Thursday, November 29, 2012

ಕನಸಿನ ಪ್ರಶ್ನೆಗೆ ಉತ್ತರವಾಗಿ : ಪ್ರೇಮ ಪತ್ರ-2

ಪ್ರೇಮ ಪತ್ರ-2

ಕನಸಿನ ಪ್ರಶ್ನೆಗೆ ಉತ್ತರವಾಗಿ


ಒಲವಿನ ಗೆಳತಿ..,
    ನೀನ್ಯಾಕೆ ನನ್ನ ಮನಸ್ಸನ್ನು ಈ ಪರಿಯಲ್ಲಿ ಆವರಿಸಿದ್ದೀಯಾ? ಅದ್ಯಾಕೆ ನೀನು ನನ್ನೆದೆಯಾಳದ ಕೋಟೆಯೊಳಗೆ ಅವಿತುಕೊಂಡು ಹಗಲಿರುಳೂ ಮನದ ತುಂಬ ಪರಿತಾಪ ಮೂಡುವಂತೆ ಮಾಡುತ್ತೀಯಾ? ಬೆಳಗ್ಗಿನಿಂದ ಸಂಜೆಯ ತನಕ ಮಾಡಬಹುದಾಗಿದ್ದ ಎಲ್ಲ ಕೆಲವನ್ನೂ ಬದಿಗೊತ್ತಿ ಮಾತಾಡಿದ್ದು, ಕಾಡು ಹರಟೆ ಹೊಡೆದಿದ್ದು ನಿನಗಿನ್ನೂ ಸಾಕು ಎನ್ನಿಸಲಿಲ್ಲವೇ..? ಮತ್ಯಾಕೆ ನೀನು ನನ್ನ ಕನಸಲ್ಲಿ ಬಂದು ಮತ್ತೆ ಮತ್ತೆ ತಟ್ಟಿ ತಟ್ಟಿ ಎಬ್ಬಿಸುತ್ತೀಯಾ..? ಪದೇ ಪದೆ ಕನವರಿಸುವಂತೆ ಮಾಡುತ್ತೀಯಾ..?
    ನಿನ್ನೆ ಏನಾಯ್ತು ಗೊತ್ತಾ..? ಬೆಳಿಗ್ಗೆ ಎದ್ದ ಕೂಡಲೇ ಕನ್ನಡಿಯೊಳಗೆ ಇಣುಕಿದೆ. ಮುಖದ ಮೇಲೆ ಹಸಿ ಹಸಿ ಮೊಡವೆ. ಹಣ್ಣಾಗುವ ಲಕ್ಷಣಗಳನ್ನು ತೋರಿಸ್ತಾ ಇದೆ.! ಆ ತಕ್ಷಣ ನನಗೆ ಸುದೀಪನ `ಮೈ ಆಟೋಗ್ರಾಫ್' ಸಿನಹೆಮಾದಲ್ಲಿ ಆತನ ತಾಯಿ ಅವನ ಬಳಿ `ನಿನ್ನ ಮೇಲೆ ಯಾವುದೋ ಹುಡುಗಿಯ ಕಣ್ಣು ಬಿದ್ದಿರಬೇಕು' ಎಂದು ಹೇಳಿದ ಡೈಲಾಗ್ ನೆನಪಾಯ್ತು. ನನ್ನ ಮುಖದ ಮೇಲೆ ಎದ್ದಿರುವ ಮೊಡವೆಗೆ ಒಡತಿ ನೀನೇ ಬಿಡು. ಅದರಲ್ಲಿ ಎರಡು ಮಾತಿಲ್ಲ.
    ಹೇಯ್ ಮರೆತೇ ಬಿಟ್ಟಿದ್ದೆ ನೋಡು.. ನಾನು ಕೊಡಿಸಿದ್ನಲ್ಲಾ.. ಕ್ರೀಂ ಕಲರಿನ ಟೆಡ್ಡಿ ಬೇರ್. ನಿನ್ನ ಬೆಚ್ಚನೆಯ ತಬ್ಬುಗೆಯಲ್ಲಿ ಹಿತವಾಗಿ ಮಲಗಿದೆಯೇನೋ ಅಲ್ವಾ? ಏನು..? ಇನ್ನೂ ಮಲಗಿಲ್ವಾ? ಅದೂ ಕೂಡ ನೆನಪಿನ ಊಟೆಯಲ್ಲಿ ಮಿಂದೇಳ್ತಾ ಇರಬಹುದು ಬಿಡು..
    ಈಗಂತೂ ನಿನ್ನ ನೆನಪು ಅದ್ಯಾವಪರಿ ನನ್ನನ್ನು ಹಿಂಡಿ ಹಿಪ್ಪೆ ಮಾಡ್ತಾ ಇದೆ ಗೊತ್ತಾ..ಯಾವಾಗ ನಿಶೆ ಕಳೆದು ಬಾನಂಚಿನಲ್ಲಿ ಭಾಸ್ಕರ ಮೂಡಿ ಮೊದಲ ಕಿರಣಗಳು ಭೂಮಿಯನ್ನು ಚುಂಬಿಸುತ್ತದೆಯೋ ಎಂಬುದನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. ಯಾಕಂದ್ರೆ ಬೆಳಕು ಹರಿದರೆ ಸಾಕು ನಾನು ಓಡೋಡಿ ಬಂದು ನಿನ್ನನ್ನು ಕಾಣುತ್ತೇನೆ. ಮಾತಾಡುತ್ತೇನೆ. ಮೌನವನ್ನು ಸೀಳುತ್ತೇನೆ.. ಅಲ್ವಾ.. ಹಾಗೇ ನೀನು ಕಂಡೊಡನೆ ತುಟಿಯಂಚಿನಲ್ಲಿ ತುಂಟದೊಂದು ಕಿರುನಗೆಯನ್ನು ಎಸೆಯುತ್ತೀಯಲ್ಲಾ ಅದನ್ನು ಯಾವಾಗ ಕಾಣುತ್ತೀನೋ ಎಂಬ ತವಕ ನನ್ನ ಮನದೊಳಗೆ. ಹಾಳಾದ ಸಂಜೆ.. ಯಾಕೆ ಇಷ್ಟು ಲೇಟಾಗಿ ಸರಿಯುತ್ತಿದೆಯೋ..
    ಟೈಮಿಗಂತೂ ಸೆನ್ಸೇ ಇಲ್ಲ. ಯಾವಾಗ ಓಡಬೇಕೋ ಆಗ ಓಡೋದೆ ಇಲ್ಲ. ಟಕಾ ಟಕಾ.. ಅಂತ ನಿಧಾ......ನ ಓಡ್ತಾ ಇದೆ. ಅದಕ್ಕೇನು ಗೊತ್ತು ನನ್ನ ಪರಿತಾಪ..? ಪ್ರೀತಿಯ ಬಗ್ಗೆ ಆ ಮಿಷೀನಿಗೆ ಅರಿವಾದರೂ ಹೇಗಿರಬೇಕು ಹೇಳು. ಸಮಯದ ಕೈಗೊಂಬೆ ಅದು. ಟೈಂ ತೋರಿಸೋ ಭರದಲ್ಲಿ ತಾನು ಪ್ರೀತಿ ಎಂಬ ವಿಸ್ಮಯವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದನ್ನೂ ಗೊತ್ತು ಮಾಡಿಕೊಳ್ಳಲಾಗದಂತಹ ವಿಚಿತ್ರ ಯಂತ್ರ ಅದು. ಹೋಗ್ಲಿ ಬಿಡು. ಅದಕ್ಕೇ ಅಂದು ಏನು ಪ್ರಯೋಜನ..?
    ಹಾಂ.. ಮರೆತಿದ್ದೆ ನೋಡು. ನಾಳೆ ಬರುವಾಗ ಖಂಡಿತವಾಗಿಯೂ ಆ ಪುಟ್ಟ ನವಿಲುಗರಿಯನ್ನು ತರುತ್ತೇನೆ. ನವಿಲುಗರಿಯಾ ಅದು.. ಊಹುಂ ಅಲ್ಲ. ನವಿಲುಗರಿಯ ಮರಿ ಎನ್ನಬಹುದು. ನೀನು ನನ್ನ ಮನೆಗೆ ಬಂದಿದ್ದಾಗ, ನಿನ್ನ ಸಂಗಡ ಗುಡ್ಡೇ ತೋಟ ಗಣೇಶನ ದೇವಳಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸಿಕ್ಕಿತ್ತು. ಚಕ್ಕನೆ ಎತ್ತಿಕೊಂಡು ನಿನಗೆ ಕೊಟ್ಟಿದ್ದೆ. ದಾರಿಯಲ್ಲೆಲ್ಲಾದರೂ ಕಳೆದುಹೋದೀತು.. ಮನೆಯ ತನಕ ನೀನೆ ಇಟ್ಟುಕೋ ಎಂದವಳಿಗೆ ಕೊನೆಗೆ ಮರೆತು ಹೋಗಿತ್ತು. ಕಡೆಗೊಮ್ಮೆ ನೆನಪಾಗಿ ಕೊಡು ಎಂದು ಕಾಡಿದ್ದೆಯಲ್ಲ. ನಾಳೆ ಮಿಸ್ ಮಾಡದೇ ತರುತ್ತೇನೆ. ಅದು ನನ್ನ ಕಬೋರ್ಡಿನಲ್ಲಿ ಮಿನುಗುತ್ತಾ ಕುಳಿತಿದೆ. ಅದೆಷ್ಟೋ ವರ್ಣಗಳ ಚಿಕ್ಕ ಚುಲ್ಟಾರಿ ನವಿಲುಗರಿಗೂ ನಾಳೆ ನಿನ್ನನ್ನು ತಲುಪುವ ತವಕ.
    ಆಯ್ತು.. ಆಯ್ತು... ಖಂಡಿತ ಹಾಗೇ ಮಾಡ್ತೀನಿ.. ನೀ ಹೇಳಿದ ಹಾಗೆಯೇ ಆ ಹಸಿರು ಬಣ್ಣದ ಟಿ-ಷರ್ಟ್ ಹಾಕಿಕೊಂಡೇ ಬರ್ತೀನಿ. ಕಾಲೇಜಿನ ಟ್ರಿಪ್ ಸಂದರ್ಭದಲ್ಲಿ ಶಿವಮೊಗ್ಗೆಯ ಯಾವುದೋ ಬಝಾರಿನಲ್ಲಿ ನನಗಾಗಿ ನೀನು ಕೊಂಡು ತಂದ ಷರ್ಟ್ ಅದು. ನನ್ನ ಜೀವಾಳವೂ ಹೌದು. ಬೆನ್ನಮೇಲೊಂದು ದೊಡ್ಡ ಅಕ್ಷರಗಳಲ್ಲಿ ಬರೆದ ಯು ಕ್ಯಾನ್ ವಿನ್ ಎಂಬ ಬರಹ.. ಎದುರು ಭಾಗದಲ್ಲಿ ಚಿಕ್ಕ ಗಿಟಾರಿನ ಚಿತ್ರ.. ಯಾಕೆ ನಿನಗೆ ಇಂತಹ ವಿಶಿಷ್ಟ ಟೇಸ್ಟು ಅಂತ ಅರ್ಥ ಆಗ್ತಾ ಇಲ್ಲ. ವಿಭಿನ್ನ ಇಂಟರೆಸ್ಟಿನ ನಿನ್ನ ಈ ಟೀಷರ್ಟ್ ನನ್ನ ಪಾಲಿನ ಅಮೂಲ್ಯ ಆಸ್ತಿ. ಇದನ್ನು ಬಹಳ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ.
    ಸಾಕು.. ಸಾಕು.. ಇನ್ನು ಸಾಕು ಮಾಡ್ತೀನಿ.. ರಾತ್ರಿ ಒಂದೋ ಎರಡೂ ಆಯ್ತು ಇರಬೇಕು ಗಂಟೆಗಳು. ಮನೆಯ ಮಹಡಿಯ ಮೇಲೆ ಕುಳಿತವನಿಗೆ ದೂರದಲ್ಲೆಲ್ಲೋ ಸುಟ್ರನಕ್ಕಿ ಕಿಟ್ಟನೆ ಕಿರುಚಿದ ಅನುಭವಗಳು. ನೀರವತೆ.. ನಾಳೆ ಸಿಗುವ ಮೊದಲು ಈ ಏಕಾಂತ ಪರಿಹಾರಕ್ಕಾಗಿ ಸುಮ್ಮನಿರಲಾರದೇ ಬರೆದ ಬರಹ ಇದು. ಬೇಸರಿಸದಿರು ಮನವೇ. ಇನ್ನು ಹೆಚ್ಚು ಬರೆಯಲಾರೆ ಗೆಳತಿ..
    ನಿನ್ನ ಸವಿ ನೆನಪೆ ಮನದಲ್ಲಿ ಆರಾಧನೆ...
    ....ಪ್ರೀತಿಯ ಉಪಾಸನೆ..

