Wednesday, November 21, 2012

ಮೂರು ಹಾಯ್ಕುಗಳು...


ಅವನು ನಕ್ಕು ನಕ್ಕು..
ಕಣ್ಣೀರು ಹಾಕಿಬಿಟ್ಟ|

--

ಅವನು ಬೆಳಿಗ್ಗೆ ಮೆಸೇಜು ಕಳಿಸಿದ್ದ
ಯಾಕೋ.... ರಾತ್ರಿ ಬಂದಿದೆ..||

--

ಅವನು ಕನಸು ಕಾಣುವ ರೀತಿ ಕಂಡು
ಕನಸಿಗೇ ಬೇಸರ ಬಂದುಬಿಟ್ಟಿದೆ||


ಬೆಳಕಿನೆಡೆಗೆ

ಮತ್ತೊಂದು ಕವಿತೆ...


ಬೆಳಕಿನೆಡೆಗೆ


ಯಾಕೋ ಗೊತ್ತಿಲ್ಲ..|
ಈ ಬೆಳಗು ಮುಂಜಾವಿನಲಿ
ಹಾಡು ಗುನುಗಬೇಕೆನ್ನಿಸುತ್ತಿದೆ||

ಚುಮು ಚುಮು ಚಳಿಯಲ್ಲಿ,
ಸುರಿವ ಇಬ್ಬನಿಯ ಧಾರೆಯಲ್ಲಿ,
ನಸುಕ ಮುಸುಕಲ್ಲಿ
ಕುಣಿಯಬೇಕೆನ್ನಿಸುತ್ತಿದೆ||

ಹೊನ್ನ ಬಣ್ಣದ ಸೂರ್ಯ ಕಿರಣಕ್ಕೆ
ಕೈಯ ತಾಕಿಸಿ, ಮೆರೆದು
ಮನ ಮಣಿಯಬಯಸಿದೆ||

ಸುರಿವ ಇಬ್ಬನಿಯ ಧಾರೆಯ ತಾಳಕ್ಕೆ
ತಕಪಕನೆ ಹೆಜ್ಜೆ ಹಾಕಬೇಕೆನ್ನಿಸುತ್ತಿದೆ||

ಯಾಕೋ ಗೊತ್ತಿಲ್ಲ..|
ಮನಸು ಹೊಸತಾಗುತ್ತಿದೆ..
ನಸುಕು ಹರಿಯುತ್ತಿದೆ..||


ಮನದಿ ಕತ್ತಲೆಯೋಡಿ..
ಬಾಳ ಬಾಂದಳದಲ್ಲಿ ಹೊಸ ಸೂರ್ಯ ಮೂಡಿ
ಮತ್ತೆ ಮುಂಜಾವುದಯಿಸುತ್ತಿದೆ..|


ಇದನ್ನು ಬರೆದಿದ್ದು -ದಂಟಕಲ್ಲಿನಲ್ಲಿ 7-11-2007ರಂದು

Tuesday, November 13, 2012

ನಮ್ಮೂರ ಜಲಪಾತ...

ನಮ್ಮೂರ ಜಲಪಾತ...

ನಮ್ಮೂರಲ್ಲೆ ಏನೆಲ್ಲ ಇದೆ.. ಆದರೆ ಜಲಪಾತ ಇಲ್ಲವಲ್ಲ ಅನ್ನೋ ಕೊರಗಿತ್ತು...
ಮೊನ್ನೆ ಮನೆಗೆ ಹೋದಾಗ ಹಾಗೆಯೇ ಗುಡ್ಡ ಬೆಟ್ಟ ತಿರುಗಾಡಲು ಹೋಗಿದ್ದೆ...
ಆಗ ಕಂಡಿದ್ದು ಈ ಜಲಪಾತ...

ಇದನ್ನು ಜಲಪಾತ ಎನ್ನಬಹುದೋ..ದಬದಬೆ ಎನ್ನಬಹುದೋ.. ಅಥವಾ.. ಇಳಿಜಾರಕಲಲ್ಲಿ ನೀರು ಬೀಳ್ತದೆ ಅಷ್ಟೇ ಅನ್ನಬಹುದೋ.. ನಿಮಗೆ ಬಿಟ್ಟದ್ದು..
ನಾನಂತೂ ಅದಕ್ಕೆ ಕಲ್ಯಾಣೇಶ್ವರ ಜಲಪಾತ ಉರುಫ್ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ...
ಹೀಗೆ ಕರೆಯಲೂ ಕಾರಣ ಇದೆ ನೋಡಿ..

