Tuesday, July 1, 2014

ಕೈಗಾ ತಂದ ಕಣ್ಣೀರು

(ಕೈಗಾ ಅಣುಸ್ಥಾವರ)
                ಕೈಗಾ ಅಣುಸ್ಥಾವರದ ವಿಕಿರಣ ಬಗೆದಷ್ಟು ಹೂರಣ ಹೊರಬರುತ್ತಿದೆ. ಯಲ್ಲಾಪುರ, ಜೋಯಿಡಾ, ಕಾರವಾರ ಹಾಗೂ ಅಂಕೋಲಾ ತಾಲೂಕಿನ ಗಡಿ ಪ್ರದೇಶಗಳಲ್ಲಿ ದಿನಂಪ್ರತಿ ಹೊಸ ರೋಗಗಳು ಪತ್ತೆಯಾದರೆ ಮರಣ ಹೊಂದಿದವರ ಮಾಹಿತಿ ಬೆಳಕಿಗೆ ಬರುತ್ತಲಿದೆ.
                ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ನಿರ್ಲಕ್ಷಿತ ಧೋರಣೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಜನರ ಜೊತೆ ಚಲ್ಲಾಟವಾಡುತ್ತಿರುವ ಆರೋಗ್ಯ ಇಲಾಖೆ ಅಣು ವಿಕಿರಣಕ್ಕೆ ಯಾವುದೇ ಬಾಲಕ ಬಲಿಯಾಗಿಲ್ಲ ಎನ್ನುವ ಸ್ಪಷ್ಟೀಕರಣ ನೀಡುತ್ತದೆ.
                ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಷ್ಟಕ್ಕೂ ನಮ್ಮ ಮನೆಗಳಿಗೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ವೈದ್ಯರಾಗಲಿ ಅಥವಾ ಶುಶ್ರೂಷಕಿಯರಾಗಲಿ ಬಂದಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚುಕೊಳ್ಳುವ ಸಲುವಾಗಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
                ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಚಂದ್ರಶೇಖರ ರಾಮಚಂದ್ರ ಕಾರಂತ ಅವರ ಮಗಳು ಭೂಮಿಕಾ 2011 ಜುಲೈ 13 ರಂದು ಮೃತ ಪಟ್ಟಿದ್ದಾಳೆ. ಆರೋಗ್ಯವಾಗಿದ್ದ ಭೂಮಿಕಾ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಿಂದ ನರಳಲಾರಂಭಿಸಿದಳು. ಇವಳನ್ನು ಯಲ್ಲಾಪುರದ ವೈದ್ಯರಾದ ಡಾ. ಜಿ.ಎನ್. ಹೆಗಡೆಯವರಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಕೆಮ್ಮು ಮತ್ತು ನೆಗಡಿಗೆ ಔಷಧ ನೀಡಿದರು. ಮಾರನೇದಿನ ಬೆಳಗಾಗುವಷ್ಟೊತ್ತಿಗೆ ನಮ್ಮ ಮಗಳು ಇಹ ಲೋಕ ತ್ಯಜಿಸಿಯಾಗಿತ್ತು. ಇದ್ದಕ್ಕಿದ್ದಂತೆ ಮಗಳ ನಿಧನದ ಕುರಿತು ವೈದ್ಯರಲ್ಲಿ ಕೇಳಿದಾಗ ನಿಮ್ಮ ಮಗಳು ಹೃದಯಾಘಾತದಿಂದ ನಿಧನ ಹೊಂದಿರಬೇಕು ಎಂದು ತಿಳಿಸಿದರು. ಹೀಗೆ ತಮ್ಮ ಮಗಳ ಮರಣದ ಕುರಿತು ವಿವರಣೆ ನೀಡಿದವರು ಚಂದ್ರಶೇಖರ ಕಾರಂತರು.
                  ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾದ ಸುಬ್ರಹ್ಮಣ್ಯ ಅನಂತ ಗಾಂವ್ಕರ್ ತಮ್ಮ ಮಗನ ಸಾವಿನ ವಿವರ ನೀಡಿದ್ದು ಹೀಗೆ, ತಮ್ಮ ಮಗನ ಜನನ ಸಹಜವಾಗಿತ್ತು. ಯಾವುದೇ  ಸಮಸ್ಯೆ ಇರಲಿಲ್ಲ. ಒಂದು ವರ್ಷದ ಹಿಂದೆ ಮಗ ದಿನೇಶನಿಗೆ ಒಮ್ಮೆಲೆ ವಾಂತಿ ಪ್ರಾರಂಭವಾಯಿತು. ಶಿರಸಿಯ ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಗೆ ಸೇರಿಸಲಾಯಿತು. ಯಾವುದೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮಗ ಸಾವನ್ನಪ್ಪಿದ. ವೈದ್ಯರಲ್ಲಿ ಕೇಳಿದಾಗ ಹೃದಯ ಸಂಬಂಧಿ ಖಾಯಿಲೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಿದರು.
                    ವಜ್ರಳ್ಳಿಯ ಗಿಡಿಗಾರಿ ಮನೆಯ ಕಾಮೇಶ ತಮ್ಮಣ್ಣ ಭಟ್ಟರಿಗೆ ಒಂದು ತಿಂಗಳ ಹಿಂದೆ ಮಗುವೊಂದು ಜನಿಸಿತು. ಹದಿನೈದು ದಿನಗಳ ನಂತರ ಮಗು ಆಹಾರ ಸೇವಿಸುವುದನ್ನು ನಿಲ್ಲಿಸಿತು. ಆಗ ಶಿರಸಿ ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ಅನ್ನನಾಳದ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮಗು ಈಗಲೂ ವೈದ್ಯರ ಆರೈಕೆಯಲ್ಲಿದೆ ಎಂದು ಪಾಲಕರು ಹೇಳಿದರು.
(ಅಣುವಿಕಿರಣದ ಪರಿಣಾಮ)
                    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆೆ ಎನ್ನುವುದಕ್ಕೆ ತಾಜಾ ಉದಾಹರಣೆ ಎಂದರೆ ಬಾಗಿನ ಕಟ್ಟಾದ ಗಣಪತಿ ಶಂಕರ ಭಾಗವತ ಅನ್ನನಾಳದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿರುವುದು ಅವರ ಕಾರ್ಯ ವೈಖರಿಗೆ ನಿದರ್ಶನವಾಗುತ್ತದೆ. ಗಣಪತಿ ಶಂಕರ ಭಾಗವತರು ಮಣಿಪಾಲದಲ್ಲಿ ತಮ್ಮ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದು ಹಾಲಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಚೈತ್ರ ಲಕ್ಷ್ಮಣ ಕುಣುಬಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದಳೇ ಹೊರತು ಅಲ್ಲಿ ಚಿಕಿತ್ಸೆ ಪಡೆದಿರಲಿಲ್ಲ.
                   ಕೈಗಾ ಅಣುಸ್ಥಾವರದ ವಿಕಿರಣದಿಂದಲೇ ಭಯಾನಕ ರೋಗಗಳು ಕಾನೀಸಿಕೊಳ್ಳುತ್ತಿವೆ ಎನ್ನಲಾದ ಪ್ರದೇಶದ ಜನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮತ್ತು ವೈದ್ಯರ ಕಾರ್ಯ ಶೈಲಿಗೆ ಅಸಮದಾನಗೊಂಡಿದ್ದಾರೆ. ವಾಸ್ತವಿಕತೆಯನ್ನು ತಿರುಚಲು ಪ್ರಯತ್ನಿಸುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಅಣುಸ್ಥಾವರ ಅಧಿಕಾರಿಗಳ ಆಮಿಷಕ್ಕೆ ಕಟ್ಟುಬಿದ್ದು ವಸ್ತು ಸ್ಥಿತಿ ಮರೆಮಾಚುತ್ತಿದ್ದ್ದಾರೆ ಎಂದು ಕಿಡಿಕಾರಿದ್ದಾರೆ.
ಯಲ್ಲಾಪುರದ ತಾಲೂಕಾ ವೈದ್ಯಾಧಿಕಾರಿ ಡಾ. ಅನ್ನಪೂರ್ಣಾ ವಸ್ತ್ರದ್ ಅವರು ಸೋಮವಾರ ನಮ್ಮ ಊರಿಗೆ ಬಂದು ಒಂದೆಡೆ ಕುಳಿತು ಅಲ್ಲಿಗೆ ಊರವರನ್ನು ಕರೆಸಿ ನಮ್ಮ ಮನೆಯ ಯಾರಿಗೂ ಯಾವುದೇ ರೋಗ ಬಂದಿಲ್ಲ, ರೋಗ ಬಂದು ನಿಧನ ಹೊಂದಿಲ್ಲ ಎಂದು ಭಲಾತ್ಕಾರವಾಗಿ ಬರೆಸಿಕೊಂಡು ಹೋಗಿದ್ದಾರೆ ಎನ್ನುವ ಸಂಗತಿಯನ್ನು ವಜ್ರಳ್ಳಿ ಪ್ರದೇಶದ ಜನ ತಿಳಿಸಿದ್ದಾರೆ.