    ನಾಳೆ ಬೆಳಗ್ಗೆ ಮುಂಜಾನೆ ಬಂದು ನಿನ್ನನ್ನು ಕಂಡು ಇದನ್ನು ಕೊಟ್ಟಾಗ ನಿನ್ನ ಮನದಲ್ಲಿ ಮೂಡುವ ಭಾವನೆಗಳನ್ನು ನಾನು ಗಮನಿಸಬೇಕು. ಆಗ ಮಾತ್ರ ನನಗೆ ಏನೋ ಒಂಥರಾ.. ಟಿಡ್ಡಿ ಬೇರ್ ಜೊತೆ ಬೆಚ್ಚಗಿರು. ನಾಳೆ ಸಿಗುತ್ತೇನೆ.
    ಮಿಸ್ ಯೂ..

ಇಂತಿ ನಿನ್ನವ

Wednesday, November 28, 2012

ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು...

 ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು...

ಲೆಕ್ಖ ಹಾಕಿದರೆ ಅದೆಷ್ಟು ಶತ ಸಹಸ್ರ ಮೀರುತ್ತದೆಯೇನೋ. ಅಷ್ಟು ಸಹಸ್ರಸಾರಿ ನಾನು ಹೋಗಿ ಅಲ್ಲಿ ಕುಳಿತೆದ್ದು ಬಂದಿದ್ದೇನೆ. ನನ್ನ ಅತ್ಯಂತ ಪ್ರೀತಿಯ ಜಾಗ. ಅಘನಾಶಿನಿ ತೀರದ ಇಷ್ಟದ ಸ್ಥಳಗಳ ಸಾಲಿನಲ್ಲಿ ಇದು ಮೊದಲನೆಯದು ಎಂದರೆ ತಪ್ಪಿಲ್ಲ. ಅದು ನನ್ನ ಸ್ಫೂತರ್ಿಯ ಸ್ಥಳ. ಕವನಗಳನ್ನು ಕಟ್ಟಲು ಕಾರಣವಾದ ಸ್ಥಳ. ನನ್ನೊಳಗಿನ ಕವಿಯನ್ನು ಉದ್ದೀಪನಗೊಳಿಸಿ ಕವಿಭಾವಕ್ಕೊಂದು ರೂಪ ನೀಡಿದ ಜಾಗ. ಬೇರೆನೂ ಅಲ್ಲ. ಅದೊಂದು ದೈತ್ಯ ಕಲ್ಲು ಬಂಡೆ.
    ಸುತ್ತಲೂ ಜುಳು ಜುಳು ನಿದಾದವನ್ನು ಹೊರಡಿಸುತ್ತ ನರ್ತನ ಮಾಡುತ್ತ ಹರಿಯುವ ಅಘನಾಶಿನಿ ನದಿ. ಆಗಾಗ ಆರ್ಭಟ, ಹೆಚ್ಚಿನ ಕಾತ ನೀರ ನರ್ತನದ ತನನ. ಯಾಕೋ ಈ ಕಲ್ಲುಬಂಡೆ ನನಗೆ ಬಹಳ ಆಪ್ತವಾಗಿದೆ. ಈ ಬಂಡೆ ಅದೆಷ್ಟು ನನ್ನನ್ನು ಕಾಡಿಸಿ, ಹಿಡಿದು ಇಟ್ಟುಕೊಂಡಿದೆ ಎಂದರೆ... ಮನಸ್ಸೆಷ್ಟೇ ಬೇಸರದಲ್ಲಿರಲಿ ಅಲ್ಲಿ ಹೋಗಿ ಆ ಬಂಡೆಯ ಮೇಲೆ ಕುಳಿತುಬಿಟ್ಟರೆ ಸಾಕು ಮನಸ್ಸಿನ ಎಲ್ಲ ಬೇಸರ ಮೂಟೆಗಳು ಕರಗಿ ಹರ್ಷ ಮನೆಮಾಡುತ್ತದೆ. ಖುಷಿ ಒಳಗೊಳಗೆ ಮೂಡಿ ನವ ಚೈತನ್ಯ ಚಿಮ್ಮುತ್ತದೆ.
    ಈ ಬಂಡೆಗಲ್ಲಿನ ಮೇಲೆ ನಾನು ಕುಳಿತಷ್ಟು ಮತ್ಯಾರೂ ಕುಳಿತಿಲ್ಲವೇನೋ. ನನ್ನ ದುಃಖ, ಸಂತಸಗಳಿಗೆ ಈ ಬಂಡೆಯೇ ಹೆಚ್ಚಿನ ಕಾಲ ಕೇಳುಗ, ನೋಡುಗ, ಜೊತೆಯಲ್ಲಿ ಮಾತನಾಡುವ ದೋಸ್ತಿ. ನನ್ನ ಏರಿಳಿವುಗಳಿಗೆ ಈ ಬಂಡೆಯೇ ಸಾಕ್ಷಿ ಎಂದರೂ ತಪ್ಪಿಲ್ಲ. ಅಘನಾಶಿನಿ ನದಿಗಂತೂ ಈ ಬಂಡೆಗಲ್ಲು ಹಾಗೂ ನನ್ನ ದೋಸ್ತಿಯ ಕುರಿತು ಬಹಳ ಹೊಟ್ಟೆಕಿಚ್ಚು ಕಣ್ರೀ. ಅದಕ್ಕೆ ಮಳೆಗಾಲ ಸೇರಿದಂತೆ ಆರುತಿಂಗಳಿಗೂ ಹೆಚ್ಚಿನ ಕಾಲ ನನ್ನನ್ನು ಈ ಬಂಡೆಗಲ್ಲಿನ ಬಳಿಗೆ ಹೋಗದಂತೆ ತಡೆದು, ಅದನ್ನು ಅಪ್ಪಿ ಹಿಡಿದುಬಿಡುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ನಾನು ಅಘನಾಶಿನಿಯನ್ನು ಅಣಕಿಸುತ್ತ ಕೂರುತ್ತೇನೆ.
    ಈ ದೊಡ್ಡ ಕಲ್ಲಿಗೆ ನಮ್ಮೂರಿನಲ್ಲಿ ಆನೆಗಲ್ಲು ಅಥವಾ ಆನೆಕಲ್ಲು ಎನ್ನುತ್ತಾರೆ. ಕೆಲವು ಮಂದಿ ಇದು ಆನೆಕಲ್ಲಲ್ಲ ಎಂದೂ ಹೇಳುತ್ತಾರಾದರೂ ನಾನು ಇದಕ್ಕೆ ಆನೇಕಲ್ಲು ಎಂದು ವಿಧ್ಯುಕ್ತವಾಗಿ ನಾಮಕರಣ ಮಾಡಿ ಅದಕ್ಕೊಂದು ಜೀವ ಕೊಡುವ ಯತ್ನ ಮಾಡಿದ್ದೇನೆ. ನನಗೆ ಅಲ್ಪಸ್ವಲ್ಪ ನಡೆಯಲು ಬರುತ್ತಿದ್ದ ಸಂದರ್ಭ. ನೆನಪೆಲ್ಲ ಇನ್ನೂ ಮಾಸಲು ಮಾಸಲಾಗಿದ್ದಾಗ ಅಮ್ಮ ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಳು. ಯಾವಾಗಲೂ ಅಲ್ಲ. ತಿಂಗಳಿಗೊಮ್ಮೆ ಮುಟ್ಟಾದಾಗ ಅವಳಂತೆ ಊರಿನ ಒಂದೆರಡು ಸೊಸೆಯರು ಈ ಕಲ್ಲಿನ ಮೇಲೆ ಬಂದು ಸುದ್ದಿ ಹೇಳುತ್ತಿದ್ದರು. ಆಗೆಲ್ಲ ಅಮ್ಮ ನನ್ನನ್ನು ಕರೆದುಕೊಂಡು ಬರುತ್ತಿದ್ದಳು. ಆಕೆ ಆಕೆಯ ದೋಸ್ತಿಣಿಯರ ಜೊತೆ ಮಾತಾಡುತ್ತಿದ್ದರೆ ನಾನಂತೂ ಆನೆಕಲ್ಲಿನ ಬುಡದಲ್ಲಿ ಕಾಲನ್ನು ಇಳಿಬಿಟ್ಟುಕೊಂಡು ಮಿಸುಕಾಡದೇ ಕುಳಿತುಬಿಡುತ್ತಿದ್ದೆ. ಹೀಗೆ ಕುಳಿತಾಗ ನಮ್ಮ ಬಳಿಗೆ ಬರುವ ಮೀನುಗಳು ಕಾಲಿಗೆ ಕಚ್ಚಿ ಕಚಗುಳಿ ನೀಡುವುದನ್ನು ಬಹಳ ಬೆರಗಿನಿಂದ ಸವಿಯುತ್ತಿದ್ದೆ.
