|
(ಕೊಡಸಳ್ಳಿ ಅಣೆಕಟ್ಟು) |
ಜಿಲ್ಲೆಯ ಜೀವ ನದಿಯಾದ ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟೆಯ ಮೇಲುಸ್ಥರದಲ್ಲಿ ಸೂಪಾ ಜಲಾಶಯದ ಅಣೆಕಟ್ಟುಗಳಿವೆ. ಕೊಡಸಳ್ಳಿ ಅಣೆಕಟ್ಟೆಯ ಒಂದು ಪಾಶ್ರ್ವದಲ್ಲಿ ಭೂಕುಸಿತವಾಗುತ್ತಲಿದೆ.
ಬರಬಳ್ಳಿ, ಕೊಡಸಳ್ಳಿ, ಬುಗರಿಗದ್ದೆ, ಬೀರಖೊಲ್ ಮುಂತಾದ ಊರುಗಳು ಕಾಳಿಯ ಒಡಲು ಸೇರಿವೆ. ಆದರೆ ಈ ಊರುಗಳಿದ್ದ ಪಕ್ಕದ ಸ್ಥಳಗಳು ಭೂಕುಸಿತಕ್ಕೊಳಗಾಗಿವೆ. ಸುತ್ತಲಿನ ಅರಣ್ಯ ಪ್ರದೇಶದಲ್ಲೂ ಭೂಕುಸಿತ ಆಗುತ್ತಲೇ ಇದೆ. 1997ರಲ್ಲಿ ಅಣೆಕಟ್ಟೆಯ ಒಂದು ಪಾಶ್ರ್ವದಲ್ಲಿ ಉಂಟಾದ ಭೂಕುಸಿತ ಯಲ್ಲಾಪುರ ತಾಲೂಕಿನ ಜನತೆಯನ್ನು ಕಂಗೆಡಿಸಿತ್ತು. ನದಿಯ ಅಕ್ಕಪಕ್ಕದಲ್ಲಿರುವ ಅರಣ್ಯ ನಾಶದಿಂದಾಗಿಯೇ ಭೂಕುಸಿತ ಉಂಟಾಗುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕಾಳಿ ನದಿಯ ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರು ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿವೆ. ಅಲ್ಲಲ್ಲಿ ಕಂದಕಗಳು ಸೃಷ್ಠಿಯಾಗಿವೆ. ಧಾರಣಾ ಶಕ್ತಿಯ ಅಧ್ಯಯನ ಮಾಡದೇ ಅಣೆಕಟ್ಟೆ ಕಟ್ಟಿದ್ದರಿಂದಾಗಿ ಇಂತಹ ಅವಾಂತರಗಳು ಉಂಟಾಗುತ್ತಿದೆ ಎನ್ನುವ ಅಭಿಪ್ರಾಯ ಪರಿಸರ ಪ್ರಿಯರದ್ದಾಗಿದೆ.
ಕೊಡಸಳ್ಳಿ ಅಣೆ ಕಟ್ಟೆಯಿಂದಾಗಿ 400 ಕುಟುಂಬಗಳು ಸ್ಥಳಾಂತರಗೊಳಿಸಲ್ಪಟ್ಟವು. 2000 ಜನರಿಗೆ ಪುನವ್ರಸತಿ ಕಲ್ಪಿಸಬೇಕಾಯಿತು. ಕೃಷಿ ಕಾರ್ಮಿಕರಿಗೆ ಒಂದು ಎಕರೆ ಕೃಷಿ ಜಮೀನನ್ನು ನೀಡಲಾಯಿತು. ಒಂದು ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿದ ರೈತರಿಗೆ ಮೂರು ಎಕರೆ ಜಮೀನು, ಮೂರು ಎಕರೆಗಿಂತ ಹೆಚ್ಚು ಜಮೀನನ್ನು ಕಳೆದುಕೊಂಡವರಿಗೆ ಐದು ಎಕರೆ ಜಮೀನು ನೀಡಲಾಯಿತು. ಆದರೆ ಸರಕಾರ ನಿಗದಿಗೊಳಿಸಿದ ಪರಿಹಾರದ ಮೊತ್ತವನ್ನು ನೀಡಿಲ್ಲ. ಈ ಕಾರಣಕ್ಕಾಗಿ ಅನೇಕ ನಿರಾಶ್ರಿತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕೊಡಸಳ್ಳಿ ಅಣೆಕಟ್ಟೆಯಲ್ಲಿ ಹೂಳು ತುಂಬುತ್ತಿದೆ. ಮುಳುಗಡೆಯಾಗದಿರುವ ಸ್ಥಳಗಳಲ್ಲಿಯೂ ಮರವನ್ನು ಕಡಿಯಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ 4 ಸಾವಿರ ಎಕರೆ ಅರಣ್ಯನಾಶವಾಗಿದೆ. 1519 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. 1 ಸಾವಿರ ಎಕರೆ ಕೃಷಿ ಪ್ರದೇಶ ಕಾಳಿ ನದಿಯ ಮಡಿಲು ಸೇರಿದೆ.