-ವಿಶ್ವಾಮಿತ್ರ ಹೆಗಡೆ

(ಉತ್ತರ ಕನ್ನಡಕ್ಕೆ ಶಾಶ್ವತವಾಗಿ ಸಿಕ್ಕ ಶಾಪ ಕೈಗಾ ಅಣುಸ್ಥಾವರ. ಅಣುಸ್ಥಾವರದಿಂದ ಬಿಡುಗಡೆಯಾಗುವ ಅಣುವಿಕಿರಣದ ದುಷ್ಪರಿಣಾಮಗಳ ಕುರಿತು ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಅವರು ಕನ್ನಡಪ್ರಭ ಪತ್ರಿಕೆಯಲ್ಲಿ ಸರಣಿ ಲೇಖನ ಬರೆದಿದ್ದರು. ಆ ಲೇಖನ ಸರಮಾಲೆಯಲ್ಲಿನ ಒಂದು ಲೇಖನ ಈ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ)

ನೀನು-ಪ್ರೀತಿ

(ರೂಪದರ್ಶಿ: ಅನೂಷಾ ಹೆಗಡೆ)
1) ಸುತ್ತ ಕೊಂಚವೂ ಜಾಗವಿಲ್ಲದಂತೆ
    ನನ್ನೊಡಲ ಆವರಿಸಿರುವ ಬಸರಿಮರ ನೀನು ||

    ದೊಡ್ಡ ಅಮೆಜಾನಿನಗಲ ನದಿಯೊಳಗೆ
    ಅಷ್ಟೇ ದೊಡ್ಡ ಬೆಳೆದಿಹ ನೈದಿಲೆ ನೀನು ||
   
    ನನ್ನಂತೆ, ಯಾರಂಕೆಗೂ ಸಿಗದ
    ಹಸಿರೊಸರುವ ಪ್ರಕೃತಿ ನೀನು ||

    ಒಮ್ಮಿಂದೊಮ್ಮೆಲೆ ಮನದೊಳಗೆ ಧುತ್ತೆಂದು
    ಮೂಡುವ ಬರಿಕಲ್ಪನೆ ನೀನು ||

    ನಿಜ, ನಾನಂದುಕೊಂಡಂತೆ ಇರುವ ವಿ-
    ಭಿನ್ನ, ವಿ-ಶಿಷ್ಟ, ವರ್ಣನಾತ್ಮಕ ಪ್ರೀತಿ ನೀನು ||


2)  ನೀನೇ ಹಾಗೆ ಬಸುರಿ ಮರದಂತೆ
     ಉಸಿರುಗಟ್ಟಿಸ್ತೀಯಾ, ಎದೆಯೊಳಗೆ
     ಅಮೆಜಾನಿನಗಲವಾಗಿ ಬಿಡುತ್ತೀಯಾ ||

     ನಿನ್ನೊಡಲು ನಿಗೂಢ-ಹಸಿರು, ಜೊತೆಗೆ
     ಪ್ರೀತಿಯ ಒಸರು-ಕುಸುರು,
     ನಿನಗೆ ಅಂಕೆಯಿಲ್ಲ, ಸ್ವತಂತ್ರ ||

     ನೀನೊಂದು ರಮ್ಯ ಕಲ್ಪನೆ,
     ಹಾಗೆಯೇ ನೀನು ಹಸಿ ಹಸಿ
     ನಿಷ್ಕಾಮ ಪ್ರೀತಿ-ಬರೀ ಪ್ರೀತಿ ||

**
(ಈ ಕವಿತೆಯನ್ನು ಬರೆದಿರುವುದು 10-04-2007ರಂದು ದಂಟಕಲ್ಲಿನಲ್ಲಿ )
(ಕವಿತೆಗೆ ಭಾವಚಿತ್ರ ನೀಡಿದ ಅನುಷಾ ಎಂ. ಹೆಗಡೆಗೆ ಧನ್ಯವಾದಗಳು)

Monday, June 30, 2014

ಕವಿತೆಯೆನ್ನಲೇನೇ ನಿನ್ನ

ಕವಿತೆಯೆನ್ನಲೇನೇ ನಿನ್ನ
ನನ್ನ ಪ್ರೀತಿ ಬರಹವೇ..||

ಪ್ರಾಸವೇನೂ ಬಳಸಲಿಲ್ಲ,
ಪದಗಳನು ನುಡಿಯಲಿಲ್ಲ,
ಬರಿಯ ಸಾಲು ತುಂಬಿಹುದಲ್ಲ
ಪ್ರೀತಿ ಬರಹ ನೀನೇ ಎಲ್ಲ ||1||