    ಆ ಮೇಲೆ ಈ ಆನೆಕಲ್ಲಿನ ಬುಡದ ಸಾಧಾರಣ ಗಾತ್ರದ ಹೊಂಡ ನನ್ನಂತಹ ತುಡುಗು ಹುಡುಗರಿಗೆ ಈಜುಕೊಳವಾಯಿತು. ಈಜು ಕಲಿಯುವ ತಾಣವಾಯಿತು. ಬೇಸಿಗೆ ರಜೆ ಬಂತೆಂದರೆ ಮದ್ಯಾಹ್ನದ 1 ಗಂಟೆಯ ಕಾಲವನ್ನು ಬಿಟ್ಟರೆ ಹಗಲಿಡಿ ಈ ಕಲ್ಲಿನ ಬುಡದಲ್ಲಿ ಈಸು ಬೀಳುವುದು ನಮ್ಮ ಪರಮಾಪ್ತ ಕಾರ್ಯವಾಗಿತ್ತು. ನನ್ನ ವೋರಗೆಯ 8-10 ಹುಡುಗರು ಸೇರಿ ಹೊಳೆಗೆ ಬಿದ್ದೆವೆಂದರೆ ಮೀನುಗಳೆಲ್ಲ ಕಕ್ಕಾಬಿಕ್ಕಿ. ಕಂತು ಈಸ ಹೊಡೆಯುವುದು, ನೀರೊಳಗೆ ಕಣ್ಣು ಬಿಟ್ಟು ಈಜುವುದು, ಯಾರು ಜಾಸ್ತಿ ಹೊತ್ತು ನೀರಿನಲ್ಲಿ ಮುಳುಗುಹಾಕುತ್ತಾರೆ ಎಂದು ಪಂಥ ಕಟ್ಟುವುದು, ಹೊಳೆಯ ನೀರು ಚಳಿ ಮಾರಾಯ ಎಂದು ಹೇಳುತ್ತ ಆನೆಕಲ್ಲಿನ ಮೇಲೆ ಕುಳಿತು ಸೂರ್ಯ ರಶ್ಮಿಗೆ ಬೆನ್ನು ಒಡ್ಡಿ ಕುಳಿತು ಅದು ನೀಡುವ ಆನಂದವನ್ನು ಸವಿಯುವುದು ನನಗಿನ್ನೂ ನೆನಪಿದೆ.
    ಈ ಕಲ್ಲಿನ ಮೇಲೆಯೇ ನಮ್ಮ ಕಿಲಾಡಿತನಗಳು ಅನಾವರಣಗೊಳ್ಳುತ್ತಿದ್ದುದೂ ಉಂಟು. ಯಾರದ್ದೋ ಮನೆಯ ಬಾಳೆ ಹಣ್ಣಿನ ಗೊನೆಯನ್ನು ಕದ್ದು ತಂದರೆ ಈ ಕಲ್ಲಿನಮೇಲೆಯೇ ಅವನ್ನು ಹಸಗೆ ಮಾಡಿಕೊಳ್ಳುತ್ತಿದ್ದೆವು. ಈ ಬಂಡೆಗಲ್ಲಿನ ಆಜು ಬಾಜಿನಲ್ಲಿ ಅಪ್ಪೆಮಿಡಿ ಮರಗಳ ಸಾಲು ಸಾಲೇ ಇದ್ದವಲ್ಲ ಅವುಗಳಿಗೆ ಅಡ್ಡಬಡ್ಚಿಗೆ ಹೊಡೆದು ಅಪ್ಪೆಮಿಡಿಯನ್ನು ಕೆಡವಿ ಅದಕ್ಕೆ ಉಪ್ಪು ಹಾಕಿಕೊಂಡು ತಿನ್ನುತ್ತಿದ್ದುದು ಇನ್ನೂ ನೆನಪಿದೆ. ಅಷ್ಟೇ ಏಕೆ ವಿಪರೀತ ಸೊನೆಯಿಂದ ಕೂಡಿರುತ್ತಿದ್ದ ಈ ಅಪ್ಪೆ ಮಿಡಿಯನ್ನು ತಿನ್ನುವಾಗ ಬಾಯಿಗೆಲ್ಲ ಸೊನೆ ತಾಗಿಸಿ ಸುಟ್ಟುಕೊಂಡಿದ್ದೂ ಇನ್ನೂ ಹಚ್ಚ ಹಸುರಾಗಿದೆ. ನನಗಿಂತಲೂ ನನ್ನ ಪ್ರೀತಿಯ ಬಂಡೆಗಲ್ಲಿಗೆ ಇದು ಇನ್ನೂ ಸ್ಫಷ್ಟವಾಗಿ ನೆನಪಿದೆ.
       ಇಷ್ಟೇ ಅಲ್ಲ. ಪ್ರತಿದಿನ ನಾನು ಓಡಿ ಬಂದು ಈ ಬಂಡೆಯ ಮೇಲೆ ಕುಳಿತು ಅಕ್ಕಪಕ್ಕದ ವಾಟೆ ಮಟ್ಟಿಯ ಸಾಲುಗಳ ಒಡಲಿನಿಂದ ಕೇಳಿಬರುವು ಹಕ್ಕಿಗಳ ವಿವಿಧ ರೀತಿಯ ನಾದ ತರಂಗಗಳನ್ನು ಸವಿದಿದ್ದೇನೆ. ಈ ಬಂಡೆಗಲ್ಲಿನ ಮೇಲೆ ಅಂಗಾತ ಮಲಗಿ ಆಕಾಶದಲ್ಲಿ ಓಡೋಡಿ ಹೋಗುವ ಮೋಡಗಳನ್ನು ಕಣ್ತುಂಬಿಕೊಳ್ಳುವುದು, ಅಪ್ಪೆ ಮಿಡಿಗಳು ಕಸ್ತ್ರಬಿಡುವ ವೇಳೆಯಲ್ಲಿ ಸುಳಿದು ಬರುವ ಗಾಳಿ ತಂದು ಕೊಡುವ ಸುಮಧುರ ವಾಸನೆಯನ್ನು ಮನದಣಿಯೆ ಆಘ್ರಾಣಿಸಿದ್ದೇನೆ. ಎಲ್ಲಕ್ಕಿಂತ ಮಿಗಿಲಾಗಿ ಈ ಬಂಡೆಗಲ್ಲಿನ ಮೇಲೆಯೇ ನಾನು ಅದೆಷ್ಟೋ ಚೆಂದದ ಪುಸ್ತಕಗಳನ್ನು ಓದಿದ್ದೇನೆ.
    ಈ ಬಂಡೆಗಲ್ಲು ನನಗೊಬ್ಬನಿಗೇ ಅಲ್ಲ.. ಇನ್ನೂ ಹಲವರಿಗೆ ಆಪ್ತವಾಗಿದೆ. ಮಿತ್ರನೊಬ್ಬ ಈ ಬಂಡೆಗಲ್ಲಿನ ಮೇಲೆ ಕುಳಿತು `ನನಗೆ ಅವಳು ಮೋಸ ಮಾಡಿಬಿಟ್ಟಳು ಕಣೋ ವಿನು..' ಅಂದಿದ್ದ. ನನ್ನ ಜೊತೆ ಖುಷಿಯಾಗಿ ಬಂದಿದ್ದ ಅವಳಿಗೆ ನನ್ನ ಮನಸ್ಸಿನ ತುಮುಲಗಳನ್ನು ಹೇಳಿಕೊಳ್ಳಲು ಆಗದೇ ಕಂಗಾಲಾಗಿದ್ದು ಇದೇ ಬಂಡೆಯ ಮೇಲೆ. ಇವುಗಳ ಜೊತೆಗೆ ಅವಿಭಕ್ತ ಕುಟುಂಬದ ನಮ್ಮ ಮನೆಯ ಅನೇಕ ಹಿಸೆ ಪಂಚಾಯ್ತಿಯ ಪ್ಲಾನುಗಳು ಈ ಕಲ್ಲಿನ ಮೇಲೆಯೇ ರೂಪುಗೊಂಡಿದೆ ಅನ್ನುವುದು ಓಪನ್ ಸೀಕ್ರೇಟ್ ಸಂಗತಿ. ಇಷ್ಟೆಲ್ಲ ರಸನಿಮಿಷಗಳನ್ನು ಈ ಬಂಡೆಗಲ್ಲು ನನಗೆ ತಗೋ ಮಾಣಿ.. ನಿನನ್ನ ಮಾತಿಗೆ ನನ್ನ ಕಾಣಿಕೆ ಅಂತ ನೀಡಿಬಿಟ್ಟಿದೆ.
