Wednesday, November 13, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 4

ನಾವು ಕೊನೆಗೂ ಗುಮ್ಮಟ ನಗರಿ ಬಿಜಾಪುರವನ್ನು ತಲುಪುವ ವೇಳೆಗೆ 5ರ ಮೇಲೆ 30 ನಿಮಿಷ ಹೆಚ್ಚಾಗಿತ್ತು. ಎತ್ತ ನೋಡಿದರತ್ತ ಗುಮ್ಮಟಗಳು.. ಬಿಳಿ ಬಿಳಿ ಗುಂಬಜಗಳು.. ಸುಂದರ ಊರಾಗಿದ್ದರೂ ಬಿಜಾಪುರ ಏನೋ ಒಂದು ರೀತಿಯ ಕಳವಳವನ್ನು ಮನಸ್ಸಿನಲ್ಲಿ ಹುಟ್ಟು ಹಾಕುತ್ತದೆ. ಬಸ್ಸಿನಲ್ಲಿ ಕುಳಿತಿದ್ದಂತೆ ಅಕ್ಕಪಕ್ಕ, ಮುಂದೆ ಹಿಂದೆ ನೋಡಿದೆ.. ಗುಂಬಜಗಳು.. ಆದರೂ ಗೋಲಗುಮ್ಮಟ ಕಾಣಲಿಲ್ಲ ಬಿಡಿ..
ಅಲ್ಲಿಂದ ಬಸವನ ಬಾಗೇವಾಡಿಯೆಡೆಗೆ ಸಾಗುವ ಬಸ್ಸನ್ನು ಏರಿದೆವು. ಬಸ್ಸಯ ಸುಮಾರು 6.30ರ ವೇಳೆಗೆ ಬಸವಣ್ಣನ ಜನನದ ನೆಲೆವೀಡಾದ ಬಾಗೇವಾಡಿಯಲ್ಲಿ ನಮ್ಮನ್ನು ಇಳಿಸಿ ಸಾಗಿತು. ಬಾಗೇವಾಡಿಯ ಶ್ರೀ ಬಸವೇಶ್ವರ ಕಾಲೇಜು ಅಲ್ಲೇ ಇತ್ತು. ಸರಿ, ಅಲ್ಲಿಗೆ ಹೋದೆವು. ಅದು ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜೆಂಬ ದೊಡ್ಡ ಕಾಲೇಜಿಗೆ ಹೋಲಿಸಿದರೆ ಬಹು ಚಿಕ್ಕದು. ಹಾಗೆಯೇ ಜನರೂ ಕೂಡ.
ಹೋದ ತಕ್ಷಣ ನಮಗೆ ಉಳಿದುಕೊಳ್ಳಲು ಯಾವುದೋ ಖಾಲಿ ರೂಮನ್ನು ತೋರಿಸಿದರು. ಆದರೆ ಅಲ್ಲಿ ನಮ್ಮ ಲಗೇಜನ್ನು ಇಟ್ಟು ನಮ್ಮ ಬಿಡಾರವನ್ನು ಊರಲು ಹವಣಿಸಿದ ಹತ್ತೇ ನಿಮಿಷದಲ್ಲಿ ಅಲ್ಲಿನ ಸೊಳ್ಳೆಗಳು ಪ್ರತಾಪವನ್ನು ತೋರಲಾರಂಭಿಸಿದವು. ಕೊನೆಗೊಮ್ಮೆ ಸೊಳ್ಳೆಗಳು ಅಸಹನೀಯ ಎನ್ನಿಸಿದಾಗ ಎನ್. ಎಚ್. ಗೌಡರ ಬಳಿ `ಬೇರೆ ರೂಂ.. ಕೊಡಿಸಿ ಸಾ...' ಎಂದು ದುಂಬಾಲುಬಿದ್ದೆವು.. ಕೊನೆಗೆ ನಮ್ಮ boys teamಗೇ ವಿಶೇಷವಾಗಿ ಆ ಕಾಲೇಜಿನ sports roomನ್ನು ಬಿಟ್ಟುಕೊಟ್ಟರು. ಆ ರೂಮಿನ ಪುರಾಣವೇ ಬಹುದೊಡ್ಡದಾಗುತ್ತದೆ .. ನಮ್ಮ ಕಾಲೇಜಿನಲ್ಲಿ ದೊಡ್ಡ ಕ್ರೀಡಾ ವಿಭಾಗದ ಕೋಣೆಯಿದ್ದರೆ ಅಲ್ಲಿ ಬಹಳ ಚಿಕ್ಕದು. ನಾವು ನಾಲ್ವರು ಮಲಗಿಕೊಂಡರೆ ಐದನೆಯವನಿಗೆ ಜಾಗವೇ ಇಲ್ಲದಂತಹ ಸ್ಥಳ.. ಗಬ್ಬಾಗಿದ್ದರೂ ಆ ರೂಮಿನಲ್ಲಿ ಫ್ಯಾನಿತ್ತು ಎಂಬುದೇ ವಿಶೇಷ.. ಫ್ಯಾನುಗಾಳಿಗೆ ಸೊಳ್ಳೆಗಳ ಯುದ್ಧವನ್ನು ಸ್ವಲ್ಪ ಪ್ರಮಾಣದಲ್ಲಿ ತಪ್ಪಿಸಬಹುದು ಎಂಬುದು ನಮಗಿದ್ದ ಸಮಾಧಾನದ ಸಂಗತಿ.

ಸಂಜೆ, ಸನಿಹದ `ವಿಮೋಚನ' ಎಂಬ ವಿಚಿತ್ರ ಹೆಸರಿನ ಹೊಟೆಲ್ ಕಂ ಬಾರ್ ಕಂ ರೆಸ್ಟಾರೆಂಟ್ ನಲ್ಲಿ ಊಟ ಮುಗಿಸಿ ಬಂದೆವು. ಪಾವಸ್ಕರ ಭರ್ಜರಿ ಮಾತನಾಡುವ ಹುಮ್ಮಸ್ಸಿನಲ್ಲಿದ್ದ.. ಭಾರಿ ಭಾರಿ ಮಾತಿನೊಂದಿಗೆ ಶುರುಹಚ್ಚಿಕೊಂಡ. `ವಿನು, ನಾಳೆಯಿಂದ ಮ್ಯಾಚು. ನಾವು ಫಸ್ಟು ಬರ್ಲೇಬೇಕು.  ಬಂದೇ ಬರ್ತೀವಿ. ನಂಗೆ ಆ ಗೋಗಟೆ ಕಾಲೇಜಿನ ವಿರುದ್ಧ ಕಳೆದ ವರ್ಷ ಸೋತ ಉರಿ ಇದೆ. ನನ್ನೆದುರಿಗಿದ್ದವನನ್ನು ಸೋಲಿಸಿಯೇ ಸೋಲಿಸ್ತೀನಿ ..' ಎಂದ.. ಪಾ..ಪ .. ಮಾತಿನ ಮಧ್ಯದಲ್ಲಿ ಸ್ವಲ್ಪ ತೊದಲುತ್ತಿದ್ದ ಈತನ ಖುಷಿಯನ್ನು ನಾನು ತಡೆಯಲು ಹೋಗಲಿಲ್ಲ.. ಹಾಗೆಯೇ ನಮ್ಮ ಮಾತಿನಲ್ಲಿ ಆ ಆಟಗಾರನ್ನು ಸೋಲಿಸಿದರೆ ಇಷ್ಟು, ಈತನನ್ನು ಸೋಲಿಸಿದರೆ ಇಷ್ಟು ಎನ್ನುವ ಚಾಲೆಂಜುಗಳು, ಬೆಟ್ಟಿಂಗುಗಳು ನಡೆದವು.. 50 ರುಪಾಯ್ ವರೆಗೂ ನಮ್ಮ ಬೆಟ್ಟಿಂಗ್ ರು. ಏರಿಕೆಯಾಗಿತ್ತು.

