Saturday, September 1, 2012

ಗೆಳತಿ....


ಮೋಡವಾಗಿ 
ನನ್ನೊಳು ಬಂದ
ನೀನು ಮೊದಲು
ಮಿಂಚಾದೆ.
ಗುಡುಗಾದೆ..
ಸಿಡಿಲಾದೆ...
ಮಳೆಯೂ ಆಗಿ 
ಹೋದ ನೀನು
ಕೊನೆಗೊಮ್ಮೆ 
ನನ್ನ ಪಾಲಿಗೆ 
ಕಂಠ ಮುಟ್ಟಿದ
ಪ್ರವಾಹವಾಗಿ ಹೋದೆ....| 

ನನ್ನ ಕನ್ನಡಿಯೊಳಗೆ


ಹಾಯ್....
ಅಪರೂಪಕ್ಕೆ ಬರೆದ ಕವನವೊಮದನ್ನು ನಿಮ್ಮ ಮುಂದಕ್ಕೆ ಇಡುತ್ತಿದ್ದೇನೆ... ಓದಿ ಅಭಿಪ್ರಾಯ ತಿಳಿಸಿ...

ನನ್ನ ಕನ್ನಡಿಯೊಳಗೆ

ನನ್ನ ಕನ್ನಡಿಯೊಳಗೆ
ನಿನ್ನ ಬಿಂಬವು ಯಾಕೋ
ಸುಮ್ಮನೇ ಇಣುಕುತಿದೆ
ಅಚ್ಚಳಿಯದೇ....

ಮನದ ದಿಕ್ಪಟಲದಲಿ
ನಿನ್ನ ಕನಸದು ನನಗೆ
ಬರಿದೆ ನೆನಪಾಗುತಿದೆ
ಹುಚ್ಚಿನಂತೆ....

ಕನಸಿನಾ ಕಣ್ಗಳಿಗೆ
ನಿನ್ನ ಒಲವದು ಯಾಕೋ
ತಟ್ಟನೆ ಮುತ್ತುತಿವೆ
ಬರಿದಾಗದೇ...

ಉಸಿರಿನಾ ಜೀವದಲಿ
ನಿನ್ನ ನಾಮವು ಹಾಗೆ
ಸುಮ್ಮನೇ ಬರೆದಿರುವೆ
ಅಳಿಸದಂತೆ..

Friday, February 25, 2011

ದೇವಣ್ಣ ಸ್ವರ್ಗಾಧಿಪತಿಯಾದ ಕಥೆ

ಭೂಲೋಖದ ಮಹಾಪಿತ ದೇವಣ್ಣ ಇಂದ್ರನಾದ ಕಥೆ ಇದು..
ಓದಿ.. ಎರಡು ಸಾಲು ಬರೆಯಿರಿ..

