Thursday, August 14, 2014

ಗೋಲಾರಿ ವಯ್ಯಾರಿ

ಗುಡ್ಡದ ತುದಿಯಿಂದ ಹಾಲ್ನೊರೆಯುಕ್ಕಿದಂತೆ ಕಣಿವೆಯಾಳಕ್ಕೆ ಧುಮ್ಮುಕ್ಕುವ ಸೊಬಗು, ಅಕ್ಕ ಪಕ್ಕದ ಕಾನನದ ನಡುವಿನಿಂದ ಕಿವಿಯನ್ನು ಇಂಪಾಗಿ ತಟ್ಟುವ ಹಕ್ಕಿಗಳ ದನಿ, ಜೊತೆ ಜೊತೆಯಲ್ಲಿಯೇ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರ ಹರ್ಷದ ಕೇಕೆ. ಈ ಎಲ್ಲವುಗಳೂ ಮಿಳಿತವಾಗಿರುವುದು ಕಾರವಾರ ತಾಲೂಕಿನ ತೊಡೂರು ಗ್ರಾಮದ ಅರಣ್ಯ ಮಧ್ಯವಿರುವ ಗೋಲಾರಿ ಜಲಪಾತದಲ್ಲಿ.
ಒಂದೆಡೆ ತಲೆಯೆತ್ತಿ ನೋಡಿದರೂ ಕಾಣಿಸದ ಹಸಿರಿನಿಂದಾವೃತವಾದ ಕಡಿದಾದ ಗುಡ್ಡ. ಇನ್ನೊಂದೆಡೆ ಅರಣ್ಯ. ನಡುವೆ ಧೋ ಎಂದು ಅಬ್ಬರಿಸುತ್ತ ಸೊಬಗನ್ನು ಕಟ್ಟಿಕೊಡುವ ಗೋಲಾರಿ ಜಲಪಾತವನ್ನು ನೋಡುತ್ತಿದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಜಲಪಾತದ ಸುಂದರ ಚಿತ್ರಣವನ್ನು ಕಣ್ಣಲ್ಲಿ ಹಿಡಿದು ತುಂಬಿಕೊಳ್ಳಲು ಯತ್ನಿಸಿದಷ್ಟೂ ಎಲ್ಲಿ ಕಳೆದುಕೊಂಡು ಬಿಡುತ್ತೇವೆಯೋ ಎನ್ನುವ ದುಗುಡ ನೋಡುಗನನ್ನು ಆವರಿಸುತ್ತದೆ.
ಗೋಲಾರಿ ಜಲಪಾತ ವೀಕ್ಷಣೆಗೆ ಯಾವುದೇ ಸಮಯದ ತೊಂದರೆಯಿಲ್ಲ. ಬೇಸಿಗೆಯಿರಲಿ, ಮಳೆಗಾಲವಿರಲಿ ಅಥವಾ ಕೊರೆಯುವ ಚಳಿಗಾಲವಿರಲಿ ವರ್ಷದ ಎಲ್ಲ ಕಾಲದಲ್ಲಿಯೂ ದರ್ಶನ ಸಾಧ್ಯ. ಕಡು ಬೇಸಿಗೆಯಲ್ಲೂ ಜಲಪಾತದಲ್ಲಿ ಸಾಕಷ್ಟು ನೀರಿರುವ ಕಾರಣ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಬೆಟ್ಟದ ತುದಿಯಿಂದ ಸುಮಾರು 65 ಅಡಿ ಎತ್ತರದಿಂದ ಧುಮ್ಮಿಕ್ಕುವ ಗೋಲಾರಿ ಜಲಪಾತದ ಸದಾ ಕಾಲ ಜನಜಾತ್ರೆ ಸೇರಿರುತ್ತದೆ. ಚಾರಣ ಮಾಡುವರಿಗೆ, ವಾರದ ತುಂಬ ಬಿಡುವಿಲ್ಲದೇ ದುಡಿದು ವಾರಾಂತ್ಯದಲ್ಲಿ ಬದಲಾವಣೆ ಬಯಸುವವರಿಗೆ ಈ ಜಲಪಾತ ಹೇಳಿಮಾಡಿಸಿದ ತಾಣ.
ಜಲಪಾತಗಳ ಜಿಲ್ಲೆ ಎಂದು ಖ್ಯಾತಿಯನ್ನು ಗಳಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಜಲಪಾತಗಳಿವೆ. ಅವುಗಳಲ್ಲಿ ಹಲವು ಜಲಪಾತಗಳಿನ್ನೂ ಬೆಳಕಿಗೆ ಬಂದಿಲ್ಲ. ಗೋಲಾರಿ ಜಲಪಾತವನ್ನು ನೋಡಬೇಕೆಂದರೂ ಕೂಡ ಸ್ವಲ್ಪ ಮೈಕೈ ನೋಯಿಸಿಕೊಳ್ಳಲೇ ಬೇಕು. ತೊಡೂರ ಬಳಿಯ ಕಾನನದ ಮಧ್ಯದಿಂದ ಕಲ್ಲು ಬಂಡೆಗಳನ್ನು ಹತ್ತಿ, ಹಳ್ಳಗಳನ್ನು ಜಿಗಿಯುತ್ತಾ, ಗಿಡ ಗಂಟಿಗಳ ಮುಳ್ಳುಗಳ ನಡುವೆ ನುಸುಳುತ್ತ ಸಾಗಿದರೆ ದರ್ಶನ ಕೊಡುತ್ತಾಳೆ ಗೋಲಾರಿ. ಕೊಂಚ ಚಾರಣ ಮಾಡಿ ಆಗುವ ಆಯಾಸ ಜಲಪಾತ ವೀಕ್ಷಣೆಯಿಂದ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಮೈಮನಗಳಲ್ಲಿ ರೋಮಾಂಚನವನ್ನು ಹುಟ್ಟು ಹಾಕುವ ಗೋಲಾರಿ ಜಲಪಾತದ ಒಡಲಿನಲ್ಲಿ ಪ್ರವಾಸಿಗರು ಸ್ನಾನದ ಸುಖವನ್ನು ಅನುಭವಿಸುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದ ವೇಳೆಯಲ್ಲಿ ಅರಣ್ಯಪ್ರದೇಶದಲ್ಲಿ ಸುರಿಯುವ ಮಳೆ ಹಳ್ಳದ ಮೂಲಕ ಸಾಗಿ, ಭೀಮನಬುಗುರಿ ಹಾಗೂ ಸಾವನಾಳ ಎನ್ನುವ ಪ್ರದೇಶದಿಂದ ಹರಿದು ಬಂದು ಗೋಲಾರಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತಾಳೆ. ಹಳ್ಳ ಸಮುದ್ರ ಸೇರುವ ತವಕ ಜಲಪಾತದ ರೂಪದಲ್ಲಿ ಎದ್ದು ಕಾಣುತ್ತದೆ.
ಗೋಲಾರಿ ಜಲಪಾತ ಉತ್ತಮ ಪಿಕ್ನಿಕ್ ಸ್ಪಾಟ್. ಚಾರಣ ಪ್ರಿಯರಿಗಂತೂ ಹೇಳಿಮಾಡಿಸಿದಂತಹ ತಾಣ. ಈ ಕಾರಣದಿಂದಲೇ ಉತ್ತರ ಕನ್ನಡ ಜಿಲ್ಲೆಯಿಂದಲ್ಲದೇ ನೆರೆಯ ಗೋವಾ ರಾಜ್ಯ, ಉಡುಪಿ ಜಿಲ್ಲೆಯಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಮೈಮನಸ್ಸುಗಳಿಗೆ ಜಲಪಾತದ ನೀರನ್ನು ಒಡ್ಡಿಕೊಳ್ಳುವ ಮೂಲಕ ಖುಷಿಯನ್ನು ತುಂಬಿಕೊಂಡು ಕ್ರಿಯಾಶೀಲರಾಗಿ ಮರಳುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕೆಲವು ಕಟ್ಟುನಿಟ್ಟಿನ ಕೆಲಸಗಳೂ ಇವೆ. ಜಲಪಾತದ ಫಾಸಲೆಯಲ್ಲಿ ಪ್ಲಾಸ್ಟಿಕ್ ಎಸೆಯುವಂತಿಲ್ಲ. ಗಾಜಿನ ಬಾಟಲಿಗಳನ್ನು ಎಸೆಯುವುದೂ ನಿಶಿದ್ಧ. ಪ್ರಕೃತಿಯ ನಡುವೆ ಇರುವ ಜಲಪಾತದ ಸೌಂದರ್ಯವನ್ನು ತ್ಯಾಜ್ಯವನ್ನೆಸೆಯುವ ಮೂಲಕ ಹಾಳು ಮಾಡಬಾರದೆಂದು ಸ್ಥಳೀಯರು ಆಗ್ರಹಿಸುತ್ತಾರೆ. ಜಲಪಾತಕ್ಕೆ ತೆರಳುವವರು ಕುಡಿಯುವ ನೀರು, ಆಹಾರಗಳನ್ನು ಒಯ್ಯುವುದು ಕಡ್ಡಾಯ. ಮತ್ಯಾಕೆ ತಡ? ಒಮ್ಮೆ ಬಂದು ಜಲಪಾತದ ಸೌಂದರ್ಯವನ್ನು ಸವಿದು ಹೋಗಿ.
ಜಲಪಾತಕ್ಕೆ ಹೋಗುವ ಬಗೆ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ 17 ಕಿಮೀ ಅಂತರದಲ್ಲಿರುವ ತೋಡೂರು ಗ್ರಾಮಕ್ಕೆ ಸಾಗಬೇಕು. ಅಲ್ಲಿಂದ ಸುಮಾರು 4 ಕಿಮೀನಷ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ಇಲ್ಲಿಯವರೆಗೆ ವಾಹನಗಳು ತೆರಳುತ್ತವೆ. ಅವನ್ನು ಇಲ್ಲಿಯೇ ನಿಲ್ಲಿಸಿ ಸುಮಾರು 2-3 ಕಿಮೀ ಅರಣ್ಯ ಪ್ರದೇಶದಲ್ಲಿ ಕಲ್ಲು ಬಂಡೆಗಳನ್ನು ಹತ್ತಿಳಿಯುತ್ತಾ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನು ದಾಟುತ್ತಾ ಚಾರಣದ ಮೂಲಕ ಸಾಗಿದರೆ ಅಲ್ಲೇ ಸಿಗುತ್ತದೆ ಗೋಲಾರಿ ಫಾಲ್ಸ್ ದರ್ಶನ ಸಾಧ್ಯ. ಬೆಂಗಳೂರಿನಿಂದ ಆಗಮಿಸುವವರು ಶಿವಮೊಗ್ಗ-ಶಿರಸಿ ಮೂಲಕ ಅಥವಾ ಹುಬ್ಬಳ್ಳಿ-ಅಂಕೋಲಾ ಮೂಲಕ ತೊಡೂರಿಗೆ ಆಗಮಿಸಿ ಅಲ್ಲಿಂದ ಬರಬಹುದಾಗಿದೆ.