ನವೀನ್ ಪಾವಸ್ಕರ, ನಾನು, ಆನಂದ ನಾಯ್ಕ, ನಾಗಭೂಷಣ ಗೌಡರ ಜೊತೆಗೆ  (ಕಿಟ್ಟು ಮಿಸ್ಸಿಂಗ್)
ಕೊನೆಗೆ ನಮ್ಮ ಟೀಮಿನಲ್ಲಿ ಯಾರು ಹೇಗೆ ಆಡಬೇಕು, ಯಾರು ಯಾವ ಪೊಸಿಷನ್ನಿನಲ್ಲಿ ಆಡಬೇಕು ಎಂಬ ಚರ್ಚೆ ನಡೆಯಿತು. ನಾನು 2nd ಬೋರ್ಡ್ ಆಡುತ್ತೇನೆ ಎಂದೆ. ಪಾವಸ್ಕರನ ಬಳಿ ಮೂರನೇ ಬೋರ್ಡನ್ನು ಆಡು ಎಂದೆ.. ಆದರೆ ಉಳಿದಿಬ್ಬರ ಪೈಕಿ ಯಾರು 1st ಬೋರ್ಡ್ ಹಾಗೂ ಯಾರು 4th ಬೋರ್ಡ್ ಆಡಬೇಕು ಎನ್ನುವುದು ಸಮಸ್ಯೆಯಾಯಿತು. ಪಾವಸ್ಕರ ಕಿಟ್ಟು 1st ಬೋರ್ಡ್ ಆಡಲಿ ಎಂದು ರಗಳೆ ಪ್ರಾರಂಭಿಸಿದ. ನಂಗದು ಇಷ್ಟವಿರಲಿಲ್ಲ. ಕೊನೆಗೆ ಆನಂದ 1st ಬೋರ್ಡ್ ಆಡಲಿ ಎಂದು ನಾನು ನಿರ್ಧಾರ ಮಾಡಿದೆ. ಪಾವಸ್ಕರ ಕ್ಯಾತೆ ತೆಗೆದನಾದರೂ ಕೊನೆಗೆ ಒಪ್ಪಿಕೊಂಡ. ಆನಂದನೂ ನಾಲ್ಕೈದು ಸಾರಿ `ತೊಂದ್ರೆ ಇಲ್ಲಲಾ.. ಪ್ರಾಬ್ಲಮ್ ಆಗೂದಿಲ್ಲಾ ಅಲ್ಲಾ..' ಎಂದು ಹೇಳಿ  ಅಳುಕಿನಿಂದಲೇ ಒಪ್ಪಿಕೊಂಡ. ಅದಕ್ಕಾಗಿ ಸಾಕಷ್ಟು ಬೆಣ್ಣೆಯನ್ನು ಹಚ್ಚಿದೆ ಕೂಡ.!
ನಾವು ಹಾಗೆ ಸುಮ್ಮನೇ ಪ್ರಾಕ್ಟೀಸ್ ಮ್ಯಾಚನ್ನು ಆಡಿದೆವು. ನನ್ನ ವಿರುದ್ಧ ಎಲ್ಲಾ ಆಟಗಾರರೂ ತಲಾ ಒಂದೊಂದು ಮ್ಯಾಚಿನಂತೆ ಆಡುವುದು ಎಂಬ ನಿರ್ಧಾರ ಮಾಡಿಕೊಂಡೆವು.. ಪ್ರಾಕ್ಟಿಸ್ ಮ್ಯಾಚ್ ಆಗಿದ್ದರೂ ನಾನು ಹಾಗೂ ಪಾವಸ್ಕರನ ನಡುವೆ ಯಾವಾಗಲೂ ಆಟ ಜಿದ್ದಾ ಜಿದ್ದಿನಿಂದ ಇರುತ್ತಿದ್ದ ಕಾರಣ ತಲಾ 50ರು. ನಂತೆ ಚಾಲೆಂಜ್ ಕಟ್ಟಿಕೊಂಡೆವು.. ನನ್ನ ವಿರುದ್ಧ ಪಾವಸ್ಕರ, ಕಿಟ್ಟುವಿನ ವಿರುದ್ಧ ಆನಂದ ಯದ್ವಾ ತದ್ವಾ ಮ್ಯಾಚುಗಳನ್ನು ಗೆಲ್ಲತೊದಗಿಸದರು. ನಾನು ಹಾಗೂ ಕಿಟ್ಟಿ ಇಬ್ಬರೂ ಎಷ್ಟೇ ಒದ್ದಾಡಿದರೂ ಒಂದೇ ಒಂದು match ನ್ನೂ ಗೆಲ್ಲಲಾಗಲಿಲ್ಲ. ! ನಾನು ಮ್ಯಾಚು ಸೋತಂತೆಲ್ಲ ಇನ್ನೈವತ್ತು ಅಂತ ಹೇಳಿ ನನ್ನನ್ನು ಚಾಲೆಂಜಿಗೆ ಕರೆದು ಮ್ಯಾಚಿನಲ್ಲಿ ಸೋಲಿಸಿ ನಗುತ್ತಿದ್ದ ನವೀನ ಪಾವಸ್ಕರ.. ಸೋತ ಮೊತ್ತ 500 ರು. ದಾಟುತ್ತಿದ್ದಂತೆ ನಾನು `ಸಾಕೋ ಮಾರಾಯಾ.. ನನ್ನ ಬಳಿ ಬ್ಯಾಲೆನ್ಸ್ ಇಲ್ಲ..' ಎಂದು ವರಾತ ಶುರು ಹಚ್ಚಿದೆ.. ಅದಕ್ಕವನು ಕೇಳಬೇಕಲ್ಲ.. ಕೊನೆ ಕೊನೆಗೆ ದುಡ್ಡಿನ ಮ್ಯಾಚು ಸಾಕೆನ್ನಿಸಿತು. ಖಾಲಿ ಪುಕ್ಕಟೆ ಮ್ಯಾಚ್ ಆದಲು ಯತ್ನಿಸಿದರೆ ಅದರಲ್ಲೂ ಸೋಲಿನ ಸರಮಾಲೆಯನ್ನು ಕಾಣಬೇಕೆ.. ಸಿವ ಸಿವಾ..? ನಮ್ಮನ್ನು ಸೋಲಿಸಿದಂತೆಲ್ಲ ತನ್ನ ಗುಡಾಣದಂತಹ ಹೊಟ್ಟೆಯನ್ನು ಕುಲುಕಾಡಿಸಿ ಕುಲುಕಾಡಿಸಿ ನಕ್ಕು ಕೆಣಕುತ್ತಿದ್ದ. ನಾವು ಸೋತವರಾದ್ದರಿಂದ ಸುಮ್ಮನಿದ್ದೆವು.
ಕೊನೆಗೆ 10.30ಕ್ಕೆ ಎಲ್ಲರೂ ನಿದ್ರಾದೇವಿಯ ತೆಕ್ಕೆಗೆ ತೆರಳಲು ಅನುವಾದರು. ಮಲಗಲೆಂದು light ಆರಿಸಿದ್ದೇ ತಡ ಶುರುವಾಯಿತು ನೋಡಿ ಸೊಳ್ಳೆ ಸಮುದಾಯದ ದಾಳಿ.. ಅಬ್ಬಬ್ಬಾ... ಆ ರೀತಿಯ ಆನೆಗಾತ್ರದ ಸೊಳ್ಳೆಗಳನ್ನು ನಾವು ಮಲೆನಾಡಿಗರು ಎಂದೂ ನೋಡಿರಲೇ ಇಲ್ಲ. ಸೊಳ್ಳೆಗಳೇನೋ ದೊಡ್ಡ ಡೊಣೆಯ ಗಾತ್ರದವುಗಳು.. ಪಾವಸ್ಕರನ ದೇಹಕ್ಕೆ ಹೊಂದಿಕೆಯಾಗುವಂತವುಗಳು. ಸೊಳ್ಳೆಗಳ ದಾಳಿ ತಾಳಲಾರದೇ ಫ್ಯಾನ್ ಹಾಕಿಕೊಳ್ಳಲು ಹೊರಟೆ. ಆದರೆ ಆ ಫ್ಯಾನ್ಉ ಹಳೆಯ ಕಾಲದ್ದಾಗಿದ್ದರಿಂದ ಕಿರ್ರೆನ್ನುತ್ತಿತ್ತು. ಅದರ ಶಬ್ದಕ್ಕೆ ನಿದ್ರೆಯೂ ಬಾರದು. ಜೊತೆಗೆ ಪಾವಸ್ಕರನಿಗೆ ಫ್ಯಾನ್ ಬೇಕು, ಕಿಟ್ಟುವಿಗೆ ಬೇಡ ಎಂಬ ಗಲಾಟೆಯೂ ತಾರಕಕ್ಕೇರಿತ್ತು.
ಒಬ್ಬ ಎದ್ದು ಫ್ಯಾನ್ ಹಾಕಿ ಮಲಗಿದರೆ ರಾತ್ರಿಯಲ್ಲಿ ಮತ್ತೊಬ್ಬನೆದ್ದು ಅದನ್ನು ಬಂದ್ ಮಾಡುತ್ತಾನೆ. ಕೆಲ ನಿಮಿಷದಲ್ಲೇ ಇನ್ನೊಬ್ಬನೆದ್ದು ಅದನ್ನು ಮತ್ತೆ ಆರಂಭಿಸಿದರೆ ಕೆಲವೇ ವೇಳೆಯಲ್ಲಿ ಇನ್ನೊಬ್ಬನೆದ್ದು ಅದನ್ನು ಆರಿಸುತ್ತಾನೆ. ಇಡೀ ರಾತ್ರಿ ಹೀಗೇ ಸಾಗಿತು. ಬಹುಶಃ ಆ ರಾತ್ರಿ ಅಲ್ಪಸ್ವಲ್ಪ ನಿದ್ದೆ ಮಾಡಿದ್ದೆಂದರೆ ನಾನೊಬ್ಬನೇ ಇರಬೇಕೇನೋ.. ಉಳಿದವರಿಗೆ ಫ್ಯಾನ್ ಕಾಟವಿತ್ತು.
ಈ ಫ್ಯಾನ್ ಪ್ರಸಂಗದಿಂದ ನಮಗೆಲ್ಲರಿಗೂ ನಾಗಭೂಷಣ ಗೌಡರ ಮೇಲೆ ಭಾರಿ ಸಿಟ್ಟು ಬಂತು.. ನಮ್ಮನ್ನು ಇಂತಹ ರೂಮಿನಲ್ಲಿ ಸೊಳ್ಳೆಗಳಿಗೆ ಆಹಾರವಾಗಿ ಬಿಟ್ಟು ತಾವು ಮಾತ್ರ `ವಿಮೋಚನ' ಬಾರ್ 7 ರೆಸ್ಟಾರೆಂಟಿನ  ಎಸಿ ರೂಮಿನಲ್ಲಿ ಗಡದ್ದು ತೀರ್ಥ- ಪ್ರಸಾದ ಕೊಂಡು ತಿಂದು ಹಾಯಾಗಿ ಮಲಗಿದ್ದ ಅವರನ್ನು ಒಂದು ರಾತ್ರಿಯಾದರೂ ಈ ರೂಮಿನಲ್ಲಿ ಬಿಡಬೇಕು ಎಂದುಕೊಂಡೆವು. ಸೊಳ್ಳೆಗಳಿಗೆ ನಾನು ಹಾಗೂ ಪಾವಸ್ಕರ ಬೇಗನೆ ಹೊಂದಿಕೊಂಡರೂ ಪಾಪದ ಕಿಟ್ಟು ಹಾಗೂ ಆನಂದ ಬಹಳ ತೊಂದರೆಯನ್ನು ಅನುಭವಿಸಬೇಕಾಯಿತು. ಬೆಳಿಗ್ಗೆ ಎದ್ದಾಗ ಹಿಂದಿನ ದಿನದ ಪಯಣದ ಆಯಾಸಕ್ಕಿಂತ ಎಲ್ಲರ ಮೈಮೇಲೆ ತುರಸಣಿಗೆ ಬಳ್ಳಿ ತಾಗಿದಾಗ ಏಳುವಂತಹ ದಡಪೆಗಳು ಎದ್ದಿದ್ದು ನೋಡಲು ಖುಷಿ ನೀಡಿದರೂ ಸಖತ್ ಕಿರಿ ಕಿರಿಯನ್ನು ಉಂಟು ಮಾಡಿತು. ಕಣ್ಣುಗಳು ಜೇನು ಹೊಡೆದಂತೆ ಊದಿಕೊಂಡಿದ್ದವು. ಕಿಟ್ಟು ಹಾಗೂ ಪಾವಸ್ಕರನ ಕಣ್ಣುಗಳು ಕೆಂಪಾಗಿ ಕ್ರೇಜಿ ಸ್ಟಾರ್ ನನ್ನು ನೆನಪು ಮಾಡುತ್ತಿದ್ದವು.