ಕಾಳಿ ಕಣಿವೆ ಅಮೂಲ್ಯ ಸಸ್ಯ ಪ್ರಬೇಧಗಳನ್ನು ಹೊಂದಿದ್ದರೂ ಭಾಗಶಃ ಹಿನ್ನೀರಿನಲ್ಲಿ ಮುಳುಗಿಹೋಗಿದೆ. ಸಾಲು ಸಾಲು ಅಣೆಕಟ್ಟೆಗಳಿಂದಾಗಿ ವನ್ಯಜೀವಿಗಳು ಪಲಾಯನ ಮಾಡಿವೆ. ಕಾಡುಪ್ರಾಣಿಗಳು ಊರಿನತ್ತ ಮುಖ ಮಾಡಿವೆ. ಹುಲಿ, ಚಿರತೆ, ಕರಡಿ, ಆನೆ, ಹಂದಿಗಳು ಗ್ರಾಮೀಣ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಪ್ರಾಣಿಗಳು ರೈತ ಸಮೂಹಕ್ಕೆ ಶತ್ರುಗಳಂತಾಗಿವೆ.
ಕೊಡಸಳ್ಳಿ ಪ್ರದೇಶದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕುಸಿತ ಕುರಿತು ತಕ್ಷಣಕ್ಕೆ ಕ್ರಮ ಕೈಗೊಳ್ಳುವಂತಾಗಬೇಕು. ಭೂಕುಸಿತದ ಕಾರಣ ಕಂಡು ಹಿಡಿಯಲು ಅಧ್ಯಯನ, ಸಂಶೋಧನೆ ಆಗಬೇಕಾಗಿದೆ. ಈ ಅಣೆಕಟ್ಟೆಯ ಮೇಲ್ಭಾಗದ ಪ್ರದೇಶ ಭೂಕಂಪನ ವಲಯವಿದೆ ಎನ್ನುವುದು ಈಗಾಗಲೇ ಬಹಿರಂಗಗೊಂಡ ಸತ್ಯವಾಗಿದೆ. ಹಾಗಾಗಿ ಕೊಡಸಳ್ಳಿ ಅಣೆಕಟ್ಟೆಯ ಸುರಕ್ಷಿತತೆ ಕುರಿತು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿಗೆ ಸೇರಲ್ಪಡುವ ಗ್ರಾಮಗಳು ಕೊಡಸಳ್ಳಿ ಅಣೆಕಟ್ಟೆಯ ಪ್ರಭಾವಲಯಕ್ಕೆ ಒಳಪಟ್ಟಿವೆ. ಈಗಾಗಲೇ ಹಲವಾರು ಯೋಜನೆಗಳಿಂದ ಹೈರಾಣಾಗಿರುವ ಯಲ್ಲಾಪುರ ತಾಲೂಕಿನ ಜನತೆ ಈಗ ಈ ಅಣೆಕಟ್ಟೆಯ ಪಕ್ಕದಲ್ಲಿ ಬಿರುಕು ಕಾಣಿಸಿಕೊಂಡಿರುವುದಕ್ಕೆ ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಸರಕಾರ ಎಚ್ಚೆತ್ತುಕೊಂಡು ತುತರ್ಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರ ಆಗ್ರಹವಾಗಿದೆ.
ಕೊಡಸಳ್ಳಿ ಡ್ಯಾಂನ ಸುತ್ತ ಮುತ್ತ ಎಷ್ಟು ಸುರಕ್ಷಿತ ?
ರಾಜ್ಯಕ್ಕೆ ಬೆಳಕು ನೀಡಲು ತ್ಯಾಗ ಮಾಡಿದ ಜನರ ಬದುಕೇ ಕತ್ತಲೆಯ ಕೂಪವಾಗುತ್ತಿದೆ. ತೋಟ, ಗದ್ದೆ, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಸೂರಿಗಾಗಿ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಸೃಷ್ಟಿಯಾಗಿದ್ದದ್ದು ಕೊಡಸಳ್ಳಿ ಮತ್ತು ಸುತ್ತ ಮುತ್ತಲಿನ ಊರಿನವರದ್ದಾಗಿದೆ.
ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಆಣೆ ಕಟ್ಟು ಕಟ್ಟುವ ಯೋಜನೆ ರೂಪಿತ ಗೊಳ್ಳುತ್ತಿದ್ದಂತೆ ಈ ಪ್ರದೇಶದ ಜನ ಕಂಗಾಲಾದರು. ಸರಕಾರಕ್ಕೆ ಮೊರೆಯಿಟ್ಟರು. ಪರಿಹಾರಕ್ಕಾಗಿ ಅಂಗಲಾಚಿದರು. ಅಣೆಕಟ್ಟೆ ಕಟ್ಟುವ ಪೂರ್ವದಲ್ಲಿ ನೀಡಿದ ಭರವಸೆಗಳೆಲ್ಲ ಹುಸಿಯಾದವು. ಯೋಜನೆ ಕಾರ್ಯಗತ ಗೊಳ್ಳುತ್ತಿದ್ದಂತೆ ಅನಿವಾರ್ಯವಾಗಿ ತಲೆ ತಲಾಂತರ ಗಳಿಂದ ಪೋಷಿಸಿಕೊಂಡು ಬಂದ ಮನೆ, ಜಮೀನುಗಳನ್ನು ಬಿಡಬೇಕಾಯಿತು. ಸರಕಾರ ಕೆಲವರಿಗೆ ಪರಿಹಾರ ನೀಡಿದರೂ ಅದು ಸಮರ್ಪಕವಾಗಿರಲಿಲ್ಲ. ಇನ್ನಷ್ಟು ಜನರಿಗೆ ಪರಿಹಾರವೂ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ಅಲೆಯುವುದೂ ತಪ್ಪಿಲ್ಲ.
ತಮ್ಮ ಭೂಮಿಯನ್ನು ಕಳೆದುಕೊಂಡು ನಿರ್ಗತಿರಾದ ಜನ ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಇನ್ನಷ್ಟು ಹಣಗಳನ್ನು ಬರಿಸಬೇಕಾದ ಸ್ಥಿತಿ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಕಾಳಿ ನಿರಾಶ್ರತರಿಗೆ ಬಂದಿದೆ. ತಮ್ಮ ಭೂಮಿಗೆ ಸರಿಯಾದ ಪರಿಹಾರ ದೊರೆಯಲಿಲ್ಲವೆಂಬ ಕಾರಣಕ್ಕಾಗಿ ಅನೇಕ ನಿರಾಶ್ರಿತ ರೈತರು ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಘಟನೆ ನಡೆದಿದ್ದು ಇತ್ತೀಚೆಗಿನ ವರದಿಯೇನಲ್ಲ.
ಅಂತೆಯೇ ಓರ್ವ ನಿರಾಶ್ರಿತರಿಗೆ ಪರಿಹಾರದ ಮೊತ್ತ 95 ಲಕ್ಷ ರೂ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು. ಆದರೆ ಕೆ.ಪಿ.ಸಿಯವರು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿರುವ ಕೆಪಿಸಿ ಯ ಶಕ್ತಿ ಭವನವನ್ನು ನ್ಯಾಯಾಲಯ ಹರಾಜು ಹಾಕುವಂತೆ ಆದೇಶಿಸಿತು. ಆಗ ಎಚ್ಚೆತ್ತುಕೊಂಡ ಕರ್ನಾಟಕ ಪವರ್ ಕಾರ್ಪೋರೇಷನ್ ಗೋಪಾಲ ಗಾಂವ್ಕರ್ ಅವರಿಗೆ 95 ಲಕ್ಷ ರೂ ಪರಿಹಾರ ನೀಡಿತು.
ಕೊಡಸಳ್ಳಿ ನಿರಾಶ್ರಿತರು ಕೆ.ಪಿ.ಸಿ ವಿರುದ್ಧ ಪರಿಹಾರಕ್ಕಾಗಿ 450 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲಿ 100 ಪ್ರಕರಣಗಳು ಮುಕ್ತಾಯ ಕಂಡಿವೆ. ನಿಜ ಹೇಳ ಬೇಕೆಂದರೆ ರೈತರ ಭೂಮಿಯ ಬೆಲೆ ರೈತರೇ ನಿರ್ಧರಸ ಬೇಕು ವಿನಹ ಇನ್ನಾರು ನಿರ್ಧರಿಸಲಾಗದು. ತಮ್ಮ ಭೂಮಿಗೆ ಎಷ್ಟು ಫಸಲು ನೀಡುವ ಶಕ್ತಿ ಇದೆ ಎಂಬುದು ಅವರಿಗೇ ತಿಳಿದ ವಿಷಯ.