**
(ಈ ಲೇಖನ ಆ.14, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರುಕೇರಿಯಲ್ಲಿ ಪ್ರಕಟಗೊಂಡಿದೆ)
(ಈ ಲೇಖನಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ನೀಡಿದ ಅಚ್ಯುತಕುಮಾರ ಯಲ್ಲಾಪುರ ಅವರಿಗೂ ಧನ್ಯವಾದಗಳು)

Wednesday, August 13, 2014

ಬೆಂಗಾಲಿ ಸುಂದರಿ-21

(ಢಾಕಾ-ಅಶೂಲಿಯಾ ಹೆದ್ದಾರಿ ನಡುವೆ ಸಿಗುವ ನದಿಯಲ್ಲಿ ದೋಣಿಯ ಮೂಲಕ ಸಾಗುತ್ತಿರುವುದು)
         ಸಲೀಂ ಚಾಚಾನ ಮನೆಯಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಉಳಿದಕೊಂಡಿದ್ದು ನಾಲ್ಕೋ ಐದೋ ದಿನಗಳು ಅಷ್ಟೇ. ಸಲೀಂ ಚಾಚಾನ ಮನೆಯವರೆಲ್ಲ ಯಾವುದೋ ಜನ್ಮದ ನೆಂಟರೋ ಎನ್ನುವಷ್ಟು ಆಪ್ತರಾಗಿಬಿಟ್ಟಿದ್ದರು. ಅದ್ಯಾವ ಋಣಾನುಬಂಧವೋ ಏನೋ ಹಿಂದುಗಳೆಂದು ಗೊತ್ತಾದರೆ ಯಾವ ಕ್ಷಣದಲ್ಲಿ ದಾಳಿ ಮಾಡುತ್ತಾರೋ ಎನ್ನುವ ಭಯದ ನಡುವೆಯೂ ತಮ್ಮ ದೇಶದಲ್ಲಿ ಬದುಕಲು ಆಶ್ರಯ ಕೊಟ್ಟಿದ್ದರು. ತಮ್ಮದೇ ಮಕ್ಕಳೇನೋ ಎನ್ನುವಂತೆ ಸಲಹಿದ್ದರು. ಸುರಕ್ಷಿತ ಜಾಗಕ್ಕೆ ತಮ್ಮನ್ನು ಕಳಿಸಲೋಸುಗ ತಮ್ಮ ಪ್ರಾಣವನ್ನೇ ಒತ್ತಯಿಟ್ಟು ಕೆಲಸ ನಿರ್ವಹಿಸಿದ್ದರು. ಬಹುಶಃ ಸಲೀಂ ಚಾಚಾನ ಮನೆಯಲ್ಲಿ ಇಬ್ಬರು ಹಿಂದೂಗಳು ಆಶ್ರಯ ಪಡೆದಿದ್ದಾರೆ ಎಂದು ಹಿಂಸಾವಾದಿಗಳಿಗೆ ಗೊತ್ತಾಗಿದ್ದರೆ ಸಲೀಂ ಚಾಚಾನ ಕುಟುಂಬವೂ ಅಪಾಯಕ್ಕೆ ಈಡಾಗುತ್ತಿತ್ತು. ಆದರೆ ಅಂತಹ ಅಪಾಯವನ್ನು ಲೆಕ್ಕಿಸದೇ ತಮ್ಮ ಜೊತೆಗೆ ನಿಂತಿದ್ದ ಚಾಚಾನ ಕುಟುಂಬದ ಬಗ್ಗೆ ಇಬ್ಬರಲ್ಲೂ ಅಭಿಮಾನ ಮೂಡಿತು. ಅವರಿದ್ದ ಜಾಗದಿಂದ ಆಚೆಯ ಜಗತ್ತು ಉರಿದು ಬೀಳುತ್ತಿದ್ದರೂ ಕೂಡ ತಮ್ಮ ಕೂದಲೂ ಕೊಂಕದಂತೆ ಕಾಪಾಡಿದ್ದರು. ಪ್ರೀತಿಯನ್ನು ನೀಡಿದ್ದರು. ಮಧುಮಿತಾಳಂತೂ ತಂದೆ ತಾಯಿಗಳನ್ನು ಅರೆಕ್ಷಣದಲ್ಲಿ ಕಳೆದುಕೊಂಡು ಚಾಚಾನ ಮನೆಗೆ ಬಂದಿದ್ದಳು. ತಂದೆ-ತಾಯಿ-ಬಂಧು-ಬಳಗ ಕಳೆದುಹೋದ ಕಹಿ ನೆನಪು ಮಧುಮಿತಾಳನ್ನು ಕಾಡದಂತೆ ನೋಡಿಕೊಂಡಿದ್ದರು ಚಾಚಾನ ಕುಟುಂಬ. ಚಾಚಾನ ಕುಟುಂಬದ ಇಂತಹ ಕಾರ್ಯಕ್ಕೆ ಎಷ್ಟು ಋಣ ಸಂದಾಯ ಮಾಡಿದರೂ ಸಾಲದು ಎಂದುಕೊಂಡ ವಿನಯಚಂದ್ರ.
            ಅದೊಂದು ಸಂಜೆ ಸಲೀಂ ಚಾಚಾ ಭಾರತದ ಕಡೆಗೆ ತೆರಳುವ ಸಮಯ ಸನಿಹವಾಯ್ತು ಎಂದು ಘೋಷಿಸಿದರು. ಕೊನೆಯ ತಯಾರಿಗಳೆಲ್ಲ ಪೂರ್ಣಗೊಂಡಿದ್ದವು. ಚಾಚಾನ ಮನೆಯ ಸದಸ್ಯರುಗಳೆಲ್ಲ ತಮ್ಮ ಮನೆಯ ಜನರೇ ತಮ್ಮಿಂದ ದೂರವಾಗುತ್ತಿದ್ದಾರೋ ಎನ್ನುವಂತೆ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮಧುಮಿತಾ ಹಾಗೂ ವಿನಯಚಂದ್ರನನ್ನು ಕಳಿಸಿಕೊಡಲು ತಯಾರಾಗಿದ್ದರು. ಮಧುಮಿತಾಳ ಕಣ್ಣಿನಲ್ಲೂ ನೀರಿತ್ತು. ವಿನಯಚಂದ್ರ ಸುಮ್ಮನೆ ನೋಡುತ್ತಿದ್ದ. ಹೊರಗೆ ಸಂಪೂರ್ಣ ಕತ್ತಲಾಗಿತ್ತು. ಮಧುಮಿತಾ ಸಲೀಂ ಚಾಚಾನ ಮನೆಯ ಹಿರಿಯರಿಗೆಲ್ಲ ನಮಸ್ಕರಿಸಿ ಹೊರಡಲು ಅನುವಾದಳು. ವಿನಯಚಂದ್ರ ಎಲ್ಲರಿಗೂ ಕಣ್ಣಲ್ಲಿಯೇ ಕೃತಜ್ಞತೆಗಳನ್ನು ಹೇಳಿದ್ದ.
             ಹಿಂಸಾ ಪೀಡಿತ ಬಾಂಗ್ಲಾ ನಾಡಿನಲ್ಲಿ ಹಗಲು ಪ್ರಯಾಣಕ್ಕಿಂತ ರಾತ್ರಿ ಪ್ರಯಾಣ ಸುರಕ್ಷಿತ ಎಂದು ಆಲೋಚಿಸಿದ್ದ ಸಲೀಂ ಚಾಚಾ ಅದೇ ಕಾರಣಕ್ಕಾಗಿಯೇ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ್ದ. ರಾತ್ರಿಯಾಗುತ್ತಲೇ ಹೊರಟು ಬೆಳಕು ಮೂಡುವ ವರೆಗೂ ಪ್ರಯಾಣ ಮಾಡಬೇಕಿತ್ತು. ಬೆಳಿಗ್ಗೆ ಸುರಕ್ಷಿತ ಜಾಗವನ್ನು ಹಿಡಿದು ಉಳಿದುಕೊಳ್ಳಬೇಕಿತ್ತು. ಯಾರಿಗೂ ತಾವು ಹಿಂದುಗಳೆಂದು ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರ ಹಾಗೂ ಮಧುಮಿತಾ ತಮ್ಮ ಚಹರೆಯನ್ನು ಬದಲಿಸಿಕೊಂಡಿದ್ದರು. ವಿನಯಚಂದ್ರ ತನ್ನನ್ನು ಅಹಮದ್ ಎಂದೂ ಮಧುಮಿತಾ ತನ್ನನ್ನು ರಜಿಯಾ ಎಂದೂ ಕರೆದುಕೊಂಡಿದ್ದರು. ಭಾರತದ ಗಡಿಯೊಳಗೆ ಹೋಗುವ ವರೆಗೂ ಈ ಹೆಸರಿನಲ್ಲಿಯೇ ತಮ್ಮನ್ನು ಎಲ್ಲರಿಗೂ ಪರಿಚಯ ಮಾಡಿಕೊಳ್ಳಬೇಕೆಂದು ಚಾಚಾ ಕಟ್ಟು ನಿಟ್ಟಾಗಿ ತಿಳಿಸಿದ್ದ. ಅಲ್ಲದೇ ಭಾರತದ ಗಡಿಯ ವರೆಗೆ ತಾನೂ ಬಂದು ಹೋಗುತ್ತೇನೆಂದು ಹೇಳಿದ್ದ.
                ವಿನಯಚಂದ್ರ ಸಲೀಂ ಚಾಚಾನ ಬಳಿ `ಚಾಚಾ.. ನಾವು ತೊಂದರೆಯಿಲ್ಲದೇ ತಲುಪುತ್ತೇವೆ. ನೀವು ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ..' ಎಂದು ಹೇಳಿದರೂ ಕೇಳದೇ `ನಿಮ್ಮನ್ನು ಭಾರತದ ಗಡಿಯವರೆಗೆ ಸುರಕ್ಷಿತವಾಗಿ ತಲುಪಿಸುವ ಹೊಣೆ ನನ್ನದು. ನೀನು ಎಷ್ಟೇ ಬೇಡ ಎಂದರೂ ನಾನು ಬಂದೇ ಬರುತ್ತೇನೆ..ಸುಮ್ಮನೆ ಹೊರಡಿ' ಎಂದು ಪಟ್ಟಾಗಿ ಹೇಳಿದ್ದರು. ವಿನಯಚಂದ್ರ ಸುಮ್ಮನುಳಿದಿದ್ದ.
             ಕೆಲವರೇ ಹಾಗೆ ಹಚ್ಚಿಕೊಂಡರೆ ಮುಗಿಯಿತು. ಏನು ಮಾಡಿದರೂ ಬಿಡುವುದಿಲ್ಲ. ಹಾದಿ ತಪ್ಪುವ ಸಂದರ್ಭದಲ್ಲೆಲ್ಲ ಜೊತೆ ನಿಂತು ದಡ ಮುಟ್ಟಿಸುವ ಕೆಲಸವನ್ನು ಮಾಡುತ್ತಾರೆ. ಅಂತವರಲ್ಲೊಬ್ಬ ಸಲೀಂ ಚಾಚಾ. ಸರಿಯಾಗಿ ಕತ್ತಲಾದ ನಂತರ ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ. ಹೊರ ಬಂದವನೇ ಆಚೆ ಈಚೆ ನೋಡಿ ಯಾರಿಗೂ ಅನುಮಾನ ಬಾರದಂತೆ ಕೆಲಸ ನಿರ್ವಹಿಸಿದ. ತನ್ನದೇ ಸೈಕಲ್ ರಿಕ್ಷಾದ ಮೂಲಕ ಹೊರಡಿಸಿದ ಸಲೀಂ ಚಾಚಾ. ತಮ್ಮ ತಮ್ಮ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡಿದ್ದ ವಿನಯಚಂದ್ರ, ಮಧುಮಿತಾ ಸಲೀಂ ಚಾಚಾನ ಸೈಕಲ್ಲನ್ನೇರಿದರು. ಕತ್ತಲೆಯಲ್ಲಿಯೇ ಬೇಗ ಬೇಗನೆ ಸೈಕಲ್ ತುಳಿಯಲು ಆರಂಭಿಸಿದ. ಸಲೀಂ ಚಾಚಾನಲ್ಲಿ ಎಲ್ಲಿ ಅಡಗಿತ್ತೋ ದೈತ್ಯಶಕ್ತಿ. ದಿನದಿಂದ ದಿನಕ್ಕೆ ಯುವ ಹುಮ್ಮಸ್ಸು ಆತನಲ್ಲಿ ಮನೆ ಮಾಡುತ್ತಿದೆಯೇನೋ ಎನ್ನಿಸಿತ್ತು. ಇಳಿದನಿಯಲ್ಲಿ ಮಾತನಾಡುತ್ತ, ಬಹುಹೊತ್ತು ಮಾತಿಲ್ಲದೇ ಪಯಣ ಮುಂದಕ್ಕೆ ಸಾಗಿತು.