18-09-2007, ಮಂಗಳವಾರ
ಬಾಗೇವಾಡಿಯ ಬಸವೇಶ್ವರ ಕಾಲೇಜಿನಲ್ಲಿ ನಮ್ಮ ಟೀಮ್
ಬೆಳಿಗ್ಗೆ ಅಂತೂ ಇಂತೂ ಏಳಕ್ಕೆ ಎದ್ದು ಕಾಲೇಜಿನ ಮೂಲೆಯಲ್ಲಿದ್ದ toiletಗೆ ಹೋದರೆ, ಬರ್ರೋ ಕುರಿ ನನ್ನ ಮಕ್ಕಳಾ ಎಂದು ಹೇಳುತ್ತಾ ಕೋಟ್ಯಂತರ ಸೊಳ್ಳೆಗಳು ನಮಗಾಗಿ ಕಾಯುತ್ತಿದ್ದವು. ತತ್ತೆರಿಕಿ.. ಯಾವುದೇ ಕೆಲಸ ಸರಿಯಾಗದಿದ್ದರೂ ತೊಂದರೆಯಿಲ್ಲ.. ಈ ಕೆಲಸ ಮಾತ್ರ ನೆಮ್ಮದಿಯಿಂದ ಆಗಲೇಬೇಕು.. ಇಲ್ಲವಾದರೆ ದಿನವಿಡೀ ಹಾಳಾಗುವ ಸಾಧ್ಯತೆಗಳಿರುತ್ತವೆ.. ತತ್ಥೆರಿಕಿ.., toilet ನಲ್ಲಿ ಸಿಗುವ ಏಕೈಕ ನೆಮ್ಮದಿ, ಏಕಾಂತದ ತಾಣಕ್ಕೂ ಹಾಳು ಸೊಳ್ಳೆಗಳಿಂದ full stop ಬಿದ್ದಿತ್ತು. toilet ನಲ್ಲೂ ಸೊಳ್ಳೆಗಳ ಜೊತೆಗೆ ಹೋರಾಡಬೇಕಾದ ಸನ್ನಿವೇಶ.  ದೇವ್ರೆ.. ಆ ಸೊಳ್ಳೆಗಳಂತೂ ಹುಡುಕಿ ಹುಡುಕಿ ಜಾಗ ನೋಡಿ ಕಚ್ಚುತ್ತವೆ.. ಕೊನೆಗೆ... ಒಂದು ವಾರ ಇದನ್ನು ಅನುಭವಿಸಿದ ಪಾಡು, ಸಾಕ್ಷಾತ್ ಯಮನಿಗೂ ಬೇಡ ಅನ್ನಿಸಿಬಿಟ್ಟಿತ್ತು.
ಕೊನೆಗೆ ತಿಂಡಿಗೆ ಹೊರಟೆವು. ಯಾಕೋ ಈ ಸಾರಿ `ವಿಮೋಚನ'ದ ತಿಂಡಿ ನಮಗೆಲ್ಲ ಇಷ್ಟವಾಗಲಿಲ್ಲ. ಬೇರೆ ಯಾವುದಾದರೂ ಹೊಟೆಲ್ ಗೆ ಹೋಗಬೇಕು ಎಂದು ಹುಡುಕಾಡಿದಾಗ ಸನಿಹದಲ್ಲೇ ಇದ್ದ `ದುರ್ಗಾ'ಎಂಬ ಕ್ಯಾಂಟೀನು ಸಿಕ್ಕಿತು. ಯಾಕೋ ಅಲ್ಲಿಯ ತಿಂಡಿಯೂ ನಮಗೆ ಇಷ್ಟವಾಯಿತು. ಕೊನೆಗೆ ಕಿಟ್ಟುವಿನ ಮಾತು ಹಾಗೂ ಎಲ್ಲರನ್ನೂ ಪರಿಚಯ ಮಾಡಿಕೊಳ್ಳುವ ಗುಣದಿಂದಾಗಿ ಆ ಹೊಟೆಲಿನ ಸಪ್ಲಾಯರ್ ಹಾಗೂ ಓನರ್ ನಮಗೆಲ್ಲ ಪರಿಚಯವಾದರು.
ಕಿಟ್ಟುವಿನ ಪರಿಚಯ ಮಾಡಿಕೊಳ್ಳುವ ಗುಣ ನಂಗಿಷ್ಟವಾಯಿತು. ಪಾವಸ್ಕರನ ಗೊಣಗಾಟದ ನಡುವೆಯೇ ನಾನೂ ಅವರನ್ನು ಪರಿಚಯ ಮಾಡಿಕೊಂಡೆ. ಪರಿಣಾಮ ಆ ಹೊಟೆಲಿನ ಓನರ್ರು ನಮ್ಮ ಬ್ರಹ್ಮಾವರದವರೆಂದು ತಿಳಿದುಬಂದು.. ಇಡೀ ಬಾಗೇವಾಡಿಯಲ್ಲಿ  ನಮಗೆ ಸಿಕ್ಕ ಏಕೈಕ ಮಲೆನಾಡಿನ ಸಂಬಂಧಿ ಊಟ ಇಲ್ಲಿ ಸಿಗುತ್ತಿತ್ತಾದ್ದರಿಂದ ನಮಗೆ ಈ ಹೊಟೆಲ್ ಅಚ್ಚುಮೆಚ್ಚಾಗಿತ್ತು.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ, ದಿ ಬಾಕ್ಸಿಂಗ್ ಡೇ, ದಿ ಬಾಕ್ಸಿಂಗ್ ಮ್ಯಾಚ್..)..