    ಹಾಂ.. ಇಷ್ಟೆಲ್ಲ ವಿಷಯಗಳ ಜೊತೆಗೆ ಮುಖ್ಯ ಸಂಗತಿಯನ್ನೇ ಮರೆತಿದ್ದೆ ನೋಡಿ.. ಅದೆಂದರೆ, ಈ ಕಲ್ಲುಬಂಡೆಯ ಬುಡದಲ್ಲಿ ಹಾಕುತ್ತಿದ್ದ ಕಾಲುಸಂಕ. ನಮ್ಮೂರಿನ ಹಿರಿಕಿರಿಯ ಜೀವಗಳೆಲ್ಲ ಸೇರಿ ಅಘನಾಶಿನಿಯ ಆರ್ಭಟ ಕಡಿಮೆಯಾಗಿ ಸೌಮ್ಯ ಸುಕೋಮಲೆಯ ರೂಪ ತಾಳುತ್ತಿದ್ದ ಸಂದರ್ಭದಲ್ಲಿ ಈ ಕಲ್ಲಿನ ಬುಡಕ್ಕೆ ಮೂರ್ನಾಲ್ಕು ದೈತ್ಯ ಅಡಿಕೆ ಮರದ ತುಂಡುಗಳನ್ನು ಹೊತ್ತುತಂದು ಸಂಕ ಹಾಕುತ್ತಾರೆ. ಈ ಸಂಕ ನಮ್ಮೂರಿಗೂ, ಪಕ್ಕದ ಹಿತ್ಲಕೈ ಊರಿಗೂ ಬೇಸಿಗೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಕಕ್ಲಿಸುತ್ತದೆ. ಇದಕ್ಕೂ ಮಿಗಿಲಾಗಿ ಈ ಕಾಲು ಸಂಕ ನಮ್ಮೂರಿನ ಹುಡುಗರಿ ಈಜುವ ಮನಸ್ಸಿಗೆ ನೀರೆರೆಯುತ್ತದೆ. ಈ ಸಂಕದ ಮೇಲಿಂದ ನಮ್ಮೂರಿನ ಹುಡುಗರು ನೀರಿನಾಳಕ್ಕೆ ಡೈವ್ ಹೊಡೆಯುತ್ತಿದ್ದರೆ... ಆಹಾ.. ಸ್ವರ್ಗಸುಖ. ಇಂತಹ ದಿವ್ಯಕಾರ್ಯಕ್ಕೆ ಸದ್ದಿಲ್ಲದೇ ಮೆಟ್ಟಿಲಾದದ್ದು ನನ್ನ ಪ್ರೀತಿಯ ಬಂಡೆಗಲ್ಲು.
    ಕಾಲ ಎಂದಿನಂತೆ ಇರುವುದಿಲ್ಲ ನೋಡಿ. ಕಾಲನ ಆರ್ಭಟವೋ ಅಥವಾ ಆಧುನಿಕತೆಯ ಭೀಖರ ಪರಿಣಾಮವೋ.. ನನ್ನ ಪ್ರೀತಿಯ ಕಲ್ಲಿಗೂ ಅದರ ಭೀಖರತೆ ಕಾಡುತ್ತಿದೆ ಸಾರ್.. ಏನು ಮಾಡಬೇಕೆಂದು ತೋಚದೇ ಒದ್ದಾಡುತ್ತಿದ್ದೇನೆ. ಮಳೆಗಾಲದಲ್ಲಿ ಬಳುಕಿ, ಬಳಸಿ ತಬ್ಬಿ ಹಿಡಿದಿದ್ದ ಅಘನಾಶಿನಿಯ ನೀರಿನ ಸುಳಿಗಳು ಕಲ್ಲುಬಂಡೆಯ ಮೇಲೆ ಉಂಟು ಮಾಡಿದ್ದ ಆಕೃತಿಗಳು ಚಿತ್ತಾರಗಳೆಲ್ಲ, ಹೊಪ್ಪಳಿಕೆ ಎದ್ದಂತೆ ಏಳುತ್ತಿವೆ. ಮೀನಿಗಾಗಿ ಬಾಂಬು ಹಾಕುವವರ ಬಾಂಬಿನ ಢಾಂ..ಗೆ ಕಲ್ಲು ಗಡಗಡನೆ ನಡುಗುತ್ತಿದೆ. ಅದೆಷ್ಟು ಮೂಕವಾಗಿ ರೋಧಿಸುತ್ತಿದೆಯೋ. ನಾನು ನನ್ನ ಭಾವನೆಗಳನ್ನು ಅದರ ಬಳಿ ಹಂಚಿಕೊಂಡಂತೆ ಅದೂ ನನ್ನ ಬಳಿ ಏನೋ ಹೇಳಲು ತವಕ ಗೊಂಡಂತೆ ನನಗೆ ಇತ್ತಿತ್ತಲಾಗಿ ಅನ್ನಿಸುತ್ತಿದೆ. ಅಘನಾಶಿನಿ ನದಿಗೆ ಅದೆಂತೆಂತದ್ದೂ ಯೋಜನೆಗಳು ಬರುತ್ತವೆ ಎನ್ನುವ ಭಯನೀಡುವ ಸುದ್ದಿಗಳು ಜೋರಾಗುತ್ತಿವೆ. ಈ ಯೋಜನೆಗಳ ಗೋಜಿನಲ್ಲಿ ನಾನು ನನ್ನ ಮಿತ್ರ ಆನೆಕಲ್ಲು ಒದ್ದಾಡುತ್ತಿದ್ದೇವೆ.
    ಕ್ರಮೇಣ ಮನಸ್ಸು ಬಾಲ್ಯದ ಖುಷಿ ಸಂಗತಿಯೆಡೆಗೆ ಹೊರಳುತ್ತದೆ. ಕಾಲ ಸರಿದಂತೆಲ್ಲ ಬಾಲ್ಯದ ಜಾಗದಲ್ಲಿ ಮುಪ್ಪು ಅಡರಿಕೊಳ್ಳುತ್ತದೆ. ನನ್ನನ್ನೂ, ನನ್ನಂತಹ ಅದೆಷ್ಟೋ ತುಡುಗರನ್ನೂ, ನೂರಾರು ತಲೆಮಾರನ್ನೂ ಕಂಡ ಆನೇಕಲ್ಲು ನನ್ನ ತಲೆಮಾರಿನಲ್ಲೇ ಕಾಣೆಯಾಗಿಬಿಡುತ್ತದಾ? ಯಾವುದೋ ಮೀನಿನ ಚಪಲದ ಮನುಷ್ಯನ ಬಾಂಬಿಗೆ ಈ ಕಲ್ಲು ಹೋಳಾಗಿಬಿಡುತ್ತದಾ ಎಂಬ ಭಯ ಕಾಡುತ್ತಿದೆ. ನನ್ನ ಹಾಗೂ ನನ್ನಂತಹ ನೂರಾರು ಜನರ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಆನೆಗಲ್ಲು ಮಾತ್ರ ಶತ ಸಹಸ್ರಮಾನಗಳಿಂದ ನಡೆದು ಪಂದ ಪ್ರಕೃತಿಯ ಆಟ, ಪ್ರಕೃತಿ-ಮಾನವನ ಹೊಡೆದಾಟಗಳಿಗೆ ಮೌನತಪಸ್ವಿಯಾಗಿ ನಿಂತಿದೆ..