ಕೊಡಸಳ್ಳಿ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಬರಬಳ್ಳಿ, ಕೊಡಸಡಳ್ಳಿ, ಬೀರ್ಖೋಲ್, ಬುಗ್ರಿಗದ್ದೆ, ಸೇರಿದಂತೆ ಅನೇಕ ಹಳ್ಳಿಗಳು ಮುಳುಗಡೆ ಹೊಂದಿದ್ದವು. ಡ್ಯಾಂ ಪಕ್ಕ ಬಿರುಕು ಬಿಟ್ಟು ಮುಚ್ಚಲಾಗಿದ್ದು. ಈಗ ಅರಣ್ಯ ಪ್ರದೇಶವೂ ಕುಸಿತವಾಗುತ್ತಿದೆ. ಭೂಮಿಯ ಧಾರಣ ಶಕ್ತಿ ಕಡಿಮೆಯಾಗಿರುವಂತೆ ಗೋಚರಿಸುತ್ತಿದೆ. ಸರಿಯಾದ ಪರಿಹಾರವಿಲ್ಲದೇ ನ್ಯಾಯಕ್ಕಾಗಿ ಅಲೆದಾಟದ ಹೋರಾಟಗಳು ನಡೆದೇ ಇದೆ. ಇದು ಕೊಡಸಳ್ಳಿ ನಿರಾಶ್ರಿತರ ಗೋಳಾಗಿದೆ. ಸಂಬಂದ ಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಇನ್ನಾದರೂ ಇವರ ನೋವಿಗೆ ಸ್ಪಂದಿಸುತ್ತಾರೋ ಎನ್ನುವುದನ್ನು ಕಾಲವೇ ಹೇಳಬೇಕಾಗಿದೆ.
|
(ಅಣೆಕಟ್ಟೆಯಿಂದ ಶಿವಪುರ ಗ್ರಾಮಸ್ಥರಿಗೆ ನಿತ್ಯ ನರಕ) |
1997 ರಲ್ಲಿ ಡ್ಯಾಂ ಪಕ್ಕದಲ್ಲಿ ಕಲ್ಲುಗುಡ್ಡ ಕುಸಿತವಾಗಿ ಭಯವನ್ನುಂಟು ಮಾಡಿತ್ತು. ನದಿಯಲ್ಲಿ ಹೂಳು ತುಂಬುತ್ತಿದೆ. ಮುಳುಗಡೆಯಾಗದಿರುವ ಸ್ಥಳಗಳಲ್ಲಿಯೂ ಅರಣ್ಯದ ಮರವನ್ನು ಕಡಿಯಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ 4 ಸಾವಿರ ಎಕರೆ ಅರಣ್ಯನಾಶವಾಗಿದೆ. 1519 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. 1 ಸಾವಿರ ಎಕರೆ ಕೃಷಿ ಪ್ರದೇಶ ಕಾಳಿ ನದಿಯ ಮಡಿಲು ಸೇರಿದೆ. ಎತ್ತರ ಪ್ರಧೇಶದಲ್ಲಿನ ಅರಣ್ಯ ನಾಶಮಾಡಿರುವುದರಿಂದಲೇ ಗುಡ್ಡ ಕುಸಿತಕ್ಕೆ ಕಾರಣ ಎನ್ನುವುದು ಮೂಲ ನಿವಾಸಿ ಶಿವರಾಮ ಗಾಂವ್ಕರ ಹಾಗೂ ಗಜಾನನ ಭಟ್ಟ ಅವರ ಅಂಬೋಣವಾಗಿದೆ.
ಬರಬಳ್ಳಿಯ ಅನೇಕ ಕಡೆಗಳಲ್ಲಿ ದೊಡ್ಡದಾದ ಬಿರುಕುಗಳು ಕಾಣಲಾರಂಬಿಸಿವೆ. ಅಲ್ಲಲ್ಲಿ ಭೂ ಕುಸಿತವಾಗಿ ಕಂದರಗಳು ಸೃಷ್ಟಿಯಾಗುತ್ತಿವೆ. ಕಾಳಿ ನದಿಯ ಹಿನ್ನೀರಿನ ಸನಿಹವಿರುವ ಅಂದರೆ ಕೇವಲ ಒಂದುವರೆ ಕಿ.ಮಿ ಅಂತರದಲ್ಲಿ ಭಾಗಿನಕಟ್ಟಾ ಗ್ರಾಮವಿದೆ. ಈ ಗ್ರಾಮದ ಜನತೆಯಲ್ಲಿ ಈಗಾಗಲೇ ಭಯದ ವಾತಾವರಣ ಸೃಷ್ಟಿಯಾಗಿದೆ.