Monday, November 11, 2013

ಪ್ರೀತಿಗೊಂದು ಪ್ರೀತಿಯ ಪತ್ರ (ಪ್ರೇಮಪತ್ರ-7)

 ಪ್ರೀತಿಯ ಗೆಳತಿ
ಪ್ರೀತಿ

ನೀನಿಲ್ಲದೇ ನನಗೇನಿದೆ,
ಮನಸೆಲ್ಲ ನಿನ್ನಲ್ಲಿ ನೆಲೆಯಾಗಿದೆ..

ಹೌದು ಕಣೆ ಗೆಳತಿ, ನನ್ನ ಮನಸ್ಸೆಲ್ಲ ನಿನ್ನಲ್ಲಿ ನೆಲೆ ನಿಂತ್ಕೊಂಡು ಬಿಟ್ಟಿದೆ. ಅದು ನನ್ನೊಳಗಿಲ್ಲವೇ ಇಲ್ಲ. ನನ್ನ ಹೃದಯವೆಂಬ ಅಪಾರ್ಟ್ ಮೆಂಟು ನಿನ್ನ ನೋಡಿದ ತಕ್ಷಣ ಸೇಲಾಗಿ ಬಿಟ್ಟಿದೆ ಗೆಳತಿ..

ನಿನ್ನದೇ ನೆನಪು ದಿನವೂ ಮನದಲ್ಲಿ
ನೋಡುವಾ.. ಆಸೆಯು, ತುಂಬಿದೆ ನನ್ನಲಿ..

ನಾನು ಏನೇ ಮಾಡ್ಲಿ.. ಮಾಡ್ತಿರ್ಲಿ.., ಮಾಡದೇ ಕುಂತಿರಲಿ.. ನಂಗೆ ನಿನ್ನದೇ ನೆನಪು. ಹಗಲೂ, ಇರುಳೂ ನಿನ್ನದೇ ಧ್ಯಾನ.. ಎಂದೆಂದೆಗೂ ನಿನ್ನದೇ ಪ್ರಾಣ..
ನಾನು ನೀನು ಮಾತಾಡಿ ಅದೆಷ್ಟು ಸೆಕೆಂಡುಗಳಾದವು ಗೊತ್ತಾ..? ಬಹುಶ: 7000 ಸೆಕೆಂಡೋ, 10 ಸಾವಿರವೋ ಇರಬೇಕು.. ಗಂಟೆಗಳಲ್ಲಿ ಲೆಕ್ಖ ಹಾಕಬೇಕೆಂದರೆ 2 ತಾಸು ಕಳೆದಿದೆ ಎನ್ನಬಹುದಾ..? ಏಕಿಷ್ಟು ದೀರ್ಘ ಯಾತನೆ..? ಯಾಕೋ ಗೊತ್ತಿಲ್ಲ ಜಸ್ಟ್ ನಿನ್ನ ಬಳಿ ಮಾತಾಡಿದ್ದೇನೆ... ಮತ್ತೀಗ ನಿನ್ನ ನೆನಪು ಕಾಡಿ ಮನಸ್ಸೆಲ್ಲ ಒದ್ದೆ ಮುದ್ದೆ..

ಅರಿತೋ ಅರಿಯದೆ
ನೆನಪು ಮೂಡಲು
ವಿರಹವು ಕಾಡಿದೆ

ಹೌದೇ ಹುಡುಗಿ, ನೀನು ಸನಿಹವಿದ್ದರೆ ಮನದ ತುಂಬ ರೋಮಾಂಚನ.. ಅದೇ ನೀನು ನನ್ನಿಂದ ದೂರವಾದೆಯೆಂದರೆ ನಂಗೆ ಬಲು ಬೇಸರ.. ಮನಸ್ಸಿನ ತುಂಬ ಮಮ್ಮರ.. ಗೊತ್ತೇನೆ..
ನಾ ನಿಂಗಾಗಿ ಕಾಡಿದ್ದು, ಕಾಡಿಸಿದ್ದು, ಸುಳ್ಳೆ ಪಿಳ್ಳೆ ನಿನ್ನ ಬಳಿ ಕಿತ್ತಾಡಿದ್ದು, ಹುಸಿ ಜಗಳದ ಜೊತೆಗೆ ಮಾತನಾಡಿದ್ದು, ಕದ್ದು ಕದ್ದು ಕಣ್ಣಿನಲ್ಲೇ ಯುದ್ಧ ಮಾಡಿದ್ದು, ಸೊಕಾ ಸುಮ್ಮನೆ ಜಗಳ ಕಾದಿದ್ದು... ನೀನಿಲ್ಲದೇ ಇದ್ದಾಗ  ಪರಿತಪಿಸಿದ್ದು.. ನಾನು ನೀನು ಇಬ್ಬರೂ ಬಾಲ್ಕನಿ ಟಿಕೆಟ್ ಸಿಗದೇ ಗಾಂಧೀ ಕ್ಲಾಸಿನಲ್ಲಿ ಕುಳಿತು ಅದ್ಯಾವುದೋ ಅರ್ಥವೇ ಆಗದ ಪಿಚ್ಚರನ್ನು ತನ್ಮಯತೆಯಿಂದ ನೋಡಿದ್ದು, ನಾನು, ನೀನು ಬಸ್ಸಿನಲ್ಲಿ ಕುಂತಿದ್ದಾಗ ನಿಮ್ಮೂರಿನ ಫಿಟ್ಟಿಂಗ್ ಮಹಾನುಭಾವನೋರ್ವ ಕೆಕ್ಕರಿಸಿ ನೋಡಿ ನಿಮ್ಮನೆಯಲ್ಲಿ ಫಿಟ್ಟಿಂಗ್ ಇಟ್ಟದ್ದು, ಮರುದಿನವೇ ನಾನು ನಿಮ್ಮ ಮನೆಗೆ ಹಾಜರಾಗಿ ತಪ್ಪುಗಾಣಿಕೆಯೆಂಬಂತೆ ಮಾತಿನ ಮೋಡಿ ಹರಿಸಿದ್ದು.. ಕೊನೆಗೂ ಕಾಡುತ್ತಲೇ ಇದ್ದ ನಿನ್ನಪ್ಪನ ಕಾಟಕ್ಕೆ ಸೋತೆಕೊಂಯ್..ಎಂದಿದ್ದು... ಇವೆಲ್ಲ ಇನ್ನೂ ಹಸಿ-ಹಸಿಯಾಗಿ-ಹಸಿರಾಗಿ ಕಣ್ಣಮುಂದೆಯೇ ಇದೆ ಅಲ್ವಾ..?
ಈ ಪ್ರಕರಣದ ನಂತರವೇ ನಾನು ನಿಮ್ಮ ಮನೆಯ ಖಾಯಂ ಸದಸ್ಯ ಎನ್ನುವಂತಾದದ್ದು.. ಪೋನ್ ಮಾಡಿದಾಗೆಲ್ಲ ನಿನಗಿಂತ ನಿನ್ನಪ್ಪ, ನಿನ್ನಮ್ಮರೇ ಆತ್ಮೀಯವಾಗಿ ಮಾತನಾಡುತ್ತಿದ್ದರಲ್ಲ... ಅದೆಷ್ಟು ಆಪ್ತತೆ ಮಾರಾಯ್ತಿ ನಿಮ್ಮ ಮನೆಯಲ್ಲಿ.. ಇದೇ ಅನುಭವ ಬಹುಶಃ ನಿನಗೂ ನನ್ನ ಮನೆಯಲ್ಲಿ ಆಗಿರಬಹುದು ಅಲ್ವಾ..? ಈ ಮನೆಯವರೇ ಹೀಗೆ .. ಒಮ್ಮೆ ಇಷ್ಟವಾದರು ಅಂದರೆ ತಮ್ಮವರನ್ನಾಗಿ ಮಾಡಿಕೊಂಡು ಬಿಡುತ್ತಾರೆ.. ಬಿಟ್ಟಿರಲಾಗದಷ್ಟು ಒಟ್ಟಾಗುತ್ತಾರೆ...
ಆಗಾಗ ಒಗಟಾಗುತ್ತಾರೆ..
ನಾ ನಿಂಗೆ ಬರೀತಾ ಇರೋದು ಇದು ಎಷ್ಟನೇ ಪತ್ರ..? ಲೆಕ್ಖವೇ ಇಲ್ಲ. ಆದರೆ ನೀನು ಇದಕ್ಕುತ್ತರವಾಗಿ ಒಂದಾದರೂ ಪತ್ರ ಬರೆದ್ಯಾ? ಊಹೂ.. ಇಲ್ಲವೇ ಇಲ್ಲ.. ಯಾಕೆ..?