ಸ್ವರ್ಗದ ಇಂದ್ರ ಪದವಿಗಾಗಿ ದೇವಲೋಕದ ತುಂಬ ಚುನಾವಣೆ ನಡೆಯಲು ದೇವಣ್ಣ ಸತ್ತು ಸೀದಾ ನರಕಕ್ಕೆ ಹೋಗಿದ್ದು ಪ್ರಮುಖ ಕಾರಣವಾಗಿತ್ತು. ಆತ ಕರ್ನಾಟಕ ರಾಜಕೀಯವನ್ನು ಗಬ್ಬೆಬ್ಬಿಸಿ ಕೊನೆಗೊಮ್ಮೆ ಸತ್ತಾಗ ನೇರವಾಗಿ ನರಕಕ್ಕೇ ಹೋದ.
ದೇವಣ್ಣ ಅದ್ಯಾಕೆ ಸ್ವರ್ಗಕ್ಕೆ ಹೋಗಲಿಲ್ಲ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಆತ ಸತ್ತು ಸ್ವರ್ಗದ ಕಡೆಗೆ ಪಯಣ ಬೆಳೆಸುವ ವೇಳೆಗಾಗಲೆ ಸ್ವರ್ಗದ ಬಾಗಿಲನ್ನು ಹಾಕಿ ಕೆಲವೇ ನಿಮಿಷಗಳಾಗಿತ್ತು. ಹೀಗಾಗಿ ದೇವಣ್ಣ ಸ್ವರ್ಗಕ್ಕೆ ಹೋಗುವುದನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದ.
ದೇವಣ್ಣ ನರಕಕ್ಕೆ ಹೋದ. ಆದರೆ ಅಲ್ಲಿ ಚಿತ್ರಗುಪ್ತ ಈತನ ತಂಟೆ ಬೇಡ ಎಂದು ಇವನ ಕೇಸಿನ ಫೈಲಿನ ಹಿಯರಿಂಗನ್ನು ತಡಮಾಡುತ್ತಲೇ ಇದ್ದ. ದೇವಣ್ಣನಿಗಿಂತ ಮುಂಚೆ ಮರಣಿಸಿದ ಅನೇಕ ಘಟಾನುಗಟಿ ನಾಯಕರ ಕೇಸಿನ ಹಿಯರಿಂಗು ಬಾಕಿ ಇದ್ದಿದ್ದೂ, ದೇವಣ್ಣನ ಕೇಸಿನ ಹಿಯರಿಂಗ್ ತಡವಾಗಲು ಮುಖ್ಯ ಕಾರಣವಿರಬಹುದು. ಈ ಕಾರಣಕ್ಕಾಗಿ ನರಕಕ್ಕೆ ಹೋದರೂ ದೇವಣ್ಣನಿಗೆ ಯಾವುದೇ ಶಿಕ್ಷೆ ಇಲ್ಲ ಎಂಬಂತಾಗಿ ಆತ ಹಾಯಾಗಿದ್ದ.
ಆತ ಹೇಳಿ ಕೇಳಿ ದೇವಣ್ಣ. ಸುಮ್ಮನಿರುವ ಜಾಯಮಾನದವನ್ನಲ್ಲ. ನರಕಕ್ಕೆ ಹೋದ ಕೆಲವೇ ಸಮಯದಲ್ಲಿ ಚಿತ್ರಗುಪ್ತನ ಗೆಳೆತನ ಮಾಡಿಯೇ ಬಿಟ್ಟ. ಮಾಡಿದ್ದಷ್ಟೇ ಅಲ್ಲ, ಯಾವಾಗಲೂ ಚಿತ್ರಗುಪ್ತನ ಅಕ್ಕಪಕ್ಕದಲ್ಲಿಯೇ ಸುಳಿದಾಡುತ್ತಾ ಕಟ್ಟೆ ಪಂಚಾಯ್ತಿ ಪ್ರಾರಂಭಿಸಿದ್ದ.
ಹೀಗಿರಲು ಹಲವು ವಸಂತಗಳು ಕಳೆದವು. ಒಂದು ದಿನ ಯಾವುದೋ ದುರ್ಮುಹೂರ್ತದಲ್ಲಿ ನರಕಾಧಿಪತಿ ಯವನ ಕಣ್ಣಿಗೆ ದ್ಯಾವಣ್ಣ ಬಿದ್ದನೋ ಅಥವಾ ದ್ಯಾವಣ್ಣನ ಕಣ್ಣಿಗೆ ನರಕಾಧಿಪತಿ ಬಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ ಮುಖಾಮುಖಿಯಾದರು. ಮಾನವನಾದ ದ್ಯಾವಣ್ಣ  ಯಮರಾಜನ ಜೊತೆ ಮಾತುಕಥೆ ಪ್ರಾರಂಭಿಸಿದ. ಅಷ್ಟೇ ಅಲ್ಲ, ತೀರಾ ಹತ್ತಿರದ ವ್ಯಕ್ತಿಯಾಗಿ ರೂಪುಗೊಂಡು ಬಿಟ್ಟ. ಯಮನೂ ಇತ್ತೀಚೆಗೆ ತುಂಬಾ ಪಾಸ್ಟಾಗಿ ಓಡುತ್ತಿರುವ ಬೂಮಿಯ ವಿಷಯವನ್ನು ಅರಿತಿರದ ಕಾರಣ ದೇವಣ್ಣನಿಂದ ಅದನ್ನು ಕೆಲಿ ತಿಳಿದುಕೊಂಡ. ದ್ಯಾವಣ್ಣನಿಗೂ ತನ್ನ ಮಾತನ್ನು ಕೆಳುವವರು ಬೇಕಿತ್ತು. ಸಿಕ್ಕಿದ್ದೇ ಛಾನ್ಸು ಎಂಬಂತೆ ದ್ಯಾವಣ್ಣ ತನ್ನ ಎಂದಿನ ಬೆಣ್ಣೆ ಮಾತನ್ನು ಶುರು ಹಚ್ಚಿದ ಅಲ್ಲದೆ ಯಮನಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬೆಣ್ಣೆ ಹಚ್ಚಿದ. ತನ್ನ ರಾಜಕೀಯ ವಿವಿಧ ಚತುರಪಟ್ಟುಗಳು, ತಾನು ಅಧಿಕಾರ ಹಿಡಿಯಲು ಮಾಡಿದ ಪ್ರಯತ್ನಗಳು ಈ ಮುಂತಾದವುಗಳನ್ನೆಲ್ಲ ಪುರಾಣದ ಕಥೆಗಳಂತೆ ಹೇಳಿದ. ಜೊತೆಗೆ ತಾನು ಕರ್ನಾಟಕದಲ್ಲಿ ಹುಟ್ಟಲೆ ಬಾರದಿತ್ತು ಎಂದೂ ಹೇಳಿ ಕನ್ನಡಿಗರೆಡೆಗಿನ ತನ್ನ ಶತಮಾನದ ದ್ವೇಷವನ್ನೂ ಕಾರಿಕೊಂಡ.