                 ಅಪಾಯದ ಪರಿಸ್ಥಿತಿಯಿರುವ ಕಾರಣ ಸಾಧ್ಯವಾದಷ್ಟೂ ಒಳ ರಸ್ತೆಯನ್ನು ಬಳಕೆ ಮಾಡಬೇಕಾಗಿತ್ತು. ಜೊತೆ ಜೊತೆಯಲ್ಲಿ ಸಾಕಷ್ಟು ಸುತ್ತುಬಳಸಿನ ಮಾರ್ಗದಲ್ಲಿಯೂ ಪ್ರಯಾಣ ಮಾಡಬೇಕಾಗಿ ಬಂದಿತು. ಯಾಕೋ ಮೊದಲ ಬಾರಿಗೆ ಸಲೀಂ ಚಾಚಾನಿಗೆ ಢಾಕಾದ ಬೀದಿಗಳು ಬಹು ವಿಸ್ತಾರವಾಗಿದೆಯೇನೋ ಎನ್ನಿಸಿತು. ಎಷ್ಟು ಸೈಕಲ್ ತುಳಿದರೂ ಢಾಕಾ ಮುಗಿಯುತ್ತಲೇ ಇಲ್ಲವಲ್ಲ ಎಂದೂ ಅನ್ನಿಸತೊಡಗಿತ್ತು. ಬೀದಿ ಬೀದಿಗಳಲ್ಲೆಲ್ಲ ಪೊಲೀಸ್ ಬ್ಯಾರಿಕೇಡ್ ಗಳು, ನಾಕಾಬಂದಿಗಳಿದ್ದವು. ಅಲ್ಲಲ್ಲಿ ಪೊಲೀಸರು ನಿಂತು ಪಹರೆ ಕಾಯುತ್ತಿದ್ದರು. ಅವರ ಕೈಯಲ್ಲಂತೂ ಕೊಲ್ಲುವ ಬಂದೂಕುಗಳು ಲೋಡಾಗಿ ಕಾಯುತ್ತಿದ್ದವು. ಹಿಂಸಾಚಾರಿ ಕಂಡರೆ ಸಾಕು ಬೇಟೆಯಾಡುವ ದಾಹವನ್ನು ಆ ಬಂದೂಕುಗಳು ಹೊಂದಿದ್ದಂತೆ ಕಾಣಿಸಿತು.
            ದಾರಿಯಲ್ಲಿ ಹಲವಾರು ಕಡೆಗಳಲ್ಲಿ ಪೊಲೀಸರು ಕಾಣಿಸಿದ್ದರೂ ಯಾರೊಬ್ಬರೂ ಇವರನ್ನು ತಡೆಯಲಿಲ್ಲ. ಢಾಕಾದಿಂದ ಇನ್ನೇನು ಹೊರಗೆ ಹೋಗಬೇಕು ಎನ್ನುವಂತಹ ಸಮಯದಲ್ಲಿ ಒಂದು ಕಡೆಯಲ್ಲಿ ಪೊಲೀಸ್ ತನಿಖಾ ಠಾಣೆಯಲ್ಲಿ ಸಲೀಂ ಚಾಚಾ ತುಳಿಯುತ್ತಿದ್ದ ಸೈಕಲ್ ರಿಕ್ಷಾವನ್ನು ತಡೆದು ನಿಲ್ಲಿಸಿಯೇ ಬಿಟ್ಟರು. ವಿನಯಚಂದ್ರ ಕೊಂಚ ಗಾಬರಿಗೊಂಡಿದ್ದ. ಮಧುಮಿತಾ ಕೂಡ ಗಾಬರಿಯಲ್ಲಿಯೇ ಇದ್ದಳು. ಆದರೆ ಸಲೀಂ ಚಾಚಾ ತಣ್ಣಗೆ ಕುಳಿತಿದ್ದ. ಹತ್ತಿರ ಬಂದ ಪೊಲೀಸನೊಬ್ಬ ಸೈಕಲ್ ರಿಕ್ಷಾವನ್ನು ಹಿಡಿದು `ಯಾರು ನೀವು..? ಎಲ್ಲಿಗೆ ಹೊರಟಿದ್ದೀರಿ..?' ಎಂದು ಗಡುಸಾಗಿ ಪ್ರಶ್ನಿಸಿದ. ಅದಕ್ಕೆ ಪ್ರತಿಯಾಗಿ ಸಲೀಂ ಚಾಚಾ ತಣ್ಣಗೆ ಉತ್ತರಿಸಿದ. ಆದರೆ ಪೊಲೀಸನಿಗೆ ಏನೋ ತೃಪ್ತಿಯಾದಂತೆ ಕಾಣಲಿಲ್ಲ. ಸೀದಾ ಸೈಕಲ್ಲಿನ ಹಿಂದಿನ ಸೀಟಿನತ್ತ ಬಂದು ಅದರಲ್ಲಿ ಕುಳಿತಿದ್ದ ವಿನಯಚಂದ್ರನ ಬಳಿ `ನಿನ್ನ ಹೆಸರೇನು..?' ಎಂದು ಗಡುಸಾಗಿಯೇ ಕೇಳಿದ್ದ.
           ಪೊಲೀಸಿನವನ ಗಡುಸು ಉತ್ತರಕ್ಕೆ ಒಮ್ಮೆ ಬೆದರಿದ ವಿನಯಚಂದ್ರನಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ಸಲೀಂ ಚಾಚಾ ಅದೇನೋ ತನ್ನ ಹೆಸರನ್ನು ಬದಲಾಯಿಸಿದ್ದ. ಆದರೆ ಆ ಹೆಸರು ನೆನಪಾಗಲೇ ಇಲ್ಲ. ಒಮ್ಮೆ ತಲೆ ಕೊಡವಿಕೊಂಡು ಆಲೋಚನೆ ಮಾಡಿದರೂ ಹೆಸರು ಮಾತ್ರ ನೆನಪಾಗಲಿಲ್ಲ. ಇದರಿಂದ ಮತ್ತಷ್ಟು ಭಯಗೊಂಡ ವಿನಯಚಂದ್ರ `ಬ್ಬೆ ಬ್ಬೆ ಬ್ಬೆ..' ಎಂದು ತೊದಲಿದ. ಒಮ್ಮೆ ಮಧುಮಿತಾಳನ್ನೂ ಇನ್ನೊಮ್ಮೆ ಸಲೀಂ ಚಾಚಾ ನನ್ನೂ ನೋಡಲಾರಂಭಿಸಿದ. ಇನ್ನು ಸುಮ್ಮನುಳಿದರೆ ಕುತ್ತಿಗೆಗೆ ಬರುತ್ತದೆ ಎಂದು ತಿಳಿದ ಸಲೀಂ ಚಾಚಾನೇ `ಅಹಮದ್..' ಎಂಬುದು ಆತನ ಹೆಸರು. ಅವನಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ.' ಎಂದು ಬಿಟ್ಟ. ಪೊಲೀಸಿನವನಿಗೆ ಅದೇನೆನ್ನಿಸಿತೋ `ಠೀಕ್ ಹೈ..' ಎಂದು ವಾಪಸಾದ. ವಿನಯಚಂದ್ರನಿಗೆ ಹೋದ ಜೀವ ಮರಳಿದಂತಾಯಿತು.
              ಪೊಲೀಸಿನವನು ಅತ್ತ ಹೋಗುತ್ತಿದ್ದಂತೆಯೇ  ಸಲೀಂ ಚಾಚಾ `ಯಾಕ್ ಬೇಟಾ..? ಏನಾಯ್ತು? ಬಹಳ ಹೆದರಿ ಬಿಟ್ಟೆಯಾ?' ಎಂದು ಕೇಳಿದರು. ವಿನಯಚಂದ್ರ ಮಾತಾಡಲಿಲ್ಲ. ಸಲೀಂ ಚಾಚಾನೇ ಮುಂದುವರಿದು `ಅಬ್ಬ.. ಮಾತನಾಡದೇ ಇದ್ದರೆ ತೊಂದರೆಯಿಲ್ಲ. ಆದರೆ ಭಯದಲ್ಲಿ ಏನಾದರೂ ಬಾಯಿ ಬಿಟ್ಟಿದ್ದರೆ ಬಹಳ ತೊಂದರೆಯಾಗುತ್ತಿತ್ತು ನೋಡು. ಅಲ್ಲಾಹುವಿನ ದಯೆ.. ಹಾಗಾಗಲಿಲ್ಲ..' ಎಂದವನೇ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ.
         ಕೆಲ ಹೊತ್ತಿನಲ್ಲಿಯೇ ಢಾಕಾದ ಕೊನೆಯ ಪ್ರದೇಶವಾದ `ಉತ್ತರಾ' ಎಂಬಲ್ಲಿಗೆ ಸೈಕಲ್ ಸವಾರಿ ಬಂದು ತಲುಪಿತು. ಪಕ್ಕದ ಟೋಂಗಿ ಎಂಬ ಪ್ರದೇಶವನ್ನು ಹಾದು ಬೆಳಗಾಗುವ ವೇಳೆಗೆ ಅಶೂಲಿಯಾ ಎನ್ನುವ ಪ್ರದೇಶವನ್ನು ತಲುಪಬೇಕೆಂಬುದು ಸಲೀಂ ಚಾಚಾನ ನಿರ್ಧಾರವಾಗಿತ್ತು. ರಾತ್ರಿಯಾದಂತೆಲ್ಲ ಢಾಕಾದ ನಗರಿಯ ಬೆಳಕು ಕಡಿಮೆಯಾಗತೊಡಗಿತು. ರಸ್ತೆಯಲ್ಲಿ ವಾಹನ ಸಂಚಾರವೇ ಇರಲಿಲ್ಲ. ಆಗೀಗ ಅಲ್ಲೊಂದು ಇಲ್ಲೊಂದು ವಾಹನಗಳು ರೊಯ್ಯನೆ ಹಾದು ಹೋಗುತ್ತಿದ್ದುದನ್ನು ಬಿಟ್ಟರೆ ಬಹುತೇಕ ದಾರಿ ನಿರ್ಜನವಾಗಿತ್ತು. ಸೈಕಲ್ ಮೇಲೆ ಮಧುಮಿತಾ ಆಗಲೇ ನಿದ್ದಗೆ ಜಾರಿಬಿಟ್ಟಿದ್ದಳು. ವಿನಯಚಂದ್ರ ಹಾಗೂ ಸಲೀಂ ಚಾಚಾ ಪಿಸು ದನಿಯಲ್ಲಿ ಮಾತನಾಡುತ್ತಾ ಮುಂದಕ್ಕೆ ಸಾಗುತ್ತಿದ್ದರು. ಮತ್ತೊಂದು ಅರ್ಧಗಂಟೆಯ ನಂತರ ಒಳದಾರಿಯನ್ನು ಬಿಟ್ಟು ಢಾಕಾ-ಅಶೂಲಿಯಾ ಹೆದ್ದಾರಿಯಲ್ಲಿ ಸಾಗುವ ಅನಿವಾರ್ಯತೆ ಉಂಟಾಯಿತು. ಸಲೀಂ ಚಾಚಾ ಅತ್ತ ತನ್ನ ಸೈಕಲ್ಲನ್ನು ತಿರುಗಿಸಿದ. ಹೆದ್ದಾರಿ ಕೂಡ ನಿರ್ಜನವಾಗಿತ್ತು. ಹೆದ್ದಾರಿಯ ಆರಂಭದಲ್ಲಿಯೇ ನದಿಯೊಂದು ಹರಿದಿತ್ತು. ಅದನ್ನು ದಾಟುವ ವೇಳೆಗಂತೂ ಚಳಿ ಗಾಳಿ ಬೀಸಿ ಬೀಸಿ ಬರಲಾರಂಭಿಸಿತು. ನದಿಯ ಮೇಲಿಂದ ಹಾದು ಬಂದ ತಂಗಾಳಿ ಮೈಯನ್ನು ಕೊರೆಯುತ್ತಿದೆಯೇನೋ ಅನ್ನಿಸಿತು. ನಿದ್ರೆ ಮಾಡುತ್ತಿದ್ದ ಮಧುಮಿತಾಳ ಮೇಲೆ ವಿನಯಚಂದ್ರ ಚಾದರವೊಂದನ್ನು ಹಾಕಿದ. ನಿದ್ದೆಗಣ್ಣಿನಲ್ಲಿಯೇ ಮಧುಮಿತಾ ಖುಷಿಪಟ್ಟಂತಾಯಿತು.
              ಢಾಕಾ-ಅಶೂಲಿಯಾ ರಸ್ತೆಯ ನಡುವಿನ ಗದ್ದೆ ಬಯಲುಗಳು ಕತ್ತಲೆಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದವು. ಆಕಾಶದ ಮಬ್ಬು ಬೆಳಕಿನಲ್ಲಿ ಗದ್ದೆಯ ಬಯಲುಗಳು, ಬಯಲಿನಾಚೆಯಲ್ಲಿ ಹರಿಯುತ್ತಿದ್ದ ನದಿಯೂ ವಿಚಿತ್ರವಾಗಿ ಕಾಣುತ್ತಿತ್ತು. ನೆಟ್ಟನೆ ರಸ್ತೆಯಲ್ಲಿ ಮೌನವಾಗಿ ಪ್ರಯಾಣ ಮಾಡುವುದು ಯಾಕೋ ಅಸಹನೀಯ ಎನ್ನಿಸುತ್ತಿತ್ತು. ಸಲೀಂ ಚಾಚಾನ ಜೊತೆಗೆ ಮಾತಾಡೋಣವೇ ಎಂದುಕೊಂಡರೂ ಮತ್ತಿನ್ನೇನಾದರೂ ಅಪಾಯ ಎದುರಾದರೆ ಎಂದುಕೊಂಡು ಸುಮ್ಮನಾದ ವಿನಯಚಂದ್ರ.
                  `ಚಾಚಾ.. ನಾನು ಸೈಕಲ್ ತುಳಿಯುತ್ತೇನೆ.. ಇಲ್ಲ ಅನ್ಬೇಡ ಪ್ಲೀಸ್..' ಕೊನೆಗೊಮ್ಮೆ ಅಸಹನೀಯ ಮೌನವನ್ನು ಬೇಧಿಸಿ ವಿನಯಚಂದ್ರ ಮಾತಾಡಿದ್ದ. ಚಾಚಾನಿಗೂ ಸೈಕಲ್ ತುಳಿದು ಸುಸ್ತಾಗಿತ್ತೇನೋ ಸೈಕಲ್ ತುಳಿಯಲು ಕೊಟ್ಟ. ವಿನಯಚಂದ್ರ ಹುಮ್ಮಸ್ಸಿನಿಂದ ಸೈಕಲ್ ತುಳಿಯುತ್ತಿದ್ದರೆ ಸಲೀಮ ಚಾಚಾ ಪಕ್ಕದ ಗದ್ದೆ ಬಯಲನ್ನು ತೋರಿಸುತ್ತಾ `ಬೇಟಾ ಈ ಗದ್ದೆ ಬಯಲುಗಳಿವೆಯಲ್ಲ ಇವುಗಳ ಹಿಂದೆ ಅದೆಷ್ಟೋ ಕ್ರೂರ ಕಥೆಗಳಿವೆ. ಕೇಳುತ್ತ ಹೋದರೆ ಕಣ್ಣೀರು ಬರುತ್ತದೆ.. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಬ್ರಿಟೀಷರ ಆಕ್ರಮಣ, ಪದೇ ಪದೆ ನಡೆಯುತ್ತಿದ್ದ ಯುದ್ಧಗಳು, ಪಾಕಿಸ್ತಾನ ಬಾಂಗ್ಲಾ ಮೇಲೆ ಬೆನ್ನತ್ತಿ ಬಂದು ಇಲ್ಲಿನ ನೇತಾರರನ್ನು ಕೊಂದಿದ್ದು ಇದೇ ವಿಶಾಲ ಗದ್ದೆ ಬಯಲಿನಲ್ಲಿ ಎಂದ ಚಾಚಾ ಕೆಲಕಾಲ ಸುಮ್ಮನಾದ.
            ಚಾಚಾನಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ದಿನಗಳು ನೆನಪಾಗಿರಬೇಕು ಎಂದುಕೊಂಡ ವಿನಯಚಂದ್ರ. ಚಾಚಾ ಮುಂದುವರಿಸಿದ `ಪಾಕಿಸ್ತಾನ ತನ್ನದೇ ಭಾಗದ ನಾಡಾಗಿದ್ದರೂ ಮಿಲಿಟರಿ ಕಳಿಸಿ ದಾಳಿ ಮಾಡಿತಲ್ಲ. ಆಗ ನಾವು ನಲುಗಿದ್ದೇನು ಕಡಿಮೆಯೇ? ನಮ್ಮ ಈ ನಾಡಿನ ಹೆಣ್ಣುಮಕ್ಕಳನ್ನು ಎಳೆದೆಳೆದು ಅತ್ಯಾಚಾರ ಮಾಡುತ್ತಿದ್ದರೆ ನಾವು ಕುದ್ದು ಹೋಗಿದ್ದೆವು. ಆದರೆ ನಮ್ಮಲ್ಲಿ ಆಯುಧವಿರಲಿಲ್ಲ. ಮಾರಕ ಆಯುಧಗಳನ್ನು ಹೊಂದಿದ್ದ ಪಾಕಿಸ್ತಾನಿ ಯೋಧರು ರಣಕೇಕೆ ಹಾಕಿ ನಮ್ಮವರನ್ನು ಕೊಲ್ಲುತ್ತಿದ್ದರೆ ನಾವು ನಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿದ್ದೆವು. ರಕ್ಷಣೆಗೆ ಯಾರನ್ನು ಯಾಚಿಸುವುದು? ಎಲ್ಲಿ ಓಡುವುದು? ನಮ್ಮವರಲ್ಲಿ ಲಕ್ಷಾಂತರ ಜನರು ಭಾರತಕ್ಕೆ ಓಡಿ ಹೋದರು. ನಿಮ್ಮ ಭಾರತಕ್ಕೆ ನಿರಾಶ್ರಿತರ ಸಮಸ್ಯೆ ತಟ್ಟಿದಾಗಲೇ ನಿಮ್ಮ ಐರನ್ ಲೇಡಿ ಇಂದಿರಾಗಾಂಧಿ ಗುಟುರು ಹಾಕಿದ್ದು. ಅಬ್ಬಾ ಎಂತಾ ಹೆಂಗಸು ಆಕೆ. ಅದೆಷ್ಟು ಗಟ್ಟಿಗಿತ್ತಿ. ಗುಟುರು ಹಾಕಿದ್ದಷ್ಟೇ ಅಲ್ಲ. ಯುದ್ಧ ಸಾರಿ ಮಿಲಿಟರಿಯನ್ನು ಕಳಿಸಿ ಪಾಕಿಸ್ತಾನದ ಸೈನ್ಯವನ್ನು ಬಗ್ಗು ಬಡಿಯಿತಲ್ಲ. ಆ ಸಂದರ್ಭದಲ್ಲಿ ಬಾಂಗ್ಲೋದಯವಾಗಿದ್ದು. ಈಗಲೂ ನಮ್ಮಲ್ಲಿ ಶೇಖ್ ಮುಜೀಬುರ್ ರೆಹಮಾನ್ ರನ್ನು ನೆನೆಯುವಷ್ಟೇ ಇಂದಿರಾ ಗಾಂಧಿಯನ್ನೂ ನೆನೆಯುವವರೂ ಇದ್ದಾರೆ. ಆಕೆಯ ಮಿಲಿಟರಿ ಸೈನ್ಯದ ಎದುರು ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಶರಣಾದರಲ್ಲ ಆಗ ನಾವೆಲ್ಲ ಚಪ್ಪಾಳೆ ಹೊಡೆದು ಸಂತೋಷ ಪಟ್ಟಿದ್ದೆವು. ಇಂತಹ ಹಲವಾರು ಘಟನೆಗಳು ಈ ಗದ್ದೆ ಬಯಲಿನಲ್ಲಿ ಜರುಗಿದೆ. ಇಂತಹ ಗದ್ದೆ ಬಯಲು ಬೇಸಿಗೆ ಹಾಗೂ ಚಳಿಗಾಲದಲ್ಲಿ ಭತ್ತದ ಕಣಜಗಳಾಗುತ್ತವೆ. ಆದರೆ ಮಳೆಗಾಲದಲ್ಲಿ ಮಾತ್ರ ಬ್ರಹ್ಮಪುತ್ರ ನದಿ ನೂರಾರು ಕಿ.ಮಿ ಅಗಲವಾಗಿ ಹರಿದು ಈ ಗದ್ದೆ ಬಯಲನ್ನು ಮುಳುಗಿಸಿ ಬಿಡುತ್ತದೆ. ಮಳೆಗಾಲವೆಂದರೆ ಇಲ್ಲಿ ನರಕ..'
           `ಈಗ ನೀನು ಆಚೀಚೆ ನೋಡಿದರೆ ಕತ್ತಲೇ ಕಾಣುತ್ತದೆ. ಆದರೆ ಈ ಸಮಯದಲ್ಲಿ ಅಲ್ಲೆಲ್ಲ ಭತ್ತದ ಬೆಳೆ ತುಂಬಿ ನಿಂತಿದೆ. ಈ ಭತ್ತದ ಗದ್ದೆಯ ನಡುವೆ ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆ ರಕ್ಷಣೆಗೆ ನಿಂತಿರುತ್ತಾರೆ. ಹಗಲಿನಲ್ಲಿ ಈ ದೃಶ್ಯ ನಿನಗೆ ಬಹಳ ರೋಮಾಂಚನವನ್ನು ನೀಡುತ್ತದೆ. ಬಾಂಗ್ಲಾ ರೈತರ ಜೀವನಾಧಾರವೇ ಈ ಗದ್ದೆ ಬಯಲುಗಳು. ಇಲ್ಲೂ ಕೂಡ ಜಮೀನ್ದಾರಿ ಪದ್ಧತಿ ಇದೆ. ಒಬ್ಬ ಜಮೀನ್ದಾರ ಸಾವಿರಾರು ಎಕರೆ ಇಟ್ಟುಕೊಂಡು ನೂರಾರು ರೈತರನ್ನು ಶೋಷಿಸುತ್ತಿರುತ್ತಾನೆ. ಇಲ್ಲಿ ಬೆಳೆ ರಕ್ಷಣೆಗೆ ನಿಂತಿರುವ ರೈತರು ತಮ್ಮ ಜಮೀನನ್ನೇ ರಕ್ಷಣೆ ಮಾಡುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರು ರಕ್ಷಿಸುವ ಜಮೀನು ಅವರ ಜಮೀನುದಾರರದ್ದೂ ಆಗಿರುತ್ತದೆ. ತಲೆ ತಲಾಂತರದ ಜೀತದ ಪದ್ಧತಿ ಈಗಲೂ ಜೀವಂತವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಜಮೀನ್ದಾರ ಮಾತ್ರ ಇದ್ದಾನೆ. ಉಳಿದಂತೆ ಹೆಚ್ಚಿನ ಜಮೀನ್ದಾರರು ಕೊಲೆಯಾಗಿ ಹೋಗಿದ್ದಾರೆ. ಇಲ್ಲವೇ ಸರ್ಕಾರ ಕುತಂತ್ರ ಮಾಡಿ ಅವರ ಜಮೀನನ್ನು ತುಂಡು ತುಂಡು ಮಾಡಿಬಿಟ್ಟಿದೆ..'
            ಸಲೀಂ ಚಾಚಾ ವಿಸ್ತಾರವಾಗಿ ಹೇಳುತ್ತಲೇ ಇದ್ದರು. ವಿನಯಚಂದ್ರ ಕಿವಿಯಾಗಿದ್ದ. ಬಾಂಗ್ಲಾ ನಾಡಿನ ಚರಿತ್ರೆ, ಮಣ್ಣಿನ ಗುಣ, ಯುದ್ಧ ಇತ್ಯಾದಿಗಳೆಲ್ಲ ಬಿಚ್ಚಿಕೊಳ್ಳುತ್ತಿದ್ದವು. ಸಲೀಂ ಚಾಚಾ ಸೈಕಲ್ ರಿಕ್ಷಾ ಹೊಡೆಯುವವರೋ ಅಥವಾ ಇತಿಹಾಸಕಾರರೋ ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಅಷ್ಟರಲ್ಲಿ ಇನ್ನೊಂದು ಚಿಕ್ಕ ನದಿ ಅವರೆದುರು ಬಂದಿತು. ಅದಕ್ಕೊಂದು ಚಿಕ್ಕ ಸೇತುವೆ ಕೂಡ ಇತ್ತು. `ದೇಕೋ ಬೇಟಾ.. ಢಾಕಾದಿಂದ ಅಶೂಲಿಯಾಗೆ 25 ಕಿ.ಮಿ ಆಗುತ್ತದೆ. ಈ ದೂರದ ನಡುವೆ ನಾವು ಮೂರು ಸಾರಿ ನದಿ ದಾಟಬೇಕಾಗುತ್ತದೆ. ಆ ನದಿಗಳಲ್ಲಿ ಇದೂ ಒಂದು. ಈ ಕಿರು ನದಿಯಿದೆಯಲ್ಲ ಒಂದಾನೊಂದು ಕಾಲದಲ್ಲಿ ದೈತ್ಯವಾಗಿ ಹರಿಯುತ್ತಿತ್ತಂತೆ. ಆದರೆ ಕಾಲಕ್ರಮೇಣ ನದಿ ಪಥ ಬದಲಿಸಿದೆ. ಈ ಕವಲು ಚಿಕ್ಕದಾಗಿದೆ. ನಮಗೆ ಸಿಗುವ ಇನ್ನೊಂದು ಕವಲು ಬಹು ದೊಡ್ಡದು. ಆ ನದಿಯನ್ನು ದಾಟಿದ ನಂತರ ಅಶೂಲಿಯಾ. ಆದರೆ ಆ ಸೇತುವೆ ದಾಟುವುದು ನಮ್ಮ ಮುಂದಿರುವ ಪ್ರಮುಖ ಸವಾಲು. ಏಕೆಂದರೆ ಆ ಸೇತುವೆಯ ಸುತ್ತಮುತ್ತ ಕಳ್ಳಕಾಕರ ಹಾವಳಿಯಿದೆ. ದಾರಿಯಲ್ಲಿ ಹಾದು ಬರುವ ಪ್ರಯಾಣಿಕರನ್ನು ತಡೆದು ಅವರ ತಲೆಗೆ ಬಂದೂಕನ್ನು ಗುರಿಯಿಟ್ಟು ಕೈಯಲ್ಲಿರುವ ಹಣ, ಒಡವೆಗಳನ್ನೆಲ್ಲ ಕಿತ್ತುಕೊಳ್ಳುವುದು ಅವರ ಪ್ರಮುಖ ಕೆಲಸ. ನಾವು ಅವರನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋದರೆ ಬಹುದೊಡ್ಡ ಸಮಸ್ಯೆ ಕಡಿಮೆಯಾದಂತೆ. ಸರ್ಕಾರ ಇವರನ್ನು ಮಟ್ಟ ಹಾಕಲು ಪ್ರಯತ್ನಿಸಿ ಸೋತಿದೆ. ನಾವು ಈಗ ಎಚ್ಚರಿಕೆಯಿಂದ ಹೋಗಬೇಕು.. ಹುಷಾರು..' ಎಂದು ಚಾಚಾ ಹೇಳಿದರು. ವಿನಯಚಂದ್ರ ಸುಮ್ಮನೆ ಸೈಕಲ್ ತುಳಿಯುತ್ತಿದ್ದ.
             ತಂಗಾಳಿಯ ನಡುವೆ ಸೈಕಲ್, ಸೈಕಲ್ಲಿನಲ್ಲಿ ವಿನಯಚಂದ್ರ, ಮಧುಮಿತಾ, ಸಲೀಂ ಚಾಚಾ ಸಾಗುತ್ತಿದ್ದರು. ಸುತ್ತಲೂ ಕತ್ತಲಾವರಿಸಿತ್ತು. ಸಲೀಂ ಚಾಚಾ ಕೂಡ ಮಾತಾಡಿ ಮಾತಾಡಿ ಬೇಸರಗೊಂಡನೇನೋ. ಸುಮ್ಮನಾಗಿದ್ದ. ವಿನಯಚಂದ್ರ ತಂಗಾಳಿ ನಡುವೆಯೂ ಬೆವರುತ್ತ ಸೈಕಲ್ ತುಳಿಯುತ್ತಿದ್ದರೆ ಮಧುಮಿತಾ ಮಹಾರಾಣಿಯಂತೆ ಮಲಗಿ ನಿದ್ರಿಸುತ್ತಿದ್ದಳು. ವಿನಯ ಚಂದ್ರನಿಗೆ ಈ ಮೌನ, ಕಾರ್ಗತ್ತಲು, ಮುಂದೇನೋ ಕೆಟ್ಟ ಸಮಯವಿದೆ ಎನ್ನುವುದನ್ನು ಸಾರಿ ಹೇಳುತ್ತಿದ್ದಂತೆ ಅನ್ನಿಸಿತು. ಯಾವುದೋ ಅಪಾಯದ ಮುನ್ಸೂಚನೆಯಾಗಿ ಇಂತಹ ಶೂನ್ಯ ಮೌನ ಕಾಡುತ್ತಿದ್ದಂತೆ ಅನ್ನಿಸಿತು. ಸೈಕಲ್ ತುಳಿಯುತ್ತಿದ್ದರೂ ಅದೇನೋ ಚಟಪಡಿಕೆ ವಿನಯಚಂದ್ರನ ಮನಸ್ಸಿನಲ್ಲಿ ಆವರಿಸಿತು.