ಈಗಾಗಲೇ ಕಾಳಿ ಹಿನ್ನೀರಿನ ಅನೇಕ ಪ್ರದೇಶಗಳಲ್ಲಿ ಭೂ ಕುಸಿತಗಳು ಸಂಭವಿಸಿದ್ದು ಈ ಭಾಗವೆಲ್ಲಾ ಎಷ್ಟು ಸುರಕ್ಷಿತ ಎನ್ನುವ ವಿಚಾರ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಸ್ಥಳೀಯ ಗ್ರಾಮಗಳಿಗೆ ಹಾವು, ಹುಳ-ಹುಪ್ಪಟೆಗಳು ಮನೆಯೊಳಗೇ ಬರುತ್ತಿರುವುದು ಈ ವರೆಗಿನ ಅನುಭವವಾಗಿದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಅವುಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಈ ಕುರಿತು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ನಿರಾಶ್ರಿತರಿಗಾಗಿ ಈಗಾಗಲೇ ಅಂಕೋಲಾ ತಾಲೂಕಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ಅಲ್ಲಿ ಶಾಶ್ವತವಾದ ಯಾವೊಂದು ಮೂಲಭೂತ ಸೌಲಭ್ಯ ಕೂಡಾ ಇಲ್ಲವೆಂದು ನಿರಾಶ್ರಿತರು ಆರೋಪಿಸುತ್ತಿದ್ದಾರೆ ಅದಕ್ಕೋಸ್ಕರ ಜಿಲ್ಲಾಧಿಕಾರಿಯವರ ಕಛೇರಿ ಎದುರು ಮಾರ್ಚ ತಿಂಗಳಿನಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.
ಅದೇನೇ ಇರಲಿ ಕಾಳಿ ಹಿನ್ನೀರಿನ ಪ್ರದೇಶದ ಸುತ್ತ ಮುತ್ತಲೂ ಎಷ್ಟು ಕಿ.ಮೀ ಅಂತರ ಸುರಕ್ಷಿತ ಎಂಬ ಮಾತನ್ನು ಸಂಬಂದ ಪಟ್ಟ ಅಧಿಕಾರಿಗಳು ಹೇಳಬೇಕಿದೆ. ಈಗಾಗಲೇ ಕೈಗಾ ಅಣುವಿಕಿರಣದಿಂದ ರೋಗಕ್ಕೆ ತುತ್ತಾದ ಈ ಭಾಗದ ಸಾರ್ವಜನಿಕರು ಭಯ-ಭೀತರಾಗಿದ್ದಾರೆ. ಜೊತೆಗೆ ಈ ಭಯವೂ ಸೇರಿ ಊರಿಗೆ ಊರೇ ಗುಳೆ ಹೋಗುವಂತಹ ಪರಿಸ್ಥಿತಿ ಉದ್ಭವವಾಗಿದೆ.
ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ, ರಾಷ್ಟ್ರಕ್ಕೆ ಬೆಳಕು ನೀಡುವ ಸಲುವಾಗಿ ಸಾಕಷ್ಟು ತ್ಯಾಗ ಮಾಡಿದೆ. ಆದರೆ ಸರಕಾರ ಈ ಜನರ ನೋವಿಗೆ ತಕ್ಕ ರೀತಿಯಲ್ಲಿ ಈವರೆಗೂ ಸ್ಪಂದಿಸಿಲ್ಲ. ಕೈಗಾ ಅಣುಸ್ಥಾವರ ಸ್ಥಾಪನೆಗೂ ಪೂರ್ವದಲ್ಲಿ ಕಾಲಕಾಲಕ್ಕೆ ಆರೋಗ್ಯ ಸಮೀಕ್ಷೆ, ಸುಸಜ್ಜಿತವಾದ ಆಸ್ಪತ್ರೆ, ಪ್ರಯೋಗಾಲಯ ನಿಮರ್ಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಈ ವರೆಗಿನ ಅನುಭವದಲ್ಲಿ ಅವೆಲ್ಲವೂ ಹುಸಿಯಾಗಿದೆ.
ನೌಕಾ ನೆಲೆಗಾಗಿ ಸಹಸ್ರ ಸಂಖ್ಯೆಯ ಕುಟುಂಬಗಳು ನೆಲೆ ಕಳೆದುಕೊಂಡವು. ಇಂದಿಗೂ ನೌಕಾ ನೆಲೆ ನಿರಾಶ್ರತರು ತಮಗೊಂದು ಸೂರು ಬೇಕು ತಕ್ಕ ಪರಿಹಾರ ಬೇಕು ಎಂದು ಹೋರಾಟ ಮಾಡುತ್ತಲೇ ಇದ್ದಾರೆ. ನೌಕಾ ನೆಲೆಯ ಅಧಿಕಾರಿಗಳಾಗಲಿ ಅಥವಾ ಕೇಂದ್ರ ಸರಕಾರವಾಗಲೀ ಈ ವರೆಗೂ ಜಪ್ಪಯ್ಯ ಎಂದಿಲ್ಲ. ಕರಾವಳಿಯಲ್ಲಿ ಕೃಷಿ ಯೋಗ್ಯ ಭೂ ಪ್ರದೇಶ ವಿರಳ. ಮೀನುಗಾರಿಕೆ ಮುಖ್ಯ ಕಸುಬಾಗಿದೆ. ನೌಕಾ ನೆಲೆ ಯೋಜನೆ ಅನುಷ್ಠಾನ ಗೊಳ್ಳುತ್ತಿದ್ದಂತೆ ಮೀನುಗಾರಿಕೆಗೂ ಅಡ್ಡಿಯುಂಟಾಯಿತು. ಇದ್ದ ಕಸುಬು ಕಳೆದುಕೊಂಡ ಮೀನುಗಾರರು ದಿಕ್ಕಾಪಾಲಾದರು. ಮನೆ ಕಳೆದುಕೊಂಡವರಿಗೆ ಸೂರು ಸಿಕ್ಕಿಲ್ಲ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.