ಈ ಜಲಪಾತ ಇರುವುದು ನಮ್ಮೂರಿನ ಹತ್ತಿರದ ಕುಚಗುಂಡಿ ಎಂಬ ಊರಿನ ಬಳಿ..
ಈ ಊರಿನಲ್ಲಿಯೇ ಕಲ್ಯಾಣೇಶ್ವರ ದೇವಾಲಯ ಇದೆ..
ನಮ್ಮೂರಿಗರು ಈ ದೇವಸ್ಥಾನಕ್ಕೇ ನಡೆದುಕೊಳ್ಳುತ್ತಾರೆ. 
ಅದಕ್ಕೆ ಕಲ್ಯಾಣೇಶ್ವರ ದೇವಾಲಯ ಅಥವಾ ಶಾರ್ಟ್ ಆಗಿ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ..

ಇದು ತೀರಾ ದೊಡ್ಡ ಜಲಪಾತ ಅಲ್ಲ.. ಆದ್ದರಿಂದ ಈ ಜಲಪಾತ ಅಷ್ಟು ಎತ್ತರ ಉಂಟು, ಇಷ್ಟು ಎತ್ತರ ಉಂಟು ಎಂಬ ಕಲ್ಪನೆಗಳು ಬೇಡ..15-20 ಅಡಿಗಳ ಎತ್ತರ ಇರಬಹುದು ಅಷ್ಟೇ.. ಮಳೆಗಾಲದಿಂದ ಡಿಸೆಂಬರ್ ತನಕ ನೀರು ಇರ್ತದೆ...
ಆ ಮೇಲೆ ಹಳ್ಳದಲ್ಲಿ ನೀರಿದ್ದರೆ ಮಾತ್ರ ಜಲಪಾತದ ದರ್ಶನ ಭಾಗ್ಯ ಸಾಧ್ಯ...
ಇಲ್ಲವಾದಲ್ಲಿ ಬಂದ ದಾರಿಗೆ ಸುಂಕವಿಲಲ್ಲ..

ಜಲಪಾತದ ಎದುರು ದೊಡ್ಡ ಗುಂಡಿ ಇದೆ.. ಆಳವಿಲ್ಲ. ಈಜಬಹುದು..
ಕಲ್ಲಿನ ಹಾಸು ಇಲ್ಲವಾದ ಕಾರಣ... ಮಣ್ಣು ಮಣ್ಣು.. ಆದರೆ ನೀರು ಮಾತ್ರ ಕೊರೆಯುವಷ್ಟು ತಂಪು..
ಪಿಕ್ ನಿಕ್ಕಿಗೆ ಬರಬಹುದು..
ಎದುರಿಗೆ ಗುರು ಗೌಡನ ಮನೆ ಇದೆ..
ಕುಡಿಯಲು ನೀರು ಕೊಟ್ಟಾರು..