(ಮುಂದುವರಿಯುತ್ತದೆ..)            

Tuesday, August 12, 2014

ಸತ್ಯವಾದ ಹನಿಗಳು

ಕಾರಣ

ಸನಾತನಿಗಳ ಬಗ್ಗೆ

ವಿರುದ್ಧ ಚೀರಾಡುವವರಿಗೆ
ಇರುವ ಒಂದೇ ಕಾರಣ
ವಿನಾಕಾರಣ |

ಪಂಚ್


ಬಚ್ಚಲಮನೆಯ ಎದುರು ಬರೆದಿದ್ದ ಬರಹ :

ನಿಮ್ಮೊಳಗಿನ ಸಂಗೀತಗಾರನಿಗೆ ಇಲ್ಲಿ ವೇದಿಕೆ ಇದೆ..

ಇಬ್ಬಗೆ


ಮೂಢನಂಬಿಕೆ
ನಿಷೇಧಿಸಬೇಕೆಂದರು
ಮುಖ್ಯಮಂತ್ರಿ
ಸಿದ್ದರಾಮಯ್ಯರು..|
ಕಾವೇರಿ ಒಡಲು ತುಂಬಿತು
ಬಾಗಿನ ಕೊಟ್ಟರು ||

ಒಗ್ಗೂಡು

ಬಿಹಾರದಲ್ಲಿ
ಒಂದಾದರು
ನಿತೀಶ್ ಹಾಗೂ ಲಾಲೂ
ಇನ್ನುಮುಂದೇನಿದ್ದರೂ
ಬಾಣದ ಜೊತೆಗೆ ಕಂದೀಲು ||

Monday, August 11, 2014

ಪ್ರೀತಿಯ ಕವನ

ಕತ್ತಲೆಯ ನೆತ್ತಿಯಲಿ
ನಿಶೆಯೊಡಲ ಬುತ್ತಿಯಲಿ
ಘಮಿಸಿ ಬರುತಿದೆಯಲ್ಲೆ
ನನ್ನ ಮುಗುದ ಪ್ರೀತಿ |

ಬಿಸಿಲ ತಲೆ ಬೆಂಕಿಯಲಿ
ಸುರಿವ ಹನಿ ಬೆವರಿನಲಿ
ನಿಂತು ಸಿಲುಕಿದೆಯಲ್ಲೇ
ನನ್ನ ಹಸಿರು ಪ್ರೀತಿ |

ನವ ನಲಿವ ಬಂಡಿಯಲಿ
ಜೊತೆ ಜೀವ ಗುಂಡಿಯಲಿ
ಮುಳುಗೇಳುತಿದೆಯಲ್ಲೇ
ನನ್ನ ಹನಿಯ ಪ್ರೀತಿ |

ಸುಡುವ ಸೇಡಿನ ಮದ್ಯ
ಜೊತೆಗೆ ಬೆಂಕಿಯ ಸಖ್ಯ
ನಡುವೆ ಬೆಳೆದಿದೆಯಲ್ಲೇ
ನನ್ನ ಬದುಕ ಪ್ರೀತಿ |

**

ಈ ಕವಿತೆಯನ್ನು ಬರೆದಿರುವುದು 11-12-2006ರಂದು ದಂಟಕಲ್ಲಿನಲ್ಲಿ 

Sunday, August 10, 2014

ಬೆಂಗಾಲಿ ಸುಂದರಿ-20

        `ಒಳಗೆ ಬನ್ನಿ...' ಎಂದು ಸಲೀಂ ಚಾಚಾ ಮತ್ತೊಮ್ಮೆ ಕರೆದಾಗ ತುಸು ನಾಚಿಕೆಯಿಂದಲೇ ಒಳಗಡಿಯಿರಿಸಿದರು ವಿನಯಚಂದ್ರ ಹಾಗೂ ಮಧುಮಿತಾ. ಹಿಂದೆ ಒಂದೆರಡು ಸಾರಿ ಮಧುಮಿತಾ  ಸಲೀಂ ಚಾಚಾನ ಮನೆಗೆ ಬಂದಿದ್ದಳಾದರೂ ಸಲುಗೆಯಿರಲಿಲ್ಲ. ಆದ್ದರಿಂದ ಮುಜುಗರದಿಂದಲೇ ಹೆಜ್ಜೆ ಹಾಕಿದಳು. ಇವರು ಒಳಗೆ ಹೆಜ್ಜೆ ಇರಿಸಿದಂತೆಲ್ಲ ಒಂದಿಬ್ಬರು ಚಿಕ್ಕ ಚಿಕ್ಕ ಹುಡುಗರು ಓಡಿಬಂದು ಸಲೀಂ ಚಾಚಾನನ್ನು ತಬ್ಬಿಕೊಂಡರು. ಸಲೀಮ ಚಾಚಾ ತನ್ನ ಉದ್ದನೆಯ ಬಿಳಿ ನಿಲುವಂಗಿಯಿಂದ ಚಿಕ್ಕ ಚಾಕಲೇಟುಗಳನ್ನು ನೀಡಿದ ನಂತರ ಮನೆಗೆ ಹೊಸದಾಗಿ ಬಂದಿದ್ದ ವಿನಯಚಂದ್ರ ಹಾಗೂ ಮಧುಮಿತಾಳತ್ತ ಕುತೂಹಲದ ಕಣ್ಣು ಹಾಯಿಸುತ್ತ ಮನೆಯ ಒಳಗೆ ಓಡಿದರು. ಅಪರಿಚಿತರ ಕಡೆಗೆ ಭಯ ಹಾಗೂ ಬೆರಗೂ ಎರಡೂ ಇದ್ದಿದ್ದು ಮಕ್ಕಳ ಕಣ್ಣಿನಲ್ಲಿ ಸ್ಪಷ್ಟವಾಗಿತ್ತು.
            ವಿನಯಚಂದ್ರ ಹಾಗೂ ಮಧುಮಿತಾರಿಗೆ ಸಲೀಂ ಚಾಚಾ ಉಳಿಯಲಿಕ್ಕೊಂದು ಕೋಣೆಯನ್ನು ತೋರಿಸಿದರು. ಅಲ್ಲದೇ ತಮ್ಮ ಮನೆಯ ಸದಸ್ಯರನ್ನೂ ಪರಿಚಯಿಸಿದರು. ಸ್ವಲ್ಪ ಹೊತ್ತಿನ ನಂತರ ಮನೆಯ ಮಕ್ಕಳಿಗೆ ವಿನಯಚಂದ್ರ ಹಾಗೂ ಮಧುಮಿತಾಳಿಗೆ ಸಲುಗೆ ಬೆಳೆದ ಕಾರಣ ಹತ್ತಿ ಬಂದರು. ಇಬ್ಬರ ಮನಸ್ಸೂ ಕೊಂಚ ನಿರಾಳವಾಗಿತ್ತಾದರೂ ಮಧುಮಿತಾಳಿಗೆ ಬೆಳಿಗ್ಗೆ ನಡೆದಿದ್ದ ಘಟನೆ ಮಾಸಿರಲಿಲ್ಲ. ಆಗಾಗ ಬಿಕ್ಕುತ್ತಲೇ ಇದ್ದಳು. ವಿನಯಚಂದ್ರ ಆಕೆಯನ್ನು ಯಾವ ರೀತಿ ಸಮಾಧಾನ ಮಾಡಬೇಕು ಎನ್ನುವುದರಲ್ಲಿಯೇ ಸುಸ್ತಾಗಿದ್ದ. ಒಂದೇ ಘಳಿಗೆಯಲ್ಲಿ ಮನೆಯವರನ್ನೆಲ್ಲ ಕಳೆದುಕೊಂಡ ಕಾರಣ ಮಧುಮಿತಾ ಮೌನಕ್ಕೆ ಶರಣಾಗಿದ್ದಳು. ಮನಸ್ಸು ಮರುಗುತ್ತಿತ್ತು.
            ಸಲೀಂ ಚಾಚಾ ಒಳಗಿನಿಂದ ತಿಂಡಿಯನ್ನು ತಂದರು. ವಿನಯಚಂದ್ರನಿಗೆ ಒಮ್ಮೆ ಹಿಂಜರಿಕೆಯಾಯಿತು. ಅದನ್ನು ಗಮನಿಸಿದ ಸಲೀಂ ಚಾಚಾ `ಬೇಟಾ.. ಇದು ಅಪ್ಪಟ ಸಸ್ಯಾಹಾರ.. ಗೋಧಿ ರೊಟ್ಟಿ. ನಿಮಗೆ ತೊಂದರೆಯಾಗೋದಿಲ್ಲ.. ತಿನ್ನಿ.' ಎಂದ ನಂತರವೇ ವಿನಯಚಂದ್ರ ತಿನ್ನಲು ಮುಂದಾದದ್ದು. ಮಧುಮಿತಾಳಿಗೆ ತಿನ್ನಲು ಇಷ್ಟವಿರಲಿಲ್ಲ. ಒಂದೇ ರಾತ್ರಿಯಲ್ಲಿ ಅಪ್ಪ, ಅಮ್ಮ, ಸಹೋದರ, ಜೊತೆಗಾರರನ್ನೆಲ್ಲ ಕಳೆದುಕೊಂಡ ನಂತರದ ಶೂನ್ಯಭಾವ ಆಕೆಯನ್ನು ಆವರಿಸಿತ್ತು. ವಿನಯಚಂದ್ರನೇ ಒತ್ತಾಯ ಮಾಡಿ ಆಕೆಗೆ ತುತ್ತು ತಿನ್ನಿಸಿದ. ವಿನಯಚಂದ್ರನ ಭುಜಕ್ಕೆ ಒರಗಿಕೊಂಡೇ ತಿಂಡಿ ತಿಂದಳು ಮಧುಮಿತಾ. ಸಲೀಮ ಚಾಚಾ ಮನೆಯನ್ನೆಲ್ಲ ತೋರಿಸಿದ. ಚಾಚಾನಿಗೆ ಅದೇನು ಕೆಲಸವಿತ್ತೋ, ಮನೆಯ ಸದಸ್ಯರ ಬಳಿ ಮಾತನಾಡುತ್ತಿರುವಂತೆ ಹೇಳಿ ತಾನು ಹೊರಟ. ವಿನಯಚಂದ್ರನಿಗೆ ಅಪರಿಚಿತರ ಬಳಿ ಮಾತನಾಡುವುದು ಏನು ಎನ್ನಿಸಿತು. ಮಧುಮಿತಾಳನ್ನು ಸಲೀಮ್ ಚಾಚಾನ ಮಡದಿ ಸಂತೈಸತೊಡಗಿದ್ದಳು. ವಿನಯಚಂದ್ರ ಮಾಡಲು ಬೇರೆ ಕೆಲಸವಿಲ್ಲದೇ ಸಲೀಮ ಚಾಚಾನ ಮನೆಯ ಗೋಡೆಯ ಮೇಲಿದ್ದ ಚಿತ್ತಾರಗಳತ್ತ ದೃಷ್ಟಿ ಹಾಯಿಸತೊಡಗಿದ.
            ತನ್ನ ಹುಮ್ಮಸ್ಸಿನ ವಯಸ್ಸಿನಲ್ಲಿ ಸಲೀಂ ಚಾಚಾ ಅದೇನು ಉದ್ಯೋಗ ಮಾಡುತ್ತಿದ್ದನೋ. ಆದರೆ ಆತನ ಆಸಕ್ತಿಗಳು ಬಹಳ ಕುತೂಹಲವನ್ನು ಹುಟ್ಟುಹಾಕುವಂತಿದ್ದವು. ಗೋಡೆಯ ಮೇಲೆ ಬಳ್ಳಿ ಬಳ್ಳಿಗಳ ಸುಂದರ ಚಿತ್ರಣ.  ತನ್ನೂರಿನಲ್ಲಿ ಪ್ರಧಾನ ಬಾಗಿಲ ಪಕ್ಕದಲ್ಲಿ ಅಂತಹ ಬಳ್ಳಿಗಳನ್ನು ಚಿತ್ರಿಸುತ್ತಿದ್ದ ನೆನಪಾಯಿತು. ನಡು ನಡುವೆ ಉರ್ದು ಲಿಪಿಯಲ್ಲಿ ಬರೆಯಲಾಗಿತ್ತು. ಖುರ್-ಆನ್ ನ ವಾಕ್ಯಗಳಿರಬೇಕು ಎಂದುಕೊಂಡ. ನೆಲಕ್ಕೆಲ್ಲ ಟೈಲ್ಸ್ ಹಾಕಲಾಗಿತ್ತು. ಬಿಳಿಬಣ್ಣದ ಗೋಡೆಗಳು ಒಂಚೂರೂ ಮುಕ್ಕಾಗಿರಲಿಲ್ಲ. ಮುಟ್ಟಿದರೆ ತನ್ನ ಕೈಯ ಕೊಳೆಯೇ ಅಂಟುತ್ತವೆಯೇನೋ ಎನ್ನುವಷ್ಟು ಬಿಳುಪಾಗಿತ್ತು. ಶುಭ್ರವಾಗಿತ್ತು. ನೋಡುತ್ತಿದ್ದಾಗಲೇ ಸಲೀಮ ಚಾಚಾನ ಮೊಮ್ಮಕ್ಕಳು ಬಂದು ವಿನಯಚಂದ್ರನನ್ನು ಮುತ್ತಕೊಂಡವು. ವಿನಯಚಂದ್ರನನ್ನು ಆಟಕ್ಕೆ ಬರುವಂತೆ ಕರೆದವು. ಸಮಯ ಹೋಗಬೇಕಿತ್ತಲ್ಲ. ವಿನಯಚಂದ್ರ ಆ ಹುಡುಗರ ಜೊತೆಗೆ ಹುಡಗಾಟಕ್ಕಿಳಿದ.