ಕಾಳಿ ನದಿಗೆ ಐದು ಆಣೆ ಕಟ್ಟು ಕಟ್ಟಲಾಯಿತು. ಸೂಪಾ ತಾಲೂಕೇ ಮುಳುಗಡೆಯಾಯಿತು. ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ನಿರಾಶ್ರಿತರಾದರು. ಇವರೆಲ್ಲರಿಗೆ ರಾಮನಗರ ಎಂಬ ಬೆಂಗಾಡಿನಲ್ಲಿ ಪುನರ್ವಸತಿಗಾಗಿ ಜಾಗ ತೋರಿಸಲಾಯಿತು. ಯಾವ ಮೂಲಭೂತ ವ್ಯವಸ್ಥೆಯನ್ನೂ ಕಲ್ಪಿಸಲಾಗಿಲ್ಲ. ಕುಡಿಯುವ ನೀರಿಗೂ ತತ್ವಾರವಾಗಿದೆ. ವಾಸ್ತವ್ಯದ ಮನೆ ಅವಾಸ್ತವಿಕವಾಗಿದೆ. ಮಳೆಗಾಲದಲ್ಲಿ ಮಳೆಯ ನೀರಿನಲ್ಲೇ ಮಲುಗಬೇಕಾದಂತಹ ಧಾರುಣ ಪರಿಸ್ಥಿತಿ ಇದೆ. ಪರಿಹಾರದ ಮೊತ್ತವು ಯಾರ ಯಾರದ್ದೋ ಪಾಲಾಯಿತು. ಈಗ ಈ ಜನರಿಗೆ ಪಡಿತರ ಚೀಟಿಯನ್ನೂ ಸಮರ್ಪಕವಾಗಿ ವಿತರಣೆ ಮಾಡಲಾಗಿಲ್ಲ. ಈ ಕಾರಣಕ್ಕಾಗಿ ಇವರಿಗೆ ಪಡಿತರ ಧವಸ ದಾನ್ಯಗಳು ಲಭ್ಯವಾಗುತ್ತಿಲ್ಲ. ಇದೇ ರೀತಿಯ ಮತ್ತೊಂದು ಕರುಣಾಜನಕ ಕಥೆ ಇದೇ ಕಾಳಿ ನದಿಗೆ ಕೊಡಸಲ್ಳಿ ಎಂಬಲ್ಲಿ ಕಟ್ಟಲಾದ ಅಣೆ ಕಟ್ಟೆಯಿಂದ ಉದ್ಭವಿಸಿದೆ.
ಕೊಡಸಳ್ಳಿ ಅಣೆ ಕಟ್ಟೆ ಕಟ್ಟಿದಾಗ 400 ಕುಟುಂಬಗಳು ತೆರವು ಗೊಳಿಸಲ್ಪಟ್ಟವು. 2000 ಜನರನ್ನು ಸ್ಥಳಾಂತರಿಸಲಾಯಿತು. ಕೃಷಿ ಕಾರ್ಮಿಕರಿಗೆ ಒಂದು ಎಕರೆ ಕೃಷಿ ಜಮೀನನ್ನು ನೀಡಲಾಯಿತು. ಒಂದು ಎಕರೆಗಿಂತ ಹೆಚ್ಚು ಜಮೀನನ್ನು ಹೊಂದಿದ ರೈತರಿಗೆ ಮೂರು ಎಕರೆ ಜಮೀನು, ಮೂರು ಎಕರೆಗಿಂತ ಹೆಚ್ಚು ಜಮೀನನ್ನು ಕಳೆದುಕೊಂಡವರಿಗೆ ಐದು ಎಕರೆ ಜಮೀನು ನೀಡಲಾಯಿತು. ಆದರೆ ಈ ಜಮೀನು ಉತ್ಕೃಷ್ಟ ಎನ್ನುವಂತದ್ದಲ್ಲ. ಈ ಜಾಗದಲ್ಲೇ ಮನೆಯನ್ನೂ ಕಟ್ಟಿಕೊಳ್ಳಬೇಕು. ಸರಕಾರ ನಿಗದಿ ಪಡಿಸಿದ ಪರಿಹಾರದ ಮೊತ್ತವನ್ನೂ ನೀಡಿಲ್ಲ.
