Tuesday, April 15, 2014

ಹವ್ಯಕ ಮಾಣಿಯ ಲವ್ ಸ್ಟೋರಿ (ಕವಿತೆ)

ಯಂಗ್ಳೂರ ಮಾಣಿಗೆ ಮೊದಲ ಬಾರಿಗೆ
ಲವ್ವಾಗಿತ್ತು
ಪಿಯುಸಿಯಲ್ಲಿಪ್ಪಕಾದ್ರೆ ಅವಳ ನೆನಪಲ್ಲಿ
ಹೃದಯ ಫುಲ್ಲಾಗಿತ್ತು ||

ಕಾಲೇಜು ಬದುಕಲ್ಲಿ ಅವಳನ್ನು ನೋಡ್ಕ್ಯತ್ತ
ಕನಸು ಕಾಣ್ತಿದ್ದ
ಕಣ್ಣೆದುರು ಬಂದಾಗ, ಹತ್ತರದಲ್ಲೇ ಹೋದಾಗ
ಥ್ರಿಲ್ಲಾಗ್ತಿದ್ದ ||

ಆಳ್ತನದಲ್ ಗಿಡ್ಡಿದ್ರೂ ಉದ್ದ ಜಡೆಯ ಕೂಸು
ಮಾಣಿಯ ಮನಸು ಕದ್ದಿತ್ತು
ಅವಂಗೂ ಗೊತ್ತಿತ್ತಿಲ್ಲೆ ಹೇಳದೇ ಕೇಳದೆ ಮನಸು
ಪ್ರೀತಿಯಲ್ಲಿ ಬಿದ್ದಿತ್ತು ||

ದಿನಪೂರ್ತಿ ಅವಳ ನೆನಪಲ್ಲೆ ಕಾಲ
ಅರಾಮಾಗಿ ಕಳೀತಿದ್ದ
ಊಟ, ಓದು ಎಲ್ಲೆಂದರಲ್ಲಿ ಅವಳ
ನೆನಪು ಮಾಡ್ಕತ್ತಾನೆ ಇರ್ತಿದ್ದ ||

ಸಾಕಷ್ಟು ಸಾರಿ ಇಂಪ್ರೆಸ್ಸು ಮಾಡಿ ಸೆಳ್ಕಂಬಲೂ
ಟ್ರೈ ಮಾಡಿದ್ದ
ಮಾಣಿಯ ಕಂಡರೂ ಕಾಣದೇ ಇದ್ದಾಂಗೆ ಹೋದಾಗ
ಸಿಟ್ಟು ಮಾಡ್ಕಂಡಿದ್ದ ||

ಒಂದಿನ ಬೆಳಿಗ್ಗೆ ಗಟ್ಟಿ ಮನಸು ಮಾಡ್ಕ್ಯಂಡು
ಪ್ರಪೋಸ್ ಮಾಡಲೆ ಹೊಂಟಿದ್ದ
ಕರಿ ಪ್ಯಾಂಟು ಬಿಳಿ ಶರ್ಟು ಕಾಲೇಜು ಯುನಿಫಾರ್ಮು
ಶಿಸ್ತಾಗಿ ತೊಟ್ಟಿದ್ದ ||

ಕಾಲೇಜಿಗೆ ಬಂದವ್ವ ಅವಳನ್ನು ಹುಡುಕಿದ್ದ
ಎಲ್ಲೆಲ್ಲೂ ಅದು ಕಂಡಿದ್ದಿಲ್ಲೆ
ಎಲ್ಲಾ ಕಡೆಗೆ ಹುಡುಕಿದ, ಕಾಲೇಜು ತಿರುಗ್ದ
ಮನಸ್ಯಾಕೋ ತಡದ್ದಿಲ್ಲೆ ||

ಬೆಳಿಗ್ಗೆ ಕಳೆದು ಮದ್ಯಾನವಾದ್ರೂ ಕೂಸಿನ
ಪತ್ತೆಯೇ ಆಜಿಲ್ಲೆ
ಕಾಲೇಜಲ್ಲೆಲ್ಲಾ ಅಡ್ಡಾಡಿ ಅಡ್ಡಾಡಿ ಮಾಣಿ ತಲೆ
ಸಮಾ ಉಳದ್ದಿಲ್ಲೆ ||

ಮರುದಿನ ಕೂಡ ಪ್ರಪೋಸ್ ಮಾಡವು ಹೇಳಿ
ಬೆಳಿಗ್ಗೇನೆ ಎದ್ದು ಬಂದಿದ್ದ
ಕಾಲೇಜು ಪಕ್ಕದ ಅಂಗಡಿಯಿಂದ ಕೆಂಪ್
ಗುಲಾಬಿ ಹೂ ತಂದಿದ್ದ ||

ಆವತ್ತು ಬಂತು ಕೂಸು ಎದ್ರಿಗೆ
ಮಾಣಿ ಕಾಲು ಗಡ ಗಡ
ಮಾತಾಡ್ಸಲೆ ಹೋದ ಕಣ್ಣೆತ್ತಿ ನೋಡ್ದ
ಮಾತು ಪೂರ್ತಿ ತಡಾ ಬಡಾ ||

ಆ ನಿನ್ನ ರಾಶಿ ಲವ್ ಮಾಡ್ತಾ ಇದ್ನೆ
ನೀ ಎಂತಾ ಹೇಳ್ತೆ?
ನಿನ್ ಮ್ಯಾಲೆ ರಾಶಿ ಮನಸಾಗಿ ಹೋಜು
ನನ್ನ ಲವ್ ಕೇಳ್ತೇ? ||

ಕೂಸಿಗೆ ಸಿಟ್ಟು ಉಕ್ಕುಕ್ಕಿ ಬಂತು
ಹೋಗಲೆ ಹಲ್ಕಟ್ಟು ಮಾಣಿ
ಯನ್ ಭಾವನ್ ಆನು ಲವ್ ಮಾಡ್ತಾ ಇದ್ದಿ
ಯನ್ ಸುದ್ದಿಗ್ ಬರಡಾ ಪ್ರಾಣಿ ||

ಮಾಣೀಯ ಲವ್ ಸ್ಟೋರಿಗ್ ಪುಸ್ಟಾಪು ಬಿತ್ತು
ಕಣ್ಣಿನ ತುಂಬ ನೀರು
ಹೇಳವ್ ಇಲ್ಲೆ ಕೇಳವ್ವೂ ಇಲ್ಲೆ
ಸುರಿಯುತ್ತಿತ್ತು ಜೋರು ||

ಲವ್ ಮಾಡೋ ಉಸಾಬರಿ ಒಂದೇ ಸಾರಿ
ಮಾಣಿಗೆ ಸಾಕಾಗಿ ಹೋಗಿತ್ತು
ಮತ್ತೊಂದ್ ಕೂಸಿನ ಲವ್ ಮಾಡಲೂ
ಆಗದಿದ್ದಷ್ಟ್ ನೋವಾಗಿತ್ತು ||

**
(ಮತ್ತೊಂದ್ ಹವ್ಯಕ ಟಪ್ಪಾಂಗುಚ್ಚಿ ಹಾಡು.. ಹವ್ಯಕ ಮಾಣಿಯ ಲವ್ ಸ್ಟೋರಿ...)
(ಬರೆದಿದ್ದು 15-04-2014ರಂದು ಶಿರಸಿಯಲ್ಲಿ)

ಪ್ರೀತಿಯ ನೌಕೆ

ಚಿತ್ರ ಕೃಪೆ : ವಿನಾಯಕ ಹೆಗಡೆ, ರೂಪದರ್ಶಿಗಳು : ಅಶ್ವಿನಿ ಭಟ್-ಕೇದಾರ್
ನಾನು ಬರಲೆ ನಿನ್ನ ಜೊತೆಗೆ
ಹಜ್ಜೆ ಹಾಕಲು
ಕೈ ಕೈ ಹಿಡಿದುಕೊಂಡು
ಜೊತೆಗೆ ನಡೆಯಲು |

ನಾನು ಒಂಟಿ ನೀನು ಒಂಟಿ
ಬದುಕು ಏಕ ರೂಪ
ನಾನು ನೀನು ಆಗೆ ಜಂಟಿ
ಬಾಳು ಹೊಸದು ದೀಪ ||

ನನಗೆ ನೀನು ಕಣ್ಣ ರೆಪ್ಪೆ
ಪ್ರೀತಿ ಕೊಡುವೆ ಅಮೃತ
ನಿನ್ನ ಇರುಳ ಕನಸು ನಾನು
ಬದುಕಿಗಿರುವೆ ಶಾಶ್ವತ ||

ನಮ್ಮ ಪ್ರೀತಿ ಹೊಸತು ಕವಿತೆ
ರಾಗವಾಗಿ ಉಳಿಯಲಿ
ಮನಸಿನೊಡನೆ ಜೀವತಂತು
ಬಾಳಿನಲ್ಲಿ ಬೆಳೆಯಲಿ ||

ನಡೆವ ನಾವು ಬಾಳಿನಲ್ಲಿ
ತೀರವನ್ನು ದಾಟುವ
ಬಾಳ ಹೊಸದು ನೌಕೆಯಲ್ಲಿ
ಬದುಕ ಹಾಯಿ ಕಟ್ಟುವ ||


**
(ಈ ಕವಿತೆಯನ್ನು ಬರೆದಿದ್ದು 15.04.2014ರಂದು ಶಿರಸಿಯಲ್ಲಿ)

Monday, April 14, 2014

ಭೂತ ಬಂಗಲೆ (ಕಥೆ)