ಮಾತು ಲೋಕಾಭಿರಾಮದ ಡೆಡ್ ಎಂಡ್ನಲ್ಲಿ ಇನ್ನೇನು ಟರ್ನ್ ತೆಗೆದುಕೊಳ್ಳಬೇಕು ಎಂಬಂತಿದ್ದಾಗ ಯಮನ ಬಳಿ ದ್ಯಾವಣ್ಣ ತನ್ನ ಕೂದಲಿಲ್ಲದ ತಲೆಯನ್ನು ಓಡಿಸಿದ. ಅಲ್ಲದೆ ನೀನ್ಯಾಕೆ ಸ್ವರ್ಗಾಧಿಪತಿಯಾಗಬಾರದು ಎಂದು ಯಮರಾಜನನ್ನು ಪ್ರಶ್ನಿಸಿಬಿಟ್ಟ. ಇಲ್ಲಿಯವರೆಗೂ ಕೊಟ್ಟ ಕುದುರೆಯನ್ನು ಏರಿ ಸವಾರಿ ಮಾಡುತ್ತಿದ್ದ ಯಮನಿಗೆ ದ್ಯಾವಣ್ಣ ಕೇಳಿದ ಪ್ರಶ್ನೆ ಕಾಡಿಬಿಟ್ಟಿತು. ಅಲ್ಲದೆ ಆತನ ಪ್ರಶ್ನೆಯಲ್ಲೂ ತರ್ಕವಿದೆಯಲ್ಲ ಎನಿಸಿತು.
ಕೊನೆಗೆ ಯಮ ಡೈರೆಕ್ಟಾಗಿ ಇಂದ್ರನ ಬಳಿ ಹೋಗಿ ನಿನ್ನ ಸ್ಥಾನವನ್ನು ನನಗೆ ಬಿಟ್ಟುಕೊಡು ಎಂದು ಕೇಳಿದ. ದಕ್ಕೆ ಇಂದ್ರ ಒಪ್ಪಲಿಲ್ಲ. ಪರಿಣಾಮ ಇಂದ್ರ ಹಾಗೂ ಯಮನಿಗೆ ಶರಂಪರ ಜಗಳವಾಯಿತು. ಪರಿಹಾರ ದೊರೆಯದಾದಾಗ ಯಮ ದ್ಯಾವಣ್ಣನ ಸಲಹೆಯ ಮೆರೆಗೆ ಹೈಕಮಾಂಡ್ ವಿಷ್ಣುವಿನ ಅಪೀಲ್ ಹೋದ. ವಿಷ್ಣುವಿಗೂ ಮೊದಲು ಈ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗಲೇ ಇಲ್ಲ.
ಕೊನೆಗೆ ಸಂಚಾರಿ ನಾರದರು ಬಂದು ಇಬ್ಬರಿಗೂ ಚುನಾವಣೆ ನಡೆಸಿ ಗೆದ್ದವರು ಇಂದ್ರನಾಗಲಿ ಎಂದಾಗ ಎಲ್ಲರೂ ಹೌದೆಂದರು. ಈ ಕಾರಣದಿಂದ ದೇವಲೋಕದಲ್ಲಿ ಚುನಾವಣೆ ನಡೆಯಲು ಮೊದಲಾಯಿತು. ಇಂದ್ರ ಹಾಗೂ ಆತನ ಬೆಂಬಲಿಗರು, ಯಮ ಹಾಗೂ ಆತನ ಬೆಂಬಲಿಗರು ದೇವಲೋಕದಲ್ಲಿ ಚುನಾವಣೆಗೆ ನಿಂತುಬಿಟ್ಟರು. ಇಷ್ಟರಲ್ಲಾಗಲೇ ದೇವಲೋಕದಲ್ಲಿಯೂ ವರ್ಡ್ ಫೆಮಸ್ ಆಗಿದ್ದ ದ್ಯಾವಣ್ಣ ಸಹ ಒಂದು ಕೈ ನೋಡಿಬಿಡುವಾ ಎಂದು ಚುನಾವಣೆಗೆ ಸ್ಪರ್ಧಿಸಿದ್ದ.!!
ಕೊನೆಗೊಮ್ಮೆ ಚುನಾವಣೆ ಸಾಂಗವಾಗಿ ನೆರವೇರಿ ಫಲಿತಾಂಶವೂ ಹೊರಬಿದ್ದಿತು. ವಿಚಿತ್ರವೆಂದರೆ ಇಂದ್ರ ಹಾಗೂ ಯಮ ಅವರವರ ಜೊತೆಗಾರರೊಡನೆ ಸಮ ಪ್ರಮಾಣದ ಕ್ಷೇತ್ರಗಳಲ್ಲಿ ಗೆದ್ದು ಬಿಟ್ಟಿದ್ದರು. ಮತ್ತೆ ಹಲೆ ಸಮಸ್ಯೆಯೆ ಮುಂದುವರಿಯುವ ಲಕ್ಷಣಗಳೆಲ್ಲ ನಿಚ್ಚಳವಾಗಿ ಕಣ್ಣೆದುರು ರಾಚತೊಡಗಿತು. ಆದರೆ ವಿಚಿತ್ರವೆಂದರೆ ದ್ಯಾವಣ್ಣ ದೇವಲೋಕದಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದುಬಿಟ್ಟಿದ್ದ. ! ಹೀಗಾಗಿ ದ್ಯಾವಣ್ಣ ಸ್ವರ್ಗದ ಅಧಿಪತಿಯ ನಿರ್ಣಯಿಸುವ ನಿರ್ಣಾಯಕ ವ್ಯಕ್ತಿಯಾಗಿಬಿಟ್ಟಿದ್ದ. ಆತ ಬೆಂಬಲ ನೀಡಿದ ವ್ಯಕ್ತಿಗಳು ಇಂದ್ರನಾಗುವ ಸಾಧ್ಯತೆಗಳಿದ್ದವು.
ಆಗ ಪುನಃ ತನ್ನ ಬೋಳು ತಲೆಯನ್ನು ಓಡಿಸಿದ ದ್ಯಾವಣ್ಣ ಸೀದಾ ಇಂದ್ರನ ಬಳಿ ಹೋಗಿ ಮೈತ್ರಿ ಮಾಡಿಕೊಂಡ. ಮೈತ್ರಿಗೆ ಮುನ್ನ ಹಲವಾರು ಕರಾರು ಪತ್ರಗಳನ್ನಿಟ್ಟು ಅದಕ್ಕೆ ಸಹಿಯನ್ನೂ ಹಾಕಿಸಿಕೊಂಡ.! ಆ ಪ್ರಕಾರವಾಗಿ ದೇವಲೋಕದಲ್ಲಿ ತಾನೆ ಮೊದಲ ಅವಧಿಕೆ ಇಂದ್ರನಾಗಬೇಕು ಎಂದು ಪಟ್ಟುಹಿಡಿದ. ಮೊದಲಿನ ಅಧಿಕಾರದ ರುಚಿ ಕಂಡಿದ್ದ ಇಂದ್ರ ಇದಕ್ಕೆ ಕಣ್ಣು ಮುಚ್ಚಿ ಒಪ್ಪಿಕೊಂಡ. ಪರಿಣಾಮವಾಗಿ ದ್ಯಾವಣ್ಣ ಸ್ವರ್ಗಕ್ಕೇ ರಾಜನಾಗಿ ಎಲ್ಲರ ಅಚ್ಚರಿಗೆ ಕಾರಣನಾಗಿಬಿಟ್ಟ.