ಬೀರ್ಖೋಲ್ ಶಂಕರ ಗಾಂವ್ಕರ್ ಹಾಗೂ ರಾಮಚಂದ್ರ ಗಾಂವ್ಕರ್ ಸೇರಿದಂತೆ ನಾಲ್ಕು ಕುಟುಂಬಗಳಿಗೆ ಬಿಡಿಗಾಸಿನ ಪರಿಹಾರವನ್ನೂ ನೀಡಲಾಗಿಲ್ಲ. ಮನೆ, ಜಮೀನು ಹೀಗೆ ಏನನ್ನೂ ನೀಡದ ಕಾರಣ ಈ ಕುಟುಂಬಗಳ ಜೀವನವೇ ಮೂರಾಬಟ್ಟೆಯಾಗಿದೆ.
ಹಲವಾರು ಕುಟುಂಬಗಳಿಗೆ ನೀಡಿಲಾದ ಜಮೀನಿಗೆ ಈ ವರೆಗೂ ಪಟ್ಟಾ ನೀಡಲಾಗಿಲ್ಲ. ಸ್ಥಳಾಂತರಗೊಂಡು 14 ವರ್ಷಗಳಾದರೂ ನಿರಾಶ್ರಿತರಿಗೆ ಸಮರ್ಪಕ ರಸ್ತೆ ಮಾಡಿಕೊಟ್ಟಿಲ್ಲ. ಕುಡಿಯುವ ನೀರು ಸಮರ್ಪಕ ಸರಬರಾಜಾಗುತ್ತಿಲ್ಲ. ಏಪ್ರಿಲ್-ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ತೀವ್ರತೆ ಉಂಟಾಗುತ್ತದೆ. ನಿರಾಶ್ರಿತರಿಗೆ ಉಚಿತವಾಗಿ ಮತ್ತು ವ್ಯವಸ್ಥಿತವಾದ ವಿದ್ಯುತ್ ನೀಡಬೇಕೆನ್ನುವುದು ಸರಕಾರದ ನಿಯಮ. ಆದರೆ ಇಲ್ಲಿ ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶವಾದ ಶಿವಪುರ ಮತ್ತು ನೇತ್ರಿಗಿ ಗ್ರಾಮ ದ್ವೀಪವಾಗುತ್ತದೆ. ಯಲ್ಲಾಪುರದಿಂದ ಈ ಊರಿಗೆ ತೆರಳಬೇಕಾದರೆ ತೆಪ್ಪದ ಮೂಲಕ ಹೋಗಬೇಕು. ಈ ತೆಪ್ಪದಲ್ಲಿ ಹೋಗುವಾಗ ಅನೇಕರು ಹಿನ್ನೀರಿನಲ್ಲಿ ಬಿದ್ದ ಉದಾಹರಣೆ ಇದೆ. ಅದೇ ರೀತಿ ದ್ವಿಚಕ್ರ ವಾಹನಗಳೂ ಸಹ ಕಾಳಿ ನದಿ ಹಿನ್ನೀರು ತನ್ನ ಒಡಲೊಳಗೆ ಸೆಳೆದುಕೊಂಡಿದೆ. ರಸ್ತೆಯ ಮುಕಾಂತರ ಈ ಊರಿಗೆ ಹೋಗುವುದಾದರೆ 60 ಕಿ.ಮೀ ಗಿಂತ ಹೆಚ್ಚು ಸುತ್ತಿ ಬಳಸಿ ಹೋಗಬೇಕು. ಅಲ್ಲಿಯ ರಸ್ತೆಯೂ ಎಕ್ಕುಟ್ಟಿ ಹೋಗಿದೆ. ಶಿವಪುರದ ಜನರು ಬೆಳಕಿಗಾಗಿ ಸರಕಾರದತ್ತ ನೋಡದೇ ತಾವೇ ನಿಮರ್ಿಸಿಕೊಂಡ ಶಕ್ತಿಯ ಮೂಲಕ ಬೆಳಕನ್ನು ಪಡೆದುಕೊಂಡಿದ್ದಾರೆ. ಇಂತಹ ಸ್ವಾವಲಂಬಿ ಊರುಗಳಿಗೆ ಕಡೆಯ ಪಕ್ಷ ವ್ಯವಸ್ಥಿತವಾದ ರಸ್ತೆ, ಸೇತುವೆಯನ್ನಾದರೂ ಕಲ್ಪಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ.