ಬರಿಯ ಬರಹ ನೀನು ಇಲ್ಲಿ
ಗುಣಗಳೇನೂ ಇಲ್ಲವಲ್ಲ,
ಓದುವ ಮುಂಚೆ ಒಮ್ಮೆ ನಿಲ್ಲಿ
ನನ್ನೆಡೆಯಲಿ ನಗುವ ಚೆಲ್ಲಿ ||2||

ಬರಹವಾದರೇನು ನೀನು
ನಿನ್ನ ನಾನು ಮರೆಯೆನು.
ನಿನ್ನ ಸಾಲು ಹಾಡಿ ನಾನು
ನಿನಗೆ ಜೀವ ತರುವೆನು ||3||

**
(ಈ ಕವಿತೆಯನ್ನು ಬರೆದಿರುವುದು 07-04-2006ರಂದು ದಂಟಕಲ್ಲಿನಲ್ಲಿ)

Sunday, June 29, 2014

ಬೆಂಗಾಲಿ ಸುಂದರಿ-15

           ಪಂದ್ಯಗಳಿಂದ ಪಂದ್ಯಗಳಿಗೆ ಸಾಗಿದಂತೆ ಎದುರಾಳಿ ಕಠಿಣವಾಗುತ್ತಿದ್ದ. ಭಾರತ ನಂಬರ್.1 ರಾಂಕಿಂಗ್ ರಾಷ್ಟ್ರವಾಗಿದ್ದರೂ ಎದುರಾಳಿಯಲ್ಲಿ ಯಾವುದಾದರೂ ತಂಡ ಚಮಕ್ ನೀಡಲು ಕಾಯುತ್ತಲೇ ಇತ್ತು. ಅದರಲ್ಲೂ ಬದ್ಧ ವೈರಿ ಪಾಕಿಸ್ತಾನವಂತೂ ಸಮಯ ಸಿಕ್ಕಾಗ ಹಣಿಯಬೇಕೆಂದು ಹವಣಿಸುತ್ತಲೇ ಇತ್ತು. ಮುಂದಿನ ಪಂದ್ಯ ಒಂಭತ್ತನೇ ರಾಂಕಿನ ಚೀನಾ ವಿರುದ್ಧ ನಡೆಯುತ್ತಿತ್ತು. ಚೀನಿಯರ ಆಟವೂ ಚನ್ನಾಗಿಯೇ ಇತ್ತು. ಭಾರತೀಯ ಆಟ ಕಬ್ಬಡ್ಡಿಯನ್ನು ಕಲಿತು ಭಾರತಕ್ಕೇ ಸವಾಲು ಹಾಕುವುದು ಸುಲಭವಲ್ಲ ನೋಡಿ. ಇದೊಂಥರಾ ಕ್ರಿಕೆಟಿನಲ್ಲಿ ಇಂಗ್ಲೆಂಡಿನ ವಿರುದ್ಧ ಸವಾಲು ಹಾಕಿದಂತೆ. ಎರಡೇ ಪಂದ್ಯಗಳ ಅಮೋಘ ಆಟದಿಂದಾಗಿ ವಿನಯಚಂದ್ರ ಈ ಪಂದ್ಯದ ವಿಶೇಷ ಆಕರ್ಷಣೆಯಾಗಿಬಿಟ್ಟಿದ್ದ. ಜೊತೆ ಜೊತೆಯಲ್ಲಿಯೇ ಎದುರಾಳಿ ತಂಡಗಳು ಈತನ ಮೇಲೆ ಕಣ್ಣಿಡಲು ಆರಂಭಿಸಿದ್ದವು.
             ಕಬ್ಬಡ್ಡಿಯ ಜೊತೆ ಜೊತೆಯಲ್ಲಿಯೇ ವಿನಯಚಂದ್ರ ಹಾಗೂ ಮಧುಮಿತಾಳ ಪ್ರೇಮ ಮುಂದಕ್ಕೆ ಸಾಗುತ್ತಲೇ ಇತ್ತು. ತಂಡದ ಬಹುತೇಕರಿಗೆ ಈ ವಿಷಯ ತಿಳಿದೂ ಹೋಗಿತ್ತು. ಎಲ್ಲರೂ ವಿನಯಚಂದ್ರ ಹಾಗೂ ಮಧುಮಿತಾಳನ್ನು ಒಟ್ಟಾಗಿ ಕಂಡಕೂಡಲೇ ನಗುತ್ತಲೋ, ವಿನಯಚಂದ್ರನನ್ನು ಕಾಲೆಳೆಯುತ್ತಲೋ ಅಥವಾ ಕಣ್ಣುಮಿಟುಕಿಸುತ್ತಲೋ ಹೋಗುತ್ತಿದ್ದರು. ಮೊದ ಮೊದಲು ವಿನಯಚಂದ್ರನಿಗೆ ಇದು ಮುಜುಗರ ತಂದರೂ ನಂತರ ಆತನೂ ಇದನ್ನು ಎಂಜಾಯ್ ಮಾಡತೊಡಗಿದ. ಮಧುಮಿತಾ ನಸುನಕ್ಕು ನಾಚುತ್ತಿದ್ದಳು.
             ಚೀನಾ ವಿರುದ್ಧದ ಪಂದ್ಯದ ನಂತರ ಕ್ರಮವಾಗಿ ಕೆನಡಾ, ಉಕ್ರೇನ್ ಹಾಗೂ ಪಾಕಿಸ್ತಾನಗಳು ಭಾರತದ ವಿರುದ್ಧ ಸ್ಪರ್ಧಿಸಲಿದ್ದವು. ಮೊದಲಿಗೆ ಚೀನಾ ವಿರುದ್ಧ ಪಂದ್ಯ ಆರಂಭಗೊಂಡಿತು. ಭಾರತ ತಂಡದ ಆಕರ್ಷಕ ಆಟ ಇಲ್ಲಿಯೂ ಮುಂದುವರಿಯಿತು. ವಿನಯಚಂದ್ರ ಈ ಸಾರಿಯೂ ಚನ್ನಾಗಿ ಆಡಿದ. ಜಾಧವ್ ಸರ್ ಈ ಪಂದ್ಯದಿಂದಲೇ ತಮ್ಮ ಪ್ರಯೋಗಗಳನ್ನು ಕೈಗೊಳ್ಳಲು ಆರಂಭಿಸಿದರು. ಐದು ಕ್ಯಾಚ್ ಹಿಡಿದು ಅದ್ಭುತ ಫಾರ್ಮಿನಲ್ಲಿದ್ದ ವಿನಯಚಂದ್ರನನ್ನು ಪಂದ್ಯದ ಅರ್ಧದಲ್ಲಿಯೇ ಮೈದಾನದಿಂದ ಹೊರಕ್ಕೆ ಕರೆಸಿಕೊಂಡು ಬದಲಿ ಆಟಗಾರನನ್ನು ಕಳಿಸಿದರು. ಎಲ್ಲರಿಗೂ ಈ ನಿರ್ಧಾರ ಅಚ್ಚರಿಯನ್ನು ಉಂಟುಮಾಡಿತು. ಮೊದಲಾರ್ಧದಲ್ಲಿ ಭಾರತ ತಂಡ 18-8 ರಿಂದ ಮುನ್ನಡೆಯಲ್ಲಿತ್ತು. ಜಾಧವ್ ಅವರು ತಪ್ಪು ನಿರ್ಧಾರ ಮಾಡಿದರಾ ಎಂದುಕೊಂಡರು ಆಟಗಾರರು. ಆದರೆ ಅವರ ನಿರ್ಧಾರದ ಕಾರಣ ಅವರಿಗಷ್ಟೇ ಗೊತ್ತು. ಆಡುವ ಮನಸ್ಸಿದ್ದರೂ ಕೋಚ್ ನಿರ್ಧಾರಕ್ಕೆ ಎದುರಾಡುವಂತಿಲ್ಲ ಎಂದು ವಿನಯಚಂದ್ರ ಹೊರಕ್ಕೆ ಬಂದ. ಮುಖ ಸಪ್ಪೆಯಾಗಿದ್ದು ಸ್ಪಷ್ಟವಾಗಿತ್ತು.
            `ಏನಪ್ಪಾ.. ಬೇಸರ ಮಾಡ್ಕೊಂಡ್ಯಾ..?' ಜಾಧವ್ ಅವರು ಕೇಳಿದ್ದರು.