           ಒಂದೊಪ್ಪತ್ತಿನ ನಂತರ ಸಲೀಮ ಚಾಚಾ ವಾಪಾಸು ಬಂದಿದ್ದರು. ಬಂದವರೇ ವಿನಯಚಂದ್ರನ ಬಳಿ `ಬೇಟಾ.. ನೀನು ಭಾರತಕ್ಕೆ ಮರಳಬೇಕಲ್ಲ. ಅದಕ್ಕೆ ನಾನು ಹಲವು ಜನರ ಬಳಿ ವಿಚಾರಿಸಿದೆ...' ಎಂದರು.
           `ಯಾಕೆ ಚಾಚಾ.. ವಿಮಾನವಿದೆಯಲ್ಲ.. ನಾನು ಅದರಲ್ಲೆ ಮರಳುತ್ತೇನೆ ಬಿಡಿ.. ಮಧುಮಿತಾಳನ್ನೂ ಕರೆದೊಯ್ಯುತ್ತೇನೆ..ಅವಳಿಗೆ ಏನೂ ತೊಂದರೆಯಾಗಲಿಕ್ಕಿಲ್ಲ. ಮಿತ್ರ ಸೂರ್ಯನ್ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಅವನ ಬಳಿ ವಿಚಾರಿಸಿ ಮುಂಡುವರಿಯುತ್ತೇನೆ' ಎಂದ ಎಂದ ವಿನಯ ಚಂದ್ರ,
               `ವಿಮಾನ....' ಎಂದವರೇ ಒಮ್ಮೆಲೆ ನಕ್ಕ ಸಲೀಂ ಚಾಚಾ `ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚಾದಂತೆ ವಿಮಾನ ನಿಲ್ದಾಣ ಮುಚ್ಚಲಾಗಿದೆ. ನಿಮ್ಮ ಕಬ್ಬಡ್ಡಿ ತಂಡದವರೂ ಭಾರತ ಸೇರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ಅನುಮಾನಗಳಿವೆ. ಸಾಧ್ಯವಾದರೆ ಭಾರತ ತಂಡದ ಬಗ್ಗೆ ವಿಚಾರಿಸು. ಅವರು ಗಲಾಟೆಯಲ್ಲಿ ಸಿಕ್ಕಿಬಿದ್ದು ಭಾನಗಡಿ ಆಗದಿದ್ದರೆ ಸಾಕು ನೋಡು. ಈಗ ನೀನು ಭಾರತ ಸೇರಬೇಕೆಂದರೆ ಒಂದೋ ಹಡಗಿನ ಮೂಲಕ ಹೋಗಬೇಕು. ಇಲ್ಲವಾದಲ್ಲಿ ಭೂ ಮಾರ್ಗದ ಮೂಲಕ ಹೋಗಬೇಕು. ಎರಡೂ ಸುಲಭದಲ್ಲಿಲ್ಲ..' ಎಂದರು.
            `ಯಾಕೆ ಚಾಚಾ.. ಭಾರತ-ಪಾಕಿಸ್ತಾನ ನಡುವೆ ಬಸ್ ಸಂಚಾರ ಇದೆಯಲ್ಲ.. ಹಾಗೆಯೇ ಭಾರತ-ಬಾಂಗ್ಲಾ ನಡುವೆ ಬಸ್ ಸಂಚಾರ ಇಲ್ಲವೇ? ..ಬಸ್ ಮೂಲಕ ಹೋದರೆ ಆಯ್ತು.' ಮುಗ್ಧವಾಗಿ ಕೇಳಿದ ವಿನಯಚಂದ್ರ.
            ನಸುನಕ್ಕ ಸಲೀಂ ಚಾಚಾ `ಮೊದಲ್ನೇನಾಗಿ ಹೇಳಬೇಕು ಅಂದರೆ ಭಾರತ-ಬಾಂಗ್ಲಾ ನಡುವೆ ಬಸ್ ಸಂಚಾರ ಇಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕಾರಣಿಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಏನಾದರೂ ಬೇಕಲ್ಲ. ಅದಕ್ಕೆ ಬಸ್ ಬಿಡಿಸುತ್ತಾರೆ. ರೈಲನ್ನೂ ಓಡಿಸುತ್ತಾರೆ. ಆದರೆ ಇದು ಬಾಂಗ್ಲಾದೇಶ. ಭಾರತಕ್ಕೆ ಬಾಂಗ್ಲಾದಿಂದ ಆಗಬೇಕಾದದ್ದು ಏನೂ ಇಲ್ಲವಲ್ಲ. ಹಾಗಾಗಿ ಇಲ್ಲಿಗೆ ಬಸ್ಸೂ ಇಲ್ಲ ರೈಲೂ ಇಲ್ಲ. ಇನ್ನೊಂದಂದ್ರೆ ಇಂತಹ ಹಿಂಸಾಚಾರದ ಸಂದರ್ಭದಲ್ಲಿ ಬಸ್ ಸಂಚಾರ ಏರ್ಪಡುತ್ತಾ? ಅದರಲ್ಲೂ ಭಾರತಕ್ಕೆ ಬಸ್ ಸಂಚಾರ ಊಹೂಂ.. ನಿಂತುಬಿಟ್ಟಿರುತ್ತದೆ.' ಎಂದರು ಸಲೀಂ ಚಾಚಾ.
            `ಮತ್ತೆ .. ಇನ್ನು ಹೇಗೆ ಭಾರತಕ್ಕೆ ಹೋಗೋದು..? ಇಲ್ಲಿ ಎಷ್ಟು ದಿನ ಅಂತ ಇರೋದು. ಗುರ್ತಿಲ್ಲ, ಪರಿಚಯ ಇಲ್ಲ. ನಮ್ಮ ಪರಿಸ್ತಿತಿ ಅತಂತ್ರವಾದಂತೆಯಾ? '
            `ಬೇಟಾ ನಾನು ಇರುವ ತನಕ ನೀವು ಹೇಗೆ ಅತಂತ್ರರಾಗುತ್ತೀರಿ? ಎಷ್ಟು ದಿನ ಇದ್ದರೂ ತೊಂದರೆಯಿಲ್ಲ. ನಮ್ಮ ಮನೆಯಲ್ಲಿ ಉಳಿದಕೊಳ್ಳಬಹುದು. ಭಾರತಕ್ಕೆ ಹೋಗಲೇಬೇಕು ಎನ್ನುವ ಸಂದರ್ಭದಲ್ಲಿ ನೋಡೋಣ. ಅದಕ್ಕಾಗಿ ಪ್ರಯತ್ನ ಮಾಡೋಣ. ಭಾರತಕ್ಕೆ ಹೋಗೋಕೆ ಪ್ರಮುಖ ಮಾರ್ಗವೊಂದಿದೆ. ಅದನ್ನು ಪ್ರಯತ್ನಿಸಬಹುದು. ಭಾರತದ ಗಡಿಗೆ ಹೋಗಿ.. ಅಲ್ಲಿ ಕದ್ದು ನುಸುಳೋದು.. ಅದರ ಬಗ್ಗೆಯೇ ನಾನು ವಿಚಾರಿಸಿಕೊಂಡು ಬಂದಿದ್ದು. ಇಂತಹ ಪರಿಸ್ಥಿತಿಯಲ್ಲಿ ಹಡಗು, ದೋಣಿಗಳಲ್ಲಿ ಕದ್ದು ಭಾರತಕ್ಕೆ ನುಸುಳುವುದು ಬಹಳ ಕಷ್ಟದ ಕೆಲಸ. ಭೂ ಮಾರ್ಗದಲ್ಲೇ ಪ್ರಯತ್ನಿಸಬೇಕು. ಬಾಂಗ್ಲಾ ದೇಶದಿಂದ ದಿನವಹಿ ಅದೆಷ್ಟೋ ಜನರು ಭಾರತಕ್ಕೆ ನುಸುಳುತ್ತಾರಲ್ಲ.. ನೀವೂ ಹಾಗೆಯೇ ನುಸುಳುವುದು. ಹೇಗಂದರೂ ನೀನು ಭಾರತದ ಕಬ್ಬಡ್ಡಿ ಆಟಗಾರ. ಭಾರತದ ಗಡಿಯೊಳಗೆ ಹೋದ ತಕ್ಷಣ ಅಲ್ಲಿನ ಮಿಲಿಟರಿ ಅಧಿಕಾರಿಗಳ ಬಳಿ ನಿನ್ನ ಬಗ್ಗೆ ಹೇಳಿದರೆ ಎಲ್ಲ ಸೌಕರ್ಯಗಳನ್ನು ಅವರೇ ಕಲ್ಪಿಸಿಕೊಡುತ್ತಾರೆ..' ಎಂದು ಸಲೀಂ ಚಾಚಾ ಸಲಹೆ ನೀಡಿದರು.
             ವಿನಯಚಂದ್ರನ ಕಣ್ಣಲ್ಲಿ ಬೆಳಕು ಮೂಡಿತು. ಆದರೆ ಮನದಲ್ಲಿ ಮೂಡಿದ್ದ ಬೆಳಕು ತಕ್ಷಣವೇ ಆರಿದಂತಾಯಿತು. ಹಿಂಸಾಪೀಡಿತ ರಾಷ್ಟ್ರದಲ್ಲಿ ಗಡಿ ಪ್ರದೇಶಕ್ಕೆ ತೆರಳುವುದು ಸುಲಭದ ಕೆಲಸವಂತೂ ಆಗಿರಲಿಲ್ಲ. ದೇಶದ ನಟ್ಟ ನಡುವೆ ಇದ್ದ ರಾಜಧಾನಿಯಿಂದ ಗಡಿ ಭಾಗಕ್ಕೆ ಏನಿಲ್ಲವೆಂದರೂ ಕನಿಷ್ಟ 300 ರಿಂದ 500 ಕಿ.ಮಿ ಪ್ರಯಾಣ ಮಾಡಬೇಕಿತ್ತು. ಅದು ಸುಲಭದ್ದಾಗಿರಲಿಲ್ಲ. ಹೀಗೆ ಪ್ರಯಾಣ ಮಾಡುವುದೆಂದರೆ ಬೆಂಕಿಯ ಮೇಲೆ ನಡೆದಂತೆ ಎಂಬುದು ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ ತಕ್ಷಣ ಆತನ ಮನಸ್ಸು ಒಮ್ಮೆ ಮಂಕಾಯಿತು.
            ವಿನಯಚಂದ್ರ ತಕ್ಷಣವೇ ತನ್ನ ಮೊಬೈಲನ್ನು ಸ್ವಿಚ್ ಆನ್ ಮಾಡಿದ. ತನ್ನ ಮೊಬೈಲಿಗೆ ಜಾಧವ್ ಹಾಗೂ ಸೂರ್ಯನ್ ರಿಂದ ನೂರಾರು ಕರೆಗಳು ಬಂದಿರುವ ಮೆಸೆಜುಗಳು ಗುಪ್ಪೆ ಗುಪ್ಪೆಯಾಗಿ ಬಂದು ಬಿದ್ದಿದ್ದವು. ಜಾಧವ್ ಅವರಿಗೆ ದೂರವಾಣಿ ಕರೆಮಾಡಿ ವಿಷಯ ಹೇಳಲು ಯತ್ನಿಸಿದ. ಪೋನ್ ಕನೆಕ್ಟ್ ಆಗಲಿಲ್ಲ. ಬಾಂಗ್ಲಾದೇಶದ ಫಾಸಲೆಯಲ್ಲಿ ಇದ್ದರೆ ಮೊಬೈಲ್ ಸಂಪರ್ಕಕ್ಕೆ ಸಿಗಬೇಕಿತ್ತು. ಆದರೆ ಅವರು ಭಾರತಕ್ಕೆ ಹೋಗಿ ತಲುಪಿದ್ದಾರೆ. ಆ ಕಾರಣದಿಂದಲೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದುಕೊಂಡ ವಿನಯಚಂದ್ರ. ಸೂರ್ಯನ್ ಮೊಬೈಲ್ ಕೂಡ ಅದೇ ರಾಗ ಹಾಡಿತ್ತು.