ಭೂತ ಬಂಗಲೆಯ ಸಾಂದರ್ಭಿಕ ಚಿತ್ರ 
ಡಿಯರ್ ವಿನು...
              ಬದುಕು ಅಚ್ಚರಿಗಳ ಸಂತೆ.. ಇಂತಹ ಬದುಕಿನಲ್ಲಿ ನಿನ್ನ ಪರಿಚಯವಾಗಿದ್ದೂ ಅಷ್ಟೇ ವಿಚಿತ್ರವಾಗಿ, ವಿಶೇಷವಾಗಿ. ನನಗೆ ನೀನು, ನಿನಗೆ ನಾನು ಪರಿಚಯ ಆಗಿದ್ದೇ  ಆಕಸ್ಮಿಕವಾಗಿ ಅಲ್ಲವಾ..? ಒಮ್ಮೆ ನೆನಪು ಮಾಡಿಕೊ. ಅದ್ಯಾವುದೋ ಮ್ಯಾಗಝಿನ್ನಿನಲ್ಲಿ ನಿನ್ನ ಬರಹ ಬಂದಿತ್ತು. ನಾನು ಅದಕ್ಕೆ ಪ್ರತಿಯಾಗಿ ನಿನಗೊಂದು ಪತ್ರ ಬರೆದಿದ್ದೆ. ನನ್ನ ಪತ್ರಕ್ಕೆ ನೀನು ಉತ್ತರ ಬರೆಯುವ ಮೂಲಕ ನಮ್ಮ ನಡುವೆ ಬಂಧ ಬೆಳೆದಿತ್ತು.
              ನಾವು ನಮ್ಮ ಪತ್ರಗಳ ನಡುವೆ ಮಾತನಾಡದ ವಿಷಯವೇ ಇಲ್ಲ ಅಲ್ಲವಾ..? ಮೊಬೈಲ್ ಯುಗದಲ್ಲಿಯೂ ಪತ್ರಗಳನ್ನು ಬರೆಯುತ್ತಾರೆ ಎಂದರೆ ಅಚ್ಚರಿಯ ವಿಷಯವೇ ಹೌದು. ಅರ್ಜೆಂಟು, ಪುರಸೊತ್ತಿಲ್ಲ ಎಂದು ಎಲ್ಲರೂ ಓಡುತ್ತಿದ್ದಾಗ ನಾನು-ನೀನು ಮಾತ್ರ ಅದ್ಯಾವ ಜನ್ಮದಲ್ಲಿ ಬಂಡವಾಳವಾಗಿ ಉಳಿದಿತ್ತೋ ಎಂಬಂತೆ ಸಹನೆಯಿಂದ ಪತ್ರ ಬರೆದುಕೊಳ್ಳುತ್ತಿದ್ದೇವೆ. ಟಕ್ಕನೆ ಕೈಯಲ್ಲಿ ಬಟನ್ ಮೂಲಕ ಮೆಸೆಜ್ ಮಾಡಿ ಕ್ಷಣಾರ್ಧದಲ್ಲಿ ನಿನ್ನ ಕೈತಲುಪುವ ಸಂದೇಶ, ವಾಟ್ಸಾಪುಗಳ ಈ ಕಾಲದಲ್ಲಿಯೂ ಎರಡೂವರೆ ರೂಪಾಯಿಯ ಅಂತರ್ದೇಸಿಯ ಕಾರ್ಡನ್ನು ಕೊಂಡು ಅದ್ಯಾವುದೋ ನಿಷ್ಟೆಯಿಂದ ನಾವು ಪತ್ರ ಬರೆದುಕೊಳ್ಳುತ್ತಿದ್ದೇವಲ್ಲಾ.. ಇತರರಿಗೆ ನಾವು  ಜಗತ್ತಿನ ಪರಮ ಆಲಸಿಗಳಂತೆ, ಅದ್ಯಾವುದೋ ಅನ್ಯಗ್ರಹದ ಜೀವಿಗಳಂತೆ ಕಾಣುತ್ತಿದ್ದೇವೇನೋ ಅಲ್ಲವಾ..? ಹೋಗ್ಲಿ ನಾವು ಇದರಲ್ಲಿ ಖುಷಿ ಪಡುತ್ತಿದ್ದೇವೆ.. ಜಗದ ಚಿಂತೆ ನಮಗ್ಯಾಕೆ ಅಲ್ಲವಾ..?
               ಸರಿ ಸುಮಾರು ಅದೆಷ್ಟು ಕಾಲವಾಯಿತು ನಿನ್ನ ಪರಿಚಯವಾಗಿ ಅಂತ ಲೆಕ್ಖ ಹಾಕಿದೆ. ಒಂದೂವರೆ ವರ್ಷವಿರಬೇಕು. 20 ದಿನಗಳಿಂಗೆ ಒಂದು ಪತ್ರದಂತೆ ನಾವು ಬರೆದುಕೊಳ್ಳುತ್ತಿದ್ದೇವೆ. ಇದುವರೆಗೂ ನಾನು ಬರೆದಿದ್ದು 10ಕ್ಕೂ ಹೆಚ್ಚು ಪತ್ರಗಳಾಗಿವೆ. ನೀನು ಅಷ್ಟೇ ಬರೆದಿರಬೇಕು. ಆದರೆ ನಿನ್ನಿಂದ ಬಂದ ಪತ್ರಗಳ ಗಾತ್ರವಿದೆಯಲ್ಲ ಮಾರಾಯಾ ಬಹಳ ದೊಡ್ಡದು. 10 ಪುಟಗಳಿಗೂ ಹೆಚ್ಚು ಪತ್ರ ಬರೆಯುತ್ತೀಯಲ್ಲ.. ಅದ್ಯಾವುದೋ ಪುಸ್ತಕದಲ್ಲಿ ನೀನೋದಿ ಇಷ್ಟಪಟ್ಟ ಸಾಲುಗಳು, ಕವಿತೆಗಳು, ಕಥೆಯೊಂದರ ತುಣಿಕು, ಯಾವುದೋ ನಿನ್ನ ಮನಸ್ಸನ್ನು ಸೆಳೆದ ಘಟನೆ, ಅನುಭವ ಹೀಗೆ ಹಲವೆಂಟು ಬಗೆಯಲ್ಲಿ ಬರೆಯುತ್ತೀಯಲ್ಲ.. ನಿನ್ನ ಬರವಣಿಗೆ, ಶೈಲಿ ನನ್ನನ್ನು ಕಾಡಿದೆ. ಅನೇಕ ಸಾರಿ ಅಂದುಕೊಳ್ಳುತ್ತೇನೆ ಗೆಳೆಯಾ, ನಿನ್ನ ಪತ್ರಗಳಿಲ್ಲದಿದ್ದರೆ ನಾನು ಬಹುಶಃ ಖಿನ್ನತೆಯಲ್ಲೋ ಅಥವಾ ಇನ್ಯಾವುದೋ ಮಾನಸಿಕ ಒತ್ತಡದ ಸುಳಿಯಲ್ಲಿ ಸಿಲುಕಿ ತೊಳಲಾಡುತ್ತಿದ್ದೆನೇನೋ.
               ಈಗಲೂ ಅಷ್ಟೇ ಅನೇಕ ಸಾರಿ ನನಗೆ ಬೇಸರವಾದಾಗಲೆಲ್ಲ ನಿನ್ನ ಪತ್ರಗಳನ್ನು ಹರವಿಕೊಂಡು ಓದಲು ಆರಂಭಿಸುತ್ತೇನೆ. ಒಂದೊಂದು ಪತ್ರವನ್ನು ಓದಿದಂತೆಲ್ಲ ಮನಸ್ಸು ಚಿಟ್ಟೆಯಂತಾಗುತ್ತದೆ. ಬೇಸರ ದೂರಾಗುತ್ತದೆ. ಅದಕ್ಕೇ ನಿನ್ನ ಪತ್ರಗಳನ್ನೆಲ್ಲ ಒಂದು ಫೈಲ್ ಮಾಡಿ ಇಟ್ಟಿದ್ದೇನೆ. ವಿನು.. ನೀನೇನೋ ನಿನ್ನ ಪತ್ರದಲ್ಲಿ ಹೊಸ ಹೊಸ ಸಂಗತಿಗಳು, ಚೈತನ್ಯಯುಕ್ತ ಮಾತುಗಳು, ನಿಮ್ಮೂರು, ಅಘನಾಶಿನಿ, ಕಾಡು, ಹಸಿರಿನ ಬಗ್ಗೆ ಬರೆದು ನನ್ನ ಮನಸ್ಸನ್ನು ಹಕ್ಕಿಯಂತೆ ಹಾರಾಟ ನಡೆಸುವ ಹಾಗೆ ಮಾಡುತ್ತಿದ್ದೀಯಾ.. ಆದರೆ ನಾನು ಮಾತ್ರ ನಿನಗೆ ಅಂತ ವಿಶೇಷವಾದದ್ದೇನನ್ನೂ ಬರೆದು ಕಳಿಸುತ್ತಿಲ್ಲ ಎಂಬ ಭಾವನೆ ಕಾಡುತ್ತಿದೆ. ಆದರೆ ವಿನು.. ಏನಾದರೂ ಬರೆಯಲು ಯತ್ನಿಸುತ್ತೇನೆ... ಬೇಸರವಾದರೂ ಸಹಿಸಿಕೊ ಗೆಳೆಯಾ..
ಇಂತಿ
ದಿವ್ಯಾ..
                ಹೀಗೆ ಬರೆದಿದ್ದ ಪತ್ರ ನನ್ನ ಕೈ ತಲುಪುವ ವೇಳೆಗೆ ನಾನು ಅವಳ ಪತ್ರಕ್ಕಾಗಿ ಕಾಯುತ್ತಿದ್ದೆ. ಹಲವಾರು ದಿನಗಳಿಂದ ನಮ್ಮೂರ ಪೋಸ್ಟ್ ಮಾಸ್ತರ್ ಶ್ರೀಪಾದಣ್ಣನ ಮನೆಗೆ ಹೋಗಿ-ಬಂದು ಮಾಡುತ್ತ, `ಪತ್ರ ಬಂಜನೋ ಶ್ರೀಪಾದಣ್ಣ' ಎಂದು ಕೇಳುತ್ತ ಶ್ರೀಪಾದಣ್ಣನ ತಲೆ ತಿನ್ನುತ್ತ ಬರುತ್ತಿದ್ದೆ. `ನಿಂಗೆ ಬ್ಯಾರೆ ಕೆಲ್ಸಾನೆ ಇಲ್ಯನಾ ಮಾರಾಯಾ.. ದಿನಕ್ಕೆ ನಾಲ್ಕ್ ಸಾರಿ ಬಂದು ಪತ್ರ ಬಂಜಾ ಹೇಳಿ ಕೇಳ್ತ್ಯಲಾ.. ಬಂದ್ ಕೂಡ್ಲೆ ನಿಂಗೆ ಹೇಳ್ತಿ..' ಎಂದು ಬೈಸಿಕೊಂಡೂ ಇದ್ದೆ. ಅಂತೂ ದಿವ್ಯಾಳಿಂದ ಪತ್ರ ಬಂದಾಗ ಖುಷಿಯಾಗಿದ್ದೆ. ಆಕೆಯಿಂದ ಬಂದ ಈ ಪತ್ರ 15-16ನೆಯದ್ದೋ ಇರಬೇಕು. ಇಲ್ಲಿಯವರೆಗೂ ತನ್ನ ಪತ್ರಗಳಲ್ಲಿ ಉಭಯಕಿಶಲೋಪರಿ ಮಾತುಗಳೊಂದಿಗೆ ಬರೆಯುತ್ತಿದ್ದ ದಿವ್ಯಾಳಿಗೆ ಹೊಸದೇನನ್ನಾದರೂ ಬರೆಯಬೇಕೆಂಬ ತುಡಿತವಿತ್ತು. ಹೊಸದಾಗಿ ಏನಾದರೂ ಕಂಡರೆ ಅದರ ಬಗ್ಗೆ ಹುಡುಕಾಟ ನಡೆಸುವ ಹುಚ್ಚು ಕುತೂಹಲವಿತ್ತು.
                  ನನಗೆ ಆಕಸ್ಮಿಕವಾಗಿ ಪರಿಚಯವಾಗಿದ್ದ ಆಕೆಯ ಬರವಣಿಗೆ ದಿನದಿಂದ ದಿನಕ್ಕೆ ಮಾಗುತ್ತಿದ್ದುದನ್ನು ನಾನು ಗಮನಿಸಿ ಖುಷಿಪಟ್ಟಿದ್ದೆ. ಒಂದು ಸಾರಿ ಬರವಣಿಗೆಯೆಂಬ ಹುಚ್ಚಿಗೆ ಯಾರಾದರೂ ಒಬ್ಬಾತ ತನ್ನನ್ನು ತಾನು ತೊಡಗಿಸಿಕೊಂಡರೆ ಅದು ನೀಡಿದಷ್ಟು ಖುಷಿಯನ್ನು ಬೇರಿನ್ನೇನೂ ನೀಡಲಾರದು. ದಿವ್ಯಾಳೂ ಬರವಣಿಗೆಯ ಹುಚ್ಚಿಗೆ ಬೀಳತೊಡಗಿದ್ದಳು. ಆಕೆಯ ಪತ್ರಕ್ಕೆ ನಾನು ಉತ್ತರ ನೀಡುವುದು, ನನ್ನ ಪತ್ರಕ್ಕೆ ಆಕೆಯಿಂದ ಪ್ರತ್ಯುತ್ತರ ನಿರೀಕ್ಷೆ ಮಾಡುವುದು ನಮ್ಮ ಎಂದಿನ ಪಾಳಿಯಾಗಿತ್ತು. ಅವಳು ಬರೆದಿದ್ದ 15ನೇ ಪತ್ರಕ್ಕೆ ಉತ್ತರ ಬರೆದು ದಿವ್ಯಾಳ ಉತ್ತರಕ್ಕಾಗಿ ನಿರೀಕ್ಷೆ ಮಾಡತೊಡಗಿದೆ. ನಾನು ಪತ್ರ ಬರೆದ 21ನೇ ದಿನಕ್ಕೆ ಸರಿಯಾಗಿ ಆಕೆಯಿಂದ ಪತ್ರ ಬಂದಿತು.