ಇಷ್ಟೇ ಆಗಿದ್ದಿದ್ದರೆ ದೇವಣ್ಣನ ವ್ಯಕ್ತಿತ್ವಕ್ಕೆ ಅಂತಹ ವಿಶೇಷ ಅರ್ಥಗಳೇ ಬರುತ್ತಿರಲಿಲ್ಲ. ತನ್ನ ಇಂದ್ರಾವಧಿ ಮುಗಿಯುತ್ತ ಬಂದಂತೆ ದ್ಯಾವಣ್ಣ ತನ್ನ ಎಂದಿನ ಡಬ್ಬಲ್ಗೇಮ್ ಪ್ರಾರಂಭಿಸಿದ. ಇದರಿಂದ ಮಾಜಿ ಇಂದ್ರ ಸಿಟ್ಟಾದ. ದ್ಯಾವಣ್ಣ ತನಗೂ ಮಾಜಿ ಇಂದ್ರನಿಗೂ ನಡುವೆ ಸಿದ್ಧಾಂತ ಬೇಧವಿದೆ ಎಂದು ದೇವಲೋಕದ ಪತ್ರಕರ್ತ ನಾರದರಲ್ಲಿ ಪೇಪರ್ ಸ್ಟೇಟ್ಮೆಂಟ್ ಕೊಟ್ಟ.! ಕೊನೆಗೊಮ್ಮೆ ಎಲ್ಲರ ನಿರೀಕ್ಷೆಯಂತೆ ಆ ಮಧುರ ಮೈತ್ರಿ ಮುರಕೊಂಡು ಬಿತ್ತು.
ಹೀಗಾದ ನಂತರ ದ್ಯಾವಣ್ಣ ಮತ್ತೆ ಯಮನ ಬಳಿ ಬಂದ. ಮೊದ ಮೊದಲು ಯಮ ದ್ಯಾವಣ್ಣನ ವಿರುದ್ಧ ಎಗರಾಡಿದರೂ, ಆ ನಂತರ ದ್ಯಾವಣ್ಣನ ರಂಗುರಂಗಿನ ರಂಗೀನ್ ಮಾತಿಗೆ ಕರಗಿ ನೀರಾಗಿ ದ್ಯಾವಣ್ಣನ ಜೊತೆ ಹೊಂದಾಣಿಕೆಗೆ ಮುಂದಾದ. ಮತ್ತದೇ ಅಧಿಕಾರದ ಆಮಿಷ ಎದುರಿಟ್ಟ. ಒಪ್ಪದಿದ್ದ ಯಮನಿಗೆ ಉಪೇಂದ್ರ (ಉಪ + ಇಂದ್ರ) ಪಟ್ಟವನ್ನು ನೀಡುವುದಾಗಿ ಪುಸಲಾಯಿಸಿದ. ಹಲವಾರು ಆಣೆ ಪ್ರಮಾಣಗಳನ್ನೂ ನೀಡಿದ. ಕೊನೆಗೊಮ್ಮೆ ಯಮ ಒಪ್ಪಿಕೊಂಡ ಇದರಿಂದಾಗಿ ದ್ಯಾವಣ್ಣ ಮತ್ತೊಮ್ಮೆ ಇಂದ್ರ ಪದವಿಗೆ ಏರಿದ. ಯಮ ಉಪೆಂದ್ರನಾಗಿಬಿಟ್ಟ.
ಹಲವು ವರ್ಷಗಳವರೆಗೆ ಅಧಿಕಾರ ನಡೆಸಿದ ನಂತರ ಕೊನೆಗೊಮ್ಮೆ ಅಧಿಕಾರವನ್ನು ನಡೆಸಿದ ನಂತರ ಯಮನಿಗೆ ಅಧಿಕಾರ ಬಿಟ್ಟುಕೊಡುವ ಕಾಲ ಹತ್ತಿರಕ್ಕೆ ಬಂತು. ಮತ್ತೆ ಗೌಡಣ್ಣ ತನ್ನ ವರಾತ ಪ್ರಾರಮಭಿಸಿದ. ಆದರೆ ಯಮ ಈ ಸಾರಿ ದ್ಯಾವಣ್ಣನ ವಿರುದ್ಧ ತಿರುಗಿ ಬಿದ್ದ.! ಮತ್ತೆ ಮೈತ್ರಿ ಮುರಿದುಬಿತ್ತು. ಬಗೆಹರಿಯದಂತಹ ಹಳೆಯ ಸಮಸ್ಯೆ ಮತ್ತೆ ಮುಂದುವರಿಯಿತು. ಕೊನೆಗೆ ಭಗವಾನ್ ಮಹಾವಿಷ್ಣುವಿಗೆ ಸಮಸ್ಯೆ ಪರಿಹಾರ ಮಾಡಲಾಗದೇ ಕೆಲಕಾಲ  ರಾಷ್ಟ್ರಪತಿ ಆಳ್ವಿಕೆ ಹೇರಿದ. ಇದರಿಂದ ಯಮ ಹಾಗೂ ಇಂದ್ರರು ಕಂಗಾಲಾದರು. ರಾಷ್ಟ್ರಪತಿ ಆಳ್ವಿಕೆ ಬೇಡವೆಂದರು. ಅಷ್ಟರಲ್ಲಿ ಬುದ್ದಿ ಬಂದಿದ್ದ ಯಮ ತನಗೆ ಕೊಟ್ಟಕುದುರೆಯೇ ಸಾಕು, ತಾನು ನರಕಾಧಿಪತಿಯಾಗಿದ್ದರೇ ಒಳ್ಳೆಯದು ಎಂದು  ಒಪ್ಪಿಕೊಂಡ ಕಾರಣ ಸಮಸ್ಯೆ ಅರಾಮಾವಾಗಿ ಕಳೆದುಹೋಯಿತು.
ಅಷ್ಟರಲ್ಲಿ ದ್ಯಾವಣ್ಣನ ಕೆಸು ಹಿಯರಿಂಗಿಗೆ ಬಂತು. ಎಲ್ಲರೂ ದ್ಯಾವಣ್ಣನಿಗೆ ಶಿಕ್ಷೆ ನೀಡಬೇಕು ಅಂದುಕೊಂಡರೂ ಯಾವ ಶಿಕ್ಷೆ ನೀಡಬೇಕೆಂಬುದು ಬಗೆ ಹರಿಯಲಿಲ್ಲ. ಕೊನೆಗೆ ಎಲ್ಲರೂ ನಾರದರು ಕೊಟ್ಟ ’ಗೌಡಣ್ಣ ಮತ್ತೆ ಪುನಃ ಕರ್ನಾಟಕದಲ್ಲೇ ಹಾ(ಆ)ಸನದಲ್ಲೇ ಹುಟ್ಟಲಿ’ ಎಂಬ ನಿರ್ಣಯಕ್ಕೆ ಒಪ್ಪಿ ಶಿಕ್ಷೆ ಜಾರಿಮಾಡಿದರು. ಅಷ್ಟರಲ್ಲಿ ಕಾಂಪ್ರಮೈಸ್ ಆಗಿದ್ದ ಯಮ ಹಾಗೂ ಇಂದ್ರರಿಗೆ ತಮ್ಮ ತಮ್ಮ ಹಳೆಯ ಕೆಲಸಗಳೇ ಮುಂದುವರಿದಿದ್ದವು.
ಕರ್ನಾಟಕದಲ್ಲಿ ಮರಳಿ ಹುಟ್ಟುವ ಮುನ್ನ ದ್ಯಾವಣ್ಣ ದೇವಲೋಕದ ಪತ್ರಕರ್ತ ನಾರದರ ಬಳಿ ಪೇಪರ್ ಸ್ಟೇಟ್ಮೆಂಟ್ ಕೊಡುತ್ತಾ ’ಛೇ ನಾನು ದೇವಲೋಕಕ್ಕೆ ಕಾಲಿಡಬಾರದಿತ್ತು. ಕಾಲಿಟ್ಟು ತಪ್ಪು ಮಾಡಿಬಿಟ್ಟೆ....’ ಎಂದ !!