            ವಿನಯಚಂದ್ರ ಹಾಗೂ ಮಧುಮಿತಾ ಭಾರತದ ಗಡಿಯನ್ನು ನುಸುಳುವ ಬಗ್ಗೆ ತಯಾರಿ ಮಾಡಿಕೊಳ್ಳುವುದು ಸೂಕ್ತ ಎಂದು ಚಾಚಾ ಸಲಹೆ ನೀಡಿದ. ಭಾರತಕ್ಕೆ ತಲುಪಬೇಕೆಂದರೆ ಭೂಮಾರ್ಗದಲ್ಲಿ ಪ್ರಯಾಣ ಮಾಡುವುದು ಅನಿವಾರ್ಯ ಎಂದೂ ಸಲಿಂ ಚಾಚಾ ಹೇಳಿದ. ಎಷ್ಟೇ ಕಷ್ಟ ಬಂದರೂ ಇದ್ದುದರಲ್ಲಿ ಒಳ್ಳೆಯ ಮಾರ್ಗ ಇದು ಎಂದೂ ಹೇಳಿದ. ಸಲೀಂ ಚಾಚಾ ಪದೇ ಪದೆ ಭೂಮಾರ್ಗದ ಪ್ರಸ್ತಾಪವನ್ನು ಮಾಡಿದಾಗ ವಿನಯಚಂದ್ರನಿಗೆ ಸ್ವಲ್ಪ ಭರವಸೆ ಮೂಡಿತು. ಸಲೀಂ ಚಾಚಾ ಅಷ್ಟು ನಿರ್ದಿಷ್ಟವಾಗಿ ಹೇಳುತ್ತಿದ್ದಾನೆ ಎಂದಾದರೆ ಆತ ಖಂಡಿತವಾಗಿಯೂ ಭೂಮಾರ್ಗದ ಕುರಿತು ಯಾರ ಬಳಿಯೋ ಮಾತನಾಡಿರುತ್ತಾನೆ. ಆದ್ದರಿಂದ ಸಲೀಂ ಚಾಚಾನ ಸಹಾಯ ಕೇಳಬೇಕು ಹಾಗೂ ಅವನು ಹೇಳಿದಂತೆ ನಡೆಯಬೇಕು ಎಂದುಕೊಂಡ. ವಿನಯಚಂದ್ರ ಯಾವ ಮಾರ್ಗದ ಮೂಲಕ ಭಾರತದೊಳಗೆ ನುಸುಳುವುದು ಎನ್ನುವದನ್ನು ಚಾಚಾನ ಬಳಿ ಚರ್ಚಿಸಿದ.
           ಮಾತನಾಡಲು ಆರಂಭಿಸಿದ ಚಾಚಾ `ಬೇಟಾ.. ನಿನಗೆ ಭಾರತದೊಳಕ್ಕೆ ನುಸುಳಲು ನೂರಾರು ಮಾರ್ಗಗಳಿವೆ. ಪಶ್ಚಿಮ ಬಂಗಾಲದ ಗಡಿಯಲ್ಲಿ ನುಸುಳಬಹುದು. ಅಸ್ಸಾಂ ಗಡಿಯಲ್ಲಿ ಒಳಹೋಗಬಹುದು. ಅದಿಲ್ಲವಾದರೆ ಮೇಘಾಲಯ, ತ್ರಿಪುರಗಳ ಮೂಲಕವೂ ಭಾರತಕ್ಕೆ ತೆರಳಬಹುದು. ಆದರೆ ಯಾವುದು ಒಳ್ಳೆಯದು ಎನ್ನುವ ಆಯ್ಕೆ ನಿನ್ನದು..' ಎಂದರು.
           `ಗೊತ್ತಿಲ್ಲ ಚಾಚಾ.. ನನಗೆ ಏನೂ ತೋಚುತ್ತಿಲ್ಲ.. ನನಗೆ ಗಡಿ ನುಸುಳುವುದೂ ಗೊತ್ತಿಲ್ಲ. ಹಿಂಸಾ ಪೀಡಿತ ಸ್ಥಳಗಳಲ್ಲಿ ಓಡಾಡಿಯೂ ಗೊತ್ತಿಲ್ಲ. ಗಡಿ ನುಸುಳುವುದು ಸುಲಭದ ಕೆಲಸವೇ? ಭಾರತೀಯ ಸೈನ್ಯದವರು ಸದಾ ಕಾಲ ಕಾಯುತ್ತಿರುತ್ತಾರೆ. ಗಡಿ ನುಸುಳುವ ಸಂದರ್ಭದಲ್ಲಿ ನಾವು ಸಿಕ್ಕಿಬಿದ್ದರೆ ಏನು ಮಾಡುವುದು? ಅವರು ಕೊಲ್ಲಬಹುದು ಅಂಥವಾ ಬಂಧಿಸಬಹುದು ಅಲ್ಲವಾ? ನಮ್ಮ ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂದು ಹೇಗೆ ಹೇಳುತ್ತೀಯಾ?' ವಿನಯಚಂದ್ರ ಆತಂಕದಿಂದ ಕೇಳಿದ್ದ.
           `ಪಶ್ಚಿಮ ಬಂಗಾಲದಲ್ಲಿ ನುಸುಳಬಹುದು. ಆದರೆ ಇತ್ತೀಚೆಗೆ  ಆ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಇದೆಯಂತೆ. ಅಲ್ಲದೇ ಅಲ್ಲಿ ಕಟ್ಟುನಿಟ್ಟಿನ ಪಹರೆ ಕೂಡ ಹಾಕಲಾಗಿದೆ ಎಂದು ಹೇಳುತ್ತಾರೆ. ತ್ರಿಪುರಾ ಹಾಗೂ ಮೇಘಾಲಯದ ಮೂಲಕ ಹೋಗಬೇಕೆಂದಾದರೆ ಆ ಮಾರ್ಗದಲ್ಲಿ ಕಡಿದಾದ ಗುಡ್ಡಗಳಿವೆ. ಚಿತ್ತಗಾಂಗ್, ಮೇಘಾಲಯ, ತುರಾ ಗುಡ್ಡದ ಶ್ರೇಣಿಗಳನ್ನು ನೀವು ದಾಟಲೇಬೇಕು. ಬಹಳ ಕಷ್ಟ ಪಡಬೇಕಾಗುತ್ತದೆ. ಇವೆಲ್ಲವುಗಳಿಗಿಂತ ಅಸ್ಸಾಂ ಗಡಿಯಲ್ಲಿ ನುಸುಳುವುದೇ ಸುಲಭ. ಬಹುಶಃ ಭಾರತದಲ್ಲಿ ಅತ್ಯಂತ ಹೆಚ್ಚು ಬಾಂಗ್ಲಾದೇಶಿಯರು ನುಸುಳುವ ಜಾಗ ಎಂದರೆ ಅಸ್ಸಾಂ ಗಡಿಯೇ ಇರಬೇಕು. ಇಲ್ಲಿಂದ ನೀವು ಸುಲಭವಾಗಿ ಹೋಗಬಹುದು.. ನನಗೆ ಒಬ್ಬ ಏಜೆಂಟ್ ಗೊತ್ತಿದ್ದಾನೆ. ಬಾಂಗ್ಲಾದಿಂದ ಭಾರತಕ್ಕೆ ಯಾರಾದರೂ ನುಸುಳಬೇಕು ಎಂದಾದರೆ ಅವರನ್ನು ಭಾರತಕ್ಕೆ ಕಳಿಸುವ ಕೆಲಸ ಆತನದ್ದು. ಈಗ ನಾನು ಅವರನ್ನು ಭೇಟಿಯಾಗಿ ಬಂದಿದ್ದೇನೆ.. ಎಷ್ಟೋ ಜನ ಹೀಗೆ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದಾರೆ. ನುಸುಳಲು ಕಾಯುತ್ತಲೂ ಇದ್ದಾರೆ. ಅವರಲ್ಲಿ ನೀವೂ ಕೂಡ ಇಬ್ಬರು. ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಗುಂಡು ಹೊಡೆಯಲಾರರು ಎನ್ನುವ ನಂಬಿಕೆ ನನಗಿದೆ. ಸಿಕ್ಕಿಬಿದ್ದರೆ ನೀನು ನಿನ್ನ ಎಲ್ಲ ವಿವರಗಳನ್ನು ಹೇಳಿದರಾಯಿತು. ಆಗ ಭಾರತದ ಸೈನ್ಯವೇ ನಿನ್ನ ಸಹಾಯಕ್ಕೆ ಧಾವಿಸಬಹುದು ಅಲ್ಲವಾ' ಎಂದರು ಸಲೀಮ ಚಾಚಾ.
            ಭಾರತಕ್ಕೆ ನುಸುಳಬೇಕೆಂದರೂ ಎಷ್ಟೆಲ್ಲ ಜಾಲಗಳು ಕೆಲಸ ನಿರ್ವಹಿಸುತ್ತವಲ್ಲ. ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದಲ್ಲ ಎಂದುಕೊಂಡ ವಿನಯಚಂದ್ರ ತಾನು ಭಾರತೀಯನೇ ಆದರೂ ತನ್ನ ತಾಯ್ನೆಲ ಭಾರತಕ್ಕೆ ನುಸುಳಿ ಹೋಗುವಂತಹ ಪರಿಸ್ಥಿತಿ ಬಂದೊದಗಿತಲ್ಲ ಎಂಬ ಬಾವ ಕಾಡಿತು. ತನ್ನೊಳಗೆ ನಸುನಕ್ಕ. ಸೀದಾ ಮಧುಮಿತಾಳ ಬಳಿ ವಿಷಯವನ್ನು ತಿಳಿಸಿದ. ಆದರೆ ಆಕೆಯಿಂದ ಬಂದ ಉತ್ತರ ಮಾತ್ರ ವ್ಯತಿರಿಕ್ತವಾಗಿತ್ತು. ತನ್ನ ಕುಟುಂಬದ ಸದಸ್ಯರನ್ನೆಲ್ಲ ಕಳೆದುಕೊಂಡಿದ್ದ ಮಧುಮಿತಾ ಭಾರತಕ್ಕೆ ಬರಲು ಸುತಾರಾಂ ಒಪ್ಪಲಿಲ್ಲ. ವಿನಯಚಂದ್ರ ಒತ್ತಾಯ ಮಾಡುತ್ತಲೇ ಇದ್ದ. ಅದಕ್ಕೆ ಮಧುಮಿತಾ ನಕಾರಾತ್ಮಕವಾಗಿ ಉತ್ತರ ನೀಡುತ್ತಲೇ ಇದ್ದಳು. ವಿಷಯವನ್ನು ತಿಳಿದ ಸಲೀಂ ಚಾಚಾ ಬಂದು ಒಪ್ಪಿಸಿದ ನಂತರವೇ ಮಧುಮಿತಾ ಭಾರತಕ್ಕೆ ತೆರಳಲು ಒಪ್ಪಿಕೊಂಡಿದ್ದು. ಈ ಸಂದರ್ಭದಲ್ಲಿ ವಿನಯಚಂದ್ರನಿಗೆ ಸಲೀಂ ಚಾಚಾ ಒಬ್ಬ ಸಂತನಂತೆಯೂ, ಪ್ರೀತಿಯಿಂದ ಮೈದಡವುವ ಅಜ್ಜನಂತೆಯೂ, ಯಾವತ್ತೋ ಬಿಟ್ಟು ಹೋದ ಗೆಳೆಯನಂತೆಯೂ ಕಂಡ. ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂಗಳಾದ ತಮ್ಮನ್ನು ಕಾಪಾಡಲು ಒಬ್ಬ ಮುಸ್ಲಿಂ ಎಷ್ಟೆಲ್ಲ ಸಹಾಯ ಮಾಡುತ್ತಾನೆ ಎಂದುಕೊಂಡ ವಿನಯಚಂದ್ರ. ಹೇಗಾದರೂ ಮಾಡಿ ತಮ್ಮನ್ನು ಭಾರತಕ್ಕೆ ಕಳಿಸಬೇಕೆಂದು ಪ್ರಯತ್ನಿಸುತ್ತಿರುವ ಸಲೀಂ ಚಾಚಾನ ಗುಣ ಇಷ್ಟವಾಯಿತು. ಬಹಳ ಸೆಳೆಯಿತು.

***
           ಇದಾದ ನಂತರ ಪ್ರತಿ ಕ್ಷಣ, ಪ್ರತಿ ಸಮಯದಲ್ಲೂ ಭಾರತಕ್ಕೆ ಹೇಗೆ ಹೋದರೆ ಚನ್ನ, ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಚರ್ಚೆ ಸಲೀಂ ಚಾಚಾನ ಮನೆಯಲ್ಲಿ ಆರಂಭವಾಯಿತು. ಪ್ರತಿಯೊಬ್ಬರೂ ತಮಗೆ ತಿಳಿದ ಅಂಶಗಳನ್ನು ತಿಳಿಸುತ್ತಿದ್ದರು. ಢಾಕಾದಿಂದ ಬ್ರಹ್ಮಪುತ್ರ ನದಿಗುಂಟ ಸಾಗಿ, ಅಲ್ಲಿಂದ ಸೀದಾ ಅಸ್ಸಾಂ ಗಡಿಗೆ ಹೋಗಿ ಒಳ್ಳೆಯ ಅವಕಾಶಕ್ಕಾಗಿ ಕಾಯುವುದು, ಚಿಕ್ಕ ಅವಕಾಶ ಸಿಕ್ಕ ತಕ್ಷಣ ಭಾರತಕ್ಕೆ ದಾಟಿಕೊಂಡು ಬಿಡುವುದು ಎನ್ನುವುದು ಎಲ್ಲರ ಸಲಹೆಯಾಗಿತ್ತು. ಪ್ರತಿಯೊಬ್ಬರೂ ಈ ಸಲಹೆಯನ್ನು ಒಪ್ಪಿಕೊಂಡಿದ್ದರು. ಇದಕ್ಕಾಗಿ ಎಲ್ಲ ತಯಾರಿಗಳನ್ನೂ ಕೈಗೊಳ್ಳಲಾಯಿತು. ಹಿಂಸಾಪೀಡಿತ ಬಾಂಗ್ಲಾದೇಶದಿಂದ ಭಾರತದ ಗಡಿಯವರೆಗೆ ತೆರಳುವುದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಹಿಂದೂಗಳಾಗಿದ್ದ ಇವರ ಬಗ್ಗೆ  ಚಿಕ್ಕ ಸಂದೇಹ ಬಂದರೂ ಸಾವನ್ನಪ್ಪುವುದು ಗ್ಯಾರಂಟಿಯಾಗಿತ್ತು. ತಲೆಮರೆಸಿಕೊಂಡು, ಮುಸ್ಲೀಮನಂತೆ ವೇಷ ಧರಿಸಿಕೊಂಡೋ ಅಥವಾ ಇನ್ಯಾವುದೋ ಬಗೆಯಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ವಿನಚಂದ್ರ ಗಡ್ಡ ಬಿಡಲು ತೀರ್ಮಾನಮಾಡಿದ್ದ. ಪ್ರತಿದಿನ ಮಾಡುತ್ತಿದ್ದ ಶೇವಿಂಗನ್ನು ನಿಲ್ಲಿಸಿದ್ದ. ಮೂರನೇ ದಿನಕ್ಕೆಲ್ಲ ಸಾಕಷ್ಟು ಗಡ್ಡ ಬೆಳೆದಿತ್ತು. ಸಲೀಂ ಚಾಚಾ ವಿನಯಚಂದ್ರ ಮುಸ್ಲೀಮನಂತೆ ಕಾಣಲು ಏನೇನು ಬೇಕೋ ಅದೆಲ್ಲವನ್ನೂ ಮಾಡಿದ್ದರು.
             ಬಾಂಗ್ಲಾದ ಫಾಸಲೆಯಲ್ಲಿ ಇದ್ದಾಗ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಮುಸ್ಲೀಂ ಹೆಸರನ್ನು ಇಟ್ಟುಕೊಳ್ಳಬೇಕು. ಇಬ್ಬರೂ ಗಂಡ ಹೆಂಡತಿಯರೆಂದು ಎಲ್ಲರ ಬಳಿಯೂ ಹೇಳಿಕೊಳ್ಳಬೇಕು ಎಂದು ಸಲೀಂ ಚಾಚಾನ ಮಗ ಸಲಹೆ ನೀಡಿದ್ದರು. ಎಲ್ಲರಿಗೂ ಈ ಸಲಹೆ ಹೌದೆನ್ನಿಸಿತ್ತು. ತಕ್ಷಣ ಆ ಕುರಿತು ಎಲ್ಲರೂ ಸಿದ್ಧತೆ ನಡೆಸಲಾರಂಭಿಸಿದರು. ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ವಿನಯಚಂದ್ರನಿಗೆ ತಿಳಿಸಿದಾಗ ಆತನಿಗೆ ಮನಸ್ಸಿನೊಳಗೆ ಖುಷಿಯಾಗಿತ್ತು. ಆದರೆ ಭಾರತದಲ್ಲಿ ತನ್ನ ಮನೆಯಲ್ಲಿ ಮಧುಮಿತಾಳನ್ನು ಮದುವೆಯಾಗಬೇಕು ಎಂದುಕೊಂಡಿದ್ದವನಿಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ನಡುವಿನ ಯಾವುದೋ ಒಂದು ಮೂಲೆಯಲ್ಲಿ ತಂದೆ, ತಾಯಿ, ಬಂಧು, ಬಳಗ ಯಾರೂ ಇಲ್ಲದೇ ಮದುವೆಯಾಗಬೇಕಾಗುತ್ತದೆಯಲ್ಲಾ ಎನ್ನುವುದೂ ಕಾಡಿತು. ಮದುಮಿತಾಳ ಬಳಿ ಈ ವಿಷಯ ತಿಳಿಸಿದಾಗ ಆಕೆ ಆರಂಭದಲ್ಲಿ ಮಾತನಾಡಿರಲಿಲ್ಲ. ನಂತರ ಆಕೆ ಕೂಡ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದ ಅಂಶಗಳನ್ನೇ ತಿಳಿಸಿದಾಗ ವಿನಯಚಂದ್ರ ಒಮ್ಮೆ ಅಚ್ಚರಿ ಹೊಂದಿದ್ದ. ಎಷ್ಟು ಚನ್ನಾಗಿ ಆಲೋಚನೆ ಮಾಡುತ್ತಾಳಲ್ಲ ಇವಳು. ತನಗೆ ಅನುರೂಪಳು ಎಂದುಕೊಂಡ.
                ಕೊನೆಗೆ ಸಲೀಂ ಚಾಚಾ ನೆ `ಇಲ್ಲಿ ಮದುವೆಯ ಶಾಸ್ತ್ರ ಆಗಲಿ. ಭಾರತಕ್ಕೆ ಹೋದ ನಂತರ ಶಾಸ್ತ್ರೋಕ್ತವಾಗಿ ನಿಮಗೆ ಬೇಕಾದ ಹಾಗೆ ಮದುವೆಯಾಗಿ. ಇಲ್ಲಿ ತೋರಿಕೆಗಾದರೂ ಮದುವೆಯಾಗಲೇ ಬೇಕಾಗುತ್ತದೆ..' ಎಂದಾಗ ವಿಧಿಯಿಲ್ಲದೇ ಒಪ್ಪಿಕೊಳ್ಳಬೇಕಾಯಿತು. ಕೊನೆಗೆ ಸಲೀಂ ಚಾಚಾನೆ ಯಾವ ಯಾವುದೋ ಕಡೆಗೆ ತೆರಳಿ ಅದೇನೇನೋ ಶಾಸ್ತ್ರಗಳನ್ನು ಮಾಡಿಸಿದರು. ದರ್ಗಾಕ್ಕೂ ಕರೆದೊಯ್ದರು. ಅಲ್ಲೆಲ್ಲ ತಮಗೆ ಗೊತ್ತಿದ್ದ ಶಾಸ್ತ್ರಗಳ ಮೂಲಕ ಪೂಜೆಯನ್ನೂ ಮಾಡಿಸಿದರು. ಮಧುಮಿತಾ ದಿನದಿಂದ ದಿನಕ್ಕೆ ಗೆಲುವಾಗಿದ್ದಳು. ತಂದೆ, ತಾಯಿಗಳನ್ನು, ಬಂಧು ಬಳಗವನ್ನು ಕಳೆದುಕೊಂಡಿದ್ದ ನೋವು ನಿಧಾನವಾಗಿ ಮಾಸುತ್ತಿತ್ತು. ಅದೇ ಜಾಗದಲ್ಲಿ ವಿನಯಚಂದ್ರನ ಕಡೆಗೆ ಒಲವು ಇಮ್ಮಡಿಯಾಗುತ್ತಿತ್ತು. ಕಡೆಗೆ ಇನ್ನೊಂದು ವಾರದ ನಂತರ ಭಾರತಕ್ಕೆ ತೆರಳುವುದು ಎನ್ನುವುದು ನಿಶ್ಚಯವಾಯಿತು. ಅದಕ್ಕೆ ಕೊನೆಯ ಹಂತದ ತಯಾರಿಯನ್ನು ಕೈಗೊಳ್ಳಲಾಯಿತು.
            ಭಾರತದ ಗಡಿಯವರೆಗೆ ತೆರಳುವ ವರೆಗೆ ಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಸಲೀಂ ಚಾಚಾನ ಮನೆಯ ಸದಸ್ಯರು ಜೋಳದ ರೊಡ್ಡಿ, ಅದಕ್ಕೆ ಖಡಕ್ ಕಾರದ ಚಟ್ನಿ ಸೇರಿದಂತೆ ಹಲವಾರು ಅಗತ್ಯದ ವಸ್ತುಗಳನ್ನು ತಯಾರಿಸಿಕೊಟ್ಟಿದ್ದರು. ಸಲೀಂ ಚಾಚಾ ತಾನೂ ವಿನಯಚಂದ್ರ ಹಾಗೂ ಮಧುಮಿತಾಳ ಜೊತೆಗೆ ಭಾರತದ ಗಡಿಯವರೆಗೆ ಬಿಟ್ಟು ಬರುವುದಾಗಿ ತಯಾರಾಗಿದ್ದ. ಯಾರು ಬೇಡವೆಂದರೂ ಕೇಳದೇ ಹೊರಟು ನಿಂತಿದ್ದ. ತಾನು ಮಾತನಾಡಿದ್ದ ಏಜೆಂಟನನ್ನು ಕರೆದು ಪರಿಚಯಿಸಿ, ಭಾರತಕ್ಕೆ ಕರೆದುಕೊಂಡು ಹೋಗುವ ಬಗ್ಗೆ ತಿಳಿಸಿದ್ದ. ಸಲೀಂ ಚಾಚಾನ ಕಾರ್ಯವೈಖರಿ ನೋಡಿ ವಿನಯಚಂದ್ರನ ಮನಸ್ಸು ತುಂಬಿಬಂದಿತ್ತು. ಕಣ್ಣಂಚಿನಲ್ಲಿ ಹನಿ ಮೂಡಿದ್ದವು.

(ಮುಂದುವರಿಯುತ್ತದೆ..)