ಡಿಯರ್ ವಿನು..
                 ನಿನ್ನ ಪತ್ರ ಬಹಳ ಖುಷಿ ಕೊಟ್ಟಿದ್ದನ್ನು ಮತ್ತೆ ಹೇಳಬೇಕಿಲ್ಲ. ಉಳಿದಂತೆಲ್ಲ ಖುಶಲ, ಕ್ಷೇಮ ಹಾಗೂ ಸೌಖ್ಯ. ನಾಣೊಂದು ಸಂಗತಿ ಹೇಳಬೇಕು ನಿನಗೆ. ತೀರ್ಥಹಳ್ಳಿಯ ನನ್ನ ಹಾಸ್ಟೆಲ್ ಗೊತ್ತಲ್ಲ ನಿಂಗೆ, ಕುರುವಳ್ಳಿಯಲ್ಲಿರೋದು. ಆ ಹಾಸ್ಟೆಲ್ಲಿನ ಮೂರನೇ ಮಹಡಿಯ ಕೊನೆಯ ಕೋಣೆಗೆ ನಾನು ಶಿಪ್ಟಾಗಿದ್ದೇನೆ. ಮೊದಲ ಮಹಡಿಯಲ್ಲಿದ್ದೆ. ಬಾನಿನಲ್ಲಿ ಓಡುವ ಮೋಡಗಳ ನಡುವೆ ತೇಲುವ ಚಂದಮಾಮನ ನೋಡುವ ಹುಚ್ಚು ಆಸೆಯ ಕಾರಣದಿಂದಲೇ ನಾನು ನನ್ನ ಕೋಣೆಯನ್ನು ಮೇಲ್ಮಹಡಿಗೆ ಬದಲಾವಣೆ ಮಾಡಿಸಿಕೊಂಡಿದ್ದು. ನನ್ನ ಜೊತೆಗೆ ರೂಂ ಮೇಟ್ ಆಗಿ ಸುಷ್ಮಾ ಬಂದಿದ್ದಾಳೆ. ನಿಂಗೊತ್ತಲ್ಲ ಸುಷ್ಮಾ.. ನಾನು ಕಳಿಸಿದ ಪೋಟೋದಲ್ಲಿ ಕುಳಿತವರ ಸಾಲಿನಲ್ಲಿ ನಾಲ್ಕನೆಯವಳು. ನೀನೇ ಹೇಳಿದಂತೆ ಚೆಂದದ ಹುಡುಗಿ. ಅವಳೇ ನನ್ನ ರೂಂ ಮೇಟ್.
                ನಾನು ಈ ಕೋಣೆಗೆ ಬಂದ ತಕ್ಷಣವೇ ಮೊದಲು ಮಾಡಿದ ಕೆಲಸ ಸೀದಾ ಟೆರೇಸಿಗೆ ಹೋಗಿ ನಿನ್ನ ಪತ್ರವನ್ನು ಹಿಡಿದುಕೊಂಡು ಕುಳಿತಿದ್ದು. ತಿಂಗಳ ಬೆಳಕಿತ್ತು. ಖುಷಿಯಿಂದ ಪತ್ರವನ್ನು ಓದಿದೆ. ಓದಿ ಮುಗಿಸಿ ತಲೆಯೆತ್ತಿದಾಗಲೇ ನನ್ನ ಕಣ್ಣಿಗೆ ಬಿದ್ದಿದ್ದು ಒಂದು ಹಳೆಯ ಮನೆ. ನಮ್ಮ ಹಾಸ್ಟೆಲ್ಲಿನಿಂದ ಒಂದು ಬೀದಿಯ ಆಚೆಗಿತ್ತು. ಬಯಲಿನಲ್ಲಿತ್ತು. ಕೆಳಮಹಡಿಯಲ್ಲಿದ್ದ ಕಾರಣ ನನಗೆ ಇಷ್ಟು ದಿನ ಆ ಮನೆ ಕಣ್ಣಿಗೆ ಕಾಣಿಸಿರಲಿಲ್ಲ. ಕುರುವಳ್ಳಿಯ ಕೊನೆಯಲ್ಲಿರುವ ನಮ್ಮ ಹಾಸ್ಟೆಲಿನ ಆಚೆಗೆ ಚಿಕ್ಕದೊಂದು ಬಯಲು. ಚಿಕ್ಕ ಚಿಕ್ಕ ಪೊದೆಗಳು ಬೆಳೆದಿರುವ ಕಾರಣ ಅದ್ಯಾವುದೋ ಭಯದ ಕಾರಣ ಆ ಮನೆಯ ಕಡೆಗೆ ನಾವು ಮುಖ ಮಾಡಿಯೂ ಮಲಗುತ್ತಿರಲಿಲ್ಲ. ಹಾಸ್ಟೆಲಿನಲ್ಲಿ ಉಳಿದು ಒಂದೂವರೆ ವರ್ಷವಾದರೂ ಆ ಮನೆಯ ಬಗ್ಗೆ ನಾನೂ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನನ್ನ ಕಣ್ಣಿಗೆ ಯಾಕೋ ಆ ಮನೆ ಕಾಣಿಸಿತು.
                ಆಗ್ಲೇ ಹೇಳಿದ್ನಲ್ಲಾ.. ಅದೊಂದು ಹಳೆಯ ಮನೆ ಅಂತ. ಹೌದು. ಮನೆ ಹಳೆಯದೇ. ಎರಡೋ ಮೂರೋ ದಶಕದ ಹಿಂದೆ ಕಟ್ಟಿರಬಹುದು. ಆ ದಿನಗಳಲ್ಲಿ ಸಿಗುತ್ತಿದ್ದ ಹೆಸರಾಂತ ಮರಗಳನ್ನು ಸೇರಿಸಿ ಮನೆ ಕಟ್ಟಿದ್ದರೇನೋ. ಕತ್ತಲಲ್ಲಿ , ಬೀದಿ ದೀಪದ ಬೆಳಕಿನಲ್ಲಿ ನನಗೆ ಕಂಡದ್ದಿಷ್ಟು.  ನಿಮ್ಮ ಉತ್ತರ ಕನ್ನಡದ ರೆಸಾರ್ಟುಗಳೂ ಇಷ್ಟು ಚನ್ನಾಗಿ ಇರುವುದಿಲ್ಲ. ಅಷ್ಟು ಚೆಂದವಾಗಿತ್ತು ಆ ಮನೆ. ನನಗೆ ಬಹಳ ಕುತೂಹಲವಾಯಿತು. ಅರೇ ಇಷ್ಟು ದಿನಗಳಾದರೂ ಇಂತಹದ್ದೊಂದು ಚೆಂದದ ಮನೆ ನನ್ನ ಕಣ್ಣಿಗೆ ಬಿದ್ದಿರಲಿಲ್ಲ ಯಾಕೆ ಅಂತ ಪ್ರಶ್ನೆ ಕಾಡಿತು. ತಕ್ಷಣವೇ ನಾನು ರೂಮೊಳಗೆ ಬಂದು ಸುಷ್ಮಾಳ ಬಳಿ ಆ ಮನೆಯ ಕುರಿತು ಮಾತನಾಡಿದೆ. ಆಕೆಯೂ ಮನೆಯನ್ನು ನೋಡಿ ಖುಷಿಪಟ್ಟಳು. ನಾಳೆ ಬೆಳಗಾದ ತಕ್ಷಣ ಆ ಮನೆ ಯಾರದ್ದು ವಿಚಾರಿಸಿ ಅದರದ್ದೊಂದು ಪೋಟೋ ತೆಗೆದುಕೊಂಡು ಬರೋಣ ಎಂದು ನಾವಿಬ್ಬರೂ ಮಾತನಾಡಿಕೊಂಡೆವು.
                 ಬೆಳಿಗ್ಗೆ ಎದ್ದು ವಾರ್ಡನ್ ಬಳಿ ಆ ಮನೆಯ ಕುರಿತು ವಿಚಾರಿಸಿದೆ. ವಾರ್ಡನ್ ಗೆ ಮೊದಲಿಗೆ ನಾವು ಯಾವ ಮನೆಯ ಕುರಿತು ಹೇಳುತ್ತಿದ್ದೇವೆ ಎನ್ನುವುದು ಅರ್ಥವಾಗಲಿಲ್ಲ. ಕೊನೆಗೆ ನಾವು ಬಿಡಿಸಿ ಹೇಳಿದಾಗ ಅರ್ಥವಾಯಿತು. ನಮ್ಮ ಮಾತನ್ನು ಕೇಳಿದವರೇ ಸಿಟ್ಟಿನಿಂದ ಬೈಗುಳವನ್ನು ಶುರುಮಾಡಿಕೊಂಡರು. `ಅದೊಂದು ಭೂತಬಂಗಲೆ. ಆ ಮನೆಯ ಬಗ್ಗೆ ನಿಮಗೆ ಯಾಕೆ ಅಷ್ಟು ಕುತೂಹಲ? ಅಲ್ಲಿ ನಾಲ್ಕು ಕೊಲೆಯಾಗಿದೆ. ಅಮಾವಾಸ್ಯೆ ಸಮಯದಲ್ಲಿ ಭೂತಗಳು ಓಡಾಡುತ್ತವಂತೆ.. ನೀವು ಅತ್ತ ಹೋಗಿಬಿಟ್ಟೀರಿ ಹುಷಾರು..' ಎಂದು ಬೈಗುಳದ ಸರಮಾಲೆಯನ್ನು ಸುರಿಸಿದರು. ನನಗೆ ಹಾಗೂ ಸುಷ್ಮಾಳಿಗೆ ಭಯವಾಯಿತು ಜೊತೆಯಲ್ಲಿಯೇ ಆ ಮನೆಯ ಕಡೆಗೆ ಕುತೂಹಲವೂ ಹುಟ್ಟಿತು. `ಭೂತ ಬಂಗಲೆ..?' ಅರೇ..? ಈ ಜಮಾನಾದಲ್ಲೂ ಭೂತ-ಪ್ರೇತ-ಮಾಟ-ಮಂತ್ರಗಳನ್ನೆಲ್ಲ ನಂಬುತ್ತಾರಾ? ಯಾರಾದರೂ ಕಳ್ಳರು ಅಥವಾ ದೋ ನಂಬರ್ ಜನರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಭೂತಬಂಗಲೆಯ ಕಥೆ ಕಟ್ಟಿದ್ದಾರಾ..? ಹೀಗೆ ಹತ್ತೆಂಟು ಆಲೋಚನೆಗಳು ಹುಟ್ಟಿದವು. ನನಗಂತೂ ದಿನದಿಂದ ದಿನಕ್ಕೆ ಆ ಮನೆಯ ಕಡೆಗೆ ಕುತೂಹಲ ಹೆಚ್ಚಾಗತೊಡಗಿತು. ಆದರೆ ಆ ಮನೆಯ ಹತ್ತಿರ ಹೋಗಲು ಭಯವೂ..
               ಅದಕ್ಕೆ ನಿಂಗೆ ಈ ವಿಷಯ ಬರೀತಾ ಇರೋದು..? ನಾನು ಏನ್ಮಾಡ್ಲಿ ಹೇಳು. ಆ ಮನೆ ನನಗೆ ಬಹಳ ಕಾಡುತ್ತಿದೆ. ನಾನು ಹೋಗಿ ಬರಲಾ? ಭೂತಬಂಗಲೆಯನ್ನು ಒಳಹೊಕ್ಕು ಅಲ್ಲಿರುವ ಭೂತದ ಕಥೆಯೇನು ಎಂದು ನೋಡಲಾ..? ನನಗೆ ಯಾಕೋ ಆ ಮನೆಗೆ ಹೋಗಿ ಬರಲೇ ಬೇಕು ಎನ್ನಿಸುತ್ತಿದೆ. ಏನ್ಮಾಡ್ಲಿ ಹೇಳೋ ದೋಸ್ತಾ.. ನೀನೆ ಸಲಹೆಯನ್ನು ನೀಡಬೇಕು.. ನನಗೆ ಮನಸ್ಸಿಗೆ ತೋಚುತ್ತಿಲ್ಲ. ಏನ್ಮಾಡಲಿ ಹೇಳು..?
ಇಂತಿ
ದಿವ್ಯಾ..
                 ಹೀಗೆಂದು ಬರೆದಿದ್ದ ಆಕೆಯ ಪತ್ರಕ್ಕೆ ನಾನು ಅದ್ಯಾವ ರೀತಿಯ ಉತ್ತರ ನೀಡಲಿ ಎನ್ನುವ ಆಲೋಚನೆ ನನ್ನ ಮನಸ್ಸಿನಲ್ಲಿ ಮೂಡಿತು. ಅದ್ಯಾವುದೋ ಮನೆಯಂತೆ, ಭೂತಬಂಗಲೆ ಎಂಬ ಮಾತುಗಳಂತೆ, ಈಕೆ ಹೋಗಿ ನೋಡುವುದಂತೆ... ಅದಕ್ಕೆ ನನ್ನ ಸಲಹೆ. ಏನಂತ ಸಲಹೆಯನ್ನು ನೀಡಲಿ ನಾನು? ನಾನು ಸಲಹೆ ನೀಡಿದಂತೆ ಆಕೆ ಮಾಡುತ್ತಾಳಾ? ಎನ್ನುವ ಭಾವನೆ ಕಾಡಿತು. ನಾನು ಅವಳ ಬಳಿ ಅಲ್ಲಿಗೆ ಹೋಗಬೇಡ ಎಂದರೆ ಹೋಗುವುದಿಲ್ಲವಾ? ಹೋಗು ಎಂದರೆ ಹುಡುಗಿ ಆಕೆ. ಏನು ಮಾಡಿಯಾಳು ಎನ್ನುವ ಭಾವನೆ ಕಾಡಿತು. ನಾನು ಬೇಡ ಎಂದರೂ ಆಕೆ ಹೋಗುವುದನ್ನು ನಿಲ್ಲಿಸುವುದಿಲ್ಲ. ಭಂಡ ಧೈರ್ಯದ ಹುಡುಗಿ. ಹುಚ್ಚು ಕುತೂಹಲ ಬೇರೆ ಇದೆ. ವಯಸ್ಸಿನ ಹುಮ್ಮಸ್ಸಿನಲ್ಲಿ ಏನಾದರೂ ಹುಚ್ಚು ಕೆಲಸಕ್ಕೆ ಮುಂದಾಗಬಿಟ್ಟರೆ ಎನ್ನುವ ಭಯವೂ ಕಾಡಿತು. ಜೊತೆಗೆ ಯಾರನ್ನಾದರೂ ಕರೆದುಕೊಂಡು ಹೋದರೆ ಒಳ್ಳೆಯದು ಎಂದು ಹೇಳೋಣ ಎನ್ನಿಸಿತಾದರೂ ಯಾರನ್ನು ಸಲಹೆ ಮಾಡೋದು ಎಂದು ತೋಚಲಿಲ್ಲ. ಯಾಕೋ ದಿವ್ಯಾ ಯಾವುದೋ ಗೊಡವೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾಳೆನೋ ಅನ್ನಿಸಿತು. ಸುಮ್ಮನೆ ಇದ್ದ ಹುಡುಗಿ ನನ್ನ ಬರವಣಿಗೆಯಿಂದ ಸ್ಪೂರ್ತಿ ಪಡೆದು ಇದೆಂತ ಹುಚ್ಚಾಟಕ್ಕೆ ಯತ್ನಿಸುತ್ತಿದ್ದಾಳೆ ಎಂದೂ ಅನ್ನಿಸಿ ಮನಸ್ಸಿನಲ್ಲಿ ಭಯವಾಯಿತು.
                    ನಾನು ಅವಳಿಗೆ ಪತ್ರ ಬರೆದು ಇಂತಹ ಹುಚ್ಚಾಟ ಮಾಡಬೇಡ ಎಂದು ಹೇಳಬೇಕೆಂದು ಪೆನ್ನು ಕೈಗೆತ್ತಿಕೊಂಡೆ. ಆದರೆ ಪತ್ರದಲ್ಲಿ ಮಾತ್ರ ಹಾಗೆ ಬರೆಯಲಿಲ್ಲ. ಬದಲಾಗಿ `ಆ ಮನೆಗೆ ಹೋಗಿ ಬಾ.. ಯಾರಾದರೂ ಜೊತೆಗಿರಲಿ. ಆದರೆ ಹುಷಾರು..' ಎಂದು ಬರೆದುಬಿಟ್ಟೆ. ಯಾಕೆ ಹಾಗೆ ಬರೆದೆನೋ.. ನನಗೆ ತೋಚಲಿಲ್ಲ. ಪತ್ರ ಪೋಸ್ಟ್ ಮಾಡಿ ಬಂದುಬಿಟ್ಟೆ. ಆದರೆ ಮುಂದೇನಾಯಿತೆನ್ನುವ ದುಗುಡ ಕಾಡದೇ ಇರಲಿಲ್ಲ. ಆಕೆಯ ಮೊಬೈಲ್ ನಂಬರ್ ನನ್ನ ಬಳಿಯಿತ್ತು. ಆದರೆ  ನಾವು ಯಾವುದೇ ಕಾರಣಕ್ಕೂ ಪೋನ್ ಮಾಡಿಕೊಳ್ಳಬಾರದು. ಕೇವಲ ಪತ್ರ ಬರೆದುಕೊಳ್ಳಬೇಕು ಎನ್ನುವ ಕಟ್ಟಾಜ್ಞೆ ಹಾಗೂ ಕರಾರು ನಮ್ಮ ನಡುವೆ ಇದ್ದ ಕಾರಣ ನಾನು ಅವಳ ಪತ್ರಕ್ಕೆ ಕಾಯುತ್ತ ಕುಳಿತೆ. 20 ದಿನಗಳು ಕಳೆದವು. ಆಕೆಯ ಪತ್ರ ಬರಲಿಲ್ಲ. 22, 23, 24, 25 ದಿನಗಳಾದವು.. ಪತ್ರ ಬರಲಿಲ್ಲ. 26...28 ದಿನಗಳೂ ಸಂದವು. ನನಗೆ ನಿಧಾನವಾಗಿ ಸಹನೆಯ ಕಟ್ಟೆ ಒಡೆಯತೊಡಗಿತು. ಏನಾಯಿತು ಈಕೆಗೆ? ಯಾಕೆ ಪತ್ರ ಬಂದಿಲ್ಲ ಎಂದು ಕಾಡಿತು. ಮನಸ್ಸು ತಡೆಯದೇ ಆಕೆಗೆ ಪೋನ್ ಮಾಡುವ ನಿರ್ಧಾರಕ್ಕೆ ಬಂದೆ. ನಾವೇ ಹಾಕಿಕೊಂಡ ಕರಾರನ್ನು ಮುರಿಯುವ ನಿರ್ಧಾರವನ್ನು ಮಾಡಿ ಆಕೆಗೆ ಪೋನಾಯಿಸಿದೆ. ಮೊಬೈಲ್ ರಿಂಗಾಯಿತು. ಎತ್ತಲಿಲ್ಲ. ಮತ್ತೆ ಮಾಡಿದೆ. ಎತ್ತಲಿಲ್ಲ. ಮತ್ತೆ ಮತ್ತೆ ಮಾಡಿದೆ ನೋ ರೆಸ್ಪಾನ್ಸ್.. ನನಗೆ ದಿಘಿಲು ಮತ್ತಷ್ಟು ಹೆಚ್ಚಾಯಿತು. ಒಂದು ಒಪ್ಪತ್ತಿನಲ್ಲಿ ಕನಿಷ್ಟ 15-20 ಸಾರಿಯಾದರೂ ಪೋನ್ ಮಾಡಿದೆ. `ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್..' ಎನ್ನುವ ಮಾರುತ್ತರ ನನ್ನ ಕಿವಿಯಲ್ಲಿ ಗುಂಯ್ ಗುಟ್ಟಿ ಮತ್ತಷ್ಟು ಭಯವಾಯಿತು. ಎಂತಾ ಸಲಹೆ ಕೊಟ್ಟೆನಪ್ಪಾ ದೇವರೆ.. ನಾ ಕೊಟ್ಟ ಸಲಹೆಯಿಂದ ಈಕೆ ಇನ್ನೆಂತ ಮಾಡಿಕೊಂಡು ಬಿಟ್ಟಳೋ.. ಎಂಬ ಭಯದ ನೆರಳಿನಲ್ಲಿ ಕಾಲ ತಳ್ಳುವ ಯತ್ನ ಮಾಡಿದೆ.
                 ಒಂದು ತಿಂಗಳಾದ ನಂತರ ನಾಲ್ಕನೇ ದಿನಕ್ಕೆ ದಿವ್ಯಾಳಿಂದ ಪತ್ರ ಬಂದಿತು. ನನ್ನ ಮನಸು ನಿರಾಳ. ಯಥಾಪ್ರಕಾರ ಪೋಸ್ಟ್ ಮಾಷ್ಟರ್ ಶ್ರೀಪಾದಣ್ಣನ ಬೈಗುಳದ ಜೊತೆಗೆ ಪತ್ರವನ್ನು ತೆಗೆದುಕೊಂಡು ಲಗುಬಗೆಯಿಂದ ಕವರ್ ಒಡೆದು ಓದಿದೆ.