Thursday, February 24, 2011

ಇವರ ಸಾಧನೆಗೆ ಸಾಟಿ ಯಾರು??

ಕಾಲಿಲ್ಲದ ರಾಘವೇಂದ್ರ ಸಮುದ್ರ ನದಿಗಳನ್ನು ಗೆದ್ದ...

ನಮ್ಮ ಸಮಾಜದಲ್ಲಿ, ನಮ್ಮ ನಡುವೆ ನೂರಾರು ಅಂಗವಿಕಲ ವ್ಯಕ್ತಿಗಳನ್ನು ಕಾಣುತ್ತಿರುತ್ತೇವೆ. ಯಾವುದೋ ಒಂದು ರೀತಿಯಲ್ಲಿ ಅಂಗವೈಕಲ್ಯವನ್ನು ಹೊಂದಿರುವ ಇವರಿಗೆ ಜನ್ಮಜಾತವಾಗಿ ಕೆಲವು ಪ್ರತಿಭೆಗಳು ಬಂದಿರುತ್ತವೆ. ಮತ್ತೆ ಕೆಲವರು ತಮ್ಮ ಅಂಗವೈಕಲ್ಯ ಮರೆತು ಹೋಗುವಂತೆ ಕಷ್ಟಪಟ್ಟು ಸಾಧನೆ ಮಾಡುತ್ತಾರೆ. ವಿಶ್ವದಾದ್ಯಂತ ಹೆಸರುವಾಸಿಯಾಗುತ್ತಾರೆ. ಅಂತವರ ಸಾಲಿಗೆ ಸೇರುವ ಓರ್ವ ಸಾಧಕ ನಮ್ಮ ಕನ್ನಡ ನಾಡಿನಲ್ಲಿಯೇ ಇರುವ ರಾಘವೇಂದ್ರ ಅಣ್ವೇಕರ್. ನಮ್ಮ ನಾಡಿನಲ್ಲೇ ಇದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವ್ಯಕ್ತಿ ಈತ.
ರಾಘವೇಂದ್ರ ಅಣ್ವೇಕರ್ ತನ್ನ ಅಂಗವೈಕಲ್ಯವನ್ನೂ ಮೀರಿ ನಿಂತ ಛಲಗಾರ. ಹುಟ್ಟಿದ ಕೆಲವೇ ದಿನಗಳಲ್ಲಿ ಕಾಡಿದ್ದು ಪೋಲಿಯೋ. ಅದರಿಂದಾಗಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೂ ಎದೆಗುಂದದೇ ಅಂತರಾಷ್ಟ್ರೀಯ ಈಜುಪಟುವಾಗಿ ರಾಘವೇಂದ್ರ ಬೆಳೆದುನಿಂತಿದ್ದಾನೆ. ದೈಹಿಕ ದೌರ್ಬಲ್ಯಗಳನ್ನು ಲೆಕ್ಕಿಸದೇ ಭಾರತಕ್ಕೆ ಕೀರ್ತಿ ತಂದುಕೊಟ್ಟ ಸಾಧಕ.
ಈಜಲಿಕ್ಕೆ ಕಾಲುಗಳೇಕೆ ಬೇಕು? ನಾನು ಕೈಗಳ ಮೂಲಕವೇ ಈಜಿ ತೋರಿಸಬಲ್ಲೆ ಎಂಬ ಛಲತೊಟ್ಟು ಅದನ್ನು ಮಾಡಿ ತೋರಿಸಿದ ಅಪರೂಪದ ಸಾಧಕ ರಾಘವೇಂದ್ರ. ಇವರ ಸಾಧನೆಗಳು ಬಹಳಷ್ಟು. ತಾವು ಪ್ರತಿನಿಧಿಸಿದ ಮೊಟ್ಟ ಮೊದಲ ರಾಷ್ಟ್ರೀಯ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಪದಕ ಗೆದ್ದು ತಮ್ಮ ಗೆಲುವಿನ ಅಭಿಯಾನ ಸಾಧಿಸಿದ ಇವರು ಇದುವರೆಗೂ ಹಿಮ್ಮೆಟ್ಟಿದ್ದೇ ಇಲ್ಲ. ಎದೆಗುಂದಿದ್ದಂತೂ ಇಲ್ಲವೇ ಇಲ್ಲ. ತಾವು ಭಾಗವಹಿಸಿದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 42 ಪದಕಗಳನ್ನು ಗೆಲ್ಲುವ ಮೂಲಕ ಯಾರೂ ಮಾಡದಂತಹ ಸಾಧನೆ ಮಾಡಿ ನಾಡಿಗೆ ಕೀರ್ತಿ ಕಲಶವಾಗಿದ್ದಾರೆ ರಾಘವೇಂದ್ರ.
ಈ ವಿಶಿಷ್ಟ ಈಜು ಪಟುವಿನ ಸಾಧನೆಗೆ ಕೊನೆಯಿಲ್ಲ. 2003ರಲ್ಲಿ ಹಾಂಕಾಂಗ್ನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಈಜು ಸ್ಫರ್ಧೆಯಲ್ಲಿ ಮೊಟ್ಟಮೊದಲ ಬಾರಿಗೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ, ಚೊಚ್ಚಲ ಪ್ರಯತ್ನದಲ್ಲಿಯೇ 3 ಬೆಳ್ಳಿ ಹಾಗೂ 3 ಕಂಚುಗಳನ್ನು ಗೆದ್ದು ರಾಷ್ಟ್ರಕ್ಕೆ ಗೌರವ ತಂದಿದ್ದಾರೆ. ಅಲ್ಲದೆ ಕನ್ನಡ ನಾಡಿನ ಗೌರವವನ್ನು ವಿಶ್ವದ ಎಲ್ಲಡೆ ಪ್ರಚುರಪಡಿಸಿದ್ದರು.
ಇವರ ಸಾಧನೆಗೆ ಕೊನೆಯೇ ಇಲ್ಲ. ಇದುವರೆಗೆ 6 ಬಾರಿ ಅಂತರಾಷ್ಟ್ರೀಯ ಈಹು ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಘವೇಂದ್ರ ಅಣ್ವೇಕರ್ 20ಕ್ಕೂ ಹೆಚ್ಚಿನ ಪದಕಗಳನ್ನು ಗೆದ್ದಿದ್ದಾರೆ. ಇವಷ್ಟೇ ಅಲ್ಲ. ಸಮುದ್ರದಲ್ಲಿ ಈಜುವ ಕಷ್ಟಕರ ಸಾಹಸಕ್ಕೂ ಕೈಹಾಕಿ ಅದರಲ್ಲೂ ಜಯಗಳಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ 38 ಕಿಲೋಮೀಟರ್ ದೂರದವರೆಗೆ ಈಜುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ದೂರವನ್ನು ಇವರು 5 ಗಂಟೆ56 ನಿಮಿಷಗಳಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಅಷ್ಟೇ ಏಕೆ ಭಾಗೀರತಿ ನದಿಯಲ್ಲಿ 81 ಕಿಲೋಮೀಟರ್ ದೂರವನ್ನು ಸತತ 11 ಗಂಟೆ 50 ನಿಮಿಷಗಳಕಾಲ ಈಜಿ ಗುರಿ ತಲುಪಿದ ಸಾಧನೆ ಮಾಡಿದ್ದಾರೆ. ಈಜುವುದರಲ್ಲಿ ಇನ್ನೂ ಹಲವೆಂಟು ಸಾಧನೆಗಳನ್ನು ಕೈಗೊಂಡಿರುವ ಇವರು ಸತತ 12 ಗಂಟೆಗಳ ಕಾಲ ಹಿಮ್ಮುಖವಾಗಿ ಈಜುವ ಹಾಗೂ ತೇಲುವ ಸಾಧನೆಯನ್ನು ಕೈಗೊಂಡಿದ್ದಾರೆ. ಇವರ ಈ ಸಾಧನೆಗೆ, ಶ್ರಮಕ್ಕೆ ನದಿ, ಸಮುದ್ರಗಳೇ ಹೆದರಿ ನಿಂತು ಬಿಟ್ಟಿವೆ.
ದೈಹಿಕ ದೌರ್ಬಲ್ಯವನ್ನು ಹೊಂದಿದ್ದರೂ ಅದಕ್ಕೆ ಅಂಜದೇ. ಅಳುಕದೆ ಶ್ರಮ ಹಾಕಿ, ಸಾಧನೆ ಮಾಡಿ ಎಲ್ಲರ ಪಾಲಿಗೆ ಪ್ರೇರಣೆಯಾಗವಂತಹ ಈ ತ್ರಿವಿಕ್ರಮ ಈಜುಪಟು ರಾಘವೇಂದ್ರ ಅಣ್ವೇಕರ್ ವಿಶಿಷ್ಟ ಸಾಧಕ. ಎಲ್ಲ ಅಂಗಗಳೂ ಸರಿಯಾಗಿ ಇದ್ದೂ, ಯಾವುದಕ್ಕೂ ಬಾರದಂತಿರುವವರ ನಡುವೆ ಈತ ವಿಶಿಷ್ಟವಾಗಿ ಕಾಣುತ್ತಾನೆ. ಅಷ್ಟೇ ಅಲ್ಲ ಬದುಕಿನಲ್ಲಿ ಪದೆ ಪದೆ ಎಡವಿದವರಿಗೆ ಸ್ಫೂರ್ತಿಯಾಗುತ್ತಾರೆ.

ನಿಕ್ ವುಸಿಸಿಕ್
ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರಾಶರಾದವರಿಗೆ, ಅನೇಕ ಕಷ್ಟಗಳನ್ನು ಎದುರಿಸಿ ಹತಾಶೆ ಹೊಂದಿದವರಿಗೆ ಬದುಕಿನ ಬಗ್ಗೆ ಛಲ ಮೂಡಲು ಸ್ಫೂರ್ತಿಯಾಗುವಂತಹ ವ್ಯಕ್ತಿ ನಿಕ್ ವುಸಿಸಿಕ್.
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ಹುಟ್ಟಿದ ನಿಕನ  ಕಥೆ ಕೇಳಿದರೆ ಎಂತಹ ಕಲ್ಲೆದೆಯ ವ್ಯಕ್ತಿಗಳೂ ಒಮ್ಮೆ ಕಣ್ಣೀರಾಗುತ್ತಾರೆ. ಈ ವಿಶಿಷ್ಟ ವ್ಯಕ್ತಿಗೆ ಹುಟ್ಟಿನಿಂದಲೇ ಕೈಗಳಿಲ್ಲ, ಕಾಲುಗಳೂ ಇಲ್ಲ. ಅವೆರಡರ ಬದಲಿಗೆ ಆ ಜಾಗದಲ್ಲಿ ಒಮದೆರಡು ಚಿಕ್ಕ ಚಿಕ್ಕ ಮಾಂಸದ ತುಂಡುಗಳಿವೆ ಅಷ್ಟೇ.
ಈತ ಹುಟ್ಟಿದ ತಕ್ಷಣ ನಿಕ್ನ ತಾಯಿ ಈತನನ್ನು ನೋಡಿ ಒಮ್ಮ ಮೂರ್ಛೆ ಬಿದ್ದಿದ್ದಳಂತೆ. ನೋಡಿದ ವೈದ್ಯರೂ ಹೌಹಾರಿ ಈತ ಬದುಕುವವನಲ್ಲ ಎಂದಿದ್ದರಂತೆ. ಆದರೆ ನಿಕ್ ಬದುಕಿ ಬಿಟ್ಟ. ಆತನ ತಾಯಿ ಆತನನ್ನು ಸಾಧಕನನ್ನಾಗಿ ಮಾಡಲು ಪಣ ತೊಟ್ಟಳು. ಆತನಿಗೆ ಚಿಕ್ಕಂದಿನಿಂದಲೇ ಈಜುವುದನ್ನು ಕಲಿಸಿದಳು. ಓದಲು ಕಲಿಸಿದಳು, ಬಾಯಿಯ ಮೂಲಕ ಬರೆಯಲು ಕಲಿಸಿದಳು. ತಾಯಿಯ ಒತ್ತಾಸೆಯಂತೆ ನಿಕ್ ಬಹು ಬೇಗನೆ ಅವೆಲ್ಲವನ್ನೂ ಕಲಿತ. ಕಷ್ಟಪಟ್ಟು ಈಜುವುದನ್ನು ಕಲಿತ. ಎಲ್ಲ ಕ್ಲಾಸುಗಳನ್ನೂ ಉತ್ತಮ ದರ್ಜೆಯಲ್ಲಿ ಪಾಸುಮಾಡುತ್ತ ಕಳೆದ. ಅಷ್ಟೇ ಅಲ್ಲ ಆತ ಗಾಲ್ಫ್ ಆಡುವುದನ್ನೂ ಕಲಿತ.
ಅಯ್ಯೋ ಹೀಗಾಯಿತಲ್ಲ, ಎಂದು ಆತ ಎಂದಿಗೂ ಹೇಳಲಿಲ್ಲ. ತನ್ನ ವೈಕಲ್ಯಗಳನ್ನೇ ತನ್ನ ಸಾಧನೆಗೆ ಮೆಟ್ಟಿಲನ್ನಾಗಿ ಮಾಡಿಕೊಂಡ ನಿಕ್ ನಮ್ಮೆಲ್ಲರಿಗಿಂತ ಮೇಲ್ಮಟ್ಟಕ್ಕೇರಿದ. ಈಗ ನಿಕ್ಗೆ 28 ವರ್ಷ ವಯಸ್ಸು. ವಿಶ್ವದಾದ್ಯಂತ ಪ್ರವಾಸ ಮಾಡುವ ಈತ ಅಲ್ಲಿನ ಜನರಿಗೆ ತನ್ನ ಸಾಧನೆಯ ಚಿತ್ರಣಗಳನ್ನು ತೋರಿಸಿ ಅವರಲ್ಲಿ ಆಶಾವಾದ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾನೆ. ಬದುಕಿನಲ್ಲಿ ಸೋತವರಿಗೆ ಬದುಕಿನ ಕಡೆಗೆ ಉತ್ಸಾಹ ಮೂಡಿಸುವ ಕೆಲಸವನ್ನು ನಿಕ್ ಯಾವಾಗಲೂ ಕೈಗೊಳ್ಳುತ್ತಿರುತ್ತಾನೆ. ಈತ ಮಾತಾಡಿರುವ ಸಿಡಿಗಳು ವಿಶ್ವದಲ್ಲಿ ಅದೆಸ್ಸ್ಟಾ ಸಂಖ್ಯೆಯಲ್ಲಿ ಮಾರಾಟವಾಗಿವೆ. ಆತನ ಸಾಧನೆಯ ವೀಡಿಯೋ ತುಣುಕುಗಳಿಗೆ ವಿಶ್ವದಾದ್ಯಂತ ಬೇಡಿಕೆ ಇವೆ. ಪಾಶ್ಚಾತ್ಯ ರಾಷ್ಟ್ರಗಳ ಅದೆಷ್ಟೋ ಯುವಕರು ನಿಕ್ನ ಮಾತಿಗೆ ಮರುಳಾಗಿ ಬದುಕಿನೆಡೆಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅದೆಷ್ಟೋ ಜನ ನಿಕ್ನ ಅಭಿಮಾನಿಗಳಾಗಿದ್ದಾರೆ. ಕೈಕಾಲುಗಳಿಲ್ಲದಿದ್ದರೂ ಸಾಧಿಸಬಲ್ಲೆ ಎಂಬುದಕ್ಕೆ ನಿಕ್ನೇ ಸ್ಫೂರ್ತಿ.
ಇಂತಹ ಸಾಧಕರ ನಡುವೆ ನಾವು ಅದೆಷ್ಟು ಕುಬ್ಜರಾಗುತ್ತೇವೆ ಅಲ್ಲವೇ. ನಮಗೆ ಇಂತಹ ವ್ಯಕ್ತಿಗಳು ಅದೆಷ್ಟು ಸ್ಫೂರ್ತಿಯನ್ನು ನೀಡುತ್ತಾರೆ ಅಲ್ಲವೇ?