ಬಾ ಬಾರೇ ಓ ಗೆಳತಿ,
ಜೀವನ ಸಂಗಾತಿ...

ಹೌದೇ ಹುಡುಗಿ,... ನಿನ್ನನ್ನು ಜೀವನ ಸಂಗಾತಿ ಅಂದ್ಕೊಂಡು ಹಲವು ಕಾಲವಾಯ್ತು.. ನೀನೆ ಕಣೆ ನನ್ನ ಮರಳುಗಾಡಿನಂತಹ ಬದುಕಿಗೆ ದಾಹವಿಂಗಿಸಿ ಗುಟುಕು ನೀರು ಕೊಟ್ಟು ಕೊಂಚ ಕ್ಷಣವಾದರೂ ಬದುಕುವಂತೆ ಮಾಡುವ ಓಯಸ್ಸಿಸ್ಸು..
ಅಲ್ವೇ... ಪ್ರತಿದಿನ ಕಣ್ಣ ಮುಚ್ಚಿದ ತಕ್ಷಣ ರೆಪ್ಪೆಯೆಂಬ ಪರದೆಯ ಮೇಲೆ ಅದ್ಯಾರು ಪ್ರೊಜೆಕ್ಟರ್ ಹಾಯಿಸುತ್ತಾರೋ ಗೊತ್ತಿಲ್ಲ.. ನೀನೇ ಕಾಣುತ್ತೀಯಾ... ನನ್ನ ಕನಸಿನ ಸಿನೆಮಾಗಳಿಗೆಲ್ಲ ನೀನೇ ಹೀರೋ.. ಹೀರೋಯಿನ್ನು ಎಲ್ಲಾ ಆಗಿಬಿಡುತ್ತೀಯಾ.. ಒಮ್ಮೆ ಆಕ್ಷನ್ನು, ಮತ್ತೊಮ್ಮೆ ಕಾಮಿಡಿ ಮಗದೊಮ್ಮೆ ರೋಮ್ಯಾನ್ಸು... ಅಪ್ಪಿತಪ್ಪಿಯೂ ನೀನು ನನ್ನ ಕನಸಿನಲ್ಲಿ ಐಟಂ ಡ್ಯಾನ್ಸರ್ ಆಗಿ ಬರಲಿಲ್ಲ..ಎಂದರೆ ನೀನು ನಂಬಲೇ ಬೇಕು.. ನನ್ನ ಮನಸಿನ್ನೂ ಅಷ್ಟು ಹಾಳಾಗಿಲ್ಲ ಬಿಡು... ನಾನು ಕಾಣುವ ಹಗಲಿರುಳಿನ ಕನಸಿನ ತುಂಬೆಲ್ಲ ನಿನ್ನದೇ ಚಿತ್ರಪಟ.. ನನ್ನ ಮನಸ್ಸು ಗಾಳಿಪಟ..
ನಿಂಗೊಂದಿನ ಪಾರ್ಕಿನಲ್ಲಿ ಕುಂತಾಗ ನಾನು ನಿನ್ನ ಕಿವಿಯಲ್ಲಿ

ಕಲ್ಲಿರಲಿ ಮುಳ್ಳೆ ಇರಲಿ
ಜೊತೆಗೂಡಿ ನಾ ಬರುವೆ
ನೀನಡಿಯ ಇಡುವೆಡೆಯಲ್ಲಿ
ಒಲವಿನ ಹೂ ಹಾಸುವೆ...

ಅಂತ ಪಿಸುಗುಟ್ಟಿದ್ದೆ.. ನೀನು ದೊಡ್ಡದಾಗಿ ಹೋ ಹೋ ಹೋ.. ಎಂದು ಅಕ್ಕಪಕ್ಕದಲ್ಲಿದ್ದವರೆಲ್ಲ ನಮ್ಮನ್ನೇ ನೋಡುವಂತೆ ನಕ್ಕಿದ್ದೆ... ಅಷ್ಟಲ್ಲದೇ ಸರಿ ನಾನೀಗ ನಡ್ಕೊಂಡು ಹೋಗ್ತೀನಿ.. ಹೂ ಹಾಸು ಎಂದು ಹೇಳಿದ್ದೆ... ನೆನಪಿದೆಯಾ..?
ಬದುಕೊಂತರ ಪ್ರೀತಿಯ ಸ, ರಿ, ಗ, ಮ, ಪ, ದ, ನಿ, ಸ ಕಣೆ. ಸಂಗೀತದ ಥರಾ.. ಕಷ್ಟಪಟ್ಟಾದರೂ ಕಲೀಬೇಕು.. ತಾಳತಪ್ಪದಂತೆ ನಡೀಬೇಕು. ಸಂಪೂರ್ಣ ಕಲಿತ ನಂತರ ಅದರ ಮಜವೇ ಬೇರೆ.. ಎಷ್ಟೇ ಕಲಿತರೂ ಇನ್ನೂ ಒಂದು ಸ್ವಲ್ಪ ಏನನ್ನಾದರೂ ಬಾಕಿ ಇಟ್ಟುಕೊಳ್ಳಬೇಕು...
ನೀ ನಂಜೊತೆ ನಗೆ ಹೂವಾಗಿ ಬಾ. ನಾನಾಗ ಬದುಕನ್ನು ಚನ್ನಾಗಿ ಬದುಕಬಲ್ಲೆ.. ಹಾಂ.. ನಂಗೀಗ ನಿದ್ದೆ ಬರ್ತಾ ಇದೆ.. ಮತ್ತೆ ನನ್ನ ಕಣ್ಣಿನ ಪರದೆ ಮೇಲೆ ತಪ್ಪದೆ ಬಾ ಮಾರಾಯ್ತಿ.. ನಾಳೆ ಜೂ ಸರ್ಕಲ್ಲಿನ ರಾಜಸ್ತಾನಿ ಹುಡುಗನ ಬಳಿ ಪಾನಿಪುರಿ ಕೊಡಿಸ್ತೇನೆ.. ಮತ್ತೆ ಬರ್ತೀಯಲ್ಲಾ..?

ಇಂತಿ ನಿನ್ನವ


ಜೀವನ್

(ಬರೆದಿದ್ದು 29-03-2008ರಲ್ಲಿ ದಂಟಕಲ್ಲಿನಲ್ಲಿ)..


Sunday, November 10, 2013

ನಿನ್ನ ಪ್ರೇಮಿ (ಗಝಲ್)

ನೀನು ಇರುಳು ನೋಡಿ ನಗುವ ಚಂದ್ರಮುಖಿ|
ನಾನು ನಿನ್ನ ಸುತ್ತುವ ಪ್ರೇಮಿ ||2||

ನೀನು ಉರಿಯೋ ಒಂದು ಹಣತೆ|
ನಾನು ಹಣತೆಯೊಳಗಣ ತೈಲ ||4||

ನೀನು ಸವಿ ಸವಿಯ ಸಕ್ಕರೆ
ನಾನು ನಿನ್ನ ಮುತ್ತುವ ಇರುವೆ ||6||

ನೀನು ಉಲಿದಾಡುವ ಕೋಗಿಲೆ|
ನಾನು ನಿನಗಾಸರೆ ನಿಲ್ಲೋ ಮಾಮರ  ||8||

ನೀನು ಬೆಳೆಯ ಬಯಸೋ ಬಳ್ಳಿ
ನಾನು ನಿಂತು ಕರೆವ ಹೆಮ್ಮರ ||10||

ನೀನು ಬೀಸಿ ಬರುವ ತಂಗಾಳಿಯಲೆ|
ನಾನು ನಿಂತು ನಲಿವ ದಡದ ಬಂಡೆ ||12||

ಕೊನೆಯಲ್ಲಿ, ನೀನು ನಗುವ ತಾವರೆ|
ನಾನು ನಿನ್ನ ಬಯಸೋ ಪ್ರೇಮಿ ||14||

(ಬರೆದಿದ್ದು ದಂಟಕಲ್ಲಿನಲ್ಲಿ 16-11-2006ರಂದು)

Saturday, November 9, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 3

                  ಇನ್ನುಳಿದಂತೆ ನಮ್ಮ ಮಹಿಳಾ ಮಣಿಯರ ಕಡೆಗೆ ದೃಷ್ಟಿ ಹರಿಸೋಣ.. ಬಿ ಅಲರ್ಟ್..
ಅವರ ತಂಡದ ನಾಯಕಿ ನನ್ನದೇ ಕ್ಲಾಸಿನ ಪೂರ್ಣಿಮಾ ಟಿ. ಹೆಗಡೆ.. ಸೌಮ್ಯ ಸ್ವಭಾವದಾಕೆ.ಸಿಟ್ಟು ಬಂದು ತಿರುಗಿಬಿದ್ದಳು ಎಂದರೆ ಮುಗಿಯಿತು.. ತಕ್ಕ ಮಟ್ಟಿಗೆ  ಹಾಸ್ಯ ಕೂಡ ಕೂಡ ಮಾಡಬಲ್ಲಂತವಳು.
                 ಇನ್ನೊಬ್ಬಳು ಪೂರ್ಣಿಮಾ ಜಿ. ಹೆಗಡೆ. ಈಕೆಯಂತೂ (ಆಗಿನ ದಿನಗಳಲ್ಲಿ) ಒಮ್ಮೆ ಕಿವಿಗೆ ಮೋಬೈಲ್ ಇಟ್ಟರೆ ಮುಗಿಯಿತು. ಒಂದೋ ಕರೆನ್ಸಿ ಖಾಲಿಯಾಗಬೇಕು.. ಅಥವಾ ಎದುರಿಗಿದ್ದವರು ಹುಚ್ಚು ಹಿಡಿದುಬಿಡಬೇಕು.. ತಕ್ಕಮಟ್ಟಿಗೆ ಮುದ್ದು-ಮೊದ್ದು ಎಲ್ಲವೂ ಹೌದು. ಬಿಂದಾಸ್ ಸ್ವಭಾವ..
               ಮತ್ತೊಬ್ಬಾಕೆ ಪವಿತ್ರಾ ಹೆಗಡೆ. 2nd B.Aಯ ಹುಡುಗಿ. ಮುಗ್ದೆ ಅನ್ನುವುದಕ್ಕಿಂತ ಮಿಗಿಲಾಗಿ ಏನೂ ಅರಿಯದವಳು ಅಂದರೆ ಚೆನ್ನ.. ಆಕೆಗೋ ಮಿಸ್ ಸಂಜನಾ ಗಾಂಧಿ ಉರುಫ್ ಪೂಜಾ ಗಾಂಧಿ ಎಂದೇ ನಾನು ಕರೆಯುತ್ತಿದ್ದುದು. ತಕ್ಕಮಟ್ಟಿಗೆ ಹಾಗೆಯೂ ಕಾಣುತ್ತಾಳೆನ್ನಿ..
ಕೊನೆಯದಾಗಿ ಲೇಡೀಸ್ ತಂಡದ ಮತ್ತೊಬ್ಬ ಸದಸ್ಯೆ ತೃಪ್ತಿ ಹೆಗಡೆ. ನೋಡಲಿಕ್ಕೆ ಮಾತ್ರ ಕುಳ್ಳು ಹಾಗೂ ಸೈಲೆಂಟು... ಬಾಯಿ ಬಿಟ್ಟರೆ ಮಾತ್ರ ಆಟಂಬಾಂಬು..ಲಕ್ಷ್ಮಿ ಧಡಲ್ ಅಲ್ಲಲ್ಲಲ್ಲಲ್ಲ `ತೃಪ್ತಿ ದಢಲ್'.. ಬಹುಶಃ ಈ tourಗೆ, ಖುಷಿಗೆ ಈಕೆಯ ಕಾಣಿಕೆಯೂ ಬಹಳ ಹೆಚ್ಚಿದೆ ಅಂದರೆ ತಪ್ಪಿಲ್ಲ.. ಆದರೆ ಇಬ್ಬರು ಒಂದೇ ರೀತಿಯ ಗುಣದವರಲ್ಲಿ ಹೊಂದಾಣಿ ಇರುವುದಿಲ್ಲ ಎಂಬಂತೆ ಪಯಣದ ಆರಂಭದಿಂದ ಕೊನೆಯವರೆಗೂ ಮೆರೆದಿದ್ದು ತೃಪ್ತಿ-ಕೃಷ್ಣಮೂರ್ತಿ ಅವರ ಜಗಳ-ವಾದ-ಗಲಾಟೆ-ಮಾತುಕತೆ-ಕಾಲೆಳೆಯುವಿಕೆ.. ಇತ್ಯಾದಿ ಇತ್ಯಾದಿ. ಟೂರಿನುದ್ದಕ್ಕೂ ಇವರನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ..! ಯಾರಿಗೂ..

                               ಮತ್ತೆ ಮರಳಿ ಬಸ್ಸಿನ ಬಗ್ಗೆ ಹೇಳುತ್ತೇನೆ.. ಇನ್ನೂ ಮುಗಿದಿಲ್ಲ  ನೋಡಿ.. ಹುಬ್ಬಳ್ಳಿಯಲ್ಲಿ ರಾಣಿಚನ್ನಮ್ಮ ಟೂರ್ಸ್ & ಟ್ರಾವೆಲ್ಸಿನ ಖಾಲಿ ಬಸ್ಸಿನಲ್ಲಿ ಕುಳಿತ ನಮಗೆ ಹೊತ್ತು ಕಳೆಯಲು ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ.  ಬಸ್ಸಿನೊಳಗೆ ಇದ್ದ ವೀಡಿಯೋ ಪ್ಲೇಯರ್ರಿನಲ್ಲಿ ಯಾವುದೋ ತಲೆನೋವು ತರುವಂತಕ ಭೀಖರ ಕನ್ನಡ ಸಿನೆಮಾ ಹಾಕಿದ್ದರು.. ಬಹುಶಃ ಯಾವುದೋ ಹಾರರ್ ಸಿನೆಮಾ ಇರಬೇಕು.. ಅದರಲ್ಲಿನ ಹಾರರ್ ಸನ್ನಿವೇಶಗಳನ್ನು ನೋಡಿದರೆ ಭಯದ ಬದಲಾಗಿ ನಗು ಉಕ್ಕುಕ್ಕಿ ಬರುವಂತಿದ್ದರೂ ಚಿತ್ರ ನೋಡಲು ಆಗಲಿಲ್ಲ. ಹೀಗಾಗಿ ನಾವು ಬಸ್ಸಿನ ಕೊನೆಯ ಸೀಟಿನ ಸರದಾರ/ಸರದಾರಿಣಿಯರು ಸೇರಿ `ಇಸಪೀಟ್' ಆಟ ಶುರುಹಚ್ಚಿಕೊಂಡೆವು. ಅದೂ ಸ್ವಲ್ಪ ಸಮಯದಲ್ಲಿಯೇ ಬೇಸರವನ್ನು ತಂದಿತು. ಅಂತ್ಯಾಕ್ಷರಿಯನ್ನು ಹೇಳಿದೆವು. ಅದೂ ಬೋರಾಯ್ತು.. ಕೊನೆಗೆ ಸುದ್ದಿಯನ್ನೂ ಹೇಳಿದೆವು.. ನಮ್ಮ ಸುದ್ದಿಯ ಭರಕ್ಕೆ ಅನೇಕರು ಬಲಿಯಾದರು. ಆದರೆ ಕಿಟ್ಟು-ತೃಪ್ತಿಯರ ವಾದದ ಕಾರಣದಿಂದಾಗಿ ಅದೂ ಕೆಲ ಸಮಯಗಳಲ್ಲಿ ಬೇಸರವನ್ನು ತಂದಿತು.
                     ಈ ಮದ್ಯದಲ್ಲಿಯೇ nature lover ಆದ ನಾನು ದಾರಿಯಲ್ಲಿ ಸಿಗುವ ಊರುಗಳ ಬೋರ್ಡುಗಳನ್ನೆಲ್ಲ ಕುತೂಹಲದಿಂದ ನೋಡಲು ಆರಂಭಿಸಿದ್ದೆ. ನವಲಗುಂದ-ನರಗುಂದ-ಕಿಲಾರ-ಕಲ್ಲೂರು.. ಅದೆಷ್ಟೋ ಉದ್ದುದ್ದದ ಮಜ ಮಜವಾದ ಹೆಸರುಗಳು.. ಅಗಲಗಲ ಊರುಗಳು.. ಊರಿನ ಹೊಟ್ಟೆಯನ್ನು ಸೀಳಿದಂತೆ ಹಾದು ಹೋದ ಹುಬ್ಬಳ್ಳಿ-ಬಿಜಾಪುರ ರಾಷ್ಟ್ರೀಯ ಹೆದ್ದಾರಿ. ಹಳ್ಳಿಗಳಲ್ಲೆಲ್ಲೋ ಬಸ್ಸು ನಿಲ್ಲುತ್ತಿದ್ದಷ್ಟು ಹೊತ್ತು ಕಲರವ. ಉಳಿದ ಸಮಯದಲ್ಲಿ ಬಸ್ಸಿನ ವಂಯ್ಯೋ ಸದ್ದು. ಟೈಂ ಕೀಪ್ ಮಾಡುವ ಕಾರಣದಿಂದ ಬಸ್ಸನ್ನು ಅದರ ಚಾಲಕ ವೇಗದೂತವಾಗಿ ಚಾಲನೆ ಮಾಡುತ್ತಿದ್ದ. ಬಸ್ಸಿನ ಅಕ್ಕಪಕ್ಕ ವೀಕ್ಷಣೆ ಮಾಡಿದರಂತೂ ಕಣ್ಣ ಬಿಂಬದ ದೃಷ್ಟಿ ಹರಿಯುವವರೆಗೂ ಬಯಲು-ಹೊಲಗಳೇ ಕಾಣುತ್ತಿದ್ದವು. ಸೂರ್ಯಕಾಂತಿಯ ಸೊಬಗು, ಹತ್ತಿ ಧಾನ್ಯಗಳ ಬೆಡಗು, ಬೆರಗು. ಕಬ್ಬಿನ ಗದ್ದೆಯ ಮೆರಗು, ನಡುನಡುವೆಯೆಲ್ಲೋ ಭತ್ತದ ಬಣವೆಗಳು, ಮನೆಗಳು, ಕೆರೆಗಳು, ಚಿಕ್ಕ ಚಿಕ್ಕ ಗುಡ್ಡಗಳು, ಬೋನ್ಸಾಯ್ ನಂತಹ ಕುಬ್ಜ ಮರಗಳು, ನಡು ನಡುವೆ ಸಿಗುತ್ತಿದ್ದ ನದಿಗಳು, ಕೆಲವು ಬತ್ತಿದ್ದವು. ಜೊತೆ ಜೊತೆಗೆ ವಿಶೇಷ ಎನ್ನಿಸಿದ್ದು ಬಿಸಿಲ ಬೇಗೆಯ ದಾರಿಯಲ್ಲಿ ಸಾಗುತ್ತಿದ್ದಂತೆ ಹೆದ್ದಾರಿ ಅಕ್ಕಪಕ್ಕದಲ್ಲಿ ನೆಟ್ಟಿದ್ದ ಸಾಲು ಸಾಲು ಮರಗಳು. ಇವುಗಳನ್ನೇ ಎಷ್ಟಂತ ನೋಡೋದು ಸ್ವಾಮಿ.. ನೋಡಿದ್ದನ್ನೇ ನೋಡಿದರೆ ಕೆಲವೊಮ್ಮೆ ಇಷ್ಟವಾಗುತ್ತದೆ ನಿಜ. ಆದರೆ ಹಲವು ಸಾರಿ ಬೇಸರ ಬಂದು ಬಿಡುತ್ತವೆ.ನನಗೂ ಹಾಗೆ ಆಯ್ತು.. ನೋಡಿ ನೋಡಿ ಬೇಸರ ಬಂದೇ ಬಿಟ್ಟಿತು. ಅದಕ್ಕೆ ಇನ್ನಷ್ಟು ಇಂಬೆನ್ನುವಂತೆ ಬಿಸಿಲಿನ ಕಾವು ಹೆಚ್ಚಾಯಿತು. ಇದುವರೆಗೂ ಗ್ಯಾಪ್ ಅಥವಾ ಬ್ರೇಕ್ ಇಲ್ಲದಂತೆ ವಟಗುಟ್ಟುತ್ತಿದ್ದ ಮಹಿಳಾಮಣಿಗಳು ಸುಸ್ತಾಗಿ, ಉತ್ಸಾಹ ರಹಿತರಾಗಿ ಕುಳಿತಿದ್ದರು. ವಿಚಿತ್ರವೋ, ವಿಶಿಷ್ಟವೋ, ಅಥವಾ ಇನ್ಯಾವುದೋ.. ಪೂರ್ಣಿಮಾ ಬೆಂಗ್ರೆಯ ಬೊಬೈಲಿಗೂ ಸುಸ್ತಾಗಿತ್ತೋ ಏನೋ ಗೊತ್ತಿಲ್ಲ.. ಬಹು ಹೊತ್ತಿನ ನಂತರ ಅದೂ ಸುಮ್ಮನಿತ್ತು.

ಬಸ್ಸು ಓಡುತ್ತಲೇ ಇತ್ತು.. ಅದೆಲ್ಲೋ ನಡುವೆ ಬಸ್ಸಿನ ಡ್ರೈವರ್ ಕೂಡ ಬದಲಾದ. ಪರಿಣಾಮವೋ ಎಂಬಂತೆ ಬಸ್ಸಿನ ವೇಗ ಇಮ್ಮಡಿಸಿತು. ಬಸ್ಸಿನಲ್ಲಿ ಕುಳಿತಿದ್ದ ನಮ್ಮ ತೂಕಡಿಕೆ ಮುಮ್ಮಡಿಸಿತು.  ಬಸ್ಸಿನ ತುಂಬ ಇದ್ದವರೆಲ್ಲ ಬಹುತೇಕ ಕುಂಭಕರ್ಣ ಸಿನಿಮಾದ ಹೀರೋಗಳೇ ಆಗಿದ್ದರು. ಇದ್ದವರ ಪೈಕಿ ನನಗೆ ಹಾಗೂ ಕಿಟ್ಟುವಿಗೆ ಮಾಡಲು ಏನೂ ಕೆಲಸವಿರಲಿಲ್ಲ.  ಹಾಗಾಗಿ ಎದ್ದು ಹೋಗಿ ಬಸ್ಸಿನ ಕಂಡಕ್ಟರ್ (ಏಜೆಂಟ್) ಬಳಿ ಅದೂ ಇದೂ ಮಾತಿಗೆ ಪ್ರಾರಂಭಿಸಿದೆವು.. ಕೊನೆಗೆ ಡ್ರೈವರ್ರನ್ನೂ ಮಾತಿಗೆ ಎಳೆದೆವು..
ನನಗೇಕೋ ಬಸ್ಸಿನ ಬಾಗಿಲಲ್ಲಿ ನಿಲ್ಲುವ ಅವ್ಯಕ್ತ ಆಸೆಯುಂಟಾಗಿ ಹೋಗಿ ನಿಂತೆ.. ಆಹ್... ಬೀಸುವ ಗಾಳಿಯ ರಭಸಕ್ಕೆ ಮೈಯೊಡ್ಡಿ ನಿಂತರೆ ಏನು ಆನಂದ.. ಅಂತೂ ಬಹಳ ಖುಷಿಯೇ ಲಭಿಸಿತು ಇದರಿಂದ.. ಈ ನಡುವೆ ಮತ್ತೆ ಉತ್ಸಹವನ್ನು ಗಳಿಸಿಕೊಂಡ ಕಿಟ್ಟು ಮತ್ತೆ ಮಹಿಳಾ ಮಣಿಯರ ಜೊತೆಗೆ ಕಾಡು ಹರಟೆ ಹೊಡೆಯಲು ಹೊರಟುಹೋದ.. ನನಗೋ ಬಸ್ಸಿನ ಕಂಡಕ್ಟರ್ ಬಳಿ ಜೊತೆಗೆ ಮಾತನಾಡುತ್ತಾ, ಬಸ್ಸಿನ ಬಾಗಿಲಲ್ಲಿ ನಿಂತು ಪಯಣಿಸುವುದು ಖುಷಿ ಕೊಟ್ಟಿತ್ತು.. ಪ್ರತಿ ಊರು-ನದಿ ಇವೆಲ್ಲವುಗಳಿಗೂ ಆತನಿಂದ live ಕಾಮೆಂಟರಿ ಕೇಳುತ್ತಿದ್ದೆ.. ವಿಚಿತ್ರವೋ, ವಿಶಿಷ್ಟವೋ.. ಪ್ರತಿಯೊಂದು ಊರಿನ ಇತಿಹಾಸದ ಸಮೇತ ಆತ ಹೇಳುತ್ತಿದ್ದ ಪರಿಗೆ ನಾನು ಬೆರಗಾಗಿದ್ದೆ.. ಇಂವ ಬಸ್ಸಿನ ಕ್ಲೀನರ್ರಾ..? ಏಜೆಂಟನಾ..? ಅಥವಾ ಯಾವುದೋ ಇತಿಹಾಸತಜ್ಞನಾ..? ಆತ ನೀಡುತ್ತಿದ್ದ ಮಾಹಿತಿಗಳು ನನ್ನನ್ನು ಗೊಂದಲಕ್ಕೆ ತಳ್ಳಿದ್ದಂತೂ ಸತ್ಯ. ಮಧ್ಯದಲ್ಲೆಲ್ಲೋ ಮಲಪ್ರಭೆಯೂ ಮರೆಯಾಗಿದ್ದಳು.. ಮಾತಿನ ಭರದಲ್ಲಿ ನನಗದು ಅರಿವೇ ಆಗಿರಲಿಲ್ಲ..

                                   ಹಾಗೆ ನೋಡುತ್ತಿದ್ದೆ.. ಥಟ್ಟನೆ ಒಂದು ಬಹುದೊಡ್ಡ ಸಾಗರ ನಮ್ಮೆದುರು ಕಾಣಿಸಿತು. ಅರೇ ಇದೇನಿದು ಬಯಲ ನಾಡಿನಲ್ಲಿ ಮಹಾಸಾಗರವೇ..? ಯಾಕೋ ನನ್ನ ಕವಿ ಮನಸ್ಸು ಜೀವತಳೆಯುತ್ತಿತ್ತು.. ಇಂತ ಬೆಂಗಾಡಿನಲ್ಲಿ ಸಮುದ್ರ ಎಲ್ಲಿಂದ ಬಂತು..? ಎಂದುಕೊಂಡೆ.. ಉದ್ದಾನುದ್ದ ಕಣ್ಣು ಹರಿಯುವವರೆಗೆ ನೋಡಿದರೂ ಬರೀ ನೀರು.. ನೀರು.. ನೀರು.. ನಡುವೆ ಉದ್ದಾನುದ್ದದ ಸೇತುವೆ..  ಸೇತುವೆ ಮೇಲೆ ನಮ್ಮ ವಾಹನದ ಒಂಟೀ ಪಯಣ.. 
ಇದೇನಿದು ಎಂದು ನಾನು ನನ್ನ ಪಕ್ಕದಲ್ಲಿದ್ದ ಬಸ್ಸಿನ ಏಜೆಂಟ್ ಬಳಿ ಕೇಳಿದೆ. ಅದಕ್ಕವನು ಅದು ಕೃಷ್ಣೆಯ ಅಣೆಕಟ್ಟಿನ ಹಿನ್ನೀರಿನ ಪ್ರದೇಶ ಎಂದು ಹೇಳಿದ. ಕೃಷ್ಣೆ ಮುಳುಗಿಸಿದ ಪ್ರದೇಶದಲ್ಲಿ ನಡುವೆ ನೇರಾನೇರವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು.. ಆಲಮಟ್ಟಿಯ ಅಗಾಧತೆ ವಿಸ್ಮಯವನ್ನು ಮೂಡಿಸಿತು.. ಅಷ್ಟರ ಜೊತೆಗೆ ಇದ್ದಕ್ಕಿದ್ದಂತೆ  ಈ ಸೇತುವೆ ಮುರಿದುಬಿದ್ದರೆ ಏನು ಮಾಡೋದು.. ದೇವಾ... ಮನಸ್ಸಿನಲ್ಲಿ ಯೋಚಿಸಿದಂತೆ ಭಯ ಉಂಟಾಯಿತು.. ಸೇತುವೆಯ ಉದ್ದ ಸರಿಸುಮಾರು 3 ಕಿಲೋಮೀಟರ್ ಅಂತೆ.. ಅಬ್ಬಾ ಅದೆಷ್ಟು ಉದ್ದ..? 3*1000 ಮೀಟರ್ =3000 ಮೀಟರ್ ಎಂದು ಹಲವಾರು ನಮೂನಿಯ ಲೆಕ್ಖವನ್ನೆಲ್ಲ ಮಾಡಿದೆ.
ಬಸ್ಸಿನಲ್ಲಿದ್ದ ಹಲವರು 1 ರುಪಾಯ್, 2 ರುಪಾಯ್, 5 ರು. ಕೆಲವರು 10 ರು. ಎಂಬಂತೆ ತೆಗೆದು ತೆಗೆದು ಆ ನೀರಿಗೆ ತೂರುತ್ತಿದ್ದರು. ಹಾಗೆ ಮಾಡಿದರೆ ಒಳ್ಳೆಯದಾಗುತ್ತದಂತೆ.. ಕೃಷ್ಣೆ ತೃಪ್ತಳಾಗುತ್ತಾಳಂತೆ.. ನಾವು ಮಾಡುವ ಪಯಣ ಸುರಳೀತವಾಗಿ ನಡೆಯುತ್ತದಂತೆ.. ಯಾವುದೇ ಅಡ್ಡಿ ಆತಂಕ ಬರದಂತೆ ಕೃಷ್ಣೆ ಕಾಪಾಡುತ್ತಾಳಂತೆ.. ಹಾಗಂತ ಅವರ ನಂಬಿಕೆಯೆಂದು ಏಜೆಂಟ್ ಹೇಳಿದ.. ನಾನೂ ಹಾಗೆ ಮಾಡಿದೆ...

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ : ಗುಮ್ಮಟ ನಗರಿ, ಬಾಗೇವಾಡಿ ಹಾಗೂ ಸೊಳ್ಳೆಯ ರೂಮು)

Friday, November 8, 2013

ಹನಿ-ಮಿನಿ ಚುಟುಕಗಳು

66.ವ(ವೇ)ದನೆ

ಹೇ ಚಂದಿರ ವದನೆ
ನೀ ಎದುರಿದ್ದಾಗ ನನ್ನದು
ನಗುವೆ ನಯನೆ |
ದೂರವಾದರೆ ಮಾತ್ರ
ಹೇಳಿಕೊಳ್ಳಲಾಗದ ವೇದನೆ ||


67.ಚಿನ್ಹೆ

ಮಳೆ ಪ್ರೀತಿಯ
ಚಿನ್ಹೆಯಾದರೆ
ಸಂಸಾರದ್ದು
ಗುಡುಗು-ಸಿಡಿಲು
ಒಮ್ಮೊಮ್ಮೆ ಮಿಂಚು|
ಯಾವಾಗಲೂ ಪ್ರವಾಹ ||

68.ತಮ್ಮ

ಎಂತ ವಿಚಿತ್ರ ಅಲ್ವಾ |
ಬಿದಿರಿನ ತಮ್ಮ
ದೂರ್ವೆಯಂತೆ ||

69.ಕಾರಣ

ನೋಡೆ ಸಖಿ
ಚಂದಿರ ಅಳುತ್ತಿದ್ದಾನೆ..|
ಯಾಕಂದರೆ ಅಲ್ಲಿಗೂ
ಮಾನವ ಕಾಲಿಟ್ಟಿದ್ದಾನೆ ||

70.ನಗು way

ನಗುವಿಗೆ ಅದೆಷ್ಟು ತಾಕತ್ತು..
ನಗಿಸಿ-ನಗಿಸಿ ಸುಸ್ತು ಮಾಡಿ
ಕೊನೆಗೊಮ್ಮೆ ಕಣ್ಣಲ್ಲಿ
ನೀರನ್ನೂ ತರಿಸಿಬಿಡುತ್ತೆ