಪೊಲೀಸ್ ತನಿಖಾ ಠಾಣೆಯಲ್ಲಿ ಸಲೀಂ ಚಾಚಾ ತುಳಿಯುತ್ತಿದ್ದ ಸೈಕಲ್ ರಿಕ್ಷಾವನ್ನು ತಡೆದು ನಿಲ್ಲಿಸಿಯೇ ಬಿಟ್ಟರು. ವಿನಯಚಂದ್ರ ಕೊಂಚ ಗಾಬರಿಗೊಂಡಿದ್ದ. ಮಧುಮಿತಾ ಕೂಡ ಗಾಬರಿಯಲ್ಲಿಯೇ ಇದ್ದಳು. ಆದರೆ ಸಲೀಂ ಚಾಚಾ ತಣ್ಣಗೆ ಕುಳಿತಿದ್ದ. ಹತ್ತಿರ ಬಂದ ಪೊಲೀಸನೊಬ್ಬ ಸೈಕಲ್ ರಿಕ್ಷಾವನ್ನು ಹಿಡಿದು `ಯಾರು ನೀವು..? ಎಲ್ಲಿಗೆ ಹೊರಟಿದ್ದೀರಿ..?' ಎಂದು ಗಡುಸಾಗಿ ಪ್ರಶ್ನಿಸಿದ. ಅದಕ್ಕೆ ಪ್ರತಿಯಾಗಿ ಸಲೀಂ ಚಾಚಾ ತಣ್ಣಗೆ ಉತ್ತರಿಸಿದ. ಆದರೆ ಪೊಲೀಸನಿಗೆ ಏನೋ ತೃಪ್ತಿಯಾದಂತೆ ಕಾಣಲಿಲ್ಲ. ಸೀದಾ ಸೈಕಲ್ಲಿನ ಹಿಂದಿನ ಸೀಟಿನತ್ತ ಬಂದು ಅದರಲ್ಲಿ ಕುಳಿತಿದ್ದ ವಿನಯಚಂದ್ರನ ಬಳಿ `ನಿನ್ನ ಹೆಸರೇನು..?' ಎಂದು ಗಡುಸಾಗಿಯೇ ಕೇಳಿದ್ದ.
           ಪೊಲೀಸಿನವನ ಗಡುಸು ಉತ್ತರಕ್ಕೆ ಒಮ್ಮೆ ಬೆದರಿದ ವಿನಯಚಂದ್ರನಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ಸಲೀಂ ಚಾಚಾ ಅದೇನೋ ತನ್ನ ಹೆಸರನ್ನು ಬದಲಾಯಿಸಿದ್ದ. ಆದರೆ ಆ ಹೆಸರು ನೆನಪಾಗಲೇ ಇಲ್ಲ. ಒಮ್ಮೆ ತಲೆ ಕೊಡವಿಕೊಂಡು ಆಲೋಚನೆ ಮಾಡಿದರೂ ಹೆಸರು ಮಾತ್ರ ನೆನಪಾಗಲಿಲ್ಲ. ಇದರಿಂದ ಮತ್ತಷ್ಟು ಭಯಗೊಂಡ ವಿನಯಚಂದ್ರ `ಬ್ಬೆ ಬ್ಬೆ ಬ್ಬೆ..' ಎಂದು ತೊದಲಿದ. ಒಮ್ಮೆ ಮಧುಮಿತಾಳನ್ನೂ ಇನ್ನೊಮ್ಮೆ ಸಲೀಂ ಚಾಚಾ ನನ್ನೂ ನೋಡಲಾರಂಭಿಸಿದ. ಇನ್ನು ಸುಮ್ಮನುಳಿದರೆ ಕುತ್ತಿಗೆಗೆ ಬರುತ್ತದೆ ಎಂದು ತಿಳಿದ ಸಲೀಂ ಚಾಚಾನೇ `ಅಹಮದ್..' ಎಂಬುದು ಆತನ ಹೆಸರು. ಅವನಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ.' ಎಂದು ಬಿಟ್ಟ. ಪೊಲೀಸಿನವನಿಗೆ ಅದೇನೆನ್ನಿಸಿತೋ `ಠೀಕ್ ಹೈ..' ಎಂದು ವಾಪಸಾದ. ವಿನಯಚಂದ್ರನಿಗೆ ಹೋದ ಜೀವ ಮರಳಿದಂತಾಯಿತು.