Monday, February 21, 2011

ಕರ್ನಾಟಕದ ಅಣೆಕಟ್ಟುಗಳು


ಅಣೆಕಟ್ಟುಗಳು ಎಂದರೆ ‘ಭವ್ಯ ಭಾರತ ನಿರ್ಮಾಣದ ದೇಗುಲಗಳಿದ್ದಂತೆ ಎಂದು ‘ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಹೇಳಿದ್ದರು. ಅವರ ಮಾತಿನಂತೆ ‘ಭಾರತದಲ್ಲಿ ಅದೆಷ್ಟೋ ಅಣೆಕಟ್ಟುಗಳು ನಿರ್ಮಾಣವಾಗಿವೆ. ಕರ್ನಾಟಕದಲ್ಲಿಯೂ ‘ಭಾರಿ ಸಂಖ್ಯೆಯಲ್ಲಿಯೇ  ಅಣೆಕಟ್ಟುಗಳು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಇರುವ ದೊಡ್ಡ ಅಣೆಕಟ್ಟುಗಳ ಸಂಖ್ಯೆ 23. ಅವುಗಳಲ್ಲದೇ ಚಿಕ್ಕಪುಟ್ಟ ಅಣೆಕಟ್ಟುಗಳ ಸಂಖ್ಯೆಗಲೂ ಹಲವಷ್ಟಿವೆ. ಅವುಗಳಲ್ಲಿ ಕೆಲವು ಅಣೆಕಟ್ಟುಗಳ ಬಗ್ಗೆ ಕಿರು ನೋಟ.

ಕೃಷ್ಣರಾಜ ಸಾಗರ ಅಣೆಕಟ್ಟು
‘ಭಾರತದ, ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ಇದು ‘ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸು. ಕಾವೇರಿ ನದಿಗೆ ಶ್ರೀರಂಗಪಟ್ಟಣದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 130 ಅಡಿ ಎತ್ತರವಾಗಿದೆ. ಕೆಆರ್ಎಸ್ ಎಂದೇ ಹೆಸರಾಗಿರುವ ಈ ಅಣೆಕಟ್ಟು ಮಂಡ್ಯ, ಮೈಸೂರು ಜಿಲ್ಲೆಗಳ ಸಾವಿರಾರು ಎಕರೆಗೆ ನೀರುಣ್ಣಿಸುತ್ತದೆ. ‘ಭಾರತ ಸ್ವತಂತ್ರವಾಗುವ ಮೊದಲೇ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಹಿಂದಿನ ತಲೆಮಾರಿನ ತಂತ್ರಕ್ಞರ ಯಶಸ್ವಿ ತಂತ್ರಜ್ಞಾನಕ್ಕೆ ಸಾಕ್ಷಿ. ಈ ಅಣೆಕಟ್ಟಿನ ಕೆಳ‘ಾಗದಲ್ಲಿ ನಿರ್ಮಿಸಲಾಗಿರುವ ಬೃಂದಾವನ ಉದ್ಯಾನವನವೂ ಅಷ್ಟೇ ಪ್ರಸಿದ್ಧಿ ಹೊಂದಿದ್ದು ವಿಶ್ವ ವಿಖ್ಯಾತಿ ಗಳಿಸಿದೆ.

ಲಿಂಗನ ಮಕ್ಕಿ ಅಣೆಕಟ್ಟು.
ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು  ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.

ಸುಪಾ ಅಣೆಕಟ್ಟು
ಕಾಳಿ ನದಿಗೆ ನಿರ್ಮಿಸಲಾಗಿರುವ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ಎಲ್ಲರವಾದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸುಪಾದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. 1101 ಮೀಟರ್ ಎತ್ತರ ಇರುವ ಸುಪಾ ಅಣೆಕಟ್ಟು 332 ಮೀಟರ್ ಉದ್ದವಾಗಿದೆ. ಅಣೆಕಟ್ಟನ್ನು 1985ರಂದು ಉದ್ಘಾಟಿಸಲಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ. ಕಾಳಿನದಿಗೆ ಕಟ್ಟಲಾಗಿರುವ ಹಲವಾಸು ದೊಡ್ಡ ಅಣೆಕಟ್ಟುಗಳಲ್ಲಿ ಇದೂ ಒಂದು.

ತುಂಗಭದ್ರಾ ಅಣೆಕಟ್ಟು
2441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗ‘ದ್ರಾ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಕೊಡಸಳ್ಳಿ ಅಣೆಕಟ್ಟು.
ಕಾಳಿನದಿಗೆ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಬಳಿ ನಿರ್ಮಿಸಲಾಗಿರುವ ಈ ಅಣೆಕಟ್ಟನ್ನು 1997ರಲ್ಲಿ ಉದ್ಘಾಟಿಸಲಾಯಿತು. ವಿದ್ಯುತ್ ಉತ್ಪಾದನೆಯ ಉದ್ದೇಶದಿಂದಲೇ ನಿರ್ಮಾಣಗೊಂಡ ಅಣೆಕಟ್ಟು ಇದಾಗಿದೆ. ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಅಣೆಕಟ್ಟು ನಿರ್ಮಾದ ಸಮಯದಲ್ಲಿ ಕಾಡಿನ ನಾಶದ ವಿರುದ್ಧ ಹಲವು ಹೋರಾಟಗಳು ನಡೆದಿದ್ದವು.

ಆಲಮಟ್ಟಿ ಅಣೆಕಟ್ಟು
ಜುಲೈ2005ರಲ್ಲಿ ಉದ್ಘಾಟನೆಯಾದ ಆಲಮಟ್ಟಿ ಅಣೆಕಟ್ಟು 509 ಮಿಟರ್ ಎತ್ತರವಾಗಿದೆ. ಇದನ್ನು ಈಗ ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ 519 ಮೀಟರ್ಗೆ ಏರಿಸಲಾಗುತ್ತಿದೆ. ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಈ ಅಣೆಕಟ್ಟು ನಿರಾವರಿ ಹಾಗೂ ವಿದ್ಯುತ್ ಉತ್ಪಾದನೆ ಈ ಎರಡೂ ಉದ್ದೇಶ ಹೊಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಿರಮಿಸಲಾಗಿರುವ ಈ ಅಣೆಕಟ್ಟು 1565.15 ಮೀಟರ್ ಉದ್ದವಾಗಿದೆ. 42.19 ಟಿಎಂಸಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ.

ಇವು ಕರ್ನಾಟಕದ ಪ್ರಮುಖ ಅನೆಕಟ್ಟುಗಳು. ಇವಲ್ಲದೆ ಕದ್ರಾ ಅಣೆಕಟ್ಟು, ನಾರಾಯಣಪುರ, ಕಬಿನಿ, ಹಾರಂಗಿ, ಗಾಜನೂರು, ಕದ್ರಾ, ಬಾಚಣಕಿ, ಗೋರೂರು, ಬಸವಸಾಗರ, ಹಿಡಕಲ್, ಕಣ್ವ, ಲಕ್ಕವಳ್ಳಿ, ಮಾರ್ಕೋನಹಳ್ಳಿ, ಸಾತನೂರು, ವಾಣಿವಿಲಾಸ ಸಾಗರ ಮುಂತಾದ ಹಲವು ಮಧ್ಯಮ ಗಾತ್ರದ ಅಣೆಕಟ್ಟುಗಳಿವೆ. ಅದಲ್ಲದೆ ನೂರಕ್ಕೂ ಹೆಚ್ಚಿನ ಚಿಕ್ಕಪುಟ್ಟ ಅಣೆಕಟ್ಟುಗಳಿವೆ. ಇವುಗಳ ಜೊತೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೂರಾರು ಚಿಕ್ಕ ಪುಟ್ಟ ಅಣೆಕಟ್ಟುಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಇವುಗಳ ವಿರುದ್ಧ ಪರಿಸರವಾದಿಗಳು ಹೋರಾಟ ಪ್ರಾರಂಭಿಸಿದ್ದಾರೆ.
ಕನ್ನಡ ನಾಡಿಗೆ ವಿದ್ಯುತ್ತಿನ ಜೊತೆಗೆ ಬೆಳೆಗಳಿಗೆ ನೀರನ್ನೂ ನೀಡುತ್ತಿರುವ ಈ ಅಣೆಕಟ್ಟುಗಳು ಭವ್ಯ ಭಾರತದ ದೇಗುಲಗಳೇ ಹೌದು