ಕಾಳಿ ಕಣಿವೆ ಅಮೂಲ್ಯ ಸಸ್ಯ ಪ್ರಬೇದಗಳನ್ನು ಹೊಂದಿದೆ. ಅದೇ ರೀತಿ ಅಪರೂಪದ ವನ್ಯ ಜೀವಿಗಳ ತಾಣವೂ ಆಗಿತ್ತು. ಆದರೆ ಒಂದರ ಮೇಲೊಂದು ಅಣೆ ಕಟ್ಟೆಗಳು ತಲೆ ಎತ್ತುತ್ತಿದ್ದಂತೆ ಅಪರೂಪದ ಸಸ್ಯರಾಶಿ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಪ್ರಾಣಿ ಸಂತತಿ ನಶಿಸುವ ಹಂತ ತಲುಪಿತು. ಕಾಡು ಮೃಗಗಳು ಕಣ್ಮರೆಯಾದವು. ಅಳಿದುಳಿದ ವನ್ಯ ಜೀವಿಗಳು ನಾಡಿನತ್ತ ಮುಖ ಮಾಡಿದವು. ಕಾಳಿ ಕಣಿವೆಯ ಜೀವ ವೈವಿದ್ಯತೆಗೆ ಧಕ್ಕೆ ಯಾಗಿದ್ದಂತೂ ಸುಳ್ಳಲ್ಲ.
ಈಗ ತುರ್ತಾಗಿ ಆಗಬೇಕಾದ ಕೆಲಸವೆಂದರೆ ಕೊಡಸಳ್ಳಿ ಅಣೆ ಕಟ್ಟೆಯ ಸುತ್ತ ಮುತ್ತಲ ಪ್ರದೇಶಗಳ ಬೌಗೋಲಿಕ ಸಂಶೋಧನೆಯಾಗಬೇಕಿದೆ. ಭೂಮಿ ಕುಸಿಯುತ್ತಿರುವುದರ ಕುರಿತು ಅಧ್ಯಯನವಾಗಬೇಕು. ಸೂಪಾ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾದ ಅನೆಕಟ್ಟೆಯ ತಳಭಾಗದಲ್ಲಿ ಭೂಕಂಪನ ಪ್ರದೇಶವಿದೆ ಎನ್ನುವುದು 80 ರ ದಶಕದಲ್ಲೇ ಗೋಚರಿಸಿದ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ಭೂ ವಿಜ್ಞಾನಿಗಳು ಭೂ ಕುಸಿತ ಕುರಿತು ತಕ್ಷಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಇಲ್ಲೇನಾದರೂ ಭೂ ಕಂಪಿಸಿದ್ದೇ ಆದರೆ ಯಲ್ಲಾಪುರ ತಾಲೂಕಿನ ಕೆಲವು ಪ್ರದೇಶ ಮತ್ತು ಕಾರವಾರ ತಾಲೂಕು ಪ್ರಳಯವನ್ನೆದುರಿಸುವ ಅಪಾಯವಿದೆ. ಹಾಗಾಗಿಯೇ ಮುಂಜಾಗ್ರತೆ ಅನಿವಾರ್ಯ. ಅದೇ ರೀತಿ ಕೊಡಸಳ್ಳಿ ನಿರಾಶ್ರಿತರ ಬದುಕನ್ನು ಹಸನ ಮಾಡುವ ಕೆಲಸವಾಗಬೇಕಿದೆ. ಸರಕಾರ ಇತ್ತ ಗಮನ ನೀಡುವ ಅಗತ್ಯವಿದೆ.
-ವಿಶ್ವಾಮಿತ್ರ ಹೆಗಡೆ
**
(ವಿಶ್ವಮಿತ್ರ ಹೆಗಡೆ ಅವರು `ಕನ್ನಡಪ್ರಭ' ಪತ್ರಿಕೆಯಲ್ಲಿ ಎರಡು ವರ್ಷಗಳ ಹಿಂದೆ ಬರೆದಿದ್ದ ಒಂದು ವರದಿ. ಆಳುವ ಸರ್ಕಾರದ ಜಾಢ್ಯ ಇನ್ನೂ ಹೋಗಿಲ್ಲ. ಸಮಸ್ಯೆ ಹಾಗೆಯೇ ಇದೆ. ನಿಮ್ಮ ಅರಿವಿಗೆ ಬರಲಿ ಎನ್ನುವ ಕಾರಣಕ್ಕಾಗಿ ಈ ಬ್ಲಾಗಿನಲ್ಲಿ ಹಾಕಿದ್ದೇನೆ. ಓದಿ ಅಭಿಪ್ರಾಯಿಸಿ)