            ವಿನಯಚಂದ್ರ ಮಾತಾಡಲಿಲ್ಲ. `ಮುಂದಿನ ಪಂದ್ಯಗಳು ಇನ್ನೂ ಕಠಿಣವಾಗಿರ್ತವೆ. ಈಗಲೇ ನಿನ್ನೊಳಗಿನ ಎನರ್ಜಿ ಮುಗಿದು ಹೋದ್ರೆ ಕಷ್ಟ. ಅದಕ್ಕೆ  ಈ ರೀತಿ ಮಾಡಿದ್ದು. ನಮ್ಮ ಆಟಗಾರ ಇನ್ನೊಬ್ಬರಿಗೆ ಅರ್ಥವಾಗುವ ಮೊದಲು ಬೇರೆ ರೀತಿಯ ತಂತ್ರವನ್ನು ಹೂಡಿಬಿಡಬೇಕು. ಇದರಿಂದ ನಮ್ಮ ತಂತ್ರಗಳು ಎದುರಾಳಿಗೆ ಗೊತ್ತಾಗುವುದಿಲ್ಲ. ಅಲ್ಲದೇ ನಿನ್ನ ಮೇಲೆ ಸಾಕಷ್ಟು ಕಣ್ಣಿದೆ. ನಿನ್ನ ಮೇಲೆ ಎದುರಾಳಿ ಟೀಂ ದಾಳಿ ಮಾಡಿ ನಿನಗೆಲ್ಲಾದರೂ ಗಾಯ-ಗೀಯ ಆಗಿಬಿಟ್ಟರೆ ಸಮಸ್ಯೆ ಜಾಸ್ತಿ . ಹೆಂಗಂದ್ರೂ ಈ ಪಂದ್ಯ ನಾವು ಗೆಲ್ಲುವುದು ನಿಶ್ಚಿತ. ನೀನು ಮುಂದಿನ ಪಂದ್ಯಗಳಿಗೆ ಬೇಕೆ ಬೇಕು. ಆಗ ಇನ್ನೂ ಚನ್ನಾಗಿ ಆಡಬೇಕು. ಅದಕ್ಕೇ ಈ ರೀತಿ ಮಾಡಿದ್ದು. ಬೇಜಾರು ಮಾಡ್ಕೋಬೇಡ..' ಎಂದು ಸಮಾಧಾನ ಹೇಳಿದರು ಜಾಧವ್. ವಿನಯಚಂದ್ರ ನಿರಾಳನಾದ.
            ಚೀನಾ ವಿರುದ್ಧ 40-15ರ ಅಂತರದಲ್ಲಿ ಭಾರತ ಗೆದ್ದು ಬೀಗಿತು. ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ದಕ್ಕಿತ್ತು. ನಂತರ ಕೆನಡಾ ವಿರುದ್ಧದ ಪಂದ್ಯ. ಕೆನಡಾ ತಂಡ ಏಳನೇ ರಾಂಕ್ ನಲ್ಲಿತ್ತು. ಆದರೆ ಕೆನಡಾ ತಂಡದಲ್ಲಿ ಒಂದು ವಿಶೇಷವಿತ್ತು. ಕೆನಡಾ ತಂಡದಲ್ಲಿದ್ದ ಬಹುತೇಕ ಆಟಗಾರರು ಭಾರತದ ಮೂಲದವರೇ ಆಗಿದ್ದರು. ಕೆನಡಾದಲ್ಲಿ ನೆಲೆಸಿದ್ದ ಪಂಜಾಬಿಗಳು ಕೆನಡಾ ಕಬ್ಬಡ್ಡಿ ಟೀಮಿನ ಆಟಗಾರರು. ಹೆಚ್ಚಿನವರು ಪಂಜಾಬಿ ಸರ್ದಾರರು. ದೈತ್ಯರು. ಈ ಪಂದ್ಯ ಕಠಿಣವಾಗಿರಬಹುದು ಎಂದುಕೊಂಡ ಜಾಧವ್. ಭಾರತದ ಮೂಲದವರೇ ಆದ ಪಂಜಾಬಿಗಳು, ದೈತ್ಯರು. ಇವರನ್ನು ಪಟ್ಟು ಹಾಕಿ ಹಿಡಿಯುವುದು ಸುಲಭದ ಕೆಲಸವಲ್ಲ. ಭಾರತೀಯ ಮೂಲದವರಾದ ಕಾರಣ ಭಾರತೀಯರ ತಂತ್ರಗಳೂ ಗೊತ್ತಿರುತ್ತವೆ ಎಂದುಕೊಂಡ. ಪಂದ್ಯವೂ ಶುರುವಾಯಿತು. ಮೊದಲ ಕೆಲ ನಿಮಿಷಗಳ ಕಾಲ ಜಾಧವ್ ಅವರು ವಿನಯಚಂದ್ರನನ್ನು ಕಣಕ್ಕಿಳಿಸಲೇ ಇಲ್ಲ. ಪಂದ್ಯ ಹೆಚ್ಚೂ ಕಡಿಮೆ ಸಮನಾಗಿಯೇ ಸಾಗುತ್ತಿತ್ತು. ವಿರಾಮದ ವೇಳೆಗೆ ಭಾರತ ತಂಡ ಕೆನಡಾಕ್ಕಿಂತ 16-12 ಅಂಕಗಳ ಮೂಲಕ ಮುನ್ನಡೆ ಸಾಧಿಸಿಕೊಂಡಿದ್ದರೂ ಅಂತರ ಕೇವಲ 4 ಅಂಕಗಳಾಗಿತ್ತು. ಯಾವುದೇ ಕ್ಷಣದಲ್ಲಿಯೂ ಭಾರತ ಹಿನ್ನಡೆಯನ್ನು ಅನುಭವಿಸುವ ಸಾದ್ಯತೆಗಳಿದ್ದವು.
            ನೂರಾರು ಆಲೋಚನೆಗಳನ್ನು ಮನಸ್ಸಿನಲ್ಲಿಯೇ ಲೆಕ್ಖಹಾಕಿದ ಜಾಧವ್ ಅವರು ದ್ವಿತೀಯಾರ್ಧದಲ್ಲಿ ವಿನಯಚಂದ್ರನನ್ನು ಅಂಗಣಕ್ಕೆ ಬಿಟ್ಟರು. ವಿನಯಚಂದ್ರನೂ ಹುರುಪಿನಲ್ಲಿದ್ದ. ಮೂರೋ ನಾಲ್ಕೋ ಕ್ಯಾಚುಗಳನ್ನು ಹಿಡಿದ ನಂತರ ಅದೊಮ್ಮೆ ರೈಡಿಂಗಿಗೆ ಹೋದ ವಿನಯಚಂದ್ರನನ್ನು ಕೆನಡಾ ಆಟಗಾರರು ಹಿಡಿದು ಹಾಕಿದರು. ಔಟಾಗಿ ಕುಳಿತ ವಿನಯಚಂದ್ರ.  ಆಟ ನೋಡುತ್ತಿದ್ದ ಮಧುಮಿತಾ ನಿರಾಸೆಪಟ್ಟಂತೆ ಕಂಡುಬಂದಿತು. ಜಾಧವ್ ಅವರೂ ಬೇಸರ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ವಿನಯಚಂದ್ರ ತಲೆತಗ್ಗಿಸುವ ಪ್ರಯತ್ನ ಮಾಡಿದ. ಅಷ್ಟರಲ್ಲಿ ಭಾರತೀಯ ಆಟಗಾರರು ಕೆನಡಾದ ಮತ್ತಿಬ್ಬರು ಆಟಗಾರರನ್ನು ಔಟ್ ಮಾಡಿದ ಪರಿಣಾಮ ಪರಿಣಾಮ ವಿನಯಚಂದ್ರ ಮತ್ತೆ ಅಂಗಣದೊಳಗೆ ಕಾಲಿಟ್ಟ. ಎದುರಾಳಿಯನ್ನು ಹಿಡಿದು ಹೆಡೆಮುರಿ ಕಟ್ಟುವವರೆಗೂ ಆತನ ಮನಸ್ಸಿನೊಳಗಿದ್ದ ಕೆಚ್ಚು ಕಡಿಮೆಯಾಗಲಿಲ್ಲ. ರೈಡಿಂಗಿಗೆ ಬಂದವರನ್ನೆಲ್ಲ ಲಬಕ್ಕನೆ ಹಿಡಿಯುತ್ತಿದ್ದ ವಿನಯಚಂದ್ರನ ಶಕ್ತಿ ಇಮ್ಮಡಿಸಿತೋ ಎನ್ನುವ ಅನುಮಾನ ಮೂಡಿದ್ದಂತೂ ಸುಳ್ಳಲ್ಲ. ಪಂದ್ಯದ ಸೀಟಿ ಊದುವ ವೇಳೆಗೆ ಭಾರತ ತಂಡ 32-25ರಿಂದ ಜಯಭೇರಿ ಭಾರಿಸಿತ್ತು. ಐದು ಪಂದ್ಯಗಳನ್ನು ಗೆದ್ದ ಭಾರತೀಯರ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ವಿಶ್ವಕಪ್ಪಿನಲ್ಲಿ ಅತ್ಯಂತ ಹೆಚ್ಚು ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ವಿನಯಚಂದ್ರ ಮೂರನೇ ಸ್ಥಾನಕ್ಕೆ ಏರಿದ್ದ.