Tuesday, November 27, 2012

ಸಾಂತ್ವನ


ಅಂಗಾತ ಮಲಗಿದ್ದೆ..
ಬಹುಕಾಲದಿಂದ ಕರೆಗಟ್ಟಿ
ಉಳಿದಿದ್ದವು ಕಣ್ಣೀರು...|

ಸುಮ್ಮನೆ ಮಗ್ಗುಲಾಗಿ
ಹೊರಳಿದೆ.,,
ಬಲಗಣ್ಣಿನೊಳಗೆ ಜಿನುಗಿದ ನೀರು
ಸೀದಾ ಮೂಗಿನ ಮೇಲ್ಗಡೆಯಲ್ಲಿ
ಹಾದುಹೋಗಿ
ಎಡಗಣ್ಣಿನೊಳಗೆ ಬಿದ್ದಿತು...||

ಸುಮ್ಮನೆ
ಒಮ್ಮೆ ತಂಪಾಯಿತು
ಸಾಂತ್ವನ ಹೇಳಿತು..||


(ವಿ. ಸು. : ಒಂದು ಬೇಸರಿನ ಸಂಜೆಯಲಿ ಬರೆದ ಕವಿತೆ..2-2-2009ರಂದು ದಂಟಕಲ್ಲಿನಲ್ಲಿ ಬರೆದಿದ್ದು..)

Friday, November 23, 2012

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

    ಅಲ್ಲಿ ನೀರಿನ ಮಧ್ಯ ಬಿದ್ದ ಮದರ ಒಂದು ಅಗಲವಾದ ತುಂಡು. ಎಂದೋ, ಯಾರೋ ಹಚ್ಚಿದ ಬೆಂಕಿಗೆ ಅರ್ಧಂಬರ್ಧ ಸುಟ್ಟು ಕರಕಲಾಗಿ ಉಳಿದಿದ್ದು. ಬಾಲ್ಯದ ನಮ್ಮಂತ ತುಡುಗಿನ ಹುಡುಗರಿಗೆ ಅದೇ ದೋಣಿ, ತೆಪ್ಪ, ಆಟವಾಡುವ ದೋಣಿಮನೆ ಎಲ್ಲ.
    ನಮ್ಮ ಗ್ಯಾಂಗೋ ಭಾರಿ ಇತ್ತು ಬಿಡಿ. ಎಲ್ಲರಿಗಿಂತ ಕಿರಿಯ ನಾನು. ಕಾನಲೆಯ ಗಿರೀಶಣ್ಣ, ಗುರಣ್ಣ, ಯೋಗೀಶ ಭಾವ, ಶಶಿ ಭಾವ, ಹರೆಯಕ್ಕೆ ಕಾಲಿಟ್ಟು ಗಂಭೀರತನ ಮೈಮೂಡಿದ್ದರೂ ಆಗೊಮ್ಮೆ ಈಗೊಮ್ಮೆ ಗಣಪಣ್ಣ ಭಾವನೂ ನಮ್ಮ ಪುಂಡರಪೂಟಿಗೆ ಸೈ. ನಮ್ಮ ಕಿಲಾಡಿ ತುಂಟತನಕ್ಕೆಲ್ಲ ರಾಮಚಂದ್ರಮಾವ ಕಾವಲುಗಾರ.. ಮಂತ್ರಾಕ್ಷತೆಯನ್ನು ಮನಸಾರೆ ಕೊಡುವ ಸಹೃದಯಿ.
    ಒಂದು ಬೇಸಿಗೆಯಲ್ಲಿ ನಮ್ಮ ದಂಡು ಅಜ್ಜನಮನೆಯಾದ ಬರಬಳ್ಳಿಯಲ್ಲಿ ಬೀಡು ಬಿಟ್ಟಿತ್ತು. ನಮ್ಮ ಲಿಗಾಡಿತನಕ್ಕೆ ಯಾವಾಗಲೂ ಅಲ್ಲಿ ಬೀಡು ಬಿಡುತ್ತಿದ್ದ ಮಂಗಗಳ ಗ್ಯಾಂಗು ನಾಪತ್ತೆ.. ಕಾಗೆಗಳಿಗೂ ನೆಲೆಯಿಲ್ಲದಂತಾಗಿದ್ದವು. ಒಂದು ಶುಭ ಮದ್ಯಾಹ್ನದಲ್ಲಿ ಅಜ್ಜನಮನೆಯ ಜಮೀನಿನ ಅತ್ಯಂತ ಮೇಲ್ಭಾಗಕ್ಕೆ ನಾವೆಲ್ಲ ಹೋಗಿದ್ದೆವು. ಕೆರೆ ಈಸುವುದು ನಮ್ಮ ಪರಮ ಉದ್ದೇಶವಾಗಿದ್ದರೂ ರಾಮಚಂದ್ರಮಾವನ ಕಾವಲುಗಾರಿಕೆ ನಮಗೆ ಅಡ್ಡಿಯಾಗಿತ್ತು. ಕೊನೆಗೆ ಹಾಗೂ ಹೀಗೂ ಅವನ ಕಣ್ಣು ತಪ್ಪಿಸಿ ದೋಣಿಯಾಟ ಆಡುವ ಎಂದು ಎಲ್ಲರೂ ಮರದ ತುಂಡಿನ ಮೇಲೆ ಏರಿದೆವು. ಬೆಂಡಿನಂತಹ ದೋಣಿ ನಮ್ಮೆಲ್ಲರ ಭಾರವನ್ನು ಅನಾಮತ್ತಾಗಿ ಹೊತ್ತುಕೊಂಡಿತು. ನಮ್ಮ ಭಾರಕ್ಕದು ಒಮ್ಮೆ ಅಲುಗಾಡಿತಾದರೂ ಸಾಕಷ್ಟು ಉದ್ದವಾಗಿದ್ದರಿಂದ ಮುಳುಗುವ ಭಯ ಇರಲಿಲ್ಲ.
    ಇದ್ದವರ ಪೈಕಿ ಅತ್ಯಂತ ಕಿಲಾಡಿ ಎಂದು ಜನಮಾನಸದಲ್ಲಿ ಹಸಿರಾಗಿದ್ದ ಯೋಗೀಶ ಭಾವ ಅದೆಲ್ಲಿಂದಲೋ ಒಂದು ಉದ್ದನೆಯ ಗಳವನ್ನು ಹಿಡಿದು ತಂದೇಬಿಟ್ಟ. ತಂದವನಿಗೆ ಕೈ ಸುಮ್ಮನಿರಬೇಕಲ್ಲ.. ಹುಟ್ಟುಹಾಕಲು ಪ್ರಾರಂಭಿಸಿದ. ಮರದ ತುಂಡು ನಿಧಾನವಾಗಿ ಮುಂದಕ್ಕೆ ಸಾಗಿತು. ಆಗ ನನಗೆ ಎದೆಯಲ್ಲಿ ಶುರುವಾಯಿತಲ್ಲ ನಡುಗ.. ಅದೇನೋ ಡುಕಡುಕಿ. ನನಗೆ ಆಗ ಆರೋ ಏಳೋ ವರ್ಷ ಇರಬೇಕಷ್ಟೇ. ನಮ್ಮೂರಿನ ಅಘನಾಶಿನಿ ನದಿಯಲ್ಲಿ ನೀರು ಕಡಿಮೆಯಾಗಿ ಮಳ್ಳಂಡೆ ಮುಳುಗುವಷ್ಟು ನೀರಿದ್ದಾಗ ಕಲಿತಿದ್ದ ಅಥವಾ ಕಲಿಯಲು ಪ್ರಯತ್ನಿಸಿದ್ದ ಈಜೆಂಬುದು ಮಾತ್ರ ನನ್ನ ಪಾಲಿಗಿದ್ದ ಆಸರೆಯಾಗಿತ್ತು.
    ಭಾವ ಯೋಗೀಶನಂತೂ ಕೆರೆಯ ಮಧ್ಯಕ್ಕೆ ನಮ್ಮೆಲ್ಲರನ್ನು ಕರೆದೊಯ್ದವನೇ ಮದರ ದಿಮ್ಮಿಯ ಮೇಲೆ ನಿಂತು ಚಿಟ್ಟಾಣಿಯನ್ನು ನೆನಪಿಸಿಕೊಂಡವನಂತೆ ಧಿತ್ತೋಂ ನರ್ತನ ಶುರಹಚ್ಚಿಕೊಂಡೇ ಬಿಟ್ಟ. ಇನ್ನೇನು ಮಾಡೋದಪ್ಪಾ ಅನ್ನೋ ತಲೆ ಬಿಸಿ ನಮ್ಮೆಲ್ಲರದ್ದು. ಇದೆಲ್ಲಕ್ಕಿಂತಲೂ ನಮ್ಮೆಲ್ಲರನ್ನೂ ಭಯಕ್ಕೆ ಈಡು ಮಾಡಿದ್ದೆಂದರೆ ವಾಸಂತಿ ಕೆರೆಯ ದಂತ ಕಥೆಗಳು. ಅದ್ಯಾರದ್ದೂ ಬಾಳಂತಿಯ ಬಲಿ ಪಡೆದ ವಾಸಂತಿ ಕೆರೆ ನಮಗೆ ಅದೆಷ್ಟು ಖುಷಿ ಕೊಟ್ಟಿದ್ದರೂ ಆಗಾಗ ಭಯದ ಸೆಳಕನ್ನು ಮೂಡಿಸುತ್ತಿದ್ದುದಂತೂ ಹೌದು. ನನಗಂತೂ ಅವೆಲ್ಲವೂ ಒಮ್ಮೆಲೆ ನೆನಪಾಗಿ ಅಳಲು ಪ್ರಾರಂಭಿಸಿದೆ. ನಾನು ಅಳಲು ಶುರುಮಾಡಿದರೆ ಭಾವ ಯೋಗೀಶ ತನ್ನ ನರ್ತನವನ್ನು ಹೆಚ್ಚಿಸಿಯೇ ಬಿಟ್ಟ.
    ನನಗಂತೂ ಏನು ಮಾಡುವುದೋ ತೋಚಲೇ ಇಲ್ಲ. ತಗಳಪ್ಪಾ ಜಿಗಿದೇ ಬಿಟ್ಟೆ ನೋಡಿ ನೀರಿಗೆ.. ಧಬಲ್ ಅಂತ.. ಒಮ್ಮೆಲೆ ಯೋಗೀಶನಾದಿಯಾಗಿ ಎಲ್ಲರೂ ಕಕ್ಕಾಬಿಕ್ಕಿ. ವಿನಯನ ಕಥೆ ಮುಗೀತು....
    ಸಿನಿಮಾ ಸ್ಯಾಡ್ ಎಂಡಿಂಗ್ ಅಲ್ಲ ಮಾರಾಯ್ರೇ.. ಕ್ಲೈಮ್ಯಾಕ್ಸ್ ಅಭೀ ತೋ ಬಾಕಿ ಹೈ ಮೆರೆ ದೋಸ್ತೋ.. 