              ಪೊಲೀಸಿನವನು ಅತ್ತ ಹೋಗುತ್ತಿದ್ದಂತೆಯೇ  ಸಲೀಂ ಚಾಚಾ `ಯಾಕ್ ಬೇಟಾ..? ಏನಾಯ್ತು? ಬಹಳ ಹೆದರಿ ಬಿಟ್ಟೆಯಾ?' ಎಂದು ಕೇಳಿದರು. ವಿನಯಚಂದ್ರ ಮಾತಾಡಲಿಲ್ಲ. ಸಲೀಂ ಚಾಚಾನೇ ಮುಂದುವರಿದು `ಅಬ್ಬ.. ಮಾತನಾಡದೇ ಇದ್ದರೆ ತೊಂದರೆಯಿಲ್ಲ. ಆದರೆ ಭಯದಲ್ಲಿ ಏನಾದರೂ ಬಾಯಿ ಬಿಟ್ಟಿದ್ದರೆ ಬಹಳ ತೊಂದರೆಯಾಗುತ್ತಿತ್ತು ನೋಡು. ಅಲ್ಲಾಹುವಿನ ದಯೆ.. ಹಾಗಾಗಲಿಲ್ಲ..' ಎಂದವನೇ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ.
         ಕೆಲ ಹೊತ್ತಿನಲ್ಲಿಯೇ ಢಾಕಾದ ಕೊನೆಯ ಪ್ರದೇಶವಾದ `ಉತ್ತರಾ' ಎಂಬಲ್ಲಿಗೆ ಸೈಕಲ್ ಸವಾರಿ ಬಂದು ತಲುಪಿತು. ಪಕ್ಕದ ಟೋಂಗಿ ಎಂಬ ಪ್ರದೇಶವನ್ನು ಹಾದು ಬೆಳಗಾಗುವ ವೇಳೆಗೆ ಅಶೂಲಿಯಾ ಎನ್ನುವ ಪ್ರದೇಶವನ್ನು ತಲುಪಬೇಕೆಂಬುದು ಸಲೀಂ ಚಾಚಾನ ನಿರ್ಧಾರವಾಗಿತ್ತು. ರಾತ್ರಿಯಾದಂತೆಲ್ಲ ಢಾಕಾದ ನಗರಿಯ ಬೆಳಕು ಕಡಿಮೆಯಾಗತೊಡಗಿತು. ರಸ್ತೆಯಲ್ಲಿ ವಾಹನ ಸಂಚಾರವೇ ಇರಲಿಲ್ಲ. ಆಗೀಗ ಅಲ್ಲೊಂದು ಇಲ್ಲೊಂದು ವಾಹನಗಳು ರೊಯ್ಯನೆ ಹಾದು ಹೋಗುತ್ತಿದ್ದುದನ್ನು ಬಿಟ್ಟರೆ ಬಹುತೇಕ ದಾರಿ ನಿರ್ಜನವಾಗಿತ್ತು. ಸೈಕಲ್ ಮೇಲೆ ಮಧುಮಿತಾ ಆಗಲೇ ನಿದ್ದಗೆ ಜಾರಿಬಿಟ್ಟಿದ್ದಳು. ವಿನಯಚಂದ್ರ ಹಾಗೂ ಸಲೀಂ ಚಾಚಾ ಪಿಸು ದನಿಯಲ್ಲಿ ಮಾತನಾಡುತ್ತಾ ಮುಂದಕ್ಕೆ ಸಾಗುತ್ತಿದ್ದರು. ಮತ್ತೊಂದು ಅರ್ಧಗಂಟೆಯ ನಂತರ ಒಳದಾರಿಯನ್ನು ಬಿಟ್ಟು ಢಾಕಾ-ಅಶೂಲಿಯಾ ಹೆದ್ದಾರಿಯಲ್ಲಿ ಸಾಗುವ ಅನಿವಾರ್ಯತೆ ಉಂಟಾಯಿತು. ಸಲೀಂ ಚಾಚಾ ಅತ್ತ ತನ್ನ ಸೈಕಲ್ಲನ್ನು ತಿರುಗಿಸಿದ. ಹೆದ್ದಾರಿ ಕೂಡ ನಿರ್ಜನವಾಗಿತ್ತು. ಹೆದ್ದಾರಿಯ ಆರಂಭದಲ್ಲಿಯೇ ನದಿಯೊಂದು ಹರಿದಿತ್ತು. ಅದನ್ನು ದಾಟುವ ವೇಳೆಗಂತೂ ಚಳಿ ಗಾಳಿ ಬೀಸಿ ಬೀಸಿ ಬರಲಾರಂಭಿಸಿತು. ನದಿಯ ಮೇಲಿಂದ ಹಾದು ಬಂದ ತಂಗಾಳಿ ಮೈಯನ್ನು ಕೊರೆಯುತ್ತಿದೆಯೇನೋ ಅನ್ನಿಸಿತು. ನಿದ್ರೆ ಮಾಡುತ್ತಿದ್ದ ಮಧುಮಿತಾಳ ಮೇಲೆ ವಿನಯಚಂದ್ರ ಚಾದರವೊಂದನ್ನು ಹಾಕಿದ. ನಿದ್ದೆಗಣ್ಣಿನಲ್ಲಿಯೇ ಮಧುಮಿತಾ ಖುಷಿಪಟ್ಟಂತಾಯಿತು.
              ಢಾಕಾ-ಅಶೂಲಿಯಾ ರಸ್ತೆಯ ನಡುವಿನ ಗದ್ದೆ ಬಯಲುಗಳು ಕತ್ತಲೆಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದವು. ಆಕಾಶದ ಮಬ್ಬು ಬೆಳಕಿನಲ್ಲಿ ಗದ್ದೆಯ ಬಯಲುಗಳು, ಬಯಲಿನಾಚೆಯಲ್ಲಿ ಹರಿಯುತ್ತಿದ್ದ ನದಿಯೂ ವಿಚಿತ್ರವಾಗಿ ಕಾಣುತ್ತಿತ್ತು. ನೆಟ್ಟನೆ ರಸ್ತೆಯಲ್ಲಿ ಮೌನವಾಗಿ ಪ್ರಯಾಣ ಮಾಡುವುದು ಯಾಕೋ ಅಸಹನೀಯ ಎನ್ನಿಸುತ್ತಿತ್ತು. ಸಲೀಂ ಚಾಚಾನ ಜೊತೆಗೆ ಮಾತಾಡೋಣವೇ ಎಂದುಕೊಂಡರೂ ಮತ್ತಿನ್ನೇನಾದರೂ ಅಪಾಯ ಎದುರಾದರೆ ಎಂದುಕೊಂಡು ಸುಮ್ಮನಾದ ವಿನಯಚಂದ್ರ.
                  `ಚಾಚಾ.. ನಾನು ಸೈಕಲ್ ತುಳಿಯುತ್ತೇನೆ.. ಇಲ್ಲ ಅನ್ಬೇಡ ಪ್ಲೀಸ್..' ಕೊನೆಗೊಮ್ಮೆ ಅಸಹನೀಯ ಮೌನವನ್ನು ಬೇಧಿಸಿ ವಿನಯಚಂದ್ರ ಮಾತಾಡಿದ್ದ. ಚಾಚಾನಿಗೂ ಸೈಕಲ್ ತುಳಿದು ಸುಸ್ತಾಗಿತ್ತೇನೋ ಸೈಕಲ್ ತುಳಿಯಲು ಕೊಟ್ಟ. ವಿನಯಚಂದ್ರ ಹುಮ್ಮಸ್ಸಿನಿಂದ ಸೈಕಲ್ ತುಳಿಯುತ್ತಿದ್ದರೆ ಸಲೀಮ ಚಾಚಾ ಪಕ್ಕದ ಗದ್ದೆ ಬಯಲನ್ನು ತೋರಿಸುತ್ತಾ `ಬೇಟಾ ಈ ಗದ್ದೆ ಬಯಲುಗಳಿವೆಯಲ್ಲ ಇವುಗಳ ಹಿಂದೆ ಅದೆಷ್ಟೋ ಕ್ರೂರ ಕಥೆಗಳಿವೆ. ಕೇಳುತ್ತ ಹೋದರೆ ಕಣ್ಣೀರು ಬರುತ್ತದೆ.. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಬ್ರಿಟೀಷರ ಆಕ್ರಮಣ, ಪದೇ ಪದೆ ನಡೆಯುತ್ತಿದ್ದ ಯುದ್ಧಗಳು, ಪಾಕಿಸ್ತಾನ ಬಾಂಗ್ಲಾ ಮೇಲೆ ಬೆನ್ನತ್ತಿ ಬಂದು ಇಲ್ಲಿನ ನೇತಾರರನ್ನು ಕೊಂದಿದ್ದು ಇದೇ ವಿಶಾಲ ಗದ್ದೆ ಬಯಲಿನಲ್ಲಿ ಎಂದ ಚಾಚಾ ಕೆಲಕಾಲ ಸುಮ್ಮನಾದ.
            ಚಾಚಾನಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ದಿನಗಳು ನೆನಪಾಗಿರಬೇಕು ಎಂದುಕೊಂಡ ವಿನಯಚಂದ್ರ. ಚಾಚಾ ಮುಂದುವರಿಸಿದ `ಪಾಕಿಸ್ತಾನ ತನ್ನದೇ ಭಾಗದ ನಾಡಾಗಿದ್ದರೂ ಮಿಲಿಟರಿ ಕಳಿಸಿ ದಾಳಿ ಮಾಡಿತಲ್ಲ. ಆಗ ನಾವು ನಲುಗಿದ್ದೇನು ಕಡಿಮೆಯೇ? ನಮ್ಮ ಈ ನಾಡಿನ ಹೆಣ್ಣುಮಕ್ಕಳನ್ನು ಎಳೆದೆಳೆದು ಅತ್ಯಾಚಾರ ಮಾಡುತ್ತಿದ್ದರೆ ನಾವು ಕುದ್ದು ಹೋಗಿದ್ದೆವು. ಆದರೆ ನಮ್ಮಲ್ಲಿ ಆಯುಧವಿರಲಿಲ್ಲ. ಮಾರಕ ಆಯುಧಗಳನ್ನು ಹೊಂದಿದ್ದ ಪಾಕಿಸ್ತಾನಿ ಯೋಧರು ರಣಕೇಕೆ ಹಾಕಿ ನಮ್ಮವರನ್ನು ಕೊಲ್ಲುತ್ತಿದ್ದರೆ ನಾವು ನಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿದ್ದೆವು. ರಕ್ಷಣೆಗೆ ಯಾರನ್ನು ಯಾಚಿಸುವುದು? ಎಲ್ಲಿ ಓಡುವುದು? ನಮ್ಮವರಲ್ಲಿ ಲಕ್ಷಾಂತರ ಜನರು ಭಾರತಕ್ಕೆ ಓಡಿ ಹೋದರು. ನಿಮ್ಮ ಭಾರತಕ್ಕೆ ನಿರಾಶ್ರಿತರ ಸಮಸ್ಯೆ ತಟ್ಟಿದಾಗಲೇ ನಿಮ್ಮ ಐರನ್ ಲೇಡಿ ಇಂದಿರಾಗಾಂಧಿ ಗುಟುರು ಹಾಕಿದ್ದು. ಅಬ್ಬಾ ಎಂತಾ ಹೆಂಗಸು ಆಕೆ. ಅದೆಷ್ಟು ಗಟ್ಟಿಗಿತ್ತಿ. ಗುಟುರು ಹಾಕಿದ್ದಷ್ಟೇ ಅಲ್ಲ. ಯುದ್ಧ ಸಾರಿ ಮಿಲಿಟರಿಯನ್ನು ಕಳಿಸಿ ಪಾಕಿಸ್ತಾನದ ಸೈನ್ಯವನ್ನು ಬಗ್ಗು ಬಡಿಯಿತಲ್ಲ. ಆ ಸಂದರ್ಭದಲ್ಲಿ ಬಾಂಗ್ಲೋದಯವಾಗಿದ್ದು. ಈಗಲೂ ನಮ್ಮಲ್ಲಿ ಶೇಖ್ ಮುಜೀಬುರ್ ರೆಹಮಾನ್ ರನ್ನು ನೆನೆಯುವಷ್ಟೇ ಇಂದಿರಾ ಗಾಂಧಿಯನ್ನೂ ನೆನೆಯುವವರೂ ಇದ್ದಾರೆ. ಆಕೆಯ ಮಿಲಿಟರಿ ಸೈನ್ಯದ ಎದುರು ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಶರಣಾದರಲ್ಲ ಆಗ ನಾವೆಲ್ಲ ಚಪ್ಪಾಳೆ ಹೊಡೆದು ಸಂತೋಷ ಪಟ್ಟಿದ್ದೆವು. ಇಂತಹ ಹಲವಾರು ಘಟನೆಗಳು ಈ ಗದ್ದೆ ಬಯಲಿನಲ್ಲಿ ಜರುಗಿದೆ. ಇಂತಹ ಗದ್ದೆ ಬಯಲು ಬೇಸಿಗೆ ಹಾಗೂ ಚಳಿಗಾಲದಲ್ಲಿ ಭತ್ತದ ಕಣಜಗಳಾಗುತ್ತವೆ. ಆದರೆ ಮಳೆಗಾಲದಲ್ಲಿ ಮಾತ್ರ ಬ್ರಹ್ಮಪುತ್ರ ನದಿ ನೂರಾರು ಕಿ.ಮಿ ಅಗಲವಾಗಿ ಹರಿದು ಈ ಗದ್ದೆ ಬಯಲನ್ನು ಮುಳುಗಿಸಿ ಬಿಡುತ್ತದೆ. ಮಳೆಗಾಲವೆಂದರೆ ಇಲ್ಲಿ ನರಕ..'
           `ಈಗ ನೀನು ಆಚೀಚೆ ನೋಡಿದರೆ ಕತ್ತಲೇ ಕಾಣುತ್ತದೆ. ಆದರೆ ಈ ಸಮಯದಲ್ಲಿ ಅಲ್ಲೆಲ್ಲ ಭತ್ತದ ಬೆಳೆ ತುಂಬಿ ನಿಂತಿದೆ. ಈ ಭತ್ತದ ಗದ್ದೆಯ ನಡುವೆ ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆ ರಕ್ಷಣೆಗೆ ನಿಂತಿರುತ್ತಾರೆ. ಹಗಲಿನಲ್ಲಿ ಈ ದೃಶ್ಯ ನಿನಗೆ ಬಹಳ ರೋಮಾಂಚನವನ್ನು ನೀಡುತ್ತದೆ. ಬಾಂಗ್ಲಾ ರೈತರ ಜೀವನಾಧಾರವೇ ಈ ಗದ್ದೆ ಬಯಲುಗಳು. ಇಲ್ಲೂ ಕೂಡ ಜಮೀನ್ದಾರಿ ಪದ್ಧತಿ ಇದೆ. ಒಬ್ಬ ಜಮೀನ್ದಾರ ಸಾವಿರಾರು ಎಕರೆ ಇಟ್ಟುಕೊಂಡು ನೂರಾರು ರೈತರನ್ನು ಶೋಷಿಸುತ್ತಿರುತ್ತಾನೆ. ಇಲ್ಲಿ ಬೆಳೆ ರಕ್ಷಣೆಗೆ ನಿಂತಿರುವ ರೈತರು ತಮ್ಮ ಜಮೀನನ್ನೇ ರಕ್ಷಣೆ ಮಾಡುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರು ರಕ್ಷಿಸುವ ಜಮೀನು ಅವರ ಜಮೀನುದಾರರದ್ದೂ ಆಗಿರುತ್ತದೆ. ತಲೆ ತಲಾಂತರದ ಜೀತದ ಪದ್ಧತಿ ಈಗಲೂ ಜೀವಂತವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಜಮೀನ್ದಾರ ಮಾತ್ರ ಇದ್ದಾನೆ. ಉಳಿದಂತೆ ಹೆಚ್ಚಿನ ಜಮೀನ್ದಾರರು ಕೊಲೆಯಾಗಿ ಹೋಗಿದ್ದಾರೆ. ಇಲ್ಲವೇ ಸರ್ಕಾರ ಕುತಂತ್ರ ಮಾಡಿ ಅವರ ಜಮೀನನ್ನು ತುಂಡು ತುಂಡು ಮಾಡಿಬಿಟ್ಟಿದೆ..'
            ಸಲೀಂ ಚಾಚಾ ವಿಸ್ತಾರವಾಗಿ ಹೇಳುತ್ತಲೇ ಇದ್ದರು. ವಿನಯಚಂದ್ರ ಕಿವಿಯಾಗಿದ್ದ. ಬಾಂಗ್ಲಾ ನಾಡಿನ ಚರಿತ್ರೆ, ಮಣ್ಣಿನ ಗುಣ, ಯುದ್ಧ ಇತ್ಯಾದಿಗಳೆಲ್ಲ ಬಿಚ್ಚಿಕೊಳ್ಳುತ್ತಿದ್ದವು. ಸಲೀಂ ಚಾಚಾ ಸೈಕಲ್ ರಿಕ್ಷಾ ಹೊಡೆಯುವವರೋ ಅಥವಾ ಇತಿಹಾಸಕಾರರೋ ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಅಷ್ಟರಲ್ಲಿ ಇನ್ನೊಂದು ಚಿಕ್ಕ ನದಿ ಅವರೆದುರು ಬಂದಿತು. ಅದಕ್ಕೊಂದು ಚಿಕ್ಕ ಸೇತುವೆ ಕೂಡ ಇತ್ತು. `ದೇಕೋ ಬೇಟಾ.. ಢಾಕಾದಿಂದ ಅಶೂಲಿಯಾಗೆ 25 ಕಿ.ಮಿ ಆಗುತ್ತದೆ. ಈ ದೂರದ ನಡುವೆ ನಾವು ಮೂರು ಸಾರಿ ನದಿ ದಾಟಬೇಕಾಗುತ್ತದೆ. ಆ ನದಿಗಳಲ್ಲಿ ಇದೂ ಒಂದು. ಈ ಕಿರು ನದಿಯಿದೆಯಲ್ಲ ಒಂದಾನೊಂದು ಕಾಲದಲ್ಲಿ ದೈತ್ಯವಾಗಿ ಹರಿಯುತ್ತಿತ್ತಂತೆ. ಆದರೆ ಕಾಲಕ್ರಮೇಣ ನದಿ ಪಥ ಬದಲಿಸಿದೆ. ಈ ಕವಲು ಚಿಕ್ಕದಾಗಿದೆ. ನಮಗೆ ಸಿಗುವ ಇನ್ನೊಂದು ಕವಲು ಬಹು ದೊಡ್ಡದು. ಆ ನದಿಯನ್ನು ದಾಟಿದ ನಂತರ ಅಶೂಲಿಯಾ. ಆದರೆ ಆ ಸೇತುವೆ ದಾಟುವುದು ನಮ್ಮ ಮುಂದಿರುವ ಪ್ರಮುಖ ಸವಾಲು. ಏಕೆಂದರೆ ಆ ಸೇತುವೆಯ ಸುತ್ತಮುತ್ತ ಕಳ್ಳಕಾಕರ ಹಾವಳಿಯಿದೆ. ದಾರಿಯಲ್ಲಿ ಹಾದು ಬರುವ ಪ್ರಯಾಣಿಕರನ್ನು ತಡೆದು ಅವರ ತಲೆಗೆ ಬಂದೂಕನ್ನು ಗುರಿಯಿಟ್ಟು ಕೈಯಲ್ಲಿರುವ ಹಣ, ಒಡವೆಗಳನ್ನೆಲ್ಲ ಕಿತ್ತುಕೊಳ್ಳುವುದು ಅವರ ಪ್ರಮುಖ ಕೆಲಸ. ನಾವು ಅವರನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋದರೆ ಬಹುದೊಡ್ಡ ಸಮಸ್ಯೆ ಕಡಿಮೆಯಾದಂತೆ. ಸರ್ಕಾರ ಇವರನ್ನು ಮಟ್ಟ ಹಾಕಲು ಪ್ರಯತ್ನಿಸಿ ಸೋತಿದೆ. ನಾವು ಈಗ ಎಚ್ಚರಿಕೆಯಿಂದ ಹೋಗಬೇಕು.. ಹುಷಾರು..' ಎಂದು ಚಾಚಾ ಹೇಳಿದರು. ವಿನಯಚಂದ್ರ ಸುಮ್ಮನೆ ಸೈಕಲ್ ತುಳಿಯುತ್ತಿದ್ದ.
             ತಂಗಾಳಿಯ ನಡುವೆ ಸೈಕಲ್, ಸೈಕಲ್ಲಿನಲ್ಲಿ ವಿನಯಚಂದ್ರ, ಮಧುಮಿತಾ, ಸಲೀಂ ಚಾಚಾ ಸಾಗುತ್ತಿದ್ದರು. ಸುತ್ತಲೂ ಕತ್ತಲಾವರಿಸಿತ್ತು. ಸಲೀಂ ಚಾಚಾ ಕೂಡ ಮಾತಾಡಿ ಮಾತಾಡಿ ಬೇಸರಗೊಂಡನೇನೋ. ಸುಮ್ಮನಾಗಿದ್ದ. ವಿನಯಚಂದ್ರ ತಂಗಾಳಿ ನಡುವೆಯೂ ಬೆವರುತ್ತ ಸೈಕಲ್ ತುಳಿಯುತ್ತಿದ್ದರೆ ಮಧುಮಿತಾ ಮಹಾರಾಣಿಯಂತೆ ಮಲಗಿ ನಿದ್ರಿಸುತ್ತಿದ್ದಳು. ವಿನಯ ಚಂದ್ರನಿಗೆ ಈ ಮೌನ, ಕಾರ್ಗತ್ತಲು, ಮುಂದೇನೋ ಕೆಟ್ಟ ಸಮಯವಿದೆ ಎನ್ನುವುದನ್ನು ಸಾರಿ ಹೇಳುತ್ತಿದ್ದಂತೆ ಅನ್ನಿಸಿತು. ಯಾವುದೋ ಅಪಾಯದ ಮುನ್ಸೂಚನೆಯಾಗಿ ಇಂತಹ ಶೂನ್ಯ ಮೌನ ಕಾಡುತ್ತಿದ್ದಂತೆ ಅನ್ನಿಸಿತು. ಸೈಕಲ್ ತುಳಿಯುತ್ತಿದ್ದರೂ ಅದೇನೋ ಚಟಪಡಿಕೆ ವಿನಯಚಂದ್ರನ ಮನಸ್ಸಿನಲ್ಲಿ ಆವರಿಸಿತು.

(ಮುಂದುವರಿಯುತ್ತದೆ..)