**

         ಸಂಜೆಯ ವೇಳೆಗೆಲ್ಲ ಭಾರತೀಯ ಆಟಗಾರರು ಹೊಟೆಲನ್ನು ತಲುಪಿಕೊಂಡಿದ್ದರೆ ವಿನಯಚಂದ್ರ ಮಧುಮಿತಾಳ ಜೊತೆಗೆ ಮಾತುಕತೆಗೆ ನಿಂತಿದ್ದ. ಅತ್ತ ಢಾಕಾದ ಹೊರವಲಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅಮಾಯಕರ ಮೇಲೆ ದೌರ್ಜನ್ಯಗಳು ಜಾಸ್ತಿಯಾಗತೊಡಗಿದ್ದವು. ಬಡಪಾಯಿ ಹಿಂದುಗಳು ಬಹುಸಂಖ್ಯಾತ ಮುಸಲ್ಮಾನರ ಆಕ್ರೋಶಕ್ಕೆ, ಉನ್ಮಾದಕ್ಕೆ, ದಾಂಧಲೆಗೆ ಸಿಲುಕಿ ನರಳ ತೊಡಗಿದ್ದರು. ಢಾಕಾ ಹೊರವಲಯದಲ್ಲಿದ್ದ ಹಲವು ಹಿಂದೂಗಳ ಮನೆಗಳು ಬೆಂಕಿಗೆ ಆಹುತಿಯಾಗಿದ್ದವು. ಹಿಂದೂ ಹೆಣ್ಣುಮಕ್ಕಳು ಅತ್ಯಾಚಾರ ಮಾಡಲ್ಪಟ್ಟರು. ಸಿಕ್ಕ ಸಿಕ್ಕವರನ್ನು ಕೊಲ್ಲಲಾಗುತ್ತಿತ್ತು. ಆದರೆ ಬಾಂಗ್ಲಾದೇಶ ಮಾತ್ರ ಈ ವಿಷಯವನ್ನು ಎಲ್ಲೂ ಹೊರಗೆ ಬಿಡಲಿಲ್ಲ. ಮುಚ್ಚಿಟ್ಟಿತು. ವಿಶ್ವಕಪ್ಪಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕಾಗಿ ಈ ವಿಷಯ ಹೊರ ಜಗತ್ತಿಗೆ ತಿಳಿಯದಂತೇ ಮಾಡಿಬಿಟ್ಟಿತು.
          ಮರುದಿನ ಲೀಗ್ ಪಂದ್ಯಗಳು ಮುಕ್ತಾಯವಾಗಲಿದ್ದವು. ಮೊದಲ ಹಂತದ ಗುಂಪಿನ ಪಂದ್ಯಗಳು ಮುಗಿದ ನಂತರ ಹಲವಾರು ತಂಡಗಳು ಗಂಟುಮೂಟೆ ಕಟ್ಟಲಿದ್ದವು. ಈಗಾಗಲೇ ದುರ್ಬಲ ತಂಡಗಳು ಮನೆಯತ್ತ ಮುಖಮಾಡಿಯೂ ಆಗಿದ್ದವು. ಆದರೆ ಅನೌಪಚಾರಿಕವಾಗಿದ್ದ ಕೆಲವು ಪಂದ್ಯಗಳನ್ನು ಆಡಿ, ಒಂದೆರಡರಲ್ಲಾದರೂ ಗೆದ್ದು ಮರ್ಯಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆ ತಂಡಗಳು ಇದ್ದವು.
          ಮರುದಿನ ನಸುಕಿನಲ್ಲೇ ಎದ್ದು ಪಂದ್ಗಗಳಿಗೆ ಅಣಿಯಾದರು ಭಾರತ ತಂಡದವರು. ಮೊದಲ ಪಂದ್ಯ ಉಕ್ರೇನ್ ವಿರುದ್ಧ ಹಾಗೂ ಲೀಗ್ ಕೊನೆಯ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆಯುತ್ತಿತ್ತು. ಎರಡೂ ಎದುರಾಳಿ ತಂಡಗಳು ಭಲಿಷ್ಟ ಎಂದೇ ಬಿಂಬಿತವಾದವುಗಳಾಗಿದ್ದವು. ಉಕ್ರೇನ್ ತನ್ನ ಅಬ್ಬರದ ಆಟಕ್ಕೆ, ಎದುರಾಳಿ ತಂಡದ ಆಟಗಾರರನ್ನು ಗಾಯಗೊಳಿಸುವುದಕ್ಕೆ ಕುಖ್ಯಾತಿಯನ್ನು ಗಳಿಸಿಕೊಂಡಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವಂತೂ ಭಾರತದ ವಿರುದ್ಧ ಕಿಡಿಕಾರುತ್ತಲೇ ಇತ್ತು. ಹಾಗಾಗಿ ಜಿದ್ದಾ ಜಿದ್ದಿ ನಿರೀಕ್ಷಿತವಾಗಿತ್ತು. ಉಕ್ರೇನ್ ವಿರುದ್ಧದ ಪಂದ್ಯಕ್ಕೆ ವಿನಯಚಂದ್ರ ಹೊರಗುಳಿದಿದ್ದ. ಜಾಧವ್ ಅವರ ನಿರ್ಧಾರದಿಂದ ಆತ ಹೀಗೆ ಮಾಡಬೇಕಾಗಿ ಬಂದಿತ್ತು.