    ಆ ದಿನಗಳಿಂದಲೂ ನಾನು ಕುಳ್ಳನೇ. ಈಗ 5.7 ಅಡಿ ಇದ್ದೇನೆ. ಆಗ 4-4.5 ಇದ್ದಿರಬಹುದು. ನಾನು ಜಿಗಿದೇನೋ ಜಿಗಿದೆ. ಏನು ಮಾಡಿದರೂ ಕಾಲಿಗೆ ನೆಲ ಸಿಗೋದೇ ಇಲ್ಲ. ಒಮ್ಮೆ ಕಂತಿದೆ. ಬುಳುಕ್ಕನೆ ನೀರು ಕುಡಿದೆ. ಒಂದೆರಡು ಸಾರಿ ಕೆಮ್ಮಿದೆ. ಹಣೆಬರಹಕ್ಕೆ ಹೊನೆ ಯಾರ್ರೀ.. ನಾನು ಜಿಗಿದ ಸ್ಥಳದಲ್ಲಿ ಅನಾಮತ್ತು ಏಳು ಅಡಿ ಆಳ. ಈಗಾದರೆ ಎಂತಹ ಆಳವನ್ನಾದರೂ ಈಜಬಲ್ಲೆ. ಆಗ.. ??!!
    ಒಮ್ಮೆಲೆ ಯಮಧರ್ಮರಾಜನ್ನು ನೆನೆದೆ ನೋಡಿ.. ಎಲ್ಲಿತ್ತೋ ಯಮ ಶಕ್ತಿ.. ಕೈಕಾಲನ್ನು ವಿಚಿತ್ರವಾಗಿ ಬಡಿದು, ನೀರನ್ನು ಸೀಳಿ, ಎಮ್ಮೆಗಳು ಕುಪ್ಪಳಿಸುವಂತೆ ಕುಪ್ಪಳಿಸಿ ದಡ ತಲುಪುವ ಹೊತ್ತಿಗೆ, ಎದೆಯಲ್ಲಿ ಗಿಟಾರು ನೂರು.... ಇನ್ನು ಕೈಕಾಲುಗಳ ಸ್ಥಿತಿಯಂತೂ ಬೇಡವೇ ಬೇಡ ಬಿಡಿ.. ಡಗಡಗ ಅಲ್ಲಲ್ಲ.. ಗಡಗಡ.. ಅಷ್ಟರ ಹೊತ್ತಿಗೆ ನಮ್ಮ ದಂಡನ್ನು ಹುಡುಕಿಕೊಂಡು ಬಂದಿದ್ದ ರಾಮಚಂದ್ರಮಾವನ ಕಣ್ಣಿಗೆ ನಾನು ಬಿದ್ದಿದ್ದೆ. ನೋಡಿದ ತಕ್ಷಣವೇ ನಮ್ಮ ಭಾನಗಡಿ ಗೊತ್ತಾಗಿಯೇ ಬಿಟ್ಟಿತು. ಶುರುವಾಯಿತು ನೋಡಿ.. ಪುರುಷ ಸೂಕ್ತ.. ಸಹಿತ ಮಂಗಳಾರತಿ.. ಸಾಕಪ್ಪಾ ಸಾಕು... ಕೇಳಲಾರೆ..
    ನಾನಂತೂ ಹಾಗೋ ಹೀಗೋ ಹಾರಿ ಬಂದೆ.. ಮುಂದಿನ ಕಥೆ ಕೇಳಿ ಇನ್ನೂ ಗಮ್ಮತ್ತಾಗಿದೆ. ಯೋಗೀಶ ಭಾವ ತನ್ನ ಲಿಗಾಡಿತನವನ್ನು ಇಷ್ಟಕ್ಕೆ ಎಲ್ಲಿ ಬಿಡ್ತಾನೆ ಹೇಳಿ.. ಮುಂದುವರಿದ, ಮುಂದುವರಿದ.. ಕೆರೆಯ ಮಧ್ಯ ಒಂದು ಚಿಕ್ಕ ಬಂಡೆಯಂತದ್ದು ಇತ್ತು. ವಾಸ್ತವದಲ್ಲಿ ಅದೂ ಇನ್ನೊಂದು ಮರದ ದಿಮ್ಮಿ. ಯಾವಾಗಲೋ ಕೆರೆಯಲ್ಲಿ ಬಿದ್ದು ಗಟ್ಟಿಯಾಗಿ ನಡುಗಡ್ಡೆಯಂತಾಗಿ ಹೋಗಿತ್ತು. ಅಲ್ಲಿಯವರೆಗೂ ಮುಂದುವರಿದ. ಅಲ್ಲಿ ಗಿರೀಶಣ್ಣನ ಬಳಿ ಒಂದ್ನಿಮಿಷ ಇಲ್ಲಿ ಇಳಿ ಅಂದ. ಯಂತಕ್ಕಾ ಹೇಳಿ ಕೇಳಿದ್ದಕ್ಕೆ ತಡಿ ಈಗ ಬತ್ತಿ ಎಂದು ಹೇಳಿ ವಾಪಾಸು ಬಂದುಬಿಟ್ಟ.
    ಯೋಗೀಶ ಭಾವ ವಾಪಾಸು ದಡಕ್ಕೆ ಬಂದು ನಗಲು ಪ್ರಾರಂಭಿಸಿದಾಗಲೇ ಗಿರೀಶಣ್ಣನಿಗೆ ತಾನು ಪೆಚ್ಚಾಗಿದ್ದು ಅರಿವಿಗೆ ಬಂದಿದ್ದು. ಅವನಂತೂ ಜೋರಾಗಿ ಅಳಲು ಪ್ರಾರಂಭಿಸಿದ. ಕೊನೆಗೆ ಅಲ್ಲೇ ಇದ್ದ ರಾಮಚಂದ್ರ ಮಾವ ಯೋಗೀಶನನ್ನು ಹಿಡಿದು ನಾಲ್ಕೇಟು ಬಡಿದು ಗಿರೀಶಣ್ಣನನ್ನು ಕರೆದುಕೊಂಡುಬಂದ.
    ಬಾಲ್ಯದಲ್ಲಿ ನಡೆದ ಈ ಘಟನೆ ನನ್ನ ಮನದಾಳದಲ್ಲಿ ಅಚ್ಚಳಿಯದೇ ನಿಂತಿದೆ. ಇಲ್ಲಿ ಪುಂಡರಪೂಟು ಮಾಡಿದ ನಾವೆಲ್ಲ ಇದೀಗ ಎಲ್ಲೆಲ್ಲೋ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ನಮ್ಮೆಲ್ಲರ ಪಾಲಿಗೆ ಸ್ವಿಮ್ಮಿಂಗ್ ಫೂಲ್ ಆಗಿದ್ದ ವಾಸಂತೀಕೆರೆ ತನ್ನ ಗೂಢ ಕಥೆಗಳ ಜೊತೆಗೆ ಗೂಢವಾಗಿಯೇ ಉಳಿದು ಹೋಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕಾಳಿನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಡ್ಯಾಮಿನ ನೀರು ವಾಸಂತಿ ಕೆರೆಯನ್ನು ಆಪೋಶನ ಪಡೆದುಕೊಂಡುಬಿಟ್ಟಿದೆ.
    ತಮಾಶೆಯಾಗಿದ್ದರೂ ಅನೇಕ ಜೀವನ ಅಂಶಗಳನ್ನು ಕಟ್ಟಿಕೊಟ್ಟ ಈ ಘಟನೆ ಎಂದು ಮರೆಯಲಾರದಂತದ್ದು. ಜೊತೆಗೆ ವಾಸಂತೀ ಕೆರೆಯೂ. 

(ಬಾಲ್ಯದ ಅನುಭವದ ಕಣಜದಿಂದ ಇದು ಚಿಕ್ಕ ಬರಹ ಇದು..ಸ್ವಲ್ಪ ಕುತೂಹಲ, ಸ್ವಲ್ಪ ಬಾಲಿಶ, ಸ್ವಲ್ಪ ಕಾಮಿಡಿ... ಜೊತೆಗೊಂದು ಕ್ಲೈಮ್ಯಾಕ್ಸ್.. )

Wednesday, November 21, 2012

ಮೂರು ಹಾಯ್ಕುಗಳು...


ಅವನು ನಕ್ಕು ನಕ್ಕು..
ಕಣ್ಣೀರು ಹಾಕಿಬಿಟ್ಟ|

--

ಅವನು ಬೆಳಿಗ್ಗೆ ಮೆಸೇಜು ಕಳಿಸಿದ್ದ
ಯಾಕೋ.... ರಾತ್ರಿ ಬಂದಿದೆ..||

--

ಅವನು ಕನಸು ಕಾಣುವ ರೀತಿ ಕಂಡು
ಕನಸಿಗೇ ಬೇಸರ ಬಂದುಬಿಟ್ಟಿದೆ||