ಬರುವ ಬಗೆ : ಶಿರಸಿಯಿಂದ ಕಾನಸೂರು, 2 ಕಿ.ಮಿ ದೂರದ ಅಡಕಳ್ಳಿ.. ಅಡಕಳ್ಳಿಯ ಭೂತನಕಟ್ಟೆಯಿಂದ ದಂಟಕಲ್ ದಾರಿಯಲ್ಲಿ 4.5 ಕಿ.ಮಿ ದೂರ ಈ ಜಲಪಾತಕ್ಕೆ. ದಂಟಕಲ್ಗೆ ಬಂದು ಕುಚಗುಂಡಿ ಊರಿನ ಕುರಿತು ಕೇಳಿದರೆ ಯಾರಾದರೂ ದಾರಿ ತೋರಿಸಿಯಾರು.. ಕುಚಗುಂಡಿಯಲ್ಲಿ ಕಲ್ಲೇ ದೇವಸ್ಥಾನವನ್ನು ಹಾದು, ಗುರು ನಾಯ್ಕನ ಮನೆ ಹತ್ತಿರ ಬರಬೇಕು.. ಮರಲಮನೆ ಬಳಿ ಇದೆ ಈ ಜಲಪಾತ...ಇದು ಒಂದು ದಾರಿ..
ಇನ್ನೊಂದು : ಶಿರಸಿಯಿಂದ ಕಾನಸೂರು.. ಕಾನಸೂರಿನಿಂದ ಬಾಳೇಸರ ರಸ್ತೆಯಲ್ಲಿ ಕೋಡ್ಸರ.. ಕೋಡ್ಸರದಿಂದ ಕುಚಗುಂಡಿ ಅಥವಾ ದಂಟಕಲ್ ರಸ್ತೆಯ ಗುಂಟ 2 ಕಿ.ಮಿ ಬಂದರೆ ಮರಲ ಮನೆ ಘಟ್ಟ ಅಥವಾ ಮರಲಮನೆ ಮುರುಕಿ ಸಿಗ್ತದೆ.. ಅದರ ಕೆಳಗೆ ಒಂದು ಹಳ್ಳ ಹರಿದು ಹೋಗ್ತದೆ.. ಅದಕ್ಕೆ ಈ ಜಲಪಾತ ಆಗಿದೆ.. ರಸ್ತೆ ಪಕ್ಕವೇ ಕಾಣ್ತದೆ..
ಸರ್ವ ಋತು ರಸ್ತೆ ಇದೆ..
ಆದರೆ ಸರ್ವ ಋತುವಿನಲ್ಲೂ ನೀರು ಇರೋದಿಲ್ಲ..

ಊರು ಚಿಕ್ಕದು.. ಮುಗ್ದ ಜನ.. ಬಂದವರು ಮಲಿನ ಮಾಡದಿದ್ದರೆ ಊರಿನವರಿಗೆ ಸಂತಸ...
ಹೊರ ಜಗತ್ತಿಗೆ ಇದರ ಬಗ್ಗೆ ಗೊತ್ತಿರಲಿಲ್ಲ.. ಈಗ ನಾನೇ ಎಲ್ಲರಿಗೆ ತಿಳಿಸ್ತಾ ಇರೋದ್ರಿಂದ..
ಅಲ್ಲಿ ಮಲಿನವಾದರೆ ನಾನೇ ಹೊಣೆಗಾರನಾಗಬೇಕಾಗುತ್ತದೆ..
ಪ್ಲಾಸ್ಟಿಕ್ ಬೇಡ..
ಸುಮ್ಮನೆ ಹೋಗಿ ಎಂಜಾಯ್ ಮಾಡ್ಕೊಂಡು ಬನ್ನಿ...
ನಿಮ್ಮ ಕುತೂಹಲ ತಣಿಕೆಗೆ ಇದೋ ಪೋಟೋ ಹಾಕಿದ್ದೇನೆ.. ಹೋಗಲಿಕ್ಕಾಗದವರು ಇಲ್ಲೇ ನೋಡಿ ಖುಷಿ ಪಡಿ..