           ಪಂದ್ಯ ಆರಂಭಗೊಂಡಿತು. ನೋಡ ನೋಡುತ್ತಿದ್ದಂತೆಯೇ ಉಕ್ರೇನ್ ಭಾರತಕ್ಕಿಂತ ಮೂರಂಕ ಜಾಸ್ತಿ ಪಡೆದು ಬೀಗಿತು. ಭಾರತೀಯ ಆಟಗಾರರು ಸೋಲಿನತ್ತ ಮುಖ ಮಾಡಿದ್ದರು. ಉಕ್ರೇನಿ ಆಟಗಾರರ ಅಬ್ಬರದ ನಡೆಯಿಂದಾಗಿ ಭಾರತದ ಎರಡು ಆಟಗಾರರು ಗಾಯಗೊಂಡಿದ್ದೂ ಆಯಿತು. ಮೊದಲಾರ್ಧದದ ವೇಳೆಗೆ ಭಾರತ ತಂಡ ಉಕ್ರೇನಿನ ವಿರುದ್ಧ 13-11ರ ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ಎರಡು ಅಂಕ ಹಿನ್ನಡೆಯಲ್ಲಿತ್ತು. ವಿನಯಚಂದ್ರನ ಚಡಪಡಿಕೆ ಎಲ್ಲೆ ಮೀರಿತು. ತಾನಾದರೂ ಆಡೋಣ ಎಂದರೆ ಇಂದಿನ ಪಂದ್ಯದಲ್ಲಿ ತನ್ನನ್ನು ಜಾಧವ್ ಅವರು ಆಯ್ಕೆ ಮಾಡಿಲ್ಲ. ತಂಡ ಸೋತರೆ ಮರ್ಯಾದೆ ಪ್ರಶ್ನೆ. ವಿಶ್ವ ಚಾಂಪಿಯನ್ನರು ತಮಗಿಂತ ಕಡಿಮೆ ರಾಂಕಿನ ತಂಡದ ವಿರುದ್ಧ ಸೋತರಲ್ಲ ಎನ್ನುವ ಅವಮಾನ ಬೇರೆ. ವಿನಯಚಂದ್ರ ಜಾಧವ್ ಅವರ ಆಜೂಬಾಜಿನಲ್ಲಿ ಸುಳಿದಾಡತೊಡಗಿದ. ಜಾಧವ್ ಅವರು ಯಾವುದೇ ತಲೆಬಿಸಿಯಲ್ಲಿ ಇರುವಂತೆ ಕಾಣಲಿಲ್ಲ. ಮುಂದಿನ ಅರ್ಧಭಾಗದಲ್ಲಿ ಯಾವುದಾದರೂ ಮಿರಾಕಲ್ ಘಟಿಸಬೇಕು. ಅಷ್ಟಾದರೆ ಮಾತ್ರ ತಾವು ಗೆಲ್ಲುತ್ತೇವೆ ಎಂದುಕೊಂಡ ವಿನಯಚಂದ್ರ.
           ದ್ವಿತೀಯಾರ್ಧದಲ್ಲಿ ಪಂದ್ಯ ಮತ್ತಷ್ಟು ರೋಚಕತೆಯನ್ನು ಪಡೆದುಕೊಂಡಿತು. ಎರಡಂಕ ಮುನ್ನಡೆ ಪಡೆದಿದ್ದ ಉಕ್ರೇನ್ ತಪ್ಪಿಗೆ ಅವಕಾಶ ನೀಡದಂತೆ ಟೈಂಪಾಸ್ ಮಾಡಲು ಯತ್ನಿಸುತ್ತಿತ್ತು. ವಿನಯಚಂದ್ರ ಆಗಲೇ ಭಗವಂತನ ಮೊರೆ ಹೋಗಿದ್ದ. ಭಾರತೀಯ ರೈಡರ್ ಗಳು ಎಷ್ಟೇ ಪ್ರಯತ್ನ ಪಟ್ಟರೂ ಉಕ್ರೇನಿ ಆಟಗಾರರ ಒಂದೇ ಒಂದು ಅಂಕವನ್ನೂ ಬಡಿದುಕೊಂಡು ಬರಲು ಸಾದ್ಯವಾಗಲಿಲ್ಲ. ಮುಗಿಯಲು ಎರಡು ನಿಮಿಷವಿದೆ ಎನ್ನುವಾಗ ಸೂರ್ಯನ್ ಒಬ್ಬ ಆಟಗಾರನನ್ನು ಔಟ್ ಮಾಡಿಕೊಂಡು ಬಂದ. ಒಂದಂಕ ಮಾತ್ರ ಮುನ್ನಡೆಯಲ್ಲಿತ್ತು ಉಕ್ರೇನ್. ಭಾರತ ತಂಡ ಅಲ್ಪ ನಿರಾಳವಾದ ಭಾವ. ಆದರೆ ಯಾಮಾರಿದರೆ ಪಂದ್ಯ ಸೋತಂತೆ. ಪಂದ್ಯ ಮುಗಿಯಲು ಕೇವಲ 30 ಸೆಕಂಡ್ ಗಳಿವೆ ಎನ್ನುವಾಗ ಇನ್ನೊಂದು ಅಂಕ ಭಾರತಕ್ಕೆ ಲಭ್ಯವಾಯಿತು. ಅಂಕಗಳು ಸಮನಾಗಿದ್ದವು. ಕೊನೆಯ ಕ್ಷಣದಲ್ಲಿ ಮತ್ತಷ್ಟು ರೋಚಕತೆ ಪಂದ್ಯಕ್ಕೆ ಪ್ರಾಪ್ತವಾಯಿತು. ಯಾರೊಬ್ಬರು ಯಾಮಾರಿದರೂ ಪಂದ್ಯವನ್ನು ಕಳೆದುಕೊಳ್ಳುವ ಬೀತಿಯಲ್ಲಿತ್ತು. ಹೀಗಿದ್ದಾಗಲೇ ಉಕ್ರೇನ್ ತಂಡ ಮಾಡಿಕೊಂಡ ಯಡವಟ್ಟು ಭಾರತಕ್ಕೆ ಲಾಭವನ್ನು ತಂದುಕೊಟ್ಟಿತು.
          ಸೂರ್ಯನ್ ರೈಡಿಂಗಿಗೆ ಹೋಗಿದ್ದ. ಅಬ್ಬರದ ರೈಡಿಂಗ್ ಆತನ ವಿಶೇಷತೆಯಾಗಿತ್ತು. ರೈಡಿಂಗಿಗೆ ಇಳಿದವನೇ ಉಕ್ರೇನ್ ತಂಡದ ಮೇಲೆ ಪದೇ ಪದೆ ದಾಳಿ ಮಾಡಿ ಅವರನ್ನೆಲ್ಲ ಒಂದು ಮೂಲೆಗೆ ತಳ್ಳಲು ಯಶಸ್ವಿಯಾದ. ಹೀಗಿದ್ದಾಗಲೇ ಉಕ್ರೇನಿ ಆಟಗಾರನೊಬ್ಬ ಕಬ್ಬಡ್ಡಿ ಅಂಗಣದ ಹೊರ ಲೈನ್ ಮುಟ್ಟಿಬಿಟ್ಟಿದ್ದ. ಅದನ್ನೇ ಕಾಯುತ್ತಿದ್ದ ಲೈನ್ ಅಂಪಾಯರ್ ಗಳು ಉಕ್ರೇನಿ ಆಟಗಾರನನ್ನು ಔಟ್ ಎಂದು ತೀರ್ಪು ನೀಡಿದರು. ಇದರಿಂದ ಉಕ್ರೇನ್ ಆಟಗಾರರು ಒಮ್ಮೆ ಗೊಂದಲಕ್ಕೊಳಗಾದರು. ಇದರ ಲಾಭ ಪಡೆದುಕೊಂಡ ಸೂರ್ಯನ್ ತಕ್ಷಣವೇ ಇಬ್ಬರನ್ನು ಬಡಿದುಕೊಂಡು ಬಂದ. ಇದರಿಂದಾಗಿ ಬಾರತಕ್ಕೆ 1+2 ಮೂರಂಕ ಲಭ್ಯವಾಯಿತು. ಉಕ್ರೇನಿಗಿಂತ ಮೂರಂಕ ಜಾಸ್ತಿಯಾಗಿ ಪಂದ್ಯದಲ್ಲಿ ಗೆಲುವನ್ನೂ ಪಡೆಯಿತು. ವಿನಯಚಂದ್ರ ಓಡಿಬಂದು ಸೂರ್ಯನ್ ನನ್ನು ಎತ್ತಿಕೊಂಡ. ಸಂತೋಷದ ಕಟ್ಟೆಯೊಡೆದಿತ್ತು. ರೋಚಕ ಗೆಲುವು ಇಷ್ಟೆಲ್ಲ ಖುಷಿ ನೀಡುತ್ತದೆಯಲ್ಲ ಎನ್ನಿಸಿತು. ಹಿನ್ನಡೆಯನ್ನೂ ಮೆಟ್ಟಿ ನಿಂತು ಸಾಧಿಸಿದ ಗೆಲುವು, ವಿನಯಚಂದ್ರನಂತಹ ಕ್ಯಾಚರ್ ನನ್ನು ಹೊರಗಿರಿಸಿದ್ದರೂ ಸಿಕ್ಕ ಗೆಲುವು ಸಾಧಾರಣವಾಗಿರಲಿಲ್ಲ. ಗೆಲುವು ದಕ್ಕಿದ್ದರೂ ಇಬ್ಬರು ಆಟಗಾರರು ಗಾಯಗೊಂಡಿದ್ದುದು ತಂಡಕ್ಕೆ ಕೊಂಚ ಹಿನ್ನಡೆಯನ್ನು ಉಂಟು ಮಾಡಿತು ಎಂದೇ ಹೇಳಬೇಕು.
          ವಿನಯಚಂದ್ರ ಗಾಯಗೊಳ್ಳುವುದನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕೆ ಜಾಧವ್ ಅವರು ಈ ರೀತಿ ಮಾಡಿದರೇ ಎನ್ನುವ ಆಲೋಚನೆ ಆತನ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ಕಳೆದ ಐದು ಪಂದ್ಯಗಳಲ್ಲಿ ಸಾಕಷ್ಟು ಹೆಸರನ್ನು ಗಳಿಸಿಕೊಂಡಿದ್ದ ವಿನಯಚಂದ್ರ ಪಂದ್ಯಾವಳಿಯಲ್ಲಿ ಇನ್ನೂ ಸಾಕಷ್ಟು ಆಟವನ್ನು ಆಡಬೇಕಾಗಿದೆ. ಮುಂದೆ ದೊಡ್ಡ ದೊಡ್ಡ ಟೀಮುಗಳ ವಿರುದ್ಧ ಕಾದಾಡಲು ಆತನ ಅಗತ್ಯವಿದೆ. ವಿಶ್ವಕಪ್ಪಿನ ಆರಂಭಿಕ ಹಂತದಲ್ಲಿಯೇ ಆತ ಗಾಯಗೊಂಡರೆ ಮುಂದೆ ತಂಡಕ್ಕೆ ದೊಡ್ಡ ಹೊಡೆತ ಬೀಳಬಹುದು ಎನ್ನುವ ಕಾರಣಕ್ಕಾಗಿ ಜಾಧವ್ ಅವರು ನಿರ್ಧಾರ ಕೈಗೊಂಡಿದ್ದರು. ವಿನಯಚಂದ್ರ ಅವರ ಆಲೋಚನೆಗೆ ಸಲಾಂ ಎಂದ.
          ಸಾಂಪ್ರದಾಯಿಕ ಎದುರಾಳಿ, ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಮುಂದಿನ ಪಂದ್ಯ ನಡೆಯಲಿತ್ತು. ಈ ಪಂದ್ಯದ ಬಗ್ಗೆ ಎಲ್ಲರ ನಿರೀಕ್ಷೆಗಳಿದ್ದವು. ರೋಚಕತೆಗೆ ಕೊರತೆಯಿರಲಿಲ್ಲ. ಕುತೂಹಲವೂ ಸಾಕಷ್ಟಿತ್ತು. ಏನಾಗುತ್ತೋ ಎನ್ನುವ ಭಾವನೆ ಎಲ್ಲರಲ್ಲಿಯೂ ಇತ್ತು. ಪಂದ್ಯದ ನಿರೀಕ್ಷೆಯಲ್ಲಿದ್ದರು. ಅಷ್ಟರಲ್ಲಿ ಜಾಧವ್ ಅವರು ಪಕ್ಕದಲ್ಲೇ ನಡೆಯುತ್ತಿದ್ದ ಬಾಂಗ್ಲಾದೇಶದ ಪಂದ್ಯಾವಳಿಯನ್ನು ಗಮನಿಸಲು ಸೂಚಿಸಿದರು. ಎಲ್ಲರೂ ಅತ್ತ ಸಾಗಿದರು. ಬಾಂಗ್ಲಾದೇಶ ತಂಡ ತನ್ನ ತವರು ಮನೆಯಲ್ಲಿ ಅಬ್ಬರದ ಆಟವಾಡುತ್ತಿತ್ತು. ಎದುರಿಗೆ ಸಿಕ್ಕ ತಂಡವನ್ನು ಅಡ್ಡಡ್ಡ ಸೋಲಿಸುತ್ತಿತ್ತು. ಭಾರತದ ಆಟಗಾರರು ಬಾಂಗ್ಲಾದೇಶದ ಅಬ್ಬರದ ಆಟವನ್ನು ನೋಡಿ ವಿಸ್ಮಿತರಾದರು. ಅವರ ತಂತ್ರಗಳನ್ನು ಗಮನಿಸಲಾರಂಭಿಸಿದ್ದರು.

(ಮುಂದುವರಿಯುತ್ತದೆ..)

Saturday, June 28, 2014

ಕಡಲ ಮುತ್ತು

ಕಡಲ ಒಡಲಾಳದಲ್ಲಿ
ಅಡಗಿ ಕುಳಿತಿದೆ ಮುತ್ತು |
ಸುತ್ತ ಸುಳಿದಾಡುತಿಹ
ಮೀನ ಭಯವದಕಿಲ್ಲ ||

ಜಲಬಿಂದು ನಡವಿನಲಿ
ಬದುಕಿ ಬಾಳಿದೆ ಮುತ್ತು |
ಯಾರ ಜೊತೆ ಸೇರುವುದೋ
ಅರಿವು ಅದಕಿಲ್ಲ ||

ಸ್ವಾತಿ ಮಳೆ ಹನಿಯಿಂದ
ಮೂಡಿ ಬಂದಿದೆ ಮುತ್ತು |
ಹಲವು ಜೊತೆ ಹೆಜ್ಜೆಗಳ
ಮುತ್ತು ಬಯಸಿದೆಯಲ್ಲ ||

ಮುತ್ತು ಬೆಲೆ ಮಾಣಿಕ್ಯ
ಅದರರಿವು ಅದಕಿಲ್ಲ |
ಜಲದೊಳಗೆ ಇರುತಿರಲು
ಬೆಲೆಯೆಂಬುದಿಲ್ಲ ||

**
(ಈ ಕವಿತೆಯನ್ನು ಬರೆದಿರುವುದು 6.12.2006ರಂದು ದಂಟಕಲ್ಲಿನಲ್ಲಿ)