ಡಿಯರ್ ವಿನು
                  ಈ ಪತ್ರ ನಿನ್ನನ್ನು ತಲುಪುವಷ್ಟರಲ್ಲಿ ತಿಂಗಳ ಮೇಲೆ ಕೆಲ ದಿನಗಳು ಕಳೆದಿರುತ್ತವೆ ಎಂಬುದು ನನಗೆ ಗೊತ್ತು. ಹಲವು ಕಾರಣಗಳಿಂದ ಪತ್ರ ಬರೆಯಲಾಗಲಿಲ್ಲ. ಅಂದಹಾಗೆ ನೀನು ಆ ದಿನ ಪೋನು ಮಾಡಿದ್ದೆ. ಆದರೆ ನಾನು ಬೇಕಂತಲೇ ಉತ್ತರಿಸಲಿಲ್ಲ. ನಮ್ಮ ಕರಾರಿನನ್ವಯ ನಾನು ಪೋನಿಗೆ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪತ್ರವನ್ನೇ ಬರೆದುಕೊಳ್ಳೋಣ, ಪತ್ರದ ಮೂಲಕವೇ ಉತ್ತರಿಸೋಣ ಎಂದು ಸುಮ್ಮನುಳಿದಿದ್ದೆ.
                  ಆ ಮನೆಯ ಕುರಿತಂತೆ ಹೇಳುವುದು ಸಾಕಷ್ಟಿದೆ. ನೀನು ಹೇಳಿದಂತೆ ನಾನು ಆ ಮನೆಯ ಕುರಿತು ಮಾಹಿತಿ ಕಲೆ ಹಾಕಲು ಯತ್ನಿಸಿದ್ದೇನೆ. ಒಂದಿನ ನಾನು ಹಾಗೂ ಸುಷ್ಮಾ ಸೇರಿಕೊಂಡು ಆ ಮನೆಯ ಬಳಿ ಹೋಗಿದ್ದೆವು. ಮುಂಜಾನೆ ಹತ್ತುಗಂಟೆಯ ಸುಮಾರಿಗೆ ಹಾಸ್ಟೆಲಿನಿಂದ ಕಾಲೇಜಿಗೆ ಹೋಗುವ ನೆಪ ಮಾಡಿಕೊಂಡು ವಾರ್ಡನ್ ಸೇರಿದಂತೆ ಹಲವರ ಕಣ್ಣು ತಪ್ಪಿಸಿ ನಾವು ಮನೆಯತ್ತ ತೆರಳಿದ್ದೆವು. ಏನೋ ಹುಡುಕುವ ಚಪಲ ನನ್ನಲ್ಲಿತ್ತು. ಅಳುಕಿನ ಜೊತೆಗೆ ನನ್ನನ್ನು ಹಿಂಬಾಲಿಸಿದ್ದ ಸುಷ್ಮಾ `ಏ ದಿವ್ಯಾ.. ಯಾಕೋ ಒಂಥರಾ ಅನ್ನಿಸುತ್ತಿದೆ ಕಣೆ. ವಾಪಾಸ್ ಹೋಗಿ ಬಿಡೋಣ್ವಾ..? ನಂಗೆ ಇಂತ ಹುಚ್ಚುತನಗಳು ಯಾಕೋ ತಳಮಳವನ್ನು ಹುಟ್ಟುಹಾಕುತ್ತಿವೆ..' ಎಂದು ಹೇಳಿದ್ದಳು. ನಾನವಳ ಬಳಿ `ಸುಮ್ನಿರೆ.. ಅಂಥದ್ದೇನೂ ಆಗೋದಿಲ್ಲ. ಭೂತಗೀತ ಇದ್ರೆ ಹಗಲೊತ್ತಲ್ಲಿ ಬರೋದಿಲ್ಲ ಅಂತ ಯಂಡಮೂರಿ ಕಾದಂಬರಿಗಳಲ್ಲಿ ಓದಿಲ್ವಾ ನೀನು..' ಎಂದು ಸುಮ್ಮನಿರಿಸಿದೆ. ಆಕೆ ತಲೆಯಾಡಿಸಿ ನನ್ನ ಒತ್ತಡ, ಒತ್ತಾಯದಿಂದ ಸುಮ್ಮನೆ ಬಂದಳು.
                 ಭಾರಿ ಮನೆ ಅದು. ದೈತ್ಯವಾದುದು. ದೊಡ್ಡದೊಂದು ಕಂಪೌಂಡ್ ಇತ್ತು. ಮನೆ ಮಾತ್ರ ನಮ್ಮ ಮಲೆನಾಡಿನ ಶೈಲಿಯಲ್ಲಿರಲಿಲ್ಲ. ಸುಮ್ಮನೆ ನೋಡಿದರೆ ವಿಚಿತ್ರವಾಗಿತ್ತು. ಆದರೆ ಮನೆ ಸೆಳೆಯುತ್ತಿತ್ತು. ಕಂಪೌಂಡು ದೈತ್ಯವಾಗಿತ್ತು, ಗೇಟಿಗೆ ಬೀಗ ಹಾಕಲಾಗಿತ್ತು. ಸುತ್ತಲೂ ಮನೆಗಳಿರಲಿಲ್ಲ. ಕಂಪೌಂಡ್ ಹಾರಿ ಒಳ ಹೋಗೋಣ ಎಂದು ನೋಡಿದೆವು. ಆಗಲಿಲ್ಲ. ಆದಿನ ಹಾಗೆಯೇ ವಾಪಾಸು ಬಂದೆ. ಈ ಸುದ್ದಿಯನ್ನು ನಾನು-ಸುಷ್ಮಾ ಯಾರಲ್ಲೂ ಹೇಳಲು ಹೋಗಲಿಲ್ಲ. ಸುಮ್ಮನೆ ಇದ್ದುಬಿಟ್ಟೆವು.
                 ಇಷ್ಟಾದ ಮೇಲೆಯೂ ಮನೆಯ ಕಡೆಗಿನ ನನ್ನ ಕುತೂಹಲ ತಣಿಯಲಿಲ್ಲ. ಸಾಧ್ಯವಾದ ಕಡೆಯಲ್ಲಿ ಮನೆಯ ಕಡೆಗೆ ಮಾಹಿತಿ ಕಲೆ ಹಾಕುವುದನ್ನು ಮಾಡುತ್ತಲೇ ಇದ್ದೆ. ಹಾಸ್ಟೆಲಿಗೆ ಬಂದಾಗಲೆಲ್ಲ ಆ ಮನೆಯ ಕಡೆಗೆ ಒಂದು ಕಣ್ಣಿಟ್ಟಿದ್ದೆ. ಭೂತದ ಹೆಸರಿನಲ್ಲಿ ಯಾರಾದರೂ ಹೆದರಿಕೆ ಹುಟ್ಟಿಸಿ ಅನೈತಿಕ ಚಟುವಟಿಕೆಗಳಿಗೆ ಆ ಮನೆಯನ್ನು ಬಳಕೆ ಮಾಡಿಕೊಳ್ಳುತ್ತಿರಬಹುದಾ? ಅದನ್ನು ನಾನು ತಡೆಯಬಹುದಾ ಎಂದೆಲ್ಲ ಆಲೋಚಿಸಿದ್ದೆ. ಕೊನೆಗೆ ಅದ್ಯಾರೋ ಒಬ್ಬರು ನನಗೆ ಸಲೀಂ ಚಾಚಾನ ಹೆಸರನ್ನು ಹೇಳಿದರು. ಅವನನ್ನು ಹುಡುಕಿ ಹೊರಟೆ.
                  ಸಲೀಂ ಚಾಚಾ ಕುರುವಳ್ಳಿಯವನೇ. ನಾಲ್ವರು ಹೆಂಡಿರು ಹಾಗೂ ಹನ್ನೊಂದು ಮಕ್ಕಳನ್ನು ಹೊಂದಿದ್ದ ಸಲೀಂ ಚಾಚಾ ಹೊಟ್ಟೆಪಾಡಿಗಾಗಿ ಚಾಯ್ ದುಕಾನ್ ಇಟ್ಟುಕೊಂಡಿದ್ದಾನೆ. ಹತ್ತಿತ ಹತ್ತಿರ ಎಪ್ಪತ್ತು ವರ್ಷಗಳಾಗಿರಬೇಕು ಆತನಿಗೆ. ತಲೆಗೊಂದು ಟೋಪಿ, ಉದ್ದನೆಯ ಬಿಳಿಯ ಗಡ್ಡ. ಮೊಲದ ಬಿಳುಪಿನ ಗಡ್ಡ ಸ್ವೆಟರ್ ನಷ್ಟು ಮೆತ್ತಗೆ ಅಂದರೆ ಅತಿಶಯೋಕ್ತಿಯಾಗಲಾರು. ಬಿಳಿ ಜುಬ್ಬಾ, ಚೌಕಳಿ ಚೌಕಳಿ ಲುಂಗಿ. ನಾನು ಹೋಗಿ `ಚಾಚಾ..' ಎಂದೆ. `ಕ್ಯಾ ಬೇಟಿ..?' ಅಂದ. ನಾನು ಅದೂ ಇದೂ ಮಾತನಾಡಿ ಆತನ ವಿಶ್ವಾಸ ಗಳಿಸಿಕೊಳ್ಳಲು ಯತ್ನಿಸಿದೆ. ಕೊನೆಗೊಮ್ಮೆ ನಿಧಾನವಾಗಿ ಆ ಮನೆಯ ಬಗ್ಗೆ ಕೇಳಿದೆ. ಆ ಮನೆಯ ಬಗ್ಗೆ ಕೇಳಿದ ತಕ್ಷಣ ಸಲೀಂ ಚಾಚಾ ಮೊದಲಿಗೆ ಸಿಟ್ಟು ಮಾಡಿಕೊಂಡರು. ಕಣ್ಣೆಲ್ಲ ಕೆಂಪಗಾಗಿ ನನ್ನನ್ನು ಬಯ್ಯಲು ತೊಡಗಿದರು. ಆದರೆ ನಾನು ಪಟ್ಟು ಬಿಡದೇ ಮತ್ತೆ ಮತ್ತೆ ಕೇಳಿದೆ. ನನ್ನ ಜೊತೆಗಿದ್ದ ಸುಷ್ಮಾಳೂ ಚಾಚಾನ ಬಳಿ ಗೋಗರೆದಾಗ ಸಲೀಂ ಚಾಚಾ ಆ ಮನೆಯ ಕುರಿತು ಮಾಹಿತಿಗಳನ್ನು ಬಿಚ್ಚಿಟ್ಟರು.
                 `ಏನಂತ ಹೇಳೋದು ಬೇಟಿ. ಆ ಮನೆಯ ಬಗ್ಗೆ ಹೇಳಲಿಕ್ಕೆ ಹೋದರೆ ಬೇಜಾನ್ ಆಗ್ತದೆ. ಈ ಮನೆ ಕಟ್ಟಿದ್ದು ಸುಮಾರು ಪಚ್ಚೀಸ್ ವರ್ಷಗಳ ಹಿಂದೆ. ಈ ಮನೆ ಕಟ್ಟಬೇಕು ಅಂತ ಅಂದುಕೊಂಡಾಗ ಈ ಕುರುವಳ್ಳಿ ಪ್ರದೇಶವೆಲ್ಲ ಕಾಡು ಕಾಡು. ಹುಲಿಗಳು ಓಡಾಡೋ ಜಾಗ. ಅದ್ಯಾರೋ ದಂಪತಿಗಳು ಬಂದು ಜಾಗ ಕೊಂಡುಕೊಂಡರು. ಮನೆ ನಿರ್ಮಾಣ ಮಾಡುತ್ತೇವೆ ಎಂದರು. ಅವರು ಬಂದ ಹೊಸತರಲ್ಲಿ ನಮಗೂ ಕುತೂಹಲವಿತ್ತು. ನಾವು ಮಾತನಾಡಿಸಿದಾಗ ಇಸ್ರೇಲ್ ದೇಶದವರು ಎಂದು ಹೇಳಿದರು. ಯೆಹೂದಿಗಳಂತೆ. ಯಾರೋ ಇದೇ ದೇಶದವರು ಎಂದುಕೊಂಡಿದ್ದ ನಮಗೆ ಯೆಹೂದಿಗಳು ಎಂದಾಗ ಮೊದಲು ಕುತೂಹಲ ಉಂಟಾಯಿತು. ನಂತರ ಇಸ್ರೇಲಿಯೂ-ಪ್ಯಾಲಿಸ್ತೇನಿಗೂ ಯುದ್ಧ ನಡೆಯುತ್ತಿದ್ದುದು ನೆನಪಾಯಿತು. ಸಿಟ್ಟು ಬಂದಿತು. ಆದರೆ ನಾನು ಅಥವಾ ನಮ್ಮ ಕುಟುಂಬ ಅವರ ವಿಷಯಕ್ಕೆ ಹೋಗಲಿಲ್ಲ. ಒಂದು ವರ್ಷದ ಅವಧಿಯಲ್ಲಿ ಆ ದಂಪತಿಗಳ ಮನೆ ಎದ್ದು ನಿಂತಿತು. ಒಂದು ಒಳ್ಳೆಯ ದಿನ ಅವರು ಬಂದು ಮನೆಯೊಳಗೆ ಉಳಿದುಕೊಂಡರು.
                   ಮನೆಯೊಳಗೆ ಉಳಿದುಕೊಂಡು ಆರೇ ತಿಂಗಳಲ್ಲಿ ಅವರಿಗೆ ಅವಳಿ-ಜವಳಿ ಹೆಣ್ಣು ಮಕ್ಕಳು ಹುಟ್ಟಿದರು. ಆ ದಂಪತಿಗಳ ಹೆಸರು ನನಗೆ ಸರಿಯಾಗಿ ನೆನಪಿಲ್ಲ. ಆದರೆ ಆ ಇಬ್ಬರು ಪುಟಾಣಿ ಮಕ್ಕಳ ಹೆಸರು ನನಗಿನ್ನೂ ನೆನಪಿನಲ್ಲಿದೆ. `ಶಿಫಾನ-ಶಫಾನ'. ಅಷ್ಟಾದ ನಂತರ ಒಂದೋ-ಎರಡೋ ವರ್ಷ ಆ ಕುಟುಂಬ ಆನಂದದಿಂದ ಇತ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಆ ದಂಪತಿಗಳು ಕಾಣೆಯಾದರು. ತಂದೆ-ತಾಯಿ-ಮಕ್ಕಳು ರಾತ್ರಿ ಬೆಳಗಾಗುವುದರೊಳಗೆ ನಾಪತ್ತೆಯಾದರು. ಎಲ್ಲಿಗೆ ಹೋದರು ಎನ್ನುವುದು ಇದುವರೆಗೂ ಗೊತ್ತಿಲ್ಲ. ಊರು ಬಿಟ್ಟರು ಎಂದು ಹೇಳುತ್ತಾರೆ ಹಲವರು. ಕೊಲೆಯಾದರು ಎಂದು ಮತ್ತೆ ಹಲವರು ಹೇಳುತ್ತಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವವರೂ ಇದ್ದಾರೆ. ಈ ಎಲ್ಲ ಅಂತೆ ಕಂತೆಗಳ ಜೊತೆಗೆ ತೀರ್ಥಹಳ್ಳಿ ನ್ಯಾಯಾಲಯ ಈ ಮನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಬೀಗ ಹಾಕಿಟ್ಟಿತು. ನಂತರದ ದಿನಗಳಲ್ಲಿ ಈ ಮನೆಯಲ್ಲಿ ಭೂತವಿದೆ, ಹಾಗೆ-ಹೀಗೆ ಎಂದೆಲ್ಲ ಮಾತುಗಳು ಬೆಳೆದುಬಿಟ್ಟವು. ಸಧ್ಯ ಆ ಮನೆಯ ಬಳಿ ಯಾರೂ ಹೋಗುತ್ತಿಲ್ಲ ಎಂದು ಸಲೀಂ ಚಾಚಾ ಮಾತನ್ನು ಮುಗಿಸಿದ. ಜೊತೆಯಲ್ಲಿಯೇ ಹದಿನೈದು ದಿನಕ್ಕೊಮ್ಮೆ ಕೋರ್ಟಿನಿಂದ ಬೇಲಿಪ ಬಂದು ಆ ಮನೆಯ ಬಾಗಿಲನ್ನು ತೆಗೆದು ಮನೆ ಸ್ವಚ್ಛಗೊಳಿಸಿ ಹೋಗುತ್ತಿರುತ್ತಾನೆ ನೋಡು.. ಎಂದೂ ಹೇಳಿದ.
                   ಮನೆಯ ಕಡೆಗಿದ್ದ ಕುತೂಹಲ ನನಗೆ ಇಮ್ಮಡಿಸಿತು. ಚಾಚಾ ಯಾಕೋ ಆ ಮನೆಯೊಳಗೆ ನಾನು ಹೋಗಿ ಬರಬೇಕು. ಮನೆಯೊಳಗೆ ಏನಿದೆ ನೋಡಬೇಕಾಗಿತ್ತು. ನನ್ನನ್ನು ಕರೆದುಕೊಂಡು ಹೋಗಿ ಬರ್ತೀಯಾ ಪ್ಲೀಸ್.. ಎಂದು ಚಾಚಾನಲ್ಲಿ ಕೇಳಿಕೊಂಡೆ. ಸಲೀಂ ಚಾಚಾ ಖಡಾ ಖಂಡಿತವಾಗಿ ತಿರಸ್ಕರಿಸಿದ. ಸತತ ನಾಲ್ಕು ದಿನ ನಾನು ಹಾಗೂ ಸುಷ್ಮಾ ಸಲೀಂ ಚಾಚಾನ ಮನೆಯತ್ತ ಎಡತಾಕಿದೆವು. ಆತ ನಮ್ಮ ಬೇಡಿಕೆಯನ್ನು ತಿರಸ್ಕರಿಸುತ್ತಲೇ ಇದ್ದ. ಕೊನೆಗೊಂದು ದಿನ ನಮ್ಮ ಕಾಟ ತಾಳಲಾರದೇ ಆ ಮನೆಯತ್ತ ಕರೆದೊಯ್ಯಲು ಒಪ್ಪಿದ.
                   ಅದೊಂದು ದಿನ ಕೋರ್ಟಿನಿಂದ ಬೇಲಿಪ ಬಂದ ಸಮಯವನ್ನು ನೋಡಿ ನಾನು ಹಾಗೂ ಸುಷ್ಮಾ ಸಲೀಂ ಚಾಚಾನ ಜೊತೆಗೆ ಆ ಇಸ್ರೇಲಿ ದಂಪತಿಗಳ ಮನೆಯತ್ತ ಹೊರಟೆವು. ಬೇಲಿಪನಿಗೂ ಸಲೀಂ ಚಾಚಾನಿಗೂ ಹಳೆಯ ಪರಿಚಯವಿದ್ದ ಕಾರಣ ನಮ್ಮನ್ನು ಮನೆಯೊಳಗೆ ಬಿಟ್ಟ. ಕಂಪೌಂಡ್ ದಾಟಿ ಒಳ ಬಂದಂತೆಲ್ಲ ಅದೇನೋ ಅವ್ಯಕ್ತ ಭಾವನೆ ನಮ್ಮ ಮನಸ್ಸಿನೊಳಗೆ ಮೂಡಲಾರಂಭಿಸಿತು. ಅದ್ಯಾವುದೋ ಲೋಕಕ್ಕೆ ಕಾಲಿಟ್ಟಂತೆ. ತಲೆಯೆಲ್ಲ ಝುಂ ಎನ್ನುತ್ತಿತ್ತು. ಸಲೀಂ ಚಾಚಾ ಮುಂದಕ್ಕೆ ಹೋದಂತೆಲ್ಲ ನಾನು ಸುಷ್ಮಾ ಸುಮ್ಮನೆ, ಬೆದರಿದ ಕುನ್ನಿಮರಿಗಳಂತೆ ಹಿಂಬಾಲಿಸಿದೆವು. ಪಾಪದ ಅಜ್ಜ ನಮ್ಮನ್ನು ಒಳಗೆ ಕರೆದೊಯ್ದ ತಕ್ಷಣ ಬೇಟಿ.. ನೋಡು ಈ ಮನೆ. ಇದನ್ನು ನೋಡಿ ನೀನೇನು ಮಾಡ್ತೀಯಾ ಹೇಳು..? ಎಂದ.
                 ನಾನು ಮನೆಯ ಒಳ ಆವರಣವನ್ನೆಲ್ಲ ಸೂಕ್ಷ್ಮವಾಗಿ ನೋಡತೊಡಗಿದೆ. ಮನೆಯ ಹೊರ ಆವರಣದಲ್ಲಿ ಅಲ್ಪ ಸ್ವಲ್ಪ ಭಾರತೀಯ ಶೈಲಿಯಿದ್ದರೂ ಒಳಭಾಗ ಮಾತ್ರ ಪಕ್ಕಾ ಇಸ್ರೇಲಿ ಶೈಲಿಯಲ್ಲಿತ್ತು.  ದೊಡ್ಡ ಹಜಾರ, ಬಿಳಿ ಬಣ್ಣದ ಗೋಡೆ, ಮೂರೋ ನಾಲ್ಕೋ ಕೋಣೆಗಳು, ಗೋಡೆಯ ಮೇಲೆ ತರಹೇವಾರಿ ಪೋಟೋಗಳು ತೂಗು ಹಾಕಲ್ಪಟ್ಟಿದ್ದವು. ಅತ್ತ ಸಂಪೂರ್ಣ ಪಾಶ್ಚಾತ್ಯ ಶೈಲಿಯೂ ಅಲ್ಲ, ಇತ್ತ ಭಾರತೀಯತೆಯೂ ಅಲ್ಲ. ಮನೆಯ ಅಲ್ಲಲ್ಲಿ ಪುಟ್ಟ `ಶಿಫಾನ-ಶಫನ' ಆಟವಾಡಿದ ಕುರುಹುಗಳು, ಅವರ ಆಟದ ಭರಕ್ಕೆ ಗಾಯಗೊಂಡಿದ್ದ ಖುರ್ಚಿಗಳು, ಟೇಬಲ್ಲಿಗಳು, ಗೋಡೆಯ ಮೇಲಿನ ಗೀರುಗಳು ಒಂದಕ್ಕೊಂದು ವಿಶಿಷ್ಟವೂ ವಿಚಿತ್ರವೂ ಆಗಿದ್ದವು. ನಾನು ಮನೆಯೊಳಗೆ ಸಂಪೂರ್ಣ ಓಡಾಡಿದೆ. ಕೋರ್ಟು ಆ ಮನೆಯನ್ನು ಹೆಸರಿಗಷ್ಟೇ ತನ್ನ ವಶಕ್ಕೆ ಪಡೆದುಕೊಂಡಿತ್ತು. ಅದನ್ನು ನೋಡಿಕೊಳ್ಳಲು ನೇಮಕವಾಗಿದ್ದ ವ್ಯಕ್ತಿ ಕಾಟಾಚಾರಕ್ಕೆ ಮನೆಗೆ ಬಂದು ಬಾಗಿಲು ತೆಗೆದು ನೆಲಗುಡಿಸಿ, ಒರೆಸಿ ಹೋಗುತ್ತಿದ್ದ. ಕಾಟಾಚಾರದ ಕೆಲಸವನ್ನು ಆತ ಮಾಡುತ್ತಿದ್ದ ಎನ್ನುವುದಕ್ಕೆ ಬಿಂಜಲು ಹಿಡಿದ ಗೋಡೆಗಳು, ಧೂಳಾದ ಟಿಪಾಯಿ, ಕಸಯುಕ್ತವಾಗಿದ್ದ ಅಡುಗೆಮನೆಗಳು ಸಾಕ್ಷಿಯಾಗಿದ್ದವು.
                ಇಸ್ರೇಲಿ ದಂಪತಿಗಳ ಬೆಡ್ ರೂಂ ಹೇಗಿರಬಹುದು ಎಂದು ಅತ್ತ ಹೊರಟೆ. ನನ್ನ ಹಿಂದೆಯೇ ಸುಷ್ಮಾ ಹಾಗೂ ಸಲೀಂ ಚಾಚಾ ಬಂದರು. ಅಲ್ಲೊಂದು ತೊಟ್ಟಿಲೂ ಇತ್ತು. ತೊಟ್ಟಿಲ ಮೇಲೆ ತಿರುಗಣೆಯ ಆಟದಬೊಂಬೆ ನೇತು ಹಾಕಲಾಗಿತ್ತು. ಹೊಸದಾಗಿ ನೆಂಟರು ಬರುತ್ತಾರೆಂದು ನಿನ್ನೆಯಷ್ಟೇ ತಂದು ಇಡಲಾಗಿದೆಯೇನೋ ಎನ್ನುವಂತೆ ಇತ್ತು. ವಿಚಿತ್ರವೆಂದರೆ ಈ ಬೆಡ್ ರೂಂ ಮಾತ್ರ ಬಹಳ ಸ್ವಚ್ಛವಾಗಿತ್ತು. ಈಗಷ್ಟೇ ಹಾಸಿದಂತಿದ್ದ ಹೊದಿಕೆಗಳು, ಹೊಚ್ಚ ಹೊಸದರಂತಿದ್ದ ತಡಿ, ಚಾದರಗಳು ನನ್ನನ್ನು ವಿಶೇಷವಾಗಿ ಸೆಳೆದವು. ನಾನು ಬೇಲಿಪನನ್ನು ಕರೆದು ಈ ರೂಮು ಉಳಿದೆಲ್ಲವುಗಳಿಂತ ಹೇಗೆ, ಯಾಕೆ ಇಷ್ಟು ಚೊಕ್ಕಟವಾಗಿದೆ ಎಂದು ಕೇಳಿದೆ. ತಾನೇ ಒರೆಸಿದ್ದೆಂದು ಮೊದ ಮೊದಲು ಹೇಳಿದ ಬೇಲಿಪ ಕೊನೆಗೆ ತಬ್ಬಿಬ್ಬಾಗಿ ಸುಮ್ಮನೆ ನಿಂತ. ನನಗೆ ಮನೆ ಮತ್ತಷ್ಟು ವಿಚಿತ್ರವೆನ್ನಿಸಿತು. ಸಲೀಂ ಚಾಚಾನಲ್ಲಿ ಈ ಕುರಿತು ಕೇಳೋಣ ಎಂದುಕೊಂಡೆ. ಆದರೆ ಕೇಳಲೇ ಇಲ್ಲ. ಸುಷ್ಮಾ ಮಾತ್ರ ಬೆಚ್ಚಿದ್ದನ್ನು ಗಮನಿಸಿದೆ. ಆ ಬೆಡ್ ರೂಮನ್ನು ಗಮಿಸಿದಾಗ ಕೋಣೆಯ ಗೋಡೆಯ ಮೇಲೆ ಕೆಲವು ಚಿತ್ರಪಟಗಳು ತೂಗುಹಾಕಲ್ಪಟ್ಟಿದ್ದವು. ಇಸ್ರೇಲಿ ಕುಟುಂಬ ಕಲೆಯ ಆರಾಧಕರು, ಕಲಾವಿದರಿರಬೇಕೆಂಬ ಅನುಮಾನ ಮೂಡುತ್ತಿದೆ ವಿನು.
                ಮತ್ತೊಂದು ಕಡೆಗೆ ಒಂದು ಫ್ಯಾಮಿಲಿ ಪೋಟೋ ನನ್ನನ್ನು ಸೆಳೆಯಿತು. ಬಹುಶಃ ಅದೇ ಪೋಟೋದಲ್ಲಿರುವವರೇ ಆ ಮನೆಯಲ್ಲಿ ವಾಸಿಸುತ್ತಿದ್ದಿರಬಹುದು. ಇಬ್ಬರು ಬಾಲಕಿಯರು ಆಟವಾಡುತ್ತಿದ್ದರು. ಜೊತೆಯಲ್ಲಿ ಗಂಡ ಹೆಂಡಿತಿಯರಿದ್ದರು. ಆ ಮಕ್ಕಳು ಅದೆಷ್ಟು ಚೆಂದ ಇದ್ದರು ಗೊತ್ತಾ. ಎದುರಿನಲ್ಲಿದ್ದರೆ ಅವನ್ನು ನಾನು ಮುದ್ದಾಡಿಬಿಡುತ್ತಿದ್ದೆನೇನೋ. ಹಾಗೆ ನಾನು ಸುತ್ತ ದೃಷ್ಟಿ ಹಾಯಿಸಿದೆ. ಅಲ್ಲೊಂದು ಸುಂದರ ಚಿತ್ರ ನನ್ನನ್ನು ಸೆಳೆಯಿತು. ಸೀದಾ ಹೋಗಿ ಅದನ್ನು ಎತ್ತಿಕೊಂಡು, ಬೇಲಿಪನ ಬಳಿ ನನಗಿದು ಬೇಕು ತೆಗೆದುಕೊಂಡು ಹೋಗಲಾ ಎಂದೆ. ಆತ `ಹುಂ.. ಆದರೆ ಯಾರ ಬಳಿಯೂ ಹೇಳಬೇಡಿ ಪ್ಲೀಸ್.. ನನ್ನ ನೌಕರಿ ಹೋಗಿ ಬಿಡುತ್ತೆ..' ಎಂದ. `ಸರಿ..' ಎಂದು ಎತ್ತಿಟ್ಟುಕೊಂಡೆ. ಅಲ್ಲಿಂದ ಹೊರ ಬೀಳುವ ವೇಳೆಗೆ ನಾನು ಅರಾಮಾಗಿದ್ದೆನಾದರೂ ಸಲೀಂ ಚಾಚಾ ಹಾಗೂ ಸುಷ್ಮಾ ಇಬ್ಬರೂ ಬೆವರಿದ್ದನ್ನು ಗಮನಿಸಿದೆ.. ಮನೆಯ ಬಗ್ಗೆ ಎಲ್ಲರೂ ಹೇಳುತ್ತಿರುವುದು ಸುಳ್ಳಾ ಎಂದೆಲ್ಲ ಆಲೋಚನೆ ನನಗೆ. ಆದರೆ ಮನೆಯ ಬಗ್ಗೆ ಭೂತದ ಸುದ್ದಿ ಹಬ್ಬಿಸಿದವರ್ಯಾರು? ಗೊತ್ತಾಗುತ್ತಿಲ್ಲ ವಿನು.
                 `ಸಲೀಂ ಚಾಚಾ.. ಭೂತ ಬಂಗಲೆ ಹಾಗೆ ಹೀಗೆ ಹೇಳುತ್ತಾರಲ್ಲ. ನನಗೆ ಅಂತದ್ದೆನೂ ಅನ್ನಿಸಲೇ ಇಲ್ಲ..' ಎಂದು ಸಲೀಂ ಚಾಚಾನನ್ನು ಕೇಳಿದೆ. `ಅರೆ ಬೇಟಿ.. ಹಗಲೊತ್ನಾಗೆ ಎಲ್ಲಾದರೂ ದೆವ್ವ ಗಿವ್ವ ಕಾಣ್ತದಾ.. ರಾತ್ರಿಯಾಗ್ಬೇಕು ಅಲ್ವಾ.. ನಿಂಗೆ ಒಂದು ವಿಷಯ ಗಮನಕ್ಕೆ ಬಂತೋ ಇಲ್ವೋ ಗೊತ್ತಾಗ್ಲಿಲ್ಲ ಬೇಟಿ. ಈಗ 20-25 ವರ್ಷದ ಹಿಂದೆ ಮನೆಗೆ ಬೀಗ ಹಾಕಲಾಗಿದೆ. ಮನೆಯ ಎಲ್ಲ ಭಾಗಗಳಿಗೆ, ಪ್ರದೇಶಗಳಿಗೆ, ಗೋಡೆಗಳಿಗೆ ಧೂಳು ಮೆತ್ತಿಕೊಂಡಿದೆ. ಆದರೆ ಆ ಮನೆಯ ಬೆಡ್ ರೂಂ ಯಾಕೆ ಚೊಕ್ಕಟವಾಗಿದೆ?  ಯಾರು ಅದನ್ನು ಪ್ರತಿದಿನ ಒರೆಸುವವರು? ಬೆಳಿಗ್ಗೆ ಯಾರೋ ಗುಡಿಸಿ, ನೆಲ ಒರೆಸಿ ಇಟ್ಟಂತೆ ಇತ್ತಲ್ಲವಾ?  ಬೇಲಿಪ ಖಂಡಿತ ಹಾಗೆ ಮಾಡಿರಲಿಕ್ಕೆ ಸಾಧ್ಯವಿಲ್ಲ ಅಲ್ಲವಾ..? ಇದು ಭೂತದ್ದೇ (ಸಲೀಂ ಚಾಚಾ ಹೇಳಿದ್ದು ಸೈತಾನ ಅಂತ..) ಕೆಲಸ ಅಲ್ಲವಾ..? ಎಂದ. ನಾನು ಹಾಗೂ ಸುಷ್ಮಾ ತಣ್ಣಗೆ ಬೆವರಿದ್ದೆವು. ಏನೇ ಹೇಳು ವಿನೂ ಆ ಇಸ್ರೇಲಿ ದಂಪತಿಗಳ ಮನೆಗೆ ಹೋಗಿ ಬಂದಿದ್ದು ನನಗೆ ಹೊಸದೊಂದು ಅನುಭವ ಕೊಟ್ಟಿತು. ಸಲೀಂ ಚಾಚಾನಿಗೆ ಮತ್ತೊಮ್ಮೆ ಥ್ಯಾಂಕ್ಸ್ ಹೇಳಿ ಬಂದಿದ್ದೇನೆ..
ಇಂತಿ
ದಿವ್ಯಾ

                ಅಬ್ಬಾ ದಿವ್ಯಾಳಿಗೆ ಏನೂ ಆಗಿಲ್ಲ.. ದೇವರು ದೊಡ್ಡವನು ಎಂದುಕೊಂಡೆ. ಹುಚ್ಚುಡುಗಿ ಇನ್ನೆಂತ ಕೆಲಸ ಮಾಡಿಕೊಳ್ಳುತ್ತಾಳೋ ಎನ್ನುವ ಭಾವ ನನ್ನನ್ನು ಕಾಡದಿರಲಿಲ್ಲ. ಮತ್ತೆ ಇಂತಹ ಕೆಲಸಕ್ಕೆ ಕೈ ಹಾಕಬೇಡ. ಹುಷಾರು ಎಂದು ನಾನು ಪತ್ರ ಬರೆದು ಅವಳ ಉತ್ತರಕ್ಕೆ ಕಾಯುತ್ತ ಕುಳಿತೆ. ಮತ್ತೊಂದು ತಿಂಗಳ ಬಿಡುವಿನ ನಂತರ ದಿವ್ಯಾಳಿಂದ ಪತ್ರ ಬಂದಿತು. ನಾನು ತೆರೆದು ಓದುತ್ತ ಕುಳಿತೆ.

ಪ್ರೀತಿಯ ವಿನು
                 ನಾನು ಈ ಪತ್ರವನ್ನು ಬರೆಯುವಾಗ ಯಾಕೋ ಬೇಸರ, ಭಯ ಕಾಡುತ್ತಿದೆ. ಹೇಗೆ ಬರೆಯಲಿ ಎಂದೂ ಮನಸ್ಸು ತಲ್ಲಣಿಸುತ್ತಿದೆ. ನನ್ನ ಭಯಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಸಲೀಂ ಚಾಚಾನ ಬಗ್ಗೆ ಹೇಳಬೇಕು. ನನ್ನ ಹಾಗೂ ಸುಷ್ಮಾನ ಜೊತೆಗ ಇಸ್ರೇಲಿ ಮನೆಗೆ ಬಂದಿದ್ದನಲ್ಲ ಸಲೀಂ ಚಾಚಾ ಆತ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ನಾವು ಹೋಗಿ ಬಂದ ಒಂದು ವಾರಕ್ಕೆ ಆತ ಇದ್ದಕ್ಕಿದ್ದಂತೆ ಒಂದು ಮುಂಜಾನೆ ರಕ್ತ ಕಾರಿಕೊಳ್ಳಲು ಆರಂಭಿಸಿದನಂತೆ. ಮನೆಯವರೆಲ್ಲ ಸಲೀಂ ಚಾಚಾನನ್ನು ಆಸ್ಪತ್ರೆಗೆ ಸೇರಿಸುವ ವೇಳೆಗೆ ಆತನ ಪ್ರಾಣ ಹೋಗಿತ್ತು.
                 ಇದೇ ವೇಳೆ ಇನ್ನೊಂದು ದುರ್ಘಟನೆಯೂ ನಡೆದು ಹೋಗಿದೆ. ನನ್ನ ರೂಂ ಮೇಟ್ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸುದ್ದಿಗಳನ್ನು ನಿನಗೆ ಹೇಗೆ ಹೇಳುವುದು ತೋಚುತ್ತಿಲ್ಲ. ಸಲೀಂ ಚಾಚಾ ಸತ್ತಿದ್ದ ವಿಷಯ ತಿಳಿದು ಆತನನ್ನು ನೋಡಿಕೊಂಡು ಬರಲು ನಾನು-ಸುಷ್ಮಾ ಹೋಗಿದ್ದೆವು. ಸಲೀಂ ಚಾಚಾನನ್ನು ನೋಡಿದ್ದೇ ತಡ ಸುಷ್ಮಾಳಿಗೆ ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ ಥಟ್ಟನೆ ಕಿರುಚಿಕೊಂಡು ರೂಮಿಗೆ ಓಡಿ ಬಂದಳು. ನಾನೂ ಅವಳ ಹಿಂದೆ ಬಂದು ಅವಳ ಬಳಿ ವಿಚಾರಿಸಿದಾಗ `ದಿವ್ಯಾ.. ಯಾಕೋ ಭಯವಾಗ್ತಿದೆ. ಇದು ಆ ಇಸ್ರೇಲಿ ಮನೆಯ ಭೂತದ ಕಾಟವೇ ಇರಬೇಕು ಕಣೆ. ಸಲೀಂ ಚಾಚಾ ಸುಮ್ಮನೆ ಸತ್ತಿಲ್ಲ. ಆ ಮನೆಯ ಭೂತವೇ ಬಲಿ ತೆಗೆದುಕೊಂಡಿದೆ. ಬೇಡ ಬೇಡ ಅಂತ ಬಡ್ಕೊಂಡೆ.. ನೋಡು ನೀನು ಕೇಳಲಿಲ್ಲ. ಎಂತ ಭಾನಗಡಿ ಆಯ್ತು ಅಂತ.. ಸಲೀಂ ಚಾಚಾನನ್ನು ಬಲಿ ತೆಗೆದುಕೊಂಡ ಆ ಭೂತ ನಮ್ಮನ್ನು ಸುಮ್ಮನೆ ಬಿಡುತ್ತದೆಯೇ? ಆ ಮನೆಯಲ್ಲೆಲ್ಲ ನಾವು ಓಡಾಡಿ ಬಂದಿದ್ದೇವೆ.  ನಮ್ಮನ್ನು ಖಂಡಿತ ಸುಮ್ಮನೆ ಬಿಡುವುದಿಲ್ಲ..' ಎಂದು ಹಲುಬಿದವಳಿಗೆ ಆ ಕ್ಷಣದಿಂದ ವಿಪರೀತ ಜ್ವರ. ಈ ಲೋಕದ ಪರಿವೆಯೇ ಇಲ್ಲವೇನೋ ಎಂಬಷ್ಟು ಕಾಡಲಾರಂಭಿಸಿತ್ತು. ನಡು ನಡುವೆ ಬಡಬಡಿಕೆ ಬೇರೆ. ನಾನು ರಾತ್ರಿಯಿಡಿ ನಿದ್ದೆಯಿಲ್ಲದೇ ಕಳೆದೆ. ಸುಷ್ಮಾಳ ಮನೆಯವರಿಗೆ ವಿಷಯ ತಿಳಿಸಿದ ತಕ್ಷಣ ಬಂದು ಮನೆಗೆ ಕರೆದೊಯ್ದರು.
                     ಇದಾಗಿ ಎರಡೇ ದಿನಕ್ಕೆ ಸುಷ್ಮಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ನಾನು ಹೋಗಿ ನೋಡಿದೆ. ಭೂತದ ಭೀತಿಯಲ್ಲಿಯೇ ಬಡಬಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ನನಗೆ ನಿಜಕ್ಕೂ ಈಗ ಭಯವಾಗತೊಡಗಿದೆ ವಿನು. ಏನು ಮಾಡಲೋ? ನಾನು ಹೋಗಿ ಆ ಮನೆಯ ಬೆಡ್ ರೂಮಿನಲ್ಲಿದ್ದ ಚಿತ್ರವೊಂದನ್ನು ಎತ್ತಿಕೊಂಡು ಬಂದಿದ್ದೇನೆ. ಮುಂದೇನಾಗ್ತದೋ? ಪ್ಲೀಸ್ ನೀನೊಮ್ಮೆ ಬಂದು ಹೋಗುತ್ತೀಯಾ? ಯಾಕೋ ಸಿಕ್ಕಾಪಟ್ಟೆ ಭಯವಾಗುತ್ತಿದೆ. ಈ ಭಯ ನನ್ನನ್ನು ಸಾಯಿಸುವ ಮೊದಲು ಬಂದು ಹೋಗು..
ಇಂತಿ
ದಿವ್ಯಾ
                        ಹೀಗೆಂದು ಬರೆದ ಪತ್ರ ನನ್ನ ಕೈಗೆ ಸಿಕ್ಕ ತಕ್ಷಣ ನಾನು ತೀರ್ಥಹಳ್ಳಿಯ ಕಡೆಗೆ ಹೊರಟಿದ್ದೆ. ದಾರಿಯ ತುಂಬೆಲ್ಲ ನೂರಾರು ಆಲೋಚನೆಗಳು. ಕಣ್ಣಮುಚ್ಚಿದರೆ ಅಕ್ಷರಗಳ ಸಾಲುಗಳು. `ಛೇ.. ಇದೇನಾಯ್ತು..' ಎಂಬ ಭಾವನೆ. ತೀರ್ಥಹಳ್ಳಿ ತಲುಪುವ ವೇಳೆಗೆ ಮರುದಿನ ಬೆಳಗಾಗಿತ್ತು. ನಾನು ಸೀದಾ ಕುರುವಳ್ಳಿಯಲ್ಲಿದ್ದ ದಿವ್ಯಾಳ ಹಾಸ್ಟೆಲ್ ಕಡೆಗೆ ಹೋಗಿ ವಾರ್ಡನ್ ರನ್ನು ಭೇಟಿಯಾಗಿ ದಿವ್ಯಾಳನ್ನು ಕರೆಸಿದೆ. ಬಂದವಳೇ ನನ್ನ ಬಳಿ ಬಿಕ್ಕಿ ಬಿಕ್ಕಿ ಅತ್ತಳು. ನಾನು ಸಮಾಧಾನ ಪಡಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಬಹಳ ಹೊತ್ತಿನ ನಂತರ ಆಕೆ ಸಮಾಧಾನ ಪಟ್ಟುಕೊಂಡಳು.
               ನಾನು ಆಕೆಯ ಬಳಿ `ನಾನು ಆ ಮನೆಯನ್ನು ನೋಡಬೇಕಿತ್ತು.. ತೋರಿಸ್ತೀಯಾ..?' ಎಂದು ಕೇಳಿದೆ.
ಅದಕ್ಕವಳು `ಇನ್ನೆಲ್ಲಿ ಮನೆ ಮಾರಾಯಾ.. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ. ರಾತ್ರಿಯಿಡಿ ಉರಿದ ಬೆಂಕಿ ಬೆಳಗಾಗುವ ವೇಳೆಗೆ ಇಡೀ ಮನೆಯನ್ನು ಭಸ್ಮ ಮಾಡಿದೆ. ಮನೆಗೆ ಬೆಂಕಿ ಬೀಳಲು ಕಾರಣ ಗೊತ್ತಿಲ್ಲ. ಯಾರು ಹಾಕಿದರೋ, ತನ್ನಿಂದ ತಾನೆ ಬೆಂಕಿ ಬಿತ್ತೋ, ಅಥವಾ ಭೂತದ ಕಾಟವೋ ನನಗೊಂದು ತೋಚುತ್ತಿಲ್ಲ ವಿನು.. ಒಟ್ಟಿನಲ್ಲಿ ಮನೆಯಿಲ್ಲ ಅಷ್ಟೆ..' ಎಂದಳು ಆಕೆ.
                ಈಗ ಮನೆಯ ಬಗ್ಗೆ ಕುತೂಹಲ ಹುಟ್ಟಿದ್ದು ನನ್ನಲ್ಲಿ. ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಸಲೀಂ ಚಾಚಾ ಹಾಗೂ ಸುಷ್ಮಾ ಸಾವಿಗೂ ಮನೆಗೂ ಏನಾದರೂ ನಂಟಿದೆಯಾ ? ಯಾಕೋ ಬಗೆ ಹರಿಯಲಿಲ್ಲ. ಆ ದಿನ ಅಲ್ಲಿಯೇ ಉಳಿದು ಸಂಜೆ ಹೊರಡಲು ಅನುವಾದೆ. ದಿವ್ಯಾ ಓಡಿಬಂದು ನನ್ನಕೈಯಲ್ಲಿ ಒಂದು ಚಿತ್ರವನ್ನು ಕೊಟ್ಟಳು. ನಾನು ಏನು ಎಂಬಂತೆ ನೋಡಿದೆ.
`ಈ ಚಿತ್ರವನ್ನು ಆ ಮನೆಯಿಂದ ತಂದೆ. ಯಾಕೋ ಬಹಳ ಇಷ್ಟವಾಗಿತ್ತು. ಆದರೆ ಯಾಕೋ ನನಗೆ ಈಗ ಅದು ಇಷ್ಟವಾಗುತ್ತಿಲ್ಲ. ಅದು ನಿನ್ನ ಬಳಿಯಾದರೂ ಇರಲಿ. ನನ್ನ ನೆನಪಿಗಾಗಿ..' ಎಂದಳು.
                  ನಾನು ಆ ಚಿತ್ರವನ್ನು ಗಮನಿಸಿ ನೋಡಿದೆ. ಯಾರೋ ಇಬ್ಬರು ಬಾಲಕಿಯರು, ಅವರ ಕೈಯಿರುವ ಜಾಗದಲ್ಲಿ ರೆಕ್ಕೆಗಳಿವೆ. ಬಾನಿಗೆ ಹಾರಲು ಸಿದ್ಧರಾಗಿ ನಿಂತಂತಿರುವ ಆ ಬಾಲಕಿಯರಿಗಾಗಿ ಒಂದಿಷ್ಟು ತೋಳಗಳು ಕಾಯುತ್ತಿವೆ. ನೀಲವರ್ಣದ ಆಕಾಶ ಕೂಡ ಬಾಯ್ದೆರೆದು ನಿಂತಿದೆ. ಜೊತೆಗೊಂದು ಸುಂದರ ಮನೆ. ಮತ್ತಷ್ಟು ಅಸ್ಪಷ್ಟ ಚಿತ್ರಗಳು. ಹೀಗಿದ್ದ ಆ ಚಿತ್ರ ನನ್ನನ್ನು ಸೆಳೆಯಿತು. ಮತ್ತೊಮ್ಮೆ ನಾನು ದಿವ್ಯಾಳನ್ನು ಸಮಾಧಾನ ಪಡಿಸಿ, ತಿಳಿಹೇಳಿ, ಚಿತ್ರವನ್ನು ಹಿಡಿದು ಮನೆಯ ಕಡೆಗೆ ಮರಳುತ್ತಿದ್ದಾಗ ಮನಸ್ಸಿನ ತುಂಬೆಲ್ಲ ಆ ಇಸ್ರೇಲಿ ದಂಪತಿಗಳ ಮನೆಯೇ ತುಂಬಿಕೊಂಡಿತ್ತು. ಬಗೆದಷ್ಟೂ ನಿಗೂಢವೆನ್ನಿಸುತ್ತಿತ್ತು.

***

Sunday, April 13, 2014

ಬಂದ ನೆನಪು

ಹಗಲು ಇರುಳಾದಾಗ
ನೋವು ನಲಿವಾದಾಗ
ಸೋಲು ಗೆಲುವಾದಾಗ
ಬಂತು ನಿನ್ನ ನೆನಪು ||

ಕಷ್ಟ ಸುಖವಾದಾಗ
ಗುರಿ ಗೆಲುವ ಪಡೆದಾಗ
ಹಲ ಕನಸಿನಲಿ ಮಿಂದಾಗ
ಬಂತು ನಿನ್ನ ನೆನಪು ||

ಮೈ ಮನಸು ನಕ್ಕಾಗ
ದುಃಖವುಕ್ಕಿ ಬಂದಾಗ
ಕವನವನು ಬರೆದಾಗ
ಬಂತು ನಿನ್ನ ನೆನಪು ||

ನೀಳ್ಜಡೆಯ ನಡೆಯಲ್ಲಿ
ನಗು ಮೊಗದ ಮೋಡಿಯಲಿ
ಯಾರೋ ನಡೆ ಬರುತಿರಲು
ಬಂತು ನಿನ್ನ ನೆನಪು ||

ನವ ವಸಂತವು ಬಂದಾಗ
ಮಾವು ಚಿಗುರುವಂತೆ
ಕೋಗಿಲೆ ಉಲಿ ಉಲಿವಂತೆ
ಬಂತು ನಿನ್ನ ನೆನಪು ||

**
(ಈ ಕವಿತೆಯನ್ನು ಬರೆದಿದ್ದು 02-02-2006ರಂದು ಶಿರಸಿಯಲ್ಲಿ..)

Saturday, April 12, 2014

ನಿನ್ನ ಕಣ್ಣಿನಲ್ಲಿ


ಗೆಳತಿ ನಿನ್ನ ಕಣ್ಣಿನಲ್ಲಿ
ಕಾಂತಿಯೊಂದ ಕಂಡೆನು |
ಆ ಕಾಂತಿಯ ಮಿನುಗಿನಲ್ಲಿ
ನಿನ್ನ ಬಿಂಬ ಕಂಡೆನು ||


ಕರಿಯ ಕಣ್ಣ ಗೋಲಿಯಲ್ಲಿ
ನನ್ನ ಬಿಂಬ ಹೊಳೆದಿದೆ |
ಕಣ್ಣ ಪದರ ಆಸೆ ತುಂಬಿ
ನನ್ನ ಮನವ ಸೆಳೆದಿದೆ ||


ನಿನ್ನ ಕಣ್ಣು ದೂರದಿಂದ
ನನ್ನ ಬದುಕ ಸೆಳೆದಿದೆ |
ಜೀವ ನೀನು ಪ್ರಾಣ ನೀನು
ಎಂದದುವೆ ಹೇಳಿದೆ ||


ನಿನ್ನ ಕಣ್ಣೇ ನನ್ನ ಮನಸು
ಅದರಲಿದೆ ಪ್ರತಿಬಿಂಬ |
ನೀನು ನನ್ನ ಪ್ರಾಣ ಕನಸು
ಕಣ್ಣಲಿದೆ ಸವಿಬಿಂಬ ||

**
(ಈ ಕವಿತೆಯನ್ನು ಬರೆದಿದ್ದು 14-10-2006ರಂದು ದಂಟಕಲ್ಲಿನಲ್ಲಿ)