Thursday, November 8, 2012

ಪರಿತಾಪಿಯ ಪ್ರೇಮಪತ್ರ

ಪರಿತಾಪಿಯ ಪ್ರೇಮಪತ್ರ

ಮನದ ಮೂಸೆಯಿಂದರಳಿದ ಪ್ರೇಮಕಾವ್ಯ


ಒಲವಿನ ಗೆಳತಿ,
    ನೀನು ಇಷ್ಟು ಬೇಗ ಹೀಗೆ ರಿಯಾಕ್ಟ್ ಆಗ್ತೀಯಾ ಅಂತ ನಾನು ತಿಳಿದಿರಲಿಲ್ಲ. ನೀನು ಒಪ್ಪದೇ ಇರಬಹುದು, ನನ್ನ ಲೈಕ್ ಮಾಡದೇ ಇರಬಹುದು ಅಂದ್ಕೊಂಡಿದ್ದೆ. ನಿನ್ನ ನಿರ್ಧಾರ ಕೇಳಿನ ನನ್ನೊಡಲಿನಲ್ಲಿ ಅದೆಷ್ಟೋ ಹರ್ಷಗಳು ಚಿಲುಮೆ ಉಕ್ಕಿ ಒಡೆದು ಎಂತಹ ಮಧುರ ಯಾತನೆಯಾಯ್ತು ಅಂತೀಯಾ...
    ನೀನು ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕ್ಷಣವೇ ನನ್ನ ಮನದ ಮರುಭೂಮಿಯೊಳಗೆ ವರ್ಷಧಾರೆ ಸುರಿದಂತಾಗಿಬಿಟ್ಟಿತು. ಅಂತೂ ಜೀವನದಲ್ಲಿ ಮೊದಲಬಾರಿಯೋ ಎಂಬಂತೆ ನಾನು ಆಸೆ ಪಟ್ಟಿದ್ದು, ಇಷ್ಟಪಟ್ಟಿದ್ದು ನನ್ನ ಕೈ ಹಿಡಿದಿದೆ. ಇಂಥಾ ಹೊತ್ನಲ್ಲೇ ನನ್ನ ಮನಸ್ಸು ಅದೆಷ್ಟು ಕವನಗಳನ್ನು ದೊಡ್ಡ ಹಬ್ಬದಲ್ಲಿ ಪುಂಡಿ ನಾರಿನ ಹಗ್ಗ ಹೊಸೆದಂತೆ ಹೊಸೆಯಲಾರಂಭಿಸಿದೆ ಗೊತ್ತಾ...
    ಅದು ಹಾಗಿರಲಿ ಬಿಡು, ನನಗೆ ನೀನು ಯಾಕಿಷ್ಟವಾದೆ ಅನ್ನುವುದನ್ನು ಮೊದಲು ಹೇಳಿಬಿಡುತ್ತೇನೆ ಕೇಳು. ಆ ನಿನ್ನ ನಗು, ನಕ್ಕಾಗ ಗುಳಿ ಬೀಳುವ ಕೆನ್ನೆ, ಇಂಪಾದ ಧ್ವನಿ ಇವೆಲ್ಲವೂ ನನ್ನನ್ನು ಮೊದಲು ಇಂಪ್ರೆಸ್ ಮಾಡಿದ್ದು. ಆ ನಂತರ ನೀನು ಮೊದಲು ನನ್ನ ಕವನಗಳ ಅಭಿಮಾನಿಯಾಗಿ `ನೀನು ಚೊಲೋ ಕವನ ಬರೀತೆ ಹಾ.. ಐ ಲೈಕ್ ಇಟ್..' ಎಂದಾಗ ಹೊಸ ಗೆಳತಿಯೊಬ್ಬಳು ಸಿಕ್ಕಳು ಅಂದ್ಕೊಂಡಿದ್ದೆ. ಆ ನಂತರವೇ ಅಲ್ಲವೇ ನಾನು ನಿನ್ನನ್ನು ಸಂಪೂರ್ಣವಾಗಿ ಅರಿತಿದ್ದು.
    ನಿನ್ನ ಗುಣಗಳು, ನಿನ್ನ ಗುರಿಗಳು, ಮನದಾಳದ ತುಮುಲಗಳು, ಭಾವನೆಗಳು, ಜೊತೆಗೆ ಬದುಕೂ ಕೂಡ.. ಇವೆಲ್ಲ ನನ್ನದರಂತೆಯೇ ಇವೆ ಎಂದು ಅರಿತಿದ್ದು ಆ ನಂತರವೇ ಅಲ್ಲವೇ. ಹೀಗೆಲ್ಲಾ ಇಷ್ಟಪಟ್ಟರೂ ನಿನ್ನ ಬಳಿ ನನ್ನ ಮನದಾಳದ ಬಯಕೆಯನ್ನು ತಿಳಿಸಲು ಅದೆಷ್ಟು ಕಷ್ಟಪಟ್ಟುಬಿಟ್ಟಿದ್ದೆನಲ್ಲಾ... ಎಲ್ಲರಿಗೂ ಹಾಗೆಯೇ ಆಗ್ತದಾ ಎಂಬ ತಳಮಳ.. ಮನದೊಳಗೆ ಅದೇನೋ ದುಗುಡ. ಹೇಳಿಕೊಳ್ಳಲಾಗದ ಚಡಪಡಿಕೆ. ನೀನು ಒಪ್ಕೋತೀಯೋ, ಇಲ್ವೋ.. ಸಿಟ್ಟಾಗಿಬಿಡ್ತೀಯೋ.. ನಿನ್ನೆಡೆಗೆ ಹುಟ್ಟಿದ ಪ್ರೀತಿ ನಮ್ಮಿಬ್ಬರ ನಡುವಣ ಸ್ನೇಹವನ್ನು ಕೊಂದುಹಾಕಿದರೆ... ಎಂಬ ಆತಂಕ.. ನೀನು ಎಲ್ಲಿ ನನ್ನನ್ನು ತಿರಸ್ಕರಿಸಿ, ನನ್ನನ್ನು ಅವಮಾನದ ಕೋಟೆಯೊಳಗೆ ಮುಳುಗುವಂತೆ ಮಾಡುತ್ತೀಯೋ ಎಂಬ ಭಯ.. ಇಂತಹ ಭಾವನೆಗಳ ತೊಳಲಾಟದ ನಡುವೆ ಅನೇಕ ದಿನಗಳನ್ನು ದೂಡಿದೆ.
    ಇನ್ನಾಗೋದೇ ಇಲ್ಲ.. ಅಂತ ಕೊನೆಗೊಂದು ದಿನ ನೀನು ಕೇಳಿದ್ದ ಒಂದು ಪುಸ್ತಕದ ನಡುವಣ ಯಾವುದೋ ಪುಟದ ಮಧ್ಯ ನನ್ನ ಭಾವನೆಗಳನ್ನೆಲ್ಲ ಅಕ್ಷರ ರೂಪಕ್ಕೆ ಇಳಿಸಿ, ನನ್ನ ಪ್ರೀತಿಸ್ತೀಯಾ ಅಂತ ಕೇಳಿ ಬರೆದಿಟ್ಟುಬಿಟ್ಟಿದ್ದು ಇನ್ನೂ ನೆನಪಿದೆ ಅಲ್ವಾ.. ಕೊನೆಗೊಮ್ಮೆ ನೀನು ತಿರುಗಿ ಬಂದು ಸಿಟ್ಟಾಗದೇ ನನಗೆ ಪುಸ್ತಕ ಮರಳಿಸಿ ಹೂ ನಗು ನಕ್ಕು ಹೋದೆಯಲ್ಲಾ ಆಗಲೇ ನನಗೆ ಮೂರನೇ ಸಾರಿ ಜೀವ ಬಂದಿದ್ದು. ನಾನು ಕೊಟ್ಟ ಪತ್ರಕ್ಕೆ ಉತ್ತರವೋ ಎಂಬಂತೆ ನೀನು ಕೊಟ್ಟ ನವಿಲುಗರಿಯನ್ನು ಜೋಪಾನವಾಗಿ ಇಟ್ಟಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಹಾಂ ಮತ್ತೆ...ನಾನು ಪ್ರೇಮ ಪತ್ರ ಕೊಟ್ಟು, ನೀನು ಮರಳಿ ಉತ್ತರ ಹೇಳುವ ನಡುವೆ ನಾನು ಎದುರಿಸಿದ ಭಾವನೆಗಳು ಶಬ್ದಕ್ಕೆ ನಿಲುಕೋದಿಲ್ಲ..ಮುಂದೊಂದು ದಿನ ಎಂದಾದರೂ ಕವಿತೆಯಾಗಿ ಹೊರ ಬೀಳಬಹುದು ಬಿಡು..
    ಆದರೂ.. ನೀನು ಒಪ್ಪಿಬಿಟ್ಟೆಯಲ್ಲಾ.. ಇನ್ನೇನು ಬಿಡು.. ಒಂದು ಟೆನ್ಶನ್ ತಪ್ಪಿದ ಹಾಗಾಯಿತು. ಹಾಗೇ ನನ್ನ ಬದುಕಿನಲ್ಲಿ ಬಂದಿದ್ದೀಯಾ.. ನನ್ನ ಮನಸ್ಸಿನ ಮೂಟೆಗೆ ನಿನ್ನ ಬದುಕೆಂಬ ಮೊಬೈಲಿನಿಂದ ಆಗಾಗ ಮೆಸೇಜ್ ಮಾಡ್ತಾ ಇರು ಮಾರಾಯ್ತಿ,,, ನನ್ನ ಇನ್ ಬಾಕ್ಸ್ ಖಾಲಿ ಹೊಡಿತಾ ಇದೆ. ಅದಕ್ಕಾಗಿಯೇ ಕಾಯ್ತಾ ಇದ್ದೇನೆ.. ಈಗಷ್ಟೇ ನೀನು ನನ್ನಿಂದ ಬೀಳ್ಕೊಟ್ಟು, ನಾಳೆ ಬರ್ತೀನಿ ಅಂತ ಹೇಳಿ ಹೋಗಿದ್ದೀಯಾ,.. ಹುಚ್ಚು ಖೋಡಿ ಮನಸ್ಸು ಕೇಳ್ತಾನೇ ಇಲ್ಲ ನೋಡು... ಬರಹಕ್ಕೆ ಹಚ್ಚಿಬಿಟ್ಟಿದೆ..
    ಮತ್ತೆ ನಾಳೆ ಸಿಗ್ತೀನಿ.. ಬದುಕಿನ ಭಾವನೆಗಳ ವಿನಿಮಯ ಮಾಡಿಕೊಳ್ಳೋಣ.. ಸರಿ ಮಾರಾಯ್ತಿ.. ಈಗ ಇನ್ನು ಹೆಚ್ಚು ಹೇಳಲಾರೆ.. ಭಾವದಾಟ ಮೇರೆ ಮೀರ್ತಾಇದೆ.. ಬರಹಕ್ಕೊಂದು ಕೊನೆ ಬಿಂದು ಇಡ್ತೀನಿ..

ಇಂತಿ ನಿನ್ನವ
ತೇಜಸ್ವಿ.

(ಪ್ರೇಮದ ಕಾಣಿಕೆ.. ಪ್ರೀತಿಯಲ್ಲಿ ಬಿದ್ದವನ ಮೊದಲ ಪ್ರೇಮಪತ್ರ ಹೀಗಿರಬಹುದಾ... ಸುಮ್ಮನೇ ಬರೆದಿದ್ದು.. ಹೆಂಗಿದೇ ಅನ್ನೋದನ್ನು ಕಮೆಂಟಿಸಿ..)

Wednesday, November 7, 2012

ಒಂದಷ್ಟು ಹನಿ ಚುಟುಕಗಳು...

28) ಪಾಣಿಗ್ರಹಣ
ಮದುವೆಯ ಸಂಪ್ರದಾಯ
ಪಾಣಿಗ್ರಹಣ...!
ಹೆಣ್ಣಿಗೋ ಒಂದು
ಪ್ರಾಣಿ ಗ್ರಹಣ..!!
ಆದರೆ ಗಂಡಿಗೆ ಮಾತ್ರ
ಬಾಳಿನ ತುಂಬಾ
ಖಗ್ರಾಸ ಗ್ರಹಣ...!!

29)ರಾಧಾ

ಜಗತ್ತಿನ ರಕ್ಷಕ
ಭಕುತರ ಪ್ರೇಮಿ
ಕೃಷ್ಣನನ್ನು love
ಮಾಡಿದರೂ ಈಕೆ
ಭಗ್ನ ಪ್ರೇಮಿ!!

30) ರಾಜಕಾರಣ

 ರಾ- ರಾಜ್ಯವನ್ನು
 -ಜಗಿದು ತಿಂದು
ಕಾ- ಕಾಲಿ ಮಾಡಿ
ರಣ-ರಣವನ್ನಾಗಿಸುವುದು
ರಾಜಕಾರಣ

31)ಭಾರತವೆಂದರೆ...

ಭಾರತವೆಂದರೆ
ಒಂದು ವಿಶ್ವ ಚೇತನ..!
ಭವ್ಯ ಸಮ್ಮೇಳನ...!!
ಹುಟ್ಟಿಬೆಳೆದಿದೆ ಮಹಾ ಚೇತನ..!!!
ಜೊತೆಗೆ ತುಂಬಿ ತುಳುಕಿದೆ
ಬಡತನ!

32) ತೋರಿಕೆಗಳು

ಭಾರತ ದೇಶದ 
ಮೂರು ಜಗತ್ಪ್ರಸಿದ್ಧ 
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ...